ಜನನ : ೧೯೪೧ ರಲ್ಲಿ

ಮನೆತನ : ನೇಕಾರರ ಬಡ ಕುಟುಂಬ

ಗುರುಪರಂಪರೆ : ಹುಲ್ಲಾಳ ಯೋಗಾಶ್ರಮದ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಗಮಕ ಕಲೆಯಲ್ಲಿ ತರಬೇತಿ. ಮುಂದೆ ಪಂ. ಅರ್ಜುನ ಸಾ ನಾಕೋಡ ಅವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆ.

ಕ್ಷೇತ್ರ ಸಾಧನೆ : ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಗಡಿನಾಡು ಪ್ರದೇಶದಲ್ಲಿ ಗಮಕ ಕಲಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಸವಣ್ಣನವರ ಹಾಗೂ ಇತರ ಶಿವ ಶರಣರ ವಚನಗಳನ್ನು ಮತ್ತು ವೀರಶೈವ ಕವಿಗಳ ಮುಖ್ಯವಾಗಿ ರಾಘವಾಂಕ, ಹರಿಹರ, ಚಾಮರಸ ಮುಂತಾದವರಿಂದ ರಚಿತವಾದ ಹರಿಶ್ಚಂದ್ರ ಕಾವ್ಯ, ಗಿರಿಜಾ ಕಲ್ಯಾಣ ಮತ್ತು ಪ್ರಭುಲಿಂಗ ಲೀಲೆ ಮೊದಲಾದ ಕಾವ್ಯಗಳೇ ಅಲ್ಲದೆ ಶ್ರೇಷ್ಠ ತತ್ವ ಜ್ಞಾನಿಗಳಲ್ಲೊಬ್ಬರಾದ ಶ್ರೀ ನಿಜಗುಣ ಶಿವಯೋಗಿಗಳ ಕವಿತಾ ಪ್ರಬಂಧಗಳನ್ನು ಶ್ರೀ ಸರ್ಪಭೂಷಣ ಶಿವಯೋಗಿಗಳ ಮಹಾಕಾವ್ಯಗಳನ್ನೂ ತಮ್ಮದೇ ಆದ ಶೈಲಿಯಲ್ಲಿ ಗಾಯನ ಮಾಡುತ್ತಾ ಜನಮನ್ನಣೆ ಗಳಿಸಿದವರು. ಉತ್ತರ ಕರ್ನಾಟಕದ ಅನೇಕ ಭಾಗಗಳ್ಲಿ ಬೆಳಗಾವಿ, ಕಿತ್ತೂರು, ಅಥಣಿ, ನಿಪ್ಪಾಣಿ, ಗೋಕಾಕ ಮುಂತಾದೆಡೆ ಇವರ ಕಾರ್ಯಕ್ರಮಗಳು ನಡೆದಿವೆ. ಹೆಚ್ಚಿನಂಶ ಗಮಕದಲ್ಲಿ ಉತ್ತರಾದಿ ಶೈಲಿರಾಗಗಳನ್ನು ಬಳಸಿ ಹಾಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಇವರ ಈ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು, ಮಠ – ಮಾನ್ಯಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ’ಗಾನ ಸುಧಾಕರ, ಗಮಕ ಕಲಾನಿಧಿ, ಗಮಕ ಕಲಾರತ್ನ ಮುಂತಾದ ಬಿರುದುಗಳಿಗೂ ಪಾತ್ರರಾಗಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೦-೦೧ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.