ಮಾಸ್ಕೋ ವಿಶ್ವವಿದ್ಯಾಲಯದ ‘ಜಾನಪದ ವಿಭಾಗ’ವನ್ನು ನೋಡಬೇಕೆಂಬ ಕಾರ‍್ಯಕ್ರಮ ಈ ದಿನಕ್ಕೆ ಗೊತ್ತಾಗಿತ್ತು. ಹನ್ನೆರಡು ಗಂಟೆಗೆ, ಮಾಸ್ಕೋ    ವಿಶ್ವವಿದ್ಯಾಲಯದ   ಆವರಣದಲ್ಲಿರುವ,  ಹಲವು   ಹಂತಗಳ  ಕಟ್ಟಡವೊಂದನ್ನು ಪ್ರವೇಶಿಸಿ,  ಒಂಬತ್ತನೆಯ  ಮಹಡಿಯಲ್ಲಿ  ಪ್ರೊಫೆಸರ್  ವಿ. ಎನ್.  ಕ್ರವತ್ಸೋವ್ (V.N.Kravtsov)  ಅವರ  ಕೊಠಡಿಯ ಬಾಗಿಲು ಬಡಿದೆವು. ಕ್ರವತ್ಸೋವ್, ಜಾನಪದ  ಅಧ್ಯಯನ  ವಿಭಾಗದ ಮುಖ್ಯಸ್ಥರು; ವಯೋವೃದ್ಧರು. ತುಂಬ ಉತ್ಸಾಹದಿಂದ ಒಂದು ಗಂಟೆಯ ಕಾಲ ರಷ್ಯನ್ ಜಾನಪದ ವಿಭಾಗದ ಕಾರ್ಯಕ್ರಮಗಳನ್ನು ವಿವರಿಸಿದರು. ಅವರಿಗೆ ಇಂಗ್ಲಿಷ್ ಬಾರದು; ನಮ್ಮಿಬ್ಬರ ಸಂಭಾಷಣೆ ವೊಲೋಜನ ಮೂಲಕ ಸಾಗಿತ್ತು; ಇಲ್ಲಿ Folklore ಅನ್ನು, Philology ಯ ಒಂದು ಭಾಗವಾಗಿ ಅಭ್ಯಾಸ ಮಾಡಲಾಗುತ್ತಿದೆ. ಮಾಸ್ಕೋದಲ್ಲಿರುವ ಬೇರೆ ಬೇರೆಯ ಹಲವು ಸಂಸ್ಥೆಗಳು ಈ ಜಾನಪದವನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ಅಭ್ಯಾಸಮಾಡುತ್ತವೆ. ಜಾನಪದ  ಸಂಗೀತವನ್ನೇ ಕುರಿತು ಒಂದು ಸಂಸ್ಥೆ, ಜಾನಪದವನ್ನು  ಮನಸ್‌ಶಾಸ್ತ್ರೀಯವಾಗಿ ಇನ್ನೊಂದು ಸಂಸ್ಥೆ, ಜಾನಪದವನ್ನು ಸಮಾಜ ಶಾಸ್ತ್ರೀಯ ದೃಷ್ಟಿಯಿಂದ ಮಗದೊಂದು ಸಂಸ್ಥೆ – ಅಭ್ಯಾಸಕ್ಕೆ ಎತ್ತಿಕೊಂಡಿವೆ. ಇದಕ್ಕೆ  ಸಂಬಂಧಿಸಿದ ವಸ್ತು ಪ್ರದರ್ಶನ ಸಂಗ್ರಹಾಲಯವೂ ಬೇರೊಂದೆಡೆ ಇದೆ. ಆದರೆ, ಕ್ರವತ್ಸೋವ್ ಅವರ ವಿಭಾಗದಲ್ಲಿ ಜಾನಪದವನ್ನು ಸಾಹಿತ್ಯಕ ದೃಷ್ಟಿಯಿಂದ ಅಭ್ಯಾಸ ಮಾಡಲಾಗುತ್ತಿದೆ. ವರ್ಷದಲ್ಲಿ  ಹಲವು  ಬಾರಿ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಕೆಲವು ಪ್ರಾಯೋಗಿಕ ಕ್ಷೇತ್ರಗಳಿಗೆ ಹೋಗುತ್ತಾರೆ. ಎರಡು ಮೂರು ತಿಂಗಳ ಕಾಲ ಒಂದು ಪ್ರದೇಶದ ಜನರ ನಡುವೆ ಬದುಕಿ, ಅಲ್ಲಿನ ಜಾನಪದ ಗೀತೆಗಳನ್ನು ಸಂಗ್ರಹಿಸುವುದು ಮಾತ್ರವಲ್ಲದೆ, ಆ ಜನಜೀವನವನ್ನೂ ಅಭ್ಯಾಸ ನಡೆಯಿಸುತ್ತಾರೆ. ಈ ಪ್ರಾಯೋಗಿಕ ಕ್ಷೇತ್ರಗಳಲ್ಲಿ ತಾವು ನಡೆಯಿಸಿದ ಕೆಲಸದ ವಿವರಗಳನ್ನು ವರ್ಷಕ್ಕೆ ಎರಡು ಸಂಚಿಕೆಗಳಲ್ಲಿ ಪ್ರಕಟಿಸಲಾಗುವ ಜಾನಪದ ಪತ್ರಿಕೆಯಲ್ಲಿ  ಕೊಡಲಾಗುವುದು. ಜಾನಪದ ಅಧ್ಯಯನಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ತಯಾರಿಸಿದ್ದಾರೆ. ಇವೆಲ್ಲವನ್ನು ನನಗೆ ಪ್ರೊಫೆಸರ್ ಅವರು ಕೊಟ್ಟರು. ‘ರಷ್ಯನ್ ಭಾಷೆಯಲ್ಲಿರುವ ಇವುಗಳನ್ನು ನೀವು ನಿಮ್ಮ ಭಾಷೆಗೆ ಅನುವಾದ ಮಾಡಿಸಿದರೆ ಸಂತೋಷ’ ಎಂದರು. ‘ನೀವು ನಿಮ್ಮ ಜಾನಪದ ವಿಭಾಗದಲ್ಲಿ ನಡೆಯಿಸಿರುವ ಕೆಲಸದ ವಿವರಗಳನ್ನು, ಹಾಗೂ ಪ್ರಕಟಿಸಿದ ಪುಸ್ತಕಗಳನ್ನು ದಯಮಾಡಿ ನಮಗೆ ಕಳುಹಿಸಿಕೊಡಿ’ ಎಂದರು. ಅಂತೂ ಈ ವಿಭಾಗದ ಮುಖ್ಯಸ್ಥರ ಭೇಟಿ ತುಂಬ ಉಲ್ಲಾಸಕರವಾಗಿತ್ತು. ಸಮಯವಿದ್ದರೆ ಒಂದಷ್ಟು ರಷ್ಯನ್ ಜನಪದದ ಧ್ವನಿಮುದ್ರಿಕೆಗಳನ್ನು ಕೇಳಬಹುದಾಗಿತ್ತು; ಆದರೆ, ಒಂದೂವರೆಗೆ ಬೇರೊಂದು ಕಾರ‍್ಯಕ್ರಮ ನನ್ನ ಪಾಲಿಗೆ ಇದ್ದದ್ದರಿಂದ, ಕೈಕುಲುಕಿ, ‘ದಸ್ವಿದಾನಿಯಾ’ ಹೇಳಿ ಹೋಟೆಲಿಗೆ ಹಿಂದಿರುಗಿದೆ.

ಮಧ್ಯಾಹ್ನ ಟೆಲಿವಿಷನ್‌ಟವರ್ ನೋಡಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು. ಒಂದೂವರೆಗೆ ಕಾರೇನೋ ಬಂತು. ಟೆಲಿವಿಷನ್ ಗೋಪುರ ಜಗತ್ತಿನ ಅತ್ಯಂತ ಎತ್ತರವಾದ ಗೋಪುರ. ಮಾಸ್ಕೋದ ಸೋಜಿಗ ಎಂದು ಹೇಳಲಾದ, ಈ ಗೋಪುರದ, ಎತ್ತರ ೧೭೫೦ ಅಡಿಗಳು;  ಇದರ ಸುತ್ತಳತೆ ೧೬೫  ಅಡಿಗಳು.  ಈ ಗೋಪುರದ, ೧೧೦೦ ನೆಯ ಅಡಿಗಳ ಎತ್ತರದಲ್ಲಿ ‘ಸಪ್ತಮಸ್ವರ್ಗ’ ಎಂಬ ರೆಸ್ಟೋರಾಂಟಿದೆ. ಈ ರೆಸ್ಟೋರಾಂಟಿನ ಮೂರು ವಿಸ್ತಾರವಾದ ಕೊಠಡಿಗಳು ನಿಧಾನವಾಗಿ ತಿರುಗುವ ಕಾರಣ, ಕೂತಲ್ಲಿಂದಲೇ ಸುತ್ತಣ ದೃಶ್ಯ ತಾನಾಗಿ ತೆರೆಯುತ್ತಾ ಹೋಗುತ್ತದೆ. ಇಲ್ಲಿ ಊಟ ಮಾಡಬೇಕಾದರೆ ಏಳು ರೂಬಲ್ಲುಗಳನ್ನು ತೆರಬೇಕು. ಒಂದು ಊಟಕ್ಕೆ ಇಷ್ಟನ್ನು ಎಲ್ಲಿಂದ ತರೋಣ ? ಅದಕ್ಕಾಗಿ ಮೊದಲೆ ಎಲ್ಲಾದರೂ ಊಟ ಮಾಡೋಣ ಎಂದು ಮೆಟ್ರೋಪೋಲ್ ಹೋಟೆಲಿನ ಕೆಫೆಯನ್ನು ಹೊಕ್ಕೆವು. ಯಥಾಪ್ರಕಾರ ಜನರ ಗುಜು ಗುಂಪಲು. ಇಲ್ಲಿ ಕೂತರೆ ಮುಗಿಯಿತು ಎಂದು, ಅದೇ ಹೋಟೆಲಿನ ರೆಸ್ಟೋರಾಂಟಿಗೆ ಹೋಗಿ ಕೂತೆವು. ಈ ಬಹು ದೊಡ್ಡ  ರೆಸ್ಟೋರಾಂಟಿನ ವೈಭವವನ್ನು ನೋಡಿ ನಾನು ಬೆರಗಾಗಿ ಹೋದೆ. ನಸುಗೆಂಪು ಬಣ್ಣದ ಅಮೃತ ಶಿಲೆಯ ಕಂಭಗಳು; ಅಮೃತ ಶಿಲೆಯ ನೆಲಗಟ್ಟು, ಅದರಲ್ಲಿ ಬಗೆಬಗೆಯ ಕೆತ್ತನೆ ಕೆಲಸ; ಹತ್ತಾಳೆತ್ತರದ  ನಿಲುವುಗನ್ನಡಿಗಳು; ರೇಷ್ಮೆಯ  ಪರದೆಗಳು; ವಿವಿಧ ವಿನ್ಯಾಸದಲ್ಲಿ ಜಗಜಗಿಸುವ ದೀಪಸ್ತಂಭಗಳು. ಇದೇನು ಹೋಟೆಲೊ ಅರಮನೆಯೊ ಎನ್ನಿಸಿತು. ಆದರೆ ಒಂದು ವಿಶೇಷ. ಎಂಥ ದೊಡ್ಡ ಹೋಟೆಲಿಗೆ ಹೋದರೂ, ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಳಿತವಿಲ್ಲ. ನಮ್ಮಲ್ಲಿ ದೊಡ್ಡ ಹೋಟೆಲ್ಲಿಗೆ ಹೋದರೆ, ಅಲ್ಲಿ ನಮ್ಮ ಜೇಬು ಸುಲಿಗೆಯಾಗಿ ಹೋಗುತ್ತದೆ. ಇಲ್ಲಿ ಎಲ್ಲ ಹೋಟೆಲುಗಳಲ್ಲೂ ಹೆಚ್ಚು ಕಡಮೆ ಒಂದೇ ಬೆಲೆ. ಕೆಫೆ, ರೆಸ್ಟೋರಾಂಟುಗಳೆಂಬ ಮೂರು ಬಗೆಯ ವಿಭಾಗಗಳಿರುತ್ತವೆ ಹೋಟೆಲುಗಳಲ್ಲಿ; ಈ ಮೂರರಲ್ಲಿ, ತೆರಬೇಕಾದ ಬೆಲೆಯಲ್ಲಿ ಒಂದಷ್ಟು  ವ್ಯತ್ಯಾಸವಿರುತ್ತದೆ.  ಆದರೆ ಹೋಟೆಲಿನಿಂದ ಹೋಟೆಲ್ಲಿಗೆ,ಈ ಮೂರರಲ್ಲಿರುವ ಬೆಲೆ ಮಾತ್ರ ಬಹುಮಟ್ಟಿಗೆ ಏಕರೂಪವಾಗಿರುತ್ತದೆ.

ನಮ್ಮ ಊಟ ಮುಗಿಯುವ ವೇಳೆಗೆ ಆಗಲೇ ಮೂರೂವರೆಯಾಗಿತ್ತು. ಹೋಟೆಲಿನಿಂದ ಹೊರಗೆ ಬಂದೊಡನೆಯೇ, ಮೋಡ ಕವಿದು ಮಳೆ ಹನಿಯತೊಡಗಿತ್ತು. ಈ ಹವೆಯಲ್ಲಿ ಟೆಲಿವಿಷನ್ ಗೋಪುರಕ್ಕೆ ಹೋಗಬೇಕೆ ? ಹೋಗಿ, ೧೭೫೦ ಅಡಿ ಎತ್ತರವನ್ನು ಏರಿದರೆ, ಈ ಮಳೆಯ ಮೋಡದ ಮಬ್ಬಿನಲ್ಲಿ ಏನನ್ನೂ ನೋಡಲು ಸಾಧ್ಯವಿಲ್ಲ. ಆದ್ದರಿಂದ ಈ ದಿನ ಅಲ್ಲಿಗೆ ಹೋಗುವ ಕಾರ್ಯಕ್ರಮವನ್ನು ರದ್ದು ಮಾಡಬೇಕೆಂದು ತೀರ್ಮಾನಿಸಿದೆವು. ಅದರ ಬದಲು ಒಂದೆರಡು ಅಂಗಡಿಗಳನ್ನು ನೋಡೋಣ ಎಂದು ರಷ್ಯಾ ಹೋಟೆಲಿಗೆ ಬಂದೆವು. ಕೆಂಪು ಚೌಕದ ಬದಿಯಲ್ಲಿರುವ ರಷ್ಯಾ ಹೋಟಲು ಇಡೀ ಯೂರೋಪಿನಲ್ಲಿಯೇ ದೊಡ್ಡದು. ಇಪ್ಪತ್ತು ಹಂತಗಳಲ್ಲಿ ಚೌಕೋನಾಕೃತಿಯಲ್ಲಿ ನಿಂತ ಈ ಹೋಟೆಲಿನಲ್ಲಿ  ಮೂರು ಸಾವಿರಕ್ಕೂ ಮಿಗಿಲಾದ ಸಂಖ್ಯೆಯ ಕೋಣೆಗಳಿವೆ; ಒಮ್ಮೆಗೆ ಆರು ಸಾವಿರ ಜನಕ್ಕೆ ವಸತಿ ಸೌಕರ‍್ಯವಿದೆ. ಆದರೂ ಈ ಹೋಟೆಲಿನ ಕೋಣೆಗಳಲ್ಲಿ ಸ್ಥಳ ದೊರೆಯುವುದಿಲ್ಲವಂತೆ. ಇದರ ಒಂದು ಅಂಗವಾಗಿ ಒಂದು ‘ಡಾಲರ್‌ಷಾಪ್’ ಇದೆ. ಎಂದರೆ, ಪೌಂಡ್, ಡಾಲರ್ ಇತ್ಯಾದಿ ವಿದೇಶೀ ಹಣಕ್ಕೆ ಮಾತ್ರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ. ಇಂಥವು ಈ ನಗರದಲ್ಲಿ ನಾಲ್ಕಾರು ಇವೆ. ನಮ್ಮ ದೇಶದ ರೂಪಾಯಿಗೆ ಇಲ್ಲಿ ಬೆಲೆ ಇಲ್ಲ. ರಷ್ಯಾದ ಒಂದು ರೂಬಲ್ಲು ನಮ್ಮ ಏಳು ರೂಪಾಯಿಯಷ್ಟು ಮೌಲ್ಯದ್ದು. ಈ ‘ಡಾಲರ್ ಷಾಪ್’ಗಳು ಮುಖ್ಯವಾಗಿ ವಿದೇಶಿ ಹಣ ಸಂಪಾದನೆಗೆ ಒಂದು ಸಾಧನವಾಗಿವೆ. ಕೈಗಡಿಯಾರ ಮುಂತಾದವು ಪೌಂಡ್, ಡಾಲರುಗಳ ಬೆಲೆಯಲ್ಲಿ ಕೊಂಡರೆ ತುಂಬ ಸುಲಭ ಬೆಲೆಗೆ ದೊರೆಯುತ್ತವೆ. ನಾನು ಭಾರತದಿಂದ ಇಲ್ಲಿಗೆ ಬರುವಾಗ ವಿನಿಮಯ ರೂಪದಲ್ಲಿ ತೆಗೆದುಕೊಂಡ ಡಾಲರ್‌ನಲ್ಲಿ ಕೆಲವು ವಸ್ತುಗಳನ್ನು ಕೊಂಡುಕೊಂಡೆ.

ಇಡೀ ಸಂಜೆ,  ಹನಿಯುವ  ಮಳೆಯಲ್ಲಿ ಅಂಗಡಿಯಲೆತಕ್ಕೆ ಮುಗಿದು ಹೋಯಿತು. ನಾಳೆಯಾದರೂ ಟೆಲಿವಿಷನ್ ಟವರ್ ಹೋಡೋಣ ಎಂದರೆ, ‘ನಾಳೆ, ಲೆನಿನ್ಸ್‌ಕಿ ಗೋರ್ಕಿ ಎಂಬ ಊರಿಗೆ ಹೋಗುವ ಕಾರ್ಯಕ್ರಮ ಗೊತ್ತಾಗಿದೆ’ ಎಂದ ವೊಲೋಜ.