ಸಂಸ್ಕೃತ – ಕನ್ನಡ ಕೃತಿನಿರೂಪಣೆಯಲ್ಲಿಯ ವ್ಯತ್ಯಾಸ

ಕಥೆಯ ಚೌಕಟ್ಟಿನಲ್ಲಿ ಮೂಲವನ್ನೇ ಹಿಡಿದು ಹೊರಟಿದ್ದರೂ ಸನ್ನಿವೇಶ, ಸ್ವಭಾವೋನ್ಮೀಲಗಳ ದೃಷ್ಟಿಯಿಂದ ಪೂರ್ಣ ಚಿತ್ರಣಕ್ಕೆ ಇರುವ ಅವಕಾಶವನ್ನು ಪೂರ್ತಿಯಾಗಿ ಬಳಸಿಕೊಂಡಿರುವುದೂ, ಕೆಲ ಸೂಕ್ಷ್ಮ ವಿವರಗಳಲ್ಲಿ ಉಚಿತವೆಂದು ತೋರಿದ ವ್ಯತ್ಯಾಸ, ಸೇರ್ಪಡೆಗಳನ್ನು ಸಾಧಿಸಿರುವುದೂ ಕವಿಯ ನೈಜ ಕಾವ್ಯಶಕ್ತಿಯ ನಿದರ್ಶನಗಳಾಗಿವೆ. ಮೂಲ ಮಹಾಭಾರತದಲ್ಲಿ (ಆದಿ, ೬-೧) ಪುಲೋಮರಾಕ್ಷಸನು ಹಂದಿಯ ರೂಪವನ್ನು ತಾಳಿ ಪುಲೋಮೆಯನ್ನು ಎತ್ತಿಕೊಂಡು ಹೊರಟನೆಂದಿದೆ. ಈ ವಿವರದಿಂದ ಯಾವ ಪ್ರಯೋಜನವೂ ಇಲ್ಲದ್ದನ್ನು ಕಂಡು ಕವಿಯು ಅದನ್ನು ಕೈ ಬಿಟ್ಟಿದ್ದಾನೆ. ಆದರೆ ಪುಲೋಮೆಯ ವಿಲಾಪವನ್ನು ಹೆಚ್ಚು ವಿಸ್ತರಿಸುವದರ ಕಡೆಗೆ (ಪು. ಸಂ. ೧. ೨೭-೩೦) ಲಕ್ಷ್ಯ ಪೂರೈಸಿದ್ದಾನೆ. ರಾವಣನಿಂದ ಇಂಥದೇ ಬಾಧೆಗೊಳಗಾದ ಸೀತೆಯ ದುರವಸ್ಥೆಯೊಡನೆ ಅದು ಹೋಲಿಕೆ ಪಡೆದಿದೆ. ಅಗ್ನಿಯು ಅದೃಶ್ಯನಾದಾಗ ಮೂಲದಲ್ಲಿ ಬರುವ ಒಂದೇ ಒಂದು ವಾಕ್ಯವಂದರೆ :-

ವಿನ್ನಾಗಿನಾ ಪ್ರಜಾಃ ಸರ್ವಾಸ್ತತ ಆಸನ್ ಸುದುಃಖಿತಾಃ | (ಆದಿ. ೭-೧೪) ಇಲ್ಲಿ ಕವಿಯ ಕಲ್ಪನಾಶಕ್ತಿಯು ಆ ದುಃಖವನ್ನು ಪೂರ್ತಿಯಾಗಿ ಗ್ರಹಿಸುತ್ತದೆ :

ಊದಿ ನೊಡಿದಡೊಲೆಯೊಳಗೆ ಬರಿ
ಬೂದಿಯುಳಿದುದು ಯಜ್ಞನಾಟದ
ವೇದಿಗಳು ಬಿಸಿಯಾರಿದುವು ಬೀಸಿದರೆ ಕೆದರಿದರೆ
ಹೋದುದುದರಕೃಶಾನು ಜೀರ್ಣಿಸ
ದಾದುದುಂಡುದ ಲೋಕ ಶೋಕನು
ಹೋದಧಿಯ ನಡುಗಡಲೊಳದ್ದುದು ನಿಮಿಷ ಮಾತ್ರದಲಿ
ಪೌ.ಸಂ. ೨-೫.

ಬ್ರಹ್ಮನು ಅಗ್ನಿಯನ್ನು ಕರೆಸಿ ತಿಳಿಹೇಳುವ ವಿಧಾನ (ಪೌ. ಸಂ. ೨.೧೬-೨೧) ಮೂಲಕ್ಕಿಂತ ಬೇರೆಯಾಗಿದೆ. ವಾಯು, ಅಪ್ಪು, ಧರೆ, ಆಕಾಶಗಳಿಗೆ ಇಲ್ಲದ ಅಶುಚಿತ್ವ ಪಂಚಭೂತಗಳಲ್ಲಿ ಅಗ್ನಿಗೆ ಮಾತ್ರ ಸಲ್ಲುವದೆಂದು ಬಗೆಯುವುದು ತಪ್ಪು ಎಂದು ಸಾಧಿಸಿದ ರೀತಿ ಸ್ವಾರಸ್ಯಕರವಾಗಿದೆ.

[1] ಪೌಲೋಮ ಪರ್ವದ ಸಾರವತ್ತಾದ ಭಾಗವೆಂದರೆ ರುರುವಿನ ಉಪಾಖ್ಯಾನ ಪ್ರೇಮ ಮೂಲಕವಾದ ತ್ಯಾಗದ ಈ ಕಥೆಯ ಅಪೂರ್ವತೆಯನ್ನು ಶ್ರೀ ಮಾಸ್ತಿಯವರು ಹೀಗೆ ಎತ್ತಿತೋರಿಸಿದ್ದಾರೆ “ಗಂಡು ತನ್ನ ಆಯುಸ್ಸನ್ನು ಕೊಟ್ಟು ಹೆಂಡತಿಯನ್ನು ಬದುಕಿಸಿದ್ದೆನ್ನುವುದು ರುರುವಿನ ಕಥೆಯೊಂದರಲ್ಲಿ ಹೊರತಾಗಿ ಈ ಉದಾತ್ತ ಕಲ್ಪನೆ ಭಾರತಕ್ಕೆ ವಿಶೇಷವಾದದ್ದು”[2] ಮೂಲದ ಪ್ರಕಾರ ರುರುವಿಗೂ ಪ್ರಮದ್ವರೆಗೂ ಸಂಬಂಧ ಗೊತ್ತಾಗಿ ಮದುವೆಗೆ ಲಗ್ನವನ್ನಿರಿಸಿದ ದಿನವೇ ಪ್ರಮದ್ವರೆ ಹಾವು ಕಚ್ಚಿ ಸತ್ತಳು ಎಂದಿದೆ. ಆದರೆ ಈ ಕಾವ್ಯದಲ್ಲಿ ಆ ಮುನ್ನವೇ “ಹರುಷ ಮಹೋದಧಿಗೆ ಪೌರ್ಣೇಂದುವಾಯ್ತು ತಳೋದರಿಯ ವೈವಾಹರಚನಾರಂಭ ಸಂರಂಭ” (ಪೌ. ಸಂ. ೨-೩೭), “ಗುರು ಬಾಲಿಕೆ ಪ್ರಮದ್ವರೆ ಸಹಿತ ಪರ್ಣಾಲಯದಲೆಸದಿರ್ದನುನ್ನತ ಕರ್ಮನಿಷ್ಠೆಯಲಿ”, “ಗಾರ್ಹಸ್ಥ್ಯದಲಿ ಪರಿನಿಷ್ಠನಾಗಿರ್ದ” (ಪೌ. ಸಂ. ೩-೧,೨) ಎಂದಿರುವುದು ಗಮನಾರ್ಹವಾಗಿದೆ. ಇದರಿಂದ ದಾಂಪತ್ಯ ಪ್ರೇಮನಿಷ್ಠೆಯನ್ನು ಸಮಂಜಸವಾಗಿ ಎತ್ತಿ ತೋರಬೇಕೆಂಬುದೇ ಕವಿಯ ಆಶಯವಾಗಿ ತೋರುತ್ತದೆ. ಅಲ್ಲದೆ ರುರುವಿನ ಮಾನವೀಯ ಗುಣವನ್ನು ಕವಿ ಇಲ್ಲಿ ಅನ್ಯಾದೃಶವಾಗಿ ತೋರಿಸಿದ್ದಾನೆ ಎಂದರೆ ತಪ್ಪಲ್ಲ. ”ರೋದನಕೆ ಲಜ್ಜಿಸುತ ಮನೆಬಿಟ್ಟು ಕಾಡಿಗೆ ಹೋಗಿ ತನ್ನ ಅಳಲನ್ನು ಒದರಿ ಹಳವಿಸುವ (ಪೌ. ಸಂ. ೩.೧೧-೧೬) ಅವನ ಬಗೆಯನ್ನು ಸಂಯಮಹ್ಯುತವಾಗಿಯೂ ಮರ್ಮಸ್ಪರ್ಶಿಯಾಗಿಯೂ ಕವಿ ಚಿತ್ರಿಸಿದ್ದಾನೆ. ಆದರೆ ಅವನ ಮಾನವೀಯ ವರ್ತನೆಯಲ್ಲಿ. ನಿನ್ನ ಲಲನೆಗಾಯುಷ್ಯವಿಲ್ಲ, ಹಲುಬಿದರೆ ಫಲವಿಲ್ಲ ಎಂದ ಅವನಿಗೆ ರುರುವು ಅದನ್ನು ಹೇಳುವುದಕ್ಕೆ ನೀನೇಕೆ ಬರಬೇಕಿತ್ತು, ಬಂದ ಪಥದಲಿ ಹೋಗು’ ಎಂದು ಮೊದಲು ಮುಖಮುರಿದಂತೆ ಮಾತನಾಡುವುದೂ, ಒಂದುಪಾಯವನು ಹೇಳುವೆನು ಎಂದಾಗ ಮತ್ತೆ ಆತುರದಿಂದ “ಹೇಳು ಹೇಳೆಲೆ ತಂದೆ ಹೇಳೆನ್ನಾಳಿಯನು ನೆನೆಯದಿರು” ಎಂದು ಕ್ಷಮಾಯಾಚನೆ ಮಾಡುವುದೂ, ‘ನಿಜಾಯುಷ್ಯದ ಅರ್ಧವನ್ನು ಕೊಟ್ಟರೆ ಸತಿ ಜೀವಿಸುವಳು’ ಎಂದಾಗ “ಬದುಕಿಸಿಕೊಂಡೆ ತನ್ನನು ಕಾಲಿಗೆರಗುವೆನಿತ್ತ ಬಾ ಹತ್ತಿರಕೆ ಬಾ” ಎಂದು ಕೃತಜ್ಞತೆಯನ್ನು ಸೂಚಿಸುವುದೂ ಅತ್ಯಂತ ಸಹಜವೂ, ಪರಿಣಾಮಕಾರಿಯೂ ಆಗಿವೆ. ಆಯುಷ್ಯದಾನದ ವಿಷಯದಲ್ಲಿಯೂ ‘ಬರುಮಾತಿನಲಿ ಫಲವೇನು, ಸುಮಂತ್ರಕವಲ್ಲದಾಗದು’ ಎಂದು  ಸಜಲಾರ್ಪಣವನ್ನು ಮಾಡಿಸಿದ್ದು ಕವಿಯ ಶ್ರುತಿವಿಹಿತವಾಗಿರಬೇಕೆಂಬ ಶ್ರದ್ಧೆ, ಗಂಭೀರದೃಷ್ಟಿಯ ದ್ಯೋತಕವಾಗಿದೆ.

ಆಸ್ತೀಕಪರ್ವದ ಮುಖ್ಯ ಕಥಾಸಾರವನ್ನು ಪೌಲೋಮಪರ್ವದ ಕೊನೆಯಲ್ಲಿ (ಸಂ. ೪-೨೧, ೨೨) ಎರಡೇ ಪದ್ಯಗಳಲ್ಲಿ ಅಡಕವಾಗಿ ಕವಿಯು ಸೂಚಿಸಿದ್ದಾನೆ. ಮುಂದೆ ಆಸ್ತೀಕಪರ್ವದಲ್ಲಿ ಸಂಧಿ ೯, ೧೦, ೧೨, ೧೩ಗಳಲ್ಲಿ ಅದು ಯಥೋಚಿತವಾದ ವಿಸ್ತಾರ ನಿರೂಪಣೆಯನ್ನು ಪಡೆದಿದೆ. ಸಂಧಿ ೧-೭ ಸರ್ಪಗಳ ಶಾಪಕ್ಕೆ ಕಾರಣವಾದ ಹಿನ್ನೆಲೆಯ ಕಥೆಯನ್ನು, ೮ನೆಯ ಸಂಧಿಯು ಆದಿಶೇಷನ ಸೌಜನ್ಯ, ಧರ್ಮಪಾಲನಾ ನಿಷ್ಠೆಯ ವೃತ್ತಾಂತವನ್ನು, ೧೧ನೆಯ ಸಂಧಿಯು ಮೂಲ ಮಹಾಭಾರತದ ಪೌಷ್ಯ ಪರ್ವದಲ್ಲಿಯ (ಆದಿ. ಅ. ೩) ಉದಂಕನ ಆಖ್ಯಾನವನ್ನೂ ವಿವರಿಸುತ್ತವೆ. ಒಂದೊಂದು ಸಂಧಿಯೂ ಉತ್ತಮ ಕಥೆ, ಉಪಕಥೆ (ನೋ. ಗಜ-ಕಚ್ಛಪರ ಕಥೆ – ಆಸ್ತೀ. ಸಂ. ೩.೩೨.೩೯) ಗಳನ್ನು ಸ್ವರಸ್ಯಕರವಾಗಿ ಬಿತ್ತರಿಸುತ್ತ “ಕಥಾಕರ್ಣನದ ಕೌತುಕ ರಸಾಸ್ವಾದನಲಂಪಟ”ರ ಮನಸ್ಸನ್ನು ಹಿಡಿಯುತ್ತದೆ. ಮೂಲ ಮಹಾಭಾರತದಲ್ಲಿಯ ಜರತ್ಕಾರುವಿನ (ಆದಿ. ಆ. ೧೩-೧೫; ಆ. ೪೫-೪೮), ಪರೀಕ್ಷಿದ್ರಾಜನ (ಆದಿ. ಅ. ೪೦-೪೩; ಅ. ೪೯-೫೦) ಕಥಾಪುನರುಕ್ತಿಯನ್ನು ತಪ್ಪಿಸುದುದಲ್ಲದೆ, ಇಲ್ಲಿಗೆ ಅನವಶ್ಯಕವಾದ ಅಮೃತಮಂಥನದ ಕಥೆಯನ್ನು (ಆದಿ. ಅ. ೧೭-೧೯), ಕೈ ಬಿಟು ಕಥಾರಚನೆಯಲ್ಲಿ ವಿಶೇಷ ಸಾಂಗತ್ಯ, ಸಾತತ್ಯಗಳನ್ನು ಸಾಧಿಸಿದ್ದಾನೆ. ವಿವರಗಳಲ್ಲಿಯೂ ಔಚಿತ್ಯಪೂರ್ಣವಾದ ಮಾರ್ಪಾಟ, ಸೇರ್ಪಡೆಗಳನ್ನು ಕೈಗೊಂಡಿದ್ದಾನೆ. ಮೂಲದಲ್ಲಿ ವಿನತೆಯನ್ನು ಕದ್ರುವು ದಾಸ್ಯದ ಸೆರೆಗಿಕ್ಕಿಸಿದರೂ ಬಿಡುಗಡೆಯ ವ್ಯವಹಾರವೆಲ್ಲ ಅವಳ ಮಕ್ಕಳಾದ ಸರ್ಪಗಳ ಇಚ್ಚೆಯಂತೆಯೇ ನಡೆದಂತೆ ನಿರೂಪಿತವಾಗಿದೆ. ಕವಿಯು ಈ ಅಭಾಸವು ತಪ್ಪುವಂತೆ, (“ಅಮೃತವನು ತಂದೀವುದುರು ವಿಕ್ರಮ ಪರಾಕ್ರಮ ಶಕ್ತಿಯುಳ್ಳಡೆ ಸುಮತಿ ಸೆರೆಯನು ಬಿಡುವೆನೆನ್ನಲಿ ಮಾತು ಹಲವಿಲ್ಲ” (ಆಸ್ತೀ. ಸಂ. ೩-೧೩) ಎಂದು ಕದ್ರುವಿನ ಬಾಯಲ್ಲಿಯೇ ನುಡಿಸಿದ್ದಾನೆ. ಬ್ರಹ್ಮನ ಆಜ್ಞೆಯಂತೆ ಅಚಲವಾಗುವ ರೀತಿಯಲ್ಲಿ ಧರೆಯನ್ನು ಶಿರದಲ್ಲಿ ಹೊತ್ತ ಶೇಷನ ಸಾಮರ್ಥ್ಯಕ್ಕೆ ಅವನ “ನಿಜಯೋಗಶಕ್ತಿ”ಯೇ ಕಾರನವೆಂದು ವಿವರಿಸುವುದು. (ಆಸ್ತೀ. ಸಂ. ೮.೩೪-೩೭) ಸಾಂಕೇತಿಕವಾಗಿ ಅರ್ಥಪೂರ್ಣವೂ, ಕವಿಯ ಸಾಂಸ್ಕೃತಿಕ ಪರಿಜ್ಞಾನ ನಿದರ್ಶಕವೂ ಆಗಿದೆ.[3] ಗರ್ಭಿಣೆಯಾಗಿ ಒಬ್ಬಳೇ ಮರಳಿದ ತಂಗಿಗೆ ವಾಸುಕಿಯು, “ಉದರವಾಸಿಯಾದರೂ ಪುತ್ರನೊ ವಿದಿತ ಪುತ್ರಿಯೊ ಹೇಳು” (ಆಸ್ತೀ. ಸಂ. ೯-೪೩) ಎಂದು ತೋರುವ ಆತುರವು ಔಚಿತ್ಯಕ್ಕೆ ಮೀರಿದ್ದರೂ[4] ಸಹಜತೆಯನ್ನು ದಾಟಿಲ್ಲ. ಎಲ್ಲಕ್ಕೂ ಮುಖ್ಯವಗಿ ಆಸ್ತೀಕನ ಬೇಡಿಕೆಯಿಂದ ತನ್ನ ಉದ್ದೇಶಕ್ಕೆ ಉಂಟಾಗುವ ಹಾನಿಯನ್ನು ನೆನೆದ ಜನಮೇಜಯನಿಗೆ ಉಂಟಾಗುವ ನಿರಾಸೆ, ಋಷಿವರರು, ಸಭಾಸದರು, ಋತ್ವಿಜರು, ಅಮರರು ಎಲ್ಲರೂ ಏಕಮತದಿಂದ ಪೂರ್ಣಹುತಿಯಾಗಲಿ ಎಂದಾಗ ಮೂಡುವ ನೋವು, ಕೊನೆಗೆ ವಿಧಿಪ್ರೇರಿತವೆಂದೋ “ಮಾನಭಂಗವೆ ಮರಣ” ಎಂದೋ ಇಷ್ಟಾತಿಥಿಯನ್ನು ಮನ್ನಿಸಿದೆನೆಂದೋ ಸಮಾಧಾನ ಹಚ್ಚಿಕೊಂಡು “ಮಾಡಿ ಪೂರ್ಣಾಹುತಿಯನೆನ್ನಲಿ ಖೋಡಿ ಯಳ್ಳಿನಿತಿಲ್ಲ” ಎಂದು ಒಪ್ಪುಗೊಳ್ಳುವ ಸನ್ನಿವೇಶ ಕವಿಯ ಸಹಜತೆಯ ಸ್ಫುಟದರ್ಶನಕ್ಕೆ ಸ್ವಂತ ಸಾಕ್ಷಿಯಾಗಿ ನಿಲ್ಲುತ್ತದೆ. (ಆಸ್ತೀ. ಸಂ. ೧೩. ೨೨-೨೩)

ಕಾವ್ಯಶೈಲಿ

ಈ ಕಾವ್ಯದಲ್ಲಿ ಪದ, ಪದಪುಂಜ, ವಾಕ್ಯ ಪ್ರಯೋಗಗಳಿಲ್ಲ, ಕೆಲಸಲ ಭಾವ ನಿರೂಪಣೆಯಲ್ಲಿ ಕೂಡ, ಕುಮಾರವ್ಯಾಸನ ಶೈಲಿಯ ಗಾಢ ಪ್ರಭಾವವು ಕಂಡು ಬರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉದಾ :: ಅಸೆ ಪೈಸರವಾಯ್ತು, ಹೊಸೆದಳು ಬಸುರ, ಸುಯಿಧಾನವನು ಮಾಡು, ಸಾಕೀ ನಾಡಮಾತುಗಳು, ಜೋಡಣೆ ಜಾಳಿಸಿತು, ಆತತಾಯಿ, ಹುಳ್ಳುಗಳೆ, ಟಕ್ಕರಿಗಳೆ, ನೇಢೆ, ವೆಂಠಣಿಸು ಸುರಾಲಯದ ಹೊಕ್ಕು ಹೊರವಡುವರೆ ಸದುವಲ್ಲ, ತೊಡೆವೆನವದಿರ ಭಾಳದಕ್ಕರವ ದೇವಪದ ಸಂಬಳವ ಮಾಳ್ಪೆನು, ಹಿಂಡಿದೆನು ಮನದಳಲ ಇತ್ಯಾದಿ. ಹಾಗೆಯೇ –

ಸತ್ತುದೋ ಉರಗಾಳಿ ಹರಹರ
ಕೆತ್ತುದೋ ನಾಗಾಲಯದ ಕದ
ಕಿತ್ತುದೋ ಕದ್ರುವಿನ ಕುಲಕಲ್ಪದ್ರುಮದ ಬೇರು
ಹೊತ್ತಿ ಹೊಗೆದುದೋ ನಾಗಕುಲ ಖಗ
ಮೃತ್ಯುವಾದುದೆನುತ್ತ ಖೇಚರ
ರತ್ತಲೊದರಲು ಕೇಳಿದಳು ಗೋಳುಗಳನಾ ಕದ್ರು
(ಆಸ್ತೀ, ಸಂ. ೨-೨೯)

ಆದರೂ ಕವಿಯು ಪರಿಣಾಮಕಾರಿಯೂ, ಸತ್ವಯುತವೂ ಆಗಿರುವ ಸ್ವಂತ ರೀತಿಯಲ್ಲಿರುವ ಮಾತನ್ನು ನುಡಿಸಬಲ್ಲ, ಶಬ್ದಚಿತ್ರ ಕಟ್ಟಬಲ್ಲ, ಭಾವಗಳನ್ನು ಭರಿಸಬಲ್ಲ, ಕಲ್ಪನಾಸಾಮರ್ಥ್ಯವನ್ನು ತೋರಬಲ್ಲ ಎಂಬುದಕ್ಕೂ ಕಾವ್ಯದುದ್ದಕ್ಕೂ ಬೇಕಾದಷ್ಟು ನಿದರ್ಶನಗಳು ದೊರಕುತ್ತವೆ. ಮೃತ್ಯುಮೃತ್ಯುವ ಕಂಡನು, ಉದ್ದವಾದನು ಮುನ್ನಿನಿಂದೊಮ್ಮೊಳಕೆ ಮುನಿನಾಥ, ಬಾಗಿದ ಬೆನ್ನ ನಿಗುಚಿಸುವವರ ಕಾಣಿಸು, ಹುಗಿಸಿ ಬಡಿದಳು ಕದ್ರು ತನ್ನನು, ಗಂಟಿಕ್ಕಿದಳು ತಾ ಬಿಡಿಸಹೇಳಿದಳು, ಬೋಡು ಮಾಡದಿರೆಲವೂ ನಿನ್ನಯ ಮನದ ಬಯಕೆಯನು, ಎಚ್ಚರಿಸಬೇಹುದು ಮೂಢಮತಿಯನು ಹರಿದು ಕಂಗಳ ಪಟಲವನು, ಕಣ್ಣು ಹರಿಕರ ಕೈಯಲೇತಕೆ ಕೊಡುವೆ ದರ್ಪಣವ, ಶಿಖಿಗೆ ಹೇಳಿದ ತುತ್ತಲಾ ತಕ್ಷಕ, ಗತೋದಕ ಸೇತುವಾದುದು ತನ್ನ ಸಾಮರ್ಥ್ಯ.

ಕಡಿಹವೇ ತಡವಾಯ್ತು ಮೇಘದ
ಗಡನವಾವರಿಸಿತ್ತು ನಭವನು
ಸಿಡಿಲು ಸಿಡಿಲಿದುವಾಡಿದುವು ಮಿಂಚುಗಳ ಚೆಂಚುಗಳು
ಗುಡಿಗಳಂತಿರೆ ಪಕ್ಷಿಗಳ ಪತಿ
ಯೊಡಲು ನನೆಯಲು ಗಗನಮಂಡಲ
ವೊಡೆದು ಸುರಿವಂದದಲಿ ಸುರಿದುದು ವೃಷ್ಟಿ ಭೂತಳಕೆ
(ಮಳೆಯ ವರ್ಣನೆ)
(ಆಸ್ತೀ. ಸಂ. ೩-೩೩)

ಕಾಲುಗುರಕೊನೆ ಸೋಂಕೆ ಗಿರಿಗಳು
ಸೀಳಿದುವು ಧರೆ ಕುಸಿದುದಾ ಪಾ
ತಾಳದತ್ತಲು ಕದಡಿದುವು ಕಡಲೇಳು ಪದಹತಿಗೆ
ಬೀಳುಕೊಂಡನು ತರಣಿ ತಾರಾ
ಮಾಲೆಗಳು ಕೆದರಿದವು ಜೋಡಣೆ
ಜಾಳಿಸ್ತು ಜಗದೇಕವೀರರ ದೇವನುರಣೆಗೆ (ಗರುಡನ ಉದ್ದಂಡತೆ)
(ಆಸ್ತೀ. ಸಂ. ೪.೩)

ಮತ್ತೆ ಕಂಡನು ಕೆಳಗಿಳಿದು ಬಲು
ಮೃತ್ಯು ಬಾಯ್ದೆರೆದೆರಡು ರೂಪವ
ಹೊತ್ತವೋಲಿರೆ ರೌದ್ರಮುಖದ ಭಯಂಕರಾನನದ
ಎತ್ತುದಲೆಗಳ ಕುಪಿತನಯನದ
ಕುತ್ತು ಮಿಂಚನು ಜರಿವ ಜಿಹ್ವೆಯ
ಹೊತ್ತುವುಸುರಿನ ಹೊಳೆವ ದಾಡೆಯ ದಡಿಗ ದಾನವರ
(ಆಸ್ತೀ. ಸಂ. ೫-೫೧)

ಉರುಳುತುರುಳುತಜಾಂಡಮಂಡಲ
ಬಿರಿಯಲೊದರುತ್ತುಗುವ ಹೊಗೆಗಳ
ಹೊರಳಿಯಲಿ ಹೊಡಕರಿಸಿ ಮಂಡಲಿಸುತ್ತ ನಿಗುರ್ತ್ತ
ಕರೆಕರೆದು ವಶವಳಿದು ನೆರೆ ಕಂ
ಡರಿಯೆ ಕಾರುಣ್ಯವನು ತೋರು
ತ್ತುರಗರಾಜನು ಸೆಗಳಿಕೆಯ ಸಸಿಯಾದ ನಿಮಿಷದಲಿ (ತಕ್ಷಕನ ಅವಸ್ಥೆ)
(ಆಸ್ತೀ. ಸಂ. ೧೩-೧೮)

ಭಾವಗಳಲ್ಲಿ ವಿರಹವೇ, ಹರುಷವೇ, ಕೋಪವೇ, ಪ್ರತಾಪವೇ ಯಾವುದೇ ಆದರೂ ಅಚ್ಚೊತ್ತಿನಲ್ಲಿರುವ ಬಗೆಯನ್ನು ನೋಡಬಹುದು :

ಎಲೆ ವಿಧಾತೃ ವೃಥಾ ವಿಯೋಗದ
ಬಲೆಯ ಬೀಸಿದೆ ಕಾಯದರ್ಧಕೆ
ತಳುವಿದೆಯದೇಕರ್ಧವನು ನಿನಗರಿದೆ ಸಂಧಿಸಲು
ಹೊಳೆಯ ನಡುಗಡಲೊಳಗೆ ನಾವೆಯ
ಮುಳುಗಿಸಿದೆ ಮುಂದರಿಯದವರನು
ಒಲವರಿಸಿದೇಕೊಂದುದೇಹದಲೆಂದು ಹಳವಿಸಿದ
ಪೌ. ಸಂ. ೩-೧೨

ಕೊಟ್ಟೆನೆನ್ನದಮುನ್ನ ಜೀವವ
ತೊಟ್ಟಂಗಳನೆ ವಿಷದ ವೇಗವ
ಮೆಟ್ಟ ನೆರೆ ನಿದ್ರಾವಸಾನದಲೇಳುವಂದದಲಿ
ಬಿಟ್ಟು ಮೂರ್ಛೆಯನೆದ್ದಳರಳಿತು
ದಿಟ್ಟ ಚೇತರಿಸಿತ್ತು ತನು ಗುಡಿ
ಗಟ್ಟಿ ಕುಣಿದುದು ಕೂಡೆ ಸುಜನಸ್ತೋಮ ನಲವಿನಲಿ
ಪೌ. ಸಂ. ೩-೩೪

ಎದ್ದನಾಮುನಿಕೋಪ ತನುಗೊಂ
ಡೆದ್ದವೋಲಂಗನೆಯನೀಕ್ಷಿಸಿ
ನಿದ್ದೆಯನು ನೆರೆ ಕೆಡಿಸಿದೆಯಲಾ ತನಗೆ ವಿಪ್ರಿಯವ
ಹೊದ್ದಿಸಿದೆ ನಿನ್ನೊಡನೆ ತಾನಿರೆ
ನೆದ್ದೆನೆದ್ದೆನು ಮೋಹಪಾಶವ
ಗೆದ್ದೆನೆಂದನು ಮುನಿಪನಾಮಾನಿನಿಗೆ ಮುನಿದಂತೆ
ಆಸ್ತೀ.ಸಂ.೯-೩೫

ಕೆರೆಯಹೊಕ್ಕಿಭದಂತೆ ಹೆಳುವವ
ಬರಸಿಡಿಲು ಬಗಿದಂತೆ ಕಡುಗುವ
ಕುರಿಯಹಿಂಡನು ಹೊಕ್ಕ ಹೆಬ್ಬುಲಿಯಂತೆ ಸುರಬಲವ
ಮುರಿದನೆತ್ತಿದನೊತ್ತಿದನು ಮು
ಕ್ಕುರುಕಿ ಮೊಗೆದನು ಮೋದಿದನು ಹೊ
ಕ್ಕಿರಿದನೊರಸಿದನರೆದನುದ್ದಿದನಹಿಕುಲಾರಾಶಿ
ಆಸ್ತೀ.ಸಂ.೫-೩೭

ಮೂಲ ಮಹಾಭಾರತದಲ್ಲಿಯ ಕೆಲವು ಭಾಗಗಳ ಬಿಡಿ ಸೂಚನೆಯನ್ನೋ, ಸನ್ನಿವೇಶಗಳ ಮರ್ಮವನ್ನೋ ಕವಿಯ ಕಲ್ಪನಾಶಕ್ತಿ ಗಾಢವಾಗಿ ಗ್ರಹಿಸಿ ಸಂಗ್ರಹವಾಗಿಯೋ ವಿಸ್ತಾರವಾಗಿಯೋ ನಿರೂಪಿಸುವ ಸೊಗಸನ್ನು ಈ ಕೆಳಗಿನ ಪದ್ಯಗಳಲ್ಲಿ ಕಾಣಬಹುದು:

ತತಃ ಸಾ ವಿನತಾ ತಸ್ಮಿನ್ ಪಣಿತೇನ ಪರಾಜಿತಾ
ಅಭವತ್ ದುಃಖಸಂತಪ್ತಾ ದಾಸೀಭಾವಂ ಸಮಾಸ್ಥಿತಾ
ಮಹಾ.ಅ.೨೩-೪

ಅಡಿಗಳನು ತೊಳೆಯುತ್ತ ಕಾಂತೆಗೆ
ಪಡಿಗವನು ನೀಡುತ್ತ ತಲೆಯನು
ಕೊಡಹಿ ನೇವರಿಸುತ್ತ ತುರುಬನು ಕಟ್ಟಿ ಹೂ ಮುಡಿಸಿ
ನುಡಿಗಳನು ಸೈರಿಸುತ ಸವತಿಯ
ಬಡಿಗಳನು ತಾಳುತ್ತ ಸೇವೆಯ
ನಡಸುತಿರ್ದಳು ವಿನತೆ ಲಜ್ಜಾವನತೆ ಕದ್ರುವಿಗೆ[5] ಆಸ್ತೀ.ಸಂ ೧-೪೦

ಬಭೂವ ಕಿಲ ಧರ್ಮಾತ್ಮಾ ಮದನೋಪಹತಸ್ತದಾ | ಮಹಾ.ಅ.೮-೧೪
ಮನವನಾವರಿಸಿತ್ತು ತತ್ಕೃತ
ಘನತರಜ್ವರ ಕಂಗಳಬಲೆಯ
ತನುವಿನೊಳಗರಸಿದುವು ತತ್ಪ್ರತಿಕಾರದೌಷಧವ
ಪೌ.ಸಂ.೨-೩೧

ತತಃ ಸ ಚಕ್ರೇ ಮಹದಾನನಣ್ ತದಾ | ಮಹಾ.ಅ.೨೮-೧೯
ಹಾಸಿದನು ತುಟಿಯೊಂದನಿಳೆಗಾ
ಕಾಶಕೊಂದನು ನೆಗಹಿದನು ಸಲೆ
ಸಾಸಿಗರು ಬಹ ಮಾರ್ಗದಿದಿರಲಿ ನಿಂದು ಖಗರಾಜ
ಆಸ್ತ್ರೀ.ಸಂ.೩-೨೩

ಭಸ್ಮರಾಶೀಕೃತಂ ವೃಕ್ಷಂ ವಿದ್ಯಯಾ ಸಮಜೀವಯತ್
ದೃಷ್ಟಿಯಲಿ ಮಂತ್ರಜ್ಞನೀಕ್ಷೆಸೆ
ತೊಟ್ಟುದಸುವನು ಭಸ್ಮರೂಪವ
ಬಿಟ್ಟುದಂಕುರಿಸಿತ್ತು ಪಲ್ಲವಿಸಿತ್ತು ಮರನಾಯ್ತು
ಆಸ್ತೀ.ಸಂ.೧೦-೨೧

ಕವಿಯೇ ಕಲ್ಪನಾಬಲದಿಂದ ಕಂಡರಿಸುವ ಚಿತ್ರಗಳಿವು:
ಇಕ್ಕಿ ಹಕ್ಕೆಯಮಾಡಿ ನೆಳಲಲಿ
ಸೊಕ್ಕಿ ಸುಖದಿಂದಿರ್ದವರ ಕೊಲೆ
ಯಕ್ಕು ತಾನಿನ್ನೇವೆನೆಂದನು ಸುಯಿದು ಮನದೊಳಗೆ
(ವಾಲಖಿಲ್ಯರ ವಿಷಯ)
ಆಸ್ತೀ.ಸಂ.೪-೧೩

ನಡುಗಿದುವು ಫಲನಿಕರವವನಿಗೆ
ಕೆಡೆದು ಒಣಗಿದುವಾಮರಂಗಳು
ಕುಡಿತೆಗೊಂಡುವು ಪತ್ರಚಯ ಬಾಡಿದುವು ತಳಿರುಗಳು
ಕಡುಗಿ ಖಗನೈತರಲು ತರುಗಳು
ನುಡಿದುವೆಲೆ ಪುಣ್ಯಾತ್ಮ ನೀನಡಿ
ಯಿಡದಿರೆಮ್ಮಲಿ ಶಕ್ತಿಯಿನಿತಿಲ್ಲೆಂದು ತಮತಮಗೆ[6] ಆಸ್ತೀ.ಸಂ೪-೬

ಹೊಳ್ಳಿಸಿದನಂಗವನು ರಕುತದ
ಹಳ್ಳವನು ಸೇದಿದನು ಬಾಯ್ದೆರೆ
ದಳ್ಳೆ ಹಿಗ್ಗಲು ಮಾಂಸರಾಶಿಯನಗಿದಗಿದು ಬಗಿದು
ಬಲ್ಲಿದನು ತೇಗಿದನು ನೀಗಿದ
ನೆಳ್ಳನಿತು ಹೊರಗಳಿಯದನಿತವ
ನೆಲ್ಲವನು ಜಠರೀಕರಿಸಿ ನಸು ಮಲಗಿದನು ವಿಹಗ
(ಗಜ-ಕಚ್ಛಪ ಸ್ವಾಹಾಕಾರ)
ಆಸ್ತೀ. ಸಂ.೪-೩೧

ಶಬ್ಧ-ಅರ್ಥಾಲಂಕಾರಗಳಲ್ಲಿ ಅನುಪ್ರಾಸ-ಉಪಮೆಗಳನ್ನು ಕವಿ ನಿರಾಯಾಸವಾಗಿಯೂ, ನವೀನವಾಗಿಯೂ ಬಳಸಬಲ್ಲವನಾಗಿದ್ದಾನೆ: “ಹೋಗಿ ಹುತಾಶನಲ್ಲಿಗೆ ಹುಯ್ಯಲನು ಹಾಯ್ಕಿದರು ಭೀತಿಯಲಿ”, “ತಮವ ತಗುಳುವ ತೀವ್ರ ತೇಜದ ಕಮಲಮಿತ್ರನವೋಲು”, “ಕಾಹುರದ ಕೈಮನದ ಕಲಿಯೇ ಕಾಣಬಹುದಿನ್ನು”, “ಬೆಸನಿಗಳು ಬೇಳಿದರು ಬೇಸರವುಸುರಲರಿದೆನೆ”, “ತಡೆಯದುರಗನ ಬೀಳುಕೊಟ್ಟನು ತೊಡಕು ಬೇಡೆನುತ”.

“ಗೋಪರಿಲ್ಲದ ಪಶುವ ಹೆಬ್ಬುಲಿ ತೋಪಿನಲಿ ಹಿಡೀದಂದವಾಯ್ತು”, “ಒಡೆಯರಿಲ್ಲದ ಮನೆಯೊಳಗೆ ನಾಯ್ ತುಡುಕಿ ಹವಿಯನು ತಿಂದ ತೆರನಾಯ್ತು”, “ತೊಗಲು ಹರಿದರೆ ಮೈಯ ನೊಣವದು ಹೊಗುವವೋಲು”, “ಇಂಬಿನಲಿ ಬೀಳುತ್ತ ನುಗ್ಗೆಯ ಕೊಂಬವಿಡಿದಂತಾಯ್ತು”, “ನಾವಿನಿತುದಿನ ಪಾವಕನೊಳಗೆ ನಿಂದೊಲು ಕುದಿಯುತಿದ್ದೆವು”.

ದೇಸಿ-ಗಾದೆಮಾತುಗಳ ಸತ್ವವನ್ನು ಕವಿ ಮೆರಗು ಮೂಡುವಂತೆ ಬಳಸಿಕೊಂಡಿದ್ದಾನೆ: ‘ತತ್ಕುಲಜನಿತವಲ್ಲದೆ ಗಂಧಮಾತ್ರವದಿಲ್ಲ ತತ್ಕುಲದ’, ’ಜಗವನು ಕಂಕುಳಲಿ ಧರಿಸುವೆನು’, ’ಮಣ್ಣು ಹೊಯ್ದರು ಕಡೆಗೆ ಬಾಯಲಿ’, ’ನಿನಗದು ಗಂಟಲಿಂಗೊಳಗಿಳಿವ ತುತ್ತೇ’, ’ಹಲ್ಲ ಬಲುಹನು, ನೋಡುವೆನು’, ’ಉರಗರೆಂಬರ ಮಾತನಾಡದವೋಲು ಮಾಳ್ವೆನು’, ’ನೀ ಬೇಡಿಕೊಂಬುದದೇ ಸು ಘನ’.

’ಬಿಲ್ಲನೇರಿಸಲೇಕೆ ಹಸುವಿಗೆ?’, ’ಹೊಡವಡಲು ದೇಹದಲಿ ದೇಗುಲ ಕೆಡೆದವೋಲಾಯ್ತು’, ’ಹುರಿಯ ಬಿಡಿಸಿದಡಹುದೆ ಬಲು ಹೆದೆ?’, ’ಅರಗಿನ ಪುತ್ತಳಿಗೆ ಪರಿಭವಿಸಲಳವೇ ಪಾವಕನ ಹೊಳಲ’, ’ಕೋಡಕಗೆ ಕಲ್ಪದ್ರುಮವನೀಡಾಡುವರೆ’, ’ಹಸಿದರೆ ಭೋಗಿಸುವರೇ ವಿಶವ?’, ’ಕಾಡಮರನೇ ಕಲ್ಪತರು ?’.

ಸನ್ನಿವೇಶ – ಸಂಭಾಷಣೆಗಳನ್ನು ಕಟ್ಟುವಲ್ಲಿ ಕವಿ ತೋರುವ ಐದು ಗುಣಗಳೆಂದರೆ – ನೈಜತೆ, ನಾಟಕೀಯತೆ, ಮಾನವೀಯತೆ, ಸಂಗ್ರಾಹಕತೆ, ಸಂಯಮ ಇವುಗಳಿಗಾಗಿ, ರುರು-ದೇವದೂತ ಸಂವಾದ (ಪೌ. ಸಂ. ೩.೧೯-೨೯); ಕದ್ರು – ವಿನತೆಯರ ಪಣ (ಆಸ್ತೀ, ಸಂ. ೧.೨೬-೩೦), ವಿನತೆ-ವೈನತೇಯರ ಪ್ರಥಮ ಭೆಟ್ಟ (ಸಂ. ೨.೫-೨೩) ಗಜ – ಕಚ್ಛಪರ ಕಥೆ (ಸಂ. ೩. ೩೨-೩೯), ಕಶ್ಯಪ-ತಕ್ಷಕ ಸಂವಾದ (ಸಂ. ೧೦.೧೩-೨೬) ಮತ್ತು ಜನಮೇಜಯ – ಆಸ್ತೀಕ ಸಂವಾದ (ಸಂ. ೧೩.೨೧-೩೫) ಗಳನ್ನು ಪರಿಶೀಲಿಸಬಹುದು.

[1] ಹೋ. ಹರಿಶ್ಚಂದ್ರಕಾವ್ಯಸಂಗ್ರಹ (ಮೈಸೂರು ವಿಶ್ವವಿದ್ಯಾಲಯ ಕನ್ನಡ ಗ್ರಂಥ ಮಾಲೆ) ಸಂಧಿ ೪-೩೯: “ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕಧಮೊವೊಂದಧಿಕವೇ?”

[2] ಭಾರತತೀರ್ಥ-ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರ: ಜೀವನ ಕಾರ್ಯಾಲಯ, ಬೆಂಗಳೂರು ಪು. ೧೧೦.

[3] ನೋ. ಪಾತಂಜಲಿ ಯೋಗಸೂತ್ರ – ದ್ವಿತೀಯ ಪಾದ, ಸೂತ್ರ ೪೭; “ಪ್ರಯತ್ನ ಶೈಥಿಲ್ಯsನಂತ ಸಮಾಪತ್ತಿಭ್ಯಾಮ್”

[4] ನೋ. “ಕಾರ್ಯಂಚ ಮಮ ನ ನ್ಯಾಯಂ ಪ್ರಷ್ಟುಂ ತ್ಪಾಂ ಕಾರ್ಯಮೀದೃಶಂ” (ಮಹಾ. ಆದಿ, ಅ. ೪೮-೬)

[5] ಹೋ. ಕುಮಾರವ್ಯಾಸಭಾರತ – ದ್ರೌಪದಿಯ ಅವಸ್ಥೆ: “ಎನಗೆ ಬಂದೆಡರೀ ವಿರಾಟನ | ವನಿತೆಯರುಗಳ ಮುಡಿಯ ಕಟ್ಟುವ | ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ ||” (ವಿರಾಟಪರ್ವ)

[6] ಹೋ. ಗದಾಯುದ್ಧ ಸಂಗ್ರಹಂ – ಸಂ: ತೀ.ನಂ. ಶ್ರೀಕಂಠಯ್ಯ ಸಂ. ೬-೨೪: “ಕುರುಪತಿ ನಿನ್ನ ಪೊಕ್ಕ ತೊರೆಗಳ್ … ಪುಗದಿರ್ ತೊಲಗೆಂದು ಬಗ್ಗಿಪಂತಿರೆ ನೆಗಳ್ದತ್ತನೇಕ ಬಕಕೋಕಮರಾಳವಿಹಂಗಮಸ್ಪನಂ”