ಮಹಾಕಾವ್ಯದ ಉಗಮ ಮತ್ತು ವಿಕಾಸ

ಮಹಾಕಾವ್ಯವೆನ್ನುವುದು ಮಹಾಕವಿಯೊಬ್ಬನ ನಿರ್ಮಿತಿ. ಮಹಾಕಾವ್ಯವೆಂದು ನಾವು ಗುರುತಿಸುವ, ಹೆಸರಿಸುವ ಕೃತಿಗಳ ಅಸಾಧಾರಣ ಗಾತ್ರವನ್ನೂ ಅದರ ವಿಷಯ ವೈಪುಲ್ಯವನ್ನೂ, ಅದರಲ್ಲಿ ಸಮಾವೇಶಗೊಂಡ ಅನೇಕ ಘಟನಾಪರಂಪರೆಗಳನ್ನೂ, ಆಖ್ಯಾನಗಳನ್ನೂ ನೋಡಿದಾಗ ನಿಜವಾಗಿಯೂ ಇದನ್ನು ಒಬ್ಬ ಕವಿ ಬರೆದನೇ, ಬರೆಯುವುದು ಎಂದಾದರೂ ಸಾಧ್ಯವೇ ಎಂಬ ಸಂಶಯ ಉಂಟಾಗುತ್ತದೆ. ಅಲ್ಲದೆ ಮಹಾಕಾವ್ಯದ ಮೂಲಸಾಮಗ್ರಿ ಒಂದೇ ಕಾಲದ್ದೆಂದೂ, ಅದರಲ್ಲಿನ ಘಟನೆಗಳು, ಸಂಗತಿಗಳು ವಾಸ್ತವವಾಗಿ ಒಂದು ಜನಾಂಗದ ಇತಿಹಾಸವನ್ನು ಹೇಳುತ್ತವೆಯೇ ಹೊರತು, ಅವೆಲ್ಲವೂ ಮಹಾಕಾವ್ಯವೊಂದನ್ನು ಕವಿ ಬರೆದ ಕಾಲದಲ್ಲಿಯೆ ಇದ್ದವುಗಳೆಂದೂ ಹೇಳುವುದು ಕಷ್ಟವಾಗುತ್ತದೆ. ಹಾಗೆಯೇ ಮಹಾಕಾವ್ಯದ ಭಿನ್ನ ಪಾಠಗಳು ದೇಶದ ಬೇರೆ ಬೇರೆಯ ಕಡೆ ದೊರೆಯುವುದರಿಂದ, ಮತ್ತು ಮಹಾಕಾವ್ಯವೊಂದರ ಮೂಲ ಸಾಮಗ್ರಿ ಬೇರೆ ಬೇರೆ ದೇಶದ ಹಾಗೂ ಬೇರೆ ಬೇರೆ ಭಾಷೆಯ ಕೃತಿಗಳಲ್ಲೂ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ಕಾಣಿಸಿಕೊಳ್ಳುವುದರಿಂದ, ಮಹಾಕಾವ್ಯದ ಮೂಲಸಾಮಗ್ರಿ, ಒಂದು ಕಾಲದ ಒಬ್ಬ ಕವಿಯದೆಂದು ತೋರದೆ, ಅದು ಬಹು ದೀರ್ಘಕಾಲಗಳಲ್ಲಿ ವಿಕಾಸಗೊಳ್ಳುತ್ತಾ ಬಂದಿರುವಂತೆ ತೋರುತ್ತದೆ. ಹೀಗೆನ್ನಿಸುವುದು ರಾಮಾಯಣ, ಮಹಾಭಾರತ, ಇಲಿಯಡ್, ಒಡೆಸ್ಸಿ ಇಂಥ ಮಹಾಕಾವ್ಯಗಳನ್ನು ನೋಡಿದಾಗ. ಆದರೆ ಇನ್ನು ಬೇರೆಯ ಕೆಲವು ಮಹಾಕಾವ್ಯಗಳಿವೆ : ಅವುಗಳು ಗಾತ್ರದಲ್ಲಿ ಇಷ್ಟು ದೊಡ್ಡವುಗಳಲ್ಲ; ಭಾಷೆಯಲ್ಲಿ, ಛಂದಸ್ಸಿನಲ್ಲಿ, ದೃಷ್ಟಿಯಲ್ಲಿ ಮತ್ತು ಬಂಧದಲ್ಲಿ, ಅದರಲ್ಲಿರುವ ಕುಶಲತೆಯಲ್ಲಿ, ಈಗ ಹೇಳಿದ ಮಹಾಕಾವ್ಯಗಳಿಗಿಂತ ಭಿನ್ನವಾದವುಗಳು. ಅವುಗಳನ್ನು ಒಬ್ಬನೇ ಕವಿ ಬರೆದನೆಂಬುದು ಖಚಿತ. ಆ ಕವಿಗಳ ಕಾಲದೇಶಾದಿ ಚರಿತ್ರೆಗಳು, ಅವರು ಕೃತಿ ರಚಿಸಲು ತೆಗೆದುಕೊಂಡ ಸಮಯ, ಅವರು ಉದ್‌ಘೋಷಿಸಿರುವ ಕೃತಿಗಳ ಉದ್ದೇಶ ಎಲ್ಲವೂ ಸ್ಪಷ್ಟ. ವರ್ಜಿಲ್, ಡಾಂಟೆ, ಮಿಲ್ಟನ್, ಪಂಪ, ಕುವೆಂಪು ಇವರು ಬರೆದ ಮಹಾಕಾವ್ಯಗಳು ಈ ವರ್ಗಕ್ಕೆ ಸೇರುತ್ತವೆ. ಇವುಗಳಿಗಿರುವ ಖಚಿತತೆ – ಕರ್ತೃ ಹಾಗೂ ಕಾಲವಿಚಾರಗಳು – ಇತ್ಯಾದಿಗಳನ್ನು ಕುರಿತ ಮಾತನ್ನು ವಾಲ್ಮೀಕಿ, ವ್ಯಾಸ, ಹೋಮರ್ ಇವರು ಬರೆದ ಮಹಾಕಾವ್ಯಗಳ ವಿಚಾರದಲ್ಲಿ ಅನ್ವಯಿಸಿ ಹೇಳಲು ಬರುವುದಿಲ್ಲ. ವ್ಯಾಸ, ವಾಲ್ಮೀಕಿ ಇತ್ಯಾದಿಗಳು ನಿಜವಾಗಿಯೂ ಯಾವುದೇ ವ್ಯಕ್ತಿಗಳ ಹೆಸರುಗಳಾಗಿದ್ದುವೆಂದು ನಂಬುವುದು ಕಷ್ಟ. ‘ವ್ಯಾಸ’ ಎಂದರೆ ವಿಸ್ತಾರ, ಎಲ್ಲವನ್ನೂ ತನ್ನಲ್ಲಿ ಒಳಗೊಳ್ಳುವುದು ಎಂದು ಅರ್ಥ; ವಾಲ್ಮೀಕಿ ಎಂದರೆ ಹುತ್ತದಿಂದ ಬಂದವನು ಅಥವಾ ಹುತ್ತಗಟ್ಟಿದವನು ಎಂದು ಅರ್ಥ. ಒಂದು ವೇಳೆ ಅವುಗಳು ವ್ಯಕ್ತಿಗಳ ಹೆಸರುಗಳೇ ಆಗಿದ್ದುವೆಂದು ಭಾವಿಸಿದರೂ, ಅವರ ದೇಶ-ಕಾಲ ವಿಚಾರಗಳ ಬಗೆಗಾಗಲಿ, ಅವರು ಕೃತಿ ರಚನೆ ಮಾಡಲು ತೆಗೆದುಕೊಂಡ ಅವಧಿಯ ಬಗೆಗಾಗಲಿ ಚಾರಿತ್ರಿಕವಾದ ಸ್ಪಷ್ಟ ಆಧಾರಗಳಿಲ್ಲ. ಆದುದರಿಂದ ಅವರು ರಚಿಸಿದ್ದೆಂದು ತಿಳಿಯಲಾಗಿರುವ ಈ ಮಹಾಕಾವ್ಯಗಳು ಒಂದು ದೊಡ್ಡ ಸಂಪ್ರದಾಯದ ಮಾತುಗಳಂತೆ ತೋರುತ್ತವೆಯೇ ವಿನಾ “ಒಬ್ಬ ಮನುಷ್ಯನು ರಚಿಸಿದ್ದೆಂದು ಮನಸ್ಸಿಗೆ ತೋರುವುದಿಲ್ಲ.”

[1] “ನಿಜವಾಗಿಯೂ ವ್ಯಾಸ ಅಥವಾ ವಾಲ್ಮೀಕಿ ಎಂಬುದು ಯಾರ ಹೆಸರೂ ಆಗಿರಲಿಲ್ಲ.”[2] ಹಾಗೆಯೆ ‘ಹೋಮರ್ ಎಂಬ ಕವಿ ಇದ್ದನೇ ಎನ್ನುವುದೇ ವಾದಗ್ರಸ್ಥವಾದ ವಿಷಯ…. ಈ ‘ಹೋಮರ್’ ಎನ್ನುವುದು ನಿಜವಾಗಿ ಕವಿಯೊಬ್ಬನ ಹೆಸರೇ ಅಲ್ಲದಿರಬಹುದು.”[3] ಆದರೆ ಈ “ಕಾವ್ಯಗಳ ಮುಖಾಂತರವಾಗಿ ಒಂದು ಸಮಗ್ರ ದೇಶವು ಅಥವಾ ಕಾಲವು ತನ್ನ ಹೃದಯವನ್ನೂ ಅಭಿಜ್ಞತೆಯನ್ನೂ ವ್ಯಕ್ತಪಡಿಸಿ ಅದನ್ನು ಮಾನವ ಶಾಶ್ವತ ಸಾಮಗ್ರಿಯನ್ನಾಗಿ ಮಾಡಿದೆ.”[4] ಎಂಬುದು ನಿಜ.

ಈ ವಿಚಾರದಿಂದ ಒಂದು ಅಂಶ ಸ್ಫುಟವಾಗುತ್ತದೆ : ನಮಗೆ ತೋರುವಂತೆ ಮಹಾಕಾವ್ಯಗಳು ಎರಡು ತೆರನಾಗಿವೆ. ಒಂದು, ಖಚಿತವಾಗಿ ಒಬ್ಬ ಕವಿಯಿಂದ ರಚಿತವಾದ ಮಹಾಕಾವ್ಯಗಳು. ಇವುಗಳನ್ನು ಇತ್ತೀಚಿನ ಮಹಾಕಾವ್ಯಗಳು ಎನ್ನಬಹುದು; ಮತ್ತೊಂದು, ಇವುಗಳಿಗೆ ಬಹುಮಟ್ಟಿಗೆ ಮಾದರಿಗಳಾಗಿ, ಪ್ರೇರಣೆಗಳೂ ಆಗಿ ಇರುವ, ಇವುಗಳಿಗಿಂತ ಎಷ್ಟೋ ಪಾಲು ದೊಡ್ಡವುಗಳಾದ, ಮೊದಲ ಮಹಾಕಾವ್ಯಗಳು; ಇವುಗಳನ್ನು ನೋಡಿದರೆ, ಒಬ್ಬ ಕವಿಯ ರಚನೆಯಂತೆ ತೋರದೆ, ಬಹುಕಾಲದ ಅನೇಕ ಕವಿಗಳು ಸೇರಿ, ಕಾಲದಿಂದ ಕಾಲಕ್ಕೆ ಬೆಳೆಯಿಸಿದ, ಮತ್ತು ಕೂಡಿಸಿ ಜೋಡಿಸಿದ ರಚನೆಗಳಂತೆ ತೋರುತ್ತವೆ. ಇವುಗಳನ್ನು ಕುರಿತು ಮಾತನಾಡುವಾಗ, ಇವು ಒಬ್ಬ ಕವಿಯ ರಚನೆಗಳೆನ್ನುವುದಕ್ಕಿಂತ ಒಂದು ಜನಾಂಗದ, ಸಮಗ್ರದೇಶದ ರಚನೆಗಳೆಂದು ಕರೆಯುವುದು ವಿಮರ್ಶಕರಲ್ಲಿ ರೂಢಿಯಾಗಿದೆ. ಇವುಗಳು ಪ್ರಾಚೀನ ಮಹಾಕಾವ್ಯಗಳು. ಈ ಪ್ರಾಚೀನ ಮಹಾಕಾವ್ಯಗಳನ್ನು ಕುರಿತು ಅವುಗಳ ಸ್ವರೂಪವನ್ನು ಕುರಿತು ಚರ್ಚಿಸಿದ ಆಧುನಿಕ ವಿದ್ವಾಂಸರು, ಈ ಮಹಾಕಾವ್ಯಗಳು ಹುಟ್ಟಿದ್ದು ಹೇಗೆ, ಬೆಳೆದದ್ದು ಹೇಗೆ, ಇವುಗಳನ್ನು ಬರೆದವರು ಒಬ್ಬನೋ ಹಲವರೋ; ಈ ದಿನ ನಮಗೆ ಸಮಗ್ರವಾಗಿ ಕಾಣಿಸುವ ಈ ಮಹಾಕಾವ್ಯಗಳ ವಿಕಸಿತ ಸಾಮಗ್ರಿಯನ್ನು ಕೊನೆಗೆ ಒಂದೆಡೆ ಕಟ್ಟಿ ರೂಪ ಕೊಟ್ಟವರು ಯಾರು ಇತ್ಯಾದಿ ಸಂಶೋಧನೆಗಳನ್ನು ನಡೆಯಿಸಿದ್ದಾರೆ. ಈ ಸಂಶೋಧನೆಯಿಂದಾಗಿ ಮಹಾಕಾವ್ಯದ ಉಗಮ ಮತ್ತು ವಿಕಾಸವನ್ನು ಕುರಿತು ಅನೇಕ ಸ್ವಾರಸ್ಯವಾದ ಸಂಗತಿಗಳೂ, ಚರ್ಚೆಗಳು ದೊರೆಯುತ್ತವೆ.

ಭಾರತೀಯ ವಿದ್ವಾಂಸರು ಮಹಾಕಾವ್ಯದ ಮೂಲವನ್ನು ವೇದಗಳಲ್ಲಿ ಹುಡುಕುತ್ತಾರೆ. ಋಗ್ವೇದದಲ್ಲಿ ಬರುವ ‘ಸಂವಾದ’ಗಳು ಮಹಾಕಾವ್ಯದ ಮೂಲ ಎಂದು ಕೆಲವರ ವಾದ. ಆದರೆ ಮ್ಯಾಕ್ಸ್‌ಮುಲ್ಲರ್ ಅವರು ಈ ವಾದವನ್ನು ಅಲ್ಲಗಳೆದು, ಈ ಸಂವಾದ ಭಾಗಗಳು ನಾಟಕಕ್ಕೆ ಮೂಲ, ಮಹಾಕಾವ್ಯಕ್ಕೆ ಅಲ್ಲ ಅನ್ನುತ್ತಾರೆ. ವಿಂಟರ್‌ನಿಟ್ಸ್ ಅವರು ಹಳೆಯ ಲಾವಣಿಗಳು (Ancient Ballads) ಮಹಾಕಾವ್ಯದ ಮೂಲವಿರಬಹುದು ಎಂದು ಹೇಳುತ್ತಾರೆ. ಈ ವಾದಕ್ಕೆ ಬಹುಜನ ವಿದ್ವಾಂಸರ ಬೆಂಬಲವಿದೆ.[5]

“ಬ್ರಾಹ್ಮಣ ಗ್ರಂಥಗಳಲ್ಲಿರುವ ಗಾಥಾನಾರಾಶಂಸಿಗಳ (ನರರನ್ನು ಪ್ರಶಂಸೆ ಮಾಡುವ ಹಾಡುಗಳು,) ಆಖ್ಯಾನಗಳ (ನಿರೂಪಣೆಗಳು), ಇತಿಹಾಸಗಳ, ಪುರಾಣಗಳ, (ಪ್ರಾಚೀನವಾದ ಕಥೆಗಳು) ಮತ್ತು ಈ ಬಗೆಯ ಇತರ ವಿಚಾರಗಳ ಪಠಣ ಯಾಜ್ಞಿಕವಾದ ಮತ್ತು ಸಾಮಾಜಿಕವಾದ ಕ್ರಿಯೆಗಳ ಸಂದರ್ಭದಲ್ಲಿ ಆಚರಿಸುವ ಧಾರ್ಮಿಕ ಅನುಷ್ಠಾನಗಳ ಒಂದು ಭಾಗವಾಗಿತ್ತು. ಭಾಷೆ ಮತ್ತು ಛಂದಸ್ಸಿನಲ್ಲಿ ಇತಿಹಾಸಗಳ ಹತ್ತಿರ ಹತ್ತಿರ ಬರುತ್ತಿದ್ದ ಇವು ಇತಿಹಾಸಕ್ಕೆ ನಿಜವಾಗಿಯೂ ಸದೃಶವಾಗಿವೆ. ಹಾಗೂ ಇತಿಹಾಸ ವಾಙ್ಮಯದ ಬೆಳವಣಿಗೆಯಲ್ಲಿ ಇವು ಅತಿ ಮುಖ್ಯವಾದ  ಕೊಂಡಿಗಳಾಗಿವೆ. ಮೊದಮೊದಲು ಬಹಳ ಮಿತವಾದ ವಿಸ್ತಾರ ಮತ್ತು ಸರಳವಾದ ಕಥಾವಸ್ತುವನ್ನುಳ್ಳ ಗಾಥಾನಾರಾಶಂಸಿಗಳು ಕ್ರಮಕ್ರಮವಾಗಿ ದೀರ್ಘವಾದ ಜನಪದಗೀತೆಗಳಾಗಿಯೂ, ಜಟಿಲವಾದ ಕಥಾವಸ್ತುವನ್ನುಳ್ಳ ಗೀತಾವಳಿಗಳಾಗಿಯೂ ರೂಪುಗೊಂಡವು”[6]. ಮೂಲತಃ ಪುರೋಹಿತ ವರ್ಗದಲ್ಲಿ ಹುಟ್ಟಿದ ಈ ಇತಿಹಾಸ ಕಥಾವಳಿಗಳು ಜನಸಾಮಾನ್ಯರನ್ನು ‘ಸೂತ’ರ ಮೂಲಕ ಸೇರಿದವು. ಈ ಸೂತರು ಪುರಾಣಗಳನ್ನು ಓದುತ್ತಿದ್ದ ಬ್ರಾಹ್ಮಣ ಋಷಿಗಳೆಂದು ಕೆಲವರು ಹೇಳಿದರೆ, ಅವರು ಕ್ಷತ್ರಿಯ ತಂದೆ ಮತ್ತು ಬ್ರಾಹ್ಮಣ ತಾಯಿಯಿಂದ ಹುಟ್ಟಿದ ಪ್ರತಿಲೋಮ ವಿವಾಹದ ಸಂತಾನವೆಂದು ಕೆಲವರು ಹೇಳುತ್ತಾರೆ. ಈ ಸೂತರು ಸಾರಥಿಗಳಾಗಿದ್ದರೆಂದೂ, ಯುದ್ಧಗಳಲ್ಲಿ ಸಾಕ್ಷಾತ್ತಾಗಿ ಭಾಗವಹಿಸಿದ್ದರಿಂದ, ಇವರು ಅನಂತರ ತಾವು ಕಂಡ ವೀರರನ್ನು, ಅವರು ಯುದ್ಧದಲ್ಲಿ ಭಾಗವಹಿಸಿದ ಸಂಗತಿಗಳನ್ನೂ ಕುರಿತು ಜಾನಪದ ಗೀತಗಳನ್ನಾಗಿ ಕಟ್ಟಿ ಹಾಡುತ್ತಿದ್ದರೆಂದೂ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಹೀಗೆ ‘ಸೂತ’ರಿಂದ ನಿರೂಪಿತವಾದ ‘ಇತಿಹಾಸ’ಗಳನ್ನು ಸಾಮಾನ್ಯ ಜನರಲ್ಲಿ ಪ್ರಚಾರಮಾಡುವ, ಕಥಿಸುವ ಕಾರ್ಯದಲ್ಲಿ ಪ್ರವೃತ್ತರಾದ ಸಂಚಾರೀ ಗಾಯಕರಿಗೆ ‘ಕುಶೀಲವ’ರೆಂದು ಹೆಸರು. ಹೀಗೆ ಜನರಲ್ಲಿ ಕಾಲದಿಂದ ಕಾಲಕ್ಕೆ ಪ್ರಚಲಿತವಾದ ಅನೇಕ ‘ಗೀತಾವಳಿ’ಗಳು ಸ್ವತಂತ್ರವಾದ ಉಪಾಖ್ಯಾನಗಳು ಮುಂದೆ ರಾಮಾಯಣ ಮಹಾಭಾರತಗಳ ಒಳಕ್ಕೆ ಸೇರಿಕೊಂಡವು. ಈ ಎಲ್ಲ ಮಾತಿನ ಅರ್ಥ ‘ಮಹಾಕಾವ್ಯ’ಗಳ ಮೂಲ ಸಾಮಗ್ರಿ ಅತ್ಯಂತ ಪ್ರಾಚೀನ ಕಾಲಗಳಿಂದ, ಅವರಿವರಿಂದ ರಚಿತವಾದ ‘ಇತಿಹಾಸ’ ಮತ್ತು ಜಾನಪದ ಕಥೆಗಳ ಒಂದು ಪರಂಪರೆಯಿಂದ ಕೂಡಿದ್ದಾಗಿದೆ ಎನ್ನುವುದು.

ನಾಗರಿಕತೆಯ ವಿಕಾಸದ ಒಂದು ಹಂತದಲ್ಲಿ, ಸಮಾಜ ವ್ಯವಸ್ಥೆಗೊಂಡು ಮೌಲ್ಯಗಳು ರೂಪುಗೊಂಡ ಪರಿಸರದಲ್ಲಿ ಯಾವ ವ್ಯಕ್ತಿ ತನ್ನ ಕಾಲದ ಮೌಲ್ಯಗಳ ಪ್ರತಿನಿಧಿಯೆಂಬಂತೆ ಎದ್ದು ನಿಲ್ಲುತ್ತಾನೆಯೋ ಮತ್ತು ವಿರುದ್ಧ ಶಕ್ತಿಗಳೊಡನೆ ಹೋರಾಡಿ, ತನ್ನ ಸಮಾಜದ ಆತ್ಮಗೌರವ – ಪ್ರತಿಷ್ಠೆಗಳ ಪ್ರತಿನಿಧಿಯಂತೆ ತೋರುತ್ತಾನೋ ಅವನು ಆ ಸಮಾಜದ ನಾಯಕನಾಗುತ್ತಾನೆ; ವೀರನಾಗುತ್ತಾನೆ. ಧೈರ್ಯಶಾಲಿಯೂ, ಬುದ್ಧಿವಂತನೂ, ನಿಸ್ವಾರ್ಥನೂ ಆದ ಇಂತಹ ವ್ಯಕ್ತಿ ಮಾನವ ಸಮಾಜದ ಪ್ರತಿನಿಧಿಯಾಗಿ, ಮಾರ್ಗದರ್ಶಿಯಾಗಿ, ಸಂರಕ್ಷಕ ಶಕ್ತಿಯಾಗಿ, ಆರಾಧ್ಯ ವ್ಯಕ್ತಿಯಾಗಿ ಗೋಚರಿಸುತ್ತಾನೆ. ಇಂತಹ ಪರಿಸರದಲ್ಲಿ ಹುಟ್ಟಿಕೊಳ್ಳುತ್ತಾರೆ, ರಾಮ, ಅರ್ಜುನ, ಯುಧಿಷ್ಠಿರ, ಹೆಕ್ಟರ್, ಒಡಿಸಿಯಸ್, ಅಖಿಲೀಸ್ ಇಂಥವರು. ಮುಂದಿನವರ ಪಾಲಿಗೆ ಇವರ ನಡವಳಿಕೆಗಳು ಆದರ್ಶವಾಗುತ್ತವೆ. ಇಂತಹ ವೀರರನ್ನು ಕುರಿತು, ಅವರ ಬದುಕು ಹಾಗೂ ಸಾಹಸಗಳನ್ನು ಕುರಿತು ಜಾನಪದ ಗೇಯ ರೂಪದ ಲಾವಣಿಗಳು ಅಥವಾ ವೀರಗಾಥೆಗಳು ಹುಟ್ಟಿಕೊಳ್ಳುತ್ತವೆ. ಈ ವೀರಗಾಥೆಗಳು ಬಾಯಿಂದ ಬಾಯಿಗೆ ಸಾಗುತ್ತಾ, ಚಾರಣರಿಂದ ಅಥವಾ ಸಂಚಾರೀಗಾಯಕರಿಂದ ಅಥವಾ ಕುಶೀಲವರಿಂದ ದೇಶದ ವಿವಿಧ ಭಾಗಗಳಲ್ಲಿ ಪ್ರಸಾರವಾಗುತ್ತವೆ. ಈ ಸಂಚಾರೀ ಗಾಯಕರು ತಾವು ಕೇಳಿದ ಕಥೆಗೆ ಬಣ್ಣಕಟ್ಟಿ, ಅದಕ್ಕೆ ತಮ್ಮದೇ ಆದ ಇನ್ನೂ ಕೆಲವು ಸಂಗತಿಗಳನ್ನು ಸೇರಿಸುತ್ತಾ, ಕಥೆಯ ವೈವಿಧ್ಯತೆಗಳಿಗೂ, ಭಿನ್ನತೆಗಳಿಗೂ ಕಾರಣರಾಗುತ್ತಾರೆ. ಹೀಗಾಗಿ ಮೊದಲು ಬಿಂದು ರೂಪವಾದ ಒಂದು ವಾಸ್ತವ ಕಥಾಸಂಗತಿ, ಬೇರೆ ಬೇರೆಯ ರೂಪಗಳನ್ನು ತಾಳಿದ ಕಥಾಪುಂಜಗಳಾಗಿ ಮುಂದುವರಿಯುತ್ತದೆ. ಇಂತಹ ಕಥಾಪುಂಜಗಳನ್ನೆ ‘ವೀರಗಾಥಾ ಚಕ್ರ’ (Ballad cycles) ಎನ್ನುತ್ತಾರೆ. ಹೀಗೆ ಗ್ರಾಮೀಣ ಕವಿಗಳಿಂದ ಹುಟ್ಟಿಕೊಂಡು ತೋಂಡೀಸಂಪ್ರದಾಯ (Oral tradition) ದಲ್ಲಿ ಬಂದ ಈ ಗಾಥೆಗಳು ವಿವಿಧ ಕಥಾಚಕ್ರಗಳಾಗಿ ಚಲಿಸುತ್ತಾ ಚಲಿಸುತ್ತಾ ಕಡೆಗೆ ಒಬ್ಬ ಶಕ್ತನಾದ ಕವಿಯ ಆಯಸ್ಕಾಂತ ಪ್ರತಿಭೆಯೊಳಗೆ ಕೂಡಿಕೊಂಡು ಒಂದು ಮಹಾಕಾವ್ಯವಾಗಿ ರೂಪುಗೊಳ್ಳುತ್ತದೆ. ‘ಇಲಿಯಡ್’ ‘ಒಡೆಸ್ಸಿ’ಗಳು ರೂಪುಗೊಂಡದ್ದು ಹೀಗೆ; ‘ರಾಮಾಯಣ’ ‘ಮಹಾಭಾರತ’ಗಳು ರೂಪುಗೊಂಡದ್ದು ಹೀಗೆ; ಇಂಗ್ಲೆಂಡಿನ ‘ಬೀವುಲ್ಭ್’ ರೂಪುಗೊಂಡದ್ದು ಹೀಗೆ; ಫಿನ್ಲೆಂಡಿನ ‘ಕಾಲೇವಾಲ’ ರೂಪುಗೊಂಡದ್ದು ಹೀಗೆ.

‘ರಾಮಾಯಣ ‘ಮಹಾಭಾರತ’ ಹಾಗೂ ಹೋಮರನ ಕೃತಿಗಳನ್ನು ಅಧ್ಯಯನ ಮಾಡಿದ ಆಧುನಿಕ ವಿದ್ವಾಂಸರು ಮಹಾಕಾವ್ಯದ ಉಗಮ ಮತ್ತು ವಿಕಾಸವನ್ನು ಕುರಿತು ಮಂಡಿಸಿದ ಸಿದ್ಧಾಂತ ಇದು : ಈ ಎಲ್ಲ ಕೃತಿಗಳೂ ಮೂಲತಃ ಜಾನಪದ ಪರಂಪರೆಯಲ್ಲಿ ತೇಲಿಕೊಂಡು ಬಂದವುಗಳು. ಈಗ ಇವುಗಳ ಗಾತ್ರ ದಂಗುಬಡಿಸುವುದೇನೋ ನಿಜ : ‘ರಾಮಾಯಣ’ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಷ್ಟು ದೀರ್ಘವಾದದ್ದು; ‘ಮಹಾಭಾರತ’ ಎಂಬತ್ತೆರಡು ಸಾವಿರ ಶ್ಲೋಕಗಳಷ್ಟು ಪ್ರಮಾಣ ಉಳ್ಳದ್ದು; ಹೋಮರನ ಇಲಿಯಡ್ ಹದಿನೈದು ಸಾವಿರ ಪಂಕ್ತಿಗಳಷ್ಟು ವಿಸ್ತಾರವಾಗಿದೆ; ಇಂಗ್ಲೆಂಡಿನ ಮಹಾಕಾವ್ಯವಾದ ‘ಬೀವುಲ್ಫ್’ ಮೂರು ಸಾವಿರದ ಒಂದು ನೂರಾ ಎಂಬತ್ತೆರಡು ಪಂಕ್ತಿಗಳಷ್ಟು ದೀರ್ಘವಾಗಿದೆ. ವಾಸ್ತವವಾಗಿ ಈ ಕಾವ್ಯಗಳಿಗೆ ಮೂಲವಾದ ಐತಿಹಾಸಿಕ ಸಂಗತಿಯೊಂದು ಇದ್ದಿರಲೇ ಬೇಕು; ಆದರೆ ಆ ಸಂಗತಿ ನಾವು ಈ ದಿನ ಈ ಬೃಹದ್ಗಾತ್ರದ ಮಹಾಕಾವ್ಯಗಳಲ್ಲಿ ಕಾಣುವಷ್ಟು ಇರಲಿಲ್ಲವೆಂಬುದು ನಿರ್ವಿವಾದ. ಪರಂಪರೆಯಲ್ಲಿ ಮೂಲದ ಕಥೆ, ಅನೇಕ ಸೇರ್ಪಡೆಗಳಿಗೆ ಹಾಗೂ ಪ್ರಕ್ಷೇಪಗಳಿಗೆ ಒಳಗಾಗಿದೆ. ಮಹಾಭಾರತ ಮೊದಲು ಈಗಿರುವ ಗಾತ್ರದ ನಾಲ್ಕನೆಯ ಒಂದು ಭಾಗದಷ್ಟಿತ್ತೆಂದು ವಿದ್ವಾಂಸರ ಮತ. “ರಾಮಾಯಣದ ಕಥೆಯೆಲ್ಲವೂ ಅಖಂಡವಾಗಿ ಒಂದೇ ಭಾಗವಾಗಿದ್ದರೂ, ಅನೇಕ ವಿದ್ವಾಂಸರು ಕಥಾನಾಯಕನ ವನವಾಸದಲ್ಲಿ ಪರಿಣಮಿಸಿದ ಅರಮನೆಯ ಒಳಸಂಚು, ಸೀತಾಪಹರಣ, ರಾವಣನನ್ನು ಕುರಿತ ಕಥೆಗಳು, ಹನುಮಂತನನ್ನು ಕುರಿತ ಕಥೆಗಳು ಇವೇ ಮೊದಲಾದ ಎರಡು, ಮೂರು, ಅಥವಾ ನಾಲ್ಕು ಬೇರೆ ಬೇರೆ ಭಾಗಗಳ ಸಮ್ಮಿಶ್ರಣ ರಾಮಾಯಣವಾಗಿದೆಯೆಂದು ಅಭಿಪ್ರಾಯ ಪಡುತ್ತಾರೆ. ಈ ಕಥೆಯಲ್ಲಿ ಐತಿಹಾಸಿಕ ಆಧಾರವನ್ನು ಹೊಂದಿರುವುದೆಂದರೆ ರಾಮನ ವನವಾಸವೊಂದೇ.”[7] “ಮಹಾಭಾರತದ ಮುಖ್ಯಕಥೆ, ಪ್ರಾಚೀನ ಕಾಲದಲ್ಲಿ ಹಸ್ತಿನಾಪುರದ ಸಿಂಹಾಸನಕ್ಕಾಗಿ ಧೃತರಾಷ್ಟ್ರ ಮತ್ತು ಪಾಂಡುವಿನ ಮಕ್ಕಳಲ್ಲಿ ನಡೆದ ದೊಡ್ಡಯುದ್ಧ ಎಂಬುದು ನಿರ್ವಿವಾದವಾಗಿದೆ.”[8] ಪಾಂಡವರು ಕೌರವರನ್ನು ಗೆದ್ದ ಕಥೆಯಾದದ್ದರಿಂದ ಇದಕ್ಕೆ ಮೊದಲಿದ್ದ ಹೆಸರು ‘ಜಯ’ ಎಂಬುದು; ಅನಂತರ ಸೇರಿಕೊಂಡದ್ದು ಭರತವಂಶದವರ ಕಥೆ. ಆದುದರಿಂದ ಅದಕ್ಕೆ ‘ಭಾರತ’ ಎಂದು ಹೆಸರಾಯಿತು. ಮಹಾಭಾರತ,  ‘ಜಯ’ ಮತ್ತು ‘ಭಾರತ’ ಎಂಬ ಎರಡು ಹಂತಗಳನ್ನು ದಾಟಿ ಇಂದಿನ ಈ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹೋಮರನ ಇಲಿಯಡ್ ಕಾವ್ಯಕ್ಕೆ, ಗ್ರೀಕರಿಗೂ, ಏಷ್ಯಾ, ಮೈನರ್‌ನ ಜನರಿಗೂ ನಡೆದ ಒಂದು ಘರ್ಷಣೆಯ ಕಥೆಯೇ ಮೂಲ ಎನ್ನುತ್ತಾರೆ. ಈ ಮಹಾಕಾವ್ಯಗಳು ಮೊದಮೊದಲು ಜಾನಪದ ಗೇಯ ರೂಪಗಳಾಗಿದ್ದು, ಕಿರುದೊರೆಯೊಂದು ಹರಿಯುತ್ತಾ ಹರಿಯುತ್ತಾ, ಅನೇಕ ಬೇರೆ ಬೇರೆಯ ನೀರುಗಳನ್ನು ದಾರಿಯುದ್ದಕ್ಕೂ ಕೂಡಿಸಿಕೊಂಡು ಒಂದು ಮಹಾನದಿಯಾಗಿ ರೂಪುಗೊಳ್ಳುವಂತೆ, ಬೆಳೆದವುಗಳು. ಆದರೆ ಒಂದು ಮಹಾ ಪ್ರವಾಹದಲ್ಲಿ ಎಲ್ಲೆಲ್ಲಿನ ನೀರು ಯಾವ ಯಾವ ಕಾಲಗಳಲ್ಲಿ ಬಂದು ಸೇರಿಕೊಂಡಿತೆಂಬುದನ್ನು ತೋರಿಸುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟ ಒಂದು ಮಹಾಕಾವ್ಯದಲ್ಲಿ ಯಾವ ಯಾವ ಭಾಗಗಳು, ಎಂದೆಂದು ಬಂದು ಸೇರಿಕೊಂಡುವೆಂಬುದನ್ನು ಪತ್ತೆ ಹಚ್ಚುವುದು. ಆದರೂ ಈಚೆಗೆ ಮಹಾಕಾವ್ಯಗಳನ್ನು ಅಧಿಕೃತವಾಗಿ ಸಂಪಾದಿಸಿದ ವಿದ್ವಾಂಸರು, ಸಾಧ್ಯವಾದ ಮಟ್ಟಿಗೆ ಈ ಕಾವ್ಯಗಳ ಮೂಲಪಾಠಗಳನ್ನೂ, ಪ್ರಕ್ಷೇಪಗಳನ್ನೂ ಬಿಡಿಸಿ ತೋರಿಸಲು ಪ್ರಯತ್ನಪಟ್ಟಿದ್ದಾರೆ. ರಾಮಾಯಣ ಕತೆ ಮೂಲತಃ ಜಾನಪದಗೀತೆಯಾಗಿತ್ತೆಂದೂ, ಸಂಚಾರೀ ಗಾಯಕರಿಂದ ತುಂಬಿದ ಸಭೆಗಳಲ್ಲಿ ಹಾಡಲ್ಪಡುತ್ತಿತ್ತೆಂದೂ, ಬಾಯಿಂದ ಬಾಯಿಗೆ ಬರುವಾಗ ಅನಿರ್ದಿಷ್ಟ ರೂಪವನ್ನು ತಾಳಿದ ಇದು ಅನೇಕ ಪ್ರಕ್ಷೇಪಗಳಿಂದ ಇಡಿಕಿರಿಯಿತೆಂದೂ, ವಾಲ್ಮೀಕಿಯು ತನ್ನ ಕಾಲದಲ್ಲಿ ಪ್ರಚಲಿತವಾದ ರಾಮಕಥಾಪುಂಜವೊಂದರ ಆಧಾರದ ಮೇಲೆ ‘ರಾಮಾಯಣ’ವೆಂಬ ಇಪ್ಪತ್ತುನಾಲ್ಕು ಸಾವಿರ ಶ್ಲೋಕ ಪ್ರಮಾಣದ ಕೃತಿಯನ್ನಾಗಿ ರಚಿಸಿದನೆಂದೂ ವಿದ್ವಾಂಸರು ಹೇಳುತ್ತಾರೆ. ಹೀಗೆ ಮಹಾಕಾವ್ಯವಾಗಿ ಇದು ರೂಪು ತಾಳಿದ್ದು ಸುಮಾರು ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಎಂದು ಊಹಿಸುತ್ತಾರೆ. ಹಾಗೆಯೇ ಮಹಾಭಾರತವೂ ಇದೇ ರೀತಿಯಲ್ಲಿ “ಅನೂಚಾನವಾಗಿ ಪ್ರಚಾರದಲ್ಲಿದ್ದ ವೀರಕಥೆಯೊಂದಕ್ಕೆ ಸೂತವಂಶೀಕರು ನಿರ್ದಿಷ್ಟ ರೂಪ ಕೊಟ್ಟರೆಂದೂ, ಕಾಲಕ್ರಮದಲ್ಲಿ ಪೌರಾಣಿಕರು ನೀತಿಬೋಧಕ ಪ್ರಕರಣಗಳನ್ನು ಸೇರಿಸಿದರೆಂದೂ, ಕ್ರಿಸ್ತಪೂರ್ವ ಮೂರನೆಯ ಶತಮಾನದ ವೇಳೆಗೆ ಅದರ ಪ್ರಕೃತಾಕಾರ ಬಂದಿತೆಂದೂ ಹೆರ‍್ಮನ್‌ಯಾಕೊಬಿ ಪಂಡಿತರು ಕಳೆದ ಶತಮಾನದ ಕೊನೆಯ ದಶಕದಲ್ಲಿ ಸಿದ್ಧಾಂತಿಸಿದರು… ಯಾಕೊಬಿಯವರ ಈ ಸಿದ್ಧಾಂತ ಬಹುಜನ ಸಮ್ಮತವಾಗಿದೆಯೆನ್ನಬಹುದು”[9]. ಹೋಮರನ ಇಲಿಯಡ್ ಮತ್ತು ಒಡೆಸ್ಸಿಗಳೂ “ದೇಶದಲ್ಲಿ ಪ್ರಚಲಿತವಾದ ಕಥೆಗಳನ್ನು ಹಲವರು ಲಾವಣಿಕಾರರು ಬಳಸಿಕೊಂಡು ಸೃಷ್ಟಿಸಿದ ಕೃತಿಗಳು, ಪೀಳಿಗೆಯಿಂದ ಪೀಳಿಗೆಗೆ ದಾಟಿ ಬಂದು ಹಾಗೆಯೆ ಮಾರ್ಪಾಡಾಗುತ್ತ ಕ್ರಿಸ್ತಪೂರ್ವ ಆರನೆಯ ಶತಮಾನದಲ್ಲಿ ಈಗಿನ ರೂಪವನ್ನು ಪಡೆಯಿತೆಂಬುದು”[10] ಹಲವರು ವಿದ್ವಾಂಸರ ಅಭಿಪ್ರಾಯ. ಹೀಗೆ ಆನುಕ್ರಮಿಕ ವಿಕಾಸವನ್ನು ಇವು ಪಡೆದವೆಂಬುದಕ್ಕೆ ಈ ಕೃತಿಗಳ ಪಾಠ ಭೇದಗಳೂ ಮತ್ತು ಕಥಾಶರೀರದಲ್ಲಿನ ಅನೇಕ ಅಸಾಂಗತ್ಯಗಳೂ ಸಾಕ್ಷಿಯಾಗಿವೆ. ನಿದರ್ಶನಕ್ಕೆ ರಾಮಾಯಣದ ‘ಉಪೋದ್ಘಾತ’ ಭಾಗವಾಗಲಿ, ಆಂಜನೇಯನು ಲಂಕೆಯನ್ನು ಬಾಲದ ಬೆಂಕಿಯಿಂದ ಸುಟ್ಟನೆಂಬುದಾಗಲಿ, ಉತ್ತರಕಾಂಡದ ಕಥೆಯಾಗಲಿ ನಿಸ್ಸಂಶಯವಾಗಿಯೂ ಪ್ರಕ್ಷೇಪಕಾರರ ಕೈವಾಡಗಳು; ಮಹಾಭಾರತದಲ್ಲಂತೂ ಪ್ರಕ್ಷೇಪಗಳ ಒಂದು ಪರಂಪರೆಯೆ ಇದೆ. ಈ ಪ್ರಕ್ಷೇಪಗಳು, ಈ ಮಹಾಕೃತಿಗಳು ಬಾಯಿಂದ ಬಾಯಿಗೆ ಬರುವಾಗಿನ ಕಾಲದಲ್ಲಿ ಆದದ್ದು ಮಾತ್ರವಲ್ಲ, ಲಿಖಿತ ರೂಪವನ್ನು ಅವು ತಾಳಿದ ಮೇಲೂ ಆಗಿವೆಯೆನ್ನಬಹುದು. ಆದರೆ ಲಿಖಿತ ಪೂರ್ವದಲ್ಲಿ ಆದಷ್ಟು ಪ್ರಕ್ಷೇಪಗಳು, ಬಹುಶಃ ಲಿಖಿತ ರೂಪವನ್ನು ತಾಳಿದ ನಂತರ ಆಗಲಾರವು. ಹಾಗೆ ಒಂದು ವೇಳೆ ಆದರೂ, ಅನಂತರದ ಪ್ರಕ್ಷೇಪಗಳನ್ನು ಬೇರೆ ಬೇರೆ ಪ್ರತಿಗಳ ಸಹಾಯದಿಂದ ಪತ್ತೆ ಮಾಡುವುದು ಸುಲಭ. ಮೂಲತಃ ಇಪ್ಪತ್ತು ನಾಲ್ಕು ಸಾವಿರ ಶ್ಲೋಕ ಪ್ರಮಾಣದ ಮಹಾಭಾರತವು, ಸುಮಾರು ಒಂದು ಲಕ್ಷ ಶ್ಲೋಕಗಳಷ್ಟು ಗಾತ್ರವಾಗಿ ಬೆಳೆದಿರುವುದಕ್ಕೆ ಈ ಪ್ರಕ್ಷೇಪಗಳು ಅಥವಾ ವಿವಿಧ ಲಿಪಿಕಾರರ ಸೇರ್ಪಡೆಗಳು ಕಾರಣ. “ಈ ದೃಷ್ಟಿಯಿಂದ ಗ್ರೀಕ್ ಮಹಾಕಾವ್ಯಗಳು ಭಾರತೀಯ ಮಹಾಕಾವ್ಯಗಳಿಗಿಂತ ಅದೃಷ್ಟ ಶಾಲಿ ಕೃತಿಗಳು, ನಮ್ಮಲ್ಲಿನಷ್ಟು ಪ್ರಕ್ಷೇಪಗಳಾಗಲು ಅವಕಾಶ ಕೊಡದಂತೆ, ಕ್ರಿಸ್ತಪೂರ್ವ ಒಂದನೆಯ ಶತಮಾನದ ವೇಳೆಗೇ ನಿರ್ದಿಷ್ಟ ಲಿಖಿತರೂಪವನ್ನು ಅವು ತಾಳಿದವು.[11]

ಮಹಾಕಾವ್ಯಗಳ ಆನುಕ್ರಮಿಕ ವಿಕಾಸವನ್ನೂ, ಅವು ಬೆಳೆದುನಿಂತ ಬೃಹದ್ಗಾತ್ರವನ್ನೂ ನೋಡಿದ ಯಾರಿಗಾದರೂ “ಮೂಡುವ ಮೊದಲ ಅಭಿಪ್ರಾಯ ಅದು ಒಬ್ಬ ಬರೆದ ಬರಹ ಅಲ್ಲ; ಅಷ್ಟೇ ಅಲ್ಲ ಒಂದು ತಲೆಮಾರಿನ ಬರಹಗಾರರದೂ ಅಲ್ಲ ಎಂಬುದು; ಬೇರೆ ಬೇರೆ ಪ್ರಮಾಣದ ಶಕ್ತಿಯುಳ್ಳ ಅನೇಕ ಬರಹಗಾರರ ಬರವಣಿಗೆಗಳ ಕಲಬೆರಕೆ ಅದು ಎಂಬುದೂ ಗೊತ್ತಾಗುತ್ತದೆ.”[12] ರವೀಂದ್ರರು ಹೇಳುವಂತೆ ಇವು ಒಬ್ಬ ಕವಿಯ ಮಾತುಗಳು ಎಂದು ತೋರುವುದಿಲ್ಲ. “ಒಂದು ದೊಡ್ಡ ಸಂಪ್ರದಾಯದ ಮಾತುಗಳು”[13] ಅನ್ನಿಸುತ್ತವೆ. ಹೀಗನ್ನಿಸಿದಾಗ ಇವುಗಳನ್ನು ನಿಜವಾಗಿಯೂ ಕೂತು ಬರೆದನೆಂದು ಒಪ್ಪಿಕೊಳ್ಳಬೇಕಾದ ವ್ಯಕ್ತಿಯನ್ನು ಕುರಿತು ಎರಡು ರೀತಿಯಲ್ಲಿ ಅಭಿಪ್ರಾಯಗಳು ಸಾಮಾನ್ಯವಾಗಿ ರೂಪುಗೊಂಡಿವೆ : ಒಂದು, “ನಿಜವಾಗಿಯೂ ವ್ಯಾಸ ಅಥವಾ ವಾಲ್ಮೀಕಿ ಎಂಬುದು ಯಾರ ಹೆಸರೂ ಆಗಿರಲಿಲ್ಲ;”[14] “ಹೋಮರ್ ಎನ್ನುವ ಕವಿ ಇದ್ದನೆ ಎನ್ನುವುದೆ ವಾದಗ್ರಸ್ತವಾದ ವಿಷಯ.”[15] ಇನ್ನೊಂದು, ಇವರೆಲ್ಲರೂ ಮಹಾಕವಿಗಳು, ಮಹಾ ಋಷಿಗಳು-ಬ್ರಹ್ಮನೇ ಸಾಕ್ಷಾತ್ತಾಗಿ ಬಂದು ಋಷಿಗಳಾದ ವಾಲ್ಮೀಕಿಗೆ ರಾಮಾಯಣವನ್ನು ಬರೆಯಬೇಕೆಂದು ಕೇಳಿಕೊಂಡನು; ಮಹರ್ಷಿ ವ್ಯಾಸರು ತಮ್ಮ ದಿವ್ಯಜ್ಞಾನದಿಂದ, ಮಹಾಭಾರತವನ್ನು ಹೇಳುತ್ತ ಹೋದರು; ವಿಘ್ನೇಶ್ವರನಾದ ಗಣಪತಿಯೇ ಲಿಪಿಕಾರನಾಗಿ ಅದನ್ನು ಬರೆದುಕೊಂಡನು. ಮಹಾಕಾವ್ಯವನ್ನು ಬರೆದವರ ವಿಚಾರದಲ್ಲಿನ ಸಾಮಾನ್ಯ ತಿಳಿವಳಿಕೆಗಳು, ಒಂದು ನೆಲೆಯಲ್ಲಿ ಕವಿಯ ಅಸ್ತಿತ್ವವನ್ನೆ ಶಂಕಿಸಿದರೆ, ಇನ್ನೊಂದು ನೆಲೆಯಲ್ಲಿ ಅವರ ಅಪೌರುಷೇಯತ್ವವನ್ನೆ ವೈಭವಿಸುತ್ತವೆ. ನಿಜ, ವ್ಯಾಸ ವಾಲ್ಮೀಕಿ ಎಂಬವುಗಳು ಯಾರ ಹೆಸರಿನಂತೆಯೂ ತೋರದೆ, ಉಪಲಕ್ಷ್ಯಗಳಂತೆ ತೋರುತ್ತವೆ. ಅಷ್ಟೇ ಅಲ್ಲ, ‘ವಾಲ್ಮೀಕಿ’ ಎಂಬುದು ಒಂದು ಸಂಕೇತ; ಹುತ್ತಗಟ್ಟಿಕೊಂಡ ಚಿತ್ತದ ಸಂಕೇತ. ‘ವಾಲ್ಮೀಕಿ’ ಕೂತಲ್ಲೇ ಹುತ್ತ ಬೆಳೆಯಿತು ಎಂದರೆ, ಅದು ಆ ವ್ಯಕ್ತಿತ್ವದ ಏಕಾಗ್ರತೆಯ, ಸ್ಥಿರತೆಯ ಸಂಕೇತ. ಇಂಥ ಏಕಾಗ್ರತೆಯಿಲ್ಲದೆ ರಾಮಾಯಣದಂತಹ ಮಹಾಕೃತಿ ರಚಿತವಾಗುವುದು ಸಾಧ್ಯವಿಲ್ಲ. ಹಾಗೆಯೆ ‘ವ್ಯಾಸ’ ಎಂದರೆ ವಿಸ್ತಾರ; ಮಹಾಭಾರತವನ್ನು, ಅದರ ವಿಷಯವಿಪುಲತೆಯನ್ನು ನೋಡಿದರೆ, ಜಗತ್ತಿನಲ್ಲಿ ಏನೇನಿದೆಯೋ ಅದೆಲ್ಲವೂ ಮಹಾಭಾರತದಲ್ಲಿ ಇದೆ ಎನ್ನಿಸುತ್ತದೆ. ಹೀಗಾಗಿ ಲೋಕಾನುಭವ ಸಮಸ್ತವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡ ಸಾಮರ್ಥ್ಯಕ್ಕೆ ‘ವ್ಯಾಸ’ ಎನ್ನುವುದು ಒಂದು ಸಂಕೇತ. ಹೋಮರನು ಕುರುಡನಾಗಿದ್ದನೆಂದು ಪ್ರತೀತಿ; ಆದರೂ ಅವನು ಮಹಾಕಾವ್ಯಗಳನ್ನು ಬಾಯಿಂದ ಹೇಳಿದನು. ಎಂದರೆ, “ತೋಂಡಿ ಸಂಪ್ರದಾಯದ ಕವಿ ನೆನಪನ್ನು ಮತ್ತು ಕಲ್ಪನೆಯನ್ನು ವಿಶೇಷವಾಗಿ ಅವಲಂಬಿಸುತ್ತಾನೆಂಬುದಕ್ಕೆ ಇದು ಸಂಕೇತವಿರಬಹುದು.”[16] ಹೀಗೆಂದ ಮಾತ್ರಕ್ಕೆ ರಾಮಾಯಣ, ಮಹಾಭಾರತ, ಇಲಿಯಡ್, ಒಡೆಸ್ಸಿಗಳನ್ನು ಬರೆದ ಕವಿಯೊಬ್ಬ ಇರಲೇ ಇಲ್ಲ; ಅದೇನಿದ್ದರೂ ಅನೇಕ ಜನ ಕವಿಗಳು ಸೇರಿ, ಕಾಲದಿಂದ ಕಾಲಕ್ಕೆ ಬರೆದು ಸೇರಿ ಆದ ಒಂದು ರೂಪ ಎನ್ನುವುದು  ಸರಿಯೆಂದು ತೋರುವುದಿಲ್ಲ. ವ್ಯಾಸ, ವಾಲ್ಮೀಕಿ ಎಂಬ ಹೆಸರುಗಳು ವಾಸ್ತವವಾಗಿ ಯಾರ ಹೆಸರೂ ಅಲ್ಲದಿರಬಹುದು; ಆದರೆ ಪರಂಪರಾಗತವಾಗಿ ತೇಲಿ ಬಂದ ಕಥಾನಕಗಳನ್ನು ಒಗ್ಗೂಡಿಸಿ ಒಂದು ರೂಪಕ್ಕೆ ತಂದ ವ್ಯಕ್ತಿ ಬಹುಶಃ ಒಬ್ಬನೇ. “ಅಬರ್ ಕ್ರೋಂಬಿಯ ಪ್ರಕಾರ ಮಹಾಕಾವ್ಯಗಳ ವಸ್ತು ಬಹುಕಾಲದಿಂದ ಬಂದದ್ದಾದರೂ ಇವುಗಳನ್ನು ಹಿಡಿದು ಒಂದೆಡೆ ಕೂಡಿಸಿದ್ದು ಒಬ್ಬ ಕವಿಯ ಪ್ರತಿಭಾ ಕೌಶಲವೇ.”[17] ಹೆಗೆಲ್ ಹೇಳುವಂತೆ, “ಮಹಾಕಾವ್ಯ, ಅದು ನಿಜವಾದ ಕಲಾಕೃತಿಯಾಗಿದ್ದರೆ, ಒಬ್ಬನೇ ಕಲಾವಿದನ ಪ್ರತ್ಯೇಕ ಸೃಷ್ಟಿ. ಸಮಗ್ರ ದೇಶದ ಸಕಲ ವ್ಯಾಪಾರಗಳನ್ನು ಅದು ಚಿತ್ರಿಸುತ್ತಿದ್ದರೂ ಮಹಾಕಾವ್ಯವನ್ನು ರಚಿಸುತ್ತಿರುವವನು ಒಬ್ಬ ಕವಿಯೇ ಹೊರತು ಸಮಗ್ರ ದೇಶವಲ್ಲ.”[18] ಎಫ್. ಎಲ್. ಲೂಕಾಸ್ ಹೇಳುವಂತೆ “ಹಲವು ತೇಪೆಗಳನ್ನು ಸೇರಿಸಿ ಹೊಲಿದ ಹಾಸಿಗೆಯಂತೆ ಮಹಾಕೃತಿ ಸೃಷ್ಟಿಯಾಗುವುದಿಲ್ಲ. ಮಹಾಕೃತಿಯ ಹಿಂದೆ ಮಹಾಕವಿಯೊಬ್ಬನು ಇರಲೇಬೇಕು.”[19] “ಅನೇಕ ಮಂದಿ ಸೇರಿ ಒಂದು ಅಖಂಡ ಕೃತಿಯನ್ನು ಒಂದೇ ಸಲ ನಿರ್ಮಿಸುವುದು ಅಸಂಭವ. ಮಹಾಕಾವ್ಯ ನಿರ್ಮಿತಿ ಹಲವು ಜನ ಸೇರಿ ಒಂದು ಗೋಡೆಯನ್ನು ಕಟ್ಟಿದ ಹಾಗಲ್ಲ. ಅದೊಂದು ಅರ್ಥಪೂರ್ಣವಾದ ಸ್ವತಂತ್ರ ಘಟಕ.”[20] ಅಂತೂ ಮಹಾಕಾವ್ಯದ ಸಾಮಗ್ರಿ ಬಹು ಹಿಂದಿನಿಂದ ಬಂದಿದ್ದರೂ ಬಹುಜನ ಕವಿಗಳ ಕಲ್ಪನೆಯಿಂದ ಅದು ಪುಷ್ಟವಾಗಿದ್ದರೂ, ಆ ಅಲಿಖಿತ ಸಾಮಗ್ರಿಯನ್ನೆಲ್ಲಾ ಕೂಡಿಸಿ ಅಖಂಡವೆಂಬಂತೆ ತೋರುವ ಒಂದು ಆಕಾರವನ್ನು ಕೊಟ್ಟವನು ಒಬ್ಬ ಕವಿಯೇ ಹೊರತು ಹಲವರಲ್ಲ. ಹಾಗೆ ಪೂರ್ಣರೂಪವನ್ನು ಕೊಟ್ಟವರನ್ನು ವಾಲ್ಮೀಕಿ ಎಂದಾದರು ಕರೆಯಿರಿ, ವ್ಯಾಸ ಎಂದಾದರೂ ಕರೆಯಿರಿ, ಹೋಮರ್ ಎಂದಾದರೂ ಕರೆಯಿರಿ. ಇದೇ ಹೆಸರನ್ನುಳ್ಳ ಕವಿಗಳಿದ್ದರೋ ಇಲ್ಲವೋ; ಇಂಥ ಮಹಾಕಾವ್ಯ ನಿರ್ಮಿತವಾದದ್ದು, ಅಲಿಖಿತ ಪರಂಪರೆಯ ಕಡೆಯ ಹಂತದಲ್ಲಿ, ಒಬ್ಬನೇ ಕವಿಯಿಂದ ಮಾತ್ರ. “ಈ ರೀತಿಯಾಗಿ ಕಾಲ ಕಾಲದಲ್ಲಿ ಒಂದು ಸಮಗ್ರ ಜನಾಂಗವು ಯಾವ ಕಾವ್ಯವನ್ನು ಒಬ್ಬ ಕವಿಯ ಕವಿತ್ವ ಭಿತ್ತಿಯನ್ನಾಶ್ರಯಿಸಿ ರಚನೆ ಯಾಗುವುದೋ ಅದನ್ನೇ ಯಥಾರ್ಥವಾದ ಮಹಾಕಾವ್ಯವೆಂದು ಹೇಳಬೇಕಾಗುತ್ತದೆ.”[21] ಇಂಥ ಮಹಾಕೃತಿಗಳನ್ನು ಬರೆದವರು ವಾಲ್ಮೀಕಿ, ವ್ಯಾಸ, ಹೋಮರ್ ಎಂದು ಪರಂಪರೆ ಹೇಳುತ್ತಾ ಬಂದಿದೆ; ಜನ ಅದನ್ನು ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ಮತ್ತು ಹೋಮರ್ ಕವಿಗಳನ್ನು ಆಯಾ ಕಾವ್ಯ ಪರಂಪರೆಯ ಆದಿಕವಿಗಳೆಂದು ಗೌರವಿಸುತ್ತಾ ಬಂದಿದ್ದಾರೆ. ‘ಆದಿಕವಿ’ ಎಂದರೆ, ಈ ಕವಿಗಳು ಬರೆಯುವ ಮೊದಲು ಕವಿಗಳೇ ಇರಲಿಲ್ಲ, ಕಾವ್ಯಗಳೇ ಇರಲಿಲ್ಲ ಎಂದು ಅರ್ಥವಲ್ಲ. ಈ ಕವಿಗಳ ಹಿಂದೆ ಒಂದು ಪರಂಪರೆ ಇತ್ತು; ಆ ಪರಂಪರೆಗೆ ಒಂದು ಖಚಿತವಾದ ರೂಪ ಕೊಟ್ಟವರು ಇವರು ಎಂದು ಅರ್ಥ. ವಾಲ್ಮೀಕಿ ರಾಮಾಯಣವನ್ನು ಬರೆಯುವ ಮುನ್ನ ರಾಮಕಥಾಪುಂಜವೊಂದು ಜನಜನಿತವಾಗಿತ್ತೆಂದು, ಅದೇ ವಾಲ್ಮೀಕಿಗೆ ಮೂಲ ಸಾಮಗ್ರಿ ಎಂದೂ ಹಿಂದೆಯೆ ಹೇಳಿದ್ದೇವೆ. ವಾಲ್ಮೀಕಿಯು ರಾಮಾಯಣದ ಮೊದಲ ಶ್ಲೋಕವನ್ನು ಉದ್ಗರಿಸಿದ ಸಂದರ್ಭದಲ್ಲಿ ಈ ಮಾತು “ಪಾದಬದ್ಧ, ಅಕ್ಷರಸಮ, ತಂತ್ರೀಲಯಸಮನ್ವಿತ ಆಗಿತ್ತೆಂದು ವಾಲ್ಮೀಕಿಯೂ ಅವನ ಶಿಷ್ಯರೂ ಆಗಲೇ ಗುರುತಿಸಿದರು; ಎಂದರೆ ಇವರಿಗೆ ಶ್ಲೋಕದ ಲಕ್ಷಣಗಳು ಆ ಮೊದಲೇ ತಿಳಿದಿದ್ದುವು. ಇದರಿಂದ ಆ ಮೊದಲೇ ಶ್ಲೋಕಗಳೂ ವಾಡಿಕೆಯಲ್ಲಿದ್ದುವೆಂದು ಊಹಿಸಬಹುದು.”[22] “ಹೋಮರನನ್ನು ಆದಿಕವಿ ಎಂದು ಕರೆಯುವಾಗ ನೆನಪಿನಲ್ಲಿಡಬೇಕಾದ ಅಂಶವೊಂದಿದೆ. ಅವನ ಕೃತಿಗಳು ರಚನೆಯಾಗುವ ಹೊತ್ತಿಗೆ ಆಗಲೆ ಲಾವಣಿಕಾರರ ದೀರ್ಘವಾದ ಪರಂಪರೆಯೊಂದು ನಡೆದು ಬಂದಿದ್ದಿತು ಎನ್ನುವುದು ನಿಸ್ಸಂದೇಹ… ಹೋಮರನ ಭಾಷೆಯಾಗಲಿ, ಅವನು ಬಳಸುವ ಸಾಧನಗಳಾಗಲಿ, ಕಲೆಯಾಗಲಿ, ಛಂದಸ್ಸಾಗಲಿ ಆಗಲೆ ತಕ್ಕಮಟ್ಟಿಗೆ ಕಾವ್ಯದ ರಚನೆಯಾಗದಿರುವ ನಾಡಿನಲ್ಲಿ ಪ್ರಥಮ ಕವಿಯಾದವನು ಸೃಷ್ಟಿಸಲು ಸಾಧ್ಯವಾಗುವಂತಹುದಲ್ಲ.”[23] ಒಟ್ಟಿನಲ್ಲಿ, ತನಗಿಂತ ಹಿಂದೆ ಪ್ರಚಲಿತವಾದ ಪರಂಪರೆಯೊಂದಕ್ಕೆ ಒಂದು ಖಚಿತವಾದ ರೂಪವನ್ನು ಕೊಟ್ಟು, ತನ್ನ ಕಾಲದ ಸಮಸ್ತ ಅನುಭವದ ವಾಣಿಯಾಗಿ, ಮುಂದಿನ ರಚನೆಗಳಿಗೆ ಮಾದರಿಯಾಗುವ ‘ಮಹಾಕಾವ್ಯ’ಗಳನ್ನು ನಿರ್ಮಿಸಿದ ಈ ಶಕ್ತಿಪ್ರತಿಭಾ ಸಮನ್ವಿತವಾದ ಒಂದು ವ್ಯಕ್ತಿತ್ವಕ್ಕೆ ಮಹಾಕವಿ ಎಂದು ಕರೆಯುತ್ತೇವೆ.

ಈ ಮಹಾಕಾವ್ಯಗಳ ನಂತರ, ಮುಂದೆ ಬಂದ ಕವಿಗಳು ಬರೆದ ಬೇರೆಬೇರೆಯ ಮಹಾಕಾವ್ಯಗಳಿವೆ. ಅವುಗಳಿಗೆ ಈ ಮೂಲ ಮಹಾಕಾವ್ಯಗಳೇ ಸ್ಫೂರ್ತಿ, ಪ್ರೇರಣೆ ಮತ್ತು ಮಾದರಿ. ಇವುಗಳನ್ನು ಬರೆದವರ ಹೆಸರು, ಕಾಲ, ದೇಶಗಳ ವಿಷಯ ಸ್ಪಷ್ಟ; ವರ್ಜಿಲ್, ಡಾಂಟೆ, ಮಿಲ್ಟನ್, ಕಾಳಿದಾಸ, ಭಾರವಿ, ಪಂಪ, ಕುಮಾರವ್ಯಾಸ ಹೀಗೆ ಅವರನ್ನು ನಿಖರವಾದ ಹೆಸರುಗಳಿಂದ ಕರೆಯಬಹುದು. ಇವುಗಳು, ಮೂಲ ಮಹಾಕಾವ್ಯಗಳಷ್ಟು ಗಾತ್ರದವುಗಳಲ್ಲ; ಮತ್ತು ಇವುಗಳನ್ನು ಬರೆದ ಪರಿಸರವೇ ಬೇರೆ.

ಈ ಎರಡೂ ರೀತಿಯ ಮಹಾಕಾವ್ಯಗಳನ್ನು ಒಟ್ಟಿಗೆ ಇರಿಸಿಕೊಂಡು ಅಧ್ಯಯನ ಮಾಡಿದ ಆಧುನಿಕ ವಿದ್ವಾಂಸರು, ಇವುಗಳ ಲಕ್ಷಣಗಳನ್ನು ಚರ್ಚಿಸಿ, ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಈ ರೀತಿಯಾಗಿ ಹೆಸರುಗಳನ್ನು ಕೊಟ್ಟಿದ್ದಾರೆ :

Primitive Epic
ಪ್ರಾಚೀನ ಮಹಾಕಾವ್ಯ
Later Epic
ಅನಂತರದ ಮಹಾಕಾವ್ಯ
Primary Epic
ಮೂಲ ಮಹಾಕಾವ್ಯ
Secondary Epic
ಗೌಣ ಮಹಾಕಾವ್ಯ
Epic of Growth
ವಿಕಾಸಶೀಲ ಮಹಾಕಾವ್ಯ
Epic of Art
ಕಲಾತ್ಮಕ ಮಹಾಕಾವ್ಯ
Natural Epic
ಸಹಜ ಮಹಾಕಾವ್ಯ
Artificial Epic
ಕೃತಕ ಮಹಾಕಾವ್ಯ
Oral Epic
ವಾಚಿಕ ಮಹಾಕಾವ್ಯ
Written Epic
ಲಿಖಿತ ಮಹಾಕಾವ್ಯ
Authentic Epic
ಅಧಿಕೃತ ಮಹಾಕಾವ್ಯ
Literary Epic
ಸಾಹಿತ್ಯಕ ಮಹಾಕಾವ್ಯ

ಮಹಾಕಾವ್ಯವನ್ನು ಕುರಿತ ಮುಖ್ಯವಾದ ಎರಡು ವಿಭಾಗಗಳಿಗೆ ಕೊಟ್ಟಿರುವ ಈ ಹೆಸರುಗಳನ್ನು ನೋಡಿ ಸಾಹಿತ್ಯದ ಮುಗ್ಧ ವಿದ್ಯಾರ್ಥಿ ಮೊಟ್ಟಮೊದಲಿಗೆ ತಬ್ಬಿಬ್ಬುಗೊಳ್ಳುವುದು ತೀರಾ ಸಹಜ. ಹಾಗೆಯೇ ಇವೆರಡರಲ್ಲಿ ಒಂದನ್ನು ಎಂದರೆ ‘ಅಧಿಕೃತ ಮಹಾಕಾವ್ಯ’ವನ್ನು ಮೆಚ್ಚುವ, ‘ಸಾಹಿತ್ಯಕ ಮಹಾಕಾವ್ಯ’ವನ್ನು ಕೀಳ್ಗಳೆದು ನೋಡದಿದ್ದರೂ, ಕೆಳಗಣ್ಣಿಂದ ನೋಡುವ ಒಂದು ಪ್ರವೃತ್ತಿಯನ್ನು ತಪ್ಪಿಸುವುದು ಕಷ್ಟ. ಅಲ್ಲದೆ, ಒಂದು ಕಾವ್ಯಪ್ರಕಾರ ಹೀಗೆ ಇಬ್ಬಗೆಯಾದಾಗ ಅವುಗಳಲ್ಲಿ ಒಂದೊಂದರ ಪರವಾಗಿಯೋ ವಿರೋಧವಾಗಿಯೋ ನಿಂತು ವಿಚಾರ ಮಾಡುವ, ಅಥವಾ ಅವೆರಡರ ಗುಣಾವಗುಣಗಳನ್ನು ತೂಗಿ ನೋಡುವ, ಪರಸ್ಪರ ಸಾಮ್ಯ ವೈಷಮ್ಯಗಳನ್ನು ಗುರುತಿಸುವ ಪ್ರಯತ್ನಗಳು ವಿಮರ್ಶಕರಲ್ಲಿ ನಡೆದಿವೆ. ಈ ವ್ಯತ್ಯಾಸಗಳನ್ನು ನಿಷ್ಟ್ರಯೋಜಕ ಎಂದು ತಳ್ಳಿಹಾಕುವ ಬದಲು ಈ ವ್ಯತ್ಯಾಸಗಳಲ್ಲಿ ಇರುವ ವಿಶೇಷತೆಯೇನು ಎಂಬುದನ್ನು ತಿಳಿಯುವುದು ಒಳ್ಳೆಯದು.

ಮಹಾಕಾವ್ಯಗಳನ್ನು ಹೀಗೆ ವಿಭಾಗಿಸಿ ನೋಡಿದ್ದು ಐತಿಹಾಸಿಕವಾಗಿ ತಪ್ಪೇನಲ್ಲ. ಮೊದಲ ಮಹಾಕಾವ್ಯಗಳು, ಅನಂತರದ ಮಹಾಕಾವ್ಯಗಳು ಎಂದು ಅಭ್ಯಾಸದ ಅನುಕೂಲಕ್ಕೆ ವಿಭಾಗಿಸಿ ನೋಡಿದ್ದು ಸರಿಯಾಗಿದೆ. ಮೊದಲ ಮಹಾಕಾವ್ಯಗಳನ್ನು ಪ್ರಾಚೀನ (primitive) ಎಂದು ಕರೆಯಲಾಗಿದೆ. ವಾಸ್ತವವಾಗಿ ಅಲ್ಲಿ ‘ಪ್ರಾಚೀನ’ ಎನ್ನುವ ಮಾತು ಮುಖ್ಯವಾಗಿ ಮಹಾಕಾವ್ಯಕ್ಕೆ ಆಧಾರವಾಗಿ, ಪ್ರಾಚೀನ ಕಾಲದಿಂದಲೂ ಬಂದ ಸಾಮಗ್ರಿಯನ್ನು ಕುರಿತು ಹೇಳಿದ್ದೆಂದು ಭಾವಿಸಬೇಕು; ಯಾಕೆಂದರೆ ಯಾವುದೇ ಕಾವ್ಯವನ್ನು ಹೀಗೆ ‘ಪ್ರಾಚೀನ’ ಎಂದು ಕರೆಯಲು ಬರುವುದಿಲ್ಲ. ಮಹಾಕಾವ್ಯದ ಸಾಮಗ್ರಿ ಹೇಗೆ ಕಾಲದಿಂದ ಕಾಲಕ್ಕೆ ಅನೇಕ ಲಾವಣಿ ಚಕ್ರಗಳಾಗಿ ತೇಲುತ್ತಾ, ಚಾರಣ ಕವಿಗಳ ಕೈಯ್ಯಲ್ಲಿ ರೂಪುಗೊಳ್ಳುತ್ತಾ ಬಂತೆಂಬುದನ್ನು ಗಮನಿಸಿದರೆ, ಮಹಾಕಾವ್ಯದ ಒಂದು ಪ್ರಕಾರವನ್ನು ವಿಕಾಸಶೀಲ ಮಹಾಕಾವ್ಯ (Epic of Growth) ಎಂದು ಗುರುತಿಸಿರುವುದು ಉಚಿತವಾಗಿದೆ. ಆದರೆ, ಮುಂದಿನ ಕವಿಗಳ ಪಾಲಿಗೆ ಅಥವಾ ಅರ್ವಾಚೀನ ಮಹಾಕಾವ್ಯ (Later Epic) ಗಳ ಕಾಲಕ್ಕೆ, ಮಹಾಕಾವ್ಯದ ವಸ್ತು ಹೀಗೆ ತುಂಡಾಗಿ, ಪರಂಪರೆಯಲ್ಲಿ ತೇಲಿ ಬಂದ ರೂಪದಲ್ಲಿ ಇರುವುದಿಲ್ಲ. ಅದು ಆಗಲೇ ಅವನ ಪಾಲಿಗೆ ಸಿದ್ಧ-ಪ್ರಸಿದ್ಧವಾದದ್ದಾಗಿರುತ್ತದೆ. ಇವೆರಡಕ್ಕೂ ಇರುವ ನಿಜವಾದ ವ್ಯತ್ಯಾಸವೆಂದರೆ, ಒಂದು ವಾಚಿಕ ಮಹಾಕಾವ್ಯ (Oral Epic) ಮತ್ತೊಂದು ಲಿಖಿತ ಮಹಾಕಾವ್ಯ (Written Epic). ಎಂದರೆ ಹಿಂದಿನ ಮಹಾಕಾವ್ಯಗಳು ಮುಖ್ಯವಾಗಿ ಬರವಣಿಗೆಯ ಸಾಧನವಿಲ್ಲದೆ ಮೂಡಿಬಂದು, ತಲತಲಾಂತರದಿಂದ ನೆನಪಿನ ಮೂಲಕ ಸಾಗಿ ಬಂದವುಗಳು. ವಾಚಿಕ ಮಹಾಕಾವ್ಯ (Oral Epic) ಗಳು ಒಂದು ನಿರ್ದಿಷ್ಟ ಶ್ರೋತೃಗಳ ಗುಂಪಿನ ಎದುರು ವಾಚಿಸಲ್ಪಡುತ್ತಿದ್ದವುಗಳು. ರಾಮಾಯಣವನ್ನು ಲವಕುಶರು ಆಶ್ರಮದ ಮುನಿಗಳ ಎದುರಿಗೆ ಹಾಡಿದರು; ಅನಂತರ ಉದ್ದಕ್ಕೂ, ಶ್ರೋತೃ ವೃಂದದ ಎದುರಿಗೆ ಹಾಡುತ್ತಾ ಅಯೋಧ್ಯೆಗೆ ಬಂದು ಶ್ರೀರಾಮನ ಎದುರಿಗೇ ತುಂಬಿದ ಸಭೆಯಲ್ಲಿ ಹಾಡಿದರು; ಮಹಾಭಾರತವನ್ನು ಜನಮೇಜಯನು ಕೈಗೊಂಡ ಯಾಗದ ಸಂದರ್ಭದಲ್ಲಿ, ನೆರೆದ ಜನಸಮೂಹದ ಎದುರಿಗೆ ವೈಶಂಪಾಯನರು ಹೇಳಿದರು – ಎಂಬ ಪ್ರತೀತಿಗಳೇ ಇದಕ್ಕೆ ಸಾಕ್ಷಿ. ಆದರೆ ಲಿಖಿತಮಹಾಕಾವ್ಯ (Written Epic) ಅಥವಾ ಸಾಹಿತ್ಯಕ ಮಹಾಕಾವ್ಯ (Literary Epic) ಗಳು ಹೀಗೆ ಬಂದವುಗಳಲ್ಲ. ಅವುಗಳು ಆಗಲೇ ಸಿದ್ಧವಾದ ಮಹಾಕಾವ್ಯಗಳಿಂದ ಪ್ರೇರಣೆಯನ್ನೂ ವಸ್ತುವನ್ನೂ ಪಡೆದು, ಮಹಾಕಾವ್ಯವೆಂದರೇನು ಎಂಬ ಒಂದು ಪೂರ್ವ ನಿಶ್ಚಿತ ಕಲ್ಪನೆಯಿಂದ, ವಿದ್ವತ್ ಪೂರ್ಣವಾದ ಆವರಣದಲ್ಲಿ, ರಚಿತವಾದವು -ಗಳು. ಈ ಕಾರಣಕ್ಕಾಗಿ, ಮೊದಲ ಮಹಾಕಾವ್ಯಗಳು ‘ಸಹಜ ಮಹಾಕಾವ್ಯ (Natural Epic) ಗಳೆಂದೂ, ಅನಂತರದವುಗಳು ‘ಕೃತಕ ಮಹಾಕಾವ್ಯ’ (Artifical Epic) ಎಂದೂ ಕರೆಯುವುದು ಅಷ್ಟು ಹಿತವಾಗಿಲ್ಲ. ಈ ಎರಡು ಬಗೆಯ ಮಹಾಕಾವ್ಯಗಳು ರಚಿತವಾಗುತ್ತಿದ್ದ ಪರಿಸರಗಳು ಮಾತ್ರ ಬೇರೆ ಬೇರೆಯಾಗಿದ್ದವುಗಳು ಎಂಬುದು ಮಾತ್ರ ನಿಜ.

ಈ ಎರಡು ಬಗೆಯ ಮಹಾಕಾವ್ಯಗಳಲ್ಲಿ “ವಾಚಿಕ ಮಹಾಕಾವ್ಯವೆ (Oral Epic) ಶುದ್ಧವಾದ, ಸಹಜ ಸ್ಫೂರ್ತವಾದ ನೇರವಾದ, ನಿರರ್ಗಳವಾದ, ನಾಗರಿಕತೆಯಿಂದ ಕಲುಷಿತವಾಗದ ಕವಿಯ ವಾಣಿ”[24] ಎಂದೂ, “ಅದರ ಸರಳತೆ ಸತ್ವ ಹಾಗು ಅಕೃತಕತೆಗಳಿಂದ, ಮತ್ತು ಅದರ ನಿರಾತಂಕವಾದ ನಿರೂಪಣೆಯ ಬೀಸುಗಳಿಂದ, ಉಜ್ವಲವಾದ ಖಚಿತತೆ ಮತ್ತು ಪರಿಣಾಮ ತೀವ್ರತೆಗಳಿಂದ ಗೆದ್ದು ನಿಲ್ಲುತ್ತದೆ”[25]– ಎಂದೂ ಪ್ರಶಂಸಿತವಾಗಿದೆ. ಈ ಮಹಾಕಾವ್ಯ, ತಾನು ಹುಟ್ಟಿಕೊಂಡ ಕಾಲಕ್ಕೆ ಹೆಚ್ಚು ನಿಕಟವೂ, ಪ್ರಾಮಾಣಿಕವೂ ಆಗಿದೆ ಎಂದು ಭಾವಿಸಲಾಗಿದೆ. ಆದರೆ ಅನಂತರದ ಮಹಾಕಾವ್ಯ (Later Epic) ಅಥವಾ ಸಾಹಿತ್ಯಕ ಮಹಾಕಾವ್ಯ (Literary Epic) ಎಷ್ಟಾದರೂ ಕೃತಕ, ಪಾಂಡಿತ್ಯಮಯ, ಮತ್ತು ಅನುಕರಣ ಎಂಬ ಅನುದಾರವಾದ ಟೀಕೆಗೆ ಗುರಿಯಾಗಿದೆ. ಈ ಎರಡು ಬಗೆಯ ಮಹಾಕಾವ್ಯಗಳಿಗೂ ಇರುವ ವ್ಯತಾಸ ಇಷ್ಟೆ : ಸಾಹಿತ್ಯಕ ಅಥವಾ ಇತ್ತೀಚಿನ ಮಹಾಕಾವ್ಯಗಳು, ಹಿಂದಿನ ಪ್ರಾಚೀನ, ಅಧಿಕೃತ ಮಹಾಕಾವ್ಯಗಳಂತೆ ವಾಚಿಕ ಮತ್ತು ಅಲಿಖಿತಗಳಲ್ಲ; ಇವು ಲಿಖಿತ ಮತ್ತು ಪಾಠಯೋಗ್ಯವಾದವುಗಳು. ಕವಿ, ತನ್ನ ವಸ್ತು ಹಾಗೂ ಪ್ರೇರಣೆಗೆ ಬಹುಮಟ್ಟಿಗೆ ಮೂಲ ಮಹಾಕಾವ್ಯಗಳನ್ನು ಅವಲಂಬಿಸಿದರೂ, ಅವನು ಬರೆಯುವ ಸಾಮಾಜಿಕ ಪರಿಸರ ಹೆಚ್ಚು ಶಿಷ್ಟವೂ ವಿದ್ವತ್ ಪೂರ್ಣವೂ ಆದದ್ದು. ಇವನಿಗೆ ತಾನು ಬರೆಯುವ ಕೃತಿ ಒಂದು ‘ಕಲಾಕೃತಿ’ಯಾಗಬೇಕು ಎನ್ನುವ ಪ್ರಜ್ಞೆ ಪ್ರಧಾನವಾಗಿರುತ್ತದೆ. ಆದುದರಿಂದ ಇತ್ತೀಚಿನ ಮಹಾಕಾವ್ಯಗಳ ಭಾಷೆ, ಒಂದಷ್ಟು ನಯಗಾರಿಕೆಯಿಂದ, ಕೌಶಲದಿಂದ, ಚಮತ್ಕಾರಗಳಿಂದ ಕೂಡಿರುತ್ತದೆ; ಆದರೆ ಹಿಂದಿನ ವಾಚಿಕಮಹಾಕಾವ್ಯಗಳ ಕವಿಗಳು ಈ ಬಗೆಯ ‘ಉಪಾಧಿ’ಗಳಿಂದ ಬದ್ಧವಾದವರಲ್ಲ. ತಮಗೆ ದತ್ತವಾದ ಪಾರಂಪರಿಕ ಸಾಮಗ್ರಿಯನ್ನು ರೂಪಿಸುವಲ್ಲಿ, ಮುಖ್ಯವಾಗಿ ಅವರು ಅವಲಂಬಿಸಿದ್ದು ಅನುಭವದ ಒತ್ತಡವನ್ನಷ್ಟೆ; ತಾವು ನುಡಿದದ್ದು ಕಲಾತ್ಮಕವಾಗಿರಬೇಕು ಎಂಬ ಕಡೆ ಪ್ರತ್ಯೇಕವಾದ ಗಮನವನ್ನು ಕೊಟ್ಟವರಲ್ಲ. ಭಾಷೆಯ ಬಗೆಗೆ ಅಂಥ ಕಾಳಜಿ ವಹಿಸಲಿಲ್ಲ. ಆದುದರಿಂದ ಅವುಗಳ ಭಾಷೆ ಪ್ರಾಕೃತಿಕ ಸ್ವರೂಪದ್ದಾಗಿರುತ್ತದೆ; ಸಹಜವಾದ ಪ್ರವಾಹದಂತಿರುತ್ತದೆ. ಅದೊಂದು ದೈತ್ಯ ಕಲೆಗಾರಿಕೆ. ಆದುದರಿಂದಲೇ ಮಹಾಭಾರತ ರಾಮಾಯಣಗಳ ಸ್ವರೂಪ ಪರ್ವತಾರಣ್ಯಗಳ ರೂಕ್ಷತೆ ಹಾಗೂ ರಮ್ಯತೆಯನ್ನು ಒಳಗೊಂಡಿದೆ. ಆದರೆ ಮುಂದೆ ರಚಿತವಾದ ಮಹಾಕಾವ್ಯಗಳು ರಾಜಾಸ್ಥಾನದ, ಪಂಡಿತ ಮಂಡಲಿಯ ಪರಿಸರದಿಂದಾಗಿ, ಮೂಲದ ವಸ್ತುವನ್ನು ಸಂಸ್ಕರಿಸುವ ಅವುಗಳಲ್ಲಿನ ಏರು ಪೇರುಗಳನ್ನು ತಮ್ಮದೇ ಆದ ಕೌಶಲಗಳಿಂದ ಸರಿಪಡಿಸುವ, ಬುದ್ಧಿಪೂರ್ವಕವಾದ ಪ್ರಯತ್ನಗಳ ಪರಿಣಾಮವಾಗಿವೆ. ಅಲ್ಲದೆ ಈ ಕವಿಗಳಿಗೆ ತಾವು ಯಾವ ಒಂದು ಪರಂಪರೆಯಲ್ಲಿ ಬರೆಯುತ್ತಿದ್ದೇವೆ ಎಂಬ, ಯಾವ ಸಂದರ್ಭದಲ್ಲಿ ರಚಿಸುತಿದ್ದೇವೆ ಎಂಬ ಎಚ್ಚರ ಇರುತ್ತದೆ. ತನ್ನ ಕಾಲದ ಸಾಹಿತ್ಯಕ ಧೋರಣೆಗಳು, ಉದ್ದೇಶಗಳು, ಸಹೃದಯರನ್ನು, ಪಂಡಿತರನ್ನು  ಮೆಚ್ಚಿಸುವ ಆಸಕ್ತಿಗಳು ಇವರ ಕೃತಿ ರಚನೆಯ ಹಿನ್ನೆಲೆಗಿರುತ್ತವೆ. ಅಲ್ಲದೆ, “ಈ ಸಾಹಿತ್ಯಕ ಮಹಾಕಾವ್ಯಗಳನ್ನು ಬರೆಯುವ ಕವಿಗಳು ಉದ್ದೇಶ ಪೂರ್ವಕವಾಗಿ ಒಂದು ನೀತಿಯನ್ನು ನಿರೂಪಿಸಲು ಬದ್ಧರಾಗುತ್ತಾರೆ.”[26]

ಈ ಎಲ್ಲ ಮಾತನ್ನು ಕೆಲವು ನಿದರ್ಶನಗಳಿಂದ ಸ್ಪಷ್ಟಪಡಿಸಬಹುದು : ಮಹಾಕವಿ ವರ್ಜಿಲ್, ಹೋಮರನನ್ನು ಮೀರಿಸಬೇಕೆಂದು ಬರೆದ ಮಹಾಕಾವ್ಯ ‘ಈನಿಯಡ್’. ರೋಮ್ ಆಧಿಪತ್ಯವನ್ನು ಸ್ಥಾಪಿಸಬೇಕಾದರೆ, ಅದರ ಮೂಲ ಸ್ಥಾಪಕ ಇನೀಯಸನು ಪಟ್ಟ ಕಷ್ಟ, ಅವನ ಕರ್ತವ್ಯಪರತೆ, ದೈವಭಕ್ತಿ ಇತ್ಯಾದಿಗಳು ಈ ಕಾವ್ಯದಲ್ಲಿ ಸೂಚಿತವಾಗಿವೆ. ‘ರೋಮನ್ ರಾಷ್ಟ್ರವನ್ನು ಸ್ಥಾಪಿಸಬೇಕಾದರೆ ಇಷ್ಟೆಲ್ಲಾ ಕಷ್ಟಪಡಬೇಕಾಯಿತು’ – ಎಂಬ ಒಂದು ಪಂಕ್ತಿಯಲ್ಲಿ ಈನಿಯಡ್ ಕಾವ್ಯದ ಸಾರವೆಲ್ಲಾ ಅಡಗಿದೆ. ಇಟಲಿ ದೇಶದ ಮೇಲಿನ ಪ್ರೀತಿ (ಅವನ ಪಾಲಿಗೆ ರೋಮ್ ಮತ್ತು ಇಟಲಿ ಅಭಿನ್ನ)ಯನ್ನು, ರೋಮ್ ಅನ್ನು ಕುರಿತ ಪ್ರಚಾರವನ್ನು ವರ್ಜಿಲ್ ಈ ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶ ಸ್ಪಷ್ಟವಾಗಿದೆ. ಈ ಕಾವ್ಯವನ್ನು ಬರೆಯಲು ಅವನು ತೆಗೆದುಕೊಂಡದ್ದು ಹತ್ತು ವರ್ಷಗಳನ್ನು; ಆದರೂ ಅದರ ರಚನೆಯ ಬಗ್ಗೆ ಆತನಿಗೆ ಅತೃಪ್ತಿ ಇತ್ತು. ತನ್ನ ಮರಣಶಯ್ಯೆಯಲ್ಲಿ ಕೂಡ ಆ ಕಾವ್ಯದ ಬಗ್ಗೆ ಸೂಚನೆಗಳನ್ನು ಕೊಟ್ಟ. ಈ ಕೃತಿ ಅಪರಿಪೂರ್ಣವಾದದ್ದರಿಂದ ಅದನ್ನು ಪ್ರಕಟಿಸಬಾರದೆಂದೂ, ಸುಟ್ಟು ಹಾಕಬೇಕೆಂದೂ ತನ್ನ ಸ್ನೇಹಿತರಿಗೆ ಹೇಳಿದ. ಆದರೆ ಅವನ ಸ್ನೇಹಿತರು ಕವಿಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಮಿಲ್ಟನ್ ಕವಿ ತನ್ನ ‘ಪ್ಯಾರಡೈಸ್‌ಲಾಸ್ಟ್’ ಅನ್ನು ಬರೆಯುವಾಗ ‘ಪರಮಾತ್ಮನ ನ್ಯಾಯಪರತೆಯ ವಿಧಾನಗಳನ್ನು ಮಾನವರಿಗೆ ಸಮರ್ಥಿಸಿ ತೋರಿಸುವ’ (to justify the ways of God to men) ಉದ್ದೇಶ ಮುಖ್ಯವಾಗಿತ್ತು. ಸೃಷ್ಟಿಕರ್ತನು ನಿಷೇಧಿಸಿದ ಜ್ಞಾನಫಲವನ್ನು, ಸವಿಯುವುದರಲ್ಲಿ ಮಾನವನು ತೋರಿದ ಅವಿಧೇಯತೆ, ಅದರ ಪರಿಣಾಮವಾಗಿ ಅವನಿಗೆ ಒದಗಿದ ಪತನ, ಅನಂತರ ದೇವಪುತ್ರನಾದ ಕ್ರಿಸ್ತನ ಮಹಾತ್ಯಾಗದಿಂದ ಸಾಧ್ಯವಾದ ಮಾನವನ ಉದ್ಧಾರ – ಇದೇ ‘ಪ್ಯಾರಡೈಸ್ ಲಾಸ್ಟ್’ ಮಹಾಕಾವ್ಯದ ತಿರುಳು. ಇದರ ಜತೆಗೆ ಮಿಲ್ಟನ್ ಅಂದಿನ ಕೆಸ್ತಧರ್ಮದ ವಿಚಾರದಲ್ಲಿ ತೋರಿದ ಪ್ರತಿಭಟನೆ, ಮತ್ತು ಅಂದಿನ ರಾಜನಾದ ಚಾರ್ಲ್ಸ್‌ನ ವಿರುದ್ಧವಾಗಿ ನಿಂತು ಹೋರಾಡಿದ ಮತ್ತು ಖಂಡಿಸಿದ ಬಂಡಾಯ ಪ್ರವೃತ್ತಿ ಮತ್ತು ಮಿಲ್ಟನನ ಸಾಂಸಾರಿಕ ಜೀವನದಲ್ಲಿ ಒದಗಿದ ವಿರಸದಿಂದ ಬೆಳೆದ ಸ್ತ್ರೀ ದ್ವೇಷ-ಇವೆಲ್ಲವೂ ಆತನ ‘ಮಹಾಕಾವ್ಯ’ದ ಹಿಂದಿನ ಕವಿ ಮನೊಧರ್ಮದಲ್ಲಿ ಬೆರೆತುಕೊಂಡಿರುವುದನ್ನು ಗುರುತಿಸಬಹುದು. ಆದುದರಿಂದಲೇ, ಅವನ ಕಾವ್ಯದಲ್ಲಿ ಸೇಟನ್ನನನ್ನು ಪರಮಾತ್ಮನ ವಿರುದ್ಧವಾಗಿ ದಂಗೆಯೆದ್ದ ಅಸತ್ ಶಕ್ತಿಯ ಪ್ರತೀಕವೆಂಬಂತೆ ಚಿತ್ರಿಸಿದ್ದರೂ, ಸೇಟನ್ನನ ಪಾತ್ರದಲ್ಲಿ ಕಂಡುಬರುವ ಪ್ರತಿಭಟನೆಯ ಕೆಚ್ಚು ಮಿಲ್ಟನ್ ಕವಿಯದೇ ಆಗಿದೆ. ಅಷ್ಟೇ ಅಲ್ಲ, ಉಳಿದೆಲ್ಲ ಪಾತ್ರಗಳಿಗಿಂತ, ಸೇಟನ್(ಸೈತಾನ)ನ ಪಾತ್ರವೇ ಎದ್ದು ಕಾಣುವಂತಾಗಿ, ಅವನ ಪಾತ್ರವಿಲ್ಲದೆಡೆಗಳಲ್ಲಿ ಕಾವ್ಯವು ಕಾವನ್ನು ಕಳೆದುಕೊಳ್ಳುತ್ತದೆ. ಇದೇ ಕಾವ್ಯದಲ್ಲಿ ಚಿತ್ರಿತವಾಗಿರುವ ‘ಈವ್’ಳ ಪಾತ್ರದ ವಿಚಾರದಲ್ಲೂ ಕವಿಯ ವೈಯಕ್ತಿಕ ಪೂರ್ವಾಗ್ರಹಗಳೇ ಪ್ರಧಾನವಾಗಿವೆ. ಮಿಲ್ಟನ್ ಮೂರು ಸಲ ಮದುವೆ ಮಾಡಿಕೊಂಡ; ಆದರೆ ಅವನ ಹೆಂಡತಿಯರಾಗಲಿ, ಅಥವಾ ಅವನ ಹೆಣ್ಣುಮಕ್ಕಳಾಗಲಿ ಅವನ ಬಗೆಗೆ ನಿಷ್ಠಾಪೂರ್ವಕವಾದ ಪ್ರೀತಿಯನ್ನು ತೋರಲಿಲ್ಲ. ಹೀಗಾಗಿ ಅವನ ಸ್ತ್ರೀ ದ್ವೇಷ ‘ಈವ್’ಳ ಪಾತ್ರವನ್ನು ಚಿತ್ರಿಸುವಲ್ಲಿ ಎದ್ದು ಕಾಣುತ್ತದೆ. ಸ್ವರ್ಗಚ್ಯುತಿಯ ಸಂದರ್ಭದ ಚಿತ್ರಣವನ್ನು ನೋಡಿದರೆ, ಗಂಡಿನ ಪತನಕ್ಕೆ, ಅಥವಾ ಮನುಕುಲದ ಪತನಕ್ಕೆ ಹೆಣ್ಣಿನ ಚಂಚಲ ಹಾಗೂ ಪ್ರಲೋಭನೆಗೊಳಿಸುವ ಸ್ವಭಾವವೇ ಕಾರಣ ಎಂಬಂತೆ ತೋರುತ್ತದೆ. ಡಾಂಟೆಯ ‘ಡಿವೈನ್ ಕಾಮೆಡಿ’ಯು ಮನುಷ್ಯನು ಪ್ರೇಮದ ಬಲದಿಂದ ಹಾಗೂ ಮಾರ್ಗದರ್ಶನ-ದಿಂದ ಪರಿಶುದ್ಧವಾಗಿ  ಉದ್ಧಾರ ಹೊಂದಬಹುದು ಎನ್ನುವ ತತ್ವವನ್ನು ಪ್ರತಿಪಾದಿಸುತ್ತದೆ. ಮರ್ತ್ಯದಿಂದ ಹೊರಟು ಸ್ವರ್ಗದೆಡೆಗೆ ಏರುವ ಆತ್ಮದ ಮಹಾ ಪ್ರಸ್ಥಾನವೇ ಇದರ ವಸ್ತು. ತನ್ನ ಕಾಲದ ಧಾರ್ಮಿಕ  ಸಂಸ್ಥೆಯಾದ ಚರ್ಚ್, ತನ್ನ ಸುತ್ತಣ ಭ್ರಷ್ಟಾಚಾರ ಇವುಗಳನ್ನು ಕಂಡು ರೋಸಿದ ಡಾಂಟೆ, ನರಕ (Inferno), ಶುದ್ಧೀಕರಣ ಲೋಕ (Purgatorio) ಮತ್ತು ಸ್ವರ್ಗ (Paradiso) ಎಂಬ ಮೂರು ಸಂಪುಟಗಳಲ್ಲಿ ರಚಿಸಿರುವ ಈ ರೂಪಕಕಾವ್ಯದಲ್ಲಿ (Allegory) ಒಂದು ಆಧ್ಯಾತ್ಮಿಕ ನೀತಿಯನ್ನೂ, ಮತ್ತು ತನ್ನ ಸಮಕಾಲೀನ ಜೀವನದ ವಿಡಂಬನೆಯನ್ನೂ ಒಟ್ಟಿಗೆ ಪ್ರಕಟಿಸಿದ್ದಾನೆ. ಬರೆದ ಕವಿ, ತನ್ನ ಮಾತಿನಲ್ಲಿಯೇ ಹೇಳಿಕೊಂಡಂತೆ ರಚಿತವಾದ ಈ ಕಾವ್ಯದಲ್ಲಿ, ದಿಕ್ಕು ತೋಚದೆ ಅಲೆಯುತ್ತಿರುವ, ಅನ್ವೇಷಣೆಗೆ ಸಿದ್ಧವಾದ ಡಾಂಟೆಯನ್ನು ಅವನ ಗುರುವಾದ ವರ್ಜಿಲ್, ಅವನನ್ನು ನರಕ ಹಾಗೂ ಶುದ್ಧೀಕರಣ ಲೋಕಗಳಲ್ಲಿ ಕರೆದುಕೊಂಡು ಹೋಗುವ ಮಾರ್ಗದರ್ಶಕನಾಗುತ್ತಾನೆ; ಅನಂತರ ಬಿಯಟ್ರಿಸ್‌ಳು ಇನ್ನೂ ಸ್ವಲ್ಪ ಮುಂದಕ್ಕೆ, ಅನಂತರ ಸಂತ ಬರ್ನಾಡ್ ಡಾಂಟೆಯನ್ನು ದೇವ ಸಾನ್ನಿಧ್ಯಕ್ಕೆ, ಕರೆದುಕೊಂಡು ಹೋಗುತ್ತಾರೆ. ಈ ಯಾತ್ರೆಯಲ್ಲಿ ನರಕದ ವರ್ತುಲಗಳಲ್ಲಿ ತನ್ನ ಸಮಕಾಲೀನರಾದ ಅನೇಕ ವ್ಯಕ್ತಿಗಳನ್ನು ಡಾಂಟೆ ಕಂಡಂತೆ ಚಿತ್ರಿತವಾಗಿದೆ; ಇದೇ ನರಕದ ಎಂಟನೆಯ ವರ್ತುಲದಲ್ಲಿ ಕಲ್ಲಿನ ಪೊಟರೆಗಳಲ್ಲಿ ದೇಹವನ್ನು ಇರುಕಿಸಿಕೊಂಡು ಉರಿಯಲ್ಲಿ ತಮ್ಮ ಕಾಲುಗಳನ್ನು ಬೇಯಿಸಿಕೊಳ್ಳುವ ಅನೇಕ ಚರ್ಚಿನ ಅಧಿಕಾರಿಗಳು ಕಾಣಿಸುತ್ತಾರೆ. ಅವರೆಲ್ಲರೂ ದೇವರ ಹೆಸರಿನಲ್ಲಿ ಅನೇಕ ಅನ್ಯಾಯಗಳನ್ನು ಮಾಡಿದವರು. ಬಿಯಟ್ರಿಸ್ ಶುದ್ಧ ಪ್ರೇಮದ ಸಂಕೇತ. ಆಕೆ ಈ ನರಕಗಳನ್ನು ಹಾದುಬಂದ ಡಾಂಟೆಯನ್ನು ದಿವ್ಯ ಸ್ವರ್ಗಕ್ಕೆ ಒಯ್ಯುವ ಮಾರ್ಗದರ್ಶಕಿ. ಒಟ್ಟಿನಲ್ಲಿ ಶುದ್ಧವಾದ ಪ್ರೇಮವೊಂದೇ ಮಾನವನನ್ನು ಸ್ವರ್ಗದೆಡೆಗೆ, ಉದ್ಧಾರ ಮಾರ್ಗದಲ್ಲಿ ಕರೆದೊಯ್ಯುತ್ತದೆ ಎನ್ನುವ ತಾತ್ವಿಕ ಧ್ವನಿ ಪ್ರಧಾನವಾಗಿದ್ದರೂ, ಈ ಕೃತಿಯಲ್ಲಿ ಒಮ್ಮೊಮ್ಮೆ ಡಾಂಟೆಯ ಧಾರ್ಮಿಕ ಸಿದ್ಧಾಂತ, ಮಾನವತಾ ವಿರೋಧಿಯಾಗಿ ತೋರುತ್ತದೆ. ಕನ್ನಡದ ಕವಿ ಪಂಪ, ವ್ಯಾಸರ ಮಹಾಭಾರತದ ಕಥೆಯನ್ನು ಹತ್ತನೆಯ ಶತಮಾನದ ಕರ್ನಾಟಕದ ಚರಿತ್ರೆಯ ಭಿತ್ತಿಯ ಮೇಲೆ ಬರೆದು ಅದನ್ನು ವಿಕ್ರಮಾರ್ಜುನ ವಿಜಯ’ವನ್ನಾಗಿ ಮಾಡಿದ. ತನ್ನ ಆಶ್ರಯದಾತನಾದ ಅರಿಕೇಸರಿಯ ಮೇಲಿನ ಅಳ್ತಿ (ಪ್ರೀತಿ) ಯಿಂದ, ಮೂಲಭಾರತ, ಪಂಪನಲ್ಲಿ ‘ಸಮಸ್ತಭಾರತ’, ಎಂದರೆ ಅರಿಕೇಸರಿಯನ್ನು ಅರ್ಜುನನ ಪಾತ್ರದಲ್ಲಿ ಸಮಾವೇಶಗೊಳಿಸಿ ಬರೆದ ಕಥೆಯಾಯಿತು. ಇದರಿಂದ ಪಂಪನ ‘ವಿಕ್ರಮಾರ್ಜುನ ವಿಜಯ’ ಎಂತೆಂತಹ ಇಕ್ಕಟ್ಟುಗಳಿಗೆ, ಅಸಾಂಗತ್ಯಗಳಿಗೆ ಒಳಗಾಯಿತೆಂಬುದನ್ನು ವಿಮರ್ಶಕರು ತೋರಿಸಿಕೊಟ್ಟಿದ್ದಾರೆ. ಶ್ರೀ ಕುವೆಂಪು ಅವರು ತಮ್ಮ ‘ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಇಪ್ಪತ್ತನೆಯ ಶತಮಾನದ ವೈಜ್ಞಾನಿಕ ಯುಗದಲ್ಲಿ, ಭಾರತೀಯ ಪರಂಪರೆಯ ಹಿನ್ನೆಲೆಯಲ್ಲಿ ಬರೆದದ್ದೆಂಬುದನ್ನು ಉದ್ದಕ್ಕೂ ಸ್ಪಷ್ಟಪಡಿಸುತ್ತಾರೆ. ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್’, ‘ಆವುದಾಗಲಿ ನೆಪಂ, ಫಲದಾಯಕಂ ತಪಂ’, ‘ಲೇಸನೆಸಗುವ ವಿಧಿಗೆ ಬಹುಪಥಗಳುಂಟು ನಡೆಯಲ್’ ಈ ಕೆಲವು ಮಾತುಗಳಿಂದ ಸೂಚಿತವಾಗುವ ತಾತ್ವಿಕದೃಷ್ಟಿಯೇ ಬಹುಶಃ ಈ ಕಾವ್ಯದ ಸಾರ.

ಈ ಕೆಲವು ನಿದರ್ಶನಗಳಿಂದ ಕಂಡು ಬರುವ ಸಂಗತಿಯೆಂದರೆ, ಹಿಂದಿನ ಮಹಾಕಾವ್ಯಗಳನ್ನು ಬರೆದ ವ್ಯಾಸ, ವಾಲ್ಮೀಕಿ, ಹೋಮರ್ ಇವರ ಬರವಣಿಗೆಯಲ್ಲಿ ಕಂಡುಬರುವ ವಸ್ತುನಿಷ್ಠತೆ ಹಾಗೂ ಅಲಿಪ್ತತೆ, ಇತ್ತೀಚಿನ ಮಿಲ್ಟನ್, ಡಾಂಟೆ, ಪಂಪ ಇತ್ಯಾದಿ ಕವಿಗಳಲ್ಲಿ ಕಂಡುಬರುವುದಿಲ್ಲ. ಹಿಂದಿನವರು, ಒಂದು ಸಮಗ್ರ ಜನಾಂಗದ ವಾಣಿಯಂತೆ, ತಮ್ಮ ವ್ಯಕ್ತಿತ್ವವನ್ನು ಸಮೂಹದಲ್ಲಿ ಕರಗಿಸಿಕೊಂಡು ಬರೆದರೆ, ಇವರು, ತಮ್ಮ ಪ್ರತ್ಯೇಕತೆಯನ್ನು, ತಮ್ಮ ಪಕ್ಷಪಾತ, ಸಾಹಿತ್ಯಕ ಧೋರಣೆ, ವ್ಯಕ್ತಿವಿಡಂಬನೆ, ತಮ್ಮದೇ ಆದ ತಾತ್ವಿಕ ದೃಷ್ಟಿ ಇತ್ಯಾದಿಗಳ ಮೂಲಕ ಪ್ರಕಟಿಸಿಕೊಳ್ಳುತ್ತಾರೆ. ಇವರಿಗಿರುವ ‘ಉಪಾಧಿ’ಗಳು, ಅವರಿಗೆ, ಅಂದರೆ ಹಿಂದಿನ ಮಹಾಕವಿಗಳಿಗೆ ಇರಲಿಲ್ಲ. ಯಾವ ಅರ್ಜುನ ಕುರುಕ್ಷೇತ್ರದ ರಣರಂಗದಲ್ಲಿ ತನ್ನ ಪರಾಕ್ರಮದಿಂದ ರಾರಾಜಿಸಿ ಲೋಕದ ಗಮನವನ್ನೇ ಗೆದ್ದುಕೊಂಡ ಏಕೈಕ ವೀರನಂತೆ ತೋರುತ್ತಾನೋ, ಅವನೇ ಕಡೆಯಲ್ಲಿ ಮಹಾಭಾರತ ಯುದ್ಧ ಮುಗಿದ ಮೇಲೆ ದ್ವಾರಾವತಿಯಿಂದ ಕೃಷ್ಣನ ಅರಮನೆಯ ಹೆಂಗಸರನ್ನು ಹಸ್ತಿನಾವತಿಗೆ ಕರೆತರುವ ಹಾದಿಯ ಮಧ್ಯೆ, ಸಾಮಾನ್ಯ ಬೇಡರಿಂದ ಸೋತುಹೋದನೆಂಬುದನ್ನು ವ್ಯಾಸರು ಅತ್ಯಂತ ನಿರ್ಲಿಪ್ತವಾಗಿ ಚಿತ್ರಿಸಬಲ್ಲರು; ಆದರೆ ಪಂಪ ತನ್ನ ‘ವಿಕ್ರಮಾರ್ಜುನವಿಜಯ’ದಲ್ಲಿ ತನ್ನ ಆಶ್ರಯದಾತನಾದ ಅರಿಕೇಸರಿಯ ರೂಪಾಂತರವಾದ, ತನ್ನ ‘ವಿಕ್ರಮಾರ್ಜುನ’ನು ಎಂಥ ಸಂದರ್ಭದಲ್ಲಿಯೂ ಒಂದು ನಿಶ್ಚಿತವಾದ ಮೇಲ್ ಮಟ್ಟದಿಂದ ಕೆಳಕ್ಕೆ ಇಳಿಯದಂತೆ ಚಿತ್ರಿಸುವುದರಲ್ಲಿ ಪ್ರಜ್ಞಾಪೂರ್ವಕ -ವಾದ ಎಚ್ಚರವನ್ನು ವಹಿಸುತ್ತಾನೆ.

ವಿಮರ್ಶಕರು ಎತ್ತಿ ಹೇಳುವ ಇನ್ನೊಂದು ವ್ಯತ್ಯಾಸ ಈ ಎರಡೂ ಕಾವ್ಯಗಳ ಭಾಷೆಯನ್ನು ಕುರಿತದ್ದು. ಹಿಂದಿನ ಮಹಾಕಾವ್ಯಗಳ ಭಾಷೆ ಹೆಚ್ಚು ನೈಸರ್ಗಿಕವೂ, ರೂಕ್ಷವೂ ಆಗಿದ್ದರೆ, ಇತ್ತೀಚಿನ ಕಾವ್ಯಗಳ ಭಾಷಾಶೈಲಿ ಹೆಚ್ಚು ಪರಿಷ್ಕೃತವೂ, ತಂತ್ರಕೌಶಲದಿಂದ ಕೂಡಿದ್ದೂ ಆಗಿದೆ. ಇದಕ್ಕೆ ಕಾರಣ, ಮೊದಲಿನ ಮಹಾಕಾವ್ಯಗಳು ಮೂಲತಃ ವಾಚಿಕ (Oral)  ವಾದವುಗಳು. ದೊಡ್ಡ ಶ್ರೋತೃವೃಂದಕ್ಕೆ ಹಾಡಿತೋರಿಸಬೇಕಾದರೆ, ಅದರ ಭಾಷೆ, ಸರಳವೂ, ಮತ್ತು ಓದುಗರ ಕಿವಿಯ ಮೇಲೆ ಬೀಳುವಂತೆ ಪುನರುಕ್ತಿಗಳಿಂದ ಕೂಡಿದ್ದೂ ಆಗಿರುತ್ತಿತ್ತು. ಆದರೆ ಇತ್ತೀಚಿನ ಮಹಾಕಾವ್ಯ (Later Epics)ಗಳು, ‘ಲಿಖಿತ’ವಾದವುಗಳು, ತಕ್ಕಮಟ್ಟಿಗೆ ಕಲಿತ ಹಾಗೂ ಪಂಡಿತಮಂಡಲಿಗಳ ಆವರಣದಲ್ಲಿ,  ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಾ ಆಸ್ವಾದಿಸಲು ತಕ್ಕ ಪ್ರೌಢಿಮೆಯಿಂದ ರಚಿತವಾದವುಗಳು. ಭಾಷೆ ಹಾಗೂ ಶೈಲಿಯಲ್ಲಿ ಕಂಡುಬರುವ ಗೌಣವಾದ ವ್ಯತ್ಯಾಸಕ್ಕೆ ಈ ಎರಡೂ ಬಗೆಯ ಮಹಾಕಾವ್ಯಗಳು ರಚಿತವಾದ ಪರಿಸರವೇ ಮುಖ್ಯವಾದ ಕಾರಣವಾಗಿದೆ.

“ಅಧಿಕೃತ ಮಹಾಕಾವ್ಯ (Authentic) ವು, ಸಾಹಿತ್ಯಕ ಮಹಾಕಾವ್ಯ (Literary Epic) ಕ್ಕಿಂತ, ತಾನು ರಚಿತವಾದ ಯುಗದ ಸತ್ವಕ್ಕೆ ಹೆಚ್ಚು ಸಮೀಪವಾಗಿದೆ – ಎಂಬ ಮಾತು ವಿಮರ್ಶಿಸಬೇಕಾದದ್ದು”.[27] “ಆದರೆ ನಿಜವಾದ ಮಹಾಕಾವ್ಯ, ಅದು ಅಧಿಕೃತ ಮಹಾಕಾವ್ಯವೋ, ಸಾಹಿತ್ಯಕ ಮಹಾಕಾವ್ಯವೋ ಹೆಚ್ಚು ಕಡಿಮೆ, ತಾನು ರಚಿತವಾದ ಕಾಲದ ಸತ್ವದಿಂದಲೇ ಉದ್ಭವಿಸಿದ್ದು.”[28] ಯಾವ ನಿಜವಾದ ಕಾವ್ಯವನ್ನೂ ಅದು ರಚಿತವಾದ ಕಾಲದ ಹಿನ್ನೆಲೆಯಿಂದ ಪ್ರತ್ಯೇಕಿಸಿ ನೋಡಲಾಗುವುದಿಲ್ಲ; ಅಷ್ಟರ ಮಟ್ಟಿಗೆ ಅದು ತನ್ನ ಕಾಲದ ಸತ್ವದಿಂದ ಬದ್ಧವಾಗಿರುತ್ತದೆ. ಅಷ್ಟೇ ಅಲ್ಲ, ಇತ್ತೀಚಿನ (Later) ಮಹಾಕಾವ್ಯಗಳನ್ನು ಬರೆದವರೂ ಸಹ ಒಂದು ಪರಂಪರೆಯ ಹಿನ್ನೆಲೆಯಿಂದ ಪುಷ್ಟರಾದವರೇ; ತಾವು ಯಾವ ಒಂದು ಪರಂಪರೆಯಲ್ಲಿ ನಿಂತು ಬರೆಯುತಿದ್ದೇವೆ ಎಂಬುದನ್ನು ಅವರು ಅರಿತವರಾಗಿರುತ್ತಾರೆ. ಈ ಕವಿಗಳು ಕಾವ್ಯಾರಂಭಗಳಲ್ಲಿ ಮಾಡುವ ಪೂರ್ವ ಕವಿ ಪ್ರಶಂಸೆ, ಹಾಗೂ ಸ್ತುತಿಗಳಲ್ಲಿ ಮತ್ತು ಆ ಪೂರ್ವಕೃತಿಗಳ ಕಾವ್ಯಕ್ಕೆ ಬಹುಮಟ್ಟಿಗೆ ಅಥವಾ ಆಂಶಿಕವಾಗಿ ಅವರು ಋಣಿಯಾಗಿರುವುದರಲ್ಲಿಯೂ ಇದನ್ನು ಗುರುತಿಸಬಹುದು ಮತ್ತು ಮೂಲಕೃತಿಗಳ ಎಷ್ಟೋ ಅಸಾಂಗತ್ಯಗಳನ್ನು, ಇವರು ತಮ್ಮ ಕೃತಿಗಳಲ್ಲಿ ಪರಿಷ್ಕರಿಸಿ, ಅದಕ್ಕೆ ಹೊಸ ಅರ್ಥವಂತಿಕೆಯನ್ನು ತುಂಬುತ್ತಾರೆ. ಹಾಗೆ ನೋಡಿದರೆ, ಈ ಎರಡೂ ಬಗೆಯ ಕೃತಿಗಳಲ್ಲಿ, ಯಾವುದೊಂದನ್ನು ಎತ್ತಿಹಿಡಿಯುವುದೂ ಅನಗತ್ಯ; ಯಾಕೆಂದರೆ ಈ ಎರಡೂ ಬಗೆಯ ಕಾವ್ಯಗಳು, ಅಂದಂದಿನ ಕಾಲದ ಕವಿಗಳ ಅಭಿವ್ಯಕ್ತಿಗಳೇ.

ಆದರೂ, ಇತ್ತೀಚಿನ, ಸಾಹಿತ್ಯಕ ಮಹಾಕಾವ್ಯ (Literary Epic)ವನ್ನು ಮೊದಲ ಮಹಾಕಾವ್ಯ (Primitive Epic) ಗಳಿಗೆ ಹೋಲಿಸಿ ಕೀಳ್ಗಳೆದು ನೋಡಿರುವ ಪ್ರವೃತ್ತಿಗಳೂ ಉಂಟು. ರವೀಂದ್ರನಾಥ ಟಾಗೂರರಂಥ ಕವಿಗಳೆ, “ಮಿಲ್ಟನ್ ಕವಿಯ ‘ಪ್ಯಾರಡೈಸ್ಟ್ ಲಾಸ್ಟ್’ನಲ್ಲಿ ಭಾಷೆಯ ಗಾಂಭೀರ್ಯವೂ, ಛಂದಸ್ಸಿನ ಮಹಾತ್ಮ್ಯವೂ, ರಸದ ಗಂಭೀರತೆಯೂ ಬೇಕಾದಷ್ಟು ಇವೆ, ಆದರೆ ಅದು ದೇಶದ ಧನವಲ್ಲ; ಅದೇನಿದ್ದರೂ ಲೈಬ್ರರಿಯ ಆದರದ ಸಾಮಗ್ರಿ”[29] – ಎನ್ನುತ್ತಾರೆ. ಈ ಮಾತು ಪ್ರಾಚೀನ ಮಹಾಕಾವ್ಯಗಳ ಬಗೆಗಿರುವ ಪಕ್ಷಪಾತವನ್ನೂ, ಇತ್ತೀಚಿನ ಮಹಾಕಾವ್ಯಗಳ ಬಗೆಗಿರುವ ಪೂರ್ವಾಗ್ರಹವನ್ನೂ ಒಟ್ಟಿಗೇ ಸೂಚಿಸುತ್ತದೆ. ನಿಜ, ಹಿಂದಿನ ಮಹಾಕಾವ್ಯಗಳಂತೆ, ಇತ್ತೀಚಿನ ಕಾವ್ಯಗಳು ಜನಪ್ರಿಯವಾಗದಿರಬಹುದು; ವ್ಯಕ್ತಿನಿಷ್ಠವಾಗಿರಬಹುದು. ಆದರೆ ಇಷ್ಟರಿಂದಲೇ ವ್ಯಾಸ, ವಾಲ್ಮೀಕಿ, ಹೋಮರ್ ಇವರೇ ಕವಿಗಳು, ಇವರು ಬರೆದದ್ದೇ ನಿಜವಾದ ಮಹಾಕಾವ್ಯ, ಅವರನ್ನು ಬಿಟ್ಟರೆ ಇನ್ನುಳಿದವರು ಏನನ್ನೂ ಬರೆದಿಲ್ಲ, ಬರೆದಿದ್ದರೂ ಅವು ಏನೇನೂ ಅಲ್ಲ ಎಂಬ ಧೋರಣೆ ಸಮರ್ಪಕವಾದದ್ದಲ್ಲ.

ಮಹಾಕವಿಗಳು ಎಂದೋ ಆಗಿಹೋಗಿಲ್ಲ; ಮಹಾಕಾವ್ಯಗಳ ರಚನೆ ಎಂದೋ ಮುಗಿದುಹೋಗಿಲ್ಲ. ಪ್ರಾಚೀನ ಮಹಾಕಾವ್ಯಗಳನ್ನು ಮೀರಿಸುವ ಕೃತಿಗಳು ರಚಿತವಾಗಿಲ್ಲ ಎನ್ನುವುದು ನಿಜವಾದರೂ, ಅವುಗಳಿಂದ ಭಿನ್ನವಾದ ಹೊಸದೃಷ್ಟಿಯನ್ನು ತಂತ್ರ ಕೌಶಲಗಳನ್ನೂ, ಪ್ರಕಟಿಸುವ ಮಹಾಕಾವ್ಯಗಳು ಈಚೆಗೆ ರಚಿತವಾಗಿವೆ ಎಂಬುದನ್ನು ಮರೆಯಬಾರದು. ಮಹಾಕಾವ್ಯ ‘ಅಧಿಕೃತ’ವೋ, ‘ಸಾಹಿತ್ಯಕ’ವೋ, ‘ಪ್ರಾಚೀನ’ವೋ, ಅವುಗಳಲ್ಲಿ ವ್ಯಕ್ತವಾಗಿರುವುದು ಆಯಾ ಯುಗದ ಸಮಷ್ಟಿ ಪ್ರಜ್ಞೆಯೇ; ಈ ಮಹಾಕಾವ್ಯಗಳಲ್ಲಿಯೂ ಕವಿ ಒಬ್ಬ ವ್ಯಕ್ತಿಯಂತೆ ಪ್ರತ್ಯೇಕವಾಗಿ ಕಾಣಿಸಿದರೂ, ಅವನು ತನ್ನ ಹಿಂದಿರುವ ಪರಂಪರೆಯ ಹಾಗೂ ಜನಾಂಗ ಸ್ಮೃತಿಯ ಅವಿಭಾಜ್ಯವಾದ ಅಂಗವೂ ಮತ್ತು ಅದರ ಒಂದು ಮಾಧ್ಯಮವೂ ಆಗಿದ್ದಾನೆ. ಆದುದರಿಂದ ಮಹಾಕಾವ್ಯಗಳನ್ನು ಹೀಗೆ ‘ಅಧಿಕೃತ’, ‘ಸಾಹಿತ್ಯಕ’ ಇತ್ಯಾದಿಯಾಗಿ ವಿಭಜಿಸಿ ನೋಡುವುದು ಅಭ್ಯಾಸದ ಅನುಕೂಲಕ್ಕೇ ಹೊರತು, ಒಂದು ಮತ್ತೊಂದಕ್ಕಿಂತ, ಮೇಲು ಅಥವಾ ಕೀಳು ಎಂದು ವಿವಾದ ಮಾಡುವುದಕ್ಕಲ್ಲ. ಮಹಾಕಾವ್ಯ ಅದು ಯಾವ ಒಂದು ವಿಭಜನೆ ಅಥವಾ ವರ್ಗಕ್ಕೆ ಸೇರಿರಲಿ ಮುಖ್ಯವಾಗಿ ಅದೊಂದು ಕಲಾಕೃತಿಯಾಗಿದೆಯೇ, ಇಲ್ಲವೆ ಎಂಬುದನ್ನು ನೋಡಬೇಕು.


[1] ಟಿ.ಎಸ್. ವೆಂಕಣ್ಣಯ್ಯ : ಪ್ರಾಚೀನ ಸಾಹಿತ್ಯ (ಮೂಲ, ರವೀಂದ್ರನಾಥ ಟಾಗೂರ್) ಪು. ೧

[2] ಅಲ್ಲೇ. ಪು. ೧

[3] ಎಲ್.ಎಸ್. ಶೇಷಗಿರಿರಾವ್ : ಇಲಿಯಡ್, ಮುನ್ನುಡಿ ಪು. ೨, ೩

[4] ಟಿ.ಎಸ್. ವೆಂಕಣ್ಣಯ್ಯ. ಪ್ರಾಚೀನ ಸಾಹಿತ್ಯ. ಪು. ೧

[5] A.D. Pusalkar. Studies in Epics Puranas of India. Introduction p. ii

[6] ಯುಗಯಾತ್ರೀ ಭಾರತೀಯ ಸಂಸ್ಕೃತಿ : ಪು. ೧೦, ೧೧, (ಎರಡನೆಯ ಸಂಪುಟ) (೩)

[7] ಯುಗಯಾತ್ರೀ ಭಾರತೀಯ ಸಂಸ್ಕೃತಿ : ರಾಮಾಯಣದ ಚರಿತ್ರೆ ಮತ್ತು ಸ್ವರೂಪ : ಪು. ೧೨

[8] ಅಲ್ಲೇ. ಮಹಾಭಾರತ : ಚರಿತ್ರೆ ಮತ್ತು ಸ್ವರೂಪ, ಪು. ೪೪

[9] ಎಸ್.ಆರ್. ರಾಮಸ್ವಾಮಿ : ಮಹಾಭಾರತದ ಬೆಳವಣಿಗೆ : ಪು. ೩೨

[10] ಎಲ್.ಎಸ್. ಶೇಷಗಿರಿರಾವ್ : ಇಲಿಯಡ್, ಮುನ್ನುಡಿ. ಪುಟ ೪

[11] K.R. Sreenivasa Iyengar : The Adventure of criticism. p. 65

[12] ಯುಗಯಾತ್ರಿ ಭಾರತೀಯ ಸಂಸ್ಕೃತಿ, ಮಹಾಭಾರತ : ಚರಿತ್ರೆ ಮತ್ತು ಸ್ವರೂಪ. ಪು. ೪

[13] ಟಿ.ಎಸ್. ವೆಂಕಣ್ಣಯ್ಯ : ಪ್ರಾಚೀನ ಸಾಹಿತ್ಯ (ರವೀಂದ್ರನಾಥ ಟ್ಯಾಗೂರ್) ಪು. ೪೧

[14] ಅಲ್ಲೇ. ಪು. ೧

[15] ಎಲ್.ಎಸ್. ಶೇಷಗಿರಾವ್ : ಇಲಿಯಡ್ : ಮುನ್ನುಡಿ ಪು. ೨

[16] Paul Merchant : The Epic p. 5

[17] K.R. Sreenivasa Iyengar : The Adventure of Criticism. p. 76

[18] ಪ್ರಭುಶಂಕರ : ಭಾವಗೀತೆ. ಪು. ೩

[19] ಎಲ್.ಎಸ್. ಶೇಷಗಿರಿರಾವ್ : ಇಲಿಯಡ್., ಮುನ್ನುಡಿ. ಪು. ೫

[20] K.R. Sreenivasa Iyengar : The Adventure of Criticism. p. ೭೬

[21] ಸಾಹಿತ್ಯ : ರವೀಂದ್ರನಾಥ ಟ್ಯಾಗೂರ್ : ಅನು. ಎ.ಎನ್. ನರಸಿಂಹಯ್ಯ. ಪು. ೭೧-೭೬

[22] ಮಾಸ್ತಿ ವೆಂಕಟೇಶ ಅಯ್ಯಂಗಾರ್ : ಆದಿಕವಿ ವಾಲ್ಮೀಕಿ. ಪು. ೯

[23] ಎಲ್.ಎಸ್. ಶೇಷಗಿರಿರಾವ್ : ಇಲಿಯಡ್. ಮುನ್ನುಡಿ. ಪು. ೫

[24] C.M. Bowra : From vergil to Milton p. 1

[25] K.R. Sreenivasa Iyangar : Introduction to the study of English Literature. p. 27

[26] C.M. Bowra. From vergil to Milton : p. 16

[27] K.R. Sreenivasa Iyengar : Introduction to the Study of English Literature p. 126

[28] K.R. Sreenivasa Iyengar : The Advernture of Criticism p. 78

[29] ಟಿ.ಎಸ್. ವೆಂಕಣ್ಣಯ್ಯ : ಪ್ರಾಚೀನ ಸಾಹಿತ್ಯ (ಮೂಲ – ರವೀಂದ್ರನಾಥ ಟ್ಯಾಗೂರ್) ಪು. ೨