ಶ್ರೀಮದ್ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ ಪುರಾಣಗಳು ಭಾರತೀಯರಿಗೆಲ್ಲ ಪವಿತ್ರ ಗ್ರಂಥಾಗಳಾಗಿವೆ, ಭಾರತೀಯ ಜನಮನದ ಪಡಿನೆಳಲನ್ನೂ, ಅಂತೆಯೇ ನೈತಿಕ, ಆಧ್ಯಾತ್ಮಿಕ ಆದರ್ಶಗಳನ್ನೂ ಆ ಮೂರು ರಾಷ್ಟ್ರೀಯ ಕಾವ್ಯಗಳಲ್ಲಿ ನಾವು ಕಾಣಬಹುದು. ಮತ್ತೆ ಆ ಆದರ್ಶಗಳು ಪ್ರತ್ಯಕ್ಷ ಬೋದನೆಗೆ ಪುಷ್ಟಿಯೊದಗಿಸುವಂತಹ “ವಿಶ್ರುತ ಮಹಾಖ್ಯಾನ” ಗಳ ರೂಪದಲ್ಲಿಯೇ ನಿರೂಪಿತ ವಾಗಿರುವದೂ ಒಂದು ವಿಶೇಷ. ಅದರಿಂದ ಅವು ವೈಚಿತ್ರ್ಯಪೂರ್ಣವೂ, ವಿಶೇಷ ಸ್ವಾರಸ್ಯಕರವೊ ಆದ ಅನೇಕ ಸಾಂಕೇತಿಕ ಕತೆಗಳ ಗಣಿಯಾಗಿ ನಿಂತಿವೆ, ಅವುಗಳಲ್ಲಿ ಕಾವ್ಯರಸಿಕರು ಕಾವ್ಯಗುಣವನ್ನೂ, ಧಾರ್ಮಿಕರು ಪುಣ್ಯಶ್ರವಣವನ್ನೂ ಕಂಡರು. ಭಾರತದ ವಿವಿಧ  ಭಾಷಾಸಾಹಿತ್ಯದ ಪ್ರಾಚೀನ ಕೃತಿಕಾರರು  ಆ ಪುರಾಣ ಕಾವ್ಯಗಳ ಕಥೆಗಳನ್ನೇ ಅವು ಎತ್ತಿಹಿಡಿಯುವ ಆದರ್ಶಗಳಿಗಾಗಿ  ಮೆಚ್ಚಿ ಹೊಸ ಬೆಳಕು, ಹೊಸ ಮೆರುಗು, ಹೊಸ ದೃಷ್ಟಿ ಒಡಮೂಡುವಂತೆ ಹೊಸ ಎರಕದಲ್ಲಿ ನೀಡಿ ದೇಶೀಯರ ಮನಸ್ಸನ್ನು ಸೂರೆಗೊಂಡರು. ಕನ್ನಡದ ಪ್ರಾಚೀನ ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ.

ಕನ್ನಡದಲ್ಲಿ ವೈದಿಕ, ಜೈನರಾಮಾಯಣಗಳಿವೆ. ಮಹಾಭಾರತವೂ ಅನೇಕ ಕವಿಗಳ ಮೂಲಕ ಸಮಗ್ರವಾಗಿ ಕನ್ನಡಕ್ಕೆ ಇಳಿದಿದೆ ಎನ್ನಬೇಕು ಶ್ರೀಮದ್ಬಾಗವತವೂ ಒಬ್ಬರಿಂದಲೋ ಹಲವರಿಂದಲೋ ಕೂಡಿ ಪೂರ್ತಿ ಅನುವಾದಪಡೆದಿರುವದು. ಹೇಗೆ ಕನ್ನಡದಲ್ಲಿಯೂ ಭಾರತೀಯ ಉಚ್ಚ ಆದರ್ಶಗಳ ಕಣಕ ಕಟ್ಟಿನಿಂತಿದೆ

ಪ್ರಸ್ತುತವಾಗಿ ಮಹಾಭಾರತದ ವಿಷಯವನ್ನೆತ್ತಿಕೊಂಡರೆ, ಕನ್ನಡದ ಹಿರಿಯ ಕವಿಗಳಲ್ಲೊಬ್ಬನಾದ ಕಮಾರವ್ಯಾಸನ “ಕರ್ನಾಟಕ ಭಾರತ ಕಥಾಮಂಜರಿ” ಯು ಮಹಾಭಾರತದ ಮೊದಲ ದಶಪರ್ವಗಳ ಕಥೆಯನ್ನು ಅದ್ಬುತವಾಗಿ ನಿರೂಪಿಸುತ್ತದೆ. ಅವನು ಬರೆಯದೆ ಬಿಟ್ಟ ಭಾರತದ ಸ್ತ್ರೀಪರ್ವದಿಂದ ಮುಂದಿನ ಏಳು ಪರ್ವಗಳನು ತಿಮ್ಮಣ್ಣ ಕವಿಯು (ಕ್ರಿ.ಶ. ೧೫೧೫) ದೊರೆ ಕೃಷ್ಣದೇವರಾಯನಿಂದ ಆಜ್ಞಪ್ತ್ನನಾಗಿ ಬರೆದು ಪೊರೈಸಿದನು. ಉತ್ತರೋತ್ತರ ಭಾರತವೆನ್ನಬಹುದಾದ ಅಶ್ವಮೇಧದ ಕಥೆಯನ್ನು ಲಕ್ಷ್ಮೀಶನು ಕನ್ನಡಿಗರಿಗೆ ಕಾಣಿಕೆಯಾಗಿತ್ತನು.

ಪೌಲೋಮ-ಆಸ್ತಿಕಪರ್ವಗಳ ಕವಿವಿಚಾರ

ಸಂಗ್ರಹಾಧ್ಯಾಯ ಬೀಜೋವೈ ಪೌಲೋಮಾಸ್ತೀಕ ಮೂಲವಾನ್
ಸಂಭವಸ್ಕಂದವಿಸ್ತಾರ: …. …. …. …. …. …. …. …. …. ….
ಮಹಾಭಾರತ. ಆದಿ. ಅ ೧೯೧

ಮಹಾಭಾರತ ವಕ್ಷದ ಬೀಜವು ಸಂಗ್ರಹಾಧ್ಯಾಯವಾದರೆ, ಪೌಲೋಮ ಆಸ್ತೀಕಪರ್ವಗಳು ಬೇರು ಎಂದು ಹೇಳಲಾಗಿದೆ. ಮಹಾಭಾರತದ ಮಹಾದರ್ಶನವನ್ನು ನೀಡಿದ ಕುಮಾರವ್ಯಾಸನು ಈ ಮೂಲದ ಕಥೆ (ನೋ. “ಮೊದಲ ಕಥೆ ಪೌಲೋಮವೆಂಬರು”- ಆಸ್ತೀಕ, ಸಂಧಿ. ೧.೨) ಯನ್ನು ಈ ಕೆಳಗಿನ ಒಂದು ಪದ್ಯದಲ್ಲಿ ಬರಿಯ ಪ್ರಸ್ತಾಪಿಸಿ ಮುಂದೆ ಹೋಗಿಬಿಟ್ಟಿದ್ದಾನೆ:

ಹೇಳಿದನು ಪೌಲೋಮಚರಿತ
ನ್ಯಾಳತಾರ್ಕ್ಷ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭ್ರಮವ
ಮೇಲೆ ಬಳಿಕ ಪರೀಕ್ಷಿದವನೀ
ಪಾಲಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ

ಆದಿಪರ್ವ, ಪೀಠೀಕಾ ಸಂಧಿ ೪೧
“ಕರ್ನಾಟಕ ಮಹಾಭಾರತ”
`Government oriental library series.

ಮುಂದೆ ಪುನ: ಐದನೆಯ ಸಂಧಿಯಲ್ಲಿ, “ವಿನತೆ ಕದ್ರುಗಳವರ ತನುಜರ ವೈರ ಮಾರ್ಗ” ವನ್ನು ಒಟ್ಟು ಇಪ್ಪತ್ಮೂರು (ಪ. ೪೦_೬೨) ಪದ್ಯಗಳಲ್ಲಿ ಸಂಗ್ರಹವಾಗಿ, ಅಷ್ಟೇ ನಿರ್ವಿಶೇಷವಾಗಿ ನಿರೂಪಿಸಿದ್ದಾನೆ. ಈ ಸಂಗತಿಯೇ ಪ್ರಸ್ತುತ್ತ ಕೃತಿರಚನೆಗೆ ಕಾರಣವಾಗಿರಬೇಕೆಂಬದನ್ನು  ಕ್ರಿ.ಶ. ೧೯೧೧ ರಷ್ಟು ಹಿಂದೆಯೇ ಓರಿಯಂಟಲ್ ಲ್ಯಾಬ್ರರಿ ಪ್ರಕಟನೆಯ ಅಂಗವಾಗಿ ಸಂಪಾದಿಸಿ ಪ್ರಕಟಿಸಿದ ಶ್ರೀ ವಿ. ಶ್ಯಾಮಾಚಾರ್ಯರು ತಮ್ಮ “ಅವತರಣಿಕೆ”ಯಲ್ಲಿ ಸೂಚಿಸಿದರು ಜೊತೆಯಲ್ಲಿ, ಪೌಲೋಮ ಆಸ್ತಿಕಪರ್ವಗಳಿಗೆ ಸೇರಿಕೊಂಡಿದ್ದು ಪ್ರತ್ಯೇಕವಾಗಿ ದೊರೆಯದಿದ್ದರೂ ಕುಮಾರ ವ್ಯಾಸಕೃತವಲ್ಲವೆಂಬುದನ್ನು ಎತ್ತಿ ತೋರಿಸಿದರು.

ಹಾಗಿದ್ದಾರೆ ಪೌಲೋಮ, ಆಸ್ತೀಕಪರ್ವಗಳ ಕರ್ತೃ ಯಾರು? ಕವಿಚರಿತೆಕಾರರ ಪ್ರಕಾರ “ಚಾಟುವಿಠಲನಾಥ” ನೆಂಬವನು. ಕನ್ನಡ ಸಾಹಿತ್ಯ ಚರಿತ್ರೆಕಾರರಾದ ಡಾ. ಆರ್. ಎಸ್. ಮುಗಳಿಯುಅವರೂ. ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆಕಾರ ರಾದ ಡಾ..ತ.ಸು. ಶಾಮರಾಯರೂ ಕೂಡ ಅದೇ ಹೆಸರನ್ನೇ ಕೊಟ್ಟಿದ್ದಾರೆ. ಆದರೆ ಪೌಲೋಮ, ಆಸ್ತೀಕಪರ್ವಗಳನ್ನು ಪ್ರಪ್ರಥಮವಾಗಿ ಪ್ರಕಟಿಸಿದ ಶ್ರೀ ವಿ. ಶ್ಯಾಮಾಚ್ಯಾರ್ಯಾರು “ಸದಾನಂದಯೋಗೀಂದ್ರವಿರಚಿತ” ಎಂದು ಸ್ಪಷ್ಟವಾಗಿ ಕಾಣಿಸಿದರು. ಕಾವ್ಯದಲ್ಲಿ ಎಲ್ಲಿಯೂ ಕವಿಯ ಹೆಸರಿನ ಉಲ್ಲೇಖವಿಲ್ಲದಿದ್ದರೂ ಸಂಧಿಯ ಅಂತ್ಯ ಪದ್ಯಗಳಲ್ಲಿ ತಪ್ಪದೆ ತೋರುವ “ನಿತ್ಯಾತ್ಮ”, ಪದುಮದೃಶ ನಿತ್ಯಾತ್ಮ ನಾರಾಯಣ”, “ನಿತ್ಯಾತ್ಮ ಮುರವೈರಿ”. ನಿತ್ಯಾತುಮ ಮುಕುಂದ” ಎಂಬ ಅಂಕಿತಗಳು ಕನ್ನಡದ ಒಂದೇ ಒಂದಾದ ಭಾಗವತದ ರಚನಾಕಾರನಾದ “ನಿತ್ಯಾತ್ಮ ಶುಕಯೋಗೆ” ಯಿಂದಲೇ ರಚಿತವಾಯಿತೆಂಬದನ್ನು ಸ್ಪಷ್ಟಪಡಿಸುತ್ತವೆ. ಆದರೆ “ನಿತ್ಯಾತ್ಮಶುಕಯೋಗಿ” ಎಂಬುದು ಕುಮಾರವ್ಯಾಸ, ಕುಮಾರ ವಾಲ್ಮೀಕಿ ಎಂಬವುಗಳಂತೆ ಬಿರುದು ಅಥವಾ ಕಾವ್ಯನಾಮ ಹೊರತು ನಿಜನಾಮಧೇರವಾಗಿರಲಾರದು ನಾರಣಪ್ಪ, ನರಹರಿಕವಿಗಳಂತೆ ಭಾಗವತದ ಕವಿಯ ನಿಜವಾದ ಹೆಸರೇನಿದ್ದಿರಬಹುದು? ಭಾಗವತದ ಪದ್ಯಭಾಗಗಳೇ ಅದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. “ಇದು ಸದಾನಂದಾಖ್ಯಯೋಗಿಯ ತೊದಲು ನುಡಿ”  “ಗೋಪೀನಾಥನು ಮಂಗಳವನೀವನು ಸದಾನಂದಾಖ್ಯಮುನಿವರಗೆ”, “ಯೋಗೀಂದ್ರನಖಿಳೋದಿತ ಸದಾನಂದ ಮುದದೊಳಭಿವರ್ಣಿಸಿದಂ” ಆದ್ದರಿಂದ “ಕವಿಯ ನಿಜವಾದ ಹೆಸರು ಸದಾನಂದ ಯೋಗಿ ಎಂದು ತಿಳಿಯುತ್ತದೆ” ಎಂದು ಕವಿಚರಿತೆಕಾರರೇ ಎತ್ತಿ ಹೇಳಿದ್ದಾರೆ. ಭಾಗವತದ –ಆಮೂಲಕ ಈ ಭಾರತದ ಗ್ರಂಥಕರ್ತೃತ್ವವು ಚರ್ಚಾಸ್ಪದನಾಗಿದ್ದರೂ ಕೂಡ ಸದಾನಂದನೆಂಬ ಹೆಸರು ಹೆಚ್ಚು ಸಂಭವವೆಂಬದನ್ನು ಹೆಚ್ಚು-ಕಡಿಮೆ ಒಪ್ಪಿಕೊಳ್ಳಬಹುದೆಂದು ತೋರುತ್ತದೆ ಈ ಕುರಿತು, ಸದಾನಂದಯೋಗಿಗೆ ಮುಂದೆ ’ಚಾಟುವಿಠಲ’ ನೆಂಬ ಬಿರುದು ಲಭಿಸಿರಬಹುದೆಂಬ ಪ್ರೊ. ಕೆ. ವೆಂಕಟರಾಮಪ್ಪ (“ಕನ್ನಡ ಭಗವತ” ದ ಪ್ರಥಮ, ದ್ವಿತೀಯ, ದಶಮಸ್ಕಂಧದ ಸಂಪಾದರು) ನವರ ಸೂಚನೆಯೂ ವಿಚಾರಣೀಯವಾಗಿದೆ.

ಈ ಕವಿಯ ಕಾಲದ ವಿಚಾರವೂ ತೊಡಕಿನದೇ ಆಗಿದೆ. ಕುಮಾರವ್ಯಾಸರ ಕಾಲಕ್ಕಿಂತ ಈಚೆಯವರು ಇವನು ಎಂಬುದು ಸ್ಪಷ್ಟವಿದೆ. ಆದರೆ ಕುಮಾರವ್ಯಾಸನ ಕಾಲನಿರ್ಣಯವೇ ಅನಿಶ್ಚಿತಿತವಾಗಿರುವುದರಿಂದ (ಕವಿಚರಿತೆಕಾರರು ಸು ೧೬೩೦; ಡಾ|| ಮುಗಳಿ – ಸು ೧೪೦೦೦; ಸುಜನಾ

[1]-ಸು, ೧೩೫೦) ಮೊದಲಿನ ಗಡುವು ಅನಿರ್ಧಾರಿತವಾಗಿಯೇ ಉಳಿದರೂ, ಕೊನೆಯ ಗಡುವಿನ ವಿಷಯದಲ್ಲಿ ಮಾತ್ರ ಹೆಚ್ಚಿನ ಸಂಶಯ ಉಳಿಯದಂತೆ ಆಗಿದೆಯನ್ನಬಹುದು. ಕನ್ನಡ ಭಾಗವತವನ್ನು ಕ್ರಿ.ಶ.೧೫೧೯ ರಲ್ಲಿ ನಕಲು ಮಾಡಿದ ಪ್ರತಿ ದೊರಕಿರುವುದರಿಂದ ಕಾವ್ಯವು ಸುಮಾರು ಕುಮಾರವ್ಯಾಸನ ನಂತರ ಕ್ರಿ.ಶ.೧೫೦೦ ರ ಒಳಗೆ ರಚಿತವಾಗಿರಬಹುದೆಂದು ನಂಬಬಹುದು”[2] ಎಂದು ಪ್ರೊ.ಕೆ.ವೆಂಕಟರಾಮಪ್ಪನವರು ಸೂಚಿಸಿರುವುದು ಸಮಂಜಸವಾಗಿದೆ.

ಶ್ರೀ ವಿ ಶಾಮಾಚಾರ್ಯರು ಪೌಲೋಮ-ಆಸ್ತೀಕ ಪರ್ವಗಳನ್ನು ೬೦ ವರ್ಷಗಳ ಹಿಂದೆಯೇ ಸಂಪಾದಿಸುವಾಗ ತಮ್ಮ ಶೋಧನಕಾರ್ಯವು ನಾಲ್ಕು ಪ್ರತಿಗಳ ಆಧಾರದಿಂದ ನಡೆದಿದೆಯೆಂದು ಉಲ್ಲೇಖಿಸಿದರು[3]. ಆದರೆ ಆ ಪ್ರತಿಗಳು ಎಲ್ಲಿ ಲಭ್ಯವಾದವು, ಅವುಗಳ ಸ್ವರೂಪವೆಂತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿಲ್ಲ. ಕಾವ್ಯವು ಅಚ್ಚಾದ ರೀತಿಯಲ್ಲಿ ಮಾತ್ರ ಅನೇಕ ಅಶುದ್ಧ ವಿಚಿತ್ರ ಪ್ರಯೋಗಗಳು ತಲೆದೋರಿ ಕಾವ್ಯರಸಿಕರೂ, ಸಾಹಿತ್ಯಚರಿತ್ರಕಾರರೂ ಅಷ್ಟಾಗಿ ಲಕ್ಷಿಸದಂಟೆ ಆಯಿತು. ಈಗ ಪುನಃ ಆ ಕಾವ್ಯವನ್ನು ಸಂಪಾದಿಸುವಲ್ಲಿ ನಮ್ಮ ಉದ್ದೇಶಗಳು ಮೂರು:-

(೧) ನಮಗೆ ದೊರೆತಿರುವ ಉತ್ತಮ ಪ್ರತಿಗಳ ಸಹಾಯದಿಂದ ಹೊಸದಾಗಿ ಶೋಧನವನ್ನು ನಡೆಸಿ ಆ ಕಾವ್ಯದ ಸುಸ್ವರೂಪವನ್ನು ಬೆಳಕಿಗೆ ತರುವದು.

(೨) ಈ ಕಾವ್ಯದಲ್ಲಿ ಅಶುದ್ಧ ದೇಸಿಯ ಪ್ರಾಚುರ್ಯವಿದೆ ;  ಕಾವ್ಯದೃಷ್ಟಿ, ಪ್ರತಿಭೆ, ಕಲ್ಪನಾಶಕ್ತಿಗಳ ಅಭಾವವೂ ಇದೆ.[4] ಎಂಬ ಅಭಿಪ್ರಾಯವನ್ನು ಪುನರಾಲೋಚಿಸುವುದು ಅವಶ್ಯವೆಂಬುದನ್ನು ತೋರಿಸುವುದು.

(೩) ಪೌಲೋಮ, ಆಸ್ತೀಕಪರ್ವಗಳು ಅದರಲ್ಲಿಯೂ ಆಸ್ತೀಕಪರ್ವವು ಭಾರತೀಯರಲ್ಲಿ ರೂಢಿಮೂಲವಾದ ಈ ಕೆಳಗಿನ ಅನೇಕ ಗ್ರಹಿಕೆ, ಗಾದೆಮಾತು, ಪರಿಪಾಠಗಳ ಹಿನ್ನೆಲೆಯ ಕಥೆಯನ್ನು ಏಕತ್ರವಾಗಿ ಒಳಗೊಂಡಿರುವುದನ್ನು ಗಮನಕ್ಕೆ ತರುವುದು. ಉದಾ : (i) ಸೂರ್ಯನ ಸಾರಥಿಯು ಹೇಳುವನು (ii) ಸರ್ಪ-ಗರುಡರು ಅನ್ಯೋನ್ಯ ದ್ವೇಷಿಗಳು (iii) ಶ್ರೀ ವಿಷ್ಣುವಿನ ವಾಹನವು ಗರುಡ (iv) ಹಾವುಗಳಿಗೆ ಎರಡು ನಾಲಿಗೆ (v) ಆದಿಶೇಷನು ಈ ಭೂಮಿಯನ್ನು ಹೊತ್ತಿದ್ದಾನೆ. (vi) “ಆಸ್ತೀಕ-ಜನಮೇಜಯ” ಎಂದು ಮನೆಯ ಬಾಗಿಲಿಗೆ ಬರೆದರೆ ಹಾವು ಅತ್ತ ಎಲ್ಲೂ ಸುಳಿಯದು (vii)  ಗಜ-ಕಚ್ಛಪನ್ಯಾಯ[5]

ಕವಿಯು ಸ್ಥೂಲವಾಗಿ ಸಂಸ್ಕೃತ ಮೂಲ ಮಹಾಭಾರತದ ಪೌಲೋಮಪರ್ವ (ಅಧ್ಯಾಯ ೪-೧೨) ಹಾಗೂ ಆಸ್ತಿಕಪರ್ವ (ಅಧ್ಯಾಯ ೧೩-೫೮) ಗಳನ್ನೇ ಅನುಸರಿಸಿರುವವನಾದರೂ ಸನ್ನಿವೇಶ ವಿಸ್ತಾರ, ಮಾರ್ಪಾಟು, ಪುನರ್ನಿವೇದನತ್ಯಾಗ ಮೂಲಕವಾದ ರಚನಾಬಂಧುರತೆಯನ್ನು ಸಾಧಿಸುವವರಲ್ಲಿ ವಿಶೇಷ ಔಚಿತ್ಯ, ಕಲ್ಪನಾಶಕ್ತಿಗಳನ್ನು ತೋರಿದ್ದಾನೆ. ಎಲ್ಲಕ್ಕೂ ಮುಖ್ಯವಾಗಿ ತಾನು ಕಂಡ ಕಥಾ ದರ್ಶನವನ್ನು ಕಾವ್ಯದುದ್ದಕ್ಕೂ ಚೆಲ್ಲವರಿಸಿ ತೋರಿಸಿದ್ದಾನೆ. ಈ ಮಾತುಗಳನ್ನು ಮನಗಾಣಲು ಕಾವ್ಯದ ಕಥಾಸಾರವನ್ನು ಮೊದಲು ಗಮನಿಸಬಹುದು.

ಪೌಲೋಮ ಪರ್ವ

ಸಂಧಿ ೧ : ನೈಮಿಷಾರಣ್ಯದಲ್ಲಿ ಶೌನಕಮುನಿ ಯಾಗವನ್ನು ಕೈಕೊಂಡಿದ್ದನು. ಆ ಕಾಲಕ್ಕೆ ರೋಮಹರ್ಷಣನ ಮಗನಾದ ಸೂತನು ಆಗಮಿಸಲು ಭಾರತದಲ್ಲಿ “ಮೊದಲಕಥೆ” ಎನ್ನಿಸಿಕೊಳ್ಳುವ ಪೌಲೋಮ ಅಂದರೆ ಭೃಗುವಿನ ಕಥೆಯನ್ನು ಹೇಳಬೇಕೆಂದು ಎಲ್ಲರೂ ಆತನನ್ನು ಭಿನ್ನವಿಸಿದರು. (೨-೮)

ಬ್ರಹ್ಮನ ಮಗ ಭೃಗು, ಅವನಿಂದ ಚ್ಯವನ, ಪ್ರಮತಿ, ರುರು, ಶುನಕ, ಶೌನಕ – ಹೀಗೆ ಸಂತತಿ ನಡೆದುಕೊಂಡು ಬಂದಿತ್ತು. “ಚ್ಯವನ” ನೆಂಬ ಹೆಸರು ಏಕೆ ಉಂಟಾಯಿತು ಎಂಬ ಮುನಿಗಳ ಪ್ರಶ್ನೆಗೆ ಉತ್ತರವಾಗಿ ಸೂತಪೌರಾಣಿಕನು ಹೇಳತೊಡಗಿದ :-

ಭೃಗುಮುನಿಗೆ ಹೆಂಡತಿ ಶೀಲವಂತೆ ಪುಲೋಮೆ. ಅವಳು ಬಸುರಿಯಾಗಿದ್ದಾಗ ಒಂದು ದಿನ ಭೃಗುಮುನಿ ಸ್ನಾನಕ್ಕೆಂದು ನದಿಗೆ ಹೋಗಿದ್ದಾಗ ಪುಲೋಮನೆಂಬ ರಾಕ್ಷಸನು ವಿಪ್ರವೇಶ್ಅವನ್ನು ತೊಟ್ಟು ಅವರ ಆಶ್ರಮಕ್ಕೆ ಬಂದನು. ಪುಲೋಮೆ ಯಥೋಚಿತವಾಗಿ ಸತ್ಕರಿಸಿದಳು. ಅವಳ ಮಾತನ್ನು ಕೇಳಿದ, ರೂಪವನ್ನು ಕಂಡ ರಾಕ್ಷಸನು ಅವಳಿಗೆ ಪೂರ್ತಿ ಮನಸೋತನು. ಆಗ ಅವಳೊಬ್ಬಳೇ ಇರುವುದನ್ನರಿತು ಅಬಲೆಯನ್ನು ಕೊಂಡೊಯ್ಯಲು ನಿಶ್ಚಯಿಸಿದನು. ಬಹುಶಃ ಆಕೆ ತಾನು ಈ ಹಿಂದೆಯೇ ವರಿಸಿದವಳಾಗಿರಬಹುದೇ ಎಂದು ಸಂದೇಹವೂ ಅವನಿಗೆ ತೋರಿತು. ಆ ಕುರಿತು ಮನೆಯ ಯಜಮಾನನಂತಿದ್ದ ಅಗ್ನಿ (ಗಾರ್ಹಪತ್ಯಾಗಿ)ಯನ್ನು ಸತ್ಯವನ್ನು ಹೇಳೆಂದು ಕೇಳಿಕೊಂಡನು. ಇದರಿಂದ ವೈಶ್ವಾರನಿಗೆ ಧರ್ಮ ಸಂಕಟಕ್ಕಿಟ್ಟುಕೊಂಡಿತು. ಆತ ಅತ್ತ ಸುಳ್ಳು ಹೇಳಲಾರ, ಇತ್ತ ಮುನಿಯ ಶಾಪ ಕೊಳ್ಳಲಾರ. ಸತ್ಯ ಸಂಗತಿಯನ್ನು ತಿಳಿಸಲು, ರಾಕ್ಷಸನು ಪುಲೋಮೆಯನ್ನು ಹಿಡಿದು ಕಂಕುಳೊಳಗಕ್ಕುಳಸಿ ಪಲಾಯನ ಗೈದನು. ಅಬಲೆ ಅಸಹಾಯಕತೆಯಿಂದ ಮೊರೆಯಿಟ್ಟಳು. ಕಂಬನಿಯ ಹೊಳೆಹರಿಸುತ್ತ ಮಿಡುಕುತ್ತಿದ್ದ ಅವಳ ಗರ್ಭವು ಬಸುರೊಡೆದು ಬಿದ್ದಿತು. ಬಿದ್ಧಗರ್ಭದ ತೇಜದಲ್ಲಿ ಖಳರಾಕ್ಷಸನು ಭಸ್ಮೀಭೂತನಾದರು. ಮಹಾಪತಿವ್ರತೆ ಬದುಕಿದಳು. ಅವಳ ಅವಸ್ಥೆಯನ್ನು ಕಂಡು ಪ್ರತ್ಯಕ್ಷನಾದ ಬ್ರಹ್ಮನು ಅವಳಿಗೆ ಅಭಯವನ್ನು ಹೇಳಿ, ಅವಳ ಕಂಬನಿಯ ಹೆಗ್ಗಡಲು “ವಧೂಸರ”ವೆಂದು ಹೆಸರಾಗಲೆಂದು ಹರಸಿ ಮಾಯವಾದನು. ಆ ಮೇಲೆ ಅಳುತ್ತಿದ್ದ ಶಿಶುವನ್ನು ಎತ್ತಿಕೊಂಡು ಪುಲೋಮೆ ಆಶ್ರಮಕ್ಕೆ ಮರಳಿದಳೂ. ಗರ್ಭಚ್ಯುತನಾದುದರಿಂದ ಶಿಶುವಿಗೆ ಚ್ಯವನನೆಂಬಭಿಧಾನವಾಯಿತು. ಇತ್ತ ನದಿಯಿಂದ ಮರಳಿದಾಗ ತನ್ನ ಹೆಂಡತಿಯನ್ನು ಕಾಣದ ಮುನಿಯು ರೌದ್ರಾವತಾರವನ್ನು ತಾಳಿದ್ದನು. ಅವನಿಲ್ಲದಾಗ ನಡೆದ ಕಥೆಯನ್ನು ಮಗುವನ್ನು ಹೆತ್ತ ಹದನನ್ನೂ ಹೆಂಡತಿ ಹೇಳಲು, ಅವಳ ವಿಷಯವನ್ನು ಪುಲೋಮ ರಾಕ್ಷಸನಿಗೆ ತಿಳಿಸಿದವರಾರು ? ಎಂದು ವಿಚಾರಿಸಿದನು. ಅದಕ್ಕೆ ಅವಳು ಅಗ್ನಿಯಿಡೀಎ ಬೆರಳಿಟ್ಟು ತೋರಲು ಅವನ ಸಿಟ್ಟು ಅಗ್ನಿಯೆಡೆ ಹರಿಯಿತು. ಆ ಕೋಪೋದ್ರೇಕದಲ್ಲಿ ಅಗ್ನಿಯನ್ನು ನೀನು “ಸರ್ವಭಕ್ಷಕ”ನಾಗೆಂದು ಶಪಿಸಿಬಿಟ್ಟನು. ಅದಕ್ಕೆ ತಿರುಗಿ ಶಾಪಕೊಡುವ ಸಾಮರ್ಥ್ಯವಿದ್ದರೂ ಅಗ್ನಿಯು ವಿಪ್ರಗೌರವದಿಂದ ತಾನು ತಡೆದುಕೊಂಡಿರುವುದಾಗಿಯೂ, ಆದ್ದರಿಂದಲೇ ಕೊಟ್ಟ ಶಾಪವನ್ನು ಪರಿಗ್ರಹಿಸುವೆನೆಂದೂ ನುಡಿದಾಗ ಭೃಗುಮುನಿಗೆ ತನ್ನ ತಪ್ಪಿನ ಅರಿವಾಗಿ ಹೆಂಡತಿ ಮಗು ಇಬ್ಬರನ್ನೂ ಪ್ರೀತಿಯಿಂದ ಅಂಗೀಕರಿಸಿದನು. (೯-೪೫)

ಸಂಧಿ ೨ : ಶಾಪವಿಚಾರದಲ್ಲಿ ಏನು ಮಾಡಬೇಕೆಂದೇ ತಿಳಿಯದೆ ಅಗ್ನಿಯು ಇದ್ದಕ್ಕಿದ್ದಲ್ಲೇ ಅದೃಶ್ಯಸ್ಥಾನವನ್ನು ಸೇರಿಬಿಟ್ಟನು. ಅದರಿಂದಾಗಿ ಲೋಕಕ್ಕೆ ಪ್ರಳಯವೇ ಸಂಭವಿಸಿತು. ಋಷಿನಿವಹವು ಬ್ರಹ್ಮನಲ್ಲಿ ಹೋಗಿ ಬೆಸಗೊಂಡೀತು. ಅವಕ್ಕೆ ಬ್ರಹ್ಮನು ಸಮಾಧಾನ ಹೇಳಿ ಹವ್ಯವಾಹವನನ್ನು ತಾನೇ ಕರೆದನು. ಅವನಿಗೂ ಧೈರ್ಯ ನೀಡಿ ಕರ್ತವ್ಯದ ಎಚ್ಚರಿಕೆ ಕೊಟ್ಟು, ಅಶುಚಿತ್ವದ ಭಯವನ್ನು ನೀಗೆಂದು ಬೋಧಿಸಿದನು. ಅಗ್ನಿಯು ’ಹಸಾವ’ವೆಂದನು. ಪುನಃ ಜಗಂಗಳಿಗೆ ಮಂಗಳವಾಯಿತು. (೧-೨೩)

ಶೌನಕನ ಪಿತಾಮಹನಾದ ರುರುವಿನ ಅದುಭುತದ ಕಥೆ ಮುಂದೆ ಬರುತ್ತದೆ. ಒಮ್ಮೆ ಅಪ್ಸರೆ ಮೇನಕೆಯು ಗಂಧರ್ವರಾಜ ವಿಶ್ವಾವಸುವನ್ನು ಕೂಡಿ ತಾನು ಪಡೆದ ಹೆಣ್ಣು ಶಿಶುವನ್ನು ಅಡವಿಯಲ್ಲಿ ಬಿಸುಟಳು. ನದಿಯ ದಂಡೆಯೊಂದರಲ್ಲಿ ಬಿದ್ದಿದ್ದ ಆ ಶಿಶುವನ್ನು ಸ್ಥೂಲಕೇಶನೆಂಬ ಮುನಿಯು ಕಂಡು ತಂದು ಸಲಹಿದನು. ಅತಿಶಯ ಲಾವಣ್ಯವತಿಯಾದ ಅವಳಿಗೆ ಪ್ರಮದ್ವಯರೆಂದು ಹೆಸರಿಟ್ಟನು. ಮುಂದೆ ಆ ಲೋಲನೇತ್ರೆಯು ಒಮ್ಮೆ ವಶದಲ್ಲಿ ಒಬ್ಬಳೇ ಎಡೆಯಾಡುತ್ತಿದ್ದುದನ್ನು ತರುಣ ರುರುವು ಕಂಡು ಮನಸೋತನು. ಆಶ್ರಮಕ್ಕೆ ಮರಳಿ ಅವಳನ್ನೇ ನೆನೆಯುತ್ತ ಕೊರಗಿ ಸೊರಗಿದನು. ಇದನ್ನು ಕಂಡು ಶಂಕೆಯಿಂದ ಅವನ ತಂದೆ ಪ್ರಮತಿಯು ವಿಚಾರಿಸಲಾಗಿ ರುರುವು ಇರುವ ವಿಷಯವನ್ನು ಮರೆಮಾಚದೆ ತಿಳಿಸಿದನು. ಹೀಗೆ ತನ್ನ “ಮಗನನ್ನು ಮರುಗಿಸುವ ಮಾನಿನಿ ಯಾರು?” ಎಂದು ಕಾಣಲು ಕುತೂಹಲಿಯಾದ ಪ್ರಮತಿಯು ಸ್ಥೂಲಕೇಶಮುನಿ ಆಶ್ರಮಕ್ಕೆ ಬಂದು ತನ್ನ ಸುತನು “ಬಾಲಿಕೆಯ ಬಲೆಯಲ್ಲಿ ಬಿದ್ದ ಪರಿಯ”ನ್ನು ವಿವರಿಸಿದನು. ಸ್ಥೂಲಕೇಶನು ಇದನ್ನ ಕೇಳಿ ಸರಿಯಾದದ್ದೇ ನಡೆಯಿತೆಂದು ಸಂತೋಷಪಟ್ಟು ಸುಮೂಹೂರ್ತದಲ್ಲಿ ಪ್ರಮದ್ವರೆಯನ್ನು ರುರುವಿಗೆ ಲಗ್ನವಾಗಿಸಿಕೊಟ್ಟನು. (೨೪-೩೯)

ಸಂಧಿ ೩ : ರುರುವು ಪ್ರವದ್ವರೆ ಸಹಿತನಾಗಿ ಗಾರ್ಹಸ್ಥ್ಯ ಧರ್ಮವನ್ನು ನಡೆಸಿಕೊಂಡು ಹೋಗುತ್ತಿದ್ದನು. ಒಂದು ದಿನ, ಪ್ರವದ್ವರೆಯು ಮುನಿ ವದುಗಳ ಜೊತೆಯಲ್ಲಿ ಅಡವಿಯಲ್ಲಿ ಸಂಚರಿಸುತ್ತಿರುವಾಗ ಅರಿಯದೆಯೇ ಕಾಳೋರಗವೊಂದನ್ನು ತುಳಿದಳು. ಕೆರಳಿದ ಸರ್ಪವು ವಿಷದ ಹಲ್ಲನ್ನೂರಿತು ನಿಲ್ಲದೇ ಬಿದ್ದು ಬಿಟ್ಟ ಪ್ರಮದ್ವರೆಯ ಪ್ರಾಣವೇ ಕೂಡಲೇ ಹಾರಿಹೋಯಿತು. ಮುನಿ ಸಮೂಹವೆಲ ಸುತ್ತ ನೆರೆಯಿತು. ಇದ್ದಕ್ಕಿದ್ದಂತೆ ಒದಗಿಬಂದ ಈ ದುರಂತವನ್ನು ನೆನೆದು ದುಗುಡ ಹೊತ್ತು ನಿಂಇತು. ರುರುವಿನ ಮನದ ದುಃಸ್ಥಿತಿಯನ್ನಂತೂ ಹೇಳಸಲ್ಲದು. ಎಲ್ಲರೆದುರು ರೋದಿಸುವುದಕ್ಕೆ ಲಜ್ಜಿತನಾದ ಅವನು ಹೊರಹೊರಟು ಕಾನನದ ಏಕಾಂತವನ್ನು ಸೇರಿದನು. ಅಲ್ಲಿ ಪರಿಪರಿಯಾಗಿ ಹಳವಿಸಿದನು. ಪಿತೃವೃಂದಕ್ಕೆಲ್ಲ ಮೊರೆಯಿಟ್ಟನು, ದೇವರುಗಳನ್ನೆಲ್ಲ ಬೇಡಿಕೊಂಡನು. ಪ್ರಮದ್ವರೆಯನ್ನು ಮರಳಿ ಬದುಕಿಸುವುದು ಹೇಗೆಂದು ಪಿತೃವೃಂದವು ಚಿಂತಾತುರವಾಯಿತು. ಅಮರಗಣವು ಮಾತ್ರ ಅದಕ್ಕೊಂದು ಉಪಾಯವನ್ನು ಯೋಚಿಸಿ ರುರುವಿನೆಡೆಗೆ ದೂತನೊಬ್ಬನನ್ನು ಅಟ್ಟಿತು. ಅವನು ಬಂದು ಆಯುಷ್ಯ ತೀರಿದ ರುರುವು ತನ್ನಾಯುಷ್ಯದ ಅರ್ಧವನ್ನು ಕೊಟ್ಟರೆ ಬದುಕಿಸಬಹುದೆಂದು ಸೂಚಿಸಲು, ರುರುವು ತಡವಿಲ್ಲದೆ ತನ್ನಾಯುಷ್ಯರ್ಧವನ್ನು ಸಜಲಾರ್ಪಣ ಮಾಡಿಕೊಟ್ಟನು. ಆದರೂ ಸತಿ ಏಳದಿರುವುದನ್ನು ಕಂಡು ದೇವದೂತನು ತಾನೇ ಯಮನಲ್ಲಿಗೆ ಹೋಗಿ ವಿಷಯವನ್ನು ವಿವರಿಸಲು ಅವನು ಕೂಡಲೇ ಜೀವವನ್ನು ಮರಳಿಕೊಟ್ಟನು. ಪ್ರಮದ್ವರೆಯು ನಿದ್ದೆ ತಿಳಿದಂತೆ ಎದ್ದು ಕುಳಿತಳು. ಸತಿ-ಪತಿಯನು ಪುನಃ ಕೂಡಿದುದನ್ನು ಕಂಡು ಸಕಲರೂ ಸಂತಸಪಟ್ಟರು. (೧-೩೬)

ಸಂಧಿ – ೪ : ತನ್ನ ಹೆಂಡತಿಯನ್ನು ಕೊಂದುಹಾಕಿದ್ದ ಉರಗವೃಂದದ ಮೇಲೆ ರುರುವಿಗೆ ವೈರ ಹುಟ್ಟಿ ಅವುಗಳನ್ನು ಕಂಡಲ್ಲಿ ಕೊಲ್ಲತೊಡಗಿದನು. ಹೀಗಿರುತ್ತಲೊಂದು ದಿನ, ಡುಂಡುಭನೆಂಬ ಹಾವನ್ನು ಕಂಡು ದಡಿಗೊಳ್ಳುತ್ತಿರುವಷ್ಟರಲ್ಲಿ ಅದು ಬೆದರಿ ತಾನು ನಿರಪರಾಧಿಯೆಂದೂ, ಹಿಂಸೆ ಸಲ್ಲದೆಂದೂ ಬೇಡಿಕೊಂಡಿತು. ಇದರಿಂದ ಆಶ್ಚರ್ಯಪಟ್ಟ ರುರುವು ನೀನಾರೆಂದು ಕೇಳಲು ತನ್ನ ಪೂರ್ವಸಂಗತಿಯನ್ನು ಅದು ಹೇಳಿತು. (೧-೮)

“ಪೂರ್ವಜನ್ಮದಲ್ಲಿ ನಾನು ಸಹಸ್ರಪಾದನೆಂಬ ಋಷಿಕುಮಾರನಾಗಿದ್ದೆನು. ನನಗೆ ಖಗಮನೆಂಬ ಮಿತ್ರನೊಬ್ಬನಿದ್ದನು. ಗೆಳೆತನದ ಸಲಿಗೆಯಲ್ಲಿ ನಾನೊಮ್ಮೆ ಅವನೊಡನೆ ಮುಗ್ಧಚೇಷ್ಟೆ ಮಾಡಿದೆನು – ಕಟ್ಟಿಗೆಯ ಹಾವುಮಾಡಿ ಅವನ ಮೈಮೇಲೆ ಒಗೆದನು. ಅದರಿಂದ ಬೆಚ್ಚಿ ಬೆದರಿದ ಅವನು ರೋಷದಿಂದ ವಿಷರಹಿತವಾದ ಸರ್ಪನಾಗೆಂದೂ, ಮುಂದೆ ರುರುವೆಂಬುವನ ಸಂಗದಿಂದ ನಿನಗೆ ಶಾಪವಿಮೋಚನೆಯಾಗುವುದೆಂದೂ ಹೇಳಿದರು. ಇಂದು ಅದು ಕೂಡಿಬಂದಿತು” (೯-೧೪)

ಹೀಗೆಂದು ಡುಂಡುಭನು ಸರ್ಪಾಕೃತಿಬಿಟ್ಟು ನಿಜದೇಹವನ್ನು ತಾಳಿ ರುರುವಿನೊಡನೆ ಸರ್ಪಹಿಂಸೆಯನ್ನು ನಿಲ್ಲಿಸು ಎಂದು ಹೇಳುತ್ತ ಹಿಂದೆ ಜನಮೇಜಯನು ಕೈಕೊಂಡಿದ್ದ ಸರ್ಪಾಧ್ವರದ ಪ್ರಸ್ತಾಪಮಾಡಿದನು. ಆ ಸರ್ಪಯಾಗದ ಕರ್ತೃ, ಕಾರಣಗಳ ವಿವರಗಳನ್ನರಿಯಲು ಜನಮೇಜಯನು ಕುತೂಹಲಿಯಾಗಿ ಕೇಳಿದನು. ಆದರೆ ಅದನ್ನು ವಿಪ್ರಮುಖದಿಂದ ಕೇಳಿಕೊಳ್ಳಬಹುದೆಂದು ಸೂಚಿಸಿ ಸಹಸ್ರಪಾದನು ಅಂತರ್ಧಾನನಾಗಿಬಿಟ್ಟನು. ಮನೆಗೆ ಮರಳಿದ ಮೇಲೆ ರುರುವು ಆ ಕುರಿತು ತಂದೆ ಪ್ರಮತಿಯೊಡನೆಯೇ ಬೆಸಗೊಳ್ಳಲಾಗಿ ಅವನು ಆ ವೃತ್ತಾಂತವನ್ನು ಸಂಕ್ಷೇಪದಲ್ಲಿಯೇ ಕೇಳುವಂತಾಯಿತು. (೧೫-೨೧)

[1] ಭಾರತ ಕಥಾಮಂಜರಿ-ಸಂ: ‘ಸುಜನಾ’ (ಸರಸಸಾಹಿತ್ಯ ಪ್ರಕಾಶನ,ಮೈಸೂರು; ೧೯೬೪ ಮುನ್ನುಡಿ ಪು. iv.

[2] ಕನ್ನಡ ಭಾಗವತ (ದಶಮಸ್ಕಂದ)-ಸಂ: ಕೆ. ವೆಂಕಟರಾಮಪ್ಪ ಪೀಠಿಕೆ, ಪು. vii (ಪ್ರ: ಶಾರದಾಮಂದಿರ, ಮೈಸೂರು)

[3] ಮಹಾಭಾರತಂ (ಪೌಲೋಮ ಆಸ್ತೀಕಪರ್ವಗಳು)- ಸಂ: ಶ್ರೀ ವಿ. ಶ್ಯಾಮಚಾರ್ಯ ಅವತರಣಿಕೆ ಪು. x (Government Oriental Library Series)

[4] ಕನ್ನಡ ಸಾಹಿತ್ಯ ಚರಿತ್ರೆ – ಡಾ|| ರಂ.ಶ್ರೀ ಮುಗಳಿ ಪ್ರ: ಉಷಾ ಸಾಹಿತ್ಯಮಾಲೆ, ಮೈಸೂರು ೧೯೫೩ (ಪ್ರಥಮಾವೃತ್ತಿ) ಪು. ೨೬೯ ಮತ್ತು ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ – ತ.ಸು. ಶಮರಾಯ, ಮೇ. ರಾಜೇಶ್ವರಯ್ಯ (ತ.ವೆಂ. ಸ್ಮಾರಕ ಪ್ರಂಥಮಾಲೆ ೧೯೭೪) ಪು. ೩೫೬.

[5] ಮಹಾಲಿಂಗರಂಗ ಕವಿಯ ಅನುಭವಾನುಮೃತ, ಅ. ೨-೬೪ ನೋ. “ನಿಚ್ಚನಿಚ್ಚಲು ಹೋರುವರು ಗಜ-ಕಚ್ಛಪನ್ಯಾಯದಲಿ”