ಶ್ರೇಷ್ಠ ತಬಲಾವಾದ್ಯ ತಯಾರಕರೆನಿಸಿ ಜನಪ್ರಿಯರಾಗಿರುವ ಗುಲಬರ್ಗಾದ ಮಹಮ್ಮದ ರುಕ್ನೋದ್ದೀನ್ ಅವರು ಉತ್ತಮ ಗಜಲ್ ಗಾಯಕರೂ ಹೌದು.

ದಿನಾಂಕ ೧೧-೯-೧೯೪೯ ರಂದು ಗುಲ್ಬರ್ಗಾದಲ್ಲಿ ಜನಿಸಿದ ಮಹಮ್ಮದ್ ರುಕ್ನೊದ್ದೀನ್ ಅವರು ಹೆಸರಾಂತ ವಾದ್ಯ ತಯಾರಕರ ಮನೆತನಕ್ಕೆ ಸೇರಿದವರು. ಸುಮಾರು ಎಂಟು ದಶಕಗಳಿಂದ ತಬಲಾ ತಯಾರಿಸಿ ಸಿದ್ಧಪಡಿಸುವ ವೃತ್ತಿಯಲ್ಲಿ ಪರಿಣತಿಯನ್ನು ಹೊಂದಿರುವ ಮನೆತನ ಇವರದು. ರುಕ್ನೊದ್ದೀನ್‌ರ ತಂದೆ ಈ ವೃತ್ತಿಯಲ್ಲಿ ಎರಡನೆಯ ತಲೆಮಾರಿನವರಾದರೆ ರುಕ್ನೊದ್ದೀನ್‌ರವರು ಮೂರನೆಯವರು. ಇವರು ತಮ್ಮ ಎಂಟನೆಯ ವರ್ಷದಿಂದಲೇ ತಂದೆಯವರ ಜೊತೆಗೂಡಿ ತಬಲಾ ವಾದ್ಯ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ವೃತ್ತಿಯಲ್ಲಿ ಸಿದ್ಧಿಯನ್ನು ಪಡೆದಿದ್ದಾರೆ. ಚರ್ಮದ ಹದ, ಕೂಡಿಸುವ ಕರಣೆಗಳು, ಢಕ್ಕೆಯ ಆಕಾರ  ಇವುಗಳ ಬಗ್ಗೆ ಶಾಸ್ತ್ರ ಪ್ರಕಾರವಾಗಿ ಅಧ್ಯಯನ ನಡೆಸಿ ವಿಧ್ಯಕ್ತವಾಗಿ ಇದನ್ನು ತಯಾರಿಸುವುದರಿಂದ ಇಂದು ಹಿಂದುಸ್ಥಾನೀ ಸಂಗೀತ ಕ್ಷೇತ್ರದಲ್ಲಿ ಇವರು ತಯಾರಿಸುವ ತಬಲಾಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಜೊತೆಗೆ ಇವರು ಸ್ವತಃ ಕವ್ವಾಲಿ ಗಾಯಕರು. ಇದರಲ್ಲಿ ತಮ್ಮ ಸ್ವಯಂ ಪ್ರತಿಭೆಯಿಂದ ಪಾಂಡಿತ್ಯ ಹೊಂದಿ ಹೈದರಾಬಾದ್ ಕರ್ನಾಟಕದ ಏಕೈಕ ಕಲಾವಿದ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಲ್ಬರ್ಗಾ – ಆಕಾಶವಾಣಿ ಕೇಂದ್ರದ ಅಧಿಕೃತ ಕವ್ವಾಲಿ ಗಾಯಕರೆನಿಸಿದ್ದಾರೆ. ಅಲ್ಲದೆ ಗುಲ್ಬರ್ಗಾ –  ಬೆಂಗಳೂರು ದೂರದರ್ಶನ ಕೇಂದ್ರಗಳ ಮೂಲಕ ಕವ್ವಾಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ತಬಲಾ ತಯಾರಿಸುವುದರಲ್ಲಿ ವಿಶೇಷ ಸಂಶೋಧನೆ ನಡೆಸಿದ್ದು ಪ್ರಸಿದ್ಧ ತಬಲಾ ಮಾಂತ್ರಿಕ ಉಸ್ತಾದ ಝಾಕಿರ್ ಹುಸೇನ್‌ರಂಥವರಿಗೆ ತಬಲಾ ಸಿದ್ಧಮಾಡಿ ಅವರಿಂದ ಮೆಚ್ಚುಗೆ ಗಳಿಸಿದ್ದಾರೆ.

ಹೀಗೆ ವಾದ್ಯ ತಯಾರಿಕೆಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಗಳಿಸಿರುವ ರುಕ್ನೊದ್ದೀನ್ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.