ಪ್ಯಾರಡೈಸ್ ಲಾಸ್ಟ್

೧೬೬೭ ರಲ್ಲಿ ಪ್ರಕಟವಾದ ಮಿಲ್ಟನ್ ಕವಿಯ ಈ ಕಾವ್ಯ ಇಂಗ್ಲಿಷ್ ಸಾಹಿತ್ಯದ ಅತ್ಯುತ್ಕೃಷ್ಟ ಸಾಧನೆಗಳಲ್ಲೊಂದು. ೧೨ ಅಧ್ಯಾಯಗಳಿರುವ ಈ ಕಾವ್ಯದ ವಸ್ತು ಮಾನವ ಮತ್ತು ದೇವರ ಸಂಬಂಧವನ್ನು ಕುರಿತದ್ದು. ಕೆಸ್ತ ಧರ್ಮದ ಪ್ರಕಾರ ಮೊದಲ ಮಾನವರಾದ ಆಡಮ್ ಮತ್ತು ಈವ್, ಸೇಟನ್‌ನ ಮೋಸಕ್ಕೆ ಒಳಗಾಗಿ, ಜ್ಞಾನವೃಕ್ಷದ ಫಲವನ್ನು ತಿಂದು ಭೂಮಿಗೆ ಇಳಿದದ್ದು ಇದರ ಕತೆ. ಇದರ ಒಳಗೆ ಮಾನವ ಚರಿತ್ರೆ, ಪ್ರೇಮ, ಮತ, ಶಿಸ್ತು ಅದರ ಉಲ್ಲಂಘನೆ ಮುಂತಾದವುಗಳನ್ನು ಅತ್ಯಂತ ಹೃದಯಂಗಮವಾಗಿ ಶೋಧಿಸಲಾಗಿದೆ.

ದೇವರ ಸಾರ್ವಭೌಮತ್ವವನ್ನು ಒಪ್ಪದ ಸೇಟನ್ ಬಂಡಾಯ ಎದ್ದು ವಿಫಲನಾಗುತ್ತಾನೆ. ಅದಕ್ಕಾಗಿ ಆತನಿಗೆ ಆತನ ಅನುಯಾಯಿಗಳೊಂದಿಗೆ ಉರಿಯುವ ಸರೋವರದಲ್ಲಿ ಒಂಬತ್ತು ದಿನ ಬಿದ್ದಿರುವ ಶಿಕ್ಷೆ ಲಭಿಸುತ್ತದೆ. ಇಂತಹ ಪತನವನ್ನು ಸೇಟನ್ ಸಹಿಸಲಾರ. ಅದಕ್ಕಾಗಿ ತನ್ನ ಸಂಗಾತಿಗಳ ಸಭೆಯೊಂದನ್ನು ಕರೆದು ಪ್ರತೀಕಾರಕ್ಕಾಗಿ ಭೂಮಿಯಲ್ಲಿದ್ದ ಮಾನವರನ್ನೇ ಬಳಸಿಕೊಳ್ಳುವುದೆಂದು ನಿರ್ಧರಿಸಿ, ಭೂಮಿಗೆ ಸ್ವತಃ ತಾನೇ ಬರುತ್ತಾನೆ.

ಈಡನ್ ಉದ್ಯಾನದಲ್ಲಿದ್ದವರು ಆಡಮ್ ಮತ್ತು ಈವ್ ಇಬ್ಬರೇ; ಅಲ್ಲಿದ್ದ ಜ್ಞಾನವೃಕ್ಷದ ಫಲವನ್ನು ಅವರು ತಿನ್ನುವ ಹಾಗಿಲ್ಲ. ಇವರ ರಕ್ಷಣೆಗೆಂದು ನೇಮಿಸಿದ್ದ ದೇವತೆಗಳು ಬರುವ ಹೊತ್ತಿಗೆ ಸೇಟನ್ ಅಲ್ಲಿಗೆ ನೆಲಗಪ್ಪೆಯ ರೂಪದಲ್ಲಿ ಬಂದು ತನ್ನ ಕಾರ‍್ಯಾರಂಭಮಾಡಿದ್ದಾನೆ. ಈವ್‌ಳಿಗೊಂದು ಕನಸು ಬೀಳುವಂತೆ ಮಾಡಿ ತನ್ನ ಕಾರ‍್ಯದ ಮೊದಲ ಅಂಶವನ್ನು ಸಜ್ಜುಗೊಳಿಸುತ್ತಾನೆ.

ಈವ್ ನಿದ್ದೆಯಿಂದ ಎದ್ದವಳೇ ಜ್ಞಾನವೃಕ್ಷದ ಫಲವನ್ನು ಕನಸಿನಲ್ಲಿ ತನಗೆ ತಿನ್ನುವ ಆಸೆ ಉಂಟಾದುದನ್ನು ಹೇಳುತ್ತಾಳೆ. ಇದೇ ಅವರ ಪತನದ ಮೊದಲ ಹೆಜ್ಜೆ. ಪತನದತ್ತ ಸಾಗುತ್ತಿರುವ ಇವರನ್ನು ಕಂಡು ರ‍್ಯಾಫೆಲ್ ಎಂಬ ದೇವತೆ, ದೇವರ ಆಜ್ಞೆಯ ಪ್ರಕಾರ ಬಂದು, ದೇವತೆಗಳ ರಾಕ್ಷಸರ ನಡುವಿನ ಘೋರಯುದ್ಧ, ಕೇವಲ ಆರು ದಿನಗಳಲ್ಲಿ ಈ ಭೂಮಿಯ ಸೃಷ್ಟಿ ಮುಂತಾದವನ್ನು ವಿವರಿಸುತ್ತಾನೆ. ಮನುಷ್ಯ ತಿಳಿದುಕೊಳ್ಳಲಾಗದ ಅನೇಕ ರಹಸ್ಯಗಳಿವೆ ಎಂದು ಹೇಳಿ ಆ ಬಗ್ಗೆ ಕುತೂಹಲ ಸಲ್ಲದೆಂದು ಎಚ್ಚರಿಸುತ್ತಾನೆ.

ರ‍್ಯಾಫೆಲ್ ಹೋದ ನಂತರ ಸೇಟನ್ ಮತ್ತೆ ಮಂಜಿನ ಹಾಗೆ ಪ್ರವೇಶಿಸಿ, ನಿದ್ರಿಸುತ್ತಿದ್ದ ಸರ್ಪದ ಶರೀರವೊಂದರಲ್ಲಿ ಪ್ರವೇಶಿಸುತ್ತಾನೆ. ಎಂದಿನಂತೆ ಇಬ್ಬರೂ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗುವಾಗ, ಈವ್ ತಾವಿಬ್ಬರೂ ಬೇರೆ ಬೇರೆಯಾಗಿಯೇ ದುಡಿಯಬೇಕೆಂದು ಸೂಚಿಸುತ್ತಾಳೆ. ರ‍್ಯಾಫೆಲ್‌ನ ಎಚ್ಚರಿಕೆಯ ಅರಿವಿದ್ದ ಆಡಮ್ ಮೊದಲು ಪ್ರತಿಭಟಿಸಿದರೂ ನಂತರ ಅವಳು ಪಟ್ಟು ಹಿಡಿದಾಗ ಒಪ್ಪುತ್ತಾನೆ. ಒಂಟಿಯಾಗಿ ದುಡಿಯುತ್ತಿದ್ದ ಈವ್‌ಳನ್ನು ಸರ್ಪ ಮಾತನಾಡಿಸುತ್ತದೆ. ಸರ್ಪ ಮಾತನಾಡಿಸುವು- ದೆಂದರೇನು? ರೋಮಾಂಚಿತಳಾದ ಈವ್‌ಳನ್ನು ಜ್ಞಾನವೃಕ್ಷದ ಫಲವನ್ನು ತಿನ್ನುವಂತೆ ಸರ್ಪ ಪ್ರೇರೇಪಿಸುತ್ತದೆ. ತಕ್ಷಣ ಅವಳು ಆ ಮರದ ಹಣ್ಣನ್ನು ತಿಂದು ಆಡಮ್‌ನಿಗೂ ಒಯ್ಯುತ್ತಾಳೆ. ಆಡಮ್‌ನಿಗೆ ಅವಳು ಮಾಡಿದ ಘೋರ ಕೃತ್ಯದ ಅರಿವಾದರೂ ಅವಳ ಮೇಲಿನ ಪ್ರೇಮದಿಂದಾಗಿ ಅದನ್ನು ತಾನೂ ತಿನ್ನುತ್ತಾನೆ. ಇಲ್ಲಿಂದಲೇ ಮಾನವರ ಬದುಕು ಬದಲಾದದ್ದು. ಈ ಸೃಷ್ಟಿಯಲ್ಲಿನ ತಾರತಮ್ಯಗಳ, ಕಾಮದ, ಕೆಡಕು, ಒಳಿತುಗಳ, ಪಾಪಪುಣ್ಯಗಳ ಅಸ್ತಿತ್ವದ ಅರಿವು ಮನುಷ್ಯನಿಗೆ ಅರಿವಾದದ್ದು ಇಲ್ಲಿಂದಲೆ.

ಮಾಡಿದ ತಪ್ಪಿನ ಘೋರತೆಯು ಅರಿವಾಗಿ ದಿಗ್ಭ್ರಮೆಯ ಸ್ಥಿತಿಯಲ್ಲಿದ್ದಾಗ ಸ್ವತಃ ಕ್ರಿಸ್ತನೇ ಬಂದರೂ ಅವನನ್ನು ಎದುರುಗೊಳ್ಳುವುದಿಲ್ಲ. ಕ್ರಿಸ್ತ ಇದೆಲ್ಲದಕ್ಕೆ ಮೂಲ ಕಾರಣವಾದ ಸರ್ಪವನ್ನು ಮಾನವ ಜನಾಂಗದ ಶಾಶ್ವತ ಶತ್ರುವಾಗುವಂತೆ ಶಾಪವಿಕ್ಕುತ್ತಾನೆ. ಇಲ್ಲಿಂದಾಚೆಗೆ ಈವ್‌ಳ ದುಃಖ ಇಮ್ಮಡಿಯಾಗುತ್ತದೆ. ಅವಳಿಗೆ ಇನ್ನು ಮೇಲೆ ಮಕ್ಕಳನ್ನು ಹೆರುವ ಕಷ್ಟದ ಜೊತೆಗೆ ಆಡಮ್‌ನಿಗೆ ಅವಳು ಶಾಶ್ವತ ಗುಲಾಮಳೂ ಆಗಬೇಕಾಗುತ್ತದೆ. ಆಡಮ್‌ನ ಬದುಕೂ ಅಷ್ಟೇ. ಇನ್ನು ಮೇಲೆ ಆತನೂ ಸಹ ನೆಲಕ್ಕೆ ಬೆವರು ಸುರಿಸಿ ದುಡಿದು ಉಣ್ಣಬೇಕು. ಈ ಭೂಮಿಗೆ ಸಾವು ಮತ್ತು ಪಾಪ ಎರಡೂ ಸೇಟನ್‌ನ ರಾಯಭಾರಿಗಳಾಗಿ ನೇಮಕವಾಗುತ್ತಾರೆ. ಆದರೆ ಸೇಟನ್ ಮತ್ತು ಅವನ ಅನುಯಾಯಿಗಳೆಲ್ಲರೂ ಸರ್ಪಗಳಾಗಿಬಿಡುತ್ತಾರೆ.

ಇಲ್ಲಿಂದಲೇ ಭೂಮಿಯ ಬದುಕಿನಲ್ಲಿ ಮಹಾ ಬದಲಾವಣೆಗಳು ಶುರುವಾದದ್ದು. ನಿತ್ಯವಸಂತದ ಬದಲು ಋತುಗಳು, ಚಂಡಮಾರುತ, ಪ್ರವಾಹ, ಭೂಕಂಪ ಮುಂತಾದ ನೈಸರ್ಗಿಕ ಹಿಂಸೆಗಳು ಶುರುವಾದವು. ಭೂಮಿಯ ಜೀವಿಗಳು ಪರಸ್ಪರ ಹೋರಾಡಲು ಅದೇ ದಾರಿ.

ಈ ಪರಿಸ್ಥಿತಿಯ ಮೊದಲು ಆಡಮ್ ಮತ್ತು ಈವ್ ಇಬ್ಬರೂ ಪರಸ್ಪರ ವಾಗ್ಯುದ್ಧ ನಡೆಸುತ್ತಾರೆ. ಅದು ವ್ಯರ್ಥ ಎಂದು ಅರಿವಾಗುತ್ತದೆ. ಏಕೆಂದರೆ ಮುಂದೆ ಬದುಕು ನಡೆಸುವುದು ಇಬ್ಬರ ಹೊಣೆಯೂ ಕೂಡಾ. ತಪ್ಪಿಗಾಗಿ ಪಶ್ಚಾತ್ತಾಪದಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವರು ಅವರನ್ನು ಈಡನ್ ತೋಟದಿಂದ ಉಚ್ಛಾಟಿಸಿ ಅವರಿಗೆ ಶಿಕ್ಷೆಯನ್ನು ನೀಡಲು ಮೈಕೇಲ್ ಎಂಬ ದೇವತೆಯನ್ನು ನೇಮಿಸುತ್ತಾನೆ. ಹತಾಶರಾದ ಆಡಮ್ ಮತ್ತು ಈವ್‌ರಿಗೆ ಮೈಕೇಲ್ ಹೊಸ ದರ್ಶನವೊಂದನ್ನು ಮಾಡಿಸುತ್ತಾನೆ. ಮನುಷ್ಯ ಜನಾಂಗದ ಹಲವು ಬದಲಾವಣೆಗಳನ್ನು ದಿವ್ಯದೃಷ್ಟಿಯಿಂದ ವಿವರಿಸುತ್ತಾನೆ. ಈ ಬದಲಾವಣೆಗಳಲ್ಲಿ ಇರುವ ಹಿಂಸೆ ಮತ್ತು ಪಾಪಕ್ಕೆ ಬೆಚ್ಚದ ಆಡಮ್ ಮತ್ತು ಈವ್‌ರು ಅದರಾಚೆಯ ಮನುಷ್ಯ ಜನಾಂಗದ ಪುನರುತ್ಥಾನವನ್ನು ಕಂಡು ಸಾಂತ್ವನಗೊಳ್ಳುತ್ತಾರೆ. ಸ್ವರ್ಗದ ಎತ್ತರದಿಂದ ಆ ಆಸೆಯಿಂದಲೇ ಭೂಮಿಗೆ ಕೈಕೈ ಹಿಡಿದುಕೊಂಡು ಇಳಿಯುತ್ತಾರೆ.

ಈ ವಸ್ತುವನ್ನುಳ್ಳ ಮಹಾಕಾವ್ಯವಾದ ‘ಪ್ಯಾರಡೈಸ್ ಲಾಸ್ಟ್’ ಮಿಲ್ಟನ್ನನ ನಿರಂತರ ಶ್ರಮದ ಸೃಷ್ಟಿ. ಬೈಬಲ್‌ನ ಅತ್ಯಂತ ಮಹತ್ವ ಪೂರ್ಣ ಘಟನೆಯೊಂದನ್ನು ಆಯ್ದು ಅದಕ್ಕೆ ಸಾವಿರ ಅರ್ಥಗಳನ್ನು ಕೊಡುವ ಸಾಮರ್ಥ್ಯವನ್ನು ತುಂಬಿದ. ಮಿಲ್ಟನ್ನನ ಕೆಸ್ತ ದೃಷ್ಟಿಕೋನವನ್ನು ಒಪ್ಪದೆ ಹೋದರೂ ಆತನ ಕಾವ್ಯಸಾಧನೆ ಮಾತ್ರ ಅದ್ಭುತವಾದುದು. ಹೋಮರ್ ಮತ್ತು ವರ್ಜಿಲರ ಮಹಾಕಾವ್ಯದ ಶೈಲಿಯನ್ನೇ ಈತನೂ ಅನುಸರಿಸಿದರೂ-ಈತನ ವಿಶಿಷ್ಟತೆ ಎದ್ದು ಕಾಣುತ್ತದೆ. ಈ ಕೃತಿ ಇಂಗ್ಲಿಷ್ ಭಾಷಾ ಪ್ರಯೋಗದಲ್ಲಿ ಕೂಡ ವಿಶಿಷ್ಟ ಸಾಧನೆ.

ಸಾಂಗ್ ಆಫ್ ರೋಲೆಂಡ್

ಫ್ರೆಂಚ್ ಸಾಹಿತ್ಯದಲ್ಲಿ ಶಾಜೋನ್‌ದ ಜೆಸ್ಟ್ (Chansonde geste) ಎಂದು ಕರೆಯಲಾಗುವ ಮಹಾಕಾವ್ಯ ಪ್ರಕಾರಗಳಿವೆ; ಇವು ಹನ್ನೊಂದನೆಯ ಶತಮಾನದಿಂದ ಹದಿನಾಲ್ಕನೆಯ ಶತಮಾನದ ನಡುವಣ ಕಾಲದಲ್ಲಿ ರಚಿತವಾಗಿವೆ. ಚಾರ್ಲ್ ಮ್ಯಾಗ್ನೆಯ ಕಾಲದ ಆಡಳಿತ ಮತ್ತು ಆತನ ವಿವಿಧ ಯುದ್ಧಗಳು ಇವುಗಳ ರಚನೆಯ ಹಿಂದಿರುವ ಸ್ಫೂರ್ತಿಶಕ್ತಿ. ಇವುಗಳ ವಸ್ತು ಸನ್ನಿವೇಶ ಕೂಡಾ ಇರುವುದು ೫ನೇ ಶತಮಾನದಿಂದ ೧೦ನೆಯ ಶತಮಾನದವರೆಗೆ. ಸುಮಾರು ೧೦೦೦ ಸಾಲುಗಳಿಂದ ೨೦,೦೦೦ ಸಾಲುಗಳ ತನಕ ಇದ್ದ ಇವುಗಳನ್ನು ೧೨ನೆಯ ಶತಮಾನದ ಫ್ರೆಂಚ್ ಜನ ಚರಿತ್ರೆಯೆಂದೇ ನಂಬುತ್ತಿದ್ದರು. ಸಿಕ್ಕಿರುವ ಈ ಪ್ರಕಾರದ ೮೦ ಕೃತಿಗಳಲ್ಲಿ ಅತ್ಯಂತ ಹಳೆಯದೂ, ಶ್ರೇಷ್ಠವೂ ಆಗಿರುವುದು ‘ಸಾಂಗ್ ಆಫ್ ರೋಲೆಂಡ್’ ಮಹಾಕಾವ್ಯ. ೪,೦೦೦ ಸಾಲುಗಳಿರುವ ಈ ಕೃತಿ ೧೧ನೆಯ ಶತಮಾನದಲ್ಲಿ ರಚಿತವಾಗಿದ್ದಿರಬೇಕು.

ಈ ಕಾವ್ಯದ ಕಥೆಯಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳಿವೆ :

೧. ಮಲಮಗನಾದ ರೋಲೆಂಡನನ್ನು ದ್ವೇಷಿಸುತ್ತಿದ್ದ ಗನಲಾನ್, ಸಾರಸೆನ್‌ನ ದೊರೆಯಾದ ಮಾರ್ಸಿಲಿಯಸ್‌ನೊಡನೆ ಸಂಚು ಹೂಡುತ್ತಾನೆ. ಆರು ವರ್ಷ ಸ್ಪೆಯಿನ್‌ಲ್ಲಿದ್ದ ಚಾರ್ಲ್‌ಮ್ಯಾಗ್ನೆ ಗನಲಾನ್‌ನನ್ನು ಮಾರ್ಸಿಲಿಯಸ್‌ನ ಬಳಿಗೆ ರಾಯಭಾರಿಯಾಗಿ ಕಳಿಸಿದಾಗ ಆತ ರೋಲೆಂಡ್‌ನ ಮೇಲಿನ ದ್ವೇಷದಿಂದ ಸೈನ್ಯ ಬರುವ ದಾರಿಯನ್ನು ಹೇಳಿಬಿಡುತ್ತಾನೆ.

೨. ರೋಲೆಂಡ್ ತನ್ನ ೨೦ ಸಾವಿರ ಮುಂಚೂಣಿ ದಳದೊಡನೆ ರೋನ್ಸೆಸ್  ವ್ಯಾಲೆಸ್ ಎಂಬಲ್ಲಿಗೆ ಬಂದಾಗ, ಮಾರ್ಸಿಲಿಯಸ್‌ನಿಗೂ ಆತನಿಗೂ ಘೋರಯುದ್ಧ ನಡೆಯುತ್ತದೆ. ರೋಲೆಂಡ್ ಶ್ರೇಷ್ಠ ಯೋಧ; ೧೦ ಸಾವಿರ ಶತ್ರುಗಳನ್ನು ಸೋಲಿಸುತ್ತಾನೆ. ಕೊನೆಗೆ ಆತನ ಬಳಿ ಉಳಿಯುವುದು ಕೇವಲ ೫೦ ಜನ. ಆದರೆ ಶತ್ರುಗಳ ಇನ್ನೊಂದು ದೊಡ್ಡ ಪಡೆ ಪರ್ವತಗಳ ಮೇಲಿಂದ ದಾಳಿಮಾಡುತ್ತದೆ. ಮೊದಲು ಸಹಾಯ ಕೋರಲು ನಿರಾಕರಿಸಿದ್ದ ರೋಲೆಂಡ್, ಸಹಾಯಕ್ಕಾಗಿ ತನ್ನ ಬಳಿಯಿದ್ದ ಅದ್ಭುತವಾದ ಕೊಂಬನ್ನು ಕುತ್ತಿಗೆಯ ನರಗಳು ಉಬ್ಬಿ ಒಡೆದು ಹೋಗುವ ಹಾಗೆ ಮೊಳಗಿಸುತ್ತಾನೆ. ಅದನ್ನು ಕೇಳಿಸಿಕೊಂಡ ಚಾರ್ಲ್‌ಮ್ಯಾಗ್ನೆ ಬಂದರೂ ಪರಿಸ್ಥಿತಿ ಕೈಮೀರಿರುತ್ತದೆ. ವಿಪರೀತ ಗಾಯಗೊಂಡಿದ್ದ ರೋಲೆಂಡ್ ಸಾಯುತ್ತಾನೆ. ಮಾರ್ಸಿಲಿಯಸ್‌ನ ವಿರುದ್ಧ ಚಾರ್ಲ್‌ಮ್ಯಾಗ್ನೆ, ಪ್ರತೀಕಾರ ತೆಗೆದುಕೊಳ್ಳುತ್ತಾನೆ.

೩. ಇಸ್ಲಾಂನ ಪ್ರಭುವಾದ ಬಾಲಿಗಂತಿನ ಮೇಲೆ ಚಾರ್ಲ್‌ಮ್ಯಾಗ್ನೆಯ ವಿಜಯ ಸ್ಪೆಯ್ನಿನಲ್ಲಿ.

೪. ಚಾರ್ಲ್‌ಮ್ಯಾಗ್ನೆಯು ಫ್ರಾನ್ಸಿಗೆ ಹಿಂತಿರುಗಿದ ನಂತರ ಗನಲಾನ್‌ನನ್ನು ವಿಚಾರಣೆ ಮಾಡಿ ಶಿಕ್ಷೆಗೆ ಗುರಿಮಾಡುತ್ತಾನೆ.

ಈ ಕತೆಯ ಚೌಕಟ್ಟಿನಲ್ಲಿ ಎರಡು ಆಶಯಗಳು ಪ್ರಮುಖವಾದುವು : ಒಂದು ಚಾರ್ಲ್‌ಮ್ಯಾಗ್ನೆಯ ಯುದ್ಧ. ಇದರಲ್ಲಿ ಆತನ ಯೋಧರ ರಾಜನಿಷ್ಠೆ, ಧರ್ಮನಿಷ್ಠೆ, ಸಾಮ್ರಾಜ್ಯನಿಷ್ಠೆಯ ವರ್ಣನೆ. ಅವರ ದೃಷ್ಟಿಯಲ್ಲಿ ಚಾರ್ಲ್‌ಮ್ಯಾಗ್ನೆ ಈ ಮೂರು ಅಂಶಗಳನ್ನು ಪ್ರತಿನಿಧಿಸುತ್ತಾನೆ. ಇನ್ನೊಂದು ಪ್ರಮುಖ ಆಶಯ – ಚಾರ್ಲ್‌ಮ್ಯಾಗ್ನೆ ಮತ್ತು ಯೋಧರ ನಡುವಿನ ವ್ಯಕ್ತಿ ಸಂಬಂಧಗಳು; ರೋಲೆಂಡ್ ಮತ್ತು ಗನಲಾನ್‌ರ ನಡುವಿನ ದ್ವೇಷ; ಆಲಿವರ್ ಮತ್ತು ರೋಲೆಂಡ್‌ರ ನಡುವಿನ ಸ್ನೇಹ – ಕಿತ್ತಾಟ; ರೋನ್ಸಸ್‌ವ್ಯಾಲೆಸ್‌ನಲ್ಲಿ ಆಲಿವರ್ ಸಾಯುವಾಗ ಮತ್ತೆ ರಾಜಿಯಾಗುವುದು. ಈ ಮೇಲಿನ ಎರಡೂ ಆಶಯಗಳು ಬೇರೆ ಬೇರೆಯಾಗಿಯೇ ಬೆಳೆದಂತೆ ಕಂಡರೂ ಕೃತಿಯ ಸಮಗ್ರತೆಗೆ ಒಟ್ಟಾಗಿಯೇ ಬೆರೆಯುತ್ತವೆ.

ಈ ಕೃತಿಯ ವಸ್ತು ಕೂಡ ತೆಳುವಾದ ಚಾರಿತ್ರಿಕ ಹಂದರವನ್ನು ಆಧರಿಸಿದೆ. ಕ್ರಿ.ಶ. ೭೭೮ರ ಚಾರ್ಲ್‌ಮ್ಯಾಗ್ನೆಯ ಯುದ್ಧ ಇದರ ಮೂಲ ಸ್ಫೂರ್ತಿಯಾದರೂ ಸೃಜನಶೀಲ ಕವಿಯೊಬ್ಬನ ಕೈವಾಡದಿಂದಾಗಿ ಕಾವ್ಯ ಉನ್ನತ ಶಿಖರಕ್ಕೇರಿದೆ. ಮಾನವ ವ್ಯಕ್ತಿತ್ವದ ದೌರ್ಬಲ್ಯ, ಶೌರ್ಯ, ಸಾಮಂತಶಾಹಿ ಆದರ್ಶಗಳ ಮೇಲಿನ ನಿಷ್ಠೆ ಮುಂತಾದವುಗಳ ಪ್ರಭಾವಶಾಲೀ ಚಿತ್ರಣಗಳನ್ನೊಳಗೊಂಡ ಶೈಲಿ ಮುಂತಾದವುಗಳಿಂದಾಗಿ ಉಳಿದ ಶಾಜೋನ್‌ದ ಜೆಸ್ಟ್‌ಗಳಿಗಿಂತ ಇದು ಶ್ರೇಷ್ಠವಾಗಿದೆ.

ಗಿಲ್‌ಗಮೇಶ್

ಸುಮೇರಿಯನ್ ನಾಗರಿಕತೆಯ ಅತ್ಯುತ್ತಮ ಸೃಷ್ಟಿಗಳಲ್ಲಿ ಗಿಲ್‌ಗಮೇಶ್ ಮಹಾಕಾವ್ಯ ಪ್ರಮುಖವಾದದ್ದು. ಈ ಕಾವ್ಯದ ನಾಯಕನಾದ ಗಿಲ್‌ಗಮೇಶ್‌ನನ್ನು ಕ್ರಿ.ಪೂ. ೨೭೦೦ರಲ್ಲಿ ಉರ್ಕ್ ಎಂಬಲ್ಲಿ ಆಳಿದ ಚಾರಿತ್ರಿಕ ವ್ಯಕ್ತಿ ಗಿಲ್‌ಗಮೇಶ್‌ನೊಡನೆ ಸಮೀಕರಿಸಲಾಗಿದೆ. ಸುಮೇರಿಯನ್ ಮೂಲದ ಗಿಲ್‌ಗಮೇಶ್ ಪದವನ್ನು ‘ತಂದೆ, ವೀರ, ವೃದ್ಧ’ ಎಂದೆಲ್ಲಾ ಅರ್ಥೈಸಲಾಗಿದೆ.

ಗಿಲ್‌ಗಮೇಶ್ ಕಾವ್ಯದ ನಾಯಕನಲ್ಲಿ ದೈವಾಂಶ ಮತ್ತು ಮಾನವಾಂಶ -ಗಳೆರಡೂ ಬೆರೆತಿವೆ. ಕಾವ್ಯ ಪ್ರಾರಂಭವಾಗುವುದೇ ಆತನ ಹೊಗಳಿಕೆಯಿಂದ. ಆತನ ಜ್ಞಾನ, ಶೌರ್ಯಗಳೆರಡೂ ಸರಿಸಾಟಿಯಿಲ್ಲದ್ದು. ಈತನ ಆಳ್ವಿಕೆಯನ್ನು ಬಗ್ಗು ಬಡಿಯಲು ಅನೂ ಎಂಬ ದೇವತೆ ಎನ್‌ಕಿಡು ಎಂಬುವನಿಗೆ ಸೂಚಿಸುತ್ತಾಳೆ. ಮೊದಲು ಕಾಡು ಪ್ರಾಣಿಗಳೊಂದಿಗೆ ಬದುಕುತ್ತಿದ್ದ ಈತ ನಂತರ ಗಿಲ್‌ಗಮೇಶ್‌ನ ಆಸ್ಥಾನವನ್ನು ಸೇರುತ್ತಾನೆ. ಇವರಿಬ್ಬರ ನಡುವೆ ನಡೆದ ಸೆಣಸಾಟದಲ್ಲಿ ಗಿಲ್‌ಗಮೇಶ್‌ನೇ ವಿಜಯಿ. ನಂತರ ಇವರಿಬ್ಬರೂ ಜೊತೆಗಾರರಾಗಿ ಅನೇಕ ಸಾಹಸಗಳನ್ನು ನಡೆಸುತ್ತಾರೆ.

ಪ್ರೇಮದೇವತೆಯಾದ ಇಶ್ತಾರಳನ್ನು ಗಿಲ್‌ಗಮೇಶ್ ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಆಕೆ ಇವರನ್ನು ಕೊಲ್ಲಲು ಕಳಿಸಿದ ಗೂಳಿಯನ್ನು ಇಬ್ಬರೂ ಸೇರಿ ಕೊಲ್ಲುತ್ತಾರೆ, ಆದರೆ ಅನಂತರ ಇದರ ಪ್ರತಿಫಲ ಎಂಬಂತೆ ಎನ್‌ಕಿಡು ಸಾಯತ್ತಾನೆ. ಸಾವಿನಿಂದ ತಾನು ಪಾರಾಗಲು ಗಿಲ್‌ಗಮೇಶ್ ಚಿರಂಜೀವಿಯಾಗುವ ರಹಸ್ಯವನ್ನು ಅರಿಯುವ ಪ್ರಯತ್ನ ನಡೆಸಿ ಒಂದು ಅಮೃತ ಸಸ್ಯವನ್ನು ಪಡೆದರೂ ಅದನ್ನು ಒಂದು ಸರ್ಪ ಅಪಹರಿಸಿಬಿಡುತ್ತದೆ. ಕೊನೆಗೆ ಎನ್‌ಕಿಡು ನಿರೂಪಿಸುವ ಸತ್ತವರ ಲೋಕದ ವರ್ಣನೆಯೊಂದಿಗೆ ಕಾವ್ಯ ಮುಗಿಯುತ್ತದೆ.

ಮನುಷ್ಯನ ನಾಗರಿಕತೆಯ ಆರಂಭದ ಹಂತದಲ್ಲಿ ಸೃಷ್ಟಿಯಾದ ಈ ಕಾವ್ಯ ಅನೇಕ ದೃಷ್ಟಿಯಿಂದ ಮಹತ್ವದ್ದು. ಗಿಲ್‌ಗಮೇಶ್ ಮತ್ತು ಎನ್‌ಕಿಡುರ ಸಾಹಸಗಳು ಮನುಷ್ಯ ತನ್ನ ಹುಟ್ಟಿನಿಂದ ನಡೆಸಿಕೊಂಡು ಬಂದಿರುವ ಅದಮ್ಯ ಸಾಹಸವನ್ನು ಕುರಿತು ಹೇಳುತ್ತವೆ. ಗಾಢವಾದ ವಿಸ್ಮಯ, ಆಳವಾದ ನಿರಾಶಾವಾದ ಬೆರೆತಿರುವ ಈ ಕೃತಿ, ಮನುಷ್ಯನ ನಾಗರಿಕತೆಯ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಅತ್ಯಗತ್ಯ.

ಕಾಲೇವಾಲ

ಎಲಿಯಾಸ್ ಲ್ಹೊನ್‌ರಾಟ್ ಎಂಬ ವಿದ್ವಾಂಸನು ಸಂಗ್ರಹಿಸಿದ ಫಿನ್ನಿರಾಷ್ಟ್ರೀಯ ಮಹಾಕಾವ್ಯ ಕಾಲೇವಾಲ ಸುಮಾರು ಐವತ್ತು ಕ್ಯಾಂಟೋಗಳಷ್ಟಿದೆ. (ಸುಮಾರು ೨೨, ೭೯೫ ಸಾಲುಗಳು), ಫಿನ್‌ಲೆಂಡ್ ನಾಡನ್ನೇ ಕಾಲೇವಾಲ (ವೀರರ ನಾಡು) ಎಂದು ಕರೆಯಲಾಗುತ್ತಿತ್ತು.

ಕಾಲೇವಾಲ (ವೀರರ ನಾಡು) ಮತ್ತು ಪೊಹ್ ಜಾಲ (ಉತ್ತರ ನಾಡು) ಈ ಎರಡು ದೇಶಗಳ ನಡುವಿನ ಹೋರಾಟವೇ ಈ ಕಾವ್ಯದ ಶರೀರ ಎನ್ನಬಹುದು. ಮಹಾಜ್ಞಾನಿಯಾದ ವೈ ನಾಮ್ಹೊಯ್ನಿನ್, ಕಮ್ಮಾರನಾದ ಇಲ್‌ಮೇರಿನಿಸ್, ಬೇಟೆಗಾರನಾದ ಲೆಮ್ಹಿನ್ ಕೈಯ್ನಿಸ್, ಈ ಮೂವರು ಕಾಲೇವಾಲದ ವೀರರು, ಪೊಹ್‌ಜಾಲದ ಸುಂದರಿಯೊಬ್ಬಳನ್ನು ವರಿಸಲು ನಡೆಸುವ ಸಾಹಸವೇ ಕಾವ್ಯದಲ್ಲಿ ಪ್ರಧಾನವಾದದ್ದು. ಆ ಸುಂದರಿಯನ್ನು ವರಿಸುವುದರಲ್ಲಿ ಇಲ್‌ಮೇರಿನಿಸ್ ಯಶಸ್ವಿಯಾಗುತ್ತಾನೆ. ನಂತರ ದೇಶಗಳ ನಡುವೆ ಭಯಂಕರ ಯುದ್ಧವೊಂದು ನಡೆಯುತ್ತದೆ. ಆ ಸುಂದರಿಯ ತಾಯಿಯಾದ ಲೌಹಿಯಳ ಪ್ರತೀಕಾರ ಪ್ರಯತ್ನಗಳೂ ಸಹ ವಿಫಲವಾಗುತ್ತದೆ.

ಮಹಾಜ್ಞಾನಿಯಾದ ವ್ಹೆನಾಮ್ಹೊಯ್ನಿನ್ ಅದ್ಭುತವಾದ ಸಂಗೀತಗಾರ ಕೂಡ. ಈತನ ಅಲೌಕಿಕ ಹುಟ್ಟು ಮತ್ತು ಪ್ರಪಂಚದ ಮೂಲ ಸೃಷ್ಟಿಯ ವಿವರಣೆಯೊಂದಿಗೆ ಕಾವ್ಯ ಪ್ರಾರಂಭವಾಗತ್ತದೆ. ಈತ ಫಿನ್ನಿಶ್ ಜನಾಂಗವನ್ನು ತೊರೆದು ಹೋಗುವ, ಸುಂದರಿ ಮಾರ್‌ಜಾತಾಳ ಮಗ, ಈತನ ಉತ್ತರಾಧಿಕಾರಿಯಾಗುವ, ವರ್ಣನೆಯೊಂದಿಗೆ ಕಾವ್ಯ ಮುಗಿಯುತ್ತದೆ.

ಈ ಕಥೆಯ ಚೌಕಟ್ಟಿನಲ್ಲಿ – ಕುಲೆವ್ರೋ ಎಂಬ ವೀರ ಗುಲಾಮನ ದುರಂತ, ಮಹಾಜ್ಞಾನಿಯಾದ ವ್ಹೆನಾಮ್ಹೊಯ್ನಿನ್‌ನ ವಿಫಲ ಪ್ರಣಯ ಮುಂತಾದ ಘಟನೆಗಳು ಬರುತ್ತವೆ.

ಈ ಕಾವ್ಯ ಕೆಸ್ತ ಧರ್ಮ ಉಗಮಕ್ಕಿಂತ ಮುಂಚಿನ ವಿಚಾರಧಾರೆಯನ್ನು ಬಿಂಬಿಸುತ್ತದೆಯಾದರೂ, ಈ ಕಾವ್ಯದ ಕೊನೆ ಕೆಸ್ತಧರ್ಮದ ಹುಟ್ಟನ್ನು ಸೂಚಿಸುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಫಿನ್ನಿಶ್ ಜನಪದ ಕಾವ್ಯದ ಛಂದದಲ್ಲಿಯೇ ಸೃಷ್ಟಿಯಾಗಿರುವ ಈ ಮಹಾಕಾವ್ಯ ಅನೇಕ ಅರ್ಥಗಳಲ್ಲಿ ಫಿನ್‌ಲೆಂಡಿನ ರಾಷ್ಟ್ರೀಯ ಸ್ಫೂರ್ತಿಕೇಂದ್ರ ಎನ್ನಲಾಗಿದೆ.

ಆಸ್ ಲ್ಯುಸಿಡಾಸ್ (ಪೋರ್ಚುಗೀಸರು) (Os Lusiadas)

ಹದಿನೈದನೆ ಶತಮಾನದ ಪೊರ್ಚುಗೀಸ್ ನಾವಿಕರ ಶೌರ್ಯಸಾಹಸಗಳು ಒಂದು ರಾಷ್ಟ್ರೀಯ ಮಹಾಕಾವ್ಯದ ಸೃಷ್ಟಿಗೆ ಪ್ರೇರಣೆಯನ್ನೊದಗಿಸಿದರೂ ಅದು ಮೂರ್ತರೂಪಕ್ಕೆ ಬಂದದ್ದು ಕಾಮೂ ಎಂಬ (Camoes ೧೫೨೪-೧೫೮೦) ಕವಿ ‘ಆಸ್ ಲ್ಯುಸಿಡಾಸ್’ ಎಂಬ ಮಹಾಕಾವ್ಯವನ್ನು ೧೫೭೨ರಲ್ಲಿ ಪ್ರಕಟಿಸಿದಾಗಲೇ ಎನ್ನಬಹುದು. ಈ ಕವಿಯ ವೈಯಕ್ತಿಯ ಜೀವನ ಕೂಡ ರೋಮಾಂಚಕಾರಿಯಾದದ್ದು. ಚಿಕ್ಕ ವಯಸ್ಸಿನಲ್ಲಿಯೇ ಆಫ್ರಿಕಾಕ್ಕೆ ಹೋಗಿ ಒಂದು ಕಣ್ಣು ಕಳೆದುಕೊಂಡು ತಾಯ್ನಾಡಿಗೆ ಹಿಂತಿರುಗಿದ ಈತನನ್ನು ಮತ್ತೆ ಇಂಡಿಯಾಕ್ಕೆ ಗಡೀಪಾರುಮಾಡಲಾಯಿತು. ಪೂರ್ವದೇಶಗಳಲ್ಲಿ ಈತ ಕಳೆದ ಹದಿನೈದು ವರ್ಷದ ಅನುಭವವೇ ಈತನ ಕೃತಿ ರಚನೆಯ ಹಿಂದೆ ಇದ್ದ ಪ್ರಮುಖ ಒತ್ತಡಗಳಲ್ಲಿ ಒಂದು. ಈ ಮಹಾಕಾವ್ಯವನ್ನಲ್ಲದೆ ಈತ ಬೇರೆ ಕೃತಿಗಳನ್ನೂ ರಚಿಸಿದ್ದಾನೆ.

ಇಂಡಿಯಾಕ್ಕೆ ಜಲಮಾರ್ಗ ಕಂಡುಹಿಡಿದ ವಾಸ್ಕೋಡಗಾಮನ ಪ್ರಯಾಣ ಸಾಹಸವೇ ಈ ಕಾವ್ಯದ ವಸ್ತು.

ಆಫ್ರಿಕಾದ ಪೂರ್ವತೀರದ ಮೆಲಿಂಡೆ ಎಂಬಲ್ಲಿನ ರಾಜನ ಆಹ್ವಾನದ ಮೇರೆಗೆ ಪೋರ್ಚುಗೀಸ್ ನಾವಿಕರು ಅಲ್ಲಿ ಕೆಲವು ಕಾಲ ಕಳೆಯುತ್ತಾರೆ. ರಾಜನ ಇಚ್ಛೆಯಂತೆ ವಾಸ್ಕೋಡಗಾಮ ಪೋರ್ಚುಗೀಸರ ಚರಿತ್ರೆಯನ್ನು ಮೊದಲಿನಿಂದ ತಮ್ಮ ಆ ಪ್ರಯಾಣದ ತನಕ ಹೇಳುತ್ತಾನೆ. ಈ ನಿರೂಪಣೆಯ ಕೆಲವು ಭಾಗಗಳು ಕಾವ್ಯ ಮೌಲ್ಯಗಳ ದೃಷ್ಟಿಯಿಂದ ಅತ್ಯಂತ ಶ್ರೇಷ್ಠವಾದದ್ದು ಎನ್ನಲಾಗಿದೆ.

ಪೋರ್ಚುಗೀಸರ ಪೂರ್ವಪ್ರಯಾಣಕ್ಕೆ ಬಾಕಸ್ ಸದಾ ವಿರೋಧಿ. ಈ ಮಧ್ಯೆ ಆತ ಪೋರ್ಚುಗೀಸರ ನಾವೆಗಳನ್ನು ಹಾಳುಮಾಡಲು ಸಮುದ್ರದೇವತೆಗಳನ್ನು ಪ್ರೇರೇಪಿಸುತ್ತಾನೆ. ಆದರೆ ವೀನಸ್‌ನ ಮಧ್ಯಪ್ರದೇಶದಿಂದ ಆ ಅಪಘಾತ ತಪ್ಪಿ ವಾಸ್ಕೋಡಗಾಮ ಕ್ಯಾಲಿಕಟ್ ತಲುಪುತ್ತಾನೆ. ಇದೇ ಅವರ  ಮಹಾಪ್ರಯಾಣದ ಕೊನೆ. ನಂತರ ಅವರು ತಾಯ್ನಾಡಿಗೆ ಹಿಂತಿರುಗುವಾಗ, ವೀನಸ್ ದೇವತೆ ಅವರಿಗಾಗಿ  ನಿರ್ಮಿಸಿದ ಒಂದು ದ್ವೀಪದಲ್ಲಿ ತಂಗುತ್ತಾರೆ. ಅವರು ಪಟ್ಟ ಶ್ರಮಕ್ಕೆ ಅಪ್ಸರೆಯರು ಸನ್ಮಾನ ನೀಡುತ್ತಾರೆ. ನಂತರ ಎಲ್ಲರೂ ಒಟ್ಟಿಗೆ ತಾಯ್ನಾಡಿಗೆ ಪ್ರಯಾಣ ಬೆಳೆಸುತ್ತಾರೆ.

ಈ ಮಹಾಕಾವ್ಯ ಯೂರೋಪಿನ ಅತ್ಯುತ್ತಮ ಸೃಷ್ಟಿಗಳಲ್ಲಿ ಒಂದು. ಇದರ ಸತ್ವ ಸಾಮರ್ಥ್ಯ ಸೌಂದರ್ಯಗಳು ಇದಕ್ಕೆ ಜಗತ್ತಿನ ಮಹಾಕಾವ್ಯಗಳಲ್ಲಿ ವಿಶಿಷ್ಟಸ್ಥಾನ ಸಂಪಾದಿಸಿಕೊಟ್ಟಿದೆ.

ಬೀವುಲ್ಫ್ (Beowulf)

ಯುರೋಪಿನ ಮಹಾಕಾವ್ಯಗಳಲ್ಲಿ ಬೀವುಲ್ಫ್‌ಗೆ ವಿಶಿಷ್ಟ ಸ್ಥಾನವಿದೆ. ಇದು ಸುಮಾರು ೩೨೦೦ ಸಾಲುಗಳಿರುವ ಪ್ರಾಚೀನ ಇಂಗ್ಲಿಷಿನ ವೀರಮಹಾಕಾವ್ಯ. ಸುಮಾರು ಹತ್ತನೆಯ ಶತಮಾನದಲ್ಲಿ ರಚನೆಯಾಗಿದ್ದಿರಬೇಕು. ವಸ್ತುನಿರ್ವಹಣೆ ಮತ್ತು ಕಾವ್ಯತಂತ್ರ ಎರಡರಲ್ಲೂ ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯುತ್ತಮ ಸ್ಥಾನ ಇದಕ್ಕಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದರ ಕರ್ತೃ ಯಾರೆಂದು ತಿಳಿಯದು. ‘ಬೀವುಲ್ಫ್’ನ ಕಥೆ ಹೀಗಿದೆ :

ಒಂದು ಕಾಲಕ್ಕೆ ಡೆನ್ಮಾರ್ಕ್ ರಾಜಮನೆತನ ತನ್ನ ಶೌರ‍್ಯ ಸಾಹಸಗಳಿಗೆ ಪ್ರಸಿದ್ಧವಾದರೂ ಗ್ರೆಂಡಲ್‌ನೆಂಬ ಕಿರಾತನ ಹಾವಳಿಗೆ ಸಿಕ್ಕಿ ತತ್ತರಿಸುತ್ತಿತ್ತು. ರಾಜನಾದ ಹ್ರೊತ್‌ಗರ್ ಕಟ್ಟಿಸಿದ ಭವ್ಯಸಭಾಂಗಣದಿಂದ ಆ ಕಿರಾತ ಪ್ರತಿದಿನವೂ ರಾಜ ಮನೆತನದವರನ್ನು ಅಪಹರಿಸುತ್ತಿದ್ದರೂ ಅವನನ್ನು ಯಾವ ಡೆನ್ಮಾರ್ಕ್ ವೀರರೂ ಕೊಲ್ಲಲಾಗಿರಲಿಲ್ಲ. ಆಗ ಇವರ ಸಹಾಯಕ್ಕೆ ದಕ್ಷಿಣ ಸ್ವೀಡನ್ನಿನ ಗೇಟಿಷ್ ಯೋಧನಾದ ಬೀವುಲ್ಫ್ ತನ್ನ ಹದಿನಾಲ್ಕು ಸಂಗಾತಿಗಳೊಂದಿಗೆ ಸಹಾಯಕ್ಕೆ ಬರುತ್ತಾನೆ. ರಾಜ ಹ್ರೊತ್‌ಗರ್ ಭವ್ಯ ಔತಣವೊಂದನ್ನು ನೀಡಿ ಸ್ವಾಗತಿಸಿ ಆ ಸಭಾಂಗಣದ ರಕ್ಷಣೆಯನ್ನು ಈತನಿಗೆ ವಹಿಸುತ್ತಾನೆ.

ಗ್ರೆಂಡಲ್ ಮತ್ತೆ ದಾಳಿ ಮಾಡಿದಾಗ ಬೀವುಲ್ಫ್ ನಿರಾಯುಧನಾಗಿಯೆ ಅವನೊಡನೆ ಸೆಣಸಿ ಕೊಂದು ಹಾಕುತ್ತಾನೆ; ಆದರೆ ನಂತರ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಧಾಳಿ ಮಾಡಿದ ಅವನ ತಾಯಿಯನ್ನು ಕೂಡಾ ಖಡ್ಗವೊಂದರಿಂದ ಅವಳ ಇಕ್ಕೆಯಲ್ಲಿಯೇ ಕೊಲ್ಲುತ್ತಾನೆ. ತನ್ನ ತಾಯಿನಾಡಿನ ರಾಜ, ಅವನ ಮಗ ಇಬ್ಬರೂ ಸತ್ತನಂತರ ಅಲ್ಲಿಗೆ ಬೀವುಲ್ಪ್‌ನನ್ನೇ ರಾಜನನ್ನಾಗಿ ಆರಿಸುತ್ತಾರೆ.

ಸುಮಾರು ೫೦ ವರ್ಷಗಳ ರಾಜ್ಯ ಪರಿಪಾಲನೆಯ ನಂತರ ಅಮಾನುಷ ಪ್ರಾಣಿಯೊಂದರ ವಿರುದ್ಧ ಹೋರಾಡಬೇಕಾಗಿ ಬರುತ್ತದೆ. ಇದು ಆತನ ಕೊನೆಯ ಹೋರಾಟ. ಯೌವನದಲ್ಲಿ ಹೋರಾಡಿದಷ್ಟು  ಬಿರುಸು ಮುಪ್ಪಿನ ಕಾರಣದಿಂದ ಇಲ್ಲವಾಗಿದೆ. ಆ ಭಯಂಕರ ಹೋರಾಟದಲ್ಲಿ ಬೀವುಲ್ಫ್‌ನ ೧೧ ಜನ ಸಹಯೋಧರೂ ಆತನನ್ನು ಬಿಟ್ಟು ಓಡಿಹೋಗುತ್ತಾರೆ. ಆದರೆ ಒಬ್ಬ ಮಾತ್ರ ಆತನ ಜೊತೆಗೇ ಇದ್ದು ಇಬ್ಬರೂ ಸೇರಿ ಆ ಪ್ರಾಣಿಯನ್ನು ಕೊಲ್ಲುತ್ತಾರೆ. ಆದರೆ ಅಷ್ಟು ಹೊತ್ತಿಗಾಗಲೆ ವಿಪರೀತ ಗಾಯಗೊಂಡಿದ್ದ ಬೀವುಲ್ಫ್ ಸಾಯುತ್ತಾನೆ. ಆತನ ಶವದ ಭವ್ಯ ಸಂಸ್ಕಾರದಲ್ಲಿ, ಗೇಟಿಷ್ ಯೋಧರ ರೋದನದೊಂದಿಗೆ ಕಾವ್ಯ ಮುಗಿಯುತ್ತದೆ.

ಈ ಕಾವ್ಯದ ಛಂದೋ ವಿಧಾನ ಮಾತ್ರ ಪ್ರಾಚೀನ ಇಂಗ್ಲಿಷ್ ಕಾವ್ಯದ್ದೇ. ಆದರೆ ಈ ಕಾವ್ಯ ತನ್ನ ಶೈಲಿಯ ಶ್ರೀಮಂತಿಕೆಯಲ್ಲಿ ಉಳಿದ ಪ್ರಾಚೀನ ಇಂಗ್ಲಿಷ್ ಕಾವ್ಯಗಳಿಗಿಂತ ಶ್ರೇಷ್ಠವಾದದ್ದು ಎಂದು ಹೇಳಬಹುದು.

ರಘುವಂಶ

ಸಂಸ್ಕೃತ ಸಾಹಿತ್ಯದಲ್ಲಿ ಕಾಳಿದಾಸ ಶ್ರೇಷ್ಠ ನಾಟಕಕಾರನಷ್ಟೇ ಅಲ್ಲ ಮಹಾಕವಿಯೂ  ಆಗಿದ್ದಾನೆ. ಅವನ ಮಹಾಕವಿ ಪ್ರತಿಭೆಗೆ ‘ಕುಮಾರಸಂಭವ’ ಮತ್ತು ‘ರಘುವಂಶ’ ಎಂಬ ಎರಡು ಕಾವ್ಯಗಳು ಸಾಕ್ಷಿಯಾಗಿವೆ.

‘ರಘುವಂಶ’ ೧೯ ಸರ್ಗಗಳಿಂದ ಕೂಡಿದ ಸೂರ್ಯವಂಶದ ರಾಜರುಗಳ ಕತೆಯನ್ನು ಕುರಿತ ಸಂಸ್ಕೃತ ಮಹಾಕಾವ್ಯ. ಇದರ ವಸ್ತುವನ್ನು ಕವಿಯು ವಿಷ್ಣುಪುರಾಣ, ಪದ್ಮಪುರಾಣ, ವಾಲ್ಮೀಕಿ ರಾಮಾಯಣಗಳಿಂದ ಆರಿಸಿಕೊಂಡಿದ್ದಾನೆ. ಸೂರ್ಯವಂಶದ ರಾಜ ದಿಲೀಪನಿಗೆ ಮಕ್ಕಳಿಲ್ಲದಿರಲು, ಮಕ್ಕಳನ್ನು ಪಡೆಯಬೇಕೆಂಬ ಬಯಕೆಯಿಂದ ತನ್ನ ಕುಲಗುರು ವಸಿಷ್ಠರ ಆಶ್ರಮಕ್ಕೆ ತೆರಳುವುದರ ಮುಖಾಂತರ ಕಾವ್ಯ ಪ್ರಾರಂಭವಾಗುತ್ತದೆ. ಮುನಿಯ ಉಪದೇಶದ ಪ್ರಕಾರ ಈ ರಾಜ ತನ್ನ ಸತಿ ಸಹಿತ ಸುರಭಿಯ ಮಗಳು ನಂದಿನಿಯೆಂಬ ಧೇನುವನ್ನು ಪೂಜಿಸಲು ತೊಡಗುತ್ತಾನೆ. ಒಂದು ದಿನ ಆ ಧೇನುವನ್ನು ದಿಲೀಪನು ಹಿಮಾಲಯದ ತಪ್ಪಲಿನಲ್ಲಿ ಮೇಯಿಸುತ್ತಿರಲು ಒಂದು ಸಿಂಹವು ಬಂದು ಆ ಧೇನುವಿನ ಮೇಲೆರಗುತ್ತದೆ. ಅದನ್ನು ರಕ್ಷಿಸಲು ದಿಲೀಪ ಮುಂದೆ ಬರುತ್ತಾನೆ. ಆದರೆ ಆ ಸಿಂಹವು ತಾನು ಶಿವನ ಸೇವಕನೆಂದು, ಶಿವನಾಜ್ಞೆಯಂತೆ ತನಗೆ ಸಿಕ್ಕಿದ ಪ್ರಾಣಿಗಳನ್ನೆಲ್ಲಾ ತಿಂದು ಜೀವಿಸುವುದು ತನ್ನ ಕರ್ತವ್ಯವೆಂದು, ಹೇಳಿದಾಗ, ದಿಲೀಪನೆ ಅದರ ಬಾಯಿಗೆ ಆಹಾರವಾಗಲು ನಿಂತಾಗ, ಅದು ಅವನ ತ್ಯಾಗವನ್ನು ನೋಡಿ ಆ ಧೇನುವನ್ನು ಬಿಟ್ಟು ಅದೃಶ್ಯವಾಗುತ್ತದೆ. ಅನಂತರ ದಿಲೀಪನಿಗೆ ಧೇನುವು ಪ್ರಸನ್ನತೆ ತೋರಿ ಸಂತಾನಕ್ಕೆ ವರ ನೀಡುತ್ತದೆ. ಮುಂದೆ ದಿಲೀಪ ಸುದಕ್ಷಿಣೆಯರಲ್ಲಿ ರಘು ಹುಟ್ಟುತ್ತಾನೆ.

ವರ ಪ್ರಸಾದದಿಂದ ಹುಟ್ಟಿದ ರಘು ಬೆಳೆದು ವಿದ್ಯಾಪಾರಂಗತನಾಗುತ್ತಾನೆ; ತಂದೆ ದಿಲೀಪ ರಘುವಿಗೆ ಯುವರಾಜ ಪದವಿಯನ್ನು ಕಟ್ಟುತ್ತಾನೆ. ದಿಲೀಪ ಮಾಡುವ ನೂರನೇ ಅಶ್ವಮೇಧಯಾಗದ ಸಂದರ್ಭದಲ್ಲಿ ಇಂದ್ರನು ಕುದುರೆಯನ್ನು ಅಪಹರಿಸುತ್ತಾನೆ. ಯಜ್ಞಕಾರ್ಯದ ಮೇಲ್ವಿಚಾರಣೆಯನ್ನು ರಘುವಿಗೆ ವಹಿಸಿದ್ದರಿಂದ ಕದಿಯಲ್ಪಟ್ಟ ಯಜ್ಞಾಶ್ವವನ್ನು ರಘು ಇಂದ್ರನೊಡನೆ ಹೋರಾಡಿ ತರಬೇಕಾಗುತ್ತದೆ. ರಘುವಿನ ಯುದ್ಧಕೌಶಲಗಳಿಗೆ ಮೆಚ್ಚಿ ಇಂದ್ರನು ಕುದುರೆಯನ್ನು ವಾಪಸ್ಸು ಕೊಡುತ್ತಾನೆ. ದಿಲೀಪನ ಯಾಗ ಸುಗಮವಾಗಿ ನೆರವೇರುತ್ತದೆ.

ದಿಲೀಪನ ಅನಂತರ ರಘು ರಾಜನಾಗುತ್ತಾನೆ. ಪ್ರತಿನಾಯಕರಿಲ್ಲದೆ ದಿಗ್ವಿಜಯಮಾಡಿ ಬಂದ ರಘುರಾಜ ‘ವಿಶ್ವಜಿತ್’ ಯಾಗಮಾಡಿ, ಸರ್ವಸ್ವವನ್ನೂ ಬ್ರಾಹ್ಮಣರಿಗೆ ದಕ್ಷಿಣೆಯಾಗಿ ಕೊಟ್ಟು ‘ದಾನಶೂರ’ನೆನಿಸಿಕೊಳ್ಳುತ್ತಾನೆ. ಎಲ್ಲವನ್ನೂ ದಾನಮಾಡಿದ ರಘುವಿನ ಸತ್ವಪರೀಕ್ಷೆಯನ್ನು ಮಾಡಲು ಬಂದು ಹಣ ಕೇಳಿದ ಕೌತ್ಸನೆಂಬ ಮುನಿಗೆ ಹಣದಾನಮಾಡಲು ತನ್ನ ಬೊಕ್ಕಸದಲ್ಲಿ ಹಣವಿಲ್ಲದಿದ್ದಾಗ, ಕುಬೇರನ ಮೇಲೆ ಯುದ್ಧಮಾಡಿ ತರಲು ನಿಶ್ಚಯಗೊಂಡದ್ದು ಕುಬೇರನಿಗೆ ಗೊತ್ತಾಗುತ್ತದೆ. ಆಗ ಕುಬೇರನು ರಾತ್ರೋರಾತ್ರಿಯೇ ರಘುವಿನ ಅರ್ಥಕೋಶಕ್ಕೆ ಸುವರ್ಣವೃಷ್ಟಿ ಕರೆಯುತ್ತಾನೆ. ಮುನಿಯ ಬಯಕೆಯನ್ನು ರಘು ನೆರವೇರಿಸುತ್ತಾನೆ. ಸಂತುಷ್ಟನಾದ ಆ ಮುನಿಯು ‘ವೀರ ಪುತ್ರನನ್ನು ಹಡೆ’ ಎಂದು ಆಶೀರ್ವದಿಸಿ ತೆರಳುತ್ತಾನೆ.

ಮುನಿಯ ಆಶೀರ್ವಾದದ ಫಲವೇ ರಘುವಿನ ಮಗ ಅಜ. ವಿವಾಹಕ್ಕೆ ಬೆಳೆದು ಬಂದಿದ್ದಾನೆ ಅಜ. ಅದೇ ಸಂದರ್ಭದಲ್ಲಿ ವಿದರ್ಭರಾಜನಾದ ಭೋಜರಾಜನು ತನ್ನ ತಂಗಿಯಾದ ಇಂದುಮತಿಗೆ ಏರ್ಪಡಿಸಿದ್ದ ಸ್ವಯಂವರಕ್ಕೆ ರಘು ತನ್ನ ಮಗ ಅಜನನ್ನು ಕಳುಹಿಸುತ್ತಾನೆ. ಅಲ್ಲಿಗೆ ಬಂದಿದ್ದ ಅನೇಕ ರಾಜರುಗಳನ್ನು ಬಿಟ್ಟು ಇಂದುಮತಿಯು ಅಜನನ್ನೇ ವರಿಸುತ್ತಾಳೆ. ಕವಿ ಇಲ್ಲಿ ಇಂದುಮತಿಯ ಸ್ವಯಂವರ ವರ್ಣನೆಯನ್ನು ವಿಸ್ತಾರವಾಗಿ ವರ್ಣಿಸುತ್ತಾನೆ.

ಅಜ ಮತ್ತು ಇಂದುಮತಿಯರ ಮಗನೇ ದಶರಥ. ಒಂದು ದಿನ ಅಜನೂ ಅವನ ಹೆಂಡತಿ ಇಂದುಮತಿಯೂ ರಾಜೋದ್ಯಾನದಲ್ಲಿರಲು ಗಗನದಿಂದ ಒಂದು ಪುಷ್ಪಮಾಲೆ ಇಂದುಮತಿಯ ಮೇಲೆ ಬಿದ್ದ ತಕ್ಷಣ ಅವಳು ಮೃತಳಾಗುತ್ತಾಳೆ. ಅಜ ತನ್ನ ಹೆಂಡತಿಯ ವಿಯೋಗದಿಂದ ಬೆಂದು ಹೇಗೋ ಸ್ವಲ್ಪ ವರ್ಷ ಬದುಕಿ ಬಳಿಕ ಸ್ವರ್ಗಸ್ಥನಾಗುತ್ತಾನೆ.

ಅವನ ಬಳಿಕ ದಶರಥನು ಅಯೋಧ್ಯೆಗೆ ರಾಜನಾಗುತ್ತಾನೆ. ಒಂದು ದಿನ ಬೇಟೆಯಲ್ಲಿರುವಾಗ ದಶರಥ ಗಜವೊಂದಕ್ಕೆ ಬಾಣ ಬಿಡುತ್ತಾನೆ. ಆದರೆ ಆ ಬಾಣ ಮುನಿಕುಮಾರನೊಬ್ಬನನ್ನು ಬಲಿ ತೆಗೆದುಕೊಳ್ಳುತ್ತದೆ. ಪುತ್ರಮರಣದಿಂದ ತಪ್ತನಾದ ಮುನಿಕುಮಾರನ ತಂದೆ ನೀನೂ ಸಹ ನಿನ್ನ ವೃದ್ಧಾಪ್ಯದಲ್ಲಿ ನನ್ನಂತೆ ಪುತ್ರಶೋಕದಿಂದ ಸಾಯುವೆ ಎಂದು ಶಪಿಸಿ ಮೃತನಾಗುತ್ತಾನೆ. ಕೆಲವು ದಿನಗಳ ಮೇಲೆ ಪುತ್ರಕಾಮೇಷ್ಠಿಯಾಗ ಮಾಡಿದ ಫಲವಾಗಿ ದಶರಥನಿಗೆ ರಾಮ, ಭರತ, ಲಕ್ಷ್ಮಣ, ಶತ್ರುಘ್ನರೆಂಬ ಪುತ್ರರು ಜನಿಸುತ್ತಾರೆ. ರಘುವಂಶದ ೧೧, ೧೨, ೧೩, ೧೪ ಮತ್ತು ೧೫ನೆಯ ಸರ್ಗಗಳಲ್ಲಿ ಶ್ರೀರಾಮಾಯಣದ ಕಥೆಯನ್ನು ಕಾಳಿದಾಸ ಕವಿಯು ವರ್ಣನೆ ಮಾಡಿದ್ದಾನೆ.

ರಾಮನಾದ ಮೇಲೆ ಕುಶಾವತಿಯಲ್ಲಿ ಆಳುತ್ತಿದ್ದ ಕುಶನು ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡುತ್ತಾನೆ. ಈತನು ನಾಗರಾಜನಾದ ಕುಮುದನ ಸಹೋದರಿ ಕುಮುದ್ವತಿಯನ್ನು ವರಿಸುತ್ತಾನೆ. ಇವರ ಪುತ್ರನೇ ಅತಿಥಿ. ಕುಶನು ದಾನವನಾದ ದುರ್ಜಯನೊಡನೆ ಸಂಭವಿಸಿದ ಯುದ್ಧದಲ್ಲಿ ಸಾಯುತ್ತಾನೆ. ಅತಿಥಿಯ ಅನಂತರ ಆಯೋಧ್ಯೆಯನ್ನು ನಿಷಧ, ನಳ, ನಭ, ಪುಂಡರೀಕ, ಕ್ಷೇಮಧನ್ವರೇ ಮೊದಲಾದ ೨೧ ಜನ ರಾಜರು ಆಳುತ್ತಾರೆ ಕೊನೆಯ ಸುದರ್ಶನನೆಂಬ ರಾಜ ತನ್ನ ತಂದೆ ಸಿಂಹದ ಬಾಯಿಗೆ ಆಹುತಿಯಾದ್ದರಿಂದ ತನ್ನ ಆರನೆಯ ವಯಸ್ಸಿನಲ್ಲಿಯೇ ರಾಜ್ಯಭಾರಕ್ಕೆ ಬರುತ್ತಾನೆ. ಈತನ ಮಗನೇ ಅಗ್ನಿವರ್ಣ. ಮಗನನ್ನು ರಾಜ್ಯದಲ್ಲಿಟ್ಟು ಸುದರ್ಶನ ಕಾಡಿಗೆ ಹೊರಟುಹೋಗುತ್ತಾನೆ. ಅಗ್ನಿವರ್ಣ ಸ್ತ್ರೀಲೋಲನಾಗಿ, ರಾಜ್ಯಕಾರ್ಯಗಳನ್ನು ಮರೆತು, ಕೊನೆಗೆ ಕ್ಷಯರೋಗದಿಂದ ಸಾಯುತ್ತಾನೆ. ಅನಂತರ ಗರ್ಭಿಣಿಯಾಗಿದ್ದ ಈತನ ಪತ್ನಿ ರಾಜ್ಯವಾಳುವ ಭಾರವನ್ನು ವಹಿಸಿಕೊಳ್ಳುವುದರ ಸಂದರ್ಭದೊಡನೆ ಕಾವ್ಯ ಮುಗಿಯುತ್ತದೆ.

ಕಾಳಿದಾಸನನ್ನು ಅನೇಕ ಬಾರಿ ‘ರಘುಕಾರ’ ಎಂದು ಕರೆಯುತ್ತಿದ್ದುದು, ಕಾಳಿದಾಸನ ಕೃತಿಗಳಲ್ಲಿ ‘ರಘುವಂಶ’ಕ್ಕಿರುವ ಮಹತ್ವವನ್ನು ಸ್ಪಷ್ಟಪಡಿಸುತ್ತದೆ; ೧೯ ಸರ್ಗಗಳ ಈ ಮಹಾಕಾವ್ಯವನ್ನು ಕಾಳಿದಾಸನ ಪೂರ್ಣಪ್ರತಿಭೆಯ ಪರಿಪಕ್ವ ಫಲ ಎನ್ನುತ್ತಾರೆ.

ಕಿರಾತಾರ್ಜುನೀಯ

ಸಂಸ್ಕೃತದ ಪಂಚಮಹಾಕಾವ್ಯಗಳಲ್ಲಿ ಕವಿ ಭಾರವಿ ರಚಿಸಿದ ‘ಕಿರಾತಾರ್ಜುನೀಯ’ ಒಂದು. ಕಾಳಿದಾಸ ಭಾಸರ ಬಗ್ಗೆ ಇರುವ ವಾದವಿವಾದಗಳು ಈ ಕವಿಯ ಕಾಲ ನಿರ್ಣಯದ ಬಗೆಗೂ ಇವೆ. ಅಂತೂ ಈ ಕವಿಯನ್ನು ಕ್ರಿ.ಶ. ೬೩೪ ರಿಂದ ೭೦೦ರ ಮಧ್ಯದ ಅವಧಿಯಲ್ಲಿ ಗುರುತಿಸಿದ್ದಾರೆ. ಭಾರವಿಯ ಬಗ್ಗೆ ಇರುವ ಕತೆಗಳಂತೂ ಬಹಳ ಸ್ವಾರಸ್ಯಕರವಾದವು. ‘ಕಿರಾತಾರ್ಜುನೀಯ’ ಕಾವ್ಯಕ್ಕೆ ಸಂಸ್ಕೃತ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವಿದೆ. ಹದಿನೆಂಟು ಸರ್ಗಗಳ ಮಹಾಕಾವ್ಯ ಇದು. ಕವಿ ಇಲ್ಲಿ ಕಥಾಂಶವನ್ನು ಗೌಣವಾಗಿಸಿದ್ದಾನೆ. ಇಡೀ ಕಾವ್ಯ ಅಷ್ಟಾದಶ ವರ್ಣನೆಗಳ ತವರೂರಾಗಿದೆ. ಮಹಾಭಾರತದ ‘ವನಪರ್ವ’ದ ಕೆಲವು ಭಾಗಗಳಿಂದ ತನ್ನ ಕಾವ್ಯದ ವಸ್ತುವನ್ನು ತೆಗೆದುಕೊಂಡಿದ್ದಾನೆ. ಪಾಶುಪತಾಸ್ತ್ರವನ್ನು ಪಡೆಯಲು ಅರ್ಜುನನು ಹೊರಡುವ ಸನ್ನಿವೇಶ, ಅದರ ಹಿನ್ನೆಲೆ, ಅವನ ತಪಸ್ಸಾಧನೆ ಮತ್ತು ಸಿದ್ಧಿ ಇವೇ ಈ ಕಾವ್ಯದ ಮುಖ್ಯ ತಿರುಳು.

ಕವಿ ಆರಂಭದಲ್ಲಿನ ಎರಡು ಸರ್ಗಗಳಲ್ಲಿ, ಜೂಜಾಟದಲ್ಲಿ ಸೋತು ರಾಜ್ಯ ಭ್ರಷ್ಟರಾದ ಪಾಂಡವರು ಪ್ರತಿಜ್ಞಾಪಾಲನೆಗಾಗಿ ದೈ ತವನಕ್ಕೆ ಬರುವುದು, ದುರ್ಯೋಧನನ ಕಾರ್ಯ ಕಲಾಪಗಳನ್ನು ದೂತನನ್ನು ಕಳಿಸಿ ತಿಳಿದುಕೊಳ್ಳುವುದು, ಶಾಂತಿಯಿಂದ ಮತ್ತೆ ರಾಜ್ಯ ಸಂಪಾದನೆ ಮಾಡಬೇಕೆಂದು ಭೀಮನಿಗೆ ಧರ್ಮರಾಯನ ಉಪದೇಶ, ಇದರಿಂದ ಕುಪಿತಳಾದ ದ್ರೌಪದಿ ನಿಂದಿಸುವುದು, ಅನಂತರ ವೇದವ್ಯಾಸ ಮುನಿಗಳು ಬಂದು ಪಾಶುಪತಾಸ್ತ್ರ ಸಂಪಾದಿಸಲು ಅರ್ಜುನನಿಗೆ ಮಂತ್ರ ಉಪದೇಶ ಮಾಡುವುದು-ಇವೇ ಮೊದಲಾದವು ಬರುತ್ತವೆ. ಕೌರವರ ಬಲವನ್ನು ಗೆಲ್ಲಲು ಶಸ್ತ್ರಾಸ್ತ್ರ ಸಂಪತ್ತನ್ನು ಹೆಚ್ಚಿಸಿ ಕೊಳ್ಳಬೇಕಾಗಿದೆ. ಅದಕ್ಕೆ ಶಿವನನ್ನು ಒಲಿಸಿಕೊಂಡು ಪಾಶುಪತಾಸ್ತ್ರವನ್ನು ಸಂಪಾದಿಸಬೇಕೆಂದು ಮುನಿಗಳು ಅರ್ಜುನನಿಗೆ ಉಪದೇಶಿಸಿ ಇಂದ್ರಕೂಟ ಪರ್ವತಕ್ಕೆ ಕಳಿಸುತ್ತಾರೆ. ಅರ್ಜುನನಿಗೆ ದಾರಿತೋರಿಸಲು ಮುನಿಗಳೇ ಯಕ್ಷನೊಬ್ಬನನ್ನು ನಿಯೋಜಿಸುತ್ತಾರೆ. ಧರ್ಮರಾಯ, ದ್ರೌಪದಿ, ಭೀಮರು ಅರ್ಜುನನನ್ನು ಬೀಳ್ಕೊಡುತ್ತಾರೆ.

ಅರ್ಜುನನು ಹೊರಡುವುದು ಶರತ್ಕಾಲದಲ್ಲಿ. ಕವಿಯು ತನ್ನ ವರ್ಣನಾ ಸಾಮರ್ಥ್ಯಕ್ಕೆ ಈ ಸನ್ನಿವೇಶವನ್ನು ಸಮೃದ್ಧವಾಗಿ ಬಳಸಿಕೊಂಡಿದ್ದಾನೆ. ಕವಿ ತಾನು ವರ್ಣಿಸಿದ್ದು ಸಾಲದು ಎಂಬಂತೆ ಅರ್ಜುನನ ಜೊತೆಯಲ್ಲಿದ್ದ ಯಕ್ಷನ ಮೂಲಕವೂ ವರ್ಣಿಸುತ್ತಾನೆ. ಹಿಮಾದ್ರಿಯನ್ನು ತಲುಪಿದ ಮೇಲೆ ಯಕ್ಷ ಹಿಂತಿರುಗುತ್ತಾನೆ. ನಂತರ ಇಂದ್ರಕೀಲ ಪರ್ವತವನ್ನು ಅರ್ಜುನ ಹತ್ತಿ ತಪಸ್ಸನ್ನು ಪ್ರಾರಂಭಿಸಿದಾಗ, ಅದರ ಪ್ರಭಾವಕ್ಕೊಳಗಾದ ವನರಕ್ಷಕರು ತಮ್ಮ ಒಡೆಯನಾದ ದೇವೇಂದ್ರನಿಗೆ ದೂರುತ್ತಾರೆ. ಇಂದ್ರನಿಗೆ ಇದನ್ನು ಸಹಿಸುವುದು ಸಾಧ್ಯವಾಗದೆ, ಅದಕ್ಕಾಗಿ ಅವನು ಕಳಿಸಿದ ಅಪ್ಸರ ಸ್ತ್ರೀಯರು ಗಂಧರ್ವರೊಡನೆ ಬಂದು ಇಂದ್ರಕೀಲದಲ್ಲಿ ಬೀಡುಬಿಡುವ ಸನ್ನಿವೇಶವನ್ನು ಕವಿ ವಿಸ್ತಾರವಾಗಿ ಸರ್ಗ ೪, ೫, ೬ ರಲ್ಲಿ ವರ್ಣಿಸಿದ್ದಾನೆ.

ಗಂಧರ್ವರ ಮತ್ತು ಅಪ್ಸರೆಯರ ಜಲಕ್ರೀಡೆಗಳ ವರ್ಣನೆ, ಚಂದ್ರೋದಯ, ಪಾನಗೋಷ್ಠಿ, ಪ್ರಭಾತಗಳ ವರ್ಣನೆ, ಸಂಧ್ಯಾಕಾಲ ವರ್ಣನೆ, ಸುರತಲೀಲೆ ಮೊದಲಾದವುಗಳ ವಿಲಾಸಿ ವಾತಾವರಣವನ್ನು ನಿರ್ಮಿಸಿ ಅರ್ಜನನ ತಪೋಭಂಗ ಮಾಡಲು ಯತ್ನಿಸುತ್ತಾರೆ. ಆದರೆ ಅರ್ಜುನನ ಚಿತ್ತಸೈ ರ್ಯದ ಮುಂದೆ ಎಲ್ಲವೂ ವಿಫಲವಾಗುತ್ತದೆ. ಕೊನೆಗೆ ಸ್ವತಃ ಇಂದ್ರನೇ ಮುನಿಯ ವೇಷದಲ್ಲಿ ಬಂದು ಅರ್ಜುನನ ಸತ್ವವನ್ನು ಪರೀಕ್ಷಿಸಿ, ಮೆಚ್ಚಿ ಶಿವನನ್ನು ಆರಾಧಿಸಿ ಪಾಶುಪತಾಸ್ತ್ರವನ್ನು ಪಡೆಯುವಂತೆ ಬೋಧಿಸುತ್ತಾನೆ. ಮತ್ತೆ ಶಿವನನ್ನು ಕುರಿತ ಅರ್ಜುನನ ಉಗ್ರ ತಪಸ್ಸಿನಿಂದ ಉಂಟಾದ ಬೇಗೆಯನ್ನು ನಿವಾರಿಸಲು ಸಿದ್ಧತಾಪಸರು ಶಿವನನ್ನೇ ಮೊರೆಹೋಗುತ್ತಾರೆ. ಶಿವನೇ ಕಿರಾತನ ರೂಪಿನಲ್ಲಿ ಅರ್ಜುನನ ಬಳಿಗೆ ಬರುತ್ತಾನೆ. ಅರ್ಜುನನನ್ನು ಕೊಲ್ಲಲೆಂದು ಮೂಕನೆಂಬ ರಾಕ್ಷಸ ಹಂದಿಯ ರೂಪದಲ್ಲಿ ಬರುತ್ತಾನೆ. ಆ ಹಂದಿಯ ಮೇಲೆ ಕಿರಾತರೂಪದ ಶಿವ ಮತ್ತು ಅರ್ಜುನ ಇಬ್ಬರೂ ಬಾಣಬಿಟ್ಟು ಕೊಲ್ಲುತ್ತಾರೆ. ನಂತರದಲ್ಲಿ ಅದನ್ನು ಕೊಂದವರು ಯಾರು ಎಂದು ವಿವಾದ ಎದ್ದಾಗ ಶಿವನ ದೂತನ ಹೀಯ್ಯಾಳಿಕೆಯಿಂದ ಕೋಪಗೊಂಡ ಅರ್ಜುನ ಶಿವನ ಮೇಲೆಯೇ ಯುದ್ಧಮಾಡುತ್ತಾನೆ. ಕಿರಾತನ ಯುದ್ಧಕೌಶಲ ಅಪಾರವಾದದ್ದು; ಕಿರಾತನೊಬ್ಬನಿಗೆ ಇಂತಹ ಯುದ್ಧಕೌಶಲ ಎಲ್ಲಿಯದು ಎಂದು ಸಂದೇಹ. ಅರ್ಜುನನ ಪರಾಕ್ರಮಗಳಿಗೆ ಮೆಚ್ಚಿ ಶಿವ ಪಾಶುಪತಾಸ್ತ್ರವನ್ನು ಕೊಡುತ್ತಾನೆ. ಆಗ ಪ್ರತ್ಯಕ್ಷವಾಗುವ ಇಂದ್ರಾದಿಗಳು ಸಹ ದಿವ್ಯಾಸ್ತ್ರಗಳನ್ನು ಕೊಡುತ್ತಾರೆ. ಬಂದ ಕಾರ್ಯದಲ್ಲಿ ಸಿದ್ಧಿಯನ್ನು ಪಡೆದ ಅರ್ಜುನ ಯುಧಿಷ್ಠಿರನಲ್ಲಿಗೆ ತೆರಳುತ್ತಾನೆ.

‘ಕಿರಾತಾರ್ಜುನೀಯಂ’ ಕಾವ್ಯದ ಕಥಾ ಸೂತ್ರ ಚಿಕ್ಕದು; ಆದರೂ ಕವಿಯ ವರ್ಣನಾ ಸಾಮರ್ಥ್ಯಕ್ಕೆ ಒದಗಿರುವ ಅವಕಾಶ ಅತ್ಯಂತ ವಿಸ್ತಾರವಾಗಿದೆ. ಅನೇಕ ಅಂಶಗಳಲ್ಲಿ ಹೊಸತನವನ್ನು ಸಾಧಿಸಿದ ಭಾರವಿ ಮುಂದಿನ ಅನೇಕ ಕವಿಗಳಿಗೆ ಸ್ಫೂರ್ತಿಯ ಸೆಲೆಯಾದ.