ನಾಯಕ ಲಕ್ಷಣ ಇತ್ಯಾದಿ

ಮಹಾಕಾವ್ಯದ ವಸ್ತು ಮುಖ್ಯವಾಗಿ ಉದಾತ್ತ ವ್ಯಕ್ತಿಗಳ ಚಾರಿತ್ರವನ್ನು ಕುರಿತದ್ದು. ಹೀಗೆಂದ ಮಾತ್ರಕ್ಕೆ ಮಹಾಕಾವ್ಯದಲ್ಲಿ ನಾವು ಕಾಣುವ ಎಲ್ಲ ವ್ಯಕ್ತಿಗಳೂ ಅಥವಾ ಪಾತ್ರಗಳೂ ಉದಾತ್ತವಾದವರೇ ಆಗಿರುತ್ತಾರೆಂದು ಅರ್ಥವಲ್ಲ. ಮಹಾಕಾವ್ಯ ಒಂದು ಇಡೀ ಸಂಸ್ಕೃತಿಯ ಅನೇಕ ಸ್ತರದ ಅನುಭವವನ್ನು ಕುರಿತಿರುವುದರಿಂದ ಅಲ್ಲಿ ನಾವು ಎಲ್ಲ ರೀತಿಯ, ಎಲ್ಲ ಮಟ್ಟದ ವ್ಯಕ್ತಿಗಳನ್ನೂ ಕಾಣುತ್ತೇವೆ. ಆ ಒಂದೊಂದು ಪಾತ್ರವೂ ಮಾನವ ಸ್ವಭಾವದ ಒಂದೊಂದು ವಿಶಿಷ್ಟ ಲಕ್ಷಣಗಳಿಗೆ ಹಾಗೂ ಸಂಕೀರ್ಣತೆಗಳಿಗೆ ಮತ್ತು ಮೌಲ್ಯಗಳಿಗೆ ಸಂಕೇತವೆಂಬಂತೆಯೋ, ಪ್ರತಿನಿಧಿಯೆಂಬಂತೆಯೋ ಚಿತ್ರಿತವಾಗಿರಬಹುದು. ಆದರೆ ಮಹಾಕಾವ್ಯದಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಅದರ ಪ್ರಧಾನ ಪಾತ್ರವನ್ನು ಅಥವಾ ನಾಯಕನನ್ನು. ಯಾವ ಕೇಂದ್ರಪಾತ್ರದ ಸುತ್ತ ಕವಿ ತನ್ನ ಇಡೀ ಕಾವ್ಯವನ್ನು ಕಟ್ಟುತ್ತಾನೋ ಅಂಥ ಒಂದು ಅಥವಾ ಹಲವು ಪಾತ್ರಗಳೇ, ಆ ಕಾವ್ಯದ ನಾಯಕ ಪಾತ್ರಗಳೆನಿಸುತ್ತವೆ. ಮಹಾಕಾವ್ಯದ ‘ನಾಯಕ (Hero) ನ ಲಕ್ಷಣಗಳನ್ನು, ಕುರಿತು ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರು ಚರ್ಚಿಸಿದ್ದಾರೆ. ನಾಯಕ ಎಂದರೆ ಯಾರು, ಅವನ ಗುಣ ಸ್ವಭಾವಗಳೇನು ಎನ್ನುವುದನ್ನು ಗುರುತಿಸಿ ಪಟ್ಟಿ ಹಾಕಿದ್ದಾರೆ. ಹೀಗೆ ಗುರುತಿಸುವಲ್ಲಿ ಅವರಿಗೆ ಮಾದರಿಯಾದದ್ದು, ಅವರ ಕಣ್ಣೆದುರಿಗೆ ಇದ್ದ ಸುಪ್ರಸಿದ್ಧವಾದ ಮೊದಲ ಮಹಾಕಾವ್ಯಗಳೇ ಎಂಬುದನ್ನು ಮರೆಯಬಾರದು.

ಮಹಾಕಾವ್ಯದ ನಾಯಕ ಉದಾತ್ತನಾಗಿರಬೇಕು ಎನ್ನುವುದೆ, ಪೂರ್ವ ಹಾಗೂ ಪಶ್ಚಿಮದ ವಿಮರ್ಶಕರಲ್ಲಿ ಕಂಡುಬರುವ ಸಮಾನವಾದ ಅಭಿಪ್ರಾಯ. ಅರಿಸ್ಟಾಟಲ್ ಮಹಾಕಾವ್ಯವು ಉದಾತ್ತ ವ್ಯಕ್ತಿಗಳ ಅನುಕರಣ ಎನ್ನುತ್ತಾನೆ. ಆದರೆ, ರುದ್ರನಾಟಕದ ನಾಯಕನಿಗೂ ಮಹಾಕಾವ್ಯದ ನಾಯಕನಿಗೂ ಇರುವ ವ್ಯತ್ಯಾಸವೆಂದರೆ “ಮಹಾಕಾವ್ಯದ ನಾಯಕನು ಬಹುಮಟ್ಟಿಗೆ ಪರಮ ಸದ್ಗುಣಗಳ ಮೂರ್ತಿ, ರುದ್ರನಾಟಕದ ನಾಯಕ ಹೀಗಲ್ಲ.”[1] ಭಾರತೀಯರ ಪ್ರಕಾರ ನಾಟಕ ಮತ್ತು ಮಹಾಕಾವ್ಯಗಳ ನಾಯಕರ ಲಕ್ಷಣ ಹೆಚ್ಚು ಕಡಿಮೆ ಒಂದೇ ರೀತಿಯದಾಗಿದೆ. ಆದರೆ ನಿಜವಾದ ವ್ಯತ್ಯಾಸವಿರುವುದು “ಪುರಾಣದ ನಾಯಕರು ಮತ್ತು ಮಹಾಕಾವ್ಯದ ನಾಯಕರ ನಡುವೆ. ಪುರಾಣದ ನಾಯಕರು-ವಾಸ್ತವವಾಗಿ ಅವರನ್ನು ನಾಯಕರೆಂದು ಕರೆಯುವುದೂ ಕಷ್ಟವೆ – ಮುಖ್ಯವಾಗಿ ದೈವ ಭಕ್ತರು, ಪರಮ ಆರಾಧಕರು. ಮಹಾಕಾವ್ಯದ ನಾಯಕರು, ಪುರಾಣಗಳಲ್ಲಿ ಕಂಡುಬರುವ ವ್ಯಕ್ತಿಗಳಂತೆ ಕೇವಲ ದೈವ ಭಕ್ತರಲ್ಲ; ತಮ್ಮ ವಿಶಿಷ್ಟ ಗುಣ ಲಕ್ಷಣಗಳಿಂದ ಅಸಾಧಾರಣರಾದವರು.”[2]

ನಾಯಕ ಲಕ್ಷಣವನ್ನು ಕುರಿತು ಮೊದಲ ಲಾಕ್ಷಣಿಕನಾದ ಭಾಮಹನು, “ಮಹಾಕಾವ್ಯವು ಮಹಾಪುರುಷರನ್ನು ಕುರಿತದ್ದಾಗಿರಬೇಕು.”[3] ಎನ್ನುವ ಮಾತಿನಲ್ಲಿ ಮಹಾಕಾವ್ಯದ ನಾಯಕ ‘ಮಹಾಪುರುಷ’ನಾಗಿರಬೇಕು ಎಂದು ಸೂಚಿಸುತ್ತಾನೆ. ದಂಡಿಯು ಮಹಾಕಾವ್ಯದ ನಾಯಕ “ಚತುರನೂ ಉದಾತ್ತನೂ ಆಗಿರಬೇಕು” (ಚತುರೋದಾತ್ತ ನಾಯಕಂ)[4] ಎನ್ನುತ್ತಾನೆ. ಜಿನಸೇನಾಚಾರ್ಯರು ಮಹಾಕಾವ್ಯ “ಮಹಾಪುರುಷನ ಚರಿತ್ರೆಯನ್ನು ಕುರಿತದ್ದಾಗಿರಬೇಕು”[5] ಎನ್ನುತ್ತಾರೆ. ವಿಶ್ವನಾಥನು “ಧೀರೋದಾತ್ತ ಗುಣಾನ್ವಿತನಾದ ಒಬ್ಬ ದೇವತೆಯೋ, ಸದ್ವಂಶಜನಾದ ಒಬ್ಬ ಕ್ಷತ್ರಿಯನೋ ನಾಯಕನಾಗಬಹುದು; ಅಥವಾ ಒಂದೇ ವಂಶದಲ್ಲಿ ಹುಟ್ಟಿದ ಹಲವು ರಾಜರೂ ನಾಯಕರಾಗಬಹುದು”[6] ಎನ್ನುತ್ತಾನೆ. ಮಹಾಕಾವ್ಯದ ನಾಯಕ ಲಕ್ಷಣವನ್ನು ಕುರಿತ ಮಾತು ಇಷ್ಟೇ : ನಾಯಕನು ಸದ್ವಂಶಜನಾಗಿರಬೇಕು; ಮಹಾಪುರುಷನಾಗಿರಬೇಕು; ಚತುರೋದಾತ್ತನಾಗಿರಬೇಕು; ಧೀರೋದಾತ್ತನಾಗಿರಬೇಕು. ಇದನ್ನೆ ನಾಯಕ ಲಕ್ಷಣವನ್ನು ಹೇಳುವ ಉಳಿದೆಲ್ಲ ಲಾಕ್ಷಣಿಕರೂ ಗಿಳಿಪಾಠ ಒಪ್ಪಿಸಿದ್ದಾರೆ. ಕವಿಗಳೂ ಇದೇ ಪಡಿಯಚ್ಚಿನಲ್ಲಿ ತಮ್ಮ ಕಾವ್ಯಗಳ ನಾಯಕರನ್ನು ಎರಕ ಹೊಯ್ದಿದ್ದಾರೆ.

ಇಂಥ ಉದಾತ್ತವಾದ ವ್ಯಕ್ತಿಗಳನ್ನೆ ತಮ್ಮ ಕಾವ್ಯದ ನಾಯಕರನ್ನಾಗಿಸಿಕೊಂಡು ಕೃತಿ ರಚಿಸುವ ಬಗ್ಗೆ ಕವಿಗಳಿಗೆ ಹೆಮ್ಮೆ. “ನಾಯಕನ್ ಉದಾತ್ತನಾಗೆ ಕೃತಿ ವಿಶ್ರುತಮಪ್ಪುದು”[7] – ನಾಯಕನು ಉದಾತ್ತನಾದರೆ, ಕಾವ್ಯ ವಿಶೇಷವಾಗಿ ಆದರಕ್ಕೆ ಪಾತ್ರವಾಗುತ್ತದೆ, ಎನ್ನುವುದು ಕವಿಗಳ ತಿಳಿವಳಿಕೆ. ಅಲ್ಲದೆ ಉದಾತ್ತವಾದ ವಸ್ತುವಿನಿಂದ ತಮ್ಮ ಕಾವ್ಯವೂ ಉದಾತ್ತವಾಗುತ್ತದೆ ಎಂಬ ಭಾವನೆಯೂ ಪ್ರಧಾನವಾಗಿತ್ತು. ಯಾವಾಗ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿಗಳು, ಶ್ರೀರಾಮನ ಪಾತ್ರವನ್ನು ಒಂದು ಆದರ್ಶ ಪಾತ್ರವನ್ನಾಗಿ ಮಾಡಿದರೋ ಆಗ, ಅದು ಉಳಿದೆಲ್ಲ ಕವಿಗಳ ನಾಯಕ ಪಾತ್ರಕ್ಕೆ ಒಂದು ಮಾದರಿಯಾದಂತೆ ತೋರುತ್ತದೆ.[8] ಮಹಾಕಾವ್ಯದ ನಾಯಕ ಪಾತ್ರದಲ್ಲಿ ಸಮಸ್ತ ಸದ್ಗುಣಗಳನ್ನು ಕರಗಿಸಿ ಎರಕ ಹೊಯ್ಯುವುದು ಕವಿಗಳಿಗೆ ಅಭ್ಯಾಸವಾದದ್ದು ಮಾತ್ರವಲ್ಲ, ಮಹಾಕಾವ್ಯದ ‘ನಾಯಕ’ ಪಾತ್ರಗಳು, ಪೂರ್ಣ ನಿಶ್ಚಿತ ಸಿದ್ಧಪಾತ್ರಗಳಂತೆಯೂ ತೋರುತ್ತವೆ. ಕಾವ್ಯ ಎನ್ನುವುದು ಪುರುಷಾರ್ಥ ಸಾಧನೆಗೆ ಮಾರ್ಗವೆಂದೂ, ಕಾವ್ಯಗಳು ಜನದ ಬದುಕನ್ನು ತಿದ್ದುವ ಸಾಧನಗಳೆಂದೂ ಗೃಹೀತವಾದ ಈ ನಾಡಿನಲ್ಲಿ ಮಹಾಕಾವ್ಯದ ನಾಯಕರು, ‘ಆದರ್ಶ’ ವ್ಯಕ್ತಿಗಳಂತೆಯೇ ಚಿತ್ರಿತವಾದದ್ದು ಆಶ್ಚರ‍್ಯವಲ್ಲ.

ಭಾರತೀಯ ಮಹಾಕಾವ್ಯಗಳ ನಾಯಕರು ಧೀರೋದಾತ್ತರು; ಮಹಾಪುರುಷರು. ಭಾರತೀಯರಂತೆ, ಪಾಶ್ಚಾತ್ಯ ಲಾಕ್ಷಣಿಕರೂ, ಮಹಾಕಾವ್ಯದ ನಾಯಕರು ಬಹುಮಟ್ಟಿಗೆ ‘ಉದಾತ್ತ’ವಾಗಿರಬೇಕೆಂದು ಹೇಳಿದರೂ, ಇದಕ್ಕೆ ಅಪವಾದವಾದ ನಾಯಕ ಪಾತ್ರಗಳು ಅವರಲ್ಲಿವೆ. ನಿದರ್ಶನಕ್ಕೆ ಹೋಮರನ ಕಾವ್ಯದ ನಾಯಕ ಪಾತ್ರವನ್ನೆ ನೋಡಬಹುದು. “ಹೋಮರನ ಇಲಿಯಡ್‌ನ ನಾಯಕ ಅಖಿಲೀಸ್ ಅಂತಹ ಉದಾತ್ತ ಪಾತ್ರವಲ್ಲ; ಹಾಗೆ ನೋಡಿದರೆ ನಿಜವಾದ ಅರ್ಥದಲ್ಲಿ ಅಖಿಲೀಸ್ ಇಲಿಯಡ್‌ನ ನಾಯಕನಲ್ಲ, ಯಾಕೆಂದರೆ ಅವನು ಗ್ರೀಕರಲ್ಲಿ ಅಸಾಧಾರಣ ವ್ಯಕ್ತಿ ಅಲ್ಲ.”[9] ತನಗೆ ಬಹುಮಾನವಾಗಿ ಬಂದಿದ್ದ ಟ್ರೋಜನ್ ಕನ್ಯೆಯನ್ನು ಅಗಮೆಮ್‌ನನ್ ವಶಮಾಡಿಕೊಂಡನೆಂಬ ಕಾರಣಕ್ಕೆ, ಅವನಿಗೆ ಒದಗಿದ ರೋಷವೇ ಈ ಮಹಾಕಾವ್ಯದ ವಸ್ತು. ತನಗೆ ಆದ ಅವಮಾನದಿಂದ ಕುದಿದು, ತನ್ನ ಘನತೆಯ ರಕ್ಷಣೆಗಾಗಿ, ಗ್ರೀಕರಿಗೆ ಸಂಕಟಗಳ ಪರಂಪರೆಯನ್ನೊಡ್ಡಿ ಅವರ ರಕ್ತದ ಹೊಳೆ ಹರಿದು ಅಗಮೆಮ್‌ನನ್‌ಗೆ ಪಶ್ಚಾತ್ತಾಪವಾಗುವಂತೆ ಮಾಡಬೇಕೆಂದು ದೇವತೆಗಳ ಪ್ರಭುವಾದ ಜ್ಯೂಸ್‌ನನ್ನು ಪ್ರಾರ್ಥಿಸಬೇಕೆಂದು ತಾಯಿ ಥೆಟಿಸ್‌ಳನ್ನು ಬೇಡುತ್ತಾನೆ. ಕಡೆಗೆ ಹೆಕ್ಟರನೊಂದಿಗೆ ಸಮರಕ್ಕೆ ನಿಂತು, ಅವನನ್ನು ಕೊಂದು, ಅವನ ಹಿಮ್ಮಡಿಗೆ ಮಿಣಿ ಬಿಗಿದು ರಥಕ್ಕೆ ಕಟ್ಟಿ ಅವನ ಶವವನ್ನು ಧೂಳಿನಲ್ಲಿ ಎಳೆದಾಡಿಸುತ್ತಾನೆ. ಅಖಿಲೀಸ್‌ನ ಈ ರೋಷ, ಈ ಹಠ, ಹೆಕ್ಟರನಂಥ ವೀರನ ಶವವನ್ನು ಕುದುರೆಗಳಿಂದ ಎಳೆದಾಡಿಸುವ ಅನಾಗರಿಕ, ಪೈಶಾಚಿಕ ವರ್ತನೆಗಳನ್ನು ನೋಡಿದಾಗ, ಆಶ್ಚರ್ಯವಾಗುತ್ತದೆ. ಇಂಥವನು ಮಹಾಕಾವ್ಯದ ನಾಯಕ ಹೇಗಾದಾನು ಅನ್ನಿಸುತ್ತದೆ.[10] ಮಿಲ್ಟನ್ನನ ‘ಪ್ಯಾರಡೈಸ್ ಲಾಸ್ಟ್’ ಕಾವ್ಯದ ನಾಯಕ, ವಾಸ್ತವವಾಗಿ ಸೇಟನ್‌ನೇ ಎಂದು ಬಹುಮಂದಿ ವಿದ್ವಾಂಸರ ಮತ. ಸೇಟನ್ ಉದಾತ್ತವಾದ ಪಾತ್ರವೆಂದು ಹೇಳಲು ಬಾರದು. ಡಾಂಟೆಯ ‘ಡಿವೈನ್ ಕಾಮೆಡಿ’ಯಲ್ಲಿ ಡಾಂಟೆಯೇ ನಾಯಕ. ನಮಗೆ ಪರಿಚಿತವಾದ ನಾಯಕ ಲಕ್ಷಣವನ್ನು ಆ ಪಾತ್ರಕ್ಕೆ ಅನ್ವಯಿಸಲು ಬಾರದು. ಫಿನ್ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಾಲೇವಾಲಾ’ದಲ್ಲಿ ಐದು ಜನ ನಾಯಕರಿದ್ದಾರೆ. ಒಬ್ಬ ಲಾವಣಿಕಾರ, ಒಬ್ಬ ಕಮ್ಮಾರ, ಒಬ್ಬ ಸಾಹಸಿ, ಒಬ್ಬ ವ್ಯಾಧ, ಇನ್ನೊಬ್ಬ ಗುಲಾಮ. ಈ ಕೆಲವು ನಿದರ್ಶನಗಳಿಂದ ‘ನಾಯಕ’ ಪಾತ್ರದ ಬಗೆಗೆ ಇರುವ ವ್ಯತ್ಯಾಸ ವೈವಿಧ್ಯಗಳು ಸ್ಪಷ್ಟವಾಗುತ್ತವೆ. ಭಾರತೀಯ ಮಹಾಕಾವ್ಯಗಳ ನಾಯಕರು ‘ಧೀರೋದಾತ್ತರು.’ ಪಾಶ್ಚಾತ್ಯರಲ್ಲಿ ‘ಧೀರ’ರೇ ವಿಶೇಷ ‘ಉದಾತ್ತ’ರು ಕಡಿಮೆ. ಆದರೆ ನಮ್ಮ ‘ಧೀರೋದಾತ್ತ’ರಿಗೆ ಹೋಲಿಸಿದರೆ ಪಾಶ್ಚಾತ್ಯ ಮಹಾಕಾವ್ಯಗಳ ‘ನಾಯಕ’ರು ಹೆಚ್ಚು ಮಾನವರಂತೆ ತೋರುತ್ತಾರೆ. ಹಾಗೆಯೆ ಮಾನವ ಸಹಜವಾದ ಗುಣ-ದೋಷಗಳಿಂದ ಪ್ರಿಯವಾಗುತ್ತಾರೆ. ಆದರೆ ನಮ್ಮವರ ‘ನಾಯಕರು’ ಸಕಲ ಸದ್ಗುಣ ಸಂಪನ್ನರು; ಆದರ್ಶ ಪುರುಷರು; ಕೇವಲ ಪೂಜನೀಯರು. ಹೀಗಾಗಿ ನಮ್ಮ ‘ನಾಯಕ’ರು ಸಿದ್ಧಪಾತ್ರಗಳಂತೆ ಎಷ್ಟೋ ವೇಳೆ ತೋರುತ್ತಾರೆಯೆ ವಿನಾ, ಅವರು ತಮ್ಮ ಅರೆಕೊರೆಗಳಿಂದ ಬೆಳೆಯುತ್ತಾ ಹೋಗುವ, ಮತ್ತು ಬೆಳೆದು ನಿಲ್ಲುವ ಪಾತ್ರಗಳಂತೆ ತೋರುವುದಿಲ್ಲ.

ನಾಯಕನು ಅಸಾಧಾರಣ ವ್ಯಕ್ತಿ-ಎಂಬ ಒಂದು ಅಂಶ ಮಾತ್ರ, ಪೂರ್ವ ಹಾಗೂ ಪಶ್ಚಿಮದ ವಿದ್ವಾಂಸರಲ್ಲಿ ಸಮಾನವಾದದ್ದು. ಈ ಅಸಾಧಾರಣತೆ ಅವರಿಗೆ ಹುಟ್ಟಿನಿಂದಲೇ ಪ್ರಾಪ್ತವಾಗಿರುತ್ತದೆ. ಅವರ ಜನನವೆ ಒಂದು ಬಗೆಯ ಅಸಾಧಾರಣವಾದ ರೀತಿಯಿಂದ ಆಗುತ್ತದೆ. ಶ್ರೀರಾಮನ ಜನನ, ಯಜ್ಞ ಪುರುಷನು ಕೊಟ್ಟ ಪಾಯಸವನ್ನು ದಶರಥನ ರಾಣಿ ಕೌಸಲ್ಯೆ ಸೇವಿಸಿದ ಕಾರಣದಿಂದ ಆಯಿತು; ಅರ್ಜುನ ಜನಿಸಿದ್ದು ಕುಂತಿಯಲ್ಲಿ ದೇವರಾಜನಾದ ಇಂದ್ರನ ಅಂಶದಿಂದ; ಕರ್ಣ ಜನಿಸಿದ್ದು ಸೂರ‍್ಯನ ಅಂಶದಿಂದ. ಹೀಗೆ ಮಹಾಕಾವ್ಯದ ನಾಯಕರು, ದೇವರ ಕೃಪೆಯಿಂದಲೋ ಅಥವಾ ಆಯಾ ದೇವ-ದೇವತೆಗಳ ಅಂಶವಾಗಿಯೋ, ಒಟ್ಟಿನಲ್ಲಿ ಒಂದು ಬಗೆಯ ಕಾರಣ ಪುರುಷರಾಗಿ ಎಂದರೆ ಯಾವುದೋ ಒಂದು ಘನವಾದ ಉದ್ದೇಶದ ಸಾಧನೆಗೆ ಜನಿಸಿದವರು. ಅವರು ರಾಮಕೃಷ್ಣಾದಿಗಳಂತೆ ಅವತಾರ ಪುರುಷರು, ಅಥವಾ ವರ್ಜಿಲ್‌ನ ಈನಿಯಸ್‌ನಂತೆ ದೈವದ ಉಪಕರಣಗಳು. ಬದುಕಿನ ಉದ್ದಕ್ಕೂ ದೈವದ ರಕ್ಷೆ ನೆರವು, ನಿರ್ದೇಶನ ಈ ನಾಯಕರಿಗೆ ಒದಗಿ ಬರುತ್ತದೆ. ನಾಯಕರ ಈ ಅಸಾಧಾರಣತೆ ಅವರ ಬೆಳವಣಿಗೆಯ ಕ್ರಮದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಮಹಾಕಾವ್ಯದ ನಾಯಕರು ಉಳಿದ ವ್ಯಕ್ತಿಗಳಂತೆ ನಿಧಾನವಾಗಿ ಬೆಳೆಯುವುದಿಲ್ಲ; ಗಳಗಳನೆ ಬೆಳೆದು ಪ್ರಬುದ್ಧತೆಗೆ ಬರುತ್ತಾರೆ. ವೀರ ಕಾವ್ಯದ ನಾಯಕನ ಬೆಳವಣಿಗೆಯ ಬಗ್ಗೆ ಆರ್ಮೇನಿಯನ್ನರಲ್ಲಿ ಒಂದು ಸೂತ್ರವೇ ಇದೆ :

Other Children grew by years

But David grew by days![11]

ಎನ್ನುವುದೇ ಈ ಸೂತ್ರ[12] ಆರಂಭದಿಂದಲೇ, ‘ನಾಯಕ’ ಪಾತ್ರದ ಅಸಾಧಾರಣತೆ ಗೋಚರವಾಗುತ್ತದೆ. “ನಾಯಕ ತನ್ನ ಶಕ್ತಿ ಸಾಮರ್ಥ್ಯಗಳ ತರ-ತಮದಿಂದಲೆ ಇತರ ವ್ಯಕ್ತಿಗಳಿಂದ ತಾನು ಬೇರೆಯೆಂಬಂತೆ ಗೋಚರಿಸುತ್ತಾನೆ.”[13] ಉಳಿದವರಾರಿಗೂ ಇಲ್ಲದ ವಿಲಕ್ಷಣ ಪೌರುಷಗಳು, ಆತನಲ್ಲಿ, ಆತನ ಎಳವೆಯಲ್ಲೆ ಪ್ರಕಟವಾಗುತ್ತವೆ. ಶ್ರೀ ಕೃಷ್ಣನು ಬಾಲಲೀಲೆಯಲ್ಲಿಯೇ ನಡೆಸಿದ ಪೂತನಿಯ ಸಂಹಾರ, ಶಕಟಾಸುರ ಮರ್ದನ ಇವುಗಳನ್ನೂ. ಶ್ರೀರಾಮನು ಬಾಲ್ಯದಲ್ಲೇ ಮಾಡಿದ ತಾಟಕಾ ಸಂಹಾರ ಮತ್ತು ಶಿವಧನುರ್ಭಂಗ ಇವುಗಳನ್ನು ನೆನಸಿಕೊಳ್ಳಬಹುದು. ಅವರ ಸಾಮರ್ಥ್ಯದಲ್ಲಿ ಸೃಷ್ಟಿಯ ಸಮಸ್ತ ಶಕ್ತಿ ಸತ್ವಗಳೂ ಮೇಳವಿಸಿದಂತೆ ತೋರುತ್ತವೆ. ತೇಜಸ್ಸಿನಲ್ಲಿ ಸೂರ‍್ಯ, ರೂಪದಲ್ಲಿ ಮನ್ಮಥ, ಶಾಂತಿಯಲ್ಲಿ ಚಂದ್ರ, ದೃಢತೆಯಲ್ಲಿ ಮೇರು, ಕ್ಷಮೆಯಲ್ಲಿ ಧರಿತ್ರಿ, ಗಾಂಭೀರ್ಯದಲ್ಲಿ ಸಮುದ್ರ – ಇತ್ಯಾದಿಯಾಗಿ ಕವಿಗಳು ನಾಯಕನನ್ನು ವರ್ಣಿಸುವ ಪದ್ಧತಿಯಲ್ಲಿ ಇದನ್ನು ಗುರುತಿಸಬಹುದು. ಅಲ್ಲದೆ ಅವರಿಗೆ ಆಯುಧ ವಿಶೇಷಗಳೂ ವಾಹನ ವಿಶೇಷಗಳೂ ತಾನೇ ತಾವಾಗಿ ಬಂದು ಒದಗುತ್ತವೆ. ಶ್ರೀರಾಮನ ಕೋದಂಡ, ಶ್ರೀ ಕೃಷ್ಣನ ಚಕ್ರ, ಕಾದಂಬರಿ ಕಾವ್ಯದ ಚಂದ್ರಾಪೀಡನಿಗೆ ಇಂದ್ರಾಯುಧವೆಂಬ ಕುದುರೆ, ಅಖಿಲೀಸನಿಗೆ ದೇವತೆಯಾದ ಥೆಟಿಸ್‌ಳು ಕೊಟ್ಟ ಅಪೂರ್ವವಾದ ಗುರಾಣಿ-ಇವು ವಿಶೇಷವಾದ ರೀತಿಯಲ್ಲಿ ಒದಗಿ ಬರುತ್ತವೆ. ಈ ನಾಯಕರ ಅಸಾಧಾರಣತೆ ಅತ್ಯಂತ ಉಜ್ವಲವಾಗಿ ಪ್ರಕಟವಾಗುವುದು ಅವರು ಭಾಗವಹಿಸುವ ಮಹಾ ಯುದ್ಧಗಳಲ್ಲಿ.

ನಾಯಕ ಪಾತ್ರಗಳ ಇನ್ನೊಂದು ಲಕ್ಷಣವೆಂದರೆ ಅವರ ವಂಶಗೌರವ ಪ್ರಜ್ಞೆ. ನಾಯಕನು ಸದ್ವಂಶಜನಾಗಿರಬೇಕೆಂಬ ಸಂಗತಿಯನ್ನು ಭಾರತೀಯ ಲಾಕ್ಷಣಿಕರು ವಿಶೇಷವಾಗಿ ಎತ್ತಿ ಹೇಳುತ್ತಾರೆ. ಮಹಾಕಾವ್ಯದ ನಾಯಕರು ತಾವು ಯಾವ ಉನ್ನತವಾದ ವಂಶದಲ್ಲಿ ಜನಿಸಿರುವರೋ, ಆ ವಂಶದ ಪ್ರತಿನಿಧಿಗಳೆಂದೂ, ಎಂತಹ ಸಂದರ್ಭಗಳಲ್ಲಿಯೂ ತಮ್ಮ ಪ್ರತಿಷ್ಠಿತ ವಂಶಗೌರವಕ್ಕೆ ಚ್ಯುತಿಬಾರದಂತೆ ನಡೆದುಕೊಳ್ಳುತ್ತಿದ್ದೇವೆಂದೂ ಭಾವಿಸುತ್ತಾರೆ. ತಮ್ಮಲ್ಲಿರುವ ಧೈರ‍್ಯ, ಶೌರ್ಯ, ಸತ್ಯ ಸಂಧತೆ, ಧರ್ಮಪರತೆ ಈ ಗುಣಗಳು, ತಮ್ಮ ವಂಶದ ಪರಂಪರಾಗತವಾದ ಲಕ್ಷಣಗಳೆಂದೂ ತಿಳಿಯುತ್ತಾರೆ. ಶ್ರೀ ರಾಮನು ರಾಜ್ಯಚ್ಯುತನಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ. ಈ ಕಷ್ಟಗಳ ನಡುವೆಯೂ ತನ್ನ ವಂಶಗೌರವಕ್ಕೆ ಅನುಗುಣವಾಗಿ ತಾನು ನಡೆದುಕೊಂಡು, ಅದನ್ನು ಉಳಿಸಿದೆನೆಂಬ ತೃಪ್ತಿ ಅವನಲ್ಲಿ ಪ್ರಕಟವಾಗುತ್ತದೆ. ರಾವಣನೊಂದಿಗೆ ಅವನು ಮಾಡಿದ ಯುದ್ಧ, ಕೇವಲ ಸೀತೆಯನ್ನು ಹಿಂದಕ್ಕೆ ಪಡೆಯುವ ಉದ್ದೇಶದ್ದಷ್ಟೇ ಆಗಿರದೆ, ಸೂರ್ಯವಂಶದ ಪತಾಕೆಯನ್ನು ಎತ್ತಿ ಹಿಡಿಯುವುದೆ ಆಗಿತ್ತು. ಮಹಾಭಾರತದ ನಾಯಕ ಪಾತ್ರಗಳಲ್ಲೂ ಇದೇ ಧೋರಣೆ ಕಾಣಿಸಿಕೊಳ್ಳುತ್ತದೆ.

ನಾಯಕನು ಕೇವಲ ಧೀರನೂ ಉದಾತ್ತನೂ ಆದರೆ ಸಾಲದು, ಆತ ಚತುರನೂ ಆಗಿರಬೇಕು. ದಂಡಿಯು ಮಹಾಕಾವ್ಯದ ನಾಯಕನನ್ನು ‘ಚತುರೋದಾತ್ತ’ ಎನ್ನುತ್ತಾನೆ. ಇದೇ ಮಾತನ್ನು ಇನ್ನೂ ಹಲವರು ಹೇಳಿದ್ದಾರೆ. “ಚತುರನೆಂದರೆ ವಿದಗ್ಧ, ಕುಶಲ, ವ್ಯವಹಾರ ಕುಶಲ; ಉದಾತ್ತನೆಂದರೆ ಶೌರ್ಯ ತ್ಯಾಗಾದಿ ಗುಣಯುಕ್ತ, ಉದಾರ, ವಂಶ ವೀರ‍್ಯಾದಿಗಳಿಂದ ಪ್ರಥಿತ, ಮಹಿಮಾನ್ವಿತ, ಧೀರೋದಾತ್ತ-ಎಂಬುದು ಸಾಮಾನ್ಯಾಭಿಪ್ರಾಯ,.”[14] ಇಂತಹ ನಾಯಕನ ಅಭ್ಯುದಯವನ್ನು ಹೇಳುವುದೇ ಮಹಾಕಾವ್ಯದ ಉದ್ದೇಶ. ನಾಯಕಾಭ್ಯುದಯ ಎಂದರೆ, ಅವನು ತನ್ನ ವಿರೋಧಿಯನ್ನು ಅಥವಾ ಪ್ರತಿನಾಯಕನನ್ನು ಗೆದ್ದು ವಿಜಯಿಯಾಗುವುದು. ‘ನಾಯಕಾಭ್ಯುದಯ’ ಎನ್ನುವುದು, ಅಷ್ಟಾದಶ ವರ್ಣನೆಗಳಲ್ಲಿ ಮುಖ್ಯವಾದ, ಕಥಾವಸ್ತುವಿಗೆ ಅಗತ್ಯವಾದ ಐದು ಅಂಶಗಳಲ್ಲಿ ಒಂದು. ಇದನ್ನು ‘ಮಂತ್ರಾದಿ ಪಂಚಕ’ ಎಂದು ಕರೆಯಲಾಗಿದೆ. “ಮಂತ್ರ, ದೂತ, ಪ್ರಯಾಣಾಜಿ ನಾಯಾಕಾಭ್ಯುದಯೈಶ್ಚತತ್…”[15] ಎನ್ನುತ್ತಾನೆ ಭಾಮಹ. ಇಲ್ಲಿ ಮಂತ್ರ ಎಂದರೆ, ಸಚಿವರೊಡನೆ ಮಂತ್ರಾಲೋಚನೆ ಮಾಡಿ ಶತ್ರುವಿನ ನಿಗ್ರಹದ ಬಗ್ಗೆ, ಯುದ್ಧವನ್ನು ನಿಶ್ಚಯಿಸುವುದು; ‘ದೂತ’ ಎಂದರೆ ಚತುರನೂ, ವಾಗ್ಮಿಯೂ ಆದ ದೂತನೊಬ್ಬನನ್ನು ಶತ್ರುವಿನಲ್ಲಿಗೆ ಕಳುಹಿಸಿಕೊಡುವುದು; ‘ಪ್ರಯಾಣ’ ಎಂದರೆ, ಯುದ್ಧ ನಿಶ್ಚಯವಾಗಿ ನಾಯಕನು ಸೈನ್ಯ ಸಮೇತ ಪ್ರಯಾಣಮಾಡುವುದು; ‘ಆಜಿ’-ಎಂದರೆ ಸಾಕ್ಷಾತ್ತಾಗಿ ಪ್ರತಿನಾಯಕನೊಡನೆ ನಡೆಯುವ ಯುದ್ಧ; ಕೊನೆಗೆ ‘ನಾಯಕಾಭ್ಯುದಯ’, ನಾಯಕನು ಶತ್ರುವನ್ನು ಗೆದ್ದು ವಿಜಯಿಯಾಗುವುದು. ಇವು ‘ಮಂತ್ರಪಂಚಕ’ಗಳು. ವಾಸ್ತವವಾಗಿ ಇವು “ಮಹಾಕಾವ್ಯದ ರಾಜನೈತಿಕ ಸಾರಸಾಮಗ್ರಿಯೂ, ಇತಿವೃತ್ತದ ಹಂದರವೂ”[16] ಆಗಿರುವ ಅಂಶಗಳು; ಮಹಾಕಾವ್ಯದ ನಾಯಕ ಚತುರನೂ ಧೀರನೂ ಆದವನೆಂಬುದನ್ನು ತೋರಿಸಲು ಆವಶ್ಯಕವಾದ ಕ್ರಿಯೆಗಳು. ಈ ‘ಮಂತ್ರಪಂಚಕ’ಗಳನ್ನು ಎಲ್ಲ ಭಾರತೀಯ ಲಾಕ್ಷಣಿಕರೂ ಎತ್ತಿ ಹೇಳಿದ್ದಾರೆಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ನಾಯಕಾಭ್ಯುದಯವೇ ಮಹಾಕಾವ್ಯದ ವಸ್ತು ಎಂಬಂತೆ ಹೇಳಿರುವ ಈ ‘ಮಂತ್ರಪಂಚಕ’ಗಳಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೆಂದರೆ, ನಾಯಕನಿಗೆ ಒಬ್ಬ ಪ್ರತಿನಾಯಕ ಇರಲೇಬೇಕು, ಮತ್ತು ಅವನನ್ನು ಗೆದ್ದಂತೆ ತೋರುವುದರಿಂದಲೆ ಮಹಾಕಾವ್ಯದ ನಾಯಕನ ಮಹತ್ತು ಸಿದ್ಧವಾಗುತ್ತದೆ, ಎನ್ನುವುದು. ಈ ‘ಪ್ರತಿನಾಯಕ’ ಕಲ್ಪನೆ, ಮತ್ತು ಅವನ ಲಕ್ಷಣಗಳು ಯಾವುವು ಎಂಬುದನ್ನು ಕುರಿತ ಚಿಂತನೆ ಭಾರತೀಯ ಲಾಕ್ಷಣಿಕರ ‘ಮಹಾಕಾವ್ಯ ಕಲ್ಪನೆ’ಯಲ್ಲಿ ಕಂಡುಬರುವ ವಿಶೇಷವಾದ ಸಂಗತಿಯಾಗಿದೆ. ಪಾಶ್ಚಾತ್ಯ ಲಾಕ್ಷಣಿಕರು ‘ನಾಯಕ’ ಲಕ್ಷಣವನ್ನು ಹೇಳುತ್ತಾರೆಯೇ ವಿನಾ ‘ಪ್ರತಿನಾಯಕ’ನ ಲಕ್ಷಣವನ್ನು ಹೇಳುವುದೇ ಇಲ್ಲ ಎಂದರೆ ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ                                                                                              ‘ಪ್ರತಿನಾಯಕ’ರೇ ಇಲ್ಲವೆಂದು ಈ ಮಾತಿನ ಅರ್ಥವಲ್ಲ. ಅಲ್ಲಿ ಹೋಮರನ ಕಾವ್ಯದಲ್ಲಿ, ‘ಪ್ರತಿನಾಯಕ’ ರೆಂಬಂತೆ ತೋರುವ ಪ್ರತಿಪಕ್ಷದ ನಾಯಕರಿದ್ದಾರೆ. ಅಲ್ಲದೆ ಪಾಶ್ಚಾತ್ಯರ ಕೆಲವು ವೀರಕಾವ್ಯಗಳನ್ನು ಬಿಟ್ಟರೆ ಇನ್ನುಳಿದ ಮಹಾಕಾವ್ಯಗಳಲ್ಲಿ ನಮ್ಮಲ್ಲಿಯಂತೆ ‘ಪ್ರತಿನಾಯಕ’ನನ್ನು ಕಾಣುವುದೇ ಕಷ್ಟವಾಗುತ್ತದೆ. ಮಿಲ್ಟನ್ನನ ‘ಪ್ಯಾರಡೈಸ್ ಲಾಸ್ಟ್’ದಲ್ಲಾಗಲಿ, ವರ್ಜಿಲ್‌ನ ‘ಈನಿಯಡ್’ದಲ್ಲಾಗಲಿ, ಡಾಂಟೆಯ ‘ಡಿವೈನ್ ಕಾಮೆಡಿ’ಯಲ್ಲಾಗಲಿ, ಭಾರತೀಯ ಮಹಾಕಾವ್ಯಗಳಲ್ಲಿಯಂತೆ ‘ಪ್ರತಿನಾಯಕ’ರನ್ನು ಕಾಣಲಾಗುವುದಿಲ್ಲ. ಪಾಶ್ಚಿಮಾತ್ಯ ಮಹಾಕಾವ್ಯಗಳಲ್ಲಿ ‘ನಾಯಕ’ನು ಯುದ್ಧ ಮಾಡುವ ಸಂದರ್ಭಗಳು ಪ್ರಾಪ್ತವಾದರೂ, ನಾಯಕನ ಯುದ್ಧ, ನಮ್ಮ ದೇಶದ ಮಹಾಕಾವ್ಯಗಳಲ್ಲಿಯಂತೆ ಕೇವಲ ಪ್ರತಿನಾಯಕನ ಮೇಲೆಯೆ ಉದ್ದೇಶಿಸಿದಂತೆ ಇರುತ್ತದೆಂದು ಹೇಳಲು ಬರುವುದಿಲ್ಲ. ಅಲ್ಲದೆ ‘ಪ್ಯಾರಡೈಸ್ ಲಾಸ್ಟ್’, ‘ಡಿವೈನ್ ಕಾಮೆಡಿ’ ಯಂಥ ಮಹಾಕಾವ್ಯಗಳಲ್ಲಿ ಯುದ್ಧದ ಸಂದರ್ಭಗಳೇ ಇಲ್ಲ. ‘ವೀರಕಾವ್ಯ’ಗಳಲ್ಲಿಯಂತೆ, ‘ಮಹಾಕಾವ್ಯ’ಗಳಲ್ಲಿ ಯುದ್ಧದ ಪ್ರಸಂಗಗಳು ಅನಿವಾರ್ಯವಲ್ಲ; ಮಹಾಕಾವ್ಯದ ನಾಯಕನ ‘ವೀರ’, ಯುದ್ಧವಲ್ಲದ ಬೇರೆಯ ಸಾಹಸಗಳ ಮೂಲಕವೂ ಪ್ರಕಟವಾಗಲು ಸಾಧ್ಯ ಎನ್ನುವುದನ್ನು ಕೆಲವು ಪಾಶ್ಚಾತ್ಯ ಮಹಾಕಾವ್ಯಗಳು ಸ್ಪಷ್ಟಪಡಿಸುತ್ತವೆ. ಆದರೆ ಭಾರತೀಯ ಮಹಾಕಾವ್ಯಗಳಲ್ಲಿ, ಬಹುಮಟ್ಟಿಗೆ – ಬಾಣನ ಕಾದಂಬರಿ,          ಭಾರವಿಯ ಕಿರಾತಾರ್ಜುನೀಯ ಇಂಥವನ್ನು ಬಿಟ್ಟರೆ – ನಾಯಕಾಭ್ಯುದಯ    ವೆನ್ನುವುದು, ಆತ ಪ್ರತಿನಾಯಕನನ್ನು ರಣರಂಗದಲ್ಲಿ ಗೆಲ್ಲುವುದರಲ್ಲಿಯೇ ಇದೆ ಎನ್ನುವಂತೆ ಚಿತ್ರಿತವಾಗಿದೆ.

ನಮ್ಮವರು ನಾಯಕ ಲಕ್ಷಣವನ್ನು ಹೇಳುವಂತೆ ಪ್ರತಿ ನಾಯಕನ ಲಕ್ಷಣವನ್ನು ಹೇಳುತ್ತಾರೆ. ಪ್ರತಿನಾಯಕನು, ಖಳನಾಯಕ ಅಲ್ಲ. ಪ್ರತಿನಾಯಕನು, ನಾಯಕನಿಗೆ ತಕ್ಕ ಪ್ರತಿಸ್ಪರ್ಧಿಯಾಗಿರಬೇಕು. “ತನಗಾಗಿಯೋ ತನ್ನ ಮಿತ್ರರಿಗಾಗಿಯೋ ಧರ್ಮಸಾಧನಾರ್ಥವಾಗಿ ಉತ್ಸುಕನಾಗಿರುವ ನಾಯಕನಿಗೆ, ಉನ್ನತ ಕುಲಜನೂ ಗುಣವಂತನೂ ಆದ ಪ್ರತಿಕಕ್ಷಿ”[17]ಯಾಗುತ್ತಾನೆ ಪ್ರತಿನಾಯಕ.[18] ಪ್ರತಿನಾಯಕನು ಶೂರನೂ ದಿಗ್ವಿಜಯಿಯೂ ಆಗಿರಬೇಕು. ಇಂತಹ ಪ್ರತಿನಾಯಕನನ್ನು ನಾಯಕನು ಗೆದ್ದನೆಂದು ವರ್ಣಿಸುವುದೇ ‘ನಾಯಕಾಭ್ಯುದಯ’. ಮಹಾಕಾವ್ಯದಲ್ಲಿ ಪ್ರತಿನಾಯಕನಿಗಿಂತ, ನಾಯಕನೇ ಉದ್ದಕ್ಕೂ ಪ್ರಧಾನನಾಗಿರುವಂತೆ ಚಿತ್ರಸಬೇಕೆಂಬುದೆ ಎಲ್ಲ ಲಾಕ್ಷಣಿಕರ ಅಭಿಪ್ರಾಯ.[19] ‘ನಾಯಕಾಭ್ಯುದಯ’ವನ್ನು ಚಿತ್ರಿಸುವಲ್ಲಿ ಎರಡು ಕ್ರಮಗಳಿರುವಂತೆ ಹೇಳಲಾಗಿದೆ : ನಾಯಕನ ಶೌರ್ಯ, ವೀರ‍್ಯ, ಗುಣಗಳನ್ನು ಮೊದಲು ವರ್ಣಿಸಿ, ಅವನು ಪ್ರತಿನಾಯಕನನ್ನು ಸೋಲಿಸಿದನೆಂದು ಹೇಳುವ ರೀತಿ ಒಂದು; ಮೊದಲು ಪ್ರತಿನಾಯಕನ ವಂಶ, ಶೌರ್ಯ, ವೀರ‍್ಯಗಳನ್ನು ವರ್ಣಿಸಿ, ಅಂತಹವನನ್ನು ನಾಯಕನು ಗೆದ್ದನೆಂದು ಹೇಳುವ ರೀತಿ ಇನ್ನೊಂದು. ಇದನ್ನು ಹೇಮಚಂದ್ರನು ‘ಉಭಯ ವೈಚಿತ್ರ್ಯವೆನ್ನುತ್ತಾನೆ.[20] ಭಾಮಹನು “ಮೊದಲಲ್ಲಿ ನಾಯಕನ ಕುಲ, ಪ್ರತಾಪ, ವಿದ್ಯೆ ಮುಂತಾದುವನ್ನು ವರ್ಣಿಸಿ ಕಡೆಗೆ ವೈರಿಯ (ಪ್ರತಿನಾಯಕ) ಉತ್ಕರ್ಷವನ್ನು ಸೂಚಿಸುವ ಉದ್ದೇಶದಿಂದ ಆ ನಾಯಕನಿಗೇ ಸಾವು ಒದಗಿತೆಂದು ಹೇಳಲಾಗದು. ಇಡಿಯ ಕಾವ್ಯದ ಉದ್ದಕ್ಕೂ ಆತನು ಮುಖ್ಯವಾಗಿರಬೇಕಾಗಿಲ್ಲದ ಪಕ್ಷಕ್ಕೆ ಮತ್ತು ಕಡೆಗೆ ಅಭ್ಯುದಯವನ್ನು ಪಡೆಯದ ಪಕ್ಷಕ್ಕೆ ಮೊದಲೆಲ್ಲ ಅವನನ್ನು ಕೊಂಡಾಡುವುದು ವ್ಯರ್ಥವೇ ಸರಿ”[21] ಎನ್ನುತ್ತಾನೆ. ಎಂದರೆ ಭಾಮಹನ ಪ್ರಕಾರ ಮೊದಲಿಂದ ತುದಿಯ ತನಕ ನಾಯಕನೇ ಪ್ರಧಾನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅರ್ಥ. ಆದರೆ ದಂಡಿಯ ಮತ, ಭಾಮಹನಿಗಿಂತ ಕೊಂಚ ಬೇರೆಯಾಗುತ್ತದೆ. ಮಹಾಕಾವ್ಯ ನಾಯಾಕಾಭ್ಯುದಯವನ್ನೇನೋ ಚಿತ್ರಿಸಬೇಕೆಂಬುದು ನಿಜವಾದರೂ, ಮೊದಲು ಪ್ರತಿನಾಯಕನ ಉತ್ಕರ್ಷವನ್ನು ಚಿತ್ರಿಸಿ, ಅನಂತರ ನಾಯಕನು, ಇಂಥ ಮಹಿಮಾಶಾಲಿಯಾದ ಪ್ರತಿನಾಯಕನನ್ನು ಗೆದ್ದಂತೆ ವರ್ಣಿಸಿ ನಾಯಕನಿಗೆ ಹೆಚ್ಚಿನ ಉತ್ಕರ್ಷವನ್ನು ತರುವ ಕ್ರಮವೂ ನಮಗೆ ಇಷ್ಟವೇ ಎನ್ನುತ್ತಾನೆ ದಂಡಿ.[22] ಯಾವ ಕಾರಣಕ್ಕೂ ನಾಯಕನ ವಧೆ ಅಥವಾ ಸಾವನ್ನು ತರಬಾರದು; ಪ್ರತಿನಾಯಕನ ವಧೆಯನ್ನು ವರ್ಣಿಸಬೇಕೇ ಹೊರತು ನಾಯಕನ ವಧೆಯನ್ನು ವರ್ಣಿಸಬಾರದು; ಆದರೆ ಒಂದು ವೇಳೆ ನಾಯಕನು ಅದೇ ಶರೀರದಿಂದ ಪುನಃ ಬದುಕಿಕೊಳ್ಳುವಂಥ ಸಂದರ್ಭವಿದ್ದರೆ ಅವನ, ಎಂದರೆ ನಾಯಕನ ವಧೆಯನ್ನು ವರ್ಣಿಸಬಹುದು – ಎನ್ನುತ್ತದೆ ವಿಷ್ಣು ಧರ್ಮೋತ್ತರ ಪುರಾಣ.[23] ಎಂದರೆ, ನಾಯಕಾಭ್ಯುದಯವೇ ಮಹಾಕಾವ್ಯದ ಮುಖ್ಯ ಗುರಿ. ನಾಯಕನ ಸಾವನ್ನು ವರ್ಣಿಸಬಾರದು, ಎಂದು ನಮ್ಮವರು ವಿಧಿಸಿದ್ದರ ಅರ್ಥ ಇದು : ನಾಯಕ ಎಂದರೆ, ನಮ್ಮೆಲ್ಲರ ಆಸೆ, ಹಾರೈಕೆ, ಆದರ್ಶಗಳ ಪ್ರತೀಕ; ಲೋಕದಲ್ಲಿ ಸತ್‌ಶಕ್ತಿಗಳ ಪಾಡು ಏನೇ ಆಗಿರಲಿ, ಕಡೆಯ ಪಕ್ಷ ಕಲಾಲೋಕದಲ್ಲಾದರೂ, ಈ ಸತ್‌ಶಕ್ತಿಗಳು ಗೆದ್ದಂತೆ ತೋರಿಸಬೇಕಾದದ್ದು ಅತ್ಯಂತ ಅಗತ್ಯ. ಆದುದರಿಂದ ನಾಯಕನ ಸೋಲು, ನಮ್ಮೆಲ್ಲ ಉನ್ನತಾಭೀಪ್ಸೆಗಳ, ಆದರ್ಶಗಳ, ಮೌಲ್ಯಗಳ ಸೋಲು; ಅವನ ಗೆಲವು, ಇವೆಲ್ಲವುಗಳ ಗೆಲುವು.

ಆನಂದವರ್ಧನ ‘ಪಾತ್ರ’ವನ್ನು ‘ಪ್ರಕೃತಿ’ ಎನ್ನುತ್ತಾನೆ. ಪ್ರಕೃತಿಯಲ್ಲಿ ಉತ್ತಮ, ಮಧ್ಯಮ, ಅಧಮ, ದಿವ್ಯ ಮತ್ತು ಮಾನುಷ ಇವೇ ಮೊದಲಾದ ಪ್ರಭೇದಗಳಿವೆ. ಕಾವ್ಯದಲ್ಲಿ ಪ್ರಕೃತಿಯ ಅಥವಾ ಪಾತ್ರದ ಔಚಿತ್ಯ ಮುಖ್ಯವಾದದ್ದು. ಕೇವಲ ಮಾನುಷನಾದ ‘ಪ್ರಕೃತಿ’ಗೆ ದಿವ್ಯವಾದ ಉತ್ಸಾಹಾದಿಗಳನ್ನೂ ಕೇವಲ ದಿವ್ಯವಾದ ‘ಪ್ರಕೃತಿ’ಗೆ ಸಾಮಾನ್ಯ ಮನುಷ್ಯನ ಕಾರ್ಯಗಳನ್ನೂ ವರ್ಣಿಸಿದರೆ ಅನೌಚಿತ್ಯವೊದಗುತ್ತದೆ – ಎಂದು ಎಚ್ಚರಿಸುತ್ತಾನೆ.[24] ಆದರೆ ಮಹಾಕಾವ್ಯದ ನಾಯಕರು ಕೇವಲ ಮನುಷ್ಯರು ಮಾತ್ರವಲ್ಲ, ಅವರು ಅಸಾಧಾರಣ ವ್ಯಕ್ತಿಗಳೂ ಆಗಿರುತ್ತಾರಾದ್ದರಿಂದ, ಅವರ ಕಾರ್ಯಗಳಲ್ಲಿ ಅದ್ಭುತದ ಅಂಶಗಳೂ, ಅಘಟಿತ ಘಟನೆಗಳೂ ಸಾಕಷ್ಟಿರುತ್ತವೆ. ಆನಂದವರ್ಧನನು ಹೇಳುವಂತೆ ಆಯಾ ಪಾತ್ರದ ಶಕ್ತಿ ಸಾಮರ್ಥ್ಯ ಸ್ವಭಾವಗಳನ್ನು ಅನುಲಕ್ಷಿಸಿ, ಕವಿ ಅವರವರ ಕಾರ್ಯಗಳನ್ನು ಚಿತ್ರಿಸುವಲ್ಲಿ ಅನೌಚಿತ್ಯವೊದಗದಂತೆ ಎಚ್ಚರವಹಿಸಬೇಕಾದದ್ದು ಅಗತ್ಯ.

ಮಹಾಕಾವ್ಯಗಳಲ್ಲಿ, ‘ನಾಯಕ’ನಂತೆ, ‘ನಾಯಿಕೆ’ ಉಂಟೆ ಎನ್ನುವುದು ಪ್ರಶ್ನೆ. ನಾಟಕ ಲಕ್ಷಣವನ್ನು ಹೇಳುವಲ್ಲಿ ಭಾರತೀಯ ಲಾಕ್ಷಣಿಕರು, ‘ನಾಯಿಕಾ’ ಲಕ್ಷಣವನ್ನು ಹೇಳಿದಂತೆ ಮಹಾಕಾವ್ಯವನ್ನು ಕುರಿತು ಮಾತನಾಡುವಾಗ ನಾಯಿಕೆಯ ಲಕ್ಷಣವನ್ನೆ ಹೇಳದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಪಾಶ್ಚಾತ್ಯ ವಿಮರ್ಶಕರೂ, ‘ನಾಯಿಕೆ’ಯ ಲಕ್ಷಣವನ್ನು ಹೇಳುವುದೇ ಇಲ್ಲ. ನಾಯಿಕಾ ಲಕ್ಷಣವನ್ನು ಕುರಿತ ನಿರ್ಲಕ್ಷ  ಅಥವಾ ಮೌನ ಭಾರತೀಯ ಹಾಗೂ ಪಾಶ್ಚಾತ್ಯ ಮಹಾಕಾವ್ಯ ಚರ್ಚೆಯಲ್ಲಿ ಸಮಾನವಾದ ಸಂಗತಿಯಾಗಿದೆ. ಹಾಗೆಂದ ಮಾತ್ರಕ್ಕೆ, ಮಹಾಕಾವ್ಯಗಳಲ್ಲಿ ‘ನಾಯಿಕೆ’ಯ ಪಾತ್ರವೇ ಇಲ್ಲೆಂದು  ಅರ್ಥವಲ್ಲ. ಕವಿಗಳು, ತಮ್ಮ ಮಹಾಕಾವ್ಯಗಳಲ್ಲಿ ಪ್ರಧಾನವಾದ ಸ್ತ್ರೀ ಪಾತ್ರವನ್ನು ಚಿತ್ರಿಸಿದ್ದಾರೆ. ರಾಜನನ್ನು ವರ್ಣಿಸುವಾಗ, ರಾಣಿಯನ್ನೂ, ಜತೆಜತೆಗೇ, ರೂಪದಲ್ಲಿ ರತಿ, ಗುಣದಲ್ಲಿ ಪಾರ್ವತಿ, ಪಾತಿವ್ರತ್ಯದಲ್ಲಿ ಅರುಂಧತಿ ಇತ್ಯಾದಿ ವಿಶೇಷಣಗಳಿಂದ, ನಾಯಕನಿಗೆ ಈಕೆ ಎಂತಹ ಅನುರೂಪದವಳೆಂಬುದನ್ನು ಚಿತ್ರಿಸುತ್ತಾರೆ. ರಾಮಾಯಣದ ಸೀತೆ, ಕಾದಂಬರಿಯ ಮಹಾಶ್ವೇತೆ, ಕುಮಾರ ಸಂಭವದ ಪಾರ್ವತಿ, ಇಲಿಯಡ್‌ನ ಹೆಲೆನ್, ಪ್ಯಾರಡೈಸ್ ಲಾಸ್ಟ್‌ನ ಈವ್-ಇವರೆಲ್ಲರೂ ‘ನಾಯಿಕೆ’ಯರೆಂದು ಕರೆಯಲು ಅರ್ಹರಾದವರು. ಆದರೆ, ಭಾರತೀಯ ಮಹಾಕಾವ್ಯಗಳ ‘ನಾಯಿಕೆ’ಯರಿಗಿರುವ ಮಹತ್ವ ಹಾಗೂ ಸ್ಥಾನ ಪಾಶ್ಚಾತ್ಯ ಮಹಾಕಾವ್ಯಗಳ ‘ನಾಯಿಕೆ’ಯರಿಗಿಲ್ಲವೆಂಬುದು ಸ್ಪಷ್ಟವಾದ ಸಂಗತಿ. ಹೆಲೆನ್, ಈವ್ ಇವರನ್ನು, ಸೀತೆ, ಮಹಾಶ್ವೇತೆಯರೊಂದಿಗೆ ಖಂಡಿತವಾಗಿಯೂ ಹೋಲಿಸಲು ಸಾಧ್ಯವಿಲ್ಲ. ಟ್ರಾಯ್ ಮಹಾಯುದ್ಧಕ್ಕೆ ಕಾರಣಳಾದ ಹೆಲೆನ್‌ಳನ್ನು ಭಾರತೀಯ ಮಹಾಕಾವ್ಯದ ಪ್ರಧಾನ ಮಹಿಳಾ ಪಾತ್ರಗಳ ಜತೆಗೆ ಹೋಲಿಸುವುದೆ ಅವಿವೇಕವಾಗುತ್ತದೆ. ಹೋಮರನ ಜಗತ್ತು “ಗಂಡಸರ ಜಗತ್ತು, ಯೋಧರ ಜಗತ್ತು, ವೀರಶ್ರೇಷ್ಠರ ಜಗತ್ತು. ಇಂತಹ ಜಗತ್ತಿನಲ್ಲಿ ಸ್ತ್ರೀಯ ಪಾತ್ರ ಸಹಜವಾಗಿ ಅಮುಖ್ಯವಾದದ್ದು, ಇಲ್ಲಿನ ಘಟನೆಗಳಿಗೆಲ್ಲ ಮೂಲ ಹೆಲೆನ್‌ಳ ಸೌಂದರ್ಯ ಮತ್ತು ಪ್ರಣಯವಾದರೂ, ಹೆಲೆನ್ ಪ್ರಧಾನ ಪಾತ್ರವನ್ನೇನೂ ವಹಿಸುವುದಿಲ್ಲ.”೨೦[೨೦.     ಎಲ್.ಎಸ್. ಶೇಷಗಿರಿರಾವ್ : ಇಲಿಯಡ್ ಮುನ್ನುಡಿ. ಪು. ೨೩] ಮಿಲ್ಟನ್ ಚಿತ್ರಿಸಿರುವ ಈವ್‌ಳ ಪಾತ್ರದಲ್ಲಿ ಮಿಲ್ಟನ್ನನ ಸ್ತ್ರೀದ್ವೇಷವೇ ಎದ್ದು ಕಾಣುತ್ತದೆ. ಮಾನವನ ಪತನದಲ್ಲಿ ಹೆಣ್ಣಿನಪಾತ್ರವೇ ಪ್ರಧಾನವಾದದ್ದು ಎಂಬ ಧ್ವನಿ, ‘ಸ್ವರ್ಗಪತನ’ಕ್ಕೆ ಕಾರಣವಾದ ಸಂದರ್ಭದಿಂದ ಹೊರಡುತ್ತದೆ. ಆದರೆ ರಾಮಾಯಣದ ಸೀತೆಯ ಪಾತ್ರ ಹೀಗಲ್ಲ. “ರಾಮನು ಎಂಥ ಧೀರನು, ಎಂಥ ಮಹಾತ್ಮನು. ಎಂಥ ಸತ್ಯ ಪರಾಕ್ರಮನು ಎಂದು ತೋರಿಸಲು ಕವಿ ಎಷ್ಟರಮಟ್ಟಿಗೆ ಉದ್ದೇಶಿಸಿದನೋ, ಅಷ್ಟೇ ಅಥವಾ ಅದಕ್ಕೂ ಹೆಚ್ಚಾಗಿ ಅವನು, ರಾಮನ ಸತಿ ಧೀರಳು, ಮಹಾತ್ಮಳು, ಸತ್ಯಸಂಧಳು ಎಂದು ತೋರಿಸಲು ಉದ್ದೇಶಿಸಿದನು.”[25] ರಾಮಾಯಣವನ್ನು ರಾಮಾಯಣ ಎನ್ನದೆ ಬೇರೊಂದು ಹೆಸರಿಂದ ಕರೆಯುವುದಾದರೆ ಅದನ್ನು ಸೀತಾಚರಿತೆ ಎಂದು ಹೇಳಬಹುದು; ಆದುದರಿಂದಲೇ ರಾಮಾಯಣದ ಉಪೋದ್ಘಾತಕಾರನು ಈ ಕಾವ್ಯವನ್ನು ‘ಸೀತಾಯಾಶ್ಚರಿತಂ ಮಹತ್’ ಎಂದು ಕರೆದಿದ್ದಾನೆ. ಹೋಮರನ ಜಗತ್ತಿನಂತೆ, ರಾಮಾಯಣವೂ, ಗಂಡಸರ, ವೀರಶ್ರೇಷ್ಠರ, ಯೋಧರ ಜಗತ್ತಾದರೂ, ಸೀತೆಯಂತಹ ಮಹಾಮಹಿಳೆ, ಅಮುಖ್ಯವಾಗುವುದಿಲ್ಲ. ಮಹಾಭಾರತದ ಜಗತ್ತು ಕೂಡಾ, ಇಂತಹ ಪುರುಷರ ಹಾಗೂ ವೀರರ ಜಗತ್ತಾದರೂ, ದ್ರೌಪದಿಯಂತಹ ವಿಶಿಷ್ಟರೀತಿಯ ಸ್ತ್ರೀ ಪಾತ್ರ ಅಪ್ರಧಾನವಾಗುವುದಿಲ್ಲ. ಡಾಂಟೆಯ ‘ಡಿವೈನ್ ಕಾಮೆಡಿ’ಯಲ್ಲಿ ಬಿಯಾಟ್ರಿಸ್ ಪರಮ ಪ್ರೇಮದ ಪ್ರತೀಕವೆಂಬಂತೆ ಮಿಂಚಿ ಮಾಯವಾಗುತ್ತಾಳೆ. ಹಾಗೆಯೆ, ಸ್ತ್ರೀಯರನ್ನೇ, ಮಹಾಕಾವ್ಯದ ಕೇಂದ್ರ ಪಾತ್ರವನ್ನಾಗಿಸಿಕೊಂಡು, ಬರೆದ ಮಹಾಕಾವ್ಯಗಳಿಲ್ಲವೆಂಬುದು ನಿಜ. ಆದರೆ ಬಲ್ಗೇರಿಯಾ ಸಾಹಿತ್ಯದಲ್ಲಿ ಪುರುಷನಿಗೆ ಸರಿಸಮಾನವಾಗಿ ಸ್ತ್ರೀಯರನ್ನು ಮುಖ್ಯ ಪಾತ್ರವನ್ನಾಗಿ ಮಾಡಿಕೊಂಡು ವೀರಕಾವ್ಯ ರಚಿತವಾಗಿದೆ ಎಂದು. ಸಿ.ಎಂ. ಬೌರ ಅವರು ಹೇಳುತ್ತಾರೆ.

ಮಹಾಕಾವ್ಯದ ನಾಯಕ, ಮಹಾಕಾವ್ಯದ ಕೇಂದ್ರ ಬಿಂದು. ಮಹಾಕಾವ್ಯದ ಇತರ ಪಾತ್ರಗಳು, ಆ ಕೃತಿ ರಚಿತವಾದ ಕಾಲದ ಮೌಲ್ಯಗಳ, ಪ್ರತಿನಿಧಿಗಳೆಂಬಂತೆ ತೋರಿದರೂ, ಅವರೆಲ್ಲರಿಗಿಂತ ಮಿಗಿಲಾಗಿ ನಾಯಕನು, ಆ ಕಾಲದ ಸಮಸ್ತ ಸತ್ವಗಳ ಆದರ್ಶಗಳ ಪ್ರತೀಕವೆಂಬಂತೆ ತೋರುತ್ತಾನೆ.


[1] I.T. Myres : The Study of Epic development. p. 23

[2] P.G. Layle : Studies in devi Bhagavatha. p. 236

[3] ಕಾವ್ಯಾಲಂಕಾರ : ೧-೧೯

[4] ಕಾವ್ಯಾದರ್ಶ : ೧-೧೫

[5] ಪೂರ್ವಪುರಾಣ. ಪರ್ವ, ೧-೯೯

[6] ಸಾಹಿತ್ಯ ದರ್ಪಣ : ೬-೩೧೫, ೩೧೬

[7] ಪಂಪರಾಮಾಯಣ ಸಂಗ್ರಹ : (ಸಂ. ಡಿ.ಎಲ್. ನರಸಿಂಹಾಚಾರ್) ೧-೪

[8] ಶ್ರೀರಾಮನ ಪಾತ್ರವನ್ನು ವಾಲ್ಮೀಕಿ ಪರಿಚಯ ಮಾಡಿಕೊಡುವುದು ಹೀಗೆ :

ಇಕ್ಷಾ ಕುವಂಶ ಪ್ರಭವೋ ರಾಮೋ ನಾಮ ಜ್ಯತೈಃ ಶ್ರುತಃ |
ನಿಯತಾತ್ಮಾ ಮಹಾವೀರ್ಯೋ ದ್ಯುತಿಮಾನ್ ಧೃತಿಮಾನ್ ವಶೀ       ||೮||
ಬುದ್ಧಿಮಾನ್ ನೀತಿಮಾನ್ ವಾಗ್ಮೀ ಶ್ರೀಮಾನ್ ಶತ್ರು ನಿಬರ್ಹಣಃ |
ವಿಪುಲಾಂಸೋ ಮಹಾಬಾಹುಃ ಕಂಬುಗ್ರೀವೋ ಮಹಾ ಹನುಃ            ||೯||
ಮಹೋರಸ್ಕೋ ಮಹೇಷ್ವಾಸೋ ಗೂಢ ಜತ್ರುರಿಂದಮಃ |
ಆಜಾನುಬಾಹುಃ ಸುಶಿರಾಃ ಸುಲಲಾಟ ಸುವಿಕ್ರಮಃ            ||೧೦||
ಸಮಃ ಸಮವಿಭಕ್ತಾಂಗಃ ಸ್ನಿಗ್ಧವರ್ಣಃ ಪ್ರತಾಪವಾನ್ |
ಪೀನವಕ್ಷಾ ವಿಶಾಲಾಕ್ಷೋ ಲಕ್ಷ್ಮೀವಾನ್ ಶುಭಲಕ್ಷಣಃ          ||೧೧||
ಧರ್ಮಜ್ಞಃ ಸತ್ಯಸಂಧಶ್ಚ ಪ್ರಜಾನಾಂಚ ಹಿತೇರತಃ |
ಯಶಸ್ವೀ ಜಾನಸಂಪನ್ನಃ ಶುಚಿರ್ವಶ್ಯಃ ಸಮಾಧಿಮಾನ್      ||೧೨||
ಪ್ರಜಾಪತಿ ಸಮಃ ಶ್ರೀಮಾನ್ ಧಾತಾರಿಪು ನಿಷೂದನಃ |
ರಕ್ಷಿತಾಸ್ವಸ್ಯ ಧರ್ಮಸ್ಯ ಸ್ವಜನಸ್ಯ ಚ ರಕ್ಷಿತಾ |
ವೇದವೇದಾಂಗ ತತ್ವಜ್ಞೋ ಧನುರ್ವೇದೇ ಚ ನಿಷ್ಠಿತಃ         ||೧೪||
ಸರ್ವಶಾಸ್ತ್ರಾರ್ಥ ತತ್ವಜ್ಞಃ ಸ್ಮ ತಿಮಾನ್ ಪ್ರತಿಭಾನವಾನ್ |
ಸರ್ವಲೋಕ ಪ್ರಿಯಃ ಸಾಧುರದೀನಾತ್ಮಾ ವಿಚಕ್ಷಣಃ           ||೧೫||
ಸರ್ವಧಾಭಿಗತಃ ಸದ್ಭಿಃ ಸಮುದ್ರ ಇವ ಸಿಂಧುಭಿಃ |
ಆರ್ಯಃ ಸರ್ವ ಸಮಶ್ಚೆ ವ ಸದೈವ ಪ್ರಿಯದರ್ಶನಃ            ||೧೬||
ಸಚ ಸರ್ವಗುಣೋಪೇತಃ ಕೌಸಲ್ಯಾನಂದವರ್ಧನಃ
ಸಮದ್ರ ಇವ ಗಾಂಭೀರ್ಯೇ ಧೈರ್ಯೇಣ ಹಿಮಾನಿವ         ||೧೭||
ವಿಷ್ಣುನಾ ಸದೃಶೋ ವೀರ್ಯೇ ಸೋಮವತ್ ಪ್ರಿಯದರ್ಶನಃ |
ಕಾಲಾಗ್ನಿ ಸದೃಶಃ ಕ್ರೋಧೇ ಕ್ಷಮಯಾ ಪೃಥಿವೀ ಸಮಃ       ||೧೮||
ಧನದೇನ ಸಮಸ್ತ್ಯಾಗೇ ಸತ್ಯೇ ಧರ್ಮ ಇವಾಪರಃ |
ತಮೇವಂ ಗುಣಸಂಪನ್ನಂ ರಾಮಂ ಸತ್ಯ ಪರಾಕ್ರಮಂ        ||೧೯||

ಶ್ರೀಮದ್ ವಾಲ್ಮೀಕಿ ರಾಮಾಯಣಂ, ಬಾಲಾಕಾಂಡ ಸರ್ಗ ೧. ಶ್ಲೋ ೮-೧೨; ೧೪-೧೯

[9] Paul Merchant : The Epic p. 16

[10] ಹೋಮರನ ಅಖಿಲೀಸ್‌ನ ವರ್ತನೆಯೊಂದಿಗೆ, ಕನ್ನಡ ಮಹಾಕಾವ್ಯ (?) ವಾದ ರನ್ನನ ಗದಾಯುದ್ಧದ ಭೀಮನ ಪಾತ್ರದ ನಡವಳಿಕೆಯನ್ನು ಹೋಲಿಸಿ ನೋಡಬಹುದು. ಭೀಮನ ರೋಷದ ಕಾರಣ, ಅಖಿಲೀಸ್‌ನ ರೋಷದ ಕಾರಣಕ್ಕಿಂತ ಉದಾತ್ತವಾದುದೆಂಬುದೇನೊ ನಿಜವೆ. ಆದರೆ ಅಖಿಲೀಸ್ ಹೆಕ್ಟರನ ವಿಚಾರದಲ್ಲಿ ತೋರಿದ ಅಮಾನುಷ ವರ್ತನೆಗೂ, ಭೀಮನು, ತನ್ನ ಗದಾಘಾತದಿಂದ ತೊಡೆ ಮುರಿದು ಬಿದ್ದ ದುರ್ಯೋಧನನ ವಿಚಾರಕ್ಕೆ ತೋರಿದ ಅನಾಗರಿಕ ವರ್ತನೆಗೂ ಸಾಮ್ಯವಿದೆ. ಗದಾಯುದ್ಧದಲ್ಲಿ ತೊಡೆ ಮುರಿದು ಬಿದ್ದ ಚಕ್ರವರ್ತಿಯಾದ ದುರ್ಯೋಧನನನ್ನು, ಧರ್ಮರಾಜಾದಿಗಳು ಬೇಡ ಬೇಡ ಎಂದರೂ, ಭೀಮನು ತನ್ನ ಎಡಗಾಲಿ  -ನಿಂದ ಒದೆದು ಅವನ ಕಿರೀಟವನ್ನು ನುಚ್ಚುನೂರು ಮಾಡಿ ಪರಾಭವಿಸುತ್ತಾನೆ. ಆದರೆ, ಆವರ್ತನೆ, ಭೀಮನು ಮೊದಲೇ ಮಾಡಿದ ಪ್ರತಿಜ್ಞೆಗೆ, ಎಂದರೆ ದುರ್ಯೋಧನನ ಊರುಭಂಗ ಮುಕುಟ ಭಂಗಗಳನ್ನು ಮಾಡುತ್ತೇನೆಂಬ ಪ್ರತಿಜ್ಞೆಗೆ ಅನುಗುಣವಾಗಿದೆಯೇ ಹೊರತು, ಕೇವಲ ಪ್ರತೀಕಾರ  ಭೀಷಣ ಬುದ್ಧಿಯ ಕ್ರಿಯೆಯಷ್ಟೇ ಎಂದು ತೋರುವುದಿಲ್ಲ. ಆದರೆ ಹೆಕ್ಟರನ ಶವವನ್ನು, ಹಗ್ಗ ಬಿಗಿದು, ರಥಕ್ಕೆ ಕಟ್ಟಿ ಧೂಳಿನಲ್ಲಿ ಎಳೆದಾಡುವ ಅಖಿಲೀಸ್‌ನ ಅನಾಗರಿಕ, ಅಮಾನುಷ ವರ್ತನೆಗೆ ಹೋಲಿಸಿದರೆ, ಗದಾಯುದ್ಧದ ಭೀಮನ ವರ್ತನೆ ಅನುದಾತ್ತವೆಂದೇನೂ ತೋರುವುದಿಲ್ಲ.

[11] C.M. Bowra : Heroic Poetry : p. 96

[12] ಹೋಲಿಸಿ : ‘ಗಳಿಗೆ, ಜಾವಂ, ದಿನಂ, ಪಕ್ಷ, ಮಾಸ, ಅಬ್ದತತಿಗಳ ಹಂಗು ಹೊದ್ದದೆ ಒಂದೆರಡು ಸಂವತ್ಸರಂಗಳಲೆ ಹತ್ತೆ ದು ವರುಷದ ಹರೆಯವಂ ತಳೆದನು ಅನುಪಮ ಸ್ವಾತಂತ್ರ್ಯನು (ಸಿದ್ಧರಾಮ ಚರಿತ್ರೆಯ ಸಂಗ್ರಹ : ೧.೪೪ ಸಂ. ಡಿ.ಎಲ್. ನರಸಿಂಹಾಚಾರ್)

[13] C.M. Bowra : Heroic Poetry p. 91

[14] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ. ಪು. ೧೩

[15] ಕಾವ್ಯಾಲಂಕಾರ : ೧-೨೦

[16] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ. ಪು. ೫

[17] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ. ಪು. ೨೩

[18] ರಾಮಾಯಣದ ‘ಪ್ರತಿ ನಾಯಕ’ನಾದ ರಾವಣನ ಪಾತ್ರವನ್ನು ಗಮನಿಸಬಹುದು. ರಾವಣನು ರಾಮನಂತಹ ಮಹಾನಾಯಕನಿಗೆ ಪ್ರತಿಯಾಗಿ ನಿಲ್ಲಬಲ್ಲ ಯೋಗ್ಯತೆಯುಳ್ಳ ಪ್ರತಿನಾಯಕನಾಗಿದ್ದಾನೆ. ಅವನು ಮಹಾ ವೀರ; ದೈವ ಭಕ್ತ; ಅನೇಕ ಸದ್ಗುಣಗಳ ನೆಲೆ. ಆದರೆ, ಅವನು ಕಾಮ ವ್ಯಾಮೋಹದಿಂದ ಸೀತೆಯನ್ನು ಅಪಹರಿಸಿ ತನ್ನ ಪತನಕ್ಕೆ ಕಾರಣನಾದನು. ಮಹಾಭಾರತದಲ್ಲಿ, ವಾಸ್ತವವಾಗಿ, ನಾಯಕ ಯಾರು ಎಂದು, ರಾಮಾಯಣದಲ್ಲಿನಂತೆ ಬೆರಳಿಟ್ಟು ತೋರಿಸುವುದು ಕಷ್ಟ, ಅರ್ಜುನನನ್ನು ನಾಯಕನೆಂದೂ, ದುರ್ಯೋಧನನನ್ನು ಪ್ರತಿನಾಯಕನೆಂದೂ ಭಾವಿಸಬಹುದೇನೋ : ರನ್ನನ ಗದಾಯುದ್ಧದಲ್ಲಿ, ಭೀಮನು ನಾಯಕ, ದುರ್ಯೋಧನನು ಪ್ರತಿನಾಯಕನಾದರೂ, ತನ್ನ ಮಹಾನುಭಾವ ಸದೃಶಗುಣಗಳಿಂದ ಅವನು ಉದಾತ್ತನಾಗಿಯೇ ತೋರುತ್ತಾನೆ.

[19] ಕಾವ್ಯದಲ್ಲಿ ಉದ್ದಕ್ಕೂ ನಾಯಕನೇ ಪ್ರಮುಖವಾಗಿರಬೇಕು, ನಾಯಕಾಭ್ಯುದಯವೆಂದರೆ ಇದೇ – ಎಂದು ನಮ್ಮ ಲಾಕ್ಷಣಿಕರು ಭಾವಿಸಿದಂತೆ ತೋರುತ್ತದೆ. ಆದರೆ, ರನ್ನನ ಗದಾಯುದ್ಧದ ದುರ್ಯ್ಯೊಧನ, ಪಂಪನ ಕರ್ಣ, ನಾಗಚಂದ್ರನ ರಾವಣ, ಮಿಲ್ಟನ್‌ನ ಸೇಟನ್ ಈ ಪ್ರತಿನಾಯಕ ಪಾತ್ರಗಳನ್ನು ನೋಡಿದರೆ, ಅವುಗಳನ್ನು ಚಿತ್ರಿಸಿದ ಮಹಾಕವಿಗಳು, ತಮ್ಮ ತಮ್ಮ ನಾಯಕ ಪಾತ್ರಕ್ಕಿಂತಲೂ ಮಿಗಿಲಾಗಿ, ಪ್ರಧಾನವೆಂದು ಕಾಣುವಂತೆ ‘ಪ್ರತಿನಾಯಕ’ ಪಾತ್ರಗಳನ್ನೆ ಚಿತ್ರಿಸಿದಂತೆ ಭಾಸವಾಗುತ್ತದೆ. ಎಂದರೆ ಪ್ರತಿನಾಯಕನ ಒಳ್ಳೆಯತನವನ್ನು ಅವನ ಶೌರ್ಯ – ಗುಣಾದಿಗಳನ್ನು ಅನುಕಂಪೆಯಿಂದ ಚಿತ್ರಿಸುವುದನ್ನು ಕವಿಗಳು ಮರೆತು, ಕೇವಲ ‘ನಾಯಕ’ ಪರವಾದ ಪಕ್ಷಪಾತಗಳಷ್ಟನ್ನೆ ಪ್ರಕಟಿಸಿಲ್ಲ ಎಂಬುದು ಮೆಚ್ಚಬೇಕಾದ ವಿಷಯ. ಆದರೆ ‘ಪ್ರತಿನಾಯಕ’ರ ವಿಜಯವನ್ನೇನೂ ಚಿತ್ರಿಸದೆ, ಅವರಿಗೆ, ಒದಗಿದ ಪರಾಭವವನ್ನು ಚಿತ್ರಿಸುವುದರ ಮೂಲಕ ಲೋಕನ್ಯಾಯವನ್ನು ಕವಿಗಳು ಎತ್ತಿ ಹಿಡಿದಿದ್ದಾರೆ; ‘ನಾಯಕಾಭ್ಯುದಯ’ವನ್ನೂ ಚಿತ್ರಿಸಿದ್ದಾರೆ.

[20] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ. ಪು. ೩೬

[21] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ ೬, ೭

[22] ಅಲ್ಲೇ ಪು. ೧೮

[23] ಅಲ್ಲೇ. ಪು. ೨

[24] ಆನಂದವರ್ಧನ : ಧ್ವನ್ಯಾಲೋಕ : ೩-೧೪ ಕಾರಿಕೆಯ ನಂತರದ ವೃತ್ತಿ.

[25] ಮಾಸ್ತಿ ವೆಂಕಟೇಶ ಅಯಂಗಾರ್ : ಆದಿಕವಿ ವಾಲ್ಮೀಕಿ. ಪು. ೧೩೨