ಎನುತ ಯತಿವರನೆಮ್ದ ಕೇಳೈ
ಜನಪ ನಿನ್ನಯ ಪಾಂಡುಪುತ್ರರ
ವಿನುತ ಕಾರ್ಯವನರಿಯಲಾ ಶ್ರೀಸೋಮಕುಲದವರ
ಜನಪತಿಲಕರ ಕುಂತಿಪುತ್ರರ
ಮನೆಗೆ ನಾರದ ಬಂದ ಪಾಂಡುವೆ
ಗೆನಿತು ದುರ್ಧರವೃತ್ತಿಯೆಂಬುದ ಹೇಳೆಯಾಕ್ಷಣದಿ      ೪

ಜನಪತಿಯ ಬಲ ಬಹಳವಿರಲಿಕೆ
ವಿನುತ ಭಂಡಾರವನು ತರಿಸಿದ
ಜನಪ ಮಾಡಿದ ರಾಜಸೂರ್ಯವನಂದು ಪಾಂಡುವಿಗೆ
ಎನಿತೊ ಫಲ ಮೇಳವಿಸೆಯಿಂದ್ರನ
ವನಿತೆಯರು ಬಳಿಕಾತನೋಲಗ
ದನುವ ಕಾಣರು ಪಾಂಡುನೃಪತಿಯ ಭೂಪ ಕೇಳೆಂದ  ೫

ಮಾತೃಪಿತೃಗಳ ಹಗೆಯ ತೆಗೆಯದ
ನೇತಕಾಸುತ ಜನಿಸಿ ಫಲವೇ
ಭೂತನಿಕರದವುದರದಲಿ ಜನಿಸಿದರೆ ಜಗತುಗಳು
ಓತು ಕೇಳೈ ಸಗಣಿಯೊಳು ತಾವ್
ನೇತು ಸಾವಿರ ಹುಳುಗಳೆಂಬೀ
ಮಾತುವೊದಗುಗು ಜನದ ವಚನದಿ ರಾಜ ಕೇಳೆಂದ   ೬

ಆ ಮಹಾ ಪಾಂಡವರ್ ಕುಲದಲಿ
ಭೂಮಿಪತಿ ನೀ ಜನಿಸಿ ತಂದೆಯೊ
ಳಾ ಮಹಾಹಗೆಯುರಗ ತಕ್ಷಕನಿರಲು ಕೈಗಾದೆ
ಭೂಮಿಯೊಳಗರಿವಂಶವಾದ
ಸ್ತೋಮವನು ನೀ ಕೆಡಿಸಬೇಕೆನೆ
ಭೂಮಿಪತಿ ಬಳಿಕೆಂದನಾಮುನಿಗಧಿಕ ಹರುಷದಲಿ      ೭

ಹುದುಗಿಹೆನು ತಾನೆಂಬ ಭೇದದ
ಹದನನರಿಯೆನದೆಂದಡಾ ಯತಿ
ಯಿದು ಬಳಿಕ ತಾನೊಂದು ಗಹನವೆ ದ್ವಿಜರ ಭಜಿಸಿದೊಡೆ
ಹದನ ಕಾಂಬರು ಭೂಸುರೋತ್ತಮ
ರದಕೆ ತತ್ ಕ್ಷಣ ಹೋಮದಲಿ ತಾವ್
ಸದೆದು ಕೊಡುವರು ನಿನಗೆ ವಿಪ್ರರು ಭೂಪ ಕೇಳೆಂದ   ೮

ಅನಿಮಿಷರ ಮುಖರೂಪನಪ್ಪನ
ಲನ ಕರೆದು ಸರ್ಪಗ್ರಸನವಹು
ದೆನೆ ವನಧಿಯ ಅಭೀರತನವನು ನಿಮಿಷಮಾತ್ರದಲಿ
ಮುನಿಪನೊಬ್ಬನು ಕುಡಿದು ಕಳೆಯನೆ
ಜನಪ ನಿನ್ನಯ ಪೂರ್ವಪುರುಷನ
ತನುವಿನಾ ಕ್ಷಯ ತಳೆಯಲಾಕ್ಷಣ ಹೀನಕಳೆಗಳನು     ೯

ಕೂಡಿ ತಳೆಯರೆ ಶಶಿಯನೆಂದರೆ
ರೂಢಿಯಹ ಹದಿನಾಲ್ಕು ಲೋಕವ
ಮಾಡನೇ ಕಮಲಜನು ಭೂಮಿಗೆ ತಾನು ಗೋಹಲನ
ನೋಡಿ ಕಳೆಯರೆ ಆ ಸುರೇಶನ
ಗಾಢದೈಶ್ವರ್ಯವನು ರೂಢಿಸಿ
ರೂಢಿಯಲಿ ಭಿಕ್ಷುಕನ ಮಾಡರೆ ತೀರ್ಥಮೌಳಿಯನು    ೧೦

ತಾಮಸಕ್ಕಧಿಕಾರಿ ಮಾಡರೆ
ಭೂಮಿಯೊಳ್ ದ್ವಿಜರಿಂಗೆ ತಾನದು
ನೇಮಿಸಲು ನಿಲಲುಂಟೆಯೆಂದರೆ ಭೂಪನಿಂತೆಂದ
ಸೋಮಶೇಖರಮುಖ್ಯನಾಕಿ
ಸ್ತೋಮವನು ಶಪಿಸಿರ್ದವರ್ಗಳ
ನಾಮವನು ತನಗರುಹಿಯೆಂದರೆ ಮುನಿಪನಿಂತೆಂದ   ೧೧

ಮೊದಲ ಮನ್ವಂತರದ ಕೃತಯುಗ
ವಿದಿತದಲಿ ತೆತ್ತೀಸ ಕೋಟಿಯ
ತ್ರಿದಶರೆಲ್ಲರು ನೆರೆದು ಪದ್ಮಜವಿಷ್ಣುರುದ್ರರಲಿ
ಆದಟು ದೈವವದಾರು ನಂಬಲು
ವಿದಿತವನು ತಾವರಿವೆವೆಂದಾ
ತ್ರಿದಶಗಂಗೆಯ ತಡಿಯ ನೆರೆಯಲಿ ಕೂಡಿ ಭೃಗುಋಷಿಯ        ೧೨

ನೆರೆದು ಕಳುಹಿದರವರ ಗ್ರಾಮಕೆ
ವರ ಮಹಾಋಷಿ ಮೊದಲು ಹರಿದನು
ಹರನ ಗ್ರಾಮಕೆ ಹೋಗಿ ಶೂಲಿಯ ಸಮಯವೇನೆನಲು
ಹರನು ಕೇಳುತ ಕೋಪದಿಂದವೆ
ಬರೆ ಮಹಾಋಷಿ ಕಂಡು ಶಾಪವ
ನೊರೆದ ಗಂಗಾಧರಗೆ ತಾಮಸಜನಕೆ ಗುರು ನೀನು    ೧೩

ಎಂದು ಬೇಗದಿ ಕಮಲಭವನನ
ಮಂದಿರಕೆ ಬರೆ ಪದ್ಮಸಂಭವ
ಬಂದ ಮುನಿಗಾಸನವನೀಯದೆಯಿರಲಿಕಾ ಮುನಿಪ
ಅಂದು ಶಾಪವ ಕಮಲಜಂಗಿಂ
ತೆಮ್ದ ನೀ ಜಗದಲ್ಲಿ ಮೇಣೊಂ
ದೊಂದು ಗ್ರಾಮದ್ವಾರಬಂಧದ ಮುಂದೆ ಗೋಹಲನ   ೧೪

ಛಂದದಿಂದಿರುತಿಹುದದಗಸೆಯೊ
ಳಿಂದು ತಾ ಶೀತೋಷ್ಣವಾತಕೆ
ವೊಂದು ಸದ್ವಿಜರಿಂಗಮವಸರವೀಯದನ ಗತಿಯ
ಎಂದುವೀಪರಿಯಹುದು ಧರೆಯಲಿ
ಸಂದ ಜನರ ವಿವಾಹದಾದಿಯ
ಲೊಂದು ರಾತ್ರಿಯ ನಾಲ್ಕು ಹಗಲಿಲಿ ಬಂದು ಗೋಹಲವು       ೧೫

ವೇದಿಸಿದ ನೈವೇದ್ಯದಿಂದವೆ
ಯಾದರಿಸಿ ತಾ ಮಿಥುನವರ್ಗಕೆ
ಸಾಧಿಸಿದ ಪರಮಾರ್ಥ ಭೋಗವ ಭೂಪ ಕೇಳೆಂದ
ಆ ದುರಾಗ್ರಹಿ ಮಿಥುನಕೆಯು ಬಹು
ಬಾಧೆತಾನಹುದೆಂದು ಭೃಗುಋಷಿ
ಮೇದಿನಿಯಲಿದನರುಹಿ ಬಂದನು ಕ್ಷೀರಸಾಗರಕೆ       ೧೬

ಬೇಗದಲಿ ಬಂದುರಗವಾಸಿಯ
ಯೋಗ ನಿದ್ರಾಂಗನೆಯ ಭೇದದ
ರಾಗದಲಿ ಪವಡಿಸಿದ ಮಧುಮರ್ದನನ ಬಂದೊದೆದ
ಆಗಳಾತ್ನಾ ವಕ್ಷಭಾಗವ
ತಾಗಿಸಿದತನಗ್ರಪಾದದಿ
ಮೇಗಲರಿತಾದೇವನೆದ್ದನು ಮುನಿಯ ಚರಣವನು      ೧೭

ಹಿಡಿದು ತಾ ಕುಳ್ಳಿರ್ದು ಮುನಿಪಗೆ
ನುಡಿದನೈ ಶ್ರೀವಿಷ್ಣು ನಿನ್ನಯ
ಅಡಿಗಳಿವು ಭರದೊದ್ದವೀಗಳು ತನ್ನ ಹೇರುರವ
ಅಡಿಗಡಿಗಮಾ ಸರ್ವದೈತ್ಯರ
ಹೊಡೆಗಳಿಂದತಿಕಠಿಣವಾದುದ
ನೆಡಹಿ ನೊಂದವವೆನುತಲಿದಿರಾಗೆದ್ದನಸುರಾರಿ         ೧೮

ಎನಲು ಹರುಷದಿ ಮುನಿಪನಾಕ್ಷಣ
ವನಿಷರು ಮುಂತಾಗಿ ಹೊಗಳಲು
ಜನಜನಿತ ತಾನೊಬ್ಬ ತಾಮಸನೊಬ್ಬ ರಾಜಸನು
ವಿನಯದಲಿ ತಾನೊಬ್ಬ ಸಾತ್ತ್ವಿಕ
ವನಜಲೋಚನ ದೇವ ತಾನೇ
ಜನಜನಿತ ಸರ್ವೋತ್ತಮೋತ್ತಮನೆಂದು ಹೊಳಿದನು  ೧೯

ಹೊಗಳಲಾತನ ಪದದ ಹೆಜ್ಜೆಯ
ಬಗೆಯಲಾ ಶ್ರೀವತ್ಸಲಾಂಛನ
ಜಗಕೆ ಶ್ರೀವತ್ಸಾಂಕನಾದನು ಭೂಪ ಕೇಳೆಂದ
ನಿಗೆಮಗೋಚರದೇವನನು ತಾ
ಜಗವರಿಯಲೊದೆದಾ ಮಹಾಮುನಿ
ವಿಗಡ ದೇವೋತ್ತಮನ ಕಂಡನು ದ್ವಾಪರಾಂತ್ಯದಲಿ    ೨೦

ಹಿರಿಯರನು ತಮ್ಮಂಘ್ರಿ ಸೋಂಕಿದ
ವರ ಮುನಿಪಗಾ ಮ್ಲೇಚ್ಛಜನ್ಮವು
ಭರವಸವು ತಾನೆಂದು ಮುಂದಣ ಕಥೆಯ ಕೇಳೆಂದ
ಸುರಪತಿಯ ಸಕಲಾನುವಿಭವವ
ನುರುಹಿ ಮುನಿ ದೂರ್ವಾಸನಾಕ್ಷಣ
ಶರಧಿಯೊಳು ತಾ ಮುಳುಗಿಸಿದನಾ ವರ ಸುರೇಶ್ವರನ         ೨೧

ಮತ್ತೆ ಕೇಳೈ ನೃಪಶಿರೋಮಣಿ
ಚಿತ್ತವಿಸು ಮತ್ತಾ ಅಗಸ್ತೈನ
ಸತ್ತ್ವದುನ್ನತಿಯನುಮಪಾಂರಾಶಿಯನು ಕುಡಿದುದನು
ಬಿತ್ತರದಿ ತಿರುಗುವನು ಲೋಕಕೆ
ಹತ್ತಿದುವು ನಾಲ್ಕೈದು ವಸ್ತಿಗ
ಳೊತ್ತಿಯೀ ತ್ರೈಲೋಕ್ಯಜೀವನ ಕಾದುತಿರೆ ಬಳಿಕ       ೨೨

ಸಕಲ ಸುರಗನ ನೆರೆದು ಬಂದಾ
ಭಕುತಿಯಲಿ ಬ್ರಹ್ಮಂಗೆ ಲೋಕವ
ವಿಕಳಗೊಳಿಸುವ ಹದನ ಭಿನ್ನಹ ಮಾಡಿದುದು ಬಳಿಕ
ವಿಕಳವಾಗಲು ವಾತಪೀಲ್ವಲ
ರಕಟ ಭೂಸುರನಿಕರವೆಲ್ಲವ
ಪ್ರಕಟದಲಿ ಭಕ್ಷಿಸುತಲಿರ್ದನು ವಿಂಧ್ಯಪರ್ವತದಿ         ೨೩

ನಿಂದಿರದೆ ತಾವಂದವಾಗಿಯೆ
ಮುಂದೆ ಸೂರ್ಯನ ರಥದ ಮೇಲಕೆ
ನಿಂದು ಲಕ್ಷದ ಮೇಲೆ ಯಿಪ್ಪತ್ತೈದು ಸಾವಿರಕೆ
ಇಂದಿಳೆಯ ಪೊಡೆಗೆಡೆಹುತೈದೆಳೆ
ತಂದ ರಾಕ್ಷಸರೆಲ್ಲ ತೆಂಕಣ
ಸಿಂಧುವಿನೊಳಡಗಿದ್ದು ತಮ್ಮನು ಕೊಂಡು ಕೂಗುವರು ೨೪

ಅವರಿಗವದಿರು ನೆರವುಗೊಡುತಿಹ
ರವನಿಯಲಿ ಲಂಕಾಧಿಪತಿಯಹ
ಶಿವಶಿವಾ ಐದೈದು ಬಾಧೆಗೆ ಯೇನು ಹದನೆನಲು
ಅರಿಗೆಂದನು ಕಮಲಸಂಭವ
ದಿವಕೆ ನಿಂದಿರಲಾಪ ದೈವ
ಪ್ರವರವಿಲ್ಲದೆ ಸಕಲ ಋಷಿಕುಲಕಾಗಿಯರಿದೆಂದ        ೨೫