ತಿಪಟೂರು-ಹಾಸನ ರಸ್ತೆಯಲ್ಲಿರುವ ಬೈಫ್ ಗ್ರಾಮೋದಯ ಕೇಂದ್ರವು ತಿಪಟೂರಿನಿಂದ ೧೧ ಕಿ.ಮೀ. ದೂರದಲ್ಲಿರುವ ಎಸ್.ಲಕ್ಕಿಹಳ್ಳಿ ಗ್ರಾಮದಲ್ಲಿದೆ. ಇದು ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಮತ್ತು ಸಂಶೋಧನಾ ಉದ್ದೇಶಗಳನ್ನು ನಿರ್ವಹಿಸುವ ತಾಣ. ಗ್ರಾಮೀಣಾಭಿವೃದ್ಧಿಯ ಅನೇಕ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡುವ ರಾಜ್ಯದ ಪ್ರಮುಖ ಕೇಂದ್ರ.

ತರಬೇತಿ ಕೇಂದ್ರವು 500 ಎಕರೆ ವಿಸ್ತೀರ್ಣದಲ್ಲಿದೆ. ಕೇಂದ್ರದಲ್ಲಿ ತರಬೇತಿಗಳು, ಸಸ್ಯಾಭಿವೃದ್ಧಿ, ನರ್ಸರಿ, ರೇಷ್ಮೆಸಾಕಾಣಿಕೆ, ಔಷಧಿ ವನ ಮುಂತಾದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಗಮನ ಸೆಳೆಯುವ ಮತ್ತೊಂದು ಅಂಶ ಇಲ್ಲಿನ ಮಳೆ ನೀರು ಸಂಗ್ರಹಣೆ. ಒಂದು ದಶಕದ ಹಿಂದೆಯೇ ಮಳೆ ನೀರು ಸಂಗ್ರಹಣೆಗೆ ತೊಡಗಿದ್ದು  ಸಂಸ್ಥೆಯ ದೂರದೃಷ್ಟಿಗೆ ಸಾಕ್ಷಿ. ಎರಡು ಕಡೆ ಮಳೆ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡಿದ್ದು ಕ್ರಮವಾಗಿ 60 ಸಾವಿರ ಮತ್ತು 1 ಲಕ್ಷ 60 ಸಾವಿರ ಲೀಟರ್ ನೀರು ಸಂಗ್ರಹಣೆ ನಡೆಯುತ್ತಿದೆ.

ಕೇಂದ್ರದಲ್ಲಿ ದೊರೆಯುವ ವಿವಿಧ ತರಬೇತಿಗಳ ವಿವರ:

1. ಜಲಾನಯನ ಅಭಿವೃದ್ಧಿ  – 2 ರಿಂದ 5 ದಿವಸ

2. ಕೃಷಿ, ಅರಣ್ಯ ತೋಟಗಾರಿಕೆ ಪದ್ಧತಿ  – 2 ರಿಂದ 3 ದಿವಸ

3. ಕೃತಕ ಗರ್ಭಧಾರಣೆ (ವಿಸ್ತರಣಾ ಕಾರ್ಯಕರ್ತರಿಗೆ) – 10 ರಿಂದ 15 ದಿವಸ

4. ಹೈನುಗಾರಿಕೆ   – 3 ರಿಂದ 5 ದಿವಸ

5. ಗೊಬ್ಬರ ತಯಾರಿಕೆ  – 1 ರಿಂದ 2 ದಿವಸ

6. ಔಷಧಿ ಸಸ್ಯಗಳ ಬಳಕೆ ಮತ್ತು ಸಂರಕ್ಷಣೆ  – 2 ರಿಂದ 3 ದಿವಸ

7. ರೇಶ್ಮೆ ಕೃಷಿ  – 30 ದಿವಸ

8. ಸ್ವಸಹಾಯ ಸಂಘಗಳ ರಚನೆ ಮತ್ತು ನಿರ್ವಹಣೆ  – 1 ರಿಂದ 2 ದಿವಸ

ತರಬೇತಿಗಾಗಿ ಮತ್ತು ವಾಸ್ತವ್ಯಕ್ಕಾಗಿ ಸುಸಜ್ಜಿತ ಕೊಠಡಿಗಳಿದ್ದು ಕ್ಷೇತ್ರ ಪ್ರವಾಸಕ್ಕೆ ವಾಹನ ವ್ಯವಸ್ಥೆಯೂ ಲಭ್ಯ.

 

ಬರ್ಡ್-ಕೆ ಸಂಸ್ಥೆಯು ಲಕ್ಕಿಹಳ್ಳಿಯ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದಿರುವುದು, ಯೋಗ್ಯವಾದ ಕುಡಿಯುವ ನೀರಿನ ಅಲಭ್ಯತೆ  ಹಾಗೂ ಲಭ್ಯವಿರುವ ಕುಡಿಯುವ ನೀರೂ ಸಹ ಫ್ಲೋರೈಡ್ ಯುಕ್ತವಾಗಿರುವುದನ್ನು ಪ್ರತ್ಯಕ್ಷ ಅನುಭವದಿಂದ ಅರಿತುಕೊಂಡು 1998 ರಲ್ಲಿ ಚಾವಣಿ ಮಳೆ ನೀರು ಸಂಗ್ರಹಣೆಗೆ ಪ್ರಾರಂಭಿಸಿತು.

ಮಳೆ ನೀರು ಸಂಗ್ರಹಣೆ ವಿಧಾನ

ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಹಾಸ್ಟಲ್ ಕಟ್ಟಡ ಒಂದಿದೆ. ವಿಸ್ತೀರ್ಣ 400 ಚದರ ಮೀಟರ್. ಇದರ ಮೇಲ್ಛಾವಣಿಯು ಆರ್.ಸಿ.ಸಿ.ಯದಾಗಿದ್ದು ಕಟ್ಟಡವು ಇಂಗ್ಲಿಷ್ ನ ‘ಯು’ಆಕಾರದಲ್ಲಿದೆ. ಛಾವಣಿಯಲ್ಲಿ ಬೀಳುವ  ಮಳೆ ನೀರು ಪೈಪುಗಳ ಮೂಲಕ ಹಾದು ಸಂಗ್ರಹಣಾ ತೊಟ್ಟಿಗೆ ಹರಿದು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ನೀರು ತೊಟ್ಟಿಗೆ ಬರುವ ಮುಂಚೆ ಶೋಧಕವನ್ನು ಹಾದು ಬರುವ ವ್ಯವಸ್ಥೆಯಿದೆ. ಈ ಶೋಧಕ ತೊಟ್ಟಿಯ ನಿರ್ಮಾಣ ಈ ರೀತಿ ಇರುತ್ತದೆ.

ತೊಟ್ಟಿಯ ತಳ ಭಾಗದಲ್ಲಿ ಅರ್ಧ ಅಡಿಯಷ್ಟು ದಪ್ಪ ಜಲ್ಲಿ, ನಂತರ ಅರ್ಧ ಅಡಿಯಷ್ಟು ಸಣ್ಣ ಜಲ್ಲಿ, ಅದರ ಮೇಲೆ ಅರ್ಧ ಅಡಿ ಇದ್ದಿಲು ಮತ್ತೆ ಮೇಲೆ ಪ್ಲಾಸ್ಟಿಕ್ ಲೇಯರ್ ಹಾಗೂ ಮೇಲ್ಭಾಗದಲ್ಲಿ ಅರ್ಧ ಅಡಿ ಮರಳು ಹರಡಿದ್ದು ಅದರ ಮೇಲೆ ಒಂದು ಜರಡೆಯನ್ನು ಕೂರಿಸಲಾಗಿದೆ. ಜರಡೆಯು ಕಸ-ಕಡ್ಡಿಗಳು ಹೋಗದಂತೆ ತಡೆಯುತ್ತದೆ. ಕಟ್ಟದ ‘ಯು’ ಆಕಾರದಲ್ಲಿರುವುದರಿಂದ ಎರಡೂ ಕಡೆಯಿಂದ ನೀರು ಹಾದು ಬರುವಂತೆ ಪೈಪುಗಳನ್ನು ಜೋಡಿಸಿದ್ದು ಎರಡು ಶೋಧಕ ತೊಟ್ಟಿಗಳಿವೆ. ಇವುಗಳಿಂದ ನೀರು ಹಾದು ಸಂಗ್ರಹಣಾ ತೊಟ್ಟಿಗೆ ಬೀಳುತ್ತದೆ.

ನೀರು ಸಂಗ್ರಹಣಾ ತೊಟ್ಟಿ

ನೀರು ಸಂಗ್ರಹಣಾ ತೊಟ್ಟಿಯು ಗೋಲಾಕಾರದಲ್ಲಿದ್ದು ಭೂಮಟ್ತಕ್ಕಿಂತ ಕೆಳಗಿದೆ. ತೊಟ್ಟಿಯು 10 ಅಡಿ ಆಳ ಮತ್ತು 18 ಅಡಿ ವ್ಯಾಸದ್ದಾಗಿದ್ದು 60 ಸಾವಿರ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿದೆ. ಸೈಜು ಕಲ್ಲುಗಳಿಂದ ತೊಟ್ಟಿ ನಿರ್ಮಿಸಿದ್ದು ಒಳಭಾಗದಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿ ಸುಣ್ಣ ಬಳಿಯಲಾಗಿದೆ. ಸಂಗ್ರಹಣಾ ತೊಟ್ಟಿಯಲ್ಲಿ ಹೆಚ್ಚಾದ ನೀರು ಹೊರಹೋಗಲು ತೊಟ್ಟಿಯ ಮೇಲ್ಭಾಗದಲ್ಲಿ ಒಂದು ಪೈಪ್ ಅಳವಡಿಸಲಾಗಿದೆ.

ಲಕ್ಕಿಹಳ್ಳಿ ಗ್ರಾಮೋದಯ ಕೇಂದ್ರದ ಮೇಲ್ವಿಚಾರಕರಾದ ಶ್ರೀ ಠಾಕೂರ್ ರವರು ಛಾವಣಿ ಮತ್ತು ನೀರು ಸಂಗ್ರಹಣಾ ತೊಟ್ಟಿಯನ್ನು ನಿರ್ವಹಣೆ ಮಾಡುವುದು ಅತಿಮುಖ್ಯ ಎನ್ನುತ್ತಾರೆ. ನೀರಿನ ಗುಣಮಟ್ಟ ಮತ್ತು ತೊಟ್ಟಿಯ ಬಾಳಿಕೆ ಉತ್ತಮವಾಗಿರಲು ಇದು ಅತ್ಯವಶ್ಯಕ ಎಂಬುದು ಅವರ ಅಭಿಪ್ರಾಯ. ಇದಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಲಲಾಗಿದೆ. ಮುಖ್ಯವಾಗಿ ಪ್ರತಿ ವರ್ಷ ಮಳೆಗಾಲದ ಪ್ರಾರಂಭದ ದಿನಗಳಲ್ಲಿ  ಛಾವಣಿಯನ್ನು ಸ್ವಚ್ಚಗೊಳಿಸಲಾಗುತ್ತದೆ. ನೀರು ಸಂಗ್ರಹಣಾ ತೊಟ್ಟಿಯನ್ನು ಪ್ರತಿ ವರ್ಷದ ಏಪ್ರಿಲ್ ತಿಂಗಳು ಅಥವಾ ಮಳೆಗಾಲದ ಆರಂಭಕ್ಕಿಂತ ಮುಂಚೆ ಕಡ್ಡಾಯವಾಗಿ ಸ್ವಚ್ಚಗೊಳಿಸಲಾಗುತ್ತದೆ. 

ನೀರು ಸಂಗ್ರಹಣಾ ತೊಟ್ಟಿಯ ಮೇಲ್ಭಾಗದಲ್ಲಿ ಒಬ್ಬ ಮನುಷ್ಯ ಇಳಿಯುವಷ್ಟು ಅಗಲದ ಜಾಗವಿದ್ದು ಅದಕ್ಕೊಂದು ಮುಚ್ಚಳಿಕೆಯಿರುತ್ತದೆ. ತೊಟ್ಟಿ ಸ್ವಚ್ಚಗೊಳಿಸುವಾಗ, ನೀರಿನ ಮಟ್ಟ ತಿಳಿಯಲು ಮತ್ತು ಅಗತ್ಯವಿದ್ದಾಗ ಮಾತ್ರ ಇದನ್ನು ತೆರೆಯಲಾಗುತ್ತದೆ. ಪದೇ-ಪದೇ ಇದನ್ನು ತೆಗೆದರೆ ಸೂರ್ಯನ  ಕಿರಣಗಳು ಮತ್ತು ಗಾಳಿ ತೊಟ್ಟಿಯಲ್ಲಿನ ನೀರಿಗೆ ತಾಕಿ ಹುಳ ಬೀಳುವ ಸಂಭವವಿರುತ್ತದೆ ಹಾಗೂ ತೊಟ್ಟಿಯ ಒಳಗೆ ಪಾಚಿ ಬೆಳೆಯಲು ಆಸ್ಪದವಾಗುತ್ತದೆ. ಒಂದು ವೇಳೆ ಹೀಗೇನಾದರೂ ಆದರೆ ನೀರು ಬಳಕೆ ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಲಾಗುತ್ತದೆ.

ಮಳೆನೀರು ಸಂಗ್ರಹಣೆಗೆ ಮುಂಚೆ ಇದ್ದಂತಹ ಪರಿಸ್ಥಿತಿ

ಈಗಾಗಲೇ ತಿಳಿಸಿರುವಂತೆ ಲಕ್ಕಿಹಳ್ಳಿಯು ತುಮಕೂರು ಜಿಲ್ಲೆಯಲ್ಲಿದ್ದು ಮಧ್ಯ ಒಣ ವಲಯಕ್ಕೆ ಒಳಪಡುತ್ತದೆ. ವಾರ್ಷಿಕ ಸರಾಸರಿ ಮಳೆ 600 ಮಿ.ಮೀ. ಮಾತ್ರ. ಮಳೆಯ ಅನಿಶ್ಚಿತತೆ ಇಲ್ಲಿ ಸರ್ವೇ ಸಾಮಾನ್ಯ. ಪರಿಣಾಮ ನೀರಿನ ಅಭಾವ. ಕುಡಿಯುವ ನೀರಿಗಂತೂ ವಿಪರೀತ ತೊಂದರೆ. ನೀರಿನ ಅವಶ್ಯಕತೆಗಳಿಗೆ ಕೊಳವೆ ಬಾವಿಗಳ ಮೇಲೆ ಅವಲಂಬನೆ ಹೆಚ್ಚದಂತೆಲ್ಲಾ ಅಂತರ್ಜಲ ಮಟ್ಟ ಸಹಜವಾಗಿಯೇ ಕುಸಿದು ಕೊಳವೆ ಬಾವಿಗಳ ಆಳ ಹೆಚ್ಚುತ್ತಾ ಹೋಯಿತು. ಇದರಿಂದ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ. ವಿಧಿ ಇಲ್ಲದೆ ಈ ನೀರನ್ನೇ ಕುಡಿದು ಅನೇಕ ಆರೋಗ್ಯ ಸಮಸ್ಯೆಗಳನ್ನು ಈ ಭಾಗದ ಜನರು ಎದುರಿಸುತ್ತಿದ್ದರು.

ತರಬೇತಿ ಕೇಂದ್ರದಲ್ಲಿಯೂ ಸಹ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಕ್ಯಾಂಪಸ್ಸಿನಲ್ಲಿ ಚಟುವಟಿಕೆಗಳು ಹೆಚ್ಚಾದಂತೆ ನೀರಿನ ಅಗತ್ಯ ಹೆಚ್ಚಾಯಿತು. “ಟ್ಯಾಂಕರ್ ಮೂಲಕ ನೀರು ತರಿಸುವುದು ದಿನ ನಿತ್ಯದ ಪರಿಪಾಠವೇ ಆಗಿಹೋಗಿತ್ತು”  ಎಂದು ಆಗಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಈ ಕ್ಯಾಂಪಸ್ಸಿನಲ್ಲಿ ಅರಂಭದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕಾಂತರಾಜು. ಈ ಕಟು ಅನುಭವವೇ ನಮಗೆ ಮಳೆ ನೀರು ಸಂಗ್ರಹಣೆಯನ್ನು ಅಳವಡಿಸಿಕೊಳ್ಳಲು ಪ್ರೇರೇಪಣೆ ಎನ್ನುತ್ತಾರೆ ಅವರು. ಮುಂದುವರಿದು “ಈಗ ವರ್ಷದಲ್ಲಿ ಒಂದೆರಡು ತಿಂಗಳು ಬಿಟ್ಟರೆ ಉಳಿದ ಅವಧಿಗೆ ಮಳೆ ನೀರು ಸಾಕಷ್ಟಾಗುತ್ತದೆ, ಫ್ಲೋರೈಡ್ ಅಂಶವಿಲ್ಲದ ಶುದ್ಧ ನೀರು ಲಭ್ಯ. ಟ್ಯಾಂಕರ್ ನೀರು ತರಿಸುವ ಕಿರಿ-ಕಿರಿ ಇಲ್ಲ. ಹಣದ ಉಳಿತಾಯವೂ ಆದಂತಾಗಿದೆ” ಎಂಬುದು ಕಾಂತರಾಜುರವರ ಆತ್ಮ ವಿಶ್ವಾಸದ ನುಡಿ. ಹಾಸ್ಟೆಲ್ ಕಟ್ಟಡದಲ್ಲಿರುವ ಮಳೆ ನೀರು ಸಂಗ್ರಹಾಗಾರ ನಿರ್ಮಾಣಕ್ಕೆ 1.20.000.00 ರೂ. ವೆಚ್ಚವಾಗಿದೆ. ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ  2 ತಿಂಗಳು.

ಲಕ್ಕಿಹಳ್ಳಿ ವ್ಯಾಪ್ತಿಯ ಸರಾಸರಿ ಮಳೆ ಪ್ರಮಾಣ 400೪೦೦ ರಿಂದ 600೦೦ ಮಿ.ಮೀ. 1 ಮಿ.ಮೀ ಮಳೆ ಬಿದ್ದರೆ 400 ಲೀಟರ್ ನೀರು ಸಂಗ್ರಹಣೆಯಗುತ್ತದೆ. 1 ಸೆಂಟಿ ಮೀಟರ್ ಮಳೆ ಬಿದ್ದರೆ 4000 ಲೀಟರ್ ನೀರು ಸಂಗ್ರಹಣೆಯಾಗುತ್ತದೆ. ಈ ಭಾಗದಲ್ಲಿ ಸಾಮಾನ್ಯವಾಗಿ ಜೂನ್ ಮತ್ತು ಅಕ್ಟೋಬರ್ ತಿಂಗಳು ಹೆಚ್ಚು ಮಳೆ ಬೀಳುತ್ತದೆ.

ಸಂಗ್ರಹಿತವಾದ ಮಳೆ ನೀರನ್ನು ಸಂಸ್ಥೆಯು ವಿವಿಧ ಉಪಯೋಗಗಳಿಗೆ ಬಳಸುತ್ತದೆ. ಮುಖ್ಯವಾಗಿ; ಕ್ಯಾಂಪಸ್ಸಿಗೆ ವಿವಿದ ತರಬೇತಿಗೆ ಬರುವ ಶಿಬಿರಾರ್ಥಿಗಳಿಗೆ ಕುಡಿಯಲು ಉತ್ತಮ ಗುಣಮಟ್ಟದ ಮಳೆ ನೀರನ್ನು ನೀಡುತ್ತದೆ. ಆ ಮೂಲಕ ಮಳೆ ನೀರು ಬಳಕೆಯಿಂದ ಫ್ಲೊರೊಸಿಸ್ ನ್ನು ದೂರವಿಡುವ ಸುಲಭ ಉಪಾಯದ ಮನವರಿಕೆ ಮಾಡಿಕೊಡಲಾಗುತ್ತದೆ. ಮಳೆ ನೀರು ಸಂಗ್ರಹಣೆಯ ವಿಧಾನ, ಖರ್ಚು-ವೆಚ್ಚಗಳ ಬಾಬ್ತು, ನಿರ್ವಹಣೆ ಮುಂತಾದ ಅಂಶಗಳನ್ನೆಲ್ಲಾ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸುವುದು ಬಹಳ ಪರಿಣಾಮಕಾರಿಯಾಗಿದೆ.  ಇದರ ಪರಿಣಾಮ ಹಲವಾರು ಹಳ್ಳಿಗಳಲ್ಲಿ ಸ್ವತಃ ಮಳೆ ನೀರು ಸಂಗ್ರಹಿಸಿ ಉಪಯೋಗಿಸುವ ಪರಿಪಾಠ ಪ್ರಾರಂಭವಾಗಿದೆ. ಅಲ್ಲದೆ ಕ್ಯಾಂಪಸ್ಸಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜು ಮಕ್ಕಳಿಗೂ ಸಹ  ಮಳೆ ನೀರು ಸಂಗ್ರಹಣೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಇದು ಹಲವಾರು ಶಾಲೆಗಳಲ್ಲಿ ಛಾವಣಿ ನೀರು ಸಂಗ್ರಹಣೆ ಕಾರ್ಯಕ್ಕೆ ಪ್ರೇರೇಪಣೆ ನೀಡಿದೆ.

ರೇಷ್ಮೆ ನೂಲು ಬಿಚ್ಚಲು ಮಳೆ ನೀರು

ಸಂಸ್ಥೆಯು ಗ್ರಾಮೋದಯ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಬಹು ಮುಖ್ಯ ಚಟುವಟಿಕೆ ರೇಶ್ಮೆ ಮೊಟ್ಟೆಯ ತಯಾರಿಕೆ, ವಿತರಣೆ ಮತ್ತು ಸಂಶೋಧನೆ. ಈ ಕೆಲಸಕ್ಕೆ ಅತಿ ಹೆಚ್ಚು ನೀರಿನ ಅವಶ್ಯಕತೆ ಇರುವುದನ್ನು ಮನಗಂಡ ಸಂಸ್ಥೆಯು  ಅದಕ್ಕೂ ಮಳೆ ನೀರನ್ನೇ ಬಳಸಲು ತೀರ್ಮಾನಿಸಿತು. ಈಗಾಗಲೇ ಕುಡಿಯುವ ನೀರಿನ ಉದ್ದೇಶಕ್ಕೆ ಮಳೆ ನೀರು ಸಂಗ್ರಹಿಸಿ ಯಶಸ್ವಿಯಾಗಿದ್ದೂ ಸಹ ಈ ತೀರ್ಮಾನಕ್ಕೆ ಕಾರಣವೆನ್ನಬಹುದು. 2000 ನೇ ಇಸವಿಯಲ್ಲಿ ಇದರ ನಿರ್ಮಾಣಕ್ಕೆ ಕೈಹಾಕಿತು.

ಇದಕ್ಕಾಗಿ 11 ಅಡಿ ಎತ್ತರ ಮತ್ತು 22 ಅಡಿ ಸುತ್ತಳತೆಯ ತೊಟ್ಟಿಯನ್ನು ನಿರ್ಮಿಸಲಾಗಿದೆ. ಇದರಲ್ಲಿ 1 ಲಕ್ಷ 30 ಸಾವಿರ ಲೀಟರ್ ಮಳೆ ನೀರು ಸಂಗ್ರಹಿಸಬಹುದು. ವರ್ಷವೊಂದರಲ್ಲಿ ಅಂದಾಜು 250 ದಿನ ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸ ನಡೆಯುತ್ತದೆ. ಇದಕ್ಕಾಗಿ ಬೇಕಾಗುವ ಅಪಾರ ಪ್ರಮಾಣದ ನೀರನ್ನು ಪೂರೈಸುವುದೇ ಇದರ ಉದ್ದೇಶ. ಕ್ಯಾಂಪಸ್ಸಿನಲ್ಲಿ ರೇಷ್ಮೆ ಮೊಟ್ಟೆ ಉತ್ಪಾದನಾ ಕೇಂದ್ರದ ಮುಖ್ಯಸ್ಥರಾದ  ಡಾ.ಹೂಗಾರ್ ರವರು ಹೇಳುವಂತೆ “ ಮಳೆ ನೀರನ್ನು ಬಳಸುವುದರಿಂದ ಬಹು ಸರಾಗವಾಗಿ ರೇಷ್ಮೆ ನೂಲು ಬಿಚ್ಚಬಹುದು. ಎಳೆಗಳು ತುಂಡಾಗುವುದಿಲ್ಲ, ಹೆಚ್ಚು ಶ್ರಮ ಬೇಕಿಲ್ಲ, ಮುಖ್ಯವಾಗಿ ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ನೂಲು ಉತ್ಪಾದನೆಯಾಗಲು ಮಳೆ ನೀರು ಬಳಕೆಯೇ ಕಾರಣ” ಈ ತೊಟ್ಟಿಯ ನಿರ್ಮಾಣಕ್ಕೆ ರೂ. 1.80.000.00 ವೆಚ್ಚವಾಗಿದೆ.

ಛಾವಣಿ ಮಳೆ ನೀರು ಸಂಗ್ರಹಣೆಯಷ್ಟೇ ಅಲ್ಲದೆ ಕ್ಯಾಂಪಸ್ಸಿನಲ್ಲಿ ಸಾದ್ಶವಿರುವಲ್ಲೆಲ್ಲಾ ಜಲ ಸಂರಕ್ಷಣೆಯ ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೊಳವೆ ಬಾವಿ ಮರುಪೂರಣ, ಉದಿ-ಬದುಗಳ ನಿರ್ಮಾಣ, ಗಿಡಗಳ ಬುಡಕ್ಕೆ ಮಲ್ಚಿಂಗ್ (ಹೊದಿಕೆ) ಮಾಡುವ ಮೂಲಕ ತೇವಾಂಶ ಕಾಪಾಡುವಿಕೆ, ಸುತ್ತಲೂ ಜೀವಂತ ಬೇಲಿಯ ನಿರ್ಮಾಣ, ಕೃಷಿ ಹೊಂಡಗಳ ಮೂಲಕ ಹೆಚ್ಚುವರಿ ನೀರು ಶೇಖರಣೆ, ಮಡಿಕೆ ನೀರಾವರಿ ಮುಂತಾದ ಅನೇಕ ವಿಧಾನಗಳನ್ನು ಕ್ಯಾಂಪಸ್ಸಿನುದ್ದಕ್ಕೂ ಕಾಣಬಹುದು. ೫೦೦ ಎಕರೆಯಲ್ಲಿ ಬಿದ್ದ ಮಳೆ ನೀರು ಸಾಧ್ಯವಾದಷ್ಟೂ ಅಲ್ಲಿಯೇ ಇಂಗುವ ವ್ಯವಸ್ಥೆ ಇಲ್ಲಿದೆ. 

ಹೆಜ್ಜೆ-ಹೆಜ್ಜೆಗೂ ನೀರುಳಿಸುವ ವಿವಿಧ ವಿಧಾನಗಳನ್ನು ಕಾಣಬಹುದಾದ ಗ್ರಾಮೋದಯ ತರಬೇತಿ ಕೇಂದ್ರವು ಜಲ ಸಂರಕ್ಷಣೆಯ ಪಾಠ ಹೇಳುವ ಬಯಲು ಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ತಪ್ಪದೆ ಒಮ್ಮೆ ಭೇಟಿ ಕೊಡಿ.