ಪಾಪವಿಲ್ಲದ ಲೆಕ್ಕ ನೀನೇ
ಕೋಪವಿಲ್ಲದೆ ತನ್ನಯಸ್ಥಿಯ
ರೂಪವನು ತೆಗೆಯೆನಲಿಕಿಂದ್ರನ ಕಾಮಧೇನುವನು
ಆ ಪುರಂದರ ತರಿಸಿ ಮುನಿಪತಿ
ಯಾಪವಿತ್ರಾಂಗವನು ನೆಕ್ಕಿಸೆ
ಪಾಪರಹಿತಳ ಜಿಹ್ವೆ ಮಧ್ಯಕೆ ಯುಂದ್ರವಜ್ರವನು        ೬೬

ತೇದು ಕೊಂಡನು ಬಳಿಕ ಮುನಿಪನೊ
ಳಾದ ತನುವಿನ ಮಜ್ಜೆಮಾಂಸವ
ನಾದಯಾಂಬುಧಿ ನೆಕ್ಕಿಹೋಯಿತು ಚರ್ಮರುಧಿರಗಳ
ತೇದುಹೋಗಲಿಕುಳಿದುವಾತನ
ಶೋಧಿಸಿದ ಸರ್ವಾಂಗದೆಲುಗಳೊ
ಳಾ ದಧೀಚೆಯ ಬೆನ್ನ ಬೆಳಗಿನ ಎಲುವನಮರೇಂದ್ರ    ೬೭

ಕೊಂಡುಹೋಗಲಿಕಾತನಂಗನೆ
ಕಂಡಳಾಗ ದಧೀಚಿಯಂಗದ
ದಂಡಿಯನು ಪರದೆಲುವಿನಿರವನು ಪರಯಶೋನ್ನತಿಯ
ಕುಂಡಮಧ್ಯದೊಳಿರ್ದ ಸ್ವಾಹೆಯ
ಗಂಡನನು ಕೇಳಿದಳು ತನ್ನಯ
ಗಂಡನೇನಾದಪನೊ ಎನಲಾಗನಲನುಸುರದಿರೆ       ೬೮

ಕೋಪಿಸಿಯೆ ಶಪಿಸಿದಳು ನಾಕಜ
ಪಾಪರಹಿತ ಮುಖನನಾಗಳು
ವೀಪತಿವ್ರತೆ ಸರ್ವಭಕ್ಷಕನಾಗು ಹೋಗೆನಲು
ಭೂಪ ಕೇಳೈ ಮುನ್ನವನಲನು
ತಾ ಪುರೋಡಾಶನವನುಂಬನು
ತಾಪಸನ ಕೈಯಿಂದ ಮತ್ತೇನಾದ ವಸ್ತುವನು ೬೯

ಅನಲನಾಹುತಿಗೊಳ್ಳದಿರುತಿರೆ
ವನಿತೆ ಶಪಿಸಿದಳಂದುಮೊದಲಾ
ಗನಲನಾದನು ಸರ್ವಭಕ್ಷಕನಾದನದರಿಂದ
ಅನಿಮಿಷಾಧಿಪನಾ ದಧೀಚಿಯ
ಘನತರದ ಎಲುವಿಂದ ವೃತ್ರನ
ತನುವ ಕೆಡಹಿದ ಪರಮ ಮಾರ್ಗಣದಂತೆ ಬೆಳಗುತಿರೆ ೭೦

ಮೊದಲು ವಜ್ರವನುಂಗೆ ತ್ಪಷ್ಟೃವಿ
ನದಟಪುತ್ರನ ಜಯಿಸಲಿಚ್ಛೆಯ
ಹದನಕೇಳಿನ್ನಿಂದ್ರನೇತಕೆ ಮುನಿಯಲಸ್ಥಿಯನು
ಹದನಹೇಳೆನಲೊರೆದ ಬೇಡಿದ
ವಿಧಿಯ ಪೂರ್ವದ ಕದನದನಿಮಿಷ
ತುದರು ಮಧುಕೈಟಭರು ರಾಕ್ಷಸರಿಬ್ಬರಿರಲಿಕ್ಕೆ         ೭೧

ದೇವರೆಲ್ಲರು ನೆರೆದು ತಮ್ಮಯ
ದೇವಕರ್ಮದ ಕೈದುವೆಲ್ಲವ
ನೋವಿಕೊಟ್ಟರು ಜತನಮಾಡಲು ಮುನಿಯ ಕರಗಳಲಿ
ದೇವ ದೈತ್ಯರಿಗೀಯದಿರಿಯೆಂ
ದಾವಿಬುಧ ಸಂತತಿಗಳಾಗಲು
ದೇವಲೋಕಕ್ಕೇರುತಿರಲಿತ್ತವರ ಕೈದುವನು   ೭೨

ಆ ದಧೀಚಿಯು ಕಾದುಕೊಂಡಿರ
ಲಾದುವೈ ಹದಿನಾರು ಸಾವಿರ
ಮೇದಿನಿಯ ವತ್ಸರವು ಮುನಿ ಬಳಿಕಂದು ಚಿಂತಿಸಿದ
ಈ ದುರಾಗ್ರಹದಿಮ್ದ ಕಾಯಲು
ಮಾದುವೈ ತಮ್ಮಂಗಮಂತ್ರವು
ವೇದ ವೈದಿಕಜಾಪ್ಯಪೂಜಾಯಜ್ಞ ಮೊದಲಾಗಿ         ೭೩

ಎಂದು ತಾನಾ ಕೈದುಗಳ ವರ
ವೃಂದವನು ನುಂಗಿರಲವಸ್ಥಿಯೊ
ಳಂದು ಕೂಡಿರಲಸ್ಥಿಗತವಾಗಿರಲು ಹಲಕಾಲ
ಸಂದಿರಲಿಕೀ ನಾಲ್ಕು ಯುಗಗಳಂ
ಕುಂದದೈವತ್ತಾರು ಸಾವಿರ
ವೃಂದ ತಿರುಗಲು ತ್ವಾಷ್ಟ್ರನಿಂದ್ರನ ವರ ಪುರೋಹಿಗನು          ೭೪

ಆತನಲಿ ಶಿರ ಮೂರು ತಾವಿರ
ಲೋತುವೊಂದರಲಮೃತಪಾವನವು
ಕಾತರಿಸದೊಂದರಲಿ ಸುರೆ ತಾನೊಂದರಲಿ ಸೋಮ
ಈ ತೆರದಿ ವರ ಋಷಿಯ ಸುತನಿಂ
ತಾ ತರುಣಲತೆಯಂತೆ ಕಡಿದನ
ದಾ ತತುಕ್ಷಣ ವರಪುರೋಹಿತ ಶಿರವ ಮೂರರನು      ೭೫

ಒಂದು ವರ್ಷವು ಕಳೆಯುತಿರೆ ಮ
ತ್ತಂದು ಹೊರಗಣ ಹೊಲಸು ಹಾದ
ತ್ತಂದು ವಿಪ್ರರಮುಖದಿ ಯಾಗವ ಮಾಡಿ ದೇವಪನ
ಇಂದು ಕೊಲುವುದೆನುತ್ತ ತೊಡಗಿದ
ನಂದು ತನ್ನಯ ಕೈಯ್ಯಸಾಗದ
ಕಿಂದು ಯಜ್ಞವ ಮಾಡೆ ಭೇದಿಸಿ ಬಂದ ಕೊಲುವುದಕೆ   ೭೬

ಅಂದು ಹುಟ್ಟಿದ ವೃತ್ರದೈತ್ಯನ
ಯಂದವನು ಕೊಲಲೆನುತಲಿಂದ್ರನು
ಬಂದು ಬೇಡಿದನಾ ದಧೀಚೆಯನೆಲುವಿನುಬ್ಬಟೆಯ
ಬಂದು ಬೇಡಲಿಕಾ ದಧೀಚಿಯು
ನೊಂದು ಕೊಟ್ಟನು ತನ್ನ ದೇಹವ
ನಂದು ನೋಡದೆ ಪರರ ಕಾರ್ಯವ ಮಾಡಿ ಯಿಹಪರವ         ೭೭

ಸಾಧಿಸಿದ ಕೈವಲ್ಯವಾಸನ
ಮೇದಿನಿಯಲತಿ ದಾನಶೂರರು
ವಾದಿವಾಕರತನಯನೊಬ್ಬನು ತಿದಿಯ ಸುಲಿದಿತ್ತ
ಮೇದಿನೀಪತಿ ಶಿಬಿಯು ಖಂಡವ
ಶೋಧಿಸಿಯೆ ತೆಗೆದಿತ್ತ ಕೀರ್ತಿಯ
ಸಾಧಿಸಿದ ತನ್ನೆಲುವನಿತ್ತು ದಧೀಚಿ ಕೇಳೆಂದ  ೭೮

ಜೀವನವನೊಲಿದಿತ್ತ ಯಕ್ಷನು
ಭಾವಿಸಲು ಸತ್ಕೀರ್ತಿಕಾಮಿನಿ
ಯಾ ವಿರಿಂಚಿಯ ಲೋಕಪರಿಯಂತಾಗಿ ಬಳೆದಿರಲು
ಆ ವಧಿವಿಗೊಂದಮಳ ವಸ್ತ್ರವ
ಭೂವಧೂವಲ್ಲಭನು ಕೊಡಲಿಕೆ
ದೇವ ನಿನ್ನಯ ಪಿತನನಿತ್ತನು ದ್ವಾಪರಾಂತ್ಯದಲಿ       ೭೯