(ನೋಡಿರಿ : ಪುಟ ೧೧೦, ಆಸ್ತೀಕಪರ್ವ ಸಂ, , ಪದ್ಯ೫೦೫೧ ನಡುವೆ ಸೇರಿದ, ಮುದ್ರಿತ ಪ್ರತಿಯ ೧೦ನೆಯ ಸಂಧಿಯಲ್ಲಿ ಇರುವ ಹೆಚ್ಚಿನ ಪದ್ಯಗಳು)

ಸೂತ ಹೇಳೈ ಗರುಡ ತಂದನು
ಪೂತವಾದಮೃತವನು ಸೇವಿಸ
ಲಾತುರದಿ ನಡೆತಂದು ಕಾಣದುದೇನು ಹೊಸತೆನಲು
ಮಾತಕೇಳುತಲುಸುರಿದನು ಸಂ
ಪ್ರೀತಿಯಲಿ ಋಷಿನಿವಹಕಂದಾ
ಖ್ಯಾತನಹ ಪೌರಾಣಿಕನು ಸುಧೆಯಡಗಿದಂದವನು     ೫೦

ಗರುಡ ಹೇಳ್ದನು ಮೊದಲು ಸಖ್ಯವ
ಬೆರಸುವಾಗಲು ಶಕ್ರನೊಡನೆಲೆ
ಸುರಪಗಹಿಗಳಿಗೆಲ್ಲ ಸುಧೆಯನು ತೋರಿ ಮುಂದಿರಿಸಿ
ಭರದಿ ತೊಅಲಗುವೆನದನು ಮುಟ್ಟೆನು
ಮರಳಿ ನೀನೊಲಿದಂತೆ ಮಾಡೆನೆ
ಧರೆಗಿಳಿದು ದೇವೆಂದ್ರ ಬಂದನದದೃಶ್ಯರೂಪದಲಿ       ೫೧

ಗರುಡನಹಿಗಳಿಗಿತ್ತು ಸುಧೆಯನು
ತೆರಳಿದನು ನಿಜ ಜನನಿಸಹಿತಾ
ದುರುಳರೆಲ್ಲರು ಪೋಗಿ ನದಿಯಲಿ ಸ್ನಾನವನು ರಚಿಸಿ
ಧರಿಸಿ ವಸನವಿಭೂಷಣಂಗಳ
ಸುರುತರದ ಸೌಗಂಧ್ಯಮಾಲ್ಯಾಂ
ಬರದಿನುರಗರು ಬರುತಲಿರೆಯಿಂದ್ರನದನೊಲಿದೊಯ್ದ ೫೨

ಮತ್ತೆ ಬಂದರು ಕದ್ರುತನಯರು
ತತ್ತುಗೊಂಬೆವೆನುತ್ತ ಸುಧೆಯನು
ಸುತ್ತಿಕಾಣದೆ ಸತ್ತವೊಲು ಹಂಬಲಿಸಿ ಹಳವಿಸುತ
ಮೃತ್ಯುಮುಖರಳಲುತ್ತಲವರಿಗೆ
ವಿಸ್ತರದಿ ಸಿದ್ಧಿಸುವುದೆ ಸುಧೆಯು
ಚಿತ್ತವಿಸಿ ಮುನಿಗಳಿರ ದೈವಪ್ರೇರಿತವನೆಂದ  ೫೩

ಅಡಗುವಿಕೆ ಕೇಳೆಂದನಿಂದಿರ
ನಡಿಗೆರಗಿ ಸಿರಿ ಗರುಡದೇವರ
ಝಡಿತೆಯಲಿ ತಾ ಕಳುಹೆ ಬಂದನು ಕದ್ರುವಿನ ಮನೆಗೆ
ತಡೆಯದೈದಿದ ಸುಧೆಯ ತೋರಿಸಿ
ಯಡಿಗೆರಗಿ ತನ್ನಾತ್ಮಜನನಿಯ
ಬಿಡಿಸಿದನು ತಾ ಸೆರೆಯನಾಕ್ಷಣ ಮುನಿಪ ಕೇಳೆಂದ    ೫೪

ಇನ್ನು ಹೇಳ್ವೆ ವ್ಯಾಳಜಾತಿಯ
ಕುನ್ನಿಗ್ಳಿಗಿನ್ನಿಂತುಯೆನುತಲಿ
ಪನ್ನಗಾರಿಯು ವಿತಳಕಿಳಿದನು ನಿಮಿಷಮಾತ್ರದಲಿ
ಪನ್ನಗರ ಮೋಹರವನೆಲ್ಲರ
ಮನ್ನಿಸದೆ ಲೇಸಾಗಿ ನುಂಗಿದ
ತನ್ನ ಜನನಿಯ ಹುಸಿದು ತೊತ್ತನು ಮಾಡಿಕೊಟ್ಟುದಕೆ  ೫೫

ಉರಗ ಜಾತಿಯನೈದೆ ನುಂಗಲು
ನೆರೆದು ನಾಲ್ವರು ಬಂದು ನಮಗಿ
ನ್ನರಿದು ಬದುಕಲು ನಿನ್ನ ಕಯ್ಯಲದೆಂದು ಬಿನ್ನವಿಸೆ
ಗರುಡದೇವರು ಬಳಿಕ ನಾಗರ
ಹಿರಿಯರೊಳು ಪರಿವಿಡಿಯೆ ನುಡಿದರು
ಸುರರ ದಿನಕೊಮ್ಮೊಮ್ಮೆ ಕೊಡುವುದು ನಮಗೆ ಕಪ್ಪವನು       ೫೬