ಗಿರಿಮಲ್ಲಿಗೆ : ಓಂ ಪ್ರಥಮದಲ್ಲಿ ಸಾವಳಗಿ ಶಿವಲಿಂಗನಿಗೆ ವಂದಿಸಿ
ನಾಟಕ
ಸುರು ಮಾಡುತ್ತೇವೆ:
ಇದು
ಶೆಟವಿ ತಾಯಿಯ ಕಥೆ
ಶೆಟವಿ
ಎಂಬುದು ಸಾವಿನ ದೇವತೆಯ ಹೆಸರು.
ನಾಟಕದ
ನಾಂದಿಯಲ್ಲಿ ಅವಳ ಹೆಸರನ್ನೇ ಸ್ಮರಿಸಬೇಕಾಗಿತ್ತು.
ಆದರೆ
ಅವಳಿಗೆ ನಾಂದಿಗಿಂತ ಭರತವಾಕ್ಯದ ಮೇಲೇ ಕಣ್ಣು.
ಭರತವಾಕ್ಯದಿಂದ
ನಾಟಕ ಸುರುಮಾಡಲುಂಟೆ?
ಅವಳ ಪರಿಚಯದಿಂದ ಪ್ರಸಂಗವ ಸುರುಮಾಡಬೇಕೆಂದರೆ,
ಅಗೋ ಅವಳೇ ಬಂದಳು.

(ತಾಯಿಯ ಮೇಕಪ್ ಮಾಡಿಕೊಳ್ಳುತ್ತಿರುವ ನಟನ ಪ್ರವೇಶ)

ತಾಯಿ : ತಾಯಿ ನಾನು.
ಎಲ್ಲ ಚರಾಚರದ, ಎಲ್ಲ ಬೆಳಕು, ಆಕಾರಗಳ
ಅಂತಿಮಗುರಿ.
ಎಲ್ಲಾ ಅರಿವಿನ ಎಲ್ಲಾ ಇರವಿನ ತಾಯಿ
ನಿಮ್ಮ ಕಣ್ಣೆದುರಿಗೆ ಒಬ್ಬ ಮುದುಕಿ.
ಪ್ರತಿಯೊಂದು ಜೀವಜೀವರಿಗೆ ಅವರವರ ಅಂತಿಮ ಕ್ಷಣಗಳಲ್ಲಿ
ಅವರವರ ಭಾವಕ್ಕೆ ತಕ್ಕ ರೂಪ ಆಕಾರಗಳಲ್ಲಿ ಪ್ರತ್ಯಕ್ಷಳಾಗಿ
ದರ್ಶನ ಕೊಡಬೇಕು.
ಆದ್ದರಿಂದ ಕ್ಷಣಕ್ಷಣವೂ ಮೇಕಪ್ ಬದಲಿಸಿ
ವೇಷ ಕಟ್ಟಬೆಕು.
ಶೆಟಿವಿ ತಾಯಿ ಎಂಬುದು ನನ್ನ ಸ್ಥಳೀಯ ಹೆಸರು.
ಕ್ಷಮಿಸಿ, ಗಿರಿಮಲ್ಲಿಗೆ,

ಗಿರಿಮಲ್ಲಿಗೆ : ತಾಯಿ,

ತಾಯಿ : ಮುಂದುವರಿಸು.

(ಹೋಗುವನು)

ಗಿರಿಮಲ್ಲಿಗೆ : ತಾಯಿಯ ಮಾತು ನಿಮಗೆ ತಿಳಿಯಲಿಲ್ಲ, ಅಲ್ಲವೆ?
ಶೆಟಿವಿ ತಾಯಿ ಅಂದರೆ ಸಾವಿನ ದೇವತೆ
ನಾವು ನೀವು ಅಷ್ಟೇ ಅಲ್ಲ, ದೇವರೂ ಹೆದರುವ,
ಆದರೂ ನಿವಾರಿಸಲಾಗದ ಅಂತಿಮಗುರಿ.
ಬೆಟ್ಟ ಬೆಟ್ಟಗಳಲ್ಲಿ ಗುಡಿ ತಾಯಿಗೆ
ನಮ್ಮ ಬೆಟ್ಟದ ಒಳಗೂ ಗುಡಿ ಶೆಟಿವಿಗೆ.
ದಿಕ್ಕು ದಿಕ್ಕಿಗೆ ಒಂದು ಹೆಸರವಳಿಗೆ
ನಮ್ಮ ದಿಕ್ಕಿನಲವಳು ಶೆಟಿವಿ ಮಾಯೆ.
ಅಗೋ ಅಲ್ಲಿದೆಯಲ್ಲ ಮಾಯೀಬೆಟ್ಟದಡಿಯ ಗವಿ,
ಅಲ್ಲಿಂದ ಪ್ರವೇಶ ಮೊದಲಾಗುವ ಅಧೋಲೋಕದ ಒಡತಿ ಅವಳು.
ನಾನು ಗಿರಿಮಲ್ಲಿಗೆ.
ಶೆಟಿವಿ ತಾಯಿಯ ಸೇವಕಿ ಮತ್ತು ದೃಢಭಕ್ತೆ.
ಸಂಜೀವಶಿವ ಶೆಟಿವಿ ತಾಯಿಯ ಸಾಕುಮಗ.
ಅವನ ತಂದೆ ತಾಯಿ ಲೋಕದಾಟವ ಪೂರೈಸಿ ಸಾಯಲಿದ್ದಾಗ
ದಿಕ್ಕುದೆಸೆ ಇಲ್ಲದ ಕೂಸನ್ನು ತಾಯಿಯ ಕೈಗಿತ್ತು
ಯೋಗಭಾಗ್ಯ ಆಯುಷ್ಯ ಭವಿಷ್ಯವ ಕೊಟ್ಟು
ಕಾಪಾಡು ತಾಯೀ ಎಂದು ಮೊರೆಯಿಟ್ಟರು. ಶೆಟಿವಿ ತಾಯಿ
ದಯಮಾಡಿ ಕಂದನಿಗೆ ಜಯ ಒದಗಿಸಿ ಕೀರ್ತಿವಂತ
ವೈದ್ಯನ ಮಾಡುವೆನೆಂದು ಅಭಯವಾಕ್ಯ ನುಡಿದಾಗ
ಇಬ್ಬರೂ ನಿರುಮ್ಮಳ ಉಸಿರುಬಿಟ್ಟರು. ಇಬ್ಬರ ಜೀವಂಗಳ
ಅನಾಯಾಸ ನುಂಗಿ ನೀರು ಕುಡಿದಳು ತಾಯಿ.

ತಾಯಿ, ಅವಳ ಕಣ್ಣು ತಪ್ಪಿದರೆ ನಾನು,
ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಳಜಿಯಿಂದ ಬೆಳೆಸಿದ್ದಕ್ಕೆ
ಇಪ್ಪತ್ತು ವರ್ಷಗಳ ಬೆಳೆವಿಗೆಯನ್ನು ಇಪ್ಪತ್ತು ತಿಂಗಳಲ್ಲಿ
ಇಪ್ಪತ್ತು ತಿಂಗಳ ಬೆಳೆವಿಗೆಯನ್ನು ಇಪ್ಪುತ್ತು ವಾರ ದಿನಗಳಲ್ಲಿ
ಬೆಳದು, ಪಡ್ಡೆ ಪ್ರಾಯದ ತರುಣನಾಗಿ
ಕಾಂಬವರ ಕಣ್ಣು ತುಂಬಿದ್ದಾನೆ ಮಗ.
ಇಷ್ಟು ವರ್ಷ ಹೇಳಿದ ಹಿತನುಡಿ ಕೇಳುತ್ತ, ವ್ರತಾಚರಣೆ
ಮಾಡಿ, ಕಾಡಿನ ಗಿಡಮೂಲಿಕೆ ನಾರುಬೇರಿನ ಗುಣಸ್ವಭಾವಂಗಳ
ವಶೀಕರಿಸಿಕೊಂಡು, ವೈದ್ಯವಿದ್ಯದಲ್ಲಿ ಪರಿಣತನಾಗಿ
ಚಿಕ್ಕಹರೆಯದಲ್ಲಿ ದೊಡ್ಡ ಸಾಧನೆಗಳ ಮಾಡಿ,
ನಾಲ್ಕೂ ದಿಕ್ಕುದೇಶಗಳಲ್ಲಿ ನಾಲ್ಕಾರು ಚಂದದ ವಿಶೇಷಣಗಳಿಂದ
ಕೀರ್ತಿವಂತನಾಗಿದ್ದಾನೆ.
ಎಂಥದೇ ಭಯಂಕರ ರೋಗಿಯಿರಲಿ, ಇವನೊಮ್ಮೆ
ನಾಡಿ ಮಿಡಿತವ ನೋಡಿ ಮದ್ದುಕೊಟ್ಟರಾಯ್ತು.
ಗುಣವಾಗದ ಒಬ್ಬ ರೋಗೀಯೂ ಇಡೀ ನರಲೋಕದಲ್ಲಿಲ್ಲ!
ಯಾಕೆ ಗೊತ್ತೆ? ತಾಯಿ ಮಗನಿಗಿತ್ತ ವರದ
ಗುಟ್ಟೊಂದನ್ನು ಹೇಳಿ ನಿಮ್ಮನ್ನು ಬೆರಗುಗೊಳಿಸುತ್ತೇನೆ:

ಸಂಜೀವಶಿವ ರೋಗಿಯ ನಾಡಿ ಮಿಡಿತವ
ನೋಡುವಾಗ
ರೋಗಿಯ ಎಡಕ್ಕೆ ಇಲ್ಲವೆ ಬಲಕ್ಕೆ ತಾಯಿ ಪ್ರತ್ಯಕ್ಷಳಾಗುತ್ತಾಳೆ.
ತಾಯಿ ಹೀಗಿ ಅನುಗ್ರಹಿಸುವಾಗ ಸಂಜೀವ ಮತ್ತು ನನ್ನ ವಿನಾ
ಇನ್ನೊಬ್ಬರಿಗೆ ಕಾಣುವುದಿಲ್ಲ.
ತಾಯಿ ಪ್ರತ್ಯಕ್ಷಗೊಂಡು ನಿಂತ ಬದಿಯಿಂದಲೇ
ಸಂಜೀವ ರೋಗಿಯನ್ನೊಪ್ಪುತ್ತಾನೆ, ಇಲ್ಲ ಬಿಡುತ್ತಾನೆ.
ರೋಗಿಯ ಬಲದಲ್ಲಿ ಪ್ರತ್ಯಕ್ಷವಾದರೆ ವೈದ್ಯ ಮಾಡುತ್ತಾನೆ.
ಎಡದಲ್ಲಿ ಪ್ರತ್ಯಕ್ಷವಾದರೆ
ದಮ್ಮಯ್ಯಾ ದಯವಾಗು ಶಿವನೇ ಎಂದರೂ ಸಂಜೀವ
ರೋಗಿಗೆ ವೈದ್ಯ ಮಾಡುವುದಿಲ್ಲ. ಇದು ತಾಯಿ ಮಗನಿಗೆ ಕೊಟ್ಟ ವರ.
ತಾಯಿಗೆ ಮಗನ ಅಭ್ಯುದಯ ವಿನಾ ಬೇರೇನು ಬೇಕು?
ಈಗೀಗ ರೋಗಗಳ ಸಂಖ್ಯೆ ಬೆಳೆದಂತೆ
ಸಸ್ಯಜಾತಿ ಬೆಳೆಯುತ್ತಿಲ್ಲವಲ್ಲಾ ಎಂದು ಕೊರಗುತ್ತಾನೆ.
ಅದಕ್ಕೆಂದೇ ಮೂಲಿಕೆ ಬಳಸದ ಹೊಸ ಹೊಸ ಚಿಕಿತ್ಸಾವಿಧಾನಗಳನ್ನು
ಕಂಡು ಹಿಡಿಯುತ್ತಿದ್ದಾನೆ. ಅರೆಗಳಿಗೆ ಸಮಯ ಸಿಕ್ಕರೂ
ಕಾಡಿಗೆ ಓಡಿ ಓಡಿ ಗಿಡಮೂಲಿಕೆಗಳ ಶೋಧನೆಯಲ್ಲಿ ತೊಡಗುತ್ತಾನೆ.
ಪಡ್ಡೆ ಪ್ರಾಯದಲ್ಲಿ ಗೆಣೆಕಾರರ ಕಾಡು ಹರಟೆಗಳಲ್ಲಿ
ತೊಡಗಿರಬೇಕಾದ ಹುಡುಗ, ಇಂತೀಪರಿ ಏಕಾಂಗಿಯಾಗಿ
ರೋಗಿರೋಗಂಗಳ ಚಿಂತನೆ ಮಾಡುತ್ತ, ಬೇಸರದ
ಗಳಿಗೆಗಲಲ್ಲಿ ಅದೊಂದು ಜಿಂಕೆ ನೇತ್ರಾವತಿಯೊಂದಿಗೆ
ಚೆಲ್ಲಾಟವಾಡುತ್ತ ಇರುವುದು ಅವನ ವಯಸ್ಸಿಗೆ ಅಸಹಜವೆ.
ಇದು ಅವನ ವೈದ್ಯಶಾಲೆ.
ಮೂರುಜನ ರೋಗಿಗಳಿದ್ದಾರೆ. ಅವಳು ಅನಾಥ ಹೆಂಗಸು,
ಇರುವ ಮಗನೊಬ್ಬನೇ ಅವಳಿಗೆ ಆಸರೆ, ದನ ಕಾಯುವ
ಆತನಿಂದಲೇ ಅವಳಿಗೆ ಬೈಗು ಬೆಳಗು.
ಇನ್ನೊಬ್ಬ ಗೋರಿ ಅಗಿವ ಮಾರ, ಸ್ಮಶಾನವಾಸಿ.
ಸತ್ತವರ ಜೊತೆ ಮಾತಾಡುವಾತ ಅಂತ ಕೀರ್ತಿವಂತ.
ಮಲೆಯಾಳ ಮಾಂತ್ರಿಕರಿಗೆ ಬಂಗಾಳದ ತಾಂತ್ರಿಕರಿಗೆ
ಬಾಣಂತಿಯ ಕೈ ತಲೆಬುರುಡೆಗಳ ಒದಗಿಸುವಾತ.
ಪಾಪಪುಣ್ಯ ಏನೊಂದಊ ತಗಲದ ಮುಗ್ಧ, ಭಯಸ್ಥ.
ಭಯದಲ್ಲಿ ಹಳವಂಡಗಳ ಕಂಡುಕನವರಿಸುವಾತ.
ಮನೆಯಲ್ಲಿ ಹೆಣ ಬಿದ್ದಾಗಲ್ಲದೆ ಯಾರೊಬ್ಬರೂ ಇವನನ್ನ
ಜ್ಞಾಪಿಸಿಕೊಳ್ಳುವುದಿಲ್ಲ. ಎದುರಿಗಿದ್ದರೂ ಗಮನಿಸುವುದಿಲ್ಲ.
ನೀವೂ ಅಷ್ಟೆ, ಅವನನ್ನು ಮರೆತು ಬಿಡಿ.
ಕೊನೆಯವ ನಟಭಯಂಕರ, ಆಸ್ಥಾನದ ವಿದೂಷಕ.
ಘಾಟಿ ಮುದುಕ. ಸಾವಿನ ಭಯದಲ್ಲಿ ಯಾವಾಗಲೂ ಯಾರ್ಯಾರದೋ
ವೇಷ ಮತ್ತು ಹೆಸರಿನಲ್ಲಿರೋದರಿಂದ ಸ್ವಂತ ಹೆಸರೆಂಬುದಿಲ್ಲ.
ಅಷ್ಟೇ ಅಲ್ಲ, ಯಾವಾಗ ಯಾರ ವೇಷದಲ್ಲಿದ್ದಾನೆಂದೂ
ತಿಳಿಯುವುದಿಲ್ಲ. ಅನುಕೂಲಕ್ಕಾಗಿ ಅವನಿಗೆ
ಮದನತಿಲಕ ಎಂದು ಕರೆಯೋಣ. ಈಗ ನೋಡಿ: