ಚಿಟಿಲ್….ಚಿಟಿಲ್….ಠಳಾರ್….ಕಣ್ಣು ಕೋರೈಸುವ ಮಿಂಚು. ದಢಲ್….ದಢಲ್….ದಢಾರ್….ಕಿವಿಗಡಚಿಕ್ಕುವ ಗುಡುಗು. ಭರ್….ಭರ್….ಭಸಾಲ್….ಆಕಾಶವೇ ಕಳಚಿಬಿದ್ದಂತೆ ಸುರಿಯುವ ಮಳೆ.

ಈ ವಿಸ್ಮಯವನ್ನು ಎವೆಯಿಕ್ಕದೆ ನೋಡುತ್ತಿದ್ದ ಪುಟ್ಟ ಮಗು ಮಳೆಯತ್ತ ಬೆರಳು ತೋರಿ ಕೇಳುತ್ತದೆ, “ಅಜ್ಜಾ, ಅದೇನು?” ಅಜ್ಜನ ಉತ್ತರ, “ಮಗೂ, ಅದು ಮಳೆ. ಆಕಾಶದಿಂದ ಬರ್ತಾ ಇದೆ.” ಮಗು ಪುನಃ ಕೇಳ್ತದೆ, “ಅದು ಹೇಗೆ ಬರ್ತದೆ, ಅಜ್ಜಾ?” ಅಜ್ಜ ಯೋಚಿಸುತ್ತಾರೆ. ’ನೈಋತ್ಯ ಮಾರುತ ಮಳೆ ತರುತ್ತದೆ’ ಅನ್ನಲೇ? ಛೇ, ಹಾಗಲ್ಲ, ಮಗುವಿನ ಭಾಷೆಯಲ್ಲೇ ಹೇಳಬೇಕು ಅಂದುಕೊಳ್ತಾರೆ.

ಮಗುವಿನ ಕೈಗೊಂದು ಸ್ಟೀಲ್ ಲೋಟ ಕೊಟ್ಟು, ’ಹೇಳ್ತೇನೆ, ಇದನ್ನ ಫ್ರಿಜ್‍ನಲ್ಲಿಡು’ ಅಂತಾರೆ. ಅನಂತರ ಅಜ್ಜ – ಮೊಮ್ಮಗ ಮಳೆ ನೋಡ್ತಾ ಕೂರ್ತಾರೆ. ಐದು ನಿಮಿಷಗಳ ಬಳಿಕ ’ಆ ಲೋಟ ತಾ’ ಎಂದು ತರಿಸ್ತಾರೆ. ’ಅದನ್ನ ಮೇಜಿನ ಮೇಲಿಟ್ಟು ನೋಡ್ತಾ ಇರು’ ಅಂತಾರೆ. ಇನ್ನೂ ಐದು ನಿಮಿಷಗಳು ಸರಿಯುತ್ತವೆ. “ಏನಾಯ್ತು ಮಗೂ” ಅಜ್ಜ ಕೇಳ್ತಾರೆ. ಮಗು ಲೋಟ ತೋರಿಸ್ತಾ ಕುಪ್ಪಳಿಸುತ್ತಾ ಹೇಳ್ತದೆ, “ಅಜ್ಜಾ, ಲೋಟದಲ್ಲಿ ನೀರು ಬಂದಿದೆ.” ಅಜ್ಜ ಮುಗುಳು ನಗುತ್ತಾ “ಮಳೆ ಹೀಗೇ ಬರ್ತದೆ” ಅಂತಾರೆ. ಮಗುವೂ ಮುಗುಳು ನಗುತ್ತದೆ. ಅದಕ್ಕೆ ಅರ್ಥವಾಗಿತ್ತು.

ದೊಡ್ಡವರಿಗೆ ಈ ವಿಸ್ಮಯವನ್ನು ವಿವರಿಸಿ ಹೇಳಬೇಕಾಗ್ತದೆ, ಅಲ್ಲವೇ? ತಿಳಿಯೋಣ ಬನ್ನಿ. ವಾತಾವರಣದಲ್ಲಿ ಒಂದಾದ ಮೇಲೊಂದರಂತೆ ಜರಗುವ ವಿಶೇಷ ಬದಲಾವಣೆಗಳ ಸರಪಣಿ ಕ್ರಿಯೆಯ ಫಲವೇ ಮಳೆ. ಈ ಸರಪಣಿ ಕ್ರಿಯೆ ಸಮುದ್ರದ ಮೇಲಿನಿಂದ ಹಾದು ಬರುವ ಮಳೆ ಮಾರುತಗಳ ಒಂದು ವ್ಯವಸ್ಥೆ. ಚಳಿಗಾಲ ಮತ್ತು ಬೇಸಗೆಕಾಲಗಳಲ್ಲಿ ಸೂರ್ಯನ ಚಲನೆಗೆ ಭೂಮಿಯ ಪ್ರತಿಕ್ರಿಯೆ ಈ ಮಾರುತಗಳ ಚಲನೆ. ಬೇಸಿಗೆಯಲ್ಲಿ ಇಡೀ ಭರತಖಂಡ ಕಾದು ಕೆಂಡದಂತಾಗುತ್ತದೆ. ಆದರೆ ಸಮುದ್ರಕ್ಕಿಂತ ಬೇಗನೇ ನೆಲ ಬಿಸಿಯೇರುತ್ತದೆ. ಇದರಿಂದಾಗಿ ನೆಲದ ಮೇಲಿನ ವಾತಾವರಣದ ಉಷ್ಣತೆ  ಸಮುದ್ರದ ಮೇಲಿನ ವಾತಾವರಣದ ಉಷ್ಣತೆಗಿಂತ ಬಹಳ ಜಾಸ್ತಿಯಾಗುತ್ತದೆ. ಹಾಗಾಗಿ ನೆಲದ ಮೇಲೆ ವಾಯುವಿನ ಒತ್ತಡ ಕಡಿಮೆಯಾಗುತ್ತದೆ. ವಾಯುವಿನ ಒತ್ತಡವನ್ನು ಸರಿದೂಗಿಸುವುದು ಪ್ರಕೃತಿಯ ನಿಯಮ. ಆದ್ದರಿಂದ ಹೆಚ್ಚಿನ ವಾಯು ಒತ್ತಡದ ಪ್ರದೇಶಗಳಿಂದ ಕಡಿಮೆ ವಾಯು ಒತ್ತಡದ ಪ್ರದೇಶಗಳಿಗೆ ಗಾಳಿ ನುಗ್ಗಿ ಬರುತ್ತದೆ. ಹೀಗೆ ನುಗ್ಗಿ ಬರುವ ಗಾಳಿ ನೆಲಮಟ್ಟದಲ್ಲಿಯೇ ಸುತ್ತುವುದಿಲ್ಲ. ಅದು ವಾತಾವರಣದಲ್ಲಿ ಎತ್ತರಕ್ಕೆ ಏರಿದಂತೆ ಅಲ್ಲಿನ ಕಡಿಮೆ ಉಷ್ಣತೆಗೆ ಒಡ್ಡಿಕೊಳ್ಳುತ್ತದೆ.

ಆಗ ಒಂದು ವಿಶೇಷ ಬದಲಾವಣೆ ಜರಗುತ್ತದೆ. ಸಮುದ್ರದ ಮೇಲಿನಿಂದ ಬೀಸಿ ಬಂದ ಗಾಳಿ ತನ್ನೊಂದಿಗೆ ಸಮುದ್ರದ ನೀರಿನ ತೇವಾಂಶವನ್ನು ಸೆಳೆದುಕೊಂಡು ಮೋಡಗಳ ರೂಪದಲ್ಲಿ ಭೂಭಾಗಕ್ಕೆ ಆಗಮಿಸಿರುತ್ತದೆ. ವಾತಾವರಣದ ಮೇಲ್ಪದರದ ತಂಪಿಗೆ ಒಡ್ಡಿಕೊಂಡಾಗ, ಈ ತೇವಾಂಶ ತಣಿದು ನೀರ ಹನಿಗಳಾಗುತ್ತವೆ. (ತಂಪಾದ ಸ್ತೀಲ್ ಲೋಟದ ಹೊರಮೈಯಲ್ಲಿ ನೀರ ಹನಿಗಳು ಕಾಣಲು ಇದೇ ಕಾರಣ.) ಗುರುತ್ವಾಕರ್ಷಣೆಯ ಬಲದಿಂದಾಗಿ ಈ ನೀರ ಹನಿಗಳು ನೆಲಕ್ಕೆ ಇಳಿದಾಗ ಮಳೆಯಾಗುತ್ತದೆ.

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ: ವಾತಾವರಣವನ್ನು ತಂಪಾಗಿಸಿ, ಅದರಿಂದಾಗಿ ಮಳೆಮಾರುತಗಳಿಂದ ಮಳೆ ಸುರಿಯಬೇಕಾದರೆ ಕಾಡುಗಳು ಇರಲೇ ಬೇಕು. ಹಾಗಿರುವಾಗ, ಇತ್ತ ನಿಮಿಷಕ್ಕೆ ೨೩ ಹೆಕ್ಟೇರುಗಳಂತೆ ವರುಷಕ್ಕೆ ೧೨ ಮಿಲಿಯ ಹೆಕ್ಟೇರ್ ಪ್ರದೇಶದ ಕಾಡುಗಳನ್ನು ನಾಶ ಮಾಡುತ್ತ ಅತ್ತ ಮಳೆ ಕಡಿಮೆಯಾಯಿತೆಂದು ಗೋಳಾಡುವುದಕ್ಕೆ ಅರ್ಥವಿಲ್ಲ.

“ಕೇರಳಕ್ಕ್ಕೆ ಮುಂಗಾರು ಒಂದು ವಾರ ಮುಂಚೆಯೇ ಪ್ರವೇಶಿಸಿದೆ. ೨೩ ಮೇ ೨೦೦೯ರ ಮುಂಜಾನೆಯಿಂದ ಅಲ್ಲಿ ಮಳೆ ಶುರುವಾಗಿದೆ” ಎಂಬ ವರದಿಯನ್ನು ಇಂದಿನ (೨೪-೫-೨೦೦೯) ವಾರ್ತಾ ಪತ್ರಿಕೆಗಳಲ್ಲಿ ಓದಿದಾಗ ಇವೆಲ್ಲ ಯೋಚನೆಗಳು ಚಿಮ್ಮಿ ಬಂದವು. ಬೇಸಗೆಯ ಬಿಸಿಯಿಂದ ಬಸವಳಿದ ನೆಲಕ್ಕೆ, ಮೈಮನಕ್ಕೆ ತಂಪೆರೆಯುವ ಮಳೆ ಮತ್ತೆ ಬರುತ್ತಿದೆ. ನಿಮ್ಮ ಊರಿನಲ್ಲಿ ಮಳೆ ಹೇಗೆ ಬರುತ್ತಿದೆ? ಕಳೆದ ಐದು ವರುಷಗಳಲ್ಲಿ ಏನಾದರೂ ಬದಲಾವಣೆ ಕಾಣಿಸಿದೆಯೇ? ತಿಳಿಸುತ್ತೀರಾ?