ಕಂಬಾರ ಬರೆಯುವಂಥ ನಾಟಕವಾಗಲಿ, ಪದ್ಯಗಳಾಗಲಿ ಖಂಡಿತ ಪಾಶ್ಚಾತ್ಯರಲ್ಲೂ ಇಲ್ಲ.

– ಯು.ಆರ್.ಅನಂತಮೂರ್ತಿ

* * *

 ಕಂಬಾರರು ಕನ್ನಡದ ರಂಗಭೂಮಿಗೆ ಮಳೆ ತಂದ ಋಷ್ಯಶೃಂಗರು. ಹಾಡುಗಳೆಂದರೆ ಕಂಪೆನಿ ಹಾಡುಗಳೆಂದು ಮಾತ್ರ ಅರ್ಥವಿದ್ದಾಗ ಮೊಟ್ಟ ಮೊದಲಿಗೆ ’ತೊಡಗಿಸುವ’ ’ಗತ್ಯಾತ್ಮಕ’ ಹಾಡುಗಳ ನಾಟಕ ಬರೆದ ಕಂಬಾರರ ಕವಿಸಾಮರ್ಥ್ಯದ ಬಗ್ಗೆ ನನಗಂತೂ ತುಂಬಾ ಗೌರವ, ಭಯ, ಅಸೂಯೆ. ನಮ್ಮಲ್ಲಿ ನಾಟಕಕಾರ ಮತ್ತೆ ಕವಿಯೆನಿಸಿಕೊಂಡಿದ್ದಾನೆ ಕಂಬಾರರ ಮೂಲಕ. ಅವರ ಜೋಕುಮಾರಸ್ವಾಮಿಯನ್ನು ನಾನು ಹುಡುಕಿದೆನೋ ಅಥವಾ ಜೋಕುಮಾರಸ್ವಾಮಿ ನನ್ನನ್ನು ಹುಡುಕಿದನೋ ನನಗಂತೂ ಅದರ ಪ್ರಯೋಗಕ್ರಿಯೆ ’ಯುರೇಕಾ’ ಅನ್ನುವಂಥಾ ಸರಳ ಅನುಭವ.

ಕನ್ನಡದಲ್ಲೇ ಅಲ್ಲ, ಇಡೀ ದೇಶದಲ್ಲಿ ಕಂಬಾರರಷ್ಟು ತೀವ್ರವಾಗಿ ನೆಲದ ವಾಸನೆ ತುಂಬಿಕೊಂಡು ಜತೆಯಲ್ಲಿ ಸತ್ಯತ ಆಧುನಿಕತೆಗಳನ್ನು ಮೈಗೂಡಿಸಿಕೊಂಡಿರುವ ಸೃಜನಶೀಲ ನಾಟಕಕಾರ ಸಿಗುವುದು ದುರ್ಲಭ.

ನನ್ನ ಅಭಿಪ್ರಾಯದಲ್ಲಿ ದೇಶದ ಇಂದಿನ ಎಲ್ಲಾ ನಾಟಕಕಾರರ ನಡುವೆ ಕಂಬಾರರು ಅದ್ವಿತೀಯರು. ಅವರ ಜಾಗದಲ್ಲಿ ಇನ್ನೊಬ್ಬರನ್ನು ಯೋಚಿಸುವುದು ನನಗಂತೂ ಸಾಧ್ಯವಿಲ್ಲ.

ಬಿ.ವಿ. ಕಾರಂತ

* * *

 

ವಿನೋದ ಚೈತನ್ಯದ ನಾಟಕಕಾರ : ಚಂದ್ರಶೇಖರ ಕಂಬಾರ
ಡಿ.ಆರ್‌‌.ನಾಗರಾಜ್

ಅರುವತ್ತರ ದಶಕದ ಆರಂಭದಲ್ಲಿ ಚಂದ್ರಶೇಖರ ಕಂಬಾರರು ತಮ್ಮ ಮೊದಲ ನಾಟಕ ಋಷ್ಯಶೃಂಗವನ್ನು ಬರೆದಾಗ ಕನ್ನಡ ನಾಟಕದ ಇತಿಹಾಸದಲ್ಲಿ ಒಂದು ಕ್ರಾಂತಿಯನ್ನು ತಾವು ಶುರು ಮಾಡಿರುವ ಕಲ್ಪನೆ ಅವರಿಗೆ ಇರಲಿಲ್ಲ. ಪಾರಂಪರಿಕವಾದ ’ಬಯಲಾಟ’ ಮಾದರಿಯಲ್ಲಿ ರಚಿತವಾದ ಆ ನಾಟಕ ’ಪರಕೀಯತೆ’ ಮತ್ತು ’ಅಸ್ಮಿತೆ’ಯನ್ನು ಚರ್ಚಿಸುವ ಅತ್ಯಂತ ನವ್ಯದ ವಸ್ತುವನ್ನು ಒಳಗೊಂಡಿತ್ತು. ನಾಟಕದ ರೂಕ್ಕೆ ಸಂಬಂಧಿಸಿದಂತೆ ತಾವು ಒಂದು ಗಮನಾರ್ಹವಾದ ಪ್ರಯೋಗ ಮಾಡಿರುವುದರಿಂದ ಖಂಡಕಾವ್ಯ ’ಹೇಳತೇನೆ ಕೇಳ’ದಲ್ಲಿ ಅಂಥದೇ ವಿಷಯವನ್ನು ಕುರಿತು ಧ್ಯಾನಿಸಿದ್ದರು. (ಈವತ್ತಿಗೂ ಕೂಡ ಕಂಬಾರರು ಭಾರತದ ಪ್ರಮುಖ ಕವಿಗಳಲ್ಲೊಬ್ಬರು ಎಂಬುದು ನನ್ನ ದೃಢವಾದ ನಂಬಿಕೆ).

ಭಾರತೀಯ ಬರವಣಿಗೆಗೆ ನೀಡಿರುವ ಮಹತ್ವದ ಕೊಡುಗೆ ಎಂದರೆ ಅವರ ’ದೇಸಿ’ ಕಲ್ಪನೆ; ಅವರ ಸಂವೇದನೆಯ ಕೇಂದ್ರ ಚೈತನ್ಯವಾದ ದೇಸಿಯತೆಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಈ ಪೀಠಿಕೆ ಅಗತ್ಯವಾಯಿತು. ಕಂಬಾರರ ಬರವಣಿಗೆಯಲ್ಲಿ ’ದೇಸಿ’ಯನ್ನು ಕುರಿತು ಮಾತನಾಡುವಾಗ ಆ ಪರಿಕಲ್ಪನೆಯ ಬಗ್ಗೆ ಸ್ವಲ್ಪ ದೀರ್ಘವಾದ ವಿವರಣೆ  ನೀಡುವುದೂ ಕೂಡ ಆವಶ್ಯಕವೆನಿಸುತ್ತದೆ. ಹಳೆಗನ್ನಡ ಕಾವ್ಯ ಮೀಮಾಂಸೆಯ ಸಂದರ್ಭದಲ್ಲಿ ’ಮಾರ್ಗ’ ಮತ್ತು ’ದೇಸಿ’ ಎಂಬ ಎರಡು ಪ್ರಭೇದಗಳನ್ನು ಗುರ್ತಿಸುತ್ತೇವೆ. ಮೊದಲನೆಯ ಪದ್ಧತಿಯಲ್ಲಿ ವಿಶಾಲವಾದ ವಲಯದೊಡನೆ ವ್ಯವಹರಿಸುವ ಇಚ್ಛೆ ಮತ್ತು ಸಾಮರ್ಥ್ಯಕ್ಕೆ ಒತ್ತು ಬಿದ್ದರೆ, ಎರಡನೆಯ ಪದ್ಧತಿಯಲ್ಲಿ ಕಲ್ಪನೆಯ ಅಂತರ ವೀಕ್ಷಣೆಗೆ ಹೆಚ್ಚು ಒತ್ತು ಬೀಲುತ್ತದೆ; ಇಲ್ಲಿ ರೂಪಕಗಳ ವಿಸ್ತಾರದಲ್ಲಿ ’ದೇಸಿ’ ಹೆಚ್ಚು ಪ್ರಸ್ತುತವಾಗುತ್ತದೆ. ಕಂಬಾರರನ್ನು ವರ್ಣಿಸುವಾಗ ದೇಶೀಯವಾದ ಎಂಬ ಮಾತನ್ನು ಬಳಸಲು ಪ್ರೇರಿತನಾದೆ; ಆದರೆ ಆ ಮಾತನ್ನೂ ಮನಸ್ಸು ಒಪ್ಪಲಿಲ್ಲ. ’ದೇಶೀಯವಾದ’ ವೆಂಬ ಪರಿಕಲ್ಪನೆಯನ್ನು ಸಮಕಾಲೀನ ಸಾಹಿತ್ಯ ಚಿಂತಕರು ಬಳಸುತ್ತಾ ಆ ಪದ ಗೌರವ ಸೂಚಕವಾಗುಳಿದಿಲ್ಲ; ತಮಗೆ ಅರ್ಥವಾಗದ ಸಂಗತಿಗಳನ್ನು ಅವರು ಸಾಮಾನ್ಯವಾಗಿ ’ದೇಶೀಯವಾದದ್ದು’ ಎಂದು ಸಾರಾಸಗಟಾಗಿ ಬಣ್ಣಿಸಿಬಿಡುವ ಪರಿಪಾಠವಿದೆ.

ಭಾರತೀಯ ಸೃಜನಶೀಲತೆಯಲ್ಲಿ ಕಂಡುಬರುವ ಪ್ರಧಾನವಾದ ಪಾಶ್ಚಾತ್ಯ ಪ್ರಭಾವವನ್ನು ಸೌಮ್ಯೋಕ್ತಿಯಲ್ಲಿ ವಿಶಾಲವಾದ ವಿಶ್ವೀಯತೆ ಎಂದು ಕರೆಯಲಾಗುತ್ತಿದೆ; ಇದನ್ನು ನಾಲ್ಕು ಮಾರ್ಗಗಳಿಂದ ನಾವು ಎದುರುಗೊಳ್ಳಬಹುದೆಂದು ತೋರುತ್ತದೆ. ಅನುಕರಣೆಗಳು, ಬುಡಮೇಲುಗಾರರು, ಮುಗ್ಧರು ಹಾಗೂ ದೇವದಾಸಿಗಳು. ನನ್ನ ಪ್ರಕಾರ ಇವರೇ ಆ ನಾಲ್ಕು ವಿಧಾನಗಳನ್ನು ಪ್ರತಿನಿಧಿಸುವವರಾಗಿದ್ದಾರೆ. ಮೊದಲನೇ ಎರಡು ವರ್ಗದ ಜನರು ಪಶ್ಚಿಮದೊಡನೆ ಸರಾಗವಾದ ಸಂಬಂಧವನ್ನು ಹೊಂದಿದ್ದಾರೆ. ಬುಡಮೇಲುಗಾರರು ಅಂತಿಮವಾಗಿ ಪಶ್ಚಿಮದ ಪ್ರಭಾವವನ್ನು ಮೀರುವ ತುಡಿತವನ್ನು ಹೊಂದಿರುವುದು ನಿಜವಾದರೂ ಸಹ, ಮೂರು ಮತ್ತು ನಾಲ್ಕನೇ ಮಾದರಿಯ ಸೃಜನಶೀಲತೆ ನಮಗೆ ಬಹಳವಾಗಿ ಒಗ್ಗುವಂಥವು. ಸಾಹಿತ್ಯಕ ಸಂಸ್ಕೃತಿಗಳನ್ನು ಘಾಸಿಗೊಳಿಸುವಂಥ ಉತ್ಕಟವಾದ ವಿವಾದಗಳ ಬಗ್ಗೆ ದಿವ್ಯ ನಿರ್ಲಕ್ಷ್ಯದಿಂದಿರುವ ಹುನ್ನಾರವನ್ನು ಮುಗ್ಧರು ರೂಢಿಸಿಕೊಂಡಿದ್ದಾರೆ. ನಾಲ್ಕನೇ ವರ್ಗವಾದ ’ದೇವದಾಸಿ’ಗಳು ಮುಗ್ಧರು ಹಾಗೂ ಬುಡಮೇಲುಗಾರರು ಇಬ್ಬರ ವಿಧಾನಗಳನ್ನೂ ತಮ್ಮಲ್ಲಿ ಒಳಗೊಂಡಿದ್ದಾರೆ. ಕಂಬಾರರು ’ದೇಸಿ’ ಕಲ್ಪನೆಯಲ್ಲಿ ಒಡಮೂಡಿ ಬಂದ ಮುಗ್ಧ ಬರಹಗಾರರಾಗಿದ್ದಾರೆ; ಹಾಗಾಗಿ, ಅವರು ಚಾರಿತ್ರಿಕ ಬದಲಾವಣೆಯ ಸಂಕೀರ್ಣ ಅನುಭವ ಶ್ರೇಣಿಯನ್ನು ನಿರಾಯಾಸವಾಗಿ ಹೀರಿಕೊಳ್ಳುವ ಚಿಂತಕರ ಜಾಯಮಾನಕ್ಕೆ ಸೇರಿದವರಾಗಿದ್ದಾರೆ. ಸೃಜನಾತ್ಮಕ ಮುಗ್ಧತೆ ಎನ್ನುವುದು ಕಂಬಾರರಿಗೆ ಒಂದು ಸಹಜ ಸ್ಥಿತಿಯಾಗಿರುವಂತೆಯೇ ಅದು ಒಂದು ಸೈದ್ಧಾಂತಿಕವಾದ ಆಯ್ಕೆಯೂ ಕೂಡ ಆಗಿದೆ. ಈ ಪ್ರಕ್ರಿಯೆಯ ಬಗ್ಗೆ ಕಂಬಾರರೇ ’ಜಾನಪದ ರಂಗಭೂಮಿ- ನಾನು ಕಂಡಂತೆ’ ಎಂಬ ತಮ್ಮ ಆಂಗ್ಲಭಾಷೆಯ ಲೇಖನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ; ಇದು ಜೋಕುಮಾರಸ್ವಾಮಿ (೧೯೭೩) ನಾಟಕದ ಇಂಗ್ಲಿಷ್ ಅನುವಾದಕ್ಕೆ ಬರೆದ ಮುನ್ನುಡಿಯೂ ಆಗಿದೆ.

“ನನ್ನ ಬಗ್ಗೆಯೇ ಮಾತನಾಡುತ್ತೇನೆ ಮೊದಲು. ಭೌಗೋಳಿಕವಾಗಿ ನಾನು ಒಂದು ಗ್ರಾಮಕ್ಕೆ ಸೇರಿದವನು, ಸಾಮಾಜಿಕವಾಗಿ ಒಂದು ಅಲಕ್ಷಿತವಾದ, ಅಶಿಕ್ಷಿತವಾದ ಸಮುದಾಯಕ್ಕೆ ಸೇರಿದವನು. ಹಾಗಾಗಿ ನಾನೊಬ್ಬ ಜಾನಪದ ಮನುಷ್ಯ- ಏಕೆಂದರೆ ನಾನು ಬೇರೇನೂ ಆಗಲಿಕ್ಕೆ ಸಾಧ್ಯವಿಲ್ಲ. (ಈ ಅಂಶವನ್ನು ನಾನು ಒತ್ತಿ ಹೇಳಲು ಕಾರಣ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸುಶಿಕ್ಷಿತ ನಗರ ಪ್ರದೇಶದವರ ಪೈಕಿ ’ಜಾನಪದೀಯತೆ’ ಎಂಬುದು ಬಹಳ ಆಕರ್ಷಕವಾಗತೊಡಗಿದೆ). ನಾನು ಬರೆದ ಮೊದಲಿನ ದೀರ್ಘ ಪದ್ಯ ’ಹೇಳತೇನ ಕೇಳ’ವು ಸಂಪೂರ್ಣವಾಗಿ ನನ್ನ ನೆಲದಿಂದ ರೂಪುಗೊಂಡದ್ದು. ಇಪ್ಪತ್ತೈದು ವರ್ಷಗಳ ನಂತರ ಮತ್ತೆ ಆ ಪದ್ಯದತ್ತ ಹೊರಳಿ ನೋಡಿದಾಗ ಇದುವರೆಗೆ ನಾನು ಬರೆದಿರುವುದೆಲ್ಲವೂ ಅದರೊಡನೆ ವಸ್ತು ವಿಷಯದಲ್ಲಿ ಒಂದು ಸಂಬಂಧವನ್ನು ಹೊಂದಿರುವುದು ಕಾಣುತ್ತೆ…. ’ಹೇಳತೇನ ಕೇಳ’ವನ್ನು ರೂಪಿಸಿದ ಜಾನಪದ ಮಾಧ್ಯಮವೇ ಜೋಕುಮಾರಸ್ವಾಮಿ ಮತ್ತು ಇತರ ನಾಟಕಗಳನ್ನು ಸಾಧ್ಯವಾಗಿಸಿತು ಎಂದು ಧೈರ್ಯವಾಗಿ ಹೇಳುತ್ತೇನೆ. ನನ್ನೊಳಗಿನ ಉತ್ಕಟವಾದ ಅನ್ನಿಸಿಕೆಯೆಂದರೆ  ಒಂದು ಸಮಗ್ರವಾದ ಕಲೆಯನ್ನು ನಾನು ನಿಭಾಯಿಸುತ್ತಿದ್ದೇನೆ ಎಂಬುದು – ಇಷ್ಟು ವರ್ಷ ಈ ಅನ್ನಿಸಿಕೆ ನನ್ನೊಳಗಿದೆ – ಇನ್ನು ಮುಮದೆಯೂ ಅದು ಸ್ಥಾಯಿಯಾಗಿರುವುದೆನ್ನಲು ಅಡ್ಡಿಯಿಲ್ಲ.”

ಗಿರೀಶ್ ಕಾರ್ನಾಡರಂಥ ನಾಟಕಕಾರರು ಹಯವದನದಂಥ ಸುಂದರವಾದ ನಾಟಕವನ್ನು ಬರೆಯುವಾಗ ಜಾನಪದದ ರೂಪವನ್ನು ಪ್ರಜ್ಞಾಪೂರ್ವಕವಾಗಿ ಆರಿಸಿಕೊಳ್ಳುತ್ತಾರೆ. ಕಂಬಾರರು ಮತ್ತು ಕಾರ್ನಾಡರ ನಡುವಿನ ವ್ಯತ್ಯಾಸವಿರುವುದೂ ಇಲ್ಲಿಯೇ; ರೂಪದ ಜೊತೆಗೆ ಕಾರ್ನಾಡರು ಪ್ರಜ್ಞಾಪೂರ್ವಕವಾಗಿ ಬೌದ್ಧಿಕವಾಗಿ ಮುಖಾಮುಖಿಯಾಗುವುದರಿಂದ ಅವರು ಜಾನಪದ ವಿಷಯವನ್ನು ಎತ್ತಿಕೊಂಡಾಗಲೆಲ್ಲ ಅವರ ನಾಟಕಗಳು ಹೆಚ್ಚು ಸ್ಪಷ್ಟ ವಿನ್ಯಾಸದಿಂದ ಒಡಗೂಡಿರುತ್ತವೆ. ಅವು ಕಾರ್ನಾಡರ ಮಾರ್ಗದರ್ಶಿ ಎ.ಕೆ. ರಾಮಾನುಜನ್‌ರಿಂದ ರೂಪಿಸಲ್ಪಟ್ಟ ಕಥೆಗಳನ್ನು ಆಧರಿಸಿದ ನಾಟಕಗಳು ಎಂಬುದನ್ನು ನಾವು ಮರೆಯುವಂತಿಲ್ಲ. ಆದಾಗ್ಯೂ ಈ ನಾಟಕಗಳು ಹೊಚ್ಚ ಹೊಸದಾಗಿ ಕಾಣುತ್ತವೆ. ಕಂಬಾರರು ಮಾತ್ರ ರೂಪದ ಬಗ್ಗೆ ಹೆಚ್ಚು ಆತ್ಮ ವಿಶ್ವಾಸದಿಂದಿರುತ್ತಾರೆ; ಆದರೆ ಅರ್ಥದ ವಿಷಯದಲ್ಲಿ ಅವರಿಗೆ ಸಂದಿಗ್ಧತೆಯಿದೆ. ಅವರ ನಾಟಕಗಳು ಸಂಕೀರ್ಣವಾದ ಅರ್ಥಗಳಿಂದ ಇರುವುದಕ್ಕೆ ಇದು ಕಾರಣ.

ಮೂಲತಃ ನಗರ ಸಂವೇದನೆಯೊಂದನ್ನು ಮರೆಮಾಚಲು ಅಥವಾ ಅನ್ವೇಷಿಸಲು ಕಂಬಾರರು ಬೇಕಂತಲೇ ದೇಶೀಯ ರೂಪಕಗಳನ್ನು ಬಳಸುವುದಿಲ್ಲ. ಕಂಬಾರರು ಹಳೆಯ ಜಗತ್ತಿನ ಒಂದು ಅಪ್ಪಟ ಅಂಗವಾಗಿರುವಂಥವರು. ಅವರ ಕಲ್ಪನೆ, ಅವರ ಭಾವನಾ ಪ್ರಪಂಚದಲ್ಲಿ ನಮಗೆ ಗೋಚರವಾಗುವ ದೇವತೆಗಳು, ಭೂತಪ್ರೇತಗಳು ಹಾಗೂ ಮೂಢನಂಬಿಕೆಗಳು ಆ ಪ್ರಪಂಚದ ಸಹಜ ಸದಸ್ಯರು – ಆದರೆ ಭ್ರಮನಿರಸನಗೊಂಡ ಆಧುನಿಕರು ಒಪ್ಪದ ವಸ್ತು ವಿಶೇಷತೆಗಳು ಹಾಗೂ ಸಂಗತಿಗಳು. ಕಂಬಾರರು ಭ್ರಮನಿರಸಗೊಳ್ಳುವುದಿಲ್ಲವಾದರೂ ಅವರು ಚಿತ್ರಿಸುವ ಲೋಕ ಬೌದ್ಧಿಕವಾಗಿ ಆಸಕ್ತಿಯನ್ನು ಉಂಟುಮಾಡುವಂಥದೇ ಆಗಿದೆ. ’ದೇಸಿ’ ಕಲ್ಪನೆಯ ಪ್ರಧಾನವಾದ ಗುಣವೆಂದರೆ ಪಾಶ್ಚಾತ್ಯ ರೂಪಗಳಿಂದಾಗಲೀ ಅಥವಾ ತರ್ಕದಿಂದಾಗಲೀ ಘಾಸಿಗೊಳ್ಳುವಂಥದಲ್ಲ. ಅವರಲ್ಲಿ ಮುಗ್ಧತೆ ಎನ್ನುವುದು ಬೌದ್ಧಿಕ ಸ್ಥೈರ್ಯದ ಚಿನ್ಹೆಯಾಗಿದೆ.

ಕಂಬಾರರು ತಮ್ಮ ದೇಶೀಯ ಲೋಕವನ್ನು ಆಂಶಿಕವಾಗಿ ರಚಿಸಿಕೊಳ್ಳುತ್ತಾರೆ; ಚರಿತ್ರೆ, ಆಧ್ಯಾತ್ಮಿಕತೆ, ಧಾರ್ಮಿಕ ಅನುಭವಗಳು ಹಾಗೂ ಕಲೆಯ ಮೀಮಾಂಸೆಗೆ ಸಂಬಂಧಿಸಿದಂತೆ ಅವರು ತಮ್ಮದೇ ಓದನ್ನು ಸೃಷ್ಟಿಸಿಕೊಳ್ಳುತ್ತಾರೆ. ಒಳ್ಳೆಯದಕ್ಕೋ ಕೆಟ್ಟದಕ್ಕೋ ಒಟ್ಟಿನಲ್ಲಿ ಕಂಬಾರರಂಥ ಲೇಖಕರು ಸಮಗ್ರ ಸೃಷ್ಟಿಕರ್ತರಾಗಿದ್ದಾರೆ. ಕೇವಲ ನಾಟಕ ರಚನೆಯಿಂದಷ್ಟೇ ಅವರು ತೃಪ್ತರಾಗಲಾರರು; ಅಂಥ ನಾಟಕಗಳನ್ನು ಬರೆಯಲು ಒಬ್ಬ ಲೇಖಕ ತನಗಾಗಿಯೇ ಒಂದು ಬೌದ್ಧಿಕ ವಿಶ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಕಂಬಾರರು ಅಂಥ ವಿಶ್ವವೊಂದನ್ನು ಯಶಸ್ವಿಯಾಗಿ ರಚಿಸಿಕೊಂಡಿದ್ದಾರೆ. ಕೆಲವು ವೇಳೆ ಪುರಾಣ ಮತ್ತು ಚರಿತ್ರೆಯ ನಡುವಿನ ಗೆರೆಯನ್ನು ಕೂಡ ಕಂಬಾರರು ನಿರಾಕರಿಸಿಬಿಡುತ್ತಾರೆ. ಉದಾಹರಣೆಗೆ, ಭಾಷೆ, ಸಂಸ್ಕೃತಿ, ಚರಿತ್ರೆ, ರಾಜಕೀಯ ಸಿದ್ಧಾಂತ – ಇತ್ಯಾದಿಗಳ ಬಗ್ಗೆ ಇತ್ತೀಚಿನ ತಾತ್ವಿಕ ವಾಗ್ವಾದಗಳನ್ನು ಅಂತಸ್ಥ ಮಾಡಿಕೊಂಡು ಕಾರ್ನಾಡರು ಬಹಳ ಪ್ರಖರವಾಗಿ ವಾದ ಮಂಡಿಸಬಲ್ಲರು. ಕಂಬಾರರು ಈ ಮಾರ್ಗವನ್ನನುಸರಿಸದೆ ಈ ಎಲ್ಲ ತತ್ತ್ವಗಳಿಗೆ ತಮ್ಮದೇ ಆದ ನಿಲುವನ್ನು ವ್ಯಕ್ತಪಡಿಸುವುದರ ಮೂಲಕ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಅವರ ತಾತ್ವಿಕತೆಯ ಮೂಲವನ್ನು ನಾವು ಅವರ ಸೃಜನಶೀಲತೆಯಲ್ಲೇ ಹುಡುಕಬೇಕಾಗಿದೆ. ವಿಪರ್ಯಾಸವೆನ್ನುವಂತೆ ಕಂಬಾರರ ಅತಿ ದೇಶೀಯತೆಯು ಅವರನ್ನು ಒಬ್ಬ ಅಥ್ಯಾಧುನಿಕನನ್ನಾಗಿ ಮಾಡಿದೆ.

ಕಂಬಾರರ ನಾಟಕಗಳು ಹೊಸ ಜಗತ್ತಿನೊಡನೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಹಳೆಯ ಜಗತ್ತಿನ ಪ್ರಸಂಗಗಳಾಗಿವೆ. ಪುರಾಣ ಮತ್ತು ಚರಿತ್ರೆಯ ನಡುವಿನ ಸಂಘರ್ಷವನ್ನಿಲ್ಲಿ ಕಾಣುತ್ತೇವೆ ಹಾಗೂ ಕಂಬಾರರ ಕೃತಿಗಳಲ್ಲಿ ರಾಜಕೀಯ ವಸ್ತುಗಳು ಹೊರಹೊಮ್ಮುವುದನ್ನು ಗಮನಿಸುತ್ತೇವೆ. ಕಂಬಾರರ ಮೊದಲ ನಾಟಕ ಜೋಕುಮಾರಸ್ವಾಮಿ ಕನ್ನಡ ರಂಗಭೂಮಿಯಲ್ಲಿ ಪ್ರಖ್ಯಾತವಾದಂತೆ ಇತರ ಭಾಷೆಗಳಲ್ಲೂ ಪ್ರಸಿದ್ಧವಾಯಿತು. ಜೋಕುಮಾರಸ್ವಾಮಿ ಕರ್ನಾಟಕದ ಸಮಾಜವಾದಿಗಳನ್ನು ಆಕರ್ಷಿಸಿತು. ’ಉಳುವವನಗೇ ಭೂಮಿ’ ಎಂಬ ವಸ್ತುವನ್ನು ಒಳಗೊಂಡ ನಾಟಕ ಇದು ಎಂದು ಅವರು ಬಗೆದರು. ಸಮಾಜವಾದೀ ಪಕ್ಷದ ಅನೇಕ ಮುಖಂಡರು ಈ ನಾಟಕವು ತಮ್ಮ ಸಿದ್ಧಾಂತವನ್ನು ಪ್ರತಿಫಲಿಸುತ್ತದೆಯೆಂದು ತಮ್ಮ ಬಳಿಯೇ ಹೇಳಿಕೊಂಡಿದ್ದಾರೆ ಎಂದು ಕಂಬಾರರೇ ಪ್ರಸ್ತಾಪಿಸುವುದುಂಟು. ಈ ನಾಟಕದಲ್ಲಿ ಕ್ರೂರಿಗಳು ಹಾಗೂ ದಬ್ಬಾಳಿಕೆ ನಡೆಸುವ ಗ್ರಾಮದ ಮೇಲ್ಜಾತಿಯವರ ಉಪಟಳದ ವಿರುದ್ಧ ಸೆಟೆದು ನಿಲ್ಲುವ ದುರ್ಬಲರೂ ಭೂರಹಿತರೂ ಆದ ಜನಸಮುದಾಯವನ್ನೊಳಗೊಂಡಂಥ ಅನೇಕ ದೃಶ್ಯಗಳು ಬರುತ್ತವೆ. ನಾಟಕದ ನಾಯಕ ಬಸಣ್ಣ ತುಳಿತಕ್ಕೊಳಗಾದವನು. ಜಮೀನ್ದಾರನ ವಿರುದ್ಧ ನಿಲ್ಲುವಂತೆ ಸಂಘಟಿಸುತ್ತಾನೆ. ಊರ ಗೌಡ ಮತ್ತು ಪ್ರತಿಭಟನಕಾರ ಬಸವಣ್ಣನ ನಡುವೆ ನಡೆಯುವ ಈ ಸಂಭಾಷನೆಯನ್ನು ಗಮನಿಸಿ :

ಬಸಣ್ಣ : ನನ್ ಹತ್ರಾನೂ ಬಂದೂಕು ಐತಿ, ಆದ್ರ ನಾನು ಸುಟ್ಟರ್ ಜನ ಸಾಯೂದಿಲ್ಲ. ಜನ ಹೆಚ್ತಾರಾ. (ನಗುತ್ತಾ)

ನಿಂಗಿ ಹೇಳ್ತಿದ್ಲು ನಿಂಗಾ ನರೆ ಕೂದ್ಲು ಬಂದವಾ ಅಂತ. ನಿಜವಾ ಗೌಡ?

ಗೌಡ : ತೋರಿಸ್ಲೇನಾ? ಇಲ್ಲಿ ನೋಡು ಬಂದೂಕು (ಅವನು ಬಂದೂಕು ಎತಿಕೋತಾಯಿದ್ದ ಹಾಗೆ ಬಸಣ್ಣ ಅದರ ಬಾಯಿಗೆ ಕಿವಿ ಕೊಡುತ್ತಾನೆ.)

ಬಸಣ್ಣ : ಅದು ಏನ್ ಹೇಳ್ತತಾ ಅಂತ ನಾನೂ ಕೇಳ್ತೀನಿ… ಏನೂ ಕೇಳಿಸ್ತಾಯಿಲ್ವಲ್ಲ. (ಬಂದೂಕು ಕಿತ್ತುಕೊಂಡು ಅತ್ತ ಬಿಸಾಕಿಬಿಡುತ್ತಾನೆ) ತೊಲಗಿ ಹೋಗು, ಅಧಿಕ ಪ್ರಸಂಗದವ್ನೆ. ಹೊಲಕ ಕಾಲಿಟ್ರೆ ನನ್ನ ಕಾಲು ಮುರೀತೀಯೇನ. ಹೌದೇನ? ನಿನ ಕಾಲಿನ ಬಗ್ಗೆ ನಿನಗೆ ದಿಗಿಲಿಲ್ಲೇನ? ಹೊಟ್ಟೆಗೆ ಹಿಟ್ಟು ಕಾಣದಂತೆ ರಟ್ಟೆ ಮುರಿದು ಹೊಲ ಸುದ್ದ ಮಾಡಿದ್ವಿ, ನಾನು ನನ್ನ ಅಪ್ಪ. ದೆವ್ವದ ಜಾಗ ಅಂತ ಜನ ಹಗಲು ಹೊತ್ತೂ ಕೂಡ ಅಲ್ಲಿ ತಿರುಗಾಡೋದಕ್ಕೂ ಹೆದರುವಂಥ ಕಾಲ್ದಲ್ಲಿ ನಾನೂ ನನ್ನ ಅಪ್ಪ ಅಲ್ಲಿ ಹಗಲೂ ರಾತ್ರಿ ದುಡಿದ್ವಿ! ಈಗ ಇಂವ ಬಂದು ಹೊಲ ನನ್ನದು ಅಂತ ಹೇಳ್ತಾ ಅವ್ನ!

ಇದು ಒಂದು ವರ್ಗದ ಸಂಘರ್ಷದ ಪ್ರಸಂಗವೆಂದು ಸುಲಭವಾಗಿ  ನಿರ್ಧರಿಸಲು ಅನುಕೂಲವಾದಂಥ ಸಂಭಾಷಣೆ; ಆದರೆ ಆ ರೀತಿ ಅರ್ಥ ಮಾಡಿಕೊಂಡರೆ, ಅಂಶವನ್ನೇ ಅಖಂಡವೆಂದು ವ್ಯಾಖ್ಯಾನಿಸಿದ ಹಾಗೆ ಆಗುತ್ತದೆ. ಕಂಬಾರರ ಪ್ರಪಂಚದಲ್ಲಿ ಪುರಾಣಗಳು ಚರಿತ್ರೆಯನ್ನು ವಿಷದ ಪಡಿಸುತ್ತವೆ. ಈ ನಾಟಕದ ಉದ್ದಕ್ಕೂ ಬಸಣ್ಣ ಸೃಜನಶೀಲತೆಯ ಒಂದು ಆದಿಮ ರೂಪವಾಗಿ ಕಾಣಿಸಿಕೊಳ್ಳುತ್ತಾನೆ; ಕಾಮದ ಸಂಕೇತವಾಗಿ ಅವನು ಗೋಚರಿಸುತ್ತಾ ಇತರ ಸಾಮೂಹಿಕ ವ್ಯವಸ್ಥೆಯನ್ನು ಹೀಗಳೆಯುವಂತೆಯೂ ತೋರುತ್ತದೆ. ಸಮಾಜವನ್ನು ನಿಯಂತ್ರಿಸುವ ಸಾಮಾನ್ಯ ವಾದ ನೀತಿ ನಡಾವಳಿಗಳಿಗೆ ಅತೀತವಾಗಿ ಇದ್ದಾನೆ ಬಸಣ್ಣ. ಮೇಲೆ ಕಾಣಿಸಿರುವ ಸಂಭಾಷಣೆಯು ಕಾಮದ ಶಕ್ತಿ ಮತ್ತು ಅದರ ಗೈರುಹಾಜರಿಯ ನಡುವೆ ನಡೆಯುವ ಸಂಘರ್ಷದ ಸಂಕೇತವಾಗಿದೆ; ಕಂಬಾರರು ಕಾಮದ ಸಾಮರ್ಥ್ಯದ ಪರವಾಗಿದ್ದಾರೆ. ಕಂಬಾರರು ಚರಿತ್ರೆಯನ್ನು ಓದುವ ಕ್ರಮ – ಸಮಕಾಲೀನ ಚರಿತ್ರೆಯೂ ಸೇರಿದಂತೆ – ಯಾವಾಗಲೂ ಅದು ಫಲಶಕ್ತಿಯ ಪುರಾಣವಾಗಿದೆ ಎಂಬ ಹಿನ್ನೆಲೆಯಿಂದ ರೂಪಿತವಾದದ್ದಾಗಿರುತ್ತದೆ. ಅಸ್ತಿತ್ವದ ಒಂದು ವಿನ್ಯಾಸವಾಗಿ ಮಾತ್ರ ನಾಟಕದಲ್ಲಿ ಸಮಾಜವಾದಿ ಅರ್ಥ ಕಾಣಿಸಿಕೊಳ್ಳುತ್ತದೆ; ರಾಜಕೀಯವಾದ ಸಂಕೇತವು ಪುರಾಣ ಪ್ರಕ್ರಿಯೆ ಮತ್ತು ಕ್ರಿಯೆಯ ಘನ ವಿನ್ಯಾಸದಲ್ಲಿ ಅಂತರ್ಗತವಾಗಿಬಿಡುತ್ತದೆ. ಈ ನಾಟಕವನ್ನು ಅನುವಾದಿಸಿರುವ ರಾಜೀವ್ ತಾರಾನಾಥರು ಪುಸ್ತಕಕ್ಕೆ ಒಂದು ಸುಂದರವಾದ ಪೀಠಿಕೆಯನ್ನು ಬರೆಯುತ್ತಾ ಹೀಗೆ ಹೇಳಿದ್ದಾರೆ : “ಪೌರಾಣಿಕವಾದ ಅಸ್ತಿತ್ವ ಆ ಪ್ರಪಂಚದಲ್ಲಿ ಸಹಜವೂ, ವಾಸ್ತವವೂ ಆಗಿದೆ.” ನಾವು ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಚರಿತ್ರೆಯು ಒಂದು ಸರ್ವವ್ಯಾಪಿಯಾದ ವಾಸ್ತವವಾಗಿ ಕಂಬಾರರ ಜಗತ್ತನ್ನು ಪ್ರವೇಶಿಸುವುದಿಲ್ಲ. ಅದು ಕೇವಲ ಪೌರಾಣಿಕ ವಾಸ್ತವದ ಒಂದು ಅಂಗವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ.

ಕನ್ನಡ ಜಾನಪದ ರಂಗಭೂಮಿಯ ದೊಡ್ಡಾಟ ಮತ್ತು ಸಣ್ಣಾಟ ಎಂಬ ಎರಡು ಪ್ರಕಾರಗಳಲ್ಲೂ ಕಂಬಾರರ ಕಲ್ಪನೆ ಕ್ರಿಯಾಶೀಲವಾಗಿದೆ. ಸಣ್ಣಾಟದ ವೈನೋದಿಕ ಮಾರ್ಗದ ಮೂಲಕವೇ ಕಂಬಾರರು ಪ್ರಭುತ್ವ ಹಾಗೂ ಜನತಂತ್ರದ ಅವನತಿಯನ್ನು ಅನ್ವೇಷಿಸುತ್ತಾರೆ. ಕಂಬಾರರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವವೂ ಕೂಡ ಭಿನ್ನ ನಡೆಯುತ್ತಿರುವ ರಾಜದರ್ಬಾರೇ. ಸಾಂಬಶಿವ ಪ್ರಹಸನ (೧೯೮೫) ವೆಂಬ ನಾಟಕದಲ್ಲಿ ಅವರು ಈ ನಿಜವನ್ನು ನಿರೂಪಿಸುತ್ತಾರೆ. ಪ್ರಜಾಪ್ರಭುತ್ವವನ್ನು ರಾಜತ್ವದ ಅಣಕವೆಂದು ನಿರೂಪಿಸುವುದರ ಮೂಲಕ ಈ ಸಂಸ್ಥೆಯನ್ನು ಟೀಕಿಸುವ ಜಾನಪದ ಮಾರ್ಗವನ್ನು ಕಂಬಾರರು ಕಂಡುಕೊಳ್ಳುತ್ತಾರೆ. ಹೊಸ ತರಹದ ರಾಜರ ದರ್ಬಾರು ಎಂದು ಪ್ರಜಾಪ್ರಭುತ್ವವನ್ನು ಕಂಬಾರರು ರಚಿಸುತ್ತಾ ಅದರ ಅಸಂಗತತೆ ಮತ್ತು ವಿಲಕ್ಷಣತೆಯ ಕಡೆ ನಮ್ಮ ಗಮನವನ್ನು ಸೆಳೆಯುತ್ತಾರೆ. ನಾಟಕದ ಕಿನ್ನರ ಲೋಕದ ಕತೆಗೂ ಮತ್ತು ಅದರಲ್ಲಿ ಅಡಕವಾದ ರಾಜಕೀಯ ಸಂದರ್ಭಕ್ಕೂ ಒಂದು ಬಗೆಯ ಕರ್ಷಣ ಏರ್ಪಡುತ್ತದೆ. ’ರಾಜ-ವಿದೂಷಕ’ನೆಂಬ ಒಬ್ಬ ವಿಶಿಷ್ಟ ಮನುಷ್ಯನನ್ನು ಸೃಷ್ಟಿಸಿ ಕಂಬಾರರು ರಂಗ ಮಾಧ್ಯಮದ ಗರಿಷ್ಠ ಸಾಧ್ಯತೆಗಳ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸಿದ್ದಾರೆ. ನಾಟಕದ ಕೇಂದ್ರ ಪಾತ್ರಗಳು ಒಂದು ಬಗೆಯ ವಂಚಕರು; ಅವರ ಮೂಲಕ ಆಳುವವರ ಅಸಂಗತ ಬದುಕು ಮತ್ತು ಕಪಟವನ್ನು ಬಯಲು ಮಾಡುತ್ತಾರೆ. ವ್ಯವಸ್ಥೆ ತನ್ನ ಬಗ್ಗೆ ನೀಡುವ ನಿರೂಪಣೆಯನ್ನು ಕಂಬಾರರು ತಿರಸ್ಕರಿಸುತ್ತಾರೆ. ಹಾಗೆಯೇ ಕ್ರಿಯೆಗಳನ್ನು ಕೂಡ ಅವರು ನಿರಾಕರಿಸುತ್ತಾರೆ. ನಾಟಕವು ಚರಿತ್ರೆ ಮತ್ತು ಸಾಮಾಜಿಕ ಬದಲಾವಣೆಯನ್ನು ಕುರಿತು ಒಂದು ತತ್ವವನ್ನು ಮುಂದಿಡುತ್ತದೆ; ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಬಲ ಬದಲಾವಣೆಯು ಒಂದು ಘಟ್ಟವನ್ನು ಪ್ರತಿನಿಧಿಸುತ್ತದೆ. ಭವ್ಯವಾದದ್ದು ಮತ್ತು ಕ್ಷುಲ್ಲಕವಾದದ್ದು ಸ್ಥಳ ಬದಲಾವಣೆ ಮಾಡಿಕೊಳ್ಳುತ್ತವೆ. ಈ ರೀತಿ ವ್ಯತ್ಯಯದಿಂದಾಗಿ ಮಾನವ ಚರಿತ್ರೆಯನ್ನಷ್ಟೇ ಅಲ್ಲದೆ ನಿಸರ್ಗವನ್ನು ನಿಯಂತ್ರಿಸುವ ವಿಶ್ವೇಯ ತತ್ವದ ದರ್ಶನವಾಗುತ್ತದೆ. ಚರಿತ್ರೆ ಮತ್ತು ನಿಸರ್ಗ ಪರಸ್ಪರ ಸ್ಥಳ ಬದಲಾಯಿಸಿಕೊಳ್ಳುವ ತತ್ವಗಳಾಗುವುದನ್ನು ಕಾಣುತ್ತೇವೆ.

ಈ ವಿಧಾನವನ್ನನುಸರಿಸಿ ರಾಜಕೀಯ ವಸ್ತುಗಳನ್ನು ನಿಭಾಯಿಸುವುದು ಕಂಬಾರರಿಗೆ ಸಾಧ್ಯವಾಗಿರುವುದಕ್ಕೆ ಕಾರಣ ಅವರು ತಮ್ಮದೇ ಆದ ಜಾನಪದದ ತತ್ವವನ್ನು ನಿರೂಪಿಸಿ ಕೊಂಡಿರುವುದು; ಶೂದ್ರ ಜಗತ್ತಿನ ಜನಪದವೇ ಅವರ ಜೀವಾಳ. ಜ್ಯೋತಿಬಾ ಫುಲೆ, ಪೆರಿಯಾರ್ ಹಾಗೂ ಅಂಬೇಡ್ಕರ್‌ ಅವರು ಪರಿಭಾವಿಸಿದ ಕ್ರಮಕ್ಕಿಂತ ಭಿನ್ನವಾಗಿ ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯನ್ನು ಕಂಬಾರರು ಅರ್ಥೈಸುತ್ತಾ ಪರ್ಯಾರವಾದ ಒಂದು ಶೂದ್ರತ್ವ ತತ್ವವನ್ನು ಮುನ್ನೆಲೆಗೆ ತರುತ್ತಾರೆ. ಅವರು ನಿರೂಪಿಸುವ ಸಾಂಸ್ಕೃತಿಕ ಕ್ರೋಧದ ರಾಜಕಾರಣವು ಉಚ್ಛಕಂಠದ ಹಾಸ್ಯವಾಗಿ ಪರಿಗಣಿಸುತ್ತಾ ಶೂದ್ರರ ವೈನೋದಿಕ ಚೈತನ್ಯವು ಸಾಂಸ್ಕೃತಿಕ ತತ್ವದ ಕೇಂದ್ರದಲ್ಲಿ ಸ್ಥಾಪಿತವಾಗುತ್ತದೆ. ದಲಿತರು ಮತ್ತು ಅತಿಶೂದ್ರರು ಬರೆದಂಥ ಸಾಹಿತ್ಯಕ ಅಥವಾ ರಾಜಕೀಯ ಬರಹಗಳನ್ನು ಓದುವ ಸಂದರ್ಭ ಬಂದಾಗ ಅವರ ಹದ್ದುಮೀರುವ ದುಃಖ, ಕೋಪ ಮತ್ತು ವ್ಯಾಕುಲ ಕಂಡು ಜಿಗುಪ್ಸೆಯುಂಟಾಗುತ್ತದೆ. ಅವರು ಅನುಸರಿಸುವ ಸೃಜನಶೀಲ ಮಾದರಿಯಲ್ಲಿ ಒಂದು ಸಮುದಾಯದ ಸಾಂಸ್ಕೃತಿಕ ಶಿಲ್ಪದ ಬಗ್ಗೆ ಒಂದು ತರಹದ ಪರಿಕಲ್ಪನೆ ಇರುತ್ತದೆ. ಕಂಬಾರರೂ ಕೂಡ ಮನುವಾದಿಗಳ ರಾಜಕಾರಣವನ್ನು ವಿರೋಧಿಸುವವರೇ; ಆದರೆ ಅವರು ಬೇರೊಂದು ಬಗೆಯ ಕಾವ್ಯಮೀಮಾಂಸೆಯ ನೆಲೆಯಿಂದ ತಮ್ಮ ವಿರೋಧವನ್ನು ದಾಖಲಿಸುತ್ತಾರೆ.

ಇಂದು ಭಾರತೀಯ ರಾಜಕೀಯ ಕಲ್ಪನೆಗೆ ಕಂಬಾರರು ಅನಿವಾರ‍್ಯವಾಗಿದ್ದಾರೆ, ಏಕೆಂದರೆ ಕಾವ್ಯಮೀಮಾಂಸೆ ರಾಜಕಾರಣಕ್ಕಿಂತ ಹೆಚ್ಚು ರಾಜಕೀಯವಾಗಿದೆಯೆಂದು ನಂಬುವ ಕೆಲವೇ ಕೆಲವು ಲೇಖಕರಲ್ಲಿ ಅವರೊಬ್ಬರು. ದಲಿತ-ಬಹುಮಾನ ಚಳವಳಿಗಳು ಈ ಮಹಾನ್ ಕವಿಯಿಂದ ಕಲಿಯಲು ನಿರ್ಧರಿಸುವುದಾದರೆ ಪ್ರತಿನಿತ್ಯ ಅಸ್ಮಿತೆಯ ಸಂಬಂಧವಾದ ಪ್ರಶ್ನೆಗಳನ್ನು ಉತ್ತಮ ರೀತಿಯಲ್ಲಿ ಎದುರುಗೊಳ್ಳಲು ರಾಜಕಾರಣಕ್ಕೆ ಸಾಧ್ಯವಾಗಬಹುದು.

ಕನ್ನಡಕ್ಕೆ : ಪ್ರೊ. ಸಿ. ನಾಗಣ್ಣ