ಮಹಾಕಾವ್ಯದ ವಸ್ತು

“ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ?”

[1]

‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಬರೆಯುವಾಗ ಕುವೆಂಪು ಅವರು, ತಮ್ಮ ಕಾವ್ಯದ ಪ್ರಾಸ್ತಾವಿಕ ಭಾಗದಲ್ಲಿ, ತಮಗೆ ತಾವೇ ಹೇಳಿಕೊಂಡಂತಿರುವ ಈ ಉಕ್ತಿ, ಅವರಿಗೂ ಅವರು ಆರಿಸಿಕೊಂಡ ರಾಮಾಯಣದ ಕಥಾವಸ್ತುವಿಗೂ ಇರುವ ಸಂಬಂಧವನ್ನು ಹೇಳುತ್ತದೆ. ಶಿಲ್ಪಿಗೆ ಶಿಲೆ ಹೇಗೋ, ಕವಿಗೆ ಕಾವ್ಯವಸ್ತು ಹಾಗೆ. ಎಂದರೆ ಶಿಲೆ ಶಿಲ್ಪಿಗೆ ದೊರಕುವ ಮೊದಲೆ, ಅದನ್ನವನು ಮುಟ್ಟುವ ಮೊದಲೇ ಇತ್ತು, ನಿಸರ್ಗದ ಒಂದು ಭಾಗವಾಗಿ, ಮತ್ತು ಸಹಜವಾಗಿ ಅಲ್ಲಿತ್ತು. ಅದನ್ನು ಶಿಲ್ಪಿಯೇನೂ ನಿರ್ಮಿಸಲು ಸಾಧ್ಯವಿಲ್ಲ. ಆದರೆ, ಅವನು ನಿರ್ಮಿಸಲು ಸಾಧ್ಯವಾಗುವುದು, ಶಿಲೆಯ ಮಾಧ್ಯಮದಿಂದ ಕಲೆಯನ್ನು. ಆದುದರಿಂದ ಶಿಲ್ಪಿಯ ‘ಕಲೆ’ಗೆ ನಿಸರ್ಗಸಿದ್ಧವಾದ ಶಿಲೆ ಅತ್ಯಂತ ಅಗತ್ಯವಾದದ್ದು. ಅವನ ಮನಸ್ಸಿನ ಆಲೋಚನೆಗಳಿಗೆ, ಭಾವನೆಗಳಿಗೆ ರೂಪು ಕೊಡಲು ಅಗತ್ಯವಾದ ಮಾಧ್ಯಮ ಅದು. ಅಲ್ಲದೆ, ಅವನ ಕಲಾ ನಿರ್ಮಿತಿಗೆ ಅಗತ್ಯವಾದ ಮಾಧ್ಯಮ ಅಷ್ಟೊಂದು ಸುಲಭವಾಗಿ ದೊರೆಯುವಂಥದಲ್ಲ. ಶಿಲ್ಪಿಯಾದವನಿಗೆ ಎಲ್ಲಾ ‘ಶಿಲೆ’ಯೂ ಅವನ ಕಲಾ ಮಾಧ್ಯಮವಾಗಲಾರದು. ನಿಸರ್ಗದಲ್ಲಿ ಬೇಕಾದಷ್ಟು ಶಿಲೆಗಳಿವೆ ಎಂದ ಮಾತ್ರಕ್ಕೆ ಸಿಕ್ಕ ಶಿಲೆಯನ್ನೆಲ್ಲಾ ಆ ಶಿಲ್ಪಿ ತನ್ನ ಕಲಾ ನಿರ್ಮಿತಿಗೆ ಅವಲಂಬಿಸಲಾರ. ತನ್ನ ಅಂತರಂಗದ ಅಭಿವ್ಯಕ್ತಿಗೆ ಯಾವ ರೀತಿಯ ಹಾಗೂ ಜಾತಿಯ ಶಿಲೆ ಒಗ್ಗುವುದೆಂಬುದನ್ನು ಪ್ರತ್ಯಭಿಜ್ಞೆಯಿಂದ ನಿಜವಾದ ಶಿಲ್ಪಿ ಕಂಡುಕೊಳ್ಳುತ್ತಾನೆ. ಎಂದರೆ ಶಿಲ್ಪಿಗೂ ಅದೊಂದು ಅನ್ವೇಷಣೆ. ಬೆಳುಗೊಳದ ಗೊಮ್ಮಟ ಮಹಾಮೂರ್ತಿಯನ್ನು ಕೆತ್ತಿದ ಶಿಲ್ಪಿ ತನ್ನ ಅಂತರಂಗದ ಬೃಹತ್ ಭಾವದ ಮೂರ್ತೀಕರಣಕ್ಕೆ ಮುನ್ನ ತಕ್ಕ ಬೃಹತ್ ಶಿಲೆಯ ಅನ್ವೇಷಣೆಯಲ್ಲಿ ಖಂಡಿತವಾಗಿಯೂ ತೊಳಲಿರಬೇಕು. ಯಾವಾಗ ಅವನು ಬೆಳುಗೊಳದ ಬೆಟ್ಟದಮೇಲೆ, ಬೃಹದಾಕಾರದ ‘ಶಿಲೆ’ಯೊಂದನ್ನು ಕಂಡನೋ, ಮತ್ತು ಆ ಶಿಲೆ ತನ್ನ ಅಂತರಂಗದ ಮೂರ್ತಿಗೆ ಮೈಯಾಗುವುದೆಂಬುದನ್ನು ಅರಿತನೋ, ಆಗ ಅವನ ಅನ್ವೇಷಣೆ ಒಂದು ನಿಲುಗಡೆಗೆ ಬಂದಿರಬೇಕು. ಹೀಗೆ ಈ ಶಿಲ್ಪಿ, ಈ ‘ಶಿಲೆ’ಯನ್ನು ಕಂಡದ್ದು ಒಂದು ಅಪೂರ್ವ ಸಂಘಟನೆ. ಹಾಗೆಯೆ ಮಹಾಕವಿಯಾದವನು ತನ್ನ ಮಹದನುಭವದ ಅಭಿವ್ಯಕ್ತಿಗೆ, ಮಹತ್ತಾದ ವಸ್ತುವೊಂದನ್ನು ಕಂಡುಕೊಳ್ಳುವುದು ಒಂದು ಅಪೂರ್ವ ಸಂಘಟನೆಯೇ. ಇಂಥ ಸಂಘಟನೆ, ವಾಲ್ಮೀಕಿ, ವರ್ಜಿಲ್, ಹೋಮರ್ ಇವರಲ್ಲಿ ಆದುದರಿಂದ ಅವರು ಮಹಾಕಾವ್ಯಗಳನ್ನು ಬರೆಯಲು ಸಾಧ್ಯವಾಯಿತು. “ನಿಜವಾಗಿಯೂ ಮಹಾವಸ್ತು ಮತ್ತು ಮಹಾಕವಿ ಸಂಧಿಸುವುದು, ಅಪೂರ್ವ, ಅತ್ಯಪೂರ್ವ; ಹೀಗೆ ಸಂಧಿಸದಿದ್ದರೆ ಅಲ್ಲಿ ಮಹಾಕಾವ್ಯವೆ ಸಂಭವಿಸಲಾರದು.”[2]

ಆದರೆ ಈ ಸಂಘಟನೆ ಅಥವಾ ಸಂಧಿಸುವಿಕೆ, ಕುವೆಂಪು ಅವರು ಹೇಳುವಂತೆ ಶಿಲೆ, ಶಿಲ್ಪ ಇವುಗಳ ಸಂಬಂಧದಷ್ಟು ಸರಳವೇನಲ್ಲ-ಅದೂ ಮಹಾಕಾವ್ಯದ ವಸ್ತುವನ್ನು ಕುರಿತು ಹೇಳುವಾಗ. ಯಾಕೆಂದರೆ, ಮಹಾಕಾವ್ಯದ ವಸ್ತುವನ್ನು, ಇದ್ದಲ್ಲೆ ಇದ್ದು ಯಾವ ರೂಪಾಂತರವನ್ನೂ ಹೊಂದದ ‘ಶಿಲೆ’ಗೆ ಹೋಲಿಸಲಾಗುವುದಿಲ್ಲ. ಮಹಾಕಾವ್ಯದ ವಸ್ತು, ಮಹಾಕವಿಗೆ ಪ್ರಾಚೀನದಿಂದ ಪ್ರಾಪ್ತವಾದದ್ದಾಗಿರುತ್ತದೆ; ಅಷ್ಟೇ ಅಲ್ಲ, ಬಹುಕಾಲ ಪರಂಪರೆಯಲ್ಲಿ ತೇಲುತ್ತಾ ಬಂದು, ಅನೇಕ ಮನಸ್ಸುಗಳಿಂದ ಒಂದು ರೀತಿಯಲ್ಲಿ ರೂಪಿತವಾಗುತ್ತದೆ. ಹೀಗೆ ಮಹಾಕಾವ್ಯದ ವಸ್ತು, ಅದನ್ನು ಬರೆಯುವವನಿಗೆ ಪರಂಪರೆಯಿಂದ ದತ್ತವಾದದ್ದು ಎನ್ನುವುದು ಬಹುಮುಖ್ಯವಾದ ಅಂಶ. ವಾಲ್ಮೀಕಿಯು ರಾಮಾಯಣವನ್ನು ಬರೆಯುವ ವೇಳೆಗೆ, ಅದರ ಕಥಾವಸ್ತು ಆಗಲೇ ಜನಮನದಲ್ಲಿ ಪ್ರವಹಿಸುತ್ತಾ ಬಂದಿತ್ತು. ತನ್ನ ಕಾಲಕ್ಕೆ ಪ್ರಚಲಿತವಾದ ‘ರಾಮಕಥಾ ಪುಂಜ’ದಿಂದ, ವಾಲ್ಮೀಕಿಯು ಬೃಹದ್ ಕಾವ್ಯವೊಂದನ್ನು ರಚಿಸಲು ಸಾಧ್ಯವಾಯಿತು; ಮಹಾಭಾರತವೂ ಹೀಗೆ ಆನುಕ್ರಮಿಕ ವಿಕಾಸವನ್ನು ಪಡೆದುಕೊಂಡುಬಂದು ವ್ಯಾಸರ ಪ್ರತಿಭೆಯಲ್ಲಿ ಸಂಘಟಿತವಾಯಿತು. ಹೋಮರನ ಕಾವ್ಯವೂ ಅಷ್ಟೇ. ಅವನಿಗಿಂತ ಹಿಂದೆ, ಚಾರಣ ಕವಿಗಳಿಂದ ಬಂದ ಕಥಾವಸ್ತು ಅದು. ಎಂದರೆ, ಮಹಾಕವಿಗಳ ಈ ವಸ್ತು “ಹಿಂದೆ ನಡೆದ ಒಂದು ಘಟನೆಯನ್ನು ಕುರಿತದ್ದು.”[3] ಈ ಘಟನೆ ವಾಸ್ತವವಾಗಿ ನಡೆದದ್ದು ಅಥವಾ ‘ಇತಿಹಾಸ’ವೇ ಆಗಿರಬಹುದು; ಇಲ್ಲವೆ ಕವಿ ತಾನೇ ಕಂಡು ಕಟ್ಟಿದ್ದೂ ಆಗಿರಬಹುದು. ಹೀಗಾದದ್ದು ಮೊದಲ ಮಹಾಕಾವ್ಯಗಳನ್ನು ಬರೆದ ಕವಿಗಳಲ್ಲಿ.

ಹಿಂದೆ ಆಗಲೇ ಚರ್ಚಿಸಿರುವಂತೆ, ಅನಂತರದ ಮಹಾಕಾವ್ಯ (Later Epic) ಗಳಿಗೆ, ಈ ಮೊದಲ ಮಹಾಕಾವ್ಯ (Primitive Epic) ಗಳೇ ಆಕರಗಳಾಗಿವೆ. ಎಂದರೆ, ಅನಂತರದ ಮಹಾಕವಿಗಳೂ ಸಹ, ತಮಗಿಂತ ಹಿಂದಿನ, ಪ್ರಾಚೀನವಾದ ವಸ್ತುವನ್ನು ಕುರಿತು ಮಹಾಕಾವ್ಯವನ್ನು ಬರೆಯಲು ಅಪೇಕ್ಷಿಸುತ್ತಾರೆ. ಹಿಂದಿನಿಂದ ಬಂದ ಕಥೆಯನ್ನು ತಮ್ಮ ಮಾತಿನಲ್ಲಿ, ಮತ್ತು ತಮ್ಮ ಸಮಕಾಲೀನ ಸಂದರ್ಭದಲ್ಲಿ ಹೇಳುವ  ಪ್ರಯತ್ನ ಇದು. ವರ್ಜಿಲ್ ‘ಈನಿಯಡ್’ ಅನ್ನು ರಚಿಸಿದ್ದು ಹೋಮರನ ಕಾವ್ಯದ ಆಧಾರದ ಮೇಲೆ. ವರ್ಜಿಲ್‌ನ ಕಾವ್ಯದ ನಾಯಕ ಈನಿಯಸ್, ಟ್ರಾಯ್ ಮಹಾಯುದ್ಧದಲ್ಲಿ ಪಾಲುಗೊಂಡು, ಬದುಕಿ ಉಳಿದು, ನಿರ್ವಸಿತವಾಗಿ ಹೊಸ ನೆಲೆಯೊಂದನ್ನು ಹುಡುಕಿಕೊಂಡು ಹೊರಟ ವೀರ. ಅವನ ಈ ಅನ್ವೇಷಣೆ ಹಾಗೂ ರೋಮನ್ ಸಾಮ್ರಾಜ್ಯವನ್ನು ಸ್ಥಾಪಿಸಿದ ‘ಕಥೆ’ಯೆ ‘ಈನಿಯಡ್’ ಮಹಾಕಾವ್ಯದ ವಸ್ತು. ಕಾಲಿದಾಸನ ‘ರಘುವಂಶ’ ಶ್ರೀರಾಮನ ವಂಶಜರನ್ನು ಕುರಿತದ್ದು; ಭಾರವಿಯ ‘ಕಿರಾತಾರ್ಜುನೀಯ’ ಮಹಾಭಾರತದಲ್ಲಿ ಬರುವ, ಅರ್ಜುನನ ಪಾಶುಪತಾಸ್ತ್ರ ಸಂಪಾದನೆಯ ಸಂದರ್ಭವನ್ನು ಕುರಿತದ್ದು; ಪಂಪನಿಗೆ ಮೂಲವಾದದ್ದು ‘ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿ’ ಯಾದ ವ್ಯಾಸಭಾರತ; ರನ್ನನಿಗೆ ಆಕರವಾದದ್ದು ಪಂಪನ ‘ವಿಕ್ರಮಾರ್ಜುನ ವಿಜಯ’ದ ಹದಿಮೂರು ಹದಿನಾಲ್ಕನೆಯ ಆಶ್ವಾಸ; ನಾರಾಣಪ್ಪನಿಗೆ ಸ್ಫೂರ್ತಿಯಾದದ್ದು ಮೂಲ ಮಹಾಭಾರತ. ಹೀಗೆ ‘ಅನಂತರದ ಕವಿಗಳು’ ಒಂದು ಹಿಂದಿನ ಕಥೆಯನ್ನೊ, ಅಥವಾ ಆ ಕಥೆಯ ಒಂದು ಭಾಗವನ್ನೋ, ಅಥವಾ ಅದರೊಳಗಿನ ಒಂದು ಆಖ್ಯಾನವನ್ನೋ, ಉಪಾಖ್ಯಾನವನ್ನೋ[4] ತೆಗೆದುಕೊಂಡು, ತಮ್ಮದನ್ನಾಗಿ ವಿಸ್ತರಿಸುತ್ತಾರೆ. ಎಂದರೆ ಇವರೆಲ್ಲರಿಗೂ ಕಥಾವಸ್ತುವು ಮೂಲತಃ ಪ್ರಾಚೀನವಾದದ್ದು ಅಥವಾ ಪರಂಪರಾಗತವಾದದ್ದು.

ಮಹಾಕಾವ್ಯದ ವಸ್ತು ಪರಂಪರೆಯಿಂದ ಬಂದದ್ದು, ಅತ್ಯಂತ ಪ್ರಾಚೀನವಾದದ್ದು ಎಂಬುದಷ್ಟೇ ಅಲ್ಲ; ಕವಿ ಎಂಥ ವಸ್ತುವನ್ನು ತೆಗೆದುಕೊಂಡರೂ ಅದನ್ನು ಪ್ರಾಚೀನತೆಯಲ್ಲಿ ಅದ್ದಿ ಹೇಳುವುದು ಇದರ ಒಂದು ವಿಶೇಷ. ಯಾವ ಕವಿಯೂ ತಾನು ಹೇಳುತ್ತಿರುವ ಕಥೆಯ ಮೊದಲಿಗ ತಾನೇ ಎಂದುಕೊಳ್ಳುವುದಿಲ್ಲ. ‘ಮಯಾಶ್ರುತಂ ಇದಂ ಪೂರ್ವಂ ಪುರಾಣೇ’ (ಹಿಂದೆ ನಾನು ಕೇಳಿದ್ದು ಹೀಗೆ) ಎನ್ನುವುದೇ ಅವನ ಧಾಟಿ. ‘ಜನಮೇಜಯನಿಗೆ ವೈಶಂಪಾಯನನು ಹೇಳಿದ್ದನ್ನು ನಾನು ನಿಮಗೆ ಹೇಳುತ್ತಿದ್ದೇನೆ’; ‘ಶ್ರೀರಾಮನ ಎದುರಿಗೆ ಲವಕುಶರು ಹೇಳಿದ್ದನ್ನು ನಾನು ನಿಮಗೆ ಹೇಳುತ್ತೇನೆ’, ‘ಶಿವನು ಪಾರ್ವತಿಗೆ ಹೇಳಿದ್ದು ಹೀಗೆ’; ‘ಗೌತಮ ಗಣಧರರು ಶ್ರೇಣಿಕ ಮಹಾರಾಜನಿಗೆ ಇದನ್ನು ನಿರೂಪಿಸಿದರು’; ‘ಪೂರ್ವಸೂರಿಗಳು ಹೇಳಿದ್ದನ್ನು ನಾನು ಪೋಣಿಸಿ ಹೇಳುತ್ತಿದ್ದೇನೆ’ – ಇತ್ಯಾದಿ ಮಾತುಗಳನ್ನು ಗಮನಿಸಬಹುದು. ಕುವೆಂಪು ಅವರೂ ರಾಮಾಯಣ ದರ್ಶನವನ್ನು ಬರೆಯುವಲ್ಲಿ ‘ಪಿಂತೆ ವಾಲ್ಮೀಕಿಯುಲಿದ ಕತೆಯಾದೊಡಂ, ಕನ್ನಡದಿ ಬೇರೆ ಕತೆಯೆಂಬಂತೆ, ಬೇರೆ ಮೆಯ್ಯಾಂತಂತೆ’ ಹೇಳುತ್ತೇನೆ ಎನ್ನುತ್ತಾರೆ. ಈ ಕೆಲವು ಮಾತುಗಳನ್ನು ನೋಡಿದರೆ, ಕಥಾವಸ್ತುವನ್ನು ಪರಂಪರೆಯಿಂದ ಆರಿಸಿಕೊಳ್ಳುವ, ಮತ್ತು ಅದನ್ನು ಪ್ರಾಚೀನವೆಂಬಂತೆ ಹೇಳುವ ದೃಷ್ಟಿಯನ್ನು ಗುರುತಿಸಬಹುದು. ಅಲ್ಲದೆ “ಮಹಾಕಾವ್ಯದ ಶ್ರೋತೃಗಳು, ಕತೆ ಹಿಂದೆ ನಡೆದದ್ದೆಂಬಂತೆ ನಿರೂಪಿತವಾಗುವುದನ್ನು ಇಷ್ಟಪಡುತ್ತಾರೆ.”[5]

ಈ ಎಲ್ಲ ಮಾತುಗಳ ಸಾರಾಂಶ ಇಷ್ಟು : ಮೊದಲ ಮಹಾಕಾವ್ಯಗಳಾಗಲಿ, ಅನಂತರದ ಮಹಾಕಾವ್ಯಗಳಾಗಲಿ, ಅದರ ವಸ್ತು ಹಳೆಯದು. ಮೊದಲ ಮಹಾಕವಿಗಳಿಗೆ ಆ ವಸ್ತು ಇತಿಹಾಸ ದೃಷ್ಟಿಗೆ ಅಸ್ಪಷ್ಟವಾದ ಪ್ರಾಚೀನ ಪರಂಪರೆಯಿಂದ ಬಂದದ್ದಾದರೆ, ಅನಂತರದ ಮಹಾಕವಿಗಳಿಗೆ, ಮೊದಲ ಮಹಾಕಾವ್ಯಗಳ ‘ವಸ್ತು’ಗಳೇ ಕಥಾವಸ್ತುವಾಗುತ್ತದೆ. ಆದುದರಿಂದ ಮಹಾಕಾವ್ಯದ ವಸ್ತುವನ್ನು ಕುರಿತು ಭಾರತೀಯ ಲಾಕ್ಷಣಿಕರು “ಇತಿಹಾಸ ಕಥೋದ್ಫೂತಂ”[6] – ಎನ್ನುತ್ತಾರೆ. ಮಹಾಕಾವ್ಯಕ್ಕೆ ಇತಿಹಾಸವಾಗಲಿ ಕಥೆಯಾಗಲಿ ವಸ್ತುವಾಗಬಹುದು. “ಇತಿಹಾಸವೆಂದರೆ ಸಾಮಾನ್ಯವಾಗಿ ರಾಮಾಯಣ ಭಾರತಗಳು ಎಂದು ಗ್ರಹಿಸಬೇಕು. ವಸ್ತು ಈ ಎರಡು ಮೂಲಗಳಿಂದ ದೊರೆಯಬಹುದು. ಕಥೆ ಎಂಬುದಕ್ಕೆ ಪ್ರತ್ಯೇಕವಾಗಿ ಬೃಹತ್ಕಥೆಯೆಂದು ಒಂದೆಡೆ ತಿಳಿಸಿದೆಯಾದರೂ, ರಾಮಾಯಣ ಭಾರತಾದಿ ಇತಿಹಾಸಗಳಿಂದ ಎತ್ತಿಕೊಂಡ ಯಾವುದಾದರೂ ಕಥಾಭಾಗವೆಂಬುದು ಸಾಮಾನ್ಯವಾದ ಅಭಿಪ್ರಾಯ.”[7] ನಮ್ಮ ದೇಶದ ಯಾವ ಭಾಷೆಯ ಮಹತ್ ಕೃತಿಗಳನ್ನು ನೋಡಿದರೂ, ವಸ್ತು ಇದೇ. ಭರತಖಂಡದ ಸೃಜನ ಸಾಮರ್ಥ್ಯ ರಾಮಾಯಣ ಮಹಾಭಾರತಗಳಲ್ಲಿ ಎಂದೋ ಒಮ್ಮೆಗೆ ಘನೀಭವಿಸಿ ಬಿಟ್ಟಿದೆ; ಅನಂತರ ಈ ದೇಶದಲ್ಲಿ ಈ ಪ್ರಮಾಣದ ಸೃಜನ ಸಾಮರ್ಥ್ಯ ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ, ಮತ್ತು ಈ ದೇಶದಲ್ಲಿ ಬೇರಾವ ಸೃಜನೆಯೂ ಸಾಧ್ಯವಾಗಿಲ್ಲ ಎಂಬಷ್ಟರ ಮಟ್ಟಿಗೆ, ಅವು ಎಲ್ಲ ಭಾಷೆಯ ಕವಿ ಕೃತಿಗಳಲ್ಲಿ ಕಾಲದಿಂದ ಕಾಲಕ್ಕೆ ಅಭಿವ್ಯಕ್ತವಾಗುತ್ತ ಬಂದಿವೆ. ಆದುದರಿಂದ ‘ಮಹಾಕಾವ್ಯ’ವೆಂದರೆ, ರಾಮಾಯಣ-ಮಹಾಭಾರತಗಳೇ ಎನ್ನುವಂತಾಗಿದೆ. ಪಾಶ್ಚಾತ್ಯರಲ್ಲಿ ಹೋಮರನ ನಂತರ ಬಂದ ವರ್ಜಿಲ್ ಮತ್ತು ಇನ್ನಿತರ ಕವಿಗಳ ಮೇಲೆ ಹೋಮರನ ಪ್ರಭಾವ ವಿಶೇಷ ರೀತಿಯದಾಗಿದೆ. ಮಹಾಕಾವ್ಯ ಎಂದರೆ ಹೋಮರ್, ಹೋಮರ್ ಎಂದರೇ ಮಹಾಕಾವ್ಯ ಎನ್ನುವ ಮಾತು ಸಾಹಿತ್ಯದ ನಾಣ್ಣುಡಿಯಾಗಿದೆ.

ಮಹಾಕಾವ್ಯದ ವಸ್ತುವನ್ನು ಕುರಿತು, ಪೂರ್ವ ಹಾಗೂ ಪಶ್ಚಿಮದ ವಿದ್ವಾಂಸರಲ್ಲಿ ಸಮಾನವಾದ ಇನ್ನೊಂದು ಅಭಿಪ್ರಾಯವೆಂದರೆ, ಅದು ಮಹಾವ್ಯಕ್ತಿಗಳ ನಡವಳಿಕೆಯನ್ನು ಕುರಿತದ್ದಾಗಿರಬೇಕು ಎನ್ನುವುದು. ಅರಿಸ್ಟಾಟಲ್ ಮಹಾಕಾವ್ಯವು “ಉದಾತ್ತವ್ಯಕ್ತಿಗಳ ಅನುಕರಣ”[8] ಎನ್ನುತ್ತಾನೆ. ಅಷ್ಟೇ ಅಲ್ಲ “ಮಹಾಕಾವ್ಯದ ವಸ್ತು ಗಂಭೀರವಾದದ್ದಾಗಿಯೂ, ಮಹಾಕಾರಣಗಳನ್ನು ಮೂಲಮಾನವನ್ನಾಗಿ ಉಳ್ಳ ಮಹದ್ ಘಟನೆಗಳಿಂದ ಕೂಡಿರಬೇಕು”[9] ಎಂದು ಹೇಳುತ್ತಾನೆ. ಇನ್ನು ಕೆಲವರು “ಅದು ಒಂದು ಜನಾಂಗದ ಪೌರಾಣಿಕ ವೀರರ ಕಾರ್ಯಗಳನ್ನು ಕುರಿತದ್ದು.”[10] “ಅದು ಒಬ್ಬ ವ್ಯಕ್ತಿಯ ಒಂದು ಕಾರ್ಯವನ್ನೋ, ಒಬ್ಬನೆ ವ್ಯಕ್ತಿಯ ಹಲವು ಕಾರ್ಯಗಳನ್ನೊ, ಅಥವಾ ಅನೇಕ ವ್ಯಕ್ತಿಗಳ ಅನೇಕ ಕಾರ್ಯಗಳನ್ನೊ ಕುರಿತದ್ದು”[11] ಎನ್ನುತ್ತಾರೆ. ಭಾರತೀಯ ಲಾಕ್ಷಣಿಕರು “ಅದು ಮಹಾಪುರುಷರನ್ನು ಕುರಿತದ್ದಾಗಿರುತ್ತದೆ.”[12] ಎನ್ನುತ್ತಾರೆ. ಕಾವ್ಯದಲ್ಲಿ ಹದಿನೆಂಟು (ಅಷ್ಟಾದಶ) ವರ್ಣನೆಗಳಿರಬೇಕು ಎಂದು ಭಾರತೀಯ ಲಾಕ್ಷಣಿಕರು ಹೇಳುವಲ್ಲಿ ‘ಮಂತ್ರ, ದೂತ, ಪ್ರಯಾಣ, ಆಜಿ (ಯುದ್ಧ), ನಾಯಕಾಭ್ಯುದಯ’ – ಎಂಬ ಅಂಗಗಳು, ಮುಖ್ಯವಾಗಿ ಮಹಾಕಾವ್ಯದ ವಸ್ತು ವೀರ ಎಂಬುದನ್ನು ಸ್ಪಷ್ಟ ಮಾಡುತ್ತವೆ. ‘ಮಂತ್ರ’ ಎಂದರೆ, ಗೂಢಚಾರರ ಮೂಲಕ ಶತ್ರುವಿನ ಸನ್ನಾಹಗಳನ್ನು ತಿಳಿದು ಆಪ್ತ ಸಚಿವರೊಡನೆ ಮಂತ್ರಾಲೋಚನೆ ಮಾಡುವುದು; ‘ದೂತ’ ಎಂದರೆ ಯುದ್ಧಕ್ಕೆ ಮೊದಲು ಶತ್ರುಗಳಲ್ಲಿಗೆ ದೂತರನ್ನು ಕಳುಹಿಸುವುದು; ‘ಪ್ರಯಾಣ’ ಎಂದರೆ ಸೈನ್ಯ ಸಮೇತ ಯುದ್ಧ ಭೂಮಿಗೆ ಪ್ರಯಾಣ ಮಾಡುವುದು; ‘ಆಜಿ’ ಎಂದರೆ ಶತ್ರುವಿನೊಂದಿಗೆ ನಡೆಯುವ ಯುದ್ಧ; ‘ನಾಯಕಾಭ್ಯುದಯ’ವೆಂದರೆ ಶತ್ರುಗಳನ್ನು ರಣರಂಗದಲ್ಲಿ ಗೆದ್ದು ವಿಜಯಿಯಾಗುವುದು. ಈ ‘ಮಂತ್ರಾದಿ ಪಂಚಕ’ಗಳು, ಮಹಾಕಾವ್ಯವು, ಅದರ ನಾಯಕರ ವೀರ ಕಾರ‍್ಯಗಳಿಂದ ಕೂಡಿದುದಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಒಟ್ಟಿನಲ್ಲಿ ಮಹಾಕಾವ್ಯದ ವಸ್ತು, ಉದಾತ್ತ ವ್ಯಕ್ತಿಗಳ ಮಹಾವೀರರ, ಸಾಹಸ ಮತ್ತು ಅದ್ಭುತ ಕಾರ್ಯಗಳು. ರಾಮಾಯಣದ ಶ್ರೀರಾಮ, ಮಹಾಭಾರತದ ಅರ್ಜುನ, ಇಲಿಯಡ್‌ನ ಅಖಿಲೀಸ್, ಈನಿಯಡ್‌ನ ಈನಿಯಸ್, ಇವರೆಲ್ಲ ಇಂತಹ ವೀರರು. ಈ ವೀರರ ನಡವಳಿಕೆಗಳಲ್ಲಿ ಅಂದಿನ ಯುಗಧರ್ಮ ಪ್ರಕಟವಾಗುತ್ತದೆ. ಇವರು ಎತ್ತಿಹಿಡಿದ ಮೌಲ್ಯಗಳು, ಇವರು ಪ್ರತಿಸ್ಪರ್ಧಿಗಳೊಡನೆ ನಡೆಯಿಸಿದ ಹೋರಾಟ, ಅವರ ಸಾಹಸಕ್ಕೆ ಬೆರೆತುಕೊಂಡ ಅದ್ಭುತಗಳು ಇವೇ ಮಹಾಕಾವ್ಯದ ವಸ್ತು. ಈ ಸಾಹಸ ನೆಲದ ಮೇಲೆ ನಡೆದ ರಣರಂಗಗಳ ಮೂಲಕ ಪ್ರಕಟವಾಗುವಂತೆ, ಅವರು ಕೈಕೊಂಡ ಸಮುದ್ರ ಪರ‍್ಯಟನಗಳಲ್ಲಿಯೂ ವ್ಯಕ್ತವಾಗಬಹುದು. ಮಹಾಭಾರತ, ರಾಮಾಯಣ, ಇಲಿಯಡ್‌ಗಳಲ್ಲಿ, ಆ ವೀರರ ಸಾಹಸಗಳು, ಅವರು ಕೈಕೊಳ್ಳುವ ಹೋರಾಟಗಳಲ್ಲಿ, ಮುಖ್ಯವಾಗಿ ರಣರಂಗಗಳಲ್ಲಿ ಕಾಣಿಸಿಕೊಂಡರೆ, ಈನಿಯಸ್, ಯೂಲಿಸಿಸ್ ಇವರ ಹೋರಾಟ ಹಾಗೂ ಸಾಹಸ ಕಡಲಿನ ಮೇಲೆ ಅವರು ಕೈಕೊಂಡ ಪರ‍್ಯಟನದಲ್ಲಿ ಪ್ರಕಟವಾಗುತ್ತದೆ. ಹಾಗೆಯೇ ಪೋರ‍್ಚುಗೀಸಿನ Os Lusiadas ಎಂಬ ಕಾವ್ಯದಲ್ಲಿ, ವಾಸ್ಕೋಡಿಗಾಮನು ಇಂಡಿಯಾಕ್ಕೆ ದಾರಿಯನ್ನು ಕಡಲ ಮೇಲೆ ಕಂಡುಹಿಡಿದ ಪ್ರವಾಸವೇ, ಅವನ ‘ವೀರ’ವಾಗಿದೆ. ಮಹಾಕಾವ್ಯದ ‘ವಸ್ತು’ವಿನಲ್ಲಿ ವೀರವೊಂದೇ ಅಲ್ಲದೆ, ಅದರ ಜತೆಗೆ ಅದ್ಭುತವೂ ಧಾರಾಳವಾಗಿ ಬೆರೆತುಕೊಳ್ಳುತ್ತದೆ. ಯಾಕೆಂದರೆ ಮಹಾಕಾವ್ಯದ ವೀರರು ಒಂದು ರೀತಿಯಲ್ಲಿ ಅಘಟಿತ ಘಟನಾಸಮರ್ಥರು. ಮಹಾಕಾವ್ಯದ ವಸ್ತುವಿನ ಚೌಕಟ್ಟು ಕೇವಲ ಈ ಮರ್ತ್ಯ ಭೂಮಿಕೆಯಷ್ಟನ್ನೆ ಒಳಗೊಳ್ಳುವುದಿಲ್ಲ ಅದು ಸಾಧ್ಯವಾದ ಇತರ ಭೂಮಿಕೆಗಳನ್ನೂ ಒಳಗೊಳ್ಳುತ್ತದೆ. ಅಲ್ಲಿ ದೇವತೆಗಳಿಗೂ ಮಾನವರಿಗೂ ಗಂಟು-ನಂಟುಗಳು ಏರ್ಪಡುತ್ತವೆ; ಮಾನವರ ಪಕ್ಷವನ್ನೋ ಪ್ರತಿಪಕ್ಷವನ್ನೋ ದೇವತೆಗಳು ವಹಿಸುತ್ತಾರೆ; ನೆಲಕ್ಕೂ ಮುಗಿಲಿಗೂ ಸೇತುವೆ ಏರ್ಪಡುತ್ತದೆ. ನರರು, ವಾನರರು, ರಾಕ್ಷಸರು, ದೇವತೆಗಳು, ಅತಿ ಮಾನುಷ ಜೀವಿಗಳು, ಪ್ರಾಣಿಗಳು, ಪಕ್ಷಿಗಳು ಎಲ್ಲವೂ ಈ ಮಹಾಕಾವ್ಯದ ‘ವಸ್ತು’ವಿನಲ್ಲಿ ವ್ಯವಹರಿಸುತ್ತವೆ. ಅದೊಂದು ಅದ್ಭುತಲೋಕ; “ಮಹಾಕಾವ್ಯ ವಾಸ್ತವವಾಗಿ ಇತಿಹಾಸವೇ, ಆದರೆ ಅದು ವಾಸ್ತವತೆಯ ಆಯಾಮಗಳನ್ನು ಉಲ್ಲಂಘಿಸಿ ನಿಲ್ಲುತ್ತದೆ”[13] ಎಂಬ ಮಾತು ನಿಜ. ಮಹಾಕಾವ್ಯ ಎಷ್ಟೇ ಅದ್ಭುತವೆಂಬಂತೆ ಈ ದಿನ ನಮಗೆ ತೋರಲಿ, ಮೂಲತಃ ಅದು ಒಂದು ‘ಇತಿಹಾಸ’ ಅಥವಾ ನಡೆದ ಚರಿತ್ರೆಯ ಘಟನೆಯಾಗಿದ್ದಿರಬೇಕು. ರಾಮಾಯಣ ನಮಗೆ ಈ ದಿನ ಮಹಾಕಾವ್ಯ ರೂಪದಲ್ಲಿ ಗೋಚರಿಸುವಂತೆ ಇರಲಿಲ್ಲವೆಂಬುದು ನಿಜವಾದರೂ, ರಾಮನೆಂಬ ಒಬ್ಬ ವ್ಯಕ್ತಿ ಎಂದೋ ಬಾಳಿ ಬದುಕಿ, ತನ್ನ ಗುಣ ವಿಶೇಷಗಳಿಂದ ಒಂದು ಜನಾಂಗದ ನಾಯಕನಾಗಿದ್ದನೆಂಬುದು ಸುಳ್ಳಲ್ಲ; ಮಹಾಭಾರತ, ಕೌರವ – ಪಾಂಡವ ವಂಶದ ಅರಸರಿಗೆ ನಡೆದ ಒಂದು ಯುದ್ಧವೆಂಬುದಂತೂ ನಿಜ. ಹೋಮರನ ಕಾವ್ಯದಲ್ಲಿ ಚಿತ್ರಿತವಾಗಿರುವ ಟ್ರಾಯ್ ನಗರದ ಯುದ್ಧ, ಗ್ರೀಕರಿಗೂ, ಏಷ್ಯಾ ಮೈನರ್‌ನ ಜನರಿಗೂ ನಡೆದ ಘರ್ಷಣೆ ಎನ್ನುತ್ತಾರೆ ವಿದ್ವಾಂಸರು. ರಾಮಾಯಣದ ಕತೆಯಲ್ಲಿ ಆರ್ಯ ಹಾಗೂ ದ್ರಾವಿಡರಿಗೂ ನಡೆದ ಘರ್ಷಣೆಯನ್ನು ಗುರುತಿಸುತ್ತಾರೆ ಚರಿತ್ರಕಾರರು. ‘ಸಾಂಗ್ ಆಫ್ ರೋಲೆಂಡ್’ ಎಂಬ ಫ್ರೆಂಚ್ ಮಹಾಕಾವ್ಯ, ಕ್ರಿ.ಶ. ಎಂಟನೆಯ ಶತಮಾನದ ಚಾರ್ಲಮೆಂಜ್ ನು ಸ್ಪೇನ್ ದೇಶದ ಮೇಲೆ ದಾಳಿ ಮಾಡಿದಾಗ, ಆ ಯುದ್ಧದಲ್ಲಿ ಹೋರಾಡಿ ಮಡಿದ ರೋಲೆಂಡ್ ಎಂಬ ವೀರನನ್ನು ಕುರಿತ ಚಾರಿತ್ರಿಕ ಸಂಗತಿಯ ಮೇಲೆ ರಚಿತವಾಗಿದೆ. ಇಂತಹ ಐತಿಹಾಸಿಕ ಕಥಾಭಿತ್ತಿ ಮಹಾಕಾವ್ಯದ ಮೂಲವಸ್ತುವಾಗಿರುತ್ತದೆ. ಈ ಮೂಲವಸ್ತು ಕ್ರಮೇಣ ಒಂದು ಜನಾಂಗದ ಕಲ್ಪನೆಯಲ್ಲಿ ಹುಟ್ಟಿಕೊಂಡ ಕತೆಗಳನ್ನು, ಒಂದು ಇಡೀ ಜನಾಂಗದ ಭಾವಾನುಭವಗಳನ್ನು ಅದರಲ್ಲಿ ಬಂದ ಪ್ರತಿಮೆಗಳನ್ನು, ಕೂಡಿಸಿಕೊಳ್ಳುತ್ತದೆ. ವಾಸ್ತವವಾದ ಇತಿಹಾಸದ ಜತೆಗೆ, ಪುರಾಣವೂ ಸೇರಿಕೊಳ್ಳುತ್ತದೆ. ಶ್ರೀರಾಮ ಸೀತೆಯರು ವಾಸ್ತವವಾಗಿ ಮನುಷ್ಯರು ಎನ್ನುವುದು ‘ಇತಿಹಾಸ’ವಾದರೆ, ಅವರು ಸಾಕ್ಷಾತ್ ಮಹಾವಿಷ್ಣು ಮತ್ತು ಲಕ್ಷ್ಮಿಯರ ಅವತಾರ ಎನ್ನುವುದು ‘ಪುರಾಣ’; ಶ್ರೀಕೃಷ್ಣನು ದ್ವಾಪರಯುಗದ ಒಬ್ಬ ಶ್ರೇಷ್ಠವಾದ ಮಹಾವ್ಯಕ್ತಿ ಎನ್ನುವುದು ‘ಇತಿಹಾಸ’ವಾದರೆ, ಶ್ರೀಕೃಷ್ಣನು ಭೂಭಾರವನ್ನಿಳುಹಲು ಬಂದ ವಿಷ್ಣುವಿನ ಅವತಾರ ಎನ್ನುವುದು ‘ಪುರಾಣ’. ಇತಿಹಾಸ ತನಗೆ ತಾನೇ ಹುಟ್ಟಿದ್ದು; ಆದ್ದರಿಂದ ವಾಸ್ತವ. ಪುರಾಣ ಕಟ್ಟಿದ್ದು, ಒಂದು ಜನತೆಯ ಮನಸ್ಸು ಕಟ್ಟಿದ್ದು, ಆದ್ದರಿಂದ ಕಲ್ಪನೆ. ಮಹಾಕಾವ್ಯದ ಈ ವಸ್ತುವಿನಲ್ಲಿ ಇತಿಹಾಸ – ಪುರಾಣಗಳು ಸಮ್ಮಿಶ್ರವಾಗಿರುವುದರಿಂದಲೇ, ಅದು ಚರಿತ್ರೆಯ ಪರಿಧಿಯನ್ನು ಉಲ್ಲಂಘಿಸಿ ನಿಲ್ಲುತ್ತದೆ. ಅಷ್ಟೇ ಅಲ್ಲ ಅದು ಒಂದು ಯುಗದ ಅಭಿವ್ಯಕ್ತಿ, ಕೇವಲ ಒಬ್ಬ ಕವಿ ಬರೆದದ್ದಲ್ಲ ಎನಿಸುತ್ತದೆ.

ಇಂತಹ ಕಥಾವಸ್ತು ಕವಿಯಿಂದ ಕವಿಗೆ ಬೆಳೆದು ಬರುತ್ತದೆ ಎನ್ನುವುದು ಸ್ವಾರಸ್ಯವಾದ ಸಂಗತಿಯಾಗಿದೆ. ವ್ಯಾಸಭಾರತದ ಕಥಾವಸ್ತು, ವ್ಯಾಸರ ನಂತರದ ಕವಿಗಳಲ್ಲಿ ಏನೇನು ರೂಪಗಳನ್ನು ತಾಳಿದೆ ಎಂಬುದೂ, ರಾಮಾಯಣದ ಕತೆ ಅನೇಕ ಮತಧರ್ಮದ, ಅನೇಕ ಭಾಷೆಯ ಕೃತಿಗಳಲ್ಲಿ ಹೇಗೆ ಬೇರೆ ಬೇರೆಯ ರೂಪಧಾರಣೆ ಮಾಡಿದೆ ಎಂಬುದೂ ತಿಳಿದ ಸಂಗತಿ. “ಮಹಾಕಾವ್ಯದ ವಸ್ತು ತಲೆಮಾರಿನಿಂದ ತಲೆಮಾರಿಗೆ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ, ಹೊಸ ಹೊಸ ರೂಪವನ್ನು ತಾಳುತ್ತಾ ಬರುತ್ತದೆ. ಒಂದು ಕತೆ ಹೇಗೆ ಒಂದೇ ಮೂಲದಿಂದ ಅನೇಕ ಕವಲುಗಳನ್ನು ಯಾವಾಗ ತಾಳಿದೆ ಎಂಬುದನ್ನು ಹೇಳುವುದು ಕಷ್ಟ. ಒಂದೇ ವಸ್ತು, ಒಂದಕ್ಕಿಂತ ಹಲವೆಡೆ ಸ್ವತಂತ್ರವಾಗಿ, ಮನುಷ್ಯರ ಸ್ವಭಾವದಲ್ಲಿರಬಹುದಾದ ಮೂಲಭೂತ ಅಂಶದಿಂದ ಹುಟ್ಟಿಕೊಂಡಿರಲು ಸಾಧ್ಯ.”[14] ಉದಾಹರಣೆಗೆ ತಂದೆಯೆ ಮಗನೊಂದಿಗೆ ಹೋರಾಡುವಂಥ      ಸಂದರ್ಭವನ್ನುಳ್ಳ ಕತೆ (ಸೊಹ್ರಾಬ್-ರುಸ್ತುಂ; ಅರ್ಜುನ – ಬಭ್ರುವಾಹನ; ರಾಮ – ಲವಕುಶರು); ಮಲತಾಯಿ ತನ್ನ ಮಗನನ್ನು ಪ್ರೇಮಿಸುವ ಪ್ರಸಂಗವನ್ನುಳ್ಳ ಕತೆ (ಆರ್ಮಿನಿಯನ್ ಭಾಷೆಯಲ್ಲಿ ಈ ವಸ್ತುವನ್ನು ಕುರಿತ ಕಾವ್ಯವೇ ಇದೆಯಂತೆ. ಕನ್ನಡದಲ್ಲಿ ಕುಮಾರ ರಾಮನ ಸಾಂಗತ್ಯದಲ್ಲಿ ರತ್ನಾಜಿ – ಕುಮಾರ ರಾಮನನ್ನು ಮೋಹಿಸಿದ ಪ್ರಸಂಗ) ಗಳನ್ನು ನೋಡಬಹುದು. ಒಂದು ಮತ್ತೊಂದಕ್ಕೆ ಸಂಬಂಧವಿಲ್ಲದ ದೇಶಗಳಲ್ಲಿ ಮತ್ತು ಭಾಷೆಗಳಲ್ಲಿ ರಚಿತವಾದ ಮಹಾಕಾವ್ಯಗಳಲ್ಲಿನ ವಸ್ತುಗಳು ಎಷ್ಟೋ ವೇಳೆ ಸಮಾನವಾಗಿರುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ. ವಸ್ತುವನ್ನು ಪ್ರಾಚೀನವಾದ ಇತಿಹಾಸ-ಪುರಾಣಗಳಿಂದ ಆರಿಸಿಕೊಳ್ಳುವುದರಲ್ಲಿ, ಆ ವಸ್ತು ಮುಖ್ಯವಾಗಿ ಉದಾತ್ತವಾದ ವೀರರ ಸಾಹಸ-ಅದ್ಭುತ ಕಾರ್ಯಗಳಾಗಿರುವುದರಲ್ಲಿ, ಎಲ್ಲ ದೇಶದ ಮಹಾಕಾವ್ಯಗಳ ನಿಲುವು ಸಮಾನವಾಗಿದೆ. ಮಹಾಕಾವ್ಯದ ವಸ್ತು ಸಾಮಾನ್ಯವಾಗಿ ವೀರವಾದರೂ, ಆ ವೀರ ಮುಖ್ಯವಾಗಿ ಕಾಣಿಸಿಕೊಳ್ಳುವುದು ರಣರಂಗದಲ್ಲಿ ಎಂದುಕೊಂಡರೂ, ‘ರಣವೀರತೆ’ಯಿಂದ ಹೊರತಾದ, ಮಹಾಕಾವ್ಯಗಳೂ ಇವೆ. ನಿದರ್ಶನಕ್ಕೆ ಡಾಂಟೆಯ ‘ಡಿವೈನ್ ಕಾಮೆಡಿ’ಯನ್ನು ನೋಡಬಹುದು. ಇದು ಪ್ರಾಚೀನ ಮಹಾಕಾವ್ಯದ ಲಕ್ಷಣವನ್ನು ತಿರಸ್ಕರಿಸಿ ರಚಿತವಾದದ್ದು; ಇಲ್ಲಿ ರಣರಂಗವಿಲ್ಲ; ರಾಜಾಸ್ಥಾನಗಳ ವೈಭವವಿಲ್ಲ; ಇಲ್ಲಿರುವುದು ವ್ಯಕ್ತಿಯೊಬ್ಬನ ಆತ್ಮಯಾತ್ರೆಯ ಕಥನ. ಆ ಯಾತ್ರೆಯಲ್ಲಿ ಒಂದಷ್ಟು ಅದ್ಭುತದ ಅಂಶವೇನೋ ಇದೆ. ಮಿಲ್ಟನ್ ನ ‘ಪ್ಯಾರಡೈಸ್ ಲಾಸ್ಟ್’ದಲ್ಲಿ, ಪ್ರತ್ಯಕ್ಷವಾದ ಯುದ್ಧದ ವರ್ಣನೆಯಿಲ್ಲದಿದ್ದರೂ. ಕಾವ್ಯ ಆರಂಭವಾಗುವುದು ಪರಮಾತ್ಮನೊಂದಿಗೆ ಹೋರಾಡಿ ನರಕದ ಮೂಲೆಗೆ ದಬ್ಬಲ್ಪಟ್ಟ ಸೇಟನ್ನಿನ ಆಕ್ರೋಶ ಹಾಗೂ ಯುದ್ಧ ಸನ್ನದ್ಧತೆಯಿಂದ; ವಾಸ್ಕೋಡಿಗಾಮನನ್ನು ಕುರಿತು ಬರೆದ Os Lusiadas ದಲ್ಲಿ ಅವನ ಪ್ರವಾಸದ ಹಾದಿಯಲ್ಲಿ ನಡೆಯುವ ಯುದ್ಧ ತೀರಾ ಪ್ರಾಸಂಗಿಕವಾದದ್ದು. ಬಾಣನ ‘ಕಾದಂಬರಿ’ ಮುಖ್ಯವಾಗಿ ಪ್ರೇಮದ ಕತೆ, ಅಲ್ಲಿ  ಯುದ್ಧವೇ ಇಲ್ಲ. ಸಾಹಸ, ವೀರ, ಶೃಂಗಾರ ಇವು ಮಾನವ ಮೂಲಭೂತ ಪ್ರವೃತ್ತಿಗಳಾದುದರಿಂದ, ಸಾಮಾನ್ಯವಾಗಿ ಜಗತ್ತಿನ ಮಹಾಕಾವ್ಯಗಳ ವಸ್ತು ವೀರ ಅಥವಾ ಶೃಂಗಾರವಾಗಿರುವುದು ಆಶ್ಚರ್ಯವೇನಲ್ಲ. ಆದರೆ, ಕೇವಲ ವೀರತೆ, ರಣವೀರತೆಯಷ್ಟರಿಂದಲೇ ಮಹಾಕಾವ್ಯದ ವಸ್ತು ಘನವಾಗಿರುವುದಿಲ್ಲ. ಆ ವೀರತೆಯ ಹಿಂದೆ ಉದಾತ್ತವಾದ ಒಂದು ಕಾರಣವಿರಬೇಕು ಅಥವಾ ಘನವಾದ ಉದ್ದೇಶವಿರಬೇಕು. ಆದುದರಿಂದ ಮಹಾಕಾವ್ಯಗಳು ಕೇವಲ ರಣಕೋಲಾಹಲಗಳಲ್ಲ,[15] ಅವು ಒಂದು ಕಾಲದ ಸಂಘರ್ಷವನ್ನೂ ಆ ಸಂಘರ್ಷದ ಮೂಲಕ ಸ್ಫುಟವಾಗುವ ಅಂದಿನ ಧ್ಯೇಯ, ಆದರ್ಶ, ಮೌಲ್ಯ ಪ್ರಜ್ಞೆಗಳನ್ನೂ ಎತ್ತಿ ತೋರಿಸುವ ಸಾಧನಗಳಾಗಿವೆ.

ಭಾರತೀಯ ಲಾಕ್ಷಣಿಕನಾದ ರುದ್ರಟನು ಮಹಾಕಾವ್ಯದ ವಸ್ತು ಉತ್ಪಾದ್ಯ, ಅನುತ್ಪಾದ್ಯ ಎಂದು ಎರಡು ರೀತಿಯದಾಗಿದೆ ಎಂದು ಗುರುತಿಸುತ್ತಾನೆ. ಮಹಾಕಾವ್ಯ ಅಥವಾ ಪ್ರಬಂಧವು, ಇದರಿಂದಾಗಿ ಎರಡು ರೀತಿಯದಾಗುತ್ತದೆ. ಯಾವ ಕಾವ್ಯದಲ್ಲಿ ಕವಿಯು ಇತಿಹಾಸ ಪ್ರಸಿದ್ಧವಾದ ಕಾವ್ಯದ ಕಥಾಶರೀರದ ಪೂರ್ಣ ರೂಪವನ್ನೋ, ಅಥವಾ ಅದರದೊಂದು ಭಾಗವನ್ನೋ ತೆಗೆದುಕೊಂಡು ತನ್ನದೆ ಆದ ರೀತಿಯಲ್ಲಿ ನಿರ್ವಹಿಸುವುದು ಅನುತ್ಪಾದ್ಯ. ಯಾವ ಕಾವ್ಯದಲ್ಲಿ ಕವಿಯು ತನ್ನ ಕಾವ್ಯದ ಕಥೆಯ ಇಡೀ ಶರೀರವನ್ನು ತಾನೇ ಕಲ್ಪಿಸುತ್ತಾನೋ ಅದು ಉತ್ಪಾದ್ಯ. ಕೆಲವೆಡೆ ಕವಿ ನಾಯಕನನ್ನು ಕೂಡಾ ಯುಕ್ತ ರೀತಿಯಿಂದ ಕಲ್ಪಿಸುವುದುಂಟು, ಇದು ಉತ್ಪಾದ್ಯ.[16] ಇದನ್ನೆ ಪ್ರಸಿದ್ಧ ಹಾಗೂ ಕವಿಕಲ್ಪಿತ ಎಂದು ಇನ್ನು ಕೆಲವರು ಕರೆಯುತ್ತಾರೆ. ವಾಸ್ತವವಾಗಿ ಇದು, ವಾಲ್ಮೀಕಿ, ವ್ಯಾಸ, ಹೋಮರ್ ಇಂತಹ ಮೂಲ ಮಹಾಕಾವ್ಯ (Primitive Epic) ಗಳನ್ನು ಬಿಟ್ಟು ಇನ್ನುಳಿದ ಅನಂತರದ ಮಹಾಕಾವ್ಯ (Later Epic) ಗಳ ವಸ್ತುವನ್ನು ಕುರಿತದ್ದು. ‘ಪಂಪಭಾರತ’, ‘ಕುಮಾರ ವ್ಯಾಸ ಭಾರತ’ಗಳು ಮೂಲದ ಕಥಾ ಶರೀರವನ್ನು ತಮ್ಮದೇ ಆದ ರೀತಿಯಲ್ಲಿ ಬಳಸಿಕೊಂಡಿವೆ; ಕಾಳಿದಾಸನ ‘ರಘುವಂಶ’, ಭಾರವಿಯ ‘ಕಿರಾತಾರ್ಜುನೀಯ’, ರನ್ನನ ‘ಗದಾಯುದ್ಧ’, ಮೂಲಕೃತಿಗಳ ಏಕಾದೇಶವನ್ನು ತೆಗೆದುಕೊಂಡು ರಚಿತವಾದವುಗಳು. ಇವು ‘ಅನುತ್ಪಾದ್ಯ’ಗಳು. ಆದರೆ ವರ್ಜಿಲ್ಲನ ‘ಈನಿಯಡ್’, ಡಾಂಟೆಯ ‘ಡಿವೈನ್ ಕಾಮೆಡಿ’, ಮಿಲ್ಪನ್ನನ ‘ಪ್ಯಾರಡೈಸ್ ಲಾಸ್ಟ್’ ಇವುಗಳು ‘ಉತ್ಪಾದ್ಯ’ಗಳು. ಇವುಗಳಲ್ಲಿ ಕವಿ ಕಲ್ಪಿಸಿಕೊಂಡಿರುವ ಕಥಾವಸ್ತು ಬಹುಮಟ್ಟಿಗೆ ಅವರದೇ; ನಾಯಕನನ್ನಂತೂ ಯುಕ್ತರೀತಿಯಿಂದ ಅವರೇ ಕಲ್ಪಿಸಿಕೊಂಡಿದ್ದಾರೆ. ಹೀಗೆಂದ ಮಾತ್ರಕ್ಕೆ ಅವರು ಪರಂಪರೆಗೆ ಋಣಿಗಳೇ ಆಗಿಲ್ಲವೆಂದು ಅರ್ಥವಲ್ಲ. ಈನಿಯಡ್‌ಗೆ, ಹೋಮರನ ‘ಇಲಿಯೆಡ್’ ಮಹಾಕಾವ್ಯವೇ ಮೂಲ ಪ್ರೇರಣೆ. ಈನಿಯಡ್ ಕಾವ್ಯದ ನಾಯಕ, ಇಲಿಯಡ್ ಕಾವ್ಯದ ವೀರರಲ್ಲಿ ಒಬ್ಬ. ಅಲ್ಲದೆ ಈನಿಯಡ್ ಕಾವ್ಯದಲ್ಲಿ ಹೋಮರನ ಇಲಿಯಡ್ ಕಾವ್ಯದ ದಟ್ಟವಾದ ಪ್ರಭಾವಗಳನ್ನೂ ಗುರುತಿಸಬಹುದು. ಆದರೆ ವರ್ಜಿಲ್, ಮೂಲದ ಗೌಣಪಾತ್ರವಾದ ಈನಿಯಸ್‌ನನ್ನು ತನ್ನ ಕಾವ್ಯದಪ್ರಧಾನ ಪಾತ್ರವನ್ನಾಗಿ ಮಾಡಿಕೊಂಡು, ಅದು ಬೇರೆಯ ಕತೆಯೆಂಬಂತೆ ನಿರ್ವಹಿಸಿದ್ದಾನೆ. ಮಿಲ್ಟನ್‌ನ ‘ಪ್ಯಾರಡೈಸ್ ಲಾಸ್ಟ್’ಗೆ ಬೈಬಲ್ಲಿನ ಕತೆಯೇ ಮೂಲ. ಮೂಲದ ಕತೆಯಿಂದ ಮಿಲ್ಟನ್ ಪಡೆದ ವಸ್ತು ಬಹುಸ್ವಲ್ಪ; ಆದರೆ ಅದರಿಂದ ನಿರ್ಮಿಸಿದ ‘ಪ್ಯಾರಡೈಸ್ ಲಾಸ್ಟ್’ ತನಗೆ ತಾನೇ ಒಂದು ಸ್ವತಂತ್ರಕೃತಿಯಾಗಿದೆ. ಡಾಂಟೆಯ ‘ಡಿವೈನ್ ಕಾಮೆಡಿ’ಯಂತೂ, ಅದರ ಸಂಪೂರ್ಣಾಥದಲ್ಲಿ, ಕವಿಕಲ್ಪಿತ ಅಥವಾ ಉತ್ಪಾದ್ಯ ಎನ್ನುವಂಥದು. ಪೋರ‍್ಚುಗೀಸ್ ಭಾಷೆಯ ‘ಆಸ್ ಲೂಸಿಡಾಸ್’ನ ವಸ್ತುವು, ವಾಸ್ತವವಾದ ಒಂದು ಐತಿಹಾಸಿಕ ಘಟನೆಯಾದ ವಾಸ್ಕೋಡಿಗಾಮನ ಅನ್ವೇಷಣ ಯಾತ್ರೆಯನ್ನು ಕುರಿತು, ಹೊಸದಾಗಿ ರಚಿತವಾದ ಕಾವ್ಯ. ಎಂದರೆ, ಈ ಉತ್ಪಾದ್ಯ ಅಥವಾ ಕವಿ ಕಲ್ಪಿತ ವಸ್ತುಗಳು ತಮ್ಮ ಹಿಂದಿನ ಇತಿಹಾಸಕ್ಕೋ ಅಥವಾ ಮಹಾಕಾವ್ಯಗಳಿಗೋ ಋಣಿಯಾಗಿದ್ದರೂ ಸಹ, ಅವರು ಅದನ್ನು ಸ್ವತಂತ್ರವೆಂಬಂತೆ ನಿರ್ವಹಿಸಿದರೂ, ಹಿಂದೆ ಆಗಲೇ ಹೇಳಿದಂತೆ, ಅದನ್ನು “ಪುರಾಣ ಪದ್ಧತಿ” ಯಲ್ಲಿಯೇ ಹೇಳುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ವಸ್ತು, ಇತಿಹಾಸದ್ದೇ ಆಗಲಿ, ಪ್ರಾಚೀನದ್ದೇ ಆಗಲಿ ಅಥವಾ ಸಮೀಪಕಾಲ, ಕಡೆಗೆ ಸಮಕಾಲೀನದ್ದೇ ಆಗಲಿ ಅದಕ್ಕೆ ಪ್ರಾಚೀನತೆಯ ಬಣ್ಣವನ್ನು ಬಳಿದು ಹೇಳುವುದು ಒಂದು ಪದ್ಧತಿಯಾಗಿದೆ. ‘ವಸ್ತು’ ಹಿಂದಿನದೆ ಆಗಿದ್ದಲ್ಲಿ, ಕತೆ ಹಿಂದೆ ನಡೆದದ್ದೆಂಬಂತೆ ಹೇಳುವುದು ಸಹಜವಾದದ್ದೆ; ಆದರೆ ‘ಡಿವೈನ್ ಕಾಮೆಡಿ’ಯಂಥ ವಸ್ತುವನ್ನು, ಹೊಸದಾಗಿ ಕಲ್ಪಿಸಿಕೊಂಡ ಕವಿ ಡಾಂಟೆ, ಸ್ವರ್ಗದಲ್ಲಿನ ಮಾತೆ ಮೇರಿಗೆ ಡಾಂಟೆ ಮರ್ತ್ಯದಲ್ಲಿ ಪಡುವ ಬವಣೆಗಳನ್ನು ಕಂಡು ಅವನನ್ನು ಉದ್ಧರಿಸುವ ಕರುಣೆಯುಂಟಾಗಿ, ಸ್ವರ್ಗದಲ್ಲಿನ ಬಿಯಟ್ರಿಸ್‌ಳು ಮಾತೆ ಮೇರಿಯ ಮನೋಗತದಂತೆ ನರಕದವರೆಗೂ ಬಂದು, ಡಾಂಟೆಯನ್ನು ಸ್ವರ್ಗಕ್ಕೆ ಕರೆತರುವ ಜವಾಬ್ದಾರಿಯನ್ನು ವರ್ಜಿಲ್‌ನಿಗೆ ವಹಿಸುತ್ತಾಳೆ; ಅನಂತರ ಮುಂದಕ್ಕೆ ತಾನೇ ಅವನನ್ನು ದೇವಸಾನ್ನಿಧ್ಯಕ್ಕೆ ಕೊಂಡೊಯ್ಯುತ್ತಾಳೆ, ಎಂಬಂತೆ ಕತೆಯನ್ನು ನಿರೂಪಿಸುತ್ತಾನೆ. ವಾಸ್ಕೋಡಿಗಾಮನು ಇಂಡಿಯಾಕ್ಕೆ ಬಂದದ್ದು ಕ್ರಿ. ಶ. ೧೪೯೮ರಲ್ಲಿ. ಈ ಚಾರಿತ್ರಿಕವಾದ ಸಂಗತಿಯನ್ನು ಕುರಿತು ಕ್ರಿ. ಶ. ೧೫೭೨ ರಲ್ಲಿ ಮಹಾಕಾವ್ಯವನ್ನು ಬರೆದ Camoes Luis de ಎಂಬ ಕವಿ, ವಾಸ್ಕೋಡಿಗಾಮನ ಸಮುದ್ರ ಯಾನದ ಹಾದಿಯಲ್ಲಿ ಬಾಖಸ್ (Bachhus) ಎಂಬ ದೇವತೆ, ಸಮುದ್ರ ದೇವತೆಗಳ ಸಭೆಯೊಂದನ್ನು ಕರೆದು, ಪೋರ್ಚುಗೀಸ್ ನೌಕೆಗಳನ್ನು ನಾಶ ಮಾಡಲು ಪ್ರೇರೇಪಿಸಿದಂತೆಯೂ, ಆದರೆ ವೀನಸ್ (Venus) ದೇವತೆಯು ಮಧ್ಯ ಪ್ರವೇಶಮಾಡಿ, ವಾಸ್ಕೋಡಿಗಾಮನ ಪ್ರಯಾಣ ಸುಗಮವಾಗಿ, ಅವನು ಕ್ಯಾಲಿಕಟ್ (ಕಲ್ಲಿಕೋಟೆ) ಅನ್ನು ಸೇರುವಂತೆ ಮಾಡಿದಳೆಂಬಂತೆಯೂ ಚಿತ್ರಿಸಿದ್ದಾನೆ. ವಾಸ್ಕೋಡಿಗಾಮನಂತಹ ವ್ಯಕ್ತಿಯ ಈ ಅನ್ವೇಷಣೆಯ ಚಾರಿತ್ರಿಕ ಹಾಗೂ ವಾಸ್ತವಿಕ ಘಟನೆಯ ನಂತರ, ಕೇವಲ ಎಪ್ಪತ್ತೈದು ವರ್ಷಗಳ ಅವಧಿಯಲ್ಲಿ ರಚಿತವಾದ ಈ ಕಾವ್ಯ ಆಗಲೇ ಪುರಾಣದ ಮಾದರಿಯಲ್ಲಿ ರೂಪಿತವಾಗಿರುವುದನ್ನು ನೋಡಿದರೆ, ಯಾವುದೇ ಕತೆ ‘ಪುರಾಣ’ವಾಗಲು ಅನೇಕ ಶತಮಾನಗಳೇ ಉರುಳಬೇಕಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮಹಾಕಾವ್ಯವನ್ನು ಬರೆಯುವ ಕವಿಗಳು ಪ್ರಾಚೀನ ಇತಿಹಾಸ ಪುರಾಣಗಳಿಂದ ವಸ್ತುವನ್ನಾರಿಸಿಕೊಳ್ಳುತ್ತಾರೆ, ಇಲ್ಲವೆ ಎಂತಹ ವಸ್ತುವನ್ನೂ ಅದು ಸಮೀಪ ಕಾಲದ್ದಾದರೂ ಅದು ಪ್ರಾಚೀನ ಕಾಲದಲ್ಲಿ ನಡೆದದ್ದೆಂಬಂತೆ ಅಥವಾ ಪೌರಾಣಿಕವಾದ ರೀತಿಯಲ್ಲಿ ನಿರೂಪಿಸುತ್ತಾರೆ.

ಈ ಸಂಗತಿಯನ್ನು ನೋಡಿದರೆ, ಮಹಾಕಾವ್ಯದ ವಸ್ತುವನ್ನು ಕುರಿತು ಕೆಲವು ಪ್ರಶ್ನೆಗಳು ಏಳುತ್ತವೆ : ಮಹಾಕಾವ್ಯವನ್ನು ಬರೆಯುವ ಕವಿ ಸಾಮಾನ್ಯವಾಗಿ ಪ್ರಾಚೀನವಾದ ಇತಿಹಾಸ-ಪುರಾಣಗಳಿಂದಲೇ ಯಾಕೆ ವಸ್ತುವನ್ನು ಆರಿಸಿಕೊಳ್ಳುತ್ತಾನೆ? ಸಮಕಾಲೀನವಾದ ಸಂಗತಿಗಳನ್ನು ಮಹಾಕಾವ್ಯಕ್ಕೆ ವಸ್ತುವನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲವೆ? ತೀರಾ ಹಳೆಯದಾದ ವಸ್ತುವನ್ನಾರಿಸಿಕೊಳ್ಳುವುದರಿಂದ, ಕವಿಗಳಿಗೆ, ತಮ್ಮ ಸಮಕಾಲೀನವಾದ ಅನುಭವಗಳನ್ನು ನಿರೂಪಿಸಲು ಅದರಿಂದ ಅಡ್ಡಿಯಾಗುವುದಿಲ್ಲವೆ?

ಮಹಾಕಾವ್ಯವನ್ನು ಬರೆಯುವ ಕವಿಗಳು ಬದುಕಿದ್ದು, ಅಂದಂದಿನ ಸಮಕಾಲೀನತೆಯಲ್ಲಿ. ಆದರೆ ಸಮಕಾಲೀನ ಪರಿಸರದ ಕವಿ, ಆರಿಸಿಕೊಳ್ಳುವುದು ‘ಮಹಾಕಾವ್ಯ’ ರಚನೆಗೆ ಪ್ರಾಚೀನ ವಸ್ತುವನ್ನೆ. ಇದಕ್ಕೆ ಕಾರಣ ಸಮಕಾಲೀನತೆಯ ಯಾವ ವಸ್ತುವೂ ಮಹಾಕಾವ್ಯವನ್ನು ಬರೆಯಬೇಕಾದ ಕವಿಗೆ ಅಗತ್ಯವಾದ ವಸ್ತುನಿಷ್ಠ ನಿಲುವನ್ನು ಒದಗಿಸಲಾರದು. ಸಮಕಾಲೀನ ಸಂಗತಿಗಳಿಗೆ, ವ್ಯಕ್ತಿಗಳಿಗೆ, ಕವಿಗಳು ತೀರಾ ಸಮೀಪದಲ್ಲಿರುವುದರಿಂದ, ಆ ಸಂಗತಿಗಳನ್ನಾಗಲಿ, ವ್ಯಕ್ತಿಗಳನ್ನಾಗಲಿ ಸಮಗ್ರವಾಗಿ ನೋಡಲು ಸಾಧ್ಯವಾಗುವುದಿಲ್ಲ; ಯಾವ ವಸ್ತುವೇ ಆಗಲಿ, ಅದಕ್ಕೆ ಒಂದು ನಿಯತವಾದ ‘ದೂರತ್ವ (distance) ಪ್ರಾಪ್ತವಾದಾಗಲೇ ಅದನ್ನು ಸರ್ವತೋಮುಖವಾಗಿ ನೋಡಲು ಸಾಧ್ಯವಾಗುತ್ತದೆ. ಆದುದರಿಂದಲೇ ಎಷ್ಟೋ ಸಮಕಾಲೀನ ಸಂಗತಿಗಳನ್ನೋ, ವ್ಯಕ್ತಿಗಳನ್ನೋ ಕುರಿತು ಬರೆದ ಕಾವ್ಯ, ತೀರಾ ಪಕ್ಷಪಾತದ್ದೊ, ಇಲ್ಲವೆ ಪೂರ್ವಾಗ್ರಹದಿಂದ ಕೂಡಿದ್ದೋ ಆಗಿರುತ್ತದೆ. ಈ ದೃಷ್ಟಿಯಿಂದ ‘ವಸ್ತು’ವಿಗೆ ಒಂದು ರೀತಿಯ ‘ಪುರಾಣತ್ವ’ (ಅಂದರೆ ಹಳೆಯದಾಗುವಿಕೆ ಎಂಬ ಅರ್ಥದಲ್ಲಿ) ಪ್ರಾಪ್ತವಾದಷ್ಟೂ, ಅದನ್ನು ವಸ್ತು ನಿಷ್ಠವಾಗಿ ಹಾಗೂ ಸಮಗ್ರವಾಗಿ ನೋಡಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಈ ಪ್ರಾಚೀನವಾದ ವಸ್ತುಗಳು ಆಗಲೇ ಜನಜೀವನದಲ್ಲಿ ಬಹುಕಾಲದಿಂದ ಬೆರೆತು ಹೋಗಿರುವುದರಿಂದ, ಮತ್ತು ಅನೇಕ ಶತಮಾನಗಳ ಕಾಲದ ಒಂದು ದೇಶದ ‘ಸಮಷ್ಟಿ ಮನಸ್ಸು’ ಅವುಗಳನ್ನು ಉದ್ದಕ್ಕೂ ರೂಪಿಸುತ್ತಾ ಬಂದಿರುವುದರಿಂದಲೂ, ಅಂತಹ ವಸ್ತುಗಳನ್ನಾರಿಸಿಕೊಳ್ಳುವ ಕವಿಗೆ, ತನ್ನ ವಿಪುಲಾನುಭವವನ್ನು ಅಭಿವ್ಯಕ್ತಿಸಲು ಅವುಗಳು ತಕ್ಕ ಸಿದ್ಧಮಾಧ್ಯಮಗಳಾಗಿ ಒದಗಿ ಬರುತ್ತವೆ. ಅಷ್ಟೇ ಅಲ್ಲ, ಎಲ್ಲ ಕಾಲದ ಕವಿಗಳಿಗೂ ಇಂಥ ವಸ್ತುಗಳು ಹೊಸ ಹೊಸ ಅರ್ಥಗಳನ್ನು ಕಾಣುವ ಹಾಗೂ ಕಟ್ಟುವ ಅವಕಾಶವನ್ನು ಒದಗಿಸುತ್ತವೆ. ಅಲ್ಲದೆ ಪ್ರಾಚೀನವಾದ ಪುರಾಣ ಇತಿಹಾಸಗಳು, ಆಗಲೇ ಒಂದು ಜನಾಂಗದ ಸ್ವತ್ತಾಗಿ, ಆ ಜನಾಂಗದ ಭಾವನೆಗಳ, ಮೌಲ್ಯಗಳ, ಮತ್ತು ಆದ್ಯಾನುಭವಗಳ ಒಂದು ಕೋಶದಂತಿರುತ್ತವೆ. ಆದುದರಿಂದಲೆ ಮಹಾಕವಿಗಳು ತಮ್ಮ ಕಾವ್ಯವಸ್ತುವನ್ನು ಪುರಾಣೇತಿಹಾಸಗಳಿಂದ ಆರಿಸಿಕೊಳ್ಳುತ್ತಾರೆ.[17] ಮಿಲ್ಟನ್ ತನ್ನ ವಸ್ತುವನ್ನಾರಿಸಿಕೊಂಡದ್ದು ಬೈಬಲ್‌ನಿಂದ, ವರ್ಜಿಲ್ ಆರಿಸಿಕೊಂಡದ್ದು ಹೋಮರನಿಂದ; ಭಾರತೀಯ ಕವಿಗಳು ವಿಶೇಷವಾಗಿ ಆರಿಸಿಕೊಂಡದ್ದು ರಾಮಾಯಣ ಮಹಾಭಾರತಗಳಿಂದ; ನವೋದಯ ಕನ್ನಡ ಕವಿ ಕುವೆಂಪು ಅವರು ಆರಿಸಿಕೊಂಡದ್ದು ರಾಮಾಯಣದಿಂದ.

ಆದರೆ ವಾಲ್ಮೀಕಿ – ವ್ಯಾಸರು ತಮ್ಮ ಕಾವ್ಯಗಳನ್ನು ತಮ್ಮ ಸಮಕಾಲೀನತೆ -ಯಿಂದಲೇ ಎತ್ತಿಕೊಂಡಂತೆ, ನಿರೂಪಿತವಾಗಿದೆಯಲ್ಲ? ವಾಲ್ಮೀಕಿ, ನಾರದರಿಂದ ಶ್ರೀರಾಮ ಕತೆಯನ್ನು ಕೇಳಿ, ಅದನ್ನು ಬರೆದು, ಶ್ರೀರಾಮನ ಮಕ್ಕಳಾದ ಲವಕುಶರಿಗೆ ಹೇಳಿಕೊಟ್ಟರೆಂದೂ, ಲವಕುಶರು ರಾಮಾಯಣವನ್ನು ಸುಶ್ರಾವ್ಯವಾಗಿ ಹಾಡುತ್ತ ಅಯೋಧ್ಯೆಗೆ ಬಂದು ಶ್ರೀರಾಮನ ಎದುರಿಗೇ ಒಪ್ಪಿಸಿದರೆಂದೂ, ರಾಮಾಯಣದಲ್ಲೇ ನಿರೂಪಿತವಾಗಿದೆ. ಮಹರ್ಷಿ ವ್ಯಾಸರು, ಮಹಾಭಾರತವನ್ನು ಕಣ್ಣಾರೆ ಕಂಡು ಅದನ್ನು ಕಟ್ಟಿ ವೈಶಂಪಾಯನನಿಗೆ ಹೇಳಿಕೊಟ್ಟರೆಂದು ಪ್ರತೀತಿ. ಅಷ್ಟೇ ಅಲ್ಲ, ಮಹಾಭಾರತದ ಧೃತರಾಷ್ಟ್ರ ಹಾಗೂ ಪಾಂಡವರ ಜನನಕ್ಕೆ ಅವರೇ ತಂದೆಯಾದರೆಂದೂ ನಿರೂಪಿತವಾಗಿದೆ. ಹೀಗಿದ್ದೂ, ಆಯಾ ಕಾವ್ಯದ ಘಟನೆಗಳ ‘ಇತಿಹಾಸ’ದಲ್ಲಿದ್ದೂ, ಅವರು ಈ ಕಾವ್ಯಗಳನ್ನು ಇಷ್ಟೊಂದು ವಸ್ತುನಿಷ್ಠವಾಗಿ ಬರೆದದ್ದು ಹೇಗೆ – ಎಂಬ ಪ್ರಶ್ನೆಗೆ, ಪರಂಪರೆ ಹೇಳುವ ಸಮಾಧಾನ ಅವರು ‘ಋಷಿ’ಗಳು ಎಂಬುದು. ಋಷಿ ಎಂದರೆ ತನ್ನ ಸಮಕಾಲೀನವನ್ನೂ, ವಸ್ತುನಿಷ್ಠವಾಗಿ ಹಾಗೂ ನಿರ್ಲಿಪ್ತವಾಗಿ ನೋಡುವವನು – ಎಂದು ಅರ್ಥ. ಋಷಿಗಳಲ್ಲದ ಬರೀ ಕವಿಗಳಿಗೆ ಇದು ಸಾಧ್ಯವಾಗುವುದಿಲ್ಲವಾದುದರಿಂದ, ಅವರು ಪ್ರಾಚೀನ ವಸ್ತುಗಳನ್ನು ಆರಿಸಿಕೊಳ್ಳುತ್ತಾರೆ – ಎಂದು ವಾದಿಸಬಹುದು. ಆದರೆ ಹಿಂದೆಯೆ ಪ್ರಸ್ತಾಪಿಸಿರುವಂತೆ, ವಾಲ್ಮೀಕಿ ಹಾಗೂ ವ್ಯಾಸರು ಯಾವ ಕಾಲದಲ್ಲಿದ್ದರೋ ಏನೋ ತಿಳಿಯದು. ವ್ಯಾಸ, ವಾಲ್ಮೀಕಿಗಳೆಂಬ ಸಂಕೇತದಿಂದ ನಾವು ಕರೆಯುವ ಈ ವ್ಯಕ್ತಿಗಳು ಕೂಡಾ ತಮಗೆ ಹಿಂದಿನಿಂದ ಬಂದ, ‘ರಾಮಾಯಣ’ ಮತ್ತು ‘ಮಹಾಭಾರತ’ಕ್ಕೆ ಸಂಬಂಧಪಟ್ಟ ಕಥಾದ್ರವ್ಯವನ್ನು ಹಿಡಿದು ಒಂದೆಡೆ ಕೂಡಿಸಿ ರೂಪುಕೊಟ್ಟವರು ಎಂದು ಭಾವಿಸುವುದೇ ಸರಿಯಾದದ್ದು.

ಹಾಗಾದರೆ, ಮಹಾಕಾವ್ಯದ ವಸ್ತು ಹಳೆಯದಾದ್ದರಿಂದ, ಅದನ್ನು ಬರೆಯುವ ಕವಿಗೆ ತನ್ನ ಸಮಕಾಲೀನತೆಯನ್ನು ಪ್ರಕಟಿಸಲು ಅದು ಒಂದು ಆತಂಕವಾಗುವುದಿಲ್ಲವೆ; ಎಂದೋ ನಡೆದ, ತೀರಾ ಹಳೆಯ ವಸ್ತು, ವರ್ತಮಾನದ ಜೀವಂತವಾದ ಅನುಭವಕ್ಕೆ ತಕ್ಕ ಮಾಧ್ಯಮವಾದೀತೆ – ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದುಂಟು. “ಯಾವುದೇ ಕಾವ್ಯ ಮಹತ್ತಾದುದೆನಿಸಿಕೊಳ್ಳಬೇಕಾದರೆ ಒಂದರ್ಥದಲ್ಲಿ ಅದು ವರ್ತಮಾನಕ್ಕೆ ಸಂಬಂಧಿಸಿದ್ದಾಗಿರಬೇಕು.”[18] ಎನ್ನುತ್ತಾನೆ ಎ.ಸಿ. ಬ್ರಾಡ್ಲೆ. ನಿಜ, ಕವಿಯ ಅನುಭವವೆಲ್ಲ ವರ್ತಮಾನ ಕಾಲದ್ದೇ; ಅವನು ಭೂತಕಾಲದ ಅಥವಾ ಭವಿಷ್ಯತ್ತಿನ ಅನುಭವದಲ್ಲಿ ಬದುಕುವುದಿಲ್ಲ. ಅವನು ಯಾವುದೇ ವಸ್ತುವನ್ನಾರಿಸಿಕೊಳ್ಳಲಿ ಅದರಲ್ಲಿ ಅವನು ಅಭಿವ್ಯಕ್ತಿಸುವುದು ತನ್ನ ಸಮಕಾಲೀನವಾದ ಅನುಭವವನ್ನೇ. ಈ ಅನುಭವವನ್ನು ಮಹಾಕಾವ್ಯದ ಕವಿ ಪ್ರಾಚೀನವಾದ ವಸ್ತುವಿನ ಮೂಲಕ ಹೇಳುತ್ತಾನೆ ಅಷ್ಟೇ. ವಸ್ತು ‘ಹಳೆಯದು’ ಅಷ್ಟೇ; ಅದರಲ್ಲಿ ವ್ಯಕ್ತವಾಗುವ ಅನುಭವ ‘ಸಮಕಾಲೀನ’ವಾದದ್ದೆ. ಅಲ್ಲದೆ ವಸ್ತುವನ್ನು ಹಳೆಯದು ಅಥವಾ ಹೊಸದು ಎಂದು ಹೇಳುವುದೂ ತಪ್ಪು. ಯಾಕೆಂದರೆ ಕವಿಗೆ ವಸ್ತು ಒಂದು ನಿಮಿತ್ತ ಮಾತ್ರ. ‘ಕಥೆ ತಾಂ ನಿಮಿತ್ತ ಮಾತ್ರಂ ಆತ್ಮಕ್ಕೆ ಶರೀರದೊಲಂತೆ’ ಎನ್ನುತ್ತಾರೆ ಕುವೆಂಪು. ಕವಿ ತನ್ನ ವಿಪುಲಾನುಭವಕ್ಕೆ ಆರಿಸಿಕೊಳ್ಳುವ ವಸ್ತು, ತಕ್ಕ ಮಾಧ್ಯಮವಾಗಿದೆಯೆ ಇಲ್ಲವೆ ಎನ್ನುವುದು ಮುಖ್ಯ. ಅಲ್ಲದೆ, ಕವಿ ತನ್ನ ಸಮಕಾಲೀನವಾದ ಅನುಭವವನ್ನು ನಿರೂಪಿಸುವುದಕ್ಕೆ ವಸ್ತುವೂ ಸಮಕಾಲೀನವಾಗಿರಬೇಕು ಎನ್ನುವುದು ಸರಿಯಲ್ಲ. ನಿಜವಾದ ಕವಿ ಎಂಥ ಪ್ರಾಚೀನವಾದ ವಸ್ತುವನ್ನು ತೆಗೆದುಕೊಂಡೂ ತನ್ನ ಸಮಕಾಲೀನತೆಯನ್ನು ಪ್ರಕಟಿಸಬಲ್ಲ; ಅಷ್ಟೇ ಅಲ್ಲ, ಕೇವಲ ‘ಸಮಕಾಲೀನತೆ’ಯಷ್ಟೇ ಕವಿಗೆ ಮುಖ್ಯವಲ್ಲ, ಅವನು ಹೇಳುವುದು ‘ಸಂತತ ವರ್ತಮಾನ’ದಲ್ಲೂ ಸಲ್ಲುವ ಅನುಭವ. ಆದರೆ ಅದು ಯಾವ ‘ಸಮಕಾಲೀನತೆ’ಯಲ್ಲಿ ಸಂಭವಿಸಿದೆಯೆನ್ನುವುದನ್ನು ಓದುಗರು ಗುರುತಿಸುವಷ್ಟರ ಮಟ್ಟಿಗೆ, ಅದು ಅಂದಂದಿನ ಕಾಲಧರ್ಮದಿಂದ ಬದ್ಧವಾಗಿರುತ್ತದೆ. ವ್ಯಾಸ, ವಾಲ್ಮೀಕಿ, ಹೋಮರ್ ಇವರ ಕಾವ್ಯಗಳು, ಅವರು ಬದುಕಿದ ಕಾಲದ ಯುಗಧರ್ಮದ ಸತ್ವಗಳಿಂದ ಬದ್ಧವಾಗಿವೆ. ವ್ಯಾಸರ ಮಹಾಭಾರತ ಚಿತ್ರಿಸುವುದು ಒಂದು ಉನ್ನತ ಮಟ್ಟವನ್ನೇರಿದ ಸಂಸ್ಕೃತಿಯ ಸಂಘರ್ಷದ ‘ಯುಗಾಂತ’ವನ್ನು. ಹೋಮರನ ಕಾವ್ಯಗಳು, ಯಶಸ್ಸಿಗಾಗಿ ಬದುಕನ್ನು ಮುಡಿಪಾಗಿರಿಸಿ ಹೋರಾಡುವ ವೀರರನ್ನೊಳ -ಗೊಂಡ ಅಸಾಧಾರಣ ವೀರಯುಗದ ಪ್ರತಿನಿಧಿ ಎನ್ನುತ್ತಾರೆ ವಿದ್ವಾಂಸರು. ವರ್ಜಿಲ್ ತನ್ನ ಕಾವ್ಯವನ್ನು ರಚಿಸಿದ್ದು ರೋಮನ್ ಸಾಮ್ರಾಜ್ಯದ ಸುವರ್ಣಯುಗದಲ್ಲಿ, ಜೂಲಿಯಸ್ ಸೀಸರನ ಮರಣಾನಂತರ, ಆಕ್ಟೇವಿಯಸ್ ಸೀಸರನು ಆಳುತ್ತಿದ್ದ ಕಾಲದಲ್ಲಿ. ಈ ಕಾಲದ ಹಿನ್ನೆಲೆಯನ್ನು ನೋಡಿದರೆ ಅದು ರಣರಂಗಗಳಿಂದ ಪ್ರಕ್ಷುಬ್ಧವಾದ ಕಾಲ. ಇಂಥ ಕಾಲದ ಸಂಘರ್ಷವನ್ನು, ಮತ್ತು ಇಟಲಿ ಹಾಗೂ ರೋಮ್‌ಗಳ ಮೇಲೆ ತನಗಿರುವ ಪ್ರೀತಿಯನ್ನು ಪ್ರಕಟಿಸಲು ಅವನು ತೆಗೆದುಕೊಂಡದ್ದು, ಹೋಮರನ ಕಾವ್ಯದ ಒಬ್ಬ ವೀರನಾದ ‘ಈನಿಯಸ್’ನ ಕತೆಯನ್ನು. ಡಾಂಟೆ ತನ್ನ ‘ಡಿವೈನ್ ಕಾಮೆಡಿ’ಯ ವಸ್ತುವನ್ನು, ತಾನೇ ಕಲ್ಪಿಸಿಕೊಂಡದ್ದು. ಆದರೂ ಅದರ ಕಥೆಯ ಹಂದರ ಕೆಸ್ತ ಧರ್ಮದ ಪ್ರಕಾರ ವ್ಯಕ್ತಿ ಪಡೆಯುವ ನರಕ, ಇಲ್ಲವೆ ಸ್ವರ್ಗ ಲೋಕಗಳ ಕಲ್ಪನೆಯಿಂದ ಕಟ್ಟಿದ್ದು. ತನ್ನ ಸಮಕಾಲೀನವಾದ, ಧಾರ್ಮಿಕ, ರಾಜಕೀಯ ಭ್ರಷ್ಟಾಚಾರಗಳಿಂದ ರೋಸಿಹೋದ ಡಾಂಟೆ, ತನ್ನ ಕಟುವಾದ ಅನುಭವಗಳು, ದೈವಭಕ್ತಿ ಮತ್ತು ತತ್ವಜ್ಞಾನಗಳನ್ನು ಅಭಿವ್ಯಕ್ತಪಡಿಸಲು ‘ಡಿವೈನ್ ಕಾಮೆಡಿ’ ಯಂಥ ಪೌರಾಣಿಕ ಸತ್ವವುಳ್ಳ ಕಾವ್ಯವನ್ನು ರಚಿಸಿದನು. ತಾನು ಬಾಲ್ಯದಲ್ಲಿ ಕಂಡು, ಮಾನಸಿಕವಾಗಿ ಪ್ರೇಮಿಸಿದ ಬಿಯಟ್ರಿಸ್ ಎಂಬಾಕೆ, ಈ ಕಾವ್ಯದಲ್ಲಿ, ಡಾಂಟೆಯನ್ನು, ನರಕ ವರ್ತುಲಗಳಿಂದ ಪಾರು ಮಾಡಿ ದೇವ ಸಾನ್ನಿಧ್ಯಕ್ಕೆ ಕೊಂಡೊಯ್ಯುವ ಪರಿಶುದ್ಧ ಪ್ರೇಮದ ಮೂರ್ತಿಯಾಗಿದ್ದಾಳೆ. ‘ಡಿವೈನ್ ಕಾಮೆಡಿ’ಯ ನರಕದ ವೃತ್ತಗಳಲ್ಲಿ ಅನೇಕ ಸಮಕಾಲೀನ ಚಾರಿತ್ರಿಕ ವ್ಯಕ್ತಿಗಳೂ ಕಾಣುತ್ತಾರೆ. ಅವರೊಡನೆ ಕಾವ್ಯದ ನಾಯಕ ನಡೆಯಿಸಿದ ಸಂಭಾಷಣೆಗಳಲ್ಲಿ ಅಂದಿನ ಫ್ಲಾರೆನ್ಸ್ ನಗರದ ಸಮಕಾಲೀನ ಪರಿಸ್ಥಿತಿಯ ಚರ್ಚೆ ಇದೆ; ಡಾಂಟೆ ತನಗೆ ಆಗದ ಸಮಕಾಲೀನ ವ್ಯಕ್ತಿಗಳನ್ನು, ತನ್ನ ಕಾವ್ಯದ ನರಕದ ವರ್ತುಲಗಳಲ್ಲಿ ಚಿತ್ರಿಸಿದ್ದಾನೆ ಎಂಬ ಆಕ್ಷೇಪಣೆಯೂ ಆತನ ಮೇಲಿದೆ. ಒಟ್ಟಿನಲ್ಲಿ ಅದು ಹದಿಮೂರನೆಯ ಶತಮಾನದ ‘ವಿಪ್ಲವ ಯುಗ’ವನ್ನು ಯಶಸ್ವಿಯಾದ ರೀತಿಯಲ್ಲಿ ಪ್ರತಿನಿಧಿಸುತ್ತದೆ. ಮಿಲ್ಟನ್ ಕವಿಯ ‘ಪ್ಯಾರಡೈಸ್ ಲಾಸ್ಟ್’ ಹದಿನೇಳನೆಯ ಶತಮಾನದಲ್ಲಿ ರಚಿತವಾದ ಇಂಗ್ಲೆಂಡಿನ ಮಹಾಕಾವ್ಯ. ಅಂದಿನ ಇಂಗ್ಲೆಂಡಿನ ರಾಜ ಚಾರ್ಲ್ಸ್‌ನ ಸರ್ವಾಧಿಕಾರ ಪ್ರವೃತ್ತಿಗೂ, ಮತ್ತು ನಾಡಿನ ಪ್ರಜೆಗಳ ಸ್ವಾತಂತ್ರ್ಯ ಪ್ರಿಯತೆಗೂ ಬಲವಾದ ಹೋರಾಟ ನಡೆದಾಗ ಮಿಲ್ಟನ್ ಸೇರಿದ್ದು ರಾಜ ವಿರೋಧೀ ಪಕ್ಷವನ್ನು. ಈ ಹೋರಾಟ ಕ್ರಾಮ್‌ವೆಲ್‌ನಂತಹ ಮುಖಂಡನ ಮುಂದಾಳುತನದಲ್ಲಿ ಯಶಸ್ವಿಯಾಗಿ, ಇಂಗ್ಲೆಂಡಿನ ದೊರೆ ಚಾರ್ಲ್ಸ್‌ನನ್ನು ಗಲ್ಲಿಗೇರಿಸಲಾಯಿತು. ಅಂದಿನ ಪಾರ್ಲಿಮೆಂಟ್ ಧಾರ್ಮಿಕ ಸುಧಾರಣೆಗಳತ್ತ ಗಮನ ಹರಿಸಿದಾಗ, ಧಾರ್ಮಿಕ ವಲಯದ ಭ್ರಷ್ಟಾಚಾರಕ್ಕೆ ಕೆಸ್ತ ಧರ್ಮಾಧಿಕಾರಿಗಳೇ ಮೂಲಕಾರಣರೆಂದೂ ಅವರನ್ನು ಉಚ್ಛಾಟಿಸಬೇಕೆಂದೂ ಮಿಲ್ಟನ್ ಲೇಖನಗಳನ್ನು ಬರೆದ. ಈ ಅದಮ್ಯವಾದ ಸ್ವಾತಂತ್ರ್ಯಪ್ರಿಯತೆ, ಮತ್ತು ಮನುಷ್ಯನ ಸ್ವತಂತ್ರ ಶಕ್ತಿಯ ಪರಿಮಿತಿ ಇವುಗಳನ್ನು ಕುರಿತು ಬರೆಯಲು, ಅವನು ಬೈಬಲ್ಲಿನ ಕತೆಯೊಂದನ್ನು ಆರಿಸಿಕೊಂಡನು. ಅವನ ‘ಪ್ಯಾರಡೈಸ್ ಲಾಸ್ಟ್’ ಮಹಾಕಾವ್ಯದ ಸೇಟನ್ನಿನ ಪಾತ್ರ ಮಿಲ್ಟನ್ನಿನ ಅದಮ್ಯವಾದ ಸ್ವಾತಂತ್ರ್ಯಪ್ರಿಯತೆಯ ಸಂಕೇತವಾಗಿದೆ. ಹಾಗೆಯೆ, ಅವನು ತನ್ನ ವೈಯಕ್ತಿಕ ಜೀವನದಲ್ಲಿ ಸ್ತ್ರೀಯರ ಬಗೆಗೆ ಬೆಳೆಯಿಸಿಕೊಂಡ ಕಹಿ ಭಾವನೆ ಹಾಗೂ ಪಕ್ಷಪಾತಗಳು, ‘ಈವ್’ಳ ಪಾತ್ರ ಚಿತ್ರಣದಲ್ಲಿ, ಗಂಡಿನ ಪತನದಲ್ಲಿ ಹೆಣ್ಣಿನ ಪಾತ್ರವೇ ಪ್ರಮುಖವಾದುದೆಂಬಂತೆ ಚಿತ್ರಿಸುವ ಮಿಲ್ಟನ್ನಿನ ದೃಷ್ಟಿಯಲ್ಲಿ ಪ್ರಕಟವಾಗಿದೆ ಎನ್ನುತ್ತಾರೆ ವಿಮರ್ಶಕರು. ಕನ್ನಡದಲ್ಲಿ ಹತ್ತನೆಯ ಶತಮಾನದಲ್ಲಿ ಕೃತಿ ರಚಿಸಿದ ಪಂಪ, ಕರ್ನಾಟಕದ ಈ ‘ವೀರಯುಗ’ವನ್ನು ಸಮರ್ಥವಾಗಿ ಚಿತ್ರಿಸಲು ಎತ್ತಿಕೊಂಡದ್ದು, ‘ಮಹಾಭಾರತದ’ದ ವಸ್ತುವನ್ನು. ತನ್ನ ಸಮಕಾಲೀನತೆಯನ್ನು ಅಥವಾ ಸಮಕಾಲೀನ ಚರಿತ್ರೆಯನ್ನು, ಪ್ರಾಚೀನ ವಸ್ತುವಿನ ಕಥಾಭಿತ್ತಿಯ ಮೇಲೆ ಚಿತ್ರಿಸಿದ ‘ವಿಕ್ರಮಾರ್ಜುನ ವಿಜಯ’ ಹತ್ತನೆಯ ಶತಮಾನದ ಕರ್ನಾಟಕದ ರಾಜಕೀಯ ಚರಿತ್ರೆಯ ಅಂದಿನ ಪ್ರಧಾನ ಯುಗಧರ್ಮಗಳ ಪ್ರತಿನಿಧಿಯಾಗಿದೆ. ಕುವೆಂಪು ಅವರು ಇಪ್ಪತ್ತನೆಯ ಶತಮಾನದಲ್ಲಿ ಬರೆದ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯ, ಆಧುನಿಕ ವೈಜ್ಞಾನಿಕ ಯುಗದಲ್ಲಿ ರಚಿತವಾದದ್ದೆಂಬುದನ್ನು ಸ್ಪಷ್ಟಪಡಿಸುತ್ತದೆ. ಆ ಪರಂಪರೆಯ ಹಿನ್ನೆಲೆಯಲ್ಲಿ, ಇಂದಿನ ತತ್ವಜ್ಞಾನ, ವೈಜ್ಞಾನಿಕ ದೃಷ್ಟಿ, ಪಾಶ್ಚಾತ್ಯ ಪೌರ‍್ವಾತ್ಯ ಕಾವ್ಯ-ಕಲಾ-ತತ್ವ ದೃಷ್ಟಿಗಳಿಂದ ಪರಿಣತವಾದ ಅನುಭವ ಶ್ರೀಮಂತಿಕೆಯನ್ನು ಈ ಮಹಾಕಾವ್ಯ ಪ್ರಕಟಿಸುತ್ತದೆ. ಈ ಎಲ್ಲ ಮಹಾಕಾವ್ಯಗಳೂ, ಅಂದಂದಿನ ಸಮಕಾಲೀನತೆಯಲ್ಲಿಯೆ ರಚಿತವಾದವುಗಳು; ಅವುಗಳು ಚಾರಿತ್ರಿಕವಾಗಿ ಆಯಾ ಕಾಲಗಳಲ್ಲಿ ರಚಿತವಾಗದೆ, ಬೇರೆಯ ಕಾಲಗಳಲ್ಲಿ ರಚಿತವಾಗಿದ್ದ ಪಕ್ಷದಲ್ಲಿ ಅವುಗಳು, ಈಗ ನಾವು ಕಾಣುವ ಸ್ವರೂಪದಲ್ಲಿಯೆ ಇರಲು ಸಾಧ್ಯವಿರುತ್ತಿರಲಿಲ್ಲ ಎನ್ನುವಷ್ಟರ ಮಟ್ಟಿಗೆ, ಅವು ಅಂದಂದಿನ ಸಮಕಾಲೀನತೆಯಿಂದ ಬದ್ಧವಾಗಿವೆ. ಮೊದಲ ಮಹಾಕಾವ್ಯ (Primitive epic) ಗಳೇ ಅಥವಾ ಅನಂತರದ (Later epic) ಮಹಾಕಾವ್ಯಗಳೇ ಆಗಿರಲಿ, ಅವು ಅಂದಂದಿನ ಯುಗಧರ್ಮದ ಪ್ರತೀಕಗಳು; ಒಂದು ಕಾಲದ ಸಮಷ್ಟಿ ಪ್ರಜ್ಞೆ (Collective unconscious) ತನ್ನನ್ನು ತಾನು ಇಂಥ ಮಹಾಕಾವ್ಯಗಳಲ್ಲಿ ಪ್ರಕಟಿಸಿಕೊಳ್ಳುತ್ತದೆ. ಅಲ್ಲದೆ ‘ಮಹಾಕಾವ್ಯ’ಗಳು ಮತ್ತು ಅವುಗಳಲ್ಲಿನ ಪಾತ್ರಗಳು, ನಿತ್ಯಸತ್ಯದ ಪ್ರತಿಮೆಗಳೆಂದು ಭಾವಿಸಬೇಕಾಗುತ್ತದೆ. ‘ರಾಮಾಯಣ’ ‘ಮಹಾಭಾರತ’ಗಳು ಎಂದೋ ನಡೆದವಲ್ಲ, ಇಂದು ದಿನದಿನವೂ ನಡೆಯುವಂತಹವುಗಳೇ ಎಂಬುದನ್ನು ನಮ್ಮ ಸಮಕಾಲೀನ ಘಟನೆಗಳು, ಸಂಗತಿಗಳು ಸ್ಪಷ್ಟಪಡಿಸುತ್ತವೆ. ಮಹಾಕಾವ್ಯಗಳ ಪಾತ್ರಗಳಿಗೆ ಒದಗುವ ಧರ್ಮಸಂಕಟಗಳು, ಸವಾಲುಗಳು, ಒಂದು ಧ್ಯೇಯೋದ್ದೇಶಕ್ಕಾಗಿ ಹೋರಾಡುವ ಎಲ್ಲ ಕಾಲದ ಮಹಾವ್ಯಕ್ತಿಗಳಿಗೂ ಸಂಭವಿಸ ತಕ್ಕವುಗಳೇ. ಈ ದೃಷ್ಟಿಯಿಂದ ‘ಮಹಾಕಾವ್ಯ’ದ ವಸ್ತುಗಳು, ಮೇಲೆ ನೋಡುವುದಕ್ಕೆ ‘ಹಳೆಯ’ವೆಂಬಂತೆ ತೋರಿದರೂ, ಸಮರ್ಥನಾದ ಕವಿಗೆ, ತನ್ನ ಸಮಕಾಲೀನ ಅನುಭವಗಳನ್ನು ವಸ್ತುನಿಷ್ಠವಾಗಿ ಮತ್ತು ವ್ಯಾಪಕವಾದ ರೀತಿಯಲ್ಲಿ ಚಿತ್ರಿಸಲು ತುಂಬ ಉಚಿತವಾದ ಮಾಧ್ಯಮಗಳಾಗುತ್ತವೆ. ಅಲ್ಲದೆ ಆ ವಸ್ತುವನ್ನು ಕವಿ,  ಅಂದಂದಿಗೆ ಉಚಿತವಾದ ರೀತಿಯಲ್ಲಿ ಮಾರ್ಪಡಿಸಿಕೊಂಡು, ಅದು ತನ್ನದೇ ಎಂಬಂತೆ ಕಾಣುವ ಸ್ವೋಪಜ್ಞತೆಯನ್ನು ಪ್ರಕಟಿಸುತ್ತಾನೆ.

ಸಿದ್ಧ, ಪ್ರಸಿದ್ಧವಾದ ವಸ್ತುಗಳನ್ನು ಅಂದಂದಿನ ‘ಮಹಾಕಾವ್ಯ’ ನಿರ್ಮಿತಿಗೆ ಬಳಸಿಕೊಳ್ಳುವ ಕವಿ, ಆ ವಸ್ತುವನ್ನು ತನಗೆ ಉಚಿತವಾದ ರೀತಿಯಲ್ಲಿ ಬದಲಾಯಿಸಿ ಕೊಳ್ಳುತ್ತಾನೇನೋ ನಿಜ. ಆದರೆ, ಅಂತಹ ವಸ್ತುವನ್ನು ನಿರ್ವಹಿಸುವಾಗ ಕವಿ, ಅತಿಯಾದ ಸ್ವಾತಂತ್ರ್ಯ ವಹಿಸಿ, ಅದರಲ್ಲಿ ಮನಸ್ವಿಯಾದ ಬದಲಾವಣೆಗಳನ್ನು ಮಾಡಿಕೊಳ್ಳಬಾರದು ಎಂದು ಭಾರತೀಯ ಪ್ರಮುಖ ಲಾಕ್ಷಣಿಕನಾದ ಆನಂದವರ್ಧನನು ಎಚ್ಚರಿಕೆ ಕೊಡುತ್ತಾನೆ. “ರಾಮಾಯಣವೇ ಮೊದಲಾದ ಪ್ರಬಂಧಗಳ ರಸಗಳು ಸಿದ್ಧವಾಗಿವೆ. ಅವುಗಳನ್ನವಲಂಬಿಸಿ ಕಥೆಯನ್ನು ರಚಿಸುವಾಗ ರಸ ವಿರೋಧ ಬರುವಂತೆ ಮನಸ್ವಿಯಾಗಿ ಕಲ್ಪಿಸಿಕೊಳ್ಳಬಾರದು”[19] – ಎನ್ನುತ್ತಾನೆ ಆನಂದವರ್ಧನ. ಇದು ಗಮನಿಸಬೇಕಾದ ಮಾತಾಗಿದೆ. ಒಂದು ಸಿದ್ಧ-ಪ್ರಸಿದ್ಧವಾದ ವಸ್ತು ಶತಶತಮಾನಗಳಿಂದ ಜನಮನದಲ್ಲಿ, ನದಿ-ಪರ್ವತಗಳಂತೆ ಸ್ಥಾಯಿಯಾಗಿರುತ್ತದೆ. ಅದು ಅವರ ನಂಬಿಕೆಗಳ, ಆಶಯಗಳ, ಮೌಲ್ಯಗಳ ಒಂದು ಭಾವಕೋಶದಂತೆ ಇರುತ್ತದೆ. ಕವಿ ಮಾಡಬಹುದಾದ ಅತ್ಯಂತ ಸಾಧಾರಣದ ಕೆಲಸವೆಂದರೆ, ಆ ’ಭಾವಕೋಶ’ರೂಪದ ವಿಷಯವನ್ನು ಕೆಡಿಸದಂತೆ ನಿರ್ವಹಿಸುವುದು. ಹಾಗೆಂದರೆ ಆ ವಸ್ತು ಮೊದಲು ಹೇಗಿತ್ತೋ ಹಾಗೆಯೆ ಕವಿಯಾದವನು ಪುನರಾವರ್ತಿಸಬೇಕೆಂದಾಗಲಿ, ತನ್ನ ಉದ್ದೇಶಕ್ಕೆ ಅನುಸಾರವಾದ ಬದಲಾವಣೆಗಳನ್ನು ಮಾಡಿಕೊಳ್ಳಬಾರದೆಂದಾಗಲಿ ಈ ಮಾತಿನ ಅರ್ಥವಲ್ಲ. ಕವಿಯಾದವನಿಗೆ ಯಾವುದೇ ವಸ್ತುವನ್ನು ತನಗೆ ಅನುಸಾರವಾಗಿ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯಉಂಟು; ಆದರೆ ಆ ಬದಲಾವಣೆಗಳು ಆನಂದವರ್ಧನನು ಹೇಳುವಂತೆ ರಸಕ್ಕೆ ವಿರೋಧ ಬರುವಂತೆ ಮನಸ್ವಿಯಾದ ರೀತಿಯ ಬದಲಾವಣೆಯಾಗಬಾರದು. ಈ ಮಾತಿಗೆ ನಿದರ್ಶನವಾಗಿ ನಾವು ಜೈನ ರಾಮಾಯಣಗಳನ್ನು ನೋಡಬಹುದು. ಜೈನರು, ಸಿದ್ಧಪ್ರಸಿದ್ಧವಾದ ರಾಮಾಯಣದ ಕಥಾವಸ್ತುವಿನಲ್ಲಿ ಎಷ್ಟೋ ಸಲ ‘ಶಕಾರವಿಕಾರ’ವಾಗುವ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಏಕಪತ್ನೀವ್ರತನೂ, ಸೀತೆಯ ಬಗೆಗೆ ಅನುಪಮವಾದ ಪ್ರೀತಿಯುಳ್ಳವನೆಂದೂ ಜನಮನದಲ್ಲಿ ಆರಾಧ್ಯನಾದ ಶ್ರೀರಾಮನು, ಜೈನರಾಮಾಯಣದ ಪ್ರಕಾರ, ಸೀತೆಯನ್ನು ಕಳೆದುಕೊಂಡು ಅವಳಿಗಾಗಿ ಪರಿತಪಿಸುತ್ತಾ ಅಲೆಯುವಾಗ, ಸುಗ್ರೀವನ ಸಖ್ಯವನ್ನು ಪಡೆದು, ಆ ಸುಗ್ರೀವನ ಹನ್ನೆರಡು ಜನ ಕನ್ಯಕೆಯರನ್ನು ಮದುವೆ ಮಾಡಿಕೊಳ್ಳುತ್ತಾನೆ. ಆದರೂ ಶ್ರೀರಾಮನಿಗೆ ಸೀತೆಯ ಬಗ್ಗೆ ಇದ್ದ ಅಪಾರ ಪ್ರೇಮ ಕುಂದಲಿಲ್ಲವೆಂದು ಜೈನ ರಾಮಾಯಣ ಹೇಳುತ್ತದೆ. ಇಂಥ ಬದಲಾವಣೆಯಿಂದ ಸಾಧಿತವಾದದ್ದೇನು? ಅನಗತ್ಯವಾದ ಇಂಥ ಬದಲಾವಣೆಗಳು, ಒಂದು ಜನಾಂಗದ ಭಾವಕೋಶಕ್ಕೆ ಆಘಾತಕರವಾಗಿವೆ. ಹಾಗೆಯೆ ಅತಿಯಾದ ಸಮಕಾಲೀನತೆಯನ್ನು ತರುವುದರಿಂದಲೂ ಕವಿ ಕತೆಯ ಮೈಯ್ಯನ್ನು ಕೆಡಿಸಿ ರಸಕ್ಕೆ ವಿರೋಧವನ್ನು ಮಾಡಿದಂತಾಗುತ್ತದೆ. ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ, ಮಹಾಭಾರತದ ಅರ್ಜುನನ ಪಾತ್ರದೊಂದಿಗೆ ತನ್ನ ಆಶ್ರಯದಾತನೂ ಸ್ನೇಹಿತನೂ ಆದ ಅರಿಕೇಸರಿಯನ್ನು ಸಮೀಕರಿಸಿ ಕತೆಯನ್ನು ನಿರ್ವಹಿಸುವಾಗ ಎಂತೆಂತಹ ಆಭಾಸಗಳನ್ನು ತಂದುಕೊಂಡಿದ್ದಾನೆಂಬುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ಆದುದರಿಂದ ವರ್ತಮಾನದ ಅನುಭವದ ಹಿನ್ನೆಲೆಯಲ್ಲಿ ಮಹಾಕಾವ್ಯದ ವಸ್ತುವನ್ನು ನಿರ್ವಹಿಸುವ ಕವಿ ತುಂಬ ಎಚ್ಚರದಿಂದ ಇರಬೇಕಾಗುತ್ತದೆ. ಪುರಾಣ ಪ್ರಸಿದ್ಧವಾದ ವಸ್ತುವನ್ನೆತ್ತಿಕೊಂಡು ಬರೆಯುವ ಕವಿ, ತನ್ನ ಕೃತಿ ವರ್ತಮಾನಕ್ಕೆ ಏನೇನೂ ಸಂಬಂಧಿಸದ ಕೇವಲ ಹಳೆಯ ಪುರಾಣವಾಗಿದೆ ಅನ್ನಿಸದಂತೆ, ಅಥವಾ ತೀರಾ ವರ್ತಮಾನದ ಹಸಿತನದಿಂದ, ಪೌರಾಣಿಕವಾದ ವಸ್ತುವೇ ಕುಲಗೆಟ್ಟು ಹೋಗಿದೆ ಅನ್ನಿಸದಂತೆ, ನಿರ್ವಹಿಸಬೇಕಾಗುತ್ತದೆ.

ಒಟ್ಟಿನಲ್ಲಿ ಮಹಾಕಾವ್ಯದ ವಸ್ತು ಪುರಾಣ ಪ್ರಸಿದ್ಧವಾದುದೂ, ಮತ್ತು ಉದಾತ್ತವಾದುದೂ ಆಗಿರುತ್ತದೆ. ಮಹಾಕಾವ್ಯದ ವಸ್ತುವಿನ ಹರಹು ವಿಸ್ತಾರವಾದದ್ದು. ಅದರಲ್ಲಿನ ಘಟನೆಗಳು, ಪಾತ್ರಗಳು ಅಸಾಧಾರಣವಾದವುಗಳು, ಮತ್ತು ಅದ್ಭುತದ ಅಂಶ ಅದರಲ್ಲಿ ತಾನೇ ತಾನಾಗಿರುತ್ತದೆ. ಒಂದು ಇಡೀ ಜನಾಂಗದ ಚರಿತ್ರೆಯೆ ಅದರಲ್ಲಿ ಚಿತ್ರಿತವಾಗಿರುತ್ತದೆ. ಮತ್ತು ಒಂದು ಯುಗವೇ, ತನ್ನ ಸಮಸ್ತ ಸಂಘರ್ಷಗಳೊಡನೆ ಅದರಲ್ಲಿ ಪ್ರಕಟವಾಗುತ್ತದೆ. ರಾಮಾಯಣ, ಮಹಾಭಾರತ, ಇಲಿಯಡ್ ಇಂಥ ಮಹಾಕಾವ್ಯಗಳು ಈ ಮಾತಿಗೆ ನಿದರ್ಶನವಾಗಿವೆ.


[1] ಕುವೆಂಪು : ಶ್ರೀರಾಮಾಯಣ ದರ್ಶನಂ : ಮಹಾ ಸಂಪುಟ-೧ : ಕವಿಕ್ರತು ದರ್ಶನಂ ಪು. ೪ ಪಂಕ್ತಿ ೧೦೦

[2] K.R. Srinivasa Iyengar : Adventure of Criticism. p. 92

[3] R.M. Alden : Introduction to poetry. p. 42

[4] ‘ಆಖ್ಯಾನ’ವೆಂದರೆ, ಕತೆ ಹೇಳುವ ವ್ಯಕ್ತಿ, ಅಥವಾ ವರ್ಣಿಸುವ ವ್ಯಕ್ತಿ ತಾನೇ ಪ್ರತ್ಯಕ್ಷವಾಗಿ ಕಂಡ ಸಂಗತಿಗಳ ನಿರೂಪಣೆ ಎಂದು ಅರ್ಥ. ‘ಉಪಾಖ್ಯಾನ’ವೆಂದರೆ, ಕತೆಯನ್ನು ಹೇಳುವವನು ಬೇರೊಬ್ಬರಿಂದ ಕೇಳಿ ತಿಳಿದದ್ದು ಎಂದು ಅರ್ಥ. ಉಪಾಖ್ಯಾನಕ್ಕಿಂತ ಆಖ್ಯಾನಗಳು ಹೆಚ್ಚು ವಿಶ್ವಸನೀಯವಾದವುಗಳು.

[5] J.A.K. Thomson : Classical Influences on English Poetry. p. 10

[6] ದಂಡಿ – ಕಾವ್ಯಾದರ್ಶ. ೧-೧೫

[7] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ. ಪು. ೧೨

[8] ಎಸ್. ಬಾಲಸುಬ್ರಮಣ್ಯಂ : ಅರಿಸ್ಟಾಟಲನ ಕಾವ್ಯ ಮೀಮಾಂಸೆ. ಪು. ೭೨

[9] K.R. Sreenivasa Iyengar : Adventure of Criticism. P. 81

[10] Hudson : Introudction to the study of literature. P. 106

[11] I.T. Myers : The study in Epic Development. P. 17

[12] ಭಾಮಹ : ಕಾವ್ಯಾಲಂಕಾರ : ಅಧ್ಯಾಯ ೧, ಶ್ಲೋಕ ೧೯

[13] Paul Merchant : The Epic. P. 1

[14] C.M. Bowra : Heroic Poetry p. 388-389

[15] “………………………. ಕೊಂದ ಕತದಿಂದೇಂ

ಪೆರ‍್ಮನಾದನೆ ರಾಮಾನಾಮಾತನುಳಿ : ಪಗೆಯ?
ತೆಗೆತೆಗೆ! ಪೆರ‍್ಮೆಗೊಲ್ಮೆಯೆ ಚಿಹ್ನೆ, ಮಹತ್ತಿಗೇಂ
ಬೆಲೆಯೆ ಪೇಳ್ ಕೊಲೆ? ದೈತ್ಯನಂ ಗೆಲಿದ ಕಾರಣಕಲ್ತು,
ತನ್ನ ದಯಿತೆಯನೊಲಿದ ಕಾರಣಕೆ ಗುರು ಕಣಾ
ರಾಮಚಂದ್ರಂ, ಕೋಲಾಹಲದ ರುಚಿಯ ಮೋಹಕ್ಕೆ
ಮರುಳಾದ ಮಾನವರ್ ರಾವಣನ ಕೊಲೆಗಾಗಿ
ರಾಮನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ
ತಾನೇಕೆ?”

(ಕುವೆಂಪು : ಶ್ರೀರಾಮಾಯಣ ದರ್ಶನಂ : ಅಯೋಧ್ಯಾ ಸಂಪುಟಂ : ಸಂಚಿಕೆ ೮ : ಪು. ೧೪೯, ಪಂಕ್ತಿ,. ೧೯೪-೨೦೧)

[16] ರುದ್ರಟ : ಕಾವ್ಯಾಲಂಕಾರ : ಅಧ್ಯಾಯ ೧೬ : ಶ್ಲೋಕಗಳು ೨, ೩, ೪

[17] …. It is therefore to be expected of the poet that he will resort to mythology to give his experience its most fitting expression….. The primordial experience is the source of his mythological imagery to give it form.

C.G. Jung : Modern man in search of a soul.

(Psychology and Literature) p. 189

[18] A.C. Bradlely : Oxford lectures on Poetry p. 191

[19] ಡಾ. ಕೆ. ಕೃಷ್ಣಮೂರ್ತಿ : ಕನ್ನಡ ಧ್ವನ್ಯಾಲೋಕ ಮತ್ತು ಲೋಚನ ಸಾರ ಪು. ೧೪೯ (೫)