ಅವನೊಬ್ಬನು ರಾಜರಾಜರ
ಠಾವನೈದಿಯೆ ರಾಜದರುಶನ
ಸೋವನವನಾ ರಾಜದ್ರವ್ಯವ ಕೊಂಬ ರಾಜರಲಿ
ಆವ ಮನ್ನಿಸಿಕೊಂಬನಾತನೆ
ಯೀ ವಿಷಯವ ಗೆಲರಿದೆಂದರೆ
ದೇವಗನ ತಮಗರಿ ಯೆನಲ್ಕೀ ಬ್ರಹ್ಮನಿಂತೆಂದ         ೨೬

ಆವ ರಾಜರ ದರುಶನಂಗಳು
ಭಾವಿಸಲು ತಮಗಿಲ್ಲವಾದರೆ
ದೇವಕುಲಕಿನ್ನಾರು ಗತಿ ಹೇಳೆಂದರಾಸುರರು
ನೀವು ಹೇಳಿದುದೈದು ಠಾವಿನ
ದೇವವಿಗ್ರಹಕೊಬ್ಬ ಪರಿಭವ
ಭಾವಿಸಲು ನೀವೀಸು ಜಠರವಗಸ್ತ್ಯ ಮುನಿರಾಯ       ೨೭

ಆತನಲ್ಲಿಗೆ ಹೋಗಿ ನುಡಿವುದು
ವೀತರಾಗದಲಿದು ಸಮಸ್ತ
ಪ್ರೀತಿಯವ ನೆರೆ ಮಾಡಬೇಕೆಂದಾತಗುಸುರುವುದು
ಆತ ಹೇಳಿದ ತೆರದೆಯಮರರು
ಆ ತತುಕ್ಷಣದಲ್ಲಿ ಬಂದರು
ವೋತು ಹರವರಮುನಿಪ ಕುಂಭಜನಾಶ್ರಮಕ್ಕೊಲಿದು  ೨೮

ಬಂದು ಸಾಷ್ಟಾಂಗದಲಿ ಮುನಿಪಗೆ
ವಂದಿಸಿದುದಾ ದೇವನಿಕರವು
ಹಿಂದುಗಳೆಯದೆ ತಮ್ಮಭೀಷ್ಮವ ನುಡಿದರಾ ಮುನಿಗೆ
ತಂದೆ ಕೇಳೈ ತಮ್ಮವಸ್ಥೆಯ
ನಿಂದು ವಿಧಿಪನ ಬಳಿಗೆ ಹೋದರೆ
ಯಿಂದು ನಿಮ್ಮಯ ಬಳಿಗೆ ಕಳುಹಿದನೆಂದರವರಂದು   ೨೯

ದಿನಕರನ ರಥಕಡ್ಡಲಾಗಿಯೆ
ತನು ಬಳೆದುದಾ ವಿಂಧ್ಯಪರ್ವತ
ಕನಿತುವಾಗಿಯೆ ಭೂಮಿ ತಗ್ಗಿತು ಬಡಗ ದಿಕ್ಕಿನಲಿ
ಮುನಿನಿಕರವೊಂದೆಸೆಗೆ ಸಾರಲು
ವನಧಿಯೊಳಗಡಗಿದ್ದ ರಾಕ್ಷಸ
ರನಿತು ತಾವೈನೂರು ಕೋಟಿಯಲೆಮ್ಮ ಕಾಡುವರು    ೩೦

ನಿಮ್ಮವಸ್ಥೆಯನೇನು ಕಾರಣ
ನಮ್ಮ ಮುಂದರುಹುವಿರಿ ನೀವೆನೆ
ಗಮ್ಮನಾಕ್ಷಣ ಮುನಿಗೆ ಬಿನ್ನಹ ಮಾಡಿದರು ಸುರರು
ನರ್ಮದಾತೀರದಲದಿಬ್ಬರು
ಕರ್ಮಿಗಳು ವಾತಾಪಿಯಿಲ್ವಲ
ರೆಮ್ಮ ಕಾಡುವ ಕಥೆಯ ನೀ ಕೇಳೆಂದರಾ ಮುನಿಗೆ     ೩೧
.
ಮುನ್ನ ನಮ್ಮೆಲ್ಲರನು ಕೃತಕದಿ
ಮನ್ನಿಸಿಯೆ ತಾವ್ ಕರೆದು ರಾಕ್ಷಸ
ರಿನ್ನು ತಮಗರಿದೆನುತ ಬಂದೊಳಹೊಕ್ಕರಂಬುಧಿಯ
ಭಿನ್ನವಿಲ್ಲದೆ ತಮ್ಮುತನಿಬರ
ವುನ್ನತಿಯ ಕಾಡುತಿವರವರಿಗೆ
ಕುನ್ನಿಗಳ ಕಾಡುವರು ಬಪ್ಪರು ಲಂಕೆಯತಿಖಳರು      ೩೨

ಆವನಾನೊಬ್ಬನನು ಕಾಣೆವು
ದೇವಮುನಿ ಎನೆ ಮುನಿಪನಾಗಳು
ದೇವನಿಕರಕೆ ನುಡಿದ ತಾಪವನೀಗ ನೀಗಿಸುವೆ
ತಾವೆನುತ ಪರಿತಂದನಾಕ್ಷಣ
ದೇವಮುನಿ ವಾತಾಪಿಯಿಲ್ವಲ
ರಾವಸಥಕೈದಿವರ ಗ್ರಾಸವನಾಗ ಬೇಡಿದನು ೩೩

ಬೇಡಲಿಕೆ ಹರಿತಂದು ಯಿಲ್ವಲ
ಕೇಡ ನೆನೆ ವಾತಪಿಯ ಕರೆದುರೆ
ನೋಡಿ ಭಿಕ್ಷವ ಕೊಡುತ ಕೆಟ್ಟನು ಕೊಂದ ಪಾತಕದಿ
ರೂಢಿ ಮೆಚ್ಚಲು ಬಳಿಕ ವಿಪ್ರನ
ಗಾಢದಲಿ ಕಾಲ್ದೊಳಿದು ಭೋಜನ
ಮಾಡಿಸಿದ ತಾನಧಿಕ ಹರುಷದೊಳರಸ ಕೇಳೆಂದ      ೩೪

ಅನ್ನವಿಕ್ಕಿದೊಡುಂಡ ಮುನಿಪನು
ತನ್ನ ಮನದೊಳು ನೆನೆದು ಮಂತವ
ಮುನ್ನವಾ ವಾತಾಪಿಯೆಂದುರೆ ನೆನೆದು ತಾ ಕರೆಯೆ
ಸನ್ನುತದಿಇ ಮುನಿ ಕೇಳ್ದು ಮೌನದಿ
ನನ್ನಲಿಯೆ ವಾತಾಪಿ ಜೀರ್ಣವು
ಮುನ್ನೆನುತ ಮುನಿ ಸಂದ ವಿಪ್ರರ ಹಾನಿಯೆಲ್ಲವನು     ೩೫

ಪರಿಹರಿಸಿ ವಿಂಧ್ಯಾಚಲೇಂದ್ರಕೆ
ಹರಿದು ಬಂದಾ ಮುನಿಪ ಶಿಷ್ಯನ
ಕರೆದು ನುಡಿದನು ಶಿರವ ಕೊಡು ಶೂಲಿಯ ನಿರೀಕ್ಷಿಸುವೆ
ಅರಸ ಕೇಳೈ ಮುನಿಯ ಮಾತನು
ಸರಕುಗೊಳ್ಳದಲಿರಲಿಕಾಕ್ಷಣ
ವುರವಣಿಸಿ ಶಿರವೇರಿಯೊತ್ತಿದ ವಾಮಪಾದದಲಿ       ೩೬

ಒತ್ತಲಿಕೆ ವಿಂಧ್ಯಾಚಲೇಂದ್ರನು
ವತ್ತ ಸರಿದನು ಭೂಮಿಯೊಳಗಾ
ವಿಸ್ತರಿತದಾ ಲಕ್ಷಯೋಜನದುದ್ದದಳತೆಯನು
ಇತ್ತಲಾ ವಿಂಧ್ಯಾಚಲೇಂದ್ರನು
ಮತ್ತೆ ಭೂತಳದಿಂದ ಕೇಳೈ
ಬಿತ್ತರದಿ ನೋವುತ್ತ ಬಂದನು ಮನದಿ ಯೋಚಿಸುತ   ೩೭

ಅಳವು ನಮಗಿಲ್ಲೆನುತ ವಿಂಧ್ಯನು
ನೆಲೆಯ ಕಾಣದೆ ತನ್ನ ಮನದಲಿ
ತಿಳಿದು ನೋಡುತ ಹಮ್ಮನುಳಿದಾ ಪಾದಘಾತದಲಿ
ಇಳಿದ ವಿಂಧ್ಯನ ತನ್ನನುಜ್ಞೆಯ
ಬಳಿಕ ಸಲುಸುವುದೆನುತ ಹೇಳಿದ
ಮುಳಿದು ದಕ್ಷಿಣಕಡಲಿನತ್ತಲೆ ಯಜ್ಞಪುರುಷನನು        ೩೮

ಕಾಣುತುವೆ ಬರೆ ಆತನೆದ್ದನು
ಗೋಣಮಣಿದು ನುಡಿದನು ತನ್ನಯ
ಜಾಣರಪ್ಪಾ ಪುತ್ರರನು ನಿನಗೀವೆ ಕೇಳುವುದು
ಕ್ಷೀಣಮತಿಯಪ್ಪೆನ್ನ ಪುತ್ರರ
ಕ್ಷೋಣೆಯೊಳಗಾದ್ಯರನು ಮಾಡೆನು
ತಾಣೆಯಲಿ ತಾ ಕೊಟ್ಟ ಮುನಿಪತಿಗಗ್ನಿಯಾತ್ಮಜರ     ೩೯

ಕೊಂಡನಾ ನಳನೀಲರಿಬ್ಬರ
ಚಂಡಮುನಿ ತಾ ಬರುತಲವನಿಯ
ಮಂಡ್ಲದಿ ಬೆಸಗೊಂಡ ಶಿಷ್ಯರ ದೇವಪೂಜನಕೆ
ಕಂಡು ಮಕರಾಕರವನೀ ಋಷಿ
ಪಂಡಿತನು ತಾ ಶೌಚಕೆಂದಾ
ದಂಡೆಯಲಿ ತಿರುಗಿದನು ಮುನಿಪರಿಯರಸ ಕೇಳೆಂದ  ೪೦

ಶಿಷ್ಯರಿಬ್ಬರು ದೇವಪೂಜೆಯ
ವಶ್ಯದುಪಕರಣಗಳ ಬೆಳಗುತ
ಮಾಸ್ಯದಲಿ ಕೈಯಿಂದಲೊಂದಾ ಗಿಂಡಿಯುದಕವನು
ದೃಶ್ಯದಲಿ ಬುಡುಬುಡನೆ ಬಿಡುತವೆ
ಹಾಸ್ಯದಲಿ ತಮ್ಮರ್ಥಿಯಂತಿರೆ
ಮೃಶ್ಯವೀಚಿಗಳೆಳೆದುವೆಲ್ಲವ ಬಿಸುಟುದಬ್ಧಿಯಲಿ         ೪೧

ವರಮುನಿಯ ತಾ ಬರವ ಕಾಣುತ
ಪರಮ ದೇವರ ಪೂಜೆ ಯೆಲ್ಲವ
ಶರಧಿಯೊಳು ಬಿಟ್ಟಾಗ ವಹ್ನಿತನಯರು ಚಿರಕಾಲ
ಇರುತ ನೆನೆದರು ತಮ್ಮ ಗುರುವಿನ
ನಿರುತ ಕೋಪಾಟೊಪವೆಲ್ಲವ
ನರಿದು ತತ್ಕ್ಷಣ ಶರಧಿಯುದಕವ ತೋಡಿ ಹಾಯ್ಕುತಿರೆ ೪೨

ಚಲ್ಲಿತಾಕ್ಷಣ ದೇವಪೂಜನ
ಕೆಲ್ಲ ಹರಿದುದು ಬರುತಿರಲು ಬಳಿ
ಕೆಲ್ಲ ತರುಮರಗಳನು ಗಿರಿಗಳ ಕಿತ್ತು ಮೊರೆಯುತುವೆ
ಕಲ್ಲವರೆಗಾ ವಾಹಿನಿಯು ಬರೆ
ನಿಲ್ಲದಾ ನಳನೀಲರಿಬ್ಬರು
ಮಲ್ಲಿ ವೊಂದಾಲದೊಳು ವೃಕ್ಷದ ಮೇಲೆ ಕುಳ್ಳಿದರು    ೪೩

ಇರುತಿರಲಿಕೊಂದೆರಡು ಜಾವದ
ನಿರುತದಲಿ ಶೌಚಾಚಮನಗಳ
ನಿರದೆ ಮಾಡಿಯೆ ದೇವಪೂಜೆಯ ಮಾಳ್ಪ ಭರದಿಂದ
ಬರಲಿಕಲ್ಲಿಯ ತರುಗಿರಿಗಳಾ
ಧರಣೆಯಲಿ ಕೆಡೆದಿರಲು ವಿಸ್ಮಯ
ಭರದಿ ಚಿರ ನಿಂದಿರಲು ಬಂದರು ಶಿಷ್ಯರಾಕ್ಷಣಕೆ        ೪೪

ವಂದಿಸಿದರತಿಭಯದಿ ಚಾಚಿದ
ರಂದು ಶಿರಗಳನಾಗಳುತ ತಾ
ವೆಂದರಾ ಗುರುವಿಂಗೆ ವಿನಯದೆ ಬಾಗಿ ಭಾವದಲಿ
ಇಂದು ನದಿಯಧಿಪತಿಯು ನುಂಗಿದ
ತಂದೆಯಾಲದ ಮರನ ಹತ್ತಿಯೆ
ಕುಂದದುಳಿದೆವು ನಾವೆನಲು ಮುನಿಯಧಿಕ ರೋಷದಲಿ         ೪೫