ಮಹಾರಾಷ್ಟ್ರ ಪ್ರಾಂತದ ನಾಸಿಕ್ ಜಿಲ್ಲೆಯ ನಿಘಾಡ ಊರಿನಿಂದ ಕೊಲ್ಲಾಪುರದ ಕಡೆಗೆ ಒಂದು ಎತ್ತಿನ ಬಂಡಿ ಹೊರಟಿದೆ. ಗುಡ್ಡಗಾಡಿನ ದಾರಿ. ಅಲ್ಲಿ ತಗ್ಗು-ದಿಣ್ಣೆಗಳು’ ರಸ್ತೆಯಲ್ಲಿ ಕೊರಕಲುಗಳು. ಹಗಲಿನ ಬಿಸಿಲನ್ನು ಎತ್ತುಗಳು ಸಹಿಸುವುದಿಲ್ಲವೆಂದು ಸೂರ್ಯ ಮುಳುಗಿದ ಬಳಿಕವೇ ಪ್ರಯಾಣದ ಆರಂಭ. ರಾತ್ರಿಯ ಸಮಯ ಎಲ್ಲೆಲ್ಲೂ ಕತ್ತಲು. ಗುಡ್ಡಗಾಡಿನ ಅಡವಿಯ ಮೂಲಕ ಬಂಡಿ ಓಡುತ್ತಿದೆ. ಬಂಡಿಯಲ್ಲಿ ಒಬ್ಬ ತಾಯಿ, ಸಂಗಡ ಮೂರು ವರ್ಷದ ಮಗ ಮತ್ತು ಆರು ತಿಂಗಳ ಮಗಳು.

ಕಾಕಾ ನಾನಿಲ್ಲಿ ಬಿದ್ದಿದ್ದೇನೆ

ರಾತ್ರಿಯ ತಂಪು ಹವೆಯಿಂದ ಮಕ್ಕಳ ಸಂಗಡ ತಾಯಿಗೂ ನಿದ್ರೆ. ಮಗನನ್ನು ಹೊದಿಕೆಯಲ್ಲಿ ಸುತ್ತಿ ಸಮೀಪವೇ ಮಲಗಿಸಿಕೊಂಡಿದ್ದಳು. ಬಂಡಿ ಹೊಡೆಯುವವನೂ ನಿದ್ರೆ ಹೋದ. ಸಂಗಡ ಕುಳಿತ ಆಳು ಸಹ ಮಲಗಿ ಬಿಟ್ಟ ದಾರಿಯ ಪರಿಚಯವಿದ್ದುದರಿಂದ ಎತ್ತುಗಳು ಮಾತ್ರ ಭರದಿಂದ ಸಾಗಿದ್ದವು. ಮಧ್ಯದಲ್ಲಿ ಎತ್ತುಗಳು ಓಡತೊಡಗಿದವು. ಆ ಓಟದಿಂದ ಬಂಡಿ ಅಲ್ಲಾಡತೊಡಗಿತು. ಹೊದಿಕೆಯಲ್ಲಿ ಸುತ್ತಿದ್ದ ಮಗ ಬಂಡಿಯ ಹಿಂಬದಿಗೆ ಬಂದು ತಲುಪಿದ. ಇಳಿಜಾರು ಮುಗಿದು ಏರುಬಂದಾಗ ಆತ ಹಾಗೆಯೇ ಬಂಡಿಯ ಹಿಂದೆ ರಸ್ತೆಯ ಮೇಲೆ ಬಿದ್ದುಬಿಟ್ಟ.

ಬಂಡಿಯಲ್ಲಿ ನಿದ್ರೆ ಮಾಡುತ್ತಿದ್ದ ಯಾರಿಗೂ ಈ ಸಂಗತಿ ತಿಳಿಯಲಿಲ್ಲ. ರಸ್ತೆಯಲ್ಲಿ ಬಿದ್ದ ಪುಟ್ಟ ಬಾಲಕನಿಗೆ ಎಚ್ಚರವಾದಾಗ ಕುದುರೆ ಬರುವ ಶಬ್ದ ಕೇಳಿಸಿತು. ಅವರ ಹಿಂದೆ ಕಾವಲಿಗೆಂದು ಅವನ ಕಾಕಾ ಕುದುರೆಯ ಮೇಲೆ ಬರುತ್ತಿದ್ದ. ಕುದುರೆ ಸಮೀಪ ಬಂದ ಕೂಡಲೇ ಬಾಲಕ ಕೂಗಿದ ” ’ವಿಠೂ ಕಾಕಾ, ನಾನಿಲ್ಲಿ ಬಿದ್ದಿದ್ದೇನೆ”

ಆ ಧ್ವನಿಯಿಂದ ಬಾಲಕನ ಗುರುತು ಹಿಡಿದ ವಿಠೂ ಕಾಕನಿಗೆ ಪರಿಸ್ಥಿತಿಯ ಅರಿವಾಯಿತು. ’ದೇವರು ದೊಡ್ಡವ; ಅವನೇ ಬದುಕಿಸಿದ’ ಎಂಬ ಉದ್ಗಾರ ಅವನ ಬಾಯಿಂದ ಹೊರಬಿತ್ತು. ಏಕೆಂದರೆ ಯಾವುದಾದರೂ ಕಾಡು ಪ್ರಾಣಿಗೆ ಬಾಲಕನ ವಾಸನೆ ಹತ್ತಿದ್ದರೆ ಅವನ ಗತಿ ಮುಗಿದೇ ಹೋಗುತ್ತಿತ್ತು.

ಕೂಡಲೇ ಮಗುವನ್ನು ಕುದುರೆಯ ಮೇಲೆ ಕೂಡಿಸಿ ಕೊಂಡು ವಿಠೂ ಆಕಾ ಬಂಡಿಯ ಬಳಿ ಬಂದು ತಲುಪಿದ. ಅತ್ತಿಗೆಗೆ ಎಬ್ಬಿಸಿ ಕೇಳಿದ, ಅತ್ತಿಗೆ, ನೀವೆಲ್ಲ ಕ್ಷೇಮವೇ? ಮಕ್ಕಳಿಬ್ಬರೂ ಇದ್ದಾರಲ್ಲವೇ? ಅವಳು ನಿದ್ರೆಗಣ್ಣಿನಲ್ಲಿಯೇ ಉತ್ತರಿಸಿದಳು  : ’ಹೌದು, ಇಬ್ಬರೂ ಮಲಗಿದ್ದಾರೆ.”

’ವಿಠೂ ಕಾಕಾ, ನಾನಿಲ್ಲಿ ಬಿದ್ದಿದ್ದೇನೆ’

’ಅತ್ತಿಗೆ, ಸರಿಯಾಗಿ ನೋಡಿ ಹೇಳಿರಿ’ ಎಂದಾಗ ಆ ತಾಯಿ ಇನ್ನೊಮ್ಮೆ ತಡಕಾಡಿ ನೋಡತೊಡಗಿದಳು. ಮಗನಿದ್ದ ಹೊದಿಕೆಯ ಗಂಟು. ಕೈ ಹತ್ತಲಿಲ್ಲ. ಅವಳು ಒಮ್ಮೆಲೆ ಕಂಗಾಲಾಗಿ’ ಮಾಧವನಿಲ್ಲ” ಎಂದು ಚೀರಿದಳು.

ಆಗ ವಿಠೂ ಕಾಕಾ ಅವಳಿಗೆ ಸಮಾಧಾನ ಹೇಳಿ ಕುದುರೆಯ ಮೇಲಿದ್ದ ಮಾಧವನನ್ನು ಒಪ್ಪಿಸಿ ದೇವರು ದೊಡ್ಡವ ಎಂದು ಆದ ಸಂಗತಿಯನ್ನು ವಿವರಿಸಿದ.

ಅಂದು ದೇವರು ಬದುಕಿಸಿದ ಮಾಧವ ಮುಂದೆ ಮಹಾಪುರುಷನಾದ. ಅವನ ಪೂರ್ಣ ಹೆಸರು ಮಹಾದೇವ ಗೋವಿಂದ ರಾನಡೆ. ಅವನನ್ನು ಮುದ್ದಿನಿಂದ ಮಾಧವ ಎಂದು ಕರೆಯುತ್ತಿದ್ದರು.

ಮಹಾತ್ಮಗಾಂಧೀಯವರ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರು. ಆ ಗೋಖಲೆಯವರ ಗುರು ಮಹಾದೇವ ರಾನಡೆ.

ಇಂಥ ದಡ್ಡನಲ್ಲ!

ಮಹಾದೇವ ಗೋವಿಂದ ರಾನಡೆ ನಾಸಿಕ್ ಜಿಲ್ಲೆಯ ನಿಫಾಡದಲ್ಲಿ ೧೮೪೨ರ ಜನವರಿ ೧೮ರಂದು ಮಂಗಳವಾರದ ದಿನ ಜನಿಸಿದರು. ತಾಯಿ ಗೋಪಿಕಾಬಾಯಿ, ತಂದೆ ಗೋವಿಂದರಾಯರು ಆಗ ನಿಫಾಡದಲ್ಲಿ ಮುಖ್ಯ ಗುಮಾಸ್ತೆಯ ಕೆಲಸಕ್ಕಿದ್ದರು. ಮಹಾದೇವನು ಹುಟ್ಟಿದ ಎರಡೂವರೆ ವರ್ಷಗಳ ಬಳಿಕ ಅವರಿಗೆ ಮೇಲಿನ ಹುದ್ದೆಗೆ ಕಿಲ್ಲಾಪುರಕ್ಕೆ ವರ್ಗವಾಯಿತು. ಆಗ ಗೋಪಿಕಾಬಾಯಿ ಗರ್ಭಿಣಿ. ಅವಳನ್ನು ಮಹಾದೇವನನ್ನೂ ನಿಫಾಡದಲ್ಲಿಯೇ ಬಿಟ್ಟು ಗೋವಿಂದರಾಯರು ಕೊಲ್ಲಾಪುರಕ್ಕೆ ತೆರಳಿದರು. ಅನಂತರ ಗೋಪಿಕಾಬಾಯಿ ಹೆಣ್ಣು ಮಗುವಿಗೆ ಜನ್ಮವಿತ್ತಳು. ಮತ್ತು ೫-೬ ತಿಂಗಳ ಬಳಿಕ ಕೊಲ್ಲಾಪುರಕ್ಕೆ ಎತ್ತಿನ ಬಂಡಿಯಲ್ಲಿ ಹೊರಟರು. ಮಹಾದೇವನ ಬಾಲ್ಯ ಅಲ್ಲಿಯೇ ಕಳೆಯಿತು. ಅಲ್ಲಿಯ  ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭವಾಯಿತು.

ಬಾಲಕ ಮಹಾದೇವನು ತಾನಾಗಿ ಮುಂದೆ ಬಿದ್ದು ಯಾರನ್ನೂ ಮಾತನಾಡಿಸುತ್ತಿರಲಿಲ್ಲ. ಯಾರಾದರೂ ಮಾತನಾಡಿಸಿದರೆ ಕೆಲವೇ ಶಬ್ದಗಳಲ್ಲಿ ಉತ್ತರ ನೀಡುವ ನಾಚಿಕೆ ಸ್ವಭಾವ ಅವನದಾಗಿತ್ತು. ಇತರ ಹುಡುಗರೊಡನೆ ಕೂಡಿ ಆಡುತ್ತಿರಲಿಲ್ಲ. ಒಬ್ಬಂಟಿಗನಾಗಿರುವ ಸ್ವಭಾವ. ಆರು ವರ್ಷಗಳವರೆಗೂ ತೊದಲುತ್ತಿದ್ದ. ಶರೀರ ದಪ್ಪವಾಗಿತ್ತು. ಚುರುಕಿರಲಿಲ್ಲ. ಆನೆ ಮರಿ ಎಂದು ಎಲ್ಲರೂ ಚೇಷ್ಟೆ ಮಾಡುತ್ತಿದ್ದರು. ಹೀಗಾಗಿ ತಾಯಿಗೆ ಬಹಳ ನಿರಾಸೆ. ’ನಮ್ಮ ಮಾಧವ ದೊಡ್ವನಾದ ಬಳಿಕ ತಿಂಗಳಿಗೆ ಹತ್ತು ರೂಪಾಯಿಯಾದರೂ ಗಳಿಸಿ ಹೆಂಡತಿ ಮಕ್ಕಳನ್ನು ಸಾಕಬಲ್ಲನೆ?’ ಎಂಬ ಕೊರಗು ಯಾವಾಗಲೂ ತಾಯಿಗೆ. ಮಗನ ಸುಧಾರಣೆಗಾಗಿ ಅನೇಕ ವ್ರತಗಳ ಆಚರಣೆಯಲ್ಲಿ ಆಕೆ ತೊಡಗಿದಳು.

ಅಕ್ಷರ ಪ್ರಿಯ

ಆದರೆ ಮಹದೇವನಲ್ಲಿದ್ದ ಕೆಲವು ಅಸಾಮಾನ್ಯ ಗುಣಗಳ ಪರಿಚಯ ಅವನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗಲೇ ಎಲ್ಲರಿಗೂ ಆಗತೊಡಗಿತು. ಮಹಾದೇವ ಓದು ಬರಹಗಳಲ್ಲಿ ಯಾವಾಗಲೂ ಮುಂದು. ಅಕ್ಷರಗಳನ್ನು ಬರೆಯಲು ಕಲಿತ ಮೇಲೆ ಇಡೀ ದಿನ ಅವುಗಳನ್ನು ಹೇಳುತ್ತ ತಿರುಗುತ್ತಿದ್ದ ನೆಲದ ಮೇಲೆ. ಗೋಡೆಗಳ ಮೇಲೆ ಬರೆಯುವುದೇ ಅವನ ಕೆಲಸ ಹೊರಗೆ ಹುಡುಗರೊಡನೆ ಎಂದಾದರೂ ಆಡಲು ಹೋದರು ಮಣ್ಣಿನಲ್ಲಿ ಅಕ್ಷರಗಳನ್ನು ಗೀಚುತ್ತಿದ್ದ.

ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣನಾದರೂ ಅವನಿಗೆ ಜಂಬವಿರಲಿಲ್ಲ. ಅಷ್ಟೇ ಅಲ್ಲ, ಮನೆಗೆ ಬಂದ ಬಳಿಕ ಆ ಸುದ್ದಿ ಯಾರಿಗೂ ಹೇಳುತ್ತಲೂ ಇರಲಿಲ್ಲ. ಇವನು ಉತ್ತೀರ್ಣನಾದ ಸುದ್ದಿ ಮನೆಯಲ್ಲಿ ಇತರ ಹುಡುಗರಿಂದ ತಿಳಿಯಬೇಕಾಗುತ್ತಿತ್ತು. ”ಯಾಕೆ ಹೇಳಲಿಲ್ಲ?’ ಎಂದು ಕೇಳಿದರೆ ಅವನು, ’ಅದರಲ್ಲಿ ಹೇಳುವುದೇನಿದೆ? ಅಭ್ಯಾಸ ಮಾಡಿದವರು ಉತ್ತೀರ್ಣರಾದರೆ ಅದೆಂತಹ ದೊಡ್ಡ ಮಾತು?’ ಎಂದು ಹಗುರವಾಗಿ ಹೇಳುತ್ತಿದ್ದನು. ಆದರೆ ಎಂದಿಗೂ ಅಭ್ಯಾಸದ ಕಡೆ ಅಲಕ್ಷ್ಯ ಮಾಡುತ್ತಿರಲಿಲ್ಲ. ತನ್ನನ್ನು ಹೊಗಳಿಕೊಳ್ಳುವುದೆಂಬುದು ಅವನಿಗೆ ಗೊತ್ತೇ ಇರಲಿಲ್ಲ.

ಏನು ಕೆಟ್ಟುದಾಯಿತು?

ಮಹಾದೇವ ದೊಡ್ಡವನಾದ ಬಳಿಕ ಉತ್ತಮ ನ್ಯಾಯಾಧೀಶನಾಗಿ ನ್ಯಾಯೂಮೂರ್ತಿ ಮಹಾದೇವ ಗೋವಿಂದ ರಾನಡೆ ಎಂದು ಕೀರ್ತಿ ಗಳಿಸಿದ. ಅವನ ನ್ಯಾಯಬುದ್ಧಿಯ ಅಲ್ಪ ಪರಿಚಯವೂ ಬಾಲ್ಯಕಾಲದಲ್ಲಿಯೇ ಆಯಿತು. ರೂಢಿಯಾದುದನ್ನು ಮಾಡಲೇಬೇಕೆಂದು ಅವನ ಹಟ. ಆಶ್ವಯುಜ ಮಾಸದ ಹುಣ್ಣಿಮೆ ಕೋಜಾಗಿರಿ ಹುಣ್ಣಿಮೆ, ಆ ದಿನ ರಾತ್ರಿ ಪಗಡೆ ಆಟ ಆಡುತ್ತ ಜಾಗರಣೆ ಮಾಡುವುದು ಅವರಲ್ಲಿ ನಡೆದು ಬಂದು ರೂಢಿ. ಒಮ್ಮೆ ಅವರ ನೆರೆಮನೆಯವರು ಪರ ಊರಿಗೆ ಹೋಗಿದ್ದರು. ಚಿಕ್ಕ ವಯಸ್ಸಿನ ತಂಗಿ ಬೇಗ ಮಲಗಿ ಬಿಟ್ಳು. ಹೀಗೆ ಮಹಾದೇವನ ಸಂಗಡ ಪಗಡೆಯಾಡಲು ಯಾರೂ ಇರಲಿಲ್ಲ. ಆದರೂ ಅವನು ಆಡಿದ, ಹೇಗೆ ಗೊತ್ತೆ? ಒಂದು ಕಂಬವನ್ನೇ ಎದುರಾಳಿಯಾಗಿಟ್ಟುಕೊಂಡ. ಬಲಗೈಯಿಂದ ಕಂಬದ ಸಲುವಾಗಿ ದಾಳ ಎಸೆದ, ಎಡಗೈಯಿಂದ ತನಗಾಗಿ, ಕೊನೆಯಲ್ಲಿ ಅವನು ಸೋತ. ಅವನ ಈ ಆಟವನ್ನು ನೋಡುತ್ತ ನಿಂತ ಅವನ ಚಿಕ್ಕಮ್ಮ ನಗುತ್ತ ರೇಗಿಸಿದಳು ; ’ಎಂಥವನೊ ನೀನು? ಕಂಬಕ್ಕೆ ಸೋತುಬಿಟ್ಟೆಯಲ್ಲ!’

ಆದರೆ ಇದರಿಂದ ಮಹಾದೇವನಿಗೆ ಸಿಟ್ಟು ಬರಲಿಲ್ಲ. ಕಂಬಕ್ಕೆ ತಾನು ಸೋತೆನೆಂದು ದುಃಖವೂ ಆಗಲಿಲ್ಲ. ಬೇಸರವೂ ಆಗಲಿಲ್ಲ. ಶಾಂತವಾಗಿ ಚಿಕ್ಕಮ್ಮನಿಗೆ ಹೇಳಿದ : ’ಏನು ಕೆಟ್ಟುದಾಯಿತು? ಕಂಬದ ಕೈಯ ದಾಳಗಳು ಸರಿಯಾಗಿ ಬಿದ್ದವು. ಅದು ಗೆದ್ದಿತು’.

ಯಾವುದೇ ಆಡಂಬರ ಅವನಿಗೆ ಸೇರುತ್ತಿರಲಿಲ್ಲ. ಹಬ್ಬದ ದಿನಗಳಲ್ಲಿ ಮಕ್ಕಳಿಗೆ ಆಭರಣಗಳನ್ನು ತೊಡಿಸುವುದು ಮತ್ತು ಅವರು ಸಂತೋಷದಿಂದ ಎಲ್ಲರಿಗೂ ತೋರಿಸುತ್ತ ಅಡ್ಡಾಡುವುದು ಇದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಮಹಾದೇವನಿಗೆ ಈ ಆಡಂಬರ ಸೇರುತ್ತಿರಲಿಲ್ಲ. ಅವನಿಗೆ ಆಭರಣಗಳನ್ನು ತೊಡಿಸಿದರೆ ಸೇರುತ್ತಿರಲಿಲ್ಲ. ಅವನಿಗೆ ಆಭರಣಗಳನ್ನು ತೊಡಿಸಿದರೆ ಅವನು ಬಟ್ಟೆಗಳಲ್ಲಿ ಅಡಗಿಸಿಕೊಳ್ಳುತ್ತಿದ್ದ ’ಹೀಗೇಕೆ ಮಾಡುತ್ತೀ” ಎಂದು ಯಾರಾದರೂ ಕೇಳಿದರೆ ’ನಮ್ಮ ಮನೆಗೆ ಅನ್ನ ಬೇಡಲು ಬರುವ ಹುಡುಗ ಮೈಮೇಲೆ ಒಡವೆಗಳಿರುತ್ತವೆಯೇ?” ಎಂದು ಉತ್ತರಿಸಿ ಬಿಡುತ್ತಿದ್ದ.

ಮೊದಲನೆಯ ವರ್ಗ
ಬಿಟ್ಟಿದ್ದೇ ಇಲ್ಲ

ಮಹಾದೇವನ ಪ್ರಾಥಮಿಕ ಶಿಕ್ಷಣ ಕೊಲ್ಲಾಪುರದ ಮರಾಠಿ ಶಾಲೆಯಲ್ಲಿ ನಡೆಯಿತು. ಅಭ್ಯಾಸದಲ್ಲಿ ಅವನು ಮುಂದೆ ಇದ್ದನಷ್ಟೇ ಅಲ್ಲ. ಒಮ್ಮೆ ತಿಳಿದುಕೊಂಡ ಸಂಗತಿಯನ್ನು ಎಂದಿಗೂ ಮರೆಯುತ್ತಿರಲಿಲ್ಲ. ಅವನ ಪ್ರಾಥಮಿಕ ಶಿಕ್ಷಣ ೧೮೫೬ರಲ್ಲಿ ಮುಗಿಯಿತು. ಮುಂದೆ ಇಂಗ್ಲಿಷ್ ಶಿಕ್ಷಣಕ್ಕಾಗಿ ಅವನನ್ನು ತಂದೆ ಗೋವಿಂದರಾಯರು ಮುಂಬಯಿಯ ಎಲ್ ಫಿನ್ ಸ್ಟನ್ ಇನ್ಸಿಟಿಟ್ಯೂಟ್ (ಈಗ ಎಲ್ ಫಿನ್ ಸ್ಟನ್ ಹೈಸ್ಕೂಲಿಗೆ) ಕಳಿಸಿದರು. ಅಲ್ಲಿ ಮಹಾದೇವ ಪರೀಕ್ಷೆಗಳಲ್ಲಿ ಮೇಲ್ತರಗತಿಯಲ್ಲಿ ತೇರ್ಗಡೆಯಾಗಿ ಶಿಷ್ಯವೇತನ ಗಳಿಸಿದ. ೧೮೫೮ರಲ್ಲಿ ಎಲ್ ಫಿನ್ ಸ್ಟನ್ ಕಾಲೇಜು ಸೇರಿದ. ೧೮೫೯ರಲ್ಲಿ ಮೊದಲನೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾದ. ಜೂನಿಯರ್ ಫೆಲೋ ಎಂದು ಆರಿಸಲ್ಪಟ್ಟ. ಆಗ ಅವನಿಗೆ ತಿಂಗಳಿಗೆ ೬೦ ರೂಪಾಯಿ ಸಿಗುತ್ತಿತ್ತು. ೧೮೬೦ರಲ್ಲಿ ನಡೆದ ಸೀನಿಯರ್ ಫೆಲೋಷಿಪ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ತಿಂಗಳಿಗೆ ೧೨೦ ರೂಪಾಯಿ ಪಡೆಯತೊಡಗಿದ. ೧೮೬೨ರಲ್ಲಿ ಮೊದಲನೇ ಬಾರಿ ನಡೆದ ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಮೊದಲನೆಯ ಸ್ಥಾನ ಪಡೆದ. ಅದೇ ವರ್ಷ ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು ಆನರ್ಸ್ ಪರೀಕ್ಷೆಯಲ್ಲಿ ಸುವರ್ಣ ಪದಕ ಗಳಿಸಿದ. ಅದರಿಂದ ಎಂ.ಎ. ಪದವಿಗೂ ಅರ್ಹತೆ ಗಳಿಸಿದ. ೧೮೬೬ರಲ್ಲಿ ಕಾಯಿದೆ ಪರೀಕ್ಷೆಯಲ್ಲೂ ಪ್ರಥಮ ವರ್ಗದಲ್ಲಿ ತೇರ್ಗಡೆಯಾದ. ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ವರ್ಗ ಅವನಿಗೆ ಕಾದಿತ್ತು. ಮಹಾದೇವ ಬುದ್ಧಿವಂತಿಕೆಯಿಂದ ಬೆಳಗುತ್ತ ಬೆಳೆದು ಎಲ್ಲರ ಗೌರವಕ್ಕೆ ಪಾತ್ರನಾದ.

ಎಂತಹ ವಿದ್ಯಾರ್ಥಿ!                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                              

ವಿದ್ಯಾರ್ಥಿಯಾಗಿದ್ದಾಗ ರಾನಡೆ ಯಾವಾಗಲೂ ಪುಸ್ತಕ ಓದುವುದರಲ್ಲಿ ಮಗ್ನರು. ಪಠ್ಯಪುಸ್ತಕಗಳನ್ನಷ್ಟೇ ಅಲ್ಲ, ವಿಷಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನೂ ಅವರು ಓದುತ್ತಿದ್ದರು. ಇತಿಹಾಸ ಮತ್ತು ಅರ್ಥಶಾಸ್ತ್ರ ಅವರ ಮೆಚ್ಚುಗೆಯ ವಿಷಯಗಳು. ಒಂದು ಪುಸ್ತಕ ಓದಿಯಾದ ಬಳಿಕ ಅದರ ಸಾರಾಂಶ ಬರೆದಿಡುವುದು ಅವರ ರೂಢಿ. ಸಮರ್ಪಕವಾಗಿ ಸಾರಾಂಶ ಬರೆಯಲು ಸಾಧ್ಯವಾದರೆ ಆ ಪು‌ಸ್ತಕದ ಸಾರ ತಿಳಿಯಿತೆಂಬುದು ಅವರ ನಂಬಿಕೆ. ಸಾರಾಂಶ ಬರೆಯಲು ಸಾಧ್ಯವಾಗದಿದ್ದರೆ ಇನ್ನೊಮ್ಮೆ ಅದೇ ಪುಸ್ತಕವನ್ನು ಓದಿ ಸಾರಾಂಶ ಬರೆಯುತ್ತಿದ್ದರು. ಇಂತಹ ನೂರಾರು ಟಿಪ್ಪಣಿ ಪುಸ್ತಕಗಳು ಅವರ ಬಳಿಯಿದ್ದವು. ಸಾರಾಂಶ ಓದಿದಾಗ ಅವರಿಗೆ ಆ ಪುಸ್ತಕದೊಳಗಿನ ಎಲ್ಲ ವಿವರಗಳು ನೆನಪಾಗಿ ಬಿಡುತ್ತಿದ್ದವು. ಹೀಗಾಗಿ ಅವರು ಓದಿದ ಎಲ್ಲ ಪುಸ್ತಕದೊಳಗಿನ ವಿಷಯ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದವು.

ಗಟ್ಟಿಯಾಗಿ ಓದುವುದು ಅವರ ಸ್ವಭಾವವಾಗಿತ್ತು. ಅದರಿಂದ ಕಿವಿಗಳ ಮುಖಾಂತರವೂ ಮನಸ್ಸಿಗೆ ವಿಷಯ ತಲುಪುತ್ತದೆಂದು ಅವರು ನಂಬಿದ್ದರು.

ಈ ವಿಶಾಲವಾದ ಓದಿನಿಂದ ವಿದ್ಯಾರ್ಥಿಗಳಾಗಿದ್ದಾಗಲೇ ಅವರು ತಮ್ಮ ಗುರುಗಳ ಮೆಚ್ಚುಗೆ ಗಳಿಸಿದರು. ಅವರು ಬಿ.ಎ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಇತಿಹಾಸದ ಪ್ರಶ್ನೆಗಳಿಗೆ ಬರೆದ ಉತ್ತರಗಳನ್ನು ಮೆಚ್ಚಿದ ಹೊವರ್ಡ್ ಎಂಬ ಪರೀಕ್ಷಕರು ಆ ಉತ್ತರ ಪುಸ್ತಕಗಳನ್ನು ಇಂಗ್ಲೆಂಡಿಗೆ ಒಯ್ದು ತಮ್ಮ ಗೆಳತಿಯರಿಗೆಲ್ಲ ತೋರಿಸಿದರಂತೆ. ಮುಂಬಯಿ ವಿದ್ಯಾಖಾತೆಯು ರಾನಡೆಯವರ ಕೆಲವು ಉತ್ತರಗಳನ್ನೂ ಅವರು ಓದಿದ ಪುಸ್ತಕಗಳ ವಿವರಗಳನ್ನೂ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಿತು.

ಅಧ್ಯಾಪಕ

ಜೂನಿಯರ್ ಫೋಲೋ ಆದಾಗ ಕಲಿಯುವ ಜೊತೆಗೆ ಕಲಿಸುವ ಕೆಲಸವನ್ನೂ ಅವರು ಮಾಡಬೇಕಾಯಿತು. ವಿದ್ಯಾರ್ಥಿಗಳು ಮೆಚ್ಚುವಂತೆ ಈ ಕೆಲಸ ಪೂರೈಸಿದರು. ಇತಿಹಾಸ, ಭೂಗೋಳ, ಗಣಿತ, ಅರ್ಥಶಾಸ್ತ್ರ, ತರ್ಕ ಶಾಸ್ತ್ರ, ನಿಬಂಧ ಲೇಖನ, ಇಂಗ್ಲಿಷ್ ಕವಿತೆ ಮುಂತಾದ ವಿವಿಧ ವಿಷಯಗಳನ್ನು ಅವರು ಕಲಿಸಿದರು. ವಿಷಯಗಳಿಗೆ ಸಂಬಂಧಪಟ್ಟ ಎಲ್ಲ ಪುಸ್ತಕಗಳನ್ನೂ ಓದಿಕೊಂಡು ಕಲಿಸುತ್ತಿದ್ದರು. ಕೇವಲ ಪರೀಕ್ಷೆಗಾಗಿ ಓದದೆ ಜ್ಞಾನ ಸಂಪಾದನೆ ಮಾಡಲು ಓದಿರೆಂದು ಅವರು ತಮ್ಮ ನಡತೆಯಿಂದಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇದರಿಂದ ಅವರ ಪ್ರಿನ್ಸಿಪಾಲರು ಸಹ ರಾನಡೆಯವರನ್ನು ಗೌರವಿಸುತ್ತಿದ್ದರು.

ಒಮ್ಮೆ ರಾನಡೆಯವರಿಗೆ ಪ್ರಿನ್ಸಿಪಾಲರ ಪಕ್ಕದ ಕೋಣೆಯಲ್ಲಿ ಕುಳಿತು ಓದುವ ಪ್ರಸಂಗ ಬಂತು. ಎಂದಿನಂತೆ ಅವರು ಗಟ್ಟಿಯಾಗಿ ಓದತೊಡಗಿದರು. ಇದರಿಂದ ಪ್ರಿನ್ಸಿಪಾಲರಿಗೆ ತೊಂದರೆಯಾಯಿತು. ಅವರು ಹೊರಗೆ ಬಂದು ನೋಡಿದಾಗ ಗಟ್ಟಿಯಾಗಿ ಓದುತ್ತಿದ್ದವರು ರಾನಡೆ ಎಂಬುದು ತಿಳಿಯಿತು. ಹೊರಗಿನ ಯಾವುದೇ ಸಂಗತಿಯ ಎಚ್ಚರವಿಲ್ಲದೆ ಅವರು ಓದಿನಲ್ಲಿ ಮಗ್ನರಾಗಿದ್ದರು ಪ್ರಿನ್ಸಿಪಾಲರು ಹೊರಬಂದದ್ದನ್ನು ನೋಡಿದ ಒಬ್ಬ ವಿದ್ಯಾರ್ಥಿ ರಾನಡೆ ಎಚ್ಚರಿಸಲು ಹೋದ. ಆದರೆ ಪ್ರಿನ್ಸಿಪಾಲರು ಆ ವಿದ್ಯಾರ್ಥಿಗೆ ರಾನಡೆಯವರ ಓದಿಗೆ ತೊಂದರೆ ಮಾಡದಂತೆ ತಿಳಿಸಿ, ತಮ್ಮ ಕೋಣೆಗೆ ಮರಳಿದರು. ರಾನಡೆಯವರ ಬಗ್ಗೆ ಅಷ್ಟೊಂದು ಗೌರವವಿತ್ತು ಪ್ರಿನ್ಸಿಪಾಲರಿಗೆ.

ರಾನಡೆಯವರ ವಿದ್ವತ್ತನ್ನು ಮೆಚ್ಚಿಕೊಂಡ ಮುಂಬಯಿ ವಿಶ್ವವಿದ್ಯಾಲಯವು ೧೮೬೫ರಲ್ಲಿ ಅವರನ್ನು ವಿಶ್ವ ವಿದ್ಯಾಲಯದ ಫೆಲೋ ಎಂದು ನೇಮಿಸಿ ಗೌರವಿಸಿತು. ಹೀಗೆ ಫೆಲೋ ಆದ ಭಾರತೀಯರಲ್ಲಿ ರಾನಡೆಯವರೇ ಮೊದಲಿಗರು.

ಜನಸೇವೆಯ ಪ್ರಾರಂಭ

ಜನರ ಸೇವೆ ಮಾಡಬೇಕೆಂಬ ವಿಚಾರ ರಾನಡೆಯವರ ಮನಸ್ಸಿನಲ್ಲಿ ಬಾಲ್ಯದಿಂದಲೂ ಇತ್ತು. ವಿದ್ಯಾರ್ಥಿಯಾಗಿದ್ದಾಗ ಸಮಯ ಹಾಳು ಮಾಡದೆ ಓದಿನಲ್ಲಿ ತೊಡಗಿದ್ದರೂ ಜನಸೇವೆಯ ಕೆಲಸ ಬಂದಾಗ  ಅವರು ಹಿಂಜರಿಯಲಿಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಮುಂಬಯಿಯಲ್ಲಿ ಪ್ರಕಟವಾಗುತ್ತಿದ್ದ ’ಇಂದು ಪ್ರಕಾಸ” ಎಂಬ ಇಂಗ್ಲಿಷ್ ಮರಾಠಿ ದ್ವೈಭಾಷಿಕ ಪತ್ರಿಕೆಯ ಇಂಗ್ಲಿಷ್ ವಿಭಾಗದ ಸಂಪಾದಕರಾಗಿ ಬರೆದ ಲೇಖನಗಳಿಂದ ಜನ ಜಾಗರಣೆಯ ಕಾರ್ಯ ಪ್ರಾರಂಭವಾಯಿತು. ೧೮೬೬ರಲ್ಲಿ ಶಿಕ್ಷಣ  ಮುಗಿಸಿ ಅವರು ಕೆಲಸಕ್ಕೆ ಸೇರುವ ತನಕ ಈ ಬರವಣಿಗೆಯ ಕೆಲಸ ನಡೆಯಿತು. ಮತ್ತು ಅವರ ವಿಷಯ ಪ್ರತಿಪಾದನೆಯನ್ನು ಎಲ್ಲರೂ ಮೆಚ್ಚಿ ಹೊಗಳಿದರು.

ರಾನಡೆಯವರು ತಾರುಣ್ಯಕ್ಕೆ ಕಾಲಿಡುತ್ತಿದ್ದ ಕಾಲದಲ್ಲಿ ಭಾರತದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪಿಡಬೇಕು. ೧೮೫೭ರಲ್ಲಿ ಭಾರತೀಯರು ಬ್ರಿಟಿಷ್ ಪ್ರಭುತ್ವದ ವಿರುದ್ಧ ಹೋರಾಟ ನಡೆಸಿ ಸೋತಿದ್ದರು. ಬ್ರಿಟನ್ನಿನ ರಾಣಿ ಭಾರತದ ಚಕ್ರವರ್ತಿನಿಯಾದಳು. ಜನ ಅಜ್ಞಾನದಲ್ಲಿ  ಮುಳುಗಿದ್ದರು. ತಮ್ಮ ಸ್ಥಿತಿ ಒಳ್ಳೆಯದೋ ಕೆಟ್ಟುದೋ ಎಂದು ಯೋಚಿಸರೂ ಅವರಿಗೆ ತಿಳಿವಳಿಕೆ ಇರಲಿಲ್ಲ. ವಿದ್ಯಾಭ್ಯಾಸ ಪಡೆದವರು ತೀರ ವಿರಳ. ದೇಶ ಜಡವಾಗಿ ಹೋಗಿತ್ತು. ಜನತೆ ಮಣ್ಣಿನ ಮುದ್ದೆಯಾಗಿದ್ದಿತು. ಸಂಪ್ರದಾಯದ ಪ್ರಕಾರ ಹೇಗೋ ಜೀವನ ಯಾಂತ್ರಿಕವಾಗಿ ನಡೆಯುತ್ತಿತ್ತು.

ಕಣ್ಣು ಬೇನೆ

ಸಮಯ ಸಿಕ್ಕಾಗಲೆಲ್ಲ ಓದಿನಲ್ಲಿ ಕಳೆದುದರಿಂದ  ರಾನಡೆಯವರಿಗೆ ಕಣ್ಣು ಬೇನೆ ಪ್ರಾರಂಭವಾಗಿ ೧೮೬೪ರಲ್ಲಿ ಅದು ಬಲಿಯಿತು. ಅವರು ವೈದ್ಯರ ಸಲಹೆಯಂತೆ ಆರು ತಿಂಗಳ ಕಾಲ ಕಣ್ಣುಗಳಿಗೆ ಪಟ್ಟಿಕಟ್ಟಿಕೊಂಡು ಬೆಳಕಿನಿಂದ ದೂರವಿರಬೇಕಾಯಿತು. ಆಗಲೂ ಗೆಳೆಯರು ಬಂದು ಪುಸ್ತಕಗಳನ್ನು ಓದಿ ಹೇಳುತ್ತಿದ್ದರು. ಆರು ತಿಂಗಳ ಕಾಲ ಔಷಧೋಪಚಾರ ನಡೆದರೂ ಕಣ್ಣು ಬೇನೆ ಪೂರ್ಣ ಗುಣವಾಗಲಿಲ್ಲ. ಒಂದು ಕಣ್ಣು ಕೊನೆಯ ತನಕವೂ ಮಂದವಾಗಿಯೇ ಉಳಿಯಿತು.

ಸರ್ಕಾರಿ ನೌಕರಿ

ರಾನಡೆಯವರ ಬುದ್ಧಿವಂತಿಕೆಯನ್ನು ಗುರುತಿಸಿದ ಆಗಿನ ಬ್ರಿಟಿಷ್ ಸರ್ಕಾರ. ಅವರು ಕಾಯಿದೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೂಡಲೇ ಅವರಿಗೆ ನೌಕರಿ ಕೊಟ್ಟಿತು. ೧೮೬೬ರ ಮೇ ೨೮ ರಂದು ಅವರನ್ನು ವಿದ್ಯಾ ಖಾತೆಯಲ್ಲಿ ಮರಾಠಿ ಭಾಷಾಂತರಕಾರರೆಂದು ತಿಂಗಳಿಗೆ ೨೦೦ ರೂಪಾಯಿಗಳ ಸಂಬಳದ ಮೇಲೆ ನೇಮಿಸಿತು.

ರಾನಡೆಯವರ ತಾಯಿ ತನ್ನ ಒಬ್ಬನೇ ಮಗ ಮಹಾದಡ್ಡನೆಂದು ಭಾವಿಸಿ ತಿಂಗಳಿಗೆ ಹತ್ತು ರೂಪಾಯಿಗಳನ್ನಾದರೂ ಗಳಿಸಬಲ್ಲನೋ ಇಲ್ಲವೋ ಎಂಬ ನಿರಾಸೆಯಿಂದ ಕಳವಳಗೊಂಡಿದ್ದರು. ಮಗನಿಗೆ ಈ ಕೆಲಸ ದೊರೆತದ್ದನ್ನು ಆಕೆ ಕಾಣಲಿಲ್ಲ. ಅಂದರೆ ಆಕೆ ೧೮೫೩ರಲ್ಲಿ ಸ್ವರ್ಗ ಸೇರಿದ್ದರು.

ಮರಾಠಿ ಭಾಷೆಯಲ್ಲಿ ಪ್ರಕಟವಾದ ಪುಸ್ತಕಗಳನ್ನೆಲ್ಲ ಓದಿ ಅವುಗಳ ವಿಷಯವನ್ನು ಇಂಗ್ಲೀಷಿನಲ್ಲಿ ಬರೆದು  ಸರ್ಕಾರಕ್ಕೆ ಒಪ್ಪಿಸುವ ಕೆಲಸ ರಾನಡೆಯವರದು. ಪುಸ್ತಕ ಓದಿ ಸಾರಾಂಶ ಬರೆದು ರೂಢಿಯಿದ್ದ ಅವರು ಈ ಕೆಲಸವನ್ನು ಸುಲಭವಾಗಿ ಮಾಡಿ ಹಿರಿಯ ಅಧಿಕಾರಿಗಳ ಮೆಚ್ಚುಗೆ ಗಳಿಸಿದರು. ಇದೇ ಸಮಯದಲ್ಲಿ ಅವರು ಕೆಲಕಾಲ ಅಕ್ಕಲಕೋಟೆ ಸಂಸ್ಥಾನದ ಆಡಳಿತಗಾರರಾಗಿ ಕೆಲಸ ನಿರ್ವಹಿಸಿದರು. ಆ ಬಳಿಕ ಅದಕ್ಕಿಂತ ದೊಡ್ಡದಾದ ಕೊಲ್ಲಾಪುರ ಸಂಸ್ಥಾನದಲ್ಲಿ ನ್ಯಾಯಾಧೀಶರಾಗಿ ನೇಮಕ ಗೊಂಡರು. ಆಗ ನಡೆದ ಒಂದು ಘಟನೆ ಅವರ ನ್ಯಾಯನಿಷ್ಠೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ನ್ಯಾಯದಲ್ಲಿ ನಿಷ್ಠೆ.

ರಾನಡೆಯವರು ಕೊಲ್ಲಾಪುರದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಾಗ ಅವರ ತಂದೆ ಗೋವಿಂದ ರಾಯರು ಅಲ್ಲಿ ಸಂಸ್ಥಾನಿಕರ ಆಪ್ತ ಕಾರ್ಯದರ್ಶಿಯಾಗಿದ್ದರು. ಒಂದು ಪ್ರಕರಣದಲ್ಲಿ ಗೋವಿಂದರಾಯರ ಶ್ರೀಮಂತ ಗೆಳೆಯರು ಪ್ರತಿವಾದಿಗಳಾಗಿದ್ದರು. ಅವರು ನ್ಯಾಯಾಧೀಶರಾಗಿದ್ದ ಮಗನ ಮೇಲೆ ಪ್ರಭಾವ ಬೀರಲು ಗೋವಿಂದ ರಾಯರಿಗೆ ಬಲವಂತ ಮಾಡಿದರು. ಮಗನ ಸ್ವಭಾವ ತಿಳಿದಿದ್ದ ತಂದೆ ಮೊದಲು ಒಪ್ಪಲಿಲ್ಲ. ಆದರೆ ಒತ್ತಾಯ ಬಹಳವಾದಾಗ ನಿರುಪಾಯವಾಗಿ ಮಗನ ಬಳಿಗೆ ಗೆಳೆಯರನ್ನು ಕರೆದುಕೊಂಡು ಹೋದರು. ರಾನಡೆಯವರಿಗೆ ಕೂಡಲೇ ಪರಿಸ್ಥಿತಿಯ ಅರಿವಾಯಿತು. ’ಈಗ ನನಗೆ ಸಮಯವಿಲ್ಲ ಇನ್ನೊಮ್ಮೆ ಸಮಯವಾದಾಗ ತಿಳಿಸುತ್ತೇನೆ’ ಎಂದು ಗೆಳೆಯರನ್ನು ಕಳುಹಿಸಿಬಿಟ್ಟರು.

ನೀವು ಇಂತಹ ಪ್ರಸಂಗಕ್ಕೆ ಅವಕಾಶ ಕೊಡಕೂಡದು

ಅವರು ಎದ್ದು ಹೋದ ಬಳಿಕ ತಂದೆಗೆ ಹೇಳಿದರು : ’ನೋಡಿ, ನಾನಿಲ್ಲಿ ಬಂದದ್ದು ನ್ಯಾಯ ನೀಡಲಿಕ್ಕೇ ಹೊರತು ನಮ್ಮವರ ಪರವಾಗಿ ನಿರ್ಣಯ ನೀಡಲಿಕ್ಕಲ್ಲ. ನಿಮಗೆ ಇಲ್ಲಿ ಬಹಳ ಗೆಳೆಯರಿದ್ದಾರೆ. ಪ್ರತಿಯೊಬ್ಬರೂ ನಿಮಗೆ ಒತ್ತಾಯ ಮಾಡಬಹುದು. ಆದರೆ ನೀವು ಇಂತಹ ಪ್ರಸಂಗಕ್ಕೆ ಅವಕಾಶ ಕೊಡಕೂಡದು. ಇಲ್ಲವಾದರೆ ನಾನು ಬೇರೆ ಉರಿಗೆ ವರ್ಗಮಾಡಿಕೊಳ್ಳಬೇಕಾದೀತು. ನನ್ನ ಕರ್ತವ್ಯ ಪಾಲನೆಯಲ್ಲಿ ನೀವು ಸಹಾಯ ಮಾಡುವಿರಿ’ ಎಂದು ನಂಬಿದ್ದೇನೆ’.

ಮಗನ ಈ ಮಾತುಗಳನ್ನು ಕೇಳಿದ ತಂದೆ ಮುಂದೆ ಅಂತಹ ಪ್ರಸಂಗಕ್ಕೆ ಎಡೆ ಕೊಡಲಿಲ್ಲ.

ರಾನಡೆಯವರು ಅಡ್ವಿಕೇಟ್ ಪರೀಕ್ಷೆ ಪಾಸಾಗಬೇಕಾಗಿತ್ತು. ಅದಕ್ಕಾಗಿ ನ್ಯಾಯಾಧೀಶರ ಹುದ್ದೆ ಬಿಟ್ಟು ಮುಂಬಯಿಯ ಎಲ್ ಫಿನ್ ಸ್ಟನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿ ಸೇರಿದರು. ಜೊತೆಗೆ ೧೮೭೧ರಲ್ಲಿ ಅಡ್ವೊಕೇಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾದರು.

ಪರೀಕ್ಷೆಯಲ್ಲಿ ಜಯ ಗಳಿಸಿದ ಕೂಡಲೇ ಅವರಿಗೆ ಮುಂಬಯಿ ಸರ್ಕಾರದ ನ್ಯಾಯ ಖಾತೆಯಲ್ಲಿ ನೌಕರಿಗಾಗಿ ಕರೆ ಬಂತು. ಅವರು ಮುಂಬಯಿಯಲ್ಲಿ ಪೊಲೀಸ್ ಮ್ಯಾಜಿಸ್ಟ್ರೇಟ್ ರೆಂದು ನೇಮಕಗೊಂಡರು. ಅವರ ಕೆಲಸವನ್ನು ಮೆಚ್ಚಿದ ಸರ್ಕಾರ ಅವರನ್ನು ಅದೇ ವರ್ಷ ಪುಣೆಯಲ್ಲಿ ಪ್ರಥಮ ದರ್ಜೆಯ ಉಪನ್ಯಾಯಾಧೀಶರಾಗಿ ನೇಮಕ ಮಾಡಿತು. ಆಗ ಅವರ ಸಂಬಳ ತಿಂಗಳಿಗೆ ಎಂಟು ನೂರು ರೂಪಾಯಿಗಳು. ಸಾಮಾನ್ಯವಾಗಿ ಈ ಹುದ್ದೆ ನ್ಯಾಯ ಖಾತೆಯಲ್ಲಿ ೧೫-೨೦ ವರ್ಷ ಕೆಲಸ ಮಾಡಿದ ಬಳಿಕ ಸಿಕ್ಕುವಂತಹುದು. ಆದರೆ ರಾನಡೆಯವರಿಗೆ ಪ್ರಾರಂಭದಲ್ಲಿಯೇ ದೊರೆಯಿತು. ಇದೇ ಅವರ ನ್ಯಾಯ ನಿರ್ಣಯದ ಸಾಮರ್ಥ್ಯವನ್ನು ತೋರಿಸುತ್ತದೆ.

ಉಪನ್ಯಾಯಾಧೀಶರಾಗಿ ಅವರು ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತೀರ್ಪು ನೀಡುತ್ತಿದ್ದರು. ಇದರಿಂದ ಸರ್ವ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರು ಸಹ ಸಂತಸಪಟ್ಟರು.

ಮದುವೆ – ಸಮಸ್ಯೆ

ಆಗಿನ ಕಾಲದ ರೂಢಿಯಂತೆ ರಾನಡೆಯವರ ಮದುವೆ ಹದಿಮೂರನೆಯ ವಯಸ್ಸಿಗೇ ಆಗಿತ್ತು. ಹೆಂಡತಿ ಸಖೂ ಬಾಯೀ, ಆಕೆ ಬಹುಕಾಲ ಬಾಳಲಿಲ್ಲ. ಕ್ಷಯ ರೋಗದಿಂದ ಬಳಲುತ್ತಿದ್ದ ಅವಳ ಸೇವೆಯನ್ನು ರಾನಡೆಯವರು ಶಕ್ತಿ ಮೀರಿ ಮಾಡಿದರು. ಆದಷ್ಟು ಸಮಯವನ್ನು ಆಕೆಯ ಉಪಚಾರ ದಲ್ಲಿ ತೊಡಗಿಸುತ್ತಿದ್ದರು. ಆದರೆ ಕಷ್ಟಕ್ಕೆ ತಕ್ಕ ಫಲ ಸಿಗಲಿಲ್ಲ. ೧೮೭೩ರಲ್ಲಿ ಆಕೆ ನಿಧನರಾದರು.

ಇಷ್ಟು ಹೊತ್ತಿಗೆ ರಾನಡೆಯವರ ಜೀವನದ ಇನ್ನೊಂದು ಮುಖ ರೂಪುಗೊಳ್ಳತೊಡಗಿತ್ತು. ಅದೆಂದರೆ ಸಮಾಜ ಸುಧಾರಣಾ ಕಾರ್ಯ. ಆಗಿನ ಕಾಲದ ಹಿಂದು ಸಮಾಜದಲ್ಲಿ ಕೆಲವು ಅನಿಷ್ಟ ಪದ್ದತಿಗಳು ರೂಢಿಯಾಗಿದ್ದವು. ಬಾಲ್ಯ ವಿವಾಹದ ಮೂಲಕ ಅನೇಕ ಹುಡುಗಿಯರು ಯೌವನಕ್ಕೆ ಕಾಲಿಡುವ ಮೊದಲೇ ವಿಧವೆಯರಾಗಿ ಬಿಡುತ್ತಿದ್ದರು. ವಿಧವೆಯರನ್ನು ಸಮಾಜವು ಪಶುಗಳಿಗಿಂತ ಕೀಳಾಗಿ ಕಾಣುತ್ತಿತ್ತು. ಅವರ ಪಾಡನ್ನು ಸುಧಾರಿಸಬೇಕೆಂದು ವಿಷ್ಣುಶಾಸ್ತ್ರಿ ಪಂಡಿತರೆಂಬುವರು ’ವಿಧವಾ ವಿವಾಹೋತ್ತೇಜಕ ಮಂಡಳ’ ವನ್ನು ಸ್ಥಾಪಿಸಿ ಬಾಲವಿಧವೆಯರ ಪುನರ್ವಿವಾಹಕ್ಕಾಗಿ ಪ್ರಯತ್ನಿಸುತ್ತಿದ್ದರು. ರಾನಡೆಯವರು ಪಂಡಿತರ ಬಲಗೈಯಾಗಿ ಕೆಲಸ ಮಾಡತೊಡಗಿದರು. ಇವರೆಲ್ಲರ ಪ್ರಯತ್ನದ ಫಲವಾಗಿ ೧೮೬೯ರ ಜೂನ್ ಹದಿನೈದರಂದು ಮೊದಲನೆಯ ವಿಧವಾ ವಿವಾಹ ನೆರವೇರಿತು.

೧೮೭೩ರಲ್ಲಿ  ಹೆಂಡತಿ ಸಖೂಬಾಯಿ ತೀರಿಕೊಂಡಾಗ ರಾನಡೆಯವರು ಒಬ್ಬ ವಿಧವೆಯನ್ನೇ ಮದುವೆಯಾಗಬೇಕೆಂದು ಅವರ ಸಂಗಡಿಗರು ಸೂಚಿಸಿದರು. ಆದರೆ ರಾನಡೆಯವರದು ಸನಾತನಿಗಳ ಮನೆತನ. ಅವರ ತಂದೆ ಹಳೆಯ ಸಂಪ್ರದಾಯದ ಅಭಿಮಾನಿ. ಮಗ ವಿಧವೆಯನ್ನು ಮದುವೆಯಾದರೆ ಕುಲದ ಕೀರ್ತಿಗೆ ಧಕ್ಕೆ ತಲುಗುವುದೆಂದು ಅವರ ಭಾವನೆ.

ಉಭಯ ಸಂಕಟ

ರಾನಡೆಯವರು ಉಭಯ ಸಂಕಟದಲ್ಲಿ ಬಿದ್ದರು. ಗೆಳೆಯರ ಮಾತನ್ನು ನಡೆಸಿದರೆ ತಂದೆಗೆ ದ್ರೋಹ ಬಗೆದಂತೆ; ತಂದೆಯ ಮಾತನ್ನು ನಡೆಸಿದರೆ ಕೈಗೊಂಡ ಕಾರ್ಯಕ್ಕೆ ಧಕ್ಕೆ. ’ವಿಧವೆಯರ ಉದ್ಧಾರಕ್ಕಾಗಿ ಹೊರಟವನೇ ವಿಧವಾ ವಿವಾಹ ಮಾಡಿಕೊಳ್ಳಿಲ್ಲ’. ಎಂಬ ಟೀಕೆಗೆ ಗುರಿಯಾಗುವ ಪ್ರಸಂಗ. ಅದಕ್ಕಾಗಿ ಅವರು, ನಾನು ವಿಧವೆಯನ್ನು ಮದುವೆಯಾಗಬಾರದೆಂದಿದ್ದರೆ ಯಾರನ್ನೂ ಮದುವೆಯಾಗುವುದಿಲ್ಲ’ ಎಂದು ತಂದೆಗೆ ಹೇಳಿ ನೋಡಿದರು. ಇದರಿಂದ ತಂದೆಯ ಸಿಟ್ಟು ಹೆಚ್ಚಾಯಿತೇ ಹೊರತು ಬೇರೇನೂ ಪ್ರಯೋಜನವಾಗಲಿಲ್ಲ. ತಂದೆ ’ನೀನು ನನ್ನ ಮಾತು ಕೇಳದಿದ್ದರೆ ನನ್ನ ನಿನ್ನ ಸಂಬಂಧ ಇಲ್ಲಿಗೇ ಮುಗಿಯಿತೆಂದು ತಿಳಿ. ನಾನಷ್ಟೇ ಅಲ್ಲ, ನಮ್ಮ ಮನೆಯ ಯಾರೂ ಎಂದಿಗೂ ನಿನ್ನ ಮುಖ ನೋಡಲಿಕ್ಕಿಲ್ಲ’ ಎಂದು ಕೂಗಾಡಿದರು.

ರಾನಡೆಯವರು ಗಂಭೀರವಾಗಿ ವಿಚಾರ ಮಾಡಬೇಕಾಯಿತು. ವಿಧವಾ ವಿವಾಹೋತ್ತೇಜಕ ಮಂಡಳದಲ್ಲಿ ಇದ್ದುದರಿಂದ ಈಗಾಗಲೇ ಸಂಪ್ರದಾಯವಾದಿಗಳು ಅವರ ಮೇಲೆ ಬಹಿಷ್ಕಾರ ಹಾಕಿದ್ದರು. ಮತ್ತು ಈ ಬಹಿಷ್ಕಾಋದ ಬಿಸಿ ಮನೆಯಲ್ಲಿಯ ಇತರರಿಗೆ ತಗಲಬಾರದೆಂದು ಅವರು ಮನೆಯಲ್ಲಿ ಯಾರ ಜೊತೆಗೂ ಊಟಕ್ಕೆ ಕೂಡುತ್ತಿರಲಿಲ್ಲ. ಜೊತೆಗೆ ಕೂತು ಉಂಡವರನ್ನು ಸಮಾಜ ಬಹಿಷ್ಕರಿಸುವ ಭೀತಿಯಿತ್ತು. ತುಂಬಿದ ಮನೆ ಅವರದು. ಮನೆಯಲ್ಲಿ ಮಲತಾಯಿಯಲ್ಲದೆ ಬಾಲ ವಿಧವೆಯ ಬಾಳನ್ನು ಅನುಭವಿಸುತ್ತಿದ್ದ ತಂಗಿಯೂ ಇದ್ದಳು. ಬಂಧು – ಬಳಗವೂ ದೊಡ್ಡದಾಗಿತ್ತು. ರಾನಡೆಯವರಿಗೆ ಬಹಿಷ್ಕಾರ ಹಾಕಿದಂದಿನಿಂದ ಬಳಗದವರು ಮನೆಯಲ್ಲಿ ಬಂದು ಹೋಗುವುದೂ ಕಡಿಮೆಯಾಗಿತ್ತು. ಹೀಗಾಗಿ ಮನೆಯಲ್ಲಿ ಸಮಾಧಾನದ ವಾತಾವರಣ ಇರಲಿಲ್ಲ. ಬಾಲ್ಯದಿಂದಲೇ ರಾನಡೆಯವರಿಗೆ ಹಿರಿಯರಲ್ಲಿ ಬಹಳ ಭಕ್ತಿ. ಹಿರಿಯರ ಮನಸ್ಸಿಗೆ ನೋವಾಗದಂತೆ ಯಾವಾಗಲೂ ನಡೆದುಕೊಳ್ಳುತ್ತಿದ್ದರು. ಈಗ ಅವರು ತಂದೆಯ ಮಾತನ್ನು ಮೀರಿದರೆ ತಂದೆಯ ಸಂಗಡ ಮನೆಯವರೆಲ್ಲ ಅವರನ್ನು ಬಿಟ್ಟು ಹೋಗುವ ಪ್ರಸಂಗ. ಮನೆತನದ ಮೇಲೆ ಭಯಾನಕ ಗಂಡಾಂತರ!

ಮತ್ತೆ ಮದುವೆ

ಅದಕ್ಕಾಗಿ ಅವರು ತಂದೆಯ ಮಾತನ್ನು ಒಪ್ಪಿ ಮದುವೆಗೆ ಸಿದ್ಧರಾದರು. ಆದರೆ ಯಾವುದೇ ರೀತಿಯ ಆಡಂಭರವಿರಬಾರದೆಂದು ಎಚ್ಚರಿಕೆ ನೀಡಿದರು. ಅದರಂತೆ ೧೮೭೩ರ ಡಿಸೆಂಬರ್ ನಲ್ಲಿ ಅವರ ಎರಡನೇ ಮದುವೆ ನೆರವೇರಿತು. ಮುಂದೆ ಮಹಾರಾಷ್ಟ್ರದಲ್ಲಿ ಅನೇಕ ವಿಧದ ಸಾಮಾಜಿಕ ಸುಧಾರಣೆಗಳನ್ನು ಮಾಡಿ ಕೀರ್ತಿ ಗಳಿಸಿದ ರಮಾಬಾಯಿಯವರೇ ಅವರ ಎರಡನೇ ಹೆಂಡತಿ.

ಮದುವೆಯ ದಿನ ರಾನಡೆಯವರು ನ್ಯಾಯಾಲಯದ ಕೆಲಸದಿಂದ ರಜೆ ಪಡೆಯಲಿಲ್ಲ. ಅದನ್ನು ಮುಗಿಸಿ ನೇರವಾಗಿ ಮದುವೆಯ ಸ್ಥಳಕ್ಕೆ ಹೋಗಿ ಮದುವೆಯ ಧಾರ್ಮಿಕ ವಿಧಿಗಳನ್ನು ಮುಗಿಸಿ ಹೆಂಡತಿಯ ಸಂಗಡ ನಡೆದುಕೊಂಡೇ ಮನೆಗೆ ಬಂದರು. ಯಾವುದೇ ತರಹದ ಮೆರವಣಿಗೆ, ಸಮಾರಂಭ, ವಾದ್ಯ ಮುಂತಾದವು ಇರಲಿಲ್ಲ. ಮನೆಗೆ ಬಂದ ಬಳಿಕ ತಮ್ಮ ಕೋಣೆಗೆ ಹೋಗಿ ದುಃಖಿಸಿದರು.  ಅವರ ಜೀವನದಲ್ಲಿ ಅತ್ಯಂತ ಹೆಚ್ಚಿನ ದುಃಖದ ದಿನವೆಂದರೆ ಅದೇ.,

ಆದರೆ ಅವರು ಹೆಂಡತಿಯನ್ನು ಅಲಕ್ಷಿಸಲಿಲ್ಲ. ಅಕ್ಷರಗಳನ್ನೂ ಕೂಡ ಕಲಿಯದಿದ್ದವಳಿಗೆ ಮರಾಠಿ ಮತ್ತು ಇಂಗ್ಲಿಷ್ ಕಲಿಸತೊಡಗಿದರು. ತಮ್ಮ ಎಲ್ಲ ಸಾಮಾಜಿಕ ಕೆಲಸಗಳಲ್ಲಿ ಆಕೆ ಸಹಕಾರಿಣಿಯಾಗುವಂತೆ ತರಬೇತಿ ನೀಡಿದರು. ಈ ಕೆಲಸಕ್ಕೆ ಅವರ ತಂದೆ, ಮಲತಾಯಿ, ಚಿಕ್ಕಮ್ಮ, ತಂಗಿ ಮುಂತಾದವರಿಂದ ಬಹಳ ವಿರೋಧವಾಯಿತು. ರಮಾಬಾಯಿಯವರು ಮನೆಯಲ್ಲಿ ನಾನಾ ಬಗೆಯ ಅಪಮಾನ ಸಹಿಸಬೇಕಾಯಿತು. ಆದರೂ ಗಂಡ ಹೆಂಡತಿ ಇಬ್ಬರೂ ಅತ್ಯಂತ ತಾಳ್ಮೆಯಿಂದ ಎಲ್ಲವನ್ನೂ ಸಹಿಸಿದರು. ೧೮೭೭ರ ಮಾರ್ಚ್ ತಿಂಗಳಿನಲ್ಲಿ ತಂದೆ ಸ್ವರ್ಗಸ್ಥರಾದ ಬಳಿಕ ಈ ವಿರೋಧ  ಕಡಿಮೆಯಾಗತೊಡಗಿತು.

ಸಾರ್ವಜನಿಕ ಸೇವೆ

ರಾನಡೆಯವರು ಪುಣೆಗೆ ಬಂದ ಬಳಿಕ ಅಲ್ಲಿಯ ಸಾಮಾಜಿಕ ಜೀವನದಲ್ಲಿಯೂ ಅವರ ಪ್ರವೇಶವಾಯಿತು. ೧೮೭೦ರಲ್ಲಿ ಸ್ಥಾಪನೆಯಾದ ಪುಣೆಯ ಸಾರ್ವಜನಿಕ ಸಭೆಯು ಜನತೆಯ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡುತ್ತಿತ್ತು. ರಾನಡೆಯವರು ೧೮೭೧ರಿಂದ ಅದರ ಮುಂದಾಳುಗಳಾಗಿ ಉತ್ಸಾಹದಿಂದ ಕೆಲಸ ಮಾಡತೊಡಗಿದರು. ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ಸಂಗತಿಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಹಬ್ಬಿಸಲು ಉಪನ್ಯಾಸ ನೀಡಿದರು. ಪತ್ರಿಕೆಗಳಲ್ಲಿ ಲೇಖನ ಬರೆದರು. ಸ್ವದೇಶಿ ಆಂದೋಲನ ಪ್ರಾರಂಭಿಸಿದರು. ಆರ್ಯ ಸಮಾಜದ ಶಾಖೆಯನ್ನು ತೆರೆದರು. ಇತರ ಪ್ರಾಂತಗಳಲ್ಲಿದ್ದ ಗೆಳೆಯರಿಗೆ ಪತ್ರ ಬರೆದು ಅಲ್ಲಲ್ಲಿ ಇಂತಹ ಸಂಸ್ಥೆ ಸ್ಥಾಪಿಸಿ ಜನಜಾಗೃತಿ ಮಾಡಲು ಹುರಿದುಂಬಿಸಿದರು.

ಈ ಅವಧಿಯಲ್ಲಿ ಮತ್ತೂ ಮುಂದೆ ರಾನಡೆಯವರು ಹಲವು ಬಗೆಯ ಸುಧಾರಣೆಗಳಿಗಾಗಿ ಹೋರಾಡಿದರು. ಹುಡುಗರಿಗೆ ಹದಿನೇಳು ವರ್ಷಕ್ಕೆ ಮುಂಚೆ, ಹುಡುಗಿಯರಿಗೆ ಹತ್ತು ವರ್ಷಕ್ಕೆ ಮುಂಚೆ ಮದುವೆ ಮಾಡಕೂಡದೆಂದು ಕಾನೂನು ಮಾಡಬೇಕು. ಹೆಂಗಸರಿಗೆ ಹಿಂದಿನ ಶಾಸ್ತ್ರಗಳ ಪ್ರಕಾರವೂ ಅನೇಕ ಹಕ್ಕುಗಳಿದ್ದವು. ಈಗ ಅವು ಮಾಯವಾಗಿವೆ. ಹೆಂಗಸರಿಗೂ ಕಾನೂನು ಪ್ರಕಾರ ಹಕ್ಕುಗಳು ದೊರೆಯಬೇಕು. ಹಿಂದೂ ಸಮಾಜದಲ್ಲಿನ ದೋಷಗಳನ್ನು ಸರಿಪಡಿಸಲು ಇಡೀ ಭಾರತದಲ್ಲಿ ಪ್ರಯತ್ನ ನಡೆಸಲು ಸಂಸ್ಥೆಯೊಂದನ್ನು ರೂಪಿಸಬೇಕು. ಈ ಎಲ್ಲ ಗುರಿಗಳಿಗಾಗಿ ಅವರು ಶ್ರಮಿಸಿದರು.

೧೮೭೬-೭೭ರಲ್ಲಿ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಬರಗಾಲ ಬಂದಾಗ ರಾನಡೆಯವರು ಸಾರ್ವಜನಿಕ ಸಭೆಯ ಕಾರ್ಯಕರ್ತರ ಮೂಲಕ ಬರಗಾಲ ಪೀಡಿತ ಜನರಿಗೆ ಬಹಳಷ್ಟು ಸೇವೆ ಸಲ್ಲಿಸಿದರು. ೧೮೭೮ರಲ್ಲಿ ಪುಣೆಯಲ್ಲಿ ಪ್ರಾರ್ಥನಾ ಸಮಾಜದ ಶಾಖೆ ಪ್ರಾರಂಭಿಸಿದವರಲ್ಲಿ ರಾನಡೆಯವರು ಮುಂದಾಳುಗಳಾಗಿದ್ದರು. ರಾನಡೆಯವರ ೬-೭ ವರ್ಷಗಳ ಪ್ರಯತ್ನದ ಫಲವಾಗಿ ಪುಣೆಯ ವಾತಾವರಣ ಬದಲಾಗತೊಡಗಿತು. ಜನರಲ್ಲಿ ಬ್ರಿಟಿಷ್ ಗುಲಾಮಗಿರಿಯ ವಿರುದ್ಧ ವಿಚಾರ, ಮಾತುಕತೆ ಪ್ರಾರಂಭವಾದವು.

ಇದು ಸರ್ಕಾರಕ್ಕೆ ಸಹನೆಯಾಗಲಿಲ್ಲ. ಇವೆಲ್ಲಕ್ಕೆ ಕಾರಣರಾದ ರಾನಡೆಯವರಿಗೆ ೧೮೭೮ರ ಜನವರಿಯಲ್ಲಿ ಪುಣೆಯಿಂದ ನಾಸಿಕಕ್ಕೆ ವರ್ಗವಾಯಿತು., ಅಲ್ಲಿ ಅವರ ಆರೋಗ್ಯ ಕೆಟ್ಟಿತು. ಮತ್ತು ಫೆಬ್ರವರಿ ತಿಂಗಳಲ್ಲಿ ಅವರು ಪುಣೆಗೆ ಬಂದು ವಿಷಮಶೀತಜ್ವರದಿಂದ ಮಲಗಿಬಿಟ್ಟರು. ಗುಣವಾಗಲು ಬಹುಕಾಲ ಹಿಡಿಯಿತು. ೧೮೭೯ರ ಮೇ ತಿಂಗಳಿನ ಒಂದು ರಾತ್ರಿ ಪುಣೆಯ ವಿಶ್ರಾಮಭಾಗ ಮತ್ತು ಬುಧವಾರ ವಾಡಾ (ಪೇಶ್ವೆ ಕಾಲದ ವಿಶಾಲ ಅರಮನೆಗಳು) ಗಳಿಗೆ ಬೆಂಕಿ ಬಿತ್ತು. ಈ ದುಷ್ಕೃತ್ಯದ ಹಿಂದೆ ರಾನಡೆಯವರ ಪ್ರೇರಣೆಯಿರಬೇಕೆಂದು ಬ್ರಿಟಿಷ್ ಸರ್ಕಾರ ಸಂಶಯಪಟ್ಟಿತು. ಆದರೆ ರಾನಡೆ ಯವರು ಮಾತ್ರ ಸರ್ಕಾರದ ಮೇಲೆ ಸಿಟ್ಟಾಗದೆ ಬೆಂಕಿ ಕೊಟ್ಟ ದುಷ್ಟನನ್ನು ಹುಡುಕಿ ತೆಗೆಯಲು ಸಹಾಯ ಮಾಡಿದರು. ಆದರೂ ಸರ್ಕಾರದ  ಸಂಶಯ ದೂರವಾಗಲಿಲ್ಲ. ಅದು ೧೮೭೯ರ ಜೂನ್ ೧ ರಂದು ರಾನಡೆಯವರನ್ನು ನಾಸಿಕ್ ನಿಂದ ಮರುಳುಗಾಡಿನ ದುಳೆಗೆ ವರ್ಗ ಮಾಡಿತು.

ಗೌರವದ ಸ್ಥಾನ -ಮಾನ

ಆದರೆ ರಾನಡೆಯವರು ಅಲ್ಲಿ ಬಹಳ ದಿನ ಬೇಯಬೇಕಾಗಿ ಬರಲಿಲ್ಲ. ಮುಂಬಯಿ ಪ್ರಾಂತ್ಯಕ್ಕೆ ಜೇಮ್ಸ್ ಫರ್ಗ್ಯುಸನ್ ಎಂಬ ಸಜ್ಜನರು ಗವರ್ನರ್ ಆಗಿ ನೇಮಕ ಗೊಂಡರು. ಅವರಿಗೆ ರಾನಡೆಯವರ ಯೋಗ್ಯತೆ ತಿಳಿದಿತ್ತು. ಅವರು ರಾನಡೆಯವರನ್ನು ೧೮೮೧ರ್ ಜನವರಿಯಲ್ಲಿ ಮುಂಬಯಿಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟರೆಂದು ನೇಮಕ ಮಾಡಿ ತಮ್ಮ ಸಜ್ಜನಿಕೆಯನ್ನು ತೋರಿಸಿದರು. ಕೆಲವೇ ದಿನಗಳಲ್ಲಿ ಅವರನ್ನು ಪುನಃ ಮೊದಲನೇ ದರ್ಜೆಯ ಉಪನ್ಯಾಯಾಧೀಶರೆಂದು ನೇಮಿಸಿ ಪುಣೆಗೆ ಕಳುಹಿಸಿದರು.

ಆ ವರ್ಷ ರೈತರ ಸ್ಥಿತಿ ಸುಧಾರಿಸುವ ಸಲುವಾಗಿ ಒಂದು ಕಾನೂನು ಜಾರಿಗೆ ಬಂದಿತ್ತು. ಆ ಕಾನೂನಿನಂತೆ ಕೆಳಗಿನ ನ್ಯಾಯಾಲಯಗಳ ಮೇಲ್ಚಿಚಾರಣೆಗಾಗಿ ನೇಮಿಸಲಾದ ವಿಶೇಷ ನ್ಯಾಯಾಧೀಶರಾದ ಪೋಲನ್ ಎಂಬುವರ ಸಹಾಯಕರಾಗಿ ಸರ್ಕಾರ ರಾನಡೆಯವರನ್ನು ನೇಮಿಸಿತು.  ರಾನಡೆಯವರ ವಿಷಯಗ್ರಹಣ ಶಕ್ತಿ ಮತ್ತು ನ್ಯಾಯ ಬುದ್ಧಿಗಳನ್ನು ಮೆಚ್ಚಿದ ಪೋಲನ್ ರು ತಮ್ಮ ನಿವೃತ್ತಿಯ ಬಳಿಕ ತಮ್ಮ ಸ್ಥಾನದಲ್ಲಿ ರಾನಡೆಯವರನ್ನೇ ನೇಮಿಸಬೇಕೆಂದು ಬರೆದು ತಿಳಿಸಿದಂತೆ ೧೮೮೫ರಲ್ಲಿ ರಾನಡೆಯವರು ವಿಶೇಷ ನ್ಯಾಯಾಧೀಶರೆಂದು ನೇಮಕಗೊಂಡರು.

ರೈತರ ಸುಧಾರಣೆಯ ಮೇಲ್ವಿಚಾರಣೆಗಾಗಿ ವಿಶೇಷ ನ್ಯಾಯಾಧೀಶರೆಂದು ನೇಮಕಗೊಂಡ ಬಳಿಕ ರಾನಡೆಯವರು ಸಣ್ಣಪುಟ್ಟ ಹಳ್ಳಿಗಳಿಗೂ ಭೇಟಿಯಿತ್ತು ರೈತರ ತೊಂದರೆಗಳನ್ನು ಪ್ರತ್ಯಕ್ಷ ಕಂಡರು. ತಮ್ಮ ಅನಾರೋಗ್ಯವನ್ನು ಕೂಡ ಲೆಕ್ಕಿಸದೆ ಪ್ರವಾಸ ಮಾಡಿದರು.

ರಾನಡೆಯವರು ವಿದ್ಯಾರ್ಥಿಯಾಗಿದ್ದಾಗಲೇ ಅರ್ಥ ಶಾಸ್ತ್ರದ ವಿಶೇಷ ಅಭ್ಯಾಸ ಮಾಡಿದ್ದರು. ಅವರು ಕೆಲಸಕ್ಕೆ ಸೇರಿದ ಮೇಲೆ ಸಹ ತಮ್ಮ ಅಭ್ಯಾಸವನ್ನು ಮುಂದುವರಿಸಿದ್ದರು. ಹೀಗಾಗಿ ಆಗಿನ ಕಾಲದ ಭಾರತೀಯರಲ್ಲಿ, ಆರ್ಥಶಾಸ್ತ್ರದಲ್ಲಿ ಪಂಡಿತರೆಂದರೆ ರಾನಡೆಯವರೆಂಬ ಕೀರ್ತಿ ಹಬ್ಬಿತ್ತು. ಆದುದರಿಂದ ೧೮೮೬ರಲ್ಲಿ ನೇಮಕಗೊಂಡ ಆರ್ಥಿಕ ಸಮಿತಿಯ ಸದಸ್ಯರನ್ನಾಗಿ ಸರ್ಕಾರ ಅವರನ್ನು ಆರಿಸಿತು. ಈ ಸಮಿತಿ ಭಾರತದ ಆಡಳಿತ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಸಲಹೆ ನೀಡಬೇಕಾಗಿತ್ತು. ರಾನಡೆಯವರು ಈ ಕೆಲಸವನ್ನು ಒಂದೂವರೆ ವರ್ಷ ವಿಶೇಷ ಪರಿಶ್ರಮದಿಂದ ಪೂರೈಸಿ ತಮ್ಮ ವರದಿ ಸಲ್ಲಿಸಿದರು. ಮುಂಬಯಿ ಗವರ್ನರರಾದ ಲಾರ್ಡ್‌ರೇ ಅವರು ೧೮೮೫ರಲ್ಲಿ ಮತ್ತು ೧೮೯೦ರಲ್ಲಿ ಹೀಗೆ ಎರಡು ಬಾರಿ ಅವರನ್ನು ತಮ್ಮ ಕೌನ್ಸಿಲ್ಲಿನ ಸಭಾಸದರನ್ನಾಗಿ ನೇಮಿಸಿ ಅವರ ಸಲಹೆ ಪಡೆದರು. ಅವರ ಅನಂತರ ಗವರ್ನರರಾಗಿ ಬಂದ ಲಾರ್ಡ್ ಹ್ಯಾರಿಸರು ಸಹ ೧೮೯೩ರಲ್ಲಿ ತಮ್ಮ ಕೌನ್ಸಿಲ್ಲಿನ ಸಭಾಸದರನ್ನಾಗಿ ನೇಮಿಸಿದರು.

ಈ ರೀತಿ ಬಹುಮುಖ ಗೌರವ ನೀಡಿದರೂ ಸರ್ಕಾರಕ್ಕೇ ಇಷ್ಟು ಸಾಲದು ಎನಿಸುವಷ್ಟು ದೊಡ್ಡ ವ್ಯಕ್ತಿಯಾಗಿದ್ದರು ರಾನಡೆಯವರು. ಅದರಿಂದ ೧೮೯೩ರಲ್ಲಿ ಸರ್ಕಾರ ಅವರನ್ನು ಮುಂಬಯಿಯ ಶ್ರೇಷ್ಠ ನ್ಯಾಯಾಧೀಶರನ್ನಾಗಿ ನೇಮಿಸಿತು. ಪುಣೆಯ ಜನರಿಗೆ ಈ ಸು‌ದ್ಧಿ ಕೇಳಿ ಆನಂದ ಅಷ್ಟಿಷ್ಟಲ್ಲ. ೧೮೯೩ರ ನವೆಂಬರ್ ೧೩ ರಿಂದ ೨೧ರವರಗೆ ಒಂದು ವಾರದ ತನಕ ಪುಣೆಯಲ್ಲಿ ’ಮಾಧವೋತ್ಸವ’ ಹಬ್ಬವೇ ಹಬ್ಬ.

ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಿ ರಾನಡೆಯವರು ನೀಡಿದ ತೀರ್ಪುಗಳು ಇಂದಿಗೂ ಮಾರ್ಗ ದರ್ಶಕಗಳಾಗಿವೆ.

ಕೆಲಸ ಮಾಡುತ್ತ ಸಾಯುವುದೇ ಲೇಸು

ಬೇರೆ ಬೇರೆ ಸಾಮಾಜಿಕ ಧಾರ್ಮಿಕ, ಕಾರ್ಯಕ್ರಮಗಳಲ್ಲಿ ದುಡಿಯುವುದು ಮೊದಲಿನಂತೆಯೇ ಸಾಗಿತ್ತು. ಅವರಿಗೆ ವಿಶ್ರಾಂತಿಯೇ ಇರಲಿಲ್ಲ. ವಿಶ್ರಾಂತಿ ಬಗ್ಗೆ ಯಾರಾದರೂ ಸಲಹೆ ನೀಡಿದರೆ, ’ಸುಮ್ಮನೆ ಕುಳಿತಿರುವುದಕ್ಕಿಂತ ಕೆಲಸ ಮಾಡುತ್ತ ಸಾಯವುದೇ ಮೇಲು’ ಎಂದು ಆ ಸಲಹೆಯನ್ನು ನಿರಾಕರಿಸುತ್ತಿದ್ದರು. ಆದರೆ ಇಷ್ಟೊಂದು ದುಡಿಮೆಯನ್ನು ಅವರ ಶರೀರ ಸಹಿಸಲಿಲ್ಲ. ಆಗಾಗ ಬೇನೆ ಬೀಳತೊಡಗಿದರು. ಆದರೂ ಮಲಗಿದ್ದಲ್ಲಿಂದಲೇ ಕೆಲಸ ಮುಂದುವರಿಸಿದರು. ಕೊನೆಯಲ್ಲಿ ಅವರ ಹೃದಯ ದುರ್ಬಲವಾಗಿ ಪ್ರತಿನಿತ್ಯ ರಾತ್ರಿ ಸ್ವಲ್ಪ ಹೊತ್ತು ವಿಪರೀತ ಎದೆನೋವು ಬರತೊಡಗಿತು. ನಿದ್ರೆ ಕಡಿಮೆಯಾಯಿತು. ಆದರೆ ಕೆಲಸ ಮಾತ್ರ ನಿಲ್ಲಲಿಲ್ಲ. ಕೊನೆಯಲ್ಲಿ ಡಾಕ್ಟರರ ಒತ್ತಾಯಕ್ಕೆ ಮಣಿದು ಅವರು ೭-೧-೧೯೦೧ರಂದು ಆರು ತಿಂಗಳ ರಜೆ ತೆಗೆದುಕೊಂಡು ವಿಶ್ರಾಂತಿಗಾಗಿ ಲೋಣಾವಳಕ್ಕೆ ಹೋದರು.

ಆದರೆ ಅಲ್ಲಿಯೂ ಅವರ ಆರೋಗ್ಯ ಸುಧಾರಿಸಲಿಲ್ಲ. ಎದೆನೋವಿನ ತೀವ್ರತೆ ಮತ್ತು ದೇಹದ ದುರ್ಬಲತೆ ಹೆಚ್ಚಾಯಿತು. ಜೊತೆಗೆ ನೆಗಡಿ – ಕೆಮ್ಮು ಪ್ರಾರಂಭವಾಯಿತು. ಹೀಗಾಗಿ ಅವರು ಮುಂಬಯಿಗೆ ತಿರುಗಿ ಬಂದರು. ದಿನಾಲು ರಾತ್ರಿ ಡಾಕ್ಟರರು ರಾನಡೆಯವರ ಮನೆಯಲ್ಲಿಯೇ ಬಂದಿದ್ದು ಉಪಚರಿಸುತ್ತಿದ್ದರು.

ಅಂದು ಜನವರಿ ೧೬, ಬುಧವಾರ. ಆ ದಿನ ರಾನಡೆಯವರ ಆರೋಗ್ಯದಲ್ಲಿ ಒಳ್ಳೆಯ ಸುಧಾರಣೆ ಕಂಡಿತು. ಹೀಗಾಗಿ ಅವರೇ ಡಾಕ್ಟರರಿಗೆ ಫೋನ್ ಮಾಡಿ ಆ ದಿನ ರಾತ್ರಿ ಬರುವ ಅವಶ್ಯಕತೆಯಿಲ್ಲವೆಂದು ತಿಳಿಸಿದರು. ಹಗಲಿನ ಸಮಯ ಉಲ್ಲಾಸದಿಂದಲೇ ಕಳೆಯಿತು.  ಎಂದಿನಂತೆ ಗ್ರಂಥಗಳ ವಾಚನ ನಡೆಯಿತು. ಸಲಹೆ ಕೇಳಲು ಬಂದವರು ಯೋಗ್ಯ ಸಲಹೆ ಪಡೆದರು. ಸಾಯಂಕಾಲ ಒಂದು ಮೈಲಿಯಷ್ಟು ತಿರುಗಾಟವೂ ಆಯಿತು.

ಮನೆಗೆ ಹಿಂತಿರುಗಿದಾಗ ಒಂದು ತಂತಿ ಸಂದೇಶ ಕಾದಿತ್ತು. ರಾನಡೆಯವರ ಗೆಳೆಯರೊಬ್ಬರು ನಿಧನವಾದ  ಸುದ್ದಿ ಅದರಲ್ಲಿತ್ತು. ’ಕೆಲಸ ಮಾಡುತ್ತಿರುವಾಗಲೇ ಸಾಯುವುದು ಎಂತಹ ಸಂತಸದ ಸಂಗತಿ’ ಎಂದು ರಾನಡೆಯವರು ಉದ್ಗರಿಸಿದರು.  ಆದರೆ ಯಮರಾಯ ಅವರ ಮನೆಯಲ್ಲಿಯೇ ಸುಳಿಯುತ್ತಿದ್ದ ಸಂಗತಿ ಯಾರಿಗೂ ತಿಳಿದಿರಲಿಲ್ಲ!

ಪತ್ರಗಳಿಗೆ ಕೂಡಲೇ ಉತ್ತರ ಬರೆಯುವ ರೂಢಿ ರಾನಡೆಯವರದು. ಅವರು ೧೯ ಪತ್ರಗಳಿಗೆ ಉತ್ತರಗಳನ್ನು ಮಲ ತಮ್ಮ ನೀಲಕಂಠರಿಗೆ ಹೇಳಿ ಬರೆಯಿಸಿದರು. ಅಷ್ಟರಲ್ಲಿ ಒಂದು ವಿಧವಾ ವಿವಾಹದ ಬಗ್ಗೆ ಮಾರ್ಗದರ್ಶನ ಪಡೆಯಲು ಗೆಳೆಯರು ಬಂದು ಹೋದರು. ಇಷ್ಟೆಲ್ಲ ಆಗುವಾಗ ರಾತ್ರಿ ಒಂಬತ್ತು ಗಂಟೆಯಾಯಿತು. ಸ್ವಲ್ಪ ಎದೆನೋವು ಕಾಣಿಸಿತು. ಆದರೆ ಅದು ಕೂಡಲೇ ನಿಂತಿತು. ರಾತ್ರಿ ೯-೪೫ ರಾನಡೆಯವರಿಗೆ ನಿದ್ರೆ ಹತ್ತಿತ್ತು. ಅಷ್ಟು ಬೇಗ ಅವರಿಗೆ ನಿದ್ರೆ ಹತ್ತಿದ್ದು ಆ ದಿನವೇ.

ಆದರೆ ೧೦-೧೫ರ ಸುಮಾರು ಅವರು ಅಕಸ್ಮಾತ್ ತೀವ್ರ ಎದೆನೋವಿನಿಂದ ನರಳತೊಡಗಿದರು. ಡಾಕ್ಟರರು ಬರುವ ಮೊದಲೇ ಆ ನೋವು ಸಹಿಸಲಸಾಧ್ಯವಾಗಿ ೧೦-೩೦ಕ್ಕೆ ರಾನಡೆಯವರನ್ನು ಬಲಿ ತೆಗೆದುಕೊಂಡುಬಿಟ್ಟಿತು.

ಕರ್ಮಯೋಗಿ

ದೇಶ ವಿದೇಶಗಳ ಜನ ದುಃಖಪಟ್ಟರು. ಕರ್ಮ ಯೋಗಿಯೊಬ್ಬ ಕಣ್ಮರೆಯಾದನೆಂದು ಮರುಗಿದರು. ಹೌದು, ರಾನಡೆಯವರು ಓರ್ವ ಕರ್ಮಯೋಗಿಯೇ ಆಗಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಅವರ ಕರ್ಮ ಯೋಗ ಆರಂಭವಾಗಿತ್ತು. ವಿದ್ಯಾರ್ಥಿಗಳಿಗಾಗಿ ಅವರು ೨೫,೦೦೦ ಪುಟಗಳಷ್ಟು ಪುಸ್ತಕ ಓದಿದರು. ಅವರು ಬಹಳ ಓದುವುದನ್ನು ತಿಳಿದ ಅವರ ಪ್ರಿನ್ಸಿಪಾಲರು ಅವರಿಗೆ ಎಂಟು ದಿನ ಕಡ್ಡಾಯವಾಗಿ ವಿ‌ಶ್ರಾಂತಿ ಕೊಟ್ಟಿದ್ದೂ ಉಂಟು. ಕಣ್ಣು ಬೇನೆ ಬಂದರೂ ಅವರು ಬೇರೆಯವರಿಂದ ಓದಿಸಿ ಕೇಳಿದರು. ಸಮಾಜದಲ್ಲಿ ಬಹುಮುಖ ಪ್ರಗತಿಯಾಗಬೇಕೆಂದು ಅವರು ಎಲ್ಲರೊಡನೆ ದುಡಿದರು. ವಿಧವಾ ವಿವಾಹದ ಪ್ರಚಾರಕ್ಕಾಗಿ ಪ್ರಾಚೀನ ಶಾಸ್ತ್ರಗಳ ಅಭ್ಯಾಸ ಮಾಡಿ ಸಮರ್ಥಿಸಿದರು. ಸಮಾಜದಲ್ಲಿ ಸುಧಾರಣೆ ತರಲು ಅವರು ಹಿಂದೀ ಸಾಮಾಜಿಕ ಪರಿಷತ್ ನ್ನು ಸ್ಥಾಪಿಸಿ ಕಾಂಗ್ರೆಸ್ ಅಧಿವೇಶನ ಸೇರಿದ ಸ್ಥಳಗಳಲ್ಲಿ ಸಾಮಾಜಿಕ ಪರಿಷತ್ತಿನ ಸಭೆ ಸೇರಿಸಿ ಪ್ರಚಾರ ಮಾಡಿದರು.

ಇದೇ ರೀತಿ ಪ್ರಾರ್ಥನಾ ಸಮಾಜದ ಮೂಲಕ ಉಪನ್ಯಾಸ ನೀಡಿ ಧಾರ್ಮಿಕ ಕ್ರಾಂತಿಗೆ ನೆರವಾದರು. ಮರಾಠರ ನಿಜವಾದ ಇತಿಹಾಸವನ್ನು ಬರೆದು ಪ್ರಕಟಿಸಿದರು. ದೇಶಭಕ್ತಿ ರಾನಡೆಯವರಲ್ಲಿ ಅಪಾರವಾಗಿತ್ತು. ಅವರು ಸರ್ಕಾರದ ಕೆಲಸದಲ್ಲಿದ್ದರು. ದೇಶಭಕ್ತಿ ಹಬ್ಬಿಸುವ ಕಾರ್ಯದಿಂದ ಸರ್ಕಾರೀ ನೌಕರರಿಗೆ ಬಾಧೆ ಬರಬಹುದೆಂದು ಹಿತೈಷಿಗಳು ಹೆದರಿಸಿದರೂ ಅಂಜಲಿಲ್ಲ. ಹಣದ ಅಥವಾ ಅಧಿಕಾರದ ಬೆನ್ನು ಹತ್ತಿ ಅವರೆಂದೂ ಹೋಗಲಿಲ್ಲ. ಸರ್ಕಾರೀ ನೌಕರಿಗಿಂತ ಹೆಚ್ಚು ಸಂಬಳ ಕೊಡುತ್ತೇವೆಂದು ಕೆಲ ಸಂಸ್ಥಾನಿಕರು ಆಮಂತ್ರಿಸಿದರೂ ಅವರು ಹೋಗಲಿಲ್ಲ. ದೊಡ್ಡ ಸ್ಥಾನದಲ್ಲಿದ್ದರೂ ಅವರಿಗೆ ಅಹಂಕಾರವಿರಲಿಲ್ಲ. ಪುಣೆಯಲ್ಲಿ ಅವರು ನ್ಯಾಯಾಧೀಶರಾಗಿದ್ದಾಗ ಮುಂಜಾನೆ ಅಥವಾ ಸಂಜೆ ಅಡ್ಡಾಡಲು ಹೆಚ್ಚಾಗಿ ಪಾರ್ವತಿ ಬೆಟ್ಟದ ಕಡೆ ಹೋಗುತ್ತಿದ್ದರು. ಆ ದಾರಿಯಲ್ಲಿ ಅಡವಿಯಿಂದ ಕಟ್ಟಿಗೆ ಅಥವಾ ಹುಲ್ಲಿನ ಹೊರೆ ಹೊತ್ತುಕೊಂಡು ಬರುವ ಬಡವರು ಹೊರೆಗಳನ್ನು ತಲೆ ಮೇಲೆ ಇಡಲು ಸಹಾಯ ಕೇಳಿದರೆ ಸಂತೋಷದಿಂದ ಮಾಡುತ್ತಿದ್ದರು.

ದೇವರ ಮಕ್ಕಳನ್ನು ಸಾಯಲು ಬಿಡುವುದೆ?

ಅಗತ್ಯವಿದ್ದವರಿಗೆ ಸಹಾಯ ಮಾಡಲು ರಾನಡೆಯವರು ಎಂದಿಗೂ ಮುಂದು ಒಬ್ಬಿಬ್ಬರು ವಿದ್ಯಾರ್ಥಿಗಳು ಅವರಲ್ಲಿ ಯಾವಾಗಲೂ ಇರುತ್ತಿದ್ದರು. ಅವರ ಸಲಹೆಯಂತೆ ಪುಣೆಯಲ್ಲಿ ಸುಮಾರು ೧೮ ಸಂಸ್ಥೆಗಳು ಪ್ರಾರಂಭವಾಗಿ ಬೆಳೆದವು. ಇವಕ್ಕೆಲ್ಲ ಅವರು ಬಹಳ ಹಣ ದಾನ ಮಾಡಿದರು.  ಬಡವರ ಬಗ್ಗೆ ಅವರಲ್ಲಿದ್ದ ಕರುಣೆ ಅಪಾರ. ೧೮೯೯-೧೯೦೦ರಲ್ಲಿ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಬರಗಾಲವಾದಾಗ ಅಲ್ಲಿಯ ಜನರಿಗೆ ಸಹಾಯ ನೀಡಲು ಹೋದ ಒಬ್ಬ ಕಾರ್ಯಕರ್ತ ತಿರುಗಿ ಬಂದು ವರದಿ ಸಲ್ಲಿಸಿದ ’ನಾವೆಲ್ಲ ಪ್ರಯತ್ನ ಮಾಡಿದ್ದೇವೆ. ಆದರೂ ಕೆಲವು ಹೊಟ್ಟೆಗಿಲ್ಲದೆ ಸಾಯುವುದು ಖಂಡಿತವೆಂದೆನಿಸುತ್ತದೆ’ ಇದನ್ನು ಕೇಳಿ ರಾನಡೆಯವರು ಬೆಂಕಿಯಾದರು – ’ಏನಂದಿ? ಕೆಲವರು ಸಾಯುವುದು ಖಂಡಿತ! ದೇವರ ಮಕ್ಕಳನ್ನು ಉಪವಾಸ ಸಾಯಲು ಬಿಡುವುದೆ? ಅವರಲ್ಲಿ ನೀನೊಬ್ಬನಾದರೆ ಹೇಗಾದೀತು?’ ಅನಂತರ ಅವರು ನೆರವಿನ ಕೆಲಸವನ್ನು ಇನ್ನೂ ಚುರುಕುಗೊಳಿಸಿದರು.

ನಿಜವಾದ ಕರ್ಮಯೋಗಿಯಂತೆ ಅವರು ಕೀರ್ತಿಯ ಆಸೆಯನ್ನೇ ಪಡಲಿಲ್ಲ. ಪುಣೆಯಲ್ಲಿ ಮಾಧವೋತ್ಸವ ನಡೆದಾಗ ಉಪಾಯವಿಲ್ಲದೆ ಅವರು ಸಮಾರಂಭಗಳಲ್ಲಿ ಭಾಗವಹಿಸಿದರು. ಅವರು ಮುಂಬಯಿಗೆ ಹೊರಡುವ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಜನ ಸೇರಿ ಅವರನ್ನು ವಿಜೃಂಭಣೆಯಿಂದ ಬೀಳ್ಕೊಡಬೇಕೆಂದು ಗೆಳೆಯರು ವ್ಯವಸ್ಥೆ ಮಾಡಿದ್ದರು. ಆದರೆ ರಾನಡೆಯವರು ಯಾರಿಗೂ ಹೇಳದೆ ಒಂದು ದಿನ ಮುಂಚಿತವಾಗಿಯೇ ರಾತ್ರಿ ರೈಲಿನಿಂದ ಮುಂಬಯಿಗೆ ಪ್ರಯಾಣ ಮಾಡಿದರು. ಆದರೂ ಅಷ್ಟರಲ್ಲಿ ನೂರಾರು ಜನ ನಿಲ್ದಾಣದಲ್ಲಿ ಸೇರಿ ಬಿಟ್ಟಿದ್ದರು.

ರಾನಡೆಯವರ ’ಅಜಾತಶತ್ರು’ ಗಳಾಗಿದ್ದರು. ವಿರುದ್ಧ ಪಕ್ಷದವರ ಮೇಲೆ ಜಯ ಗಳಿಸುವುದಕ್ಕಿಂತ ಅವರ ಅಭಿಪ್ರಾಯವನ್ನು ತಿಳಿದುಕೊಂಡು ಸತ್ಯ ಕಂಡುಕೊಳ್ಳುವುದೇ ಮುಖ್ಯವೆಂಬುದು ಅವರ ಅಭಿಪ್ರಾಯ. ನಾನು ಒಕ್ಕಣ್ಣನಾದರೂ ಒಂದೇ ವಿಚಾರದವನಲ್ಲ’ ಎಂದು ಅವರು ಚೇಷ್ಟೆಗಾಗಿ ಹೇಳುತ್ತಿದ್ದರು. ಯಾರಿಗೂ ಕಟು ಮಾತು ಹೇಳಿ ನೋಯಿಸುತ್ತಿರಲಿಲ್ಲ. ಹೀಗಾಗಿ ಅವರು ಬೇನೆ ಬಿದ್ದಾಗಲೆಲ್ಲ ಅವರ ವಿಚಾರಗಳ ವಿರೋಧಿಗಳು ಕೂಡ ಅವರಿಗೆ ಬೇಗ ಗುಣವಾಗಲೆಂದು ಪ್ರಾರ್ಥಿಸುತ್ತಿದ್ದರು.

೧೯೦೦ ಡಿಸೆಂಬರ್ ನಲ್ಲಿ ಲಾಹೋರಿನಲ್ಲಿ ಹಿಂದೀ ಸಾಮಾಜಿಕ ಪರಿಷತ್ತಿನ ಸಭೆ ನಡೆಯಿತು. ಡಾಕ್ಟರರು ಲಾಹೋರಿಗೆ ಹೋಗಲೇಬಾರದೆಂದು ಕಟ್ಟುನಿಟ್ಟಾಗಿ ಹೇಳಿದ್ದರಿಂದ ರಾನಡೆಯವರು ಆ ಸಭೆಗೆ ಹೋಗಿರಲಿಲ್ಲ. ಆದರೆ ತಮ್ಮ ಭಾಷಣವನ್ನು ತಮ್ಮ ಶಿಷ್ಯ ಗೋಪಾಲಕೃಷ್ಣ ಗೋಖಲೆಯವರ ಬಳಿ ಕಳುಹಿಸಿದ್ದರು. ಆ ಸಭೆಯಲ್ಲಿ  ಯಾವುದೋ ವಿಷಯದ ಬಗ್ಗೆ ವಿರಸವುಂಟಾಗಿ ಜಗಳ ಪ್ರಾರಂಭವಾಯಿತು. ಇನ್ನೇನು ಸಭೆ ಭಂಗವಾಗುವ ಭೀತಿ ಗೋಖಲೆ ಮತ್ತಿತ್ತರನ್ನು ಕಾಡತೊಡಗಿತು. ಆಗ ಗೋಖಲೆಯವರು ವೇದಿಕೆಯ ಮೇಲೆ ಹೋಗಿ, ’ಗೆಳೆಯರೇ, ಯಾವಾಗಲೂ ನಮ್ಮೊಡನೆ ಇರುವ ನ್ಯಾಯಮೂರ್ತಿ ರಾನಡೆಯವರು ಇಂದು ಇಲ್ಲಿ ಇಲ್ಲ. ವಿಪರೀತ ಬೇನೆಯಿಂದ ಮಲಗಿದ್ದಾರೆ. ಆದರೆ ಅವರು, ’ನಮ್ಮೊಳಗಿನ ಮತಭೇದ ಮರೆತು ಸಭೆಯ ಕಾರ್ಯಕಲಾಪಗಳನ್ನು ಯಶಸ್ವಿಯಾಗಿ ನಡೆಸೋಣ ಎಂದು ನಮ್ಮೆಲ್ಲರನ್ನು ಭಿನ್ನವಿಸಿದ್ದಾರೆ. ಇದು ರಾನಡೆಯವರ ಬಿನ್ನಹ ಎಂದರು’. ಈ ಮಾತನ್ನು ಕೇಳಿ ಸಭೆ ಪುಂಗಿಯ ನಾದ ಕೇಳಿದ ಹಾವಿನಂತೆ ತಲೆಯಾಡಿಸಿ ಸುಮ್ಮನಾಯಿತು.

ಹೀಗಿದ್ದರು ನ್ಯಾಯಮೂರ್ತಿ ರಾನಡೆ! ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ನಮ್ಮ ದೇಶ ಕಷ್ಟದಲ್ಲಿದ್ದಾಗ ಅದರ ಎಲ್ಲ ಅಂಗಗಳಲ್ಲಿ ಚೈತನ್ಯ ತುಂಬಿ ಅದನ್ನು ಎಚ್ಚರಿಸಿದ ಮಹಾಪುರುಷರು ಅವರು! ಅವರ ಕಾರ್ಯ ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟಕ್ಕೆ ನಾಂದಿಯಾಯಿತು.