ಇಪ್ಪತ್ತನೇ ಶತಮಾನ ಕಂಡ ಶ್ರೇಷ್ಠ ತತ್ವಜ್ಞಾನಿ ಜೆ. ಕೃಷ್ಣಮೂರ್ತಿ. ಅವರು ಬುದ್ಧಿ ಜೀವಿಗಳ ತತ್ವಜ್ಞಾನಿ ಎಂದೇ ಖ್ಯಾತರಾಗಿದ್ದಾರೆ. ಅವರ ವಿಚಾರಗಳು ಚಿಂತನೆಗಳು ಅವರ ಪ್ರವಚನಗಳಲ್ಲಿ ಅಭಿವ್ಯಕ್ತಿಗೊಂಡಿವೆ. ಆಂಗ್ಲಭಾಷೆಯಲ್ಲಿ ಇರುವ ಅವರ ಪ್ರವಚನಗಳು ಹಾಗೂ ಸಂಭಾಷಣೆಗಳು ಕನ್ನಡದಲ್ಲಿ ವಿರಳವಾಗಿವೆ. ಅವರ ವಿಚಾರಗಳು ಕ್ಲಿಷ್ಟವಿದ್ದರೂ ಸಹ ಜನಸಾಮಾನ್ಯರು ಗಮನವಿಟ್ಟು ಅಧ್ಯಯನ ಮಾಡಿದರೆ ಅತಿ ಸರಳ. ಆರು ದಶಕಗಳವರೆಗೆ ಜಗತ್ತಿನಾದ್ಯಂತ ತಮ್ಮ ಅಮೋಘ ಉಪನ್ಯಾಸಗಳಿಂದ ಸಾವಿರಾರು ಜನರ ಅಭಿಮಾನ ಪ್ರೀತಿ ಪಡೆದ ಮಹಾನ್‌ ದಾರ್ಶನಿಕ ಜೆ. ಕೃಷ್ಣಮೂರ್ತಿಯವರ ಜೀವನ ಹಾಗೂ ಬೋಧನೆಯ ಕಿರು ಪರಿಚಯ ಇಲ್ಲಿದೆ.

೧. ಜೆ. ಕೃಷ್ಣಮೂರ್ತಿ-ಜೀವನ ಚರಿತ್ರೆ

ಮಾದನಪಲ್ಲಿ ಆಂಧ್ರ ಪ್ರದೇಶದ ಚಿತ್ತೂರ ಜಿಲ್ಲೆಯ ಒಂದು ಚಿಕ್ಕಗ್ರಾಮ. ಜಿದ್ದು ನಾರಾಯಣಯ್ಯ ಹಾಗೂ ಸಂಜೀವಮ್ಮ ಅವರದು ಸಂಪ್ರದಾಯದ ಬ್ರಾಹ್ಮಣ ಕುಟುಂಬ. ಪೂಜಾಕೋಣೆಯಲ್ಲಿ ೧೧ಮೇ ೧೮೬೫ರಂದು ಮಧ್ಯರಾತ್ರಿ ೧೨-೩೦ ಗಂಟೆಗೆ ಸಂಜೀವಮ್ಮ ತಮ್ಮ ಎಂಟನೇ ಮಗುವಿಗೆ ಜನ್ಮವಿತ್ತಳು. ಆ ಮಗುವೇ ಜಿದ್ದು ಕೃಷ್ಣಮೂರ್ತಿ. ಎಂಟನೇ ಮಗುವಾದ್ದರಿಂದ ಮಗುವಿಗೆ ಶ್ರೀಕೃಷ್ಣನ ಹೆಸರು ಇಡಲಾಯಿತು. ಆ ಕಾಲದಲ್ಲಿ ಪ್ರಸಿದ್ಧ ಜ್ಯೋತಿಷಿಗಳು ಆತನ ಜಾತಕ ಬರೆದು ಭವಿಷ್ಯದಲ್ಲಿ ಈತ ಅತ್ಯಂತ ಶ್ರೇಷ್ಠ ಪುರುಷನಾಗುತ್ತಾನೆ ಎಂದು ನುಡಿದರು.

ಬಾಲಕನಾಗಿದ್ದಾಗ ಕೃಷ್ಣಮೂರ್ತಿಯ ಆರೋಗ್ಯ ಚನ್ನಾಗಿರಲಿಲ್ಲ ಆರು ವರ್ಷದವನಿದ್ದಾಗ ಉಪನಯನ ಮಾಡಿ ಶಾಲೆಗೆ ಕಳುಹಿಸಲಾಯಿತು. ಬಾಲಕ ಕೃಷ್ಣಮೂರ್ತಿಗೆ ತಮ್ಮನಾದ ನಿತ್ಯಾನಂದನ ಜೊತೆ ಹೆಚ್ಚಿನ ಸಲುಗೆ. ಶಾಲೆಯಲ್ಲಿ ಕೃಷ್ಣಮೂರ್ತಿ ತುಂಬ ಮಂದಗತಿ ಹುಡುಗನಾಗಿದ್ದು ಪುಸ್ತಕ ಓದುವುದೆಂದರೆ ಆತನಿಗೆ ಸೇರದ ವಿಷಯ. ಯಾವಾಗಲೂ ಕನಸು ಕಾಣುವ ತವಕ. ಮರ-ಗಿಡ-ಪಕ್ಷಿಗಳನ್ನು ನೋಡುತ್ತ ಗಂಟೆಗಟ್ಟಲೆ ನಿಂತು ಬಿಡುತ್ತಿದ್ದ. ಆದರೆ ಬಡವರನ್ನು ಭಿಕ್ಷುಕರನ್ನು ಕಂಡರೆ ವಿಶೇಷ ಕರುಣೆ ತನ್ನಲ್ಲಿದ್ದುದನ್ನು ಕೊಟ್ಟು ಬಿಡುತ್ತಿದ್ದನು. ಈ ಉದಾರತೆ ಬದುಕಿನುದ್ದಕೂ ಕಾಣಬಹುದು.

ಬಾಲಕನಾಗಿದ್ದಾಗ ಕೃಷ್ಣಮೂರ್ತಿಯ ಸ್ವಭಾವ ಅಂತರ್ಮುಖವಾಗಿತ್ತು ಸೋದರ ನಿತ್ಯಾನಂದ ಚುರುಕುತನ ಚಟುವಟಿಕೆಯಿಂದ ಹಾಗೂ ಲವಲವಿಕೆಯಿಂದ ಇರುತ್ತಿದದ. ಕೃಷ್ಣಮೂರ್ತಿ ಹತ್ತೂವರೆ ವರ್ಷದವನಿದ್ದಾಗ ತಾಯಿ ಸಂಜೀವಮ್ಮ ತೀರಿಕೊಂಡರು. ಇದು ಬಾಲಕನ ಮೇಲೆ ಗಾಢ ಪರಿಣಾಮ ಬೀರಿತು. ನಾರಾಯಣಯ್ಯ ಮದ್ರಾಸಿನಲ್ಲಿರುವ ‘ಥಿಯೊಸೊಫಿಕಲ್‌ ಸೊಸಾಯಿಟ’ಯ ಸದಸ್ಯರಾಗಿದ್ದರು. ತಮ್ಮ ೫೨ನೇ ವಯಸ್ಸಿನಲ್ಲಿ ೧೯೦೭ರಲ್ಲಿ ಸರಕಾರಿ ಸೇವೆಯಿಂದ ನಿವೃತ್ತಿಹೊಂದಿ ನಾರಾಯಣಯ್ಯ ತಮ್ಮ ಮಕ್ಕಳ ಸಮೇತ ಮದ್ರಾಸಿಗೆ ಬಂದರು. ಅಲ್ಲಿ ಆಡ್ಯಾರದಲ್ಲಿರುವ ‘ಥಿಯೊಸೋಫಿಕಲ್‌ ಸೊಸಾಯಿಟಿ’ ಸೇವೆಗೆ ಸೇರಿದರು.

‘ಥಿಯೊಸೊಫಿಕಲ್‌ ಸೊಸಾಯಿಟಿ’ ೧೮೭೫ ರಲ್ಲಿ ಆರಂಭವಾಗಿತ್ತು. ಭಾರತದ ಮದ್ರಾಸಿನಲ್ಲಿ ಅದರ ಕೇಂದ್ರ ಕಚೇರಿ ಸ್ಥಳಾಂತರಗೊಂಡಿತು. ೧೯೦೭ರಲ್ಲಿ ಶ್ರೀಮತಿ ಹ್ಯಾನಿಬೆಸೆಂಟರು. ಅದರ ಅಧ್ಯಕ್ಷರಾದರು. ಈ ಥಿಯೊಸೊಫಿಸ್ಟರ ನಂಬಿಕೆಯಂತೆ ಜಗತ್ತಿಗೆ ಅತ್ಯಂತ ಅವಶ್ಯಕವಿದ್ದ ಹೊಸಜ್ಞಾನ ನೀಡುವ ಸಲುವಾಗಿ ದೇವ ಮೈತ್ರೇಯನು ದೇಹಧಾರಣಮಾಡಿ ಬರುತ್ತಾನೆ. ಈ ಹಿಂದ ಆತ ಕೃಷ್ಣನಾಗಿ ಏಸುಕ್ರಿಸ್ತನಾಗಿ ಮತ್ತು ಬೋಧಿಸತ್ವನಾಗಿ ಬಂದಿಳಿದಿದ್ದಾನೆ. ಈಗ ಮತ್ತೊಮ್ಮೆ ಕಾಲ ಪರಿಪಕ್ವವಾಗಿದ್ದು ಮೈತ್ರೇಯದೇವ ದೇಹಧಾರಣೆ ಮಾಡಿ ಜಗತ್ತಿಗೆ ಹೊಸಧರ್ಮ ನೀಡುವುದಾಗಿ ಅವರು ನಂಬಿದ್ದರು. ಈ ವಿಶ್ವಗುರು ಬಂದಿಳಿದಾಗ ಅವನನ್ನು ಸ್ವಾಗತಿಸಲು ಮಾನವ ಜನಾಂಗವನ್ನು ಅಣಿಗೊಳಿಸುವುದೇ ಈ ಸೊಸಾಯಿಟಿಯ ಸ್ಥಾಪನೆಯ ಉದ್ದೇಶವಾಗಿತ್ತು.

ಈ ಸೊಸಾಯಿಟಿಯಲ್ಲಿ ಶ್ರೀಮತಿ ಹ್ಯಾನಿಬೆಸೆಂಟರಷ್ಟೇ ಪ್ರಭಾವಶಾಲಿಯಾದ ವ್ಯಕ್ತಿಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದರು. ಅವರೇ ಶ್ರೀ ಲೆಡಬೀಟರ್. ಅವರು ಶ್ರೇಷ್ಠ ಬರಹಗಾರರು, ಉತ್ತಮ ಭಾಷಣಕಾರರು ಹಾಗೂ ವಿಶೇಷ ಅತೀಂದ್ರಿಯ ಶಕ್ತಿ ಹೊಂದಿದ್ದರು. ಅವರು ಒಮ್ಮೆ ಮದ್ರಾಸಿನ ಹ್ಯಾಡರ್ ಬೀಚಿನಲ್ಲಿ ವಿಹರಿಸುತ್ತಿದ್ದಾಗ ಸೊಟ್ಟ ದೇಹದ ಬಾಲಕ ಕೃಷ್ಣಮೂರ್ತಿಯನ್ನು ಕಂಡರು. ತಮ್ಮ ಅತೀಂದ್ರಿಯ ಶಕ್ತಿಯಿಂದ ಆ ಬಾಲಕ ಕೃಷ್ಣಮೂರ್ತಿಯಲ್ಲಿ ವಿಶ್ವಗುರುವನ್ನು ಕಂಡರು. ಬಡತನ, ಹಸಿವೆ, ಕೊಳೆಗಳು ಕೃಷ್ಣಮೂರ್ತಿಯಲ್ಲಿ ಎದ್ದುಕಾಣುತ್ತಿದ್ದವು. ಎಲುಬಿಗೆ ಅಂಟಿಕೊಂಡ ಚರ್ಮ, ಮೇಲಿಂದ ಮೇಲೆ ಬರುವ ಕೆಮ್ಮು, ಸೊಟ್ಟ ಹಲ್ಲು, ಮೊಳಕಾಲವರೆಗೆ ಬಿಟ್ಟ ಜುಟ್ಟು, ದಡ್ಡತನ ತೋರುವ ದೃಷ್ಟಿ ಬಾಲಕನಲ್ಲಿ ಕಂಡವು. ಆದರೆ ಜಗತ್ತಿನ ಭಾವಿನಾಯಕಗುರು ಆಗುವ ಎಲ್ಲ ಚಿಹ್ನೆಗಳನ್ನು ಆತನಲ್ಲಿ ಅವರು ಗುರುತಿಸಿದರು.

ಶ್ರೀ ಲೆಡ್‌ಬೀಟರ ಹಾಗೂ ಶ್ರೀಮತಿ ಹ್ಯಾನಿಬೆಸೆಂಟರು ನಾರಾಯಣಯ್ಯನವರೊಂದಿಗೆ ಚರ್ಚಿಸಿ ಕೃಷ್ಣಮೂರ್ತಿ ಹಾಗೂ ನಿತ್ಯಾನಂದನ ಲಾಲನೆ-ಘೋಷಣೆ ಜವಾಬ್ದಾರಿ ಹೊತ್ತರು. ಅವರೀರ್ವರಿಗೆ ಕ್ರಮಬದ್ಧ ಜೀವನ ರೂಢಿಗೊಳಿಸಲಾಯಿತು. ಅವರಿಗೆ ಒಳ್ಳೆಯ ಶಿಕ್ಷಣ ಪ್ರಾರಂಭಿಸಿದರು. ತಾಯಿಯ ಪ್ರೇಮದಿಂದ ವಂಚಿತನಾದ ಕೃಷ್ಣಮೂರ್ತಿ ಶ್ರೀಮತಿ ಹ್ಯಾನಿಬೆಸೆಂಟರ ಮಾತೃಪ್ರೇಮದಲ್ಲಿ ಅದನ್ನು ಮರಳಿ ಪಡೆದರು.

ಥಿಯೊಸೋಫಿಕಲ್‌ ಸೊಸಾಯಿಟಿಯ ಪದ್ಧತಿಯಂತೆ ಆತನಿಗೆ ದೀಕ್ಷೆ ಕೊಡಲಾಯಿತು. ಅವರಿಗಾಗಿ ‘ಆರ್ಡರ್ ಆಫ್‌ ದಿ ರೈಜಿಂಗ್‌ ಸನ್‌’ ಎಂಬ ಸಂಸ್ಥೆ ಸ್ಥಾಪನೆಗೊಂಡಿತು. ಹಾಗೂ ಕೆಲ ಸಮಯದ ನಂತರ ‘ಆರ್ಡರ್ ಆಫ್‌ ದಿ ಸ್ಟಾರ ಇನ್‌ ದಿ ಈಸ್ಟ್‌’ ಎಂಬ ಸಂಸ್ಥೆ ಕೂಡ ಸ್ಥಾಪನೆಯಾಯಿತು. ಜಗತ್ತಿನಾದ್ಯಂತ ಸಾವಿರಾರು ಜನ ಇದರ ಸದಸ್ಯರಾದರು. ೧೯೨೮ರ ಹೊತ್ತಿಗೆ ೪೫೦೦೦ ಸಕ್ರಿಯ ಸದಸ್ಯರನ್ನು ಆ ಸಂಘ ಹೊಂದಿತ್ತು. ಅಷ್ಟರಲ್ಲಿ ನಾರಾಯಣಯ್ಯ ತನ್ನ ಮಕ್ಕಳನ್ನು ತನಗೇ ಮರಳಿಸಬೇಕೆಂದು ನ್ಯಾಯಾಲಯದ ಮೊರೆ ಹೊಕ್ಕರು. ಈ ವಿಷಯ ಪ್ರೈವಿ ಕೌನ್ಸಿಲ್‌ವರಿಗೂ ಹೋಯಿತು. ತಮದೆ ಹಾಗೂ ಹ್ಯಾನಿಬೆಸೆಂಟರ ನಡುವೆ ಓರ್ವರನ್ನು ಆರಿಸಿಕೊಳ್ಳಲು ಪ್ರೈವಿ ಕೌನ್ಸಿಲ್ಲು ತಿಳಿಸಿತು. ಕೃಷ್ಣಮೂರ್ತಿಯ ಮಾತೃಪ್ರೇಮ ಶ್ರೀಮತಿ ಹ್ಯಾನಿಬೆಸೆಂಟರನ್ನೇ ಆರಿಸಿಕೊಂಡಿತು. ಈ ವ್ಯಾಜ್ಯ ನಡೆದಾಗ ಹುಡುಗರ ಶಿಕ್ಷಣ ಯುರೋಪನಲ್ಲಿ ನಡೆದಿತ್ತು.

ಕೃಷ್ಣಮೂರ್ತಿ ಹಾಗೂ ನಿತ್ಯಾನಂದನಿಗೆ ಇಂಗ್ಲೆಂಡ್‌ ಹಾಗೂ ಫ್ರಾನ್ಸ್ ನಲ್ಲಿ ಒಳ್ಳೆಯ ಶಿಕ್ಷಣ ಕೊಡಿಸಲಾಯಿತು. ಕೃಷ್ಣಮೂರ್ತಿ ಮ್ಯಾಟ್ರಿಕ್‌ ಪರೀಕ್ಷೆ ಪಾಸಾಗದಿದ್ದರೂ ಸಾಹಿತ್ಯ, ಕಾವ್ಯ, ಸಂಸ್ಕೃತ ಅಧ್ಯಯನ ಮಾಡಿದರು. ಫ್ರೆಂಚ್‌ ಇಟಾಲಿಯನ್‌ ಭಾಷೆಗಳನ್ನು ಕಲಿತರು. ಕೃಷ್ಣಮೂರ್ತಿಯ ಆಂತರಿಕ ಬೆಳವಣಿಗೆ ತೀವ್ರಗೊಂಡಿತು. ಏಕಾಂತತನ, ಸಮಗ್ರವಾದ ಅವಲೋಕನ ಹಾಗೂ ಎಲ್ಲವನ್ನೂ ಕೆದಕಿ ಕೇಳುವ ಸ್ವಭಾವ ಅವರಲ್ಲಿ ಆಳವಾಗಿ ಬೇರೂರಿದ್ದವು. ಪ್ರತಿ ಸೂಕ್ಷ್ಮವನ್ನು ಗ್ರಹಿಸುವ ಶಕ್ತಿ ಅವರಲ್ಲಿತ್ತು. ವಿಶ್ವಗುರುವಿನ ಪೀಠವೇರಲು ತಾವು ಮಾಡುತ್ತಿರುವ ಕಾರ್ಯಗಳಿಗೂ ತಮ್ಮ ಅಂತರಂಗದಲ್ಲಿರುವ ಅನುಭಾವಕ್ಕೂ ಇರುವ ವ್ಯತ್ಯಾಸ ಅವರಲ್ಲಿ ಯಾತನೆ ಉಂಟು ಮಾಡುತ್ತಿತ್ತು. ತೀವ್ರವಾದ ತಲೆನೋವು ಅವರನ್ನು ಕಾಡುತ್ತಿತ್ತು. ಈ ಸಂದರ್ಭದಲ್ಲಿ ತಮ್ಮ ನಿತ್ಯಾನಂದನ ಆರೋಗ್ಯ ಕೆಟ್ಟು ೧೯೨೫ರಲ್ಲಿ ಆತ ನಿಧನ ಹೊಂದಿದ. ನಿತ್ಯಾನಂದನ ಮರಣ ಕೃಷ್ಣಮೂರ್ತಿಯ ಮನಸ್ಸಿನ ಮೇಲೆ ತೀವ್ರ ಆಘಾತ ಉಂಟು ಮಾಡಿತು. ಇದು ಜೀವನ-ಮರಣ ಕುರಿತ ಅವರ ಚಿಂತನೆಯನ್ನು ಆಳವಾಗಿಸಿತು.

ನಿತ್ಯಾನಂದನ ಸಾವು ಅಂತರಂಗದ ತುಮುಲ ಹೆಚ್ಚಿಸಿತು. ಶ್ರೀಮತಿ ಹ್ಯಾನಿಬೆಸೆಂಟರ ಮಾತೃಪ್ರೇಮ ಅವರ ಅಂತರಂಗದ ಸತ್ಯವನ್ನು ಮುಚ್ಚಿಡಲಾಗಲಿಲ್ಲ. ಸಂಘ-ಸಂಸ್ಥೆಗಳ, ಧರ್ಮ-ಕರ್ಮಗಳ, ಪುಸ್ತಕ ಪುರಾಣಗಳ ಹಾಗೂ ವಿಧಿ-ವಿಧಾನಗಳ ನಿರುಪಯುಕ್ತತೆ ಅವರಿಗೆ ಮನದಟ್ಟಾಯಿತು. ೧೯೨೯ ಆಗಸ್ಟ್ ೩ನೇ ತಾರೀಖು ಹಾಲುಂಡ ದೇಶದ ಓಮೆನ್‌ದಲ್ಲಿ ಸಮಾವೇಶಗೊಂದ ಸಹಸ್ರಾರು ಜನರ ಸಮ್ಮೇಲನದಲ್ಲಿ, ತಮಗಾಗಿ ರಚಿಸಿದ ಸಂಸ್ಥೆಯನ್ನು ಅಪಾರವಾದ ಹಣ, ಆಸ್ತಿ-ಪಾಸ್ತಿಗಳನ್ನು ಶಿಷ್ಯಸ್ತೋಮವನ್ನು ವಿಸರ್ಜಿಸಿ, ಘೋಷಣೆಮಾಡಿ ಎಲ್ಲರನ್ನೂ ಚಕಿತಗೊಳಿಸಿದರು. “ಸತ್ಯವು ಪಥವಿಲ್ಲದ ತಾಣ” ಎಂದು ಘೋಷಿಸಿ, “ಸತ್ಯವನ್ನು ಅರಿಯಲು ಸಂಘಟನೆ ಬೇಕಿಲ್ಲ” ಎಂದರು.

ಕೃಷ್ಣಮೂರ್ತಿಯವರು ಥಿಯೊಸೊಫಿಕಲ್‌ ಸೊಸಾಯಿಟಿಯನ್ನು ತ್ಯಜಿಸಿದರೂ ಸಹ ಶ್ರೀಮತಿ ಹ್ಯಾನಿಬೆಸೆಂಟರ ಪ್ರೇಮದಿಂದ ಎಂದೂ ವಿಮುಖರಾಗಲಿಲ್ಲ. ಅವರು ಅನಂತರ ಯಾವುದೇ ಆಧ್ಯಾತ್ಮಿಕ ಸಂಘಟನೆಯನ್ನು ಕೈಕೊಳ್ಳಲಿಲ್ಲ, ತಾವು ಕಂಡ ಸತ್ಯವನ್ನು ತಿಳಿಸುತ್ತ, ಪ್ರವಚನ, ಸಂಭಾಷಣೆ ಹಾಗೂ ವೈಯ್ಯಕ್ತಿಕ ಸಂದರ್ಶನ ನಡೆಸಿದರು. ತಮ್ಮ ಪ್ರವಚನಗಳನ್ನು ಏರ್ಪಡಿಸಲು ಹಾಗೂ ಪುಸ್ತಕಗಳನ್ನು ಪ್ರಕಟಿಸಲು ಕೆಲವು ದೇಶಗಳಲ್ಲಿ ಕೃಷ್ಣಮೂರ್ತಿ ಫೌಂಡೇಶನ್‌ ಎಂಬ ಸಂಸ್ಥೆ ಸ್ಥಾಪಿಸಿದರು. ಅಮೇರಿಕೆಯ ಕ್ಯಾಲಿಫೋರ್ನಿಯಾದ ಓಹಾಯ್‌ನಲ್ಲಿ ಕೃಷ್ಣಮೂರ್ತಿಯವರು ಒಂದು ಶಾಲೆ, ಇಂಗ್ಲೆಂಡಿನ ಹ್ಯಾಂಪ್‌ಶಾಯರ್ನಲ್ಲಿ ಬ್ರಾಕ್‌ವುಡ್‌ ಪಾರ್ಕ್‌ನಲ್ಲಿ ಒಂದು ಶಾಲೆ, ಭಾರತದ ರಾಜಘಾಟನಲ್ಲಿ ಒಂದು ಶಾಲೆ, ರಿಷಿವ್ಯಾಲಿಯಲ್ಲಿ ಒಂದು ಶಾಲೆ ಈ ರೀತಿ ತಮಗೆ ಪ್ರಿಯ ವಿಷಯವಾದ ಶಿಕ್ಷಣವನ್ನು ಅವರು ಪ್ರಯೋಗರೂಪದಲ್ಲಿ ಅಳವಡಿಸಿದರು.

ಜಗತ್ತಿನ ತುಂಬ ತಮ್ಮ ಬೋಧನೆಯನ್ನು ಪ್ರವಚನಗಳ ಮೂಲಕ ಸುಮಾರು ೬೦ ವರ್ಷಗಳವರೆಗೆ ಸಾರಿದರು. ತಮ್ಮ ಬಾಳಿಗೆ ತಾವೇ ಬೆಳಕಾಗಬೇಕು ಹಾಗೂ ಸ್ಪಷ್ಟವಾದ ಅವಲೋಕನದಿಂದ ಮಾತ್ರ ಪ್ರೇಮ, ಕರುಣೆ ಹಾಗೂ ಶಾಂತಿ ಸಾಧ್ಯ ಎಂದು ಸಾರಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಪೈಪೋಟಿರಹಿತ ಶಿಕ್ಷಣದ ಪಠ್ಯಕ್ರಮವನ್ನು ಜಾರಿಯಲ್ಲಿ ತಂದರು. ವಿಶ್ವದುದ್ದಕ್ಕೂ ತಮ್ಮ ಸಂದೇಶ ಬೀರಿದರೂ ಸಹ ಎಂದು ಯಾವುದೇ ಕೀರ್ತಿ ಗೌರವ ಮತ್ತು ಸ್ಮಾರಕಗಳನ್ನು ಬಯಸಲಿಲ್ಲ. ವಿಜ್ಞಾನಿಗಳು, ಮನಶಾಸ್ತ್ರಜ್ಞರು, ಬುದ್ಧಿಜೀವಿಗಳು, ಪಂಡಿತರು ಪಾಮರರೂ, ಸಾಮಾನ್ಯರೂ ಅವರ ಬೋಧನೆಯ ಸವಿ ಪಡೆದಿದ್ದಾರೆ. ಆಲ್ಡಸ್‌ ಹಕ್ಸಲಿ,ಜಾರ್ಜ ಬರ್ನಾರ್ಡ ಶಾ, ಹೆನ್ರಿ ಮಿಲ್ಲರ್, ಜವಾಹರಲಾಲ ನೆಹರು ಹಾಗೂ ಅನೇಕ ಗಣ್ಯರು ಅವರಿಂದ ಪ್ರಭಾವಿತರಾಗಿದ್ದಾರೆ.

ಕೃಷ್ಣಮೂರ್ತಿ ನಿಸರ್ಗದ ಶ್ರೇಷ್ಠ ಆರಾಧಕರು. ಪ್ರತಿನಿತ್ಯ ಪ್ರಕೃತಿಯ ಮಡಿಲಲ್ಲಿ ಮೌನವಾಗಿ ಮೈಲುಗಟ್ಟಲೇ ತಿರುಗುವುದು ಅವರಿಗೆ ಅಚ್ಚುಮೆಚ್ಚಿನ ಸಂಗತಿ. ಅವರ ಪ್ರವಚನಗಳಲ್ಲಿ ಗುಡ್ಡ-ಪರ್ವತಗಳ, ಗಿಡ-ಮರಗಳ,ನದಿ-ಸಮುದ್ರಗಳ ಸಜೀವವಾದ ವರ್ಣನೆ ಸ್ಪಷ್ಟವಾಗಿ ಮೂಡಿ ಬಂದಿದೆ. ಸಮಗ್ರ ಜೀವನದ ಸಾಕಾರತೆ ಪ್ರಕೃತಿ-ಪರಿಸರವನ್ನು ಒಳಗೊಂಡಿದೆ ಎಂದು ಅವರ ನಂಬಿಕೆ.

ಜೀವನವಿಡೀ ಪ್ರವಚನ ನೀಡುವುದು ಅವರಿಗೆ ಪ್ರೀತಿಯ ವಿಷಯವಾಗಿತ್ತು. ಎಂದು ತಮಗೆ ಪ್ರವಚನ ನೀಡುವುದು ಸಾಧ್ಯವಾಗುವುದಿಲ್ಲವೋ ಆಗ ತಮ್ಮ ದೇಹ ಪ್ರಾಣರಹಿತವಾಗುವುದೆಂದು ಅವರು ಹೇಳಿದ್ದರು. ತಮ್ಮ ಪ್ರಾಣರಹಿತ ದೇಹಕ್ಕೆ ಕಟ್ಟಿಗೆಯ ಕೊರಡಿನಷ್ಟೇ ಮಹತ್ವ ನೀಡಬೇಕೆಂದು ವಿನಂತಿಸಿದ್ದರು. ೧೯೮೬ರಲ್ಲಿ ಜನೇವರಿಯಲ್ಲಿ ಭಾರತದಲ್ಲಿ ನೀಡಿದ ಪ್ರವಚನಗಳೇ ಕೊನೆಯ ಪ್ರವಚನಗಳು. ಅಮೇರಿಕೆಯ ತಮ್ಮ ಪ್ರಿಯ ಮನೆ ‘ಪಾಯಿನ್‌ ಕಾಟೇಜ್‌’ನಲ್ಲಿ ೧೭ನೇ ಫೆಬ್ರುವರಿ ೧೯೮೬ರಂದು ಅವರು ನಿಧನರಾದರು.