ಆಸ್ತೀಕ ಪರ್ವ

ಸಂಧಿ ೧ : ಕಶ್ಯಪ ಋಷಿಗೆ ಕದ್ರು, ವಿನತೆಯರೆಂಬ ಇಬ್ಬರು ಹೆಂಡಿರಿದ್ದರು. ಅವರ ಸದ್ಭಾವ ಭಕುತಿಗೆ ಮೆಚ್ಚಿದ ಕಶ್ಯಪನು ಬೇಕಾದ ವರಗಳನ್ನು ಕೇಳಿ, ಕೊಡುವೆನೆಂದಾಗ ಕದ್ರುವು ಸಾವಿರ ಮಹೋರಗರು ತನಗೆ ಮಕ್ಕಳಾಗಲಿ ಎಂದೂ, ವಿನತೆಯು ಸವತಿಯ ಮಕ್ಕಳನ್ನು ಮಿಗುವ ಇಬ್ಬರು ವೀರ್ಯವಂತ ಸುತರು ತನಗಾಗಲಿ ಎಂದೂ ಬೇಡಿಕೊಂಡರು. ಅವನ್ನು ಸಲ್ಲಿಸಿದೆನೆಂದು ಹೇಳಿ ಮುನಿ ತಪೋವನಕ್ಕೆ ನಡೆದನು. ಅವನ ಹೇಳಿಕೆಯಂತೆ ಕದ್ರುವು ಬೇಗನೆ ಸಾವಿರಸರ್ಪಗಳ ಸಂತಾನ ಪಡೆದಳು. ವಿನತೆಯು ಎರಡು ಅಂಶಗಳನ್ನು ಹೆತ್ತಳು. ಆದರೆ ಹಲಕಾರ ಕಾಯ್ದರೂ ಅವು ಬಿರಿಯದಿರಲು ಕದ್ರುವಿಗೆ ಮಕ್ಕಳಾದ ತಾಪದ ಕೋಪದಲ್ಲಿ ಅವುಗಳಲ್ಲೊಂದನ್ನು ಒಡೆದು ಬಿಟ್ಟಳು. ನೋಡಿದರೆ ಮಗುವಿಗೆ ತೊಡೆಗಳೇ ಇಲ್ಲ. ಈ ಪರಿಯ ತನ್ನ ದುರ್ವಿಧಿಗಾಗಿ ಅವಳು ಹಳಹಳಿಸುತ್ತಿರುವಾಗ ಆ ಮಗನು ಸವತಿಯ ಮೇಲಿನ ಮತ್ಸರದಿಂದ ತನ್ನನ್ನು ಗಂಡುಗೆಡಿಸಿದ ತಾಯಿಗೆ, “ನೀನು ಆ ಸವತಿ ಕದ್ರುಗೆ ಐನೂರು ವರ್ಷ ತೊತ್ತಾಗು” ಎಂದು ಶಾಪವಿತ್ತನು. ಅದನ್ನು ಕೇಳಿ ಭಯಗೊಂಡು ಹಲುಬಿದ ಮಾತೆಗೆ, “ಪುನಃ ಲೋಭಮೋಹದಲ್ಲಿ ಕಿರಿಯ ಅಂಡವನ್ನೂ ಒಡೆಯಬೇಡ, ಅದರಿಂದ ಕದ್ರು ತನಯರನ್ನೆಲ್ಲ ಮಟ್ಟ ಹಾಕುವ ಬಲ್ಲಿದನು ಹುಟ್ಟುವನು” ಎಂದು ಭರವಸೆ ಕೊಟ್ಟನು. ಇದರಿಂದ ಆನಂದಪುಳಕಿತೆಯಾದರೂ ತನ್ನ ಅನುಚಿತ ಕಾರ್ಯದಿಂದಾಗಿ ಈ ಮಗ ಬದುಕುವುದು ಹೇಗೆ ಎಂಬ ಆತಂಕ ಅವಳನ್ನು ಬಿಡಲಿಲ್ಲ. ಅಷ್ಟರಲ್ಲಿ ಸೂರ್ಯದೇವನು ಬಂದು ಅವಳನ್ನು ಸಂತೈಸಿ – “ನಿನ್ನ ಮಗನನ್ನು ನನಗೆ ಕೊಡು, ಅವನು ನನ್ನ ರಥದ ಸಾರಥಿಯಾಅಲಿ !” ಎಂದು ಕರೆದೊಯ್ದನು (೭-೨೫)

ಒಂದು ದಿನ ದೇವಲೋಕದ ಉಚ್ಚೈಶ್ರವ ಕುದುರೆಯು ಭೂಮಿಗಿಳಿದು ಬಂದು ಲವಣೌಂಬುಧಿಯ ತಡಿಯಲ್ಲಿ ಆಡುತ್ತಿದ್ದಾಗ ಅದರ ಬಾಲವು ಬಿಳಿದೋ, ಕಪ್ಪೋ ಹೇಳೆಂದು ಕದ್ರು ವಿನತೆಯನ್ನು ಕೇಳಿದಳು. ಅದು ಅಚ್ಚ ಬಿಳಿದೆಂದು ವಿನತೆ ನುಡಿಯಲಾಗಿ – “ಛೇ, ಛೇ, ಸುಳ್ಳು ಆ ಕುದುರೆಯ ಮೈ ಬಿಳಿದು, ಬಾಲಕಪ್ಪು” ಎಂದು ಕದ್ರು ವಾದಿಸಿದಳು. ಕೊನೆಗೆ ಬಾಲ ಬಿಳಿದಾದರೆ ಕದ್ರು ವಿನತೆಯ ಆಳಾಗಬೇಕೆಂದೂ, ಕಪ್ಪಾದರೆ ವಿನತೆಯೇ ಕದ್ರುವಿಗೆ ದಾಸಿಯಾಗಬೇಕೆಂದೂ ಪಣವಿಟ್ಟುಕೊಂಡರು. ಆದರೆ ಸತ್ಯವನ್ನು ಪರೀಕ್ಷಿಸಲು ಕುದುರೆಯು ಮಾರನೆಯ ದಿನ ಮೈದೋರುವವರೆಗೂ ಅವರು ಕಾಯಬೇಕಾಯಿತು. ಈ ನಡುವೆ ತನ್ನ ಮಾತನ್ನೇ ನಿಜವೆಂದು ಸಾಧಿಸಲು ಕದ್ರುವು ತನ್ನ ಮಕ್ಕಳ ನೆರವನ್ನು ಕೋರಿದಳು. ಕುದುರೆಯ ಬಾಲವು ಕಪ್ಪೊತ್ತಿ ತೋರುವ ಹಾಗೆ ಅವರೆಲ್ಲ ಆ ಬಾಲವನ್ನು ಸುತ್ತಿಕೊಳ್ಳಬೇಕೆಂದು ಅವಳು ಸೂಚಿಸಲು, ಕೆಲವರು ಆ ಕಾರ್ಯವು ಅನುಚಿತವೆಂದು ಪಾಪಕ್ಕೆ ಹಿಂಜರಿದರು. ಅವರ ಹೇಡಿತನಕ್ಕೆ ಕೋಪಗೊಂಡ ಕದ್ರುವು “ಜನಮೇಜಯನು ಸರ್ಪಯಜ್ಞ ಮಾಡಿ ನಿಮ್ಮೆಲ್ಲರನ್ನು ಕೊಲ್ಲಲಿ” ಎಂದು ಶಪಿಸಿದಳು. ಇನ್ನುಳಿದ ಕೆಲವು ಮಾತ್ರ ತಾಯ ಮಾತನ್ನು ನಡೆಸುವೆವೆಂದರು. ಕದ್ರುವು ವಿನತೆಯನ್ನು ಪುನಃ ಸಮುದ್ರ ದಂಡೆಯೆಡೆ ಕರೆದೊಯ್ದು ಕುದುರೆಯನ್ನು ನೋಡುತ್ತಿರಲಿಕ್ಕೆ ಹಾವುಗಳು ಸುತ್ತಿಕೊಂಡಿದ್ದ ಬಾಲವು ಬಲು ಕಪ್ಪಾಗಿ ಕಾಣಿಸಿತು. ಇದೇಕೆ ಹೀಗೆ, ನಾನು ಕಂಡಂತೆ ಇಲ್ಲವೆಂದು ವಿಸ್ಮಯಪಟ್ಟರೂ ಮೋಸವರಿಯದ ವಿನತೆ ಮಾತಿನಂತೆ ಸವತಿಯ ಸೇವೆಗಣಿಯಾದಳು. (೨೬-೪೧)

ಸಂಧಿ ೨ : ವಿನತೆಯು ತನ್ನ ದಾಸ್ಯ ವಿಮೋಚನೆ ಮಾಡಲಿರುವ ಮಗನ ಬರವನ್ನೇ ಹಾರೈಸುತ್ತ ಕಾಲಕಳೆಯುತ್ತಿದ್ದಳು. ಅಡವಿಗೆ ಹೋಗಿ ತಾನು ಬಿಟ್ಟ ಕರುಳನ್ನು ನೋಡಿ ಸುಯ್ಯುವುದೇ ಅವಳ ಕೆಲಸವಾಯಿತು. ಹೀಗಿರುತ್ತಲೊಂದು ದಿನ ಅವಳ ಎಡಗಣ್ಣು, ತೋಳುಗಳು, ಹಾರಲು ಅದರ ಫಲವೇನೆನುತ್ತ ಕಾನನಕ್ಕೆ ಓಡಿಬಂದಳು. ಗರ್ಭ ಒಡೆದಿತ್ತು, ಕುಮಾರಕನು ಮಾತ್ರ ಕಾಣಿಸಲಿಲ್ಲ. ಇದೆಲ್ಲಿಯ ದುರ್ದೈವವೆಂದು ಹೊಟ್ಟೆ ಹೊಸೆದುಕೊಂಡಳು. ಅಷ್ಟರಲ್ಲಿ ಮತ್ತೆ ಶುಭಸೂಛನೆ ತೋರಿ, ಕಣ್ಣು ಮುಚ್ಚುವಷ್ಟು ಕಾಂತಿಯುತವಾದ ವಿಹಂಗನನ್ನು ಕಂಡಳು. ಅವನ ತೇಜಸ್ಸು ದೇವತೆಗಳನ್ನೇ ದಂಗುಗೆಡಿಸಿತ್ತು. ಅಗ್ನಿದೇವನ ಸೂಚನೆಯ ಮೇರೆಗೆ ಅವರೆಲ್ಲ ಮೊರೆಯಿಟ್ಟು ಶರಣುಹೊಕ್ಕ ಮೇಲೆ ಅವನು ತನ್ನ ದೇಹಕಾಂತಿಯನ್ನು ಉಪಸಂಹರಿಸಿ ತಾಯಿಯಾದ ವಿನತೆಯೆದುರು ತಲೆವಾಗಿ ನಿಂದನು. ಇದರಿಂದ ಬೆರಗುಗೊಂಡ ಅವಳಿಗೆ ತಾನು ನಿನ್ನ ಮಗನೆಂದು ಅವನೇ ಹೇಳಬೇಕಾಯಿತು. ತನ್ನ ಅವಸ್ಥೆಯನ್ನು ತೋಡಿಕೊಂಡು ಅವನನ್ನು ಆಕೆ ಬಿಗಿದಪ್ಪಿದಳು. ಆ ಹರುಷದಲ್ಲಿಯೂ ತೊತ್ತುಗೆಲಸದ ಆತಂಕ ಮಾತ್ರ ಅವಳಿಗೆ ತಪ್ಪಲಿಲ್ಲ. ಅವಳ ಇಚ್ಛೆಯ ಮೇರೆಗೆ ವೈನತೇಯನು ಅವಳನ್ನು ಕದ್ರುವಿನ ಮನೆಯ ಬಾಗಿಲಿಗೆ ಹೊತ್ತು ತಂದಿಳಿಸಿದಳು. ಈ ಹೊಸಬನಾರೆಂದು ಕದ್ರು ಕೇಳಿ ತಿಳಿದುಕೊಂಡಳು. ತನ್ನನ್ನು ವಿನತೆಯೂ, ಅವಳ ಮಗನು ತನ್ನ ಮಕ್ಕಳನ್ನೂ ಸಾಗರ ಮಧ್ಯದ ದ್ವೀಪಕ್ಕೆ ಒಯ್ಯಬೇಕೆಂದು ಅಜ್ಞಾಪಿಸಿದಳು. ವಿನತೆ ಅವಳನ್ನು ಹೊತ್ತಳು. ತಾಯಿಯ ಹೇಳಿಕೆಯಂತೆ ಗರುಡನೂ ಉರಗಗಳನ್ನೆಲ್ಲ ತನ್ನ ಗರಿಯ್ಕಕಡೆ ಸೆರಗಿನಲ್ಲಿ ಹೊತ್ತು ಗಗನಕ್ಕೆ ನೆಗೆದನು. ಮಹೋರಗರೆಲ್ಲ ಬಿಸಿಲಿನ ತಾಪಕ್ಕೆ ಚಡಪಡಿಸುವಂತಾಯಿತು. ಮಕ್ಕಳ ಗೋಳನ್ನು ಕೇಳಿ ಕದ್ರುವು ಇಂದ್ರನ ಸ್ತುತಿಗೈಯಲು ಮಳೆಯು ಧಾರಾಕಾರವಾಗಿ ಸುರಿದು ಅವುಗಳೆಲ್ಲ ಮತ್ತೆ ಚೇತರಿಸಿಕೊಂಡವು. ಅಂತೂ ಪಕ್ಷಿರಾಜನು ಅವರನ್ನು ಸ್ಥಳಕ್ಕೆ ತಂದು ಇಳಿಸಿದನು.(೧-೩೬).

ಸಂಧಿ ೩: ಮಹೋರಗರೆಲ್ಲ ದಾಸಿಯ ಮಗನೆಂದು ವೈನತೇಯನನ್ನು ಅವಹೇಳನಗೆಯ್ಯತೊಡಗಿದರು. ಇದರಿಂದ ನೊಂದ ಅವನು ತನ್ನ ತಾಯಿಯನ್ನು ಅವಳ ದಾಸ್ಯದ ಕಾರಣ, ಅವಧಿಗಳನ್ನು ಕುರಿತು ವಿಚಾರಿಸಿದನು. ಆಗ ಅವಳು ಪೂರ್ವದ ಕಥೆಯನ್ನೆಲ್ಲ ವಿಸ್ತರಿಸಿದಳು. ಅವಳಿಗಾಗ ಅನ್ಯಾಯವನ್ನು ನೆನೆದು ಸಿದಿದೆದ್ದ ಮಗನು –“ನೀನೀಗಲೇ ಹೊರಡು, ನಾನೆಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದನು. ಅದಕ್ಕೆ “ಸತ್ಯವನ್ನು ಕೆಡಿಸಬೇಡ” ವೆಂದು ಬುದ್ದಿ ಹೇಳಿದಳೂ. ಬೇಕಿದ್ದರೆ, ಕದ್ರು ಕೇಳಿದುದನ್ನು ತಂದುಕೊಟ್ಟು ತನ್ನನ್ನು ಬಿಡಿಸಿಕೋ ಎಂದು ಸೂಚಿಸಿದಳು. ಅಮಾತಿಗೆ ಅವನು ಒಪ್ಪಲು ಕದ್ರುವಿಗೆ ಅದನ್ನು ಅರುಹಿದಳು. ಕದ್ರುವು ದುರ್ಲಭವಾದುದನ್ನೇ ಬೇಡಬೇಕೆಂದು ಯೋಚಿಸಿ ಅಮೃತವನ್ನು ತಂದಿತ್ತರೆ ಸೆರೆಯನು ಬಿಡುವೆನೆಂದಳು. ಈ ಸಾಹಸವು ತನ್ನ ಮಗನಿಂದ ನೀಗದೆಂದು ವಿನತೆಯು ಹಿಮ್ಮನಸ್ಸಿನಲ್ಲಿರುವದನ್ನು ಕಂಡ ವೈನತೇಯನ್ನು ತನ್ನನ್ನು ನೂಕಿನೋಡು” ಎಂದಾಗ ಅವಳು ಹರುಷಪಟ್ಟು ಹರಸಿದಳು. (೧-೧೮)

ಅಮೃತವನ್ನು ಪಡೆಯುವ ಮಹಾಸಾಹಸಕ್ಕೆ ಹೊರಡುವ ಮುನ್ನ ಗರುಡನಿಗೆ ತನ್ನ ತೀವ್ರವಾದ ಹಸಿವೆಯನ್ನು ಹಿಂಗಿಸಿಕೊಳ್ಳಬೇಕಿತ್ತು. ಅದ್ದರಿಂದ ತನಗೆ ತಕ್ಕ ಅನ್ನವನ್ನು ತೋರೆಂದು ತಾಯಿಯನ್ನು ಪ್ರಾರ್ಥಿಸಿದನು. ಅದಕ್ಕೆ ಅವಳು, “ಸಮುದ್ರ ಮಧ್ಯದಲ್ಲಿರುವ ಅಸಂಖ್ಯಾತ ನಿಶಾಚರವನ್ನು ತಿನ್ನು ಹೋಗು-ಆದರೆ ವಿಪ್ರರನ್ನು ಮಾತ್ರ ಬಿಟ್ಟು” ಎಂದು ಹೇಲಿದಳು. ವಿಪ್ರರನ್ನು ಗುರುತಿಸುವ ಪರಿಯೆಂತು ಎಂದು ವಿಚಾರಿಸಿದಾಗ ಗಂಟಲು ಸುಡುವಂತಾಗುವದೆಂದು ಸೂಚಿಸಿದಳು. ಇದನು ಕೇಳಿದೊಡನೆಯೇ ಗರುಡನು ಅಂಬರತಳಕ್ಕೆ ಲಂಘಿಸಿದನು. ನಿಶಾಚರರು ಬರುವ ಮಾರ್ಗದಲ್ಲಿ ಒಂತು ತುಟಿಯನ್ನು ಭೂಮಿಯ ಮೇಲೂ ಇನ್ನೊಂದನ್ನು ಆಕಾಶದಲ್ಲೂ ಇರುವಂತೆ ಇಟ್ಟು ಬಾಯ್ದೆರೆದು ಕುಳಿತನು. ಬಂದ ಬಂದ ನಿಷಾದಾಧಿಪರನ್ನೆಲ್ಲ ಒಡಒಡನೆ ನುಂಗುತ್ತಲೇ ಇದ್ದನು. ಅಷ್ಟರಲ್ಲಿ ಗಂಟಲು ಸುಟ್ಟಂತಾಗಲು, ಘಾತ್ನವಾಯಿತೆಂದು ಬಗೆದನು. ಏಕೆ ಎಂದು ವಿಚಾರಿಸಲು, ಅಲ್ಲಿ ನಿಷಾದಕುಮಾರಿಯನ್ನು ವರಿಸಿದ್ದ ಹಾರುವನೊಬ್ಬ ಸಿಕ್ಕಿಬಿದ್ದಿದ್ದನು. ಅವರಿಬ್ಬರನ್ನೂ ಕೈಗಾಯ್ತು ಹೊರಪಡಿಸಿದ ಮೇಲೆ ತಾನು ಬಾಯಿ ಮುಚ್ಚಿದನು. ಆದರೂ ಅವನ ಹಸಿವು ಪೂರ್ತಿ ಹಿಂಗಿರಲಿಲ್ಲ. ಮತ್ತೆ ತಂದೆ ಕಶ್ಯಪನಲ್ಲಿಗೆ ಹಾರಿಹೋದನು. ತಾಯಿಯು ತೋರಿದ ಆಹಾರವು ತನಗೆ ಅರೆಹೊಟ್ಟೆಗೆ ಮಾತ್ರ ಸಾಕಾಯಿತು, ಇನ್ನೂ ಉಳಿದ ಹಸಿವನ್ನು ನೀಗಲು ಬೇರೆ ಆಹಾರವನ್ನು ತೋರೆನ್ನಲು ಕಶ್ಯಪನು ಆರು ಆರು ಯೋಜನೆಗಳು ಉದ್ದವಿದ್ದ ಮಹಾಗಾತ್ರದ ಗಜ-ಕಚ್ಛಪಂಗಳನ್ನು ತೀರಿಸು ಎಂದನು. (೧೯-೩೦)

ಆಗ ಆ ಗಜಕಚ್ಛಪಂಗಳ ಜನನ ವೃತ್ತಾಂತವನ್ನು ಕೇಳಲು ಕುತೂಹಲಿಯಾದ ಮಗನಿಗೆ ಕಶ್ಯಪನು ಹೇಳಿದನು. “ವಿಭಾವಸು, ಸುಪ್ರತೀಕ ಎಂಬುವರಿಬ್ಬರು ಅಣ್ಣ-ತಮ್ಮಂದಿರಾಗಿ ಹುಟ್ಟಿದ್ದರು. ಇದ್ದಕ್ಕಿದಂತೆ ಒಂದು ದಿನ ತಮ್ಮನು ಅಣ್ಣನನ್ನು ಆಸ್ತಿಯಲ್ಲಿ ಕೂಡ್ಲೇ ಪಾಲು ಕೊಡಬೇಕೆಂದು ಒತ್ತಾಯಿಸತೊಡಗಿದನು. ಅಣ್ಣನು ಹಲವು ಪರಿಯಲ್ಲಿ ಹೇಳಿ ನೊಡೀದನು. ಆದರೂ ಕೇಳದ ತಮ್ಮನಿಗೆ ಕೊನೆಯಲ್ಲಿ ಸೊಕ್ಕಿನವನಾದ ನೀನು ಗಜವಾಗಿ ಹುಟ್ಟೆಂದು ಶಾಪವಿತ್ತನು. ಅದಕ್ಕೆ ಪ್ರತಿಯಾಗಿ ತಮ್ಮನೂ ನೀನು ಕೊಳದ ಆಮೆಯಾಗೆಂದು ಶಾಪಕೊಟ್ಟನು. ಅದರಂತೆ ಅವರಿಬ್ಬರೂ ಗಜ-ಕಚ್ಛಪಗಳಾಗಿ ಜನಿಸಿದರು. ಆದರೂ ಪೂರ್ವವೈರವು ಅವರಿಬ್ಬರನ್ನೂ ಬಿಡಲಿಲ್ಲ. ಆನೆಯು ಆಮೆಯಿದ್ದ ಮಡುವಿಗೆ ಬಂದು ಕೂಗುವುದು, ಕೂಡಲೇ ಆಮೆ ಮೇಲೆದ್ದು ಬರುವುದು. ಆನೆ ಅದನ್ನು ತುಳಿದು ಮೆಟ್ಟಲು ಪ್ರಯತ್ನಿಸಿದಂತೆ ಆಮೆಯು ತಪ್ಪಿಸಿಕೊಳ್ಳುವುದು. ಹೀಗೆ ದಿನದಿನದ ಹೋರಾಟ ಅವರಲ್ಲಿ ಇಂದಿಗೂ ನಡೆದಿದೆ”. (೩೧-೩೯)

“ನೀನು ಹೋಗಿ ಅವರಿಬರನ್ನು ತಿನ್ನು,  ಈಗ ಇಷ್ಟು ವೇಗದಿಂದ ಬರಲೇನು ಕಾರಣ?” ಎಂದು ಕೇಳಿದ ತಂದೆಗೆ ಗರುಡನು, “ತಾಯಿಯ ದಾಸ್ಯ ವಿಮೋಚನೆಯ ನಿಮಿತ್ತ ಅಮೃತವನ್ನು ತರಲು ಹೊರಟಿದ್ದೇನೆ. ನೀವು ಹರಸಿ” ಎಂದು ಬೇಡಿಕೊಂಡನು. ಕಶ್ಯಪನು ಹರಕೆಯನ್ನು ದಯಪಾಲಿಸಿದನು. (೪೦-೪೨)

ಸಂಧಿ ೪ : ಒಂದು ಕೈಯಲ್ಲಿ ಆನೆ, ಇನ್ನೊಂದು ಕೈಯಲ್ಲಿ ಆಮೆಯನ್ನು ಹಿಡಿದುಕೊಂಡು ಗರುಡನು ಆಕಾಶಕ್ಕೆ ನೆಗೆದನು. ಅವುಗಳನ್ನು ಎಲ್ಲಿ ಇರಿಸಿ ತಿನ್ನಲಿ ಎಂದು ಮರದ ತಲೆಗಳನ್ನು ನಿಟ್ಟಿಸತೊಡಗಿದನು. ಕೊನೆಗೆ ಹೆಮ್ಮರವೊಂದು ತಾನಾಗಿ ಕರೆಯಿತು. ಶತಯೋಜನ ಉದ್ಧವಾದ ಅದರ ಶಾಖೆಯ ಮೇಲೆ ಅವನು ಕಾಲೂರಿ ಕುಳಿತದ್ದೇ ತಡ, ಅದು ಭಟ್ಟೆಂದು ಮುರಿಯಿತು. ಅಷ್ಟರಲ್ಲಿ ಆ ಶಾಖೆಗೆ ಜೋತು ಬಿದ್ದಿದ್ದ ವಾಲಖಿಲ್ಯರೆಂಬ ಮಹಾಋಷಿಗಳನ್ನು ಕಂಡ ಗರುಡನು ಬೆಚ್ಚಿ ಬಿದ್ದನು. ತಾನೀಗ ಈ ಶಾಖೆಯನ್ನು ಬೀಳಗೊಟ್ಟರೆ, ಅವರ ಗತಿಯೇನು, ತಾನು ಅವರ ಶಾಪಕ್ಕೆ ಗುರಿಯಾಗುವುದು ಖಂಡಿತ ಎಂದು ಆತಂಕವಾಯಿತು ಅವನಿಗೆ. ಹೀಗಿರುತ್ತ ಇತ್ತ ಗಜ-ಕಚ್ಛಪಗಳನ್ನು ನಖಮುಖದಲ್ಲಿ ಈಗಾಗಲೇ ಹಿಡಿದಿದ್ದರಿಂದ ಆ ಶಾಖೆಯನ್ನು ತನ್ನ ಚಂಚುವಿನಲ್ಲಿಯೇ ಕಚ್ಚಿ ಹಿಡಿದು ಹಾರುತ್ತ ತೊಳಲುತ್ತಿರಬೇಕಾಯಿತು. ಹಾಗೆಯೇ ಅವನು ತಂದೆ ಕಶ್ಯಪನಿರುವ ಗಂಧಮಾದನ ಪರ್ವತಕ್ಕೆ ಬಂದನು. ಅವನ ಪರಿಸ್ಥಿತಿಯನ್ನು ನೋಡಿ ಕಶ್ಯಪನೂ ಕಾತರನಾದನು. ಆಗ ಅವನು ತಾನೇ ಋಷಿಗಳನ್ನು ಪ್ರಾರ್ಥಿಸಲಾಗಿ ಅವರು ತಾವಾಗಿ ಶಾಖೆ ಬಿಟ್ಟು ಇಳಿದರು. ಗರುಡನು ತಾನು ಅಂತೂ ಒಮ್ಮೆ ಉಳಿದುಕೊಂಡೆನೆಂದನು. ಆದರೆ ಅನೇಕರನ್ನು ಆಹುತಿ ತೆಗೆದುಕೊಳ್ಳಬಹುದಾಗಿದ್ದ ಆ ಶಾಖೆಯನ್ನು ಬಿಡುವದೆಲ್ಲಿ ಎಂಬ ಸಮಸ್ಯೆಯು ತೀರಲಿಲ್ಲ. ಅದಕ್ಕೂ ಕಶ್ಯಪನೇ ಉಪಾಯವನ್ನು ಸೂಚಿಸಿದನು. ಆ ಮೇರೆಗೆ ಗರುಡನು ಪ್ರಾಣಿ ಮಾತ್ರವೇ ಇಲ್ಲದ ಹಿಮಗಿರಿಯ ತಟಕ್ಕೊಯ್ದು ಆ ಮಹಾಶಾಖೆಯನ್ನು ಬಿಸುಟುಬಿಟ್ಟನು. ಆ ಮಹಾಕ್ಷಣವೇ ಮಹಾಗಜ – ಕಚ್ಛಪಂಗಳನ್ನೂ ಜಠರೀಕರಿಸಿದನು. (೧-೩೯)

ಸಂಧಿ ೫ : ಗಜಕಚ್ಛಪಗಳನ್ನು ತಿಂದು ತೃಪ್ತನಾದ ಗರುಡನು ಉತ್ಸಾಹದಿಂದ ಸುರಲೋಕಕ್ಕೆ ಹೋಗಲೆಂದು ನೆಗೆದನು. ದೇವದೇವತೆಗಳಿಗೆಲ್ಲ ಅಪಶಕುನಗಳು ತೋರಿದವು. ಸುರಗುರು ಶುಕ್ರಾಚಾರ್ಯರಿಗೆ ಪ್ರಸಂಗದ ಅರ್ಥವಾಯಿತು. ಹಿಂದೆ ದೇವೇಂದ್ರನು ವಾಲಖಿಲ್ಯ ಋಷಿಗಳಿಗೆ ಮಾಡಿದ ಅಪಮಾನದ ಫಲವಾಗಿ ಗರುಡನು ದಾಳಿಯಿಟ್ಟು ಅಮೃತದ ಮಹಾಭಾಂಡವನ್ನು ಕೊಂಡೊಯ್ಯುವುದು ಖಂಡಿತವೆಂಬುದನ್ನು ಅರಿತರು. ಆದ್ದರಿಂದ ಇಂದ್ರನಿಗೆ ಅಮೃತಕುಂಭಕ್ಕೆ ತಕ್ಕ ಕಾವಲಿನ ವ್ಯವಸ್ಥೆ ಮಾಡಲು ಸೂಚಿಸಿದರು. ಅದರಂತೆ ಸುರಪತಿಯು ಬಲವಾದ ಏರ್ಪಾಟು ಮಾಡಿದನು. (೧-೧೯)

ಅಷ್ಟರಲ್ಲಿ ವೈನತೇಯನು ಅಮರಾವತಿಗೆ ಬಂದನು. ಮೊದಲಿಗೆ ಸುರಪತಿಯನ್ನೇ ಅವನು ಎದುರಿಸಬೇಕಾಯಿತು. ಆ ಮೇಲೆ ಸುರನಿಕರವೆಲ್ಲ ಅವನ ಮೇಲೆ ಮುಕುರಿತು. ಅವರೆಲ್ಲರನ್ನು ಕೆಡವಿದ್ದಲ್ಲದೆ ಕಂಧೂಳಿಯನ್ನೇ ಕದರಿಬಿಟ್ಟನು. ಇಂದ್ರನ ನೆರವಿಗೆ ಬಂದ ಅನಲ, ಅನಿಲ, ನಿರುತಿ, ವರುಣಾ, ಕುಬೇರ, ಶಂಕರರೆಲ್ಲರನ್ನೂ ಸದೆಬಡಿದು ಶರಣಾಗಿಸಿದನು. (೨೦-೪೨) ಅಲ್ಲಿಂದ ನೇರ ಅಮೃತದೆಡೆಗೆ ಬಂದರೆ, ಅದಕ್ಕಿದ್ದ ಬೆಂಕಿಯ ಕಾವಲು ಒಂದು ಕ್ಷಣ ಮಾತ್ರ ಗರುಡನನ್ನು ಹಿಮ್ಮೆಟ್ಟಿಸಿತು. ಮರುಗಳಿಗೆಯಲ್ಲಿ ಅಗ್ನಿಯನ್ನೇ ಸ್ತುತಿಸಿದನು. ಆದರೂ ಅವನು ಒಲಿಯದಿರಲು ಕೆರೆಕಾಲುವೆಗಳ ನೀರನೆಲ್ಲ ಹೀರಿ, ಕಾರಿ ಆ ಬೆಂಕಿಯನ್ನು ನಂದಿಸಿ ಬಿಟ್ಟನು. ಹಾಗೆಯೇ ಮುಂದುವರಿದರೆ ಅಲ್ಲೊಂದು ಶಸ್ತ್ರದುರ್ಗವು ಕಂಡಿತು. ಅದನ್ನು ಕೂಡಲೆ ಕೆದರಿ ಹುಕ್ಕರೆ ಸಹಸ್ಯ ಸರ್ಪಗಳ ಮಹಾಯಂತ್ರ ಚಕ್ರವೊಂದು ಎದುರಾಯಿತು. ಇದನ್ನು ಗೆಲ್ಲುವುದು ಹೇಗೆಂದು ಉಪಾಯ ಯೋಚಿಸಿ ಅಣುರೂಪನಾಗಿ ಒಳಸೇರಲು ಚಕ್ರಮಧ್ಯದಲ್ಲಿ ಅಮೃತವೂ ಅದರ ಕಾವಲಿಗೆ ನಿಂತ ಇಬ್ಬರು ದಡಿಗ ದಾನವರೂ ಕಂಡರು. ಅವರಿಗೆ ಸುಳಿವು ಹತ್ತದಂತೆ ಇನ್ನೂ ಸೂಕ್ಶ್ಮಾಕಾರನಾಗಿ ಅಮೃತಕಲಶವನ್ನು ಎತ್ತಿಕೊಂಡು ಚಕ್ರವನ್ನು ಕಿತ್ತು ಬಿಸಾಡಿ ಆಕಾಶಕ್ಕೆ ನೆಗೆದು ಮೊದಲಿನಂತೆ “ಜಗದಗಲದಾಕಾರ”ವನ್ನು ತಾಳಿದನು. (೪೩-೫೩)

ಸಂಧಿ ೬ : ಅಮೃತವನ್ನು ಕಳೆದುಕೊಂಡ ಅಮರರು ಶ್ರೀ ವಿಷ್ಣುವಿನಲ್ಲಿ ಹೋಗಿ ಮೊರೆಯಿಟ್ಟರು. ಅವರಿಗೆಲ್ಲ ಅಭಯವನ್ನು ಹೇಳಿ ಜಗದೇಕನಾಥನು ತಾನೇ ಗರುಡನಿದ್ದೆಡೆಗೆ ಬಂದನು. ಅಮೃತಕಲಶವನ್ನು ಹೊತ್ತು ಸಾಗುತ್ತಿದ್ದ ಗರುಡನು ಅವನ ಕಮನೀಯ ಮೂರ್ತಿಯನ್ನು ಕಂಡು ಪರಿಚಯ ಕೇಳಿದನು. ನಾರಾಯಣನು ತಾನಾರೆಂಬುದನ್ನರುಹಿ, “ನಿನ್ನ ಪರಾಕ್ರಮವನ್ನು ಕಂಡು ಮೆಚ್ಚಿದ್ದೇನೆ, ಬೇಕಾದುದನ್ನು ಬೇಡಿಕೊ” ಎಂದನು. ಅದಕ್ಕೆ ಉಬ್ಬಾಳುವಾದ ಗರುಡನು ತಾನೇ ನಿನಗೆ ಬೇಕಾದುದನ್ನು ಕೊಡಬಲ್ಲೆ, ಕೇಳಿಕೊ ಎಂದು ಉತ್ತರಿಸಿದನು. ವಿಷ್ಣುವು ಅದಕ್ಕೆ ನಕ್ಕು, “ನೀನು ನನ್ನ ವಾಹನವಾಗು” ಎಂದು ಕೇಳಿದನು. ಅಲ್ಲದೆ, “ನಾನಂತೂ ಬೇಡಿಕೊಂಡಿದ್ದಾಯಿತು; ಇನ್ನು ಕೇಳುವುದು ನಿನ್ನ ಪಾಳಿ” ಎಂದು ಸೂಚಿಸಿದನು. ಆಗ ಗರುಡನು ಮೃತ್ಯುಜರೆಗಳೆರಡೂ ತನಗಿರುವಂತೆ ಒಲಿದಿತ್ತು ರಕ್ಷಿಸಬೇಕೆಂದು ಬೇಡಿಕೊಂಡನು. ಇದೇ ಹೊತ್ತು ಹಿಡಿದು ವಿಷ್ಣುವು “ನೀನೀಗ ಅಮೃತಕಲಶವನ್ನು ಒಯ್ಯುತ್ತಿರುವುದು ದೇವಕುಲಕ್ಕೇ ವಿಪತ್ತನ್ನುಂಟುಮಾಡಿದೆ. ಅದು ಯೋಗ್ಯವಲ್ಲ” ಎಂದು ತಿಳಿಹೇಳಿದನು. ಆ ಕುರಿತು ತಾನೀಗ ಅಮೃತಕಲಶವನ್ನು ಒಯ್ಯುತ್ತಿರುವುದು ತಾಯ ಸೆರೆಯನ್ನು ಬಿಡಿಸುವುದಕ್ಕೆ; ದಾಯಾದ್ಯರಿಗೆ ಅದನ್ನು ಬರಿತ್ ತೋರಿಸುವೆನೇ ಹೊರತು ಅವರ ಬಾಯಿಗೆ ಬೀಳದಂತೆ ನೋಡಿಕೊಳ್ಳುವೆನೆಂದ ಗರುಡನ ಮಾತಿಗೆ ನಾರಾಯಣನು ನಕ್ಕು ಅವನನ್ನು ಬೀಳ್ಕೊಂಡನು. (೧-೨೦)

ಗರುಡನು ಮತ್ತೆ ಪಯಣವನ್ನು ಮುಂದುವರಿಸಲು ಸಿಟ್ಟಿಗೆದ್ದ ಇಂದ್ರನು ಬಂದು ತಡೆದನು. ಅವನ ವಜ್ರಾಯುಧಕ್ಕೆ ಗರುಡನು ತನ್ನ ಕಿಗ್ಗರಿಯೊಂದನ್ನೊಡಿದರೆ ನೆಗಹಲಾರದೆ ಬೆರಗುಪಟ್ಟು ಸುರಪತಿಯು ಖಗಪತಿಯ ಸಖ್ಯಯಾಚನೆ ಮಾಡಿದನು. ಗರುಡನು ವಿನಯದಿಂದ ತನ್ನ ಸಾಮರ್ಥ್ಯದ ಅರಿವು ಮಾಡಿಕೊಟ್ಟುದಲ್ಲದೆ ಅದ್ಭುತಾಕಾರವನ್ನು ತೋರಿ ದಂಗುಪಡಿಸಿದನು. ಆಮೇಲೆ ಇಂದ್ರನು ಸ್ನೇಹವನ್ನೇ ಮುಂದುಮಾಡಿ ಅಮೃತವನ್ನು ಕೇಳಲು ತಾಯಸೆರೆಯನ್ನು ಬಿಡಿಸುವ ತನ್ನ ಉದ್ದೇಶವನ್ನು ಪೂರೈಸಿ ಅದನ್ನು ಮರಳಿಕೊಡಲು ಒಪ್ಪಿದನು. ಸರ್ಪಗಳಿಗೆ ಅದನ್ನು ತೋರಿಸುವುದಷ್ಟೇ ತನ್ನ ಉದ್ದೇಶವೆಂದೂ, ಅವರಿಗದನ್ನು ಮುಟ್ಟಲೂ ಕೊಡುವವನಲ್ಲವೆಂದೂ, ಬೇಕಿದ್ದರೆ ಇಂದ್ರನೇ ಬಂದು ತಕ್ಷಣ ಒಯ್ಯಬಹುದೆಂದೂ ಸೂಚಿಸಿದನು. ಇದರಿಂದ ಸಂತುಷ್ಟನಾದ ಇಂದ್ರನು ಗರುಡನ ಇಷ್ಟದಂತೆ ಕದ್ರುಪುತ್ರರಾದ ಸರ್ಪಗಳೇ ಅವನ ಆಹಾರವಾಗಲಿ ಎಂದು ವರವಿತ್ತನು. (೨೧-೪೧)

ಅಲ್ಲಿಂದ ಭೂಮಿಗಿಳಿದ ಗರುಡನು ತಾಯಿಯ ಪಾದಕ್ಕೆರಗಿ ಅಮೃತವನ್ನು ತಂದುದನ್ನು ಬಿನ್ನವಿಸಿದನು. ಅವಳ ಹರಕೆಯನ್ನು ಕೈಕೊಂಡು ಕದ್ರುವಿನ ಮಕ್ಕಳನ್ನು ಕರೆದು “ಇದೋ, ಅಮೃತವನ್ನು ತಂದಿದ್ದೇನೆ, ದರ್ಭೆಯ ಹಾಸಿನ ಮೇಲೆ ಈ ಕಲಶವನ್ನೇರಿಸಿರುತ್ತೇನೆ. ಶುಚಿಯಿಲ್ಲದವರು ಇದನ್ನು ಮುಟ್ಟಕೂಡದು. ನೀವೆಲ್ಲರೂ ಯೋಗ್ಯ ರೀತಿಯಲ್ಲಿ ಸ್ನಾನಗೈದು ಬಂದು ಕೊಳ್ಳಿರಿ” ಎಂದು ಹೇಳಿದನು. ಅಲ್ಲದೆ, “ಈಗಲಾದರೂ ನನ್ನ ತಾಯಿ ನಿಮ್ಮ ದಾಸಿಯಲ್ಲವೆಂದು ಒಪ್ಪಿಕೊಳ್ಳುವಿರಷ್ಟೇ?” ಎಂದು ಕೇಳಿದನು. ಅಮೃತ ಕೈ ಸೇರುವ ಉತ್ಸಾಹದಲ್ಲಿ ಪನ್ನಗರೆಲ್ಲ “ಅಲ್ಲ, ಖಂಡಿತ ಅಲ್ಲ” ಎಂದು ಉತ್ತಿರಿಸಿದವರೇ ಸ್ನಾನಕ್ಕೆಂದು ಆತುರದಿಂದ ಅತ್ತ ನದಿಯೆಡೆಗೆ ಸಾಗಿದರು. ಇತ್ತ ಇಂದ್ರನು ಬಂದು ಅಮೃತವನ್ನು ಕೊಂಡೊಯ್ದು ಬಿಟ್ಟನು. ಮಿಂದು ಮಡಿಯುಟ್ಟು ನಾಗರುಗಳೆಲ್ಲ ನಾಮುಂದು ತಾಮುಂದು ಎಂದು ಧಾವಿಸಿ ಬಂದರು. ಆದರೆ ಅಮೃತಕಲಶವು ಅದೃಶ್ಯವಾಗಿತ್ತು. ಕಕ್ಕಾಬಿಕ್ಕಿಯಾದ ಅವರು ಅಮೃತದ ಹನಿ ಸಿಡಿದಿರಬಹುದೆಂದು ದರ್ಭೆಯನ್ನೇ ನೆಕ್ಕಿದರು. ಅವರ ನಾಲಗೆಗಳೆಲ್ಲ ಎರಡು ಸೀಳಾದುದೇ ಫಲವಾಯಿತು. ಅಂದರೂ ವೈನತೇಯನ ಪ್ರತಾಪವನ್ನು ಮನಗಂಡಿದ್ದರಿಂದ ಅವರಿಂದ ವಿನತೆಯ ಬಿಡುಗಡೆ ಮಾತ್ರ ಪೂರ್ತಿ ಸಾಧ್ಯವಾಯಿತು. ತನ್ನ ಮನೋರಥವನ್ನು ನೆರವೇರಿಸಿಕೊಟ್ಟ ಮಗನನ್ನು ವಿನತೆಯು ಪುಳಕಿತಳಾಗಿ ತಬ್ಬಿಕೊಂಡಳು. (೪೨-೫೩)

ಸಂಧಿ ೭ : ಗರುಡನ ಈ ಪರಿಯ ಪ್ರಭಾವದ ಮೂಲ ಕಾರಣವಾದ ಪೂರ್ವಕಥೆ ಇಂತಿದೆ. ಕಶ್ಯಪ ಮುನಿಯು ಒಂದು ಯಾಗವನ್ನು ಕೈಗೊಂಡು ಆ ನಿಮಿತ್ತ ಸಮಿಧೆ-ದರ್ಭೆಗಳನ್ನು ತರಬೇಕೆಂದು ಇಂದ್ರನಿಗೂ, ವಾಲಖಿಲ್ಯ (ಅಂಗುಷ್ಟ ಮಾತ್ರ ಶರೀರರು = ಹೆಬ್ಬೆರಳಿನ ನಡುವೆ ಇರುವ ರೇಖೆಯಷ್ತು ಕುಳ್ಳಾದ ದೇಹವುಳ್ಳವರು) ಋಷಿಗಳಿಗೂ ಬೆಸಸಿದರು. ಅದರಂಟೆ ಅವರೆಲ್ಲರೂ ಹೊರೆಕಟ್ಟಿ ಹೊತ್ತು ತರುವಾಗ ಕೃಶವೂ, ಸೂಕ್ಷ್ಮವೂ ಆದ ದೇಹಗಳ ಮೂಲಕ ಆ ಮುನಿಗಳು ಕೊಳಚೆ ನೀರಲ್ಲಿ ಬೀಳುತ್ತೇಳುತ್ತ ಬರುವುದನ್ನು ಕಂಡ ಇಂದ್ರನು ನಕ್ಕು ಬಿಟ್ಟನು. ಅಲ್ಲದೆ ಅಧಿಕ ಗರ್ವದಲ್ಲಿ ಅವರ ತಲೆಯ ಮೇಲಿನಿಂದಲೇ ಹಾಯ್ದು ನಡೆದನು. ಅವನ ಈ ಧಾರ್ಷ್ಟ್ಯವನ್ನು ಕಂಡು ಅಪಮಾನಿತರಾದ ಮುನಿಗಳು ಈ ದುರ್ಬಲದೇಹಿಗಳ ಸಾಮರ್ಥ್ಯ, ಬಲವನ್ನು ತೋರುವುದೆಂದು ಗರ್ಜಿಸಿದರು. “ಇಂದ್ರಪದವಿಯ ಸೊಕ್ಕು ಇವನ ತಲೆಗೇರಿದೆ. ಇವನಿಗೆ ಪ್ರತಿಯಾದ ಇನ್ನೊಬ್ಬ ಇಂದ್ರನನ್ನು ಸೃಷ್ಟಿಸಿ ಇವನಿಗೆ ಬುದ್ದಿ ಕಲಿಸಾಬೇಕು” ಎಂದು ನಿರ್ಣಯಿಸಿದರು. ಅದಕ್ಕಾಗಿ ಬೇರೊಂದು ಯಜ್ಞವನ್ನೇ ಪ್ರಾರಂಭಿಸಿದರು. ಕಶ್ಯಪರು ಬಂದು ವಿಷಯಗಳೆಲ್ಲವನರಿತು, “ಲೋಕಪೂಜ್ಯರು ನೀವು, ವಿಗತವಿವೇಕದಲ್ಲಿ ವಿರೋಧ ನಿಮಗೇಕೆ?” ಎಂದು ತಿಳಿಹೇಳಿದರು. ಅದಕ್ಕವರು ಒಡಂಬಟ್ಟು ತಮ್ಮ ಸಂಕಲ್ಪದಂತೆ ಸುರಪತಿಯ ಗರ್ವವನ್ನು ಖಂಡಿಸುವ ಅರಿಭೇದನೈಕ ಸಮರ್ಥನಾದ ಮಗನೊಬ್ಬನು ನಿಮಗೆಯೇ ಹುಟ್ಟಲಿ ಎಂದರು. ಹಾಗಾದರೆ, ಇಂದ್ರನನ್ನು ಪರಿಭವಿಸಿದ ಮೇಲೆಯಾದರೂ ಅವನೊಡನೆ ಆತನು ಸಖ್ಯವನ್ನು ಪಡೆಯುವಂತೆ ನಡೆಸಿಕೊಡಿ ಎಂದು ಕಶ್ಯಪರು ಅವರನ್ನು ಬೇಡಿಕೊಂಡರು. ಇಂದ್ರನಿಗೂ ಬುದ್ಧಿ ಹೇಳಿದರು. (೧-೨೫)

ಹೀಗೆ ಮಹಾತಾಪಸರ ವೀರತಪವೇ ಆಕಾರಪಡೆದಂತೆ ಗರುಡನು ಜನಿಸಿದನು, ಪಕ್ಷೀಂದ್ರಪಟ್ಟವನ್ನು ಅಭಿಷೇಕ ಮೂಲಕವಾಗಿ ಅವನಿಗೆ ಕಟ್ಟಲಾಯಿತು. ಈ ಹಿಂದೆ ಅವನಿಗೂ ಸುರೇಂದ್ರನಿಗೂ ವರಸುಖ್ಯವು ಸವನಿಸಿತು. (೨೬-೩೦).

ಸಂಧಿ ೮ : ಇತ್ತ ತಾಯಶಾಪದಿಂದ ಮರಣಭಯಾತುರರಾದ ಕದ್ರುವಿನ ಮಕ್ಕಳಲ್ಲಿ ಪ್ರಮುಖನಾದ ಶೇಷನು ವಿಶೇಷವಾಗಿ ನೊಂದುಕೊಂಡನು. ತನ್ನ ತಾಯಿಯ ಹಾಗೂ ಬಂಧುಗಳ ವರ್ತನೆ ಸರಿತೋರದ್ದಕ್ಕೆ ಅವನು ಅವರು ಸಂಗವನ್ನೇ ಬಿಟ್ಟು ತಪಸ್ಸಿನ ದಾರಿಹಿಡಿದನು. ತೀರ್ಥಾಟನೆಗಳನ್ನೆಲ್ಲ ಪೂರೈಸಿದನು. ಕೊನೆಯಲ್ಲಿ ಹಿಮಗಿರಿಯ ತಪ್ಪಲಿನಲ್ಲಿ ಪುಷ್ಕರಾರಣ್ಯದಲ್ಲಿ ನಿಂತು ತಪವನ್ನು ಗೈಯುತ್ತ ಕೃಶಾಂಗನಾದನು. (೧-೧೨)

ಅವನ ಈ ಅವಸ್ಥೆಯನ್ನು ಕಂಡ ಬ್ರಹ್ಮನು ತಾನೇ ಬಂದು ಪ್ರತ್ಯಕ್ಷನಾದನು. ಶೇಷನು ತಂದೆ ರಕ್ಷಿಸೆನ್ನುತ ಅವನ ಚರಣಕ್ಕೆರಗಿದನು. ಬ್ರಹ್ಮನು ಅವನ ಮೈದಡಹಿ ತಪದ ಕಾರಣವನ್ನು ಕೇಳಿದನು. ಅದಕ್ಕೆ ಶೇಷನು, “ನಾನು ನನ್ನ ಬಂಧುಗಳ ಪಾಪಾಚಾರಕ್ಕೆ ಹೇಸಿ ಅವರ ಸಂಸರ್ಗವನ್ನೇ ಬಿಸುಟೆನು. ಮತ್ತು ಸದ್ಗತಿಯ ಆಸೆಯಿಂದ ತಪವನ್ನು ಕೈಕೊಂಡೂ ಸಾಯಲಿಚ್ಚಿಸಿದನು. ನೀನು ನನಗೆ ಸತ್ಸಂಗ ಸದ್ಧರ್ಮವನ್ನು ಮಾಡುವ ಪುಣ್ಯವನ್ನು ಕರುಣಿಸು” ಎಂದು ಬೇಡಿಕೊಂಡನು.  ಅವನ ಅಮಳ ಚಾರಿತ್ರ್ಯಕ್ಕೆ ಮೆಚ್ಚಿದ ಬ್ರಹ್ಮನು, “ವೃಥಾ ಮರಣದಿಂದ ಪ್ರಯೋಜನವಿಲ್ಲ, ತಾಯಶಾಪವು ದುಷ್ಟರನ್ನು ಬಾಧಿಸುವುದೇ ಹೊರತು ನಿನ್ನಂಥವರನ್ನಲ್ಲವೆಂಬುದನ್ನು ತಿಳಿದು ಧೈರ್ಯದಿಂದಿರು. ಈಗ ನನ್ನಿಂದ ಬೇಕಾದ ವರವನ್ನು ಕೇಳಿಕೊ” ಎಂದನು. ಅದಕ್ಕೆ ಶೇಷನು ’ಧರ್ಮದಲಿ ದಯೆಯಲಿ ಕೂಡೆ ಮತಿಯನು ಕರುಣಿಸುವುದು’ ಎಂದು ಭಿನ್ನವಿಸಿದನು. ಆ ಮಾತು ಬ್ರಹ್ಮನ ಮನವನ್ನು ಗೆದ್ದಿತು. ವರವನ್ನು ಕೂಡಲೇ ಕರುಣಿಸಿದ ದೇವನು ತನ್ನ ಇನ್ನೊಂದು ಮಾತನ್ನು ನಡೆಸಬೇಕೆಂದನು. ಅದೆಂದರೆ, ಇಡಿಯ ಭೂಮಿಯನ್ನೇ ತಲೆಯಲ್ಲಿ ಸ್ಥಿರವಾಗಿ ಹೊತ್ತು ನಿಲ್ಲುವುದ್. ಅದಕ್ಕೆ ತಕ್ಕ ಸಾಮರ್ಥ್ಯವನ್ನೂ ಅಮರತ್ವವನ್ನೂ ತಾನು ದಯಪಾಲಿಸುವೆನೆಂದಾಗ ಸಾಹಸಿಯೂ, ವಿನಯಿಯೂ ಆದ ಶೇಷನು ಬ್ರಹ್ಮನ ಆಜ್ಞೆಯನ್ನು ಶಿರಸಾ ಹೊತ್ತಂತೆ ನಿಜಯೋಗಶಕ್ತಿಯ ಬಲದಿಂದ ಧರೆಯನ್ನು ಶಿರದಲ್ಲಿ ಧರಿಸಿ ನಿಂತನು. (೧೩-೩೮)

ಸಂಧಿ ೯ : ಶೇಷನ ತರುವಾಯ ಉರಗಪ್ತಿಯಾದ ವಾಸುಕಿಯು ತಮ್ಮ ಕುಲಸಂಕ್ಷಯವನ್ನು ತಪ್ಪಿಸುವ ಪರಿಯೆಂತೆಂದು ಆಲೋಚಿಸಲು ಮಂತ್ರಿಗಲ ಸಭೆಯೊಂದನ್ನು ನೆರಹಿದನು. ಆಗ ಅವರಲ್ಲಿ ಒಬ್ಬೊಬ್ಬರು ಒಂದೊಂದು ತೆರನಾಗಿ ಅಭಿಪ್ರಾಯವನ್ನು ಮಂಡಿಸಿದರು. ಕೆಲವು ತಾವು ವಿಪ್ರವೇಷದಲ್ಲಿ ಹೋಗಿ ಜನಮೇಜಯರಾಜನಿಗೆ ಯಜ್ಞವನ್ನು ಕೈಕೊಳ್ಳಲೇಬೇಡವೆಂದು ಸೂಚಿಸೋಣವೆಂದರೆ, ಇನ್ನು ಕೆಲವರು ತಾವು ವೇಷ ಮರೆಸಿ ಹೋಗಿ ಯಜ್ಞದ ಕಾಲಕ್ಕೆ ಕೂಡಿದ ವಿಪ್ರರನ್ನೆಲ್ಲ ಕಚ್ಚಿ ಮುಗಿಸೋಣ ಎಂದು ಸಲಹೆಯಿತ್ತರು. ಆದರೆ ವಿಪ್ರವಧೆ ಸಲ್ಲದೆಂದುದಕ್ಕೆ, ಮತ್ತೆ ಕೆಲವರು “ಲಲನೆಯಿಲ್ಲದೆ ಮಾಡಲಾಗದು ಯಜ್ಞ ಕರ್ಮವನು”  ಎಂದಿರುವುದರಿಂದ ಯಜಮಾನಿಯನ್ನೇ ಕೊಂಟುಬಿಟ್ಟರಾಯಿತು ಎಂದು ಸೂಚಿಸಿದರು. ಇನ್ನೂ ಕೆಲವರು ಋತ್ವಿಜರಂತೆ ತೋರಿ ದಕ್ಷಿಣೆಯ ರೂಪದಲ್ಲಿ ಅಧ್ವರ ಕರ್ಮವನ್ನೇ ಕೈಬಿಡೆಂದು ಕೇಳಬೇಕು. ಅಥವಾ ಯಜ್ಞಮಂಟಪವನ್ನು ಹೊಕ್ಕು ಹೇಗಾದರೂ ಅಪವಿತ್ರತೆಯನ್ನುಂಟು ಮಾಡಬೇಕು. ಹಾಗಲ್ಲದಿದ್ದರೆ, ಜನಮೇಜಯ ನೃಪನನ್ನೇ ಕೊಲ್ಲಬೇಕು. ಹೀಗೆಲ್ಲ ಹಲವರು ಹಲವು ರೀತಿಯಲ್ಲಿ ಒದರಿದರು. ಲೋಕನೀತಿಗೆ ಯೋಗ್ಯವಲ್ಲದ ಇವಾವ ಸಲಹೆಗಳೂ ವಾಸುಕಿಗೆ ಹಿಡಿಸಲಿಲ್ಲ. ಪಾತಕದ ವಿಚಾರ ಬಿಟ್ಟು ನಿರ್ಮಲ ಚಿತ್ರದಿಂದ ಮಾಡುವ ಸೂಚನೆಗಳನ್ನು ಮಾತ್ರ ಸ್ವಾಗತಿಸುವೆನೆಂದಾಗ ಏಲಾಪುತ್ರನೆಂಬವನು ಎದ್ದು ತಾನು ಬಾಲ್ಯದಲ್ಲಿ ತಾಯ ತೊಡೆಯನೇರಿ ಕುಳಿತಿದ್ದಾಗ ಕೇಳಿದ ವಿಷಯವನ್ನು ತಿಳಿಸಿದನು. (೧-೧೮)

“ಹಿಂದೆ ಸರ್ಪಗಳಿಂದ ಪಿಡಿತರಾದ ಲೋಕದ ಜನರೂ, ಸುರರೂ ಬ್ರಹ್ಮನಲ್ಲಿ ಹೋಗಿ ಮೊರೆಯಿಟ್ಟರು. ಆಗ ಬ್ರಹ್ಮನು, “ಪಂಡವರ ಕುಲದಲ್ಲಿ ಜನಮೇಜಯನೊಬ್ಬ ಅರಸನು ಹುಟ್ಟೂವನು. ಅವನು ತನ್ನ ತಂದೆಯನ್ನು ಕೊಂದ ತಕ್ಷಕನ ಮೇಲಿನ ವೈರದಿಂದಾಗಿ ಸರ್ಪಕುಲವನ್ನೇ ನಾಶಮಾಡಲು ಯಾಗವನ್ನು ಕೈಗೊಳ್ಳುವನು. ಅದರಲ್ಲಿ ದುಷ್ಟ ಸರ್ಪಗಳೆಲ್ಲ ಅಳಿದು, ಶಿಷ್ಟರು ಮಾತ್ರ ಉಳಿದೇ ಉಳಿಯುವರು. ಯಾಯಾವರ (=ನಿಂತಲ್ಲಿ ನಿಲ್ಲದೆ ಯಾವಾಗಲೂ ಸಂಚರಿಸುತ್ತರುವ ಋಷಿಕುಲ) ರಲ್ಲಿ ಉತ್ತಮನೆನಿಸುವ ಜರತ್ಕಾರುವಿಗೆ ಆಸ್ತೀಕನೆಂಬ ಮಗನು ಹುಟ್ಟುವನು. ಅವನೇ ಆ ಯಾಗವನ್ನು ನಿಲ್ಲಿಸುವನು. ಆದ ಕಾರಣ ನೀವಂಜದಿರಿ” ಎಂದು ಅವರ ಮನದ ಆತಂಕವನ್ನು ಪರಿಹರಿಸಿದನು. (೧೯-೨೪)

ಆ ಜರತ್ಕಾರುವು ಮದುವೆ ಮನಸ್ಸು ಮಾಡದೆ ತೀವ್ರ ವೈರಾಗ್ಯದಿಂದೊಡಗೂಡಿ ಅಡವಿಯಲ್ಲಿ ಸಂಚರಿಸುತ್ತಿರುವಾಗ ಒಮ್ಮೆ ಬಾವಿಯೊಂದರಲ್ಲಿ ಇಲಿ ಕಡಿದ ಹಳಬಳ್ಳಿಯನ್ನು ಹಿಡಿದು ತಲೆಕೆಳಗಾಗಿ ಜೋಲುತ್ತಿದ್ದ ಪಿತೃವರ್ಗವನ್ನು ಕಂಡನು. ಅವರನ್ನು ವಿಚಾರಿಸಲು, ತಾನು ಕೈಗೊಂಡ ವೈರಾಗ್ಯವೇ ಸಂತಾನಹೀನರಾದ ಅವರ ದುಃಸ್ಥಿತಿಗೆ ಕಾರಣವೆಂಬುದನ್ನರಿತನು. ಆಗ ಪಿತೃಗಳ ಮೇಲಿನ ಗೌರವದಿಂದ ಅವರ ಉದ್ಧಾರಕ್ಕೆ ಮನನೊಂದ ಅವನು, ತನಗೆ ಹೆಂಡತಿಯಾಗುವವಳು ತನ್ನ ಹೆಸರಿನವಳೇ ಆಗಿರಬೇಕು, ಅವಳು ತನಗೆ ತುಸು ಅಪ್ರಿಯವಾಗಿ ನಡೆದರೂ ನಾನವಳನ್ನು ತ್ಯಜಿಸುವೆನೆಂಬ ಸಮಯಕ್ಕೊಳಪಟ್ಟು ಮದುವೆಯಾಗುವೆನೆಂದು ಭರವಸೆ ಕೊಟ್ಟನು. ಅದರಂತೆ ಜರತ್ಕಾರುವು ತನ್ನ ಹೆಸರಿನ ಸತಿಯನ್ನರಿಸಿ ದೇಶದೇಶಾಂತರಗಳನ್ನು ಈಗ ಸುತ್ತುತ್ತಿದ್ದಾನೆ. ನಿನ್ನ ತಂಗಿಯನ್ನು ಅವನೀಗಿಯುವುದರಿಂದಲೇ ನಮ್ಮೆಲ್ಲರ ಕಲ್ಯಾಣ ಸಾಧ್ಯವಾಗುವುದು. (೨೫-೨೯)

ಇದನ್ನು ಕೇಳಿ ವಾಸುಕಿಗೆ ಬಹಳ ಸಂತೋಷವಾಯಿತು. ಜರತ್ಕಾರು ಮುನಿಯನ್ನು ಕಂಡು ಹಿಡಿದು ವಾಸುಕಿಯ ತಂಗಿ ಜರತ್ಕಾರುವಿಗೂ ಅವನಿಗೂ ವಿವಾಹ ಮಾಡಿದರು. ಅವರಿಬ್ಬರೂ ಸುಖದಿಂದಿರುತ್ತ ಜರತ್ಕಾರು ಗರ್ಭವತಿಯೂ ಆದಳು. ಹೀಗಿರುವಾಗ ಒಂದು ದಿನ ನಿರ್ವಿಣ್ಣನಾಗಿದ್ದ ಮುನಿಯು ಹೆಂಡತಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದನು. ಅಷ್ಟರಲ್ಲಿ ಸೂರ್ಯ ಮುಳುಗುವ ಹೊತ್ತಾಯಿತು. ಮುನಿಯು ಇನ್ನೂ ಕಣ್ದೆರೆಯದ್ದರಿಂದ ಅವಳು ಸಂಧ್ಯಾವಂದನೆಗೆ ಲೋಪ ಬರಬಹುದೆಂದು ಅನುಮಾನಿಸುತ್ತಲೇ ಪತಿಯನ್ನು ಮಧುರಾಳಾಪದಿಂದ ತಟ್ಟಿ ಎಬ್ಬಿಸಿದಳು. ಆದರೂ ತಕ್ಷಣ ಮುನಿಯು ’ಕೋಪವೇ ತನುಗೊಂಡು ಎದ್ದಂತೆ’ ಎದ್ದು, ತನಗೆ ವಿಪ್ರಿಯವನ್ನು ಮಾಡಿದ್ದರಿಂದ ನಿನ್ನೊಡನೆ ನಾನಿರಲಾರೆನೆಂದು ಹೊರಟು ನಿಂತನು. ತಾನು ತಪ್ಪಿ ನಡೆಯುವಳಲ್ಲ, ಧರ್ಮಲೋಪದ ಕಟ್ಟಿನ ಕಾರಣದಿಂದ ಎಚ್ಚರಿಸಿದೆನೆಂದು ಅವಳು ಬಿನ್ನವಿಸಿದಳು. ಏನಿದ್ದರೂ, ತನ್ನ ಸಾಮರ್ಥ್ಯವನ್ನು ಅರಿಯದೆ ದುಡುಕಿದುದಕ್ಕೆ ತಾನು ಅವಳನ್ನು ಬಿಟ್ಟು ಹೋಗುವುದೇ ಖಂಡಿತವೆಂದು ಮುನಿಯು ಸಾರಿಬಿಟ್ಟನು. ಆಗ ತನ್ನ ಹಾಗೂ ಅಣ್ಣನ ಮನೋರಥದ ಗತಿಯೇನು ಎಂದು ಕೇಳುತ್ತ ಅವಳು ಕಂಬನಿದುಂಬಿ ಅವನ ಕಾಳಿಗೆ ಬಿದ್ದು ಹೊರಳಿದಳು. ಇದರಿಂದ ಮೃದುವಾದ ಮುನಿಯು ಅಗ್ನಿ ತೇಜದ ಮಗನನ್ನು ತಾನಾಗಲೇ ದಯಪಾಲಿಸಿರುವುದಾಗಿಯೂ ಸರ್ಪಕುಲವನ್ನು ಅವನೇ ಉಳಿಸುವನಾದ್ದರಿಂದ ಶೋಕವನ್ನು ಬಿಡಬೇಕೆಂದೂ ಅವಳನ್ನು ಸಂತೈಸಿ ತಪೋವನಕ್ಕೆ ಹೊರಟು ಹೋದನು. (೩೦-೪೧)

ಅಲ್ಲಿಂದ ಗರ್ಭಿಣಿಯಾದ ಜರತ್ಕಾರು ಅಣ್ಣ ವಾಸುಕಿಯಲ್ಲಿಗೆ ನಡೆದಳು. ತಂಗಿಯ ದುಗುಡಹೊತ್ತ ಮೋರೆಯನ್ನು ಕಂಡು ವಾಸುಕಿಗೆ ತಳಮಳವಾಯಿತು. ಜೊತೆಗೆ ಸರ್ಪಕುಲವನ್ನು ಉಳಿಸುವ ತನ್ನ ಮನೋರಥ ಕೆಟ್ಟು ಹೋಯಿತೋ ಎಂದು ಆತಂಕವೂ ಆಯಿತು. “ನಿನ್ನ ಗರ್ಭದಲ್ಲಿ ಇರುವುದು ಗಂಡೋ ಹೆಣ್ಣೋ” ಎಂದು ಕೇಳದೆ ಉಳಿಯಲಾಗದಷ್ಟು ಆತುರವಾಯಿತು .ಅವನಿಗೆ ಮುನಿವಚನದಂತೆ ’ಗಂಡಳಿಯ’ನೇ ಹುಟ್ಟುವನೆಂಬುದನ್ನು ತಂಗಿಯ ಬಾಯಿಂದ ಕೇಳಿದಾಗಲೇ ಸಂತಾಪವು ದೂರವಾಯಿತು. ಜರತ್ಕಾರವು ಯಥಾಕಾಲಕ್ಕೆ ಅಗ್ನಿಯಂತೆ ತೇಜೋವಂತನಾದ ಪುತ್ರನನ್ನು ಹಡೆದಳು. ತನ್ನ ಗತಿಯೇನು ಎಂದು ಆಕೆ ಪತಿಯೊಡನೆ ವಿಚಾರಿಸಿದಾಗ ಆತನು ಜರತ್ಕಾರುವಿಗೆ ’ಆಸ್ತಿ’ಎ ಎಂದು ನುಡಿದದ್ದರಿಂದ ಮಗನಿಗೆ ಆಸ್ತೀಕನೆಂದು ನಾಮಕರಣವಾಯಿತು. ತನ್ನ ಮಾವನ ಮನೆಯಲ್ಲಿಯೇ ಅವನು ಬೆಳೆದು ಚ್ಯವನಋಷಿಯಲ್ಲಿ ವ್ಯಾಸಂಗ ನಡೆಸಿ ಅಖಿಲ ವಿದ್ಯೆಗಳಲ್ಲಿ ಪಾರಂಗತನಾದನು. (೪೨-೪೭)

ಸಂಧಿ ೧೦ : ಜನಮೇಜಯ ರಾಜನು ಒಂದು ದಿನ ಮಂತ್ರಿಗಳ ಸಮೇತ ಕುಳಿತಿದ್ದಾಗ “ನನ್ನ ತಂದೆ ಪರೀಕ್ಷಿದ್ರಾಜರು ನನ್ನ ಬಾಲ್ಯದಲ್ಲಿಯೇ ಮಡಿದರು. ಅವರನ್ನು ತಕ್ಷಕನು ಕೊಂದನೆನ್ನುತ್ತಾರೆ. ಆ ಸರ್ಪನಿಗೆ ನನ್ನ ತಂದೆಯ ಮೇಲೆ ಏಕೆ ಹಗೆಯುಂಟಾಯಿತುಎ ಎಂಬುದನ್ನು ತಿಳಿಸಿ” ಎಂದು ಕೇಳಿಕೊಂಡನು. ಅದಕ್ಕೆ ಅವರು ಆ ವೃತ್ತಾಂತ ಸಂಗತಿಯನ್ನೆಲ್ಲ ಅರುಹಿದರು. (೧-೫)

ಪರೀಕ್ಷಿತ್‌ರಾಜನು ಒಮ್ಮೆ ಬೇಟೆಗೆಂದು ಹೋದಾಗ ಮಿಗವೊಂದನ್ನು ಬೆನ್ನಟಿ ಶಮೀಕನೆಂಬ ಋಷಿಯ ಆಶ್ರಮವನ್ನು ಹೊಕ್ಕನು. ಮಿಗವೊಂದು ಇತ್ತ ಹೋದುದೇನಾದರೂ ನೋಡಿದಿರಾ ಎಂದು ಋಷಿಯನ್ನು ಕುರಿತು ವಿಚಾರಿಸಲು ಯೋಗ ಸಮಾಧಿಯಲ್ಲಿದ್ದ ಋಷಿಯಿಂದ ಯಾವ ಉತ್ತರವೂ ಬರಲಿಲ್ಲ. ಹಸಿವು ತೃಷೆಗಳಿಂದ ಬೇಸತ್ತಿದ್ದ ರಾಜನಿಗೆ ಕೋಪವೇರಿ ಹಾವೊಂದನ್ನು ಕೊಂದು ಆ ಋಷಿಯ ಕೊರಳಿಗೆ ಸುತ್ತಿ ಹಾಕಿ ರಾಜಧಾನಿಗೆ ಮರಳಿದನು. ಜನಕನಿಗಾದ ಈ ಅವಸ್ಥೆಯನ್ನು ಕಂಡು ಕೋಪಗೊಂಡ ಅವನ ಮಗ ಶೃಂಗಿಯು ಮದಯುತನಾದ ರಾಜನನ್ನು ಇಂದಿನಿಂದ ಏಳನೆಯ ದಿನದೊಳಗಾಗಿ ತನ್ನ ತಂದೆಗೆ ಹೇಳಲು ಶಮೀಕನು ಮರುಗಿ ಮಗನಿಗೆ ಬಯ್ದುದಲ್ಲದೆ, ಖಗನೆಂಬ ತನ್ನ ಶಿಷ್ಯನನ್ನು ನಾವೆಲ್ಲ ಬೆದರಿದೆವು. ತಕ್ಷಣ ದೊರೆಯನ್ನು ತಕ್ಷಕನ ಕೈಯಿಂದ ಉಳಿಸಲು ಉಪಾಯವನ್ನು ಯೋಚಿಸಿದೆವು. ಗಂಗಾ ನದಿಯ ನಡುವೆ ಕಂಬವೊಂದನ್ನು ನೆಟ್ಟು ಅದರ ಮೇಲೊಂದು ಮನೆಯನ್ನು ಕಟ್ಟಿ ತಕ್ಷಕನು ಹೇಗೂ ಅಲ್ಲಿ ಬಂದು ಸೇರುವಂತೆ ಭದ್ರವಾದ ಕಾವಲನ್ನು ಏರ್ಪಡಿಸಿದ್ದೆವು. ಮಂತ್ರಿಗಳು ಮಾತ್ರ ದೊರೆಯೊಟ್ಟಿಗೆ ಅಲ್ಲಿರುತ್ತಿದ್ದರು. ಹೀಗಿರುವಾಗ ಏಳನೆಯ ದಿನ ಬಂದಿತು. ಅಂದಿನ ಕಥೆಯನ್ನು ಕೇಳುವಂಟಿದೆ. (೬-೧೨)

ಏಳು ದಿನಗಳೊಳಗೆ ತಕ್ಷಕನು ದೊರೆಯನ್ನು ಕೊಲ್ಲುವೆನೆಂಬ ವಾರ್ತೆಯನ್ನು ಕೇಳಿದ ಕಾಶ್ಯಪನೆಂಬೊಬ್ಬ ಬ್ರಾಹ್ಮಣನು ಆಸೆಯೊಂದಿಟ್ಟುಕೊಂಡು ಪರೀಕ್ಷಿತ್ರನಲ್ಲಿಗೆ ಬರುತ್ತಿದ್ದನು. ದುಷ್ಟ ತಕ್ಷಕನು ಅವನನ್ನು ಕಂಡು ಪಯಣವೆತ್ತ ಎಂದು ವಿಚಾರಿಸಿದನು. ಅದಕ್ಕೆ ಅವನು “ಜನಪ್ರಿಯನಾದ ಪರೀಕ್ಷಿದ್ರಾಜನಿಗೆ ತಕ್ಷಕನೆಂಬುವನಿಂದ ಆಪತ್ತು ಕಾದಿದೆಯಂತೆ. ಅವನ ವಿಷಯೋಗದಿಂದ ಸತ್ತ ದೊರೆಯನ್ನು ನಾನು ಮಂತ್ರಬಲದಿಂದ ಕೂಡಲೇ ಬದುಕಿಸಲೆಂದು ಬಂದಿದೇನೆ” ಎಂದನು. ತಕ್ಷಕನು “ಅದು ನಿನ್ನಿಂದಾಗದ ಕೆಲಸವು, ಅಲ್ಲದೆ ದೊರೆಯನ್ನು ಉಳಿಸುವುದರಿಂದ ನಿನಗಾವ ಪ್ರಯೋಜನವೂ ಇಲ್ಲವಾದ್ದರಿಂದ ಬರಿಯ ಅಪಮಾನವನ್ನನುಭವಿಸುಬೇಕಾಗುವುದು. ಅದಕ್ಕಿಂತ ಸುಮ್ಮನೇ ಮನೆಗೆ ಮರಳುವುದೇ ಲೇಸು” ಎಂದು ಅವನನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದನು. ಆದರೆ ವಿಪ್ರನು ಸಾಮರ್ಥ್ಯವನ್ನು ಹೊಗಳಿಕೊಂಡು, ತನ್ನ ಕಾರ್ಯದಲ್ಲಿ ಅಡ್ಡ ಬರಬೇಡೆಂದು ಕೇಳಿಕೊಂಡನು. ಅದಕ್ಕೆ ಉತ್ತರರೂಪವಾಗಿ ವಿಪ್ರನೂ ತನ್ನ ಸಿದ್ಧಿಯನ್ನು ಕಂಡು ತಿಳಿಯಬಹುದೆಂದನು. ಇದೇ ಹೊತ್ತೆಂದು ತಕ್ಷಕನು ಅದರ ಪರೀಕ್ಷೆಗೆಂದು ಅವನನ್ನು ಕೆಣಕಿ, ಹತ್ತಿರದ ಮಹಾಮರವೊಂದನ್ನು ಮುಟ್ಟಿ ಭಸ್ಮೀಭೂತವಾಗಿಸಿದನು ಮತ್ತು “ನಿನ್ನಲ್ಲಿ ಸಾಮರ್ಥ್ಯವಿದ್ದರೆ ಅದನ್ನು ಚೇತರಿಸು” ಎಂದನು. ವಿಪ್ರನು ಮಂತ್ರದೃಷ್ಟಿಯಿಂದ ನೋಡಿದ್ದೇ ತಡ, ಹೊನ್ನಬಣ್ಣದ ಮರ ಮುನ್ನಿನಂತೆ ಕಂಗೊಳಿಸಿತ್ತು. ಇದರಿಂದ ತನ್ನ ಉದ್ದೇಶ ವಿಫಲವಾಗುವುದೆಂದು ಖಿನ್ನನಾದ ತಕ್ಷಕನು ಹೇಗಾದರೂ ಮಾಡಿ ಇವನನ್ನು ಸಾಗಿಹಾಕಲೇ ಬೇಕೆಂದು ನಿಶ್ಚಯಿಸಿದನು. ಅದೇ ಹವಣಿಕೆಯಿಂದ ನಿನ್ನ ಅಪೇಕ್ಷೆಯೇನು ? ಈಗ ಹೊರಟಿರುವ ಕಾರಣವಾವುದು ? ದೊರೆಯಿಂದ ನೀನಾವ ವಿಶಿಷ್ಟ ಪ್ರಯೋಜನವನ್ನು ಬಯಸಿರುವೆ? ಎಂದೆಲ್ಲ ಪ್ರಶ್ನೆಗಳ ಮಳೆ ಸುರಿದನು. ಪರಹಿತವೂ ಸಾಧಿಸಬೇಕು, ಧನಹೀನನಾದ ತನಗೆ ಅನುಕೂಲವೂ ಆಗಬೇಕು ಎಂಬುದೇ ತನ್ನ ಉದ್ದೇಶವೆಂದ ವಿಪ್ರನಿಗೆ ತಾನೇ ಬೇಕಷ್ಟು ಧನವನ್ನು ಕೊಡುವೆನೆಂದನು. ಆದರೆ ಉಭಯಾರ್ಥವನ್ನೂ ಬಯಸಿದ ವಿಪ್ರನು ಕೂಡಲೇ ಒಪ್ಪದಿರಲು, ಪುನಃ “ವಿಪ್ರ ಶಾಪಕ್ಕೊಳಗಾದ ರಾಜನು ಈಗಾಗಲೇ ಆಯುಷ್ಯ ತೀರಿದವನಾದ್ದರಿಂದ ನೀನು ಅಪಕೀರ್ತಿಗೆ ಪಕ್ಕಾಗುವುದು ಖಂಡಿತ. ಅದರ ಬದಲು ನಾನು ಕೊಡುವ ಕೊಪ್ಪರಿಗೆ ಹಣವನ್ನು ತೆಗೆದುಕೊಂಡು ಮರಳು” ಎಂದು ಮರುಳಾಗಿಸಲು ಯತ್ನಿಸಿದನು. ಮುಗ್ಧ ವಿಪ್ರನು ಆ ಕುರಿತು ತನ್ನಲ್ಲಿಯೇ ವಿಚಾರಿಸಿ ಆ ಪರಿಸ್ಥಿತಿಯನ್ನು ತಕ್ಷಕನು ಕೊಟ್ಟ ಧನವನ್ನು ಕೊಂಡು ಮರಳಿಬಿಟ್ಟನು. ಹೀಗೆ ತಕ್ಷಕನ ಒಂದುಪಾಯವು ಗೆದ್ದಿತು. (೧೩-೨೬)

ಮುಂದೆ, ಮಂತ್ರಿಗಳಿಂದ ಮಂತ್ರವಾದಿಗಳಿಂದ ಸುತುವರಿಯಲ್ಪಟ್ಟ ರಾಜನನ್ನು ಕಾಣುವುದು ಹೇಗೆ, ಕೊಲ್ಲುವುದು ಹೇಗೆ ಎಂದು ಯೋಚಿಸಿದನು. ತನ್ನ ಜೊತೆಯವರನ್ನು ಕರೆದು, ನೀವೆಲ್ಲ ಭೂಸುರರ ವೇಷವನ್ನು ತೊಟ್ಟು ಮಹೀಶನಲ್ಲಿ ಸೇರಿ ಫಲ ಪುಷ್ಪಗಳನ್ನು ನೀಡಿ ಎಂದು ಕಳುಹಿದನು. ಅವರು ಒಯ್ದ ಹಣ್ಣುಗಳಲ್ಲೊಂದರಲ್ಲಿ ತಾನು ಸೂಕ್ಷ್ಮರೂಪದಲ್ಲಿ ಸೇರಿಕೊಂಡನು. ಭೂಸುರಾಕಾರದಲ್ಲಿ ಬಂದು ಅವರು ಕೊಟ್ಟ ಹಣ್ಣುಗಳಲ್ಲಿ ಘಮಘಮಿಸುವ ಉತ್ತಮ ಫಲವೊಂದನ್ನು ಅರಸನು ತಾನೇ ಇರಿಸಿಕೊಂಡೂ ಉಳಿದವನ್ನೆಲ್ಲ ಮಂತ್ರಿಗಳಿಗೆ ಹಂಚಿದನು. ಆ ಹಣ್ಣನ್ನು ಕೈಯಲ್ಲಿ ಹಿಡಿದು, “ಇನ್ನರ್ಧಗಳಿಗೆಗೆ ಸೂರ್ಯನು ಮುಳುಗುವನು ತಕ್ಷಕ-ಗಿಕ್ಷಕನಿಗೆಲ್ಲ ನಾನಿನ್ನೇನೂ ಅಂಜುವವನಲ್ಲ” ಎನ್ನುತ್ತ ಅದರ ಸುವಾಸನೆಯನ್ನನುಭವಸು ಮೇಲೆತ್ತಿದ್ದನು. ಆಗ ಥಟ್ಟನೆ ಅದರಲ್ಲಿ ಕಪ್ಪು ಬಣ್ಣದ ಸೂಕ್ಷ್ಮ ಕ್ರಿಮಿಯೊಂದು ಕಾಣಿಸಿತು. ಅದನ್ನು ನೋಡಿ “ತಕ್ಷಕನು ಇನ್ನೂ ಬರಲಿಲ್ಲವೇಕೆ? ವಿಪ್ರನ ಶಾಪವು ಅದು ಹೇಗೆ ತಪ್ಪಿತೋ ಬಲ್ಲವರಾರು ? ಒಂದೊಮ್ಮೆ ಆ ಶಾಪವು ಫಲಿಸುವುದೇ ನಿಜವಾದರೆ, ಬೇಕಾದರೆ ಆ ಕ್ರಿಮೆಯೇ ಘೋರ ತಕ್ಷಕನಾಗಿ ನನ್ನ ಹಣ್ಣಿನಿಂದ ಕೊರಳಿಗೆ ಹೊಡೆದುಕೊಂಡನು. ಇದೇ ಸಮಯವೆಂದು ತಕ್ಷಕನು ರಾಜನೂ ಆ ಮನೆಯೂ ವಿಷದುರಿಯಲ್ಲಿ ಬೆಂದುಹೋದವು. ತಕ್ಷಕನು ಮಿಂಚಿನಂತೆ ಆಕಾಶಕ್ಕೆ ನೆಗೆದನು. ನಾವು ನೃಪನ ಸಂಸ್ಕಾರ ಕರ್ಮವನ್ನು ಪೂರೈಸಿ, ವಚಿಕ್ಕನಾಗಿದ್ದ ನಿನ್ನನ್ನು ದೊರೆಯಾಗಿ ಸ್ವೀಕರಿಸಿದೆವು. (೨೭-೩೫)

ಸಂಧಿ ೧೧ : ಮಂತ್ರಿಗಳಿಂದ ತನ್ನ ತಂದೆಯ ಕಥೆಯನ್ನು ಜನಮೇಜಯ ರಾಜನು ಕೇಳಿ ಮುಗಿಸಿದ ಹೊತ್ತಿಗೆ ಸರಿಯಾಗಿ ಉದಂಕಮುನಿಯು ಅವನಿದ್ದಲ್ಲಿಗೆ ಬಂದನು. ಸತ್ಕಾರಗಳೆನ್ನಲ್ಲ ಕೈಗೊಂಡನು, ಪರೀಕ್ಷಿದ್ರಾಜನು ಇನ್ನೂ ಹರೆಯದವನಿದ್ದಾಗಲೇ ಅವನನ್ನು ಕುಟಿಲತನದಿಂದ ಕೊಂದ ಶಿಕ್ಷಕನಿಗೆ ತಕ್ಕ ಶಾಸ್ತಿ ಮಾಡುವುದು ರಾಜಧರ್ಮದ ಪ್ರಕಾರ ಸಮ್ಮತವೇ ಎಂದು ಬೋಧಿಸಿದನು.

ಉದಂಕನಿಗೆ ತಕ್ಷಕನೊಡನೆ ವೈರವುಂಟಾದುದಕ್ಕೂ ಕಾರಣವಿತ್ತು. ಹಿಂದೆ ಉದಂಕನು ಅಯೋಧಧೌಮ್ಯರಲ್ಲಿ ಗುರುಸೇವೆ ಮಾಡುತ್ತ ವೇದ, ಶಾಸ್ತ್ರಾದಿ ಅಧ್ಯಯನಗಳೆಲ್ಲ ಪೂರೈಸಿದನು. ಆಶ್ರಮವನ್ನು ಬಿಡುವ ಮುನ್ನ ತಾನೇನು ಗುರುದಕ್ಷಿಣೆ ನೀಡಲಿ ಎಂದು ಗುರುಗಳನ್ನು ಕೇಳಿದನು. ಅವನ ಶುಶ್ರೂಷೆಯಿಂದ ತೃಪ್ತರಾದ ಗುರುಗಳು ಅವನು ಇನ್ನೇನನ್ನೂ ಸಲ್ಲಿಸಬೇಕಾಗಿಲ್ಲವೆಂದು ಹೇಳಿದರೂ, ದಕ್ಷಿಣೆಯನ್ನು ಕೊಟ್ಟಿಲ್ಲದೆ ತಾನು ಹೋಗುವವನಲ್ಲವೆಂದು ಭಕ್ತಪೂರ್ವಕವಾಗಿ ಭಿನ್ನವಿಸಿದನು. ಆಗ ಅವರು “ಹಾಗಿದ್ದರೆ, ನನ್ನ ಹೆಂಡತಿಯನ್ನು ಕೇಳಿ ಅವಳಿಗೆ ಬೇಕಾದುದನ್ನು ತಂದುಕೊಡು” ಎಂದು ನಿರೂಪಿಸಿದರು. ಸಂತೋಷದಿಂದ ಗುರು ಪತ್ನಿಯೆಡೆಗೆ ಬಂದು ವಿಷಯವನ್ನು ತಿಳಿಸಲು ಅವಳು ಪೌಷ್ಯರಾಜನ ಹೆಂಡತಿಯು ಧರಿಸಿರುವ ಕುಂಡಲವನ್ನು ತಂದುಕೊಡಬೇಕೆಂದೂ ಅದೂ ಮೂರೇ ದಿನಗಳೊಳಗಾಗಿ ನಡೆದರೆ ಮಾತ್ರ ಪ್ರಯೋಜನವುಂಟೆಂದೂ ಹೇಳಿದಳು. ಪೌಷ್ಯರಾಜನ ನಗರವನ್ನರಿಸಿ ಉದಂಕನು ಹೊರಟನು. ದಾರಿಯಲ್ಲಿ ಇಂದ್ರನು ಶ್ವೇತ ವೃಷಭಾಕಾರದಲ್ಲಿ ಮೈದೋರಿ ತನ್ನ ಗೋಮಯವನ್ನು ಸೇವಿಸಿದರೆ ಕಾರ್ಯ ಲೇಸಾಗುವುದೆಂದು ಸೂಚಿಸಿದನು. ಅದರಂತೆ ಕೈಕೊಂಡು ಅಚಮನಾದಿಗಳನ್ನೂ ಪೂರೈಸದೆ ತ್ವರೆಯಿಂದಲೇ ಹೋಗಿ ಉದಂಕನು ಪೌಷ್ಯರಾಜನನ್ನು ಕಂಡು ತಾನು ಬಂದ ಕಾರಣವನ್ನು ನಿವೇದಿಸಿದನು. ಅದಕ್ಕೆ ಆತನು ನಕ್ಕು, ಅವಶ್ಯವಾಗಿ ನನ್ನ ಹೆಂಡತಿಯು ನೀನು ಬೇಡಿದೊಡನೆಯೇ ಅಭೀಷ್ಟವನ್ನು ಸಲ್ಲಿಸುತ್ತಾಳೆ ಹೋಗು ಎಂದು ಹೇಳಿದನು. ಆದರೆ ಅಂತಃಪುರಕ್ಕೆ ಹೋದರೆ ಅವಳು ಉದಂಕನಿಗೆ ಕಾಣಿಸಲೇ ಇಲ್ಲ. ಪುನಃ ರಾಜನಲ್ಲಿಗೆ ಬಂದು ಹೇಳಿಕೊಳ್ಳಲು ಅವನು ಅಶುಚಿ ದೂರವಾದರೆ ಅವಳು ಕಾಣಿಸದೆ ಇರಲಾರಳು ಎಂದು ಭರವಸೆ ಕೊಟ್ಟನು. ಹಿಂದಿನ ತನ್ನ ಅವಸರವನ್ನು ನೆನೆದು ಪುನಃ ಶುಚಿಯಾಗಿ ಬಂದೊಡನೆಯೇ ಉದಂಕನಿಗೆ ಘನ ಪತಿವ್ರತೆಯ ದರ್ಶನವಾಯಿಗ್ತು. ಯಾವ ಮರುಮಾತನಾಡದೆ ಸಂತೋಷದಿಂದ ರತ್ನಕುಂಡಲಗಳನ್ನು ಅವಳು ಧಾರೆಯೆರೆದುಕೊಟ್ಟಳು. ಆದರೆ ದಾರಿಯಲ್ಲಿ ತೊಂದರೆಗಳು ಬರುವುದು ಮಾತ್ರ ಖಂಡಿತವಾಗಿದ್ದರಿಂದ ಅವನ್ನು ಜಾಗ್ರತೆಯಿಂದ ಒಯ್ಯೆಂದು ಎಚ್ಚರಿಸಿದಳು. ಉದಂಕನು ಪುನಃ ಪೌಷ್ಯರಾಜನನ್ನು ಕಂಡು ಹರಸಿ ಮರುಪಯಣಕ್ಕೆ ತೊಡಗಿದನು. ದಾರಿಯಲ್ಲಿ ನಿತ್ಯಕರ್ಮಕ್ಕೆಂದು ನದಿಗೆ ಇಳಿಯುವ ಮುನ್ನ ಕುಂಡಲಗಳನ್ನು ತೀರದಲ್ಲಿಯೇ ಇರಿಸಿದ್ದನು. ಇದೇ ಹೊತ್ತು ಸರಿಯೆಂದು ತಕ್ಷಕನು ಅದೃಶ್ಯನಾಗಿ ಬಂದು ಕುಂಡಲಗಳನ್ನು ಕೊಂಡೊಯ್ದುಬಿಟ್ಟನು. ಮೇಲೆ ಬಂದ ಉದಂಕನಿಗೆ ಕುಂಡಲಗಳು ಕಾಣದಾದಾಗ ದಿವ್ಯಜ್ಞಾನದೃಷ್ಟಿಯಿಂದ ತಕ್ಷಕನ ಆಟವನ್ನು ಅರಿತನು. ತಕ್ಷಕನೆಲ್ಲಿಯೇ ಇದ್ದರೂ ಅವನನ್ನು ತೀರಿಸುವೆನೆಂದು ಪಾತಾಳವನ್ನು ಸೇರಲೋಸುಗ ಕಾಷ್ಕವೊಂದನ್ನು ಕೊಂಡು ಭೂಮಿಯನ್ನಗೆಯತೊಡಗಿದನು. ಈ ಸಾಹಸವನ್ನು ಕಂಡು ಅವನ ಗುರುಭಕ್ತಿಗೆ ಮೆಚ್ಚಿದ ಇಂದ್ರನು ವಿಪ್ರಾಕಾರದಲ್ಲಿ ಮೈದೋರಿ ಮಾತನಾಡಿಸಿ ಆ ಕಾಷ್ಟಕ್ಕೆ ತನ್ನ ವಜ್ರಾಯುಧದ ಬಲವನಿತ್ತನು. ಬಿಲಮುಖದಲ್ಲಿ ಮುಂದುವರಿಯುತ್ತಿದ್ದಂತೆಯೇ ಅವನ ಸಹಾಯಾರ್ಥವಾಗಿ ಬಂದಿದ್ದ ವಾಡಬಾಗ್ನಿಯನ್ನು ಕಂಡನು. ನಾಗಲೋಕವನ್ನು ತಲುಪುತ್ತಲೇ ವಾಡಬಾಗ್ನಿಗೆ ಅದನ್ನು ದಹಿಸಹೇಳಿದನು. ಅದರಂತೆ ಜ್ವಾಲೆ ಹಬ್ಬುತ್ತಿರುವುದನ್ನು ಕಂಡ ತಕ್ಷಕನ ಜನವು ಕುಂಡಲಗಳನ್ನು ತಂದಿತ್ತು. ಅವನ ಪರವಾಗಿ ಕ್ಷಮೆ ಕೇಳಿತು. ಉದಂಖನು ಆ ವಿಷಯದಲ್ಲಿ ಔದಾರ್ಯ ತೋರಿ, ಅಗ್ನಿಗೂ ಕೃತಜ್ಞತೆಯನ್ನು ಸೂಚಿಸಿ ಬೀಳ್ಕೊಟ್ಟನು. ಅಲ್ಲಿಂದ ತಡಮಾಡದೆ ಗುರುಗಳನ್ನೂ ಗುರುಪತ್ನಿಯನ್ನೂ ಕಂಡು ಕಾಣಿಕೆಯನ್ನೊಪ್ಪಿಸಿ ಅವರ ಆಜ್ಞೆಯನ್ನು ಪಡೆದು ಆಶ್ರಮದಿಂದ ಮನೆಗೆ ಮರಳಿದನು. ಅಂದಿನಿಂದ ಗಾರ್ಯಸ್ಥ್ಯ ಧರ್ಮವನ್ನು ಯಥಾವತ್ತಾಗಿ ಪಾಲಿಸಿಕೊಂಡು ಹೋಗುತ್ತಿದ್ದರೂ ತಕ್ಷಕನ ಮೇಲಿನ ವೈರವನ್ನು ಮಾತ್ರ ಮರೆಯಲಿಲ್ಲ. ಅದೇ ವೈರದ ಕಾರಣದಿಂದಾಗಿ ಜನಮೇಜಯರಾಜನಿಗೆ ಮಂಟ್ರಿಗಳು ವಿವರಿಸಿದ ಸಂಗತಿಯನ್ನು ದಿವ್ಯಜ್ಞಾನದಿಂದ ಅರಿತು ತಕ್ಷಣ ತಾನೇ ನೃಪತಿಯಲ್ಲಿಗೆ ಬಂದು ತಕ್ಷಕನಿಗೆ ಆಗಬೇಕಾದ ಶಿಕ್ಷೆಯ ವಿಷಯವನ್ನು ಎಚ್ಚರಿಸಿದನು. ಮಂತ್ರಿಗಳ ಮಾತಿಗೆ ಮುನಿಗಳ ಪುಷ್ಟಿಯೂ ದೊರೆಯುತ್ತಿದ್ದರಿಂದ ದೊರೆಯು ಯಜ್ಞವನ್ನು ಕೈಗೊಳ್ಳುವುದನ್ನು ನಿರ್ಧರಿಸಿದನು. (೧೦-೫೧)

ಸಂಧಿ ೧೨ : ತಕ್ಷಕನ ದೌರ್ಜನ್ಯವನ್ನು ನೆನೆದಷ್ಟೂ ಅವನನ್ನು ಕೊಲ್ಲದೆ ತಾನೂ ಜೀವಿಸಬಾರದು ಎಂದು ಜನಮೇಜಯ ನೃಪನಿಗೆ ತೋರಿತು. ಪುರೋಹಿತರನ್ನು ಕರೆಸಿ ಸರ್ಪಾಧ್ವರದ ವಿಧಾನವನ್ನು ಕುರಿತು ಸಮಾಲೋಚಿಸಿದನು. ಮಂತ್ರಿ ಪರಿವಾರದವರಿಂದ ಸಾಧನಗಳನ್ನೆಲ್ಲ ನೆರವೇರಿಸಿ ಶಾಸ್ತ್ರೋಸ್ತ್ರವಾದ ರೀತಿಯಲ್ಲಿ ಯಾಗ ಶಾಲೆ, ಹೋಮಕುಂಡಗಳನ್ನೆಲ್ಲ ಎಸಗಲಾಯಿತು. ಆದರೆ ಅದರ ಸ್ಥಾಪತಿಗಳಲ್ಲೇ ಒಬ್ಬನು ಶಕುನಬಲದಿಂದ “ಈ ಯಜ್ಞವು ನಡುವೆಯೇ ಕೆಡುವುದು, ಇಷ್ಟಾರ್ಥವೀಡೇರದು” ಎಂದು ಘೋಷಿಸಿದನು. ದೊರೆಯು ಅದೇಕೆಂದು ವಿಚಾರಿಸಲು ಬ್ರಾಹ್ಮಣನೊಬ್ಬನಿಂದ ಯಜ್ಞಕ್ಕೆ ವಿಘ್ನವುಂಟಾಗುವುದೆಂದು ನುಡಿದನು. ಇದನ್ನು ಕೇಳಿದ ದೊರೆಯು ದ್ವಾರಪಾಲಕರಿಗೆ ತನಗೆ ತಿಳಿಸದೆ ವಿಪ್ರರಾರನ್ನೂ ಯಾಗಶಾಲೆಯೊಳಕ್ಕೆ ಬಿಡಬಾರದೆಂದು ಕಟ್ಟಪ್ಪಣೆ ಮಾಡಿದನು. (೧-೧೨)

ಋತ್ವಿಜರು ಹೋಮವನ್ನು ತೊಡಗಿದರು. ಮಂತ್ರಮುಖದಿಂದ ಉರಗವ್ರಾತವನ್ನು ಕರೆದರು. ಅಹಿಕುಲವು ಕಂಗೆಟ್ಟಿತು. ಮ್ಲಾನಮುಖದಿಂದ ಗಗನ ಮಂಡಲಕ್ಕೆ ಬಂದು ಸುತ್ತು ಸುತ್ತಿ ತಲೆ ಕೆಳಗಾಗಿ ಅಗ್ನಿಯಲ್ಲಿ ಹಿಂಡುಹಿಂಡಾಗಿ ಬೀಳತೊಡಗಿದವು. ಬಸೆಯ ನದಿ ಬೀದಿವರಿಯಿತು. ದುರ್ಗಂಧ ಮಸುಗಿತು. ಇತ್ತ ತಕ್ಷಕನು ಜೀವವುಳಿಸಿಕೊಳ್ಳುವುದಕ್ಕೆ ಇಂದ್ರನ ಮೊರೆಹೊಕ್ಕನು. ವಾಸುಕಿಯ ಸಂಕಟವೂ ಹೆಚ್ಚಿತು. ತಂಗಿ ಜರತ್ಕಾರುವನ್ನು ಕರೆದು, “ನಿನ್ನ ಮಗನನ್ನು ಕೂಡಲೇ ಕಳುಹಿ, ಅವನಿಂದಲೇ ನಾವೀಗ ಉಳಿದುಕೊಳ್ಳಬೇಕಾಗಿದೆ” ಎಂದನು. ಆಕೆಯ ಮಗ ಆಸ್ತೀಕನನ್ನು ಕರೆದು ಪೂರ್ವಾಪರವನ್ನೆಲ್ಲ ತಿಳಿಸಿ ಹೇಳಿದಳು. ತನ್ನ ತಾಯಿಗೂ, ಮಾವನಿಗೂ ಭರವಸೆ ಕೊಟ್ಟು ಆಸ್ತೀಕನು ಯಜ್ಞ ನಡೆಯುವಲ್ಲಿಗೆ ಬಂದನು. ಬಾಗಿಲಲ್ಲಿಯೇ ಪಡೆವಳರು ಅಡ್ಡವಿಸಿದರು. ಇರಲಿ ಎಂದು ಅಲ್ಲಿಯೇ ನಿಂತು ನೃಪನನ್ನು, ಯಜ್ಞವನ್ನು, ಮುನಿವೃಂತವನ್ನು ವಿನಯಯುತವಾಗಿ ಪ್ರಶಂಶಿಸತೊಡಗಿದನು. ಅದನ್ನು ಕೇಳಿ ಸಂತುಷ್ಟನಾದ ದೊರೆಯು “ಸ್ತುತಿಸುವವನಾರು, ಕಾರ್ಯವೇನು ಎಂದು ವಿಚಾರಿಸುವೆ, ಆ ಬ್ರಾಹ್ಮಣನನ್ನು ಒಳಗೆ ಬಿಡಿ” ಎಂದೊಡನೆಯೇ ದ್ವಾರಪಾಲಕರು ಒಳಹೋಗಿಸಿದರು. ವಿಪ್ರನನ್ನು ಕಂಡೊಡನೆಯೇ, “ನಿನ್ನನ್ನು ನಾನು ಮೆಚ್ಚಿದ್ದೇನೆ, ನಿನ್ನ ಮನದಿಚ್ಚೆಯೇನೆಂದು ಹೇಳು, ನನ್ನ ರಾಜ್ಯದ ಸಕಲ ಸಂಪತ್ತನ್ನು ಬೇಕಾದರೂ ಕೊಟ್ಟೇನು. ಯಾವ ಆತಂಕವಿಲ್ಲದೆ ಕೇಳು” ಎಂದು ನುಡಿದನು. (೧೩-೪೨)

ಸಂಧಿ ೧೩ : ಇತ್ತ ದ್ವಿಜನೊಡನೆ ಮಾತನಾಡುತ್ತಿರುವಾಗಲೇ ಹೊರಳಿ ‘ಶಿಖಿಗೆ ಹೇಳಿದ ತುತ್ತಾದ ತಕ್ಷಕನು ಇನ್ನೂ ಬರೆದೆ ತಡೆದದ್ದೇಕೆ ಎಂದು ದೊರೆಯು ವಿಚಾರಿಸಿದನು. ಅದುವರೆಗೆ ಉರಿಯನ್ನು ಹೊಕ್ಕವರ, ಹೋಗುವವರ ಭಾರಿಯ ಲೆಕ್ಕವಿತ್ತರೂ ತಕ್ಷಕನು ಮಾತ್ರ ಕಾಣಿಸದಾಗಲು ಅವನು ಇಂದ್ರನ ಮರೆಯಲ್ಲಿ ಅಡಗಿರುವುದೇ ಕಾರಣ ಎಂದು ತಿಳಿಸಲು, ಫಣಿಸುರಪಾಲರಿಬ್ಬರು ಬೆಂದು ಹೋಗಲಿ ಬೇಳಿರಿ’ ಎಂದು ಆಜ್ಞೆಯಿತ್ತನು. ಆಗ ಮಂತ್ರಕೋವಿದರು ಆ ಕುಹಕಿ ಬಠಲಿ ಮೇಣಲ್ಲದಡೆ ಸುರಪತಿ ಸಹಿಸ ಬೀಳಲಿ ಎಂದು ಕರೆದುಬಿಟ್ಟರು. ದೇವೇಂದ್ರನು ನಡುಗಿದನು, ಈ ತೊಡಕೇ ಬೇಡವೆಂದು ಅಂಬರಕ್ಕೆ ಬಂದು ಉರುಳುತ್ತುರುಳುತ್ತ ಹೊಗೆಗಳ ಹೊರಳಿಯಲಿ ಹೊಡಕರಸಿ ಸುತ್ತು ಸುತ್ತಿ ಕ್ಷಣದೊಳಗೆ ಬೇಗೆಯಲ್ಲಿ ಬಾಡಿ ಉರಿಯ ಸಮ್ಮುಖಕ್ಕಿಳಿಯುತ್ತಿರುವ ದುಸ್ಥಿತಿಯನ್ನು ಕಂಡ ಆಸ್ತೀಕನು “ನಿಲ್ಲು, ನಿಲ್ಲು” ಎಂದು ತೋಳೆತ್ತಿ ಅವನನ್ನು ತಡೆದನು. (೧-೨೦)

ದ್ರೋಹಿ ತಕ್ಷಕನ ಅಗ್ನಿ ಪ್ರವೇಶವು ಇನ್ನೂ ಆಗವೊಲ್ಲದೇಕೆಂದು ದೊರೆಯು ವಿಚಾರಿಸಲು, ವಿಪ್ರಕುಮಾರನಿಗಿತ್ತ ವರವನ್ನು ಪೂರೈಸಿದರೆ ಸರಿಹೋಗುವದೆಂದರು. ಆಗ ದೊರೆಯು ಪುನಃ ಆಸ್ತೀಕನೆಡೆಗೆ ತಿರುಗಿ ನಿನ್ನ ಹೇಳಿಕೆಯೇನೆಂದು ಕೇಳಿದನು. ಅದಕ್ಕೆ ಆಸ್ತೀಕನು ಸುಡದಿರಹಿಗಳ, ನಿನ್ನ ಮುಖವಿದು ತಡೆಯಲೀ ಹದದಲಿ ಇದೇ ತನಗೆ ಇಷ್ಟವದ ವರವೆಂದನು. ಅದನ್ನು ಕೇಳಿ ದೊರೆಯು ಕಾತರನಾಗಿ ನೀನೆಂದುದರಿಂದ ನನ್ನ ಉದ್ದೇಶಕ್ಕೆ ಹಾನಿಯಾಗುವುದು, ಬೇರೆ ಏನನ್ನಾದರೂ ಬೇಡು ಎಂದನು. “ಬೇರಾವುದೂ ನನಗೆ ತಿಳಿಯದು, ಕೃಪೆಯಿದ್ದರೆ ಅದನ್ನೇ ನಡೆಸಿಕೊಡಬೇಕು” ಎಂಬುದೇ ಅದಕ್ಕೆ ಉತ್ತರವಾಯಿತು. ನೀವಾದರೂ ಈ ವಿಪ್ರಕುಮಾರನಿಗೆ ಬುದ್ಧಿ ಹೇಳಿ ಎಂದು ಋಷಿಗಳು, ಸಭಾಸದರು, ಋತ್ವಿಜರುಗಳೆಲ್ಲರನ್ನು ಕೇಳಿಕೊಂಡನು. ಅವರೆಲ್ಲರ ಮಾತಿಗೆ ತಾನು ಒಪ್ಪುವೆನೆಂದು ಆಸ್ತೀಕನೂ ನಗುತ್ತ ನುಡಿದನು. ಆದರೆ ಮುನಿಗಳೂ, ಅಮರರೂ ಒಂದೆ ಮತದಿಂದ ತುಪ್ಪದಲು ಪೂರ್ಣಾಹುತಿ ಮಾಡು ಎಂದೇ ಉಪದೇಶಿಸಿದರು. ಹಾಗಿರುವಾಗ ಈ ವಿಪ್ರಕುಮಾರನು ಬಂದ ಅಧ್ವರವನ್ನು ಅಂದಗೆಡಿಸಿಬಿಟ್ಟನೆಂದು ವಾಸುಕಿಗೆ ನೊಂದು ಸುಯ್ಯುತ್ತಿರಲು, ಅಮೃತಮಥನಾನಂತರದಲ್ಲಿ ಬ್ರಹ್ಮನು ವಾಸುಕಿಗೆ ಇತ್ತ ಅಭಯದ ಕಥೆಯನ್ನು ವಿವರಿಸಿ ಎಲ್ಲವೂ ವಿಧಿಪ್ರೇರಿತವಾದ್ದರಿಂದ ಹೋಗಲಿ, ಬೇರುಗೊಲೆ ಬೇಡ” ಎಂದು ಅವನನ್ನು ಸಂತೈಸಿದರು. ದೊರೆಯೂ ‘ಮಾನಭಂಗವೇ ಮರಣ’ ಹೋಗಲಿ, ದೀನವನು ಕೊಲಲೇಕೆ? ಎಂದು ಯೋಚಿಸಿದ್ದಲ್ಲದೆ, ಇಷ್ಟಾತಿಥಿಯ ವಚನಮನ್ನಣೆಯಿಂದಲೇ ಮುಖವು ಮಹಾ ಸಂಪೂರ್ಣವಾಯಿತೆಂದು ಭಾವಿಸಿದನು. ಅಲ್ಲಿಗೆ ಪೂರ್ಣಾಹುತಿಯನ್ನು ಎಸಗಿದರು. ತಕ್ಷಕನು ಪಾವಕನ ಮುಖದಿಂದ ತೊಲಗಿದನು. ಮುಂದೆ ಕೈಗೊಳ್ಳುವ ಹಯಮೇಧಕ್ಕೆ ನೀನೇ ಋತ್ವಿಜನಾಗಿ ಬರಬೇಕೆಂದು ಆಸ್ತೀಕನನ್ನು ದೊರೆಯು ಆಮಂತ್ರಿಸಿದನು. (೧-೩೬)

ಆಸ್ತೀಕನು ಉರಗರಾಜಮಂದಿರಕ್ಕೆ ಮರಳಿ ಬರಲು ಅವನನ್ನು ಅತ್ಯಧಿಕ ವೈಭವದಿಂದ ಇದಿರುಗೊಂಡರು. ವಾಸುಕಿಯು ಹರುಷದಿಂದ ತೆಗೆದು ಬಿಗಿಯಪ್ಪಿ ಹರಸಿದನು. ಉರಗರೆಲ್ಲ ಬದುಕಿದೆವೆಂದು ಕೃತಜ್ಞತೆಯನ್ನು ಸೂಚಿಸಿ ಕೊಂಡಾಡಿದರು. ತಮ್ಮ ವಂಶದ ಕೇಡನ್ನು ತಪ್ಪಿಸಿದ ಅಳಿಯನು ಮಾಡಿದುಪಕೃತಿ ನೋಡಲ ಪ್ರತಿಕೃತಿ ಯೆಂದು ಮೆಚ್ಚಿದ ವಾಸುಕಿಯು ಬೇಕಾದವರನ್ನು ಮನಬಿಚ್ಚಿ ಕೇಳು ಎಂದು ಹೇಳಿದನು. ಇದುವರೆಗಿನ ಕಥೆಯನ್ನು ಬೆಳಗಿನಲ್ಲಾಗಲಿ, ಬೈಗಿನಲ್ಲಾಗಲಿ ಕೇಳುವ, ಭಾವಿಸುವ ಜನರನ್ನು ನಿಮ್ಮಯ ಕುಲದವರಾರು ಮುಟ್ಟಲಾಗದು ಇದೇ ತನ್ನ ಬೇಡಿಕೆ ಎಂದು ಆಸ್ತೀಕನು ನುಡಿದನು. ವಾಸುಕಿಯು ಸಂತೋಷದಿಂದ ಹಾಗೇ ಆಗಲೆಂದು ಮನ್ನಿಸಿ ಹರುಷಾವೇಷದಲ್ಲಿ ಪುನಃ ಅಪ್ಪಿಕೊಂಡನು. ಆಸ್ತೀಕನ ಪ್ರಭಾವದಿಂದ ಪನ್ನಗರೆಲ್ಲರೂ ಧರ್ಮಪರರಾಗಿ ಪರಿವರ್ತಿತರಾದರು. (೩೭-೪೯)