ಸುಮಾರು ನಲವತ್ತು ವರ್ಷಗಳ ಕೆಳಗೆ ನಡೆದ ಸಂಗತಿ.

ಮಂಗಳೂರಿನಲ್ಲಿ ‘ಗೌತಮ ಬುದ್ಧ’ ನಾಟಕದ ಪ್ರಥಮ ಪ್ರದರ್ಶನ.

ಮಂದಿರ ಕಿಕ್ಕಿರಿದು ತುಂಬಿದೆ. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಬಂದಿದ್ದಾರೆ. ವಿಮಾರ್ಶಾ ದೃಷ್ಟಿಯಿಂದ ನಾಟಕವನ್ನು ನೋಡಿ ಬೆಲೆ ಕಟ್ಟಬಲ್ಲವರೂ ಬಂದಿದ್ದಾರೆ.

ನಾಟಕ ಅದ್ಭುತವಾಗಿ, ಯಶಸ್ವಿಯಾಯಿತು. ಮೂರು ಗಂಟೆಗಳ ಕಾಲ ಜನ ಪ್ರಪಂಚವನ್ನೆ ಮರೆತು ನಾಟಕವನ್ನು ನೋಡಿದರು. ಗೌತಮ ಬುದ್ಧನ ಪಾತ್ರ ಅವರಿಂದ ಒಮ್ಮೆ ಕಣ್ಣೀರು ಸುರಿಸಿತು, ಇನ್ನೊಮ್ಮೆ ಅವರಲ್ಲಿ ಮರುಕವನ್ನು ಹುಟ್ಟಿಸಿತು, ಮತ್ತೊಮ್ಮೆ ಭಕ್ತಿಯನ್ನು ಸೂರೆಗೊಂಡಿತು.

ಬುದ್ಧನ ಪಾತ್ರ ವಹಿಸಿದ್ದವರು-ಮಹಮದ್‌ ಪೀರ್! ಅಸಾಧಾರಣ ವ್ಯಕ್ತಿ.

ಕಾವ್ಯಗಳಲ್ಲಿ, ಕಲೆಗಳಲ್ಲಿ ನಾಟಕಕ್ಕೆ ಅಗ್ರಸ್ಥಾನ; ನಾಟಕಗಳಲ್ಲಿ ಪಾತ್ರವೇ ಉಸಿರು; ಪಾತ್ರದ ಉಸಿರಿಗೆ ಜೀವವನ್ನೂ, ಭಾವವನ್ನೂ ತುಂಬಿ ಅಭಿನಯಿಸುವವನೇ ಕಲಾವಿದ. ಮಹಮದ್‌ ಪೀರ್ ಅವರು ಇಂತಹ ಹಿರಿಯ ಕಲಾವಿದರಲ್ಲೊಬ್ಬರು. ಅವರು ತಮ್ಮ ಜೀವನವನ್ನು ಅಭಿನಯ ಕಲೆಗಾಗಿಯೇ ಮೀಸಲಿಟ್ಟು, ಅದನ್ನು ತೇದುಬಿಟ್ಟರು. ತೇದ ಶ್ರೀಗಂಧದ ತುಂಡಿನ ಪರಿಮಳ ನಾಡಿಗೆ ಎಂದೆಂದಿಗೂ ಉಳಿದುಕೊಂಡಿತು.

ಬಾಲ್ಯ

ಮೈಸೂರು ನಗರದ ನಜರ್ ಬಾದ್‌ ಬಡಾವಣೆಯ ಸಾಮಾನ್ಯ ಮುಸ್ಲಿಮ್‌ ಸಂಸಾರವೊಂದರಲ್ಲಿ ಪೀರರು ೧೮೯೬ರಲ್ಲಿ ಜನಿಸಿದರು. ತಂದೆಯ ಹೆಸರು ಪೀರ್‌ ಮೊಹಿಯುದ್ದೀನ್‌. ಇವರು ಗರಡಿಮನೆಯ ಜಟ್ಟಿ. ತಾಯಿ ಮುಬಾರಕ್‌ ಬೀ ಅವರು. ಬಾಲಕ ಪೀರ್ ಎಳೆಯ ವಯಸ್ಸಿನಲ್ಲೆ ತಂದೆತಾಯಿಗಳಿಬ್ಬರನ್ನೂ ಕಳೆದುಕೊಂಡ. ಈ ಬಾಲಕನ ಪಾಲನೆ ಪೋಷಣೆಗೆ ಸೋದರಮಾವನ ಮನೆಯೇ ನೆಲೆಯಾಯಿತು. ಅಜ್ಜಿಯೇ ಈ ಅನಾಥ ಮಗುವಿಗೆ ಆಶ್ರಯದಾತೆಯಾದಳು.

ಪೀರರಿಗೂ ಅವರ ಮನೆತನಕ್ಕೂ ಅಭಿನಯ ಕಲೆಗೆ ಸಂಬಂಧಿಸಿದಂತೆ ಏನೋ ಬಾಂಧವ್ಯವಿತ್ತೆಂದು ಹೇಳಬಹುದಾಗಿದೆ. ಎಳೆಯ ವಯಸ್ಸಿನಲ್ಲಿಯೇ ಮೈಸೂರು ಅರಮನೆಯ ಗಜಶಾಲೆಯಿಂದ ವಿದೇಶಕ್ಕೆ ತೆರಳಿ, ಆನೆಯ ಸವಾರಿ ಮತ್ತು ಆನೆಗಳನ್ನು ಕಸರತ್ತು ಮಾಡಿಸುವುದರಲ್ಲಿ ವಿಶೇಷ ಚಮತ್ಕಾರ ಪ್ರದರ್ಶಿಸಿ, ವಿಲಾಯಿತಿಯವರನ್ನು ದಂಗುಬಡಿಸಿ, ‘ಎಲಿಫೆಂಟ್‌ ಬಾಯ್‌’ ಎಂಬ ವಿಶ್ವವಿಖ್ಯಾತ ಆಂಗ್ಲ ಚಿತ್ರದಲ್ಲಿ ನಟಿಸಿ, ‘ಮೈಸೂರು ಸಾಬು’ ಎಂದು ಕೀರ್ತಿಶಾಲಿಯಾದ ತರುಣನು ಕೂಡ ಪೀರರ ಮನೆತನದ ಕಲಾಜ್ಯೋತಿ.

ಕನ್ನಡವೋಉರ್ದುವೋ?

ಬಾಲ್ಯದಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡಿದ್ದ ಪೀರರನ್ನು ಕಂಡರೆ ಅಜ್ಜಿಗೆ ತುಂಬಾ ಅಕ್ಕರೆ. ಮೊಮ್ಮಗನು ಕನ್ನಡನಾಡಿನ ಒಬ್ಬ ಮಹನೀಯನಾಗುವನೆಂದು ಅವರು ಕನಸು ಕಂಡಿದ್ದರೋ ಇಲ್ಲವೋ ಅಂತೂ ಆಕೆಯ ಹಠದಿಂದ ಪೀರರು ಕನ್ನಡಕ್ಕೆ ಉಳಿಯುವಂತಾದರು.

ಅಂದಿನ ಮೈಸೂರು ಸಂಸ್ಥಾನದ ರಾಜಧಾನಿ, ಕನ್ನಡ ರಾಜ್ಯದ, ಕನ್ನಡ ಯದುವಂಶದ ಅರಸರ ಅರಮನೆ ಇದ್ದ ಮೈಸೂರಿನಲ್ಲಿ ವಾಸವಾಗಿದ್ದ ಅಜ್ಜಿಗೆ ಕನ್ನಡವೆಂದರೆ ಅಪಾರ ಪ್ರೇಮ. ಬಹು ಕೃತಜ್ಞತೆ.

ಪೀರರ ಬಾಲ್ಯಶಿಕ್ಷಣದ ಪ್ರಶ್ನೆ ಬಂದಾಗ ಅವರ ಮನೆಯಲ್ಲಿ ಎರಡು ವಿಚಾರಗಳನ್ನು ಸಮರ್ಥಿಸಿ ಮಾತಿನ ಮಹಾಯುದ್ಧವೇ ನಡೆದುಹೋಯಿತು.

ಪೀರರ ಪಾಲಕರಾಗಿದ್ದ ಸೋದರಮಾವನಿಗೆ ಉರ್ದು ಭಾಷೆಯ ಮೇಲೆ ಅಪಾರ ಮಮತೆ; ಅಜ್ಜಿ ಕನ್ನಡಪ್ರೇಮಿ. ಬಾಲಕ ಪೀರನು ಉರ್ದು ಶಾಲೆಗೆ ಸೇರಿ ಆ ಭಾಷೆಯಲ್ಲಿಯೇ ಶಿಕ್ಷಣವನ್ನು ಮುಂದುವರಿಸಬೇಕೆಂದು ಸೋದರಮಾವನ ಅಪೇಕ್ಷೆ.

ಆದರೆ ಅಜ್ಜಿಯ ಆಲೋಚನೆಯೇ ಬೇರೆ: ನಾವು ಕನ್ನಡ ನಾಡಿನಲ್ಲಿ ಬದುಕುತ್ತಿದ್ದೇವೆ, ಕನ್ನಡ ನೆಲದಲ್ಲಿ ಅನ್ನ ತಿನ್ನುತ್ತಿದ್ದೇವೆ, ಸುತ್ತಮುತ್ತ, ಎಲ್ಲೆಲ್ಲೂ ಕನ್ನಡಿಗರು ಹೀಗಿರುವಾಗ ಪೀರನು ಕನ್ನಡ ಶಾಲೆಗೇ ಹೋಗಿ, ಕನ್ನಡವನ್ನೇ ಕಲಿತು ಕನ್ನಡಿಗನಾಗಿಯೇ ಬದುಕನ್ನು ರೂಪಿಸಿಕೊಳ್ಳಬೇಕು.

ಸೋದರಮಾವನಿಗೆ ಉರ್ದುವಿನ ಹಂಬಲ; ಅಜ್ಜಿಗೆ ಕನ್ನಡದ ಹಠ. ಒಂದು ಷರತ್ತಿನ ಮೇಲೆ ಅಜ್ಜಿಯೇ ಗೆದ್ದರು. ಪೀರರು ಕನ್ನಡ ಶಾಲೆಗೇ ಹೋಗಿ ಕನ್ನಡ ಶಿಕ್ಷಣವನ್ನೇ ಪಡೆದರೂ ಮನೆಯಲ್ಲಿ ಉರ್ದುವನ್ನು ಕಲಿತುಕೊಳ್ಳಬೇಕು. ಸೋದರಮಾವನ ಈ ನಿಬಂಧನೆಗೆ ಅಜ್ಜಿ ಒಪ್ಪಿದರು. ಪೀರರು ಕನ್ನಡ ಶಿಕ್ಷಣಕ್ಕೆ ತೊಡಗಿದರು. ಮನೆಯಲ್ಲಿಯೇ ಮಾವ ಉರ್ದು ಹೇಳಿಕೊಟ್ಟರು.

ಇದರಿಂದಾಗಿ ಪೀರರಿಗೆ ಚಿಕ್ಕಂದಿನಿಂದಲೇ ಕನ್ನಡ, ಉರ್ದು ಮತ್ತು ಆಂಗ್ಲ ಭಾಷೆಗಳ ಪರಿಚಯವಾಯಿತು. ಅವರು ಮೂರು ಭಾಷೆಗಳನ್ನು ಕಲಿತರೂ ಬದುಕಿನ ಸಾಕ್ಷಾತ್ಕಾರ ಮಾಡಿಕೊಂಡಿದ್ದು ಕನ್ನಡದಲ್ಲೇ. ಅಜ್ಜಿಯ ಕನ್ನಡ ಪ್ರೇಮ, ಕನ್ನಡ ಕೃತಜ್ಞತೆಯೇ ಮೊಮ್ಮಗನ ನರನಾಡಿಗಳಲ್ಲಿ ಪ್ರವಹಿಸಿತು.

ವಿದ್ಯಾಭ್ಯಾಸ

ಪೀರರ ಕನ್ನಡ ಶಿಕ್ಷಣದ ಗುರು ಯಜ್ಞೇಶ್ವರ ಶಾಸ್ತ್ರಿಗಳು. ಪೀರರು ಮನೆಯ ಸಮೀಪದ ಮಿಷನ್‌ ಪಾಠಶಾಲೆಗೆ ಸೇರಿದರೂ ಹದಿನಾರಾಣೆಯ ಭಾರತೀಯ ಶಿಕ್ಷಣವನ್ನು ದೊರಕಿಸಿಕೊಂಡರು; ಮೈಃತುಂಬಿಸಿಕೊಂಡರು.

ಕನ್ನಡ ಪಂಡಿತ ಯಜ್ಞೇಶ್ವರ ಶಾಸ್ತ್ರಿಗಳಿಂದ ಮಹಮದ್‌ ಪೀರರು ಮಹತ್ತ್ವದ ಶಿಕ್ಷಣ ಪಡೆದರು. ಈ ಬಾಲಕ ವಿಶೇಷ ಆಸಕ್ತಿಯಿಂದ ಕನ್ನಡವನ್ನು ಕಲಿತ. ಶಬ್ದದ ಪರಿಚಯ ಮತ್ತು ಸ್ಪಷ್ಟ ಉಚ್ಚಾರಣೆಗಾಗಿ ಈ ಮುಸ್ಲಿಮ್‌ ಕಿಶೋರ ಅಮರ ಕೋಶವನ್ನು ಕಂಠಪಾಠ ಮಾಡಿಕೊಂಡ. ಕುಮಾರವ್ಯಾಸ ಮತ್ತು ರಾಘವಾಂಕರ ಕಾವ್ಯಗಳು, ದಾಸರ ಕೃತಿಗಳು, ಶರಣರ ಸಾಹಿತ್ಯ ಎಲ್ಲವನ್ನೂ ಪರಿಚಯ ಮಾಡಿಕೊಂಡ.

ಮಾಧ್ಯಮಿಕ ಶಾಲೆಯಿಂದ ಇಂಗ್ಲಿಷ್‌ ಭಾಷೆಯ ಕಲಿಕೆ ಆರಂಭವಾಯಿತು. ಹೀಗೆ ಪೀರರ ಶಿಕ್ಷಣ ಜೀವನದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಹಾಲು-ಜೇನಿನಂತೆ ಬೆರೆತುಕೊಂಡವು.

ಶಾಲಾ ವಾರ್ಷಿಕ ಕೂಟದಲ್ಲಿ ಪೀರರು ಕಂಠಪಾಠ ಸ್ಪರ್ಧೆ, ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಿನ ಬಹುಮಾನಗಳನ್ನು ತಾವೇ ಬಾಚಿಕೊಂಡು ಬಿಡುತ್ತಿದ್ದರು. ಮುಸ್ಲಿಮ್‌ ಬಾಲಕನು ಸುಶ್ರಾವ್ಯವಾಗಿ ಹೇಳುತ್ತಿದ್ದ ಸಂಸ್ಕೃತ ಶ್ಲೋಕಗಳನ್ನು ಕೇಳಿ ಶ್ರೋತ್ರಿಯರೂ ತಲೆ ತೂಗುತ್ತಿದ್ದರು. ವಿದ್ಯೆಗೆ ಮತದ ಸಂಕೋಲೆಯೆ?

ವಿದ್ಯೆಯಲ್ಲಿ ಹೀಗೆ ಬುದ್ಧಿ ಬೆಳೆಸಿಕೊಂಡ ಪೀರರು, ಕ್ರಮಬದ್ಧವಾದ ಕಸರತ್ತಿನಿಂದ ದೇಹ ಸಷ್ಠವವನ್ನು ಬೆಳೆಸಿಕೊಂಡಿದ್ದರು. ಎಷ್ಟಾದರೂ ಇವರು ನಜರ್ ಬಾದ್‌ ಪೈಲ್ವಾನ್‌ ಮೊಹಿಯುದ್ದೀನ್‌ ಅವರ ಪುತ್ರಲ್ಲವೆ?

ಅನುಭವಿ ವ್ಯವಸಾಯಗಾರನಿಗೆ ಬೆಳೆಯುವ ಪೈರಿನ ಸ್ವರೂಪವೇನು ಎಂಬುದು ಮೊಳಕೆಯಲ್ಲಿಯೇ ಗೊತ್ತಾಗುತ್ತದೆ. ಪೀರರ ಬಾಲ್ಯದ ‘ಮೊಳಕೆ’ಯಲ್ಲಿಯೇ ಇವರ ‘ಭವಿಷ್ಯದ ಪೈರು’ ಎಂತಹ ಸೊಗಸಾದುದೆಂಬುದನ್ನು ಜೀವನ ವಿಮರ್ಶಕರು ಗೊತ್ತುಹಿಡಿದಿದ್ದರು.

ಪ್ರತಿಭಟನೆ

ಲೋಯರ್ ಸೆಕೆಂಡರಿ(ಎಲ್‌.ಎಸ್‌.) ಪರೀಕ್ಷೆಯಲ್ಲಿ ಉತ್ತೀರ್ಣರಾದ ಪೀರರು ವೆಸ್ಲಿನ್‌ ಮಿಷನ್‌ ಹೈಸ್ಕೂಲಿಗೆ ಸೇರಿದ್ದರು. ಆ ಶಾಲೆಯ ಕನ್ನಡ ಪಂಡಿತರಾದ ವೆಂಕಟರಾಮಾ ಶಾಸ್ತ್ರಿಗಳಿಗೆ ಪೀರರ ಮೇಲೆ ವಿಪುಲ ಶಿಷ್ಯ ವಾತ್ಸಲ್ಯ. ಇವರ ವಿಶ್ವಾಸದಿಂದ ಪೀರರಿಗೆ ಅಲ್ಪಸಂಖ್ಯಾತ ಕೋಮಿನವೆನೆಂಬ ಆಧಾರದ ಮೇಲೆ ಫ್ರೀ ಸ್ಟೂಡೆಂಟ್‌ ಷಿಪ್‌ ಆಗಿತ್ತು, ಎಂದರೆ ಫೀಸ್‌ ಕೊಡಬೇಕಾಗಿರಲಿಲ್ಲ ಮತ್ತು ಸರ್ಕಾರದ ವಿದ್ಯಾರ್ಥಿವೇತನ ದೊರಕಿತ್ತು. ಗುರುಗಳಾದ ವೆಂಕಟರಾಮಾ ಶಾಸ್ತ್ರಿಗಳ ಮಾತನ್ನು ಪೀರರು ಎಂದೂ ಮೀರುತ್ತಿರಲಿಲ್ಲ.

ವೆಸ್ಲಿನ್‌ ಮಿಷನ್‌ ಹೈಸ್ಕೂಲಿನಲ್ಲಿ ಪ್ರತಿದಿನ ತರಗತಿಗಳು ಆರಂಭವಾಗುವುದಕ್ಕೆ ಮುಂಚೆ ಶಾಲೆಯ ಎಲ್ಲ ವಿದ್ಯಾರ್ಥಿಗಳು ಕೂಡಿ ಸಾಮೂಹಿಕ ಪ್ರಾರ್ಥನೆ ನಡೆಸುವುದು ಶಿಸ್ತಿನ ಒಂದು ನಿಯಮವಾಗಿತ್ತು. ಪ್ರಾರ್ಥನೆಯ ನಂತರ ಮುಖ್ಯೋಪಾಧ್ಯಾಯರು ಅಂದಿನ ಯಾವುದಾದರೂ ಪ್ರಚಲಿತ ಸುದ್ದಿಯ ಬಗ್ಗೆ ವಿಚಾರ ಪರಿಚಯ ಮಾಡಿಕೊಡುವುದೂ ವಾಡಿಕೆ.

ಆಗ ಭಾರತದ ಸ್ವಾತಂತ್ಯ್ರಕ್ಕಾಗಿ ಚಳವಳಿ ನಡೆಯುತ್ತಿದ್ದ ಕಾಲ. ಮಹಾತ್ಮ ಗಾಂಧಿಯವರು ದೇಶದ ಮಹಾನಾಯಕರಾಗಿ, ಸಕಲ ಭಾರತೀಯರ ಮೆಚ್ಚಿನ ಮುಂದಾಳಾಗಿದ್ದರು.

ಅದೊಂದು ದಿನ ಸಾಮೂಹಿಕ ಪ್ರಾರ್ಥನೆಯ ಅನಂತರ ಮುಖ್ಯೋಪಾಧ್ಯಾಯರು ರೆವರೆಂಡ್‌ ಬ್ರಂಟ್‌ ವಿಚಾರ ವಿಮರ್ಶೆ ಮಾಡುತ್ತಾ ಗಾಂಧೀಜೀಯವರ ತತ್ತ್ವವೊಂದನ್ನು ಟೀಕಿಸಿದರಲ್ಲದೆ ಗಾಂಧಿಜೀಯವರ ಹೆಸರನ್ನು ಹೇಳುವಾಗ ‘ಮಿಸ್ಟರ್ ಗಾಂಧಿ’ ಎಂದು ಹೇಳುತ್ತಿದ್ದರು.

ಗಾಂಧಿಜೀಯ ಪರಮ ಅಭಿಮಾನಿಗಳಾದ ಪೀರರು ಪ್ರಾರ್ಥನಾ ಸಭೆಯಲ್ಲಿ ಎದ್ದು ನಿಂತು, “ಗಾಂಧಿಜೀಯಗವರು ಹಿಂದೂಸ್ಥಾನದ ಮಹಾನಾಯಕರು. ನೀವು ಅವರನ್ನು ಮಹಾತ್ಮ ಗಾಂಧಿ ಎಂದೇ ಕರೆಯಬೇಕು” ಎಂದು ಮುಖ್ಯೋಪಾಧ್ಯಾಯರಿಗೆ ಹೇಳಿದರು.

ಪೀರರ ವರ್ತನೆಯಿಂದ ಸಭೆ ಸ್ತಬ್ಧವಾಯಿತು. ಅಪಮಾನಿತರಾದ ಮುಖ್ಯೋಪಾಧ್ಯಾಯರು ಏನೂ ಮಾತನಾಡದೆ ತಮ್ಮ ಕೋಣೆಗೆ ಹೊರಟು ಹೋದರು. ವಿದ್ಯಾರ್ಥಿಗಳೂ ಅಧ್ಯಾಪಕರೂ ತಮ್ಮ ತಮ್ಮ ತರಗತಿಗಳಿಗೆ ಹೋದರು.

ಪೀರರು ತಮ್ಮ ತರಗತಿಯಲ್ಲಿ ಕುಳಿತಿರುವಂತೆಯೇ ಮುಖ್ಯೋಪಾಧ್ಯಾಯರಿಂದ ಆಜ್ಞೆಯೊಂದು ಬಂತು.

ಉದ್ಧಟನದಿಂದ ನಡೆದುಕೊಂಡ ಪೀರರನು ಶಾಲೆಯಿಂದ ತೆಗೆದು ಹಾಕಲಾಗಿತ್ತು. ಅವರನ್ನು ತರಗತಿಯಿಂದ ಹೊರಕ್ಕೆ ಕಳುಹಿಸಲಾಯಿತು!

‘ನೀವು ಗಾಂಧೀಜಿಯನ್ನು ಮಹಾತ್ಮ ಗಾಂಧಿ ಎಂದೇ ಕರೆಯಬೇಕು’

ಇತರ ವಿದ್ಯಾರ್ಥಿಗಳು ಇದರಿಂದ ಕುಪಿತರಾಗಿ ಮುಷ್ಕರ ನಡೆಸಲು ಸನ್ನಾಹ ಮಾಡಿದರು. ಸಂಧಾನದ ಪ್ರಯತ್ನ ನಡೆಯಿತು. ಪೀರರು ಕ್ಷಮಾಪಣೆ ಕೇಳಬೇಕೆಂದು ಮುಖ್ಯೋಪಾಧ್ಯಾಯರ ಷರತ್ತು. “ಮಹಾತ್ಮ ಗಾಂಧಿಯವರನ್ನು ಅಪಮಾನಗೊಳಿಸಿರುವ ಅವರು ಕ್ಷಮೆ ಕೇಳಲಿ, ನಾನು ಕ್ಷಮೆ ಕೇಳುವುದಿಲ್ಲ” ಎಂದು ಪೀರರು ಖಡಾಖಂಡಿತವಾಗಿ ಹೇಳಿಬಿಟ್ಟರು.

ಪರಿಸ್ಥಿತಿ ಉಗ್ರವಾಯಿತು. ನಡೆಯಲಿದ್ದ ಮುಷ್ಕರವನ್ನೂ ಪೀರರ ಶಿಕ್ಷಣ ಭವಿಷ್ಯವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಪೀರರ ನೆಚ್ಚಿನ ಗುರುಗಳಾದ ವೆಂಕಟರಾಮಾ ಶಾಸ್ತ್ರಿಗಳು ಪೀರರ ಮನವೊಲಿಸಿ ಅವರಿಂದ ಕ್ಷಮೆ ಕೇಳಿಸಿದರು.

ನಾಟಕದ ಕರೆ

ವೆಸ್ಲಿನ್‌ ಮಿಷನ್‌ ಹೈಸ್ಕೂಲಿನಲ್ಲಿ ಪೀರರ ಪ್ರೌಢ ಶಿಕ್ಷಣ ಮುಂದುವರಿಯುತ್ತಿತ್ತು. ಶಾಲೆಯ ಪಾಠಕ್ಕೆ ಬೂದಿ ಕವಿಯುತ್ತಿತ್ತು. ಪೀರರ ಬದುಕಿನ ಶಾಶ್ವತ ಪಾಠಗಳಾಗಿದ್ದ ಸಂಗೀತ ಮತ್ತು ನಾಟಕ ಅಭಿನಯ ಕಲೆಯ ಪಠ್ಯಕ್ಕೆ ಕವಿದಿದ್ದ ಬೂದಿ ಕಾಲದ ಗಾಳಿಗೆ ಹಾರಿ ಹೋಗುತ್ತಲಿತ್ತು!

ಪ್ರೌಢಶಾಲೆಯನ್ನು ಪ್ರವೇಶಿಸಿದ ಪೀರರಿಗೆ ಸಾಕಷ್ಟು ಸ್ವಾತಂತ್ಯ್ರ ಪ್ರಾಪ್ತವಾಗಿತ್ತು. ಅವರು ಅಜ್ಜಿಯನ್ನು ಆಗಲೇ ಕಳೆದುಕೊಂಡಿದ್ದರು. ಶಿವರಾಮಪೇಟೆಯ ಬಕ್ಷಿ ಬಸಪ್ಪಾಜಿ ಮನೆ ಮಹಡಿಯಲ್ಲಿ ಸಹಪಾಠಿಯೊಬ್ಬನೊಡನೆ ವಾಸಿಸುತ್ತಿದ್ದರು. ಅವರು ‘ಮನೆ’ ಎಂಬುದರ ಬಂಧನದಿಂದ ಹೊರಬಂದುಬಿಟ್ಟಿದ್ದರು.

ಕರ್ನಾಟಕದ ಅದ್ವಿತೀಯ ಆಚಾರ್ಯ ಕಲಾವಿದರಾದ ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರು ಆಗ ಮೈಸೂರಿನ ಶಿವರಾಮಪೇಟೆಯ ರಂಗಮಂದಿರದಲ್ಲಿ ನಿರಂತರವಾಗಿ ನಾಟಕಗಳನ್ನು ಅಭಿನಯಿಸುತ್ತಿದ್ದರು. ಇದು ಪೀರರಿಗೆ ಸುಗ್ಗಿಯನ್ನುಂಟು ಮಾಡಿತ್ತು. ನಾಟಕದ ದಾಹ; ದೊಡ್ಡ ನಟನಾಗಬೇಕೆಂಬ ಹಂಬಲ; ಹಿರಿಯರಿಂದ ಕಲಿಯಬೇಕೆಂಬ ಆಸಕ್ತಿ. ಪೀರರು ವರದಾಚಾರ್ಯರ ಪ್ರತಿಯೊಂದು ನಾಟಕಕ್ಕೂ ಹೋಗಿ ಆ ಪಾತ್ರಗಳನ್ನು ಮನನ ಮಾಡಿಕೊಳ್ಳುತ್ತಿದ್ದರು. ಪೀರರಿಗೆ ಆಗ ಇನ್ನೂ ಹದಿನೈದರ ಹರೆಯ. ನಾಟಕದಲ್ಲಿ ಒಮ್ಮೆ ಕಂಡದ್ದನ್ನು, ಕೇಳಿದ್ದನ್ನು ಅಚ್ಚಳಿಯದಂತೆ ಮನಸ್ಸಿನ ಮೇಲೆ ಮುದ್ರಿಸಿಕೊಂಡು ಬಿಡುವಂತಹ ಅಪೂರ್ವ ಗ್ರಹಣ ಶಕ್ತಿ.

ವರದಾಚಾರ್ಯರು ‘ಶಾಕುಂತಲ’, ‘ಮನ್ಮಥ ವಿಜಯ’, ‘ರತ್ನಾವಳಿ’, ‘ವಿರಾಟಪರ್ವ’ ಮತ್ತು ‘ನಿರುಪಮ’ ಮೊದಲಾದ ತಮ್ಮ ಜನಪ್ರಿಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಈ ನಾಟಕಗಳ ವೀಕ್ಷಣೆ ಪೀರರ ಅಭಿನಯ ಕಲಾವೃತ್ತಿಯನ್ನು ಪ್ರಚೋದಿಸುತ್ತಿದ್ದವು.

ನಾಟಕ ರಂಗಕ್ಕೆ ಪ್ರವೇಶ

ನಾಟಕ ಜೀವನಕ್ಕೆ ಕಾಲಿಡುವ ಸಲುವಾಗಿ ಪೀರರು ಶಿಕ್ಷಣಕ್ಕೆ ಮುಕ್ತಾಯ ಹಾಡಿದರು. ಎಸ್‌. ಎಸ್‌. ಎಲ್‌.ಸಿ.ಯೇ ಅವರು ಮುಟ್ಟಿದ ಕಡೆಯ ಪರೀಕ್ಷೆಯಾಯಿತು.

೧೯೧೫ರಲ್ಲಿ ಮೈಸೂರಿನಲ್ಲಿ ಪೀರರು ಗಿರಿಧರಲಾಲರ ನಾಟಕ ಸಂಸ್ಥೆಯನ್ನು ಸೇರಿಕೊಂಡರು. ಅವರ ರಂಗ ಜೀವನದ ಪ್ರಥಮ ಅಧ್ಯಾಯ ಇದು.

ಗಿರಿಧರಲಾಲರ ಸಂಸ್ಥೆಯ ನಾಟಕಗಳಲ್ಲಿ ಪೀರರು ಪಾತ್ರಗಳನ್ನು ಅಭಿನಯಿಸಲು ಆರಂಭಿಸಿದರು. ಈ ಕಂಪೆನಿಯಲ್ಲಿ ಇವರು ಸಾಮಾನ್ಯವಾಗಿ ಹಾಸ್ಯದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಸಂಸ್ಥೆಯ ‘ಕೃಷ್ಣ ಲೀಲಾ’ ನಾಟಕದಲ್ಲಿ ಬಾಲಕೃಷ್ಣನ ಆಪ್ತ ಗೆಳೆಯ ವಿಜಯ (ಮಕರಂದ)ನ ಪಾತ್ರವನ್ನು ಪೀರರು ಅಮೋಘವಾಗಿ ಅಭಿನಯಿಸುತ್ತಿದ್ದರು. ಈ ಪಾತ್ರ ಮೈಸೂರಿನಲ್ಲಿ ತುಂಬಾ ಜನಮನ್ನಣೆಯನ್ನು ಪಡೆಯಿತು. ಈ ಪಾತ್ರದಿಂದ ಪೀರರ ಅಭಿನಯ ಪ್ರತಿಭೆಯನ್ನು ಗುರುತಿಸಿದ ಮಹಾಜನತೆ ಈ ಮುಸ್ಲಿಮ್‌ ಕಲಾವಿದನ ಪಾತ್ರಾಭಿನಯವನ್ನು ಮನಸಾರೆ ಶ್ಲಾಘಿಸಿತು. ಈ ಉತ್ತೇಜನದಿಂದ ಪೀರರ ಉತ್ಸಾಹಕ್ಕೆ ಇನ್ನೆರಡು ರೆಕ್ಕೆ ಮೂಡಿದಂತಾಯಿತು. ಆಗ ಪೀರರಿಗೆ ಕೇವಲ ೧೯ ವರ್ಷ ವಯಸ್ಸು.

ಗಿರಿಧರಲಾಲರ ನಾಟಕ ಸಂಸ್ಥೆಯಲ್ಲಿ ಸುಮಾರು ಐದು ವರ್ಷಗಳ ಕಾಲ ನಟರಾಗಿ ಕೆಲಸ ಮಾಡಿದ ಮಹಮದ್‌ ಪೀರರು ಆ ಕಂಪೆನಿಯ ‘ಕೃಷ್ಣಲೀಲಾ’, ‘ಕೃಷ್ಣತುಲಾಭಾರತ’, ‘ಕೃಷ್ಣ ಪಾರಿಜಾತ’, ‘ಶನಿಪ್ರಭಾವ’ ಮತ್ತು ‘ಮನೋವಿಜಯ’ ನಾಟಕಗಳಲ್ಲಿ ಹಾಸ್ಯ ಪಾತ್ರಗಳನ್ನು ಅಭಿನಯಿಸಿ, ಜನರ ಮೆಚ್ಚುಗೆಯನ್ನು ಪಡೆದುಕೊಂಡದ್ದೇ ಅಲ್ಲದೆ, ಭವಿಷ್ಯ ಸಾಧನೆಗಾಗಿ ಸಾಕಷ್ಟು ಅನುಭವವನ್ನು ಗಳಿಸಿಕೊಂಡರು.

ಗಿರಿಧರಲಾಲರ ಕಂಪೆನಿಯಲ್ಲಿ ನಾಟಕಗಳನ್ನು ಪ್ರದರ್ಶಿಸುವುದಕ್ಕೆ ಒಂದು ನೀತಿ, ನಿಯಮಗಳೇನೂ ಇರಲಿಲ್ಲ. ಅವರು ಮೈಸೂರನ್ನು ಬಿಟ್ಟು ಸಾಮಾನ್ಯವಾಗಿ ಹೊರಗೆಲ್ಲಿಯೂ ನಾಟಕಗಳನ್ನು ಆಡುತ್ತಿರಲಿಲ್ಲ. ನಟರ ಸಂಭಾವನೆಯ ಪಾವತಿಯಲ್ಲೂ ಗೊತ್ತು ಗುರಿಗಳಿರಲಿಲ್ಲ. ಇವೆಲ್ಲದರಿಂದ ಬೇಸರಗೊಂಡಿದ್ದ ಪೀರರು ಈ ಕಂಪೆನಿಯನ್ನು ಬಿಟ್ಟು ಬೇರೆ ಯಾವುದಾದರೂ ವ್ಯವಸ್ಥಿತ ವೃತ್ತಿ ನಾಟಕ ಮಂಡಲಲಿಯನ್ನು ಸೇರಲು ಸನ್ನಾಹ ನಡೆಸುತ್ತಿದ್ದರು.

ವೃತ್ತಿ ಸಂಸ್ಥೆಗೆ ಪ್ರವೇಶ

‘ಭಾರತ ಜನ ಮನೋಲ್ಲಾಸಿನಿ’ ನಾಟಕ ಮಂಡಲಿ-ಇದು ಪೀರರು ಸೇರಿದ ಮೊದಲನೆಯ ವೃತ್ತಿ ನಾಟಕ ಸಂಸ್ಥೆ; ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದ ನಾಟಕ ಕಂಪೆನಿ.

ಭಯಾನಕ ಪಾತ್ರಗಳ ನಿರ್ವಹಣೆಯಲ್ಲಿ ಸಿದ್ಧಹಸ್ತರಾಗಿ ‘ನಟ ಭಯಂಕರ’ ಎಂದು ಜನತಾ ಪ್ರಶಸ್ತಿಯನ್ನು ಪಡೆದಿದ್ದ ಗಂಗಾಧರ ರಾಯರು ಮತ್ತು ಗುರುಕಾರ್ ಯಜ್ಞೇಶ್ವರ ಶಾಸ್ತ್ರಿಗಳು ಜೊತೆಗೂಡಿ ಈ ನಾಟಕ ಕಂಪೆನಿಯನ್ನು ಕಟ್ಟಿದ್ದರು. ಸಂಸ್ಥೆಯ ಕಷ್ಟ ನಷ್ಟಗಳಿಗೂ ಸಹ ಇಬ್ಬರೂ ಸಮಭಾಗಿಗಳಾಗಿದ್ದರು.

೧೯೨೦ರಲ್ಲಿ ಮಹಮದ್‌ ಪೀರರು ಈ ಸಂಸ್ಥೆಯನ್ನು ಸೇರಿದರು. ಇವರ ಮಿತ್ರ ಎಚ್‌.ಎಲ್‌.ಎನ್‌. ಸಿಂಹ ಅವರೂ ಇದೇ ಸಂಸ್ಥೆಯಲ್ಲಿದ್ದರು. ಆಗ ಈ ಸಂಸ್ಥೆಯು ಬೆಂಗಳೂರಿನಲ್ಲಿ ಮೊಕ್ಕಾಂ ಮಾಡಿ, ತುಳಸಿ ತೋಟಂ ರಂಗಮಂದಿರದಲ್ಲಿ ನಾಟಕಗಳನ್ನು ಅಭಿನಯಿಸುತ್ತಿದ್ದಿತು.

ಈ ಕಂಪೆನಿಯಲ್ಲಿ ‘ಕಂಸವಧೆ’, ‘ಕಾಳಿದಾಸ’, ‘ಪ್ರಭಾಮಣಿ ವಿಜಯ’, ‘ಸುಭದ್ರಾ ಕಲ್ಯಾಣ’, ‘ರಾಮಾಂಜನೇಯ ಯುದ್ಧ’, ‘ಬಕಾವಲಿ’ ಮತ್ತು ‘ಸದಾರಮೆ’ ಮೊದಲಾದ ನಾಟಕಗಳನ್ನು ಅಭಿನಯಿಸಲಾಗುತ್ತಿತ್ತು. ಇವೆಲ್ಲವೂ ಮಾಮೂಲಿಯಾಗಿದ್ದ ಹಳೆಯ ನಾಟಕಗಳು.

ಈ ಕಂಪೆನಿಯ ನಾಟಕಗಳಲ್ಲಿಯೂ ಪೀರರು ಹಾಸ್ಯಪಾತ್ರಗಳನ್ನು ಅಭಿನಯಿಸಬೇಕಾಗಿತ್ತು. ‘ಸದಾರಮೆ’ ನಾಟಕದಲ್ಲಿ ಕಳ್ಳ, ‘ಕಾಳಿದಾಸ’ ನಾಟಕದಲ್ಲಿ ಕುರುಬ, ‘ಪ್ರಭಾಮಣಿ ವಿಜಯ’ದಲ್ಲಿ ವಿರೋಚನ ಮತ್ತು ‘ಸುಭದ್ರಾ ಕಲ್ಯಾಣ’ದಲ್ಲಿ ಬ್ರಾಹ್ಮಣನ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಹಳೆಯ ಸತ್ತ್ವಹೀನ ಪಾತ್ರಗಳಿಗೇ ಪೀರರು ತಮ್ಮ ಪ್ರತಿಭೆ ಮತ್ತು ಮಾತುಗಾರಿಕೆಯಿಂದ ಜೀವ ತುಂಬಿ ಪ್ರೇಕ್ಷಕರನ್ನು ಆನಂದಪಡಿಸಿ, ಅವರ ಮನ್ನಣೆಗೆ ಪಾತ್ರರಾಗುತ್ತಿದ್ದರು.

ಗಂಗಾಧರರಾಯರಿಗೆ ಪೀರರ ಪಾತ್ರ, ಪ್ರತಿಭೆ,  ನಡೆ ನುಡಿ, ಸದಾಚಾರಗಳನ್ನು ಕಂಡು ಪರಮ ಪ್ರೀತಿ; ಗೌರವ. ಅವರು ಕೇವಲ ನಟರಾಗಿದ್ದ ಪೀರರನ್ನು ಕಂಪೆನಿಯ ನಿರ್ದೇಶಕರ ಪದವಿಗೆ ಏರಿಸಿದರು. ಕಂಪೆನಿಯ ಆಡಳಿತ ನಿರ್ವಹಣೆಯನ್ನೂ ಅವರಿಗೆ ವಹಿಸಿಕೊಟ್ಟರು.

ಪೀರರ ನಿರ್ದೇಶನದಲ್ಲಿ ಕಂಪೆನಿಯ ನಾಟಕಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಲು ಸಾಧ್ಯವಾಯಿತು; ಅವರ ಆಡಳಿತ ನಿರ್ವಹಣೆಯಿಂದ ಕಂಪೆನಿಯ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಶಿಸ್ತು ಮತ್ತು ವ್ಯವಸ್ಥೆ ಮೂಡಿದವು.

ಶ್ರೋತ್ರೀಯರಾದ ಗಂಗಾಧರರಾಯರು ಈ ಮುಸ್ಲಿಮ್‌ ಯುವಕನನ್ನು ‘ದೀಕ್ಷಿತ’ ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. ಇದರಿಂದಾಗಿ ಪೀರರು ಇತರ ಅನೇಕರಿಗೂ ‘ದೀಕ್ಷಿತ’ರಾಗಿಬಿಟ್ಟಿದ್ದರು.

‘ಷಹಜಹಾನ್’ ನಾಟಕದಲ್ಲಿ ದಾರಾನ ಪಾತ್ರ

 

‘ಗೌತಮ ಬುದ್ಧ’ ನಾಟಕದಲ್ಲಿ ಬುದ್ಧನ ಪಾತ್ರ

ಹೊಸತನದ ಹಂಬಲ

ಗಂಗಾಧರರಾಯರ ಕಂಪೆನಿಯಲ್ಲಿ ಪೀರರು ನಟರಾಗಿ ಅಭಿನಯಿಸುತ್ತಿದ್ದರು. ಕೀರ್ತಿಯೂ ದೊರಕುತ್ತಿತ್ತು. ಸಂಬಳವೂ ಸಿಕ್ಕುತ್ತಿತ್ತು. ಕರ್ನಾಟಕದ ಪ್ರವಾಸವೂ ನಡೆದಿತ್ತು. ಆದರೆ ಪೀರರಿಗೆ ಇದಾವುದರಿಂದಲೂ ತೃಪ್ತಿ ದೊರಕಿರಲಿಲ್ಲ. ಅವರ ಮನಸ್ಸಿನ ಆಶೋತ್ತರ ಇನ್ನೂ ಕನಸಾಗಿಯೇ ಉಳಿದು ಅವರು ಒಳಗೇ ಕೊರಗುತ್ತಿದ್ದರು.

‘ಹಳೆಯ ಸಂಪ್ರದಾಯಗಳಿಗೇ ಅಂಟಿಕೊಂಡಿರುವ ಕನ್ನಡ ರಂಗಭೂಮಿಯನ್ನು ಮೇಲ್ಮಟ್ಟಕ್ಕೆ ತರಬೇಕು. ಪೌರಾಣಿಕ ನಾಟಕಗಳಿಗೆ ಸ್ವಲ್ಪ ವಿರಾಮವನ್ನು ಕೊಟ್ಟು ಹೊಸ ಹೊಸ ಸಾಮಾಜಿಕ, ಐತಿಹಾಸಿಕ ನಾಟಕಗಳನ್ನು ರಂಗಭೂಮಿಗೆ ತರಬೇಕು. ಈ ಪ್ರಯೋಗಗಳನ್ನು ಬೇರೆಯವರ ಕಂಪೆನಿಯಲ್ಲಿ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ನಾನೇ ಸ್ವಂತ ಕಂಪೆನಿಯೊಂದನ್ನು ಸ್ಥಾಪಿಸಬೇಕು. ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಬೇಕು….’

ಮಹಮದ್‌ ಪೀರರು ಹಗಲು ರಾತ್ರಿ ಇದೇ ಚಿಂತೆಯಲ್ಲಿರುತ್ತಿದ್ದರು; ತಮ್ಮ ಯೋಜನೆಯನ್ನು ಯಾವ ರೀತಿ ಸಾಧಿಸಬಹುದೆಂಬುದನ್ನೂ ಯೋಚುಸುತ್ತಲಿದ್ದರು.

ಗಂಗಾಧರರಾಯರ ಕಂಪೆನಿಯಲ್ಲಿ ಪೀರರು ಎಂಟು ವರ್ಷ ಕಳೆದಿದ್ದರು. ಅದೇ ಹಳೆಯ ನಾಟಕ; ಅದೇ ಹಳೆಯ ಪಾತ್ರ. ಅವರಿಗೆ ಸಾಕುಸಾಕಾಗಿ ಹೋಗಿತ್ತು. ಕಂಪೆನಿಯನ್ನು ಬಿಟ್ಟುಬಿಡಬೇಕು, ಮಿತ್ರರ ಸಹಕಾರದಿಂದ ಸ್ವಂತ ಕಂಪೆನಿಯನ್ನು ಕಟ್ಟಬೇಕು. ಇದು ಪೀರರ ನಿತ್ಯಮಂತ್ರವಾಯಿತು.

ಷಹಜಹಾನ್

ಸಂಸ್ಥೆಯನ್ನು ಬಿಡುವ ಮುನ್ನ ಗಂಗಾಧರರಾಯರ ಕಂಪೆನಿಯಲ್ಲಿ ಒಂದಾದರೂ ಹೊಸ ನಾಟಕವನ್ನು ಅಭಿನಯಿಸಬೇಕೆಂದು ಅಪೇಕ್ಷಿಸಿ, ಇದನ್ನು ರಾಯರೊಡನೆ ಮಾತನಾಡಿ ಒಪ್ಪಿಸಿದರು.

ಬಂಗಾಳಿಯ ನಾಟಕಕಾರ ದ್ವಿಜೇಂದ್ರಲಾಲ್‌ ರಾಯ್‌ ಅವರು ಬರೆದಿದ್ದ ‘ಷಹಜಹಾನ್‌’ ಸೊಗಸಾದ ಚಾರಿತ್ರಿಕ ನಾಟಕವಾಗಿತ್ತು. ಬಿ. ಪುಟ್ಟಸ್ವಾಮಯ್ಯನವರು ಇದರ ಕನ್ನಡ ರೂಪಾಂತರವನ್ನು ಸಿದ್ಧಪಡಿಸಿದ್ದರು. ಪೀರರು ಈ ನಾಟಕವನ್ನು ತರಿಸಿಕೊಂಡರು.

ಕಂಪೆನಿ ಚಿತ್ರುದುರ್ಗದಲ್ಲಿ ಇದ್ದಾಗ ‘ಷಹಜಹಾನ್‌’ ನಾಟಕದ ಅಭ್ಯಾಸ ಪ್ರಾರಂಭವಾಯಿತು. ಇದರಲ್ಲಿ ಪೀರರದು ದಾರಾನ ಪಾತ್ರ. ಒಂದು ತಿಂಗಳ ಅಭ್ಯಾಸದ ಅನಂತರ ಚಿತ್ರದುರ್ಗದಲ್ಲಿಯೇ ಪ್ರಥಮ ಬಾರಿಯಾಗಿ ಈ ಹೊಸ ನಾಟಕವನ್ನು ಪ್ರಯೋಗಿಸಲಾಯಿತು. ಪೀರರ ಕರುಣಾಜನಕ ದಾರಾನ ಪಾತ್ರ ಜನಮೆಚ್ಚುಗೆಯನ್ನು ಪಡೆಯಿತು. ಚಿತ್ರದುರ್ಗದಲ್ಲಿ ಈ ನಾಟಕವನ್ನು ಹತ್ತಾರು ದಿನಗಳ ಕಾಳ ಪ್ರದರ್ಶಿಸಲಾಯಿತು.

ಮುಂದೆ ಗಂಗಾಧರರಾಯರ ಕಂಪೆನಿ ಚಿತ್ರದುರ್ಗದಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿತು. ಮಹಮದ್‌ ಪೀರರು ಕಂಪೆನಿಯನ್ನು ಬಿಟ್ಟುಬಿಟ್ಟರು.

ಸ್ವಂತ ಕಂಪನಿಯ ಉದಯ

ಗಂಗಾಧರರಾಯರ ಕಂಪೆನಿಯನ್ನು ಬಿಟ್ಟ ಪೀರರು ಬೆಂಗಳೂರಿನಲ್ಲಿ ಕಲೆತಿದ್ದರು. ಮೊದಲೇ ಯೋಚಿಸಿದ್ದಂತೆ ಪೀರರು ತಮ್ಮ ಸಹನಟರುಗಳ ಸಹಕಾರದಿಂದ ೧೯೩೦ರಲ್ಲಿ ತಮ್ಮದೇ ಆದ ಸ್ವಂತ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು. ಇದಕ್ಕೆ ‘ಚಂದ್ರಕಲಾ ನಾಟಕ ಮಂಡಲಿ’ ಎಂದು ನಾಮಕರಣ ಮಾಡಿದರು.

‘ಚಂದ್ರಕಲಾ ನಾಟಕ ಮಂಡಲಿ’ಯ ಉದಯವು, ಪೀರ್ ಸಾಹೇಬರ ಬಣ್ಣದ ಬದುಕಿಹನ ಶುಭೋದಯವೂ ಹೌದು. ಹೊಸಹೊಸ ಪ್ರಯೋಗಗಳಿಂದ ಕನ್ನಡದ ವೃತ್ತಿ ರಂಗಭೂಮಿಗೆ ನೂತನ ಚೈತನ್ಯ ತುಂಬಲು ಅವರು ಸಂಕಲ್ಪಿಸಿದ್ದರು.

ಪೀರರು ತಮ್ಮ ಹೊಸ ಕಂಪನಿಯ ಪ್ರಥಮ ನಾಟಕವಾಗಿ ‘ಷಹಜಹಾನ್‌’ನನ್ನೇ ಆಯ್ಕೆ ಮಾಡಿಕೊಂಡಿದ್ದರು. ಪಾತ್ರಕ್ಕೆ ತಕ್ಕ ನಟರ ಆಯ್ಕೆ, ಪರಿಪೂರ್ಣವಾದ ಅಭ್ಯಾಸ, ಪಾತ್ರಕ್ಕೆ ಸೂಕ್ತವಾದ ವೇಷಭೂಷಣಗಳು, ಐತಿಹಾಸಿಕ ನಾಟಕಕ್ಕೆ ಸಮಂಜಸವಾದ ರಂಗಸಜ್ಜಿಕೆ-ಈ ಎಲ್ಲ ಸಂಗತಿಗಳಲ್ಲೂ ಎಚ್ಚರಿಕೆಯನ್ನು ವಹಿಸಿ ಪೀರರು ನಾಟಕವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದರು.

ಬೆಂಗಳೂರಿನ ತುಳಸಿತೋಟಂ ಸಮೀಪದ ರಂಗಮಂದಿರದಲ್ಲಿ ‘ಚಂದ್ರಕಲಾ ನಾಟಕ ಮಂಡಲಿ’ಯ ನಾಟಕಗಳು ಆರಂಭವಾದವು. ಮೊದಲ ದಿನ ಆಹ್ವಾನಿತ ಗಣ್ಯರಿಗಾಗಿಯೇ ಪ್ರತ್ಯೇಕ ಪ್ರದರ್ಶನವೊಂದನ್ನು ಏರ್ಪಡಿಸಲಾಗಿತ್ತು. ಅಂದು ಪೀರರು ದಾರಾನ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದರು. ನಾಟಕ ಮತ್ತು ಪೀರರ ಪಾತ್ರ ಪ್ರತಿಯೊಬ್ಬರ ಪ್ರಶಂಸೆಗೆ ಪಾತ್ರವಾಯಿತು. ಈ ನಾಟಕಕ್ಕೆ ಒಳ್ಳೆಯ ಉತ್ಪತ್ತಿಯೂ ದೊರೆಯಲಾರಂಭಿಸಿತು.

ಚಿರಸ್ಮರಣೀಯ ದಾರಾ

ಮೊಗಲ್‌ ಚಕ್ರವರ್ತಿ ಷಹಜಹಾನನ ಹಿರಿಯ ಮಗನೇ ‘ದಾರಾ’; ಈತನು ತತ್ತ್ವದರ್ಶಿ. ಸಂಸ್ಕೃತ, ಪಾರ್ಸಿ ಮತ್ತು ಅರಬ್ಬಿ ಭಾಷೆಗಳ ಪಂಡಿತ. ಉಪನಿಷತ್ತನ್ನು ಪರ್ಷಿಯನ್‌ ಭಾಷೆಗೆ ಅನುವಾದ ಮಾಡಿಸಿದ್ದವನು. ಹಿಂದೂ ಮುಸ್ಲಿಮರೆಂದರೆ ಸಮಾನ ಗೌರವ. ಮತೀಯ ವಿರೋಧಗಳನ್ನು ನಿವಾರಿಸಿ ಸಮಾನತೆ ಸ್ಥಾಪನೆಗೆ ಯತ್ನಿಸಿದವನು. ದಾರಾನ ಈ ಧಾರ್ಮಿಕ ಸ್ವಭಾವ ಅವನ ಮೂರು ಸೋದರರಿಗೆ ಸರಿಬೀಳಲಿಲ್ಲ. ಈ ಸೋದರರ ಪೈಕಿ ಧೂರ್ತನಾದ ಔರಂಗಜೇಬನು ತಂದೆ ಷಹಜಹಾನನ್ನು ಸೆರೆಯಲ್ಲಿಟ್ಟಿದ್ದನು. ಔರಂಗಜೇಬ್‌ ತನ್ನ ಸೋದರರಾದ ಷೂಜಾ ಮತ್ತು ಮುರಾದರ ನೆರವಿನಿಂದ ದಾರಾನ ಮೇಲೆ ಯುದ್ಧ ಹೂಡುತ್ತಾನೆ. ಸೋತು, ಕೈಸೆರೆ ಸಿಕ್ಕಿದ ದಾರಾನನ್ನು ದೆಹಲಿಗೆ ಕರೆತಂದು, ಧರ್ಮದ್ರೋಹದ ಆಪಾದನೆಗೆ ಗುರಿಪಡಿಸಿ, ತನ್ನ ಕಡೆಯವರಿಂದ ವಿಚಾರಣೆಯ ನಾಟಕವಾಡಿಸಿ ದಾರಾನಿಗ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತಾನೆ. ಕಟುಕರಿಂದ ಅವನನ್ನು ಕೊಲ್ಲಿಸುತ್ತಾನೆ.

ಪ್ರೇಕ್ಷಕರ ಕರುಳು ಮಿಡಿಯುವಂತೆ ಪೀರರು ದಾರಾನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ನಾಟಕವನ್ನು ಅಭಿನಯಿಸಿದ ಎಲ್ಲ ಕಡೆಗಳಲ್ಲೂ ದಾರಾನ ಪಾತ್ರ ಪೀರರಿಗೆ ಕೀರ್ತಿಯ ಕಿರೀಟವನ್ನು ತೊಡಿಸುತ್ತಿತ್ತು.

‘ಚಂದ್ರಕಲಾ ನಾಟಕ ಮಂಡಲಿ’ಯು ತನ್ನ ಉತ್ತಮ ನಾಟಕವಾದ ‘ಷಹಜಹಾನ್‌’, ಅಲ್ಲದೆ ಅಂದಿನ ಜನಪ್ರಿಯ ನಾಟಕಗಳಾದ ‘ಸದಾರಮೆ’, ‘ಪ್ರಭಾಮಣಿ ವಿಜಯ’, ‘ವೀರಸಿಂಹ ಚರಿತ್ರೆ’ಗಳನ್ನು ಅಭಿನಯಿಸುತ್ತಿತ್ತು. ಬೆಂಗಳೂರಿನಲ್ಲಿ ಪ್ರದರ್ಶನಗಳನ್ನು ಯಶಸ್ವಿಯಾಗಿ ಮುಗಿಸಿಕೊಂಡು ಪೀರರು ತಮ್ಮ ಕಂಪೆನಿಯೊಡನೆ ಕರ್ನಾಟಕದ ಪ್ರವಾಸವನ್ನು ಕೈಗೊಂಡರು.

ಎರಡು ವರ್ಷದ ಅವಧಿಯಲ್ಲಿ ಹೊಸೂರು, ಮೈಸೂರು, ಚಿಕ್ಕಬಳ್ಳಾಪುರ,ಚಿಂತಾಮಣಿ, ದೇವನಹಳ್ಳಿ, ತುಮಕೂರು ಮತ್ತು ಅರಸಿಕೆರೆಗಳಲ್ಲಿ ನಾಟಕಗಳನ್ನು ಅಭಿನಯಿಸಿಕೊಂಡು ೧೯೩೨ರಲ್ಲಿ ಹೊಳೆನರಸೀಪುರಕ್ಕೆ ಬಂದ ಪೀರ್ ಸಾಹೇಬರು, ಈ ಊರಿನಲ್ಲಿ ಕನ್ನಡ ರಂಗಭೂಮಿಗೆ ರಮ್ಯವಾದ ಸಾಮಾಜಿಕ ನಾಟಕವನ್ನು ಸಮರ್ಪಿಸಿದರು.

ಸಂಸಾರ ನೌಕೆ ಸುಂದರ

ಕನ್ನಡ ವೃತ್ತಿ ರಂಗಭೂಮಿಯಲ್ಲಿ ಸಾಮಾಜಿಕ ನಾಟಕಗಳ ಪರಂಪರೆಗೆ ನಾಂದಿ ಹಾಕಿದ ನಾಟಕ ‘ಸಂಸಾರ ನೌಕೆ’ ಎಂದರೆ ಅದು ಉತ್ಪ್ರೇಕ್ಷೆ ಅಲ್ಲ. ಸ್ವಯಂ ನಟರೂ ನಾಟಕಕಾರರೂ ಆದ ಎಚ್‌.ಎಲ್‌.ಎನ್‌. ಸಿಂಹ ಅವರು ಈ ನಾಟಕದ ಕರ್ತೃಗಳು.

ರಂಗಭೂಮಿಗೆ ಹೆಚ್ಚುಹೆಚ್ಚು ಕನ್ನಡ ಸಾಮಾಜಿಕ ನಾಟಕಗಳನ್ನು ತರಬೇಕೆಂಬ ಮಹೋದ್ದೇಶದಿಂದ ಪೀರರು ‘ಸಂಸಾರ ನೌಕೆ’ಯನ್ನು ರಂಗಭೂಮಿಗೆ ತಂದರು. ೧೯೩೨ರಲ್ಲಿ ಹೊಳೆನರಸೀಪುರದಲ್ಲಿ ಈ ನಾಟಕದ ಪ್ರಥಮ ಪ್ರದರ್ಶನವನ್ನು ಅಭಿನಯಿಸಲಾಯಿತು.

ಪೀರರು ನಾಟಕದ ಸುಂದರನ ಪಾತ್ರವನ್ನು ಅಭಿನಯಿಸುತ್ತಿದ್ದರು. ಸುಂದರ ವಿದ್ಯಾವಂತ; ಸಂಭಾವಿತ. ಬ್ಯಾರಿಸ್ಟರ್‌ರ ಪುತ್ರಿ ಸರಳೆಯನ್ನು ಪ್ರೇಮ ವಿವಾಹ ಮಾಡಿಕೊಂಡಿದ್ದುದಕ್ಕಾಗಿ ಮನೆಯಿಂದ ಹೊರಬೀಳಬೇಕಾಗುತ್ತದೆ. ನಿರುದ್ಯೋಗದ ಬೇಗೆಯಿಂದ ನರಳುವನು. ಬರಿಗೈಯಾದ ಸುಂದರನನ್ನು ಗೆಳೆಯರೂ ದೂರ ನೂಕುವರು. ಸುಂದರನಿಗೆ ಸಮಾಜ ಎಷ್ಟು ಅಸಹನೆ ಮತ್ತು ಕ್ರೌಯ್ರಗಳಿಂದ ತುಂಬಿದೆ ಎಂದು ಅನುಭವವಾಗುತ್ತದೆ. ಕಡೆಗೆ ಸಮಸ್ಯೆಗಳೆಲ್ಲವೂ ಪರಿಹಾರವಾಗಿ ಸುಂದರ ತನ್ನ ಮನೆಯ, ಆಸ್ತಿಯ ಒಡೆಯನಾಗುವನು.

ಬದುಕಿನ ನಾನಾ ಬಗೆಯ ಬವಣೆಗಳನ್ನು ನಿರೂಪಿಸುವಗ ಈ ಪಾತ್ರವನ್ನು ಪೀರರು ಅನುಭವಿಸಿ ಅಭಿನಯಿಸುತ್ತಿದ್ದರು. ನಿರುದ್ಯೋಗಿಯಾಗಿ ಮಾವನ ಮನೆಗೆ ಬಂದು ಅವಮಾನಿತವಾಗುವಾಗ, ಆಸರೆಗಾಗಿ ಉದ್ಯಾನವನದಲ್ಲಿ ಗೆಳೆಯರನ್ನು ಕಂಡು ಮಾತನಾಡಿಸಿ ಅವರಿಂದ ಮುಖಭಂಗಪಡಿಸಿಕೊಳ್ಳುವಾಗ ಪೀರರ ಅಭಿನಯ ಪ್ರೇಕ್ಷಕರ ಕಂಗಳಲ್ಲಿ ಕಣ್ಣೀರ ಕಾರಂಜಿಯನ್ನು ಪುಟಿಸುತ್ತಿತ್ತು. ಅವರು ಉದ್ಯಾನವನದಲ್ಲಿ ಠಕ್ಕ ಸ್ನೇಹಿತರ ಬಗ್ಗೆ ತಮಗೆ ತಾವೇ ಹೇಳಿಕೊಳ್ಳುತ್ತಿದ್ದ ಮಾತುಗಳು ಕೇಳಿದವರ ಮನಸ್ಸಿನಲ್ಲಿ ಎಂದೆಂದಿಗೂ ಹಸಿರಾಗಿ ನಿಲ್ಲುವಂತಹದು.

ಈ ನಾಟಕದಲ್ಲಿ ಸುಂದರನ ಪಾತ್ರಕ್ಕೆ ಪೋಷಕವಾಗಿ ಬರುತ್ತಿದ್ದ ಮಾಧು, ಡಿಕ್ಕಿ, ಆಚಾರ್ಯ ಶುಕದೇವ, ಜವಾನ ಸಿದ್ಧ, ಸರಳ, ಸುಶೀಲ, ಗಿರಿಜ ಮತ್ತು ದೊಡ್ಡಮ್ಮ-ಈ ಎಲ್ಲ ಪ್ರಾತ್ರಗಳೂ ನಾಟಕದ ಯಶಸ್ಸಿಗೆ ಸಹಕಾರಿಯಾಗಿದ್ದವು.

ಪೀರರ ‘ಚಂದ್ರಕಲಾ ನಾಟಕ ಮಂಡಲಿ’ಯು ಹೋದ ಸ್ಥಳಗಳಲ್ಲೆಲ್ಲ ‘ಸಂಸಾರ ನೌಕೆ’ ಜಯಭೇರಿ ಬಾರಿಸಿತು. ಕಂಪನಿಗೆ ಹೆಸರನ್ನೂ ತಂದುಕೊಟ್ಟಿತು; ಗಂಟನ್ನೂ ದೊರಕಿಸಿಕೊಟ್ಟಿತು.

‘ಚಂದ್ರಕಲಾ ನಾಟಕ ಮಂಡಲಿ’ಗೆ ಮಾಮೂಲಿ ನಾಟಕಗಳೊಡನೆ, ‘ಷಹಜಹಾನ್‌’ ಮತ್ತು ‘ಸಂಸಾರ ನೌಕೆ’-ಎರಡು ಹೊಸ ಯಶಸ್ವಿ ನಾಟಕಗಳೂ ಸೇರಿದ್ದರಿಂದ ಪೀರರು ಧೈರ್ಯವಾಗಿ ಹೊಸಹೊಸ ಮೊಕ್ಕಾಂಗಳನ್ನು ಮಾಡಿ ನಾಟಕಗಳನ್ನು ಅಭಿನಯಿಸುತ್ತಿದ್ದರು. ಹೊಳೆನರಸೀಪುರದಲ್ಲಿ ‘ಸಂಸಾರ ನೌಕೆ’ಯನ್ನು ರಂಗಭೂಮಿಗೆ ತಂದು, ತರುವಾಯ ಚನ್ನರಾಯಪಟ್ಟಣ, ಬೆಂಗಳೂರು, ತುಮಕೂರು, ಹಾಸನ, ಸಕಲೇಶಪುರ, ಮಡಿಕೇರಿ, ಹುಣಸೂರು, ಮೈಸೂರು, ಮಂಡ್ಯ ತಿಪಟೂರು, ಕಡೂರು, ಶಿವಮೊಗ್ಗ, ತೀರ್ಥಹಳ್ಳಿ, ಉಡುಪಿಗಳಲ್ಲಿ ನಾಟಕಗಳನ್ನು ಆಡಿಕೊಂಡು ಪೀರರು ಮಂಗಳೂರಿಗೆ ಬಂದರು. ಅಲ್ಲಿ ಇನ್ನೊಂದು ಮಹೋನ್ನತ ನೂತನ ನಾಟಕ ಪ್ರದರ್ಶನಕ್ಕೆ ಭೂಮಿಕೆಯನ್ನು ಸಿದ್ಧಪಡಿಸಿಕೊಂಡರು.

ಗೌತಮ ಬುದ್ಧ

‘ಗೌತಮ ಬುದ್ಧ’ ನಾಟಕವೇ ಈ ಪ್ರಯೋಗ.

ಜಗತ್ತೆಲ್ಲ ಅಜ್ಞಾನದಲ್ಲಿ ಮಲಗಿರಲು ಬುದ್ಧನೊಬ್ಬ ಆ ಅಜ್ಞಾನದಿಂದ ಮೇಲೆದ್ದ, ಇತರರನ್ನೂ ಮೇಲೆಬ್ಬಿಸಲು.

ಪೌರಾಣಿಕವಾಗಿ ಬುದ್ಧನೊಬ್ಬ ಅವತಾರ ಪುರುಷ; ಐತಿಹಾಸಿಕವಾಗಿ ಮಹಾಜ್ಞಾನಿ; ಬೌದ್ಧಮತ ಸಂಸ್ಥಾಪಕ. ದುಃಖದ ಉಕ್ಕಿನ ಪಂಜರದಿಂದ ಮನುಷ್ಯ ಮುಕ್ತನಾಗಿ, ಶಾಂತಿಯನ್ನು ಕಂಡುಕೊಂಡು, ಸಾರ್ಥಕವಾಗಿ ಬದುಕುವ ಹಾದಿಯನ್ನು ತೋರಿಸಿದ ಮಹಾಗುರು.

ಬುದ್ಧನ ಮೊದಲಿನ ಹೆಸರು ಗೌತಮ. ಈತ ಶುದ್ಧೋದನ ಮಹಾರಾಜನ ಮಗ. ಲೋಕದ ಸಂಕಷ್ಟವನ್ನು ಕಂಡ ದಿನ ಗೌತಮನು ಸಂಸಾರ ತ್ಯಜಿಸಿ ಸಂನ್ಯಾಸಿಯಾಗುವನೆಂದು ರಾಜಪುರೋಹಿತರು ಅವನ ಜಾತಕ ನೋಡಿ ನುಡಿದಿರುತ್ತಾರೆ. ಮಗನಿಗೆ ಕಷ್ಟಕಾರ್ಪಣ್ಯಗಳು ಗಮನಕ್ಕೆ ಬರುವುದೇ ಬೇಡವೆಂದು ಶುದ್ಧೋದನನು ಸಕಲ ಸುಖಗಳಿಂದ ಕೂಡಿದ ಪ್ರತ್ಯೇಕ ಅರಮನೆಯಲ್ಲಿ ಗೌತಮನನ್ನು ಇರಿಸುವನು. ವಯಸ್ಸಿಗೆ ಬಂದ ಮಗನಿಗೆ ಸುಂದರಿ ಯಶೋಧರೆಯನ್ನು ತಂದು ಮದುವೆ ಮಾಡುತ್ತಾನೆ. ಅವರಿಗೆ ಒಬ್ಬ ಮಗ; ಮಗುವಿಗೆ ರಾಹುಲ ಎಂದು ಹೆಸರಿಡುತ್ತಾರೆ. ಗೌತಮ ಒಮ್ಮೆ ಹೊರ ಜಗತ್ತನ್ನು ನೋಡಬಯಸುತ್ತಾನೆ. ತಂದೆಯ ಅನುಮತಿ ಪಡೆದು ನಗರ ಪ್ರದಕ್ಷಿಣೆ ಹಾಕುತ್ತಾನೆ. ಒಬ್ಬ ರೋಗಿ, ಒಬ್ಬ ಹಣ್ಣುಹಣ್ಣು ಮುದುಕ, ಒಂದು ಹೆಣ-ಇವನು ಕಾಣುವ ಈ ನೋಟಗಳಿಂದ ಬದುಕು ಎಷ್ಟು ನಶ್ವರ, ಎಷ್ಟು ದುಃಖಮಯ ಎಂಬುದು ಅರಿವಾಗುತ್ತದೆ. ಜಗತ್ತನ್ನು ದುಃಖದಿಂದ ಪಾರು ಮಾಡಲು ಪರಿಹಾರ ಕಂಡು ಹಿಡಿಯುವ ಸಲುವಾಗಿ ಅರಮನೆ, ಸಿಂಹಾಸನ, ಹೆಂಡತಿ, ಮಗ-ಎಲ್ಲ ತ್ಯಜಿಸುತ್ತಾನೆ. ಸಂನ್ಯಾಸಿಯಾಗಿ ಕಾಡಿಗೆ ತೆರಳಿ ಕಠಿಣ ತಪಶ್ಚರ್ಯೆಯಿಂದ ಸಾಧನೆ ಸಿದ್ಧಿಯಾಗಿ ಬುದ್ಧನಾಗುತ್ತಾನೆ. ಅನೇಕ ವರ್ಷಗಳ ನಂತರ ರಾಜಧಾನಿ ಕಪಿಲ ವಸ್ತುವಿಗೆ ಹಿಂತಿರುಗಿ ದರ್ಶನಕ್ಕೆ ಬಂದ ಪೂರ್ವಾಶ್ರಮದ ತಂದೆ, ಹೆಂಡತಿ ಮತ್ತು ಮಗನಿಗೆ ಬೌದ್ಧ ದೀಕ್ಷೆಯನ್ನು ನೀಡುವನು.

ಮಹಮದ್‌ ಪೀರರದು ಬುದ್ಧನ ಪಾತ್ರ. ರಂಗ ಜೀವನದಲ್ಲಿ ಅವರಿಗೆ ಕೀರ್ತಿಯ ಮಹಾ ಮಕುಟವನ್ನು ತೊಡಿಸಿ ಅವರನ್ನು ಕನ್ನಡ ರಂಗ ಇತಿಹಾಸದಲ್ಲಿ ಚಿರಸ್ಮರಣೀಯರನ್ನಾಗಿ ಮಾಡಿದ ದಿವ್ಯ ಪಾತ್ರ ಇದು.

ರಂಗತಪಸ್ವಿ

ಬಗೆಬಗೆಯ ಮಾನಸಿಕ ಪರಿಸ್ಥಿತಿಯನ್ನು ಅಭಿವ್ಯಕ್ತಗೊಳಿಸಬೇಕಾದ ಈ ಪಾತ್ರದ ಅಭಿನಯ ನಿಜವಾಗಿಯೂ ಒಬ್ಬ ರಂಗತಪಸ್ವಿಗಲ್ಲದೆ ಮತ್ತೊಬ್ಬರಿಗೆ ಸಾಧ್ಯವಿರಲಿಲ್ಲ. ತಾರುಣ್ಯದಲ್ಲಿ ಸಿರಿಸಂಪದದ ನಡುವೆ ಸಂತೋಷ; ನಗರ ಪ್ರದಕ್ಷಿಣೆಯಲ್ಲಿ ಜಗತ್ತಿನ ಭಾರಿ ದುಃಖಕ್ಕಾಗಿ ಮಾನಸಿಕ ಹೊಯ್ದಾಟ; ಪ್ರೇಮದ ಹೆಂಡತಿಯನ್ನೂ ಮುದ್ದು ಮಗನನ್ನೂ ಅರಮನೆಯನ್ನೂ ತನ್ನ ಕುದುರೆಯನ್ನೂ ಪ್ರಾಮಾಣಿಕ ಸೇವಕ ಚೆನ್ನನನ್ನೂ ಬಿಟ್ಟು ಕಪಿಲವಸ್ತುವಿನಿಂದ ಕಾಲ್ತೆಗೆಯುವ ಸಮಯದ ಕಠೋರ ನಿರ್ಧಾರ; ತಪಸ್ಸಿಗೆ ಕುಳಿತಾಗ ಎಲ್ಲವನ್ನೂ ಮರೆತು ಏಕಾಗ್ರತೆ ಈ ವಿವಿಧ ಮಾನಸಿಕ ಸ್ಥಿತಿಗಳನ್ನು ಪೀರರು ಅಮೋಘವಾಗಿ ಅಭಿನಯಿಸುತ್ತಿದ್ದರು. ಪೀರರು ಈ ಪಾತ್ರದ ಅಭಿನಯದಿಂದ ಕೆಲವು ಗಂಟೆಗಳ ಕಾಲ ಬುದ್ಧನನ್ನು ಧರೆಗಿಳಿಸುತ್ತಿದ್ದರು; ಸ್ವಲ್ಪ ಸಮಯ ಕನ್ನಡ ರಂಗಭೂಮಿಯ ಮೇಲೆ ಬೌದ್ಧಯುಗವನ್ನು ಸ್ಥಾಪಿಸಿರುತ್ತಿದ್ದರು. ಇಂತಹ ನಟನನ್ನು ಪಡೆದ ನಾಡು ನಿಜಕ್ಕೂ ಧನ್ಯ.

೧೯೩೪ರಲ್ಲಿ ಪೀರರು ಮಂಗಳೂರಿನಲ್ಲಿ ‘ಗೌತಮ ಬುದ್ಧ’ ನಾಟಕದಲ್ಲಿ ಮೊದಲ ಬಾರಿಗೆ ಅಭಿನಯಿಸಿದರು. ‘ಷಹಜಹಾನ್‌’ ನಾಟಕವನ್ನು ಬರೆದ ಬಿ. ಪುಟ್ಟಸ್ವಾಮಯ್ಯನವರೇ ಈ ನಾಟಕವನ್ನು ಪೀರರ ‘ಚಂದ್ರಕಲಾ ನಾಟಕ ಮಂಡಲಿ’ಗೆ ಬರೆದುಕೊಟ್ಟಿದ್ದರು. ಎರಡು ತಿಂಗಳ ಕಾಲ ನಿರಂತರವಾಗಿ ನಾಟಕವನ್ನು ಅಭ್ಯಾಸ ಮಾಡಿ ಪ್ರದರ್ಶಿಸಿದ್ದರಿಂದ ನಾಟಕ ಅಚ್ಚುಕಟ್ಟಾಗಿ ಪರಿಣಾಮಕಾರಿಯಾಗಿತ್ತು.

‘ಗೌತಮ ಬುದ್ಧ’ ನಾಟಕವೂ ಕಂಪನಿಯ ಇನ್ನೊಂದು ರತ್ನವಾಯಿತು. ಪ್ರದರ್ಶಿಸಿದ ಕಡೆಗಳಲ್ಲೆಲ್ಲಾ ಈ ರತ್ನ ಬೆಳಗುತ್ತಲಿತ್ತು.

ನಾಟ್ಯಧುರಂಧರ

‘ಗೌತಮ ಬುದ್ಧ’ ನಾಟಕವನ್ನು ರಂಗಭೂಮಿಗೆ ತಂದ ಮರು ವರ್ಷ (೧೯೩೫) ಪೀರರು ಹಬ್ಬಳ್ಳಿಯಲ್ಲಿ ಯಶಸ್ವಿಯಾಗಿ ತಮ್ಮ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಪೀರರ ನಾಟಕಗಳು ಆ ಸುತ್ತಮುತ್ತಲಿನಲ್ಲಿ ಜನಪ್ರಿಯವಾಗಿದ್ದರಿಂದ ಎಲ್ಲ ಕಡೆಗಳಿಂದ ರಸಿಕರು ಬಂದು ಪ್ರತಿದಿನ ರಂಗಮಂದಿರ ಭರ್ತಿಯಾಗುತ್ತಿತ್ತು. ಕಾಲೇಜಿನ ಅಧ್ಯಾಪಕರುಗಳನ್ನೂ ವಿದ್ಯಾರ್ಥಿಗಳನ್ನೂ ಪೀರರ ನಾಟಕಗಳು ಆಕರ್ಷಿಸಿದ್ದವು.

ಪೀರರ ‘ಸಂಸಾರ ನೌಕೆ’ ನಾಟಕವನ್ನು ನೋಡಿ ಮೆಚ್ಚಿದವರಲ್ಲಿ ಅನೇಕ ಮಂದಿ ಜನನಾಯಕರೂ ಹಿರಿಯ ಸಾಹಿತಿಗಳೂ ಇದ್ದರು . ಒಂದು ದಿನ ನಾಟಕ ಮುಗಿದನಂತರ ಹಿರಿಯ ಕಾಂಗ್ರೆಸ್‌ ನಾಯಕರಾಗಿದ್ದ ಮುದವೀಡು ಕೃಷ್ಣರಾಯರು ರಂಗಭೂಮಿಯ ಮೇಲೆ ಬಂದು ಹುಬ್ಬಳ್ಳಿ-ಧಾರವಾಡಗಳ ನಾಗರಿಕರ ಪರವಾಗಿ ‘ನಾಟ್ಯಧುರಂಧರ’ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಪೀರರಿಗೆ ಇದು ಅನಿರೀಕ್ಷಿತ. ಪ್ರಶಸ್ತಿಯನ್ನೂ ಪದಕವನ್ನೂ ಕೊಡಲು ಮುದವೀಡು ಕೃಷ್ಣರಾಯರು ಬಂದಾಗ, “ಇದು ನನ್ನ ಯೋಗ್ಯತೆಗೆ ಮೀರಿದ್ದು, ನನಗೆ ಬೇಡ” ಎಂದುಬಿಟ್ಟರು; ಕೃಷ್ಣರಾಯರ ಮತ್ತು ಪ್ರೇಕ್ಷಕರ ಒತ್ತಾಯದಿಂದ ಸ್ವೀಕರಿಸಿದರು.

ಅದೇ ವರ್ಷ ಪೀರರು ಗದಗಿನಲ್ಲಿ ತಮ್ಮ ನಾಟಕ ತ್ರಯಗಳನ್ನು ಪ್ರದರ್ಶಿಸಿದ ಸಮಯದಲ್ಲಿ ಗದಗ-ಬೆಟಗೇರಿಗಳ ಮಹಾಜನತೆ ಮಹಮದ್‌ ಪೀರರಿಗೆ ‘ಕರ್ನಾಟಕ ನಾಟ್ಯ ಶಿರೋಮಣಿ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಮತ್ತೊಂದು ಮಹಾ ಪ್ರಯೋಗದ ಸಿದ್ಧತೆ

ಅಖಂಡ ಕರ್ನಾಟಕದ ಪ್ರವಾಸವನ್ನು ಮುಗಿಸಿದ ‘ಚಂದ್ರಕಲಾ ನಾಟಕ ಮಂಡಲಿ’ಯು ೧೯೩ರ ಜೂನ್‌ನಲ್ಲಿ ನಂಜನಗೂಡಿನಲ್ಲಿ ಮೊಕ್ಕಾಂ ಮಾಡಿತ್ತು. ‘ಪ್ರಚಂಡ ಚಾಣಕ್ಯ’ ಹೊಸ ನಾಟಕವನ್ನು ಸಿದ್ಧಪಡಿಸಿಕೊಂಡು ದಸರಾ ಸಮಯದಲ್ಲಿ ಮೈಸೂರಿನಲ್ಲಿ ಒಂದಿಷ್ಟು ನಾಟಕಗಳನ್ನಾಡಿಕೊಂಡು ತರುವಾಯ ಇನ್ನೊಮ್ಮೆ ಉತ್ತರ ಕರ್ನಾಟಕ ಪ್ರವಾಸ ತೆರಳಬೇಕೆಂಬುದು ಪೀರರ ಅಪೇಕ್ಷೆಯಾಗಿತ್ತು.

 

‘ಈ ಪ್ರಶಸ್ತಿ ನನಗೆ ಬೇಡ’

‘ಪ್ರಚಂಡ ಚಾಣಕ್ಯ’ ಹೊಸ ನಾಟಕದ ಅಭ್ಯಾಸ, ಹಾಗೂ ಇತರ ಪೂರ್ವಭಾವಿ ಸಿದ್ಧತೆಗಳು ನಂಜನಗೂಡಿನಲ್ಲಿ ವ್ಯವಸ್ಥಿತವಾಗಿ ಸಾಗುತ್ತಿದ್ದವು.

೧೯೩೭ರ ಜೂನ್‌ ೨೨ ರಂದು ‘ಪ್ರಚಂಡ ಚಾಣಕ್ಯ’ ನಾಟಕವನ್ನು ಮೈಸೂರಿನಲ್ಲಿಯೇ ಮೊದಲು ಆಡಬೇಕೆಂದು ಇಷ್ಟಪಟ್ಟಿದ್ದ ಪೀರರು ಪುರಭವನವನ್ನು ಬಾಡಿಗೆಗೆ ಪಡೆಯಲು ಹಾಗೂ ಇತರ ಕೆಲವು ವ್ಯವಸ್ಥೆಗಳಿಗಾಗಿ ನಂಜನಗೂಡಿನಿಂದ ಮೈಸೂರಿಗೆ ಬಂದಿದ್ದರು. ಹೀಗೆ ಮೈಸೂರಿಗೆ ಬಂದ ಪೀರರಿಗೆ ಇದ್ದಕ್ಕಿದಂತೆಯೇ ಜ್ವರ ಬಂದುಬಿಟ್ಟಿತು. ರಾತ್ರಿ ಮೈಸೂರಿನಲ್ಲಿಯೇ ಉಳಿದು ಪರಿಚಿತ ಡಾಕ್ಟರರಿಂದ ಔಷಧವನ್ನು ತೆಗೆದುಕೊಂಡರು; ಪ್ರಯೋಜನವಾಗಲಿಲ್ಲ. ರಾತ್ರಿಯೆಲ್ಲ ಜ್ವರದಿಂದ ಬಳಲಿದರು.

ಮರುದಿನ ನಂಜನಗೂಡಿನಲ್ಲಿ ‘ಗೌತಮ ಬುದ್ಧ’ ನಾಟಕ. ಆರೋಗ್ಯವನ್ನು ಉತ್ತಮಗೊಳಿಸಿಕೊಂಡು ಸಂಜೆಯೊಳಗಾಗಿ ನಂಜನಗೂಡನ್ನೂ ತಲುಪಬೇಕು. ಹೋಗದಿದ್ದರೆ ನಾಟಕ ನಿಲ್ಲಿಸಬೇಕು. ನಾಟಕ ನಿಂತರೆ ಬರುವ ಹಣಕ್ಕೆ ಸಂಚಕಾರ.

ಚಂದ್ರ ಮುಳುಗಿದ

೧೯೩೭ರ ಜೂನ್‌ ೧೩. ರಾತ್ರಿಯೆಲ್ಲ ಜ್ವರದಿಂದ ನರಳಿದ ಪೀರರು ಬೆಳಿಗ್ಗೆ ಹತ್ತು ಗಂಟೆಗೆ ತಮ್ಮ ಕಂಪನಿಯ ಮುಖ್ಯಸ್ಥರೊಬ್ಬರೊಡನೆ ವೈದ್ಯರನ್ನು ನೋಡಲು ಹೋದರು.

“ಇಂದು ನಾಟಕದ ಹೊತ್ತಿಗೆ ನಂಜನಗೂಡಿಗೆ ಹೋಗಲೇಬೇಕಾಗಿದೆ. ಕೂಡಲೇ ಜ್ವರ ನಿಲ್ಲುವ ಹಾಗೆ ಇಂಜೆಕ್ಷನ್‌ ಕೊಟ್ಟುಬಿಡಿ” ಎಂದು ವೈದ್ಯರನ್ನು ಪೀರರು ಕೇಳಿದರು.

ವೈದ್ಯರು ಮನಸ್ಸಿಲ್ಲದ ಮನಸ್ಸಿನಿಂದ ಪೀರರಿಗೆ ಇಂಜೆಕ್ಷನ್‌ ಕೊಡಲು ಒಪ್ಪಿದರು. ಇಂಜೆಕ್ಷನ್‌ಗೆ ಸಿದ್ಧತೆ ನಡೆದಿತ್ತು. ವೈದ್ಯರೊಡನೆ ತಮ್ಮ ಹೊಸ ನಾಟಕ ‘ಪ್ರಚಂಡ ಚಾಣಕ್ಯ’ನ ಬಗ್ಗೆ ಮಾತನಾಡುತ್ತಲಿದ್ದರು. ಇಂಜೆಕ್ಷನ್‌ಗೆ ಎಲ್ಲವೂ ಅಣಿಯಾಯಿತು. ಚುಚ್ಚಿಸಿಕೊಳ್ಳಲು ಪೀರರು ಮಂಚದ ಮೇಲೆ ಮಲಗಿದರು. ವೈದ್ಯರು ಇಂಜಕ್ಷನ್‌ ಕೊಡುತ್ತಿದ್ದಂತೆಯೇ ಪೀರರು ಮೆಲುದನಿಯಲ್ಲಿ ನರಳಿದರು. ಕಂಗಾಲಾದ ವೈದ್ಯರು ಸೂಜಿಯನ್ನು ಹೊರತೆಗೆದು ಪೀರರ ಮೈಮುಟ್ಟಿ ನೋಡುವಷ್ಟರಲ್ಲಿಯೇ ಎಲ್ಲವೂ ಮುಗಿದುಹೋಗಿತ್ತು.

‘ಚಂದ್ರಕಲಾ ನಾಟಕ ಮಂಡಲಿ’ಯ ‘ಚಂದ್ರ’ ಮುಳುಗಿ ಹೋಗಿದ್ದ.ನಲವತ್ತೊಂದು ವರ್ಷ ವಯಸ್ಸಿನ ಮಹಮದ್‌ ಪೀರ್ ಅವರು ಅಕಾಲದಲ್ಲಿಯೇ ಈ ಜಗತ್ತನ್ನು ಬಿಟ್ಟುಬಿಟ್ಟಿದ್ದರು. ಕನ್ನಡ ರಂಗಭೂಮಿಯ ಪ್ರಖ್ಯಾತ ನಟ ‘ಇತಿಹಾಸ’ವಾಗಿ ಬಿಟ್ಟಿದ್ದ.

ರಂಗಕ್ಕಾಗಿ ಸಮರ್ಪಿತವಾದ ಬದುಕು

ಮಹಮದ್‌ ಪೀರರು ಬದುಕಿದ್ದುದು ಕೇವಲ ನಲವತ್ತೊಂದು ವರ್ಷಗಳು ಮಾತ್ರ (ಜನನ:೧೮೯೬-ಮರಣ: ೧೯೩೭)

ಪೀರರು ಮೃತರಾಗಿ ಅನೇಕ ವರ್ಷಗಳು ಕಳೆದು ಹೋದರೂ ಅವರು ಕೀರ್ತಿದೇಹಿಗಳಾಗಿ ಇಂದಿಗೂ ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಇದಕ್ಕೆ ಅವರ ಪ್ರತಿಭೆ, ಪ್ರಾಮಾಣಿಕಜೀವನ, ಸಂಭಾವಿತ ಸ್ವಭಾವಗಳೇ ಕಾರಣ.

ತಮ್ಮ ಬದುಕಿನ ಅಲ್ಪಾವಧಿಯಲ್ಲಿ ಪೀರರು ಸಾಧಿಸಿದ ವಿಕ್ರಮಗಳೇನೂ ಸಾಧಾರಣವಾದುದಲ್ಲ.

ಸಂಗೀತದ ಹೊರೆ ಮತ್ತು ಸಾಂಪ್ರದಾಯಿಕ ಜಾಡಿನ ನಾಟಕಗಳಿಂದ ಆವೃತ್ತವಾಗಿದ್ದ ರಂಗಭೂಮಿಯ ದಾರಿಯನ್ನು ಬದಲಾಯಿಸಿ ಅದನ್ನು ಸಂಭಾಷಣೆ ಪ್ರಧಾನವಾದ, ವಸ್ತುಪ್ರಧಾನವಾದ ನೂತನ ಮಾರ್ಗಕ್ಕೆ ಕರೆತಂದವರಲ್ಲಿ ಅಗ್ರಸ್ಥಾನ ಪೀರರಿಗೆ ಸಲ್ಲುತ್ತದೆ.

ರಂಗಭೂಮಿಯಲ್ಲಿ ಮನಶ್ಯಾಂತಿ

ಪೀರರಿಗೆ ರಂಗಭೂಮಿಯೇ ಉಸಿರಾಗಿತ್ತು. ಅವರು ಕನ್ನಡ ನಾಟಕಗಳ ಉತ್ಕರ್ಷಕ್ಕಾಗಿಯೇ ತಮ್ಮ ಜೀವನವನ್ನು ಸಮರ್ಪಿಸಿಕೊಂಡುಬಿಟ್ಟಿದ್ದರು. ಈ ಕ್ಲಿಷ್ಟವಾದ ಮಾರ್ಗವನ್ನು ಹಿಡಿದ ಅವರು ಜೀವನದಲ್ಲಿ ಎಂದೂ ಸುಖವಾಗಿರಲಿಲ್ಲ. ಸ್ವಂತ ಕಂಪೆನಿಯನ್ನು ಕಟ್ಟಿಕೊಂಡು ಹೊಸಹೊಸ ನಾಟಕಗಳನ್ನು ಪ್ರಯೋಗಿಸಿದ್ದರಿಂದ ಅವರು ನಿತ್ಯ ಗಂಡಾಂತರವನ್ನು ಅನುಭವಿಸಬೇಕಾಗಿತ್ತು. ಸಾಲ ಅವರಿಗೆ ಶೂಲವಾಗಿ ಪರಿಣಮಿಸಿತ್ತು. ಹೊಸ ಕ್ಯಾಂಪಿನಲ್ಲಿ ಉತ್ಪತ್ತಿ ಚೆನ್ನಾಗಿದ್ದರೆ ಅದು ಹಿಂದಿನ ಕ್ಯಾಂಪಿನ ಸಾಲಕ್ಕೆ ಸರಿಹೋಗಿ ಬಿಡುತ್ತಿತ್ತು. ಕಂಪೆನಿ ಮುನ್ನಡೆಸಲು ಮತ್ತೆ ಸಾಲ; ಋಣ ಬಾಧೆ.

ಈ ಬಾಧೆಗಳಿಂದ ಶಾಂತಿ ದೊರಕಿಸಿಕೊಳ್ಳಲು ಅವರಿಗೆ ರಂಗಭೂಮಿಯೇ ಸಾಧನವಾಗಿತ್ತು. ಬಣ್ಣ ಹಚ್ಚಿಕೊಂಡು, ಬಟ್ಟೆ ಹಾಕಿಕೊಂಡು ರಂಗಭೂಮಿಯನ್ನು ಪ್ರವೇಶಿಸಿಬಿಟ್ಟರೆ ಅವರು ಬ್ರಹ್ಮಾಂಡವನ್ನೇ ಮರೆತುಬಿಡುತ್ತಿದ್ದರು, ಪಾತ್ರದಲ್ಲಿ ತನ್ಮಯರಾಗಿಬಿಡುತ್ತಿದ್ದರು. ಒಂದು ತತ್ತ್ವ, ಆದರ್ಶಕ್ಕಾಗಿ ಆನಂದಪಡುತ್ತಿದ್ದ ಉದಾರ ವ್ಯಕ್ತಿತ್ವ ಪೀರರದು.

ನಾಟಕದ ಬದುಕಿನಲ್ಲಿದ್ದರೂ ಅವರಿಗೆ ಯಾವ ಒಂದು ಸಣ್ಣ ದುಶ್ಚಟವೂ ಇರಲಿಲ್ಲ. ‘ಗೌತಮ ಬುದ್ಧ’ ನಾಟಕದಲ್ಲಿ ಈ ಮುಸ್ಲಿಮ್‌ ಬಾಂಧವ ಹಾಡುತ್ತಿದ್ದ ಸಂಸ್ಕೃತ ಶ್ಲೋಕಗಳನ್ನು ಕೇಳಲು ಪಂಡಿತರೂ ಪ್ರಾಜ್ಞರೂ ಬರುತ್ತಿದ್ದರು.

ಬಹು ಸೊಗಸಾಗಿ ಹಾಡುತ್ತಿದ್ದ ಪೀರರ ಗೀತೆಗಳನ್ನು ಓಡಿಯನ್‌ ಕಂಪನಿಯವರು ಧ್ವನಿಮುದ್ರಿಸಿಕೊಂಡು ಆ ಧ್ವನಿಮುದ್ರಿಕೆಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. ಈ ಧ್ವನಿಮುದ್ರಿಕೆಗಳು ಜನಪ್ರಿಯವಾದವು.

ಪೀರರು ಅಭಿನಯಿಸಲು ನಿಯೋಜಿಸಿ, ಸಿದ್ಧತೆಗಳನ್ನು ನಡೆಸಿದ್ದ ‘ಪ್ರಚಂಡ ಚಾಣಕ್ಯ’ ನಾಟಕವು ರಂಗಭೂಮಿಯ ಮೇಲೆ ಬಂದಿದ್ದರೆ ಪೀರರ ಕೀರ್ತಿಯ ಕಿರೀಟಕ್ಕೆ ಇನ್ನೊಂದು ಗರಿ ಸೇರಿದಂತಾಗುತ್ತಿತ್ತು. ಈ ಭಾಗ್ಯ ಪೀರರಿಗೆ ದೊರಕಲಿಲ್ಲ. ಕನ್ನಡ ರಂಗಭೂಮಿಗೂ ದಕ್ಕಲಿಲ್ಲ.

ನಾಯಕ ನಟ

ಸುಮಾರು ಐದೂವರೆ ಅಡಿ ಎತ್ತರದ, ಆಕಾರಕ್ಕೆ ತಕ್ಕ ಪ್ರಮಾಣಬದ್ಧವಾದ ಮೈಕಟ್ಟಿನ ಆಕರ್ಷಕ ದೇಹ ಸೌಷ್ಟವ ಪೀರರದು. ಮಿಂಚುವ ವಿಶಾಲವಾದ ಕಣ್ಣುಗಳು, ನುಡಿಯಲಿ, ಹಾಡಲಿ ಕಂಚಿನಂತಹ ಕಂಠ. ಸಂದರ್ಭಕ್ಕೆ ತಕ್ಕಂತೆ ಧ್ವನಿಯನ್ನು ಮಾಧುರ್ಯ ಕೆಡದಂತೆ ನಿಯಂತ್ರಿಸುತ್ತಿದ್ದ ಪ್ರತಿಭೆ. ಪ್ರಶಾಂತವಾದ ಮುಖ. ಗಂಭೀರವಾದ ನಡೆ. ಯಾವ ವೇಷಭೂಷಣ ತೊಟ್ಟರೂ ಅಂದವಾಗಿ ಕಾಣುವ ದೈವದತ್ತ ದೇಹದ ಮಾಟ-ಇವು ಪೀರರನ್ನು ನಾಯಕನಟನ ಪದವಿಗೇರಿಸಿ, ವಿಜೃಂಭಿಸುವಂತೆ ಮಾಡಿದ್ದವು.

ಹಿರಿಯ ನಟಹಿರಿಯ ವ್ಯಕ್ತಿ

ಪೀರರು ತಮ್ಮ ಸ್ವಂತ ‘ಚಂದ್ರಕಲಾ ನಾಟಕ ಮಂಡಲಿ’ಯನ್ನು ಕಟ್ಟಿ ಅದನ್ನು ಕೇವಲ ಏಳೂವರೆ ವರ್ಷಗಳ ಕಾಲ. ಈ ಅಲ್ಪಾವಧಿಯಲ್ಲಿ ಅವರು ಮೂರು ಉದಾತ್ತ ಹೊಸ ನಾಟಕಗಳನ್ನು ರಂಗಭೂಮಿಗೆ ತಂದು, ಅದನ್ನು ಜನಪ್ರಿಯಗೊಳಿಸಿ ಕನ್ನಡ ರಂಗಭೂಮಿಗೆ ಹೊಸ ಚೈತನ್ಯ ತುಂಬಿದುದು ದೊಡ್ಡ ಸಾಧನೆಯೇ ನಿಜ. ಪೀರರು ತಮ್ಮ ಕಂಪೆನಿಯ ಏಳೂವರೆ ವರ್ಷದ ಅವಧಿಯಲ್ಲಿ ಸುಮಾರು ಐವತ್ತೆರಡು ಊರುಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದುದು ಸಾಹಸವೇ ಸರಿ.

ಪೀರರು ನಾಟಕದ ಕಂಪೆನಿ ಕಟ್ಟಲು ಹೊರಟ ಕಾಲ, ನಾಟಕ ಆಡುವವರು ಎಂದರೆ ಜನರಿಗೆ ತಿರಸ್ಕಾರವಿದ್ದ ಕಾಲ. ಬರಿಗೈಯಿಂದಲೇ ನಾಟಕ ಕಂಪೆನಿಯನ್ನು ಕಟ್ಟಿ, ನಗೆಯಿಂದಲೇ ಅದನ್ನು ನಡೆಸಿಕೊಂಡು ಬಂದು, ಸಾಲದ ಬಾಧೆಯಲ್ಲಿಯೂ ಒಂದು ವಿಧವಾದ ಆನಂದವನ್ನು ಅನುಭವಿಸಿ, ಪ್ರತಿಭೆ ಮತ್ತು ಸ್ವಸಾಮರ್ಥ್ಯದಿಂದ ಪ್ರಸಿದ್ಧಿಯ ಗೌರಿಶಂಕರ ತಲಪಿ, ಸಾಮಾನ್ಯ ಜನ, ವಿದ್ವಾಂಸರು ಎಲ್ಲರಿಂದ ಮೆಚ್ಚುಗೆ ಪಡೆದು ಚಿಕ್ಕವಯಸ್ಸಿನಲ್ಲಿಯೇ ನೇಪಥ್ಯಕ್ಕೆ ನಡೆದುಬಿಟ್ಟ ಪೀರರು ಅಸಾಧಾರಣ ವ್ಯಕ್ತಿ, ಶಕ್ತಿ.

ಪೀರರ ಸಾಧನೆ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಎಂದೆಂದೂ ಹಸಿರು; ಅವರ ಹೆಸರೇ ಒಂದು ಪರಂಪರೆ. ತಾವೂ ಧನ್ಯರಾಗಿ, ನಾಡನ್ನೂ ಧನ್ಯರನ್ನಾಗಿಸಿದ ಸಹೃದಯ ಸಂಪನ್ನ ಸ್ವಭಾವ ಅವರದು.