ವೀರಕಾವ್ಯ (Heroic Poetry)

“ಗ್ರೀಕ್ ತತ್ವಜ್ಞಾನಿಗಳು ಮಾನವ ವರ್ಗವನ್ನು ಮೂರು ದರ್ಜೆಗಳನ್ನಾಗಿ ವಿಂಗಡಿಸಿದಾಗ, ಯಾರು ತಮ್ಮ ಆತ್ಮಗೌರವಕ್ಕಾಗಿ ಹೋರಾಡಿ ನಿರಂತರವಾಗಿ ಮೇಲೆದ್ದು ನಿಲ್ಲುತ್ತಿದ್ದರೋ ಅವರನ್ನು ವಿಶಿಷ್ಟವರ್ಗಕ್ಕೆ ಸೇರಿದವರೆಂದು ತೀರ್ಮಾನಿಸಿದರು. ದೈನಂದಿನ ಇಂದ್ರಿಯ ಲೋಲುಪ ಸಾಧಾರಣ ವ್ಯಕ್ತಿಗಳಿಗಿಂತ, ಯಾರು ಆತ್ಮಗೌರವಕ್ಕಾಗಿ ಹೋರಾಡುತ್ತಾರೋ ಅವರೇ ನಿಜವಾಗಿಯೂ ಶ್ರೇಷ್ಠರು ಎಂಬ ಭಾವನೆ ಬೆಳೆಯಿತು. ಹೀಗೆ ಮಹಿಮಾಶಾಲಿಗಳಾಗಿ ಬದುಕಿದವರು ಹೇಗೆ ದೊಡ್ಡವರೋ, ಹಾಗೆಯೆ ಆತ್ಮಗೌರವಕ್ಕಾಗಿ ಹೋರಾಡಿ ಮಡಿದವರೂ ಮಿಗಿಲಾದ ಪ್ರಶಂಸೆಗೆ ಅರ್ಹರೆಂದು ಭಾವಿಸಲಾಯಿತು. ಇಂತಹ ವೀರರನ್ನು ಕುರಿತ ಕಥನ ಕಾವ್ಯವೇ ‘ವೀರಕಾವ್ಯ’ ಎಂದು ಕರೆಯಿಸಿಕೊಳ್ಳುತ್ತದೆ. ಈ ವೀರಕಾವ್ಯ ವಸ್ತುನಿಷ್ಠ, ಕಥನಾತ್ಮಕ, ಮತ್ತು ನಾಟ್ಯಾತ್ಮಕ.”[1]

ವೀರಕಾವ್ಯ ಮುಖ್ಯವಾಗಿ ಒಬ್ಬ ವೀರನ ಸುತ್ತ ಹೆಣೆದ ಕಾವ್ಯ. ವೀರ ಜೀವನವನ್ನು ಚಿತ್ರಿಸುವ, ವೀರ ಭಾವವನ್ನು ಸ್ಥಾಯಿಯನ್ನಾಗಿ ಉಳ್ಳ ಕಥನಕಾವ್ಯ. ಹೀಗೆಂದರೆ ಮಹಾಕಾವ್ಯ ಅಥವಾ Epic ನಲ್ಲಿರುವ ಮುಖ್ಯವಾದ ಲಕ್ಷಣವನ್ನು ಹೇಳಿದಂತಾಯಿತೇ ಹೊರತು, Epic ದಿಂದ Heroic Poetry ಯಾವ ರೀತಿಯಲ್ಲಿ ಭಿನ್ನ ಎಂಬುದನ್ನು ಹೇಳಿದಂತಾಗಲಿಲ್ಲ. ‘Heroic Poetry’ ಎಂಬ ಗ್ರಂಥವನ್ನು ಬರೆದ, ಸಿ. ಎಂ. ಬೌರಾ ಅವರ ಮಾತುಗಳೂ ಮಹುಮಟ್ಟಿಗೆ ಇದೇ ಅಭಿಪ್ರಾಯವನ್ನು ಎತ್ತಿಹಿಡಿಯುತ್ತವೆ. ಮಹಾಕಾವ್ಯ (Epic) ಮತ್ತು ವೀರಕಾವ್ಯ (Heroic poetry) ಇವೆರಡೂ, ಅವು ಆರಿಸಿಕೊಳ್ಳುವ ವಸ್ತು, ನಾಯಕ ಲಕ್ಷಣ, ಇತ್ಯಾದಿಗಳಲ್ಲಿ ಒಂದೇ ರೀತಿಯವೆಂಬಂತೆ ತೋರಿದರೂ, ಟಿಲ್‌ಯಾರ್ಡ್ ಎಂಬ ವಿಮರ್ಶಕ ಮಾತ್ರ “ಇವೆರಡರ ನಡುವಣ ಗೊಂದಲದಿಂದ ಪಾರಾಗಬೇಕಾದರೆ, ಖಂಡಿತವಾಗಿಯೂ ಇವೆರಡರ ನಡುವಣ ಗೆರೆಯೇನೆಂಬುದನ್ನು ಕಂಡುಕೊಳ್ಳಬೇಕು”[2] ಎನ್ನುತ್ತಾನೆ. ಬಹುಶಃ ‘ಮಹಾಕಾವ್ಯ’ಕ್ಕಿಂತ ‘ವೀರಕಾವ್ಯ’ಗಳು ಕಡಮೆಯ ಗಾತ್ರದವುಗಳೆಂದು ಹೇಳಬಹುದೇನೋ, ಅಥವಾ ಕೇವಲ ವೀರರಸ ಪ್ರಧಾನವಾದ ಕಾವ್ಯಗಳನ್ನು ‘ವೀರಕಾವ್ಯ’ಗಳೆನ್ನಬಹುದೇನೋ – ಹೇಳುವುದು ಕಷ್ಟ. ಆದರೆ ನಾವು ಯಾವುದನ್ನು ಮಹಾಕಾವ್ಯವೆನ್ನುತ್ತೇವೋ ಅದರಲ್ಲಿ, ವೀರವೊಂದೇ ಅಲ್ಲದೆ, ಇನ್ನಿತರ ಅಂಶಗಳೂ ಸಮಾವೇಶವಾಗುತ್ತವೆ, ಮತ್ತು ಅದರಲ್ಲಿ ಒಂದು ಜನಾಂಗಿಕ ಪ್ರಜ್ಞೆ ಪ್ರಧಾನವಾಗಿರುತ್ತದೆ. ಕವಿ ರವೀಂದ್ರರು ಈ ಗೊಂದಲಕ್ಕೆ ತುಂಬ ಒಳ್ಳೆಯ ಪರಿಹಾರವನ್ನು ಸೂಚಿಸುತ್ತಾರೆ : “ಯಾವ ದೇಶದಲ್ಲಿ ಯಾವ ಕಾಲದಲ್ಲಿ ವೀರರಸದ ಗೌರವವು ಪ್ರಾಧಾನ್ಯವನ್ನು ಹೊಂದುತ್ತದೆಯೋ ಆ ದೇಶದಲ್ಲಿ ಆ ಕಾಲದಲ್ಲಿ ಸ್ವಾಭಾವಿಕವಾಗಿ ‘ಎಪಿಕ್’ ಕಾವ್ಯವು ವೀರರಸ ಪ್ರಧಾನವಾದುದಾಗಿ ಪರಿಣಮಿಸುತ್ತದೆ”[3] ಎನ್ನುತ್ತಾರೆ. ಈ ಮಾತಿನ ಯಥಾರ್ಥತೆಯನ್ನರಿಯಬೇಕಾದರೆ, ಪಂಪನ ‘ವಿಕ್ರಮಾರ್ಜುನ ವಿಜಯ’ವನ್ನೂ, ಕುಮಾರವ್ಯಾಸ ಭಾರತವನ್ನೂ ಹೋಲಿಸಿ ನೋಡಬಹುದು. ಈ ಎರಡೂ ಪ್ರಧಾನವಾಗಿ ‘ಮಹಾಕಾವ್ಯ’ಗಳೇ. ಆದರೆ ವೀರರಸದ ಗೌರವವು ಪ್ರಧಾನವಾದ ಹತ್ತನೆಯ ಶತಮಾನದಲ್ಲಿ ರಚಿತವಾದ ಪಂಪನ ಕಾವ್ಯ, ‘ವೀರಕಾವ್ಯ’ವೆಂದು ಅನ್ನಿಸಿಕೊಳ್ಳಲು ಯೋಗ್ಯವಾಗಿದ್ದರೆ, ಭಕ್ತಿಪ್ರಧಾನವಾದ ಕಾಲದಲ್ಲಿ ರಚಿತವಾದ, ಅದೇ ಮಹಾಭಾರತದ ವಸ್ತುವನ್ನಾಗಿಸಿಕೊಂಡ ಕುಮಾರವ್ಯಾಸ ಭಾರತವು ‘ವೀರಕಾವ್ಯ’ ವಾಗುವುದಿಲ್ಲ. ಆದರೆ ವಾಸ್ತವವಾಗಿ ಅವು ಕನ್ನಡದ ಮಹಾಕಾವ್ಯಗಳೆಂಬುದರಲ್ಲಿ ಸಂಶಯವಿಲ್ಲ. ಆದುದರಿಂದ ಮಹಾಕಾವ್ಯವೇ, ವೀರರಸ ಪ್ರಧಾನವಾದ ಕಾಲಗಳಲ್ಲಿ, ವೀರಕಾವ್ಯವಾಗುತ್ತದೆ, ಉಳಿದಂತೆ, ‘ವೀರ’ ಎಂಬುದು ಮಹಾಕಾವ್ಯದ ಒಂದು ಮುಖ್ಯವಾದ ಅಂಗವಾಗಿ ಬರುತ್ತದೆ ಎಂದು ಭಾವಿಸುವುದು ಉಚಿತ.

ಕ್ಲಾಸಿಕ್ : (Classic)

‘ಕ್ಲಾಸಿಕ್’ ಎಂಬುದಕ್ಕೆ, ಮಹಾಕಾತಿ, ಮಾರ್ಗಕಾವ್ಯ, ಮಹಾಧ್ವಕೃತಿ ಎಂಬ ಪದಗಳನ್ನು ಸೂಚಿಸಿದ್ದೇವೆ. ಆದರೆ ಇಂಗ್ಲಿಷಿನ ಕ್ಲಾಸಿಕ್ ಎಂಬ ಮಾತಿನ ಎಲ್ಲ ಅರ್ಥವನ್ನು, ಈ ಸಂವಾದಿ ಪದಗಳು ಸೂಚಿಸಲಾರವು. ಇಂಗ್ಲಿಷಿನಲ್ಲೇ ಕ್ಲಾಸಿಕ್ ಎಂಬ ಪದಕ್ಕೆ ಒಂದಕ್ಕಿಂಥ ಹೆಚ್ಚು ಅರ್ಥಗಳಿವೆ.

ಮೂಲತಃ ಕ್ಲಾಸಿಕ್ ಎಂದರೆ “ಪ್ರಪ್ರಥಮ ದರ್ಜೆಯ ಸಾಹಿತ್ಯ ಕೃತಿ”[4] ಎಂದು ಅರ್ಥ. “ಯಾವ ಕೃತಿ ಎಲ್ಲ ಕಾಲಕ್ಕೂ ಸಲ್ಲುವ ಸಾಮರ್ಥ್ಯವನ್ನೂ, ಸ್ಥಿರತೆಯನ್ನೂ ಪಡೆದಿದೆಯೋ ಅದು ಕ್ಲಾಸಿಕ್”.[5] ಆದರೆ ಇತ್ತೀಚೆಗೆ ರೊಮ್ಯಾಂಟಿಕ್ ಚಳುವಳಿಯ ಕಾಲಕ್ಕೆ, ‘ಕ್ಲಾಸಿಕ್’ ಎಂಬುದಕ್ಕೆ, ರೊಮ್ಯಾಂಟಿಕ್ ಮಾದರಿಯ ಬರವಣಿಗೆಗೆ ವ್ಯತಿರಿಕ್ತವಾದ ಒಂದು ಬರವಣಿಗೆ ಎಂಬ ಅರ್ಥ ಬಂದಿದೆ. ರೊಮ್ಯಾಂಟಿಕ್ ಸಾಹಿತ್ಯ ಚಳುವಳಿಯ ಕಣ್ಣಿಗೆ, ಕ್ಲಾಸಿಕ್ ಮಾದರಿಯ ಬರವಣಿಗೆ ಒಂದು ರೀತಿಯಲ್ಲಿ ಆದರ್ಶಮಯವೂ, ಅವಾಸ್ತವವೂ, ಅಸಹಜವೂ ಎಂಬಂತೆ ತೋರಿದೆ. ಆದುದರಿಂದ ‘ಕ್ಲಾಸಿಕ್’ ಎಂಬ ಪದವನ್ನು ಮೊದಲು, ರೊಮ್ಯಾಂಟಿಕ್‌ಗೆ ವಿರೋಧಿಯಾದದ್ದು ಎಂಬ ನಿಲುವಿನಿಂದ ಬಿಡಿಸಿಕೊಂಡು ಬೇರೆಯಾಗಿ ನೋಡುವುದೊಂದೇ ಮಾರ್ಗ. ಈಚೀಚೆಗೆ “ರೊಮ್ಯಾಂಟಿಕ್ ಮತ್ತು ಕ್ಲಾಸಿಕ್ ಈ ಪದಗಳು ಸಾಹಿತ್ಯ ರಾಜಕೀಯದ ಪದಗಳಾಗಿ ಬಿಟ್ಟಿವೆ.”[6] ಈ ದೃಷ್ಟಿಯಿಂದ ಟಿ.ಎಸ್. ಇಲಿಯಟ್ ಕ್ಲಾಸಿಕ್ ಅನ್ನು ಕುರಿತು ಹೇಳುವ ಮಾತುಗಳು ತೀರಾ ಗಮನಾರ್ಹವಾಗಿವೆ:

“ಕ್ಲಾಸಿಕ್ ಎಂಬುದನ್ನು ನಿಷ್ಕರ್ಷೆಯಾಗಿ ಹೇಳಲು ನನಗೆ ತೋರುವ ಒಂದೇ ಒಂದು ಪದವೆಂದರೆ ‘ಪರಿಣತಿ’ (maturity)[7] ಎನ್ನುತ್ತಾನೆ ಇಲಿಯೆಟ್. “ಅಲ್ಲದೆ, ಈ ಕ್ಲಾಸಿಕ್ ಮಾದರಿಯ ಬರವಣಿಗೆ ಒಂದು ನಾಗರಿಕತೆಯ ಪರಿಣತಾವಸ್ಥೆಯಲ್ಲಿ ಮಾತ್ರ ಸಂಭವಿಸಬಲ್ಲದು; ಹಾಗೆಯೆ ಯಾವ ಕಾಲದ ಭಾಷೆ, ಸಾಹಿತ್ಯಗಳು ಪರಿಣತಿಯನ್ನು ತಲುಪಿವೆಯೋ ಅಂಥ ಕಾಲದಲ್ಲಿ, ಅದೂ ಪರಿಣತಿಯನ್ನು ಪಡೆದ ಮನಸ್ಸಿನಿಂದ ಹುಟ್ಟುತ್ತದೆ”[8]. ಎಂದರೆ ‘ಕ್ಲಾಸಿಕ್’ ಎಂಬುದು ಒಂದು ಕಾಲದ ಪರಿಣತ ಪ್ರಜ್ಞೆಯ ಅಭಿವ್ಯಕ್ತಿ. ಪರಿಪೂರ್ಣವಾದ ಕ್ಲಾಸಿಕ್ ಅಥವಾ ಮಹಾಕೃತಿಯು ಒಂದು ಕಾಲದ ಇಡೀ ಜನಾಂಗದ ಶಕ್ತಿ ಸಾಮರ್ಥ್ಯಗಳ ಗಣಿ; ಅದರ ಭಾಷೆಯಲ್ಲಿ ಪ್ರಕಟವಾಗುವ ಕವಿಯ ಪರಿಣತಿಯೂ ಅಸಾಧಾರಣವಾದದ್ದು. ಈ ಅಸಾಧಾರಣತೆ ಎಷ್ಟರ ಮಟ್ಟಿನದೆಂದರೆ, ಇಂಥ ಕವಿಯಿಂದ ಒಮ್ಮೆ ಪರಿಣತ ಪ್ರಜ್ಞೆಯ ಕೃತಿಯೊಂದು ರಚಿತವಾಯಿತೆಂದರೆ, ಮುಂದಿನ ಕವಿಗಳ ಪಾಲಿಗೆ ಅದೊಂದು ಬೀಳುಗಾಲವಾಗುತ್ತದೆ; ಅವರು, ಈ ಮಹಾಕವಿಯನ್ನು ಅನುಕರಿಸಬೇಕು; ಇಲ್ಲವೆ ಬೇರೊಂದು ಹೊಸ ಹಾದಿಯನ್ನು ಹುಡುಕಬೇಕು. ಹೀಗಾಗಿ ಮಹಾಕೃತಿಯೊಂದು, ತನ್ನ ಕಾಲದ ಪ್ರಜ್ಞೆಯ ಹಾಗೂ ಭಾಷೆಯ ಸಾಧ್ಯತೆಗಳನ್ನೆಲ್ಲ ಸೂರೆಮಾಡಿದ ಮೇಲೆ, ಸಾಹಿತ್ಯದಲ್ಲಿ ಅಂಥ ಕವಿಯ ತತ್‌ಕ್ಷಣದ ಮುಂದಿನ ಕಾಲ ಬೀಳುಗಾಲವಾಗುವುದು ತೀರಾ ಸಹಜವಾಗಿದೆ. ಕನ್ನಡ ಸಾಹಿತ್ಯದಲ್ಲಿ ಪಂಪನಂಥ ಕವಿ ಬರೆದ ಮೇಲೆ, ಮುಂದಿನ ಹನ್ನೊಂದನೆಯ ಶತಮಾನ, ಮತ್ತು ಹನ್ನೆರಡನೆಯ ಶತಮಾನದ ವಚನಕಾರರ, ಹರಿಹರ ರಾಘವಾಂಕರ ಕಾಲವಾದ ಮೇಲೆ, ಹದಿಮೂರನೆಯ ಹಾಗೂ ಹದಿನಾಲ್ಕನೆಯ ಶತಮಾನಗಳು ಯಾಕೆ ಬೀಳುಗಾಲಗಳಾಗಿವೆ ಎಂಬುದನ್ನು ಹೇಳಬೇಕಾಗಿಲ್ಲ. ಅಂದರೆ ಒಂದು ಕಾಲದ ಸತ್ವ ಸಾಮರ್ಥ್ಯಗಳು, ‘ಪರಿಣತಮತಿ’ಗಳಾದ ಅನೇಕ ಕವಿಗಳಿಂದ ಅಭಿವ್ಯಕ್ತಗೊಂಡ ಮೇಲೆ, ಮತ್ತೆ ಆ ಕಾಲ ಪರಿಣತಿಯನ್ನು ಪಡೆಯುವ ಮಧ್ಯಂತರದ ಕಾಲ ಬೀಳುಗಾಲವಾಗುವುದು ಸಹಜ. ಟಿ.ಎಸ್. ಇಲಿಯಟ್ ಕ್ಲಾಸಿಕ್ ಅನ್ನು ಕುರಿತು ಚರ್ಚಿಸುವಾಗ ಹೇಳಿರುವ ಅನೇಕ ವಿಷಯಗಳು, ತೀರಾ ಹೊಸವು ಮಾತ್ರವಲ್ಲ, ಅರ್ಥಪೂರ್ಣವೂ ಆಗಿ ಸಾಹಿತ್ಯ ಚರಿತ್ರೆಯ ಅಭ್ಯಾಸಕ್ಕೆ ಕೀಲಿ ಕೈಗಳಂತೆ ಇವೆ. ಇಲಿಯಟ್  ಹೇಳುತ್ತಾನೆ, ‘ಪರಿಣತ ಪ್ರಜ್ಞೆ’ಯನ್ನು ಪಡೆದ ಕವಿ, ಯಾವಾಗಲೂ, ಆ ಕಾಲದ ಪರಿಣತಿಯ ಪ್ರತಿನಿಧಿಯಾಗಿರುತ್ತಾನೆಂದು ಹೇಳಲು ಬಾರದು. ತೀರಾ ಪರಿಣತ ಪ್ರಜ್ಞೆಯ ಕವಿ, ಪರಿಣತಿಯನ್ನು ಪಡೆಯದ ಕಾಲದಲ್ಲಿ ಇದ್ದಿರುವ ಸಾಧ್ಯತೆ ಇದೆ; ಯಾವಾಗ, ತನ್ನ ಕಾಲದ ಜನ, ನಾಗರಿಕತೆ, ಹಾಗೂ ಭಾಷೆಗಳೂ ಪರಿಣತಿಯನ್ನು ಪಡೆದಿರುತ್ತವೋ ಅಂಥ ಕಾಲದ ಪರಿಣತ ಪ್ರಜ್ಞೆಯ ಕವಿಗೆ, ನಿಜವಾಗಿಯೂ ಅತ್ಯುತ್ತಮವಾದ ಕೃತಿರಚನೆ ಮಾಡುವ ಅವಕಾಶ, ಅನುಕೂಲಗಳು ಹೆಚ್ಚಾಗಿರುತ್ತವೆ.[9] ಆದುದರಿಂದ ಕ್ಲಾಸಿಕ್‌ನ ಲಕ್ಷಣಗಳೆಂದರೆ ಇವು : “ಮನಸ್ಸಿನ ಪರಿಣತಿ, ನಡವಳಿಕೆಯ ಪರಿಣತಿ, ಭಾಷೆಯ ಪರಿಣತಿ, ಮತ್ತು ಸಾಮಾನ್ಯ ಭಾಷೆಗೆ ದೊರಕುವ ಪರಿಪೂರ್ಣತೆ”.[10] ಎಂದರೆ ಒಂದು ಮಹಾಕೃತಿ ಅಥವಾ ‘ಕ್ಲಾಸಿಕ್’ದಲ್ಲಿ ಕವಿಯ ಮನಸ್ಸಿನ ಪರಿಣತಿಯನ್ನೂ ಆ ಕಾಲದ ನಾಗರಿಕತೆಯ ಪರಿಣತಿಯನ್ನೂ, ಭಾಷೆಯ ಪರಿಣತಿಯನ್ನೂ ಮತ್ತು ಸಾಮಾನ್ಯ ಜನ ಭಾಷೆಯ ಪರಿಪೂರ್ಣಾವಸ್ಥೆಯನ್ನೂ ಗುರುತಿಸಬಹುದು. ಕ್ಲಾಸಿಕ್ ಅನ್ನುವುದರ ಬಹುಮುಖ್ಯವಾದ ಲಕ್ಷಣ ‘ಸಮಗ್ರತೆ’ (Comprahensiveness) ಎನ್ನುತ್ತಾನೆ ಇಲಿಯಟ್. ಅವನ ದೃಷ್ಟಿಯಲ್ಲಿ ವರ್ಜಿಲ್ ಕವಿಯೊಬ್ಬನೇ ‘ಕ್ಲಾಸಿಕ್’ ಅನ್ನಿಸಿಕೊಳ್ಳಲು ಅರ್ಹನಾದವನು. ಮಹಾಕಾವ್ಯವನ್ನು ಕುರಿತ ಚರ್ಚೆಗಳನ್ನೆಲ್ಲ ಪರಿಶೀಲಿಸಿದ ಮೇಲೆ, ಮಹಾಕಾವ್ಯವನ್ನು ಕುರಿತು ಇತರರು ಹೇಳಿರುವ ಲಕ್ಷಣಗಳನ್ನು ನೋಡಿದ ಮೇಲೆ, ಇಲಿಯಟ್‌ನ ಅಭಿಪ್ರಾಯದಲ್ಲಿ ಮಹಾಕಾವ್ಯ (Epic)ಗಳಿಗಿಂತಲೂ ಕ್ಲಾಸಿಕ್ ಎಂದು ಅವನು ಕರೆಯುವ ಕೃತಿ ಮಹತ್ತಾದುದೂ, ಬೇರೆಯಾದುದೂ ಎಂಬಂತೆ ಭಾಸವಾಗುತ್ತದೆ. ಕ್ಲಾಸಿಕ್‌ಗಳು ಮಹಾಕಾವ್ಯ (Epic)ಗಳೆಂಬುದು ನಿರ್ವಿವಾದವಾದರೂ. ‘ಮಹಾಕಾವ್ಯ’ಗಳೆಲ್ಲಾ ‘ಕ್ಲಾಸಿಕ್’ ಎಂದು ಕರೆಯಿಸಿಕೊಳ್ಳಲು ಅರ್ಹವಾಗಿವೆಯೆಂದು ಹೇಳಲು ಬರುವುದಿಲ್ಲ. ಬಹುಶಃ ನಮ್ಮಲ್ಲಿ ರಾಮಾಯಣ, ಮಹಾಭಾರತ ಇವೆರಡನ್ನು ಮಾತ್ರ ‘ಕ್ಲಾಸಿಕ್’ ಗಳೆಂದು ಕರೆಯಬಹುದು; ಇನ್ನುಳಿದವು ಬರಿಯ ‘ಮಹಾಕಾವ್ಯ’ (Epic) ಗಳಾಗುತ್ತವೆ. ಆದರೆ ‘ಕ್ಲಾಸಿಕ್’ ಎಂದರೆ ಯಾವುದೇ ಸಾಹಿತ್ಯದಲ್ಲಿ ಸಂಭವಿಸುವ ಪ್ರಪ್ರಥಮ ದರ್ಜೆಯ ಕೃತಿ ಎಂಬುದನ್ನು ಅಂಗೀಕರಿಸಿದರೆ. ಪ್ರಥಮ ದರ್ಜೆಯ ಮಹಾಕಾವ್ಯಗಳು ಕ್ಲಾಸಿಕ್ ಎನ್ನಿಸಿಕೊಳ್ಳುತ್ತವೆ; ಆದ್ದರಿಂದ ‘ಕ್ಲಾಸಿಕ್’ ಎನ್ನುವುದು ಮುಖ್ಯವಾಗಿ ‘ಮಹಾಕಾವ್ಯ’ದ ಆಂತರಿಕ ಸತ್ವವನ್ನು ಸೂಚಿಸುತ್ತದೆ ಎಂದು ಭಾವಿಸುವುದು ಉಚಿತ. ಯಾಕೆಂದರೆ ಇಲಿಯಟ್ ಹೇಳುವ ‘ಕ್ಲಾಸಿಕ್’ನ ಲಕ್ಷಣಗಳನ್ನು ಯಾವುದೇ ಭಾಷೆಯ ಪ್ರಥಮ ದರ್ಜೆಯ ಮಹಾಕಾವ್ಯದಲ್ಲಿ ಗುರುತಿಸುವುದು ಸಾಧ್ಯ.

ಮಹಾಕಾವ್ಯಕ್ಕೆ ಸಂವಾದಿಯಾಗಿ ಬಳಸಲಾದ ಮತ್ತೊಂದು ಪದ “Great Poetry” ಎಂಬುದು. ಅಬರ್ ಕ್ರೋಂಬಿ ಎಂಬ ವಿಮರ್ಶಕನ “The Idea of Great Poetry” ಯಲ್ಲಿ ಈ ಕಾವ್ಯದ ಲಕ್ಷಣಗಳನ್ನು ಕಾಣಬಹುದು. ಇದಕ್ಕೆ ಸಂವಾದಿಯಾಗಿ ‘ಮಹಾಕಾವ್ಯ’ ಎಂಬುದನ್ನಲ್ಲದೆ ಬೇರೆಯ ಪದವನ್ನು ಹುಡುಕುವುದು. ಕಷ್ಟ. “ಇಲ್ಲಿ  ‘Greatness’ ಅಥವಾ ಮಹತ್ತು ಎನ್ನುವುದು ಇಂಥ ಮಹಾಕಾವ್ಯಗಳಲ್ಲಿ ಹೇಗೋ ಗುರುತಿಸಬಹುದಾದ ಒಂದು ಗುಣ. ಕಾವ್ಯ, ಮಹತ್ ಆಗದೆಯೂ ಒಳ್ಳೆಯ ಕಾವ್ಯವೆನ್ನಿಸಿಕೊಳ್ಳಲು ಸಾಧ್ಯ”.[11] ನಮ್ಮವರು ಹೇಳಿದ ಸತ್ಕಾವ್ಯಗಳು ಇಂಥವು. ಅಬರ್ ಕ್ರೋಂಬಿ Great Poetry ಯನ್ನು ಕುರಿತು ಹೇಳುವ ಲಕ್ಷಣಗಳೆಲ್ಲ ಮಹಾಕಾವ್ಯ (Epioc) ವನ್ನು ಕುರಿತ ಲಕ್ಷಣಗಳನ್ನೇ ಹೋಲುತ್ತವೆ.

ಇದುವರೆಗಿನ ಪರಿಶೀಲನೆಯಿಂದ ಹೊರಡುವ ಸಾರಾಂಶ ಇದು : Epic. Heroic Poetry, Classic ಮತ್ತು Great Poetry ಇವುಗಳೆಲ್ಲ ಕಾವ್ಯದ ಬೇರೆಬೇರೆಯ ಪ್ರಕಾರಗಳಾಗಲಿ, ಮಹಾಕಾವ್ಯದ ಪ್ರಭೇದಗಳಾಗಲಿ ಅಲ್ಲ. ವಾಸ್ತವವಾಗಿ ಅವುಗಳು, ನಾವು ಯಾವುದನ್ನು ‘ಮಹಾಕಾವ್ಯ’ ಎಂದು ಕರೆಯುತ್ತೇವೆಯೋ ಅದನ್ನು ಕುರಿತ ಬೇರೆ ಬೇರೆಯ ಹೆಸರುಗಳು. ಈ ಪದಗಳೆಲ್ಲವೂ ಮಹಾಕಾವ್ಯದ ಲಕ್ಷಣವನ್ನೆ ವ್ಯಾಖ್ಯಾನಿಸುತ್ತವೆ. ನಿಜವಾದ ಮಹಾಕಾವ್ಯ ಏಕ ಕಾಲಕ್ಕೆ ಈ ಎಲ್ಲವೂ ಆಗಿರುತ್ತದೆ.

ಭಾರತೀಯರರು ಮಹಾಕಾವ್ಯವನ್ನು ಕುರಿತು ಚರ್ಚಿಸುವಾಗ, ಕಂಡುಬರುವ ನಾಲ್ಕು ಪದಗಳು ಇವು : ಪುರಾಣ, ಇತಿಹಾಸ, ಮಹಾಕಾವ್ಯ ಮತ್ತು ಪ್ರಬಂಧ. ಇವುಗಳಲ್ಲಿ ಮಹಾಕಾವ್ಯ ಮತ್ತು ಪ್ರಬಂಧಗಳು ಸಮಾನಾರ್ಥಕಗಳು. ಆದರೆ ಇತಿಹಾಸ ಮತ್ತು ಪುರಾಣಗಳ ನಡುವೆ ಇರುವ ವ್ಯತ್ಯಾಸ ತೀರಾ ಕಡಮೆ.

ಇತಿಹಾಸ – ಪುರಾಣಗಳಿಗೂ, ಮಹಾಕಾವ್ಯ – ಪ್ರಬಂಧಾದಿಗಳಿಗೂ ತೀರಾ ಹತ್ತಿರದ ಸಂಬಂಧವಿದೆ. ಮಹಾಕಾವ್ಯವೂ ತನ್ನ ವಸ್ತುವಿಗಾಗಿ ಇತಿಹಾಸ – ಪುರಾಣಗಳನ್ನೆ ಅವಲಂಬಿಸಿ ರಚಿತವಾಗಬೇಕು ಎಂದು ಲಾಕ್ಷಣಿಕರು ಹೇಳುತ್ತಾರೆ. ಇದರ ಜತೆಗೆ, ರಾಮಾಯಣ ಮಹಾಭಾರತಗಳು, ಏಕ ಕಾಲಕ್ಕೆ ಪುರಾಣವೂ, ಇತಿಹಾಸವೂ, ಆದ ಮಹಾಕಾವ್ಯಗಳಾಗಿವೆ ಎಂಬ ಪ್ರಶಂಸೆಗೆ ಪಾತ್ರವಾಗಿವೆ. ಎಂದರೆ, ಇತಿಹಾಸ, ಪುರಾಣ, ಮಹಾಕಾವ್ಯಗಳು ಸಮಾನಾರ್ಥಕಗಳೆಂದು ಇದರಿಂದ ಭಾಸವಾಗುತ್ತದೆ. ಆದರೆ ಈ ಎಲ್ಲವೂ ಸಮಾನಾರ್ಥಕಗಳೆಂದು ತೋರುವುದು ರಾಮಾಯಣ ಮಹಾಭಾರತಗಳನ್ನು ಕುರಿತು ಹೇಳುವಾಗ ಮಾತ್ರ; ಅವುಗಳಿಂದ ಪ್ರೇರಣೆ ಪಡೆದು ಅವುಗಳಿಂದಲೇ ವಸ್ತುವನ್ನೆತ್ತಿಕೊಂಡು ರಚಿತವಾದ ಇತರ ಮಹಾಕಾವ್ಯವನ್ನು ಕುರಿತಾಗ ಅಲ್ಲ.

ಈ ಕೆಲವು ಪದಗಳ ಅರ್ಥವ್ಯಾಪ್ತಿಯನ್ನು ಪರಿಷ್ಕಾರ ಮಾಡಿಕೊಳ್ಳುವುದು ಅಗತ್ಯ, ಇವುಗಳ ಪರಸ್ಪರ ಸಂಬಂಧಗಳನ್ನು ಕುರಿತ ವಿವರಣೆ ಹೀಗಿದೆ :

“ಭಾರತ ಇತಿಹಾಸ ವಾಙ್ಮಯ, ಇತಿಹಾಸ ಮತ್ತು ಪುರಾಣಗಳಿಂದಾಗಿದೆ.”[12] “ಪುರಾಣ ಎಂದರೆ ಹಳೆಯದು, ಪ್ರಾಯಶಃ ಯಾರೂ ಕಂಡು ಅರಿಯದ್ದು; ಹಿಂದಿನಿಂದ ಕೇಳಿ ಮಾತ್ರ ಬಂದದ್ದು, ಇತಿಹಾಸ ಎಂದರೆ (ಇತಿ ++ ಆಸ) ಹೀಗೆ ಇತ್ತಂತೆ, ಹೀಗೆ ನಡೆಯಿತಂತೆ ಎಂದು ಹೇಳುವ ಗ್ರಂಥ, ಹಿಂದಿನ ಚರಿತ್ರೆ. ಆದರೆ ಈಗಿನ ಕಾಲದಲ್ಲಿ ನಮಗೆ ಪರಿಚಿತವಾಗಿರುವಂಥ ಚರಿತ್ರೆಯಲ್ಲ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಅದರ ಲಕ್ಷಣವನ್ನು ಹೀಗೆ ಹೇಳಿದೆ : ಪುರಾಣಂ ಇತಿವೃತ್ತಂ ಆಖ್ಯಾಯಿಕೋದಾಹರಣಂ ಧರ್ಮಶಾಸ್ತ್ರಂ ಅರ್ಥಶಾಸ್ತ್ರಂ ಚೇತಿಹಾಸಃ (೧-೫). ಎಂದರೆ ಇತಿಹಾಸದಲ್ಲಿ ಪುರಾಣ ಚರಿತ್ರೆ ಕಥೆ ಉದಾಹರಣೆ ಧರ್ಮಶಾಸ್ತ್ರ ಅರ್ಥಶಾಸ್ತ್ರ ಎಲ್ಲಾ ಸೇರುತ್ತವೆ ಎಂದು ಅರ್ಥ”[13] “ಈ ಇತಿಹಾಸಗಳು ರಾಜಾಧಿರಾಜರ ಮತ್ತು ಧೀರರ ಸಾಹಸ ಕೃತ್ಯಗಳನ್ನೂ, ಯುದ್ಧ ವರ್ಣನೆಗಳನ್ನೂ ಅನುಭವಿಕ ತತ್ವಶಾಸ್ತ್ರವನ್ನೂ ವಿವೇಚಿಸುತ್ತವೆ.”[14]

“ಹಿಂದೂಗಳ ಪವಿತ್ರ ಗ್ರಂಥ ಸಾಹಿತ್ಯದಲ್ಲಿ ಪುರಾಣಗಳು ವಿಶಿಷ್ಟವಾದ ಸ್ಥಾನವನ್ನು ಪಡೆದಿವೆ. ವೇದಗಳನ್ನು ಬಿಟ್ಟರೆ, ಪೂಜ್ಯತೆಯಲ್ಲಿ ಪುರಾಣಗಳಿಗೇ ಎರಡನೆಯ ಸ್ಥಾನ. ಅವುಗಳು ರೂಪ ಹಾಗೂ ಸತ್ವದಲ್ಲಿ ಮಹಾಕಾವ್ಯ ಮತ್ತು ಸ್ಮೃತಿಗಳಿಗೆ ಸಮೀಪದವುಗಳಾಗಿವೆ …. ಅಷ್ಟೇ ಅಲ್ಲ ಸಮಗ್ರವಾಗಿ ನೋಡಿದರೆ ಅವು ಪ್ರಾಚೀನ ಹಾಗೂ ಮಧ್ಯ ಯುಗದ ಹಿಂದೂ ಧರ್ಮದ ಧಾರ್ಮಿಕ, ತಾತ್ವಿಕ, ಚಾರಿತ್ರಿಕ, ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನೊಳಗೊಂಡ ಜನಪ್ರಿಯ ವಿಶ್ವಕೋಶಗಳೆಂದು ಹೇಳಬಹುದು”.[15] ಪುರಾಣಗಳ ಲಕ್ಷಣವನ್ನು ಹೀಗೆ ಹೇಳಲಾಗಿದೆ.

ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿ ಚ
ವಂಶಾನುಚರಿತಂ ಚೈವ ಪುರಾಣಂ ಪಂಚಲಕ್ಷಣಂ
(ಅಮರಕೋಶ)

ಸರ್ಗ ಎಂದರೆ ವಿಶ್ವದ ಸೃಷ್ಟಿ ಅಥವಾ ಅದರ ಸ್ವಾಭಾವಿಕ ಕಾರಣದಿಂದಾಗುವ ವಿಕಾಸವನ್ನು ಕುರಿತದ್ದು; ಪ್ರತಿಸರ್ಗ ಎಂದರೆ ಪ್ರಳಯ ಮತ್ತು ಪುನರ್ ಸೃಷ್ಟಿಯನ್ನು ಕುರಿತದ್ದು; ವಂಶವೆಂದರೆ, ದೇವತೆಗಳ, ರಾಕ್ಷಸರ, ಕುಲವೃದ್ಧರ, ಋಷಿಗಳ, ಮತ್ತು ರಾಜರ, ವಿಶೇಷವಾಗಿ ಕೊನೆಯ ಇಬ್ಬರ ವಂಶಾವಳಿಗಳು; ಮನ್ವಂತರವೆಂದರೆ, ಮನುಗಳು ಆಳಿದ ಯುಗಗಳು – ವಿಶ್ವ ಕಾಲಚಕ್ರಗಳು; ವಂಶಾನುಚರಿತವೆಂದರೆ, ರಾಜವಂಶಗಳ ಚರಿತ್ರೆ. ಈ ‘ಪಂಚಲಕ್ಷಣ’ಗಳಿಂದ ಕೂಡಿದ್ದು ಪುರಾಣ.

ಪುರಾಣ ಮತ್ತು ಇತಿಹಾಸ ಈ ಎರಡೂ ವೈದಿಕ ಸಾಹಿತ್ಯದಲ್ಲಿ ಜೊತೆ ಜೊತೆಗೆ ಬರುವ ಪದಗಳು. ಮೊದಮೊದಲು “ಪುರಾಣ ಎಂದರೆ ಪ್ರಾಚೀನವಾದದ್ದು ಎಂದಷ್ಟೇ ಅರ್ಥವಿದ್ದದ್ದು ಋಗ್ವೇದದ ಪ್ರಯೋಗಗಳಿಂದ ಸ್ಪಷ್ಟವಾಗುತ್ತದೆ. ಅಥರ್ವ ವೇದದಲ್ಲಿ, ಪುರಾಣವೆಂದರೆ ಯಜ್ಞ ಯಾಗಗಳ ಮಧ್ಯಂತರ ಕಾಲಗಳಲ್ಲಿ, ಸೇರಿದವರ ಮನರಂಜನೆ ಹಾಗೂ ತಿಳಿವಳಿಕೆಗಾಗಿ ಹೇಳಿದ ಕಥೆಗಳು ಅಥವಾ ಐತಿಹ್ಯಗಳು ಎಂಬ ಅರ್ಥವಿದೆ. ಈ ಐತಿಹ್ಯಗಳು ಲಿಖಿತವಾದುವುಗಳೆಂಬ ಬಗ್ಗೆ ಆಧಾರಗಳೇನೂ ಇಲ್ಲ. ಬ್ರಾಹ್ಮಣ ಹಾಗೂ ಉಪಷನಿತ್ತುಗಳ ಕಾಲಕ್ಕೆ ಇದೇ ಅರ್ಥ ಮುಂದುವರಿದರೂ, ಅದೇ ಅರ್ಥವನ್ನು ಸೂಚಿಸುವ ಮತ್ತೊಂದು ಪದವಾದ ‘ಇತಿಹಾಸ’ವೆಂಬುದೂ ಬಳಕೆಯಲ್ಲಿತ್ತು. ಇತಿಹಾಸ ಮತ್ತು ಪುರಾಣಗಳ ನಡುವಣ ವ್ಯತ್ಯಾಸ ಅತ್ಯಂತ ಸೂಕ್ಷ್ಮವಾದದ್ದು ಎನ್ನುತ್ತಾರೆ ವಿದ್ವಾಂಸರು. ಇತಿಹಾಸ ಮತ್ತು ಪುರಾಣ ಈ ಎರಡೂ ‘ಪುರಾತನವಾದ ಐತಿಹ್ಯ’ಗಳು ಎಂಬರ್ಥದಲ್ಲೇ ಬಳಕೆಯಾಗಿವೆ. ವೈದಿಕ ಸಾಹಿತ್ಯದಿಂದಲೇ – ಬ್ರಾಹ್ಮಣ ಮತ್ತು ಉಪನಿಷತ್ತುಗಳು – ಸ್ಫೂರ್ತಿ ಮತ್ತು ಸಾಮಗ್ರಿಯನ್ನು ಪಡೆದು ತಮ್ಮದೇ ಆದ ಕಥೆ – ಕಲ್ಪನೆಗಳನ್ನು ಕೂಡಿಸಿಕೊಂಡು ನಿರ್ಮಿತವಾದವುಗಳು ಪುರಾಣಗಳು. ಬರಬರುತ್ತ ಬದುಕಿನ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಬೆಳೆದ ಇವುಗಳ ಸಂಖ್ಯೆ ವರ್ಧಿಸಿತು. ಸರ್ವಗ್ರಾಸಿಯಾದ ಇವುಗಳ ಸ್ವರೂಪದಿಂದಾಗಿ, ಗಣ್ಯವಾದ ಮತ್ತು ಸಂರಕ್ಷಿತವಾದ ಎಲ್ಲವನ್ನೂ ಈ ಪುರಾಣಗಳು ಒಳಗೊಂಡು ಜನಾಂಗ ಸ್ಮೃತಿಯ ವಿಶ್ವಕೋಶಗಳಾದವು. ಈ ವಾಙ್ಮಯದೊಳಕ್ಕೆ ಮಹರ್ಷಿ ವ್ಯಾಸರ ಮಹಾಭಾರತವೂ ಸೇರಿಕೊಂಡದ್ದಲ್ಲದೆ, ಮಹಾಭಾರತ ಹಾಗೂ ಪುರಾಣಗಳಿಗಿರುವ ಸಾಮ್ಯವನ್ನು ಗುರುತಿಸಿ ಮಹರ್ಷಿ ವ್ಯಾಸರೇ ಈ ಪುರಾಣಗಳನ್ನು ಬರೆದವರೆಂದು ಪರಂಪರೆ ಹೇಳುವಂತಾಯಿತು.”[16] ಮಹಾಭಾರತವನ್ನು ‘ಇತಿಹಾಸ’ವೆಂದೂ, ಪುರಾಣವೆಂದೂ ಕರೆದಿರುವುದು ಈ ಕಾರಣದಿಂದಲೇ. ಮುಂದಿನ ಮಹಾಕಾವ್ಯಗಳಿಗೆ, ಈ ಇತಿಹಾಸ ವಾಙ್ಮಯ – ಇತಿಹಾಸ ಪುರಾಣ ಮತ್ತು ರಾಮಾಯಣ ಮಹಾಭಾರತಗಳೇ – ಸ್ಫೂರ್ತಿ, ಆಕರ ಮತ್ತು ಮಾದರಿಗಳಾದುವೆಂದರೆ, ಮಹಾಕಾವ್ಯ – ಪ್ರಬಂಧಗಳಿಗೂ, ಇತಿಹಾಸ – ಪುರಾಣಗಳಿಗೂ ಇರುವ ಸಂಬಂಧ ಎಂಥದೆಂಬುದು ಸ್ಪಷ್ಟವಾಗುತ್ತದೆ.

ಮಹಾಕಾವ್ಯ

ಭಾರತೀಯರ ಪ್ರಕಾರ ‘ಕಾವ್ಯ’ ಎನ್ನುವುದು ತುಂಬ ವ್ಯಾಪಕಾರ್ಥವನ್ನುಳ್ಳ ಪದ. ಶಾಸ್ತ್ರಗ್ರಂಥಗಳನ್ನು ಬಿಟ್ಟರೆ ಉಳಿದವೆಲ್ಲ ‘ಕಾವ್ಯ’ದೊಳಕ್ಕೆ ಸಮಾವೇಶವಾಗುತ್ತವೆ. ಕಾವ್ಯಗಳಲ್ಲಿ ಎರಡು ಬಗೆ. ಶ್ರವ್ಯಕಾವ್ಯ ಮತ್ತು ದೃಶ್ಯಕಾವ್ಯ. ಎಂದರೆ ಕಿವಿಯಿಂದ ಕೇಳಿ ಆಸ್ವಾದಿಸುವ ಕಾವ್ಯ, ಕಣ್ಣಿನಿಂದ ನೋಡಿ ಆನಂದಿಸುವ ಕಾವ್ಯ. ಮೊದಲನೆಯದು ನಾಟಕ : ಅಭಿನಯದ ಮೂಲಕ ಗೋಚರವಾಗತಕ್ಕದ್ದು; ಎರಡನೆಯದು ಓದಿಕೊಂಡರೆ ಅಥವಾ ಬೇರೆಯವರು ವಾಚಿಸಿದರೆ, ಶಬ್ದರೂಪದ ಮೂಲಕ ಕೇಳಿಸುವ ಕಾವ್ಯ. “ಶ್ರವ್ಯವು ಮಹಾಕಾವ್ಯ, ಆಖ್ಯಾಯಿಕೆ, ಕಥೆ, ಚಂಪು ಅನಿಬದ್ಧ[17] ಎಂಬ ವಿಧಗಳಾಗಿವೆ.”[18] ಕಥೆ ಆಖ್ಯಾಯಿಕೆಗಳು ಗದ್ಯದಲ್ಲಿಯೂ ಮಹಾಕಾವ್ಯ (ಸರ್ಗಬಂಧ ಎನ್ನುತ್ತಾರೆ) ಪದ್ಯದಲ್ಲಿಯೂ, ಚಂಪೂ ಪ್ರಬಂಧವು ಗದ್ಯಪದ್ಯಗಳಲ್ಲಿಯೂ ಇರುತ್ತದೆ ಎಂಬುದು ಲಾಕ್ಷಣಿಕರ ಅಭಿಮತ. ಈ ಎಲ್ಲವೂ ಮಹಾಕಾವ್ಯಗಳೆಂದೇ ಪರಿಗಣಿತವಾಗಿವೆ. ಆದರೆ ಮಹಾಕಾವ್ಯದ ಜೊತೆಗೆ ಅತ್ಯಂತ ಆಪ್ತವಾಗಿ ಬಳಕೆಯಾಗುವ ಇನ್ನೊಂದು ಪದ ‘ಪ್ರಬಂಧ’. ಮೊದಮೊದಲು ನಾಟಕವನ್ನೂ ಪ್ರಬಂಧವೆಂದು ಕರೆಯುವ ರೂಢಿ ಇದ್ದು, ಅನಂತರ ಅದು ಮಹಾಕಾವ್ಯದ ಸಂವಾದಿ ಪದವೆಂಬ ಅರ್ಥವೇ ಮುಖ್ಯವಾಯಿತು. ಪ್ರಬಂಧ ಅಥವಾ ಮಹಾಕಾವ್ಯದ ಲಕ್ಷಣದ ಚರ್ಚೆ – ಹಿಂದೆ ಆಗಲೇ ಹೇಳಿರುವಂತೆ – ಆರಂಭವಾದದ್ದು ಕ್ರಿ. ಶ. ಆರು ಏಳನೆಯ ಶತಮಾನದಂದು. ಭಾಮಹ, ದಂಡಿ ಇವರೆ ಮಹಾಕಾವ್ಯ ಲಕ್ಷಣವನ್ನು ಹೇಳಿದ ಮೊದಲಿಗರು. ಅಲ್ಲಿಂದ ಹತ್ತೊಂಬತ್ತನೆಯ ಶತಮಾನದವರೆಗೂ, ಮಹಾಕಾವ್ಯ ಲಕ್ಷಣವನ್ನು ಕುರಿತು ಅನೇಕ ಲಾಕ್ಷಣಿಕರೂ ಹೇಳಿದ್ದಾರೆ. ಆದರೆ, ಒಬ್ಬಿಬ್ಬರ ಅಲ್ಪಸ್ವಲ್ಪ ಹೊಸ ವಿವರಣೆಗಳನ್ನು ಬಿಟ್ಟರೆ, ಎಲ್ಲರೂ, ಸಂಸ್ಕೃತದ ಮತ್ತು ಕನ್ನಡದ ಲಾಕ್ಷಣಿಕರೆಲ್ಲರೂ, ದಂಡಿ – ಭಾಮಹರ ಲಕ್ಷಣಗಳ ಕೊಟ್ಟಣವನ್ನೇ ಉದ್ದಕ್ಕೂ ಕುಟ್ಟುತ್ತಾ ಬಂದಿದ್ದಾರೆ ಎಂದು ಹೇಳಬಹುದು. ಭಾಮಹ ಮತ್ತು ದಂಡಿ ಇವರಿಬ್ಬರು ಹೇಳಿರುವ ಲಕ್ಷಣಗಳು ಹೀಗಿವೆ :

ಸರ್ಗಬಂಧೋ ಮಹಾಕಾವ್ಯಂ ಮಹತಾಂ ಚ ಮಹಚ್ಚಯತ್|
ಅಗ್ರಾಮ್ಯ ಶಬ್ದಮರ್ಥ್ಯಂ ಚ ಸಾಲಂಕಾರಂ ಸದಾಶ್ರಯಂ ||
ಮಂತ್ರದೂತ ಪ್ರಯಾಣಾಜಿ ನಾಯಕಾಭ್ಯುದಯೈಶ್ಚತ್
ಪಂಚಭಿಃ ಸಂಧಿಭಿರ್ಯುಕ್ತಂ ನಾತಿವ್ಯಾಖ್ಯೇಯಮೃದ್ಧಿಮತ್||
ಚತುರ್ವಗಾಭಿದಾನೇಪಿ ಭೂಯ ಸಾರ್ಥೋಪದೇಶಕೃತ್
ಯುಕ್ತಂ ಲೋಕ ಸ್ವಭಾವೇನ ರಸೈಶ್ಚ ಸಕಲೈ ಪೃಥಕ್.
(ಭಾಮಹ : ಕಾವ್ಯಾಲಂಕಾರ, ಅಧ್ಯಾಯ I-ಶ್ಲೋಕಗಳು ೧೯, ೨೦, ೨೧)

“ಅನೇಕ ಸರ್ಗಗಳು ಕೂಡಿ ಆದುದಕ್ಕೆ ಮಹಾಕಾವ್ಯವೆಂದು ಹೆಸರು. ಅದು ಮಹಾಪುರುಷರನ್ನು ಕುರಿತಿರುವುದಲ್ಲದೆ ಪರಿಮಾಣದಲ್ಲಿಯೂ ಮಹತ್ತಾಗಿರುವುದು. ಅದರ ಶಬ್ದಗಳಲ್ಲಿ ಗ್ರಾಮ್ಯ ಅಥವಾ ಅಶ್ಲೀಲ ದೋಷವಿರುವುದಿಲ್ಲ; ಅರ್ಥದಲ್ಲಿ ಗೌರವವಿರುತ್ತದೆ. ಅಲಂಕಾರಗಳಿಂದ ಭೂಷಿತವಾಗಿರುವುದಲ್ಲದೆ ಉತ್ತಮವಾದ ವಸ್ತುವನ್ನಾಶ್ರಯಿಸಿರುತ್ತದೆ. ಮಂತ್ರಾಲೋಚನೆ, ದೂತರು, ಯುದ್ಧ, ನಾಯಕಾಭ್ಯುದಯಗಳಿಂದಲೂ ಪಂಚಸಂಧಿಗಳಿಂದಲೂ ಸಮನ್ವಿತವಾಗಿರುತ್ತದೆ. ಕಷ್ಟಪಟ್ಟು ಅರ್ಥಮಾಡುವಂತಿರುವು -ದಿಲ್ಲ. ಎಲ್ಲ ರೀತಿಯಿಂದ ಸಮೃದ್ಧವಾಗಿರುತ್ತದೆ. ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಪ್ರತಿಪಾದಿಸುತ್ತಿದ್ದರೂ, ವಿಶೇಷವಾಗಿ ಐಹಿಕವಾದ ಅರ್ಥದ ಉಪದೇಶಕ್ಕೆ ಪ್ರಾಧಾನ್ಯವಿರುತ್ತದೆ. ಲೋಕ ಸ್ವಭಾವವನ್ನು ಚಿತ್ರಿಸುವುದಲ್ಲದೆ ಬೇರೆ ಬೇರೆ ರಸಗಳೆಲ್ಲವನ್ನೂ ಒಳಗೊಂಡಿರುತ್ತದೆ.” (ಭಾಮಹ)[19]

ಸರ್ಗಬಂಧೋ ಮಹಾಕಾವ್ಯಮುಚ್ಯತೇ ತಸ್ಯ ಲಕ್ಷಣಮ್
ಆಶೀರ್ನಮಸ್ಕ್ರಿಯಾವಸ್ತು ನಿರ್ದೇಶೋವಾಪಿ ತನ್ಮುಖಮ್
ಇತಿಹಾಸ ಕಥೋದ್ಭೂತಮಿತರತ್ವಾ ಸದಾಶ್ರಯಮ್|
ಚತುರ್ವರ್ಗ ಫಲಾಯತ್ತಂ ಚತುರೋದಾತ್ತ ನಾಯಕಂ||
…..  …..  …..  …..  …..  …..  …..
ಮಂತ್ರದೂತ ಪ್ರಯಾಣಾಜಿ ನಾಯಕಾಭ್ಯುದಯೈ ರಪಿ ||
ಅಲಂಕೃತಂ ಅಸಂಕ್ಷಿಪ್ತಂ ರಸಭಾವ ನಿರಂತರಂ |
ಸರ್ಗೈರನತಿ ವಿಸ್ತೀರ್ಣೈಃ ಶ್ರವ್ಯವೃತ್ತೈಃ ಸುಸಂಧಿಭಿಃ||
(ದಂಡಿ : ಕಾವ್ಯಾದರ್ಶ, ಪರಿಚ್ಛೇದ I, ಶ್ಲೋಕ ೧೪, ೧೫, ೧೭, ೧೮)

“ಒಂದಕ್ಕಿಂತ ಹೆಚ್ಚು ಸರ್ಗಗಳು ಸೇರಿ ಆಗುವ ಪ್ರಬಂಧವು ಮಹಾಕಾವ್ಯ -ವೆನಿಸುತ್ತದೆ. ಅದರ ಲಕ್ಷಣಗಳನ್ನೀಗ ಹೇಳುತ್ತೇವೆ. ಅದರ ಆದಿಯಲ್ಲಿ ಹಾರೈಕೆ (ಆಶೀಃ) ಇಲ್ಲವೆ ನಮಸ್ಕಾರ ಇಲ್ಲವೆ ಕಥಾ (ವಸ್ತು) ನಿರ್ದೇಶವು ಬರುತ್ತದೆ. (ಮಹಾಭಾರತವೇ ಮುಂತಾದ) ಇತಿಹಾಸವಾಗಲಿ (ಬೃಹತ್ಕಥೆಯೇ ಮುಂತಾದ) ಕಥೆಯಾಗಲಿ ಅದಕ್ಕೆ ಮೂಲವಾಗಬಹುದು; ಇವಲ್ಲದೆ ಬೇರೆ ಸತ್ಪುರುಷರನ್ನು ಕುರಿತೂ ಇರುವುದುಂಟು. ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಪುರುಷಾರ್ಥಗಳ ಫಲಪ್ರಾಪ್ತಿಗೆ ಅಧೀನವಾಗಿರುತ್ತದೆ. ನಾಯಕನು ಚತುರನೂ ಉದಾತ್ತನೂ ಆಗಿರುತ್ತಾನೆ…. ಮಂತ್ರಾಲೋಚನೆ, ದೂತಕಾರ್ಯ, ವಿಜಯ ಯಾತ್ರೆ, ಯುದ್ಧ, ನಾಯಕನ ವಿಜಯಗಳಿಂದಲೂ, ಆಲಂಕೃತವಾಗಿ, ಸಂಕ್ಷೇಪವಾಗಿರದೆ, ರಸಭಾವಗಳಿಂದ ನಿಬಿಡವಾಗಿರುತ್ತಾ, ಅತಿ ವಿಸ್ತಾರವಲ್ಲದ, ಕಿವಿಗಿಂಪಾದ ವೃತ್ತಗಳಿಂದ ಕೂಡಿದ, ಒಳ್ಳೆಯ ಸಂಧಿಗಳಿರುವ”…. ಕಾವ್ಯ. (ದಂಡಿ).[20]

ಮಹಾಕಾವ್ಯವನ್ನು ಕುರಿತ ಅತ್ಯಂತ ಪ್ರಾಚೀನವಾದ ಲಕ್ಷಣಗಳು ಇವು. ಉಪಲಬ್ಧವಾದ ಕಾವ್ಯ ಲಕ್ಷಣ ಗ್ರಂಥಗಳಲ್ಲಿ ಭಾಮಹನ ‘ಕಾವ್ಯಾಲಂಕಾರ’ದಲ್ಲೇ ಮಹಾಕಾವ್ಯ ಲಕ್ಷಣ ಮೊದಲು ಕಾಣಿಸಿಕೊಂಡಿದೆ. “ವಾಲ್ಮೀಕಿ, ವ್ಯಾಸರ, ಕಾಲಿದಾಸಾದ್ಯರ ಮತ್ತು ಭಾರವಿಯ ಮಹಾಕಾವ್ಯ ಪ್ರಪಂಚವನ್ನು ಪರಿಶೀಲಿಸಿಯೆ ಮಹಾಕಾವ್ಯ ಲಕ್ಷಣದ ಕೆಲವಂಶಗಳನ್ನು ಭಾಮಹನು ಕೊಟ್ಟಿದ್ದಾನೆ ಎಂಬುದರಲ್ಲಿ ಸಂಶಯವಿಲ್ಲ. ರಾಮಾಯಣ ಮತ್ತು ಸಂಭವತಃ ಮಹಾಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಅಥವಾ ಅವುಗಳ ಆದರ್ಶದ ಮೇಲೆ ರಚಿತವಾಗಿ ಇಂದಿಗೆ ಉಪಲಬ್ಧವಿರದ ಮಹಾಕಾವ್ಯಗಳನ್ನು ನೋಡಿಕೊಂಡು ಈ ಪರಿಭಾಷೆಯನ್ನು ಕೊಟ್ಟಿದ್ದಾನೆ ಎಂದು ಒಂದು ಅಭಿಪ್ರಾಯವಿದೆ. ಭಾರವಿ ಹಾಕಿದ ಸಂಪ್ರದಾಯವನ್ನು ನೋಡಿಕೊಂಡೇ ಭಾಮಹಾದಿಗಳು ಮಂತ್ರದೂತಾದಿಗಳು ಮಹಾಕಾವ್ಯದ ಮುಖ್ಯಾಂಗಗಳೆಂದು ಪರಿಗಣಿಸಿದರು ಎಂದು ಹೇಳುವುದಕ್ಕೆ ಆಸ್ಪದವಿದೆ ಎಂದು ಇನ್ನೊಂದು ಅಭಿಪ್ರಾಯವಿದೆ.”[21]

ಭಾಮಹ – ದಂಡಿ ಇವರು ಹೇಳಿರುವ ಲಕ್ಷಣಗಳಲ್ಲಿ, ಮಹಾಕಾವ್ಯವನ್ನು ಕುರಿತ ಇನ್ನಿತರ ಅಂಶಗಳಿದ್ದರೂ, ಮಹಾಕಾವ್ಯವೆಂದರೇನು ಎಂಬುದರ ಸೂತ್ರವನ್ನಷ್ಟೆ ಪ್ರತ್ಯೇಕಿಸಿ ನೋಡಬಹುದು. ‘ಮಹಾಕಾವ್ಯ ಎನ್ನುವುದು ಅನೇಕ ಸರ್ಗಗಳು ಕೂಡಿ ಆದದ್ದು’ (ಸರ್ಗಬಂಧೋ ಮಹಾಕಾವ್ಯಂ) ಎನ್ನುವುದೆ ಈ ಸೂತ್ರದಲ್ಲಿ ಮುಖ್ಯವಾದದ್ದು; ಅಷ್ಟೇ ಅಲ್ಲ, ಬಹುಮಟ್ಟಿಗೆ ಎಲ್ಲ ಲಾಕ್ಷಣಿಕರೂ ‘ಗಿಳಿಪಾಠ’ದಂತೆ ಈ ಒಂದು ಮಾತನ್ನೇ ಪಠಿಸಿದ್ದಾರೆ.[22] ‘ಸರ್ಗ’ ಎಂದರೆ ಅಧ್ಯಾಯ, ಪರಿಚ್ಛೇದ ಎಂದು ಅರ್ಥ; ಏಕಾರ್ಥ ಪ್ರತಿಪಾದಕವಾದದ್ದು ಎಂದೂ ಅರ್ಥ. “ಮಹಾಕಾವ್ಯವೆಂದರೆ ಸಂಸ್ಕೃತದಲ್ಲಿ ಸರ್ಗವೆಂಬ, ಪ್ರಾಕೃತದಲ್ಲಿ ಆಶ್ವಾಸವೆಂಬ, ಅಪಭ್ರಂಶದಲ್ಲಿ ಸಂಧಿ ಎಂಬ, ಗ್ರಾಮ್ಯದಲ್ಲಿ ಅವಸ್ಕಂಧಕವೆಂಬ ಅಧ್ಯಾಯ ಭೇದ ಉಳ್ಳದ್ದು,[23]” – ಎಂದು ಹೇಮಚಂದ್ರನು ಹೇಳುವುದನ್ನು ನೋಡಿದರೆ, ‘ಸರ್ಗ’ ಎಂಬುದು ಅಧ್ಯಾಯದ ಒಂದು ಪ್ರಭೇದವೇ. ಆದರೆ ಕವಿರಾಜಮಾರ್ಗಕಾರನು ಮಾತ್ರ ಪದ್ಯಾತ್ಮಕವಾಗಿ ರಚಿತವಾದ ಕಾವ್ಯವು ಸರ್ಗವೆಂದೂ, ಗದ್ಯ ಪದ್ಯಾತ್ಮಕವಾಗಿ ರಚಿತವಾದ ಕಾವ್ಯವು ಚಂಪೂ ಎಂದೂ ಅಭಿಪ್ರಾಯಪಟ್ಟು, ಬಹುಶಃ ಅವನ ಕಾಲಕ್ಕೆ ಆಗಲೇ ಕನ್ನಡದಲ್ಲಿ ಚಂಪೂ ಕಾವ್ಯಗಳ ರಚನೆ ಪ್ರಚಲಿತವಾದ್ದರಿಂದಲೋ ಏನೋ, ಸಂಸ್ಕೃತ ಆಲಂಕಾರಿಕರು ಮಹಾಕಾವ್ಯವನ್ನು ಕರೆಯುವಾಗ ಬಳಸಿದ ‘ಸರ್ಗಬಂಧ’ವೆಂಬ ಪದವನ್ನು ತನ್ನ ಮಹಾಕಾವ್ಯಲಕ್ಷಣ ನಿರೂಪಣೆಯಲ್ಲಿ ಕೈಬಿಟ್ಟಿದ್ದಾನೆ.

ಮಹಾಕಾವ್ಯವನ್ನು ಕುರಿತು ಚರ್ಚಿಸಿದ ಲಾಕ್ಷಣಿಕರು ಗುರುತಿಸಿದ ಮತ್ತೊಂದು ಲಕ್ಷಣ ಮಹಾಕಾವ್ಯದ ಗಾತ್ರವನ್ನು ಕುರಿತದ್ದು. ಭಾಮಹನು, ಮಹಾಕಾವ್ಯವು ಪರಿಮಾಣದಲ್ಲಿಯೂ ಮಹತ್ತಾಗಿರಬೇಕು (ಮಹಚ್ಚಯತ್) ಎನ್ನುತ್ತಾನೆ. ದಂಡಿ ‘ಅಸಂಕ್ಷಿಪ್ತಂ’ ಎಂದು ಹೇಳುತ್ತಾನೆ. ಎಂದರೆ ಮಹಾಕಾವ್ಯ ಸಂಕ್ಷೇಪವಾಗಿರಬಾರದು, ಸಾಕಷ್ಟು ದೀರ್ಘವಾಗಿರಬೇಕು ಎಂದು ಅರ್ಥ. ಇದೇ ಮಾತನ್ನು ಭೋಜದೇವ ಮತ್ತು ಶಿವತತ್ವರತ್ನಾಕರವನ್ನು ಬರೆದ ಕೆಳದಿ ಬಸವರಾಜ ಇವರು ಯಥಾವತ್ತಾಗಿ ಪಡಿನುಡಿಯುತ್ತಾರೆ. ಮಹಾಕಾವ್ಯ ಅಸಂಕ್ಷಿಪ್ತವಾಗಿರಬೇಕು ಎಂಬುದನ್ನು ಹೇಳುವುದರ ಜತೆಗೇ, ಅದು ಅತಿಸಂಕ್ಷಿಪ್ತವೂ ಆಗಿರಬಾರದು ಎಂಬುದನ್ನು ಹೇಳದೆ ಬಿಟ್ಟಿಲ್ಲ. ‘ಮಹಾಕಾವ್ಯ ಅತಿ ಕಿರಿಯದೂ ಆಗಿರಬಾರದು. ಹಾಗೆಯೇ ಅತಿ ದೀರ್ಘವೂ ಆಗಿರಬಾರದು’ (‘ನಾತಿ ಸ್ವಲ್ಪಾ ನಾತಿ ದೀರ್ಘಾಃ’) – ಎನ್ನುತ್ತಾನೆ ವಿಶ್ವನಾಥ. ಇದೇ ಮಾತನ್ನೂ ಭೋಜದೇವನೂ, ಕನ್ನಡದ ಕವಿರಾಜಮಾರ್ಗಕಾರನೂ ಅನುಮೋದಿಸುತ್ತಾರೆ. ನಮ್ಮ ಲಾಕ್ಷಣಿಕರಿಗೆ ಗೊತ್ತು, ಮಹಾಕವಿಗಳು ಆರಿಸಿಕೊಂಡ ವಸ್ತುವಿನ ಮಹತ್ತಿನಿಂದ ಮತ್ತು ಅವರು ವರ್ಣಿಸಬೇಕಾದ ಅಷ್ಟಾದಶಾದಿ ಅಂಗಗಳಿಂದ ಮಹಾಕಾವ್ಯ ಸಹಜವಾಗಿಯೇ ‘ಅಸಂಕ್ಷಿಪ್ತ’ವಾಗುತ್ತದೆ ಅಥವಾ ದೀರ್ಘವಾಗುತ್ತದೆ ಎಂಬುದು. ಆದರೆ ಅದು ಅತಿ ದೀರ್ಘವಾದರೆ, ಜಾಳುಜಾಳಾಗಿ ಕವಿಯ ಭಾವತೀವ್ರತೆ ನಿರಂತರವಾಗಿ ಉಳಿಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಯೋಚಿಸಿದ ಅವರು, ಮಹಾಕಾವ್ಯ ಅತಿಸ್ವಲ್ಪವೂ, ಅತಿ ದೀರ್ಘವೂ ಆಗಿರದ ಒಂದು ಗಾತ್ರ ಪರಿಮಿತಿಯಲ್ಲಿರಬೇಕೆಂಬ ಮಧ್ಯಮಮಾರ್ಗವನ್ನು ಸೂಚಿಸಿದ್ದು ಸಹಜವೇ ಆಗಿದೆ. ಹಾಗಾದಾಗ ಮಾತ್ರ ದಂಡಿ ಹೇಳುವಂತೆ ‘ರಸಭಾವ ನಿರಂತರಂ’ ಆದೀತು. ಆದರೆ ಮಹಾಕಾವ್ಯದ ಗಾತ್ರ ಹೇಗಿದ್ದರೆ ರಸಭಾವ ನಿರಂತರವಾಗುವುದೆಂಬುದನ್ನು ಗೊತ್ತು ಮಾಡುವವರು ಯಾರು? ವಿಶ್ವನಾಥನೊಬ್ಬ ‘ಅತಿಸಂಕ್ಷೇಪವೂ ಅತಿವಿಸ್ತಾರವೂ ಆಗಿರದ, ಸಂಖ್ಯೆಯಲ್ಲಿ ಎಂಟಕ್ಕೆ ಹೆಚ್ಚಾಗಿರುವ ಸರ್ಗಗಳಿಂದ ಕೂಡಿರುತ್ತದೆ’ (ನಾತಿ ಸ್ವಲ್ಪಾ,  ನಾತಿ ದೀರ್ಘಾಃ ಸರ್ಗಾ ಅಷ್ಟಾಧಿಕಾ ಇಹ,- ಸಾಹಿತ್ಯ ದರ್ಪಣ ಪರಿಚ್ಛೇದ ೬-೩೨೦) ಎಂದು ಸೂಚಿಸುತ್ತಾನೆ.

ಮಹಾಕಾವ್ಯವೆನ್ನುವುದು ಇತಿಹಾಸವನ್ನು ವಸ್ತುವನ್ನಾಗಿ ಉಳ್ಳದ್ದು, ಮಹಾಪುರುಷರನ್ನು, ಉದಾತ್ತರನ್ನು ನಾಯಕರನ್ನಾಗಿ ಉಳ್ಳದ್ದು; ಪಂಚಸಂಧಿಗಳೂ, ಅಷ್ಟಾದಶ ವರ್ಣನೆಗಳೂ ಅದರಲ್ಲಿರುತ್ತವೆ ಎನ್ನುವ ಲಕ್ಷಣ ಲಾಕ್ಷಣಿಕರಲ್ಲಿ ಉದ್ದಕ್ಕೂ ಅನುರಣಿತವಾಗಿದೆ. ಇವುಗಳಲ್ಲಿ ಪಂಚಸಂಧಿಗಳೆಂದರೆ, ಮುಖ, ಪ್ರತಿಮುಖ ಗರ್ಭ, ವಿಮರ್ಶ ಮತ್ತು ನಿರ್ವಹಣ ಎಂದು ನಾಟ್ಯಶಾಸ್ತ್ರದಲ್ಲಿ ಹೇಳಲಾಗಿದೆ. ನಾಟಕದ ಕಥಾವಸ್ತುವಿಗೆ ಸಂಬಂಧಪಟ್ಟ ಈ ಪಂಚಸಂಧಿಗಳು, ಮಹಾಕಾವ್ಯದ ಲಕ್ಷಣವೂ ಹೌದು ಎಂದು ಭಾಮಹಾದಿ ಆಲಂಕಾರಿಕರು ಹೇಳಿರುವುದನ್ನು ನೋಡಿದರೆ, ಕಾವ್ಯ ಹಾಗೂ ನಾಟಕಗಳೆರಡರ ತಿರುಳು ಒಂದೇ ಎಂದು ನಮ್ಮ ಆಲಂಕಾರಿಗಳು ಬಹುಕಾಲ ಭಾವಿಸಿದ್ದರೆಂಬ ಸಂಗತಿ ಇದರಿಂದ ಸ್ಪಷ್ಟವಾಗುತ್ತದೆ.

ಮಹಾಕಾವ್ಯ ಲಕ್ಷಣದಲ್ಲಿ ಉದ್ದಕ್ಕೂ ಅನುರಣಿತವಾಗುವ ಮತ್ತೊಂದು ಸಂಗತಿಯೆಂದರೆ, ಅದರ ಪ್ರಯೋಜನವನ್ನು ಕುರಿತದ್ದು. ಅದು ಚತುರ್ವಿಧ ಪುರುಷಾರ್ಥಗಳ ಫಲವುಳ್ಳದ್ದು; ಧರ್ಮ ಅರ್ಥ ಕಾಮ ಮೋಕ್ಷಗಳನ್ನು ಸಾಧಿಸುವುದು – ಎನ್ನುತ್ತಾರೆ ಆಲಂಕಾರಿಕರು. ಆದರೆ ಭಾಮಹನು ಮಹಾಕಾವ್ಯವು ಚತುರ್ವಿಧ ಪುರುಷಾರ್ಥಗಳನ್ನು ಪ್ರತಿಪಾದಿಸುತ್ತಿದ್ದರೂ, ವಿಶೇಷವಾಗಿ ಅವುಗಳಲ್ಲಿ ಐಹಿಕವಾದ ‘ಅರ್ಥ’ದ ಉಪದೇಶಕ್ಕೆ ಪ್ರಾಧಾನ್ಯವಿರಬೇಕು ಎನ್ನುತ್ತಾನೆ. ಆದರೆ ಜಿನಸೇನಾಚಾರ್ಯರೊಬ್ಬರು ಮಾತ್ರ, ಪೂರ್ವಪುರಾಣದಲ್ಲಿ ಮಹಾಕಾವ್ಯಲಕ್ಷಣವನ್ನು ಹೇಳುವಾಗ ‘ತ್ರಿವರ್ಗ ಫಲ ಸಂದರ್ಭಂ’ ಎಂದು, ‘ಧರ್ಮ. ಅರ್ಥ, ಕಾಮ’ಗಳನ್ನು ಪ್ರತಿಪಾದಿಸುವುದು ಮಹಾಕಾವ್ಯ ಎನ್ನುತ್ತಾರೆ. ಇದು ಗಮನಿಸಬೇಕಾದ, ಸ್ವಾರಸ್ಯವಾದ ಸಂಗತಿಯಾಗಿದೆ. ಜೈನ ಧರ್ಮದ ದೃಷ್ಟಿಗೆ ‘ಮಹಾಕಾವ್ಯ’ದ ಪ್ರಯೋಜನ ಮೋಕ್ಷವೊಂದನ್ನು ಬಿಟ್ಟು ಉಳಿದ ಮೂರಕ್ಕೆ ಮಾತ್ರ ಸಂಬಂಧಿಸಿದ್ದೆಂದೂ, ಮೋಕ್ಷವೆಂಬುದು ವ್ಯಕ್ತಿಯ ವಯ್ಯಕ್ತಿಕ ಸಾಧನೆ, ಕರ್ಮಕ್ಷಯ ಇತ್ಯಾದಿಗಳಿಂದ ಸಾಧ್ಯವೇ ಹೊರತು, ಮಹಾಕಾವ್ಯದ ಪಾರಾಯಣದಿಂದ ಸಾಧ್ಯವಿಲ್ಲವೆಂದೂ ತೋರಿದ್ದರೆ ಆಶ್ಚರ್ಯವಲ್ಲ.

ಭಾರತೀಯ ಲಾಕ್ಷಣಿಕರ ಪ್ರಕಾರ ಮಹಾಕಾವ್ಯವು ವಿವಿಧ ಶ್ರವ್ಯವೃತ್ತಗಳಿಂದ ಕೂಡಿರಬೇಕು; ಅರ್ಥಾನುರೂಪವಾಗಿ ಛಂದಸ್ಸು ಬದಲಾಗುತ್ತ ಹೋಗಬೇಕು. ಹಾಗೆಯೆ ಕೆಲವೆಡೆಗಳಲ್ಲಿ ಆದ್ಯಂತವಾಗಿ ಒಂದೇ ಛಂದಸ್ಸಿದ್ದರೂ ದೊಷವೆನಿಸುವುದಿಲ್ಲ – ಎಂದು ಹೇಮಚಂದ್ರ ಮತ್ತು ವಾಗ್‌ಭಟರೆಂಬ ಲಾಕ್ಷಣಿಕರು ಹೇಳುತ್ತಾರೆ. ಮೊದಮೊದಲು ಪದ್ಯರೂಪವಾದದ್ದೆ ಸರ್ಗಬಂಧ ಎಂಬ ಲಕ್ಷಣವಿದ್ದದ್ದು, ಅನಂತರ ಮಹಾಕಾವ್ಯವು ಗದ್ಯಮಯ, ಪದ್ಯಮಯ ಮತ್ತು ಉಭಯಮಯ ಎಂದು ಮೂರು ವಿಧ ಎಂಬ ಉದಾರತೆಯೊಳಗೆ, ಇತರ ರೀತಿಯ ಮಹಾಕಾವ್ಯಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಭಾರತೀಯ ಲಾಕ್ಷಣಿಕರ ಪ್ರಕಾರ ‘ಮಹಾಕಾವ್ಯ’ವೆಂದರೇನು ಎಂಬುದನ್ನು ಸಂಕ್ಷೇಪಿಸಿ ಹೀಗೆ ಹೇಳಬಹುದು :

ಒಂದಕ್ಕಿಂತ ಹೆಚ್ಚು ಸರ್ಗಗಳು ಕೂಡಿ ಆದದ್ದು ಮಹಾಕಾವ್ಯ.
ಅದು ಅಸಂಕ್ಷಿಪ್ತವಾದದ್ದು.
ಇತಿಹಾಸಾದಿ ಕಥೆಯಿಂದ ಉದ್ಫೂತವಾದದ್ದು.
ಮಹಾಪುರುಷ ಅಥವಾ ಮಹಾನಾಯಕ ಸಂಬಂಧಿಯಾದದ್ದು.
ಮಂತ್ರದೂತ ಪ್ರಯಾಣ ಆಜಿ ಇತ್ಯಾದಿ ಲಕ್ಷಣಗಳಿಂದ
ಹಾಗೂ ಪಂಚಸಂಧಿಗಳಿಂದ ಸಮನ್ವಿತವಾದದ್ದು.
ಚತುರ್ವರ್ಗ ಫಲ ಪ್ರಾಪ್ತಿಗೆ ಸಾಧಕವಾದದ್ದು.
ಹಲವು ಬಗೆಯ ಶ್ರವ್ಯ ವೃತ್ತಗಳಿಂದ ಕೂಡಿ
ರಸಾನುರೂಪವಾದ ಛಂದಸ್ಸಿನಲ್ಲಿ ರಚಿತವಾದದ್ದು.
ನಿರಂತರವಾಗಿ ರಸಭಾವಗಳಿರುವುದು.
ಈ ಮಹಾಕಾವ್ಯ ಅಥವಾ ಪ್ರಬಂಧವು, ಗದ್ಯದಲ್ಲಿರಬಹುದು,
ಅಥವಾ ಪದ್ಯದಲ್ಲಿರಬಹುದು ಅಥವಾ ಎರಡೂ ಮಿಶ್ರವಾದ
ಚಂಪೂ ರೂಪದಲ್ಲಿರಬಹುದು.

ಮಹಾಕಾವ್ಯ ಎಂದರೇನು ಎಂಬುದನ್ನು ಹೇಳುವ ಪಾಶ್ಚಾತ್ಯ ಮತ್ತು ಭಾರತೀಯ ಲಾಕ್ಷಣಿಕರ, ಈ ಕೆಲವು ಸೂತ್ರ (Definitions)ಗಳನ್ನು ತೌಲನಿಕವಾಗಿ ನೋಡಿದರೆ, ಪಾಶ್ಚಾತ್ಯರಲ್ಲಿ ಕಂಡುಬರುವ ವಿಷಯ ವೈವಿಧ್ಯ ಮತ್ತು ವಿಚಾರದ ಬೆಳವಣಿಗೆ ನಮ್ಮವರಲ್ಲಿ ಕಂಡುಬರುವುದಿಲ್ಲ. ಹದಿಮೂರು ಶತಮಾನಗಳ ವಿಸ್ತಾರದಷ್ಟು ಕಾಲದಲ್ಲಿ ಅನೇಕ ಆಲಂಕಾರಿಕರು ಮಹಾಕಾವ್ಯ ಲಕ್ಷಣವನ್ನು ಹೇಳಿದ್ದರೂ, ಭಾಮಹ – ದಂಡಿಯರಂಥ ಮೊದಲಿಗರು ಹೇಳಿದ್ದ ಸೂತ್ರಗಳಿಂದ ತೀರಾ ಭಿನ್ನವಾದ ಹೇಳಿಕೆ, ಉಳಿದ ಲಾಕ್ಷಣಿಕರಲ್ಲಿ ಕಾಣದು –  ಅಲ್ಲೊಂದು ಇಲ್ಲೊಂದು ಅಷ್ಟು ವಿಶೇಷವಲ್ಲದೆ ಸೇರ್ಪಡೆಯೋ ವಿವರಣೆಯೋ ಇರುವುದನ್ನು ಬಿಟ್ಟರೆ. ಪಾಶ್ಚಾತ್ಯ ಮಹಾಕಾವ್ಯಸೂತ್ರಗಳು ತುಂಬ ವ್ಯಾಪಕವಾಗಿವೆ. ಆದರೆ ನಮ್ಮವರು “ಲಕ್ಷಣವನ್ನು ನಿರೂಪಿಸಿರುವ ರೀತಿ ತುಂಬ ಪರಿಮಿತವಾದ ದೃಷ್ಟಿಕೋನದಿಂದ ಕೂಡಿದ್ದು, ಅಲ್ಲದೆ ಬಲುಮಟ್ಟಿಗೆ ಗತಾನುಗತಿಕವಾದದ್ದು. ಅದು ರಾಮಾಯಣ ಮಹಾಭಾರತಗಳಂತಹ ಇತಿಹಾಸ ಮಹಾಕಾವ್ಯಗಳಿಗೆ ಅನ್ವಯಿಸುವಷ್ಟು ವಿಶದವೂ ವ್ಯಾಪಕವೂ ಆದುದಲ್ಲ. ಕಾಲಿದಾಸ ಭಾರವಿ ಮೊದಲಾದವರ ಆಲಂಕಾರಿಕ ಮಹಾಕಾವ್ಯಗಳಿಗೆ ಮಾತ್ರ ಅನ್ವಯಿಸುವ ಮಟ್ಟಿಗೆ ಸಾಧಾರಣವೂ ಸೀಮಿತವೂ ಆಗಿದ್ದಾಗಿದೆ”.[24] ಟಿ.ಎಸ್. ಇಲಿಯಟ್ ಹೇಳುವ ಕ್ಲಾಸಿಕ್‌ನ ಲಕ್ಷಣವನ್ನಾಗಲಿ, ಅಬರ್ ಕ್ರೋಂಬಿಯ Idea of Greay Poetryಯ ಲಕ್ಷಣವನ್ನಾಗಲಿ ಹೋಲಿಸಿ ನೋಡಿದರೆ ಈ ಅಭಿಪ್ರಾಯ ಸ್ಪಷ್ಟವಾಗುತ್ತದೆ. ಪೂರ್ವ ಪಶ್ಚಿಮದ ಈ ಸೂತ್ರಗಳಲ್ಲಿ, ಇಷ್ಟು ವ್ಯತ್ಯಾಸ ಮೂಲತಃ ಇದ್ದರೂ, ಕೆಲವು ಸಾಮ್ಯಗಳಿರುವುದು ವಿಶೇಷದ ಸಂಗತಿಯಾಗಿದೆ.

ಪಾಶ್ಚಾತ್ಯರು ಮಹಾಕಾವ್ಯ ಲಕ್ಷಣವನ್ನು ಹೇಳುವಾಗ, ಗುರುತಿಸುವ ಮೊದಲ ಸಂಗತಿ ಎಂದರೆ, ‘ಅದೊಂದು ಸುದೀರ್ಘವಾದ ಕಥನ ಕಾವ್ಯಪ್ರಕಾರ’- ಎನ್ನುವುದು. ನಮ್ಮವರು ಅದೊಂದು ಕಥನ ಕಾವ್ಯಪ್ರಕಾರ ಎಂಬ ಅಂಶವನ್ನು ಒತ್ತಿ ಹೇಳಲೇ ಇಲ್ಲ. ಅಭಿನಯ ಪ್ರಧಾನವಾದ ನಾಟಕವೊಂದನ್ನು ಬಿಟ್ಟರೆ ನಮ್ಮಲ್ಲಿ ಇದ್ದುದೆಲ್ಲ ಬಹುಮಟ್ಟಿಗೆ ಕಥನಕಾವ್ಯವೇ. ಪಾಶ್ಚಾತ್ಯರಲ್ಲಿಯಂತೆ ವ್ಯಕ್ತಿನಿಷ್ಠ ಭಾವಗೀತೆ ನಮ್ಮಲ್ಲಿ ಇರಲೇ ಇಲ್ಲವಾದುದರಿಂದ, ಮತ್ತು ಇದ್ದುದೆಲ್ಲಾ ಕಥೆಯನ್ನುಳ್ಳ, ಕಥನಕಾವ್ಯವೇ ಆದುದರಿಂದ, ಅದನ್ನು ಬೇರೆಯಾಗಿ ‘ಕಥನಕಾವ್ಯ’ (Narrative Poetry) ವೆಂದು ಹೇಳುವ ಆವಶ್ಯಕತೆ ತೋರಲಿಲ್ಲ. ಖಂಡಕಾವ್ಯ ಅಥವಾ ಲಘುಕಾವ್ಯಗಳೂ ಕಥನಕಾವ್ಯಗಳಾದರೂ, ಅವು ಮಹಾಕಾವ್ಯಕ್ಕಿಂತ ಗಾತ್ರದಲ್ಲಿ ಮತ್ತು ವರ್ಣನಾಂಗಗಳ ಪರಿಮಿತಿಯಲ್ಲಿ ಬೇರೆಯೆಂದು ತೋರಿದ್ದರಿಂದ, ಅವುಗಳೊಂದಿಗೆ ಹೋಲಿಸಿ ಮಹಾಕಾವ್ಯವನ್ನು ಚರ್ಚಿಸುವ ಗೊಡವೆಗೇ ಹೋಗಲಿಲ್ಲ. ಆದರೆ ‘ಗಾತ್ರ’ವನ್ನು ಕುರಿತ ಕಲ್ಪನೆಯಲ್ಲಿ ಪೂರ್ವ ಹಾಗೂ ಪಶ್ಚಿಮದ ಲಾಕ್ಷಣಿಕರಲ್ಲಿ ಸಮಾನ ಮತವಿದೆ. ಪಾಶ್ಚಾತ್ಯರಂತೆ ನಮ್ಮವರೂ ಅದರ ಸುದೀರ್ಘತೆಯನ್ನೂ ವಿಸ್ತಾರವನ್ನೂ ಒತ್ತಿ ಹೇಳುತ್ತಾರೆ, ‘ಅಸಂಕ್ಷಿಪ್ತ’ವಾಗಿರಬೇಕು, ಪರಿಮಾಣದಲ್ಲಿ ಮಹತ್ತಾಗಿರಬೇಕು – ಎಂಬ ಮಾತುಗಳಲ್ಲಿ. ಆದರೂ ‘ರಸಭಾವ ನಿರಂತರ’ತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಅದು ಅತಿ ಸ್ವಲ್ಪವೂ ಅತಿ ದೀರ್ಘವೂ ಆಗಿರಬಾರದೆಂಬ ಮಧ್ಯಮಮಾರ್ಗವನ್ನು ಸೂಚಿಸಿದ್ದು ನಮ್ಮ ಲಾಕ್ಷಣಿಕರ ವಿಶೇಷತೆಯಾಗಿದೆ. ಆದರೆ ನಮ್ಮ ಬಹುಪಾಲು ಮಹಾಕಾವ್ಯಗಳು ‘ರಸಭಾವ ನಿರಂತರತೆ’ಯನ್ನು ಕಾಯ್ದುಕೊಳ್ಳುವ ಅಖಂಡತೆಯನ್ನು, ತಮ್ಮ ಸುದೀರ್ಘತೆಯಲ್ಲಿ ಉಳಿಸಿಕೊಂಡಿವೆ ಎಂದು ಹೇಳಲು ಬಾರದು. (National Significance)

ಪಾಶ್ಚಾತ್ಯ ವಿಮರ್ಶಕರು ಹೇಳುವ ಇನ್ನೊಂದು ಲಕ್ಷಣ ಮಹಾಕಾವ್ಯ ವೀರ ವ್ಯಕ್ತಿ, ವೀರಭಾವ, ವೀರಜೀವನ ಪ್ರಧಾನವಾಗಿರಬೇಕು ಎನ್ನುವುದು. ಭಾರತೀಯ ಆಲಂಕಾರಿಕರು ಈ ಮಾತನ್ನು ಪ್ರತ್ಯೇಕವಾಗಿ ಎಣಿಸಿ ಹೇಳದಿದ್ದರೂ, ಈ ಸಂಗತಿ, ಅವರು ಹೇಳುವ ನಾಯಕ ಲಕ್ಷಣದಲ್ಲಿ ಮತ್ತು ಅಷ್ಟಾದಶ ವರ್ಣನೆಗಳ ನಿರೂಪಣೆಯಲ್ಲಿ ಅಂತರ್ಗತವಾಗಿದೆ. ಮಹಾಕಾವ್ಯಗಳು ರಾಮಾಯಣ ಮಹಾಭಾರತದಂತಹ ಇತಿಹಾಸವನ್ನು ಆಶ್ರಯಿಸಿ ಹುಟ್ಟಿಕೊಂಡಿರುವುದರಿಂದ, ಅಲ್ಲಿ ವೀರಭಾವ, ವೀರಜೀವಗಳಿಗೆ ಬೇಕಾದಷ್ಟು ಅವಕಾಶವಿದೆ. ‘ಮಂತ್ರ, ದೂತ, ಪ್ರಯಾಣ ಮತ್ತು ಆಜಿ’ (ಯುದ್ಧ) ಗಳೆಂಬುವು ಮುಖ್ಯವಾಗಿ ಯುದ್ಧೋದ್ಯಮಕ್ಕೆ ಸಂಬಂಧಪಟ್ಟವು. ಯುದ್ಧ ವೃತ್ತಾಂತ ಮತ್ತು ಕ್ರಿಯೆ ‘ನಾಯಕಾಭ್ಯುದಯ’ದ ಅನಿವಾರ್ಯವಾದ ಒಂದು ಭಾಗ. ಭಾರತೀಯ ಮಹಾಕಾವ್ಯಗಳಷ್ಟೆ ಏಕೆ, ಜಗತ್ತಿನ ಬಹುಪಾಲು ಮಹಾಕಾವ್ಯಗಳ ಮುಖ್ಯವಸ್ತು, ಶೃಂಗಾರ ಇಲ್ಲವೆ ವೀರವಾಗಿರುವುದು ಗಮನಿಸಬೇಕಾದ ಸಂಗತಿ.

ಬಹುಮುಖ್ಯವಾದ ಒಂದೆರಡು ವ್ಯತ್ಯಾಸಗಳೆಂದರೆ, ಕಾವ್ಯದ ರೂಪ ಮತ್ತು ಛಂದಸ್ಸನ್ನು ಕುರಿತು ಹೇಳುವಲ್ಲಿ ಕಂಡುಬರುವ ಸಂಗತಿಗಳು. ಮಹಾಕಾವ್ಯ ಪಾಶ್ಚಾತ್ಯರ ಪ್ರಕಾರ ಪದ್ಯರೂಪದ್ದು, ಮತ್ತು ಉದ್ದಕ್ಕೂ ಒಂದೇ ಬಗೆಯ ಗಂಭೀರವಾದ ಛಂದಸ್ಸಿನಲ್ಲಿ ರಚಿತವಾದದ್ದು. ನಮ್ಮಲ್ಲಿ ಸರ್ಗಬಂಧವೆಂದರೆ ಪದ್ಯರೂಪವಾದದ್ದು ಎಂದು ಹೇಳಿದರೂ, ಗದ್ಯದಲ್ಲಿ ಮತ್ತು ಗದ್ಯಪದ್ಯ ಮಿಶ್ರಿತವಾದ ಚಂಪೂರೂಪದಲ್ಲಿ ರಚಿತವಾದ ಮಹಾಕಾವ್ಯಗಳನ್ನು ಕಂಡಮೇಲೆ, ಮಹಾಕಾವ್ಯವು ‘ಪದ್ಯಮಯ, ಗದ್ಯಮಯ, ಉಭಯಮಯ’ – ಎಂಬುದನ್ನು ಒಪ್ಪಿಕೊಳ್ಳಬೇಕಾಯಿತು. ಪಾಶ್ಚಾತ್ಯರಲ್ಲಿ ‘ಪದ್ಯಮಯ’ವಾದ ರೂಪವನ್ನು ಬಿಟ್ಟರೆ ಮಹಾಕಾವ್ಯದಲ್ಲಿ ಬೇರೆಯ ರೂಪಗಳಿಲ್ಲ. ಉದ್ದಕ್ಕೂ ಒಂದೇ ಬಗೆಯ ಛಂದಸ್ಸಿನಲ್ಲಿರಬೇಕು ಎಂಬ ನಿಯಮವನ್ನು ಪಾಶ್ಚಾತ್ಯ ಮಹಾಕಾವ್ಯಗಳು ಒಪ್ಪಿಕೊಂಡಿವೆ. ಆದರೆ ಭಾರತೀಯರು ‘ವಿವಿಧ ಶ್ರವ್ಯ ವೃತ್ತಗಳಿಂದ ಮಹಾಕಾವ್ಯ ರಚಿತವಾಗಬೇಕು’ ಎಂದು ಹೇಳುವುದರಿಂದ, ಛಂದೋ ವೈವಿಧ್ಯ ನಮ್ಮವರ ಮಹಾಕಾವ್ಯಗಳ ವೈಲಕ್ಷಣ್ಯವಾಗಿದೆ. ‘ಅರ್ಥಾನುರೂಪವಾಗಿ ಛಂದಸ್ಸು ಬದಲಾಗಬಹುದು’ – ಎಂಬ ಉದಾರ ದೃಷ್ಟಿಯಿಂದಾಗಿ, ಭಾರತೀಯ ಮಹಾಕಾವ್ಯಗಳಿಗೆ ರೂಪವೈವಿಧ್ಯ ಬಂದಿದೆ; ಚಂಪೂದಂತಹ ಗದ್ಯ – ಪದ್ಯ ಸಮ್ಮಿಶ್ರಿತವಾದ ರೂಪವೊಂದು ಆವಿಷ್ಕಾರವಾಗಿ, ಕವಿಗಳ ‘ಪ್ರಯೋಗ ಪರಿಣತಮತಿ’ಗೆ ಹೆಚ್ಚು ಅವಕಾಶವಾಗಿದೆ. ಉದ್ದಕ್ಕೂ ಒಂದೇ ಛಂದಸ್ಸು ಇರಬಾರದೆಂದೇನೂ ನಮ್ಮವರು ಹೇಳಿಲ್ಲ, ಇದ್ದರೂ ದೋಷವಿಲ್ಲ ಎನ್ನುತ್ತಾರೆ.

ಇತ್ತೀಚಿನ ಪಾಶ್ಚಿಮಾತ್ಯ ವಿಮರ್ಶಕರು ಮಹಾಕಾವ್ಯ ಲಕ್ಷಣವನ್ನು ಹೇಳುತ್ತಾ ‘ಮಹಾಕಾವ್ಯವು ಇತಿಹಾಸವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಲ್ಲದೆ, ಅದು ಒಂದು ಜನಾಂಗ ಪ್ರಜ್ಞೆಯ ಮತ್ತು ರಾಷ್ಟ್ರೀಯ ಅರ್ಥವಂತಿಕೆಯ (National Significance) ‘ಅಭಿವ್ಯಕ್ತಿ’ ಎನ್ನುತ್ತಾರೆ. ನಮ್ಮ ಪ್ರಾಚೀನ ಲಾಕ್ಷಣಿಕರಲ್ಲಿ ‘ರಾಷ್ಟ್ರೀಯತೆ’ ಯಂತಹ ಆಧುನಿಕ ಕಲ್ಪನೆಯನ್ನು ಹುಡುಕುವುದು ತಪ್ಪು. ಯಾಕೆಂದರೆ ರಾಷ್ಟ್ರೀಯತೆ, ರಾಷ್ಟ್ರೀಯ ಪ್ರಜ್ಞೆ ಇವುಗಳು ನಮಗೆ ಪಾಶ್ಚಾತ್ಯರಿಂದ ಬಂದ ಕಲ್ಪನೆಗಳು. ಆದರೆ ರಾಮಾಯಣ ಮಹಾಭಾರತಗಳಲ್ಲಿ ಜನಾಂಗ ಪ್ರಜ್ಞೆ ಹಾಗೂ ರಾಷ್ಟ್ರೀಯ ಅರ್ಥವಂತಿಕೆಗಳು ಇಲ್ಲದೆ ಇಲ್ಲ. ಅವೆರಡನ್ನೂ ಭರತಖಂಡದ ರಾಷ್ಟ್ರೀಯ ಕಾವ್ಯಗಳೆಂದು ಆಧುನಿಕ ವಿಮರ್ಶಕರು ಗುರುತಿಸಿದ್ದಾರೆ.

ಧರ್ಮವೇ ಪ್ರಧಾನವಾದ ಈ ದೇಶದಲ್ಲಿ, ‘ಮಹಾಕಾವ್ಯ’ಗಳು ಚತುರ್ವರ್ಗ ಫಲಪ್ರಾಪ್ತಿಗೆ ಸಾಧಕಗಳೆಂದು ನಮ್ಮ ಲಾಕ್ಷಣಿಕರು ಹೇಳುತ್ತ ಬಂದುದು ಆಶ್ಚರ್ಯದ ಸಂಗತಿಯೇನಲ್ಲ. ಬಹುಜನಕ್ಕೆ ಉದ್ದೇಶಿತವಾದ ಮಹಾಕಾವ್ಯ, ಉದಾತ್ತವ್ಯಕ್ತಿ ಚಾರಿತ್ರವಾದುದರಿಂದ, ತತ್ವ – ಧರ್ಮ – ನೀತಿಗಳನ್ನು ಮಿತಿಮೀರಿ ತುರುಕಲು ನಮ್ಮ ಕವಿಗಳೂ, ಅವರಿಗಿಂತ ಮಿಗಿಲಾಗಿ ಪ್ರಕ್ಷೇಪಕಾರರೂ ಪ್ರಯತ್ನ ಪಟ್ಟಿದ್ದಾರೆ. ಹೀಗಾಗಿ ಧಾರ್ಮಿಕತೆಯಿಂದ ಈ ಕಾವ್ಯಗಳು ಆಚ್ಛಾದಿತವಾಗಿವೆ. ಪಾಶ್ಚಾತ್ಯರಲ್ಲಿ ಹದಿಮೂರನೆ ಶತಮಾನದವರೆಗೆ ಧಾರ್ಮಿಕದೃಷ್ಟಿ ಮಹಾಕಾವ್ಯವನ್ನು ಪ್ರವೇಶಿಸಿರಲಿಲ್ಲ ಎನ್ನುವುದು ಸ್ವಾರಸ್ಯವಾದ ಸಂಗತಿಯಾಗಿದೆ. ಆದರೆ ಮಹಾಕಾವ್ಯ ಲಕ್ಷಣವನ್ನು ಮೊಟ್ಟಮೊದಲು ಹೇಳಿದ ಭಾಮಹನು, ‘ಮಹಾಕಾವ್ಯವು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಪ್ರತಿಪಾದಿಸುತ್ತಿದ್ದರೂ ವಿಶೇಷವಾಗಿ ಐಹಿಕವಾದ ಅರ್ಥದ ಉಪದೇಶಕ್ಕೆ ಪ್ರಾಧಾನ್ಯವಿರುತ್ತದೆ’ ಎಂದು ಹೇಳಿದ್ದು ವಿಶೇಷದ ಮಾತಾಗಿದೆ.


[1] C.M. Bowra : Heroic Poetry. p. 14

[2] E.M.W. Tillyard : The English Epic and its  background. p. 1

[3] ಟಿ.ಎಸ್. ವೆಂಕಣ್ಣಯ್ಯ : ಪ್ರಾಚೀನ ಸಾಹಿತ್ಯ ಪು. ೪

[4] Cassel’s Encyclopaedia of Literature : p. 108 (Ed. Steinberg)

[5] W.H. Hudson : An Introduction to the Study of Literature. p. 308

[6] T.S. Eliot : What is a Classic? p.8

[7] ಅಲ್ಲೇ : ಪು. ೧೦

[8] ಅಲ್ಲೇ : ಪು. ೧೦

[9] T.S. Eliot : What is a Classic P. 11; 14; 27

[10] ಅಲ್ಲೇ. ಪು. ೧೬

[11] L. Abercrombie : The Idea of Great poetry. p. 11

[12] ಯುಗಯಾತ್ರೀ ಭಾರತೀಯ ಸಂಸ್ಕೃತಿ. (ಸಂಪುಟ ೨) ಪು. ೧೦ ಪ್ರ. ಮೈಸೂರು ವಿಶ್ವವಿದ್ಯಾಲಯ

[13] ಎ.ಆರ್. ಕೃಷ್ಣಶಾಸ್ತ್ರೀ : ವಚನ ಭಾರತ. ಮುನ್ನುಡಿ. ಪು. ೩೦-೩೧

[14] ಯುಗಯಾತ್ರೀ ಭಾರತೀಯ ಸಂಸ್ಕೃತಿ (ಸಂಪುಟ ೨) ಪು. ೧೧

[15] A.D. Pusalkar : Studies in Epics and Puranas of India. P. XIII – XIIV (Introduction)

[16] P.G. Lalye : Studies in Devi Bhagavatha. p. 20-22

[17] “ಸಂಸ್ಕೃತ ಭಾಷೆಯಲ್ಲಿ ಲಲಿತ ಹಾಗೂ ಮಧುರವಾದ ಶಬ್ದಾರ್ಥಗಳಿಂದ ತುಂಬಿದ ಸಮಾಸಮಯವಾದ ಗದ್ಯದಲ್ಲಿದ್ದು, ಉದಾತ್ತವಾದ ವಿಷಯಗಳನ್ನೊಳಗೊಂಡು ಉಚ್ಛಾ ಸವೆಂಬ ಹೆಸರಿನ ಅಧ್ಯಾಯಗಳು ಇರುತ್ತಿದ್ದರೆ ಅಂತಹ ಕಾವ್ಯಕ್ಕೆ ಆಖ್ಯಾಯಿಕೆಯೆನ್ನುವರು. ಅದರಲ್ಲಿ ನಾಯಕನು ತನ್ನ ಹಿಂದಿನ ಚರಿತ್ರೆಯನ್ನೆಲ್ಲ ತಾನೇ ಬಾಯಿಂದ ಹೇಳಿಕೊಳ್ಳುತ್ತಾನೆ. ‘ವಕ್ತ್ರ, ಮತ್ತು ಅಪರ ವಕ್ತ್ರ’ ಎಂಬ ಛಂದಸ್ಸಿನ ಪದ್ಯಗಳು ಆಗಾಗ ಮುಂದಾಗುವುದನ್ನು ಸೂಚಿಸಲು ಬರುತ್ತವೆ. ಕವಿಯ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಒಳಗೊಂಡ ಕೆಲವು ಮುದ್ರೆಗಳಿಂದಲೂ ಅದು ಗರ್ಭಿತವಾಗಿರುವುದುಂಟು. ಕನ್ಯಾಹರಣ’ ಯುದ್ಧ, ವಿರಹ, ನಾಯಕನ ಅಭ್ಯುದಯ ಇವುಗಳಿಂದಲೂ ಕೂಡಿರುತ್ತದೆ. ಆದರೆ ‘ಕಥೆ’, (ಯೆಂಬ ಕಾವ್ಯ ಜಾತಿ)ಯಲ್ಲಿ ‘ವಕ್ತ್ರ’ ‘ಅಪರವಕ್ತ್ರ’ ಪದ್ಯಗಳಿರುವುದಿಲ್ಲ ಉಚ್ಚಾ ಸಗಳೂ ಇರುವುದಿಲ್ಲ. ಅದು ಸಂಸ್ಕೃತ, ಪ್ರಾಕೃತ, ಅಪಭ್ರಂಶ ಹೀಗೆ ಯಾವ ಭಾಷೆಯಲ್ಲಿ ಬೇರಾದರೂ ಇರಬಹುದು. ‘ಕಥೆ’ಯಲ್ಲಿ ನಾಯಕನ ವೃತ್ತಾಂತವನ್ನು ಬೇರೆಯವರು ಹೇಳುತ್ತಾರೆ; ತಾನೇ ಹೇಳಿಕೊಳ್ಳುವುದಿಲ್ಲ. ವಿನಯ ಸಂಪನ್ನನಾದ ಮನುಷ್ಯನು ತನ್ನ ಗುಣಗಳನ್ನು ತಾನೆ ವಿಸ್ತಾರವಾಗಿ ಹೇಗೆ ಹೇಳಿಕೊಂಡಾನು? ಬಿಡಿಬಿಡಿಯಾದ ಗಾಥೆ ಶ್ಲೋಕ ಮುಂತಾದವು ‘ಅನಿಬದ್ಧ, ಅಥವಾ ಮುಕ್ತಕಗಳು” (ಗದ್ಯ ಪದ್ಯ ಮಿಶ್ರವಾದದ್ದು ಚಂಪೂ).

ಭಾಮಹ : ಕಾವ್ಯಾಲಂಕಾರ : ೧-೨೫, ೨೬, ೨೭, ೨೮ ೨೯, ೩೦ : ಅನುವಾದ – ಡಾ|| ಕೆ. ಕೃಷ್ಣಮೂರ್ತಿ ಕನ್ನಡ ಕಾವ್ಯಾಲಂಕಾರ. ಪು. ೧೧, ೧೨, ೧೩

[18] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ. ಪು. ೩೨

[19] ಡಾ|| ಕೆ. ಕೃಷ್ಣಮೂರ್ತಿ : ‘ಕನ್ನಡ ಕಾವ್ಯಾಲಂಕಾರ’ ಪು. ೯-೧೦

[20] ೪೭.            ಅಲ್ಲೇ : ಅನುಬಂಧ, ಪು. ೧೪೩-೧೪೫

[21] ಟಿ.ವಿ. ವೆಂಕಟಾಚಲಶಾಸ್ತ್ರೀ : ಮಹಾಕಾವ್ಯ ಲಕ್ಷಣ ಪು. ೮

[22] ರುದ್ರಟ; ಆನಂದವರ್ಧನ, ವಿಶ್ವನಾಥ, ಕೆಳದಿ ಬಸವರಾಜ, ನಾಗವರ್ಮ, ಉದಯಾದಿತ್ಯ ಈ ಮೊದಲಾದ ಆಲಂಕಾರಿಕರಲ್ಲಿ ಮತ್ತು ಅಗ್ನಿಪುರಾಣದಲ್ಲಿ ಮಹಾಕಾವ್ಯವು ಸರ್ಗಬಂಧವೆಂದೇ ಉಕ್ತವಾಗಿದೆ.

[23] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ : ಪು. ೩೪

[24] ಟಿ.ವಿ. ವೆಂಕಟಾಚಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ ಅರಿಕೆ ಪು. xiv