ಓಹೋ ಬಂದರು
ಕಡೆಗೂ ಬಂದರು
ಇಷ್ಟುದಿನ ಬರುವಾಸೆಯ ಬಿತ್ತಿ
ನಿರಾಸೆಗೊಳಿಸಿದ್ದವರು.
ಮತ್ತೆಲ್ಲೋ ಮುನ್ನಡೆಯುವರಿವರು
ಎನ್ನುತ ನಾವ್ ಸುಯ್ದಿರಲು
ಕಡೆಗೂ ಬಂದರು
ಆಕಾಶದ ಅತಿಥಿಗಳು !

ಅದೊ ಧುಮುಕುತ್ತಿಹರು
ಪಟ ಪಟ ಪಟ ಮನೆ ಹೆಂಚಿನ ಮೇಲೆ
ಕೆಳಗಿಳಿದರು, ಒಳಗಿಳಿದರು
ಹರಿದಾಡುವರಿದೊ ಹಸುಮಕ್ಕಳವೋಲೆ !

ಅಲ್ಲೂ ಹೋದರು ಇಲ್ಲೂ ಹೋದರು
ಎಲ್ಲರನೂ ಮಾತಾಡಿಸುವಾಸೆ !
ಮರದಡಿ ಗಿಡದಡಿ ಹಸುರಿನಲಿ
ಕಡೆಗಾ ಚರಂಡಿ ಕೊಳಚೆಯಲಿ
ಹರಿದಾಡುವ ಈ ಮುಗಿಲಿನ ಮಕ್ಕಳಿಗೆ
ಈ ನೆಲವೆಂದರೆ ಎನಿತಾಸೆ !

ಸಂಭ್ರವೇನ್, ಸಡಗರವೇನ್
ಇವರಾಗಮನಕ್ಕೆ
ಗುಡುಗಿನ ಮೃದಂಗ ; ಮಿಂಚಿನ ಆರತಿ
ಎಲ್ಲವು ಈ ನೆಲದೊಳಿತಕ್ಕೆ.

ಓ ಬನ್ನಿರಿ ಅತಿಥಿಗಳೇ
ಸುಸ್ವಾಗತ ನಿಮಗೆ
ಒಲವಿಗೆ ಒಲವಲ್ಲದೆ
ಬೇರೇನಿದೆ ಕೊಡುಗೆ.