ಆಧುನಿಕ ಕಾಲ ಮತ್ತು ಮಹಾಕಾವ್ಯ

“ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆ ತನ್ನ ಪ್ರಾಧಾನ್ಯವನ್ನು ಕಳೆದುಕೊಂಡು ವಿಫಲವಾಗಿದೆ”[1] ಎನ್ನುವುದು ಒಂದು ಅಭಿಪ್ರಾಯ. ಈ ಅಭಿಪ್ರಾಯವನ್ನು ಮಂಡಿಸುವವರು ಕೊಡುವ ಕಾರಣಗಳು ಇವು :

ಅ) ರಾಷ್ಟ್ರೀಯ ಭಾವನೆ (National spirit) ಪ್ರಾಚೀನ ಜನಾಂಗಗಳಲ್ಲಿ ಇರುವಷ್ಟು ಇಂದು ಪ್ರಧಾನವಾಗಿಲ್ಲ.

ಆ) ಮಹಾಕಾವ್ಯರಚನೆಗೆ ಅಗತ್ಯವಾದ ವಸ್ತುನಿಷ್ಠತೆ ಇಂದಿನ ನಾಗರಿಕ ಪರಿಸರದಲ್ಲಿ ಬದುಕುವ ಕವಿಗೆ ಸಾಧ್ಯವಾಗುತ್ತಿಲ್ಲ.

ಇ) ಮಹತ್ತು ಅನ್ನುವುದು, ಮಹಾಕಾವ್ಯದ ಕವಿಗಳು ಭಾವಿಸಿದಂತೆ ಉದಾತ್ತ ವ್ಯಕ್ತಿಗಳಲ್ಲಿ ಮಾತ್ರವಲ್ಲ, ಸರಳ ಸಾಮಾನ್ಯ ವ್ಯಕ್ತಿಗಳಲ್ಲಿಯೂ ಉಂಟು ಮಾನವೀಯ ದೃಷ್ಟಿಯಿಂದ ಸರಿಯಾದ ನೋಡಿದರೆ.

ಈ) ಹಿಂದಿನಂತೆ ಇಂದು ಮಹಾಕಾವ್ಯಗಳನ್ನು ಬರೆದೇ ಮಹಾಕವಿಯಾಗಬೇಕಾಗಿಲ್ಲ.

ಉ) ಮಹಾಕಾವ್ಯದ ಬದಲು, ಇಂದು ಲೇಖಕರು ಕವಿಗಳು ಅನೇಕ ಸಾಹಿತ್ಯ ಪ್ರಕಾರಗಳನ್ನು ಕಂಡುಕೊಂಡಿರುವುದರಿಂದ, ಮಹಾಕಾವ್ಯವೊಂದೆ ಸಾಹಿತ್ಯದ ನಿಜವಾದ ಅಭಿವ್ಯಕ್ತಿ ಎಂದು ತಿಳಿಯಬೇಕಾಗಿಲ್ಲ.

ಈ ವಾದದ ಅನೇಕ ಅಂಶಗಳಲ್ಲಿ ಹುರುಳಿದೆ. ಆದರೆ ಈ ಕಾರಣಗಳಿಂದಾಗಿ ಮಹಾಕಾವ್ಯರಚನೆ ‘ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಂಡು ವಿಫಲವಾಗಿದೆ’ – ಎನ್ನುವುದು ಸರಿಯಲ್ಲ. ಹಿಂದಿಗಿಂತ ಇಂದು ಸಾಹಿತ್ಯದ ವಸ್ತುವಿನ ಬಗ್ಗೆ ದೃಷ್ಟಿ ಬದಲಾಗಿದೆ. ಮಹಾಕಾವ್ಯದಲ್ಲಿಯಂತೆ, ಉದಾತ್ತ ವಸ್ತುಗಳನ್ನು, ಉನ್ನತ ವಂಶಜರನ್ನು ರಾಜಾಧಿರಾಜರನ್ನು ಮಹಾವೀರರುಗಳನ್ನು ಕುರಿತು ಕಾವ್ಯ ಬರೆಯಬೇಕೆಂಬ ಧೋರಣೆ ತನ್ನ ಪ್ರಾಧಾನ್ಯವನ್ನು ಕಳೆದುಕೊಂಡಿದೆ. ಮಹಾಕಾವ್ಯ ಚಿತ್ರಿಸುವ ಸಮಾಜ, ಒಂದು ಎತ್ತರದ ಸಾಮಾಜಿಕ ಸ್ತರವೇ ಹೊರತು, ಸರಳಸಾಮಾನ್ಯ ಬದುಕಿನ ಸಮಾಜದ ವಾಸ್ತವತೆ ಅಷ್ಟಾಗಿ ಪ್ರಕಟವಾಗುತ್ತಿರಲಿಲ್ಲವೆಂಬುದು ನಿಜವೆ. ಮಾನವೀಯ ದೃಷ್ಟಿಯಿಂದ ನೋಡಿದರೆ, ‘ಮಹತ್ತು’ ಎನ್ನುವುದು ಸಮಾಜದ ಸಾಧಾರಣ ವ್ಯಕ್ತಿಗಳಲ್ಲಿಯೂ ಕಾಣುತ್ತದೆ; ಆದುದರಿಂದಲೇ ರೊಮ್ಯಾಂಟಿಕ್ ಯುಗದ ಕವಿಗಳು ಸಾಮಾನ್ಯ ಜೀವನವನ್ನೂ, ಅದರಲ್ಲಿನ ಸಾಮಾನ್ಯ ವ್ಯಕ್ತಿಗಳನ್ನೂ ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಂಡರು. ಅಂದರೆ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕಾವ್ಯದ ‘ನಾಯಕ’ನನ್ನಾಗಿ ಮಾಡಿಕೊಂಡು ಮಹಾಕಾವ್ಯವನ್ನು ಬರೆಯಲು ಸಾಧ್ಯ, ಹಿಂದಿನ ಮಹಾಕವಿಗಳು ಬರೆಯಬಹುದಾಗಿತ್ತು – ಎಂದು ಈ ಮಾತಿನ ಅರ್ಥವಲ್ಲ. ಯಾಕೆಂದರೆ ಸಾಮಾನ್ಯ ಮನುಷ್ಯನೊಬ್ಬ ಬೆಳೆದ ಪರಿಸರಕ್ಕೂ, ಅವನ ಆಶೋತ್ತರಗಳಿಗೂ, ಮಹಾಕಾವ್ಯದ ಕವಿಗಳು ಚಿತ್ರಿಸಿದ, ಉದಾತ್ತ ವ್ಯಕ್ತಿಗಳ ಪರಿಸರ, ಆಶೋತ್ತರ ಹಾಗೂ ಅವರ ಶಕ್ತಿ ಸಾಮರ್ಥ್ಯಗಳ ಸಾಧ್ಯತೆಗೂ ಖಂಡಿತ ವ್ಯತ್ಯಾಸವಿದೆ. ಆದರೆ, ಸಾಮಾನ್ಯ ಜೀವನದಿಂದ ಬೃಹತ್ ಕೃತಿಗಳನ್ನು ರಚಿಸಲು ಸಾಧ್ಯವಿದೆ ಎನ್ನುವುದನ್ನೂ ಒಪ್ಪಬೇಕು. ಇಂದಿನ ಕಾದಂಬರಿಗಳು ಆ ಕೆಲಸವನ್ನು ಮಾಡುತ್ತವೆ. ಅಲ್ಲದೆ ಹಿಂದಿನ ಮಹಾಕಾವ್ಯಗಳಿಗೆ ಗಾತ್ರದಲ್ಲಿ ಹಾಗೂ ಸತ್ವದಲ್ಲಿ ಸಂವಾದಿಯಾಗುವ ‘ಮಹಾಕಾದಂಬರಿ’ಗಳೂ ಬಂದಿವೆ. ಅವುಗಳನ್ನು ‘ಸಾಮಾನ್ಯ ಮನುಷ್ಯನ ಮಹಾಕಾವ್ಯ’ ಎಂದು ಕರೆಯಲಾಗಿದೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ,’ ಕಾರಂತರ ‘ಮರಳಿ ಮಣ್ಣಿಗೆ’, ಮಾಸ್ತಿಯವರ ‘ಚೆನ್ನ ಬಸವನಾಯಕ’, ರಾವ್ ಬಹದ್ದೂರರ ‘ಗ್ರಾಮಾಯಣ’ – ಈ ಕಾದಂಬರಿಗಳು ನಿಜವಾದ ಅರ್ಥದಲ್ಲಿ ಗದ್ಯಮಹಾಕಾವ್ಯಗಳೆ. ಟಾಲ್‌ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಎನ್ನುವುದು, ರಷ್ಯಾದ ರಾಜ್ಯಕ್ರಾಂತಿ ಪೂರ್ವದ, ಬದುಕಿನ ಸ್ಥಿತ್ಯಂತರಗಳನ್ನು ಚಿತ್ರಿಸುವ ಅಪೂರ್ವ ಮಹಾಕೃತಿಯಾಗಿದೆ. ಸಾಹಿತ್ಯದಲ್ಲಿ ಹಿಂದೆಂದೂ ಕಂಡರಿಯದ ಅನೇಕ ರೀತಿಯ ಸಾಹಿತ್ಯಚಳುವಳಿಗಳ ಪರಿಣಾಮವಾಗಿ ವಿವಿಧ ಸಾಹಿತ್ಯ ಪ್ರಕಾರಗಳು ಇಂದು ಹುಟ್ಟಿಕೊಂಡಿವೆ. ಆದುದರಿಂದ, ಮಹಾಕಾವ್ಯ ರಚನೆ, ಹಿಂದಿನಂತೆ ಇಂದು ಅನಿವಾರ್ಯವೇನಲ್ಲ. ಹಿಂದಿನ ಕನ್ನಡ ಸಾಹಿತ್ಯದ ಮಟ್ಟಿಗಂತೂ ಹೇಳುವುದಾದರೆ, ಬರೆಯುವ ಕವಿಗಳೆಲ್ಲ ‘ಮಹಾಕಾವ್ಯ’ವನ್ನೆ ಬರೆಯಬೇಕೆಂಬ ಉದ್ದೇಶ ಉಳ್ಳವರಾಗಿದ್ದರು. ಹೀಗಾಗಿ ಪ್ರತಿಯೊಬ್ಬರೂ ತಾವು ಬರೆದದ್ದೆ ಮಹಾಕಾವ್ಯ ಎಂದು ತಮ್ಮ ಕಾವ್ಯದ ಪೀಠಿಕಾಪ್ರಕರಣಗಳಲ್ಲಿ ಹೇಳಿಕೊಳ್ಳುವುದು ಅಭ್ಯಾಸವಾಯಿತು; ಓದುಗರೂ ಸಹ, ಕನ್ನಡದ ಬಹುತೇಕ ಕಾವ್ಯಗಳನ್ನು ಮಹಾಕಾವ್ಯಗಳೆಂದೂ, ಅದನ್ನು ಬರೆದವರನ್ನು ಮಹಾಕವಿಗಳೆಂದೂ ಕರೆಯುವುದನ್ನು ಅಭ್ಯಾಸಮಾಡಿಕೊಂಡರು. ಹೀಗಾಗಿ ಮಹಾಕಾವ್ಯ ಎಂದರೆ ಏನು, ಅದನ್ನು ಉಳಿದೆಲ್ಲ ಬಗೆಯ ಕಾವ್ಯಗಳಿಂದ ಪ್ರತ್ಯೇಕಿಸಿ ನೋಡುವುದು ಹೇಗೆ ಎನ್ನುವ ಕಡೆಗೆ ಲಕ್ಷ ವನ್ನೆ ಕೊಟ್ಟಂತೆ ಕಾಣಿಸುವುದಿಲ್ಲ. ಒಂದು ಪುರಾಣಕತೆಯನ್ನು, ಕೆಲವು ಲಕ್ಷಣಗಳಿಗೆ ಅನುಗುಣವಾಗಿ ಹೇಳಿದರೆ ಅದು ‘ಮಹಾಕಾವ್ಯ’ವಾಯಿತು – ಎಂದು ಬಹುಮಂದಿ ಭಾವಿಸಿದಂತೆ ತೋರುತ್ತದೆ. ಆದರೆ ಇಂದು ನಿಜವಾದ ಅರ್ಥದಲ್ಲಿ ಮಹಾಕಾವ್ಯ ಒಂದು ವಿಶೇಷ ಸಾಹಿತ್ಯ ಪ್ರಕಾರವೆನ್ನುವುದನ್ನು ವಿಮರ್ಶಕರು ಗುರುತಿಸಬಲ್ಲವರಾಗಿದ್ದಾರೆ. ಹಾಗೆಯೇ ಜಗತ್ತಿನಲ್ಲಿ ಮಹಾಕಾವ್ಯಗಳು ಇರುವುದು ಕೆಲವೇ ಕೆಲವು ಎನ್ನುವುದನ್ನು ಒಪ್ಪುತ್ತಾರೆ.

ಆಧುನಿಕ ಕಾಲದಲ್ಲಿ ‘ಮಹಾಕಾವ್ಯ’ ರಚನೆ ಸಾಧ್ಯವಿಲ್ಲವೆ? ಅದು ಈಗ ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಂಡಿದೆಯೆ – ಎನ್ನುವುದು ಪ್ರಶ್ನೆ. ಪ್ರತಿಯೊಂದು ಕಾಲವೂ ತನ್ನ ಯುಗಧರ್ಮವನ್ನು ಅಂದಂದಿನ ಸಾಹಿತ್ಯಾಭಿವ್ಯಕ್ತಿಯಲ್ಲಿ ಪ್ರಕಟಿಸಿಕೊಳ್ಳುತ್ತದೆ. ಹಿಂದೆ, ‘ಮಹಾಕಾವ್ಯ’ ವೊಂದೆ ಬಹುಮಟ್ಟಿಗೆ, ಹೀಗೆ ಅಂದಿನ ‘ಯುಗಧರ್ಮ’ವನ್ನು ಪ್ರಕಟಿಸುವ ಪ್ರಮುಖ ಮಾಧ್ಯಮವಾಗಿತ್ತು; ಈ ದಿನ ಈ ಯುಗಧರ್ಮದ ಅಭಿವ್ಯಕ್ತಿಯನ್ನು, ಒಂದು ಕಾಲದ, ಸಮಸ್ತ ಸಾಹಿತ್ಯ ಪ್ರಕಾರಗಳನ್ನೂ ಗಣನೆಗೆ ತೆಗೆದುಕೊಂಡು ಗುರುತಿಸ -ಬೇಕಾಗುತ್ತದೆ. ಈ ದಿನ ‘ಮಹಾಕಾವ್ಯ’ ರಚನೆಯಾದರೆ, ಅದೊಂದನ್ನೆ ತೆಗೆದುಕೊಳ್ಳದೆ,  ಉಳಿದ ಸಾಹಿತ್ಯಾಭಿವ್ಯಕ್ತಿಗಳ ಜತೆಗೆ ಅದನ್ನೂ ಸೇರಿಸಿಕೊಂಡು, ಒಂದು ಕಾಲದ ಸಾಹಿತ್ಯಕ ಸಾಧನೆಗಳ ಮೌಲ್ಯಮಾಪನಕ್ಕೆ ತೊಡಗಬೇಕಾಗುತ್ತದೆ. ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯವನ್ನು, ಕುವೆಂಪು ಅವರ ಸಾಹಿತ್ಯಕ ಸಾಧನೆಯನ್ನು ವಿಮರ್ಶಿಸುವಾಗ ಲೆಕ್ಕಕ್ಕೆ ತೆಗೆದುಕೊಳ್ಳುವಂತೆ, ಹೊಸಗನ್ನಡದ ಸಾಹಿತ್ಯಕ ಸಾಧನೆಯನ್ನು ವಿಮರ್ಶಿಸುವಾಗಲೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಹೀಗೆಂದರೆ ಮಹಾಕಾವ್ಯ, ಕೆಲವು ವಿಮರ್ಶಕರು ಭಾವಿಸುವಂತೆ, ‘ಹಿಂದಿನ ಪ್ರಾಧಾನ್ಯತೆಯನ್ನು ಕಳೆದುಕೊಂಡು ವಿಫಲವಾಗಿದೆ’ ಎಂದು ಅರ್ಥವಲ್ಲ.

ಸಾಹಿತ್ಯದ ವಿವಿಧ ಪ್ರಕಾರಗಳು ಸಮೃದ್ಧವಾಗುತ್ತಿರುವ ಈ ಆಧುನಿಕ ಕಾಲದಲ್ಲಿ ‘ಮಹಾಕಾವ್ಯ’ ರಚನೆ ಯಾಕೆ ಬೇಕು; ಅಲ್ಲದೆ ಆಧುನಿಕ ಯುಗದ ಮನೋಧರ್ಮವೇ ಮಹಾಕಾವ್ಯ ರಚನೆಗೆ ವಿರೋಧಿಯಾಗಿದೆ, ಆದುದರಿಂದ, ಈಗ ಮಹಾಕಾವ್ಯ ರಚನೆ ಅನಗತ್ಯವಲ್ಲವೆ-ಎಂಬ ಒಂದು ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಇದು ಮುಖ್ಯವಾಗಿ ‘ಭಾವಗೀತೆ’ಯನ್ನು ಎತ್ತಿ ಹಿಡಿಯುವ ಪಂಥದವರ ವಾದ. ಭಾವಗೀತೆಯೊಂದೇ ನಿಜವಾದ ಕಾವ್ಯಾಭಿವ್ಯಕ್ತಿ; ಅದರಲ್ಲಿ ಬರುವ ಭಾವದ ಕಾವು ಮತ್ತು ಐಕ್ಯತೆ ‘ಮಹಾಕಾವ್ಯ’ದಲ್ಲಿ ಬಾರದು. ಹಿಂದೆ ಮಹಾಕಾವ್ಯಗಳಿದ್ದಿರಬಹುದು. ಇವತ್ತಂತೂ ‘ಭಾವಗೀತೆ’ಯೇ ಅತ್ಯುತ್ತಮವಾದ ರೀತಿಯಲ್ಲಿ ಇಂದಿನ ಸಂವೇದನೆಗಳನ್ನು ಪ್ರಕಟಿಸುವ ಮಾಧ್ಯಮ. ಆದುದರಿಂದ ಸುಮ್ಮನೆ ಯಾಕೆ ಕಷ್ಟಪಟ್ಟು ದೀರ್ಘವಾದ ಮಹಾಕಾವ್ಯ ರಚನೆಗೆ ಕೈ ಇಕ್ಕಬೇಕು. ಅದೊಂದು ರಚನೆಯ ಪ್ರಯಾಸ. ಈ ದಿನ “ದೀರ್ಘ ಕಾವ್ಯದ ರಚನೆ ಕಷ್ಟ ಮಾತ್ರವಲ್ಲ, ಅಸಾಧ್ಯವೂ ಹೌದು. ಅದು ಎಂದೋ ಸತ್ತು ಹೋಗಿದೆ. ಅದನ್ನು ಸಾರ್ವಜನಿಕವಾಗಿ ಸಮಾಧಿ ಮಾಡಬೇಕು; ಅದಕ್ಕೊದಗಿದ ಈ ಅವಸ್ಥೆಗಾಗಿ ಒಂದಿಷ್ಟೂ ಸಂತಾಪ ಪಡುವ ಕಾರಣವಿಲ್ಲ”[2]– ಎನ್ನುವುದು ಇವರ ಘೋಷಣೆ.

ಈ ಘೋಷಣೆ ಅರ್ಥವಿಲ್ಲದ್ದು. ಮಹಾಕಾವ್ಯರೂಪ ಅಥವಾ ಸುದೀರ್ಘವಾದ ಕಾವ್ಯರಚನೆ ‘ಕಷ್ಟ ಮಾತ್ರವಲ್ಲ ಅಸಾಧ್ಯವೂ ಹೌದು” ಎನ್ನುವುದು ವಿಲಕ್ಷಣವಾದ ಅಭಿಪ್ರಾಯ. ಅದು ಯಾರಿಗೆ ಕಷ್ಟ? ಕಷ್ಟ ಎಂದರೇನು – ಎಂದು ಪ್ರತಿ ಪ್ರಶ್ನೆ ಹಾಕಬೇಕಾಗುತ್ತದೆ. ಕಾವ್ಯ ನಿರ್ಮಿತಿಯ ಬಗೆಗೆ ‘ಕಷ್ಟ’, ‘ಸುಲಭ’ ಎನ್ನುವ ಮಾತುಗಳನ್ನು ಬಳಸಬಾರದು. ಅಲ್ಲದೆ ವಿಮರ್ಶೆಯಲ್ಲಿ ಬಳಸಬಹುದಾದ ಮಾತುಗಳಲ್ಲಿ ಬಹುಶಃ ಇದು ‘ಕಷ್ಟ’ ಅಂದವರ ಅಭಿಪ್ರಾಯ ಹೀಗಿರಬಹುದು : ಮಹಾಕಾವ್ಯಕ್ಕೆ ಅಗತ್ಯವಾದ ಒಂದು ಭಾವತೀವ್ರತೆಯನ್ನು, ಬಹುಕಾಲ ಅಂದರೆ ಅನೇಕ ವರ್ಷಗಳ ಕಾಲ ಹಿಡಿದು ನಿಲ್ಲಿಸಿಕೊಳ್ಳುವುದು, ಅಂದಂದಿನ ಭಾವತೀವ್ರತೆಗೆ ಅಂದಂದೇ ಅಭಿವ್ಯಕ್ತಿ ನೀಡಿ ಮುಗಿಸುವ ಭಾವಗೀತೆಯ ಕವಿಗೆ ಕಷ್ಟವಾಗಬಹುದು. ಇದರ ಜೊತೆಗೆ ‘ಇದು ಕಷ್ಟಮಾತ್ರವಲ್ಲ ಅಸಾಧ್ಯವೂ ಹೌದು’ – ಎನ್ನುವ ಅಭಿಪ್ರಾಯ ಕೂಡ ವಿಲಕ್ಷಣವಾಗಿದೆ. ಮಹಾಕಾವ್ಯ ರಚನೆ ಕಷ್ಟವೇ ಇರಬಹುದು; ಆದರೆ ಅಸಾಧ್ಯವಲ್ಲ – ಎಂಬುದನ್ನು ಅರವಿಂದರ ಸಾವಿತ್ರಿ, ಕುವೆಂಪು ಅವರ ರಾಮಾಯಣ ದರ್ಶನಂಗಳು ತೋರಿಸಿಕೊಟ್ಟಿವೆ. ‘ಮಹಾಕಾವ್ಯ ಎಂದೋ ಸತ್ತು ಹೋಗಿದೆ’ – ಎನ್ನುವುದು ಅವಿವೇಕದ ಮಾತು. ಮಹಾಕಾವ್ಯ ಎನ್ನುವುದು ಗತಕಾಲದ ಯಾವುದೋ ಒಂದು ವಿಶೇಷ ರೀತಿಯ ಬೃಹಜ್ಜೀವಿ ಎಂಬಂತೆಯೂ, ಈಗ ಅದರ ಸಂತಾನವೇ ನಿಶ್ಯೇಷವಾಗಿದೆಯೆಂದೂ ಭಾವಿಸುವ ಪ್ರಾಣಿಶಾಸ್ತ್ರಜ್ಞರ ಸಿದ್ಧಾಂತದಂತಿದೆ ಈ ಮಾತು. ‘ಮಹಾಕಾವ್ಯ’ ಎಂದೋ ಮುಗಿದು ಹೋದ ರಚನೆ ಅಲ್ಲ; ಅದರ ಪರಂಪರೆ ಇಂದಿಗೂ ಬತ್ತಿಹೋಗಿಲ್ಲ. ಒಂದು ವೇಳೆ ಮಹಾಕಾವ್ಯ ರಚನೆಗಳ ಕಾಲ ಮುಗಿಯುವುದಾದರೆ, ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ, ಸಾಹಿತ್ಯಕ್ಕೆ. ಜತೆಗೆ ಅತ್ಯಂತ ಮಹತ್ತಾದ ಅಭಿವ್ಯಕ್ತಿಯ ಸಾಧ್ಯತೆಯನ್ನೆ ನಾವು ಅಲ್ಲಗಳೆದಂತಾಗುತ್ತದೆ, ಮಹಾಕಾವ್ಯ ರಚನೆ ಅಸಾಧ್ಯ ಎನ್ನುವುದಾದರೆ. ಆದರೆ ಸುದೈವದಿಂದ ವಾಸ್ತವ ಪರಿಸ್ಥಿತಿ ಈ ವಾದಕ್ಕೆ ವಿರುದ್ಧವಾಗಿದೆ; ಮಹಾಕಾವ್ಯವನ್ನು ಬರೆದ ಮಹಾಕವಿಗಳು ಈ ಕಾಲದಲ್ಲೂ ಇದ್ದಾರೆ. ಮಹಾಕಾವ್ಯವೊಂದನ್ನೆ ಬರೆಯುವ ಅನಿವಾರ್ಯತೆ ಈಗ ಇಲ್ಲ ಎಂಬ ಕಾರಣಕ್ಕಾಗಿ, ಮಹಾಕಾವ್ಯ ರಚನೆಯೇ ಅಸಾಧ್ಯ ಎನ್ನುವುದು ಸರಿಯಲ್ಲ.

ಹಾಗೆಯೆ ಈ ದಿನ ‘ಮಹಾಕಾವ್ಯ’ಗಳನ್ನು ಬರೆದವರು ಮಾತ್ರ ‘ಮಹಾಕವಿಗಳು – ಎಂಬ ಹಿಂದಿನ ಅಭಿಪ್ರಾಯವನ್ನು ಪುನರ್ ವಿಮರ್ಶಿಸಬೇಕಾಗುತ್ತದೆ. ಮೊದಲನೆಯದಾಗಿ ಹಿಂದೆ, ಮಹಾಕಾವ್ಯವೊಂದೆ ಪ್ರಮುಖ ಸಾಹಿತ್ಯ ಪ್ರಕಾರವಾಗಿತ್ತು; ಆಗ ಮಹಾಕಾವ್ಯಗಳನ್ನು ಬರೆದವರನ್ನು ‘ಮಹಾಕವಿ’ ಎಂದು ಕರೆಯಲು ಅಡ್ಡಿಯಿರುತ್ತಿರಲಿಲ್ಲ. ಆದರೆ ಇಂದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮೃದ್ಧವಾಗಿ ಕೆಲಸ ಮಾಡಿದವರನ್ನು, ‘ಮಹಾಕಾವ್ಯ’ವನ್ನು ಬರೆಯದಿದ್ದರೂ ‘ಮಹಾಕವಿ’ ಎಂದು ಕರೆಯಬಹುದೆ, ಕರೆಯಬಾರದೆ ಎನ್ನುವುದು ಪ್ರಶ್ನೆ. ಟಾಲ್‌ಸ್ಟಾಯ್, ಪರಿಚಿತವಾದ ಅರ್ಥದಲ್ಲಿ ಕಾವ್ಯಗಳನ್ನು ಬರೆದೇ ಇಲ್ಲ; ಆದರೆ ಅವರು ಬರೆದ ‘ವಾರ್ ಅಂಡ್ ಪೀಸ್’ ಎಂಬ ಕಾದಂಬರಿ, ಯಾವ ‘ಮಹಾಕಾವ್ಯ’ಕ್ಕೂ ಕಡಮೆಯಾಗಿಲ್ಲ, ಗಾತ್ರದಲ್ಲಿ ಹಾಗೂ ಸತ್ವದಲ್ಲಿ. ರವೀಂದ್ರನಾಥ ಟ್ಯಾಗೂರರು ಬ್ರಹ್ಮಸಮಾಜಕ್ಕೆ ಸೇರಿದ್ದರಿಂದಲೋ ಏನೋ, ಹಿಂದೂ ಪುರಾಣಗಳೊಂದನ್ನೂ ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಳ್ಳದೆ, ಮಹಾಕಾವ್ಯಕ್ಕೆ ಅಗತ್ಯವಾದ ವಸ್ತುಗಳನ್ನೆ ನಿರಾಕರಿಸಿದ್ದರಿಂದ ಅವರ ಪ್ರತಿಭೆ ಬಿಡಿ ಬಿಡಿಯಾದ ಭಾವಗೀತೆ, ನಾಟಕ, ಕಾದಂಬರಿ, ಸಣ್ಣಕತೆ ಇತ್ಯಾದಿ ಅಭಿವ್ಯಕ್ತಿಗಳಲ್ಲಿ ಹರಿದು ಹಂಚಿಹೋಯಿತು. ಭಾರತದ ಶ್ರೇಷ್ಠ ಕವಿಗಳಾದ ಅವರನ್ನು ‘ಮಹಾಕವಿ’ ಅನ್ನಬೇಕೆ, ಬೇಡವೆ? ಹಾಗೆಯೆ ಆಧುನಿಕ ಕನ್ನಡದಲ್ಲಿ, ‘ಮಹಾಕಾವ್ಯ’ವನ್ನು ಬರೆಯದ, ಆದರೆ, ಅನೇಕ ಭಾವಗೀತೆಗಳನ್ನು ಬರೆದ ಶ್ರೇಷ್ಠ ಕವಿಗಳಿದ್ದಾರೆ. ಇವರ ನಡುವೆ ‘ಮಹಾಕಾವ್ಯ’ ವನ್ನು ಬರೆದವರನ್ನು ಮಾತ್ರ ‘ಮಹಾಕವಿ’ ಎಂದು ಕರೆದು, ಉಳಿದವರನ್ನು ಏನೆಂದು ಕರೆಯಬೇಕು? ಅವರಾರೂ ‘ಮಹಾಕಾವ್ಯ’ಗಳನ್ನು ಬರೆದಿಲ್ಲವೆಂಬುದು ನಿಜವಾದರೂ ಶ್ರೇಷ್ಠವಾದ ಅನೇಕ ಕವಿತೆಗಳನ್ನು ಬರೆದಿದ್ದಾರಲ್ಲವೆ; ಆದುದರಿಂದ, ‘ಮಹಾಕಾವ್ಯ’ ವನ್ನು ಬರೆದವರೇ ‘ಮಹಾಕವಿ’ – ಎನ್ನುವ ಹಿಂದಿನ ಸೂತ್ರವನ್ನು ಇಂದು ಅನ್ವಯಿಸುವುದು ಕಷ್ಟ. ವಾಸ್ತವವಾಗಿ ‘ಮಹಾಕವಿ’ ಎಂದರೆ, ಯಾರಲ್ಲಿ ಪ್ರತಿಭೆಯು ಮಹತ್ ಪ್ರಮಾಣದಲ್ಲಿ ಅಭಿವ್ಯಕ್ತವಾಗಿದೆಯೋ, ಯಾರ ಬರವಣಿಗೆ ಒಂದು ಕಾಲಮಾನದ ಸಮಸ್ತ ಸತ್ವಗಳನ್ನು ಪ್ರಕಟಿಸುತ್ತದೆಯೋ ಮತ್ತು ಯಾರ ಅಭಿವ್ಯಕ್ತಿಯ ಕ್ರಮ ಹೊಸತೊಂದು ವಿಕ್ರಮವನ್ನು ಸ್ಥಾಪಿಸುವುದರ ಮೂಲಕ, ತಮ್ಮದೇ ಆದ ಒಂದು ಪ್ರಭಾವಯುತವಾದ ಪರಂಪರೆಯನ್ನು ನಿರ್ಮಿಸುತ್ತದೋ, ಅವರು ಎಂದು ಹೇಳಬಹುದು. ಈ ಅರ್ಥದಲ್ಲಿ ಲಕ್ಷಣಾನುಸಾರಿ -ಯಾದ ಮಹಾಕಾವ್ಯಗಳನ್ನು ಬರೆದವರನ್ನೆಲ್ಲ ‘ಮಹಾಕವಿ’ಗಳು ಎಂದು ಕರೆಯಲು ಸಾಧ್ಯವಿಲ್ಲವೆನ್ನುವುದು ಸ್ಪಷ್ಟ; ಇಲ್ಲಿ ‘ಮಹಾ’ ಎಂಬುದು ಮುಖ್ಯವಾಗಿ ಕವಿಯ ಆಂತರಿಕ ಸತ್ವವನ್ನು ಕುರಿತ ಮಾತು.

ಈ ಸಂದರ್ಭದಲ್ಲಿ ಯೋಚನೆ ಮಾಡಬೇಕಾದ ಇನ್ನೊಂದು ಸಂಗತಿಯೆಂದರೆ,  ‘ಮಹಾ’ ಎನ್ನುವುದು ಮುಖ್ಯವಾಗಿ ಕವಿಯ ಅಥವಾ ಕಾವ್ಯದಲ್ಲಿ ವ್ಯಕ್ತವಾಗುವ ಸತ್ವಾತಿಶಯವನ್ನು ಕುರಿತದ್ದಾದರೆ, ಈ ಸತ್ವ, ಮಹಾಕವಿಯೊಬ್ಬನ ಏಕ ಹಾಗೂ ಅಖಂಡವಾದ ಮಹಾಕಾವ್ಯದಲ್ಲಿ ಕಾಣುವಂತೆ, ಬಿಡಿ ಬಿಡಿಯಾದ ಅನೇಕ ಭಾವಗೀತೆಗಳನ್ನು ಬರೆದ ಕವಿಯ ಸಮಗ್ರ ಸಾಹಿತ್ಯಾಭಿವ್ಯಕ್ತಿಯನ್ನು ಒಟ್ಟಿಗೇ ಇರಿಸಿಕೊಂಡು ನೋಡಿದಾಗಲೂ ಕಾಣುವುದಿಲ್ಲವೆ? ಮಹಾಕಾವ್ಯ ಬರೆದ ‘ಮಹಾಕವಿ’, ಭಾವಗೀತೆ -ಯನ್ನು ಬರೆದ ‘ಮಹಾಕವಿಯಲ್ಲದ ಕವಿ’ ಹೀಗೆ ವಿಭಾಗ ಮಾಡುವುದು ಸರಿಯೆ? ಮಹಾಕಾವ್ಯವನ್ನು ಬರೆಯದೆಯೆ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ ರವೀಂದ್ರನಾಥ ಟ್ಯಾಗೂರ್ ಅವರಂಥವರನ್ನು ‘ಮಹಾಕವಿ’ ಎಂದು ಕರೆಯದೆ ಇರುವುದು ಸರಿಯೆ? – ಎನ್ನುವ ಸಮಸ್ಯೆಗಳಿವೆ. ಇರುವ ಪರಿಹಾರವೆಂದರೆ, ಮಹಾಕಾವ್ಯವನ್ನೆ ಬರೆದಿರಲಿ, ಭಾವಗೀತೆಗಳನ್ನೆ ಬರೆದಿರಲಿ, ಕಾದಂಬರಿಗಳನ್ನೆ ಬರೆದಿರಲಿ, ಸಣ್ಣ ಕಥೆಗಳನ್ನೆ ಬರೆದಿರಲಿ ಅವರೆಲ್ಲರನ್ನೂ, ಅವರ ಕೃತಿಯಲ್ಲಿ ವ್ಯಾಪಕವಾಗಿರುವ ಸಮಗ್ರ ಸತ್ವಾತಿಶಯ -ವನ್ನು ಗಮನಿಸಿ ‘ಮಹಾಕವಿ’, ‘ಮಹಾಕಾದಂಬರಿಕಾರ’ ಹೀಗೆ ಕರೆಯುವುದು; ಇಲ್ಲವೆ, ಟಿ.ಎಸ್.ಇಲಿಯಟ್ ಸೂಚಿಸುವ ಹಾಗೆ Major Poet (ಪ್ರಮುಖ ಕವಿ) ಮತ್ತು Minor poet (ಪ್ರಮುಖನಲ್ಲದ ಕವಿ) ಎಂದು ಕರೆಯುವುದು. ಬಹುಶಃ ರಾಜಾಸ್ಥಾನ -ಗಳಿಲ್ಲದ, ಬಿರುದು – ಬಾವಲಿ ಸನ್ಮಾನಗಳಿಗಾಗಿಯೇ ಕಾವ್ಯವನ್ನು ಬರೆಯದ, ಹಾಗೂ ಯಾವ ‘ಅಧಿಕಾರ’ಗಳನ್ನೂ ಆಶ್ರಯಿಸದ ಇಂದಿನ ಪರಿಸ್ಥಿತಿಯಲ್ಲಿ, ಕವಿಗಳು, ತಮ್ಮ ಹೆಸರಿನ ಹಿಂದೆ ‘ಮಹಾ’ ಎಂಬುದನ್ನು ಅಂಟಿಸಿಕೊಳ್ಳುವ ಬಗೆಗೆ ಅಷ್ಟೊಂದು ಆಸಕ್ತರಾಗಿದ್ದಾರೆ ಎಂದು ನಾವು ಭಾವಿಸಲಾರೆವು. ನಿಜವಾದ ಕವಿಯನ್ನು, ಬರಿದೆ ಕವಿಯೆಂದು ಕರೆದರೆ ಸಾಕು; ಕವಿಗೆ, ನಿಜವಾದ ಕವಿಗೆ ‘ಮಹಾ’ ಎಂಬ ರೆಕ್ಕೆ ಪುಕ್ಕಗಳು ಬೇಕಾಗಿಲ್ಲ. ಹಾಗೆಂದರೆ ಕವಿಗಳಲ್ಲಿ ತರತಮಗಳಿಲ್ಲವೆಂದು ಅರ್ಥವಲ್ಲ. ಈ “ಲೋಕದಲ್ಲಿ ಕವಿಗಳಿಗೆ ಬರುವ ಪ್ರತಿಷ್ಠೆ ಅವರ ಪ್ರತಿಭೆಯ ತಾರತಾಮ್ಯವನ್ನು ಅವಲಂಬಿಸಿ ಬೇರೆ ಬೇರೆ ಯಾಗಿರುತ್ತದೆ”[3]– ಎಂದು ರಾಜಶೇಖರನೆಂಬ ಲಾಕ್ಷಣಿಕ ಹೇಳಿದ ಮಾತು ನಿಜ.

ಆದರೆ ಭಾವಗೀತೆ ಮತ್ತಿತರ ಬಿಡಿ ಬಿಡಿ ಸಾಹಿತ್ಯಾಭಿವ್ಯಕ್ತಿಗಳು ಉಂಟು ಮಾಡುವ ಪರಿಣಾಮಕ್ಕೂ, ಮಹಾಕಾವ್ಯ ಉಂಟುಮಾಡುವ ಪರಿಣಾಮಕ್ಕೂ, ವ್ಯತ್ಯಾಸವಿದೆ. ಮಹಾಕಾವ್ಯ ಒಂದು ಕಥೆಯ ಹಂದರದ ಮೇಲೆ ಹಬ್ಬಿದ ವಿವಿಧಾನುಭವಗಳ ಸಮಷ್ಟಿಯಂತಿದೆ. “ಮಹಾಕಾವ್ಯದ ರಚನೆ, ಒಂದು ದೊಡ್ಡ ಕಮಾನಿನಂತೆ (arch); ಅದರ ಮೂಲಕ ಒಂದು ಕಡೆಗೆ ಭೂತಕಾಲವನ್ನು ನೋಡಿದರೆ, ಇನ್ನೊಂದೆಡೆಗೆ ಭವಿಷ್ಯತ್ತನ್ನೂ ನೋಡಬಹುದು”[4]. ಇತರ ಸಾಹಿತ್ಯ ಪ್ರಕಾರಗಳಲ್ಲಿ, ಸಾಧ್ಯವಾಗದ, ಅನುಭವದ ಹರಹನ್ನು ಮಹಾಕಾವ್ಯದಲ್ಲಿ ಕಾಣಬಹುದು. ಬದುಕಿನ ಚಿರಂತನ ಸಮಸ್ಯೆಗಳಿಗೆ, ಎಲ್ಲ ರೀತಿಯ ಸಂಘರ್ಷಗಳಿಗೆ ಮಹಾಕಾವ್ಯ ಎನ್ನುವುದು ಅತ್ಯುತ್ತಮ ಮಾಧ್ಯಮವಾಗಿದೆ. ಅದಕ್ಕಿರುವ ಕಥೆಯೊಂದರ ತಡಿಕೆ, ಮತ್ತು ಈ ಕಥೆಗಿರುವ ಜನಪ್ರಿಯತೆ, ಕಥೆಯ ನಿಮಿತ್ತವಾಗಿ ಅದು ಸಮಸ್ತ ಜೀವನಾನುಭವಗಳನ್ನು ಹೇಳಲು ಮಾಡಿಕೊಳ್ಳುವ ಅವಕಾಶ, ಮಹಾಕಾವ್ಯಕ್ಕಿರುವಂತೆ ಬೇರೆಯ ಕಾವ್ಯಪ್ರಕಾರಗಳಿಗೆ ಇಲ್ಲ. ಮಹಾಕಾವ್ಯ ಅನೇಕ ರೀತಿಯ ಸ್ತರದ ಜನಕ್ಕೆ, ಏಕಕಾಲದಲ್ಲಿ ಆಸ್ವಾದ್ಯವಾಗಬಲ್ಲದು. “ಅರಸುಗಳಿಗಿದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗೀಶ್ವರರ ತತ್ವ ವಿಚಾರ, ಮಂತ್ರೀ ಜನಕೆ ಬುದ್ಧಿ ಗುಣ” – ಇತ್ಯಾದಿಯಾಗಿ ಯಾರ‍್ಯಾರಿಗೆ ಏನುಬೇಕೋ ಅದನ್ನು ಕೊಡಬಲ್ಲದು ಎಂದು ಹೇಳಿದ ಕುಮಾರವ್ಯಾಸನ ಮಾತು ಇದಕ್ಕೆ ಸಾಕ್ಷಿಯಾಗಿದೆ. ಆದುದರಿಂದಲೇ ಇಂದಿಗೂ ಮಹಾಕಾವ್ಯಗಳು ನಮ್ಮಲ್ಲಿ, ಜನರ ಗೌರವಾದರಗಳನ್ನು ಕಳೆದುಕೊಂಡಿಲ್ಲ. ರಾಮಾಯಣ ಮಹಾಭಾರತಗಳಂತಹ ಮಹಾಕಾವ್ಯಗಳು, ಈ ಜನದ ಬದುಕಿನ ಮೇಲೆ ಮಾಡಿರುವ, ಮಾಡುತ್ತಿರುವ ಪರಿಣಾಮಗಳು ಅಗಾಧವಾಗಿವೆ; ಕಾಲದಿಂದ ಕಾಲಕ್ಕೆ ಎಲ್ಲ ಭಾಷೆಯ ಕವಿಗಳ ಮೂಲಕ ‘ಮಹಾಕಾವ್ಯ’ಗಳಾಗಿ ಮೂಡುತ್ತ ಬಂದಿವೆ. ಇದರ ಅರ್ಥ, ಮಹಾಕಾವ್ಯದ ಪರಂಪರೆ ನಮ್ಮಲ್ಲಿ ಇನ್ನೂ ಚಿರಂತನವಾಗಿದೆ.

ಅನುಬಂಧ -೧

ಈ ಕೃತಿಯಲ್ಲಿ ಉಲ್ಲೇಖಿಸಲಾಗಿರುವ ಕೆಲವು ಮಹಾಕಾವ್ಯಗಳ ಪರಿಚಯ

ಇಲಿಯಡ್

ಪ್ರಾಚೀನ ಗ್ರೀಕ್ ಸಾಹಿತ್ಯದ ಕೊಡುಗೆಗಳಲ್ಲಿ ‘ಇಲಿಯಡ್’ ಅತ್ಯಂತ ಬೆಲೆ ಬಾಳುವ ಮಹಾಕಾವ್ಯ,. ‘ಇಲಿಯಡ್’ ಮತ್ತು ‘ಒಡೆಸ್ಸಿ’ – ಈ ಎರಡೂ ಕಾವ್ಯಗಳನ್ನು ಹೋಮರ್ ಎನ್ನುವ ಕವಿ ರಚಿಸಿದನೆಂದು ಹೇಳಲಾದರೂ, ಇದರ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಈ ಮಹಾಕಾವ್ಯ ಒಬ್ಬ ಕವಿಯ ರಚನೆಯಲ್ಲವೆಂದೂ – ಜನಾಂಗದ ಸಮಷ್ಟಿ ರಚನೆ ಇದು ಎಂಬ ಅಭಿಪ್ರಾಯ ಕೂಡಾ ಇದೆ. ಈ ಕೃತಿಗಳನ್ನು ರಚಿಸಿದನೆಂದು ಹೇಳಲಾಗಿರುವ ಹೋಮರನು ಕ್ರಿ. ಪೂ. ೮ನೆಯ ಶತಮಾನದ ಸುಮಾರಿಗೆ ಇದ್ದಿರಬೇಕು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಗ್ರೀಕರಿಗೂ ಟ್ರಾಯ್ ನಿವಾಸಿಗಳಿಗೂ ನಡೆದ ಯುದ್ಧವೇ ಇದರ ವಸ್ತು, ಅದರಲ್ಲಿಯೂ ಗ್ರೀಕರ ಶ್ರೇಷ್ಠ ವೀರನಾದ ಅಖಿಲೀಸ್‌ನ  ರೋಷವೇ ಪ್ರಧಾನವಾದದ್ದು. ಯುದ್ಧದ ಕಡೆಯ ಕೆಲವು ಭಾಗಗಳನ್ನು ಮಾತ್ರ ಈ ಕಾವ್ಯದ ಹರಹು ಒಳಗೊಳ್ಳುತ್ತದೆ. ಇಪ್ಪತ್ತನಾಲ್ಕು ಕಾಂಡಗಳ ಈ ಕಾವ್ಯ ಒಟ್ಟು ಗ್ರೀಕ್ ಬದುಕನ್ನೇ ಕುರಿತದ್ದು ಎನ್ನಬಹುದು.

ಕಾವ್ಯ ಶುರುವಾಗುವುದೇ ಗ್ರೀಕರ ಇಬ್ಬರು ಪ್ರಮುಖ ಯೋಧರಾದ ಅಗಮೆಮ್ನಾನ್ ಮತ್ತು ಅಖಿಲೀಸ್‌ರ ನಡುವಿನ ಜಗಳದಿಂದ. ಅಗಮೆಮ್ನಾನ್ ತನ್ನ ದಾಸಿಯಾದ ಕೆಸಿಯಸ್‌ಳನ್ನು ಬಿಟ್ಟುಕೊಡಬೇಕಾಗಿ ಬಂದದ್ದಕ್ಕೆ ಅಖಿಲೀಸ್‌ನ ದಾಸಿಯಾದ ಬ್ರೇಸಿಯಸಳನ್ನೂ ಬಲವಂತದಿಂದ ತಂದಿಟ್ಟುಕೊಳ್ಳುತ್ತಾನೆ. ಇಂತಹ ಅಪಮಾನವನ್ನು ಅಖಿಲೀಸ್ ಸಹಿಸಲಾಗದೆ ತಾನು ಗ್ರೀಕರ ಪರವಾಗಿ ಯುದ್ಧ ಮಾಡುವುದಿಲ್ಲ ಎಂದು ಶಪಥ ಮಾಡುತ್ತಾನೆ. ಈತನ ತಾಯಿ ಥೆಟಿಸ್ ಕೂಡಾ ದೇವನಾದ ಜೂಸ್ ಬಳಿ ದೂರಿತ್ತು ತನ್ನ ಮಗನಿಗೆ ಅಪಮಾನ ಮಾಡಿದ ಗ್ರೀಕರಿಗೆ ಬುದ್ಧಿಕಲಿಸುವಂತೆ ಕೇಳಿಕೊಳ್ಳುತ್ತಾಳೆ.

ಜೂಸ್ ಅಗಮೆಮ್ನಾನ್‌ನಿಗೆ ಯುದ್ಧ ಮಾಡಲು ಸೂಚಿಸುತ್ತಾನೆ. ಯುದ್ಧದಲ್ಲಿ ದೇವತೆಗಳು ಸಹ ತಮತಮಗೆ ಇಷ್ಟ ಬಂದ ಪಕ್ಷ ವಹಿಸಿ ತಾವೂ ಯುದ್ಧದಲ್ಲಿ ಭಾವಗಹಿಸುತ್ತಾರೆ. ಯುದ್ಧದ ತಕ್ಕಡಿ ಅನೇಕ ಬಾರಿ ಏರುಪೇರಾಗುವುದಕ್ಕೆ ಈ ದೇವತೆಗಳೇ ಕಾರಣ. ಗ್ರೀಕ್ ಸುಂದರಿಯಾದ ಹೆಲೆನ್‌ಳನ್ನು ಹಾರಿಸಿಕೊಂಡು ಬಂದು ಯುದ್ಧಕ್ಕೆ ಕಾರಣನಾಗಿದ್ದ ಪ್ಯಾರಿಸ್ ಕೂಡಾ ಯುದ್ಧದಲ್ಲಿ ಸಾಯುತ್ತಾನೆ. ನಂತರ ಪ್ಯಾರಿಸ್‌ನ ಅಣ್ಣನಾದ ಹೆಕ್ಟರ್ ಯುದ್ಧರಂಗಕ್ಕೆ ಪ್ರವೇಶಿಸುತ್ತಾನೆ. ಯುದ್ಧಕ್ಕೆ ಬರುವುದಕ್ಕಿಂತ ಮುಂಚೆ ಈತ ತನ್ನ ಪತ್ನಿ ಮತ್ತು ಮಗುವಿನ ಜೊತೆಗೆ ಭೇಟಿ ಮಾಡುವ ಸನ್ನಿವೇಶ ‘ಇಲಿಯಡ್’ ಕಾವ್ಯದ ಮಾನವೀಯ ಸನ್ನಿವೇಶಗಳಲ್ಲಿ ಒಂದು. ಈತ ಬಂದು ಗ್ರೀಕರ ನಾವೆಗಳಿಗೆ ಬೆಂಕಿಯಿಡಲು ಯತ್ನಿಸುತ್ತಾನೆ. ಅಖಿಲೀಸ್‌ನ ಪ್ರಾಣ ಸ್ನೇಹಿತನಾದ ಪೆಟ್ರಾಕ್ಲಿಸ್ ಬಂದು ಅಖಿಲೀಸ್‌ನನ್ನು ಯುದ್ಧಕ್ಕೆ ಹೋಗುವಂತೆ ಬೇಡಿಕೊಂಡರೂ ಒಪ್ಪದ ಅಖಿಲೀಸ್ ಆತನಿಗೇ ತನ್ನ ಯುದ್ಧ ಕವಚವನ್ನು ಕೊಟ್ಟು ಯುದ್ಧ ಮಾಡುವಂತೆ ಕಳುಹಿಸುತ್ತಾನೆ. ಹೆಕ್ಟರ್ ಪೆಟ್ರಾಕ್ಲಿಸ್‌ನನ್ನು ಕೊಂದು ಅವನ ಕವಚವನ್ನು ಕಿತ್ತಿಟ್ಟುಕೊಳ್ಳುತ್ತಾನೆ. ಪ್ರಾಣ ಸ್ನೇಹಿತನ ಮರಣದಿಂದ ಉದ್ರಿಕ್ತನಾದ ಅಖಿಲೀಸ್‌ನಿಗೆ ಅವನ ತಾಯಿ, ಹೆಫೇಸ್ಟಸ್‌ನಿಂದ ಒಂದು ಗುರಾಣಿ ಮಾಡಿಸಿ ತರುತ್ತಾಳೆ. (ಈ ಗುರಾಣಿಯ ಮೇಲಿನ ಗ್ರೀಕ್ ಬದುಕಿನ ಚಿತ್ರಗಳು ಈ ಕಾವ್ಯದ ಹಿಂದಿರುವ ತಾತ್ವಿಕ ಹಿನ್ನೆಲೆಯನ್ನು ತಿಳಿಸುತ್ತವೆ.)

ಉಗ್ರಾವತಾರಿ ಅಖಿಲೀಸ್ ಹೆಕ್ಟರನನ್ನು ಕೊಂದು ಅವನ ಶವವನ್ನು ತನ್ನ ರಥದ ಗಾಲಿಗೆ ಕಟ್ಟಿ ತನ್ನ ಶಿಬಿರಕ್ಕೆ ಎಳೆದು ತರುತ್ತಾನೆ. ಇದನ್ನು ಕೇಳಿದ ಹೆಕ್ಟರನ ಮುದಿ ತಂದೆಯ ಜೀವ ತಲ್ಲಣಿಸುತ್ತದೆ. ಆತ ಅಖಿಲೀಸ್‌ನ ಶಿಬಿರಕ್ಕೆ ಬಂದು ತನ್ನ ಮಗನ ಶವವನ್ನು ಕೊಡುವಂತೆ ಬೇಡುವ ದೃಶ್ಯವಂತೂ ಅತ್ಯಂತ ಹೃದಯಂಗಮವಾದದ್ದು. ಈ ಮುದುಕನನ್ನು ಕಂಡು ಮನಕರಗಿ ಅಖಿಲೀಸ್ ಆ ದೇಹವನ್ನು ತಂದೆಗೆ ವಾಪಸು ಕೊಡುತ್ತಾನೆ. ಹೆಕ್ಟರನ ಶವಸಂಸ್ಕಾರದೊಂದಿಗೆ ಕಾವ್ಯ ಮುಗಿಯುತ್ತದೆ.

ಇಷ್ಟು ಸೂಕ್ಷ್ಮ ಮಾನವೀಯ ಕಂಪನಗಳನ್ನೊಳಗೊಂಡ ಈ ಕಾವ್ಯದ ವಸ್ತುವನ್ನು ‘ಅಖಿಲೀಸ್‌ನ ರೋಷ’ ಎಂದಷ್ಟೇ ಹೇಳಿದರೆ ಕಾವ್ಯದ ಘನತೆಗೆ ಕುಂದು ಬಗೆದಂತೆ. ಬೆಂಕಿ, ನೀರು ಮುಂತಾದ ನೈಸರ್ಗಿಕ ಶಕ್ತಿಗಳು ಈ ಕಾವ್ಯದಲ್ಲಿ ನಿರ್ವಹಿಸುವ ಕ್ರಿಯೆ ಕಾವ್ಯಕ್ಕೆ ವಿಶಿಷ್ಟ ಅರ್ಥವಂತಿಕೆಯನ್ನು ನೀಡುತ್ತದೆ. ಹೋಮರನ ಕಾವ್ಯಗಳ ಉಪಮೆಗಳಂತೂ ಹೋಮರನ ಉಪಮೆಗಳು (Homeric similes) ಎನ್ನುವ ಪ್ರಕಾರವೊಂದನ್ನೇ ನಿರ್ಮಿಸಿವೆ. ಒಂದು ಸನ್ನಿವೇಶದ, ವ್ಯಕ್ತಿಯ ನಡವಳಿಕೆಯನ್ನು, ನಿಸರ್ಗದ್ದೋ, ಗ್ರೀಕ್ ಬದುಕಿನದೋ ಆದ ಒಂದು ಉಪಮೆಯಿಂದ ಉನ್ನತೀಕರಿಸುವ ತತ್ವ ‘ಇಲಿಯಡ್’ ಕಾವ್ಯದಲ್ಲಿನ ಶ್ರೇಷ್ಠತೆಯ ಅಂಶಗಳಲ್ಲೊಂದು. ಮಹಾಕಾವ್ಯಗಳಲ್ಲಿನ ಪ್ರಮುಖ ಗುಣವಾದ ‘ಸೃಷ್ಟಿ ಸಮಗ್ರತೆ’ (totality of things) ಯ ಅತ್ಯುತ್ತಮ ಮಾದರಿ ಇಲಿಯಡ್ ಕಾವ್ಯ. ಮನುಷ್ಯ ಜಗತ್ತಿನ ಸೂಕ್ಷ್ಮಗಳು, ಅವನ ದೌರ್ಬಲ್ಯಗಳಾಚೆಯ ಉದಾತ್ತತೆ, ದೇವರುಗಳ ಸಣ್ಣತನ ಮುಂತಾದವುಗಳ ಪ್ರಭಾವಶಾಲೀ ಚಿತ್ರಣದಿಂದಾಗಿ ಇಲಿಯಡ್ ಕಾವ್ಯವನ್ನು ಯೂರೋಪಿನ ಮಹಾಕಾವ್ಯಗಳ ತಾಯಿ ಎಂದು ಕರೆಯುವುದು ಅತಿಶಯೋಕ್ತಿಯೇನಲ್ಲ.

ಒಡಿಸ್ಸಿ

‘ಇಲಿಯಡ್’ ಕಾವ್ಯದ ಕಥೆಯೇ ‘ಒಡಿಸ್ಸಿ’ಯಲ್ಲಿ ಮುಂದುವರಿಯುತ್ತದೆ. ಟ್ರೋಜನ್ ಯುದ್ಧದ ನಂತರ ಗ್ರೀಕ್ ಯೋಧ ಒಡಿಸ್ಸಿಯಸ್ ಹತ್ತು ವರ್ಷಗಳ ಅಲೆದಾಟದ ನಂತರ ಮನೆಗೆ ಬಂದು ಸೇರುವುದು ಇದರ ವಸ್ತು. ಆತನ ಅಲೆದಾಟ ಹತ್ತು ವರ್ಷವಾದರೂ ಈ ಕಾವ್ಯ ಒಳಗೊಳ್ಳುವುದು ಕೊನೆಯ ಆರುವಾರಗಳ ಕ್ರಿಯೆಯನ್ನು ಮಾತ್ರ. ೨೪ ಕಾಂಡಗಳ ಈ ಕಾವ್ಯದಲ್ಲಿ ಕಡೆಯ ದಿನಗಳ ವೃತ್ತಾಂತವನ್ನು ಮೊದಲು ಹೇಳಿ ನಂತರ ಮೊದಲಿನ ವರ್ಷಗಳ ಅಲೆದಾಟವನ್ನು ವರ್ಣಿಸಲಾಗಿದೆ.

ಕಾವ್ಯದ ಪ್ರಾರಂಭದಲ್ಲಿ ಒಡಿಸ್ಸಿಯಸ್ ಕಲಿಪ್ಸೋ ಎಂಬ ದೇವತೆಯ ಆಶ್ರಯದಲ್ಲಿ ಇರುತ್ತಾನೆ. ಆಕೆಗೂ ಅವನ ಮೇಲೆ ಉತ್ಕಟವಾದ ಪ್ರೇಮ. ಒಡಿಸ್ಸಿಯಸ್ ತನ್ನ ಜೊತೆಯಲ್ಲಿ ಇರುವುದಾದರೆ ಅಮರತ್ವವನ್ನು ಕೊಡುವುದಾಗಿ ಪ್ರಲೋಭನೆ ಬೇರೆ ಹಾಕುತ್ತಾಳೆ. ಆದರೆ ಒಡಿಸ್ಸಿಯಸ್‌ನಿಗೆ ಮಡದಿ – ಮಗನ ಸೆಳೆತ ತೀವ್ರವಾದದ್ದು. ಅದಕ್ಕೆ ಆತ ಒಪ್ಪಿಗೆಯನ್ನು ಕೊಡುವುದಿಲ್ಲ. ಇತ್ತ ಮನೆಯ ಕಡೆ ಆತನ ಮಗ ಟೆಲಿಮಾಕಸ್ ಬೆಳೆದು ದೊಡ್ಡವನಾಗಿದ್ದಾನೆ. ಪೆನಲೋಪೆಯನ್ನು ಮದುವೆಯಾಗಿ ರಾಜ್ಯಕ್ಕೆ ಒಡೆಯರಾಗಲು ಸ್ಪರ್ಧಿಗಳ ಪರಸ್ಪರ ಪೈಪೋಟಿ ಬೆಳೆಯುತ್ತದೆ. ಅಥೀನ ದೈವತೆಯ ಕೃಪಾರಕ್ಷೆ ಒಡಿಸ್ಸಿಯಸ್ಸನ ಮತ್ತು ಆತನ ಕುಟುಂಬದ ಮೇಲಿರುತ್ತದೆ. ಆಕೆಯ ಸಲಹೆಯಂತೆ ಟೆಲಿಮಾಕಸ್ ತನ್ನ ತಂದೆಯ ಬಗ್ಗೆ ಮಾಹಿತಿ ಪಡೆಯಲು ಪೈಲಾಸ್‌ನ ನೆಸ್ಟರ್ ಮತ್ತು ಸ್ಪಾರ್ಟದ ಮೆನಲೇಯಸ್‌ನ ಬಳಿಗೆ ಹೋಗಿ ಮಾತುಕತೆ ನಡೆಸುತ್ತಾನೆ. ಒಡಿಸ್ಸಿಯಸ್ ಬದುಕಿದ್ದಾನೆಂದೂ, ಖಂಡಿತ ಮನೆಗೆ ಬರುತ್ತಾನೆಂದೂ ಮೆನಲೇಯಸ್ ಆಶ್ವಾಸನೆ ನೀಡಿದ ಬಳಿಕ ಟೆಲಿಮಾಕಸ್‌ನ ಮನಸ್ಸಿಗೆ ಸಾಂತ್ವನ ದೊರೆಯುತ್ತದೆ.

ಒಡಿಸ್ಸಿಯಸ್ ತನ್ನ ಅಲೆದಾಟದಲ್ಲಿ ಪೊಸೈಡಾನ್ ಎಂಬ ಸಮುದ್ರ ದೇವತೆಯ ಮಗನಾದ ಪಾಲಿಫೀಮಸ್ ಎಂಬ ರಾಕ್ಷಸನ ಕಣ್ಣನ್ನು ಕುರುಡು ಮಾಡಿರುತ್ತಾನೆ. ಆ ಕಾರಣಕ್ಕಾಗಿ ಪೊಸೈಡಾನ್‌ಗೆ ಒಡಿಸ್ಸಿಯಸ್ಸನ ಮೇಲೆ ಭಯಂಕರ ದ್ವೇಷ. ಒಡಿಸ್ಸಿಯಸ್ಸನನ್ನು ಕಾಪಾಡಿಕೊಂಡು ಬಂದ ಅಥೀನ, ದೇವತೆಗಳ ಸಭೆಯಲ್ಲಿ ಪೊಸೈಡಾನ್ ಇಲ್ಲದಾಗ ಒಡಿಸ್ಸಿಯಸ್‌ನನ್ನು ಹೇಗಾದರೂ ಮಾಡಿ ಮನೆಗೆ ತಲುಪಿಸಬೇಕೆಂದು ಜ್ಯೂಸ್ ದೇವತೆಯನ್ನು ಬೇಡಿಕೊಳ್ಳುತ್ತಾಳೆ. ಈ ಮಧ್ಯೆ ಒಡಿಸ್ಸಿಯಸ್ ತಾನೇ ಒಂದು ಹಡಗು ಕಟ್ಟಿಕೊಂಡು ಪ್ರಯಾಣ ಹೊರಟಾಗ ಪೊಸೈಡಾನ್ ಮತ್ತೆ ಅವನ ಹಡಗನ್ನು ನಾಶಮಾಡುತ್ತಾನೆ. ಅದೃಷ್ಟಬಲದಿಂದ ಪಾರಾದ ಒಡಿಸ್ಸಿಯಸ್ಸನ್ನು ರಾಜಕುಮಾರಿ ನೌಸಿಕಾ ತನ್ನ ತಂದೆ ತಾಯಿಗಳ ಬಳಿಗೆ ಒಯ್ಯುತ್ತಾಳೆ. ಅವರು ನೀಡಿದ ಆತಿಥ್ಯವನ್ನು ಸ್ವೀಕರಿಸಿ ತನ್ನ ಹಿಂದಿನ ವರ್ಷಗಳ ಅಲೆದಾಟವನ್ನು ಸವಿಸ್ತಾರವಾಗಿ ವರ್ಣಿಸುತ್ತಾನೆ. ಒಡಿಸ್ಸಿಯಸ್ಸನು ಪ್ರಯಾಣ ಮಾಡಿದ ಅನೇಕ ಪ್ರದೇಶಗಳ ಅದ್ಭುತಗಳು, ಸಿಸೋನಿಯರ ಪಟ್ಟಣವನ್ನು ಕೊಳ್ಳೆ ಹೊಡೆದದ್ದು, ಪಾಲಿಫೀಮಸ್ ರಾಕ್ಷಸನೊಡನೆ ಹೋರಾಟ, ಮಾಟಗಾತಿ ಸರ್ಸ್ ಪರಿಚಯ- ಇಂತಹ ನಂಬಲು ಅಸಾಧ್ಯವಾಗುವ ಅನೇಕ ಸಂಗತಿಗಳನ್ನು ಕವಿ ಅತ್ಯಂತ ರೋಮಾಂಚಕಾರಿಯಾಗಿ ವರ್ಣಿಸಿದ್ದಾನೆ. ಇದನ್ನೆಲ್ಲಾ ಕೇಳಿದ ರಾಜಕುಮಾರಿ ನೌಸಿಕಾಳ ತಂದೆತಾಯಿಗಳು ಒಡಿಸ್ಸಿಯಸ್ಸನನ್ನು ಹಡಗೊಂದರಲ್ಲಿ ಅವನ ಊರಾದ ಇಥಾಕಾ ನಗರಕ್ಕೆ ಕಳಿಸುತ್ತಾರೆ.

ಇಥಾಕಾ ನಗರದಲ್ಲಿ ಪೆನಲೋಪೆ ಬಂದ ಗಂಡುಗಳನ್ನು ನೆಪ ಹೇಳಿ ದೂರ ಕಳುಹಿಸುತ್ತಿದ್ದರೂ – ಯಾರನ್ನಾದರೂ ಮದುವೆಯಾಗಲೇಬೇಕಾಗಿ ಬಂದರೆ, ತನ್ನ ಗಂಡನಾದ ಒಡಿಸ್ಸಿಯಸ್‌ನ ಬಿಲ್ಲನ್ನು ಹೆದೆಯೇರಿಸಿ ಬಾಣ ಹೂಡಿದವರನ್ನು ಮಾತ್ರ ಮದುವೆಯಾಗುವುದಾಗಿ ಷರತ್ತು ಹಾಕುತ್ತಾಳೆ. ತನ್ನ ಗಂಡನಲ್ಲದೆ ಬೇರೆ ಯಾರ ಕೈಯ್ಯಲ್ಲೂ ಅದನ್ನು ಹೆದೆಯೇರಿಸಲು ಸಾಧ್ಯವಿಲ್ಲವೆಂದು ಅವಳ ದೃಢ ನಂಬಿಕೆ. ಈ ಷರತ್ತಿನ ಪರೀಕ್ಷೆಯ ದಿನದ ಹಿಂದಿನ ದಿನವೇ ಒಡಿಸ್ಸಿಯಸ್ ಇಥಾಕಾ ನಗರಕ್ಕೆ ಭಿಕ್ಷುಕನ ವೇಷದಲ್ಲಿ ಬರುತ್ತಾನೆ. ಅಥೀನ ಅವನಿಗೆ ಟೆಲಿಮಾಕಸನನ್ನೆ ಭೇಟಿ ಮಾಡಿಸುತ್ತಾಳೆ. ತಾನು ಸಣ್ಣ ಮಗುವಾಗಿದ್ದಾಗ ನೋಡಿದ ಮಗನು ನಂಬಲಾರದಷ್ಟು ಬೆಳೆದು ನಿಂತಿದ್ದಾನೆ. ನಂತರ ತಂದೆಮಕ್ಕಳಿಬ್ಬರು ಪೆನಲೋಪೆಯನ್ನು ವರಿಸಲು ಕಾಡುತ್ತಿದ್ದ ಜನರನ್ನು ಬಲಿ ಹಾಕಲು ಸಂಚು ಹೂಡುತ್ತಾರೆ. ಇಲ್ಲಿಂದಾಚೆಗೆ, ಅಂದರೆ ಮನೆಗೆ ಪ್ರವೇಶಿಸುವಾಗಿನಿಂದ ಹಿಡಿದು ಪೆನಲೋ ಪೆಯನ್ನು ಕಾಡುತ್ತಿದ್ದವರನ್ನು ಸೋಲಿಸುವ ತನಕದ ಏಳು ಕಾಂಡಗಳು ಈ ಕಾವ್ಯದ ಅತ್ಯುತ್ಕೃಷ್ಟ ಭಾಗಗಳು. ಅನೇಕ ಮಾನವೀಯ ಸಂಘರ್ಷಗಳ ಆತ್ಮೀಯ ಚಿತ್ರಣವನ್ನು ಇಲ್ಲಿ ಕಾಣಬಹುದು. ಇಪ್ಪತ್ತು ವರ್ಷಗಳ ನಂತರ ತನ್ನ ಯಜಮಾನನನ್ನು ಕಂಡು ಒಡಿಸ್ಸಿಯಸ್‌ನ ನಾಯಿ ಪ್ರೀತಿಯ ಉತ್ಕಟತೆಯಿಂದ ಪ್ರಾಣ ಬಿಡುವುದು, ಒಡಿಸ್ಸಿಯಸ್‌ನ ಹಳೆಯ ದಾದಿ ಅವನ ಕಾಲಮೇಲಿನ ಗಾಯದಿಂದ ಅವನನ್ನು ಗುರುತು ಹಚ್ಚುವುದು, ಪೆನಲೋಪೆ ಮತ್ತು ಒಡಿಸ್ಸಿಯಸ್‌ರ ಮೊದಲ ಮಾತುಕತೆ-ಮುಂತಾದ ಕೆಲವು ಸಂದರ್ಭಗಳು ಅತ್ಯಂತ ಮಾನವೀಯ ಭಾಗಗಳೆಂದು ಹೇಳಬಹುದು. ಎಲ್ಲಾ ಶತ್ರುಗಳನ್ನು ಸೋಲಿಸಿದ ನಂತರ ಒಡಿಸ್ಸಿಯಸ್ ಪೆನಲೋಪೆಯರ ಮಿಲನವಾಗುತ್ತದೆ.

ಸರಳತೆ ಮತ್ತು ಕಥಾ ನಿರೂಪಣೆಯಲ್ಲಿ ಖಚಿತತೆ ಹೋಮರನ ಕಾವ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದು; ಗ್ರೀಕ್ ಬದುಕಿನ ಮೌಲ್ಯಗಳ ಸಜೀವ ಪ್ರತಿಬಿಂಬವನ್ನು ನಾವು ಒಡಿಸ್ಸಿಯಲ್ಲಿ ಕಾಣಬಹುದು. ಅನೇಕ ವಿಮರ್ಶಕರ ದೃಷ್ಟಿಯಲ್ಲಿ ‘ಒಡಿಸ್ಸಿ’ ಕಾವ್ಯವೇ ಕಲಾತ್ಮಕವಾಗಿ ಹೆಚ್ಚು ಯಶಸ್ವಿಯಾದುದು. ಇಡೀ ಕಾವ್ಯ ಏನನ್ನು ಹೇಳುತ್ತದೆ ಎಂದು ಒಂದೇ ಸೂತ್ರದಲ್ಲಿ ಹೇಳುವುದು ಕಷ್ಟ. ಬದುಕಿಗಿರುವಷ್ಟೇ ಅರ್ಥವೈವಿಧ್ಯತೆ ಈ ಕಾವ್ಯಕ್ಕೂ ಇದೆ. ಆ ಕಾರಣಕ್ಕಾಗಿಯೇ ಈ ಕಾವ್ಯದ ಬಂಧ ಜಗತ್ತಿನ ಮಹಾಕಾವ್ಯಗಳಿಗೆ ಇವತ್ತಿಗೂ ಒಂದು ಮಾದರಿಯಾಗಿದೆ.

ಈನಿಯಡ್

ಮಹಾಕವಿ ವರ್ಜಿಲ್ ತನ್ನ ಕೊನೆಯ ದಿನಗಳಲ್ಲಿ ರಚಿಸಿದ ಕೃತಿ ಇದು. ಇದನ್ನು ಪ್ರಕಟಿಸಬಾರದೆಂದು ಅವನ ಇಚ್ಛೆಯಿದ್ದರೂ ಅಗಸ್ಟಸ್ ಚಕ್ರವರ‍್ತಿಯ ಅಪ್ಪಣೆಯ ಮೇರೆಗೆ ಪ್ರಕಟಿಸಲಾಯಿತು. ವರ್ಜಿಲ್ ಕವಿ ಬದುಕುತ್ತಿದ್ದ ಕಾಲ ರೋಮನ್ ಸಾಮ್ರಾಜ್ಯದ ಚರಿತ್ರೆಯಲ್ಲಿ ಒಂದು ಸಂಕ್ರಮಣ ಘಟ್ಟ. ಕ್ರಿ. ಪೂ. ೨೯ರಲ್ಲಿ ಈ ಕೃತಿಯನ್ನು ಬರೆಯಲು ಶುರುಮಾಡಿದ ವರ್ಜಿಲನ ಉದ್ದೇಶ ಒಂದು ರಾಷ್ಟ್ರೀಯ ಮಹಾಕಾವ್ಯವನ್ನು ರಚಿಸುವುದಾಗಿತ್ತು. ಅದಕ್ಕೆಯೇ ಆತ ಆರಿಸಿಕೊಂಡ ವಸ್ತು ಕೂಡ ರೋಮನ್ ಸಾಮ್ರಾಜ್ಯದ ಉಗಮವನ್ನು ಕುರಿತದ್ದು. ಟ್ರಾಯ್ ನಗರದ ಪತನವಾದ ನಂತರ ಈನಿಯಸ್ ಎಂಬ ಟ್ರೋಜನ್ ಯೋಧನ ಇಟಲಿಯ ಪ್ರಯಾಣ ಮತ್ತು ಅಲ್ಲಿ ರೋಮ್ ಸಾಮ್ರಾಜ್ಯವನ್ನು ಹುಟ್ಟು ಹಾಕಿದ ವಸ್ತು, ಕಾವ್ಯದ ೧೨ ಅಧ್ಯಾಯಗಳನ್ನು ಹಬ್ಬಿದೆ. ಈ ಈನಿಯಸ್‌ನ ಪ್ರಯಾಣಕ್ಕೆ ಐತಿಹಾಸಿಕ ಆಧಾರವಿಲ್ಲವಾದರೂ ರೋಮಿನ ಜನತೆಗೆ ಅದೇ ಅಧಿಕೃತ ಚರಿತ್ರೆ. ರೋಮನ್ ಸಾಮ್ರಾಜ್ಯವನ್ನು ಉನ್ನತೀಕರಿಸುವ ಉದ್ದೇಶವಿದ್ದ ವರ್ಜಿಲ್ ಈ ಕಥೆಯನ್ನೇ ತನ್ನ ಕಾವ್ಯದ ವಸ್ತುವನ್ನಾಗಿ ಆರಿಸಿಕೊಂಡಿದ್ದು ಸಹಜ.

ಟ್ರಾಯ್ ನಗರ ನಾಶವಾದ ಮೇಲೆ ಈನಿಯಸ್ ತನ್ನ ಸಂಸಾರದೊಂದಿಗೆ ಪ್ರಯಾಣ ಬೆಳೆಸುತ್ತಾನೆ. ದಾರಿಯಲ್ಲಿ ಡಿಡೋ ರಾಣಿಯ ಭೇಟಿಯಾಗುತ್ತದೆ. ಈ ಪ್ರಸಂಗ ಕಾವ್ಯದ ಶ್ರೇಷ್ಠ ಭಾಗಗಳಲ್ಲೊಂದು. ಡಿಡೋ ರಾಣಿಯ ಸತ್ಕಾರವನ್ನು ಸ್ವೀಕರಿಸಿದ ಈನಿಯಸ್ ತನ್ನ ಪೂರ್ವ ಕಥೆಯನ್ನು ರಾಣಿ ಡಿಡೋಳಿಗೆ ಹೇಳುತ್ತಾನೆ. ಈ ದ್ವೀಪದಲ್ಲಿಯೇ ಆತನ ಹೆಂಡತಿಯ ಸಾವು ಕೂಡ ಸಂಭವಿಸುತ್ತದೆ. ಇದಿಷ್ಟು ಕಾವ್ಯದ ಮೊದಲ ಎರಡು ಕಾಂಡಗಳಲ್ಲಿ ನಡೆಯುತ್ತದೆ. ಮೂರನೆಯ ಕಾಂಡದಲ್ಲಿಯೂ ತನಗೆ ದಾರಿಯಲ್ಲಾದ ಕಷ್ಟನಷ್ಟಗಳು, ತನ್ನ ತಂದೆಯ ಸಾವು ಮುಂತಾದವುಗಳನ್ನು ಸವಿಸ್ತಾರವಾಗಿ ವರ್ಣಿಸುತ್ತಾನೆ. ಆದರೆ ಇಲ್ಲಿಂದಲೇ ಈನಿಯಸ್‌ನಿಗೆ ಬೇರೊಂದು ತರದ ಕಷ್ಟ ಪ್ರಾರಂಭವಾಗುತ್ತದೆ. ರಾಣಿ ಡಿಡೋ ಈನಿಯಸ್‌ನನ್ನು ಪ್ರೇಮಿಸಲು ಶುರು ಮಾಡುತ್ತಾಳೆ. ಇದನ್ನು ಒಲ್ಲದ ಈನಿಯಸ್ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಹತಾಶಳಾದ ಡಿಡೋ ಸಾಯುತ್ತಾಳೆ. ಮುಂದೆ ಈನಿಯಸ್ ಸಿಸಿಲಿಯನ್ನು ತಲುಪಿ ಅಲ್ಲಿಯ ಕ್ರೀಡೆಗಳನ್ನು ವೀಕ್ಷಿಸಿದ ನಂತರ ಅಧೋಲೋಕಕ್ಕೆ ಪ್ರಯಾಣ ಬೆಳೆಸುತ್ತಾನೆ. ಆ ಪ್ರಯಾಣ ಮುಗಿದು ಇಟಲಿಯ ರಾಜನಾದ ಲ್ಯಾಟಿನಸ್‌ನನ್ನು ಭೇಟಿಯಾದಾಗಲೇ ಈನಿಯಸ್‌ನ ಜೀವನದಲ್ಲಿ ಹೊಸ ತಿರುವು ಸಿಗುತ್ತದೆ. ಈತನನ್ನು ಸತ್ಕರಿಸಿದ ಲ್ಯಾಟಿನಸ್  ತನ್ನ ಮಗಳನ್ನು ಮದುವೆ ಮಾಡಿಕೊಡುವುದಾಗಿ ಹೇಳುತ್ತಾನೆ. ಆದರೆ ಅದಕ್ಕೆ ಪ್ರಬಲವಾದ ವಿರೋಧ ಇದೆ. ಏಕೆಂದರೆ ಹೆಣ್ಣಿನ ತಾಯಿಯ ಕಡೆಯಿಂದ ಲ್ಯಾವೀನಿಯಳಿಗೆ ಈಗಾಗಲೇ ರಾಜಕುಮಾರ ಟರ್ನಸ್‌ನೊಡನೆ ಮದುವೆ ನಿಶ್ಚಯವಾಗಿರುತ್ತದೆ. ಎರಡು ಕಡೆಯವರೂ ಯುದ್ಧ ನಡೆಸುತ್ತಾರೆ. ಕೊನೆಗೆ ಈನಿಯಸ್ ಟರ್ನಸ್‌ನನ್ನು ಕೊಂದು ರಾಜನ ಮಗಳನ್ನು ವರಿಸುತ್ತಾನೆ. ಈತನೇ ರೋಮನ್ ಚಕ್ರವರ್ತಿಗಳ ಮೂಲ ಪುರುಷ.

ಇಷ್ಟು ವಿಶಾಲವಾದ ವಸ್ತುವನ್ನು ಆರಿಸಿಕೊಂಡದ್ದರಿಂದ ವರ್ಜಿಲ್‌ನಿಗೆ ಹೆಚ್ಚು ಸ್ವಾತಂತ್ರ್ಯ ಸಿಕ್ಕಿತು. ರೋಮ್ ಸಾಮ್ರಾಜ್ಯದ ವೀರಯುಗದ ಬಗ್ಗೆ ಅವನಿಗೆ ಇದ್ದ ಕಲ್ಪನೆ, ಆದರ್ಶಗಳು, ಹೋಮರನ ಇಲಿಯಡ್, ಒಡಿಸ್ಸಿ ಮಹಾಕಾವ್ಯಗಳು ಆತನ ಕಾವ್ಯ  ರಚನೆಯ ಹಿಂದೆ ಇದ್ದ ಸ್ಫೂರ್ತಿಶಕ್ತಿ. ತಂತ್ರ ಮತ್ತು ವಸ್ತು ಎರಡರಲ್ಲಿಯೂ ವರ್ಜಿಲ್ ಹೋಮರನಿಗೆ ಋಣಿಯಾಗಿದ್ದಾನೆ. ಹೋಮರನ ಕೃತಿಗಳ ಸರಳತೆ ಮತ್ತು ಶುಭ್ರತೆ ಈನಿಯಡ್‌ಗೆ ಇಲ್ಲವಾದರೂ, ಅದು ಯುರೋಪಿನ ಮೊದಲ ಶ್ರೇಷ್ಠ ಮಹಾಕಾವ್ಯ. ಲ್ಯಾಟಿನ್ ಭಾಷೆಯ ಈ ಕೃತಿ ಮುಂದಿನ ಅನೇಕ ಯುರೋಪಿಯನ್ ಕವಿಗಳಿಗೆ ಸ್ಫೂರ್ತಿಯ ನೆಲೆಯಾಯಿತು.

ಡಿವೈನ್ ಕಾಮೆಡಿ

ಜಗತ್ತಿನ ಮಹಾಕಾವ್ಯಗಳಲ್ಲಿ ‘ಡಿವೈನ್ ಕಾಮೆಡಿ’ ಕಾವ್ಯಕ್ಕೆ ಅಗ್ರಸ್ಥಾನ ಲಭಿಸುತ್ತದೆ. ಮಹಾಕವಿ ಡಾಂಟೆ ೧೩೧೭ರಲ್ಲಿ ಪೂರ್ಣಗೊಳಿಸಿದ ಕೃತಿ ಇದು. ಸ್ಥೂಲವಾಗಿ ಹೇಳುವುದಾದರೆ ಈ ಮಹಾಕಾವ್ಯದ ವಸ್ತು ಡಾಂಟೆ ಮತ್ತು ವರ್ಜಿಲರ ನರಕ, ಶುದ್ಧಿಲೋಕ, ಸ್ವರ್ಗಗಳ ಪ್ರಯಾಣ. ನೇರ ಗತಿಯಲ್ಲಿ ಸಾಗುವ ಈ ಕಥನದ ಚೌಕಟ್ಟಿನ ಒಳಗೆ ಮನುಷ್ಯನ ಮನಸ್ಸು ಈವರೆಗೆ ಸೃಷ್ಟಿಸಿರುವ ಪರಿಕಲ್ಪನೆಗಳನ್ನೆಲ್ಲಾ ಕೆಸ್ತ ಧರ್ಮದ ತಾತ್ವಿಕ ಕೋನದಲ್ಲಿ ಚರ್ಚಿಸುತ್ತದೆ.

ಡಾಂಟೆ ಒಮ್ಮೆ ಕಗ್ಗತ್ತಲಲ್ಲಿ ದಟ್ಟ ಅರಣ್ಯದ ನಡುವೆ ದಾರಿ ತಪ್ಪುತ್ತಾನೆ; ಸ್ವತಃ ಹೋಗಲು ದಾರಿ ಗೊತ್ತಿಲ್ಲ. ಜೊತೆಗೆ ದಟ್ಟ ಅರಣ್ಯ ಬೇರೆ. ಆಗ ಕಾಣಿಸಿದ ಒಂದು ಪರ್ವತವನ್ನು ಹತ್ತಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಆಗ ಯುರೋಪಿನ ಇನ್ನೊಬ್ಬ ಮಹಾಕವಿ ವರ್ಜಿಲ್ ಈತನನ್ನು ವಿವಿಧ ಲೋಕಗಳ ಪ್ರಯಾಣಕ್ಕೆ ಕರೆದೊಯ್ಯುತ್ತಾನೆ. ಒಬ್ಬ ಮಹಾಕವಿ ಇನ್ನೊಬ್ಬ ಮಹಾಕವಿಯನ್ನು ವಿವಿಧ ಲೋಕಗಳ ದರ್ಶನಕ್ಕೆ ಕರೆದೊಯ್ಯುವ ಕಲ್ಪನೆಯೇ ರೊಮಾಂಚಕಾರಿಯಾದದ್ದು. ಡಾಂಟೆಯ ಪ್ರಯಾಣ ಇಲ್ಲಿಯೇ ಶುರುವಾದದ್ದು. ಜೊತೆಗೆ ಮನುಷ್ಯ ಸೃಷ್ಟಿಸಿರುವ ಪರಿಕಲ್ಪನೆಗಳ ಆಳ ಪಾತಾಳಗಳ ಪ್ರಯಾಣ ಕೂಡ. ನರಕ, ಶುದ್ಧಿಲೋಕ (Purgatory). ಸ್ವರ್ಗ – ಈ ಲೋಕಗಳ ದರ್ಶನ, ಪ್ರಯಾಣ ಶುರುವಾಗುತ್ತದೆ.

ಮೊದಲು ಅವರ ಪ್ರಯಾಣ ಶುರುವಾದದ್ದು ನರಕದಿಂದ; ಮೊದಲು ಕಂಡದ್ದು ನರಕದ ಹೆಬ್ಬಾಗಿಲಲ್ಲಿ ಪಾಪ – ಪುಣ್ಯಗಳ ಅರಿವಿಲ್ಲದೆ ಬದುಕಿದವರನ್ನು. ನರಕದ ವಿವಿಧ ವರ್ತುಲಗಳನ್ನು ದಾಟುತ್ತಾ ಹೋದ ಹಾಗೆಲ್ಲಾ ಪಾಪದ ವಿವಿಧ ಮಗ್ಗುಲುಗಳ ಭೀಭತ್ಸತೆಯ ವರ್ಣನೆಯನ್ನು ಕಾಣುತ್ತೇವೆ. ನರಕದಲ್ಲಿ ಕಾಣುವ ಪಾಪ – ಅದರ ಶಿಕ್ಷೆಯ ವೈವಿಧ್ಯ ಎದೆ ಕದಡುವಂಥದು. ಹೊಟ್ಟೆ ಬಾಕತನದ ಪಾಪಕ್ಕೆ ಶಿಕ್ಷೆಗೆ ಒಳಗಾದವರನ್ನು ಕೆಸರಿಗೆ ತಳ್ಳಲಾಗಿತ್ತು. ಅದರ ಮೇಲೆ ಕೊಳಕು ನೀರು, ಮಂಜು ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ಇಷ್ಟು ಸಾಲದು ಎಂಬಂಥೆ ಸೆರೆಬ್ರಸ್ ಎಂಬ ರಾಕ್ಷಸನೊಬ್ಬನ ಕಾಟ ಬೇರೆ. ಇದು ಪಾಪಿಗಳಿಗೆ ದೊರಕುತ್ತಿದ್ದ ಶಿಕ್ಷೆಯ ಒಂದು ಮಾದರಿ ಅಷ್ಟೇ.

ಡಾಂಟೆ, ವರ್ಜಿಲರು ದೇವತಾ ಸಹಾಯದಿಂದ ಡಿಸ್‌ನಗರಕ್ಕೆ ಪ್ರವೇಶಿಸುತ್ತಾರೆ. ಅಲ್ಲಿ ನಾಸ್ತಿಕರ, ಪಾಷಂಡಿಗಳ ಆತ್ಮದ ದಹನ. ಇಂತಹ ಕೆಲವು ಆತ್ಮಗಳ ಜೊತೆಗೆ ಸಂಭಾಷಣೆ ನಡೆಸುತ್ತಾನೆ ಡಾಂಟೆ. ಭವಿಷ್ಯವನ್ನು ಹೇಳುವ ಶಕ್ತಿ ಅವರಿಗಿರುತ್ತದೆ. ಆದರೆ ವರ್ತಮಾನವನ್ನು ತಿಳಿಯುವ ಶಕ್ತಿ ಇಲ್ಲ ಎಂದು ಆ ಸಂಭಾಷಣೆಯಿಂದ ಅರಿವಾಗುತ್ತದೆ. ನಂತರ ಬರುವುದು ರಕ್ತದ ನದಿ. ಅಲ್ಲಿ ಒಂದು ಕಡೆ ಹಿಂಸಾಕೃತ್ಯವನ್ನು ನಡೆಸಿದವರು, ಇನ್ನೊಂದು ಕಡೆ ಆತ್ಮಹತ್ಯೆ ಮಾಡಿಕೊಂಡವರು, ಅಲ್ಲಿಂದಾಚೆಗಿನ ಮರುಭೂಮಿಯಲ್ಲಿ ಕೆಲ, ದೇವರು, ಪ್ರಕೃತಿಯ ವಿರುದ್ಧ ಅತ್ಯಾಚಾರ ನಡೆಸಿದವರು-ಹೀಗೆ ಅನೇಕ ಪಾಪಿಗಳನ್ನು ಕಾಣುತ್ತಾರೆ.

ಮುಂದೆ ಅವರ ಪ್ರಯಾಣ ಶುದ್ಧಿಲೋಕಕ್ಕೆ (Purgatory). ಇಲ್ಲಿದ್ದವರು ಪಾಪ ಕೃತ್ಯವನ್ನು ನಡೆಸಿದ್ದರೂ ಕ್ಷಮಾರ್ಹರು. ತಮ್ಮ ಪಾಪದ ಬೆಲೆ ಅರಿತವರು. ಇವರು ಹೋಗುತ್ತಿರುವಾಗಲೇ ದೇವತೆಯೊಂದು ನಡೆಸುತ್ತಿದ್ದ ನಾವೆಯಲ್ಲಿ ಆ ಲೋಕಕ್ಕೆ ಬರುತ್ತಿದ್ದ ಆತ್ಮಗಳನ್ನು ಕಾಣುತ್ತಾರೆ. ಅಲ್ಲಿದ್ದವರಲ್ಲಿ ಕೆಲವರು ತೀರಾ ತಡವಾಗಿ ಪಶ್ಚಾತ್ತಾಪ ಪಟ್ಟವರು. ಅಸೂಯಾಪರ ಜೀವಿಗಳ ಕಣ್ಣ ರೆಪ್ಪೆಯನ್ನು ಕಬ್ಬಿಣದ ದಾರದಿಂದ ಹೊಲೆಯಲಾಗಿತ್ತು. ಆ ಜೀವಗಳ ಸುತ್ತ ದೇವತೆಗಳು ಅಸೂಯೆಯ ವ್ಯರ್ಥತೆ, ಉದಾರತೆಯ ಘನತೆಯನ್ನು ಕುರಿತು ಹಾಡುತ್ತಿದ್ದರು. ಈ ಲೋಕವನ್ನು ಕಂಡು ವಿಸ್ಮಯದಿಂದ ಡಾಂಟೆ ವರ್ಜಿಲನ ಜೊತೆಗೆ ಪ್ರೇಮವನ್ನು ಕುರಿತು ತಾತ್ವಿಕ ಚರ್ಚೆ ನಡೆಸುತ್ತಾನೆ.

ಮುಂದೆ ಅವರ ಪ್ರಯಾಣ ಸ್ವರ್ಗದ ಕಡೆಗೆ. ವರ್ಜಿಲ್ ಡಾಂಟೆಯನ್ನು ಸ್ವತಂತ್ರವಾಗಿ ಓಡಾಡಬಹುದೆಂದು ಹೇಳಿ ಹೊರಡುತ್ತಾನೆ. ಡಾಂಟೆಯ ಪ್ರೇಮಿ ಬಿಯಟ್ರಿಸ್ ಸ್ವರ್ಗದಿಂದ ಇಳಿದು ಬರುತ್ತಾಳೆ; ಭೂಲೋಕದಲ್ಲಿ ಆತ ತನ್ನ ಬಗ್ಗೆ ನಡೆದುಕೊಂಡ ರೀತಿಗೆ ಛೀಮಾರಿ ಹಾಕುತ್ತಾಳೆ. ಆದರೆ ನಂತರ ಸ್ವರ್ಗಕನ್ಯೆಯರ ಮಧ್ಯಸ್ಥಿಕೆಯಿಂದಾಗಿ ಬಿಯಟ್ರಿಸ್ ಡಾಂಟೆಯನ್ನು ಸ್ವರ್ಗ ದರ್ಶನಕ್ಕೆ ಕರೆದೊಯ್ಯುತ್ತಾಳೆ. ನರಕ, ಸ್ವರ್ಗಗಳ ನಡುವಣ ವ್ಯತ್ಯಾಸ ಅಲ್ಲಿ ಕಾಣುವ ಬರೀ ವಾತಾವರಣದ್ದಷ್ಟೇ ಅಲ್ಲ-ವ್ಯಕ್ತಿಗಳ ಬದುಕಿನ ಹಿಂದೆ ಇರುವ ಶಕ್ತಿಗೆ ಸಂಬಂಧಿಸಿದ್ದು. ಅಲ್ಲದೆ ಯೋಧರು, ಸಂತರು, ದಾನಿಗಳು, ಹುತಾತ್ಮರು ಮುಂತಾದವರೊಡನೆ ಡಾಂಟೆ ಮಾತುಕತೆ ನಡೆಸುತ್ತಾನೆ. ಸ್ವರ್ಗ ಮತ್ತು ಭೂಮಿಯ ನಡುವಣ ದಾರಿಯಲ್ಲಿ ಕ್ರಿಸ್ತ ತನ್ನ ಪರಿವಾರದೊಂದಿಗೆ ಬರುವುದನ್ನು ಕಾಣುತ್ತಾನೆ.

ಪ್ರಯಾಣದ ಕೊನೆಯ ಭಾಗದಲ್ಲಿ ಡಾಂಟೆ ದಿವ್ಯದರ್ಶನದ ಉತ್ಕಟತೆ          ಯಲ್ಲಿ ಮೈಮರೆತಿದ್ದು ಎಚ್ಚರವಾದಾಗ ಆತನ ಪ್ರೇಮಿ ಬಿಯಟ್ರಿಸ್‌ಳ ಜಾಗದಲ್ಲಿ ಸಂತ ಬರ್ನಾಟ್ ನಿಂತಿರುತ್ತಾನೆ. ಆ ಸಂತನ ಜೊತೆಗೆ ಆ ದಿವ್ಯಸತ್ವದ ಅನುಭವವನ್ನು ಡಾಂಟೆ ಕಾಣುತ್ತಾನೆ.

ಈ ಕಾವ್ಯ ಅನೇಕ ಹಂತಗಳಲ್ಲಿ ಸಾಂಕೇತಿಕತೆ, ಅರ್ಥಸಮೃದ್ಧಿಯನ್ನು ಸಾಧಿಸುತ್ತದೆ. ಅನೇಕ ಸಮಕಾಲೀನ ಅಂಶಗಳು, ತಾತ್ವಿಕ ಚರ್ಚೆ, ದೈವೀ ಅನುಭವ ಮುಂತಾದವುಗಳನ್ನು ತನ್ನ ಬಂಧದಲ್ಲಿ ಒಳಗೊಳ್ಳುವ, ದೇಶೀಯ ಭಾಷೆಯಲ್ಲಿ ರಚಿತವಾದ ಈ ಕೃತಿಯ ಸಮಗ್ರತೆ ಜಗತ್ತಿನ ಸಾಹಿತ್ಯ ಕುತೂಹಲಗಳಲ್ಲಿ ಒಂದು.


[1] R.M. Alden; An introduction to Poetry. p. 47

[2] A.C. Bradley : Oxford Lectures on Poetry p. 203

[3] ಕನ್ನಡ ಕಾವ್ಯಮೀಮಾಂಸೆ : ಅನು : ಡಾ. ಕೆ. ಕೃಷ್ಣಮೂರ್ತಿ. ಪು. ೨೬

[4] Cassel’s Encyclopaedia of Literature : Ed. S.H. Steinberg (Vol. 1 p. 197)