ಮಹಮ್ಮದ್ ರಫಿ — ಭಾರತದ ಚಲನಚಿತ್ರ ಜಗತ್ತಿನ ವರಗಾಯಕ. ಅತ್ಯಂತ ನಿಗರ್ವಿ. ಹಸನ್ಮುಖಿ. ಬಿಡುಗೈಯ ಉಪಕಾರಿ.

ಮಹಮ್ಮದ್ ರಫಿ

ಸುನೋ ಸುನೋ ಏ ದುನಿಯಾ ವಾಲೆ

ಬಾಪೂಜೀಕೀ ಅಮರ ಕಹಾನಿ…….

ಈ ಹಾಡು ಧಾರಾಕಾರವಾಗಿ ಹರಿಯುತ್ತಿತ್ತು. ಹಾಡಿನ ಒಂದೊಂದೇ ಎಳೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬದುಕು. ಸಾರ್ಥಕತೆ, ಲೋಕ ಚಿಂತನೆಗಳ ಭವ್ಯತೆ, ಇವನ್ನು ಸಾರುತ್ತಿತ್ತು. ಬಾಪೂಜಿ ನಂಬಿದ, ಅನುಸರಿಸಿದ ಸತ್ಯ, ಶಾಂತಿ, ತ್ಯಾಗ, ಬಲಿದಾನಗಳ ಹಿರಿಮೆಯನ್ನು ಪ್ರತಿಬಿಂಬಿ ಸುತ್ತಿತ್ತು. ಹಿಂಸೆಯ ಘೋರ ತಾಂಡವವನ್ನು ದಮನ ಗೊಳಿಸಿದ ಅಹಿಂಸೆ ಮತ್ತು ಸತ್ಯಾಗ್ರಹಗಳ ಗೆಲುವಿನ ಚಿಲುಮೆಯಾಗಿ ಚಿಮ್ಮುತ್ತಿತ್ತು. ಬಡತನ, ಅಜ್ಞಾನ, ಅರಾಜಕತೆ, ಜಾತಿಮತ್ಸರ, ಧರ್ಮಾಂಧಕಾರಗಳ ಮಬ್ಬಿನಲ್ಲಿ ಮಲಗಿದ ಜನರನ್ನು  ಬಡಿದೆಬ್ಬಿಸು ವಂತಿತ್ತು. ಪರಕೀಯ ಇಂಗ್ಲಿಷರ ದಬ್ಬಾಳಿಕೆಯಲ್ಲಿ ಭಾರತೀಯರು ನರಳಿದ ನೋವಿಗೆ ದನಿಕೊಡುತ್ತಿತ್ತು. ನಮ್ಮ ದೇಶಕ್ಕೆ ಲೋಕಚಿಂತನೆಗೆ ತನ್ನ ಪ್ರಾಣವನ್ನೇ ತೆತ್ತ ನಿಸ್ವಾರ್ಥ ಮಹಾನ್ ನಾಯಕ ಮಹಾತ್ಮಾ ಬಾಪೂಜಿಯ ಬದುಕಿನ ಧನ್ಯತೆಯನ್ನು ಸಾರಿ ಸಾರಿ ಹೇಳುತ್ತಿದ್ದಾಗ ಕಂಬನಿ ಮಿಡಿಯದವರು ಯಾರು? ಬಿಕ್ಕಿ ಬಿಕ್ಕಿ ಅತ್ತುಬಿಟ್ಟರಂತೆ ಆಗಿನ ಪ್ರಧಾನಿ ಜವಹರಲಾಲ್ ನೆಹರುರವರು. ಈ ಹಾಡನ್ನು ಹಾಡಿದ ಗಾಯಕ ಎಂತಹ ಧನ್ಯ, ಬರೆದ ಕವಿ ಎಂತಹ ಮಾನ್ಯ ಎಂದು ನೆಹರು ನುಡಿದರಂತೆ. (ಮಹಮ್ಮದ್ ರಫಿ ಅವರನ್ನು ಆದರದಿಂದ ಮನೆಗೆ ಆಹ್ವಾನಿಸಿ ಎರಡು ಗಂಟೆಗಳ ಕಾಲ ಅವರ ಹಾಡುಗಾರಿಕೆಯ (ಘಜಲ್‌ಗಳ) ನ್ನು ಕೇಳಿದರಂತೆ!)

ಅಮರ ಗಾಯಕ  ಮಹಮ್ಮದ್ ರಫಿ ಹಾಡಿದ ಹಾಡು ಭಾರತದ ಕೋಟಿ ಕೋಟಿ ಜನರಲ್ಲಿ ಇಂದಿಗೂ ಅಚ್ಚೊತ್ತಿದೆ. ಆತನ ಗಾನಮಾಧುರ್ಯ ನಿರಂತರ ಜಲದಂತೆ ಪ್ರವಹಿಸುತ್ತಿದೆ.

ಇಂದು ಆ ಮಹಾನ್ ಗಾಯಕ ನಮ್ಮ ಕಣ್ಮುಂದೆ ಇಲ್ಲ, ಆದರೆ ಆತನ ನಾದಮಾಧುರ್ಯದ ಕಂಠಗಾನ ಆಸೇತು ಹಿಮಾಚಲದಿಂದ ಕನ್ಯಾಕುಮಾರಿ ಯವರೆಗೆ ಅಮರವಾಗಿ ಉಲಿಯುತ್ತಿದೆ. ಬಡವನಿಂದ ಶ್ರೀಮಂತನವರೆಗೂ, ಕೂಲಿಯಿಂದ ಮಾಲೀಕ ನವರೆಗೂ, ಗಂಡು-ಹೆಣ್ಣು, ಮುದುಕ-ಹರೆಯ- ಬಾಲಕರವರೆಗೂ ಮಹಮ್ಮದ್ ರಫಿಯ ಹೆಸರು ಜನಜನಿತ. ಕಲೆಗಾರ ಸಾಯುತ್ತಾನೆ ಆದರೆ ಕಲೆ ಸಾಯುವುದಿಲ್ಲ.

ಜನನ, ಬಾಲ್ಯ

ಮಹಮ್ಮದ್ ರಫಿ ಹಿಂದಿ ಚಲನಚಿತ್ರರಂಗದ ಸುಪ್ರಸಿದ್ಧ ಹಿನ್ನೆಲೆಗಾಯಕ. ಜನ್ಮತಾಳಿದ್ದು ೧೯೨೪ರ ಡಿಸೆಂಬರ್ ೨೪ರಂದು. ಪಂಜಾಬಿನ ಅಮೃತ್‌ಸರ್ ಜಿಲ್ಲೆಯ ಕೋಟ್ಲಾ ಸುಲ್ತಾನ್‌ಸಿಂಗ್ ಎಂಬ ಸ್ಥಳದಲ್ಲಿ (ಇದು ಈಗ ಪಾಕಿಸ್ತಾನದಲ್ಲಿದೆ). ಕಟ್ಟಾ ಇಸ್ಲಾಂ ಧರ್ಮನಿಷ್ಠ ಮಧ್ಯಮವರ್ಗದ ಕುಟುಂಬದಲ್ಲಿ ಅವರು ಜನಿಸಿದರು. ಅವರ ತಂದೆ ಅಲಿ ಅಹಮದ್ ಸಾಹೇಬ್ ಇಸ್ಲಾಂ ಧಾರ್ಮಿಕ ವ್ಯಕ್ತಿ. ದೈವಭಕ್ತಿಯಲ್ಲಿ, ನಮಾಜ್ ಪ್ರಾರ್ಥನೆಗಳಲ್ಲಿ ಅವರದು ಕಟ್ಟುನಿಟ್ಟು, ಶಿಸ್ತು, ನಿಯಮ. ಸಂಗೀತದ ಪರಿಚಯವೂ ಅವರಿಗಿತ್ತು. “ಘಜಲ್” ಹಾಡುಗಾರಿಕೆಯಲ್ಲಿ ಅವರಿಗೆ ಪರಿಶ್ರಮವಿತ್ತು. ಸಂಪ್ರದಾಯ ಮನೋಭಾವದ ಇವರಿಗೆ ಲೋಕವ್ಯವಹಾರದ ಹಾಡುಗಾರಿಕೆಯೆಂದರೆ ಬಲುಕೋಪ. ಬಾಲಕ ರಫಿಗೆ ಸಂಗೀತ ಬಳುವಳಿ ತಂದೆಯಿಂದ ಪರೋಕ್ಷವಾಗಿ ಬಂದಿದ್ದರೂ, ಅವರು ಹೆಚ್ಚಾಗಿ ಪಂಜಾಬಿನ ನೆಲದ ಸಾಂಸ್ಕೃತಿಕ ಗುಣವನ್ನೇ ಅವಲಂಬಿಸಿದ್ದರು. ಪಂಜಾಬ್ ಜನಪ್ರಿಯ ಜಾನಪದ ಹಾಡುಗಾರಿಕೆ “ಭಂಗಡಾ” ಜಾನಪದ ನೃತ್ಯಗಳಿಗೆ ಪ್ರಸಿದ್ಧ. ರಫಿಗೆ ಪ್ರಭಾವ ಬೀರಿದ ಈ ಅಂಶಗಳು ಆತನ ಗಾಯನ ಜೀವನದಲ್ಲಿ ಚಿರಸ್ಥಾಯಿ ಯಾಗಿದ್ದವು.

ಬಾಲಕ ಮಹಮ್ಮದ್ ರಫಿ ಎಲ್ಲರ ಅಚ್ಚುಮೆಚ್ಚಾಗಿದ್ದ. ಆತನಿಗೆ ಪ್ರಾಥಮಿಕ ವಿದ್ಯೆ ದೊರೆಯಿತು.ಮನೆಯಲ್ಲಿ ಉರ್ದು, ಅರೆಬಿಕ್ ಭಾಷೆಗಳನ್ನು ಕಲಿತ. ಕುರಾನ್ ಗ್ರಂಥದ ಪಠಣ ಮಾಡುತ್ತಿದ್ದ. ಸಂಗೀತದ ಕಡೆ ಆತನ ಮನಸ್ಸು ಹರಿಯಿತು. ಆದ್ದರಿಂದ ವಿದ್ಯೆಗೆ ಶರಣು ಹೊಡೆದರು.

ಹುಚ್ಚು ಹುಡುಗ, ಏನು ಹಾಡ್ತಾನೆ?

ಬಾಲಕ ರಫಿಗೆ ಹಾಡುಗಾರಿಕೆಯಲ್ಲಿ ವಿಶೇಷ ಆಸಕ್ತಿ. ಆಗಿನ ಲೋಕಪ್ರಿಯ ಗೀತೆಗಳನ್ನು ಹಾಡಿಕೊಂಡು ಮನೆಯಲ್ಲಿ ಗುನುಗುನು ಅನ್ನುತ್ತಿದ್ದನಂತೆ. ತಂದೆಗಿದು ಸರಿ ಬಂದಿರಲಿಲ್ಲ. ಏನು ಹುಚ್ಚು ಹುಡುಗ, ಏನು ಹಾಡ್ತಾನೆ? ಎಂದು ಗದರಿಸುತ್ತಿದ್ದರಂತೆ. ಮನೆಯಲ್ಲಿ ಹಾಡಲು ಅವಕಾಶವಿಲ್ಲದಾಗ ಹೊರಗಡೆ ಸ್ವಚ್ಛಂದವಾಗಿ ಹಾಡತೊಡಗಿದ. ಅಕ್ಕಪಕ್ಕದವರು ಬಾಲಕನ ಮಧುರ ಕಂಠಕ್ಕೆ ಮೆಚ್ಚಿ, “ಹುಡುಗ ಚಲೋ ಹಾಡ್ತಾನೆ” ಎಂದು ಪ್ರಶಂಸಿಸುತ್ತಿದ್ದರಂತೆ. ಗೆಳೆಯರ ಬಳಗದಲ್ಲಿ ರಫಿಯ ಹಾಡಿಗೆ ಮೆಚ್ಚಿಕೆ ಅಪಾರವಿತ್ತಂತೆ.

ಸಂಗೀತದ ಅಭ್ಯಾಸ

ಬಾಲಕ ರಫಿಯಲ್ಲಿ ಸಂಗೀತದ ಹಸಿವು ಅಪಾರವಾಗಿತ್ತು. ಹೇಗಾದರೂ ಸಂಗೀತ ಅಭ್ಯಾಸ ಮಾಡಲೇಬೇಕೆಂದು ನಿರ್ಧರಿಸಿದ. ಮನೆಯ ವಾತಾವರಣ ಇದಕ್ಕೆ ಆಸ್ಪದ ನೀಡಲಿಲ್ಲ. ಸಂಗೀತದ ಈ ಹುಚ್ಚಿನಿಂದ ಮನೆಯನ್ನು ಬಿಡಬೇಕಾಯಿತು. ಅಣ್ಣ ಮೊಹಮ್ಮದೀನ್, ರಫಿಗೆ ಸದಾ ಬೆಂಗಾವಲು. ತಮ್ಮನ ಸಂಗೀತದ ಅಭಿಲಾಷೆಯನ್ನು ಅರಿತ ಆತ ಸದಾ ನೆರವು ನೀಡುತ್ತಿದ್ದ. ಮನೆಬಿಟ್ಟು ಸಂಗೀತವನ್ನೇ ಬೆನ್ನಟ್ಟಿಕೊಂಡು ಓಡುತ್ತಿರುವ ರಫಿಗೆ ಮೊಹಮ್ಮದೀನ್ ಸಕಲ ನೆರವು ಮಾಡಿಕೊಟ್ಟನು.

ಮಹಮ್ಮದ್ ರಫಿ ಲಾಹೋರಿಗೆ ಬಂದು ಸೇರಿದನು. ಲಾಹೋರ್ ಆಗ ಶಾಸ್ತ್ರೀಯ ಸಂಗೀತದ ಕೇಂದ್ರವಾಗಿತ್ತು. ಸಿನಿಮಾರಂಗದ ಪ್ರಸಿದ್ಧ ಸ್ಥಾನವಾಗಿತ್ತು. ಅಣ್ಣನ ನೆರವಿನಿಂದ ಪರಿಚಿತರೆನಿಸಿದ್ದ ಉಸ್ತಾದ್ ಖಾನ್ ಅಬ್ದುಲ್‌ವಹೀದ್ ಖಾನ್ ಅವರ ಬಳಿ ಆರಂಭದ ಶಾಸ್ತ್ರೀಯ ಸಂಗೀತದ ಅಭ್ಯಾಸವಾಯಿತು. ಪಂಡಿತ್ ಜೀವನಲಾಲ್ ಮಠ್ಠೂ ಅವರ ಬಳಿಯಲ್ಲಿ ಕೆಲವು ದಿನ ಸಂಗೀತದ ಅಧ್ಯಯನ ಸಾಗಿತು. ಕೆಲವು ವರ್ಷಗಳ ನಂತರ ಹಿಂದೂಸ್ತಾನ್ ಸಂಗೀತ ಸಾರ್ವಭೌಮ ಉಸ್ತಾದ್ ಬಡೆ ಗುಲಾಂ ಅಲೀಖಾನ್ ಅವರ ತಾಲೀಮಿನಲ್ಲಿಯ ಮಹಮ್ಮದ್ ರಫಿ ಸಾಕಷ್ಟು ಶಾಸ್ತ್ರೀಯ ಸಂಗೀತ ಕಲಿತುಕೊಂಡರು. ಶಾಸ್ತ್ರೀಯ ಸಂಗೀತದ ಈ ಗುರುವರ್ಯರಲ್ಲಿ ಸಾಧಿಸಿದ ಸಂಗೀತ ಸಂಪತ್ತು, ಅಭ್ಯಾಸ ರಫಿಗೆ ಮಹತ್ತರವಾಗಿ ಪರಿಣಮಿಸಿತು. ಸಂಗೀತದ ತಾಲೀಮು ಅಂದರೆ ಒಂದೆರಡು ಗಂಟೆಗಳ ಕಸರತ್ತಲ್ಲ, ಸತತವಾಗಿ ೧೨-೧೬ ತಾಸುಗಳವರೆಗೆ ಅವ್ಯಾಹತವಾಗಿ ಸಾಗುತ್ತಿತ್ತಂತೆ. ಹನ್ನೆರಡು ವರ್ಷಗಳ ಕಾಲ ಮಹಮ್ಮದ್ ರಫಿ ಸಂಗೀತ ತಪಸ್ಸಾಧನೆಯಲ್ಲಿ ಯಶಸ್ವಿಯಾದನು.

ಇದೋ ನನ್ನ ಆಶೀರ್ವಾದ….

ಹದಿನೈದರ ಹರೆಯದಲ್ಲಿದ್ದ ಮಹಮ್ಮದ್ ರಫಿಯ ಜೀವನದಲ್ಲಿ ಒಂದು  ಅಪೂರ್ವ ಘಟನೆ ನಡೆಯಿತು. ಚಲನಚಿತ್ರದ ಪ್ರಸಿದ್ಧ ನಟ, ಗಾಯಕ ಕುಂದನ್‌ಲಾಲ್ ಸೈಗಲ್ ಲಾಹೋರಿಗೆ ಬಂದಿದ್ದರು. ಅಲ್ಲಿ ಅವರ ಹಾಡಿನ ಕಾರ್ಯಕ್ರಮ ಏರ್ಪಾಟಾಗಿತ್ತು. ಮಹಮ್ಮದ್ ರಫಿಯು ವೇದಿಕೆಯ ಮೇಲಿದ್ದರು. ಅವರಿಗೆ ಸೈಗಲ್‌ರ ಹಾಡುಗಾರಿಕೆ ಎಂದರೆ ಪ್ರಾಣ. ಅಂದು ಅವರಿಗೆ ಸೈಗಲ್‌ರನ್ನು ಕಂಡಾಗ ಏನೋ ತೃಪ್ತಿ, ಗೌರವಭಾವನೆ. ಹಾಡಿನ ಕಾರ್ಯಕ್ರಮ ಪ್ರಾರಂಭವಾಯಿತು. ಅರ್ಧದಲ್ಲೇ ಸಭಾಂಗಣದಲ್ಲಿ ಗುಜುಗುಜು ಗಲಾಟೆ. ಧ್ವನಿವರ್ಧಕ (ಮೈಕ್) ಕೆಟ್ಟಿತು. ಸಂಗೀತಾಭಿಮಾನಿಗಳಿಗೆ ತೀರಾ ನಿರಾಸೆ. ಕೆಲವೇ ನಿಮಿಷಗಳಲ್ಲಿ ಧ್ವನಿವರ್ಧಕವನ್ನು ಸರಿಪಡಿಸಲಾಯ್ತು. ಗಲಾಟೆ ಮುಗಿದಿರಲಿಲ್ಲ. ರಫಿಯ ಅಣ್ಣ ಮಹಮ್ಮದ್ ರಫಿಯನ್ನು ವೇದಿಕೆಯ ಮುಂದೆ ತಂದು ನಿಲ್ಲಿಸಿದರು.

ರಫಿ ಧೈರ್ಯ ಮಾಡಿದರು. ತಾವಿಬ್ಬರೂ ಕೂಡಿ ಒಂದು ಯುಗಳಗೀತೆ ಹಾಡಿದಲ್ಲಿ ಸಂಗೀತ ಅಭಿಮಾನಿಗಳ ಮನವೊಲಿಸಬಹುದೆಂದು ಸೈಗಲ್‌ರಿಗೆ ಸೂಚಿಸಿದರು. ಅವರು ಸಂತೋಷದಿಂದ ಒಪ್ಪಿದರು. ಸೈಗಲ್-ಮಹಮ್ಮದ್ ರಫಿ ಇವರೀರ್ವರ ಕಂಠ ಮಾಧುರ್ಯದಿಂದ ಜನಕ್ಕೆ ಆನಂದವೋ ಆನಂದ. ಅಭಿಮಾನ ಮತ್ತು ಆದರದಿಂದ ಸೈಗಲ್‌ರವರು ತರುಣ ರಫಿಯನ್ನು ಹರಸಿದರಂತೆ! “ಒಂದು ದಿನ ಬರುತ್ತೆ, ನೀನೂ ಸಹ ಒಬ್ಬ ಪ್ರಸಿದ್ಧ ಗಾಯಕನಾಗಿ ನನ್ನ ಸರಿದೊರೆಯಾಗಿ ನಿಲ್ಲುತ್ತೀಯಾ” ಎಂದು ಆಶೀರ್ವದಿಸಿದರಂತೆ!

ಆ ಮಹತ್ತರ ದಿನವೂ ರಫಿಯ ಮುಂದಿನ ಚಲನಚಿತ್ರ ಹಿನ್ನೆಲೆಗಾಯನ ಜೀವನದಲ್ಲಿ ಬಂದಿತ್ತು. ಪ್ರಸಿದ್ಧ ಐತಿಹಾಸಿಕ “ಶಹಜಹಾನ್” ಚಿತ್ರದ ಒಂದು ಹಾಡಿಗೆ ಸೈಗಲ್ ಅವರೊಂದಿಗೆ ರಫಿಯು ಕಂಠ ದಾನ ಮಾಡಿದರು.

ಮೊದಲ ಬಾರಿಗೆ ಸೈಗಲ್ ಅವರೊಂದಿಗೆ ಹಾಡಿದುದು ಒಂದು ಅಪೂರ್ವ ಘಟನೆ. ಅದ್ಭುತ ಸಾಧನೆಯಾಗಿ ರಫಿ ಮನದಲ್ಲಿ ಚಿರಸ್ಥಾಯಿ ಯಾಯಿತು. ಪ್ರಸಿದ್ಧ ಹಾಡುಗಾರ ಸೈಗಲ್ ಅವರೊಂದಿಗೆ ಹಾಡುವಾಗ ರಫಿಯ ಮನದಲ್ಲಿ ಭಯ, ಭೀತಿ ಗೌರವಗಳು ಮೂಡಿ “ನಡುಕ” ಉಂಟಾಯಿತಂತೆ! ಸೈಗಲ್ ಸಾಹೇಬರ ಆತ್ಮೀಯತೆ, ಆದರ, ಪ್ರೀತಿಯೊಂದಿಗೆ ಅಂದು ಅವರು ಮಹತ್ ಸಾಧನೆ ಮಾಡಿದಂತೆ ಭಾವಿಸಿದರಂತೆ! ಅಮರ ಗಾಯಕ, ಪ್ರಸಿದ್ಧ ನಟರಾಗಿದ್ದ ಸೈಗಲ್ ಸಾಹೇಬರು ತೀರಿಕೊಂಡಾಗ ಕಂಬನಿಮಿಡಿದ ರಫಿ “ಮರ್‌ತೇ ಅಮರ್ ರಹೇ ಹೈ…..ಸೈಗಲ್” ಎಂದು ಗೌರವ ಶ್ರದ್ಧಾಂಜಲಿ ಗೀತೆಯನ್ನು ಅರ್ಪಿಸಿದರಂತೆ!

ಅದೃಷ್ಟ ಹುಡುಕಿಕೊಂಡು ಬಂತು…”

ಅದೃಷ್ಟದ ಬೆನ್ನು ಹತ್ತಿ ಕೆಲವರು ನಿರಾಸೆಯಾಗುತ್ತಾರೆ. ಅದೃಷ್ಟವೇ ಮನೆ ಬಾಗಿಲಿಗೆ ಬಂದು ನಿಂತು ಕೆಲವರನ್ನು ಆಹ್ವಾನಿಸುತ್ತದೆ.

ಪಂಜಾಬ್ ಭಾಷೆಯಲ್ಲಿನ “ಗುಲ್ ಬುಲೋಬ್” ಚಿತ್ರದ “ಸೋನಿಯೇನಿ ಹೀರಿಯೇನಿ, ತ್ವಾರಿಯಾದ್‌ನೆ ಬಡಾ ಸತಾಯಾ” ಈ ಹಾಡಿನ ಮೂಲಕ ಮುಂಬಯಿ ಚಲನಚಿತ್ರರಂಗದ ಹಿನ್ನೆಲೆ ಗಾಯನ ಜೀವನಕ್ಕೆ ರಫಿ ಕಾಲಿರಿಸಿದ್ದು ಎಲ್ಲರ ಒತ್ತಾಯದಿಂದಾಗಿ.

ಹಿಂದೀ ಚಿತ್ರರಂಗದ ಆಗಿನ ನಟ ನಿರ್ಮಾಪಕ ನಜೀರ್ ಮುಂಬಯಿಯಲ್ಲಿ ತನ್ನದೇ ಆದ “ಹಿಂದ್ ಕಂಪೆನಿ” ಯನ್ನು ಸ್ಥಾಪಿಸಿದ್ದರು. ರಫಿಯ ಗಾನಕ್ಕೆ ಮನಸೋತಿದ್ದ ನಜೀರರು ಅವರನ್ನು ಆಹ್ವಾನಿಸಿದ್ದರು. ೧೯೪೪ರ ಸಮಯ. ಸಂಗೀತ ನಿರ್ದೇಶಕ ಶ್ಯಾಮಸುಂದರ್ (ಗುಲ್ ಬುಲೋಬ್ ಚಿತ್ರದ ಸಂಗೀತ ನಿರ್ದೇಶಕರು) ಮುಂಬಯಿಗೆ ಬಂದಿದ್ದರು. ಅದೇ ಸಮಯದಲ್ಲಿ ರಫಿ ಸಹ ಹಿಂದ್ ಕಂಪೆನಿಗೆ ನಜೀರ್ ಭೇಟಿಗೆ ಬಂದಿದ್ದರು. ಆಗ ಅವರ ಒತ್ತಾಯದ ಮೇರೆಗೆ ಹಿಂದಿಯ ಪ್ರಥಮ ಚಿತ್ರ ಹಾಡುಗಾರಿಕೆಗೆ ಮನವೊಲಿಯಬೇಕಾಯಿತು. “ಗಾಂವ್ ಕಿ ಗೋರಿ” ಚಿತ್ರಕ್ಕೆ ಕಂಠದಾನ ನೀಡಿದರು.

೧೯೪೫ರಲ್ಲಿ ನಜೀರ್‌ರವರ ಸ್ವಂತ ಚಿತ್ರ “ಲೈಲಾ ಮಜ್ನು” ಹಾಡುಗಳನ್ನು ಹಾಡಿದರು. ಅಷ್ಟೇ ಅಲ್ಲದೆ ಆ ಚಿತ್ರದಲ್ಲಿ ರಫಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು. ಅಲ್ಪ ಆದಾಯ, ಪರಿಶ್ರಮದ ಕೆಲಸಕ್ಕಾಗಿ ರಫಿಯು ಹೆದರಲಿಲ್ಲ. ತದನಂತರ “ಸಮಾಜ್ ಕೋ ಬದಲ್ ಡಾಲೋ” (೧೯೪೮) ಮತ್ತು “ಜುಗ್ನು” (೧೯೪೮) ಚಿತ್ರಗಳಿಗೆ ಹಿನ್ನೆಲೆಗಾಯನದೊಂದಿಗೆ, ಚಿಕ್ಕಪುಟ್ಟ ಪಾತ್ರಗಳ ಅಭಿನಯವನ್ನೂ ಕೂಡ ಮಾಡಿದರು.

“ಜುಗ್ನು” ಚಿತ್ರದ “ಯಹಾಂ ಬದ್‌ಲಾ ವಫಾ ತಾ ಬೇವಫಾಯೀಕೆ ಸಿವಾ ಕ್ಯಾ ಹೈ” ಈ ಹಾಡು ಅತ್ಯಂತ ಲೋಕಪ್ರಿಯವಾಯಿತು. ಅನಂತರ ಚಲನಚಿತ್ರ ಪ್ರೇಮಿಗಳು ರಫಿಯವರನ್ನು ಗಾಯಕನನ್ನಾಗಿಯೇ ಅಪೇಕ್ಷಿಸಿದರು. ಅದಕ್ಕೇ ಅವರು ಅಂದೇ ಚಲನಚಿತ್ರದ ಅಭಿನಯ ಬಿಟ್ಟು, ಕೇವಲ ಹಿನ್ನೆಲೆಗಾಯನಕ್ಕಾಗಿ ನಿಂತರು.

ರಫಿಯವರು ಅವಕಾಶವನ್ನು ಬೆನ್ನಟ್ಟಿ ಓಡಿದವರಲ್ಲ. ಅದೃಷ್ಟ ಅವರಿಗೆ ಅವಕಾಶದ ಬಾಗಿಲನ್ನು ತೆರೆಯಿತು. ರಫಿಯು ಲಾಹೋರಿನಿಂದ ಮುಂಬಯಿಗೆ ಬಂದು ನೆಲೆಸಿದರು.

ಒಂದಲ್ಲ …….ಎರಡಲ್ಲ…… ಇಪ್ಪತ್ತಾರು ಸಾವಿರ!

ಸಂಗೀತ ನಿರ್ದೇಶಕ ಶ್ಯಾಮಸುಂದರ್‌ರವರ ಆಹ್ವಾನದ ಮೇರೆಗೆ ರಫಿ “ಗಾಂವ್ ಕಿ ಗೋರಿ” ಚಿತ್ರಕ್ಕೆ ಹಿನ್ನೆಲೆಗಾಯಕರಾಗಿ ಹಾಡಿದರು. ಇದು ಅವರ ಗಾಯನಜೀವನಕ್ಕೆ ಪೀಠಿಕೆಯಾಗಿ ಪರಿಣಮಿಸಿತು. ಅನಂತರ ಅವರ ಹಿನ್ನೆಲೆಗಾಯನದ ಮಾಧುರ್ಯ ಜನಪ್ರಿಯವಾಗತೊಡಗಿತು. ಆರಂಭದ ಲೈಲಾ ಮಜ್ನು, ಶಹೀದ್, ಜುಗ್ನು, ವತನ್ ಕೀ ರಾಹ್‌ಮೇ, ಪಹಲೇ ಆಪ್, ಪ್ಯಾರ್‌ಕೀ ಕಿಜೀತ್ ಹೀಗೆ ಚಿತ್ರಗಳ ಹಿನ್ನೆಲೆಗಾಯನದ ಕಾರ್ಯಸಾಧನೆ ಮುನ್ನಡೆಯಿತು.

ರಫಿಯು ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯನಕ್ಕೆ ಕಾಲಿಟ್ಟಾಗ ಘಟಾನುಘಟಿಗಳಾದ ಸೈಗಲ್, ಪಂಕಜ್ ಮಲ್ಲಿಕ್, ಕೆ.ಸಿ.ಡೇ, ಖಾನ್ ಮಸ್ತಾನ್ ಮುಂತಾದ ಗಾಯಕರಿದ್ದರು. ಯಾರೊಂದಿಗೂ ಅವರದು ಪೈಪೋಟಿಯಾಗಿರಲಿಲ್ಲ. ಅವರನ್ನು ಎಲ್ಲರೂ ಆದರದಿಂದ ಕಂಡರು. ರಫಿ ಕೂಡ ಅವರನ್ನೆಲ್ಲ ಪೂಜ್ಯ ಭಾವನೆಯಿಂದ ಕಂಡರು. ಅವರ ಮಾರ್ಗದರ್ಶನವನ್ನು ಸ್ವೀಕರಿಸಿದರು. ಔದಾರ್ಯದ ಪ್ರತೀಕ ರಫಿ.

ರಫಿಯವರು ಹಾಡಿದ ಹಾಡುಗಳು, ಚಲನಚಿತ್ರಗಳ ಹೆಸರುಗಳು ಬರೆಯುತ್ತಾ ಹೋದಂತೆ ಅಂಕೆ ಮೀರಿ ನಿಲ್ಲುತ್ತವೆ. ೧೯೪೨ರಿಂದ ೧೯೮೦ರ ವರೆಗಿನ ಹೆಚ್ಚು ಕಡಿಮೆ ನಾಲ್ಕು ದಶಕಗಳ ಕಾಲಮಾನದಲ್ಲಿ, ರಫಿ ಹಾಡಿದ ಹಾಡುಗಳ ಸಂಖ್ಯೆ ಇಪ್ಪತ್ತಾರು ಸಾವಿರಕ್ಕೂ ಮಿಕ್ಕಿ ಇದೆ. ಚಿತ್ರರಂಗದ ಹಾಡುಗಳನ್ನು ಬಿಟ್ಟರೆ ಇತರ ಕಡೆಗಳಲ್ಲಿ ವೈಯಕ್ತಿಕವಾಗಿ ಹಾಡಿದ ಭಜನೆ, ಖವ್ವಾಲಿ, ಘಜಲ್ ಮುಂತಾದವು ಅನೇಕ. ಇತರ ಪ್ರಾದೇಶಿಕ ಭಾಷೆಗಳಲ್ಲೂ ಅವರದು ಸೊಗಸಾದ ಗಾಯನ.

ಹೊಸ ಯುಗದ ನಿರ್ಮಾಪಕ

ಹಿಂದಿ ಚಲನಚಿತ್ರದಲ್ಲಿ ಹೊಸದೊಂದು ಯುಗ ನಿರ್ಮಿಸಿದ ಕೀರ್ತಿ ರಫಿಯವರದು. ಅವರ ಕಂಠ ಮಾಧುರ್ಯ ಚಿತ್ರ ಸಂಗೀತಕ್ಕೆ, ಸ್ವರ್ಣಯುಗ ನಿರ್ಮಿಸಿಕೊಟ್ಟಿದೆ. ರಫಿ ಗಾಯನದಲ್ಲಿ ವೈವಿಧ್ಯ, ವಸ್ತುವಿನಲ್ಲಿ ವೈವಿಧ್ಯ ಅನೇಕ ರೀತಿಯಿಂದ ಕಂಡು ಬರುತ್ತದೆ. ಶಾಸ್ತ್ರೀಯ ಹಾಡುಗಳು, ಪ್ರಣಯಗೀತೆ, ಭಜನೆ, ಖವ್ವಾಲಿ, ಘಜಲ್, ದೇಶಭಕ್ತಿಗೀತೆ, ಮಕ್ಕಳ ಹಾಡು ಹೀಗೆ ಅನೇಕ ಮುಖಗಳಲ್ಲಿ ಅವರ ಗಾಯನ ಪ್ರತಿಬಿಂಬಿಸಿದೆ. ಭಕ್ತಿ, ರಮ್ಯ, ಶಾಂತ, ಹಾಸ್ಯ, ರೌದ್ರ, ಶೋಕ ಎಲ್ಲವನ್ನೂ ಪರಿಪೂರ್ಣವಾಗಿ ಕೇಳುವವರ ಹೃದಯಕ್ಕೆ ಮುಟ್ಟಿಸುವ ಕಂಠ, ರಸಾನುಭವ ಅವರ ಸಂಗೀತದ್ದು. ಗುಣಮಟ್ಟದಿಂದ ಅವರ ಯಾವ ಹಾಡೂ ದೂರ ಸರಿದಿಲ್ಲ. ಸಂಖ್ಯೆಯ  ಪರಿಮಿತಿ ಇಪ್ಪತ್ತಾರು ಸಾವಿರ ಹಾಡುಗಳ ದಾಖಲೆಯೆಂದು ಹೇಳಿದಾಗ “ಎಷ್ಟು ಒಳ್ಳೆಯದು, ಎಷ್ಟು ಜೊಳ್ಳು” ಎಂದು ಅಳತೆ ಹಿಡಿದು ಹೇಳಲುಬಾರದು.

ಆದರೆ ಸಂಗೀತವನ್ನು ಚೆನ್ನಾಗಿ ಬಲ್ಲವರು, ಬಹು ಕಟ್ಟುನಿಟ್ಟಾಗಿ ಗಾಯನದ ಗುಣಮಟ್ಟವನ್ನು ತೀರ್ಮಾನಿಸುವವರು ಇಂತಹವರೂ ಮೆಚ್ಚಿದ ರಫಿಯವರ ಹಾಡುಗಳ ಸಂಖ್ಯೆಯು ದೊಡ್ಡದಾಗಿದೆ. ಜನಸಾಮಾನ್ಯರು ಮೆಚ್ಚಿ ನೆನಪಿಟ್ಟುಕೊಳ್ಳುವ ಹಾಡುಗಳ ಸಂಖ್ಯೆಯೂ ದೊಡ್ಡದಾಗಿದೆ. ರಸಿಕ ವಿಮರ್ಶಕರು ಮತ್ತು ಸಾಮಾನ್ಯ ಸಂಗೀತಪ್ರಿಯರು ಇಬ್ಬರ ಮನಸ್ಸೂ ಸೂರೆಗೊಂಡ ಅವರ ಹಾಡುಗಳ ಸಂಖ್ಯೆಯು ದೊಡ್ಡದೇ.

ಎಂದೂ ಮರೆಯಲಾಗದ ಹಾಡುಗಳು

ರಫಿಯವರ ಹಾಡುಗಳಲ್ಲಿ ಮಾಧುರ್ಯ ಸಮ್ಮೋಹನ ಶಕ್ತಿಯಿತ್ತು. ಎಲ್ಲ ವರ್ಗದ ಎಲ್ಲ ಜನರ ಮನಸ್ಸನ್ನು ಉಲ್ಲಾಸಗೊಳಿಸುವ ಲಾಲಿತ್ಯ ಅವರ ರಾಗದಲ್ಲಿತ್ತು. ಮಧುಬನ್‌ಮೆ ರಾಧಿಕಾ ನಾಚೇರೇ (ಕೋಹಿನೂರ್), ರಾಧಿಕೆ ತೂನೆ ಬನ್ಸುರಿ ಚುರಾಯೆ (ಬೇಟಿ ಬೇಟಿ), ಕುಹು ಕುಹು ಬೋಲೇ ಕೋಯಲಿಯಾ, ಓ ದುನಿಯಾಕೇ ರಖ್‌ವಾಲೇ ಸುನ್‌ದರ್ದ್ ಭರೆ ಮೇರೆ ವಾಲೆ ಮತ್ತು ತೂ ಗಂಗಾಕಿ ಮೌಜ್ ಮೈ ಜಮುನಾಕಿ ಧಾರಾ(ಬೈಜುಬಾವ್ರಾ) ಮುಂತಾದ ಹಾಡುಗಳನ್ನು ನೆನಪಿಸಿಕೊಂಡಾಗ ರಫಿ ಶಾಸ್ತ್ರೀಯ ಸಂಗೀತ ಧಾಟಿಯಲ್ಲಿ ಎಷ್ಟು ಅಮೋಘವಾಗಿ ಹಾಡ ಬಲ್ಲರೆಂಬುದು ಸ್ಪಷ್ಟವಾಗುತ್ತದೆ. ಬೈಜುಬಾವ್ರಾ, ಬಸಂತ್‌ಬಹಾರ್ ಚಿತ್ರಗಳಲ್ಲಿ ಹಾಡಿರುವ ಅವರ ಶಾಸ್ತ್ರೀಯ ಕಂಠಕ್ಕೆ ಬಡೇಗುಲಾಂ ಅಲಿಖಾನ್, ಖಾನ್ ಅಬ್ದುಲ್ ವಹೀದ್ ಖಾನ್‌ರ ತಾಲೀಮು ತರಬೇತಿಯೇ ಪೋಷಣೆ ನೀಡಿದೆ ಎಂಬುದು ಸತ್ಯ.

ಭಕ್ತಿಗೀತೆಗಳಲ್ಲಿ ಹಿಂದೂ, ಮುಸ್ಲಿಮ್, ಸಿಖ್, ಕ್ರೈಸ್ತ ಯಾವುದೇ ಧರ್ಮದವನಾದರೂ ಮಹಮ್ಮದ್ ರಫಿಯ ಭಕ್ತಿರಸಾಯನಕ್ಕೆ ಮನಸೋಲುತ್ತಾನೆ. ಭಜನೆಗಳನ್ನಾಗಲೀ, ಖವ್ವಾಲಿಗಳನ್ನಾಗಲಿ ಅವರು ಭಕ್ತಿಯ ಆವೇಶದಿಂದ ಹಾಡಬಲ್ಲವರಾಗಿದ್ದರು. ರಂಜಾನ್ ಹಬ್ಬ, ಬಕ್ರಿದ್ ಹಬ್ಬಗಳ ಪ್ರಾಮುಖ್ಯತೆ, ಸಂತರ ಹಾಡುಗಳನ್ನಾಗಲಿ ತನ್ಮಯತೆಯಿಂದ ಹಾಡಬಲ್ಲರು.

ಮೈ ರಿಕ್ಷಾವಾಲಾ ಮೈ ರಿಕ್ಷಾವಾಲಾ…. ಎಂದು ರಿಕ್ಷಾಚಾಲಕನ ಅಭಿಮಾನವನ್ನು ಸೆಳೆಯಬಲ್ಲ ಹಾಡುಗಾರಿಕೆ, ಯಾಹೂ ಚಾಹೆ ಕೋಯಿ ಮುಝೆ ಜಂಗಲಿ ಕಹೇ ಎಂದು ಹರಟೆ ಮಾದರಿಯಲ್ಲಿ ರಂಜಿಸಬಲ್ಲದು. ಬಡತನ, ಸುಖದುಃಖಗಳ, ಶೋಷಣೆಗಳ ಅಂತರಾಳ ತಿಳಿಯಬಲ್ಲ ಶಕ್ತಿಯೂ ರಫಿಯ ಕಂಠ ಮಾಧುರ್ಯದಿಂದ ಹೊರ ಸೂಸುತ್ತದೆ.

ತನುಮನಧನಗಳನ್ನು ದೇಶದ ಸ್ವಾತಂತ್ರ್ಯಕ್ಕೆ ಅರ್ಪಣೆ ಮಾಡಿದ ದೇಶಭಕ್ತಿಗೀತೆಗಳ ಮೂಲಕ ನಮ್ಮ ಕರ್ತವ್ಯ, ನಿಷ್ಠೆ ಸಾರುವಂತಹ “ಹಮ್ ಲಾಯೆ ಹೈಂ ತೂಫಾನ್ಸೆ ಕಿಸ್ತಿನಿಕಾಲ್ ಕೆ, ಇಸ್ ದೇಶ್ ತೊ ರಖ್ ನಾಹೆ ಮೇರೆ ಬಚ್ಚೋಂ ಸಮಾಲ್ತೆ”, “ಜಹ ಡಾಲ್ ಡಾಲ್ ಪರ್ ಸೋನೇಕಿ ಚಿಡಿಯಾಂ ಧರ್ತೀ ಹೈಂ ಬಸೇರಾ, ಓ ಭಾರತ್ ದೇಶ್ ಹೈ ಹಮಾರಾ”, “ಹಮ್ ಬೀ ಆಜಾದ್… ಸರ್ ಕಟಾ ಸಕತೇ ಹೈ ಲೇಕಿನ್ ಸರ್ ಝಕಾಸತ್ ತೇ ನಹೀಂ”, “ಜಿನ್ ಹೆ ನಾಜ್ ಹೈ ಹಿಂದ್ ಪರ್ ಓ ಕಹಾಂ ಹೈ” ಇಂತಹ ದೇಶಭಕ್ತಿ ಹಾಡುಗಳು ಬಡಿದು ಎಚ್ಚರಿಸುವಂತಿವೆ. ಮಕ್ಕಳ ಮನೋಜಾಗೃತಿ ಬೆಳಗುವಂತಿವೆ. ದೇಶಕ್ಕೆ ಪ್ರಾಣಕೊಡುತ್ತಿರುವ ವೀರ ಸೈನಿಕರ ವೀರ ಕತೆಗಳನ್ನು ಬಿತ್ತರಿಸುವಂತಹ ಹಾಡುಗಳನ್ನೂ ಸಹ ಅವರ ಕಂಠದಿಂದ ಕೇಳಬಹುದು.

“ಮೇರಿ ಆವಾಜು ಸುನೋ…… ಮೈನೆ ಏಕ್ ಪೂಲ್‌ಕೋ ಸೀನೇಸೆ ಲಗಾಯಾಥಾ……” ಚಾಚಾ ನೆಹರೂರವರ ಜೀವನಚಿತ್ರವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡಬಲ್ಲದು.

ಸಂಖ್ಯೆಯನ್ನು ಆಧರಿಸಿ ರಫಿಯವರು ಎಷ್ಟು ಹಾಡಿದರೆಂದು ಎಣಿಸಿ ಗುಣಮೌಲ್ಯ ಕಟ್ಟುವುದಲ್ಲ, ಎಂತೆಂತಹ ಗೀತೆಗಳನ್ನು ಹಾಡಿದರು ಎಂಬುದರಲ್ಲಿ ಕಂಡುಕೊಳ್ಳುವುದು ಇಲ್ಲಿ ಅವಶ್ಯಕ. ಹಾಗೆ ಅವರು ಹಾಡಿದ ಹಾಡುಗಳ ಗಣನೆಗೆ ತೆಗೆದುಕೊಂಡಾಗ ಯಾವುದನ್ನೂ ತಿರಸ್ಕರಿಸುವಂತಿಲ್ಲ.

ವೈವಿಧ್ಯದ ಏಕತೆ

ಮಹಮ್ಮದ್ ರಫಿ ಕೇವಲ ಹಿಂದಿ ಚಿತ್ರರಂಗದ ಹಿನ್ನೆಲೆಗಾಯನಕ್ಕೇ ಕಟ್ಟು ಬೀಳಲಿಲ್ಲ. ಅವರು ಪಂಜಾಬಿ, ಗುಜರಾತಿ, ಸಿಂಧಿ, ಒರಿಯಾ, ಕನ್ನಡ, ತೆಲುಗು, ಮಲೆಯಾಳಂ ಹೀಗೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದರು. ರಫಿಯ ನಾದಲಹರಿ ಆಸೇತು ಹಿಮಾಚಲ ಪರ್ಯಂತ ಸರ್ವತೋಮುಖ. ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿಯೂ ಹಾಡಿರುವ ರಫಿಯವರು ರಾಷ್ಟ್ರೀಯ ಐಕ್ಯದ ಸಂದೇಶವನ್ನು ಸಾರ್ಥಕ ಗೊಳಿಸಿದರು.

ನೀನೆಲ್ಲಿ ನಡೆವೆ ದೂರ…… ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ…….ಎಲ್ಲೆಲ್ಲೂ ಶೋಕವೇ..

“ಒಂದೇ ಬಳ್ಳಿಯ ಹೂಗಳು” ಚಿತ್ರದ ಈ ಗೀತೆಯನ್ನು ಇಂದಿಗೂ ಮೆಲಕುಹಾಕುವ ಕನ್ನಡಚಿತ್ರ ರಸಿಕರಿಗೆ ರಫಿ ಹತ್ತಿರದವರಾಗುತ್ತಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರಾಗಿದ್ದ ಹಿರಿಯ ನಟ ಗಾಯಕ ಚಿತ್ತೂರು ವಿ. ನಾಗಯ್ಯ ಅವರ “ಭಕ್ತ ರಾಮದಾಸ್” ತೆಲುಗು ಚಿತ್ರಕ್ಕೆ ಮಹಮ್ಮದ್ ರಫಿಯು ಉದಾರವಾಗಿ  ಹಾಡಿದ ಕೀರ್ತಿ ದಕ್ಷಿಣದಲ್ಲಿ ಮೆರೆದಾಡುತ್ತಿದೆ. ಆಂಧ್ರ ಪ್ರದೇಶದ ವರನಟ ಎನ್.ಟಿ. ರಾಮರಾವ್ ಅವರ ಸ್ವಂತ ಚಿತ್ರಗಳಲ್ಲಿ, ಪ್ರಖ್ಯಾತ ನಿರ್ಮಾಪಕ ಪುಂಡರೀಕಾಕ್ಷಯ್ಯ ನಿರ್ಮಿಸಿದ ಚಿತ್ರಗಳಲ್ಲಿ ತೆಲುಗು ಅಭಿಮಾನಿಗಳು ರಫಿಯ ಗಾನವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ಮಹಮ್ಮದ್ ರಫಿ ಆಂಗ್ಲ ಭಾಷೆಯಲ್ಲೂ ಹಲವು ಹಾಡುಗಳನ್ನು ಹಾಡಿದ್ದಾರೆ. ಹಲವು ತರಹದ ಭಾವನೆಗಳ, ಹಲವು ವರ್ಗದ ಜನಗಳ, ಭಾಷೆಗಳ ಅಭಿಮಾನಿಗಳನ್ನು ಸೂರೆಗೊಳ್ಳುವ ನಾದಮಾಧುರ್ಯ ಅವರ ಕಂಠದಲ್ಲಿತ್ತು. ಭಾರತಿ ಸರ್ವ ಭಾಷಾಮಯೀ ಎಂಬ ಮಾತಿಗೆ ಸಾಕ್ಷಿಯಾಗಿ ಈ ಹಾಡುಗಾರನನ್ನು ಸ್ಮರಿಸಬಹುದು.

ಹೂವಿನಂತಹ ಮನಸ್ಸು

ಮಹಮ್ಮದ್ ರಫಿ ರಸಿಕ, ಸದಾ ಹಸನ್ಮುಖಿ. ಯಾರಿಗೂ ನೋವು ಕೊಡದ ಕೋಮಲ ಹೃದಯವಂತಿಕೆಯ ಮನುಷ್ಯ. ರಫಿಯನ್ನು ಹತ್ತಿರ ದಿಂದ ಕಂಡವರು, ಅವರೊಡನೆ ಒಡನಾಡಿದವರು, ಅನುಭವದಿಂದ ತಿಳಿದವರು ಹೇಳುತ್ತಾರೆ: ರಫಿ ಯಾವಾಗಲೂ ನಗುಮುಖದ, ಮುಗ್ಧ ನೋಟದ ವ್ಯಕ್ತಿ. ಎಂದೆಂದಿಗೂ ಯಾರನ್ನೂ ನೋಯಿಸದ, ನೋಯಿಸುವ ಸ್ವಭಾವ ಆತನದಲ್ಲ. ಎಲ್ಲರಿಗೂ ಅಚ್ಚುಮೆಚ್ಚಿನ ಪ್ರಿಯಮಿತ್ರ, ಹಿತಚಿಂತಕ, ಕಪಟವರಿಯದ, ವಂಚನೆಯಿಲ್ಲದ ನಿಸ್ವಾರ್ಥ ವ್ಯಕ್ತಿ.

ರಫಿ ಸಾಹೇಬರು ಮೃದುಭಾಷಿ, ಮತ್ತು ಚುರುಕು ಮಾತುಗಾರ. ಬೇಸರಿಕೆ ಕಳೆಯುವಲ್ಲಿ ರಫಿ ಯಾವಾಗಲೂ ಹಾಸ್ಯಚಟಾಕಿಗಳನ್ನು ಹಾರಿಸುತ್ತಾ ಸಹ ಕಲಾವಿದರೊಂದಿಗೆ, ತಾಂತ್ರಿಕ ವರ್ಗದವ ರೊಂದಿಗೆ ಇರುತ್ತಿದ್ದರಂತೆ. ಇಪ್ಪತ್ತು ವರ್ಷಗಳ ಹಿಂದೆ “ದೋ ದುಲ್ ಹೇ” ಚಿತ್ರದ ಹಾಡುಗಾರಿಕೆಗಾಗಿ ಮದರಾಸಿಗೆ ರಫಿ ಬಂದಿದ್ದರಂತೆ. ಆಗ ತಾನೇ ಮೀಸೆ ಮೂಡುತ್ತಿದ್ದ ತರುಣ ಗಾಯಕರೊಬ್ಬರ ಪರಿಚಯ ಅವರಿಗಾಯಿತು. ಜೆಮಿನಿ ಸ್ಟುಡಿಯೋದಲ್ಲಿ ರೆಕಾರ್ಡಿಂಗ್. ಮಧ್ಯಾಹ್ನದ ವಿರಾಮವೇಳೆಯಲ್ಲಿ ತರುಣ ಗಾಯಕರು ಅಲ್ಲಿ ರಫಿ ಹಾಡಿದ ಕೆಲವು ಜನಪ್ರಿಯ ಗೀತೆಗಳನ್ನು ಅವರ ಧಾಟಿಯಲ್ಲೇ ಹಾಡುತ್ತಿದ್ದರಂತೆ. “ಏ ಕ್ಯಾ ಹೋತಾ ಹೈ ಇಧರ್… ಏ ರಫಿ ಸಾಬ್ ಕಹಾ ಸೇ ಆಗಯೇ” ಎಂದು  ನೆರೆದವರನ್ನೆಲ್ಲ ಗೊಳ್ಳನೇ ನಗುವಂತೆ ಮಾಡಿದರಂತೆ. ಅಷ್ಟೇ ಅಲ್ಲ, ತರುಣ ಗಾಯಕರನ್ನು ಅಂದಿನಿಂದ ಹಾಡಿ ಹರಸುತ್ತಿದ್ದರೆಂದು ಆ ಗಾಯಕರು ಸ್ಮರಿಸಿಕೊಳ್ಳುತ್ತಾರೆ.

ಸಜ್ಜನಿಕೆ, ಶಿಸ್ತು, ನಿಯಮ, ಧರ್ಮಪಾಲನೆ

ರಫಿ ಎಂತಹ ಮಹಾನ್ ಗಾಯಕರೋ ಅಂತಹ ಸಜ್ಜನರು. ಅದಕ್ಕೊಂದು ಚಿಕ್ಕ ಉದಾಹರಣೆ. ಗಾಯಕ ಚಿತ್ತೂರು ವಿ. ನಾಗಯ್ಯನವರು ತಮ್ಮೆಲ್ಲ ಶಕ್ತಿ, ಪ್ರತಿಭೆಯನ್ನು ಧಾರೆಯೆರೆದು ತೆಲುಗಿನಲ್ಲಿ “ಭಕ್ತ ರಾಮದಾಸ್” ಚಿತ್ರವನ್ನು ತಯಾರಿಸುತ್ತಿದ್ದರು. ಆ ಚಿತ್ರದಲ್ಲಿ ಬರುವ ಕಬೀರ್ ದಾಸ್ ಪಾತ್ರದ ಹಾಡುಗಳನ್ನು ಹಾಡಬೇಕೆಂದು ರಫಿಯವರನ್ನು ಕೇಳಿಕೊಂಡು, ತಾವು ಈ ಚಿತ್ರಕ್ಕಾಗಿ ಪಡುತ್ತಿರುವ ಕಡುಕಷ್ಟವನ್ನು ತೋಡಿಕೊಂಡು ಅವರಿಗೆ ಆಹ್ವಾನ ಕಳಿಸಿದಾಗ ರಫಿ ಗಾಯಕನ ಕಲಾವಿದನ ಕಷ್ಟಕ್ಕೆ ಕಂಡು ನೊಂದುಕೊಂಡನಂತೆ. ನಾಗಯ್ಯನವರಂತಹ ಮಹಾನಟ, ಗಾಯಕ, ನಿರ್ದೇಶಕ ಹಾಡುಗಳನ್ನು ಹಾಡಬೇಕೆಂದು ತಮ್ಮನ್ನು ಕೇಳಿರುವುದು ತಮಗೆ ದೊರೆತ ಮಹಾಭಾಗ್ಯವೆಂದು ಭಾವಿಸಿದರಂತೆ. ಅಷ್ಟೇ ಅಲ್ಲ, ಯಾವ ನಿಬಂಧನೆಯನ್ನೂ ಹಾಕದೆ ತಮ್ಮ ಸ್ವಂತ ಖರ್ಚಿನಲ್ಲೇ ಮದರಾಸಿಗೆ ಬಂದು ಹಾಡಿದರು. ಸಹಕಲಾವಿದನೆಂಬ ಗೌರವದಿಂದ ಒಂದು ಚಿಕ್ಕಾಸನ್ನೂ ಸಂಭಾವನೆಯಾಗಿ ತೆಗೆದುಕೊಳ್ಳಲಿಲ್ಲ. ಇದು ಅವರ ದೊಡ್ಡ ಗುಣ. ನಾಗಯ್ಯನವರು ರಫಿ ಸಾಹೇಬರ ಔದಾರ್ಯ, ಸಹೃದಯ ಕಂಡು ಪುಲಕಿತರಾಗಿ ಅಪ್ಪಿಕೊಂಡರಂತೆ. ಇಂತಹ ಉಪಕಾರಗಳು ರಫಿಯ ಜೀವನದಲ್ಲಿ ಅನೇಕ.

ಸ್ನೇಹಮಯಿ

ಯಾವುದೇ ನಿರ್ಮಾಪಕ, ನಿರ್ದೇಶಕ ಬಡಸ್ಥಿತಿಯಲ್ಲಿ ಚಿತ್ರನಿರ್ಮಾಣಕ್ಕೆ ಕೈಹಾಕಿದ್ದಾನೆಂದು ತಿಳಿದುಬಂದರೆ ಅಂತಹವರ ಹತ್ತಿರ ತಮಗೆ ಇಷ್ಟೇ ಸಂಭಾವನೆ ಕೊಡಬೇಕು, ಅಷ್ಟೇ ಕೊಡಬೇಕು ಎಂದು ರಫಿ ಕೇಳುತ್ತಲೇ ಇರಲಿಲ್ಲ. ವ್ಯವಹಾರಿಕೆಗೆ ಹೇಸುತ್ತಿದ್ದರು. ಇದ್ದುದರಲ್ಲೇ ನಿಭಾಯಿಸಿಕೊಳ್ಳುವ ಗುಣ ಅವರದು. ಅವರೆಂದೂ ಸಹಕಲಾವಿದ ರೊಂದಿಗೆ ನಿರ್ಮಾಪಕರೊಂದಿಗೆ ನಟ-ನಟಿ ಯರೊಂದಿಗೆ ಪೈಪೋಟಿಗೆ ಇಳಿಯುತ್ತಿರಲಿಲ್ಲ. ಮಹಾನಟ-ಮಹಾನಾಯಕಿಯಿಂದ ಹಿಡಿದು ಚಿಕ್ಕಪುಟ್ಟ ನಾಯಕ-ನಾಯಕಿಯರ ಎಲ್ಲರ ಅಭಿನಯಕ್ಕೆ ಶ್ರದ್ಧೆಯಿಂದ ಹಾಡುತ್ತಿದ್ದರು. ಎಷ್ಟೋ ಹಾಸ್ಯನಟರಿಗೂ ಅವರು ಕಂಠದಾನ ನೀಡಿದ್ದಾರೆ. ಎಲ್ಲರೊಡನೆ ಒಂದಾಗಿ ಕೂಡಿ ಬೆರೆಯುವ ಬಯಕೆ ರಫಿಯದು.

ಚಿತ್ರರಂಗದ ಸಾಹಿತಿ, ಸಂಗೀತ ನಿರ್ದೇಶಕ, ಹಾಡುಗಾರರೊಂದಿಗೆ ರಫಿಯವರದು ಆತ್ಮೀಯ ಗೆಳೆತನ. ವೈರತ್ವಕಾಣದ ಅಜಾತಶತ್ರು ಅವರು. ಹಿಂದೀ ಚಿತ್ರರಂಗದ ಸಾಹಿತಿಗಳಾದ ಶಕೀಲ್, ಶಾಹೀರ್, ಮಜರೂಹ್, ಹಸ್‌ರತ್, ಶೈಲೇಂದ್ರ, ರಾಜೇಂದ್ರಕ್ರಿಷನ್, ಭರತವ್ಯಾಸ, ಕೈಫಿ ಅಜ್ಮಿ, ಆನಂದ್‌ಬಕ್ಷಿ, ಗುಲ್ಜಾರ್, ಗುಲ್ಷನ್ ಮುಂತಾದವ ರೊಂದಿಗೆ ಅವರ ಸಾಹಿತ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ತಾಳಿದ್ದರು. ಸಾಹಿತಿಗಳು ಕಾಣುವ ಕಲ್ಪನಾ ಲೋಕದ ಕಾರ್ಯಕ್ಕೆ ರಫಿಯವರು ಜೀವ ತುಂಬುತ್ತಿದ್ದರು.

ಸಂಗೀತ ನಿರ್ದೇಶಕರ ಹಲವು ಪ್ರಯತ್ನ ಗಳಿಗೆ  ರಫಿ ಸಾಫಲ್ಯವನ್ನು ತಂದು ಕೊಡುತ್ತಿದ್ದರು. ಸಂಗೀತ ನಿರ್ದೇಶಕರನೇಕರು ರಫಿ ಎಂದರೆ ಒಂದು ಬಲಗೈ. ಒಬ್ಬ ಸೋದರನೆಂದೇ ಭಾವಿಸಿದ್ದರು. ಸುಪ್ರಸಿದ್ಧ ಸಂಗೀತ ನಿರ್ದೇಶಕರಾದ ನೌಶಾದ್, ಸಿ.ರಾಮಚಂದ್ರ, ರೋಶನ್, ಎಸ್.ಡಿ.ಬರ್ಮನ್, ಶಂಕರ್-ಜೈಕಿಶನ್, ಒ.ಪಿ. ನಯ್ಯರ್, ಚಿತ್ರಗುಪ್ತ, ಜೈದೇವ್, ಸಲೀಲ್ ಚೌಧುರಿ, ರವಿ, ಖಯ್ಯಾಂ ಮದನ್‌ಮೋಹನ್, ಎಸ್.ಎನ್. ತ್ರಿಪಾಠಿ, ಲಕ್ಷ್ಮೀಕಾಂತ್- ಪ್ಯಾರೇಲಾಲ್. ಕಲ್ಯಾಣ್‌ಜಿ-ಆನಂದ್ ಜಿ, ಆರ್.ಡಿ. ಬರ್ಮನ್ …….. ಹೀಗೆ ಎಲ್ಲರ ನಿರ್ದೇಶನದಲ್ಲಿ ರಫಿಯ ಸಂಗೀತ ಪಳಗಿ, ಮಹತ್ತರ ಸಾಧನೆಯನ್ನು ಗಳಿಸಿಕೊಂಡಿದೆ. ರಫಿ ಮೊಟ್ಟಮೊದಲು ಆಕರ್ಷಿತರಾದದ್ದು ದಿವಂಗತ ಕುಂದನ್‌ಲಾಲ್ ಸೈಗಲ್ ಅವರ ಗಾಯನ ಮೋಡಿಗೆ. ಆ ಮಹಾನ್ ಗಾಯಕ ಅವರಿಗೆ ಪ್ರೇರಕನೂ, ತಾರಕನೂ ಆದ. ಜಿ. ಎಂ. ದುರಾನಿ, ಖಾನ್ ಮಸ್ತಾನ್‌ರಂತಹ ಗಾಯಕರು ಆಗಲೇ ರಫಿಯ ಪ್ರತಿಭೆಯನ್ನು ಕಂಡು ಪ್ರೋತ್ಸಾಹಿಸಿದರು. ರಫಿ-ಮುಖೇಶ್-ತಲತ್ ಮಹಮ್ಮದ್ ಆಜೀವ ಗೆಳೆಯರು. ಮನ್ನಾಡೇ, ಇವರನ್ನು ಗಾಯನ ಪ್ರಪಂಚದ “ತ್ರಿಮೂರ್ತಿ” ಗಳೆಂದು ಕರೆಯುತ್ತಿದ್ದರು. ಮನ್ನಾಡೇ, ಮಹೇಂದ್ರಕಪೂರ್, ಕಿಶೋರ್‌ಕುಮಾರ್ ಮುಂತಾದ ಗಾಯಕರು ರಫಿಯವರಲ್ಲಿ ಅಪಾರ ಗೌರವ ತಾಳಿದ್ದರು. ಗಾಯಕಿಯರಲ್ಲಿಯೂ ರಫಿಯವರದು ಗೌರವಯುತ ಭಾವನೆ. ಜೀನತ್ ಬೇಗಮ್, ಸ್ವರ್ಣಲತಾ, ನೂರ್‌ಜಹಾನ್ ಮುಂತಾದ ಹಳೆಯ ಗಾಯಕಿಯರ ಜೊತೆ ಯುಗಳಗೀತೆಗಳನ್ನು ಹಾಡಿದ್ದಾರೆ. ಲತಾಮಂಗೇಶ್‌ಕರ್, ಉಷಾ ಮಂಗೇಶ್‌ಕರ್, ಆಶಾ ಭೌನ್‌ಸ್ಲೆ, ಶಾರದಾ ಮುಂತಾದ ಗಾಯಕಿಯರ ಜೊತೆಯಲ್ಲಿ ಅಸಂಖ್ಯಾತ ಹಾಡುಗಳನ್ನು ರಫಿ ಹಾಡಿದ್ದಾರೆ. ಲತಾ-ರಫಿಯವರ ಯುಗಳ ಗೀತೆಯೆಂದರೆ ಕೇಳಲು ಲಕ್ಷಾನುಗಟ್ಟಲೆ ಚಿತ್ರಪ್ರೇಕ್ಷಕರು ಹಾತೊರೆಯುತ್ತಿದ್ದರಂತೆ. ಸುಲಕ್ಷಣ ಪಂಡಿತ್ ಅಂತಹ ಯುವಗಾಯಕಿ, ನಟಿ ರಫಿಯವರಿಂದ ಪ್ರೇರಿತಳಾಗಿದ್ದಳು. ಶೈಲೇಂದ್ರಸಿಂಗ್, ಭೂಪೇಂದ್ರರಂತಹವರು ರಫಿಯ ಬಗ್ಗೆ ಗೌರವ ಭಾವನೆ ತಾಳಿದ್ದರು.

ಸಂಗೀತವೇ ತಮ್ಮ ಜೀವನವೆಂದು ನಂಬಿ ಸಾಧನೆ ಮಾಡಿದ ಕಲಾವಿದ ರಫಿಯವರು.

ರಫಿಯು ಧರ್ಮನಿಷ್ಠ ವ್ಯಕ್ತಿ. ನಮಾಜು ಪಾಂಬಂದಿಯಲ್ಲಿ ನಿಯಮ ತಪ್ಪುತ್ತಿರಲಿಲ್ಲ. ನಾನಾ ಧರ್ಮಕಾರ್ಯಗಳಲ್ಲಿ ಎತ್ತಿದ ಕೈ. ರಂಜಾನ್, ಬಕ್ರಿದ್ ಹಬ್ಬಗಳ ಸಂದರ್ಭದಲ್ಲಿ ಧಾರಾಳವಾಗಿ ದಾನ ಮಾಡುವ ಪದ್ಧತಿ ಇತ್ತು. ಇತರ ಧರ್ಮ ಗಳವರೊಂದಿಗೆ ಸಹಭಾವನೆ ಗೌರವಭಾವನೆಯಿಂದ ಇದ್ದರು. ಕೆಲವೊಮ್ಮೆ ಅವರು ಹಿಂದೂ ಭಕ್ತಿಗೀತೆಗಳನ್ನು ಅತ್ಯಂತ ಭಾವಪರವಶದಿಂದ ತಲ್ಲೀನತೆಯಿಂದ ಹಾಡುತ್ತಿದ್ದರು. ಹಿಂದೂ ಮುಸ್ಲಿಮ್ ಬಾಂಧವರ ಐಕ್ಯತೆಯ ಸಂಕೇತ ವಾಗಿದ್ದರು ಈ ಮಹಾನ್ ಗಾಯಕ.

ಕೀರ್ತಿ ಶನಿಯಿಂದ ದೂರ…. ಬಲು ದೂರ

ಮಹಮ್ಮದ್ ರಫಿ ಹುಟ್ಟು ಗಾಯಕ. ಪ್ರತಿಭಾವಂತ. ಈತನ ಪ್ರತಿಭೆಯನ್ನು ಗುರುತಿಸಿ ಭಾರತ ಸರ್ಕಾರ “ಪದ್ಮಶ್ರೀ” ಬಿರುದನ್ನಿತ್ತು ಗೌರವಿಸಿತು.

ಸಂಗೀತ ನಿರ್ದೇಶಕ ನೌಶಾದರಿಗೆ ರಫಿಯವರ ಅಮೋಘ ಗಾಯನದಿಂದ ಬೈಜು ಬಾವ್ರಾ ಚಿತ್ರದಲ್ಲಿ ಸಂಗೀತ ನಿರ್ದೇಶನಕ್ಕಾಗಿ “ಫಿಲ್ಮ್‌ಫೇರ್ ಪ್ರಶಸ್ತಿ” ದೊರೆಯಿತು. (೧೯೫೩). ರಫಿ ಯವರಿಗೆ ೧೯೬೦, ೧೯೬೧, ೧೯೬೪, ೧೯೬೬, ೧೯೬೮, ೧೯೭೭ ಈ ವರ್ಷಗಳಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ದೊರೆಯಿತು. ಶ್ರೇಷ್ಠ ಹಿನ್ನೆಲೆಗಾಯನಕ್ಕಾಗಿ ೧೯೭೮ರಲ್ಲಿ ರಾಷ್ಟ್ರಪ್ರಶಸ್ತಿ ಸಂದಿತು. ೧೯೬೬ರಲ್ಲಿ ರಫಿಯವರು ಹಿನ್ನೆಲೆಗಾಯನ ಪ್ರಾರಂಭಿಸಿ ಇಪ್ಪತ್ತೈದು ವರ್ಷ ಗಳಾದವು. ದಕ್ಷಿಣ ಭಾರತದ ಸಂಗೀತಾಭಿಮಾನಿಗಳು ೧೯೭೬ರ ಡಿಸೆಂಬರ್‌ನಲ್ಲಿ ಬೆಳ್ಳಿಮಹೋತ್ಸವ ಆಚರಿಸಿ “ಸುಗಮ ಸಂಗೀತ ಸಾಮ್ರಾಟ್” ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದರು.

ಕೀರ್ತಿಯ ಸಂದರ್ಭಗಳು ಸರಮಾಲೆ ಯಾಗಿ ಬಂದರೂ ಅವರೆಂದೂ ಉಬ್ಬಿ ಕೊಬ್ಬಿ ನಡೆಯಲಿಲ್ಲ. ಸೋತನೆಂದೂ ಕೊರಗಲಿಲ್ಲ. ಸೋಲು ಗೆಲುವನ್ನು ಸಮಾನವಾಗಿ ಕಂಡುಕೊಳ್ಳುವ ಭಾವನೆ ಅವರದು. ಈತ ರಾಜಕೀಯದಿಂದ ಬಲುದೂರ.

“ಗಿನ್ನೆಸ್ ಬುಕ್” ಎನ್ನುವುದೊಂದು ಪ್ರಕಟಣೆ. ಅದರಲ್ಲಿ ಪ್ರಪಂಚದಲ್ಲಿನ ದಾಖಲೆಗಳನ್ನು (“ರಿಕಾರ್ಡ್ಸ್”)ಎಂದರೆ ಅತ್ಯಂತ ವಿಶಿಷ್ಟ ಸಾಧನೆ ಗಳನ್ನು ಕುರಿತು ಮಾಹಿತಿ ಕೊಡುತ್ತಾರೆ. ಪ್ರಪಂಚದಲ್ಲಿ           ಮಹಮ್ಮದ್ ರಫಿಯವರಷ್ಟು  ಹಾಡು ಗಳನ್ನು “ರಿಕಾರ್ಡ್” ಯಾರೂ ಮಾಡಿಲ್ಲ. ಆದರೆ ಅವರ ಹೆಸರು ಅದರಲ್ಲಿ ಬರಲಿಲ್ಲ. ಅವರಿಗಿಂತ ಕಡಿಮೆ ಸಂಖ್ಯೆ ಹಾಡಿದ್ದ ಲತಾಮಂಗೇಶ್‌ಕರ್‌ರವರ ಹೆಸರು ಆ ಪುಸ್ತಕದಲ್ಲಿ ದಾಖಲಾಯಿತು. ಪ್ರಪಂಚದ ಯಾವ ವಿಶ್ವವಿದ್ಯಾನಿಲಯವೂ ಈ ಮಹಾನ್ ಗಾಯಕನಿಗೆ “ಡಾಕ್ಟರೇಟ್” ಪುರಸ್ಕಾರವನ್ನು ನೀಡಲಿಲ್ಲ.

ನಾನು ಗಾಯಕನಾಗಿಯೇ ಇರುತ್ತೇನೆ

ನಿರ್ಮಾಪಕ ನಿರ್ದೇಶಕ ಎಸ್.ಮುಖರ್ಜಿ ರಫಿಯನ್ನೊಮ್ಮೆ ಕೇಳಿದ್ದರಂತೆ: “ನೀವೇಕೆ ಸ್ವಂತ ಚಿತ್ರ ತೆಗೆದು, ಸಂಗೀತ ನಿರ್ದೇಶನ ನೀಡಬಾರದು?” ಎಂದು. ರಫಿ ಅದಕ್ಕೆ ಹೀಗೆ ಉತ್ತರ ನೀಡಿದ್ದರಂತೆ, “ಒಬ್ಬ ಗಾಯಕ ತನ್ನ ಗಾಯನ ಕಲೆಯಲ್ಲಿ ಕನಿಷ್ಠ ಪಕ್ಷ ಪರಿಪಕ್ವತೆಯನ್ನು ಸಾಧಿಸಬೇಕು. ಅದು ಅವನ ಬಾಳಿಗೆ ಧನ್ಯತೆ ನೀಡುವಂತಹದು. ಕಲಬೆರಕೆ ಮನಸ್ಸಿನಿಂದ ಸಂಗೀತ ಸುಧೆ ಹರಿಯಲಾರದು. ವ್ಯವಹಾರಿಕೆಗೆ ಅಂಟಿಕೊಳ್ಳುವ ಸ್ವಭಾವ, ಚಿಕ್ಕಪುಟ್ಟ ಪುರಸ್ಕಾರಗಳಿಗೆ, ಸಂದರ್ಭಗಳಿಗೆ ಆಕಾಶಕ್ಕೆ ಜಿಗಿಯುವ ಸ್ವಭಾವ ಹಾಡುಗಾರನಿಗೆ ಬರಕೂಡದು. ಆ ದೃಷ್ಟಿಯಿಂದ ಸಂಗೀತ ನಿರ್ದೇಶನಕ್ಕೆ ಕೈ ಹಾಕಿದರೆ ಸೋಲು ಸಂಭವಿಸಬಹುದು. ಗೆಲವು ಸಂಭವಿಸ ಬಹುದು. ಆದರೆ ನಂಬಿದ ಮಾರ್ಗದಲ್ಲಿ ಕೊರತೆಗಳು ಕಂಡುಬರುವುದಂತೂ ಸಹಜ. ನಾನು ಗಾಯಕ ನಾಗಿಯೇ ಇರುತ್ತೇನೆ. ಗಾಯಕನಾಗಿಯೇ ಸಾಗುತ್ತೇನೆ”. ರಫಿ ಗಾಯಕರಾಗಿಯೇ ೧೯೮೦ರ ಜುಲೈ ೩೧ರಂದು ಇಹಲೋಕದಿಂದ ತೆರಳಿದರು. ಭಾರತದ ಚಲನಚಿತ್ರರಂಗಕ್ಕೆ ಬಹು ದೊಡ್ಡ ನಷ್ಟವಾಯಿತು.

ಸಂಗೀತಸುಧೆ ವಿದೇಶಗಳಿಗೂ ಹರಿಯಿತು…

ಮಹಮ್ಮದ್ ರಫಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಭಾರತ ಪುತ್ರ, ಮಹಾನ್ ಗಾಯಕ. ಚಿತ್ರರಂಗದ ಹಾಡುಗಾರಿಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು. ಸುಮಾರು ಮೂವತ್ತು ಬಾರಿಯಾದರೂ ಆತ ಅನೇಕ ವಿದೇಶ ರಾಷ್ಟ್ರಗಳಿಗೆ ಗಾಯನ ತಂಡದೊಂದಿಗೆ ತೆರಳಿದ್ದುಂಟು. ಅಮೆರಿಕ, ಆಫ್ರಿಕಾ, ಇಂಗ್ಲೆಂಡ್ ದೇಶ ಗಳಲ್ಲಿ ರಫಿಯ ಸಂಗೀತಕ್ಕೆ, ನಾದ ಮಾಧುರ್ಯಕ್ಕೆ ಅಪಾರ ಮನ್ನಣೆ ದೊರಕಿತು. ಅಂತರರಾಷ್ಟ್ರೀಯ ಖ್ಯಾತ ಬಾಕ್ಸಿಂಗ್ ಪಟು ಮಹಮ್ಮದಾಲಿ ರಫಿಯ ಮೆಚ್ಚಿನ ಅಭಿಮಾನಿ ಯಾಗಿದ್ದ. ರಫಿಯು ಅರಬ್ ರಾಷ್ಟ್ರಗಳಲ್ಲಿಯೂ ಸಂಚರಿಸಿದರು. ಭಾರತ-ಅರಬ್ ಮೈತ್ರಿಯನ್ನು ಬಲಗೊಳಿಸಿದರು. ವಿದೇಶಗಳಲ್ಲಿ ನಡೆದ ಅನೇಕ ಕಾರ್ಯಗಳಿಗೆ ಆಯಾ ದೇಶದ ರಾಷ್ಟ್ರಪತಿ, ಪ್ರಧಾನಿ ಮಂತ್ರಿಗಳೂ ಅನೇಕ ಹಿರಿಯ ಅಧಿಕಾರಿಗಳೂ ಪ್ರೇಕ್ಷಕರೂ ರಫಿಯವರ ಹಾಡು ಕೇಳಲು ಬಂದಿದ್ದುಂಟು.

ನಮ್ಮ ನೆರೆಯ ರಾಷ್ಟ್ರವಾದ ಶ್ರೀಲಂಕಾಕ್ಕೆ ೧೯೮೦ರ ಮೇ ತಿಂಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಫಿ ಭೇಟಿ ಕೊಟ್ಟಿದ್ದರು. ಅವರ ಗಾಯನ ಕೇಳಲು ಸ್ವತಃ ಆ ದೇಶದ ರಾಷ್ಟ್ರಪತಿ ಜೆ. ಆರ್. ಜಯವರ್ಧನೆ ಆಗಮಿಸಿ, ಆನಂದಿಸಿದರು. ಮೇ ಡೇ ಸಂದರ್ಭದಲ್ಲಿ ಮೊಟ್ಟ ಮೊದಲನೆಯದಾಗಿ ಭಾರತೀಯ ಚಿತ್ರರಂಗದಿಂದ ತೆರಳಿದ ಗಾಯಕ, ರಫಿಯವರು. ಮಳೆಯು ಧಾರಾಕಾರವಾಗಿ ಸುರಿಯುತ್ತಿತ್ತು. ಬಹುಮಂದಿಗೆ ಹಿಂದೀಭಾಷೆ ಬರುತ್ತಿರಲಿಲ್ಲ. ಆದರೂ ಅಭಿಮಾನಿಗಳು ತದೇಕಚಿತ್ತ ದಿಂದ ಗಾನ ಮಾಧುರ್ಯ ಕೇಳಿದ್ದು ನಿಜಕ್ಕೂ  ಅಭಿಮಾನ ಪಡುವಂತಹ ಸಂಗತಿ. ಅಮರ ಗಾಯಕ ರಫಿ ಹೇಳುತ್ತಿದ್ದರು. “ಏ ಸಬ್ ಖುದಾ ಕೆ ದೇನ್ ಹೈ, ಅಲ್ಲಾ ಭಲಾ ಕರೇಗಾ ಉಸ್ಕಾ ಜೋ ಔರೋಂಕಾ ಭಲಾ ಕರೇಗಾ…” ಇದೆಲ್ಲ ಭಗವಂತನ ಕೊಡುಗೆ, ಉಪಕಾರ ಯಾರು ಮಾಡುತ್ತಾರೋ ಅವರನ್ನು ಭಗವಂತ ಎಂದೂ ಕೈಬಿಡುವುದಿಲ್ಲ.

ರಫಿಯವರ ಔದಾರ್ಯಕ್ಕೆ ಮಿತಿಯೇ ಇರಲಿಲ್ಲ. ಪ್ರತಿ ತಿಂಗಳು ಎರಡನೆಯ ತಾರೀಖು ಕಷ್ಟದಲ್ಲಿದ್ದವರು, ಬಡವರು ನೂರಾರು ಮಂದಿ ಅವರ ಮನೆಯ ಬಳಿ ಸಾಲಾಗಿ ನಿಲ್ಲುತ್ತಿದ್ದರು. ಪ್ರತಿಯೊಬ್ಬರಿಗೂ ಅವರ ಹೆಸರು ಬರೆದಿದ್ದ ಲಕೋಟಿಯೊಂದನ್ನು ರಫಿ ಕೊಡುತ್ತಿದ್ದರು. ಅದರಲ್ಲಿ ಅವರ ಅಗತ್ಯಕ್ಕೆ ಅನುಗುಣವಾಗಿ ರಫಿ ಹಣ ಇಟ್ಟಿರುತ್ತಿದ್ದರು. ಅವರು ಸಾಯುವವರೆಗೆ ಈ ಕ್ರಮ ನಡೆದುಕೊಂಡು ಬಂದಿತು. ಹೀಗೆ ಹಣ ಪಡೆಯುತ್ತಿದ್ದವರಲ್ಲಿ ಎಷ್ಟೋ ಮಂದಿ ಹಿಂದೆ ಚಲನಚಿತ್ರಗಳಲ್ಲಿ ನಟರಾಗಿ, ಗಾಯಕರಾಗಿ ದುಡಿದು ಅನಂತರ ಬಡತನಕ್ಕೆ ಸಿಕ್ಕವರು.

ರಫಿ ಎಂದೂ ಧೂಮಪಾನ ಮಾಡಲಿಲ್ಲ. ಕುಡಿತ ಕಲಿಯಲಿಲ್ಲ. ಆತನಿಗೆ ಸಂಗೀತ ಸರ್ವಸ್ವವಾಗಿತ್ತು. ಸಂಗೀತ ದೈವದತ್ತವೆಂದು ರಫಿಯವರು ನಂಬಿದ್ದರು. ಅದರ ಉಪಾಸನೆ, ಆರಾಧನೆ ಅಂತರಂಗದಿಂದ ಬರತಕ್ಕದೆಂದು ಅವರ ನಂಬಿಕೆಯಾಗಿತ್ತು.

೧೯೮೦ರ ಜುಲೈ ೩೧ರಂದು ಮಹಮ್ಮದ್ ರಫಿ ಅಕಾಲಮರಣಕ್ಕೆ ತುತ್ತಾದಾಗ ಅವರಿಗೆ ೫೫ ವರ್ಷ. ಅವರಿಗೆ ಧರ್ಮಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳು ಇದ್ದಾರೆ.

೧೯೭೭ರಲ್ಲಿ ಅವರೇ ಒಂದು ಪತ್ರದಲ್ಲಿ ತಮ್ಮ ಸಾಧನೆಯನ್ನು ಹೇಳಿಕೊಳ್ಳುವುದು ಅನಿವಾರ್ಯ ವಾದಾಗ ತಾವು ರಿಕಾರ್ಡ್ ಮಾಡಿದ ಹಾಡುಗಳನ್ನು ಕುರಿತು ಹೀಗೆ ಬರೆದರು: “ನಾನು ಗಾಯಕನಾಗಿ ವೃತ್ತಿ ಪ್ರಾರಂಭ ಮಾಡಿದ್ದು ೧೯೪೪ರಲ್ಲಿ. ಈವರೆಗೆ ಇಪ್ಪತ್ತಮೂರು ಸಾವಿರ ಹಾಡುಗಳನ್ನು ರಿಕಾರ್ಡ್ ಮಾಡಿದ್ದೇನೆ. ಇಂಗ್ಲಿಷಿನಲ್ಲಿ ಪಾಪ್ ಹಾಡನ್ನು ರಿಕಾರ್ಡ್ ಮಾಡಿದ ಮೊಟ್ಟಮೊದಲ ಭಾರತೀಯ ನಾನೇ.

ರಫಿಯವರು ತೀರಿಕೊಂಡಾಗ ಸುಪ್ರಸಿದ್ಧ ಗಾಯಕಿ ಲತಾಮಂಗೇಶ್‌ಕರ್‌ರು, “ಸೈಗಲ್‌ರವರು ತೀರಿಕೊಂಡಾಗ ಒಂದು ಶಕ ಮುಗಿದ ಹಾಗೆ ರಫಿಯವರ  ನಿಧನದಿಂದ ಮತ್ತೊಂದು ಶಕವು ಅಸ್ತಮಿತಗೊಂಡಿತು. ಹಾಡುಗಾರರು ಎಷ್ಟಾದರೂ ಬರಬಹುದು, ಆದರೆ ಮತ್ತೊಬ್ಬ ರಫಿಯನ್ನು ಮಾತ್ರ ನಾವು ಎಂದೂ ನೋಡೆವು” ಎಂದು ಕಂಬನಿ ಮಿಡಿದರು.