(ವೈದ್ಯಶಾಲೆಯಲ್ಲಿ ತಾಯಿ ಮತ್ತು ಗಿರಿಮಲ್ಲಿಗೆ)

ತಾಯಿ : ಗಿರಿಮಲ್ಲಿಗೆ, ಸಂಜೀವ ಮತ್ತು ರಾಜಕುಮಾರಿಯ ಮೇಲೆ ನಿಗಾ
ಇಟ್ಟಿದ್ದೀಯಲ್ಲವೆ?

ಗಿರಿಮಲ್ಲಿಗೆ : ಕಣ್ಣು ಪಿಳುಕಿಸದೆ ಗಮನಿಸುತ್ತಿದ್ದೇನೆ ತಾಯಿ.

ತಾಯಿ : ಸಂಜೀವ ಎಲ್ಲಿ ಹ್ಯಾಗಿದ್ದಾನೆ? ಏನು ಮಾಡುತ್ತಿದ್ದಾನೆ? ವಿವರವಾಗಿ ಹೇಳು.

ಗಿರಿಮಲ್ಲಿಗೆ : ಹೊತ್ತು ಕೈಮೀರುತ್ತಿದೆ ಎಂಬಂತೆ ಧಾವಿಸಿ ಅರಮನೆಗೆ ಬಂದು ತುರ್ತಾಗಿ ರಾಜಕುಮಾರಿಯಲ್ಲಿಗೆ ಹೋದ ಇವನು ಹೋಗಿ ಏನು ಹೇಳಿದನೊ. ತಾನು ಸಾವಿನ ಅರಮನೆಗೆ ಹೊರಟಿರುವೆನೆಂದು ಮತ್ತು ಸಾವನ್ನ ಎದುರಿಸುವುದು ಸಂಜೀವಶಿವನ ಮಡದಿಯಾಗಿ ತನ್ನ ಕರ್ತವ್ಯವೆಂದು ಅವಳು ನಿರ್ಧರಿಸಿಯಾಗಿತ್ತು ತಾಯಿ! ಅವಳ ಮುಖದಲ್ಲಿ ಎಷ್ಟೂ ಉದ್ವಿಗ್ನತೆ ಇರಲಿಲ್ಲ. ಸಾವಿನ ಮಾತು ಕೇಳಿ ಮೈಲಿಗೆಯಾಯಿತೆಂಬಂತೆ ತಲೆಗೂದಲು ಬಿಚ್ಚಿ ಬೆನ್ನಿಗಿಕ್ಕಿದಳು. ಕಾದಿರಲು ಸಂಜೀವಶಿವನಿಗೆ ಹೇಳಿ ಮಿಂದು ಬರಲು ಬಚ್ಚಲು ಮನೆಗೆ ಹೋದಳು. ಶುದ್ಧಿಗೆ ಮಿಂದು ಮಡಿಯಾಗಿ ಕನ್ನಡಿಯ ಮುಂದೆ ನಿಂತು ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ಹಣೆಗೆ ಕುಂಕುಮ ಇಟ್ಟುಕೊಂಡಳು. ತಲೆಯ ಸೆರಗಿನಿಂದ ತೊಡಗಿ ನೆಲಬಡಿವ ನೆರಿಗೆಯತನಕ ಚಿನ್ನದಂಚಿನ ಚಂದ್ರಕಾಳಿಯನ್ನು ಹ್ಯಾಗೆ ಹ್ಯಾಗೋ ಉಟ್ಟು ನೀಲಿ ರವಿಕೆ ತೊಟ್ಟಳು. ತಲೆ ಬಾಚಿಕೊಂಡಳಾದರೂ ಕೂದಲನ್ನು ಒಟ್ಟು ಮಾಡಿ ಮುಡಿಕಟ್ಟುವುದು ಅವಳಿಗೆ ಸಾಧ್ಯವಾಗಲೇ ಇಲ್ಲ. ಅದು ತಿಳಿಯದೆ ಅವಳು ಒದ್ದಾಡುವುದ ನೋಡಿ ನಾನೇ ಜಡೆ ಹೆಣೆದು ದುಂಡುಮಲ್ಲಿಗೆ ದೇವಕೇದಗೆಗಳನ್ನು ಮುಡಿಸೋಣವೆಂದು ಆಸೆಯಾಗಿತ್ತು. ಪ್ರಯಾಸದಿಂದ ನನ್ನಾಸೆಯನ್ನು ನಿಯಂತ್ರಿಸಿಕೊಂಡತಾಯಿತು. ಸಂಜೀವ ಕೊಟ್ಟ ಸಂಪಿಗೆಯನ್ನು ಅವಳೇ ಮತ್ತೊಮ್ಮೆ ಮುಡಿದುಕೊಂಡಳು. ಹಾಗೂ ಅವಳು ಶೃಂಗಾರವಾದುದ ನೋಡಿ ನನ್ನಲ್ಲಿ ನಗೆ ಮತ್ತು ಕಣ್ಣೀರು ಎರಡೂ ಉಕ್ಕಿದವು.

ತಾಯಿ : ಮುಂದೆ ಹೇಳು.

ಗಿರಿಮಲ್ಲಿಗೆ : ಆಮೇಲೆ ತನ್ನ ತಾಯಿಯ ವರ್ಣಚಿತ್ರದೆದುರು ಬಂದು ತುಪ್ಪದ ದೀಪ ಹಚ್ಚಿದಳು. “ಅಮ್ಮಾ ಗಂಡನ ಮನೆಗೆ ಹೋಗುತ್ತಿದ್ದೇನೆ, ಆಶೀರ್ವದಿಸು” ಎಂದು ಹಣೆ ನೆಲಕ್ಕೆ ತಾಗಿಸಿ ನಮಸ್ಕರಿಸಿದಳು. “ವೈದ್ಯನನ್ನ ನೋಡಿದ ತಕ್ಷಣವೆ ಆತನಿಗೆ ಮಾರು ಹೋದೆ. ಆಮೇಲೆ ಮಾತು ಬೆಳೆದಂತೆ ಆತ ಹೆಚ್ಚು ಅರ್ಹನಾಗಿ ಕಂಡ. ಆದರೆ ಮಾತಿಗಿಂತ ಮುಂಚೆಯೇ ನಮ್ಮ ಆತ್ಮಗಳು ಪರಸ್ಪರ ಹತ್ತಿರವಾಗಿದ್ದವು. ನಾನು ಸತ್ತನಂತರ ನನ್ನ ಗಂಡನಿಗೆ ದೀರ್ಘಾಯುಷ್ಯ ಮತ್ತು ನನ್ನಷ್ಟೇ ಪ್ರೀತಿಸುವ ಇನ್ನೊಬ್ಬ ಹೆಂಡತಿಯನ್ನು ಕೊಡು” ಎಂದು ಹೇಳುತ್ತಿರುವಂತೆಯೇ ದುಃಖದ ಕಟ್ಟೆಯೊಡೆದು ಧಾರಾವತಿ ಕಣ್ಣೀರ ಜಲದಲ್ಲಿ ಒದ್ದೆಯಾದಳು ತಾಯೀ, ನನ್ನ ಕಣ್ಣೂ ಹನಿಗೂಡಿ ಮುಂದೇನಾಯಿತೆಂದು ಕಾಣಲಿಲ್ಲ.

ಸೇವಕಿ : (ಅವರಸರದಲ್ಲಿ ಆಗಮಿಸಿ) ಮಹಾತಾಯಿ, ರಾಜಕುಮಾರಿ ಮತ್ತು ಸಂಜೀವಶಿವ ಇಬ್ಬರೂ ಕಾಣುತ್ತಿಲ್ಲ.

ತಾಯಿ : ಏನಂದೆ?

ಸೇವಕಿ : ಹೌದು ಮಹಾತಾಯಿ. ಇಬ್ಬರೂ ಈಗಷ್ಟೆ ಕುದುರೆಯೇರಿ ಹೊರಟರು. ಈ ಕಡೆಗೇ ಹೊರಟರೆಂದು ಬಗೆದು ನಮ್ಮ ಕೆಲಸ ಸುಗಮವಾಯಿತೆಂದು ಸುಮ್ಮನಿದ್ದೆವು. ಆದರೆ ಕಾಡು ಸೇರಿದೊಡನೆ ಕುದುರೆಯನ್ನು ವೇಗದಿಂದ ದೌಡಾಯಿಸಿ ಕಗ್ಗಾಡಿನಲ್ಲಿ ಕಣ್ಮರೆಯಾದರು.

ತಾಯಿ : ಗಿರಿಮಲ್ಲಿಗೆ, ಓಡಿ ಹಿಡಿಯಿರವರನ್ನ. ನಮಗಿರುವ ಎಲ್ಲ ಬಲಾಬಲ, ಉಪಾಯಗಳ ಬಳಸಿ ಎಳೆದುತನ್ನಿ ಅವರನ್ನ.

* * *