ಪಂಚಮ ವೇದವೆಂದು ಪರಿಗಣಿತವಾದ ಮಹಾಭಾರತ ಭಾರತೀಯ ಸಂಸ್ಕೃತಿಯ ಜೀವ-ಜೀವಾಳವೆನಿಸಿದೆ. ಭಾರತದಲ್ಲಷ್ಟೇ ಅಲ್ಲ, ಅದರಾಚೆಗೆ ಬೃಹದ್ಭಾರತದಲ್ಲಿಯೂ ಮಹಾಭಾರತ ಮೊಳಗಿದೆ. ಅಂದಮೇಲೆ, ಭಾರತೀಯ ಸಾಹಿತ್ಯದ ಮುಕ್ಕಾಲು ಪಾಲು ಮಹಾಭಾರತದಿಂದಲೇ ಪ್ರೇರಣೆಗೊಂಡಿದೆ ಎಂದರೆ ಅಚ್ಚರಿ ಪಡುವ ಕಾರಣವಿಲ್ಲ. ದೇಶಭಾಷೆಯ ಸಾಹಿತ್ಯಗಳಲ್ಲಿ ಮಹಾಭಾರತವನ್ನಾಧರಿಸಿ ಬರೆದ ಕೃತಿಗಳು ಅನಂತ. ಕನ್ನಡವೂ ಇದಕ್ಕೆ ಅಪವಾದವಾಗದೆ, ಮಹಾಭಾರತದ ಮೇರುಕೃತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಪಂಪಭಾರತ, ಕುಮಾರವ್ಯಾಸ ಭಾರತಗಳು ಕನ್ನಡದ ಎರಡು ಕಣ್ಣುಗಳಾಗಿ ಬೆಳಗುತ್ತಿರುವುದೇ ಇದಕ್ಕೆ ಸಾಕ್ಷಿ.

ಕನ್ನಡ ವಿಭಾಗವು ತನ್ನ ಮುಂದಿಟ್ಟುಕೊಂಡ ಹಲವು ಮಹಧ್ಯೇಯಗಳಲ್ಲಿ ಪ್ರಾಚೀನಕೃತಿಗಳ ಸಂಸ್ಕರಣ ಹಾಗೂ ಪ್ರಕಟಣೆಯೊಂದು. ನಮ್ಮ ಪ್ರಾಚೀನ ಸಾಹಿತ್ಯ ಸಹೃದಯರ ಕೈಗೆ ಪ್ರಾಪ್ತವಾಗಿ ಅವರ ಜೀವನ ಪಾವನವಾಗಬೇಕೆಂಬ ಬಯಕೆ ಈ ಧ್ಯೇಯದ ಹಿಂದೆ. ತದನುಗುಣವಾಗಿ, ನಮ್ಮ ಸಾಹಿತ್ಯದ ಬೃಹತ್ಕೃತಿ ಮಹತ್ಕೃತಿಗಳೆನ್ನಲ್ಲ ಸಂಸ್ಕರಿಸಿ ಪ್ರಕಟಿಸುವ ಯೋಜನೆ ನಮ್ಮ ಮುಂದಿದೆ. ಕುಮಾರವ್ಯಾಸ ಭಾರತವನ್ನು ಈ ದೃಷ್ತಿಯಿಂದ ಸಂಸ್ಕರಿಸಿ ಪ್ರಕಟಿಸುವುದು ಅವಶ್ಯವೆಂದು ಆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದಕ್ಕಾಗಿ ನಾಡಿನ ನಾನಾಭಾಗದ ಹಸ್ತಪ್ರತಿಗಳನ್ನು ಶೇಖರಿಸಿ ಅವುಗಳ ಸೂಕ್ಷ್ಮ ಪರಿಶೀಲನೆ ಮಾಡುತ್ತಿರುವಾಗ ಮಹಾಭಾರತದ ಮೂಲಪರ್ವಗಳೆನಿಸಿದ ಕೆಲವು ಅಧ್ಯಾಯಗಳು ಪ್ರತಿಯೊಂದು ಕಟ್ಟಿನಲ್ಲಿಯೂ ಕಾಣತೊಡಗಿದವು. ಪಂಪ, ಕುಮಾರವ್ಯಾಸರಂಥ ಕವಿಗಳು ಇಡೀ ಕಥಾವಸ್ತುವಿನ ಸಾರಸರ್ವಸ್ವವನ್ನು ಹಿಡಿದು ಅದರ ಮೇಲೆ ತಮ್ಮ ಪ್ರತಿಭೆಯನ್ನು ಕೇಂದ್ರೀಕರಿಸಿ ಮಿಕ್ಕ ಭಾಗವನ್ನು ಸಂಗ್ರಹವಾಗಿ ಹೇಳಿರುವುದುಂತು. ಮುಂದೆ ಈ ಕಾವ್ಯಗಳನ್ನು ಓದತೊಡಗಿದ ಭಕ್ತವೃಂದ ಅವರು ಸಂಗ್ರಹವಾಗಿ ಹೇಳಿದುದನ್ನು ವಿಸ್ತರಿಸುವ ಅವಶ್ಯಕತೆಯನ್ನು ಕಂಡುಕೊಂಡಿತು. ಮುಂದಣ ಕವಿಗಣ ಆ ಮಹತ್ಕಾರ್ಯವನ್ನು ಕೈಗೊಂಡು ಪೂರೈಸಿ, ಸಾಹಿತ್ಯದೇವಿಯ ಸಿರಿಮುಡಿಗೆ ತಮ್ಮ ತಮ್ಮ ಪುಷ್ಪಗಳನ್ನು ಅರ್ಪಿಸಿರುವರು. ಅವರೆಲ್ಲ ಕನ್ನಡ ನುಡಿ ಬದುಕಿರುವವರೆಗೆ ಸ್ಮರಣಾರ್ಹರು. ಈ ಸಾಲಿನಲ್ಲಿ ಪೌಲೋಮ-ಆಸ್ತೀಕಪರ್ವಗಳ ಕವಿ ನಿಂತಿರುವನು.

ಪೌಲೋಮ-ಆಸ್ತೀಕಪರ್ವ ಮಹಾಭಾರತದ ಪ್ರಾರಂಭದ ಕಥೆಗಳನ್ನೊಳಗೊಂಡಿದೆ. ಆ ಭಾಗನ್ನೋದುತ್ತಲೇ ಸೂತ ಪೌರಾಣಿಕ, ಭೃಗು, ರುರು ಮೊದಲಾದ ಮುನಿಗಳ ಉಲ್ಲೇಖ ಬರುತ್ತಿದೆ. ಮಹಾಭಾರತದ ಕಥೆ ಸಾಂಪ್ರದಾಯಿಕವಾಗಿ ಸೂತ ಪೌರಾಣಿಕನಿಂದಲೇ ಪ್ರಾರಂಭವಾಗಬೇಕು. ಹಾಗೆಯೇ ಆಗುತ್ತದೆ. ಪೌಲೋಮಪರ್ವ ನಮ್ಮ ಸಂಸ್ಕೃತಿಯ ಒಂದು ದಿವ್ಯ ಆದರ್ಶನವನ್ನು ಮುಂದಿಡುತ್ತದೆ. ಮಹಾಭಾರತ ಜನತೆಯ ಹೃದಯದಿಂದ ನೆಗೆದು ಅವರ ದಿವ್ಯ ಆದರ್ಶಗಳ ಕನ್ನಡಿಯಾಗಿದೆ. ರುರು ತನ್ನ ಹೆಂಡತಿಗಾಗಿ ಅರೆ ಆಯುಷ್ಯವನ್ನೇ ತ್ಯಾಗಮಾಡುವ ಆದರ್ಶ ಇಡೀ ಪ್ರಪಂಚದಲ್ಲಿಯೇ ಅಪೂರ್ವವೆನಿಸಿದೆ. ಆ ಕಥೆಯನ್ನ ಓದಿದೊಡನೆಯೇ ಮೈನವಿರೆದ್ದು ಕುಣಿದಾಡಬೇಕೆನಿಸುತ್ತದೇ. ಒಂದು ದೃಷ್ಟಿಯಿಂದ ಮಹಾ ಕವಿಗಳು ಸಂಗ್ರಹಿಸಿ ಹೇಳಿದ ಈ ಕಥೆಗಳನ್ನು ವಿಸ್ತರಿಸಿ ಹೇಳಿದ ಹೋಗಿದ್ದರೆ, ಕನ್ನಡಿಗರ ಪಾಲಿಗೆ ಈ ಕಥೆಗಳು ದೂರವಾಗಬಹುದಿತ್ತೇನೊ. ಮೂಲ ಸಂಸ್ಕ್ರುತವನ್ನೋದಿ ತಿಳಿದುಕೊಳ್ಳುವವರೆಷ್ಟು ಜನ? ಅದಕ್ಕಾಗಿ ಈ ಕಾವ್ಯವನ್ನು ನಮ್ಮ ಬೃಹದ್ಯೋಜನೆಯ ಪೂರ್ವಪೀಠಿಕೆ ಎಂದು ಸಂಸ್ಕರಿಸಲಾಗಿದೆ.

ಪೌಲೋಮ-ಆಸ್ತೀಕಪರ್ವಗಳ ಈ ಕಾವ್ಯ ಕನ್ನಡಿಗರಿಗೆ ಅರ್ಧ ಶತಮಾನದ ಹಿಂದೆ ಪ್ರಕಟವಾಗಿ ದೊರೆತಿತ್ತಾದರೂ ಇಂದಿನವರಿಗೆ ಅದರ ಪರಿವೆಯೇ ಇಲ್ಲ ದಂತಾಗಿದೆ ಹಲ-ಕೆಲವು  ಮಹಾಕವಿಗಳ ಕೃತಿಗಳನ್ನೋದಿ ಅವರ ನೆರಳಿನಲ್ಲಿ ನಿಂತು ಮಿಕ್ಕುದನ್ನು ಕಡೆಗಣಿಸಿದರೆ ನಾವು ಅನ್ಯಾಯ ಬಗೆದಂತಾಗುತ್ತದೆ. ಕನ್ನಡದಲ್ಲಿ ಬರೆದ ಪ್ರತಿಯೊಬ್ಬ ಕವಿಗೂ ಅವನವನ ಸ್ಥಾನ ಸಲ್ಲಬೇಕು. ಈ ದೃಷ್ಟಿಯಿಂದ ನಮ್ಮ ವಿಭಾಗದ ಅಧ್ಯಾಪಕರು ಈ ಕೃತಿಗಳ ಸಂಶೋಧನೆಗೆ ತೊಡಗಿರುವದು ಸ್ತೋತ್ರಾರ್ಹ. ನಮ್ಮ ಹಿರಿಯ ಕವಿಗಳೂ. ವಿದ್ವಾಂಸರೂ ಆದ ಶ್ರೀಮಾನ್ ಕವಿಭೂಷಣ ಬೆಟಗೇರಿ ಕೃಷ್ಣಶರ್ಮಾ ಅವರು ಕೆಲಕಾಲ ನಮ್ಮೊಡನಿದ್ದುದೊಂದು ಸುಯೋಗ. ಆಗಲೇ ಈ ಕೃತಿಯ ಸುಳುಹು ಮೈದೋರಿತು. ಮುಂದೆ ಆ ವಿಭಾಗದ ಹೊಣೆಹೊತ್ತ ಆತ್ಮೀಯ ಮಿತ್ರರಾದ ಡಾ.ಕೆ.ಜಿ.ಶಾಸ್ತ್ರಿಯವರು ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಈಗ ಸಹೃದಯರ ಕೈಗೆ ನೀಡುತ್ತಿರುವುದು ಸಂತೋಷದಾಯಕವಾಗಿದೆ. ಇವರಿಗೆ ನಮ್ಮ ಹಾರ್ದಿಕ ವಂದನೆಗಳು.

ಮೂಲ ಕಾವ್ಯವನ್ನು ಅನೇಕ ಪ್ರತಿಗಳ ಸಹಾಯದಿಂದ ಶಾಸ್ತೀಯವಾಗಿ ಪರಿಷ್ಕರಿಸಿರುವರು. ಇದು ಸುಲಭಸಾಧ್ಯವಾದ ಕೆಲವಲ್ಲ ಮಹಾಭಾರತದ ಕಥೆ ಜನತೆಯ ನಾಲಿಗೆಯ ಮೇಲೆ ನಲಿಯುತ್ತಿರುವದರಿಂದ ಅದರಲ್ಲಿ ಮಾರ್ಪಾಡುಗಳು ಸಹಜವಾಗಿಯೇ ಉದ್ಭವಿಸುತ್ತವೆ. ಹಸ್ತಪ್ರಗತಿಗಳು ಇಂಥ ವ್ಯತ್ಯಾಸಗಳ ವೈವಿಧ್ಯವನ್ನು ಪ್ರಕಟಿಸುತ್ತವೆ. ಇವುಗಳ ರಾಶಿಯಲ್ಲಿ ಮೂಲ ಕಾವ್ಯದ ಸ್ವರೂಪವೇನೆಂಬದನ್ನು ಸಂಪಾದಕರು ಬಹು ಸಕ್ಷ್ಮಮತಿಯಿಂದ ನಿಷ್ಕರ್ಷಿಸಬೇಕಾಗುತ್ತದೆ. ಮುಂದಿನ ಮಹಾಭಾರತದ ಸಂಸ್ಕರಣಕ್ಕೆ ಇದು ಆದಿ, ಇದು ಹಾದಿ ಎಂಬಂತೆ ಈ ಕಾರ್ಯವನ್ನು ಪೂರೈಸಿರುವರೆಂದು. ಧೈರ್ಯದಿಂದ ಹೇಳಬಯಸುತ್ತೇನೆ.

ಇದಕ್ಕೆ ಬರೆದ ವಿಸ್ತಾರದ ಮುನ್ನುಡಿ ಬಹು ಬೆಲೆಯುಳ್ಲದ್ದು. ಆದರಲ್ಲಿ ಅನೇಕ ಸಮಸ್ಯೆಗಳನ್ನೆತ್ತಿಕೊಳ್ಳಲಾಗಿದೆ. ಪೌಲೋಮ-ಆಸ್ತೀಕಪರ್ವಗಳ ಕರ್ತ್ಯಯಾರು ಎಂಬುದೇ ಮೊದಲನೆಯ ಸಮಸ್ಯೆ. ಚಾಟುವಿಪಲನಾಥಾ ಇದರ ಕರ್ತ್ಯವೆಂಬ ಪರಿಪಾಟ ಹೇಗೋ ರೂಢವಾಗಿ ಬಂದಿತ್ತು ಕವಿಚರಿತೆಯೂ ಅದನ್ನೇ ಸಮರ್ಥಿಸುತ್ತದೆ. ಆದರೆ ಇದೀಗ ನಮ್ಮ ಸಂಪಾದಕರು ಅಲ್ಲಿ ಬಂದಿರುವ ಕೆಲವು ಪದಪ್ರಯೋಗಗಳನ್ನು ಸಹೃದಯರ ಮುಂದೆ ಎತ್ತಿ ತೋರಿಸಿ ‘ಸಂದಾನಂದಯೋಗಿ’ ಅದರ ಕರ್ತ್ಯವಾಗಿದ್ದು ಮುಂದೆ ಆತನಿಗೇ ‘ಚಾಟುವಿಠಲನಾಥ’ ಎಂಬ ಬಿರುದುಬಂದಿರಬಹುದೆಂಬ ವಿಷಯವನ್ನು ಮಂಡಿಸಿರುವುದು ಸೂಕ್ತವಾಗಿದೆ. ಸದಾನಂದನೇ ಪೌಲೋಮ-ಆಸ್ತಿಕಪರ್ವಗಳ ಕರ್ತ್ಯುವೆಂಬುದರಲ್ಲಿನ್ ಸಂದೇಹವಿಲ್ಲ.

ಕಾವ್ಯದ ಕಥಾಸಾರ, ಅದರ ವಿಮರ್ಶೆ ಸಂದೇಶಗಳು ಈ ಮುನ್ನುಡಿಯ ಶಿಖರದಂತಿವೆ. ಕಿರಿದರಲ್ಲಿ ಸಿರಿಯನ್ನ ಹೇಳುವಂತೆ ಪೌಲೋಮ-ಆಸ್ತಿಕ ಪರ್ವಗಳ ಸಂದೇಶವನ್ನು ಸಾಮಾನ್ಯ ಓದುಗರಿಗೂ ಸುಲಭವೇದ್ಯವಾಗುವಂತೆ ವಿವರಿಸಿರುವರು. ಜೋಕೆ-ತೂಕಗಳಿಂದ ಕಾವ್ಯ-ವಿಮರ್ಶೆಯನ್ನ ಪೂರೈಸಿರುವರು ಸದಾನಂದ ಕವಿಯ ಪ್ರಾಸಾದಿಕ ವಾನಿಯನ್ನೂ ಆತನ ಸತ್ಕವಿತ್ವಶಕ್ತಿಯನ್ನೂ ಎಲ್ಲೆಲ್ಲಿಯೂ ಮರೆಯದಂತೆ ಅಭಿವ್ಯಕ್ತಪಡಿಸಿರುವರು. ಈ ಕವಿಯ ಸ್ವಂತಿಕೆ ಭಾವದಲ್ಲಿ ಭಾಷೆಯಲ್ಲಿ ಏನಿದೆ, ಎಷ್ಟಿದೆ ಎಂಬುದನ್ನು ವಿವರವಾಗಿ ತಿಳಿಸಿ, ಮರೆತುಹೋಗಬಹುದಾಗಿದ್ದು ಒಬ್ಬ ಕವಿಯ ಹಾಗೂ ಆತನ ಕೃತಿಯ ಪೂರ್ಣ ಪರಿಚಯವನ್ನು ಇಲ್ಲಿ ಮಾಡಿಕೊಟ್ಟುದು ಅತ್ಯಂತ ಸ್ತೋತ್ರರ್ಹವಾಗಿದೆ.

ಪೌಲೋಮ-ಆಸ್ತಿಕಪರ್ವಗಳು ಪ್ರಾಸದಿಕ ವಾಣಿಯಿಂದ ಹೊಮ್ಮಿ ದ ಸರಸ ಕಥೆಗಳು. ವಸ್ತುವಿನಲ್ಲಿ ಜನತೆಯ ವಿತ್ತವನ್ನು ಸೆಳಿಯುವ ಮಾನವೀಯ ಅಂಶವಿದೆ. ಅಲ್ಲಿ ಬಂದಿರುವ ಭೃಗು, ರುರು, ಆಸ್ತೀಕ ಮೊದಲಾದವರೆಲ್ಲೆ ಮಾನವತೆಯ ಮೇಲೆ ದೇವತ್ವದ ಮಂದಿರವನ್ನು ಕಟ್ಟಿರುವರು. ಅದನ್ನು ಕವಿ ಬಹಳ ಚೆನ್ನಾಗಿ ಕಂಡು ಕೊಂಡಿರುವನು. ಆತನ ಕಥನಕೌಶಲ ನಿಕವಾಗಿಯೂ ಮೆಚ್ಚತಕ್ಕಂಥದು ವರ್ಣನೆಗಳ ಭಾರದಿಂದ ಕಾವ್ಯವನ್ನು ತಲೆ ಕೆಳಗುಮಾಡಿದ ಕಾಲವೊಂದಿತ್ತು. ಅದರ ಹಂಗು ಹರಿದು ವಸ್ತು, ಪಾತ್ರ, ಸಹೃದಯರು – ಈ ಮೂರು ಸೂತ್ರಗಳ ಮೇಲೆ ಕಾವ್ಯದ ಒಲೆ ಹೂಡಿರುವುದು ಒಂದು ವೈಶಿಷ್ಟ್ಯ. ಕವಿ ಸರಿಯಾದ ಪಾಕಮಾಡಿನಮಗೆಲ್ಲ ಉಣಬಡಿಸಿರುವನು. ಕಥನಕಲೆಯ ಔಚಿತ್ಯ, ಪಾತ್ರಪೋಷಣೆಯ ಸೂಕ್ಷ್ಮ ದೃಷ್ಟಿ, ಶೈಲಿಯ ಸೊಬಗು-ಮೂರನ್ನೂ ಇಲ್ಲಿ ಕಾಣುತ್ತೇವೆ, ಇದು ಆನೇಕ ಕಥೆಗಳ ಗುಚ್ಚವಾಗಿರುವದರಿಂದ ಮೂಲ ಕಥೆಗೆ ಉಪಕಥೆಗಳನ್ನು ಜೋಡಿಸಿ ಕೊಳ್ಳುವ ತಂತ್ರವನ್ನು ಕವಿಯು ಹದವರಿತು ಕಂಡುಕೊಂಡಿರುವನು. ಅಲ್ಲಿ ಬಂದಿರುವ ತಂತ್ರವನ್ನು ಕವಿಯು ಹದವರಿತು ಕಂಡುಕೊಂಡಿರುವನು. ಅಲ್ಲಿ ಬಂದಿರುವ ಪಾತ್ರಗಳಿಗೆ ಜೀವಕಳೆಯನ್ನು ತುಂಬಿ ಸ್ವಾನುಭವದ ಲೋಕವನ್ನು ಕವಿಯು ಸೃಜಿಸಿರುವನು. ಆವನ ದೇಸಿ ಬೆಡಗು-ಬಿನ್ನಾಣಗಳಿಂದ ಕೂಡಿರುವದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು. ಕುಮಾರವ್ಯಾಸನ ವರಪ್ರಸಾದವನ್ನು ಪಡೆದ ಈ ಕವಿ ಆತನಿಗೆ ಸಚ್ಛಷ್ಯನಾಗುವಂತೆ ಸತ್ಕಾವ್ಯವನ್ನು ರಚಿಸಿರುವನು. ಅದನ್ನು ಸಂಸ್ಕರಿಸಿದ ನಮ್ಮ ಸಂಪಾದಕರು ಸತ್ಕಾರ್ಯವನ್ನು ಮಾಡಿರುವರು. ಅವರಿಗೆ ಧನ್ಯವಾದಗಳನ್ನರ್ಪಿಸಿ ವಿರಮಿಸುತ್ತೇನೆ.

ಆರ್. ಸಿ. ಹಿರೇಮಠ
ಕನ್ನಡ ಅಧ್ಯಯನ ಸಂಸ್ಥೆ,
ಕ.ವಿ.ವಿ.ಧಾರವಾಡ