(ಕಾಡು, ಸಂಜೀವಶಿವ ಮತ್ತು ರಾಜಕುಮಾರಿಯನ್ನು ಹುಡುಕಿಕೊಂಡು ಇಬ್ಬರು ಸೇಡುಮಾರಿಯರು ಬರುವರು.)

ಸೇಡುಮಾರಿ ೧ : ವಸ್ತುಗಳ್ಯಾಕೆ ಗುರುತ್ವಾಕರ್ಷಣ ಕಳೆದುಕೊಂಡಂತೆ
ಚೆಲ್ಲಾಪಿಲ್ಲಿ ಚೆಲ್ಲುವರಿಯುತ್ತಿವೆ?

ಸೇಡುಮಾರಿ ೨ : ಕಾಲಮೇಲೆ ನಿಂತಿದೆ ಬಾವಲಿ,
ತಲೆಕೆಳಗಾಗಿ ಮರಕ್ಕೆ ನೇತು ಬಿದ್ದಿದೆ ನವಿಲು!

ಸೇಡುಮಾರಿ ೧ : ಜೀವರಾಶಿಗಳ್ಯಾಕೆ ತಂತಮ್ಮ ಸ್ವಭಾವ ಧರ್ಮಂಗಳ
ಮೀರುತ್ತಿವೆ! ಊರಲ್ಲಿ ನೋಡಲಿಲ್ಲವೆ,
ಆಡುವ ಬಾಲಕರು ವೃದ್ಧರಾಗಿ ಕಾಲಜ್ಞಾನ ನುಡಿಯುತ್ತಿದ್ದರು!

ಸೇಡುಮಾರಿ ೨ : ಅಳಿದವರು ಉಳಿದವರು
ವೇಷಭೂಷಣ ಮತ್ತು ಸ್ಥಳಗಳ
ಅದಲು ಬದಲು ಮಾಡಿಕೊಂಡು
ಒಬ್ಬರು ಇನ್ನೊಬ್ಬರ ನಡೆನುಡಿಗಳು
ಕದ್ದಾಡುತ್ತಿದ್ದರು.

ಸೇಡುಮಾರಿ ೧ : ಭೂಮಿ ಆಕಾಶ ಎರಡೂ ಇವತ್ತು ಸರಿಯಿಲ್ಲ,
ತಳಮಳಗೊಂಡು ಕುದಿಯುತ್ತಿವೆ.
ಹೆಣ ತಿಂಬವರಿಗೆ ಹಿತವಾದ ಹವೆಯಿದು.
ಬೇಗ ಬಾ, ಹುಡುಕೋಣ.
(ಮರೆಯಾಗುವರು. ರಾಜಕುಮಾರಿ ಮತ್ತು ಸಂಜೀವಶಿವ ಆ ಈ ಕಡೆ
ನೋಡುತ್ತ ಅಡಗುತ್ತ ಬರುವರು. ಸ್ಥಳ ಸುರಕ್ಷಿತವೆನಿಸಿದಾಗ ಕೂರುವರು.)

ರಾಜಕುಮಾರಿ : ಇಲ್ಲಿ ಸ್ವಲ್ಪ ತಂಗೋಣವ?

ಸಂಜೀವಶಿವ : ಆಗಲಿ, ನಾವಾಗಲೇ ನಮ್ಮೂರ ಸೀಮೆ ದಾಟಿ ಬಂದಾಗಿದೆ.
ಕೊನೇಪಕ್ಷ ಹೊತ್ತು ಮುಳುಗೋತನಕ ಇಲ್ಲಿದ್ದು
ಆಮೇಲೆ ಹೊರಡಬಹುದು, ಆಯಾಸವಾಯಿತೇ
ರಾಜಕುಮಾರಿ?

ರಾಜಕುಮಾರಿ : ನನ್ನ ಹೆಸರು ಇರುವಂತಿಗೆ; ರಾಜಕುಮಾರಿಯಲ್ಲ.
ತುಂಬ ಆಯಾಸವಾಗಿದೆ ಸ್ವಾಮೀ,
ಜಲ ಜಲ ಬೆವರು ಸುರಿಯುತ್ತಿದೆ, ಕಾಣಬಾರದೆ?

ಸಂಜೀವಶಿವ : (ಬೆವರು ಒರೆಸುತ್ತ) ಆನಂದಗಳನುಂಡು ಆಡುವ ನಿನಗೆ
ಇಂತೆಂಬ ಕಷ್ಟನಿಷ್ಟುರ ಬರಬಾರದಿತ್ತು ಇರುವಂತಿಗೆ.
(ರಾಜಕುಮಾರಿ ಹಾಗೇ ಅವನ ಎದೆಗೆ ಒರಗುವಳು. ಅವನು ಬೆವರು
ಒರೆಸುತ್ತಿರುವಂತೆ
ಇವಳು ಅವನ ಹೃದಯಸ್ಪಂದನ ಕೇಳಿಸಿಕೊಳ್ಳುತ್ತ)

ರಾಜಕುಮಾರಿ : ಯಾವುದೋ ಗುಡ್ಡಗಾಡು ಪ್ರದೇಶ ಅಲ್ಲವ ನೀ ಹುಟ್ಟಿದ್ದು?

ಸಂಜೀವಶಿವ : ಹೌದು ಯೋಗೀಕೊಳ್ಳದಲ್ಲಿ.

ರಾಜಕುಮಾರಿ : ಅಲ್ಲೊಂದು ನದಿ ಹರಿಯುತ್ತಿದೆ ಅಂತ ಅಲ್ಲವ ನೀ ಹೇಳಿದ್ದು?

ಸಂಜೀವಶಿವ : ಹೌದು, ವಿರುದ್ಧ ದಿಕ್ಕಿಗೆ ಹರಿವ ಎರಡು ಸೆಳವುಗಳ ನದಿ ಅದು.

ರಾಜಕುಮಾರಿ : ಆ  ನದಿ ಈಗಲೂ ನಿನ್ನ ಎದೆಯಲ್ಲಿ ಹರಿಯುತ್ತಿದೆ!
ರಭಸದಿಂದ ಹರಿಯುತ್ತ ಕೊಳ್ಳದ ತಿರುವಿನಲ್ಲಿ
ವಿರುದ್ಧ ದಿಕ್ಕಿನ ಎರಡು ಸೆಳವುಗಳಾಗಿ ಹಂಚಿ,
ಎರಡೂ ಸೆಳೆವು ಒಮ್ಮೊಮ್ಮೆ ಡಿಕ್ಕಿ ಹೊಡೆದು
ಘರ್ಷಿಸಿ ಬೇರ್ಪಡುತ್ತಿವೆ!

ಸಂಜೀವಶಿವ : ಇರುವಂತಿಗೆ ಅಗೊ ಅಸ್ತಮಾನವಾಯಿತು. ಇನ್ನು ಹೊರಡೋಣವೆ?
(ಹೊರಡುವರು, ಸೇಡುಮಾರಿಯರು ಬರುವರು.)

ಸೇಡುಮಾರಿ ೧ : ಅವರು ಹೊರಟಿದ್ದೇ ನಾವೂ ಹುಡುಕಲು ಹೊರಟೆವು.
ಆದರೂ ಅವರ ಸುಳಿವು ಸಿಗುತ್ತಿಲ್ಲವಲ್ಲ!

ಸೇಡುಮಾರಿ ೨ : ಹಾಳಾದ್ದು ಈ ಕಾಡಿನ ತುಂಬ ದಾರಿಗಳೇ ಇವೆ.
ಯಾವ ದಾರಿಯಿಂದ  ಪಾರಾದರೊ!

ಸೇಡುಮಾರಿ ೧ : ಇಡೀ ಕಾಡು ದುಃಸ್ವಪ್ನದ ಹಾಗಿದೆ.

ಸೇಡುಮಾರಿ ೨ : ಬಾನಲ್ಲಿ ಒಂದೂ ಚಿಕ್ಕೆ ಮೊಳೆತಿಲ್ಲವೆ!

ಸೇಡುಮಾರಿ ೧ : ಮರಗಳೆಲ್ಲ ಕತ್ತಲಲ್ಲಿ ಅದ್ದಿತೆಗೆದ ಹಾಗಿವೆ.
ಯಾರೋ ಅಡಗಿದ ಹಾಗಾಯಿತಲ್ಲವೆ?

ಸೇಡುಮಾರಿ ೨ : ಯಾರದು ಅಡಗಿದವರು ? ಹೊರಬನ್ನಿರಯ್ಯಾ
ನೀವು ಅಡಗಿದಲ್ಲಿ ತಾಯಿಯ ಕಣ್ಣು ನಾಟಿರುತ್ತವೆಂದು ತಿಳಿದಿರಲಿ.

ಸೇಡುಮಾರಿ ೧ : ತಾಯಿಯ ಕೈಗೆ ಏನು ಸಿಕ್ಕರೂ ಆಯುಧವಾಗುತ್ತದೆಂದು ತಿಳಿದಿರಲಿ.

ಸೇಡುಮಾರಿ ೨ : ಬನ್ನಿ ಈಚೆ.

ಸೇಡುಮಾರಿ ೧ : ಬನ್ನಿ ಹೊರಕ್ಕೆ.

ಸೇಡುಮಾರಿ ೨ : ಯಾರೂ ಇಲ್ಲ. ಅವರು ಇನ್ನೆಲ್ಲೋ ದೂರ ಹೋಗಿದ್ದಾರೆ.

ಸೇಡುಮಾರಿ ೧ : ಎಷ್ಟುದೂರ ಹೋದರೂ ತಾಯಿಗೆ ಸಮೀಪ ತಾನೆ?

ಸೇಡುಮಾರಿ ೨ : ಮಹಾ ಚೆಲುವೆಯಂತೆ ರಾಜಕುಮಾರಿ?

ಸೇಡುಮಾರಿ ೧ : ಎಲ್ಲಾ ಸುಳ್ಳು. ದೀರ್ಘ ಕಾಲದ ರೋಗಿ ಅವಳು. ಒಣಗಿದ್ದಾಳೆ ಚಿಗುರಲಾರದಷ್ಟು.

ಸೇಡುಮಾರಿ ೨ : ತಾಯಿಗೆ ನೈವೇದ್ಯವಾದರಾಯ್ತಲ್ಲ. ಆ ಕಡೆ ಸದ್ದಾಯಿತಲ್ಲ! ಬಾ.
(ಹುಡುಕುತ್ತ ಹೋಗುವರು. ರಾಜಕುಮಾರಿ, ಸಂಜೀವ ಬರುವರು.)

ರಾಜಕುಮಾರಿ : ನೀನು ಆ ಹಕ್ಕಿಯನ್ನು ಕಣ್ಣಾರೆ ಕಂಡೆಯಾ?

ಸಂಜೀವಶಿವ : ಅದರ ಬಗ್ಗೆ ಕಿವಿಯಾರೆ ಕೇಳಿ ಗೊತ್ತೇ ವಿನಾ ಕಣ್ಣಾರೆ ಕಂಡು ಗೊತ್ತಿಲ್ಲ.

ರಾಜಕುಮಾರಿ : ಅದು ಕೂಗುತ್ತದೆಯೇ?

ಸಂಜೀವಶಿವ : ನಾನು ಕೇಳಿಲ್ಲ. ಆದರೆ ಕೇಳಿಸಿಕೊಂಡವರು ಅದರ ಧ್ವನಿ
ಭಯಂಕರವಾಗಿರುತ್ತದೆ; ಒಂದೇ ಬಾರಿಗೆ ನೂರು ಗೂಗೆ ಕೂಗಿದ
ಹಾಗಿರುತ್ತದೆ ಅಂತಾರೆ.

ರಾಜಕುಮಾರಿ : ಅಗೋ ಆ ಕಡೆ ಕ್ಷಿತಿಜದ ಪಕ್ಕದ ದೊಡ್ಡ ಬಂಡೆಯಂಥದೊಂದು
ಏನೋ ಕಾಣಿಸುತ್ತಲ್ಲ, ಅದಿರಬಹುದ?

ಸಂಜೀವಶಿವ : ಅದು ದೊಡ್ಡಾಲದ ಮರ.

ರಾಜಕುಮಾರಿ : ಅಂದರೆ ಅದು ಮರದಲ್ಲಿರೋದಿಲ್ಲವ?

ಸಂಜೀವಶಿವ : ಮರಕ್ಕೆ ಅದರ ಭಾರ ತಡೆದುಕೊಳ್ಳೋ ಶಕ್ತಿ ಇರಬೇಕಲ್ಲ.

ರಾಜಕುಮಾರಿ : ಸ್ಮಶಾನವನ್ನ ಆರಿಸಿಕೊಂಡಿದೆಯಲ್ಲ ಇರೋದಕ್ಕೆ! ಆಶ್ಚರ‍್ಯ ಅಲ್ಲವೆ?

ಸಂಜೀವಶಿವ : ಹೊಟ್ಟೆಗೆ ಬೇಕಿಲ್ಲ. ಹೊತ್ತುಕೊಂಬಂದರವನ್ನ ಓಡಿಸಿ ಆ ಹೆಣಗಳನ್ನು
ಕಚ್ಚಿಕೊಂಡು ಹೋಗುತ್ತದಂತೆ, ನೋಡಿದವರು ಹೇಳಿದ್ದು.

ರಾಜಕುಮಾರಿ : ನೀನು ವರ್ಣನೆ ಮಾಡೋದನ್ನ ಕೇಳಿದರೆ
ಅದು ಭಯಾನಕ ಹಕ್ಕಿ ಅನ್ನೋದರಲ್ಲಿ ಸಂದೇಹವೇ ಇಲ್ಲ.
ಆದರೆ ಆ ಸ್ಥಳ ಮಾತ್ರ ಆ ಹಕ್ಕಿಗೆ ಯೋಗ್ಯವಾದದ್ದಲ್ಲ
ಅಂತ ಹೇಳಲೇಬೇಕು.
ಯಾಕಂತೀಯೋ ಅಂಥ ಸುಂದರವಾದ ಹಸಿರಿನಲ್ಲಿ
ಅಂಥ ಭಯಾನಕ ಹಕ್ಕಿಯನ್ನ
ಕಲ್ಪಿಸಲು ಸಾಧ್ಯವಾಗೋದೇ ಇಲ್ಲ.

ಸಂಜೀವಶಿವ : ಬಹಳ ಜನ ಆ ಹಕ್ಕಿಯನ್ನ
ಅಲ್ಲೇ ನೋಡಿದ್ದಾರಂತೆ. ನಿನಗೆ ಕಂಡ ಅವರ್ಯಾರಿಗೂ ಆ ಜಾಗ
ಚಂದ ಕಂಡೇ ಇಲ್ಲ.

ರಾಜಕುಮಾರಿ : ನೋಡೋದಕ್ಕೆ ಹ್ಯಾಗಿದೆ ಅದು ? ಹದ್ದಿನ ಹಾಗೆ?
ಅಥವಾ ಇನ್ಯಾವುದಾದರೂ ಹಕ್ಕಿಯ ಹಾಗೆ?

ಸಂಜೀವಶಿವ : ದೊಡ್ಡ ಹಕ್ಕೀನೇ. ರೆಕ್ಕೆ ಇವೆ. ಕಾಲಿವೆ. ಆದರೆ ಅವ್ಯಾವೂ ನೆನಪಿನಲ್ಲಿ
ಉಳಿಯೋದಿಲ್ಲ. ಕ್ರೂರವಾದ ಅದರ ಕಣ್ಣು ಮಾತ್ರ ಕಾಣುತ್ತವಂತೆ!
ಅದು ನಮ್ಮನ್ನ ನೋಡುತ್ತಿದೆ ಅಂತ ಗೊತ್ತಾದವರೆಲ್ಲ ಅಲ್ಲೇ ಸಾಯುತ್ತಾರಂತೆ!
ಇನ್ನು ಹೊರಡೋಣವ?

ರಾಜಕುಮಾರಿ : ಇರು ನಿನಗೊಮ್ಮೆ ನಮಸ್ಕಾರ ಮಾಡಬೇಕು.

ಸಂಜೀವಶಿವ : ಯಾಕೆ?

ರಾಜಕುಮಾರಿ : ಯಾಕೆಂದರೆ ನೀನು ಗಂಡ, ನಾನು ಹೆಂಡತಿ.
ಗಂಡ ಹೆಂಡತಿ ಅಂದಮೇಲೆ
ಒಂದು ಸಲವಾದರೂ ನಮಸ್ಕಾರ ಮಾಡಬೇಡವೇ?
(ನಮಸ್ಕಾರ ಮಾಡಿ) ಇನ್ನು ನಡೆ.
(ಹೊರಡುವರು. ನಡೆದು ನಡೆದು ಇನ್ನೊಂದು ಭಯಾನಕವಾದ, ಆದರೆ  ವಿಚಿತ್ರವಾದ ಕಾಡಿಗೆ ಬರುವರು.)

ರಾಜಕುಮಾರಿ : ದಾರಿ ತಪ್ಪಿ ಇಲ್ಲಿಗೆ ಬಂದಿವ?

ಸಂಜೀವಶಿವ : ಇರಲಾರದು.

ರಾಜಕುಮಾರಿ : ಯಾವ ಸೀಮೆಯಿದು?
ಬಿರುಗಾಳಿ ಬೀಸಿ ಮರದೆಲೆ ಮುಖಕ್ಕೆ ರಾಚುತ್ತಿವೆ.
ಯಾರದೋ ನೆರಳು
ಹುಲ್ಲಿನ ಮ್ಯಾಲೆ ಕದ್ದು ನಡೆದಾಡಿದವಲ್ಲ!
ಮಂಜಿನಾಕೃತಿಗಳು ಅಗೋ ಅಗೋ
ಎದುರೆದುರೆ ಮೂಡಿ ನಮ್ಮೆಡೆಗೇ
ನಡೆದು ಬರುತ್ತಿವೆ!
(ಭೂತಗಳು ಇವರ ಕಡೆಗೆ ನಡೆದು ಬಂದು ಗುಂಪಾಗಿ ಎತ್ತರದಲ್ಲಿ ನಿಂತು ಕೊಳ್ಳುತ್ತವೆ.)

ಕೀರ್ತಿಶಿವನ ಭೂತ : ಅಯ್ಯಾ ಸಂಜೀವ ನಾನು ಕೀರ್ತಿಶಿವ
ನಿನ್ನ ತಂದೆ, ಈಗ ಆಗಿದ್ದೇನೆ ಭೂತ.
ನಾವೆಲ್ಲ ಭೂತಗಳು ಬಂದಿದ್ದೇವೆ
ನಿಮ್ಮನ್ನ ಹರಸುವುದಕ್ಕೆ.

ಭೂತಗಳು : ಹೆದರಬೇಡಿ ಮಕ್ಕಳೇ,
ನಾವೂ ನಿಮ್ಮಂತೆ ಕಾಳಗ ಕೊಟ್ಟು
ಕಳಕೊಂಡವರು. ಕಾಳಗ ಕೊಡುವ
ನಿಮ್ಮಂಥವರ ಹರಸುವವರು.
ದೇವರಿಗೆ ಕಣ್ಣಿಲ್ಲ, ಕಿವಿಯಿಲ್ಲ
ಅಥವಾ ಅವರಿಗೂ ಗೊಂದಲಗಳಿವೆ.
ಅಥವಾ ಅವರೂ ತಾವು ಮಾಡಿದ ಜಗತ್ತನ್ನ
ಸರಿಪಡಿಸಲಾರದ ಸೋಂಬೇರಿಗಳು.
ಆದರೂ ವರ್ಷಗಳು ಗತಿಸಿದರೂ
ನಿಮ್ಮ ಧೈರ್ಯದ ಬಗ್ಗೆ,
ತಾಯಿಯ ಕ್ರೌರ್ಯದ ಬಗ್ಗೆ
ಜನ ಆಡಿಕೊಳ್ಳುತ್ತಾರೆ;
ನೆನಪಿರಲಿ.
ಅಯ್ಯಾ ಎಳೆಯ ಗೆಳೆಯ
ಬಾರಯ್ಯಾ ಮುಂದೆ.
ಹಾರಾಡುವ ಎಲೆಯೇ ಬಣ್ಣದ ಗಾಳಿಪಟ ಅಂದುಕೊಳ್ಳಯ್ಯಾ.
ಬಣ್ಣದ ಗಾಳಿಪಟವೇ ಪುಷ್ಪಕ ವಿಮಾನ,
ಅದರ ಚಾಲಕ ನೀನೇ ಅಂದುಕೊಳ್ಳಯ್ಯಾ
ಈಗ ನಡೆಸು ವಿಮಾನವ.
ಆಕಾಶದಂಗಳದ ಚಿನ್ನದ ಹುಡಿಯಲ್ಲಾಡಿ
ಬಣ್ಣದ ಮುಗಿಲೇರಿ ಲತೆಗಳ ಜೀಕಿ,…..
ನಾವೂ ಹೀಗೇ ಜೋಕಾಲಿಯಾಡಿದೆವಯ್ಯಾ
ಹಂಕಾರ ಹೊತ್ತಿಸಿಕೊಂಡು ಹೂಂಕರಿಸಿ
ಕ್ಷಿತಿಜಗಳಿಗೆ ನುಗ್ಗಿ ತಾರೆಗಳ ಬೆಳಗಿ
ಗ್ರಹಗಳ ಇಳಿದೇರಿ
ದಿನ ರಾತ್ರಿ ಮಾಸ ವರುಷಗಳ
ದಣಿಯುವ ತನಕ ನಗಾಡಿ ಕಳೆದೆವಯ್ಯಾ!
ಅಲ್ಲೇ ಎಲ್ಲೋ ಇದ್ದಳು ಆಕೆ
ಇದ್ದೂ ಇಲ್ಲದಂತೆ, ನಮಗೆ ಕಾಣದಂತೆ
ಕಂಡರೂ ಗುರುತು ಸಿಗದಂತೆ
ಇದ್ದಾಳೆನ್ನಿಸಿ ಇಲ್ಲದ ಕನಸಿನಂತೆ
ಭಯದಂತೆ ಅಥವಾ ಈಗಿನ ನಮ್ಮಂತೆ.
ಆಮ್ಯಾಲೆ ಬೀಸಿದಳಯ್ಯಾ ತನ್ನ ಬಿರುಗಾಳಿ
ಸುಂಟರಗಾಳಿಗಳ ನಮ್ಮ ಪಟಗಳ ಮ್ಯಾಲೆ.
ಪಟ ಪಟ ಸೂತ್ರ ಹರಿದು ತೇಲುತ್ತ ತೇಲುತ್ತ
ಬಿದ್ದೆವು ನದಿ ದಡದ ಮಳಲಿನ ಮ್ಯಾಲೆ.
ತೆರೆಹೊಯ್ದು ಮಳಲೊಡನೆ ಮಳಲಾಗುವುದು
ತಡವಾಗಲಿಲ್ಲ.
ಈಗ ಇಲ್ಲಿದ್ದೇವೆ ಹೀಗೆ ನೆರಳಿನ ಹಾಗೆ
ಸಂದು ಮರೆವಿಗೆ.
ನಿಮ್ಮ ಸಾಹಸಗಳ ನೋಡುತ್ತ
ಮೆಚ್ಚುತ್ತ ಕೈ ಎತ್ತಿ ಹರಸುತ್ತ.
ಈವರೆಗೆ ಸತ್ತ ನಮ್ಮೆಲ್ಲರ ಬಲ
ದೇವಾನುದೇವತೆಗಳ ಬಲ
ನಿಮಗಿರಲಿ ಮಕ್ಕಳೇ,
ಛಲ ಮಾತ್ರ ಮನುಷ್ಯರದೇ ಇರಲಿ.

ಸಂಜೀವಶಿವ : ಉಪಕಾರವಾಯ್ತು ಪಿತೃಗಳೇ,
ನಮಗುಳಿದ ಇಂದಿನ ರಾತ್ರಿ
ಅಡವಿಯ ತುಂಬ ಅಲೆದಾಡಿ
ನಾವೂ ಕೊಡಲಿದ್ದೇವೆ ಕೊನೆಯ ಕಾಳಗವ.
ಎಲ್ಲರಿಗೂ ವಿದಾಯ ಹೇಳಿ
ಬರುತ್ತೇವೆ ನಿಮ್ಮ ಸನ್ನಿಧಿಗೆ.
ನಿಮ್ಮ ಕುಲಗೋತ್ರಗಳ
ಸತ್ಕೀರ್ತಿಗನುಗುಣವಾಗಿ ಹೋರಾಟ ಕೊಡುತ್ತೇವೆ
ಸಂಶಯ ಬೇಡ.
ನಾವು ಬರ್ತೀವಿನ್ನ ಶರಣು ಶರಣು.

(ಸಂಜೀವಶಿವ ಮತ್ತು ರಾಜಕುಮಾರಿ ನಮಿಸುವರು. ಭೂತಗಳು ಕೈ ಎತ್ತಿ ಆಶೀರ್ವದಿಸಿ ಮಾಯವಾಗುವವು. ಮೆಲ್ಲಗೆ ಮುಂದೆ ಹೊರಡುವರು. ಅಷ್ಟರಲ್ಲಿ ದೇವಾಲಯದ ಗಂಟೆ ದನಿ ಕೇಳಿಸಿ ಆಮೇಲೆ ಹಾಡು ಕೇಳಿಸುವುದು.)

ಸೋಎನ್ನಿ ಶುಭವೆನ್ನಿ
ಮಂಗಳ ಶುಭವೆನ್ನಿ
ಅವ್ವಾ ಬಂಗಾರಿ! ರಾಜಕುಮಾರಿ
ಸಿಂಗಾರ ಸಿರಿಗೆ ಶುಭವೆನ್ನಿ!!

ಸಂಜೀವಶಿವ : ದಯವಿಟ್ಟು ಬಾಯಿ ಮುಚ್ಚಿಕೊ.

ರಾಜಕುಮಾರಿ : ಯಾರಿಗೆ ಹೇಳಿದೆ ನೀನು?

ಸಂಜೀವಶಿವ : ನಿನಗೇ.

ರಾಜಕುಮಾರಿ : ನಾನು ಹಾಡಿದ್ದಲ್ಲ ಅದು.

ಸಂಜೀವಶಿವ : ಹೌದೇ? (ನೆನಪಿಸಿಕೊಂಡು) ಹೌದು. ನೀನು ಹಾಡಿದ್ದನ್ನ
ನಾನು ಕೇಳೇ ಇಲ್ಲ. ಇದೀಗ ನೀನೇ ಹಾಡಿದಂತೆ ಕೇಳಿಸಿತಲ್ಲ!
ಇನ್ನಷ್ಟು ಈ ಕಡೆ ಬಾ. ನನ್ನ ತಾಯಿ ನಿನ್ನ ದನಿಯಲ್ಲೂ ಹಾಡಬಲ್ಲಳು!

ರಾಜಕುಮಾರಿ : ಅದು ನಿನ್ನ ತಾಯಿಯ ದನಿಯಲ್ಲ, ಅಲ್ಲವ?

ಸಂಜೀವಶಿವ : ಹಾಗಿದ್ದರದು ಭೂತಗಳ ಹಾಡಾಗಿರಬಹುದು.

ರಾಜಕುಮಾರಿ : ಇಂಥ ಛಳಿಯಲ್ಲೂ ನಿನ್ನ ತಾಯಿ ಬರುತ್ತಾಳಾ?

ಸಂಜೀವಶಿವ : ಅವಳಿಗೆ ಛಳಿ, ಶೆಕೆ ಇಲ್ಲ. ಅವಳನ್ನ ಮಳೆ ಗಾಳಿ ಬೆಂಕಿ ಮುಟ್ಟುವುದಿಲ್ಲ.
ಬೆಳಕು ಕೂಡ.

ರಾಜಕುಮಾರಿ : ಅಕಾ ಅವಳ ದನಿ ಕೇಳಿಸಿತಲ್ಲವ?

ಸಂಜೀವಶಿವ : ಹೌದು ಅವಳದೆ.

ರಾಜಕುಮಾರಿ : ಆಗ ಬಹಳ ದೂರದಿಂದ ಕಿರಿಚಿದ ಹಾಗೆ ಕೇಳಿಸ್ತು. ಈಗ
ಪಕ್ಕದಲ್ಲೇ ಪಿಸುನುಡಿದ ಹಾಗೆ ಕೇಳಿಸುತ್ತದಲ್ಲ?
(ಬಾಯಿ ಮುಚ್ಚಿಕೊಳ್ಳಲು ಸನ್ನೆ ಮಾಡುವನು)
ಇಕಾ ಈಗ ಬಹುದೂರದಿಂದ ನಗುತ್ತಿದ್ದಾಳೆ.
ಹೋದಳೆಂದು ಕಾಣುತ್ತದೆ.

ಸಂಜೀವಶಿವ : ಇಲ್ಲೆಲ್ಲೊ ತುಂಬ ಜನ ನಗಾಡುತ್ತಿದ್ದಾರೆ.
ನಾವು ಯಾವುದೋ ಹಳ್ಳಿಗೆ ಬಂದಿದ್ದೇವೆಂದು ಅನ್ನಿಸೋದಿಲ್ಲವೆ?
ಆಗ ಕೇಳಿದ್ದು ಸೋಬಾನೆ ಪದ ಅಲ್ಲವೆ?
ಈಗಲೂ ಕೇಳಿಸಿತ?
ಇಲ್ಲೆಲ್ಲೊ ಮದುವೆ ನಡೆಯುತ್ತಿರುವ ಹಾಗಿದೆ.

ರಾಜಕುಮಾರಿ : ಅಗೋ ಅಲ್ಲಿ ನೇರಕ್ಕೆ ತೋರುವುದಲ್ಲ. ಒಂದು ಮನೆ.
ಅಲ್ಲೇ ನಡೆದಿರಬೇಕು. ನಾವೂ ಅವರ ಮಧ್ಯೆ ಸೇರಿಕೊಂಡು ಬಿಡೋಣ.
(ನಡೆಯುವಳು. ಬಾಗಿಲು ಕಾಣಿಸುತ್ತದೆ.)

ಸಂಜೀವಶಿವ : ಸರಿಯಾಗಿ ಕೇಳಿಸಿಕೊ : ಇಲ್ಲಿ ನಿನ್ನ ಹೆಸರು ಆಕಾಶಮಲ್ಲಿಗೆ.
ನನ್ನ ಹೆಸರು ಸಂಪಿಗೆರಾಮ, ತಿಳಿಯಿತೆ?
ತಪ್ಪಿಕೂಡ ನಮ್ಮ ಮುನ್ನಿನ ಹೆಸರು ಹೇಳಕೂಡದು.

ರಾಜಕುಮಾರಿ : ಆಯ್ತು.

ಸಂಜೀವಶಿವ : ಒಳಗೆ ಯಾರಿದ್ದರೆ ಅವರು ಬಾಗಿಲು ತೆರೆಯಿರಯ್ಯ.-

(ನಿಧಾನವಾಗಿ ಬಾಗಿಲು ತೆರೆಯುತ್ತದೆ. ಝಗ್ಗನೆ ಮನೆಯೊಳಗಿನ ಬೆಳಕು ಎಲ್ಲ ಕಡೆ ನುಗ್ಗುತ್ತದೆ. ಅದೊಂದು ವೈವಿಧ್ಯಮಯವಾಗಿ ಬೆಳಗುವ ಸಾವಿರಾರು ಜ್ಯೋತಿಗಳಿಂದ ಭಯಾನಕವಾಗಿ ಕಾಣುವ ಲೋಕ. ಪಣತಿಗಳ ಆಕಾರ ಒಂದೇ ಆದರೂ ಜ್ಯೋತಿಗಳ ಗಾತ್ರ ಮಾತ್ರ ಒಂದರಂತೆ ಇನ್ನೊಂದಿಲ್ಲ. ಎತ್ತರದಲ್ಲೊಂದು ಸಿಂಹಾಸನ. ಅದರ ಮುಂದೆ ಕೆಳಭಾಗದಲ್ಲಿ ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುವ ಎರಡು ಪಣತಿಗಳಿವೆ. ಅವುಗಳಲ್ಲಿ ಒಂದು ಪ್ರಕಾಶಮಾನವಾಗಿ ಇನ್ನೊಂದು ಮಂದವಾಗಿ ಉರಿಯುತ್ತಿವೆ. ಈಗ ಸಂಜೀವಶಿವ ಸುತ್ತಲೂ ನೋಡಿ ಆಘಾತ ಹೊಂದುತ್ತಾನೆ : ಮಧ್ಯೆ ರಾಜಕುಮಾರಿ ಮಾಯವಾಗಿದ್ದಾಳೆ. ಅವಳು ತನ್ನೊಂದಿಗಿಲ್ಲದ್ದರಿಂದ ಮತ್ತು ಗಿರಿಮಲ್ಲಿಗೆ ಬಾಗಿಲು ತೆರೆದವಳಾದ್ದರಿಂದ ಹೌಹಾರಿ ಅಸಹಾಯಕನಾಗಿ ಕಿರಿಚಿ ಮಾತಾಡುತ್ತಾನೆ.)

ಸಂಜೀವಶಿವ : ಮೋಸ ! ಮೋಸ!

ಗಿರಿಮಲ್ಲಿಗೆ : ಮಗನೇ ಸಂಜೀವಶಿವನೇ, ಹೆಸರು ಬದಲು ಮಾಡಿಕೊಂಡು ತಾಯಿಗೆ
ಮೋಸಮಾಡಿ ಓಡಿಹೋಗಬಹುದ ಹೀಗೆ?

ಸಂಜೀವಶಿವ : ನಾವು ಕಾಡಿನಲ್ಲಿ ಓಡಿದ್ದೆಲ್ಲ ಇಲ್ಲಿಗೆ ಬರುವುದಕ್ಕೆಂದೆ?

ಗಿರಿಮಲ್ಲಿಗೆ : ಹೌದು. ನಿಜ ಹೇಳಬೇಕೆಂದರೆ ಮಾಯೀಬೆಟ್ಟ ಬಿಟ್ಟು ನೀವು
ದೂರಕ್ಕೆ ಹೋಗೇ ಇಲ್ಲ ಮಗ. ಅಷ್ಟು ಹೊತ್ತೂ ನೀವು ಬೆಟ್ಟಕ್ಕೆ
ಪ್ರದಕ್ಷಿಣೆ ಹಾಕುತ್ತಿದ್ದಿರಷ್ಟೆ.

ಸಂಜೀವಶಿವ : (ಕಿರಚಿ) ಇದು ಭಾರೀ ಅನ್ಯಾಯ!

ಗಿರಿಮಲ್ಲಿಗೆ : ನೀನೆಷ್ಟು ಕಿರಿಚಿಕೊಂಡರೂ ಯಾವ ಮೂಲೆಯಿಂದಲೂ ನಿನಗೆ
ಸಹಾನುಭೂತಿ ಸಿಕ್ಕಲಾರದು. ಯಾಕೆಂದರೆ
ಇದು ಮಾನವಲೋಕವಲ್ಲ.
ಹೀಗೆ ಹುಚ್ಚುಗಳ ಎರಚಾಡುತ್ತಿದ್ದರೆ ಒಂದೆರಡು ಸಲ ಕೇಳಿ ಹೊರಕ್ಕೆ
ತಳ್ಳಬಹುದು ಅಥವಾ ನಿನ್ನ ಶಬ್ದವನ್ನು ನಿಶ್ಯಬದ್ದಗೊಳಿಸಬಹುದು.
ಅದಕ್ಕಿಂತ ಹೆಚ್ಚಿನ ಪ್ರತಿಫಲ ನಿನಗೆ ಖಂಡಿತ ಸಿಕ್ಕಲಾರದು.
ನಿನ್ನ ಹೇಳಿಕೆ ಕೇಳಿಕೊಂಡು ನ್ಯಾಯನಿರ್ಣಯ ಮಾಡಲು ಇಲ್ಲಿ ತಾಯಿ
ಇಲ್ಲ. ನಾನು ಕೆಲವು ಪ್ರಶ್ನೆಗಳಿಗೆ ಉತ್ತರಿಸಬಹುದು. ಆದರೆ ಅವೆಲ್ಲ
ಕಲಿತ ಉತ್ತರಗಳು. ಅವನ್ನು ಮೀರಿ ನಾನು ಹೇಳಬಹುದಾದ
ಒಂದು ಮಾತೆಂದರೆ –
ಲೌಕಿಕ ನಾಮ ರೂಪ ಕ್ರಿಯೆಗಳ ಸಮೇತ ಈ ಲೋಕವನ್ನ
ಪ್ರವೇಶಿಸಿದ ಇಬ್ಬರೇ ಮಾನವರು ಎಂದರೆ; ನೀನು ಮತ್ತು ರಾಜಕುಮಾರಿ.
ರಾಜಕುಮಾರಿಗೆ ಈ ಸೌಭಾಗ್ಯ ಸಿಕ್ಕಿದ್ದು ನಿನ್ನಿಂದ.
ನಿನಗೆ ದೊರೆತದ್ದು ನೀನು ತಾಯಿಗೆ ಮಗನಾದ್ದರಿಂದ.
ನೀವೇ ಆದಿಮರು, ಅಂತಿಮರು ಕೂಡ.
ತಾಯಿಯ ಕೋಪ ಅಥವಾ ಅನುಗ್ರಹವೇ ನಿನ್ನ ದೈವ
ಎಂಬುವುದು ನೆನಪಿನಲ್ಲಿರಲಿ.
ಸಿಕ್ಕ ಈ ಅವಕಾಶವನ್ನ ಸರಿಯಾಗಿ ಉಪಯೋಗಿಸಿ ಒಳ್ಳೆಯ ವಾಕ್ಯವ
ಅನುಗ್ರಹಿಸೆಂದು ಕೇಳಿಕೊ. ಇಲ್ಲದಿದ್ದಲ್ಲಿ
ಪಶ್ಚಾತ್ತಾಪ ಪಡಬೇಕಾದವನೂ ನೀನೇ. ಏನಾದರೂ ನನ್ನಲ್ಲಿ ಕೇಳುವುದಿದ್ದರೆ
ತಾಯಿ ಓಲಗಗೊಡುವ ಮೊದಲೇ ಕೇಳು. ತಾಯಿ ಪ್ರತ್ಯಕ್ಷಳಾದ
ಮೇಲೆ ಮಾತ್ರ ನೀನಾಗಿ ಮಾತಾಡಕೂಡದು.

ಸಂಜೀವಶಿವ : (ಒದರುತ್ತ) ರಾಜಕುಮಾರಿಯನ್ನು ಬಲಿಕೊಡಲು ನೀವು ನನ್ನಿಂದ ಕದ್ದು
ಕೊಂಡು ಹೋದದ್ದು ತಪ್ಪಲ್ಲವೆ?

ಗಿರಿಮಲ್ಲಿಗೆ : ಸರಿಯಾಗಿ ಮಾತಾಡುವುದನ್ನ ಕಲಿತುಕೊ.
ಅದು ಬಲಿಯಲ್ಲ, ಸಹಜ ಸಾವು.
ನಿಯತಿಯಂತೆ ನಿರ್ಣಯಿಸಲ್ಪಟ್ಟ ದಿನ ವಾರ ಗಳಿಗೆಯಲ್ಲಿ,
ನಿಯತಿಯಂತೇ ತನ್ನ
ಸಹಜಸಾವನ್ನ ಸಾಯಲು ತಯಾರಾಗುತ್ತಿದ್ದಾಳೆ.

ಸಂಜೀವಶಿವ : ನಾನು ವೈದ್ಯ ಮಾಡಿದ ಮೇಲೆ ತೋಗಿ ಬದುಕಲೇಬೇಕೆಂದು
ತಾಯಿ ನನಗಿತ್ತ ವರ ಹುಸಿಯಾಗಲಿಲ್ಲವೆ?

ಗಿರಿಮಲ್ಲಿಗೆ : ರೋಗಿಯ ಎಡ ಇಲ್ಲವೆ ಬಲದಲ್ಲಿ ತಾಯಿ ಪ್ರತ್ಯಕ್ಷಳಾಗುವ
ಮೊದಲೇ ನೀನು ವೈದ್ಯ ಮಾಡಿದ್ದು ತಪ್ಪಲ್ಲವೆ?
ವರ ಕೊಟ್ಟವರಿಗೆ
ಪಡೆದವರಿಗಿಂತ ಹೆಚ್ಚಿನ ಜವಾಬ್ದಾರಿ ಇರುತ್ತದೆ. “ಮಗಳೇ
ನಿನ್ನ ವೈದ್ಯ ಕತ್ತಿನಲ್ಲಿ ಕಟ್ಟಿದ್ದ ಮದ್ದಿನ ಬಳ್ಳಿಯನ್ನು
ಕಿತ್ತುಹಾಕದಿದ್ದಲ್ಲಿ ಸಂಜೀವಶಿವನೂ ನಿನ್ನೊಂದಿಗೆ ಸಾಯುತ್ತಾನೆ”
ಎಂದೆವು. “ನನ್ನ ವೈದ್ಯ ಬಾಳಲೆಂದು” ಅದನ್ನು ಖುದ್ದಾಗಿ
ಅವಳೇ ಹರಿದು ಹಾಕಿದಳು. ಆಮೇಲೆಯೇ ನಾವು ಶೃಂಗಾರಕ್ಕೆ
ತೊಡಗಿದೆವು. ಬಲ್ಲೆಯಾ?

ಸಂಜೀವಶಿವ : (ಹತಾಶನಾಗಿ) ನನ್ನ ಭ್ರಾಂತು ನಿಭ್ರಾಂತವಾದವು ಗಿರಿಮಲ್ಲಿಗೆ!
ಕ್ರೂರವಾದ ದೈವವೊಂದು ನಮ್ಮಿಬ್ಬರನ್ನು
ಈ ರೀತಿ ಒಂದು ಕಡೆಗೆ ತಳ್ಳಿಬಿಟ್ಟಿತು.
ಬದುಕಿದರೆ ಇಬ್ಬರಿಗೂ ಒಂದೇ ಗುಡಿಸಲು, ಸತ್ತರೆ
ಒಂದೇ ಚಿತೆ ಎಂದು ಹೇಳಿದ್ದೆ. ಆದರೆ ನನ್ನನ್ನು
ನಂಬಿದ್ದ ರಾಜಕುಮಾರಿ ಈಗ ಒಬ್ಬಳೇ ಸಾಯುತ್ತಿದ್ದಾಳೆ.
ನನ್ನ ವೈದ್ಯವೆಲ್ಲ ಸಾವಿನ ಸ್ಪರ್ಶದಿಂದ ಅರ್ಥಹೀನವಾಗಿದೆ.
ವಿಷ ಈ ಶಿವನ ಕಂಠದಲ್ಲಿಲ್ಲ, ನನ್ನ ಬದುಕಿನ ಸುತ್ತ
ಹಬ್ಬಿದೆ. ನನ್ನನ್ನೂ ಆಹುತಿ ತಗೊಂಡು
ಈ ವಿಷಯದಿಂದ ಮುಕ್ತಿಗೊಳಿಸುವ ತಾಯೀ.

ಗಿರಿಮಲ್ಲಿಗೆ : ಗೆಲ್ಲಲಾರದ ಆಟ ಆಡುತ್ತಿರುವಿ ಮಗನೆ.
ಇಂಥ ಮಾತಾಡಿ ಆಮೇಲೆ ಪಶ್ಚಾತ್ತಾಪ ಪಡಬೇಕಾದೀತು.

ಸಂಜೀವಶಿವ : ಈಗಲೂ ಪಶ್ಚಾತ್ತಾಪ ಪಡುತ್ತಿದ್ದೇನೆ
ನಿರ್ದಯಿ ತಾಯಿಯನ್ನ ಪಡೆದುದಕ್ಕೆ.

ಗಿರಿಮಲ್ಲಿಗೆ : ಮೂರ್ಖಾ,
ರಾಜಕುಮಾರಿಯನ್ನು ನೀನು ನೋಡುವ ಮೊದಲೇ,
ಅವಳು ಹುಟ್ಟುವಾಗಲೇ ಅವಳ ಆಯುಷ್ಯ
ನಿರ್ಧಾರವಾಗಿದ್ದುದ ಬಲ್ಲೆಯಾ?
ನಿಯತಿಯ ಬದಲಿಸಲುಂಟೆ?
ಅಂತಿಮ ಸತ್ಯ ನೋಡಬೇಕೆಂದೆಯಲ್ಲವೆ?
ನಿನ್ನ ಎದುರಿನಲ್ಲೇ ಪ್ರತ್ಯಕ್ಷವಾಗಿದೆ ನೋಡು!
ಝಗಮಗಿಸುವ ಅನಂತಜ್ಯೋತಿಗಳು ಜೀವರಾಶಿ ಸೂಚಿಗಳು!
ಹೊತ್ತುತ್ತಿರುವ ಜ್ಯೋತಿಗಳು! ಚಿಗುರುವ ಜ್ಯೋತಿಗಳು!
ಬೆಳೆಯುವ ಜ್ಯೋತಿಗಳು ! ಬೆಳಗುವ ಜ್ಯೋತಿಗಳು!
ನಂದುತ್ತಿರುವ ಜ್ಯೋತಿಗಳು ! ಒಂದೊಂದು ಜೀವಕ್ಕೆ ಒಂದೊಂದು ಜ್ಯೋತಿ!
ಒಂದೊಂದರ ತೈಲದ ಪ್ರಮಾಣ ಇನ್ನೊಂದರಿಂದ ಭಿನ್ನ.
ಪಣತಿಯಲ್ಲಿ ಎಷ್ಟೆಷ್ಟಿದ್ದರೆ ತೈಲ
ಅಷ್ಟಷ್ಟು ಆಯುಷ್ಯ ಆಯಾ ಜೀವಕ್ಕೆ!
ಇಲ್ಲಿ ನೋಡಿದೆಯಾ?
(ಸಿಂಹಾಸನದೆದುರಿನ ಎರಡು ಜ್ಯೋತಿಗಳನ್ನು ತೋರಿಸುತ್ತ)
ಪ್ರಕಾಶಮಾನವಾಗಿ ಬೆಳಗುತ್ತಿರೋದು,
ಎಲ್ಲ ಜ್ಯೋತಿಗಳಿಗಿಂತ ದೊಡ್ಡದಾಗಿರೋದು ಮತ್ತು
ತೈಲ ತುಂಬಿರೋದು ನಿನ್ನ ಆಯುಷ್ಯಜ್ಯೋತಿ,
ತಾಯಿ ನಿನಗೆ ಎಲ್ಲರಿಗಿಂತ ಹೆಚ್ಚು ಆಯುಷ್ಯ ಕೊಟ್ಟಿದ್ದಾಳೆ, ಮಗನಾದುದರಿಂದ.
ಇಕಾ ತೈಲ ತೀರಿ ಇನ್ನೇನು ನಂದಲಿರುವ
ಪಕ್ಕದ ಬಡಕಲು ಜ್ಯೋತಿಯಿದೆಯಲ್ಲ,
ಅದು ನಿನ್ನ ರಾಜಕುಮಾರಿಯದು,
ಇಕೊ ರಾಜಕುಮಾರಿ ಬಂದಳು.

(ಮದುವೆಗೆ ಶೃಂಗರಿಸಿದ ರಾಜಕುಮಾರಿಯನ್ನ ಸೇಡು ಮಾರಿಯವರು ಸೋಬಾನೆ ಹಾಡುತ್ತ ಕರೆತಂದು ಸಣ್ಣದಾಗಿ ಉರಿದ ದೀಪವೆದುರು ನಿಲ್ಲಿಸುವರು. ರಾಜಕುಮಾರಿ ಇನ್ನೇನು ಜೀವ ಮುಗಿದ ಅವಸ್ಥೆಯಲ್ಲಿದ್ದಾಳೆ. ಸಂಜೀವಶಿವನನ್ನು ಅವಳ ಪಕ್ಕದಲ್ಲಿ ದೊಡ್ಡ ಜ್ಯೋತಿಯ ಹತ್ತಿರ ನಿಲ್ಲಿಸುವರು.)

ತಾಳಿ ಕಟ್ಟುವ ಮುನ್ನ
ಮದುವೆಗೆ ತಾಯಿಯನ್ನ ಆಮಂತ್ರಿಸು,
ತಾಯಿ ಪ್ರೀತಳಾದ ಮೇಲೆ ಅಮರತ್ವ ಕೇಳಿಕೊ,
ಅದು ಜಾಣತನ.

ಸಂಜೀವಶಿವ : ನಿನ್ನಂತೆ ಪ್ರೀತಿಸಿ ಪೀಡಿಸಿದವರಿಲ್ಲ
ಮುದ್ದಿಸಿ ಮರೆತವರಿಲ್ಲ ತಾಯೆ.
ಸನ್ಮಾನ ಮಾಡಿ ಅವಮಾನಿಸಿದವರಿಲ್ಲ
ಕಾಪಾಡಿ ಕೈಬಿಟ್ಟು ತಳ್ಳದವರಿಲ್ಲ.
ಅಂಬೇ, ಜಗದಂಬೇ
ಸಕಲ ಚರಾಚರವ ಹೆದರಿಸಿಕೊಂಬೆ.
ನಿನ್ನ ಮಗ ನಮೋ ಎಂಬೇ ನನಗೆ ಸಾಕಾರಿಯಾಗೆಂಬೆ.
(ನಿಧಾರನವಾಗಿ ಸಿಂಹಾಸನದ ಮೇಲೆ ಭಯಂಕರ ಆಕಾರದ ಗಿಡುಗ ಪಕ್ಷಿ ಪ್ರತ್ಯಕ್ಷವಾಗುತ್ತದೆ. ಅದರ ಕಣ್ಣು ಇನ್ನೂ ಭಯಾನಕವಾಗಿದೆ.)

ಪಕ್ಷಿ : ಎಲ್ಲರ ಮೆಚ್ಚುಗೆಗೆ, ಹೊಗಳಿಕೆಗೆ,
ರಾಜಕುಮಾರಿಯ ಪ್ರೀತಿಗೆ,
ನನ್ನ ಅನುಗ್ರಹಕ್ಕೆ ಪಾತ್ರನಾದವನೇ, ಮಗನೇ ಸಂಜೀವಶಿವನೇ,
ನಿನಗೆ ಮಂಗಳವಾಗಲಿ.
ನಿನ್ನ ಭಕ್ತಿಯಿಂದ ಸಂಪ್ರೀತಳಾಗಿ ನಿನಗೆ
ಸತ್ಯದ ಅಂತಿಮದರ್ಶನದ ಅನುಗ್ರಹ ಮಾಡಿದ್ದೇನೆ.
ಸಾಮರ್ಥ್ಯವಿದ್ದಷ್ಟು ಗ್ರಹಿಸು.
ತಾಯಿ ನಾನು!
ಎಲ್ಲ ನುಂಗುವ ತಾಯಿ!
ಎಲ್ಲ ಉಗುಳುವ ತಾಯಿ!
ಎಲ್ಲ ಒಳಗೊಂಬಾಕೆ,
ಎಲ್ಲ ಹೊರಚೆಲ್ಲಿ ಬೆಳಗುವ ತಾಯಿ ನಾನು.
ಎಲ್ಲ ಎಲ್ಲದರ ಜೀವಜಾಲ, ಚರಾಚರದ
ಆದಿಅಂತ್ಯಗಳಿರದ ಅಖಂಡ ಬ್ರಹ್ಮಾಂಡದ ತಾಯಿ ನಾನು!
ಆಕಾರಗಳ ಸೃಷ್ಟಿಸುವವಳು.
ಆಕಾರಗಳ ಕರಗಿಸಿ ಎಲ್ಲ ಎಲ್ಲವನಿಲ್ಲದಾಗಿಸಿ
ಸೀಮೆದಪ್ಪಿಸುವ ನಿಸ್ಸೀಮ ಕಗ್ಗತ್ತಲೆ ನಾನು.
ಎಲ್ಲ ಬೆಳಕಿನ ಎಲ್ಲ ಚಲನೆಗಳ ಅಂತಿಮಗುರಿ!
ಎಲ್ಲ ಎಲ್ಲವ ಮುಕ್ಕಿ
ಬಗೆಬಗೆಯ ಕುಡಿಕೆಗಳಲ್ಲಿ ಕುದಿವ
ಪ್ರಾಣಂಗಳ ಹೀರಿ ತುಳುಕದವಳು
ಏಳೇಳು ಶರಧಿಗಳ ಕುಡಿಯುವವಳು
ಕುಡಿದು ಉಗುಳುವವಳು.
ಹದಿನಾಲ್ಕು ಲೋಕಗಳ ಆಳುವವಳು
ಅಳಿಸಿ ಬಾಳುವವಳು
ಎಷ್ಟೆಷ್ಟು ಭೇದಿಸಿದರಷ್ಟೂ ಅಭೇದ್ಯಳೋ
ಒಡೆಯಲಾರದ ಒಗಟು ನಾನು!
ನನ್ನ ಹುಡುಕಬಂದ ಸಾಧಕರೆದುರು
ಬಣ್ಣಗಳ ಚೆಲ್ಲಿ ಮೈಮರೆಸಿ ಅಡಗುವದು
ನನ್ನ ಚಾಳಿ.
ಬಹಳವಾದರೆ ಅವರ ಕಣ್ಣಿಗೆ
ಚಿಕ್ಕೆ ತಾರೆಗಳ ಚಿತ್ತಾರವುಳ್ಳ
ನನ್ನ ಬುರುಕಿ ಕಂಡೀತಷ್ಟೆ.
ಅಷ್ಟಕ್ಕೇ ಅವರು ಕಕ್ಕಾಬಿಕ್ಕಿ!
ಸತ್ಯವಾದ ಸತ್ಯ ಅಂತಿಮಸತ್ಯ ಎಂಬುವುದು
ಯಾವುದಾದರೂ ಇದ್ದರೆ, ಸಂಜೀವಶಿವನೇ
ಅದು ನಾನೇ ಮಗನೇ ! ಇನ್ನೊಂದಿಲ್ಲ!
ನನ್ನನ್ನ ಎಷ್ಟಾದರೂ ಹೆಸರಿನಿಂದ ಕರೆಯಬಹುದು.
ಶಿವಲಿಂಗನ ಹೆಸರಿನಲ್ಲಿ ಕೂಡ!
ಬೆಳಕಿಗೆ ಸೀಮೆಗಳಿವೆ, ಕತ್ತಲೆಗಿಲ್ಲ ಮಗನೇ!

ಸಂಜೀವಶಿವ : ಇದಕ್ಕಿಂತ ಹೆಚ್ಚಿನದೇನನ್ನೂ ನೀನು ಹೇಳಲಾರೆ ತಾಯಿ.
ಸಾವಿನ ದೇವತೆಯಾಗಿ ನಿನಗಿದು ಸಹಜ.
ತರ್ಕವೆಂದರೆ ತರ್ಕಕ್ಕೆ, ಬೇಕಾದರೆ ಪ್ರತ್ಯಕ್ಷ ಪ್ರಮಾಣಿಸಿ
ನಿನ್ನ ಸತ್ಯವನ್ನ ತೋರಿಸಬಲ್ಲೆ.
ಆದರೆ ಶಿವಲಿಂಗದ ಸತ್ಯ ಎಲ್ಲ ಪ್ರಮಾಣಗಳ
ಆಚೆಗಿನದಲ್ಲವೆ?

ಪಕ್ಷಿ : ಪ್ರಮಾಣಗಳಿಂದ ನನ್ನನ್ನೂ ಹಿಡಿಯಲಾಗಿಲ್ಲ ಕಂದಾ!

ಸಂಜೀವಶಿವ : ತನ್ನ ನಿಯತಿಗಳಿಂದ ತಂತಾನೆ ಕೈಕಾಲು ಕಟ್ಟಿಕೊಂಡವಳು
ಅಂತಿಮಸತ್ಯ ಹ್ಯಾಗಾದಳು ತಾಯಿ?

ಪಕ್ಷಿ : ನನ್ನ ನಿಯತಿಯ ಮೀರಿ ನಿನಗೆ
ಅಮರತ್ವ ನೀಡಬಲ್ಲೆ!
ಅದನ್ನು ಬಳಸಿಕೊಂಬ ವಿವೇಕ ನಿನ್ನಲ್ಲಿ ಇದೆಯೆಂದಾದರೆ

ಸಂಜೀವಶಿವ : ಸಾವಿನ ಭಯಕ್ಕಿಂತ ಅದಿಲ್ಲದ ಬದುಕಿನ ಬಗ್ಗೆ
ನನಗೆ ಹೆಚ್ಚು ಭಯವಿದೆ!
ಅಮರನಾಗಿ ನಿನ್ನಿಂದ ದೂರವಾಗುವುದಕ್ಕಿಂತ
ನಿನ್ನ ಮಗನಾಗಿ ಮನುಷ್ಯನಾಗಿರೋದೇ ನನ್ನ ಸೌಭಾಗ್ಯ ತಾಯಿ.

ಪಕ್ಷಿ : (ಎದ್ದುನಿಂತು) ನಿನ್ನ ಮಾತಿನಿಂದ ಸಂಪ್ರೀತಳಾಗಿದ್ದೇನೆ ಕಂದಾ!
ಮದುವೆಯ ಕಾಣಿಕೆಯಾಗಿ ನಿನಗೆ ಇಮ್ಮಡಿ ಆಯುಷ್ಯ ಕೊಟ್ಟಿದ್ದೇನೆ.
ತಾಳಿಯ ಕಟ್ಟು.

(ರಾಜಕುಮಾರಿಗೆ ತಾಳಿ ಕಟ್ಟುವನು, ರಾಜಕುಮಾರಿ ಕುಸಿಯುವಳು.)

ಸಂಜೀವಶಿವ : ಇಮ್ಮಡಿ ಆಯುಷ್ಯ ಕೊಟ್ಟುದಕ್ಕೆ
ಅನಂತ ಕೃತಜ್ಞತೆಗಳು ತಾಯೀ.
ಆದರೆ ಒಂದು ಮಾತನ್ನು ಹೇಳು. ನನಗಿತ್ತ
ಆಯುಷ್ಯವನ್ನಾದರೂ ನನಗಿಷ್ಟವಾದಂತೆ ಬಳಸುವ
ಸ್ವಾತಂತ್ರ್ಯ ನನಗುಂಟೆ?

ಪಕ್ಷಿ : ಉಂಟು ಆತ್ಮಹತ್ಯೆಗಾಗಿ ಬಳಸುವುದಿಲ್ಲವೆಂದಾದರೆ.

ಸಂಜೀವಶಿವ : (ತನ್ನ ಆಯುಷ್ಯಜ್ಯೋತಿಯನ್ನೆತ್ತಿ, ಅದರಲ್ಲಿಯ ತೈಲವನ್ನು ಪಕ್ಕದ ರಾಜ ಕುಮಾರಿಯ ಪಣತಿಗೆ ಸುರಿಯುತ್ತ)

ಹಾಗಿದ್ದರಿಗೋ ನನ್ನ ಶೇಷಾಯುಷ್ಯದ ಅರ್ಧವನ್ನ
ರಾಜಕುಮಾರಿಗೆ ಧಾರೆಯೆರೆದಿದ್ದೇನೆ.
ಅವಳಿನ್ನು ಬದುಕಬೇಕು.

(ತಕ್ಷಣ ಪಕ್ಷಿ ಕೋಪ ಮತ್ತು ನೋವಿನಿಂದ ಭಯಾನಕವಾಗಿ ಕಿರಿಚಿಕೊಂಡು ಅಧೋಲೋಕವಿಡೀ ನಡುಗುತ್ತದೆ. ರಾಜಕುಮಾರಿಯ ಆಯುಷ್ಯಜ್ಯೋತಿ ಬರಬುರತ್ತ ತೇಜೋಮಯವಾಗಿ ಉರಿಯತೊಡಗುತ್ತದೆ. ರಾಜಕುಮಾರಿ ಮೆಲ್ಲಗೆ ಎದ್ದು ಗಾಬರಿಯಾಗಿ ಸುತ್ತ ನೋಡುತ್ತಿದ್ದಂತೆ ಅಸಹಾಯಕತೆಯಿಂದ ಪಕ್ಷಿ ಅಧಃಪತನಗೊಂಡಂತೆ ಸಿಂಹಾಸನದಲ್ಲಿ ಕುಸಿಯುತ್ತದೆ. ರಾಜಕುಮಾರಿ ಭಯದಲ್ಲಿ ಸಂಜೀವಶಿವನನ್ನು ತಬ್ಬಿಕೊಳ್ಳುವಳು. ಅಲ್ಲಿಯ ಭಯಾನಕವಾದ ಪ್ರಕಾಶ ಪ್ರಜ್ವಲವಾಗುತ್ತ ಇಡೀ ಮೃತ್ಯುಲೋಕವೇ ಸುಡುತ್ತಿರುವ ಅನುಭವವಾಗುತ್ತದೆ. ಅಸಹಾಯಕ ಪಕ್ಷಿಯ ಆರ್ತನಾದದಿಂದ ಸೂಚನೆ ಪಡೆದ ಗಿರಿಮಲ್ಲಿಗೆ ನಿರ್ಜೀವ ದನಿಯಲ್ಲಿ ಸಾರುತ್ತಾಳೆ.)

ಗಿರಿಮಲ್ಲಿಗೆ : ಇವರಿಬ್ಬರೂ ಈ ಕ್ಷಣವೆ ಈ ಲೋಕದಿಂದ ತೊಲಗಲಿ.
ತಮ್ಮ ಲೋಕದಲ್ಲಿ ಯಾರ ಎದುರಿಗೂ
ಇಲ್ಲಿ ನಡೆದುದನ್ನ ಹೇಳದಿರಲಿ. ಹೇಳಿದರೆ – ಮೊದಲ
ವಾಕ್ಯ ಮುಗಿವ ಮುನ್ನವೇ ನಾಲಗೆ ಹಿರಿದು
ಸಾಯುವರೆಂದು ತಿಳಿದರಲಿ.
ಇವನ ವೈದ್ಯವೃತ್ತಿಗಿದ್ದ ತಾಯಿಯ ವರ ಇಂದಿನಿಂದ
ಪರಿಣಾಮಹೀನವೆಂದು ಅರಿತಿರಲಿ.

ಮಂಗಳಂ