ಮಹಮ್ಮದ್ ನಿಸ್ಸಾರ್ಭಾರತದ ಶ್ರೇಷ್ಠ ವೇಗದ ಬೌಲರ್. ಭಾರತ ಆಡಿದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲೆ ಅಸಾಧಾರಣ ಪ್ರತಿಭೆಯನ್ನು ತೋರಿದರು. ಶ್ರದ್ಧೆ, ಸತತವಾದ ಅಭ್ಯಾಸ, ಶಿಸ್ತು ಅವರ ಯಶಸ್ಸಿನ ಗುಟ್ಟು. ನಿಜವಾದ ಕ್ರೀಡಾಪಟುವಿನ ಮನೋಧರ್ಮ ಅವರದು.

 ಮಹಮ್ಮದ್ ನಿಸ್ಸಾರ್

ಲಾರ್ಡ್ಸ್ ಮೈದಾನ ಕ್ರಿಕೆಟ್ ಆಡುವವರಿಗೊಂದು ಯಾತ್ರಾ ಸ್ಥಳ ಎಂದು ಹೆಸರಾದದ್ದು. ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ತನ್ನ ಆಟದ ಶ್ರೇಷ್ಠ ಪ್ರತಿಭೆಯ ಪ್ರದರ್ಶನವನ್ನು ಇಲ್ಲಿಗೆ ಮೀಸಲಾಗಿರಿಸಬೇಕೆಂಬ ಕನಸು, ಹಂಬಲ.

೧೯೩೨ರ ಜೂನ್ ೨೫. ಭಾರತದ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿಯೇ ಸ್ಮರಣೀಯವೆನಿಸುವ ದಿನ. ಈ ಮೊದಲೇ ಸುಮಾರು ನಲವತ್ತು ವರ್ಷಗಳಿಂದ ಭಾರತೀಯರು ಕ್ರಿಕೆಟ್ ಆಡುತ್ತಿದ್ದರು. ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ ಅವಕಾಶ ಕಲ್ಪಿಸಿದ ದಿನವದು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನ ಇಂಗ್ಲೆಂಡ್ ತಂಡದ ನಾಯಕನಾಗಿದ್ದವನು ಮುಂಬಯಿಯಲ್ಲಿ ಹುಟ್ಟಿದ್ದ ಡಿ.ಆರ್.ಜಾರ್ಡಿನ್. ಭಾರತದ ಪಂಗಡದ ನಾಯಕ ಸಿ.ಕೆ. ನಾಯುಡು.

ಇಂಗ್ಲೆಂಡ್ ತಂಡ ಅತ್ಯಂತ ಶಕ್ತಿಶಾಲಿ ತಂಡ ಎಂದು ಖ್ಯಾತಿ ಗಳಿಸಿತ್ತು. ಭಾರತಕ್ಕೆ ಸಿಂಹದ ಗುಹೆಯಲ್ಲಿ ಹೊಕ್ಕು ಅದರೊಡನೆ ಸೆಣಸಾಡಬೇಕಾದಂತಹ ಅನುಭವ. ವೈಯಕ್ತಿಕವಾಗಿ ಪ್ರತಿಭೆಯ ಆಟಗಾರರಿರುವುದಾದರೂ ಒಟ್ಟಿಗೆ ಒಂದು ತಂಡವಾಗಿ ಅವರು ಹೇಗೆ ಆಡಬಲ್ಲರು ಎನ್ನುವುದಕ್ಕೆ ಪರೀಕ್ಷಾ ಗೃಹವಾಗಿತ್ತು ಲಾರ್ಡ್ಸ್ ಕ್ರಿಕೆಟ್ ಮೈದಾನ.

ಕೆಲವೇ ನಿಮಿಷಗಳಲ್ಲಿ

ಇಂಗ್ಲೆಂಡ್‌ನ ಆರಂಭ ಆಟಗಾರರ ಜೋಡಿ ರನ್ ಪೇರಿಕೆಯಲ್ಲಿ ಹೆಚ್ಚಿಗೆ ಖ್ಯಾತಿವೆತ್ತಂತಹ ಜೋಡಿ. ಆರಂಭ ಬ್ಯಾಟುಗಾರ ಜೋಡಿಯಾದ ಹೆಚ್. ಸಟ್‌ಕ್ಲಿಫ್ ಹಾಗೂ ಪೆರಿ ಹೋಮ್ಸ್ ಇಬ್ಬರೂ ಇಂಗ್ಲೆಂಡಿನ ಯಾರ್ಕ್‌ಷೈರ್ ಕೌಂಟಿಗೆ ಸೇರಿದವರು. ಯಾರ್ಕ್‌ಷೈರ್‌ನ ಆಟಗಾರ ಎಂದರೆ ಯಾವುದೇ ರೀತಿ ಎದುರಾಳಿ ಮೇಲುಗೈ ಪಡೆಯದಂತೆ ಆಡಬಲ್ಲವನು ಎಂಬ ಪ್ರತೀತಿ ಕ್ರಿಕೆಟ್ ವಲಯಗಳಲ್ಲಿತ್ತು. ವೃತ್ತಿ ನಿರತರಂತೆ ಆದಷ್ಟು ಹೆಚ್ಚು ರನ್ ಪೇರಿಸಿ ಎದುರಾಳಿ ಬೌಲರ್‌ನನ್ನು ಹತಾಶನನ್ನಾಗಿಸುವ ಕಲೆ ಈ ಇಬ್ಬರು ಬ್ಯಾಟುಗಾರರಿಗೂ ತಿಳಿದಿತ್ತು. ಈ ಪಂದ್ಯಕ್ಕೆ ಹದಿನೈದು ದಿನಗಳ ಮುನ್ನ ಈ ಇಬ್ಬರು ಆಟಗಾರರು ಎಸೆಕ್ಸ್ ಎಂಬ ಮತ್ತೊಂದು ಕೌಂಟಿ ಪಂದ್ಯದ ವಿರುದ್ಧ ಪ್ರಥಮ ವಿಕೆಟ್ ಜೋಡಿಯಲ್ಲೇ ೫೫೫ ರನ್‌ಗಳನ್ನು ಕೂಡಿ ಹಾಕಿದ್ದರು. ಈ ದಾಖಲೆಯ ಜೊತೆಯಾಟದ ಆಟಗಾರರನ್ನು ಅನುಭವವಿಲ್ಲದ ಭಾರತೀಯ ಬೌಲರ್‌ಗಳು ನಿಯಂತ್ರಿಸಲಾದೀತೆ ಎಂಬ ಪ್ರಶ್ನೆ ಏಳುವುದು  ಆಗ ಸಹಜವಾಗಿತ್ತು. ಈ ಇಬ್ಬರು ಮತ್ತೆ ತಮ್ಮ ಬ್ಯಾಟಿಂಗ್ ಸಾರ್ವಭೌಮತ್ವವನ್ನು ಸ್ಥಾಪಿಸುತ್ತಾರೆ ಎಂಬುದರಲ್ಲಿ ಯಾರಿಗೂ ಅನುಮಾನವಿರಲಿಲ್ಲ.

ಆಟ ಪ್ರಾರಂಭವಾಯಿತು. ಜಗದ್ವಿಖ್ಯಾತ ಪ್ರಾರಂಭದ ಆಟಗಾರರಾದ ಸಟ್‌ಕ್ಲಿಫ್ ಮತ್ತು ಹೋಮ್ಸ್ ಆಟಕ್ಕಿಳಿದರು. ಕೆಲವೇ ನಿಮಿಷಗಳಲ್ಲಿ ಇಬ್ಬರೂ ಔಟಾಗಿ ಪೆವಿಲಿಯನ್‌ಗೆ ಹಿಂದಿರುಗಿದರು.

ಆಟ ನೋಡುತ್ತಿದ್ದವರು ಕಣ್ಣುಗಳನ್ನುಜ್ಜಿಕೊಂಡರು, ಇದೇನು ನಿಜವಾಗಿಯೂ ನಡೆಯುತ್ತಿದೆಯೋ ಇಲ್ಲವೇ ತಮ್ಮ ಭ್ರಾಂತಿಯೋ ಎಂದು.

ಭ್ರಾಂತಿಯಲ್ಲ, ನಿಜ. ಸಟ್‌ಕ್ಲಿಫ್ ಮತ್ತು ಹೋಮ್ಸ್ ಇಬ್ಬರೂ ’ಔಟ್ ’.

ಭಾರತದ ವೇಗದ ಬೌಲರ್ ಮಹಮ್ಮದ್ ನಿಸ್ಸಾರ್ ಒಂದೇ ಓವರ್‌ನಲ್ಲಿ ಸಟ್‌ಕ್ಲಿಫ್ (೩) ಹಾಗೂ ಹೋಮ್ಸ್ (೬) ರನ್ನು ತಮ್ಮ ಯಾರ್ಕರ್‌ನಿಂದ ಕ್ಲೀನ್ ಬೌಲ್ಡ್ ಮಾಡಿದರು. ಹದಿನೈದು ದಿನಗಳ ಹಿಂದೆ ಕೌಂಟಿ ಪಂದ್ಯದಲ್ಲಿ ೫೫೫ ರನ್‌ಗಳನ್ನು ಒಟ್ಟಿಗೆ ಸೇರಿಸಿದ ಬ್ಯಾಟಿಂಗ್ ಜೋಡಿಯವರು ಹನ್ನೊಂದು ರನ್‌ಗಳಲ್ಲಿ ತಾವು ’ಔಟಾದದ್ದು ಹೇಗೆ?’ ಎಂದು ಯೋಚಿಸುತ್ತಾ ಪೆವಿಲಿಯನ್‌ಗೆ ತೆರಳುವ ರೀತಿ ಮಾಡಿದರು ಮಹಮ್ಮದ್ ನಿಸ್ಸಾರ್.

ಆಗ ನಿಸ್ಸಾರ್‌ಗೆ ಇಪ್ಪತ್ತೆರಡು ವರ್ಷ.

ಇಂಗ್ಲೆಂಡ್ ತಂಡವನ್ನು ಮೊದಲ ಸರದಿಯಲ್ಲಿ ೨೫೯ ರನ್‌ಗಳಿಗೆಲ್ಲಾ ಔಟ್ ಮಾಡಿದ ಭಾರತ ಆ ಪಂದ್ಯದಲ್ಲಿ ಸೋತರೂ ಸಹ ಅದೊಂದು ಅಸಾಮಾನ್ಯ ಸೋಲಾಗಿತ್ತು. ಮಹಮ್ಮದ್ ನಿಸ್ಸಾರ್ ಒಟ್ಟು ಆರು ವಿಕೆಟ್‌ಗಳನ್ನು ಗಳಿಸಿದ್ದರು. ಪ್ರಥಮ ಸರದಿಯಲ್ಲಿ ಅವರು ಐದು ವಿಕೆಟ್‌ಗಳನ್ನು ೯೩ ರನ್‌ಗಳನ್ನಿತ್ತು ಪಡೆದಿದ್ದರು.

ಜಗತ್ತಿನ ಶ್ರೇಷ್ಠ ಬೌಲರುಗಳ ಪಂಕ್ತಿಗೆ

ನಿಸ್ಸಾರ್‌ರವರ ಈ ಅಜೇಯ ಸಾಧನೆ ಅವರನ್ನು ಆ ದಿನದ ಶ್ರೇಷ್ಠ ವೇಗದ ಬೌಲರ್‌ಗಳಲ್ಲೊಬ್ಬರಾಗಿ ಮಾಡಿತು. ಅಂದಿನ ದಿನದಲ್ಲಿ ಅತ್ಯಂತ ವೇಗದ ಬೌಲರ್ ಎಂದು ಖ್ಯಾತರಾಗಿದ್ದ ಹೆರಾಲ್ಡ್ ಲಾರ್‌ವುಡ್‌ರಿಗೆ ನಿಸ್ಸಾರ್ ಅವರನ್ನು ಹೋಲಿಸಿ ಹಿಡಿತದ ಕರಾರುವಾಕ್ ಬೌಲಿಂಗ್‌ನಲ್ಲಿ ಲಾರ್‌ವುಡ್‌ರಿಗಿಂತ ನಿಸ್ಸಾರ್‌ರವರೇ ಮೇಲು ಎಂದು ಕ್ರಿಕೆಟ್ ವಿಮರ್ಶಕರು ಅಭಿಪ್ರಾಯಪಟ್ಟರು. ಕ್ಯಾಚ್‌ಗಳನ್ನು ಭಾರತದ ಆಟಗಾರರು ಹಿಡಿದಿದ್ದರೆ ನಿಸ್ಸಾರ್ ರವರು ಮತ್ತೂ ಹೆಚ್ಚು ವಿಕೆಟ್‌ಗಳಿಸುತ್ತಿದ್ದರಲ್ಲದೆ ಭಾರತ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಗೆಲ್ಲಬಹುದಿತ್ತು ಎಂದೂ ಸಹ ಕೆಲ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇಂಗ್ಲೆಂಡಿನ ವಿರುದ್ಧ ಒಂದು ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ಮಹಮ್ಮದ್ ನಿಸ್ಸಾರ್ ಆ ಸರಣಿಯಲ್ಲಿ ಆಡಿದ ಇತರ ಕೌಂಟಿ ಪಂದ್ಯಗಳಲ್ಲಿ ಒಟ್ಟು ೯೭ ವಿಕೆಟ್‌ಗಳನ್ನು ೧೪.೮೬ ರ ಸರಾಸರಿಯಲ್ಲಿ ಪಡೆದರು. ಬ್ಲಾಕ್‌ಹೀತ್‌ನ ವಿರುದ್ಧ ೬ ಕ್ಕೆ ೧೧, ಯಾರ್ಕ್‌ಷೈರ್ ವಿರುದ್ಧ ೬ ಕ್ಕೆ ೨೨ ಹಾಗೂ ಆಕ್ಸ್‌ಫರ್ಡ್ಸ್ ವಿಶ್ವವಿದ್ಯಾನಿಲಯದ ವಿರುದ್ಧ ಪಡೆದ ೬ ಕ್ಕೆ ೩೦ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ಮಾದರಿ ಗಳಾಗಿದ್ದವು. (ಆಗ ಯಾರ್ಕ್‌ಷೈರ್ ತಂಡ ಇಂಗ್ಲೆಂಡಿನ ಶ್ರೇಷ್ಠ ಪಂಗಡ ಎಂದು ಹೆಸರಾಗಿತ್ತು. ಇಂಗ್ಲೆಂಡಿನ ಅತ್ಯಂತ ಸಮರ್ಥ ಬ್ಯಾಟ್ಸ್‌ಮನ್‌ಗಳಲ್ಲಿ ಹಲವರು ಆ ತಂಡದಲ್ಲಿದ್ದರು ಎಂಬುದನ್ನು ನೆನಪಿಡಬೇಕು. ಮಹಮ್ಮದ್ ನಿಸ್ಸಾರ್ ಪ್ರಥಮ ಸರಣಿಯಲ್ಲಿಯೇ ವಿಶ್ವದ ಶ್ರೇಷ್ಠ ವೇಗದ ಬೌಲರ್ ಆಗಿಬಿಟ್ಟಿದ್ದರು.

ಬಂಗಾರದ ನಾಣ್ಯಕ್ಕೆ ಪಿಚ್ ಮಾಡಿ

ನಿಸ್ಸಾರ್‌ರವರ ಈ ಅದ್ವಿತೀಯ ಸಾಧನೆಗೆ ಅವರ ಪರಿಶ್ರಮ, ಸತತ ಅಭ್ಯಾಸ ಹಾಗೂ ಕ್ರೀಡೆಯಲ್ಲಿ ದಿನ ದಿನಕ್ಕೂ ಸುಧಾರಿಸಬೇಕೆಂಬ ದೃಢ ನಿರ್ಧಾರ ಕಾರಣವಾಗಿದ್ದವು.

ಅವರು ಈಗ ಪಂಜಾಬ್‌ನಲ್ಲಿರುವ ಹೋಷಿಯಾರ್ ಪುರದಲ್ಲಿ ೧೯೧೦ ರ ಆಗಸ್ಟ್ ಒಂದರಂದು ಹುಟ್ಟಿದರು.

ಬಾಲ್ಯದಿಂದ ಅವರಿಗೆ ಕ್ರಿಕೆಟ್‌ನಲ್ಲಿ ಒಲವು. ಅದರಲ್ಲಿಯೂ ಬೌಲಿಂಗ್ ಎಂದರೆ ಪ್ರಾಣ. ನಿಷ್ಠೆಯಿಂದ ಬೌಲಿಂಗನ್ನು ಅಭ್ಯಾಸ ಮಾಡಿದರು. ಉರಿಯುವ ಬಿಸಿಲಿನಲ್ಲಿ ಚೆಂಡನ್ನು ವೇಗವಾಗಿ ಒಂದೇ ವಿಕೆಟ್‌ನತ್ತ ಬೌಲ್ ಮಾಡಿ ನಡೆಸಿದ ಅಭ್ಯಾಸದಲ್ಲಿಯೇ ಅವರು ಬೆಳೆಯುತ್ತಾ ಬಂದರು. ಲಾಹೋರ್‌ನ ಮಿಂಟೋ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಅವರು ಘಂಟೆಗಟ್ಟಲೆ ಅಭ್ಯಾಸ ನಡೆಸುತ್ತಿದ್ದರು. ವಿಕೆಟ್‌ಗಳ ಮಧ್ಯಭಾಗದಲ್ಲಿ ನಾಲ್ಕಾಣೆಯ ನಾಣ್ಯವನ್ನಿಟ್ಟು ವೇಗವಾಗಿ ಬೌಲ್ ಮಾಡಿ ನಾಲ್ಕಾಣೆಯ ಮೇಲೆ ಚೆಂಡನ್ನು ಬೀಳಿಸಿ ಮತ್ತೆ ವಿಕೆಟ್ ಉರುಳಿಸುವಂತೆ ಅವರು ಮಾಡುತ್ತಿದ್ದರು. ಈ ಕಲೆ ಅವರಿಗೆ ಹೆಚ್ಚಿನ ಪರಿಶ್ರಮದಿಂದ, ಅಭ್ಯಾಸದಿಂದ ಬಂದಿತ್ತು.

ಕ್ರಿಕೆಟ್ ಅನ್ನು ಪ್ರೋತ್ಸಾಹಿಸುತ್ತಿದ್ದ ಮಹಾರಾಜರಲ್ಲಿ ಒಬ್ಬರಾದ ಪಾಟಿಯಾಲಾದ ಮಹಾರಾಜ ಭೂಪೇಂದರ್ ಸಿಂಗ್ ಅವರು ನಿಸ್ಸಾರ್ ಅವರನ್ನು ಒಮ್ಮೆ ಆಹ್ವಾನಿಸಿ ಒಂದು ಪಣವಿಟ್ಟರು.

ಪಿಚ್‌ನ ಮಧ್ಯಭಾಗದಲ್ಲಿ ಒಂದು ಕಡೆ ಈ ಬಂಗಾರದ ನಾಣ್ಯವನ್ನಿಡುತ್ತೇನೆ. ನೀನು ಒಂದೇ ಬಾಲಿನಲ್ಲಿ ಈ ನಾಣ್ಯಕ್ಕೆ ಪಿಚ್ ಮಾಡಿ ಮಧ್ಯದ ವಿಕೆಟ್ ಉರುಳಿಸಿದರೆ ಈ ನಾಣ್ಯ ನಿನ್ನದೆ ಎಂದರು ಮಹಾರಾಜ ಭೂಪೇಂದರ್ ಸಿಂಗ್. ಕ್ರಿಕೆಟ್‌ನಲ್ಲಿ ಎರಡು ಕಡೆ ಮೂರು ವಿಕೆಟ್‌ಗಳಿರುತ್ತವೆ. ಒಂದು ಬದಿಯಿಂದ ಬೌಲ್ ಮಾಡುವ ಬೌಲರ್ ತಾನು ಬೌಲ್ ಮಾಡಿದ ಚೆಂಡನ್ನು ಪ್ರಥಮವಾಗಿ ನಾಣ್ಯಕ್ಕೆ ತಾಗಿಸಿದರೆ ಅದನ್ನು ನಾಣ್ಯಕ್ಕೆ ಪಿಚ್ ಮಾಡಿದಂತೆ ಅರ್ಥ.

‘ಅದನ್ನು ಮಾಡಿಯೇ ತೀರುತ್ತೇನೆ’ ಎಂದರು ನಿಸ್ಸಾರ್.

ಅತ್ಯಂತ ವೇಗವಾಗಿ ಬೌಲ್ ಮಾಡಿದರು ನಿಸ್ಸಾರ್. ಮಧ್ಯದ ವಿಕೆಟ್ ಎರಡು ಚೂರಾಯಿತು. ಜೊತೆಗೆ ನಿಸ್ಸಾರ್ ಬಂಗಾರದ ನಾಣ್ಯಕ್ಕೆ ಪಿಚ್ ಮಾಡಿದ್ದರು. ಈ ರೀತಿ ಕ್ರಿಕೆಟ್‌ಗೆ ಪ್ರೋತ್ಸಾಹ ಕೊಡುವ ರಾಜರಿಂದ ತಮ್ಮ ಪ್ರತಿಭೆಗೆ ಬಳುವಳಿಯಾಗಿ ‘ಪ್ರಶಸ್ತಿ’ ಯನ್ನು ನಿಸ್ಸಾರ್ ಪಡೆಯುತ್ತಿದ್ದರು.

ವೇಗವಾಗಿ ಬೌಲ್ ಮಾಡುವ ಆಟಗಾರ ಬೇಗ ದಣಿಯುತ್ತಾನೆ. ಆದುದರಿಂದ ಆತ ದೇಹದಾರ್ಢ್ಯವನ್ನು ಬೆಳೆಸಿಕೊಳ್ಳುವುದು, ಉಳಿಸಿಕೊಳ್ಳುವುದು, ಶರೀರದ ಲವಲವಿಕೆಯನ್ನು, ಪಾದಗಳ ವೇಗವನ್ನೂ ಕಾಪಾಡಿಕೊಳ್ಳುವುದು ಅತ್ಯಗತ್ಯ. ಜೊತೆಗೆ ಚೆಂಡು ಸ್ವಲ್ಪವೂ ಹೆಚ್ಚು ಕಡಿಮೆಯಾಗದೆ ಬೌಲರ್ ಉದ್ದೇಶಿಸಿದ ಬಿಂದುವಿನಲ್ಲೆ ಬೀಳಬೇಕು. ಉರಿ ಬಿಸಿಲಿನ ಧಗೆಯಲ್ಲೂ ದಣಿವಾಗದೆ ವೇಗವಾಗಿ ಬೌಲ್ ಮಾಡುತ್ತಿದ್ದ ನಿಸ್ಸಾರ್ ಅಭ್ಯಾಸವನ್ನು ಕ್ರಿಕೆಟ್ ಆಡಿದ ಕಡೆಯ ದಿನದವರೆಗೂ ಮುಂದುವರಿಸಿಕೊಂಡು ಬಂದರು. ಕಠಿಣ ಶ್ರಮದಿಂದ ಅವರ ಬೌಲಿಂಗ್ ಹೆಚ್ಚು ಕರಾರುವಾಕ್ ಆಗುತ್ತಿದ್ದುದರಿಂದ ಅವರು ಈ ಸುಧಾರಣೆಯಿಂದ ಉತ್ಸುಕರಾಗಿ ಮತ್ತು ಹೆಚ್ಚಿನ ಕಾಲ ವೇಗದ ಬೌಲಿಂಗ್ ಅಭ್ಯಾಸದಲ್ಲಿ ತಲ್ಲೀನರಾಗುತ್ತಿದ್ದರು.

ಕಾಲೇಜಿನ ಪರ ವಿಶ್ವವಿದ್ಯಾನಿಲಯದ ಪರ

ಕ್ರಿಕೆಟ್ ಪಂದ್ಯದಲ್ಲಾಡಲು ತಮ್ಮ ಕಾಲೇಜಿನಿಂದ ಆಯ್ಕೆಯಾದ ಮಹಮ್ಮದ್ ನಿಸ್ಸಾರ್ ಮೊದಲು ಪಂಜಾಬ್ ವಿಶ್ವವಿದ್ಯಾನಿಲಯದ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸು ತ್ತಿದ್ದರು. ಲಾಹೋರ್‌ನ ಸರ್ಕಾರಿ ಕಾಲೇಜಿನ ತಂಡದ ವೇಗದ ಬೌಲರ್ ಆಗಿ ನಿರ್ಣಾಯಕ ಪಂದ್ಯದಲ್ಲಿ ಇಸ್ಲಾಮಿಯ ಕಾಲೇಜ್ ವಿರುದ್ಧ ಒಟ್ಟು ಹದಿನೇಳು ವಿಕೆಟ್ ಗಳನ್ನು ಸಂಪಾದಿಸಿ ತಮ್ಮ ತಂಡಕ್ಕೆ ವಿಜಯ ದೊರಕಿಸಿಕೊಟ್ಟರು. ಮೊದಲ ಸರದಿಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಹಾಗೂ ದ್ವಿತೀಯ ಸರದಿಯಲ್ಲಿ ಎಂಟು ವಿಕೆಟ್‌ಗಳನ್ನು ಅತಿ ಕಡಿಮೆ ರನ್‌ಗಳನ್ನು  ಕೊಟ್ಟು ನಿಸ್ಸಾರ್ ಪಡೆದಿದ್ದರು. ಮತ್ತೊಂದು ಪಂದ್ಯದಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ವಿರುದ್ಧ ಆಡಿದಾಗ ಎದುರಾಳಿ ಪಂಗಡದ ಹತ್ತು ವಿಕೆಟ್‌ಗಳನ್ನು ಪಡೆದರು. ಈ ರೀತಿಯ ಅತ್ಯುನ್ನತ ಪ್ರದರ್ಶನಗಳಿಂದ ಬೆಳಕಿಗೆ ಬಂದರು.

ಆಗಿನ ಕಾಲದಲ್ಲಿ ಈಗಿನಷ್ಟು ಕ್ರಿಕೆಟ್ ಟೂರ್ನ್‌ಮೆಂಟ್ ಗಳು ನಡೆಯುತ್ತಿರಲಿಲ್ಲ. ೧೯೦೭ ರಲ್ಲಿ ಮುಂಬಯಿ ಟ್ರಿಯಾಂಗ್ಯುಲರ್ ಟೂರ್ನಿ ಪ್ರಾರಂಭವಾಯಿತು. ’ಟ್ರಿಯಾಂಗ್ಯುಲರ್’ ಎಂದು ಕರೆಯುವುದಕ್ಕೆ ಯೂರೋಪಿಯನ್, ಪಾರ್ಸಿ ಮತ್ತು ಹಿಂದೂ ತಂಡಗಳು ಆಡುತ್ತಿದ್ದುದು ಕಾರಣ. ಮುಂದೆ ಮುಸ್ಲಿಮರ ತಂಡ, ಇನ್ನೊಂದು ತಂಡ ಸೇರಿದಾಗ ‘ಪೆಂಟಾಂಗ್ಯುಲರ್ ಟೂರ್ನ್‌ಮೆಂಟ್’ ಎಂದು ಈ ಸ್ಪರ್ಧೆಗೆ ಹೆಸರು ಬಂದಿತು.

ಇಂಗ್ಲೆಂಡಿನ ಟೀಮುಗಳ ವಿರುದ್ಧ

ಆಗಿನ ದಿನಗಳಲ್ಲಿ ಪೆಂಟಾಂಗ್ಯುಲರ್ ಕ್ರಿಕೆಟ್ ಸ್ಪರ್ಧೆಗಳು ಭಾರೀ ಜನಪ್ರಿಯತೆ ಪಡೆದಿದ್ದವು. ಭಾರತದ ಖ್ಯಾತ ಆಟಗಾರರೆಲ್ಲ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.

ಮುಸ್ಲಿಮ್ಸ್ ತಂಡದ ಪರವಾಗಿ ಆಡುತ್ತಿದ್ದ ಮಹಮ್ಮದ್ ನಿಸ್ಸಾರ್ ವೇಗದ ಬೌಲಿಂಗ್‌ನಲ್ಲಿ ತಮ್ಮ ಉಜ್ವಲ ಪ್ರತಿಭೆಯನ್ನು ಈ ಸ್ಪರ್ಧೆಗಳ ಶ್ರೇಷ್ಠ ಆಟದ ಮೂಲಕ ಪರಿಚಯಿಸಿದರು.

ಭಾರತದಿಂದ ಇಂಗ್ಲೆಂಡಿಗೆ ೧೮೮೬ ರಲ್ಲಿಯೇ ಕ್ರಿಕೆಟ್ ತಂಡ ಹೋಗಿತ್ತು – ಪಾರಸಿ ತಂಡ. ಅನಂತರ ಆಗಾಗ ಭಾರತೀಯರ ಕ್ರಿಕೆಟ್ ತಂಡಗಳು ಇಂಗ್ಲೆಂಡಿಗೆ ಹೋಗಿ ಪಂದ್ಯಗಳನ್ನಾಡುತ್ತಿದ್ದವು. ೧೯೩೨ ರಲ್ಲಿ ಒಂದು ತಂಡ ಹೊರಟಿತು. ಆಗಲೇ ತನ್ನ ವೇಗದ ಬೌಲಿಂಗ್‌ನಿಂದ ಪ್ರಸಿದ್ಧರಾಗಿದ್ದ ನಿಸ್ಸಾರರು ಆಯ್ಕೆಯಾದದ್ದರಲ್ಲಿ ಆಶ್ಚರ್ಯವಿಲ್ಲ.

೧೯೩೨ ರ ಪ್ರವಾಸದ ನಂತರ ವಿಶ್ವಖ್ಯಾತರಾದ ನಿಸ್ಸಾರ್ ಕ್ರಿಕೆಟ್ ಅಭ್ಯಾಸವನ್ನು ಮತ್ತೂ ಶ್ರಮವಹಿಸಿ ಮುಂದುವರಿಸಿದರು. ಮತ್ತೊಬ್ಬ ವೇಗದ ಬೌಲರ್ ಆಗಿದ್ದ ಅಮರಸಿಂಗ್ ಹಾಗೂ ನಿಸ್ಸಾರ್ ಜೋಡಿ ಎಂತಹ ಪ್ರಬಲ ಬ್ಯಾಟಿಂಗ್ ಶಕ್ತಿಯನ್ನೂ ಅಂಜುವಂತೆ ಮಾಡಿತ್ತು.

೧೯೩೩-೩೪ ರಲ್ಲಿ ಇಂಗ್ಲೆಂಡ್ ತಂಡ ಭಾರತದಲ್ಲಿ ಪ್ರವಾಸ ಮಾಡಿತು. ಮುಂಬಯಿಯಲ್ಲಿ ಪ್ರಥಮ ಪಂದ್ಯ ಪ್ರಾರಂಭವಾಯಿತು. ಭಾರತವನ್ನು ೨೧೯ ರನ್‌ಗಳಿಗೆ ಔಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಆಟಗಾರ ಏ. ಮಿಚೆಲ್‌ರವರು ತಮ್ಮ ತಂಡದ ಬ್ಯಾಟಿಂಗ್ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಪೆವಿಲಿಯನ್ ಸೇರಬೇಕಾಯಿತು. ಮೊದಲ ಸರಣಿಯಲ್ಲಿ ಮಾಡಿದುದಕ್ಕಿಂತ ಹೆಚ್ಚು ವೇಗವಾಗಿ ಬೌಲಿಂಗ್ ಮಾಡಲು ಕಲಿತಿದ್ದ ನಿಸ್ಸಾರ್ ಅವರು ಮಿಚೆಲ್ ಅವರನ್ನು ‘ಕ್ಲೀನ್ ಬೌಲ್ಡ್’ ಮಾಡಿದ್ದರು. ಆ ಸರದಿಯಲ್ಲಿ ಅವರು ೩೩.೫ ಓವರ್‌ಗಳನ್ನು ಬೌಲ್ ಮಾಡಿ ೯೦ ರನ್‌ಗಳನ್ನಿತ್ತು ಐದು ವಿಕೆಟ್ ಸಂಪಾದಿಸಿದ್ದರು. ಕಲ್ಕತ್ತದಲ್ಲಿನ ದ್ವಿತೀಯ ಟೆಸ್ಟ್‌ನಲ್ಲಿ ಅವರು ಅದೃಷ್ಟದ ನೆರವಿಲ್ಲದೆ ಎರಡೇ ವಿಕೆಟ್‌ಗಳನ್ನು ಪಡೆದು ತೃಪ್ತರಾಗಬೇಕಾಯಿತು. ಜ್ವರದಿಂದ ಅವರು ಮೂರನೆಯ ಟೆಸ್ಟ್‌ನ್ನು ಆಡಲಾಗಲಿಲ್ಲ. ಈ ಸರಣಿಯಲ್ಲಿ ಮಹಮ್ಮದ್ ನಿಸ್ಸಾರ್ ಹಾಗೂ ಅಮರಸಿಂಗ್ ಜೋಡಿ ಒಟ್ಟಿಗೆ ೨೧ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು.

೧೯೩೬ ರಲ್ಲಿ ಪುನಃ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ದಲ್ಲಿ ತಂಡ ತೆರಳಿತು. ಲಾರ್ಡ್ಸ್‌ನಲ್ಲಿ ಪ್ರಥಮ ಪಂದ್ಯ ಜೂನ್ ೨೭ರಂದು ಪ್ರಾರಂಭವಾಯಿತು. ಇಂಗ್ಲೆಂಡ್‌ನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ೧೪೭ ರನ್‌ಗಳಿಗೆ ಔಟಾಯಿತು. ಇಂಗ್ಲೆಂಡ್ ಹೆಚ್ಚು ರನ್ ಪೇರಿಸಿ ಭಾರತವನ್ನು ಇನಿಂಗ್ಸ್ ಅಂತರದಲ್ಲಿ ಸೋಲಿಸುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮಹಮ್ಮದ್ ನಿಸ್ಸಾರ್ ಹಾಗೂ ಅಮರಸಿಂಗ್ ಜೋಡಿ ತಮ್ಮ ಚಾಣಾಕ್ಷ ಬೌಲಿಂಗ್‌ನಿಂದ ಇಂಗ್ಲೆಂಡ್ ತಂಡವನ್ನು ೧೩೪ ರನ್ನುಗಳಿಗೆ ಔಟ್ ಮಾಡಿದರು. ಆದರೆ ಭಾರತ ದ್ವಿತೀಯ ಸರದಿಯಲ್ಲಿ ೯೩ ರನ್‌ಗಳಿಗೆ ಔಟಾಗಿ ನಿಸ್ಸಾರ್-ಅಮರಸಿಂಗ್ ಜೋಡಿ ತಂದಿತ್ತ ಮೇಲುಗೈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೆ ಹೋಯಿತು.

ಓವಲ್‌ನಲ್ಲಾದ ಅಂತಿಮ ಟೆಸ್ಟ್‌ನಲ್ಲಿ ಮಹಮ್ಮದ್ ನಿಸ್ಸಾರ್ ಮತ್ತೆ ೧೨೦ ರನ್‌ಗಳಿಗೆ ೫ ವಿಕೆಟ್ ಸಂಪಾದಿಸಿದರು. ಒಟ್ಟು ತಾವಾಡಿದ ಆರು ಟೆಸ್ಟ್‌ಗಳಲ್ಲಿ ೨೫ ವಿಕೆಟ್‌ಗಳನ್ನು ೨೮.೨೮ ರ ಸರಾಸರಿಯಲ್ಲಿ ಸಂಪಾದಿಸಿದ ಮಹಮ್ಮದ್ ನಿಸ್ಸಾರ್ ಮೂರು ಬಾರಿ ಐದು ವಿಕೆಟ್‌ಗಳನ್ನು ಸಂಪಾದಿಸಿದರು.

೧೯೩೬ ರ ಇಂಗ್ಲೆಂಡ್ ಸರಣಿಯಲ್ಲಿ ಅವರು ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಒಟ್ಟು ೧೩೭ ವಿಕೆಟ್‌ಗಳನ್ನು ೨೧.೪ ರ ಸರಾಸರಿಯಲ್ಲಿ ಗಳಿಸಿದರು. ಅನಂತರ ವಿಶ್ವಮಹಾಯುದ್ಧ ಪ್ರಾರಂಭವಾಗಿ ಈ ಶ್ರೇಷ್ಠ ವೇಗದ ಬೌಲರ್ ಮತ್ತೂ ಹೆಚ್ಚಿನ ಸಾಧನೆ ಮಾಡುವುದನ್ನು ತಡೆಗಟ್ಟಿತು.

ರೈಡರ್ ಅವರ ತಂಡದ ವಿರುದ್ಧ

೧೯೩೫-೩೬ ರಲ್ಲಿ ಜ್ಯಾಕ್ ರೈಡರ್ ನಾಯಕತ್ವದಲ್ಲಿ ವಿಶ್ವದ ಶ್ರೇಷ್ಠ ಆಟಗಾರರಿದ್ದ ಅಂತರ ರಾಷ್ಟ್ರೀಯ ಕ್ರಿಕೆಟ್ ತಂಡ ಭಾರತದಲ್ಲಿ ಪ್ರವಾಸ ಮಾಡಿತು. ಈ ಸರಣಿಯಲ್ಲಿ ಅನಧಿಕೃತ ಕ್ರಿಕೆಟ್ ಟೆಸ್ಟ್ಗಳನ್ನು ಆಡಲಾಯಿತು. ಈ ಸರಣಿಯಲ್ಲಿ ಭಾರತದ ಪರವಾಗಿ ಒಟ್ಟು ೩೨ ವಿಕೆಟ್ ಗಳನ್ನು ಮಹಮ್ಮದ್ ನಿಸ್ಸಾರ್ ಸಂಪಾದಿಸಿದರು. ಕೇವಲ ೧೨.೯ ರನ್‌ಗಳ ಸರಾಸರಿಯಲ್ಲಿ ಪ್ರತಿಯೊಂದು ವಿಕೆಟ್‌ನ್ನು ಪಡೆದ ಇವರ ಬೌಲಿಂಗ್ ಪ್ರತಿಭೆ ಖ್ಯಾತ ಆಟಗಾರರಾದ ಜಾಕ್ ರೈಡರ್ ಹಾಗೂ ಸಿ.ಜಿ. ಮೆಕಾರ್‌ಟ್ನಿಯವರಿಂದ ಪ್ರಶಂಸಿಸಲ್ಟಟ್ಟಿತು. ಅವರಿಬ್ಬರೂ ಮಹಮದ್ ನಿಸ್ಸಾರ್ ಅವರು ಜಗತ್ತಿನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆಂದು ಅಭಿಪ್ರಾಯಪಟ್ಟಿದ್ದರು.

ಇದೇ ಸರಣಿಯ ಮದ್ರಾಸಿನ ಟೆಸ್ಟ್‌ನಲ್ಲಿ ಭಾರತ ಜ್ಯಾಕ್ ರೈಡರ್‌ರವರ ತಂಡದ ವಿರುದ್ಧ ಜಯಪಡೆಯಿತು. ಮಹಮ್ಮದ್ ನಿಸ್ಸಾರ್ ಭಾರತದ ತಂಡ ಪಡೆದ ಈ ವಿಜಯದ ರೂವಾರಿಯಾಗಿದ್ದರು. ಈ ಪಂದ್ಯದಲ್ಲಿ ಒಟ್ಟು ೯೭ ರನ್‌ಗಳನ್ನಿತ್ತು ಹನ್ನೊಂದು ವಿಕೆಟ್‌ಗಳನ್ನು ಪಡೆದ ಮಹಮ್ಮದ್ ನಿಸ್ಸಾರ್ ಈ ಅನಧಿಕೃತ ಟೆಸ್ಟ್‌ಗಳಲ್ಲಿ ಉದ್ದಕ್ಕೂ ಸ್ಥಿರವಾಗಿ ಉತ್ತಮವಾದ ಬೌಲಿಂಗ್ ಪ್ರದರ್ಶನ ನೀಡಿದರು. ಮದರಾಸ್ ಪಂದ್ಯದಲ್ಲಿ ಅವರು ಪ್ರಥಮ ಸರದಿಯಲ್ಲಿ ೫ ವಿಕೆಟ್‌ಗಳನ್ನು ೬೧ ರನ್‌ಗಳಿಗೂ ಹಾಗೂ ದ್ವಿತೀಯ ಸರದಿಯಲ್ಲಿ ೬ ವಿಕೆಟ್‌ಗಳನ್ನು ೩೬ ರನ್‌ಗಳಿಗೂ ಪಡೆದರು.

ಕ್ರಿಕೆಟ್ ಮುಖ್ಯ

ಟೆಸ್ಟ್‌ಪಂದ್ಯ ಮಾತ್ರವಲ್ಲ

ಕಠಿಣ ಪರಿಶ್ರಮದಿಂದ ಅತ್ಯುತ್ತಮ ಆಟಗಾರರಾಗಿ ವಿಶ್ವದಲ್ಲಿಯೇ ಖ್ಯಾತಿವೆತ್ತ ಬೌಲರ್ ಆಗಿದ್ದರೂ ಮಹಮದ್ ನಿಸ್ಸಾರವರ ಧೋರಣೆ ಬದಲಾಗಲಿಲ್ಲ. ಹೆಚ್ಚಿಗೆ ಪ್ರಶಂಸೆಯ ಮಾತುಗಳನ್ನು ಕೇಳಲು ಇಚ್ಛೆಪಡದ ಅವರು ತಮ್ಮ ಬೌಲಿಂಗ್ ದೌರ್ಬಲ್ಯಗಳ ಬಗ್ಗೆ ಹೇಳಬೇಕೆಂದು ತಮ್ಮ ಸಹೋದ್ಯೋಗಿಗಳಿಗೆ ಹೇಳುತ್ತಿದ್ದರು. ಅವರು ಕ್ರಿಕೆಟ್ ಕ್ರೀಡೆಗೆ ಮಹತ್ವಕೊಟ್ಟು ಎಂತಹ ಪಂದ್ಯದಲ್ಲಾದರೂ ಆಡುತ್ತಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ್ದನ್ನು ಪ್ರತಿಷ್ಠೆಯಾಗಿ ಭಾವಿಸುತ್ತಿರಲಿಲ್ಲ.

೧೯೩೬ರಲ್ಲಿ ಇಂಗ್ಲೆಂಡ್ ಪ್ರವಾಸ ಮುಗಿಸಿದ ನಂತರ ಮಹಮದ್ ನಿಸ್ಸಾರ್ ಅವರು ವಿದ್ಯಾರ್ಥಿಯಾಗಿದ್ದ ಲಾಹೋರ್‌ನ ಸರ್ಕಾರಿ ಕಾಲೇಜಿನವರು ದೆಹಲಿಯಲ್ಲಿ ಕೆಲವು ಪಂದ್ಯಗಳನ್ನಾಡಲು ಹೋಗಬೇಕಾಗಿತ್ತು. ಕಾಲೇಜಿನ ತಂಡದ ಕೆಲ ಆಟಗಾರರಿಗೆ ಒಂದು ಸಮಸ್ಯೆ ಎದುರಾಯಿತು. ಸರ್ಕಾರಿ ಕಾಲೇಜನ್ನು ಪ್ರತಿನಿಧಿಸುತ್ತಿದ್ದ ಮಹಮ್ಮದ್ ನಿಸ್ಸಾರ್ ಅವರನ್ನು ಈ ಪಂದ್ಯಾವಳಿಗೆ ಕರೆಯುವುದೇ ಬೇಡವೇ ಎಂಬುದೇ ಅವರ ಸಮಸ್ಯೆ. ಆ ಹೊತ್ತಿಗಾಗಲೆ ಟೆಸ್ಟ್ ಪಂದ್ಯಗಳಲ್ಲಿ ೨೫ ವಿಕೆಟ್‌ಗಳನ್ನು ಸಂಪಾದಿಸಿ ಜಗತ್ತಿನಲ್ಲೆ ಖ್ಯಾತ ವೇಗದ ಬೌಲರ್ ಗಳಲ್ಲೊಬ್ಬರೆಂದು ಪ್ರಶಂಸೆ ಪಡೆದ ನಿಸ್ಸಾರ್‌ರವರನ್ನು ಈ ಸಣ್ಣ ಪಂದ್ಯಾವಳಿಗೆ ಕರೆದರೆ ಅವರ ಪ್ರತಿಷ್ಠೆಗೆ ಕುಂದು ತಂದಂತಾದೀತಲ್ಲ ಎಂಬುದು ಒಂದು ಕಡೆಯ ವಾದ. ಇದುವರೆವಿಗೂ ಕಾಲೇಜಿನ ಪಂದ್ಯಗಳಲ್ಲೆಲ್ಲಾ ಆಡುತ್ತಿದ್ದ ಮಹಮ್ಮದ್ ನಿಸ್ಸಾರ್ ಅವರಿಗೆ ಹೇಳದೆ ಬೇರೆಯ ಕಡೆ ಪ್ರವಾಸ ಹೋಗುವುದು ಹೇಗೆ ಎಂಬುದು ಮತ್ತೊಂದು ವರ್ಗದ ವಾದ.

ಈ ರೀತಿ ಏನು ಮಾಡಬೇಕು ಎಂದು ತೋರದೆ ಧರ್ಮಸಂಕಟದ ಪರಿಸ್ಥಿತಿ ಇದ್ದಾಗ ನಿಸ್ಸಾರ್‌ರವರೇ ಆ ಹೊತ್ತಿಗೆ ಬಂದು ’ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಪಂದ್ಯಗಳಲ್ಲಿ ನನಗೆ ಆಡಲು ಅವಕಾಶವಿದೆಯೇ ಹೇಳಿ’ ಎಂದು ಕೇಳಿದರು. ಆಗ ವಿದ್ಯಾರ್ಥಿಗಳಲ್ಲೊಬ್ಬ ‘ಷೇಕ್ ಸಾಹೇಬರೇ, (ನಿಸ್ಸಾರ್‌ರವರನ್ನು ಗೌರವಪೂರ್ವಕವಾಗಿ ಅವರ ಸಹೋದ್ಯೋಗಿಗಳು ಕರೆಯುತ್ತಿದ್ದ ರೀತಿ) ನಿಮ್ಮಂತಹ ಶ್ರೇಷ್ಠ ಆಟಗಾರರಿಗೆ ತಕ್ಕ ಪ್ರವಾಸ ಇದಲ್ಲ. ದೆಹಲಿಗೆ ನಾವು ಮೂರನೆಯ ದರ್ಜೆಯ ಟಿಕೆಟ್‌ನಲ್ಲಿ ಪ್ರವಾಸ ಮಾಡಲಿದ್ದೇವೆ. ದೆಹಲಿಯ ಪ್ರವಾಸದಲ್ಲೂ ಸಹ  ನಿಮಗೆ ತಕ್ಕ ಸೌಲಭ್ಯಗಳನ್ನೊದಗಿಸಲಾಗುವುದಿಲ್ಲ. ನಿಮ್ಮಂತಹವರು ಈ ಪ್ರವಾಸ ಕೈಗೊಳ್ಳದಿರುವುದೇ ಮೇಲು’ ಎಂದ.

ನಿಸ್ಸಾರ್‌ರವರು ಈ ಮಾತುಗಳನ್ನು ಒಪ್ಪಲಿಲ್ಲ. ‘ಕ್ರಿಕೆಟ್ ಆಡಬೇಕಾದವರು ಈ ಸೌಲಭ್ಯಗಳಿಗೆಲ್ಲಾ ಬೆಲೆ ಕೊಡಬಾರದು. ಕ್ರಿಕೆಟ್ ಆಟ ಆಡುವುದು ಮುಖ್ಯವೇ ಹೊರತು ಸೌಲಭ್ಯಗಳಲ್ಲ’ ಎಂದವರೇ ತಂಡದೊಡನೆ ಮೂರನೆಯ ದರ್ಜೆಯ ಬೋಗಿ ಹತ್ತಿ ಆ ಬೇಸಿಗೆಯಲ್ಲಿ ದೆಹಲಿಯ ಪ್ರವಾಸವನ್ನು ಮಾಡಿದರು.

ದೆಹಲಿಯಲ್ಲಿನ ಕ್ರಿಕೆಟ್ ಮೈದಾನವಾದ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಈಗಿದ್ದಂತೆ ಆಗಿನ ಕಾಲದಲ್ಲಿ ಪೆವಿಲಿಯನ್ ಇರಲಿಲ್ಲ. ಪಂದ್ಯ ನೋಡಲು ಬಂದ ಜನಗಳಿಗೆ ಕುಳಿತುಕೊಳ್ಳಲು ಇದ್ದ ಸ್ಥಳದಲ್ಲೇ ರಾತ್ರಿ ಈ ಆಟಗಾರರು ಮಲಗಬೇಕಾದಂತಹ ಪರಿಸ್ಥಿತಿ ಇತ್ತು. ಈ ಎಲ್ಲಾ ಕಷ್ಟಗಳನ್ನು ಅನುಭವಿಸಿದ ನಿಸ್ಸಾರ್‌ರವರು ‘ನಾನು ಕ್ರಿಕೆಟ್ ಆಡಲು ಇಲ್ಲಿ ಬಂದಿದ್ದೇನೆ. ನಾನು ಇಲ್ಲಿ ಸಂತೋಷವಾಗಿ ಕಾಲ ಕಳೆಯುವುದಕ್ಕೆ ಬಂದಿಲ್ಲ. ಎಂತಹ ಇಕ್ಕಟ್ಟಿನ ಪ್ರಸಂಗದಲ್ಲಿಯೂ ಧೃತಿಗೆಡದೆ ಕ್ರಿಕೆಟ್ ಆಟವನ್ನು ಉತ್ತಮವಾಗಿ ಆಡಬಲ್ಲಂತಹವನೇ ಶ್ರೇಷ್ಠ ಆಟಗಾರ’ ಎಂದೆನ್ನುತ್ತಿದ್ದರು.

ಪ್ರಬಲ ಎದುರಾಳಿ ಎಂದರೆ ಉತ್ಸಾಹ

ಪ್ರತಿಸ್ಪರ್ಧಿ ಬ್ಯಾಟುಗಾರರು ಹೆಚ್ಚು ಸಾಮರ್ಥ್ಯ ಹೊಂದಿದಷ್ಟು ನಿಸ್ಸಾರ್‌ರವರಿಗೆ ಉತ್ಸಾಹ ಹೆಚ್ಚುತ್ತಿತ್ತು. ಹೆಚ್ಚು ಶಕ್ತಿಶಾಲಿ ತಂಡದ ವಿರುದ್ಧ ತಮ್ಮ ಶ್ರೇಷ್ಠ ಬೌಲಿಂಗ್ ಅನ್ನು ಮೀಸಲಾಗಿಡುತ್ತಿದ್ದರು. ಇದಕ್ಕಾಗಿಯೇ ಏನೋ, ಇವರ ಕಾಲದವರೇ ಆದ ಶ್ರೇಷ್ಠ ಬ್ಯಾಟುಗಾರರಾದ ಭಾರತದ ವಿಜಯ ಮರ್ಚೆಂಟ್, ಸಿ.ಕೆ. ನಾಯುಡು ಮುಂತಾದವರು ತಮ್ಮ ಅತ್ಯುತ್ತಮ ಬ್ಯಾಟಿಂಗ್ ಫಾರಂನಲ್ಲಿ ಈ ವೇಗದ ಬೌಲರ್‌ನಿಂದ ತೀವ್ರ ಪೈಪೋಟಿಯನ್ನೇ ಎದುರಿಸಬೇಕಾದದ್ದು.

ಕ್ವಾಡ್ರಾಂಗ್ಯುಲರ್ ಹಾಗೂ ಪೆಂಟಾಂಗ್ಯುಲರ್ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ಮಹಮ್ಮದ್ ನಿಸ್ಸಾರ್ ಕೇವಲ ೧೩ ರನ್‌ಗಳ ಸರಾಸರಿಯಲ್ಲಿ ಒಟ್ಟು ಐವತ್ತು ವಿಕೆಟ್ ಗಳಿಸಿದರು. ೧೯೩೮ ರಲ್ಲಿ ಮುಸ್ಲಿಂ ತಂಡದ ಪರವಾಗಿ ಆಡುತ್ತಿದ್ದ ನಿಸ್ಸಾರ್ ಅತ್ಯಂತ ಪ್ರಬಲ ತಂಡವೆಂದು ಹೆಸರಾದ ಹಿಂದೂಗಳ ತಂಡವನ್ನು ೬೯ ರನ್‌ಗಳಿಗೆ ತಮ್ಮ ಶ್ರೇಷ್ಠ ಬೌಲಿಂಗ್‌ನಿಂದ ಔಟ್ ಮಾಡಿದ್ದರು. ಕೇವಲ ೨೦ ರನ್‌ಗಳನ್ನಿತ್ತು ೫ ವಿಕೆಟ್‌ಗಳನ್ನು ಪಡೆದಿದ್ದರು. ನಿಸ್ಸಾರ್ ರವರ ಈ ಬೌಲಿಂಗ್ ಪ್ರದರ್ಶನಗಳನ್ನು ಅತ್ಯುತ್ತಮ ಎಂದು ಕರೆಯುವುದಕ್ಕೆ ಕಾರಣಗಳು ಇವೆ. ಆಗ ‘ಹಿಂದೂ’ಗಳ ತಂಡದಲ್ಲಿ ಸಿ.ಕೆ. ನಾಯುಡು, ವಿಜಯ ಮರ್ಚೆಂಟ್, ವಿನೂ ಮಂಕಡ್, ಲಾಲಾ ಅಮರನಾಥ್, ಹಾಗೂ ನಾನೂಮಲ್ ಮುಂತಾದ ಶ್ರೇಷ್ಠ ಬ್ಯಾಟುಗಾರರಿದ್ದರು. ಈ ಎಲ್ಲಾ ಬ್ಯಾಟುಗಾರರು ನಿಸ್ಸಾರ್‌ರವರ ಅತಿ ಹೆಚ್ಚು ವೇಗದ ಬೌಲಿಂಗ್ ಪ್ರದರ್ಶನಗಳನ್ನು ೧೯೩೮ ರ ಪಂದ್ಯಗಳಲ್ಲಿ ಕಾಣಬೇಕಾಯಿತು.

ಇಂದೂ ತಮ್ಮ ಅತ್ಯುತ್ತಮ ಬ್ಯಾಟಿಂಗ್ ದಾಖಲೆಗಳಿಂದ ಭಾರತದ ಶ್ರೇಷ್ಠ ಬ್ಯಾಟುಗಾರರಲ್ಲೊಬ್ಬರಾದ ವಿಜಯ್ ಮರ್ಚೆಂಟ್‌ರ ಅಭಿಪ್ರಾಯದಲ್ಲಿ ಅವರೆದುರಿಸಿದ ವೇಗದ ಬೌಲರುಗಳಲ್ಲಿಯೇ ಮಹಮ್ಮದ್ ನಿಸ್ಸಾರ್ ಸರ್ವಶ್ರೇಷ್ಠರಾಗಿದ್ದವರು. ವಿಜಯ್ ಮರ್ಚೆಂಟ್ ತಮ್ಮ ಕ್ರಿಕೆಟ್ ಜೀವನದಲ್ಲಿ ಆಸ್ಟೇಲಿಯಾದ ಕೀತ್ ಮಿಲ್ಲರ್, ರೇ ಲಿಂಡ್‌ವಾಲ್, ಇಂಗ್ಲೆಂಡಿನ ಅಲಾನ್, ಬಿಲ್ ವೋಸ್ ಮುಂತಾದ ಪ್ರತಿಭಾವಂತ ವೇಗದ ಬೌಲರುಗಳನ್ನು ಎದುರಿಸಿದ್ದರೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಬೆದರಿಸುವ ಬೌಲರ್ ಅಲ್ಲ

ಆಗಿನ ಕಾಲದ ಅತ್ಯಂತ ವೇಗದ ಬೌಲರ್ ಯಾರು ಎಂಬುದನ್ನು ನಿರ್ಧರಿಸುವುದು ಕಷ್ಟವಾದರೂ ಮಹಮ್ಮದ್ ನಿಸ್ಸಾರ್‌ರವರನ್ನು ಅಂದಿನ ದಿನದ ಒಳ್ಳೆಯ ಗುಣದ ಮೃದು ಹೃದಯದ ವೇಗದ ಬೌಲರ್ ಎಂದು ಧಾರಾಳವಾಗಿ ಕರೆಯಬಹುದು. ತಮ್ಮ ವೇಗದ ಬೌಲಿಂಗ್‌ನಿಂದ ಪ್ರತಿಸ್ಪರ್ಧಿಯನ್ನು ಹೆದರಿಸಿ ಮೇಲುಗೈ ಸಾಧಿಸುವಂತಹ ಗುಣವನ್ನು ಮಹಮದ್ ನಿಸ್ಸಾರ್ ಪಡೆದಿರಲಿಲ್ಲ. ಅವರು ಎಂದಿಗೂ ಎದುರಾಳಿ ಬ್ಯಾಟುಗಾರನ ದೇಹದ ಮೇಲೆ ದೃಷ್ಟಿ ಇಡಲಿಲ್ಲ. ಅವರಿಗೆ ವಿಕೆಟ್‌ನತ್ತಲೇ ದೃಷ್ಟಿ. ತಮ್ಮ ಆಕ್ರಮಣಕಾರಿ ಬೌಲಿಂಗ್‌ನಿಂದ ಅವರು ಎಂದೂ ಎದುರಾಳಿ ಆಟಗಾರನ ಮೈಮೂಳೆ ಮುರಿಯುವಂತೆ ಮಾಡಿರಲಿಲ್ಲ. ಪ್ರತಿಸ್ಪರ್ಧಿಯನ್ನು ಅಧೀರನನ್ನಾಗಿಸಿ ವಿಕೆಟ್ ಪಡೆಯುವ ಕಲೆ ಹೇಡಿತನವೆಂದು ಅವರು ಬಗೆದಿದ್ದರು. ಎದುರಾಳಿಯ ದೇಹಕ್ಕೆ ಬೌಲಿಂಗ್ ಮಾಡಲು ನಾಯಕ ನಿಂದ ಆಜ್ಞೆ ಬಂದರೂ ಸಹ ಅದನ್ನು ನಿರಾಕರಿಸಿದ ನಿಸ್ಸಾರ್ ಉದಾತ್ತವಾಗಿ ನಡೆದುಕೊಂಡರು. ಈ ಪ್ರಸಂಗ ೧೯೩೯ರ ಪೆಂಟಾಂಗ್ಯುಲರ್ ಟೂರ್ನಮೆಂಟ್‌ನಲ್ಲಿ ನಡೆಯಿತು. ಅದಕ್ಕೆ ಮುನ್ನ ಕ್ರಿಕೆಟ್‌ನಲ್ಲಿ ಕೆಲವರ್ಷಗಳ ಹಿಂದೆ ನಡೆದ ಪ್ರಸಂಗವನ್ನು ಬಣ್ಣಿಸಬೇಕಾಗಿದೆ.

ಬಾಡಿಲೈನ್

೧೯೩೨-೩೩ ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಗಳ ನಡುವಣ ಆಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಜಾರ್ಡಿನ್ ಒಂದು ಹೊಸ ತಂತ್ರವನ್ನು ನಿರೂಪಿಸಿದ್ದರು. ಆಸ್ಟ್ರೇಲಿಯಾದ ಪ್ರಬಲ ಬ್ಯಾಟಿಂಗ್ ಶಕ್ತಿಯನ್ನು ನಿಯಂತ್ರಿಸಲು ಅವರು ತಮ್ಮ ವೇಗದ ಬೌಲರುಗಳಿಗೆ ಎದುರಾಳಿಯ ದೇಹದ ಮೇಲೆ ಬೌಲಿಂಗ್ ಮಾಡುವಂತೆ ಸೂಚನೆ ಕೊಟ್ಟರು. ಈ ಬೌಲಿಂಗ್ ವಿಧಾನ  ಇಂದಿಗೂ ‘ಬಾಡಿಲೈನ್’ ಎಂದು ಕುಖ್ಯಾತವಾಗಿದೆ. ತಮ್ಮ ನಾಯಕನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಹೆರಾಲ್ಡ್ ಲಾರ್‌ವುಡ್ ಹಾಗೂ ಬಿಲ್ ವೋಸ್‌ರಂತಹ ವೇಗದ ಬೌಲರ್‌ಗಳು ಪ್ರತಿಸ್ಪರ್ಧಿಯನ್ನು ಈ ಬೌಲಿಂಗ್ ವಿಧಾನದಿಂದ ಅಧೀರರನ್ನಾಗುವಂತೆ ಮಾಡುತ್ತಿದ್ದರು. ಆದರೆ ಆಗ ಇಂಗ್ಲೆಂಡ್ ತಂಡದ ಪರ ಆಡುತ್ತಿದ್ದ ಭಾರತದ ಇಫ್ತಿಕಾರ್ ಪಟೌಡಿ (ನವಾಬ್ ಆಫ್ ಪಟೌಡಿಯವರ ತಂದೆ. ಎರಡು ರಾಷ್ಟ್ರಗಳ ಪರ ಟೆಸ್ಟ್ ಆಡಿದ ಆಟಗಾರ ಎಂಬ ದಾಖಲೆ ಇವರದು) ಹಾಗೂ ಇಂಗ್ಲೆಂಡಿನ ಮತ್ತೊಬ್ಬ ವೇಗದ ಬೌಲರ್ ಗುಬ್ಬಿ ಅಲಾನ್ ಈ ತಂತ್ರಕ್ಕೆ ವಿರೋಧ ತೋರಿಸಿದರು. ಇಂಗ್ಲೆಂಡ್ ಆ ಸರಣಿ ಗೆದ್ದಿತಾದರೂ ತಮ್ಮ ನಿಲುವಿನಿಂದ ಹೊರಬರದ ಸನ್ನಡತೆಯ ಕ್ರಿಕೆಟ್ ಪಟು ಗಳಾಗಿ ಈ ಇಬ್ಬರು ಆಟಗಾರರು ಖ್ಯಾತರಾದರು.

ನಾನು ಆ ರೀತಿ ಮಾಡಲಾರೆ

ಅದೇ ರೀತಿ ತಮ್ಮ ಉದಾತ್ತ ಗುಣ ಪ್ರದರ್ಶಿಸಿದರು ನಿಸ್ಸಾರ್. ಹಿಂದೂಗಳ ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ‘ಆಲ್‌ರೌಂಡ್’ ಆಟಗಾರರಾಗಿದ್ದ ವಿನೂ ಮಂಕಡ್ ಆಡುತ್ತಿದ್ದರು. ಅವರಿಗೆ ಆಗ ಕಾಲಿನ ಮಂಡಿಯ ಮೇಲ್ಭಾಗದಲ್ಲಿ ಗಾಯವಾಗಿತ್ತು. ಮುಸ್ಲಿಂ ಪಂಗಡದ ನಾಯಕ ವಜೀರ್ ಆಲಿಯವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಾವು ಪಂದ್ಯ ಗೆಲ್ಲಬೇಕೆಂದು ನಿಸ್ಸಾರ್‌ರವರಿಗೆ ಹೆಚ್ಚಿನ ಬೌನ್ಸರ್‌ಗಳನ್ನು ಪ್ರಯೋಗಿಸಿ ಬ್ಯಾಟುಗಾರರನ್ನು ಬೆದರಿಸಬೇಕೆಂದು ಸೂಚನೆ ಕೊಟ್ಟರು.

‘ನಾನು ಆ ರೀತಿ ಬೌಲಿಂಗ್ ಮಾಡಲಾರೆ’, ಎಂದರು ನಿಸ್ಸಾರ್. ‘ಎದುರಾಳಿಯ ದೇಹದ ಮೇಲೆ ಬೌಲ್ ಮಾಡಲಾರೆ. ಬೌನ್ಸರ್ ಅನ್ನು ವಿಕೆಟ್ ಪಡೆಯುವ ಒಂದು ಅಸ್ತ್ರವನ್ನಾಗಿ ಉಪಯೋಗಿಸುತ್ತೇನೆಯೇ ವಿನಾಃ ಎದುರಾಳಿ ಬ್ಯಾಟುಗಾರನನ್ನು ಬೆದರಿಸುವುದಕ್ಕಲ್ಲ’ ಎಂಬ ಮಾತನ್ನು ನಿಸ್ಸಾರ್ ಸ್ಪಷ್ಟವಾಗಿಯೇ ಹೇಳಿದಾಗ ನಾಯಕ ವಜೀರ್ ಆಲಿಯವರಿಗೆ ಕೋಪ ಬಂದಿತೇನೋ ನಿಜ. ಆದರೆ ಈ ಘಟನೆಯಿಂದ ನಿಸ್ಸಾರ್‌ರವರು ಪುಟವಿಟ್ಟ ಚಿನ್ನದಂತೆ ಸಂಭಾವಿತ ಆಟಗಾರನಾಗಿ ಬೆಳಕಿಗೆ ಬಂದರು. ಹಿಂದೂಗಳು ಆ ಪಂದ್ಯವನ್ನು ಗೆದ್ದರು. ಆದರೆ ಆ ಪಂದ್ಯವನ್ನು ತಮ್ಮ ತಂಡಕ್ಕಾಗಿ ಗೆಲ್ಲಿಸುವುದಕ್ಕೆ ನಿಸ್ಸಾರ್ ತಾವು ನಿಷ್ಠೆಯಿಂದ ನಂಬಿಕೊಂಡಿದ್ದ ತತ್ವಗಳಿಗೆ ತಿಲಾಂಜಲಿಯನ್ನು ಕೊಡಲಿಲ್ಲ.

ಒಂದು ವಿಚಿತ್ರ ಪ್ರಸಂಗ

ತಮ್ಮ ಸಾವಿನ ಬಗ್ಗೆ ಸಂಪಾದಕೀಯ ಹಾಗೂ ಸುದ್ದಿ ಪತ್ರಗಳನ್ನು ನೋಡಬೇಕಾದ ಸ್ವಾರಸ್ಯಕರ ಸಂಗತಿ ಮಹಮ್ಮದ್ ನಿಸ್ಸಾರ್‌ರವರ ಬದುಕಿನಲ್ಲಿ ನಡೆಯಿತು. ೧೯೩೫ರ ಭೂಕಂಪವೊಂದರಲ್ಲಿ ನಿಸ್ಸಾರ್ ಮಡಿದರೆಂಬ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ‘ದಿ ಹಿಂದೂ’  ಪತ್ರಿಕೆ ದೊಡ್ಡಕ್ಷರಗಳಲ್ಲಿ ಇವರ ಸಾವಿನ ಸುದ್ದಿಯನ್ನು ಪ್ರಕಟಿಸಿತು. ಆದರೆ ಕೆಲವು ದಿನಗಳ ನಂತರ ಭಾರತದ ಶ್ರೇಷ್ಠ ವೇಗದ ಬೌಲರ್ ಮಹಮ್ಮದ್ ನಿಸ್ಸಾರ್ ಬದುಕಿ ಉಳಿದಿದ್ದಾರೆಂಬ ಸಂಗತಿ ಜಗತ್ತಿಗೆ ತಿಳಿಯಿತು. ಭೂಕಂಪದಲ್ಲಿ ಸತ್ತ ವ್ಯಕ್ತಿ ಇದೇ ಹೆಸರಿನವನಾಗಿದ್ದ. ಅನಂತರ ೧೯೩೬ರಲ್ಲಿ ಅವರು ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಬೇಕಾಯಿತು.

ಆದರೆ ವಿಶ್ವದ ಅಂಪೈರ್ ೧೯೬೩ ರ ಮಾರ್ಚ್ ೧೨ ರಂದು ನಿಸ್ಸಾರ್‌ರವರ ಬದುಕಿನಲ್ಲಿ ಕಡೆಯನ್ನು ತಂದು ‘ಓವರ್’ ಎಂದು ಕರೆದ. ಲಾಹೋರ್‌ನಲ್ಲಿ ನಿಸ್ಸಾರ್ ರವರು ತಮ್ಮ ಕೊನೆಯುಸಿರೆಳೆದಾಗ ೧೯೩೫ರ ಘಟನೆ ಮರುಕಳಿಸಬಾರದೆ ಎಂದು ಕ್ರೀಡಾಪ್ರೇಮಿಗಳು ಮೊರೆ ಇಟ್ಟರು. ಆದರೆ ಚರಿತ್ರೆ ಈಗ ಮಾತ್ರ ಪುನರಾವೃತ್ತವಾಗಲಿಲ್ಲ. ಭಾರತದ ಶ್ರೇಷ್ಠ ವೇಗದ ಬೌಲರ್‌ನ ಬದುಕಿನ ಅಂಕದ ಪರದೆ ಜಾರಿಬಿತ್ತು.

ದೈಹಿಕ ಸಾಮರ್ಥ್ಯ

ಸ್ಥೂಲದೇಹ, ಸಾಮಾನ್ಯವಾದ ಎತ್ತರ, ಒಳ್ಳೆಯ ಸಾಮರ್ಥ್ಯವಿದ್ದ ಭುಜಗಳು ನಿಸ್ಸಾರ್‌ರವರಿಗಿತ್ತು. ಜಾತ್ಯತೀತಗುಣ, ಸ್ನೇಹಪರತೆ, ತಮ್ಮದೇ ಆಟದಲ್ಲಿ ಕೊರತೆ ಕಂಡುಹಿಡಿದು ತಿದ್ದಿಕೊಳ್ಳುವ ಅಥವಾ ಮತ್ತೊಬ್ಬರ ಆಟದಲ್ಲಿ ಕೊರತೆ ಕಂಡು ಬಂದರೆ ಅದನ್ನು ಸೂಕ್ಷ್ಮವಾಗಿ ಅವನಿಗೆ ಹೇಳಿ ಅದನ್ನು ತಿದ್ದುವ ಚಿಕಿತ್ಸಕ ದೃಷ್ಟಿ-ಇವು ನಿಸ್ಸಾರ್‌ರವರ ಗುಣಗಳು. ಅವರ ಬೌಲಿಂಗ್‌ನಲ್ಲಿ ಅನೇಕರು ಸುಲಭ ಕ್ಯಾಚುಗಳನ್ನು ಬಿಟ್ಟಿದ್ದರೂ ಅವರು ಎಂದೂ ದೂಷಿಸಲಿಲ್ಲ.

ವೇಗದ ಬೌಲರ್‌ಗಿರಬೇಕಾದ ದಣಿವಾಗದ ದೈಹಿಕ ಸಾಮರ್ಥ್ಯ ನಿಸ್ಸಾರ್‌ರವರಿಗಿತ್ತು. ಗೆಲ್ಲಬೇಕೆಂಬ ಛಲದಿಂದ ಅವರು ಸ್ಫೂರ್ತಿಯಿಂದಲೇ ಕ್ರಿಕೆಟ್‌ನ ಅತ್ಯುನ್ನತ ತತ್ವಗಳಿಗೆ ಬದ್ಧರಾಗಿ ಆಟವಾಡುತ್ತಿದ್ದರು. ಇತರ ವೇಗದ ಬೌಲರ್‌ಗಳು ಸಾಮಾನ್ಯವಾಗಿ ಬೌಲಿಂಗ್ ಮಾಡುತ್ತಿದ್ದಂತೆಯೇ ದೈಹಿಕ ಸಾಮರ್ಥ್ಯ ಕಡಿಮೆಯಾಗಿ ಒಂದಾದನಂತರದ ಮತ್ತೊಂದು ಓವರ್‌ನಲ್ಲಿ ವೇಗವನ್ನು ತಗ್ಗಿಸುತ್ತಿದ್ದರು. ಆದರೆ ನಿಸ್ಸಾರ್‌ರವರು ಹೆಚ್ಚಿನ ಕಾಲ ಬೌಲಿಂಗ್ ಮಾಡಿದರೂ ನಿತ್ರಾಣರಾಗದೆ ಎಂದಿಗಿಂತ ಹೆಚ್ಚಿನ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು. ೧೯೩೬ರ ಪೆಂಟಾಂಗ್ಯುಲರ್ ಪಂದ್ಯವೊಂದರಲ್ಲಿ ಅವರು ತಮ್ಮ ೨೬ನೆಯ ಓವರ್‌ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದರು ಎಂಬ ಸಂಗತಿ ಅವರ ದೈಹಿಕ ಸಾಮರ್ಥ್ಯವನ್ನು ನಿರೂಪಿಸುತ್ತದೆ.

ಕೆಲವು ಅಂಕಿ ಅಂಶಗಳ ಸಾಕ್ಷ್ಯ

ಸ್ಲಿಪ್‌ನಲ್ಲಿ ಬಿಗುವಾದ ಕ್ಷೇತ್ರ ರಕ್ಷಣೆಗೆ ಹೆಸರಾಗಿದ್ದ ಮಹಮ್ಮದ್ ನಿಸ್ಸಾರ್ ಅತ್ಯಂತ ಕಷ್ಟವಾದ ಕ್ಯಾಚುಗಳನ್ನು ಹಿಡಿಯುತ್ತಿದ್ದರು. ಬ್ಯಾಟಿಂಗ್‌ನಲ್ಲಿ ಅವರು ಮೊದಲನೆಯ ಸ್ಥಾನದಿಂದ ಹನ್ನೊಂದನೆಯ ಸ್ಥಾನದವರೆಗೂ ಎಲ್ಲಾ ಸ್ಥಾನದಲ್ಲೂ ಆಡಿದ್ದರು. ೧೯೩೨ ರಲ್ಲಿ ಲಿವರ್‌ಪೂಲ್ ನಲ್ಲಿ ಲ್ಯಾಂಕಾಷೈರ್ ವಿರುದ್ಧ ಅವರು ಕಡೆಯ ಆಟಗಾರರಾಗಿ ಬಂದು ತಮ್ಮ ಬೌಲಿಂಗ್ ಸಂಗಾತಿಯಾದ ಅಮರ್‌ಸಿಂಗ್ ರೊಡನೆ ಸೇರಿ ೯೪ ರನ್‌ಗಳನ್ನು ಪೇರಿಸಿದರು.

೧೯೩೮ ರಲ್ಲಿ ಲಾರ್ಡ್ ಟೆನಿಸನ್‌ರವರ ನಾಯಕತ್ವ ದಲ್ಲಿ ಬಂದ ಅಂತರರಾಷ್ಟ್ರೀಯ ತಂಡದ ವಿರುದ್ಧ ಅವರು ೩೧೧ ರನ್‌ಗಳನ್ನಿತ್ತು ೧೧ ವಿಕೆಟ್ ಪಡೆದು ಪುನಃ ತಮ್ಮ ಶ್ರೇಷ್ಠ ಬೌಲಿಂಗ್ ಪ್ರತಿಭೆಯನ್ನು ಪ್ರದರ್ಶಿಸಿದರು.

ಅವರಾಡಿದ ಕಡೆಯ ಪಂದ್ಯದಲ್ಲೂ ೭೫ ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದಿದ್ದರು. ಕ್ರಿಕೆಟ್‌ನಲ್ಲಿ ಕಳೆದ ಕಡೆಯ ಕ್ಷಣಗಳಲ್ಲೂ ಅವರು ಪೈಪೋಟಿ ಇಲ್ಲದಂತೆ ಶ್ರೇಷ್ಠ ವೇಗದ ಬೌಲರ್ ಆಗಿಯೇ ಉಳಿದಿದ್ದರು.

ರಣಜಿ ಟ್ರೋಫಿ ಪಂದ್ಯಗಳಲ್ಲಿ ೩೧ ವಿಕೆಟ್‌ಗಳನ್ನು ಕೇವಲ ೧೧-೬೧ರ ಸರಾಸರಿಯಲ್ಲಿ ಪಡೆದ ನಿಸ್ಸಾರ್ ವೇಗದ ಬೌಲರ್ ಆಗಿ, ರನ್ ನಿಯಂತ್ರಣದಲ್ಲಿ ಹಾಗೂ ವಿಕೆಟ್‌ಗಳಿಕೆಯಲ್ಲಿ ಭಾರತದ ವೇಗದ ಬೌಲರ್‌ಗಳಲ್ಲಿಯೇ ಅಗ್ರ ಸಾಧನೆ ಮಾಡಿದರೆನ್ನಬೇಕು. ಈ ಕೆಳಗಿನ ಅಂಕಿ ಅಂಶಗಳು ಅವರ ಸಾಧನೆಗೆ ಕನ್ನಡಿಯಾಗಿವೆ.

ಅಧಿಕೃತ ಟೆಸ್ಟ್ ಪಂದ್ಯಗಳು

(ಓ: ಓವರ್, ಮೆ: ಮೆಯ್ಡನ್ ಓವರ್, ಎಂದರೆ ಒಂದು ರನ್ನನ್ನೂ ಕೊಡದ ಓವರ್ ರ: ರನ್‌ಗಳು ವಿ: ವಿಕೆಟ್‌ಗಳು.)

ಮೆ ವಿ
೧೯೩೨ ಇಂಗ್ಲೆಂಡ್ ವಿರುದ್ಧ ೪೪ ೧೩೫
೧೯೩೩ ಇಂಗ್ಲೆಂಡ್ ವಿರುದ್ಧ ೭೩.೫ ೧೧ ೨೨೯
೧೯೩೬ ಇಂಗ್ಲೆಂಡ್ ವಿರುದ್ಧ ೮೪ ೧೫ ೩೪೩ ೧೨
೨೦೧.೫ ೩೪ ೭೦೭ ೨೫
ಸರಾಸರಿ ೨೮.೨೮

 

ಅನಧಿಕೃತ ಟೆಸ್ಟ್‌ಗಳು

ಮೆ ವಿ
೧೯೩೫-೩೬ ಜಾಕ್ ರೈಡರ್ ತಂಡದ ವಿರುದ್ಧ ೧೩೫.೨ ೨೩ ೪೦೪ ೩೨
೧೯೩೮ ಲಾರ್ಡ್ ಟೆನಿಸನ್          ತಂಡದ ವಿರುದ್ಧ ೯೮ ೧೦ ೩೧೧ ೧೧
೨೩೩.೨ ೩೩ ೭೧೫ ೪೩
ಸರಾಸರಿ ೧೬.೬೨

 

ರಣಜಿ ಟ್ರೋಫಿ ಪಂದ್ಯಗಳು
(ದಕ್ಷಿಣ ಪಂಜಾಬ್ ಪ್ರಾಂತದ ಪರವಾಗಿ ಮಹಮದ್ ನಿಸ್ಸಾರ್ ಆಡುತ್ತಿದ್ದರು)

ಮೆ ವಿ
೧೯೩೪-೩೫ ೪೫.೪ ೯೯
೧೯೩೮-೩೯ ೮೨ ೧೬ ೨೦೩ ೧೭
೧೯೩೯-೪೦ ೨೨ ೪೧
೧೯೪೦-೪೧ ೧೧ ೧೭
೧೬೦.೪ ೩೭ ೩೬೦ ೩೧
ಸರಾಸರಿ ೧೧.೬೧

 

ಇತರ ಪ್ರಥಮ ದರ್ಜೆಯ ಪಂದ್ಯಗಳಲ್ಲಿ

ಓವರ್ ಮೆಯ್ಡನ್ ರನ್ ವಿಕೆಟ್
೧೬೨೪.೦ ೩೫೭ ೪೨೫೮ ೨೧೭
ಸರಾಸರಿ ೧೯.೬೨

 

ನಿಸ್ಸಾರ್ ಕ್ರಿಕೆಟ್ ಜೀವನದ ಬೌಲಿಂಗ್ ವಿವರಗಳು

ಟೆಸ್ಟ್‌ಗಳು ೨೦೧.೫ ೩೪ ೭೦೭ ೨೫
ಅನಧಿಕೃತ ಟೆಸ್ಟ್‌ಗಳು ೨೩೩.೨ ೩೩ ೭೧೫ ೪೮
ರಣಜಿ ಟ್ರೋಫಿ ೧೬೦.೪ ೩೭ ೩೬೦ ೩೧
ಪ್ರಥಮ ದರ್ಜೆಯ
ಪಂದ್ಯಗಳು ೧೬೨೪.೦ ೩೫೭ ೪೨೫೮ ೨೧೭
೨೨೧೯ ೪೬೧ ೬೦೪೦ ೩೨೧
ಸರಾಸರಿ ೧೯.೧೨

ಬೌಲರ್ ಆಗಿ

ಮಹಮದ್ ನಿಸ್ಸಾರ್ ಕೆಲವೇ ವರ್ಷಗಳ ಕಾಲ ಕ್ರಿಕೆಟ್ ಆಡಿದರು. ೧೯೩೯ ರಲ್ಲಿ ಎರಡನೆಯ ಮಹಾ ಯುದ್ಧ ಪ್ರಾರಂಭವಾಯಿತು. ಒಂದು ದೇಶದವರು ಮತ್ತೊಂದು ದೇಶಕ್ಕೆ ಹೋಗಿ ಕ್ರಿಕೆಟ್ ಆಡುವುದು ಅಸಾಧ್ಯವಾಯಿತು. ಇದರಿಂದ ನಿಸ್ಸಾರ್ ಅಂತಹ ಹಲವರು ಆಟಗಾರರಿಗೆ ಒಳ್ಳೆಯ ಅವಕಾಶಗಳು ತಪ್ಪಿಹೋದವು. ಆದರೂ ಅವರ ಬೌಲಿಂಗ್ ಕಲೆ ಹಾಗೂ ಚಾಣಾಕ್ಷತೆಯ ಬಗೆಗಿನ ಚರ್ಚೆಗಳು ಅವರ  ಕಾಲದಿಂದ ಇಂದಿನ ದಿನದವರೆಗೂ ಮುಂದುವರಿದಿವೆ. ಭಾರತದಲ್ಲಿ ಅಂತಹ ವೇಗದ ಬೌಲರ್‌ಗಳು ಅವರನಂತರ ನಮಗೆ ಕಾಣಲಿಲ್ಲವಾದ್ದರಿಂದ ಇಂದೂ ಸಹ ಅವರ ದೈಹಿಕ ಸಾಮರ್ಥ್ಯ, ಬೌಲಿಂಗ್ ಮಾಡುವ ಮುನ್ನ ಅವರ ತಾಳಬದ್ಧವಾದ ಓಟ ಇವುಗಳನ್ನೇ ವಿವರಿಸಿ ಮಾತನಾಡಲಾಗುತ್ತಿದೆ. ವಾಸ್ತವವಾಗಿ ಒಬ್ಬ ಶ್ರೇಷ್ಠ ವೇಗದ ಬೌಲರ್‌ನಲ್ಲಿ ಈ ಗುಣಗಳೆಲ್ಲಾ ಸಮ್ಮಿಳಿತವಾಗಿರಬೇಕು.

ಬೌಲಿಂಗ್‌ನ ಮೊದಲಿಗೆ ನಿಸ್ಸಾರ್ ೨೨ ಗಜಗಳ ದೂರದಿಂದ ಓಡಿ ಬರುತ್ತಿದ್ದರು. ಇತರ ಆಟಗಾರರು ಇವರಿಗಿಂತ ಹೆಚ್ಚಿನ ದೂರದಿಂದ ಬೌಲಿಂಗ್ ಮಾಡುತ್ತಿದ್ದರೂ ಸಹ ನಿಸ್ಸಾರ್‌ರವರಿಗಿದ್ದ ವೇಗ ಅವರಿಗಿರಲಿಲ್ಲ. ಎಷ್ಟು ದೂರದಿಂದ ಒಬ್ಬ ವೇಗದ ಬೌಲರ್ ಓಡಿ ಬರುತ್ತಾರೆ ಎನ್ನುವುದಕ್ಕಿಂತ ಎಷ್ಟು ನಿಖರವಾಗಿ ಬೌಲಿಂಗ್ ಮಾಡಿ ಎದುರಾಳಿಯನ್ನು ಅಪಾಯಕ್ಕೆ ಸಿಕ್ಕಿಸುತ್ತಾರೆ ಎಂಬುದೇ ಮುಖ್ಯ. ಈ ರೀತಿಯಿಂದ ಮಹಮ್ಮದ್ ನಿಸ್ಸಾರ್ ಖ್ಯಾತರಾಗಿದ್ದರು.

ಬಲಿಷ್ಠ ಭುಜಗಳ ನೆರವಿನಿಂದ ನಿಸ್ಸಾರ್ ಬೌಲಿಂಗ್ ಮಾಡುವುದು ಕ್ರಿಕೆಟ್ ಪ್ರಿಯರಿಗೆ ಕಣ್ಣಿಗೆ ಹಬ್ಬವಾಗಿ ಕಾಣುತ್ತಿತ್ತು. ಅವರು ಆರು ಟೆಸ್ಟ್‌ಗಳಿಂದ ೨೫ ವಿಕೆಟ್ ಗಳಿಸಿದರೂ ಸಹ ಇವರಿಗಿಂತ ಹೆಚ್ಚು ವಿಕೆಟ್ ಗಳಿಸಿದ ಅನೇಕರಿಗೆ ಇವರನ್ನು ಹೋಲಿಸಿ ಇವರೇ ಉತ್ತಮ ಬೌಲರ್ ಎನ್ನುತ್ತಿದ್ದರು.

ಎದುರಾಳಿ ಆಟಗಾರ ಚೆನ್ನಾದ ವಿರೋಧ ತೋರಿಸಿ ಒಳ್ಳೆಯ ಹೊಡೆತ ಹೊಡೆದಾಗ ನಿಸ್ಸಾರ್‌ರವರು ಪ್ರಶಂಸಿಸುತ್ತಿದ್ದರು. ಕೆಲವೊಮ್ಮೆ ಹಾಸ್ಯವಾಗಿ ಎದುರಾಳಿಯ ಆಟವನ್ನು ಅವರು ‘ಆತ ದೆವ್ವದಂತೆ ಆಡುತ್ತಿದ್ದಾನೆ. ಎಂತಹ ಬೌಲಿಂಗ್ ಹಾಕಿದರೂ ಚೆನ್ನಾಗಿ ಆಡುತ್ತಿದ್ದಾನೆ’ ಎನ್ನುತ್ತಿದ್ದರಂತೆ. ಆದರೂ ಮಹಮ್ಮದ್ ನಿಸ್ಸಾರ್‌ರವರ ಬೌಲಿಂಗ್‌ನಲ್ಲಿ ಪ್ರತಿಸ್ಪರ್ಧಿ ಬ್ಯಾಟುಗಾರ ಪ್ರತಿಯೊಂದು ರನ್ನನ್ನು ಗಳಿಸಲೂ ಬಹಳ ಕಷ್ಟಪಡಬೇಕಾಗುತ್ತಿತ್ತು. ಎಂತಹ ಶ್ರೇಷ್ಠ ಬ್ಯಾಟುಗಾರನಾದರೂ ಆತ ನಿಸ್ಸಾರ್‌ರವರ ಬೌಲಿಂಗ್ ಎದುರಿಸಿ ಸುಲಭದಲ್ಲಿ ಮೇಲುಗೈ ಸಾಧಿಸಲಾಗು ತ್ತಿರಲಿಲ್ಲ.

ವೇಗದ ಬೌಲರನ ಬೆಲೆ

ಈಚೆಗಿನ ವರ್ಷಗಳಲ್ಲಿ ಭಾರತದ ‘ಸ್ಪಿನ್’ ಬೌಲರುಗಳು ಕ್ರಿಕೆಟ್ ಪ್ರಪಂಚದಲ್ಲಿ ತುಂಬಾ ಹೆಸರು ಗಳಿಸಿದ್ದಾರೆ. ಜಗತ್ತಿನ ಸಮರ್ಥ ಆಟಗಾರರೂ ಇವರ ವಿರುದ್ಧ ‘ಬ್ಯಾಟ್ ಮಾಡಲು ಹೆದರುವಂತಾಗಿದೆ. ಭಾರತ ಹಲವಾರು ಟೆಸ್ಟ್ ಪಂದ್ಯಗಳನ್ನೂ ಸರಣಿಗಳನ್ನೂ ಗೆದ್ದಿದೆ. ಎಲ್ಲ ನಿಜ. ಆದರೆ ವೇಗದ ಬೌಲರ್‌ಗಳಿಲ್ಲದಿರುವುದು ಬಹು ದೊಡ್ಡ ಕೊರತೆಯಾಗಿದೆ. ಇದರಿಂದ ಪಂದ್ಯದಲ್ಲಿ ಹೊಸ ಚೆಂಡಿನ ನುಣುಪಿನ ಪ್ರಯೋಜನ ಪಡೆಯುವುದೇ ಸಾಧ್ಯವಿಲ್ಲದೆ ಹೋಗಿದೆ. ಎಷ್ಟೋ ಬಾರಿ ಎದುರಾಳಿಗಳ ಇನ್ನಿಂಗ್ಸ್‌ನ ನಾಲ್ಕೆ ದು ಓವರುಗಳಾಗುತ್ತಲೇ ಭಾರತದ ‘ಸ್ಪಿನ್ ಬೌಲರ್’ ಗಳು ಬೌಲ್ ಮಾಡಲು ಪ್ರಾರಂಭಿಸುವುದನ್ನು ಕಾಣುತ್ತೇವೆ. ಇತರ ದೇಶಗಳ ತಂಡಗಳವರಿಗೆ ಹೊಸ ಚೆಂಡು ದೊಡ್ಡ ವರವಾದರೆ ತಮ್ಮ ತಂಡ ಅದರ ಪ್ರಯೋಜನ ಪಡೆಯುವ ಹಾಗೆಯೇ ಇಲ್ಲ. ಇಷ್ಟು ಮಾತ್ರವಲ್ಲ, ನಮ್ಮಲ್ಲಿ ವೇಗದ ಬೌಲರುಗಳು ಇಲ್ಲದಿರುವುದರಿಂದ ನಮ್ಮ ಆಟಗಾರರಿಗೆ ವೇಗದ ಬೌಲಿಂಗನ್ನು ಎದುರಿಸುವ ಅನುಭವವೇ ಇರುವುದಿಲ್ಲ. ಹೀಗಾಗಿ ಬೇರೆ ದೇಶಗಳ ಕ್ರಿಕೆಟ್ ತಂಡಗಳು ಬಂದಾಗ ಅವರ ವೇಗದ ಬೌಲರುಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ವಿಜಯ ಮರ್ಚೆಂಟ್, ಲಾಲಾ ಅಮರನಾಥ್ ಮೊದಲಾದವರಿಗೆ ನಿಸ್ಸಾರ್ ಮತ್ತು ಅಮರಸಿಂಗರನ್ನು ಎದುರಿಸಿ ಆಟವಾಡಿದ ಅನುಭವ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತುಂಬ ನೆರವಾಯಿತು.

ಅಮೂಲ್ಯ ಬೌಲರ್ನಿಜವಾದ ಕ್ರೀಡಾಪಟು

ಮಹಮ್ಮದ್ ನಿಸ್ಸಾರರು ಭಾರತದ ಶ್ರೇಷ್ಠ ಬೌಲರ್ ಗಳಲ್ಲಿ  ಒಬ್ಬರೆನಿಸಿದರು. ಅವರ ಬೌಲಿಂಗ್ ವೇಗವಾಗಿರುತ್ತಿದ್ದುದು ಮಾತ್ರವಲ್ಲ, ಚೆಂಡು ನಿಖರವಾಗಿ ಅವರು ಉದ್ದೇಶಿಸಿದ ಬಿಂದುವಿನಲ್ಲಿ ಬೀಳುತ್ತಿತ್ತು. ಎದುರಾಳಿಗಳ ಇನ್ನಿಂಗ್ಸ್‌ನ ಪ್ರಾರಂಭದಲ್ಲಿಯೇ ಅವರು ವಿಕೆಟ್ ಪಡೆಯುತ್ತಿದ್ದುದರಿಂದ ನಿಸ್ಸಾರರ ತಂಡ ವಿಜಯವನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಕ್ರಿಕೆಟ್ ಪಂದ್ಯದಲ್ಲಿ ಬೌಲರ್ ಎಷ್ಟು ಕಡಿಮೆ ರನ್‌ಗಳನ್ನು ಕೊಡುತ್ತಾನೆ ಎನ್ನುವುದಷ್ಟೇ ಮುಖ್ಯವಲ್ಲ, ಎಷ್ಟು ಬೇಗ ಬೇಗನೆ ಎಷ್ಟು ವಿಕೆಟ್‌ಗಳನ್ನು ಪಡೆಯುತ್ತಾನೆ ಎನ್ನುವುದೂ ಮುಖ್ಯ. ಗಂಟೆಗಟ್ಟಲೆ ಬೌಲ್ ಮಾಡಿ ಕೆಲವೇ ರನ್‌ಗಳನ್ನು ಕೊಟ್ಟರೆ ಪಂದ್ಯ ಸರಿಸಮನಾಗಿ ಮುಕ್ತಾಯವಾಗುವ ಸಾಧ್ಯತೆಯೇ ಹೆಚ್ಚು.

ನಿಸ್ಸಾರ್ ಅವರ ಸಾಧನೆಗೆ ಅವರ ಶಿಸ್ತು, ಶ್ರದ್ಧೆ ಇವೇ ಮುಖ್ಯ ಕಾರಣ. ಆಹಾರ, ವ್ಯಾಯಾಮ ಇವುಗಳಿಗೆಲ್ಲ ತಕ್ಕಷ್ಟು ಗಮನ ಕೊಟ್ಟು ದೇಹದ ಲವಲವಿಕೆಯನ್ನು ಕಾಪಾಡಿಕೊಂಡು ಬಂದರು. ಬಾಲ್ಯದಿಂದ ಶ್ರದ್ಧೆಯಿಂದ ‘ಬೌಲ್’ ಮಾಡುವುದನ್ನು ಗಂಟೆಗಟ್ಟಲೆ ಬಿಸಿಲಿಗೆ ಬೇಸರಿಸದೇ ದಣಿವನ್ನು ಲಕ್ಷಿಸದೆ ಚೆಂಡನ್ನು ಎಸೆದು ಎಸೆದು ಅಭ್ಯಾಸ ಮಾಡಿದರು.

ನಿಸ್ಸಾರ್ ಒಳ್ಳೆಯ ಬೌಲರ್ ಆಗಿದ್ದಂತೆ ‘ಜಂಟ್ಲ್‌ಮನ್ ಬೌಲರ್’ ಎನ್ನಿಸಿಕೊಂಡರು ಎಂಬುದನ್ನು ಸ್ಮರಿಸಬೇಕು. ಪಂದ್ಯವನ್ನು ಗೆಲ್ಲಬೇಕೆಂಬ ಛಲವಿದ್ದರೂ ಎದುರಾಳಿಯನ್ನು ಬೆದರಿಸಿ ಅಪಾಯಕ್ಕೊಳಗುಮಾಡಿ ಗೆಲ್ಲಲು ಬಯಸುತ್ತಿರಲಿಲ್ಲ. ನಿಜವಾದ ಕ್ರೀಡಾಪಟುವಿನ ಮನೋಧರ್ಮ ಅವರದು.