ಪಾತ್ರಸೃಷ್ಟಿ

ಈ ಕಾವ್ಯದ ಎರಡು ಪರ್ವಗಳ ಕಥೆಯಲ್ಲಿ ಭೃಗು, ಕಶ್ಯಪ, ರುರು, ಜರತ್ಕಾರು, ಆಸ್ತೀಕರಂಥ ಋಷಿಗಳೂ, ಶೇಷ, ವಾಸುಕಿ, ತಕ್ಷಕರಂಥ ಉರಗಗಳೂ, ಗರುಡನಂಥ “ವೀರವಿಹಂಗಮ”ನೂ ಪಾತ್ರಗಳಾಗಿ ಬಂದಿದ್ದಾರೆ. ಪುಲೋಮೆ, ಪ್ರಮದ್ವರೆ ಕದ್ರು, ವಿನತೆ, ಜರತ್ಕಾರುಗಳು ಸ್ತ್ರೀ ಪಾತ್ರಗಳಾಗಿವೆ. ಅಗ್ನಿ, ಇಂದ್ರಾದಿ ದೇವತೆಗಳ ಅಂಗವೂ ಇದೆ. ಕವಿಯು ಇವುಗಳಲ್ಲಿ ಕೆಲವರ ಪಾತ್ರಸೃಷ್ಟಿಯ ಕಡೆಗಾದರೂ ವಿಶೇಷ ಲಕ್ಷ್ಯ ಪೂರೈಸಿರುವುದನ್ನು ಕಾಣಬಹುದು. ಅದರಲ್ಲಿಯೂ ವೈದೃಶ್ಯಪಾತ್ರ ಚಿತ್ರಣ (study in Contrast) ದಲ್ಲಿ ತೋರಿರುವ ಕೌಶಲ್ಯ ಗಮನಾರ್ಹವಾಗಿದೆ. ಉದಾ: ಕದ್ರು-ವನಿತೆ, ಶೇಷ-ತಕ್ಷಕ, ಕಶ್ಯಪ-ಆಸ್ತೀಕ, ರುರು-ಜರತ್ಕಾರು.

ಕೆಲವು ಪಾತ್ರಗಳ ವೈಶಿಶ್ಟ್ಯವನ್ನು ಈ ಕೆಳಗೆ ಸಂಗ್ರಹಿಸಲಾಗಿದೆ.

(೧) ಕದ್ರು : ಇವಳ ಮನದಗರ್ವ ಬಹಳ. ವಿಶ್ವಾಸಘಾತಕಿಯೂ ಆಗಿದ್ದಾಳೆ. ತನ್ನ ಸವತಿಯಾದ ವಿನತೆಯನ್ನು ಬರಿ ಮಾತುಗಳ ಬಲೆಯಿಕ್ಕಿ ಹಿಡಿಯುತ್ತಾಳೆ. ತನ್ನ ಮಾತನ್ನೇ ಸತ್ಯವಾಗಿಸಬೇಕೆಂಬ ಹಟದಿಂದ ಮಕ್ಕಳಿಗೆ ಅನುಚಿತವಗಿ ನಡೆಯಲು ಪ್ರೇರಿಸುತ್ತಾಳೆ. ಒಲ್ಲದ ಮಕ್ಕಳಿಗೆ ತಾನೇ ಶಾಪ ಕೊಡುತ್ತಾಳೆ. “ಹೊಗೆಮುಸುಡ”ನ್ನು ಹೊತ್ತ ಅವಳು ಸವತಿಯ ಮೇಲೆ ತುಂಬಾ ದರ್ಪ ತೋರಿಸುತ್ತಾಳೆ. ಅವಳ ಸೆರೆ ಬಿಡಿಸಲು ಉಪಾಯ ಕೇಳಿದರೆ, “ದುರ್ಲಭವೆನಿಪುದನೆ ಬೇಡುವೆನು” ಎಂದು ಬೇಕೆಂದೆ ಅಸಾಧ್ಯವಾದ ಅಮೃತವನ್ನು ಕೇಳುತ್ತಾಳೆ.

(೨) ವಿನತೆ : ಇವಳ ಮುಗ್ಧ ಸ್ವಭಾವವನ್ನು ಕವಿ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಸವತಿ ಕದ್ರುವಿಗೆ ಮಕ್ಕಳಾದರಲ್ಲಾ ಎಂಬ ಸಹಜ ಮತ್ಸರ ಲೋಕವೇಗ ದಲ್ಲಿ ಅಕಾಲದಲ್ಲಿ ಅಂಡವನ್ನೊಡೆದು ಹೆಳವ ಮಗನನ್ನು ಪಡೆದು ಅವನಿಂದ ಶಾಪ ಪಡೆಯುತ್ತಾಳೆ. ಇವಳು ಮಹಾಸತಿ, ಲಲಿತಮತಿ ಅಂತೆಯೇ ಸವತಿಯ ವಂಚನೆಯನ್ನು ತಿಳಿದೂ ಮುನ್ನಿನ ಕರ್ಮವೆಂದು ದಾಸ್ಯವನ್ನು ಒಲಿದು ಕೈಕೊಳ್ಳುತ್ತಾಲೆ. ಅದರ ಬಿಡುಗಡೆಗಾಗಿ ಮತ್ತೊಬ್ಬ ಮಗನ ಬರವನ್ನು ಹಾರೈಸುತ್ತಾಳೆ, ಹಂಬಲಿಸುತ್ತಾಳೆ. ಗರುಡನಂಥ ತೇಜೋವಂಥ ಮಗನನ್ನು ಪಡೆದು ಹರುಷದಲ್ಲೂ ತೊತ್ತುಗೆಲಸದ ಕರ್ತವ್ಯ ದೃಷ್ಟಿಯನ್ನು ಅವಳು ಮರೆಯಲಾರಳು. ತಾಯಿಗಾದ ಅನ್ಯಾಯವನ್ನು ಪ್ರತಿಭಟಿಸುವ ಗರುಡನಿಗೆ “ಸತ್ಯವನೇಕೆ ಕೆಡಿಸುವೆ ಮಗನೇ” ಎಂದು ತಿಳಿಹೇಳುತ್ತಾಳೆ. ಬೇಕಿದ್ದರೆ ಕದ್ರುವಿನ ಇಚ್ಚ ಪೂರೈಸಿ ಸೆರೆ ಬಿಡಿಸು ಎಂದು ಸೂಚಿಸುತ್ತಾಳೆ. ಅಮೃತವನ್ನು ತರಬೇಕಾಗುವದ್ಬನ್ನರಿತಾಗ ಮಗನಿಂದ ಸಾಧ್ಯವೇ ಎಂದು ಆತಂಕಗೊಳ್ಳುತ್ತಾಳೆ. ಅವನ ಆತ್ಮವಿಶ್ವಾಸದ ನುಡಿಗಳನ್ನು ನಂಬಿ ಹರಸಿ ಕಳುಹಿಸುತ್ತಾಳೆ. ಗರುಡನು ನಿಜವಾಗಿಯೂ ಅಮೃತವನ್ನು ತಂದು ಅವಳನ್ನು ಮುಕ್ತಳನ್ನಾಗಿ ಮಾಡಿದಾಗ ಭರದಿಂದ ಅಪ್ಪಿ ಸುಖಿಯಾಗುತ್ತಾಳೆ.

(೩) ಶೇಷ : ಇವನ ನಿರ್ಮಲ ಹೃದಯ, ನಿಯಮನಿಷ್ಠೆಯನು ಕವಿ ಚೆನ್ನಾಗಿ ನಿರೂಪಿಸಿದ್ದಾನೆ. ತನ್ನವರ ದೌರ್ಜನ್ಯಕ್ಕೆ ಹೇಸಿದ ಅವನು ಅವರಿಂದ ದೂರವಾಗಿ ತಪೋವನದ ದಾರಿ ಹಿಡಿಯುತ್ತಾನೆ. ಇವನ ತತ್ವನಿಷ್ಠೆಗೆ ಮೆಚ್ಚಿದ ಬ್ರಹ್ಮನು ವರವನ್ನು ಕೊಡಲು ಮುಂದಾದರೆ, “ಧರ್ಮದಲಿ ದಯೆಯಲಿ ಕೂಡೆ ಮತಿಯನ್ನು ಕರ್ಣಿಸುವುದು” ಎಂದೇ ಬೇಡಿಕೊಳ್ಳುತ್ತಾನೆ. ಉತ್ತಮನಾದ ಅವನಲ್ಲಿ ಯಾವ ಹಮ್ಮೂ ಇಲ್ಲ. ಬ್ರಹ್ಮನ ಆಜ್ಞೆಯಂತೆ ಧರೆಯನ್ನು ಚಿರಕಾಲವೂ ಹೊತ್ತು ನಿಲ್ಲುತ್ತಾನೆ. ಇದಕ್ಕೆ ಕಾರಣ ಅವನು “ಯೋಗಸಾಂಖ್ಯಜ್ಞಾನನಿಧಿ” ಯಾದುದೇ ಆಗಿದೆ.

(೪) ತಕ್ಷಕ : ಇವನೊಬ್ಬ ಖೂಳ, ಬಣಗು ಸರ್ಪ. ಅಸಾಧ್ಯ ಸಾಹಸಿಗ, ಅಷ್ಟೇ ಕುಹಕಿ, ದ್ರೋಹಿ. ಕಶ್ಯಪನೆಂಬ ವಿಪ್ರನ ಸರಳತನದ ಲಾಭವನ್ನು ಪಡೆದ ಧೂರ್ತ. ಸ್ವರಕ್ಷಣೆಗಾಗಿ ಇಂದ್ರನ ಮೊರೆಹೊಕ್ಕಿ ನಿಂತರೂ, ಮುಂದೆ ಅವನು ಅನಿವಾರ್ಯವಾಗಿ ಕೈ ಬಿಟ್ಟಾಗ ಅಗ್ನಿಗೆ ಆಹುತಿ ಆಗಬೇಕಾದುದು ಆಸ್ತೀಕನ ಔದಾರ್ಯ ಬಲದಿಂದ ಬದುಕಿಕೊಳ್ಳುತ್ತಾನೆ.

(೫) ಕಶ್ಯಪ : ಸರಳ, ಸದುದ್ದೇಶದ ವಿಪ್ರ. ಆದರೆ ದಾರಿದ್ರ್ಯದಿಂದಾಗಿ ಧನದಾಸೆಯ ದೌರ್ಬಲ್ಯ. ತಕ್ಷಕನ ಮರುಳು ಮಾತಿಗೆ ಸೋತು ಪರೀಕ್ಷಿದ್ರಾಜನನ್ನು ತನ್ನ ಮಂತ್ರವಿದ್ಯೆಯಿಂದ ಬದುಕಿಸಬೇಕೆಂದಿದ್ದ ವಿಚಾರ ಬಿಟ್ಟು ಹಿಂದಿರುಗುತ್ತಾನೆ.

(೬) ಆಸ್ತೀಕ : ವಾಸುಕಿಯ ತಂಗಿ ಜರತ್ಕಾರುವಿನ ಮಗ. ಚಿಕ್ಕಂದಿನಲ್ಲಿ ಚ್ಯವನದಲ್ಲಿ ಅಭ್ಯಾಸ. ವಿದ್ಯಾಪಾರಂಗತ, ವಿನಯೋಪೇತ. ತಾಯಿ, ಮಾವಂದಿರ ಅಪೇಕ್ಷೆಯ ಮೇರೆಗೆ ಜನಮೇಜಯರ ಯಾಗಮಂಟಪಕ್ಕೆ ಬರುತ್ತಾನೆ. ಬಾಗಿಲಲ್ಲಿ ತಡೆಯಲು ಅಲ್ಲಿಯೇ ನಿಂತು ಅರಸನನ್ನು, ವಿಪ್ರರನ್ನು, ಯಾಗವನ್ನು ಕುರಿತು ಪ್ರಶಂಸೆಯನ್ನು ಮಾಡತೊಡಗಿ ಅರಸನ ಮನಸ್ಸನ್ನು ಗೆದ್ದನು. ಸಂತುಷ್ಟನಾದ ಅವನು ಇನ್ನೇನನ್ನು ಕೇಳಿದರೂ ಕೊಡಬಹುದಾಗಿತ್ತು. ಆದರೆ “ಸುಡದಿರಹಿಗಳ ನಿನ್ನ ಮುಖವಿದು ತಎಯಲಿ” ಎಂದು ಬೇಡಿಕೊಂಡನು. ಹೀಗೆ ಮಹೋರಗರ ಕುಲರಕ್ಷಕ ನಾದನು. ಅವನ ಸತ್ಪ್ರಭಾವದಿಂದ ಉರಗರೂ ಧರ್ಮಪರರಾದರು.

(೭) ರುರು : ಪ್ರಮತಿಯ ಮಗನಾದ ಇವನು ತಾರುಣ್ಯದಲ್ಲಿ ಪ್ರಮದ್ವರೆಯ ಸೊಬಗಿಗೆ ಮನಸೋತನು. ಆದರೆ ಸುಶೀಲನಾದ ಅವನು ಇದರಿಂದ ಒಳಗೊಳಗೇ ಕೊರಗಿ ಕೃಶನಾದನು. ತಂದೆಯು ವಿಚಾರಿಸಿದಾಗ ತಾನೇ ಮುಚು ಮರೆಯಿಲ್ಲದೆ ವಿಷಯವನ್ನು ತಿಳಿಸಿದನು.

[1] ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಮದ್ವರೆಯು ಹಾವು ಕಚ್ಚಿ ಸತ್ತಾಗ, ಅವನ ತೀರದ ಅಳಲನ್ನು ಕವಿ ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾನೆ. ದೇವದೂತನ ಸೂಚನೆಯಂತೆ ಸತಿಗೆ ತನ್ನಾಯುಷ್ಯದರ್ಧವನ್ನು ಸೋದಕವಾಗಿ ಸಮರ್ಪಿಸಲು ಕರ್ಮನಿರತನಾಗಿದ್ದನು. ಆದರೆ ತನ್ನ ಬಾಳ ಬೆಳಕನ್ನೇ ಅಪಹರಿಸಲು ಯೋಚಿಸಿದ್ದ “ಉರಗ ಶ್ರೇಣಿ ಹಗೆ ತನಗೆ” ಎಂದೇ ಭಾವಿಸಿ ಸರ್ಪಗಳನ್ನು ಕಂಡಲ್ಲಿ ಕೊಲಲೆಳಸುತ್ತಿದ್ದನು. ಡುಂಡುಭನ ದರ್ಶನವಾಗಿ ಹಿಂಸೆಯನ್ನು ಕೈ ಬಿಟ್ಟನು. ಇವನ ಸೌಶೀಲ್ಯ, ಮುಗ್ಧತೆ, ಪ್ರೇಮಮೂಲಕ ತ್ಯಾಗದ ಮಹಿಮೆಯನ್ನು ಕವಿ ಲಾಲಿತ್ಯಪೂರ್ಣವಾಗಿ ಚಿತ್ರಿಸಿದ್ದಾನೆ.

(೮) ಜರತ್ಕಾರು : ತಪೋನಿಷ್ಠೆ, ದೀರ ವೈರಾಗ್ಯದಿಂದ ಇವನಲ್ಲಿ ಉಂಟಾದ ಸ್ವಭಾವ. ವೈಚಿತ್ರ್ಯವನ್ನು ಕವಿಯು ಸ್ವಾರಸ್ಯವಾಗಿ ಚಿತ್ರಿಸಿದ್ದಾನೆ. ಯಾಯಾವರ ಕುಲದ ಈ ತಪಸ್ವಿ ಕಾಡಿನಿಂದ ಕಾಡೀಗೆ ಸಂಚರಿಸುತ್ತಿರುವಾಗ ತನ್ನ ಅವಿವಾಹಿತ ಸ್ಥಿತಿಯಿಂದಾಗಿ ಪಿತೃಗಳಿಗೆ ಉಂಟಾದ ದುರವಸ್ಥೆಯನ್ನು ಕಂಡನು. ಅವರ ಮೇಲಿನ ಗೌರವಕ್ಕಾಗಿಯೇ ವಿಚಿತ್ರ ಸಮಯಗಳನ್ನು ಹಾಕಿ ತನ್ನದೇ ಹೆಸರಿನವಳಾದ ವಾಸುಕಿಯ ತಂಗಿ ಜರತ್ಕಾರುವನ್ನು ಲಗ್ನವಾದನು. ಆದರೆ ಸುಖನಿದ್ದೆಯಲ್ಲಿದ್ದಾಗ ತನ್ನನ್ನು ಅವಳು ಎಬ್ಬಿಸಿದಳೆಂಬ ಕಾರಣಕ್ಕಾಗಿ ಕೋಪಗೊಂಡು ತಕ್ಷಣ ಅವಳನ್ನು ತ್ಯಾಗಮಾಡಲು ನಿರ್ಧರಿಸಿದರು. ಆದರೂ ಅವಳ ಬೇಡಿಕೆಗೆ ಕರಗಿದ ಅವನು “ಏಳು ಮಗನಹನಂಜಬೇಡ” ಎಂದು ಭರವಸೆಕೊಟ್ಟು, “ತಾಳದಿರು ಶೋಕವನು” ಎಂದು ಸಂತೈಸಿ, ಬೀಳುಕೊಂಡೂ ತಪೋವನಕ್ಕೆ ನಡೆದನು.

(೯) ಗರುಡ : ವೀರತಪವೇ ಸಾಕಾರವಾದ ಗರುಡನ ಪ್ರತಾಪ, ವ್ಯಕ್ತಿತ್ವವನ್ನು ಚಿತ್ರಿಸಲು ಕವಿಯು ತನ್ನ ಸಕಲ ಶಕ್ತಿಯನ್ನು ಮೀಸಲಾಗಿಸಿದ್ದಾನೆ. ಆಸ್ತೀಕಪರ್ವದ ೨ ರಿಂದ ೬ ರ ವರೆಗಿನ ಐದು ಸಂಧಿಗಳಲ್ಲೂ ಅವನ ಸಾಹಸದ ವಿಲಾಸವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಅವನು ವೀರ ವಿಹಗೇಶ್ವರ, ಖಗಮಲ್ಲ, ಸರ್ವ ವೀರರ ದೇವ, ಒಟ್ಟಿನಲ್ಲಿ “ಪಕ್ಷೀಂದ್ರ”, ಹುಟ್ಟುತ್ತಲೇ ಅವನ ತೇಜವು ಎಲ್ಲರ ಕಣ್ಣು ಕುಕ್ಕಿತು. ಅವನು ಬಲ್ಲಿದನು ಸತ್ವದಲಿ, ದಾಸಿಯಮಗನೆ ಎಂಬ ಕದ್ರು ಪುತ್ರರ ಅವಹೇಳನೆಯ ಮಾತನ್ನು ಸಹಿಸದ ಆತ್ಮಾಭಿಮಾನಿ “ಈಯ ಲಾಪೆನು, ಕಾಯಲಾಪೆನು” ಎಂಬ ಆತ್ಮವಿಶ್ವಾಸಿ, ದ್ವೀಪದ ನಿಷಾಧರನ್ನೆಲ್ಲ ತಿಂದರೂ ಹಸಿವು ಹಿಂಗದ ಅವನ ತಂದೆಯ ಮಾತಿನ ಮೇರೆಗೆ ಮಹಾ ಗಜ-ಕಚ್ಛಪಗಳನ್ನು ಜಠರೀಕರಿಸಿ ಅರಗಿಸಿಕೊಳ್ಳುತ್ತಾನೆ. ನಖಗಳಲ್ಲಿ ಗಜ-ಕಚ್ಛಪಗಳನ್ನು, ಚಂಚುವಿನಲ್ಲಿ ಶತಯೋಜನದುದ್ದವಾದ ಶಾಖೆಯನ್ನು ಹಿಡಿದು ಅಂತರತಳದಲ್ಲಿ ಉಡ್ಡಾಣ ಮಾಡಬಲ್ಲನು. ದೇವತೆಗಳನ್ನೆಲ್ಲ ಸದೆಬಡಿಯಬಲ್ಲನು. ಜಗದಗಲದಾಕಾರ ವುಳ್ಳ ಅವನು ಅಣುರೂಪವನ್ನು ತಾಳಬಲ್ಲ ಕಾಮರೂಪಿಯಾಗಿದ್ದಾನೆ. ಶ್ರೀ ವಿಷ್ಣುವಿನೊಡನೆಯೂ ಅವನು ಸರಸವಾಡಲು ಬಲ್ಲನು. ದೇವೆಂದ್ರನೂ ಅವನ ಸಖ್ಯವನ್ನು ಯಾಚಿಸುವನು. ಇಷ್ಟಿದ್ದರೂ ತಾಯಿಯ ಮುಂದೆ ತಲೆಬಾಗಿ ನಿಲ್ಲುವ ಅವನ ಮಹಾವಿನಯವು ಎಲ್ಲ ದೃಷ್ಟಿಯಲ್ಲಿಯೂ ಮಹಾಸತ್ವ (Herculian Strength)  ನ ವ್ಯಕ್ತಿತ್ವವನ್ನು ನಿಲ್ಲಿಸಿ ಬೆರಗೊಳಿಸುತ್ತದೆ.

ಈ ಬಗೆಯ ಪಾತ್ರ, ಕಥೆಗಳ ವಿವರಗಳನ್ನೆಲ್ಲ ಪರಿಶೀಲಿಸಿದ ಮೇಲೆ ಒಂದು ಮಾತನ್ನು ಹೇಳಬೇಕೆನಿಸುತ್ತದೆ. ಪೌರಾಣಿಕ ಕಥೆಗಳಲ್ಲಿ ಎಲ್ಲ, ನಾವು ನಿರೀಕ್ಷಿಸಿಸಬೇಕಾದುದು ಶುಷ್ಕ ಸಹಜತೆಗಿಂತ ಅರ್ಥಪೂರ್ಣವಾದ ಸಾಂಕೇತಿಕ ಧ್ವನಿಯನ್ನು “Gulliver’s Travel” ನ್ನು ಮೆಚ್ಚಿ ಆಸ್ವಾದಿಸುವ ವಿಶಾಲ ಅಭಿರುಚಿಗಳಿಗೆ ಪೌರಾಣಿಕ ಚೌಕಟ್ಟಿನಲ್ಲಿಯ ವಿಶಾಲ ಜೀವಲೋಕದ ಮಾನವೀಯತೆಯ ಅರ್ಥವಂತಿಕೆಯೂ ಅನ್ಯಾಯಮಾನವಾಗಬೇಕು.

ಕವಿ ದರ್ಶನ

ಈ ಕಾವ್ಯರಚನೆಯ ಮೂಲ ಪ್ರೇರಣೆಗಲನ್ನು ಕವಿಯ ಮಾತಿನಲ್ಲಿಯೇ ಸೂಚಿಸಬಹುದು. “ಪೌಣ್ಯಶ್ರವಣವಲ್ಲಾ ಕಥನವಿದು ದುರಿತವನು ದೂವ್ವಾಳಿಸುವುದು” (ಪೌ. ಸಂ. ೧-೧೧) “ಅರಿಯದವರಿಗೆ ಬಲ್ಲತನವನ್ನು ಕೊಟ್ಟ ಸುಕೃತಕ್ಕಿಲ್ಲಲೈ ಪಡಿಯಾದ ಸುಕೃತ” (ಆಸ್ತೀ. ಸಂ. ೧-೪). ಕವಿಯು ತಾನು ಈ ಕಥೆಯನ್ನು ಲೌಕಿಕ ವಿವೇಕ, ಧರ್ಮಬೋಧೆಗಳೆರಡಕ್ಕೂ ಬಳಸಿಕೊಂಡಿದ್ದಾನೆ. ಕಥೆಯ ವಿವರಗಳಿಗೆ ಸುಸಂಗತವಾಗುವಂತೆ ಅವುಗಳಲ್ಲಿ ತಾನು ಕಂಡ ದೈವ-ಧರ್ಮ ಶ್ರದ್ಧೆ ಹಾಗೂ ಲೋಕನೀತಿಯ ಅಂಶಗಳನ್ನು ಹೆಜ್ಜೆ ಹೆಜ್ಜೆಗೂ ಪ್ರಕಟಿಸುತ್ತ ಮುಂದುವರೆಯುತ್ತಾನೆ.

‘ಮುಕುಂದನಾಜ್ಞಾವರ್ತಿಗಳು ನಾವು’, ‘ಕಂಜನಾಭವ ಪದವಲಾ ಪವಿಪಂಜರವು ತಮಗೆ’, ‘ವಿಧಿಯ ಪ್ರೇರಣೆಯಿದಲ್ಲೆಂದು ಕಳೆವೊಡದಾರವಶ’, ‘ತನ ಮಾಡಿದ ಕರ್ಮವಿದು ನೆರೆ ಬನ್ನ ಬಡಿಸದೆ ಹೋಹುದಲ್ಲ’, ‘ಮರೆಹೊಗುವುದಾಪತ್ತು ಬಂದರೆ ಮರೆಯದಧಿದೈವವನು’.

‘ವರ ತಪಸ್ವಿಗಳಿಗೆ ದುರ್ಲಭತರವದಾವುದು’, ‘ಅವಿತಥವಲಾವಿಪ್ರವಚನು’, ‘ಮಂತ್ರಾಧೀನವಲ್ಲಾ ಲೋಕ’, ‘ಲೇಸಕಾಣ್ಬಡೆ ಪಲವು ವಿಘ್ನಗಳಹವು, ನೋಡಲು ಸುಲಭವಪ್ಪುದು ಧರ್ಮನಿಷ್ಥರಿಗದುವೆ’, ‘ಬಿದ್ದು ಹೋಹರು ಬಲ್ಲಿರೇ ನಿರವದ್ಯರನ, ಬಾಧಿಸುವ ಖಳೆರು’, ‘ಸಲೆಭೂತಹಿತನಾ ಪರಮಪುರುಷಪ್ರೀತಿಕರವಿದರಿಂದಧಿಕವಿಲ್ಲ’, ‘ಪರರ ಜೀವನ ರಕ್ಷಿಸಿದ ಫಲವಿನಾಶಿ ಫಲ’.

‘ಆತ್ಮಸಂಸ್ತುತಿಯ ಸೂರಿಗಳು ಮಾಡುವರೆ’, ‘ಬಾಳಿಕೆಗೆ ಫಲವೇನು ಮರನಂದದಲಿ ಬದುಕಿದರೆ’, ‘ಅಹಂಕಾರವಾರನು ಕೆಡಿಸದು’, ‘ಅರ್ಥಲೋಭವನುಳಿವುದರಿವುಳ್ಳವರು’, ‘ಹೋದ ಕಾರ್ಯದಲಲಘು ಧೈರ್ಯವೆ ಮುಖ್ಯ’.

ಕೊನೆಯದಾಗಿ, ಈ ಕಾವ್ಯದಲ್ಲಿ ವ್ಯಕ್ತವಾದ ‘ಶಾಪ’ದ ಮಹಾಪಾತ್ರವನ್ನು ಆಲಕ್ಷಿಸುವಂತಿಲ್ಲ. ಅದು ಒಂದು ಸಾಮರ್ಥ್ಯ ಸಂಕೇತವಾಗಿ, ಶಿಲಾನಿಕ್ಷಿಪ್ತಾಕ್ಷರ ದಂತೆ ದೃಢತರವೂ, ದೂರಗಾಮಿಯೂ ಆಗಿ ಕೆಲಸ ಮಾಡುತ್ತದೆ. ಆ ಸಾಮರ್ಥ್ಯ ಹಿರಿಯರಲ್ಲಿ (ಭೃಗು, ಕದ್ರು), ಕಿರಿಯರಲ್ಲಿ (ವಿಭಾವಸು-ಸುಪ್ರತೀಕ, ಅರುಣ, ಶೃಂಗಿ), ಸರಿಕರಲ್ಲಿ (ಖಗಮ), ಹೀಗೆ ಎಲ್ಲರಲ್ಲೂ ವ್ಯಕ್ತವಾದುದು ಕಂಡು ಬರುತ್ತದೆ.

ಗ್ರಂಥ-ಸಂಸ್ಕರಣ

ಈ ಗ್ರಂಥದ ಸಂಪಾದನೆಯ ಕಾರ್ಯದಲ್ಲಿ ಈ ಕೆಳಗಿನ ನಾಲ್ಕು ಪ್ರತಿಗಳ ನೆರವನ್ನು ಪಡೆಯಲಾಗಿದೆ.

(೧) ‘ವಿ’ ಪ್ರತಿ : ಈ ತಾಳೆಯೋಲೆಯ ಪ್ರತಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನದ ಸಂಸ್ಥೆಯಲ್ಲಿ ಯೂ.ಜಿ.ಸಿ ಪ್ರಾಧ್ಯಾಪಕರಾದ ಪ್ರೊ. ವಿ.ಜಿ.ಕುಲಕರ್ಣಿಯವರು ಒದಗಿಸಿದರು. ಇದರಲ್ಲಿ ಒಟ್ಟು ೨೫೭ ಓಲೆಗಳಿದ್ದು ಪೌಲೋಮ, ಆಸ್ತೀಕಪರ್ವ (ಓಲೆ ಸಂ. ೨-೩೦) ಶಿವನ ಭಿಕ್ಷಾಟನಾಪರ್ವ ಸಹಿತ ಕುಮಾರವ್ಯಾಸಭಾರತದ ಆದಿಯಿಂದ ವಿರಾಟಪರ್ವದ ಪದ್ಯಗಳು ಪೂರ್ತಿಯಾಗುವವರೆಗೆ ಇದೆ. ಬರಹವು ಅಚ್ಚುಕಟ್ಟಾಗಿದ್ದು, ಪಾಠಗಳೆಲ್ಲ ಶುದ್ಧವಾಗಿವೆ.

(೨) ‘ಭ’ ಪ್ರತಿ : ಈ ತಾಳೆಯೋಲೆಯ ಪ್ರತಿಯನ್ನು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಗ್ರಂಥಾಲಯದಿಂದ ಪಡೆಯಾಲ್ಯಿತು. ಕ್ರ.ಸಂ. ೩೩-೧೮೦೬. ಒದಗಿಸಿದವರು ಉ. ಕ. ಜಿಲ್ಲೆಯ ಶ್ರೀ ಕೃಷ್ಣ ನರಸಿಂಹ ಭಟ್ಟ ಕಡೇಮನೆ ಎಂಬುವರು. ಶಿವನ ಭಿಕ್ಷಾಟನದಿಂದ ಪ್ರಾರಂಭವಾಗಿ ಪೌಲೋಮ, ಆಸ್ತೀಕ ಪರ್ವ (ಓಲೆ ಸಂ. ೧೧-೪೨) ಗಳನ್ನೊಳಗೊಂಡು ಮುಂದುವರಿಯುತ್ತದೆ. ಒಟ್ಟು ೧೭೮೯ ಓಲೆಗಳು ಪ್ರತಿ ಶುದ್ಧವಾಗಿದೆ.

(೩) ‘ಪ’ ಪ್ರತಿ : ಈ ತಾಳೆಯೋಲೆಯ ಪ್ರತಿಯನ್ನೂ ಹಸ್ತಪ್ರತಿ ಗ್ರಂಥಾಲಯದಿಂದ ಪಡೆಯಲಾಯಿತು. ಕ್ರ. ಸಂ. ೧೨-೧೨೮೫. ಒದಗಿಸಿದವರು ಉ. ಕ. ಜಿಲ್ಲೆಯ ಶ್ರೀ ಪರಮಯ್ಯ ಹೆಗಡೆ ಕಡೆಕೋಡಿ ಎಂಬುವರು. ಇದರಲ್ಲಿ ಕೂಡ, ಶಿವನ ಭಿಕ್ಷಾಟನ ದಿಂದ ಪ್ರಾರಂಭವಾಗಿ ಪೌಲೋಮ, ಆಸ್ತೀಕಪರ್ವ (ಓಲೆ ಸಂ. ೧೦-೪೨) ಗಳನ್ನೊಳಗೊಂಡು, ಕುಮಾರವ್ಯಾಸಭಾರತದ ಆದಿ, ಸಭಾಪರ್ವಗಳು ಪೂರ್ತಿಯಾಗಿವೆ. ಒಟ್ಟು ೧೭೯ ಓಲೆಗಳು. ಪ್ರತಿ ಶುದ್ಧವಾಗಿದೆ.

(೪) ‘ಮು’ ಪ್ರತಿ : ಇದು ೧೯೧೧ ರ ಸಾಲಿನಲ್ಲೇ ಶ್ರೀ ವಿ. ಶಾಮಾಚಾರ್ಯರಿಂದ ಸಂಪಾದಿತವಾದ, Government Oriental Library Series ನಲಿ ಪ್ರಕಟಿತವಾದ ಮುದ್ರಿತ ಪ್ರತಿ.

ಸಂಪಾದನೆಯ ಕಾರ್ಯವನ್ನು ಮುದ್ರಿತ ಪ್ರತಿ ವಿ ಪ್ರತಿಗಳಿಂದ ಪ್ರಾರಂಭಿಸಿದರೂ, ತರುವಾಯ ಮೇಲೆ ಸೂಚಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಎರಡು ಹೆಚ್ಚಿನ ಶುದ್ಧ ಪ್ರತಿಗಳ ನೆರವೂ ದೊರಕಿ ನಮ್ಮ ಉದ್ದೇಶದಂತೆ ಕಾವ್ಯನ್ನು ಸುಸ್ವರೂಪದಲ್ಲಿ ಬೆಳಕಿಡಬೇಕೆಂಬುದು ಫಲಿತವಾಯಿತು. ಎಲ್ಲಕ್ಕೂ ಹೆಚ್ಚು ಶುದ್ಧವೆಂದು ವಿ ಪ್ರತಿಯನ್ನೇ ಮುಖ್ಯ ಆಧಾರವಾಗಿರಿಸಿಕೊಳ್ಳಲಾಗಿದೆ. ಪಾಠಾಂತರಗಳನ್ನು ಗುರುತಿಸುವಲ್ಲಿ ಸಮಂಜಸವೂ, ಸಾಧಾರವೂ, ಸಾರ್ಥಕವೂ ಎಂದು ಕೋರಿದವನ್ನು ಆಯ್ದ ಉಳಿದವುಗಳನ್ನು ಅಡಿಯಲ್ಲಿ ನೀಡಲಾಗಿದೆ. ಮುದ್ರಿತ ಪ್ರತಿಯಲ್ಲಿ ಹೆಚ್ಚಿನವೆಂದು ಆ ದೃಷ್ಟಿಯಿಂದಲೇ ತೋರಿದ ಪದ್ಯಗಳನ್ನು,ಸಂಧಿ ಭಾಗಗಳನ್ನು ಪರಿಶಿಷ್ಟವಾಗಿ ಬೇರೆ ಮುದ್ರಿಸಿರುವುದನ್ನು ಗಮನಿಸಬಹುದು.

ಕೃತಜ್ಞತೆಗಳು

ಈ ಗ್ರಂಥ ಸಂಪಾದನೆಯ ಮುಖ್ಯ ಶ್ರೇಯಸ್ಸು ನಮ್ಮೊಂದಿಗಿದ್ದ ಸುಪ್ರಸಿದ್ಧ ಕನ್ನಡ ಸಾಹಿತಿ, ಸಂಶೋಧಕ ಶ್ರೀ ಕೃಷ್ಣ ಶರ್ಮಾ ಬೆಟಗೇರಿಯವರಿಗೆ ಸಲ್ಲಬೇಕು. ಇಡಿಯ ಕಾವ್ಯದ ಸಂಧಿಭಾಗಳು, ಪಾಠಾಂತರಗಳ ನಿರ್ಣಯವನ್ನು ಬಹುವಿವೇಚನಾಯುತವಾಗಿ ಅವರು ಪೂರೈಸಿದ್ದರು. ಆ ಕುರಿತು ಅವರೊಡನೆ ಚರ್ಚಿಸುವುದೇ ಒಂದು ಹರುಷ, ಉಪಯುಕ್ತ ವ್ಯಾಸಂಗವಾಗಿತ್ತು. ವಯೋಮಿತಿಯ ಮೂಲಕ ಅವರು ದೂರವಾಗಬೇಕಾಗಿ ನಮ್ಮ ವಿಭಾಗವು ನಿಜವಾಗಿಯೂ ಬಡವಾಗಿದೆ. ಹಿರಿಯರಾದ ಅವರ ಈ ಸೇವೆ ಮತ್ತು ನನ್ನ ಮೇಲೆ ತೋರಿದ, ತೋರಿಸುತ್ತಿರುವ ವಾತ್ಸಲ್ಯಕ್ಕಾಗಿ ಮೊದಲು ಹಾರ್ದಿಕ ಕೃತಜ್ಞತೆಗಳನ್ನರ್ಪಿಸುತಿದ್ದೇನೆ.

ಅದರಂತೆಯೇ ನಮ್ಮ ಸಂಪಾದನಾ ಕಾರ್ಯಕ್ಕೆ ಹಸ್ತಪ್ರತಿಗಳನ್ನೊದಗಿಸಿದ ಶ್ರೀಯತರುಗಳಾದ ಪ್ರೊ. ವಿ.ಜಿ.ಕುಲಕರ್ಣಿ, ಹಸ್ತಪ್ರತಿ ಭಾಂಡಾರಕ್ಕೆ ತಮ್ಮ ಅಮೂಲ್ಯ ತಾಳೆಯೋಲೆಯ ಗ್ರಂಥಗಳನ್ನು ಒದಗಿಸಿ ನಮ್ಮ ಕೆಲಸಕ್ಕೆ ವಿಶೇಷ ಅನುಕೂಲ ಒದಗಿಸಿದ ಶ್ರೀ ಕಡೆಕೋಡಿ ಮತ್ತು ಶ್ರೀ ಕಡೇಮನೆಯವರಿಗೂ ಅನಂತ ನೆನಕೆಗಳನ್ನು ಸಲ್ಲಿಸುತ್ತೇನೆ. ನಮ್ಮ ಸಂಶೋಧನೆಯ ಕಾರ್ಯದಲ್ಲಿ ಸತತ ಮಾರ್ಗದರ್ಶನ ಮಾಡುತ್ತಿರುವ ಕನ್ನಡ ವಿಭಾಗದ ಅಧ್ಯಕ್ಷರೂ, ಪ್ರಧಾನ ಸಂಪಾದಕರೂ ಆದ ಡಾ|| ಆರ್.ಸಿ. ಹಿರೇಮಠ ಅವರಿಗೂ ಕೃತಜ್ಞತಾಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ. ಹಾಗೆಯೇ ಸಹಕಾರಿಗಳಾಗಿ ದುಡಿಯುತ್ತಿರುವ ಶ್ರೀ ಎಸ್.ಜಿ ಕುಲಕರ್ಣಿ, ಶ್ರೀ ಎಸ್.ಕೆ. ಬೆಟಗೇರಿಯವರಿಗೂ ಅಭಾರಿಯಾಗಿದ್ದೇನೆ.

ಕೊನೆಯದಾಗಿ ಹೇಳಿದರೂ, ಮುಖ್ಯವಾಗಿ ವಿಶ್ವವಿದ್ಯಾಲಯದ ಪ್ರಕಟಣಾ ವಿಭಾಗಕ್ಕೂ, ಈ ಕಾವ್ಯದ ಅಚ್ಚಿನ ಕೆಲಸವನ್ನು ಪೂರೈಸಿಕೊಟ್ಟ ಶಾರದಾ ಪ್ರೆಸ್ಸಿನವರಿಗೂ ನಮ್ಮ ಕೃತಜ್ಞತೆ ಸಲ್ಲುತ್ತದೆ.

ಕೆ.ಜಿ. ಶಾಸ್ತ್ರಿ
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ

[1] ನೋ. “ಪಿತರಂ ಸಖಿಭಿಃ ಸೋsಥ ಶ್ರಾವಯಾಮಾಸ|” ಮಹಾ. ಅ. ೮-೧೫.