ಶ್ರೀರಾಮಚಂದ್ರನಿಗೆ ಲಕ್ಷ್ಮಣನಿದ್ದಂತೆ, ಭಗವಾನ್ ಬುದ್ಧನಿಗೆ ಆನಂದನಿದ್ದಂತೆ, ಮಹಾತ್ಮ ಗಾಂಧಿಯವರಿಗೆ ಮಹದೇವ ದೇಸಾಯಿ. ಮಹಾತ್ಮ ಗಾಂಧಿಯವರ ಈ ‘ಆಪ್ತ ಕಾರ್ಯದರ್ಶಿ’ ಒಡಹುಟ್ಟಿದ ತಮ್ಮನಿದ್ದಂತೆ ಅತಿ ನಿಕಟಾನುವರ್ತಿ. ಕಾರ್ಯಾಲಯದ ಕೆಲಸ ಮಾತ್ರ ಅಲ್ಲ, ಇಡೀ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಮಹದೇವ ದೇಸಾಯಿ ಸತತವಾಗಿ ತನ್ನ ಗುರುವಿನ ಎರಡನೆಯ ದೇಹದಂತೆ ದುಡಿಯುತ್ತಿದ್ದರು. ಗಾಂಧೀಜಿಯ ಕೊನೆಯ ಮಹಾಸಂಗ್ರಾಮ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಚಳುವಳಿಯಲ್ಲಿ ಸೆರೆಮನೆ ಸೇರಿದಾಗ ಈ ಕಿರಿಯ ಭಾಯಿ ತನ್ನ ಗುರುವಿನ ಪದತಲದಲ್ಲಿ ಸೇವಾ ದೀಕ್ಷೆಯಲ್ಲಿದ್ದಾಗಲೇ ಕಣ್ಮರೆಯಾದರು. ಗಾಂಧೀಜಿಯ ಜೀವನದಲ್ಲಿ ಮತ್ತೆ ಆ ಜಾಗವನ್ನು ಹಾಗೆ ತುಂಬಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ. ಗಾಂಧೀ ಬಳಗದಲ್ಲಿ ಮಹದೇವ ದೇಸಾಯಿ ಅನರ್ಘ್ಯ ರತ್ನ ; ವಿನಯ, ವಿದ್ಯೆಗಳ ಅಪೂರ್ವ ಸಂಗಮ.

ಭಕ್ತನಂತೆ ಸರ್ವಾರ್ಪಣೆ

ಮಹಾದೇವ ದೇಸಾಯಿ ಗುಜರಾತಿನವರು. ಜಗತ್ತಿನಲ್ಲೇ ಪ್ರಥಮವಾಗಿ ಉದ್ಭವವಾದ ಅಹಿಂಸಾತ್ಮಕ ಸತ್ಯಾಗ್ರಹ ಪ್ರಯೋಗ ಪ್ರಾರಂಭವಾದುದು ಗುಜರಾತಿನಲ್ಲೇ. ೧೯೧೫ ರಲ್ಲಿ ಗಾಂಧೀಜಿ ಅಹಮದಾಬಾದಿನಲ್ಲಿ ಬಂದು ನೆಲಸಿ ಸತ್ಯಾಗ್ರಹ ಆಶ್ರಮ ಪ್ರಾರಂಭಿಸಿದಾಗ ಅನೇಕರು ಅವರ ತತ್ತ್ವಗಳಲ್ಲಿ ಸಂಪೂರ್ಣವಾಗಿ ಲೀನವಾಗಿ ಜೀವನವನ್ನೇ ತಾಯ್ನಾಡಿನ ಸೇವೆಗೆ ಮುಡಿಪಾಗಿಟ್ಟರು. ಅಂಥಹ ಪ್ರಖರ ಬುದ್ಧಿ ಜೀವಿಗಳಲ್ಲಿ ಮಹದೇವ ದೇಸಾಯಿ ಅಗ್ರಗಣ್ಯರು.

ಗುರುವಿನ ಸೆಳೆತ

ದಕ್ಷಿಣ ಆಫ್ರಿಕದ ಜನತಾ ಹೋರಾಟಗಳಲ್ಲಿ ಸತ್ಯಾಗ್ರಹ ಅಸ್ತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಿ ಸ್ವದೇಶಕ್ಕೆ ಹಿಂತಿರುಗಿದ್ದ ಗಾಂಧೀಜಿ ಧ್ಯೇಯವಾದೀ ಯುವಕರ ಮನಸ್ಸನ್ನು ಸೂರೆಗೊಂಡರು. ಅಹಮದಾಬಾದಿನ ‘ಸತ್ಯಾಗ್ರಹಾಶ್ರಮ’ ಅನೇಕರನ್ನು ಆಕರ್ಷಿಸಿತು. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ರಾಂತಿ ಅಹಿಂಸಾ ಮಾರ್ಗದಲ್ಲಿ ನಡೆಯಲು ಅದು ಪ್ರಯೋಗಶಾಲೆ. ಹೊಸ ಜೀವನದ ದಾರಿಯ ಬೆಳಕಿನಲ್ಲಿ ಹಲವು ಕಠಿಣ ನಿಯಮಗಳನ್ನನುಸರಿಸಿ ಸತ್ಯ ಮತ್ತು ಅಹಿಂಸಾನಿಷ್ಠ , ಸೇವಾಮಯ ಸರಳ ದಿನಚರಿ ಅಲ್ಲಿ ಕಡ್ಡಾಯವಾಗಿತ್ತು. ಏನನ್ನೂ ಕೂಡಿಡದೆ ಇರುವುದು, ಬಯಸದಿರುವುದು, ಬ್ರಹ್ಮಚರ್ಯ ಮುಂತಾದ ಹಿಂದಿನ ಕಾಲದ ಆದರ್ಶಗಳನ್ನು ಆಧುನಿಕ ಸಮಾಜದಲ್ಲಿ ಹೇಗೆ ಅನುಷ್ಠಾನ ಮಾಡಬೇಕು ಎಂಬ ಸಂಶೋಧನೆ ನಡೆಯುತ್ತಿತ್ತು. ಕಷ್ಟಪಟ್ಟು ಕೆಲಸ ಮಾಡುವುದು. ಎಲ್ಲ ಧರ್ಮಗಳು ಸಮಾನ ಎಂದು ಕಾಣುವುದು, ನಮ್ಮ ದೇಶದಲ್ಲಿ ಸಿದ್ಧವಾದ ವಸ್ತುಗಳನ್ನೆ ಬಳಸುವುದು, ಅಸ್ಪೃಶ್ಯತೆಯ ನಿವಾರಣೆ, ಯಾವ ಭಯವೂ ಇಲ್ಲದಿರುವುದು – ಈ ಪಂಚ ಮಹಾವ್ರತಗಳು ಸತ್ಯಾಗ್ರಹಾಶ್ರಮಕ್ಕೆ ವಿಶಿಷ್ಟವಾಗಿದ್ದವು. ಆತ್ಮಶಕ್ತಿ, ಧ್ಯೇಯ ನಿಷ್ಠೆ, ಸಾಹಸ ಜೀವನಗಳನ್ನರಸುತ್ತಿದ್ದ ಮಹದೇವ ದೇಸಾಯಿ ಆಶ್ರಮದ ಬಾಳ ಹಿರಿಮೆಗೆ ಮಾರುಹೋದರು. ಬಾಪುವಿನ ಸಾನ್ನಿಧ್ಯ ಅವರ ಬಾಳನ್ನೇ ಪರಿವರ್ತಿಸಿತು.

ಸಾರ್ಥಕ್ಯದ ದಾರಿ

ಅಹಮದಾಬಾದಿನ ಪ್ರೇಮಭಾಯಿ ಸಭಾಂಗಣದಲ್ಲಿ ಗಾಂಧೀಜಿ ಒಂದು ಸಾರ್ವಜನಿಕ ಸಭೆಯಲ್ಲಿ ಮಾತ ನಾಡುತ್ತಿದ್ದರು. ತಲ್ಲೀನರಾಗಿ ಕೇಳುತ್ತಿದ್ದ  ಇಬ್ಬರು ಯುವಕ ವಕೀಲರು ಸಭೆ ಮುಗಿದೊಡನೆ ಗಾಂಧೀಜಿ ಯನ್ನು ಮುತ್ತಿದರು. “ನಿಮ್ಮೊಡನೆ ಮಾತನಾಡಬೇಕು” ಎಂದರು. “ನನ್ನೊಡನೆ ಆಶ್ರಮಕ್ಕೆ ನಡೆಯಿರಿ” – ಗಾಂಧೀಜಿ ಉತ್ತರ. ಅವರ ವೇಗದ ನಡಿಗೆಯೊಡನೆ ಕಾಲು ಹಾಕುವುದೇ ಈ ತರುಣ ವಿದ್ಯಾವಂತರಿಗೆ ಕಷ್ಟವಾಯಿತು. ಆದರೂ ತಮ್ಮಂತಹ ಕಿರಿಯರಲ್ಲಿ ಬಾಪೂ ತೋರಿದ ಸಹಜ ವಾತ್ಸಲ್ಯದಿಂದಾಗಿ ಅವರ ಮನಸ್ಸು ಸಂತಸಗೊಂಡಿತ್ತು. ಅವರಿಬ್ಬರೂ ಆಶ್ರಮದ ಸದಸ್ಯರಾಗಲು ಬರೆದು ತಿಳಿಸಿದ್ದರು.

“ನೀವೇನು ಮಾಡುತ್ತಿದ್ದೀರಿ?” ಗಾಂಧೀಜಿಯ ಪ್ರಶ್ನೆ. “ಎಲ್‌ಎಲ್.ಬಿ. ಮಾಡಿ ವಕೀಲರಾಗಿದ್ದೇವೆ.” “ಅತ್ಯಾಧುನಿಕ ಭಾರತದ ಕೈಪಿಡಿ ನಿಮ್ಮಲ್ಲಿದೆಯೇ ? ನಾನು ಅದರಿಂದ ಕೆಲವು ಅಂಶಗಳನ್ನು ಪಡೆಯ ಬೇಕಾಗಿದೆ.” ಈ ತರುಣರು ಹಿಂದೆ ಬಿದ್ದರು – “ಹೋದ ವರ್ಷದ್ದಿದೆ” – ಅಳುಕಿನ ಉತ್ತರ. “ಹೀಗೇನು ನೀವು ವಕೀಲಿವೃತ್ತಿ ಮಾಡುವುದು ? ಎಲ್ಲರಿಗಿಂತ ಮುಂಚೆ ನಿಖರವಾದ ಅಂಕಿಅಂಶಗಳು ನಿಮ್ಮಲ್ಲಿರಬೇಡವೆ?” ಎಂದು ಸ್ವಲ್ಪ ಗಡುಸಾಗಿಯೇ ನುಡಿದ ಗಾಂಧೀಜಿ ಮತ್ತೆ ಅವರನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು ಆಶ್ರಮದ ಧ್ಯೇಯಧೋರಣೆಗಳನ್ನೆಲ್ಲಾ ವಿವರಿಸಿದರು. ರಾತ್ರಿ ಹತ್ತು ಗಂಟೆಯಾಗಿತ್ತು. ಯುವಕರ ಮನಸ್ಸು ತುಂಬಿತ್ತು.

ಇಪ್ಪತ್ತೈದು ವರ್ಷದ ಹರೆಯದ ಮಹದೇವ ದೇಸಾಯಿ ತನ್ನ ಗೆಳೆಯ ನರಹರಿ ಪರೇಖನೊಂದಿಗೆ ಹಿಂತಿರುಗುತ್ತಾ, “ಈ ಮಹಾಮಹಿಮನ ಪದತಲದಲ್ಲಿ ನನ್ನ ಬಾಳು ಸಮರ್ಪಿತವಾಗಬೇಕೆನ್ನಿಸುತ್ತದೆ” ಎಂದರು. ಮೌನವಾಗಿ ಇಬ್ಬರೂ ಬಹಳ ಹೊತ್ತು ಚಿಂತನ ಮಾಡಿದರು. ಬಾಳು  ಹೇಗೆ ಸಾರ್ಥಕವಾಗುತ್ತದೆ ಎನ್ನುವುದು ಮನಸ್ಸಿಗೆ ನಿಚ್ಚಳವಾಯಿತು.

ಪಾಠಗಳು

ಆ ವೇಳೆಗೆ ಮಹದೇವ ಭಾಯಿ ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳಲ್ಲಿ ಉತ್ತಮ ಬರಹಗಾರರು. ಲಾರ್ಡ್ ಮಾರ್ಲೆ ಅವರ ‘ಒಪ್ಪಂದವನ್ನು ಕುರಿತು’ (ಆನ್ ಕಾಂಪ್ರಮೈಸ್) ಗ್ರಂಥವನ್ನು ಭಾಷಾಂತರಿಸಿ ಪ್ರಕಟಣೆಗೆ ಸಿದ್ಧ ಮಾಡಿದ್ದರು. ಮಾರ್ಲೆಯವರ ಅನುಮತಿ ಪಡೆಯಲು ಪತ್ರ ಬರೆಯಬೇಕಾಗಿತ್ತು. ಇಂಗ್ಲೆಂಡಿನಲ್ಲೇ ಶಿಕ್ಷಣ ಪಡೆದ ಗಾಂಧೀಜಿಯ ಸಲಹೆ ಪಡೆಯಲು ಹೋದರು. ಹೊಗಳಿಕೆಗಳ ದೀರ್ಘ ವಾಕ್ಯಗಳೊಡನೆ ಮಹದೇವ ಭಾಯಿ ಮಾರ್ಲೆ ಅವರಿಗೆ ಬರೆದಿದ್ದರು. ಅದನ್ನು ಗಾಂಧೀಜಿಗೆ ತೋರಿಸಿದಾಗ, “ಇದಕ್ಕೇ ನಮ್ಮನ್ನು ಹೊಗಳು ಭಟ್ಟರು ಎಂದು ಅವರು ಮೂದಲಿಸುವುದು. ನೇರವಾಗಿ, ಸರಳವಾಗಿ ಅನುಮತಿ ಕೇಳುವ ಬದಲು ಈ ಆಡಂಬರದ ವಿಶೇಷಣಗಳೇಕೆ ? ಹೀಗೆ ಬರೆಯುವುದು ಅವಿವೇಕ. ಇಂಗ್ಲಿಷರೆಂದರೆ ನಿಮಗೇಕೆ ಈ ಅನಾವಶ್ಯಕ ಭಯ? ಇಲ್ಲಿ ಬನ್ನಿ ; ನಾನು ಹೇಳಿ ಬರೆಸುತ್ತೇನೆ” ಎಂದರು.

ಮತ್ತೊಂದು ಪಾಠದ ಅನುಭವವಾಯಿತು. “ಇಂಗ್ಲಿಷ್ ವ್ಯಾಮೋಹದ ಕಾರಣ ಮಾತೃಭಾಷೆಯನ್ನು ತಿರಸ್ಕರಿಸುವುದು ಯೋಗ್ಯವಲ್ಲ. ಅತ್ಯಂತ ಶ್ರದ್ಧೆಯಿಂದ ಭಾರತೀಯ ಭಾಷಾಭ್ಯಾಸ ಮಾಡದಿದ್ದರೆ ನಿಮ್ಮ ತಾಯ್ನಾಡಿಗೆ ನೀವೇನೂ ಪ್ರಯೋಜನವಾಗಲಾರಿರಿ” ಎಂದು ಗಾಂಧೀಜಿ ಸೇರಿಸಿದರು.

ನಿನಗಾಗಿಯೇ ಕಾದಿದ್ದೇನೆ

ಮಹದೇವರ ಹೃದಯ ಗಾಂಧೀಜಿ ಕಡೆಗೆ ಎಳೆಯುತ್ತಿತ್ತು. ಎಳೆ ಹರೆಯದ ಮನಸ್ಸು ಲೌಕಿಕ ಯಶಸ್ಸು, ಪದವಿ, ಸಂಪಾದನೆಗಳ ಕಡೆಗೆ ವಾಲುತ್ತಿತ್ತು. ಸಹಕಾರ ಸಂಘಗಳ ಮೇಲ್ವಿಚಾರಕರ ಹುದ್ದೆ ಸಿಕ್ಕಿತು. ತಂದೆಗೂ ಆ ವೇಳೆಗೆ ನಿವೃತ್ತಿಯಾಗಿತ್ತು. ಸಂಸಾರ ಸಾಗಿಸಲು ಮಹದೇವ ಭಾಯಿ ಕೆಲಸಕ್ಕೆ ಸೇರಿದರು. ನಿಷ್ಠೆಯಿಂದ, ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಹೆಸರು ಗಳಿಸಿದರು. ಕ್ರಮವಾಗಿ ಮೇಲೇರುತ್ತಿದ್ದರು. ಆದರೆ ಒಳಗಿನ ಕರೆ ಪ್ರಬಲವಾಗುತ್ತಲೇ ಇತ್ತು. ಸತ್ಯಾಗ್ರಹಾಶ್ರಮಕ್ಕೆ ಹಲವು ಬಾರಿ ಹೋಗಿಬಂದರು. ಗಾಂಧೀಜಿ ಬರಹಗಳ ಇಂಗ್ಲಿಷ್ ಭಾಷಾಂತರಗಳನ್ನು ಮಹದೇವ ಭಾಯಿ ಆಶ್ರಮಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಮಾಡಿಕೊಡುತ್ತಿದ್ದರು. ಅವರ ಮೋಹಕ ಶೈಲಿ, ಖಚಿತ ಪದಸಂಪತ್ತು ಅಮೋಘವಾಗಿದ್ದವು. ಗಾಂಧೀಜಿಯೇ ಅವನ್ನು ಮೆಚ್ಚಿದ್ದರು.

೧೯೧೭ರ ಆಗಸ್ಟ್‌ನಲ್ಲಿ ಗಾಂಧೀಜಿ ಮುಂಬಯಿಯಲ್ಲಿ ಬಿಡಾರ ಮಾಡಿದ್ದರು. ಮಹದೇವ ದೇಸಾಯಿಯವರಿಗೆ ತಮ್ಮ ನಾಯಕನಿಂದ ದೂರವಿರಲು ಇನ್ನು ಸಾಧ್ಯವಾಗಲಿಲ್ಲ. ಕೆಲಸಕ್ಕೆ ರಾಜೀನಾಮೆ ಕೊಟ್ಟು ಮುಂಬಯಿಗೆ ಬಂದುಬಿಟ್ಟರು. ನೇರವಾಗಿ ಗಾಂಧೀಜಿಯ ಬಳಿ ಸಾರಿದರು. “ನಿನಗಾಗಿಯೇ ನಾನು ಕಾದಿದ್ದೇನೆ ಮಹದೇವ. ಎಲ್ಲ ಕೆಲಸವನ್ನೂ ಬಿಟ್ಟು ನಿನ್ನ ಹೆಂಡತಿ ಯೊಡನೆ ಇಲ್ಲಿಗೇ ಬಂದುಬಿಡು. ನಿನ್ನ  ಕ್ರಮಬದ್ಧತೆ, ಸ್ವಾಮಿನಿಷ್ಠೆ  ಮತ್ತು ಬುದ್ಧಿಶಕ್ತಿಗಳು ನನ್ನನ್ನು  ಸೂರೆ ಗೊಂಡಿವೆ. ನಿನ್ನ ನೆರವಿನಿಂದ ನನ್ನ ಕೆಲಸಗಳೆಲ್ಲ ಸುಗಮವಾದಾವು” ಎಂದು ಗಾಂಧೀಜಿ ನುಡಿದಾಗ ದೇಸಾಯಿಯ ಕಣ್ಣುಗಳು ತೇವವಾದವು. ಹೃದಯ ಉಕ್ಕಿಬಂತು. “ಇನ್ನಾರು ತಿಂಗಳು ನೀನು ಸಮಯ ತೆಗೆದುಕೋ. ಚೆನ್ನಾಗಿ ವಿಚಾರಮಾಡು. ಹೆಂಡತಿಯೊಡನೆ ಸಮಾಲೋಚಿಸು. ಅಲ್ಲಿಯವರೆಗೂ ಕಾಯುತ್ತೇನೆ” ಎಂದರು ಗಾಂಧೀಜಿ. ಮಹದೇವ ಭಾಯಿಗೆ ಹೆಚ್ಚು ದಿನ ತಡೆಯಲಾಗಲಿಲ್ಲ. ಅದೇ ವರ್ಷ ನವೆಂಬರಿನಲ್ಲಿ ಪತಿಪತ್ನಿಯರು ಗಾಂಧೀ ಪರಿವಾರದ ಸುಂದರ ಸರಳ ಜೀವನದಲ್ಲಿ ಲೀನವಾಗಿ ಬಿಟ್ಟರು.

ಗಾಂಧೀಜಿಗೆ ಚಂಪಾರಣ್ಯದ ಸತ್ಯಾಗ್ರಹದ ಕರೆ ಬಂತು. ಮಹದೇವ, ದುರ್ಗಾಬಹೆನ್ ಇಬ್ಬರೂ ಜೊತೆಯಲ್ಲೇ ಹೊರಟುಬಿಟ್ಟರು. ಮಹದೇವರ ತಂದೆಗೆ ಅಸಮಾಧಾನ ವಾಯಿತು. ಮಹದೇವರು ಅವರಿಗೆ ಸಮಾಧಾನದ ಪತ್ರ ಬರೆಯುತ್ತಾ, ‘ಯಾವ ಲೌಕಿಕ ಮಹಾದಾಸೆಯಿಂದಲೂ ನಾನು ಗಾಂಧೀಜಿಯೊಡನೆ ಸೇರಲಿಲ್ಲ. ಅವರ ನೆರಳಿನಂತೆ ಬದುಕುವುದೇ ನನ್ನ ಆಸೆ. ಅವರ ಸಹವಾಸವೇ ಒಂದು ಶಿಕ್ಷಣ. ನನಗೆ ನಾಯಕತ್ವದ ಹಂಬಲವಿಲ್ಲ. ಪ್ರತಿಷ್ಠೆ, ಸ್ಥಾನಮಾನಗಳು ಪ್ರತ್ಯೇಕವಾಗಿ ನನಗೇಕೆ ? ಗಾಂಧೀಜಿಯ ಬಾಳಿನೊಡನೆ ಬೆಸೆದುಕೊಂಡ ನನಗೆ ಅವೆಲ್ಲವೂ ಲಭ್ಯ ವಾಗಿಯೇ ಹೋಗಿದೆ’ ಎಂದು ಬರೆದರು.

ಬಾಲ್ಯದ ದಿನಗಳು

ಮಹದೇವ ದೇಸಾಯಿ ಅವರ ತಂದೆ ಹರಿಭಾಯಿ ದೇಸಾಯಿ ಪ್ರಾಥಮಿಕ ಶಾಲಾಧ್ಯಾಪಕರಾಗಿದ್ದರು. ಸೂರತ್ ಜಿಲ್ಲೆಯ ಸರಸ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ೧೮೯೨ರ ಜನವರಿ ಒಂದರಂದು ಮಹದೇವ ಭಾಯಿ ಜನಿಸಿದರು. ತಾಯಿ ಜಮುನಾ ಭಾಯಿ ಹಿರಿಯ ಮನೆತನದ ಹೆಣ್ಣುಮಗಳು. ತಾಯಿಯ ರೂಪ, ತಂದೆಯ ಮೈಕಟ್ಟು ಹೊಂದಿದ್ದ ಮಹದೇವ ಸ್ಫುರದ್ರೂಪಿ, ಎತ್ತರದ ಆಳು. ದುಂಡನೆಯ ಸೌಮ್ಯ ಮುಖಮುದ್ರೆ, ಸದಾ ಹಸನ್ಮುಖಿ. ನೋಡಿದೊಡನೆ ಸ್ನೇಹದ ಮೋಡಿಯನ್ನು ಪಸರಿಸುತ್ತಿದ್ದ ಅಪೂರ್ವ ವ್ಯಕ್ತಿತ್ವ ಅವರದು. ತಾಯಿ ಜಮುನಾಭಾಯಿ ತೀರಿಕೊಂಡಾಗ ಮಹದೇವ ಏಳು ವರ್ಷದ ಬಾಲಕ. ಅಜ್ಜಿಯೊಬ್ಬರು ಪಾಲನೆ ಮಾಡಿದರು.

‘ನಿಮ್ಮೊಡನೆ ಮಾತನಾಡಬೇಕು.’

೧೯೦೧ರಲ್ಲಿ  ಪ್ರಾಥಮಿಕ ವರ್ಗದಿಂದ ಇಂಗ್ಲಿಷ್ ತರಗತಿಗಳಿಗೆ ಸೇರಲು ದಿಹೇನ್ ಗ್ರಾಮಕ್ಕೆ ಬರಬೇಕಾ ಯಿತು. ದಿಹೇನ್‌ನಲ್ಲಿ ಮೆಟ್ರಿಕ್ ಪರೀಕ್ಷೆ ಮಾಡಿದ್ದ ಮುನಿಶಂಕರ್ ಎಂಬ ಯುವಕ ಇಂಗ್ಲಿಷ್ ತರಗತಿ ತೆರೆದಿದ್ದ. ಈತನ ಕ್ರಮಬದ್ಧ ಶಿಕ್ಷಣ ಭಾಯಿಯ ಇಂಗ್ಲಿಷ್ ಭಾಷಾಪ್ರಭುತ್ವಕ್ಕೆ ಒಳ್ಳೆಯ ಬುನಾದಿಯಾಯಿತು. ಜೊತೆಗೆ ಧರ್ಮ, ನೀತಿ, ಪ್ರಾರ್ಥನೆ, ಪುರಾಣೇತಿಹಾಸಗಳ ಶಿಕ್ಷಣವೂ ಈ ಗುರುವಿನ ಸಹವಾಸದಲ್ಲಿ ದೊರೆಯಿತು. ಮಹದೇವ ೧೯೦೩ರಲ್ಲಿ  ಸೂರತ್ ಪ್ರೌಢಶಾಲೆ ಸೇರಿದ.

ವಿವಾಹ – ಕಾಲೇಜ್ ಶಿಕ್ಷಣ

ಗ್ರಾಮಗಳಲ್ಲಿ ಬಾಲಕ ವೃಂದದ ಕೆಲವು ಕೀಳು ಅಭಿರುಚಿಗಳು ಮಹದೇವ ಭಾಯಿಗೆ ಅಸಹ್ಯವಾಯಿತು. ಮದ್ಯಪಾನಕ್ಕೆ ಬಲಿಯಾಗಿದ್ದವರನ್ನು ಕಂಡು ಮನಸ್ಸು ರೋಸಿಹೋಗುತ್ತಿತ್ತು. ಬಾಲಕರ ತಂಡವೊಂದನ್ನು ಕಟ್ಟಿ ತಿಳಿಹೇಳುವ ಪ್ರಯತ್ನ ಮಾಡಿ ಸಫಲವಾಗದೆ ವ್ಯಾಕುಲ ಪಡುತ್ತಿದ್ದ. ಸುತ್ತಲೂ ಯಾವುದೋ ಅನಿಷ್ಟ ಪ್ರಭಾವ ಗಳಿಂದ ಒಳ್ಳೆಯ ಜೀವನ ಹಳಸಿ ಹೋಗುತ್ತಿರು ವಂತೆ ಭಾಸವಾಗುತ್ತಿತ್ತು. ನಾಚಿಕೆಯಿಂದಾಗಿ ಈ ಮೃದು ಸ್ವಭಾವದ ಬಾಲಕ ದೂರ ಸರಿದುಬಿಡುತ್ತಿದ್ದ. ‘ಇದೇಕೆ ಹೀಗೆ?’ ಎಂದು ಒಮ್ಮೊಮ್ಮೆ ವಿಚಾರ ಮಗ್ನನಾಗುತ್ತಿದ್ದ.

೧೯೦೫ರಲ್ಲಿ  ಹದಿಮೂರು ವರ್ಷಕ್ಕೇ ಮಹದೇವ ಭಾಯಿಗೆ ಮದುವೆಯಾಯಿತು. ಪತ್ನಿ ದುರ್ಗಾಬಹೆನ್‌ಗೆ ಹನ್ನೆರಡು ವರ್ಷ. ದುರ್ಗಾಬಹೆನ್ ಆರನೆಯ ವರ್ಗದವರೆಗೆ ಓದಿದ್ದಳು.

೧೯೦೬ರಲ್ಲಿ  ಮಹದೇವ ಭಾಯಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿ ೧೯೦೭ರಲ್ಲಿ ಮುಂಬಯಿಯ ಎಲ್ಫಿನ್‌ಸ್ಟನ್ ಕಾಲೇಜಿಗೆ ಸೇರಿದರು. ಗೋಕುಲದಾಸ್ ತೇಜಪಾಲ್ ಉಚಿತ ವಿದ್ಯಾರ್ಥಿನಿಲಯದಲ್ಲಿ ವಾಸ. ಯಾವ ಕೀಳ್ತನದ ವರ್ತನೆಯೂ ಅವರ ಬಳಿ ಸುಳಿಯುತ್ತಿರಲಿಲ್ಲ. ಆಟ, ಕುಣಿತ, ಕುಪ್ಪಳಿಕೆಗಳಲ್ಲಿ ಹೆಚ್ಚು ಆಸಕ್ತಿ ಇಲ್ಲದಿದ್ದರೂ ತಿಳಿಹಾಸ್ಯ ವಿನೋದಗಳ ಒಲವು ಇತ್ತು. ಮೈಲಿಗಟ್ಟಲೆ ಕಾಲ್ನಡಿಗೆ ಅವರ ದಿನನಿತ್ಯದ ವ್ಯಾಯಾಮ. ಬಿಡುವಾದಾಗಲೆಲ್ಲ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ ಓದುತ್ತ ಕಾಲ ಕಳೆಯುವ ಹವ್ಯಾಸ.

ಸಂತ ಸಮಾಗಮ

ಗುಜರಾತ್ ಸಾಧುಸಂತರ ಪರಂಪರೆಗೆ ಹೆಸರಾದ ಪ್ರದೇಶ. ಮಹದೇವ ಭಾಯಿಗೆ ಒಬ್ಬ ಸಂತಪುರುಷನ ಪರಿಚಯವಾಯಿತು. ಅವರ ಹೆಸರು ಪುರುಷೋತ್ತಮ ಸೇವಕರಾಮ್. ಮಹದೇವ ಭಾಯಿಗೆ ಅವರಲ್ಲಿ ಅಪಾರ ಭಕ್ತಿ-ಗೌರವಗಳು ಬೆಳೆದವು. ಕಾಲೇಜು ವಿದ್ಯಾರ್ಥಿ ಯಾಗಿದ್ದಾಗಲೇ ಇವರ ಸಂಪರ್ಕ ಬೇರೂರಿತು. ಕುಂಬಾರಿಕೆಯ ಕೆಲಸದಲ್ಲಿ ತೊಡಗಿ ಅತ್ಯುನ್ನತ ಅಧ್ಯಾತ್ಮ ಪ್ರಗತಿಯನ್ನು ಸಾಧಿಸಿದ್ದ ಈ ಸಂತ ಭಾಗವತರ ಸಹವಾಸದಿಂದ ನಮ್ರತೆ ಮತ್ತು ಸೇವಾ ಮನೋವೃತ್ತಿ ಮಹದೇವರಲ್ಲಿ ದೃಢವಾಯಿತು. ಈಶ್ವರ ಶ್ರದ್ಧೆ, ಜೀವನ ಸರಳತೆ, ಮನಸ್ಸಿನ ಔದಾರ್ಯಗಳು ಬೆಳೆದು ನಿಂತವು.

ವಕೀಲಿ ಶಿಕ್ಷಣ

ಸ್ನಾತಕೋತ್ತರ ಶಿಕ್ಷಣದಲ್ಲಿ ಸಂಸ್ಕೃತ, ತತ್ತ ಶಾಸ್ತ್ರಗಳ ನ್ನೋದುವ ಹಂಬಲ ಮಹದೇವ ಭಾಯಿಗೆ. ಆದರೆ ಸೇರಿದುದು ಕಾನೂನುಗಳ ಅಭ್ಯಾಸದ ತರಗತಿಗೆ – ಮುಂದೆ ವಕೀಲನಾಗಲು. ತಂದೆಗೆ ತನ್ನ ಶಿಕ್ಷಣ ವೆಚ್ಚದ ಭಾರ ಬೀಳದಂತೆ ಪ್ರಾಚ್ಯ ಸಂಶೋಧನೆಯ ಭಾಷಾಂತರ ವಿಭಾಗದಲ್ಲಿ ಕೆಲಸಕ್ಕೆ ಸೇರಿ ಜೀವನ ನಿರ್ವಹಿಸಿದರು.

ಮುಂಬಯಿನ ‘ಚಾಳು’ (ಬಡಜನರ ವಠಾರ)ಗಳಲ್ಲಿ ವಾಸ ಮಾಡುತ್ತಾ ಮಹದೇವ ಭಾಯಿಗೆ ಆ ಮಹಾ ನಗರದ ಬಡ ಕಾರ್ಮಿಕರ ದುರಂತ ಜೀವನ ಪರಿಸರ ಅನುಭವಕ್ಕೆ ಬಂತು. ದಯಾರ್ದ್ರತೆಯಿಂದ ಅನೇಕರ ಸಹಾಯಕ್ಕೆ ಧಾವಿಸುತ್ತಿದ್ದ ಈ ಧ್ಯೇಯವಾದಿ ಯುವಕನಿಗೆ ಕೆಲವು ಕಹಿ ಅನುಭವಗಳೂ ಆದವು. ಖುಷಿಯಾಗಿರು ವುದು, ದೇಹದ ಸುಖಗಳನ್ನು ಅನುಭವಿಸುವುದು ಇದೇ ಹಲವರು ಗಂಡಸರ ಮತ್ತು ಹೆಂಗಸರ ಗುರಿಯಾಗಿತ್ತು. ನ್ಯಾಯ-ನೀತಿಗಳಿಗೆ ಅವರು ಲಕ್ಷ್ಯ ಮಾಡುತ್ತಿರಲಿಲ್ಲ. ಅವರನ್ನು ಕಂಡು ಮಹದೇವರಿಗೆ ‘ಅಯ್ಯೋ’ ಎನ್ನಿಸುತ್ತಿತ್ತು. ಅವರನ್ನು ತಿದ್ದಲು ಪ್ರಯತ್ನಿಸುತ್ತಿದ್ದರು. ಅನೇಕ ಸಾರಿ ವಿಫಲರಾಗಿ, ನಿರಾಶೆಯಿಂದ ಸಂಕಟಪಟ್ಟರು. ಇಂಥ ಒಂದು ಪ್ರಸಂಗದಲ್ಲಿ ಸಿಕ್ಕಿ ಎರಡನೇ ಎಲ್‌ಎಲ್.ಬಿ. ಪರೀಕ್ಷೆಗೇ ಹೋಗಲಾಗದೆ ಒಂದು ವರ್ಷ ನಷ್ಟವಾಯಿತು.

ಉದ್ದಾಮ ಸಾಹಿತಿ

ಸಾಹಿತ್ಯದ ಒಲವೂ ಮಹದೇವ ಭಾಯಿಗೆ ಪ್ರಬಲವಾಗಿಯೇ ಇತ್ತು. ಪ್ರಾಚ್ಯ ಭಾಷಾಂತರ ಕಾರ್ಯಾಲಯದ ಸೇವೆ ಅದಕ್ಕೆ ಪುಟ ಕೊಟ್ಟಿತು. ಗುಜರಾತಿ, ಹಿಂದಿ, ಇಂಗ್ಲಿಷ್ ಪುಸ್ತಕಗಳನೇಕವನ್ನು ಇಲ್ಲಿ  ವಿಮರ್ಶೆ ಮಾಡಬೇಕಾಗಿತ್ತು. ಲೋಕಮಾನ್ಯರು ‘ಗೀತಾ ರಹಸ್ಯ’ವನ್ನು ಮಾಂಡಲೆ ಜೈಲಿನಲ್ಲಿ ಬರೆದು ಕಳುಹಿಸಿದರು. ಅಧಿಕೃತ ವಿಮರ್ಶೆಗಾಗಿ ಕರಡುಪ್ರತಿ ಪ್ರಾಚ್ಯ ಭಾಷಾಂತರ ಕಾರ್ಯಾಲಯಕ್ಕೆ ಬಂತು. ಮಹದೇವ ಭಾಯಿ ಅದನ್ನೋದಿ ಪ್ರಭಾವಿತರಾದರು. ಗೀತೆಯ ಬಗ್ಗೆ ಆಳವಾದ ಅಧ್ಯಯನ ಮುಂದೆ ಸತತವಾಗಿ ನಡೆಯಿತು.

ಗಾಂಧೀಜಿಯ ಸಹವಾಸದಲ್ಲಂತೂ ಗೀತಾಮಾತೆ ಜ್ಞಾನನಿಧಿಯಾದಳು. ಗಾಂಧಿಯವರ ‘ಅನಾಸಕ್ತಿ ಯೋಗ’ವನ್ನು ಮಹದೇವ ದೇಸಾಯಿ ಇಂಗ್ಲಿಷಿಗೆ ಭಾಷಾಂತರಿಸಿ ಒಂದು ದೀರ್ಘ ಮುನ್ನುಡಿ ಬರೆದು ತಮ್ಮ ಎಲ್ಲ ಅಧ್ಯಯನದ ಸಾರವನ್ನೂ ಅಲ್ಲಿ ಕೊಟ್ಟಿದ್ದಾರೆ. ಅವರ ಬರಹಗಳಲ್ಲಿ ಇಂದೊಂದು ಅಮೂಲ್ಯ ಕೃತಿ. ಗುಜರಾತಿನ ಫೋರ್ಬ್ಸ್ ಸಂಘದವರು ಲಾರ್ಡ್ ಮಾರ್ಲೆಯವರ ‘ಒಪ್ಪಂದಗಳನ್ನು ಕುರಿತು’ (ಆನ್ ಕಾಂಪ್ರಮೈಸ್ ಭಾಷಾಂತರಿಸಲು ಸ್ಪರ್ಧೆ ನಡೆಸಿದರು. ಮಹದೇವ ಭಾಯಿಯ ಭಾಷಾಂತರ ವನ್ನಂಗೀಕರಿಸಿ ಒಂದು ಸಾವಿರ ರೂಪಾಯಿಗಳ ಬಹುಮಾನ ವಿತ್ತರು. ಮುಂದೆ ನವಜೀವನ ಟ್ರಸ್ಟಿನವರು ಈ ಗ್ರಂಥವನ್ನು ‘ಸತ್ಯಾಗ್ರಹಾನಿ ಮರ್ಯಾದಾ’ ಎಂಬ ಗುಜರಾತಿ ಹೆಸರಿನಲ್ಲಿ ಪ್ರಕಟಿಸಿದರು. ‘ಮಹದೇವ ಭಾಯಿಯ ದಿನಚರಿ’ ಎಂಟು ಸಂಪುಟಗಳಲ್ಲಿ ಅವರ ಮರಣಾನಂತರ ಪ್ರಕಟವಾಯಿತು. ಗುಜರಾತಿ ಭಾಷೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.

ನೌಕರಿ – ರಾಜೀನಾಮೆ

೧೯೧೪ರಲ್ಲಿ   ಹರಿಭಾಯಿ ದೇಸಾಯಿ ಅಹಮದಾ ಬಾದಿಗೆ ಮಹಿಳಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ವರ್ಗವಾಗಿ ಬಂದರು. ಮಹದೇವ ಭಾಯಿಯ ಪರೀಕ್ಷೆಗಳೂ ಮುಗಿದಿದ್ದವು. ಅವರು ಅಹಮದಾಬಾದಿನ ನ್ಯಾಯಾಲಯದಲ್ಲೇ ವೃತ್ತಿ ಪ್ರಾರಂಭಿಸಲು ನಿಶ್ಚಯಿಸಿದರು.

ವಕೀಲ ವೃತ್ತಿಯಲ್ಲಿ ಮುಂದುವರಿಯುವುದು ಮಹದೇವ ಭಾಯಿಗೆ ಸಾಧ್ಯವಾಗಲಿಲ್ಲ. ಹರಿಭಾಯಿ ಯವರಿಗೂ ನಿವೃತ್ತಿಯ ವಯಸ್ಸು ಸಮೀಪಿಸುತ್ತಿತ್ತು. ಮಹದೇವರು ಜೀವನಕ್ಕಾಗಿ ನೌಕರಿ ಸೇರಲು ಹವಣಿಸಿದರು. ಮುಂಬಯಿಯ ಕೇಂದ್ರ ಸಹಕಾರೀ ಬ್ಯಾಂಕಿನ ಮುಖ್ಯಸ್ಥರಾಗಿದ್ದ ವೈಕುಂಠ ಭಾಯಿ ಮೆಹತಾ ನೆರವಿಗೆ ಬಂದರು. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿನ ಸಹಕಾರೀ ಲೇವಾದೇವಿ ಸಂಘಗಳ ಮೇಲ್ವಿಚಾರಕರಾಗಿ ಮಹದೇವ ದೇಸಾಯಿ ನೇಮಿತರಾ ದರು. ಪ್ರಾಮಾಣಿಕತೆ, ದಕ್ಷತೆ, ಸೇವಾ ಮನೋಭಾವ ಗಳಿಂದ ಎಲ್ಲರಿಗೂ ಪ್ರಿಯರಾದರು. ಗ್ರಾಮಾಂತರ ಪ್ರದೇಶಗಳಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯೂ ಕಣ್ಣಿಗೆ ಕಟ್ಟಿನಿಂತಿತು. ಮಹಾರಾಷ್ಟ್ರ ಪ್ರದೇಶದಲ್ಲಿ ಪ್ರವಾಸ ಮಾಡುತ್ತಾ ಮರಾಠಿ ಕಲಿತರು. ಅಲ್ಲಿನ ವಿಪುಲ ಸಂತ ಸಾಹಿತ್ಯ ಅವರ ಮನಸ್ಸನ್ನು ಸೂರೆಗೊಂಡಿತು. ಅಂಕಲೇಶ್ವರ ತಾಲೂಕಿನ ಗಡಖೋಲ್ ಗ್ರಾಮದಲ್ಲಿ ಅರ್ಜುನ ಭಾಗವತರ ಭಕ್ತಿಗೀತೆಗಳು ಜನಪ್ರಿಯವಾಗಿ ದ್ದವು. ಮಹದೇವ ಭಾಯಿ ಅವುಗಳನ್ನು ಸಂಗ್ರಹಿಸಿ ೧೯೨೫ರಲ್ಲಿ  ನವಜೀವನ ಟ್ರಸ್ಟಿನ ಮೂಲಕ ‘ಅರ್ಜುನ ವಾಣಿ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು.

ಸಹಕಾರ ಸಂಘಗಳ ಮೇಲ್ವಿಚಾರಣೆಯಲ್ಲಿ ಮಹದೇವಭಾಯಿ ನಿಯಮಬದ್ಧ ದಕ್ಷತೆಗೆ ಹೆಸರಾಗಿದ್ದರು. ವ್ಯಾವಹಾರಿಕ ಸಮಸ್ಯೆಗಳನ್ನು ಬರೀ ನಿಯಮಗಳ ಪ್ರಕಾರ ತೀರ್ಮಾನಿಸುತ್ತಿರಲಿಲ್ಲ. ಯಾವುದು ನ್ಯಾಯ, ಯಾವುದು ಅನ್ಯಾಯ ಎಂದು ಪರಿಶೀಲಿಸಿ ತೀರ್ಮಾನಿಸುತ್ತಿದ್ದರು. ಸಂಘಗಳ ಪದಾಧಿಕಾರಿಗಳು ಶೀಲವಂತರೂ ದಕ್ಷರೂ ಆಗಿರಬೇಕೆಂದು ಒತ್ತಾಯ ಮಾಡುತ್ತಿದ್ದರು. ಕೆಲವು ವೇಳೆ ಮೇಲಧಿಕಾರಿಗಳ ವರ್ತನೆಯನ್ನೂ ಒಪ್ಪುತ್ತಿರಲಿಲ್ಲ. ಕೈಕೆಳಗಿನವರ ತಪ್ಪುಗಳನ್ನು ತೋರಿಸಿದಾಗ, ‘ಮೃದುವಾಗಿ ವರ್ತಿಸಿ’ ಎಂದು ಮೇಲಧಿಕಾರಿಗಳು ಹೇಳುತ್ತಿದ್ದರು. ಅದರ ಅರ್ಥ ‘ಏನೂ ಮಾಡಬೇಡಿ ಸುಮ್ಮನಿರಿ’ ಎಂದು. ಒಂದೆರಡು ಸಾರಿ ಮಹದೇವ ಭಾಯಿ ಪ್ರತಿಭಟಿಸಿದರು. ಕೊನೆಗೆ ರಾಜೀನಾಮೆ ಕಳುಹಿಸಿದರು. ವೈಕುಂಠ ಭಾಯಿಯವರಿಗೆ ವ್ಯಾಕುಲವಾಯಿತು. ಮಹದೇವ ಭಾಯಿಯನ್ನು ಬಿಟ್ಟುಕೊಡಲಾರದೆ, “ಈ ಮೇಲ್ವಿಚಾರಕ ಕೆಲಸ ಬಿಡಿ. ಹೈದರಾಬಾದಿನ ಶಾಖೆಗೆ ಮುಖ್ಯಸ್ಥರಾಗಿ ಹೋಗಿ” ಎಂದರು. ಇದರಲ್ಲಿ ಆಪ್ತರ ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರೂ ಕೆಲಸದಲ್ಲಿ ಮುಂದುವರೆಯಲು ಮಹದೇವರು ಇಚ್ಛಿಸಲಿಲ್ಲ. ಜೀವನರಂಗದ ವಿಶಾಲಕ್ಷೇತ್ರದ ಹೊಸ ಕ್ಷಿತಿಜಗಳು ಕಾಣುತ್ತಿದ್ದವು. ಮುಂದೆ ಸಾಗಲು ಅವರ ಮನಸ್ಸು ಒಂದೇ ಸಮನೆ ಪ್ರಚೋದಿಸುತ್ತಿತ್ತು.

ಸಾರ್ವಜನಿಕ ವೇದಿಕೆಗೆ

ಮೊದಲನೆ ಮಹಾಯುದ್ಧದ ಕರಾಳ ಛಾಯೆ ಜಗತ್ತನ್ನಾವರಿಸಿತ್ತು ೧೯೧೪ರಲ್ಲಿ. ಭಾರತದಲ್ಲಿ ರಾಷ್ಟ್ರ ನಾಯಕರು ರಾಷ್ಟ್ರದ ಸ್ವಾಭಿಮಾನವನ್ನು ಜಾಗೃತಗೊಳಿಸಿ ಸ್ವಾತಂತ್ರ್ಯಾಕಾಂಕ್ಷೆಯ ಧ್ವನಿಗೆ ಶಕ್ತಿ ತುಂಬುತ್ತಿದ್ದರು.

ಮಹದೇವ ದೇಸಾಯಿ - ಗಾಂಧೀಜಿ

ಬ್ರಿಟಿಷ್ ಸರ್ಕಾರದ ಭಾರತ ಕಾರ್ಯದರ್ಶಿ ಮಾಂಟೆಗ್ಯೂ ಅವರು “ಯುದ್ಧ ಮುಗಿದೊಡನೆ ಭಾರತಕ್ಕೆ ಸ್ವಯಂ ಆಡಳಿತ ಹಕ್ಕನ್ನು ಕೊಡುತ್ತೇವೆ. ಯುದ್ಧ ಸಿದ್ಧತೆಗೆ ಪೂರ್ಣ ಬೆಂಬಲ ಕೊಡಿ” ಎಂದು ಘೋಷಿಸಿ ಭಾಷಣ ಮಾಡಿದರು. ಈ ಪ್ರಸಿದ್ಧ ಭಾಷಣ ರಾಷ್ಟ್ರನಾಯಕರ ಮೇಲೆ ಒಳ್ಳೆಯ ಪ್ರಭಾವ ಬೀರಿತು. ಮುಂಬಯಿಯ ‘ಹೋಂ ರೂಲ್ ಸಂಘ’ ಈ ಭಾಷಣವನ್ನು ಮಹದೇವ ಭಾಯಿಯವರಿಂದ ಭಾಷಾಂತರಿಸಿ ಪ್ರಸಿದ್ಧಪಡಿಸಿತು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಮುಂಬಯಿಗೆ ಬಂದ ಮಹದೇವ ದೇಸಾಯಿಯವರನ್ನು ಅನೇಕ ನಾಯಕರು ತಮ್ಮೊಡನೆ ಕೆಲಸ ಮಾಡಲು ಆಹ್ವಾನಿಸಿದರು. ಈ ಎಲ್ಲ ವಿಶ್ವಾಸದ ಗೆಳೆತನದ ಮಧ್ಯೆ ಸಾರ್ವಜನಿಕ ಸೇವಾರಂಗ ವನ್ನು ಪ್ರವೇಶಿಸಿದರು. ಸ್ವಲ್ಪಕಾಲ ಜಮನಾದಾಸ ದ್ವಾರಕದಾಸರ ಕಾರ್ಯದರ್ಶಿಯಾದರು.

ಮಹಾತ್ಮ ಗಾಂಧಿ ಅದೇ ಕಾಲಕ್ಕೆ ಭಾರತ ಇತಿಹಾಸದ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಸನ್ನಾಹದಲ್ಲಿದ್ದರು. ಮಹದೇವ ದೇಸಾಯಿಗೆ ತನ್ನ ಬಾಳಿನ ಪಥ ಬೇರಾವ ದಿಕ್ಕಿನಲ್ಲೂ ತೃಪ್ತಿ ತರಲಾರದೆಂಬ ಭಾವನೆ ತುಂಬಿಬರುತ್ತಿತ್ತು. ಗಾಂಧೀ ಜೀವನ ಮಾರ್ಗದ ಅಪ್ರತಿಹತ ಸೆಳೆತ ಈ ಭಾವಜೀವಿಯನ್ನು ಅವರೆಡೆಗೆ ಸೆಳೆದು ಧನ್ಯತೆಯ ಆನಂದವನ್ನು ತಂದುಕೊಟ್ಟಿತು.

ಗಾಂಧೀಜಿಯೊಡನೆ

ಬಿಹಾರದಲ್ಲಿ ಚಂಪಾರಣ್ಯದ ತೋಟಗಳ ಕೂಲಿಗಾರರಿಗೆ ತುಂಬ ಅನ್ಯಾಯವಾಗುತ್ತಿತ್ತು. ಅವರ ಪರವಾಗಿ

ಗಾಂಧೀಜಿ ೧೯೧೨ರಲ್ಲಿ ಪ್ರಥಮ ಸತ್ಯಾಗ್ರಹ ಹೂಡಿದರು. ಮೋತಿಹಾರಿ ಊರಿನಲ್ಲಿ ಸತ್ಯಾಗ್ರಹ ಶಿಬಿರ ಕಾರ್ಯಕರ್ತ ರಿಂದ ತುಂಬಿತ್ತು. ರಾಜೇಂದ್ರ ಪ್ರಸಾದ್ ಮತ್ತು ಬ್ರಿಜ ಕಿಶೋರಬಾಬು ಗಾಂಧೀಜಿಯೊಡನೆ ಕೆಲಸ ಮಾಡುತ್ತಿ ದ್ದರು. ತೋಟಗಳ ಮಾಲೀಕರು ಬಿಳಿಯರು. ಬ್ರಿಟಿಷ್ ಅಧಿಕಾರಶಾಹಿ ಅವರಿಗೆ ರಕ್ಷಣೆ ಕೊಡುತ್ತಿತ್ತು. ಆದರೆ ಕೂಲಿಗಾರರಿಗೆ ನ್ಯಾಯ ದೊರಕಿಸಿ ಕೊಡಲು ಭಾರತದ ಈ ಮಹಾನಾಯಕ ತಂಡ ಹೋರಾಡುತ್ತಿತ್ತು. ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡ ಲಾಯಿತು. ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ ದರು. ಹಳ್ಳಿಹಳ್ಳಿಯಲ್ಲಿ ತಿರುಗಿ ಖಚಿತ ಅಂಕಿ- ಅಂಶಗಳನ್ನು ಪಡೆದು ವಾದಿಸುತ್ತಿದ್ದರು. ಬಿಹಾರದ ಗ್ರಾಮಗಳ ದುಃಸ್ಥಿತಿ ಎಲ್ಲರ ಕಣ್ಣಿಗೂ ಕಟ್ಟಿನಿಂತಿತು. ದಾರಿದ್ರ್ಯ, ಅಜ್ಞಾನ, ಅನಾರೋಗ್ಯ, ಅಸ್ವಚ್ಛತೆಗಳು ತುಂಬಿ ಅವು ಕೊಳಚೆಯ ಕೂಪಗಳಾಗಿದ್ದವು. ಈ ಸ್ಥಿತಿಯನ್ನು  ಸುಧಾರಿಸದೆ ಯಾವ ಜನಜಾಗೃತಿಯೂ ಸಾಧ್ಯವಾಗದು ಎಂದು ಗಾಂಧೀಜಿ ಆ ಕೂಡಲೆ ಗ್ರಾಮ ಸೇವಾಕಾರ್ಯದಲ್ಲಿ ತೊಡಗಿದರು.

ಆರು ಗ್ರಾಮಗಳಲ್ಲಿ  ಪ್ರಾಥಮಿಕ ಶಾಲೆ ಪ್ರಾರಂಭಿಸಿ ದರು. ಶಿಕ್ಷಕವರ್ಗ ಸಂಬಳ ಬಯಸದೆ ಸೇವೆ ಸಲ್ಲಿಸಬೇಕಾ ಗಿತ್ತು. ಗಾಂಧೀಜಿ ಸಾರ್ವಜನಿಕರಲ್ಲಿ ಮನವಿ ಮಾಡಿ ದರು.  ಆ ಕರೆಗೆ ಓಗೊಟ್ಟು ಮೋತಿಹಾರಿ ತಲುಪಿದ ಮೊದಲ ತಂಡದಲ್ಲಿ ಮಹದೇವ ದೇಸಾಯಿ, ದುರ್ಗಾಬಹೆನ್, ಮಹದೇವರ ಸ್ನೇಹಿತ ನರಹರಿ ಪರೇಖ್, ಮಣಿಬೆನ್ ಪರೇಖ್ ಇದ್ದರು.

ದೇಶದ ನಾನಾ ಭಾಗಗಳಿಂದ ಅನೇಕರು ಕೆಲಸ ಮಾಡಲು ಬಂದರು. ಎಲ್ಲರೂ ಉತ್ಸಾಹಭರಿತರಾದರೂ ಶಿಕ್ಷಕ ವೃತ್ತಿಯ ಯಾವ ಅನುಭವವೂ ಇರಲಿಲ್ಲ. ಹಿಂದಿಯಲ್ಲಿ ಪಾಠ ಹೇಳುವ ತರಬೇತಿಯನ್ನು ಗಾಂಧೀಜಿಯೇ ಕೊಟ್ಟರು. ಮಹದೇವ ದೇಸಾಯಿ ಅತ್ಯಂತ ಶ್ರದ್ಧೆಯಿಂದ ತರಗತಿಗಳ ವ್ಯವಸ್ಥೆ ಮಾಡಿದರು. ಆರೋಗ್ಯ ಶಿಕ್ಷಣ ಏರ್ಪಡಿಸಿದರು. ರಚನಾತ್ಮಕ ಕಾರ್ಯಕ್ರಮಗಳ ಬುನಾದಿಯನ್ನೇ ನಿರ್ಮಿಸಿದರು. ಈ ಸೇವಾದೀಕ್ಷೆ ಮಹದೇವ ಭಾಯಿ, ದುರ್ಗಾಬಹೆನರ ಜೀವನದಲ್ಲಿ ಶಾಶ್ವತವಾಯಿತು.

ಖೇಡಾ ಸತ್ಯಾಗ್ರಹ

ಗುಜರಾತಿನ ಖೇಡಾ ಗ್ರಾಮದಲ್ಲಿ ೧೯೧೮ರಲ್ಲಿ ಬರಗಾಲ ಬಂದು ರೈತರು ದುಃಖಿತರಾಗಿದ್ದರು. ಕಂದಾಯ ರದ್ದು ಮಾಡಲು ಸರ್ಕಾರ ನಿರಾಕರಿಸಿದ್ದರಿಂದ ಗಾಂಧೀಜಿಯ ನೇತೃತ್ವದಲ್ಲಿ ಸತ್ಯಾಗ್ರಹ ಹೂಡಬೇಕಾಯಿತು. ಹೆಜ್ಜೆಹೆಜ್ಜೆಯಾಗಿ ಜನತಾಶಕ್ತಿ ಬೆಳೆಯುತ್ತಿದ್ದ ಆ ಕಾಲಕ್ಕೆ ಖೇಡಾ ಗಾಂಧೀಜಿಯ ಸತ್ಯಾಗ್ರಹಕ್ಕೆ ಮಹಾ ಪ್ರಯೋಗ ಕ್ಷೇತ್ರವಾಯಿತು. ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ರಂಗಕ್ಕೆ ಕಾಲಿಟ್ಟುದುದು ಆಗಲೇ. ಅಗಾಧ ಗಳಿಕೆಯ ವಕೀಲಿವೃತ್ತಿ ಸಂಪತ್ಸಮೃದ್ಧ ಸುಖಜೀವನವನ್ನು ತ್ಯಜಿಸಿ ಅವರು ಗಾಂಧೀ ಅನುಯಾಯಿಯಾದುದು ಒಂದು ಪವಾಡ. ಈ ಉಕ್ಕಿನ ನಾಯಕನೊಡನೆ ಸರಿಸಮನಾಗಿ, ಕೋಮಲ ಸ್ವಭಾವದ ಮಹದೇವ ದೇಸಾಯಿ ಅಷ್ಟೇ ದೃಢವಾಗಿ ಗಾಂಧೀಜಿಗೆ ನೆರವಾಗಿ ನಿಂತರು.

ಸತ್ಯಾಗ್ರಹ ಪ್ರತಿಜ್ಞೆಯ ಕರಡನ್ನು ಮಹದೇವ ಭಾಯಿಯೇ ಸಿದ್ಧಮಾಡಿದರು. ಗಾಂಧೀಜಿ ಸಂಪೂರ್ಣ ವಾಗಿ ಅಂಗೀಕರಿಸಿದರು. ಸತ್ಯಾಗ್ರಹ ಶಾಸ್ತ್ರದ ತಿರುಳನ್ನು ಅರಗಿಸಿಕೊಂಡಿದ್ದ ಈ ಅಪೂರ್ವ ಕಾರ್ಯದರ್ಶಿ ಬರೆದದ್ದು ಗಾಂಧೀ ಬರಹ, ಆಡಿದ್ದು ಗಾಂಧೀ ಮಾತು, ನಡೆದದ್ದು ಗಾಂಧೀ ಮಾರ್ಗ ಎಂದು ಸಹಕಾರ್ಯ ಕರ್ತರೆಲ್ಲ ಅಂಗೀಕರಿಸಿದರು. ಮುಗ್ಧರಾದ ಹಳ್ಳಿಯ ಜನ ಸಹಸ್ರ ಸಂಖ್ಯೆಯಲ್ಲಿ ಅಹಿಂಸಾ ಸಮರಕ್ಕೆ ಸಿದ್ಧರಾದರು. ಕಷ್ಟನಷ್ಟಗಳನ್ನು ತಾಳ್ಮೆಯಿಂದ ಅನುಭವಿಸಿದರು. ಕಂದಾಯ ಕೊಡಲು ನಿರಾಕರಿಸಿದರು. ಹಲವರು ಜೈಲಿಗೆ ಹೋದರು. ಹಲವರ ಹೊಲ-ಮನೆಗಳು ಜಪ್ತಾದವು. ಆದರೂ ಜನ ಹಿಮ್ಮೆಟ್ಟಲಿಲ್ಲ, ಅಧೀರರಾಗಲಿಲ್ಲ. ಕೊನೆಗೆ ಸರ್ಕಾರ ಒಪ್ಪಂದದ ಮಾರ್ಗಕ್ಕೆ ಒಪ್ಪಿತು. ಜನತೆಯಲ್ಲಿ ಒಂದು ಅಪ್ರತಿಹತ ಆತ್ಮಶಕ್ತಿ ಸಂಚಾರವಾದಂತಾಯಿತು. ಎಂಥ ಪ್ರಬಲ ಪ್ರಭುತ್ವವಾದರೂ ನೈತಿಕ ಶಕ್ತಿಗೆ ಒಂದಲ್ಲ ಒಂದು ದಿನ ಮಣಿಯಲೇಬೇಕು ಎಂಬ ವಿಶ್ಯಾಸ ಮೂಡಿತು.

ರಾಷ್ಟ್ರೀಯ ಹರತಾಳ

೧೯೧೯ರ ವೇಳೆಗೆ ರಾಷ್ಟ್ರೀಯ ಜಾಗೃತಿ ಭಾರತದ ಮೂಲೆಮೂಲೆಗಳಲ್ಲಿ  ಪ್ರಕಟವಾಗಲಾರಂಭಿಸಿತ್ತು. ಬ್ರಿಟಿಷ್ ಸರ್ಕಾರ ಮೊದಲನೆ ಮಹಾಯುದ್ಧದಲ್ಲಿ ವಿಜೇತವಾದರೂ ಭಾರತಕ್ಕೆ ಸ್ವಯಮಾಡಳಿತ ಕೊಡುತ್ತೇ ವೆಂಬ ವಾಗ್ದಾನವನ್ನು ಮುರಿದಿತ್ತು. ಬದಲಾಗಿ ಗಾಂಧೀಜಿಯ ಮೇಲೂ, ರಾಷ್ಟ್ರೀಯವಾದಿಗಳ ಮೇಲೂ ಅತ್ಯಂತ ರಾಕ್ಷಸೀ ದಬ್ಬಾಳಿಕೆಯ ಹೊಸ ಅಧ್ಯಾಯವನ್ನೇ ಮೊದಲಿಟ್ಟಿತು. ಅಖಿಲಭಾರತ ರಾಜಕಾರಣದಲ್ಲಿ ಗಾಂಧೀ ಪ್ರಭಾವವೂ ಮೇಲೇರುತ್ತಿತ್ತು. ದೇಶಪರ್ಯಟನೆ ಮಾಡುತ್ತಾ ಬಡವರ ಗುಡಿಸಲುಗಳ ಬಳಿ ನಿಂತು ಎಚ್ಚರಿಸುತ್ತಾ ದಾಸ್ಯದ ಶೃಂಖಲೆಗಳನ್ನು ಕಿತ್ತು ಬಿಸಾಡಲು ಬುದ್ಧಿಜೀವಿಗಳನ್ನು ಬಡಿದೆಬ್ಬಿಸುತ್ತಾ ಗಾಂಧೀಜಿ ಬಿಡುವಿಲ್ಲದೆ ಪ್ರವಾಸ ಮಾಡಿದರು. ಮಹದೇವ ಭಾಯಿ ಇಲ್ಲದೆ ಅವರಿಗೆ ದಿನನಿತ್ಯದ ಕಾರ್ಯಭಾರ ತೂಗಿಸುವುದೇ ಕಷ್ಟವಾಗುತ್ತಿತ್ತು. ಗಾಂಧೀಜಿ ಇದ್ದೆಡೆ ಮಹದೇವ ಭಾಯಿ ಅನಿವಾರ್ಯ ಎನ್ನುವಂತಾಯಿತು.

ಆ ವರ್ಷ ಗಾಂಧೀಜಿ ಮದರಾಸಿಗೆ ಬಂದರು. ಮಹದೇವ ದೇಸಾಯಿ ಮದರಾಸಿನ ಮಿತ್ರರನ್ನೆಲ್ಲ ಮೊದಲ ಭೇಟಿಯಲ್ಲಿ ನಿಕಟ ಪರಿಚಯ ಮಾಡಿ ಕೊಂಡರು. ಗಾಂಧೀ ಭೇಟಿಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ರಾಜಗೋಪಾಲಚಾರಿ ಮಹದೇವ ಭಾಯಿಯ ನಿಕಟ ಸಂಪರ್ಕಕ್ಕೆ ಬಂದರು. ಈ ಮೇಧಾವಿ, ವ್ಯವಹಾರಕುಶಲ, ಕುಶಾಗ್ರಮತಿ, ಗಾಂಧೀ ಬಳಗಕ್ಕೆ ಅತ್ಯಮೂಲ್ಯ ಬಂಧುವಾದರು ಎಂದು ಮಹದೇವ ಭಾಯಿಗನಿಸಿತು. ಗಾಂಧೀಜಿಗೆ ನೇರವಾಗಿ ಹೇಳಿದರು, “ಇಲ್ಲಿನ ಏರ್ಪಾಟೆಲ್ಲ ರಾಜಾಜಿಯದು. ಆತ ಪ್ರತಿಭಾಶಾಲಿ, ಸತ್ಯನಿಷ್ಠರು, ನಿರ್ಭಯ ಸ್ವಭಾವದವರು. ಅವರನ್ನು ನೀವು ಸೆಳೆದುಕೊಳ್ಳಬೇಕು.” ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಬರೆಯುತ್ತಾ ‘ಮಹದೇವನ ನುಡಿ ಸತ್ಯವಾಗಿತ್ತು. ನಾನು ಆ ಗಳಿಗೆಯಿಂದಲೇ ರಾಜಾಜಿ ಯೊಡನೆ ಆಪ್ತ ಮೈತ್ರಿ ಬೆಳೆಸಿದೆ’ ಎಂದಿದ್ದಾರೆ.

೧೯೧೯ರ ಮಾರ್ಚ್ ೩೦ರಂದು ಗಾಂಧೀಜಿ ಸಾರ್ವತ್ರಿಕ ಹರತಾಳಕ್ಕೆ ಕರೆಕೊಟ್ಟರು. ಇದಕ್ಕೆ ಮೊದಲು ಅವರು ಮಹದೇವ ದೇಸಾಯಿ ಮತ್ತು ರಾಜಾಜಿಯೊಡನೆ ಸಮಾಲೋಚನೆ ನಡೆಸಿದ್ದರು. ಗಾಂಧೀಜಿಗೇ ಪರಮಾಶ್ಚರ್ಯವಾಯಿತು. ಇಡೀ ನಾಡಿನ ಉದ್ದಗಲಕ್ಕೆ ಮಹಾನಗರಗಳಿಂದ ಹಿಡಿದು ಸಣ್ಣಸಣ್ಣ ಊರುಗಳವರೆಗೆ ಈ ಸಂದೇಶ ಮಿಂಚಿನಂತೆ ಹೋಗಿ ಮುಟ್ಟಿ ಅಭೂತಪೂರ್ವ ರಾಷ್ಟ್ರೀಯ ಜನಶಕ್ತಿ ಹರತಾಳದಲ್ಲಿ ಪ್ರಕಟವಾಯಿತು. ಅದರ ಪರಿಣಾಮವಾಗಿ ಬ್ರಿಟಿಷ್ ಸಾಮ್ರಾಜ್ಯಷಾಹಿ ಕ್ರೋಧದಿಂದ ಕುರುಡಾಯಿತು. ತನ್ನ ಅಗಾಧ ಶಸ್ತ್ರಶಕ್ತಿಯನ್ನೆಲ್ಲ ಭಾರತದ ನಿಶ್ಶಸ್ತ್ರ ನಿರುಪದ್ರವಿ ಜನಕೋಟಿಯ ಮೇಲೆ ಅತ್ಯಂತ ಕ್ರೂರ ರೀತಿಯಲ್ಲಿ ಪ್ರಯೋಗಿಸಿತು.

ರಾಜಕೀಯ ಕ್ಷೇತ್ರಕ್ಕೆ ಗಾಂಧೀ ಮಾರ್ಗ ಹೊಚ್ಚ  ಹೊಸದು. ಹೋರಾಟದ ಜೊತೆಜೊತೆಯಾಗಿಯೇ ಸ್ನೇಹ ಸಂಧಾನಗಳ ಕೌಶಲವೂ ಬೆರೆತಿರುತ್ತಿತ್ತು. ಸತ್ಯಾಗ್ರಹದಲ್ಲಿ ಯಾವ ವ್ಯಕ್ತಿಯ ಮೇಲೂ ಆಕ್ರೋಶವಾಗಲಿ, ಕ್ರೋಧವಾಗಲಿ ನಿಷೇಧ. ಎದುರು ಪಕ್ಷದ ತಪ್ಪನ್ನು ಅವರಿಗೆ ಮನನ ಮಾಡಿಕೊಟ್ಟು ಪರಿವರ್ತನೆಗೆ ಸಹಕಾರ ನೀಡುವುದು ಸತ್ಯಾಗ್ರಹಿಯ ಕರ್ತವ್ಯ. ಎಲ್ಲೆಲ್ಲಿ ಕಠೋರತೆ ಕರಗಿ ಕೋಮಲತೆಯ ವಿಕಾಸವಾಗಬೇಕೋ ಅಲ್ಲಿ ಗಾಂಧೀಜಿಯ ದೂತ ಮಹದೇವ ಭಾಯಿ ಪ್ರತ್ಯಕ್ಷವಾಗುತ್ತಿದ್ದರು. ಗಾಂಧೀಜಿ ದಸ್ತಗಿರಿಯಾದಾಗಲ್ಲೆಲ್ಲ ರಾಷ್ಟ್ರನಾಯಕರೆಡೆಗೆ ಧಾವಿಸಿ ಅವರ ಆಪ್ತ ಸಂದೇಶಗಳನ್ನು ಮುಟ್ಟಿಸುತ್ತಿದ್ದರು. ೧೯೧೯ರಲ್ಲಿ ಪಂಜಾಬಿಗೆ ಪ್ರವೇಶಿಸಲು ಗಾಂಧೀಜಿ ಧಾವಿಸಿದಾಗ ಮಹದೇವರು ಜೊತೆಯಲ್ಲೇ ಇದ್ದರು. ಬ್ರಿಟಿಷ್ ಅಧಿಕಾರಿಗಳು ನಿರ್ಬಂಧಾಜ್ಞೆ ಹಾಕಿದರು. ಮಹದೇವ ಭಾಯಿ ಪ್ರಬಲವಾಗಿ ಪ್ರತಿಭಟಿಸಿ ವಾದ ಮಾಡಿದರು ಕೊನೆಗೆ ಗಾಂಧೀಜಿ ಆಜ್ಞೆಯನ್ನುಲ್ಲಂಘಿಸಿ ದಸ್ತಗಿರಿಯಾದರು. ಮಹದೇವ ಭಾಯಿಯನ್ನು ಕೂಡಲೇ ದೆಹಲಿಗೆ ಕಳಿಸಿ ದರು. ಅಲ್ಲಿ ಸ್ವಾಮಿ ಶ್ರದ್ಧಾನಂದರಿಗೆ ತಮ್ಮ ಕಾರ್ಯ ಮುಂದುವರಿಸಲು ಸಂದೇಶ ಕಳುಹಿಸಿದರು. ಶ್ರದ್ಧಾನಂದ, ಲಾಲಾಜಿ, ರಾಜೇಂದ್ರಬಾಬು, ಕೃಪಲಾನಿಗಳೊಡನೆ ನಿಕಟ ಸಂಪರ್ಕ ಇಟ್ಟುಕೊಂಡು ಮಹದೇವ ಭಾಯಿ ಮಹಾಸಂಗ್ರಾಮದಲ್ಲಿ ಧುಮುಕಿಬಿಟ್ಟರು.

ಪತ್ರಿಕೋದ್ಯಮ

೧೯೧೯ರ ಅಕ್ಟೋಬರ್‌ನಲ್ಲಿ  ಅಹಮದಾಬಾದ್ ಆಶ್ರಮದಿಂದ ಗುಜರಾತಿ ಭಾಷೆಯಲ್ಲಿ ‘ನವಜೀವನ’ ಇಂಗ್ಲೀಷಿನಲ್ಲಿ ‘ಯಂಗ್ ಇಂಡಿಯಾ’ ಪ್ರಕಟವಾಗುವ ಏರ್ಪಾಡಾಯಿತು. ಗಾಂಧೀಜಿಯೇ ಸಂಪಾದಕರು, ಮಹದೇವ ಭಾಯಿ ಪ್ರಕಾಶಕರು. ಶಂಕರಲಾಲ್ ಬ್ಯಾಂಕರರು, ಮುದ್ರಕರು. ವ್ಯವಸ್ಥೆಯ ಸಂಪೂರ್ಣ ಹೊಣೆ ಮಹದೇವ ದೇಸಾಯಿಯದೆ. ಕ್ಲುಪ್ತಕಾಲಕ್ಕೆ ಎಡೆಬಿಡದೆ ಲಕ್ಷಾಂತರ ಕಾರ್ಯಕರ್ತರಿಗೆ ಅಧಿಕೃತ ಸಂದೇಶಗಳು ಈ ಪತ್ರಿಕೆಯ ಮೂಲಕವೇ ಸೇರುತ್ತಿದ್ದವು. “ಇದೊಂದು ‘ವೃತ್ತಪತ್ರಿಕೆ’ ಅಲ್ಲ, ‘ನನ್ನ ವಿಚಾರ ಪ್ರತಿಪಾದಕ ಪತ್ರಿಕೆ” ಎಂದರು ಗಾಂಧೀಜಿ. ಮಹದೇವ ಭಾಯಿಯ ದಿನಚರಿ, ಅವರ ವಿಶೇಷ ವರದಿಗಳು, ಗಾಂಧೀಜಿಯೊಡನೆ ನಡೆಯುತ್ತಿದ್ದ ವಿವಿಧ ವಿಷಯಗಳ ಚರ್ಚೆ ಎಲ್ಲವೂ ಯಥಾವತ್ತಾಗಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಆಯಾ ದಿನದ ವರದಿ ಅಂದಂದೇ ಸಿದ್ಧವಾಗಿ ಗಾಂಧೀಜಿಯ ಪರಿಶೀಲನೆಗೆ ಹೋಗಿ, ಪೂರ್ಣಪಾಠ ಅಚ್ಚಿಗೆ ಸಿದ್ಧವಾಗುತ್ತಿತ್ತು. ಯಾವ ಮೂಲೆಯಲ್ಲಿ ಪ್ರವಾಸ ಮಾಡುತ್ತಿರಲಿ, ಮೆರವಣಿಗೆ ಗಳಲ್ಲಿರಲಿ, ಸೆರೆಮನೆಗಳಲ್ಲಿರಲಿ, ಊಟ ಮಾಡುತ್ತಿರಲಿ, ವಿಶ್ರಾಂತಿಯಲ್ಲಿರಲಿ ಮಹದೇವ ಭಾಯಿಯ ಲೇಖನಿ ನಿರಂತರವಾಗಿ ಇಪ್ಪತ್ತಮೂರು ವರ್ಷಗಳ ಕಾಲ ಹರಿಯಿತು. ಯಾವ ಕಷ್ಟ-ನಿಷ್ಠುರಗಳನ್ನೂ ಲೆಕ್ಕಿಸದೆ ಎಲ್ಲವನ್ನೂ ಬರೆದು ಮುಗಿಸಿ ನಿಯಮಿತ ಕಾಲಕ್ಕೆ ಸರಿಯಾಗಿ ಕರಡು ಪ್ರತಿಯನ್ನು ಮುದ್ರಣಾಲಯಕ್ಕೆ ತಲುಪಿಸುತ್ತಿದ್ದರು.

ಈ ಪತ್ರಿಕೆ ಜಾಹೀರಾತುಗಳನ್ನು ತೆಗೆದುಕೊಳ್ಳುತ್ತಿ ರಲಿಲ್ಲ. ಆದುದರಿಂದ ಹಾಗೆ ಹಣ ಬರುತ್ತಿರಲಿಲ್ಲ. ಒಬ್ಬ ಮಹಾ ನಾಯಕನ ವಿಚಾರ ಪ್ರಸಾರಕ್ಕಾಗಿ ಮೀಸಲಾಗಿ ಓದುಗರ ಸಂಖ್ಯಾ ಬಲದ ಮೇಲೆ ಮಾತ್ರ ಅವಲಂಬಿತ ವಾಗಿ ಇಪ್ಪತ್ತಮೂರು ವರ್ಷಗಳು ನಡೆದುಬಂದ ಮತ್ತೊಂದು ಪತ್ರಿಕೆ ಜಗತ್ತಿನಲ್ಲೇ ಕಾಣದು.

ಮುಂದೆ ೧೯೨೧ರ ಜುಲೈನಲ್ಲಿ ಅಲಹಾಬಾದಿನ ‘ಇಂಡಿಪೆಂಡೆಂಟ್’ ಪತ್ರಿಕೆ ನಡೆಸಲು ಮಹದೇವ ದೇಸಾಯಿಯನ್ನು ಗಾಂಧೀಜಿಯೇ ಕಳುಹಿಸಿದರು. ಮೋತಿಲಾಲರು, ಜವಾಹರಲಾಲರು ದಸ್ತಗಿರಿಯಾಗಿದ್ದರು. ಅವರ ಬರಹಗಳು ಪ್ರಕಟವಾಗುತ್ತಿದ್ದ ‘ಇಂಡಿಪೆಂಡೆಂಟ್’ ಸರ್ಕಾರದ ಆಕ್ರೋಶಕ್ಕೆ ಗುರಿಯಾಯಿತು. ಸಂಪಾದಕ ಜಾರ್ಜ್ ಜೋಸೆಫ್ ದಸ್ತಗಿರಿಯಾದರು. ಮುದ್ರಣಾಲಯ ಜಫ್ತಾಯಿತು. ಮಹದೇವರು ಅಧೀರರಾಗಲಿಲ್ಲ. ಕಲ್ಲಚ್ಚಿನಲ್ಲಿ ಪತ್ರಿಕೆ ಹೊರಡಿಸಿದರು. ಒಬ್ಬರೇ ನಿಂತು ಲೇಖನಗಳನ್ನು ಬರೆದರು. ಸುದ್ದಿಗಳನ್ನೊದಗಿಸಿದರು. ‘ನಾನು ಸಾಯುವುದಿಲ್ಲ’ ಎಂದು ಪತ್ರಿಕೆಯಲ್ಲಿ ಅಗ್ರ ಲೇಖನ ಬರೆದರು. ಅಗಾಧ ಸಂಖ್ಯೆಯಲ್ಲಿ ಪತ್ರಿಕೆಯ ಹಂಚಿಕೆಗೆ ವ್ಯವಸ್ಥೆ ಮಾಡಿದರು. ಮೋತಿಲಾಲರು ಅನಂತರ ಮಹದೇವ ಭಾಯಿಯ ಈ ಮಹತ್ತರ ಸಾಹಸಪೂರ್ಣ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಮಹದೇವ ದೇಸಾಯಿ ಬರೆಯುತ್ತಿರುವುದು.

ಜೈಲುವಾಸ

 

೧೯೨೧ರ ಡಿಸೆಂಬರ್ ೨೪ ರಂದು ಮಹದೇವ ಭಾಯಿಯನ್ನು ಅಲಹಾಬಾದಿನಲ್ಲಿ ದಸ್ತಗಿರಿ ಮಾಡಲಾಯಿತು. ದೇವದಾಸ ಗಾಂಧಿಗೆ ಅವರು ಪತ್ರಿಕೆಯನ್ನೊಪ್ಪಿಸಿದರು. ದುರ್ಗಾಬಹೆನ್ ದೇಸಾಯಿ ಗಂಡನ ದಸ್ತಗಿರಿಯಿಂದ ಭಯಗೊಳ್ಳದೆ ಪತ್ರಿಕೆಯ ಕೆಲಸಕ್ಕೆ ತಾನೇ ನಿಂತಳು. ಪಂಡಿತ ಮದನಮೋಹನ ಮಾಳವೀಯ ಅಲ್ಲಿಗೆ ಬಂದು ನೋಡಿ, ಹೆಚ್ಚಿನ ಶಿಕ್ಷಣ ಪಡೆಯದಿದ್ದರೂ ಪತಿಯ ಮನೋಧರ್ಮವನ್ನರಿತು, ಗಾಂಧೀಜಿಯ ಮಾರ್ಗದರ್ಶನ ಪಡೆದಿದ್ದ ದುರ್ಗಾಬಹೆನ್ ದೇಸಾಯಿಯ ಸೇವೆಯನ್ನು ಮುಕ್ತಕಂಠದಿಂದ ಹೊಗಳಿದರು.

ಉತ್ತರ ಪ್ರದೇಶದ ಜೈಲುಗಳಲ್ಲಿ ಖೈದಿಗಳನ್ನು ಅತ್ಯಂತ ಹೀನವಾಗಿ ಕಾಣುತ್ತಿದ್ದರು. ‘ನವಜೀವನ’ದಲ್ಲಿ ಈ ಬಗ್ಗೆ ಖಂಡನೆಯ ಲೇಖನಗಳು ಬಂದವು. ಮೊದಲ ಕೆಲವು ದಿನಗಳು ಮಹದೇವ ದೇಸಾಯಿಗೆ ಜೈಲುವಾಸ ಅಸಹನೀಯವಾಯಿತು. ಗಾಂಧೀಜಿಗೆ ಪತ್ರ ಬರೆದರು. ಆ ಕೂಡಲೇ ಗಾಂಧೀಜಿ ಉಗ್ರವಾಗಿ ಪ್ರತಿಭಟಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದರು. ‘ಮಹದೇವ ದೇಸಾಯಿಯೇ ಬರೆದು ತಿಳಿಸಿರುವುದರಿಂದ ನಾನಾವ ಬೇರೆ ಸಾಕ್ಷ್ಯವನ್ನೂ ಬಯಸದೆ ಪ್ರತಿಭಟಿಸುತ್ತಿದ್ದೇನೆ’ ಎಂದರು. ಹತ್ತು ದಿನಗಳ ನಂತರ ಮಹದೇವ ಭಾಯಿಯನ್ನು ಬೇರೆ ವರ್ಗಕ್ಕೆ ಬದಲಾಯಿಸಿದರು. ಇತರ ಖೈದಿಗಳ ಬಗ್ಗೆಯೂ ಕ್ರೂರ ವರ್ತನೆ ನಿಂತಿತು.

ಅದೇ ವೇಳೆಗೆ ಹರಿಭಾಯಿಯ ಎರಡನೇ ಹೆಂಡತಿಯಲ್ಲಿ ಹುಟ್ಟಿದ ಮಗಳಿಗೆ ಲಗ್ನ ಮಾಡಬೇಕಾ ಯಿತು. ಜೈಲಿನಿಂದಲೇ ಮಹದೇವರು ಬರೆದರು. ‘ನನ್ನ ಬ್ಯಾಂಕ್ ಲೆಕ್ಕದಲ್ಲಿ  ೨೬೦೦ ರೂ. ಗಳನ್ನಿಟ್ಟಿದ್ದೇನೆ, ದಯಮಾಡಿ ನಿಮ್ಮ ಸಮಯಕ್ಕೆ ಅದನ್ನುಪಯೋಗಿಸಿ.’ ತಂದೆಯ ಹೃದಯ ತುಂಬಿಬಂತು.

ಪರೀಕ್ಷೆಯ ಗಳಿಗೆಗಳು

ಸೆರೆಮನೆಯಿಂದ ಬಂದ ಕೆಲವು ದಿನಗಳಲ್ಲೇ ಹಠಾತ್ತನೆ ಹರಿಭಾಯಿ ಕಾಲವಾದರೆಂಬ ಸುದ್ದಿ ಆಶ್ರಮದಲ್ಲಿದ್ದ ಮಹದೇವರಿಗೆ ತಲುಪಿತು. ಸೂರತ್ ಜಿಲ್ಲೆಯ ದಿಹೆನ್ ಗ್ರಾಮಕ್ಕೆ ಧಾವಿಸಿದರು. ಬಲತಾಯಿ, ಬಲಸೋದರಿ ಯರನ್ನು ಸಾಂತ್ವನಗೊಳಿಸಿದರು. ಈ ದುಃಖ ಮಹದೇವ ಭಾಯಿಗೂ ಸಹಿಸಲು ಕಷ್ಟವಾಯಿತು. ಪ್ರೀತಿಯ ತಂದೆಯ ನೆನಪು ಹೆಜ್ಜೆಹೆಜ್ಜೆಗೂ ಮರುಕಳಿಸುತ್ತಿತ್ತು.

೧೯೨೪ರಲ್ಲಿ ಮತ್ತೆ ಗಾಂಧೀಜಿಯೊಡನೆ ಸೆರೆಮನೆ ವಾಸವಾಯಿತು. ಕೆಲವೇ ದಿನಗಳಲ್ಲಿ ಗಾಂಧೀಜಿಗೆ ಶಸ್ತ್ರ ಚಿಕಿತ್ಸೆಯಾಯಿತು. ದೇಶಕ್ಕೆ ದೇಶವೇ ಆತಂಕಗೊಂಡಿತ್ತು. ಮಹದೇವ ಭಾಯಿಯೊಬ್ಬರೇ ಬಳಿಯಲ್ಲಿದ್ದವರು. ಕಸ್ತೂರಿಬಾಗೂ ಬರಲು ಅನುಮತಿಯಿರಲಿಲ್ಲ. ಆ ದಿನವನ್ನು  ನೆನೆದು ಭಾಯಿ ಕಾವ್ಯಮಯವಾಗಿ ಬರೆದಿದ್ದಾರೆ. ‘ಅಂದು ಶಸ್ತ್ರಚಿಕಿತ್ಸೆಯ ಆ ಕೋಣೆ ಜಗತ್ತಿನ ಬೆಳಕನ್ನು ತನ್ನ ಹಿಡಿಯಲ್ಲಿ ಹಿಡಿದಿತ್ತು. ಜೀವಂತ ಪ್ರೇಮ ಅರಳಿ ಸರ್ವವನ್ನೂ ವ್ಯಾಪಿಸಿ ಪಾವನಗೊಳಿಸುತ್ತಿದ್ದ ಆ ಚೇತನ ಕಾಲ ದೇಶಾತೀತವಾಗಿ ಬೆಳಗುವಂತೆ ಭಾಸವಾಗುತ್ತಿತ್ತು. ಬಳಿ ಸಾರಿದ ಹೃದಯಗಳಲ್ಲಿ ಕರುಣೆ ಮೈತ್ರಿಗಳು ತುಂಬಿ ತುಳುಕುತ್ತಿದ್ದವು.’ ಏಕೈಕ ಪ್ರಾರ್ಥನೆ, ‘ಈ ಕುತ್ತಿನಿಂದ ಮಾನವ ಕುಲ ಪಾರಾಗಲಿ’ ಎಂದು ಧ್ವನಿಸುತ್ತಿತ್ತು. ಭಗವಂತ ಓಗೊಟ್ಟ.

೧೯೨೪ರ ಸೆಪ್ಟೆಂಬರಿ ನಲ್ಲಿ ಹಿಂದು- ಮುಸ್ಲಿಂ ಐಕ್ಯತೆಗಾಗಿ ದೆಹಲಿಯಲ್ಲಿ ಗಾಂಧೀಜಿ ಮೂರು ವಾರ ಉಪವಾಸ ಕೈಗೊಂಡರು. ಮಹದೇವ ಭಾಯಿ ಆತಂಕಗೊಂಡು, ‘ಇದೊಂದೇ ಮಾರ್ಗವೇ?’ ಎಂದು ಪ್ರಬಲವಾಗಿ ವಾದಿಸಿದರು. ಗಾಂಧೀಜಿ ಸಂಕಲ್ಪಬದ್ಧರಾಗಿ ದ್ದರು, ಅಚಲರಾಗಿದ್ದರು. ಅನುನಯದ ಶುಶ್ರೂಷೆ, ಅನುದಿನದ ಕಾರ್ಯದರ್ಶಿತ್ವ, ಆತ್ಮ ಸಮರ್ಪಣೆಯ ಸೇವೆ ಸಲ್ಲಿಸುತ್ತ ಉಪವಾಸದ ಯಶಸ್ವೀ ಮುಕ್ತಾಯಕ್ಕೆ ಮಹದೇವ ದೇಸಾಯಿ ಅನನ್ಯ ಭಕ್ತಿಯಿಂದ ಶ್ರಮಿಸಿದರು. ೧೯೨೭ರಲ್ಲಿ ಗಾಂಧೀಜಿಯ ಆತ್ಮಕಥೆಯ ಇಂಗ್ಲಿಷ್ ಭಾಷಾಂತರವನ್ನು ಮಹದೇವ ಭಾಯಿ ಕೈಗೊಂಡು ಮುಗಿಸಿದರು. ಆ ಮೋಹಕ ಭಾಷೆ ಗಾಂಧೀಜಿಯನ್ನೂ ಬೆರಗು ಗೊಳಿಸಿತು.

ಮತ್ತೆ ಸತ್ಯಾಗ್ರಹ

೧೯೨೭ರಲ್ಲಿ ಕರ್ನಾಟಕದ ನಂದಿಬೆಟ್ಟದಲ್ಲಿ ಮೇ, ಜೂನ್ ತಿಂಗಳಿನಲ್ಲಿ ಆರೋಗ್ಯ ಸುಧಾರಣೆಗಾಗಿ ಗಾಂಧೀಜಿ ಪ್ರವಾಸ ಮಾಡಿದಾಗ ಕನ್ನಡಿಗರಿಗೆ ಮಹದೇವ ಭಾಯಿಯ ಪರಿಚಯವಾಯಿತು.

ಭಾರತದ ಭವಿಷ್ಯವನ್ನು ಚರ್ಚೆ ಮಾಡಲು ಕರೆದಿದ್ದ ದುಂಡುಮೇಜಿನ ಪರಿಷತ್ತಿಗಾಗಿ ಲಂಡನ್ನಿಗೆ ಹೊರಟರು ಗಾಂಧೀಜಿ. ಮಹದೇವ ದೇಸಾಯಿ ಅವರ ಪ್ರವಾಸದಲ್ಲಿ ನಿತ್ಯನಿರಂತರವಾಗಿ ಪಾಶ್ಚಾತ್ಯ ಸಂಪರ್ಕ ಬೆಳೆಸಿದರು. ಫ್ರೆಂಚ್ ಸಾಹಿತಿ ರೊಮೆನ್ ರೋಲಾ, ಇಟಲಿಯ ಮುಸೋಲನಿಯ ಪುತ್ರಿ, ಬ್ರಿಟಿಷ್ ಪತ್ರಿಕೋದ್ಯೋಗಿಗಳು, ಪೊಲೀಸರು, ಎಲ್ಲರಿಗೂ ಮಹದೇವ ಭಾಯಿ ಆತ್ಮೀಯ ಗೆಳೆಯರಾದರು. ಪಾಶ್ಚಾತ್ಯ ರಾಷ್ಟ್ರಗಳ ವಿಚಾರವೇತ್ತರಿಗೆ ಗಾಂಧೀ ವರ್ಗದ ಶ್ರೇಷ್ಠ ವ್ಯಾಖ್ಯಾನಕಾರರೆನಿಸಿಕೊಂಡರು. ಸರ್ದಾರ್ ಪಟೇಲರು ಮತ್ತು ಮಹದೇವ ದೇಸಾಯಿ ೧೯೩೨ರಲ್ಲಿ ಗಾಂಧೀಜಿಯ ಒಡನಾಡಿಗಳಾಗಿ ಬಂಧಿತರಾದರು.

ರಚನಾತ್ಮಕ ಕೆಲಸ

೧೯೩೫ರ ವೇಳೆಗೆ ಸ್ವಾತಂತ್ರ್ಯ ಸಂಗ್ರಾಮದ ಬಿಸಿ ಆರುತ್ತಿತ್ತು. ಗಾಂಧೀಜಿ ಕಾಂಗ್ರೆಸ್ಸಿನಿಂದ ನಿವೃತ್ತರಾಗುವ ಸಂಕಲ್ಪ ಕೈಗೊಂಡರು. ಮಹದೇವ ಭಾಯಿ, ವಿನೋಬಾ, ಪ್ಯಾರಿಲಾಲ್ ಮತ್ತು ಮೀರಾಬಹೆನ್ ಅವರನ್ನು ಸತ್ಯಾಗ್ರಹಾಶ್ರಮಕ್ಕೆ ಕಳುಹಿಸಿ ರಚನಾತ್ಮಕ ಕಾರ್ಯದಲ್ಲಿ  ತೊಡಗಲು ಆಜ್ಞಾಪಿಸಿದರು. ‘ಗ್ರಾಮ ಪುನರ್ರಚನೆ, ಗ್ರಾಮ ಕೈಗಾರಿಕೆಗಳ ಪುನರುತ್ಥಾನ, ಗ್ರಾಮ ಸ್ವಾವಲಂಬನೆ ಈ ಆರ್ಥಿಕ ಬುನಾದಿಯ ಮೇಲೆ ಅಹಿಂಸಾತ್ಮಕ ರಾಜಕಾರಣ ನಿಲ್ಲದೆ ಸ್ವಾತಂತ್ರ್ಯ ಸಂಗ್ರಾಮ ಪ್ರಗತಿ ಪಥದಲ್ಲಿ ಸಾಗಲಾರದು’ ಎಂದರು.

ಅಲ್ಲಿಂದಾಚೆ ‘ಹರಿಜನ’ ಪತ್ರಿಕೆಯ ಪುಟಗಳಲ್ಲಿ ಸತತವಾಗಿ, ವಿಪುಲವಾಗಿ ಇದರ ಚರ್ಚೆ ಪ್ರಕಟವಾಗು ತ್ತಿತ್ತು. ಮಹದೇವ ದೇಸಾಯಿಯ ಲೇಖನಿಯೂ ಅಷ್ಟೇ ಸಮರ್ಥವಾಗಿ ತಾತ್ತ್ವಿಕ ಪ್ರತಿಪಾದನೆ ಮಾಡುತ್ತಿತ್ತು. ಸಂಶೋಧನೆ, ಪ್ರಯೋಗ, ತಲ್ಲೀನತೆ, ತತ್ತ್ವನಿಷ್ಠೆ ಈ ನಿಟ್ಟಿನಲ್ಲಿ ಎಲ್ಲೆಲ್ಲೂ ಗಾಂಧೀ ಪ್ರಣೀತವಾದ ಹದಿನೆಂಟು ವಿಧದ ನಿರ್ಮಾಣ ಕಾರ್ಯಕ್ರಮ ಸಾಗುತ್ತಿತ್ತು. ೧೯೩೬ರಲ್ಲಿ ಗಾಂಧೀಜಿ ವರ್ಧಾದ ಬಳಿ ಸೇವಾ ಗ್ರಾಮದಲ್ಲಿ ತಾವೇ ಬಂದು ನೆಲೆಸಿದರು. ಮಹದೇವ ಭಾಯಿ ನಿತ್ಯವೂ ಹತ್ತು ಮೈಲಿ ಸೇವಾಗ್ರಾಮಕ್ಕೆ ನಡೆದು ಹೋಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ನಿಖರವಾದ ದಿನಚರಿಯಲ್ಲಿ ಎಂದೂ ತಪ್ಪದೆ ತದೇಕನಿಷ್ಠೆಯಿಂದ ಮುಂದೆ ಆರು ವರ್ಷ ಸೇವೆ ಸಲ್ಲಿಸಿದರು.

ಪಾವನ ಪ್ರಸಂಗ

ಗಾಂಧೀಜಿಯ ಕಠಿಣ ವ್ರತಗಳಲ್ಲಿ ಭಾಯಿಗೆ ಗೌರವ. ಆದರೆ ಅನುಷ್ಠಾನದಲ್ಲಿ ಅವರ ವಜ್ರ ಕಠೋರತೆ ಇವರಿಗೆ ನಿಲುಕಲಿಲ್ಲ. ಒಮ್ಮೆ ಜಾರಿದ ಪ್ರಸಂಗವೂ ಉಂಟು. ೧೯೩೮ರಲ್ಲಿ ಹರಿಜನ ಪ್ರವಾಸದಲ್ಲಿ ಬಾಪೂ ಪುರಿ ಜಗನ್ನಾಥಕ್ಕೆ ಬಂದರು. ಜಗನ್ನಾಥ ದರ್ಶನಕ್ಕೆ ಹರಿಜನರ ಪ್ರವೇಶವಿಲ್ಲದುದನ್ನು ಸಾರ್ವಜನಿಕ ಸಭೆಯಲ್ಲಿ ಬಾಪು ಉಗ್ರವಾಗಿ ಖಂಡಿಸಿದ್ದರು. ಅದೇ ಸಂಜೆ ಕಸ್ತೂರಿಬಾ ಮತ್ತು ದುರ್ಗಾಬಹೆನ್ ತಿಳಿಯದೆ ಜಗನ್ನಾಥ ದರ್ಶನಕ್ಕೆ ಹೋಗಿ ಬಂದರು. ಸುದ್ದಿ ಎಲ್ಲೆಡೆ ಹಬ್ಬಿ ಬಿಟ್ಟಿತು. ಗಾಂಧೀ ಕುಟುಂಬದವರೇ ವ್ರತಭಂಗ ಮಾಡುವುದೇ ! ಮಹದೇವ ಭಾಯಿ ಸಮ್ಮತಿಸಿದರು ಎಂದೂ ಗೊತ್ತಾಯಿತು. ಬಾಪು ಅತ್ಯುಗ್ರವಾಗಿ ಬಹಿರಂಗ ಸಭೆಯಲ್ಲೇ ಮಹದೇವ ಭಾಯಿಯನ್ನು ಖಂಡಿಸಿ ಬಿಟ್ಟರು. “ನಿನ್ನ ಹೆಂಡತಿಗೆ ಈ ಪಾಠ ಕಲಿಸಲು ಸಾಧ್ಯವಾಗದೇ ಹೋದರೆ ಯಾವ ಮುಖದಿಂದ ಇತರರಿಗೆ ಉಪದೇಶ ಮಾಡುತ್ತಿ ?” ಎಂದರು. ಕಸ್ತೂರಿಬಾಯಿಯ ತಪ್ಪು ವರ್ತನೆಗಾಗಿ, ಭಾಯಿಯ ತಿಳಿಗೇಡಿತನಕ್ಕಾಗಿ ಹರಿಜನ ಕಾರ್ಯಕರ್ತರಲ್ಲಿ ಕ್ಷಮಾಪಣೆ ಬೇಡಿದರು. ಮಹದೇವ ಭಾಯಿಗೆ ಸಿಡಿಲೆರಗಿ ದಂತಾಯಿತು. ಆತ್ಮಕ್ಲೇಶದಿಂದ ಕುದಿದು ಹೋದರು. ‘ನಾನಿನ್ನು ಅಯೋಗ್ಯ! ಗಾಂಧೀಜಿಯನ್ನು ವಂಚಿಸಿದ್ದೇನೆ’ ಎಂದು ಹಲುಬಿದರು. ರಾಜೀನಾಮೆ ಪತ್ರ ಬರೆದು ಬಿಟ್ಟರು. ದಿಕ್ಕು ತೋಚದಂತಾಯಿತು. “ರಾಜೀನಾಮೆ ಒಂದು ಉತ್ತರವೇ ? ಪ್ರಾಯಶ್ಚಿತ್ತ ರೂಪದಲ್ಲಿ  ಪೂರಿ ದೇವಾಲಯದ ಹರಿಜನ ಪ್ರವೇಶಕ್ಕೆ ಹೋರಾಡು. ನನ್ನನ್ನಗಲಿ ಹೋಗಿ ನನ್ನ ಉಸಿರನ್ನೇ ಕಸಿಯಬೇಡ” ಎಂದರು ದುಃಖತಪ್ತ ಗಾಂಧೀಜಿ. ಎರಡು ಹೃದಯಗಳೂ ಈ ಅಗ್ನಿಮೂಸೆಯಲ್ಲಿ ಬೆಂದು ಪುನೀತವಾದವು.

ಉದಾರ ಚರಿತ

ಮಹದೇವ ಭಾಯಿ ತುಂಬು ಪ್ರೇಮದ ಸಂಸಾರಿ. ಉದಾರ ಚರಿತ. ದುರ್ಗಾಬಹೆನ್‌ರೊಡನೆ ಅವರ ದಾಂಪತ್ಯ ಹಾಲುಸಕ್ಕರೆ ಬೆರೆತಂತಿತ್ತು. ಒಬ್ಬನೇ ಮಗ ನಾರಾಯಣ ದೇಸಾಯಿ ಬಾಲ್ಯದಿಂದಲೂ ಆಶ್ರಮ ನಿಯಮಗಳಿಗೆ ಒಗ್ಗಿಹೋದ. ಮಹದೇವ ಭಾಯಿಯ ಪ್ರಸನ್ನತೆ, ತಾಯಿಯ ವಾತ್ಸಲ್ಯ, ಬಾಪುವಿನ ಪ್ರೇಮ ನಾರಾಯಣನನ್ನು ರೂಪಿಸಿತು. ರಾಷ್ಟ್ರದ ನಾಯಕರು ಅವರ ಮನೆಗೆ ಬರುತ್ತಿದ್ದರು. ದೇಶದ ಸ್ಥಿತಿ, ಭವಿಷ್ಯ, ಮನುಷ್ಯ ಹೇಗೆ ಬದುಕಬೇಕೆಂಬ ಸಮಸ್ಯೆ ಎಲ್ಲ ಚರ್ಚೆಯಾಗುತ್ತಿದ್ದವು.

ಶ್ರೀಮಂತ ಬಿರ್ಲಾ, ಕವೀಂದ್ರ ರವೀಂದ್ರರು, ದೀನಬಂಧು ಆಂಡ್ರೂಸ್, ಠೆಕ್ಕರ್ ಬಾಪಾ ಇಂಥ ಪ್ರಚಂಡ ಯತಿಗಳೊಡನೆ ಮಹದೇವ ಭಾಯಿಗೆ ನಿಕಟ ಸ್ನೇಹ. ಬ್ರಿಟಿಷ್ ಉನ್ನತಾಧಿಕಾರಿಗಳಿಗೆ ಭಾಯಿ ಸನ್ಮಿತ್ರರೆನಿಸಿದ್ದರು. ಗಾಂಧೀಜಿಯೊಡನೆ ಹೋರಾಟಕ್ಕೆ ನಿಂತವರೂ ಕೂಡ ಮಹದೇವ ಭಾಯಿಯೊಡನೆ ನಮ್ರರಾಗಿ ಬಿಡುತ್ತಿದ್ದರು. ಆ ಸೌಮ್ಯತೆಯಲ್ಲಿ , ಆ ವಿವೇಕಪೂರ್ಣ ವ್ಯಕ್ತಿತ್ವದಲ್ಲಿ , ಆ ಮುಗುಳ್ನಗೆಯ ಮೋಡಿಯಲ್ಲಿ ಅನೇಕ ಸಮಸ್ಯೆಗಳಿಗೆ ಉತ್ತರ ದೊರೆಯುತ್ತಿತ್ತು.

ಗಾಂಧೀಜಿ ತಮ್ಮ ಜೀವವನ್ನೇ ಪಣವಾಗಿಟ್ಟು ರಾಜಕೋಟೆಯ ಥಾಕೋರಿನೊಡನೆ ಹೋರಾಡಿದಾಗ, ಮಹದೇವ ಭಾಯಿಯ ದೌತ್ಯ ಕ್ಲಿಷ್ಟ ಸಮಸ್ಯೆಗಳನೇಕ ವನ್ನು ಪರಿಹರಿಸಿತು.

ರವೀಂದ್ರರು ಒಮ್ಮೆ ತಮ್ಮ ಶಾಂತಿನಿಕೇತನಕ್ಕೆ ಹಣ ಕೂಡಿಸಲು ವೃದ್ಧಾಪ್ಯದಲ್ಲಿ ನಾಟಕಗಳನ್ನು ಪ್ರದರ್ಶಿಸಲು ಹವಣಿಸುತ್ತಿದ್ದರು. ಗಾಂಧೀಜಿಗೆ, ‘ಇಂಥ ಕವಿ ಶ್ರೇಷ್ಠ, ಭಾರತದ ಮಕುಟ ಮಣಿ ಹೀಗೆ ಬವಣೆಪಡಬೇಕೆ?’ ಎನಿಸಿತು. ಮಹದೇವ ಭಾಯಿಯನ್ನು ಅವರ ಸಹಾಯಕ್ಕೆ ಕಳುಹಿಸಿದರು. ದೆಹಲಿಯಲ್ಲಿ ಬಿರ್ಲಾ ಮುಂತಾದವರನ್ನು ಒಲಿಸಿ ಮಹದೇವರು ಎಲ್ಲ ಹಣವನ್ನೂ ಕೂಡಿಸಿ ಕೊಟ್ಟರು. ಠಕ್ಕರ್ ಬಾಪಾಗೆ ನಿಧಿ ಕೂಡಿಸಲು ಕಷ್ಟವಾದಾಗ ಮುಂಬಯಿಗೆ ಹೋಗಿ ಒಂದು ವಾರದಲ್ಲಿ  ಒಂದೂಕಾಲು ಲಕ್ಷ ರೂಪಾಯಿ ಕೂಡಿಸಿಕೊಟ್ಟರು. ಬಾಯಿ ಕೇಳಿದರೆ ಇಲ್ಲ ಅನ್ನುವುದು ಅತಿ ಜಿಪುಣನಿಗೂ ಸಾಧ್ಯವಿರಲಿಲ್ಲ. ಗಾಂಧೀಜಿಯ ವಾತ್ಸಲ್ಯವನ್ನೇ ಇವರಲ್ಲಿ ಕಂಡು ಎಲ್ಲರೂ ಮಾರುಹೋಗುತ್ತಿದ್ದರು.

೧೯೪೨ರ ಆಗಸ್ಟ್ ತಿಂಗಳಲ್ಲಿ ಭಾರತೀಯರು ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಚಳವಳಿ ಪ್ರಾರಂಭಿಸಿದರು. ನಾಯಕರನ್ನೆಲ್ಲ ಸರ್ಕಾರ ಬಂಧಿಸಿತು. ಮಹದೇವ ದೇಸಾಯಿಯೂ ಗಾಂಧೀಜಿ ಯೊಡನೆ ಬಂಧಿತರಾದರು. ಇವರನ್ನು ಪುಣೆಯ ಆಗಾಖಾನ್ ಅರಮನೆಯಲ್ಲಿ ಸೆರೆಯಿಡಲಾಗಿತ್ತು. ಆಗಸ್ಟ್ ೧೫ರಂದು ಬಾಪುವಿನ ತೊಡೆಯ ಮೇಲೆ ಐವತ್ತು ವರ್ಷದ ಮಹದೇವ ಭಾಯಿ ಕೊನೆಯುಸಿರೆಳೆದರು. ಅವರ ಧವಳ ಕೀರ್ತಿ ದಿಗ್‌ದಿಗಂತಗಳಲ್ಲಿ ಅಮರ ಪರಿಮಳವಾಗಿ ಸೇರಿ ಹೋಯಿತು.