ಕೋಪಿಸಿದ ನಾಕದಲಿಯಾಗಳು
ವಾಪುರಂದರ ಮುಖ್ಯನಾಕಿಗ
ಳಾಪಸತ್ತ್ವಾಧಿಕಮಹಾಬ್ಧಿಯ ತಡಿಯ ಸಾರುತಿರೆ
ತಾಪದೀಕ್ಷಿಸಿ ಮುನಿಪ ತನ್ನಯ
ರೂಪವನು ತೋರಿಸುವೆನೆನುತಿರೆ
ಕೋಪದಿಂದೀತನ ಮಹತ್ತ್ವದ ಶರಧಿ ಬಗೆಯದಿರೆ       ೪೬

ನುಂಗಿದನು ತಾನೊಂದು ಲಕ್ಷತ
ರಂಗದಗಲಸಮುದ್ರದೇವನ
ನುಂಗೆ ನುಣ್ಣಗೆಯಿರಲಿಕಾತನ ಪಾತ್ರೆ ಬಯಲಾಯ್ತು
ಅಂಗವಿಸಿ ಬಳಿಕಿತ್ತ ಮುಂದಣ
ತುಂಗ ಶರಧಿಯದೆರಡು ಲಕ್ಷವ
ನುಂಗಿ ಸುಮ್ಮನೆಯಿರದೆ ಮುಂದಣದಬುಧಿಗನುವಾದ  ೪೩

ಒಂದು ಲಕ್ಷದ ಘಾತವದರೊಳು
ಕುಂದದಿರುತಿಹ ಜೀವಕೋಟೆಯ
ಲೊಂದನಳಿಯದೆ ನುಂಗಿದನು ಬಳಿಕಂದಸ್ತ್ಯಮುನಿ
ಅಂದು ನಾನಾಪರಿಯ ಸತ್ತ್ವವು
ಚಂದದಲಿ ನೆರೆ ಕೋಳುಪೋಗಲಿ
ಕಂದು ಗಂಗಾಪತಿಗೆ ಸಂಕಟವಾಗೆ ಮುನಿಪತಿಯ      ೪೮

ಪೊಗಳಿದರೆ ತಾನಾಗ ಮುನಿಪನು
ವುಗುಳಲಿಕೆ ಮ್ನದಿಚ್ಚೆ ಮಾಡಲು
ಜಗದ ನದಿನದವಾಗಳಾಯಿತು ಮುನಿಯ ಕರುಣದಲಿ
ಉಗುಳುಗಳಿದಾ ಬಳಿಕಲಂಬುಧಿ
ಯುಗುಳೆ ತಾನುಚ್ಛಿಷ್ಟವೇಯಹು
ದುಗುಳಬೇಡೈಯೆನಲು ಮೂತ್ರಿಸಿ ಕಳೆದನಾ ಕಡಲ    ೪೯

ಕಡಲ ಮೂತ್ರಿಸಿ ತುಂಬಿ ಮುನ್ನಿನ
ತಡಿಯನೆಲ್ಲವನಾಗ ಶರನಿಧಿ
ನುಡೀಯಿತೈ ತಾನಾಗಗಸ್ತ್ಯಗೆ ಭೂಪ ಕೇಳೆಂದ
ಪೊಡವಿಯಲಿ ತಾನಶುಚಿಯಾದೆನು
ಮಡುಹುವಾದೆನದೊಬ್ಬರಾದರು
ಬಿಡದೆ ಪಾನಸ್ನಾನಮಾಡುವರಿಲ್ಲ ತನ್ನೊಳಗೆ ೫೦

ಎನಲು ಕುಂಭಜನಾ ಸಮುದ್ರಗೆ
ವಿನಯದಿಂದುಸುರಿದನು ಚಂದ್ರನು
ದಿನಪತಿಯು ತಾನೊಂದು ರಾಶಿಗೆ ಬಂದ ದಿನಗಳಲಿ
ಮನವೊಲಿದು ತಾ ಮಿಂದ ಮನುಜಗ
ದೆನಿತು ಫಲ ತಾನಹುದದೆಂದೊಡೆ
ಘನತರ ಶ್ರೀಮಾಸವಾಸದ ಫಲವನೈದುವರು         ೫೧

ಎಂದು ತನ್ನಯ ದೇವಪೂಜೆಯ
ನಂದು ಕಂಡನಗಸ್ತ್ಯಕಡಲಿಂ
ಗಂದು ತನ್ನಾಜ್ಞೆಯನು ಕೊಟ್ಟನು ಭೂಪ ಕೇಳೆಂದ
ಇಂದುಮೊದಲಾಗೆನ್ನ ಶಿಷ್ಯರು
ಚಂದದಲಿ ಮುಟ್ಟಿದುರ ನುಂಗಿದ
ರೆಂದುವೀಪರಿಯೆನಲಿಕೆಂದನು ಜಲಧಿ ಮುನಿವರಗೆ     ೫೨

ನಿಮ್ಮ ಶಿಷ್ಯರು ಮುಟ್ಟಿದೊಂದುವ
ಸುಮ್ಮನಾನುಂಗಿದರೆ ಲೋಕದ
ಧಮ್ಮವೈದುವೆವೆಮ್ದು ಮುನಿಪನ ವರುಣ ಬೀಳ್ಕೊಟ್ಟ
ಬೊಮ್ಮರಕ್ಕಸಕೋಟಿ ನೆರೆದಿಹ
ಗಮ್ಯದಾಸ್ಥಾನಕ್ಕೆ ಮಾಡಿದ
ರಮ್ಯನವತಾರಕ್ಕೆ ಪೂರ್ವದೊಳೆಂಟು ಚೌಕಡಿಗೆ       ೫೩

ಆಯಿತೈ ತಾ ಕೇಡು ಲಂಕೆಗೆ
ನ್ಯಾಯಗತಿಯಲಿ ನೀಲನಳರಿಂ
ದಾಯಿತೈ ತೆತ್ತೀಸಕೋಟಿಗೆ ಹರುಷದುಬ್ಬುಗಳು
ರಾಯ ಕೇಳೈ ಬಳಿಕಗಸ್ತೈನು
ವಾಯದಲಿ ದಕ್ಷಿಣದಿ ನಿಲಲಿಕೆ
ಯಾಯಿತೈ ತಾ ರೂಢಿ ಸಮತಳ ನಿಮಿಮಾತ್ರದಲಿ    ೫೪

ದೇವರೆಂದಾ ಐದು ಕಾರ್ಯವ
ನೋವಿ ಮಹಮುನಿ ನಿಮಿಷಮಾತ್ರಕೆ
ತಾವು ಮಾಡಿಯೆ ಮೆರೆದರುನ್ನತ ತೇಜದಳತೆಯಲಿ
ಆವುದೈ ಕೌಂಡಿನ್ಯ ಋಷಿಪರ
ಠಾವಿನಲಿ ತಾ ಕಾಣ ಬಪ್ಪುದು
ಬೂವಿಯಿಂ ಹದಿನೆಂಟು ಲಕ್ಷಕೆ ಭೂಪ ಕೇಳೆಂದ        ೫೫

ಆಯಿತೈ ತಾನಾಗಗಸ್ತ್ಯನು
ನ್ಯಾಯವಲ್ಲೆಂದರಿದು ಶಿಷ್ಯರ
ಮಾಯ ಶಪಿಸಿದ ನೀವು ಮರ್ಕಟ ರೂಪುಗೊಂಡಿಹುದು
ಮಾಯದೀಸಾಗರನ ಮೇಲೆಯು
ದೇವಪೂಜೆಯು ಕೊಂಡನೆಂಬೀ
ನ್ಯಾಯವರಿಯದ ದೋಷವಿಟ್ಟಿರೆಯೆಂದು ಕಳುಹಿದನು  ೫೬

ಈ ಮಹಾ ಚಂದ್ರಮಗೆ ದಕ್ಷನು
ನೇಮಿಸನೆ ತನ್ನಮಳ ಪುತ್ರಿಯ
ಕಾಮಸಂಗವ ವರ್ಜಿಸಲು ಕ್ಷಯವೆಂದು ಶಾಪವನು
ಭೂಮಿಪತಿ ಕೇಳ್ ಸಪ್ತವಿಂಶತಿ
ಯೀ ಮಹಾತಾರೆಗಳು ದಕ್ಷನ
ಪ್ರೇಮಪುತ್ರಿಯರಾದರಿಪ್ಪತ್ತೇಳು ನಾಮದಲಿ  ೫೭

ವರಸತಿಯರವರೊಳಗೆ ಮೋಹದ
ಪರಮ ಪುತ್ರಿಯರಿರಲಿಕ್ಕೆಲರ
ಧರೆಯು ಪೊಗಳಲು ಕರ್ಮಕಾರಿಯರೆಂದು ಮನ್ನಿಸುತ
ನಿರುತವಿವರಿಂ ಹಿರಿದು ರೋಹಿಣಿ
ವರಸುತೆಯ ಮೇಲಧಿಕ ಮೋಹದಿ
ಹರಿಯ ಜನ್ಮದ ತಾರೆಯೆಂದೇ ಹಿರಿದು ಮನ್ನಿಸುವ     ೫೮

ಆ ಸಂತೆಗೆ ಮೊದಲಲ್ಲಿ ಜನಿಸಿದ
ವಾಸುದೇವನ ಹಿರಿಯ ಕಂದನು
ಭೂಸುರರ ಮೊದಲಿಗನು ಕಮಳಜನೆಂದು ಮನ್ನಿಸುವ
ಈಸು ಧನ್ಯರದಾರು ಮಕ್ಕಳ
ಕೋಶದಲು ರೋಹಿಣಿಯನೆಂದಾ
ಭೂಸುರೋತ್ತಮ ದಕ್ಷ ಕೊಂಡಾಡಿದನು ರೋಹಿಣೆಯ  ೫೯

ಆಕೆ ಮೊದಲಾಗಮಳ ಸತಿಯರ
ನೇಕೆ ಲಗ್ನದಿ ಮದುವೆ ಮಾಡಿದ
ಲೋಕದಲಿ ಚಂದ್ರಮಗೆ ದಕ್ಷನು ಪರಮ ಪ್ರೀತಿಯಲಿ
ಆ ಕುವರಿ ರೋಹಿಣೆಯ ಮೋಹವ
ನೇಕ ವಿಧದಲಿ ಚಂದ್ರ ತಾಳ್ದುರೆ
ನಾಕಜರ ಹನ್ನೆರದು ವರುಷವಿರಲದ ಸೈರಿಸದೆ        ೬೦

ಪುರುಷಸಂಗಮವಿಲ್ಲವೆಂದಾ
ಬಿರಿದು ಖಾತಿಯ ತಾಳ್ದು ತಂದೆಗ
ಪರಿಯನರುಹಲು ದಕ್ಷ ಕೋಪಿಸಿ ಶಾಪವಿರಿಸಿದನು
ಪಿರಿದು ಸತಿಯರ ಸಂಗ ನಿನಗದು
ಹರಿದು ಹೋಗುವುದೆನಲು ತಾರಾ
ವರನನನಿಬರು ಬಿನ್ನವಿಸಿ ತಾತನನು ಬೇಡಿದರು       ೬೧

ಬೇಡಲಿಕೆ ಪೌರ್ಣಿಮೆಯಲೊಂದಿನ
ಕೊಡಲೀತನ ಕಳೆಯ ಷೋಡಶ
ರೂಢಿಪತಿ ಕೇಳೆಂದು ಕ್ಷಯಕಳೆಯಾದ ವಿವರವನು
ಮಾಡಿದಂತವ ಹೇಳಿ ಪುನರಪಿ
ರೂಢಿಪತಿ ಬೆಸಗೊಂಡನಗ್ನಿಯ
ನೋಡಿ ಶಾಪವನಿತ್ತನಾವನದೆಂಬುದನು ತಿಳಿಸಿ        ೬೨

ಎನಲಿಕೆಂದನು ಪೂರ್ವಕಾಲ್ದಿ
ವಿನುತಮುನಿಪ ದಧೀಚಿಯೊಂದಿನ
ಮನೆಯಲಗ್ನಿಷ್ಟೋಮಯಾಗವ ಮಾಡುತಿರಲಂದು
ಅನಿಮಿಷಾಧಿಪ ಬಂದನಗ್ಗದ
ಘನತೆಯಿಂದಾತಿಥ್ಯಕಾಲದಿ
ವಿನುತ ವಿಜ್ಞಾಪನೆಯ ಮಾಡಲಿಕಾತ ಬೆಸಗೊಂಡ      ೬೩

ಏನು ಪರಿಣತಿ ನಿನಗದೆನೆ ಹರಿ
ಯಾನತದಿ ಮುನಿಗೆಂದ ನಿಮ್ಮಯ
ಸ್ಥಾನದಲಿ ಪೃಷ್ಮಾಸ್ಥಿಯನು ಕೊಡಿಯೀಗ ತನಗೆಂದು
ಮೌನದಲಿ ಕ್ಷಣವಿದ್ದುಯಾತ್ಮ
ಜ್ಞಾನದಲಿ ಭಾವಿಸಲು ತನುವಿಗೆ
ಹಾನಿಯಹುದೆಂದಿರ್ದೊಡೊಮ್ಮೆಗೆ ವಿಧಿ ವಿಧಾತ್ರನಲಿ  ೬೪

ಎಂದು ನಿಶ್ಚಯಗೈದನಾಕ್ಷಣ
ವೆಂದನಿಂದ್ರಗೆ ತನ್ನಯಸ್ಥಿಯ
ನಿಂದು ತಾ ತೆಗೆದೀವೆನಾದೊಡಮಾತ್ಮಘಾತದಲಿ
ಒಂದು ಹತ್ಯವು ಸಮನಿಸುವುದೆನು
ತೊಂದು ತೆಗೆವೊಡೆ ನಿನಗೆ ಹತ್ಯದ
ದಂದುಗವು ದೊಡ್ಡಿಯದು ಸಮನಿಪುದೆನುತಲುಭಯರಿಗೆ         ೬೫