ಮಾಸ್ಕೋ ನಿಜವಾಗಿಯೂ ಮಹಾನಗರ. ‘ಮಹಾ’ ಎಂಬ ಪದಕ್ಕೆ ಯಾಕೋ ಏನೋ ಒಂದು ಬಗೆಯ ಹೀನಾರ್ಥ ಬರುವಷ್ಟರ ಮಟ್ಟಿಗೆ ಕನ್ನಡದಲ್ಲಿ ಬಳಸಲಾಗಿದ್ದರೂ, ಆ ಮಾತಿನ ನಿಜವಾದ ಅರ್ಥದಲ್ಲಿ ನಾನು ಮಾಸ್ಕೋವನ್ನು ಮಹಾನಗರ ಎಂದು ಕರೆಯುತ್ತೇನೆ. ಇಲ್ಲಿ ಏನನ್ನು ನೋಡಿದರೂ ಈ ಮಾತು ನಿಜ ಅನ್ನಿಸುತ್ತದೆ. ಬೀದಿಗಳ ವೈಶಾಲ್ಯ ; ಸಾಲು ಸಾಲಾದ ಬೃಹದಾಕಾರದ ಕಟ್ಟಡಗಳು; ಇಲ್ಲಿನ ಮ್ಯೂಸಿಯಂಗಳು; ಸಾವಿರಾರು ಕೊಠಡಿಗಳನ್ನೊಳಗೊಳ್ಳುವ ಹೋಟೆಲುಗಳು; ಭಾರೀ ಸರ್ವ ಸಾಮಗ್ರಿ ಮಳಿಗೆಗಳು – ಏನನ್ನು ನೋಡಲಿ, ‘ಮಹಾ’ ಎಂಬ ಪದವೇ ಇವುಗಳನ್ನು ವರ್ಣಿಸಲು ಸಾರ್ಥಕವಾದ ಪದ ಅನ್ನಿಸುತ್ತದೆ. ಐವತ್ತು ವರ್ಷಗಳ ಕಾಲ ಬೇರೆ ಯಾರನ್ನೂ ಬರಗೊಡದೆ ಹಠಯೋಗದಲ್ಲಿ ತೊಡಗಿದಂತೆ ಈ ಜನತೆ ಈ ದೇಶವನ್ನು ಕಟ್ಟಿರುವ ರೀತಿ, ಸಾಧಿಸಿರುವ ಪ್ರಗತಿ ಆಶ್ಚರ‍್ಯಕರವಾದದ್ದು.

ಮಾಸ್ಕೋ ಸೋವಿಯೆತ್ ನಾಡಿನ ರಾಜಧಾನಿ. ಅತ್ಯಂತ ಬೃಹತ್ತಾದ  ಕಮ್ಯೂನಿಸ್ಟ್ ಸರ್ಕಾರದ ಕೇಂದ್ರಾಡಳಿತ ಬಿಂದು. ರಷ್ಯಾದ ಮಹಾಕ್ರಾಂತಿಯ ನಾಯಕ ಲೆನಿನ್ ತನ್ನ ಪಾರ್ಟಿಯ ನಾಯಕರೊಂದಿಗೆ ಈ ನಗರವನ್ನು ಪ್ರವೇಶಿಸಿದ್ದು ೧೯೧೮ನೆಯ ಮಾರ್ಚಿ ಹನ್ನೊಂದನೆಯ ತಾರೀಖು.

ಮಾಸ್ಕೋ ಜಗತ್ತಿನ ಅತ್ಯಂತ ದೊಡ್ಡ ನಗರಗಳಲ್ಲಿ ಬಹುಶಃ ನಾಲ್ಕನೆಯದು. ೩೪೭ ಚದರ ಮೈಲಿಗಳಷ್ಟು ವ್ಯಾಪಕವಾದ ಈ ನಗರದಲ್ಲಿ ಒಟ್ಟು ನಾಲ್ಕು ಸಾವಿರ ಬೀದಿಗಳಿವೆ. ಏಳು ಮಿಲಿಯನ್ ಜನ ಇಲ್ಲಿ ವಾಸಿಸುತ್ತಾರೆ.

ಮಾಸ್ಕೋ ಜನ ಲೆನಿನ್‌ನ ನೆನಪನ್ನು ಎಲ್ಲೆಲ್ಲಿಯೂ ಸ್ಥಾಯಿಯನ್ನಾಗಿ ಮಾಡಿದ್ದಾರೆ. ಬೀದಿಗಳಿಗೆ, ಬಡಾವಣೆಗಳಿಗೆ ಆತನ ಹೆಸರನ್ನು ಇರಿಸಿದ್ದಾರೆ. ಬೀದಿ ಬೀದಿಗಳಲ್ಲಿ, ಪಾರ್ಕುಗಳಲ್ಲಿ, ಮ್ಯೂಸಿಯಂಗಳಲ್ಲಿ ಲೆನಿನ್‌ನ ದೊಡ್ಡ ದೊಡ್ಡ ವಿಗ್ರಹಗಳಿವೆ; ಭಾವಚಿತ್ರಗಳಿವೆ. ಅಷ್ಟೇ ಸಾಲದೆಂಬಂತೆ ಲೆನಿನ್‌ನ ಶವವನ್ನು ಗಾಜಿನ ಪೆಟ್ಟಿಗೆಯಲ್ಲಿರಿಸಿ, ಕೆಂಪು ಚೌಕದಲ್ಲಿ ಅಮೃತಶಿಲೆಯ ಶವಾಲಯವೊಂದನ್ನು ಕಟ್ಟಿದ್ದಾರೆ. ದಿನವೂ ಸಾವಿರಾರು ಜನ ಈ ಮಹಾನಾಯಕನ ಪಾರ್ಥಿವ ಶರೀರವನ್ನು ಸಂದರ್ಶಿಸುತ್ತಾರೆ.

ಮಾಸ್ಕೋ ನಗರದಲ್ಲಿನ ಸಸ್ಯ ಸಮೃದ್ಧಿ ಮನಸ್ಸಿಗೆ ತಂಪು. ಯಾವ ಬೀದಿಯನ್ನು ನೋಡಿದರೂ ಇಕ್ಕೆಲದಲ್ಲಿ ದಟ್ಟವಾಗಿ ಬೆಳೆಯಿಸಿದ ಮರಗಳನ್ನು ಕಾಣಬಹುದು. ಅಲ್ಲಲ್ಲಿ  ಎತ್ತರವಾದ ವಸತಿಗಳ ಬದಿಯಲ್ಲಿ ಗಿಡಮರಗಳ ದಟ್ಟವಾದ ತೋಪುಗಳಿವೆ. ಈ ನಗರದ ಯೋಜನೆಯಲ್ಲಿಯೇ ಒಬ್ಬ ನಾಗರಿಕನಿಗೆ ಇಪ್ಪತ್ತು ಚದರ ಮೀಟರುಗಳಷ್ಟು ಹಸಿರು ಇರಬೇಕೆಂದು ಯೋಜಿಸಲಾಗಿದೆಯಂತೆ. ಈ ಮರಗಿಡಗಳಿಂದ ಒಳ್ಳೆಯ ಸಹಜವಾದ ಗಾಳಿ ದೊರೆಯುತ್ತದೆ. ಮರ-ಗಿಡಗಳು ಮನುಷ್ಯನ ದೈಹಿಕ ಮಾನಸಿಕ ಆರೋಗ್ಯಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ಈ ಜನ ಕಂಡುಕೊಂಡಂತೆ ಇನ್ನಾರೂ ಕಂಡುಕೊಂಡಿರಲಾರರು. ನಮ್ಮ ನಗರಗಳಲ್ಲಾದರೋ ಇದ್ದ ಮರಗಳನ್ನು ಕಡಿಯುತ್ತೇವೆ; ಆ ಮೇಲೆ ವನಮಹೋತ್ಸವ ಮಾಡಿ ಸಸಿಗಳನ್ನು ನೆಡಿಸುತ್ತೇವೆ. ಬೀದಿ ದನಗಳ ಹೊಟ್ಟೆಯಲ್ಲಿ ನೆಟ್ಟ ಗಿಡಗಳು ಜೀರ್ಣವಾಗುತ್ತವೆ !

ಈ ಊರಿನ ಬೀದಿಗಳು ಅತ್ಯಂತ ಸ್ವಚ್ಛವಾಗಿರಲು ಈ ಸರ್ಕಾರ ವಹಿಸುವ ಎಚ್ಚರ ಮೆಚ್ಚಬೇಕಾದದ್ದು. ಗಂಟೆಗೊಂದು ಸಲವೋ ಏನೋ ಬೀದಿಗಳನ್ನು ತೊಳೆಯುವ, ಹಾಗೂ ಉಜ್ಜಿ ಶುಭ್ರ ಮಾಡುವ ಯಂತ್ರಗಳು ಓಡಾಡುತ್ತವೆ. ಯಾವ ಕ್ಷಣ ನೋಡಿದರೂ ಬೀದಿಗಳನ್ನು ಗುಡಿಸಿ ಸಾರಿಸಿದಂಥ ಅನುಭವವಾಗುತ್ತದೆ. ಹಾಗೆಂದರೆ ಕೊಳೆಯೇ ಆಗುವುದಿಲ್ಲವೆಂದೇನೂ ಅರ್ಥವಲ್ಲ; ಸ್ವಚ್ಛವಾಗಿಡುವುದರಲ್ಲಿ ಇವರು ವಹಿಸುವ ಎಚ್ಚರ ಮಹತ್ವದ್ದು.

ಮಾಸ್ಕೋ ನಗರದ ಹೃದಯ ಕೆಂದ್ರ ಕೆಂಪುಚೌಕ (Red Square) ಮತ್ತು ಕ್ರೆಮ್ಲಿನ್: ಕೆಂಪುಚೌಕ ಜಗತ್ತಿನ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು ಎಂದು ವೊಲೋಜ ಹೇಳಿದ. ಮಾಸ್ಕೋ ನಗರದ ಎಲ್ಲ ಬೀದಿಗಳೂ ಬಂದು ಸಂಧಿಸುವ ಕೇಂದ್ರ ಇದು. ಏಳುನೂರಾ ಎಂಬತ್ತು ಸಾವಿರ ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಚೌಕ, ರಷ್ಯಾದ ಕ್ರಾಂತಿಯ ಇತಿಹಾಸದಲ್ಲಿ ಅನೇಕ ಮಹತ್ವದ ಘಟನೆಗಳು ಜರುಗಿದ ಸ್ಥಳವಾಗಿದೆ. ಲೆನಿನ್‌ನ ನೇತೃತ್ವದಲ್ಲಿ ಜನತೆಯ ಕ್ರಾಂತಿಯ ಸಂಘಟನೆಯಾದದ್ದು ಇಲ್ಲಿ ; ಶ್ರೀಮಂತರ ವೈಭವಗಳ ವಿರುದ್ಧ ಜನ ಬಂಡಾಯವೆದ್ದದ್ದು ಇಲ್ಲಿ; ೧೯೧೭ನೇ ಅಕ್ಟೋಬರ್ ತಿಂಗಳು ಕ್ರಾಂತಿ ದಳಗಳಿಗೂ ಆಳರಸರಿಗೂ ಬಿರುಸಾದ ಕದನವಾಗಿ, ರಕ್ತ ಸುರಿದು ನೆಲ ಕೆಂಪಾದದ್ದು ಇಲ್ಲಿ ; ಕೆಂಪುಚೌಕ ಕ್ರಾಂತಿಕಾರರ ರಕ್ತದಿಂದ, ತನ್ನ ಹೆಸರನ್ನು ಸಂಕೇತವನ್ನಾಗಿ ಮಾಡಿಕೊಂಡದ್ದು ಇಲ್ಲಿ ; ಕೆಂಪು ಬಾವುಟ ೧೯೧೮ ನೆ ಮಾರ್ಚಿ ತಿಂಗಳಲ್ಲಿ ಕ್ರೆಮ್ಲಿನ್ನಿನ ಮೇಲೆ ಏರಿದ್ದು ಇಲ್ಲಿ.

ಜಾರ್ ದೊರೆಗಳ ಕಾಲದಲ್ಲಿ ನಿರ್ಮಿತಿಯಾದ ಹಲವು ಚರ್ಚುಗಳು ಇಲ್ಲಿವೆ. ಈ ದೇಗುಲಗಳ ವರ್ಣಮಯವಾದ ಕಟ್ಟಡಗಳೂ, ಗೋಪುರಗಳೂ ತುಂಬ ಸುಂದರವಾಗಿವೆ. ಈಗ ವರ್ಷದಲ್ಲಿ ಎರಡು ಸಲ ‘ಪೆರೇಡ್’ ನಡೆಯುತ್ತದೆ – ಮೇ ಒಂದನೇ ತಾರೀಖು ಮತ್ತು ನವೆಂಬರ್ ಏಳನೇ ತಾರೀಖು.

ಇಲ್ಲಿಯೇ ಕಪ್ಪು ಕೆಂಪು ಅಮೃತಶಿಲೆಯಿಂದ ರಚಿತವಾದ ಲೆನಿನ್ನನ ಶವಾಲಯವಿದೆ. ಗಂಟೆಗೆ ಒಂದು ಸಲ ಈ ಶವಾಲಯದ ಬಾಗಿಲಲ್ಲಿ ‘ಪ್ರತಿಮಾ ಯೋಗ’ದಲ್ಲಿ ನಿಂತ ಅಂಗರಕ್ಷಕರನ್ನು ಬದಲಾಯಿಸುತ್ತಾರೆ. ಬೆಳ್ಳನೆಯ ಬಿಗಿಯುಡುಪು ತೊಟ್ಟ ಕೆಂಪನೆಯ ತರುಣ ರಕ್ಷಕರು ಒಂದಿಷ್ಟೂ ಮಿಸುಗದ ಕಲ್ಲಿನ ಬೊಂಬೆಗಳ ಹಾಗೆ ಶವಾಲಯದ ಬಾಗಿಲಲ್ಲಿ ಕಾವಲು ನಿಂತಿರುವುದನ್ನು ನೋಡುವುದು ಒಂದು ಸೊಗಸು. ಕೆಂಪುಚೌಕದ ಎತ್ತರವಾದ ಗೋಪುರದ ಗಡಿಯಾರದಲ್ಲಿ ಎರಡು ನಿಮಿಷ ಇದೆ ಎನ್ನುವಾಗ, ದೂರದ ಕಮಾನುಬಾಗಿಲ ಪಹರೆ ಮನೆಯಿಂದ ಮೂರು ಜನ ಅಂಗರಕ್ಷಕರು ಬಂದೂಕು ಹಿಡಿದು, ಗಂಭೀರವಾಗಿ ಒಂದು ಅಳತೆಯಲ್ಲಿ ಹೆಜ್ಜೆಯನ್ನಿಡುತ್ತಾ ಶವಾಲಯದ ಹೊಸ್ತಿಲ ಬಳಿ ಬರುವ ವೇಳೆಗೆ ಗೋಪುರದ ಗಡಿಯಾರದಲ್ಲಿ ಗಂಟೆ ಬಾರಿಸತೊಡಗುತ್ತದೆ. ಎವೆಯಿಕ್ಕುವುದರೊಳಗೆ, ನಿಂತ ಕಾವಲಿನವರು ಮುಂದೆ ಬಂದು, ಬಂದ ಕಾವಲಿನವರು ನಿಯಮಿತವಾದ ಸ್ಥಳದಲ್ಲಿ ನಿಂತು, ಮೂರನೆಯ ರಕ್ಷಕನೊಂದಿಗೆ ಈ ಇಬ್ಬರೂ ಸೇರಿ, ಮತ್ತೆ ದಾಪುಗಾಲಿನ ಅಳತೆಯ ಹೆಜ್ಜೆಯನ್ನಿಕ್ಕುತ್ತಾ, ದೂರದ ಕಮಾನುಬಾಗಿಲನ್ನು ದಾಟಿ ಒಳಗೆ ಹೋಗುತ್ತಾರೆ. ಮತ್ತೆ ಒಂದು ಗಂಟೆ, ನಿಂತ ಕಾವಲುಗಾರರು ಶಿಲಾ ಪ್ರತಿಮೆಗಳು. ಈ ಕಾವಲುಗಾರರನ್ನು ಬದಲಾಯಿಸುವ, ದೃಶ್ಯವನ್ನು ನೋಡಲು ಜನ ಕಿಕ್ಕಿರಿದು ನೆರೆಯುತ್ತಾರೆ. ಚಳಿಗಾಲದಲ್ಲಿ ಮಾತ್ರ ಈ ಕಾವಲುಗಾರರನ್ನು ಅರ್ಧಗಂಟೆಗೆ ಒಮ್ಮೆ ಬದಲಾಯಿಸುತ್ತಾರಂತೆ. ಈ ಕಾವಲುಗಾರರು ನಿಲ್ಲುವ ನಿಲುವು ಮಹಾನಾಯಕ ಲೆನಿನ್ನನಿಗೆ ತೋರುವ ಒಂದು ಶಿಸ್ತಿನ ಧಾರ್ಮಿಕ ವಿಧಿಯಂತೆ ನನಗೆ ಭಾಸವಾಗುತ್ತದೆ. ಧರ್ಮವನ್ನು ದೂರೀಕರಿಸಿ, ಇದ್ದ ಚರ್ಚುಗಳನ್ನೆಲ್ಲ ವಸ್ತು ಸಂಗ್ರಹಾಲಯ ಮಾಡಿದ ಜನ, ಲೆನಿನ್ನನ್ನೆ ದೇವರ ನಿಲುವಿಗೆ ಏರಿಸಿ, ಈ ಶವಾಲಯವನ್ನೇ ದೇಗುಲವನ್ನಾಗಿ ಮಾಡಿಕೊಂಡಂತೆ ತೋರುತ್ತದೆ.

ಈ ಕೆಂಪುಚೌಕದ ಬದಿಯಲ್ಲೇ ಇದೆ ಕ್ರೆಮ್ಲಿನ್ – ಸೋವಿಯತ್ ಪರಮಾಧಿಕಾರದ ಆಡಳಿತ ಕೇಂದ್ರ. ಮಾಸ್ಕೋ ನಗರದಲ್ಲಿ ಈ ಕ್ರೆಮ್ಲಿನ್ ಅತ್ಯಂತ ಪ್ರಾಚೀನವಾದ ಐತಿಹಾಸಿಕ ಸ್ಥಳ. ಕ್ರೆಮ್ಲಿನ್ನಿನ ಇತಿಹಾಸದ ಮೊದಲ ದಾಖಲೆಗಳು ದೊರೆಯುವುದುಕ್ರಿ.ಶ. ೧೧೪೭ ರಷ್ಟು ಹಿಂದೆಯೇ. ರಷ್ಯಾದೇಶವನ್ನಾಳಿದ ರಾಜರುಗಳಿಗೆಲ್ಲ ಇದೇ ರಾಜಧಾನಿ. ಕಾಲದಿಂದ ಕಾಲಕ್ಕೆ ಇದನ್ನು ಸುತ್ತುವರಿದಿರುವ, ಎತ್ತರವಾದ ಕೋಟೆಯ ಗೋಡೆಗಳು ನಿರ್ಮಿತವಾದವು. ಹದಿನೇಳನೆಯ ಶತಮಾನದ ವೇಳೆಗೆ ಈ ಕ್ರೆಮ್ಲಿನ್ನಿನ ಅರಮನೆ ಸುತ್ತ ಅಮೋಘವಾದ ವಸತಿಗಳ, ಚರ್ಚುಗಳ ನಿರ್ಮಾಣ ಪೂರ್ಣವಾಯಿತು. ೧೭೧೨ ರಲ್ಲಿ ಮಾಸ್ಕೋದಿಂದ ರಷ್ಯದ ರಾಜಧಾನಿ ಪೆಟ್ರೋಗ್ರಾಡಿಗೆ ಸ್ಥಳಾಂತರವಾಯಿತು. ಆದರೂ ಕ್ರೆಮ್ಲಿನ್ ಜಾರ್‌ದೊರೆಗಳ ತಾತ್ಕಾಲಿಕ ವಸತಿಯಾಗಿತ್ತು. ರಷ್ಯದ ರಾಜ – ರಾಣಿಯರು ಪೆಟ್ರೋಗ್ರಾಡಿನಿಂದ ಆಗಾಗ ಮಾಸ್ಕೋಗೆ ಬಂದು, ಹಳೆಯ ರಾಜಧಾನಿಯಾಗಿದ್ದ ಮಾಸ್ಕೋದ ಕ್ರೆಮ್ಲಿನ್ನಿನಲ್ಲಿದ್ದ ಪೂರ್ವೀಕರ ಸ್ಮಾರಕಗಳಿಗೆ, ಹಾಗೂ ದೇವಸ್ಥಾನಗಳಿಗೆ ಗೌರವವನ್ನು ಸಲ್ಲಿಸುತ್ತಿದ್ದರು. ೧೮೧೨ನೆ ಸೆಪ್ಟೆಂಬರ್ ತಿಂಗಳು ನೆಪೋಲಿಯನ್ ಮಾಸ್ಕೋ ನಗರವನ್ನು ವಶಪಡಿಸಿಕೊಂಡಾಗ, ಒಂದು ತಿಂಗಳಕಾಲ ಕ್ರೆಮ್ಲಿನ್‌ನಲ್ಲಿ ಆತ ಬಿಡಾರ ಹೂಡಿದ್ದ. ತನ್ನನ್ನು ಕೇಳುವ ಪಿಳ್ಳೆಯೊಂದೂ ಇಲ್ಲದಂತೆ ಬರಿದಾದ ಮಾಸ್ಕೋ ನಗರವನ್ನು ನೋಡಿ ಕೃದ್ಧನಾದ ನೆಪೋಲಿಯನ್, ಅಲ್ಲಿಂದ ಹಿಂದಿರುಗುವಾಗ ಕ್ರೆಮ್ಲಿನ್ ಅನ್ನು ನಾಶಮಾಡಲು ತನ್ನ ಸೈನಿಕರಿಗೆ ಅಪ್ಪಣೆಮಾಡಿದ. ಆದರೆ ಜನದ ಪ್ರತಿಭಟನೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ೧೮೧೨ರ ನಂತರ ಕ್ರೆಮ್ಲಿನ್ನಿನ ಎಲ್ಲಾ ಐತಿಹಾಸಿಕ ಸ್ಮಾರಕಗಳನ್ನೂ ಪುನರ್ ನಿರ್ಮಿಸಲಾಯಿತು.

೧೯೧೮ನೆ ಮಾರ್ಚಿ ಹನ್ನೊಂದನೆಯ ತಾರೀಖು ಕ್ರಾಂತಿನಾಯಕ ಲೆನಿನ್, ತನ್ನ ಸಹಾಯಕರೊಡನೆ ಮಾಸ್ಕೋ ನಗರವನ್ನು ಪ್ರವೇಶಿಸಿ ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ, ಮತ್ತೆ ಪೆಟ್ರೋಗ್ರಾಡಿನಿಂದ (ಈಗ ಇದಕ್ಕೆ ಲೆನಿನ್ ಗ್ರಾಡ್ ಎಂದು ಹೆಸರಾಗಿದೆ) ಸರ್ಕಾರದ ಸಮಸ್ತ ಆಡಳಿತಾಂಗಗಳೂ ಮಾಸ್ಕೋ ನಗರಕ್ಕೆ ವರ್ಗಾಯಿಸಲ್ಪಟ್ಟವು. ‘ಮಾಸ್ಕೋ ನಗರದಲ್ಲಿ ಐತಿಹಾಸಿಕ ಮಹತ್ವವುಳ್ಳ ಯಾವ ಯಾವ ಸುಂದರವಾದದ್ದು ಉಂಟೊ ಅದೆಲ್ಲವನ್ನೂ ನಾವು ಉಳಿಸಿ ಸಂರಕ್ಷಿಸತಕ್ಕದ್ದು’ – ಎಂದು ಲೆನಿನ್ ಅಪ್ಪಣೆ ಮಾಡಿದ. ೧೯೧೮ ನೆ ಅಕ್ಟೋಬರ್ ತಿಂಗಳು ಕ್ರೆಮ್ಲಿನ್ನಿನ ಮೇಲೇರಿದ ಕೆಂಪು ಬಾವುಟ ಇಂದಿಗೂ ಹಾರಾಡುತ್ತಿದೆ.

ಮಾಸ್ಕ್ವಾ ನದಿಯ ಎಡದಂಡೆಯ ಮೇಲಿನ ಪ್ರದೇಶದಲ್ಲಿ, ಎತ್ತರವಾದ ಕಲ್ಲಿನಕೋಟೆ ಗೋಡೆಗಳ ನಡುವೆ, ಕ್ರೆಮ್ಲಿನ್ನಿನ ಚಿನ್ನದ ಗೋಪುರಗಳು, ಬಂಗಾರದ ಹಕ್ಕಿಯ ಕೊಕ್ಕಿನಂತೆ ಚಾಚಿಕೊಂಡಿವೆ. ಇಂದು, ಕ್ರೆಮ್ಲಿನ್ ರಷ್ಯನ್ ಸಂಸ್ಕೃತಿಯ ಮಹಾಕೃತಿಗಳ ಭಂಡಾರ ಮಾತ್ರವಲ್ಲ, ಸೋವಿಯತ್ ಸರ್ಕಾರದ ಪರಮಾಧಿಕಾರದ ಕೇಂದ್ರಪೀಠವೂ ಹೌದು. ಈ ಕ್ರೆಮ್ಲಿನ್ ಕೋಟೆ ಗೋಡೆಗಳ ಆವರಣದಲ್ಲಿ ಹಲವು ‘ಕೆಥಿಡ್ರಲ್’ಗಳಿವೆ. ಜಾರ್ ದೊರೆಗಳ ಕಾಲದ ಪೂಜಾ ಮಂದಿರಗಳಿವು. ಇವುಗಳ ಒಳಗಿನ ಎತ್ತರವಾದ ಭಿತ್ತಿಗಳ ತುಂಬ ಬೈಬಲ್ಲಿನ ಅನೇಕ ಪ್ರಸಂಗಗಳ ವರ್ಣಚಿತ್ರಗಳು ಕಿಕ್ಕಿರಿದಿವೆ. ಇಂಥ ಅನೇಕ ದೇವ ಮಂದಿರಗಳು ಈ ದಿನ ಕೇವಲ ಪ್ರದರ್ಶನದ ವಸ್ತುಗಳಾಗಿವೆ. ಇಲ್ಲಿನ ಆವರಣದಲ್ಲಿ ‘ಪ್ಯಾಲೇಸ್ ಆಫ್ ಕಾಂಗ್ರೆಸ್’ ಎಂಬ ಭಾರೀ ಭವನವಿದೆ. ಇದು ರಷ್ಯದ ಸ್ವಾತಂತ್ರ್ಯೋತ್ತರ ಕಾಲದ ಕಟ್ಟಡ. ಆರು ಸಾವಿರ ಜನ ಕೂರುವ ವ್ಯವಸ್ಥೆ ಇದರಲ್ಲಿದೆ. ೧೯೬೧ರಲ್ಲಿ ನಿರ್ಮಿತಿಯಾದ ಈ ಕಟ್ಟಡದೊಳಗೆ ಸೋವಿಯತ್ ಮಹಾಧಿವೇಶನಗಳು ನಡೆಯುತ್ತವೆ. ಇದರೊಳಗಿನ ಸಭಾಭವನದ ವೇದಿಕೆಯೆ ೧೩೨ ಅಡಿ ಉದ್ದ, ೭೨ ಅಡಿ ಅಗಲವಾಗಿದೆ. ಅಧಿವೇಶನ ಕಾಲದಲ್ಲಿ ವೇದಿಕೆಯ ಮೇಲಿಂದ ನಡೆಯುವ ಉಪನ್ಯಾಸಗಳನ್ನು, ಇಪ್ಪತ್ತೊಂಬತ್ತು ವಿವಿಧ ಭಾಷೆಗಳಿಗೆ ಅನುವಾದ ಮಾಡಿ, ಸದಸ್ಯರು ತಮ್ಮ ಪೀಠಗಳಲ್ಲಿ ಕಿವಿಗೆ ತಗುಲಿಸಿಕೊಂಡ ಯಂತ್ರೋಪಕರಣಗಳ ಮೂಲಕ ಕೇಳಿಸುವ ವ್ಯವಸ್ಥೆ ಇದೆ. ಆಗಾಗ ಈ ಭವನದಲ್ಲಿ ‘ಬ್ಯಾಲೆ’ಗಳು ನಡೆಯುತ್ತವೆ.

ಕ್ರೆಮ್ಲಿನ್ನಿನ ಆವರಣದಲ್ಲಿ ‘ಆರ್ಮರಿ’ ಎಂಬ ಶಸ್ತ್ರಾಗಾರವಿದೆ. ಅದನ್ನು ನೋಡಲು ನಮಗೆ ಟಿಕೆಟ್ ದೊರೆಯಲಿಲ್ಲ. ಹಾಗೆಯೇ ಜಾರ್ ದೊರೆಗಳ ಕಾಲದ ವಜ್ರ ವೈಢೂರ‍್ಯಾದಿ ಆಭರಣಗಳ ಸಂಗ್ರಹಾಲಯವೂ ಒಂದಿದೆ. ಅದನ್ನು ನೋಡಲು ಮೊದಲೇ ಟಿಕೆಟ್‌ಗಳನ್ನು ಕಾದಿರಿಸಬೇಕು.