(ಅರಮನೆ, ರಾಜಕುಮಾರಿ, ಪುಷ್ಪಗಂಧಿ)

ರಾಜಕುಮಾರಿ : ಪುಷ್ಪಗಂಧಿ-

ಪುಷ್ಪಗಂಧಿ : ರಾಜಕುಮಾರಿ

ರಾಜಕುಮಾರಿ : ವೈದ್ಯ ಮಹಾಶಯ ಇನ್ನೂ ಬರಲಿಲ್ಲವಲ್ಲೆ?

ಪುಷ್ಪಗಂಧಿ : ಇನ್ನೇನು ಬಂದಾರು.
ನೀವು ಈ ದಿನ ಬಹಳ ಬೇಗ ಎದ್ದಿದ್ದೀರಿ. ಆಗಲೇ
ಉದ್ಯಾನದಲ್ಲಿ ಅಡ್ಡಾಡಿ ಬಂದಿದ್ದೀರಿ.

ರಾಜಕುಮಾರಿ : ಹಗಲುಗನಸುಗಳಿಂದ ಭಾರವಾಗಿದ್ದ ಕಣ್ಣಿಗೆ ನಿದ್ದೆಯೇ
ಬರಲಿಲ್ಲ ಮಹಾರಾಯಳೇ. ಅದಕ್ಕೇ ಬೆಳಗಾಗುವ ಹೊತ್ತಿಗೆ
ಉದ್ಯಾನಕ್ಕೆ ಹೋಗಿದ್ದೆ. ಸಸ್ಯಜಾತಿ ಸುಮ್ಮಾನ ಸಪನಿದ್ದೆಯಲ್ಲಿ
ಮಲಗಿ ಉದ್ಯಾನ ಪ್ರಶಾಂತವಾಗಿತ್ತು.
ನಾನು ಸಂಚರಿಸುತ್ತಿದ್ದದ್ದು ಯಾರ ಅರಿವಿಗೂ ಬಂದಿರಲಿಲ್ಲ,
ನಾನು ಬಂದಿರೋದನ್ನ ತಿಳಿಸೋಣ ಅಂತ
ಮೆಲ್ಲಗೆ ಒಂದು ಹಾಡು ಗುನುಗಿದೆ. ಯಾರಿಗೂ ಕೇಳಿಸಲಿಲ್ಲ.
ಆಮೇಲೆ ಮೂಡುಮಲೆಯಿಂದ ಹೊಸ ಸೂರ್ಯೋದಯದ
ಕಲ್ಯಾಣ ಬೆಳಕಾಯಿತು ನೋಡು:
ಹಸರಿನಲ್ಲಿ ಹಸೆಯಿಟ್ಟಂತೆ ಬಿಸಿಲು ಬಂದು,
ಹುಲ್ಲಿನ ದಳಗಳಲ್ಲಿ ವಜ್ರದ ಹರಳಿಬ್ಬನಿ ಹೊಳೆದು
ಉದ್ಯಾನದಲ್ಲಿ ಕೈಲಾಸ ಕಳಚಿ ಬಿದ್ಧಂಗಾಯ್ತೆ!
ಅವ್ವಯ್ಯ! ಹೂವಿಲ್ಲದೆ ಪರಿಮಳ ಬೀರುವುದಿದ್ಯಾವ ಮರವೇ!
ಅಂತ ತಿರುಗಿ ನೋಡಿದರೆ-
ಪಕ್ಕದಲ್ಲೇ ಇದೆ ಸುಖದ ಸನ್ನಿಧಿ! ಎಳೆಯ ಸಂಪಿಗೆಯ ಮರ!
ಹಸಿರು ಹೃದಯವ ಮ್ಯಾಲೆ ಒಂಟು ಹೂವರಳಿ
ಹೊಳೆವುತಾ ಇದೆ ತುಪ್ಪದ ದೀಪದ ಹಾಗೆ!
ಮೆಲ್ಲಗೆ ಮರವ ಕುಲುಕಿದರೆ
ಹೆಸರು ಗೊತ್ತಿಲ್ಲದ ಹಸಿರು ದೇವರೊಬ್ಬ
ಬಲಹೂ ಕೊಟ್ಟಂತೆ ತೊಟ್ಟು ಕಳಚಿ ಕೈಗೇ ಬಿತ್ತು ಹೂ!
ಹೂವಿನ ಸ್ಪರ್ಶವಾದದ್ದೇ-
ಒಣಗಿದ ಮಡುವಿಗೆ ಹೊಸನೀರು ನುಗ್ಗಿದಂತಾಗಿ
ಒಂದು ಸಲ ಮೈಮುರಿದಾಕಳಿಸಿ ಕೊಡವಿಕೊಂಡೆದ್ದೆ ನೋಡು;
ಹೊಸದಿನದ ಎಲ್ಲಾ ಶಕ್ತಿಗಳು ನನ್ನ ವಶಕ್ಕೆ ಬಂದವು.
ಆಗಲೇ ತೀರ್ಮಾನಿಸಿ ಬಿಟ್ಟೆ; ಬದುಕೋಣ ಅಂತ.

ಪುಷ್ಪಗಂಧಿ : ಎಷ್ಟು ದಿನಗಳಾಗಿತ್ತು ಹಿತಕರವಾದ ಇಂಥ ಮಾತು ಕೇಳಿ!
ಗಿಣಿಯ ಹಾಗೆ ನೀವು ಹೀಗೇ ನುಡಿದಾಡುತ್ತಿದ್ದರೆ
ಹಾಗೇ ಕೇಳಿಕೊಂಡಿರೋಣ ಅನ್ನಿಸುತ್ತದೆ.

ರಾಜಕುಮಾರಿ : ವೈದ್ಯ ಮಹಾಶಯನ ವಿಷಯ ನಿನಗಿನ್ನೂ ಹೇಳಲಿಲ್ಲವಲ್ಲೇ.

ಪುಷ್ಪಗಂಧಿ : ನಿನ್ನೆಯಿಂದ ಹತ್ತು ಸಲ ಕೇಳಿದ್ದಾಯ್ತು. ಇನ್ನೊಮ್ಮೆ ಕೇಳುತ್ತೇನೆ ಹೇಳಿ.

ರಾಜಕುಮಾರಿ : ಆತನ ಬಗ್ಗೆ ಹೇಳೋದಕ್ಕೆ ಚಂದ ಮಾತುಗಳೇ ಸಿಗುತ್ತಿಲ್ಲ ಕಣೆ.
ದುಂಡು ಮುಖದ ಗುಂಗುರು ಕೂದಲಿನ ಚೆನ್ನಿಗ.
ಹೆಣ್ಣುಗಳು ಮಾರುಹೋಗಲು ಬೇಕಾದ ಸಮಸ್ತ
ಲಕ್ಷಣಗಳ ಸರಕು ಅವನಲ್ಲಿ ಯಥೇಚ್ಛ.
ಯಾವುದೇ ಗಿಲೀಟಿಲ್ಲದೆ ನೇರವಾಗಿ ತನ್ನ ಅಭಿಪ್ರಾಯ
ನುಡಿಯಬಲ್ಲಾತ.
ನನಗೇ ಎರಡು ಬಾರಿ ಧಡ್ಡಿ ಅಂದನೆ!

ಪುಷ್ಪಗಂಧಿ : ಏನಂದಿರಿ ರಾಜಕುಮಾರಿ? ಧಡ್ಡಿ ಅಂದನೆ?

ರಾಜಕುಮಾರಿ : ನಾಡಿನೋಡುವ ನೆಪದಲ್ಲಿ ಕೈ ಹಿಡಿದ ಹಾಗೇ
ಕದ್ದು ನೋಡುತ್ತ ನಿಂತುಕೊಂಡ. ಆಗ ಯಾರೋ ಮರೆಯಿಂದ ಬಂದರು.

ಪುಷ್ಪಗಂಧಿ : ಯಾರೋ ಯಾರು? ಅವನೇ ಕಾಮ.
ಮರೆಯಲ್ಲಿ ನಿಂತುಕೊಂಡು ಇಬ್ಬರ ಮ್ಯಾಲೂ
ಹೂಬಾಣ ಬಿಡುತ್ತಿದ್ದ.

ರಾಜಕುಮಾರಿ : ಪ್ರೀತಿ ಅಂದರೆ ಏನಂತ ಹೇಳೇ ಸಖಿ.

ಪುಷ್ಪಗಂಧಿ : ಪ್ರೀತಿ ಅಂದರೆ: ಅದೊಂದು ಸಹಿಸಲಾಗದ ನೋವು ಕೊಡುವ ಗಾಳಿ
ಅಂತ ತಿಳಿದವರು ಹೇಳುತ್ತಾರೆ.

ರಾಜಕುಮಾರಿ : ಹೌದು  ಹೌದು! ಅವನು ನಾಡಿ ನೋಡುವಾಗ
ನಾನು ಸುಮ್ಮನೇ ನಿಂತಿದ್ದೆ, ಕಾಡಿನಿಂದ ಒಂದು ಸೂಸುಗಾಳಿ
ತಂತಾನೇ ಬೀಸಿ ಬಂದು,
ಮೈತುಂಬ ತೀಡಿ ಮಾಯವಾಯ್ತು. ಆಮೇಲ ನೋಡಿದರೆ
ನನ್ನ ಹೃದಯದಲ್ಲಿ ಗಾಯವಾಗಿತ್ತು! ಈಗ
ಅನ್ನಾಹಾರ ರುಚಿಸೋದಿಲ್ಲ, ನಿದ್ರೆ ನೀರು ಬೇಕಾಗಿಲ್ಲ.
ಯಾವುದರಲ್ಲೂ ಆಸಕ್ತಿ ಇಲ್ಲ
ಬರೀ ನಿಟ್ಟುಸಿರು ಬರ್ತಾವೆ.

ಪುಷ್ಪಗಂಧಿ : ಅಯ್ಯೋ ಪಾಪ!

ರಾಜಕುಮಾರಿ : ಅವನನ್ನ ಕಂಡಾಗಿನಿಂದ ದರೋಡೆಗೊಳಗಾಗಿದ್ದೇನೆಯೇ!
ನನ್ನೊಳಗೆ ಆತ್ಮ ಇಲ್ಲ. ಮನಸಿಲ್ಲ, ಹೃದಯ ಇಲ್ಲ.
ಎಲ್ಲಾ ಅವನೇ ದೋಚಿಕೊಂಡು ಹೋಗಿದ್ದಾನೆ.
ಉಳಿದಿರೋದು ಇದೊಂದು ಜೀವ, ಇದನ್ನೂ
ತೆಗೆದುಕೊಂಡು ಹೋಗು ಅಂತ ಹೇಳೇ.

ಪುಷ್ಪಗಂಧಿ : ಬಿಟ್ತು ಅನ್ನಿ. ಯಾಕಮ್ಮ ಹೀಗೆಲ್ಲ ಮಾತಾಡ್ತೀರಿ?

ರಾಜಕುಮಾರಿ : ರಾಜಕುಮಾರೀ ನೀನು ಪರಮ ಸುಂದರಿ ಅಂದ,
ನಿನ್ನಂಥ ಚೆಲುವೆಯನ್ನ ನಾನೀವರೆಗೆ ಕಂಡೇ ಇಲ್ಲ ಅಂದ!

ಪುಷ್ಪಗಂಧಿ : ಸರಿಯಾಗೇ ಹೇಳಿದ್ದಾನಲ್ಲಾ.

ರಾಜಕುಮಾರಿ : ರಾತ್ರಿಯೆಲ್ಲಾ ಕನಸಿನಲ್ಲಿ ಲೆಕ್ಕವಿಲ್ಲದಷ್ಟು ಸಲ
ಅವನ ತುಟಿ ನನ್ನ ಕಣ್ಣು, ತುಟಿ, ಕೆನ್ನೆಗಳ ಮೇಲೆ
ಹರಿದಾಡಿದುವು ಕಣೆ. ಏನೆನ್ನಿಸುವುದೇ ನಿನಗೆ
ಇದನ್ನೆಲ್ಲ ಕೇಳಿದರೆ?

ಪುಷ್ಪಗಂಧಿ : ಅನ್ನಿಸೋದೇನು, ನೀವು ವೈದ್ಯ ಮಹಾಶಯನನ್ನ
ಪ್ರೀತಿಸುತ್ತಿದ್ದೀರಿ ಅನ್ನೋದು ನಿಜ.
ಇದನ್ನ ಅವನೇ ಮೊದಲು ಹೇಳಿದ್ದರೆ ಚೆನ್ನಾಗಿತ್ತನ್ನೋದು
ಅದಕ್ಕಿಂತ ಹೆಚ್ಚು ನಿಜ.
ಆದರೆ ಅವನ ಮನಸ್ಸಿನಲ್ಲಿರೋದನ್ನ ತಿಳಿಯೋದು
ನಮ್ಮಿಂದಾಗೋದಿಲ್ಲ ಅನ್ನೋದು ಕೇವಲ ನಿಜ.
ಇಷ್ಟೆಲ್ಲಾ ನಿಜಗಳನ್ನ ಕೂಡಿಸಿ ಕಳೆಯಲಾಗಿ ನಾನೇ ಅವನ ಮುಂದೆ
ನಿಮ್ಮೆಚ್ಛೆಯ ಬಿಚ್ಚಿ ಹೇಳುವುದು ಉಚಿತವಾದ ನಿಜ.
ಸರಿಯೇ ರಾಜಕುಮಾರಿ?

ರಾಜಕುಮಾರಿ : ಅಷ್ಟೆ ಕಣಮ್ಮ ಆದರೆ ಅವನೂ ನನ್ನಲ್ಲಿ ಪ್ರೀತಿ ಇದೆ ಅಂದರೆ
ತೊಂದರೆ ಇಲ್ಲ. ಇಲ್ಲ ಅಂದರೆ?

ಪುಷ್ಪಗಂಧಿ : ಆವಾಗೇನು ಮಾಡಲಿ?

ರಾಜಕುಮಾರಿ : “ಅಯ್ಯಾ ವೈದ್ಯ ಮಹಾಶಯಾ, ನೀನು ಅವಳ ಪ್ರೀತಿಯನ್ನು
ತಿರಸ್ಕರಿಸಿದ್ದೇ ಆದರೆ, ರಾಜಕುಮಾರಿಗೆ ನಿರಾಸೆಯಾಗಿ,
ನಿರಾಸೆಯಿಂದ ಬುದ್ಧಿಭ್ರಮಣೆಯಾಗಿ,
ಬುದ್ಧಿಭ್ರಮಣೆಯಿಂದ ಊಟ ನಿದ್ದೆ ಬಿಟ್ಟು
ಸಾಯುತ್ತಾಳೆ”-ಅಂತ ಹೇಳಿಬಿಡು.

ಪುಷ್ಪಗಂಧಿ : ಅದ್ಯಾಕಮ್ಮಾ ಮಾತಿಗೊಮ್ಮೆ ಸಾಯ್ತೀನಿ ಅಂತೀರಿ?
ಅವನು ಒಪ್ಪುತ್ತಾನೆ, ಸುಮ್ಮನಿರಿ.

ಆಳು : (ಪ್ರವೇಶಿಸಿ) ಪುಷ್ಪಗಂಧಿ, ಮಹಾರಾಜರೊಂದಿಗೆ ವೈದ್ಯ ಸಂಜೀವಶಿವ
ಬರುತ್ತಿದ್ದಾನೆ.

ರಾಜಕುಮಾರಿ : (ಆನಂದದಿಂದ) ಪುಷ್ಪಗಂಧಿ ನಾನು ಮಲಗಿರುತ್ತೇನೆ.
ರಾಜಕುಮಾರಿ ಎಲ್ಲಿ ಅಂದರೆ ನೀನು ನನ್ನ ಕಡೆ ತೋರಿಸು.
ಅವನು ಬಂದು ನನ್ನ ಕೈ ಹಿಡಿದು ನಾಡೀ ನೋಡುತ್ತಾನೆ.
ಬೆವರು ಒರೆಸುತ್ತಾನೆ. ನಿನ್ನೇ ಅವನೇ ಬೆವರೊರಿಸಿದ್ದು! (ಮಗಳುವಳು)

ಪುಷ್ಪಗಂಧಿ : ರಾಜಕುಮಾರೀ, ನಿನ್ನೆಲ್ಲ ಯೌವನ, ಬುದ್ಧಿವಂತಿಕೆ, ಪ್ರೀತಿಯ
ಆಯುಧಗಳನ್ನ ಕಣ್ಣಲ್ಲಿಟ್ಟುಕೊಂಡು
ನೇರ ಅವನ ಹೃದಯಕ್ಕೆ ಗುರಿಹಿಡಿದು ಹೊಡಿ.
ಹೊಸಬಳಾದ್ದರಿಂದ ಗುರಿ ತಪ್ಪಬಹುದು, ಹಾಗಾದಲ್ಲಿ
ಮತ್ತೆ ಮತ್ತೆ ಹೊಡೆಯುವುದನ್ನ ಮರೆಯಬೇಡ.
(ರಾಜ ಮತ್ತು ಸಂಜೀವಶಿವ ಬರುವರು)

ಪುಷ್ಪಗಂಧಿ : (ಇಬ್ಬರಿಗೂ ವಂದಿಸಿ) ರಾಜಕುಮಾರಿ ಈಗ ತುಂಬ ಹುಷಾರಾಗಿದ್ದಾರೆ.
ಬೇಡವೆಂದರೂ ಬೆಳಿಗ್ಗೆ ಉದ್ಯಾನದಲ್ಲಿ ಅಡ್ಡಾಡಿ ಬಂದರು.
ಬಂದ ಮೇಲಂತೂ ತುಂಬ ಚುರುಕಾಗಿ ಮಾತಾಡಿದರು. ಈಗ
ವಿಶ್ರಾಂತಿ ತಗೋತಿದ್ದಾರೆ.
(ಸಂಜೀವಶಿವ ರಾಜಕುಮಾರಿ ಮಲಗಿದ್ದಲ್ಲಿಗೆ ಹೋಗಿ ನಾಡಿ ಹಿಡಿದು ನೋಡುವನು. ಹಣೆ ಮುಟ್ಟಿ ನೋಡಿ ಬೆವರೊರೆಸುವನು. ರಾಜಕುಮಾರಿಗೆ ಸಂತೋಷವಾದರೆ ಸಂಜೀವಶಿವ ಸಂಕಟಪಡುತ್ತಿದ್ದಾನೆ.)

ಸೇವಕ : (ಪ್ರವೇಶಿಸಿ) ಪ್ರಭು ಆ ಹಕ್ಕಿ ಬಂದಿದೆ. ತಾವು ಬರಬೇಕೆಂದು
ವಿದೂಷಕ ವಿನಂತಿಸಿಕೊಂಡಿದ್ದಾನೆ.

ರಾಜ : ಇಗೋ ಬಂದೆ. ವೈದ್ಯ ಮಹಾಶಯಾ,
ಬೇಗ ವಾಪಸಾಗುತ್ತೇನೆ. ನೀನು ರಾಜಕುಮಾರಿಯ ದೇಹಸ್ಥಿತಿ
ನೋಡುತ್ತಿರು. ಪುಷ್ಪಗಂಧೀ,

ಪುಷ್ಟಗಂಧಿ : ಪ್ರಭು,

ರಾಜ : ಸಹಕರಿಸು. (ಹೋಗುವನು)

ಸಂಜೀವಶಿವ : ಈಗ ಕತ್ತಿನಲ್ಲಿಯ ಈ ಬಳ್ಳಿಯ ಅಗತ್ಯವಿಲ್ಲ; ತೆಗೆಯೋಣ.
(ತಕ್ಷಣ ರಾಜಕುಮಾರಿ ಎದ್ದುಕೂತು ಪುಷ್ಪಗಂಧಿಯ ಕಡೆಗೆ ನೋಡುವಳು.)

ಪುಷ್ಪಗಂಧಿ : ಬೇಡ ಬೇಡ. ಅದು ಹಾಗೇ ಇರಲಿ. ರಾಜಕುಮಾರಿಗ್ಯಾಕೋ
ಆ ಬಳ್ಳಿಯ ಬಗ್ಗೆ ತುಂಬ ವಿಶ್ವಾಸ ಬಂದುಬಿಟ್ಟಿದೆ.

ಸಂಜೀವಶಿವ : (ಆಘಾತದಿಂದ) ಆದರೆ……

ಪುಷ್ಪಗಂಧಿ : ಅಪಾಯವೇನೂ ಇಲ್ಲವೆಂದಾದರೆ ತೃಪ್ತಿಯಾಗೋತನಕ
ಅದು ಅವರ ಕತ್ತಿನಲ್ಲಿಯೇ ಇರಲಿ ಬಿಡಿ.

ಸಂಜೀವಶಿವ : (ಸ್ವಗತ) ಅಪಾಯ ನನಗಿದೆ.

ರಾಜಕುಮಾರಿ : ವೈದ್ಯ ಮಹಾಶಯಾ, ನಿನ್ನೆ ನಿನ್ನ ತಾಯಿಯ ಬಗ್ಗೆ
ಪದೇ ಪದೇ ಹೇಳುತ್ತಿದ್ದ ಹೆಂಗಸು
ನಿನ್ನೊಂದಿಗೆ ಬಂದಿಲ್ಲ, ಅಲ್ಲವೆ?

ಸಂಜೀವಶಿವ : ಇಲ್ಲ ಇಲ್ಲ.

ರಾಜಕುಮಾರಿ : ಹಾಗಾದರೆ ಅನಂತ ಕರುಣಾಮಯಿ ನಿನ್ನ ತಾಯಿ.

ಸಂಜೀವಶಿವ : ಆದರೆ ಈ ಬಳ್ಳಿಯನ್ನು ಬಿಚ್ಚಿ ತೆಗೆಯಬೇಕಾಗದ್ದು ಅನಿವಾರ್ಯ.

ರಾಜಕುಮಾರಿ : ಖಂಡಿತ ನಾನಿದನ್ನ ಕತ್ತಿನಿಂದ ಹೊರಕ್ಕೆ ತೆಗೆಯುವುದಿಲ್ಲ.
ಪುಷ್ಪಗಂಧಿ ನೀನಾದರೂ ಹೇಳಬಾರದೆ?

ಪುಷ್ಪಗಂಧಿ : ವೈದ್ಯ ಮಹಾಶಯಾ, ದೊಡ್ಡ ಮನಸ್ಸು ಮಾಡಿ
ರಾಜಕುಮಾರಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳಿ.
ತಾಯಿ ಇಲ್ಲದ ಮಗಳೆಂಬ ಪ್ರೇಮಾತಿಶಯದಲ್ಲಿ
ಮಹಾರಾಜರು ರಾಜಕುಮಾರಿಯ ಯಾವ ಸಣ್ಣ ಆಸೆಯನ್ನೂ
ನಿರಾಕರಿಸಿಲ್ಲ.

ಮುದುಕಿ : (ಕಾಣಿಸಿಕೊಂಡು) ಮಗಾ ಸಂಜೀವಶಿವಾ
ನಿನ್ನ ತಾಯಿ ನಿನಗದೇನನ್ನೋ ಜ್ಞಾಪಿಸಲು ಹೇಳಿದಳಪ್ಪ,
ನೆನಪಿದೆ ತಾನೆ?

ರಾಜಕುಮಾರಿ : (ಗಾಬರಿಯಿಂದ ಓಡಿಬಂದು ಸಂಜೀವಶಿವನನ್ನು ತಬ್ಬಿಕೊಂಡು) ಅಗೋ
ನಿನ್ನೆಯ ಹೆಂಗಸು ಮತ್ತೆ ಕಾಣಿಸಿಕೊಂಡಳು!
ಬರೀ ಸುತ್ತಿಕೊಂಡ ಸೀರೆ ಮಾತ್ರ ಕಾಣಿಸುತ್ತಿದೆ.
ಒಳಗೆಲ್ಲ ಖಾಲಿಯಿದ್ದಾಳೆ!

ಪುಷ್ಪಗಂಧಿ : ಎಲ್ಲಿ, ಯಾರೂ ಕಾಣುವುದಿಲ್ಲವಲ್ಲ, ರಾಜಕುಮಾರೀ.

ಸಂಜೀವಶಿವ : ಅದಕ್ಕೇ ಹೇಳುತ್ತೇನೆ ರಾಜಕುಮಾರೀ,
ದಯಮಾಡಿ ಆ ಮದ್ದಿನ ಬಳ್ಳಿಯನ್ನು ಜಾಗ್ರತೆ ಕಿತ್ತುಕೊಡು.

ರಾಜಕುಮಾರಿ : ನಾನು ಸಾಯಬೇಕೆಂದಿದ್ದರೆ ಈ ಬಳ್ಳಿಯನ್ನು ಕಿತ್ತುಕೊ.

ಪುಷ್ಪಗಂಧಿ : ವೈದ್ಯ ಮಹಾಶಯಾ,
ನಿಮಗೆ ನಿವೇದಿಸಲೇಬೇಕಾದ ಸಂಗತಿಗಳಿವೆ. ದಯವಿಟ್ಟು ಕೇಳಿ:
ರಾಜಕುಮಾರಿ ಜೀವದಾಸೆ ಬಿಟ್ಟಿದಾಗ ನೀವು ಅವಳಿಗೆ
ಜೀವದಾನ ಮಾಡಿದ್ದೀರಿ. ರಾಜಕುಮಾರಿ ಕೃತಜ್ಞತೆಯಿಂದಲೋ
ಅಥವಾ ಇನ್ಯಾವುದರಿಂದಲೋ ತೀರ್ಮಾನ ತಗೊಂಡು ಬಿಟ್ಟಿದ್ದಾಳೆ-
ನಿಮ್ಮನ್ನು ಮದುವೆಯಾಗಬೇಕೆಂದು. ಅದನ್ನು ನನ್ನೆದುರು ಸಾರಿ ಸಾರಿ
ಹೇಳಿಯೂ ಬಿಟ್ಟಿದ್ದಾಳೆ.
ಅಲ್ಲದೆ ನೀವು ಕಟ್ಟಿದ ಮದ್ದಿನ ಬಳ್ಳಿಯನ್ನು
ಅದು ತಾಳಿಯೆಂದೇ ಬಗೆದು ಬೆಳಿಗ್ಗೆ ಅದನ್ನು ಮುಟ್ಟಿ ನೋಡಿ
ಕಣ್ಣಿಗೊತ್ತಿಕೊಂಡಳು.
ಸಂದರ್ಭ ಇಂತಿರುವಲ್ಲಿ ಅದನ್ನು ಕಿತ್ತು ತೆಗೆದರೆ,
ಅವಳ ಜೀವದ ಗತಿಯೇನು? ವಿಚಾರ ಮಾಡಿ.

ಸಂಜೀವಶಿವ : ಇದು ಮಹಾರಾಜರಿಗೂ ಗೊತ್ತೆ?

ಪುಷ್ಪಗಂಧಿ : ಖಂಡಿತ ಗೊತ್ತು. ಅವಳ ಬದುಕಿನಲ್ಲಿ ಅವಳೊಪ್ಪುವ
ಯಾರೇ ಬಂದು ಹಾರ ಹಾಕಲಿ, ದಾರ ಕಟ್ಟಲಿ,
ಅದೇ ಮದುವೆಯೆಂದೂ ಅಂದಿನಿಂದಲೇ ಅವಳ
ಆಯುಷ್ಯ ವೃದ್ಧಿಯೆಂದೂ ಜೋತಿಷಿಗಳು ಶಿವನ ಹೆಸರು ಸ್ಮರಿಸಿ ಹೇಳಿದ್ದು
ನಮಗೆಲ್ಲರಿಗೂ ನೆನಪಿದೆ, ರಾಜರಿಗೆ ಕೂಡ.
ಆದ್ದರಿಂದ ಮಹಾರಾಜರು ನಿನ್ನೆಯಿಂದಲೇ, ರಾಜಕುಮಾರಿಯ
ಅರಳಿದ ಮುಖದರ್ಶನದಿಂದ ಸಂತೋಷಭರಿತರಾಗಿದ್ದಾರೆ.
ಆಕೆ ನಿಮ್ಮ ರೂಪ ವರ್ಣನೆ ಮಾಡಿದಾಗಿನಿಂದಂತೂ
ಮಹಾರಾಜರ ಆನಂದಕ್ಕೆ ಮಿತಿಯೇ ಇಲ್ಲವಾಗಿದೆ.
ಇಷ್ಟರಲ್ಲಿ ಈ ಕುರಿತು ನಿಮ್ಮೊಂದಿಗೆ ಮಾತಾಡಲಿದ್ದಾರೆ.
ವಿಷಯ ಹಿಂಗಿರುವಲ್ಲಿ ಉರಿವ ಗಾಯದಲ್ಲಿ ಉಗುರಾಡಿಸುವಂಥ
ನಿಮ್ಮ ಮಾತು ಶೋಭಿಸುವುದಿಲ್ಲ.

ಸಂಜೀವಶಿವ : ಜೋತಿಷಿಗಳು ಆಯುಷ್ಯ ವೃದ್ಧಿಯೆಂದು ಹೇಳಿದರೆ?

ಮುದುಕಿ : ಮೂಢನಂಬಿಕೆ (ಹೋಗುವಳು.)

ಪುಷ್ಪಗಂಧಿ : ಹೌದು, ಈಗ ರಾಜಕುಮಾರಿಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ಅಂದರೆ
ಸರಿಯಾಗಿ ವಿಚಾರ ಮಾಡೋದಕ್ಕೆ ಸ್ವಲ್ಪ ಸಮಯ ಕೊಡ್ತೀನಿ
ಅಂತ ಅರ್ಥ, ಸಮಯ ಸಿಕ್ಕರೆ ಕಾಯಿ ಹಣ್ಣಾಗುವ ಹಾಗೆ
ನಿಮಗೂ ಸರಿಯಾದ, ಪಕ್ವವಾದ ಬುದ್ಧಿ ಬರಲಿ
ಎಂಬುದು ಉದ್ದೇಶ.
ಜೀವಮಾನದಲ್ಲಿ ಒಂದು ಜೀವ ಉಳಿಸುವುದು ಸಣ್ಣ
ಮಾತಲ್ಲಪ್ಪ, ಅದೂ ಪುಣ್ಯ ವಿಶೇಷ. ರಾಜಕುಮಾರಿಯ
ಜೊತೆಗೆ ಅವಳ ಸಂತೋಷವನ್ನೇ ಅವಲಂಬಿಸಿದ
ರಾಜರಿಗೂ ಅವರ ಪರಿವಾರ ನಮಗೂ ಜೀವದಾನ ಮಾಡಿದ
ಧರ್ಮನಾಮರು ನೀವು! ರಾಜಕುಮಾರಿ ಆತ್ಮಹತ್ಯೆ ಮಾಡಿಕೊಳ್ಳಲು
ಓಡಿಹೋಗುವುದೆಂದರೇನು?- ನೀವಲ್ಲಿ ಸಿಕ್ಕು ಅವಳಿಗೆ
ಮದ್ದು ಕೊಡುವುದೆಂದರೇನು? ಇವೆಲ್ಲ ಶಿವನ ಪ್ರೇರಣೆ ವಿನಾ
ಮಾನ ಪ್ರಯತ್ನಗಳಿಂದ ಆಗುವುದುಂಟೆ?
ಶಿವನ ಕೃಪೆ ಅಂದರೆ ಇದೇ ಮಹಾಶಯರೇ.
ನಾ ನೀವು ನಿಮಿತ್ತ ಮಾತ್ರ. ಒಂದು ಮಾತು ಅತಿಯೆನಿಸಿದರೂ
ಈಗಲೇ ಹೇಳುತ್ತೇನೆ: ಸುಮುಹೂರ್ತ ಯಾವಾಗಲಾದರೂ
ಕೂಡಿಬರಲಿ ರಾಜಕುಮಾರಿಗಂತೂ ನೀವು ಕತ್ತಿನಲ್ಲಿ
ಕಟ್ಟಿದ ಬಳ್ಳಿ ಮದುವೆ ಮಂಗಲಕಾರ್ಯದ ತಾಳಿಗಿಂತ
ಯಾವ ವಿಧದಲ್ಲೂ ಕಮ್ಮಿಯಲ್ಲ! ಶುಭವಾಗಲಿ, ಇಬ್ಬರೂ ಮಾತಾಡಿಕೊಳ್ಳಿ.

(ದಂಗು ಬಡಿದು ಸಂಜೀವಶಿವ, ಗೊಂದಲದಲ್ಲಿ ರಾಜಕುಮಾರಿ ಕೂತಿದ್ದಾರೆ.)

ಸಂಜೀವಶಿವ : ಇಂಥ ಅಂತ್ಯಕ್ಕಾಗಿ ಈ ಆಟ ಸುರುವಾಯ್ತೆ!

ರಾಜಕುಮಾರಿ : ನಿನ್ನ ಕತ್ತಿಗೆ ನನ್ನನ್ನು ಒತ್ತಾಯದಿಂದ ಕಟ್ಟಿದೆನೆಂದು ಅನಿಸುತ್ತಿದೆಯೆ?
ನೀನು ನಂಬುತ್ತೀಯೋ ಇಲ್ಲವೋ,-
ನಿನ್ನೆ ನಾನು ನಿಜವಾಗಿ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತ್ಲೇ
ಹೋದದ್ದು. ನೀನು ಸಿಕ್ಕದ್ದು ಮಾತ್ರ ಅನಿರೀಕ್ಷಿತ.
ನೀನು ನನ್ನನ್ನ ಹೊಗಳಿದಾಗ ನಿಜವಾಗಿ ಸಂತೋಷವಾಯಿತು.
ಯಾಕಂತ ಗೊತ್ತಿಲ್ಲ. ನನಗೆ ಗೊತ್ತಾಗೋ ಮೊದಲೇ ನಿನಗೆ
ನನ್ನ ಆತ್ಮ ಕೊಟ್ಟು ಬಿಟ್ಟಿದ್ದೆ.
ಆಮೇಲೆ ನೀನು ಈ ಬಳ್ಳಿಯನ್ನು ಕತ್ತಿಗೆ ಕಟ್ಟಿದಾಗ
ಮಂಗಲಸೂತ್ರವೆಂದೇ ನನ್ನ ಭಾವನೆಯಾಯ್ತು.
ಈಗಲೂ ನಿನಗೆ ನಾನು ನಿನ್ನ ಮೇಲೆ ಹೇರಿದ ಭಾರವೆಂದು
ಅನಿಸಿದರೆ ಹಾಗೇ ಹೇಳಿ ಹೋಗಬಹುದು.
ನನ್ನ ದೈವ ನಾನು ಎದುರಿಸುತ್ತೇನೆ.

ಸಂಜೀವಶಿವ : ರಾಜಕುಮಾರೀ, ಇಬ್ಬರಲ್ಲಿ ಹೆಚ್ಚು ಲಾಭವಾದದ್ದು ನನಗೆ.
ಸಂತೋಷ ಪಡಬೇಕಾದವನು ನಾನು.
ಶಿವನ ಸಾಕ್ಷಿಯಾಗಿ ಹೇಳುತ್ತೇನೆ:
ನಿನ್ನನ್ನ ಹೃತ್ಪೂರ್ವಕ ಪ್ರೀತಿಸುತ್ತೇನೆ. ಬಿರುಕಿಲ್ಲ ನನ್ನ ಪ್ರೀತಿ
ಮತ್ತು ಮಾತಿನಲ್ಲಿ. ನಿನ್ನೆ ನಿನ್ನನ್ನ ನೋಡಿದಾಗ
ಚಿಕ್ಕಂದಿನಿಂದಲೇ ನೀನು ನನಗೆ ಗೊತ್ತು ಅನಿಸಿತು.
ನಿನ್ನೆ ನನ್ನ ತಾಯಿ ನನ್ನಲ್ಲಿ ಪ್ರೀತಿ ಉದ್ಭವಿಸಿದ್ದನ್ನ ಪ್ರಥಮ ಬಾರಿ
ಗುರುತಿಸಿದಾಗ ನನಗೆ ಒಪ್ಪುವ ವಿಶ್ವಾಸವಾಗಲಿಲ್ಲ.
ಈಗ ಧೈರ್ಯವಾಗಿ ಹೇಳುತ್ತೇನೆ: ನಿನ್ನೆ ನಿನ್ನನ್ನ
ಮೊದಲ ಬಾರಿ ನೋಡಿದಾಗಲೇ ನೀನು ನನ್ನ ಪ್ರೇಮದೇವತೆ
ಎಂದು ಒಪ್ಪಿಕೊಂಡೆ-ಒಳಗೊಳಗೇ. ಈಗ ಮಾತ್ರ
ನಿನ್ನೊಂದಿಗೆ ಆಡಲೇಬೇಕಾದ ಮಾತುಗಳಿವೆ.
ಅವುಗಳಿಗೆ ಇಬ್ಬರೂ ಹುಚ್ಚುತನ ಬೆರೆಸೋಣ.

ರಾಜಕುಮಾರಿ : ಹುಚ್ಚುತನ ಯಾಕೆ?

ಸಂಜೀವಶಿವ : ನಂಬಿಕೆ ಬರೋದಕ್ಕೆ, ಕನಸುಗಳನ್ನ ನಂಬಬೇಕು.
ನಂಬಬೇಕಾದರೆ ಹುಚ್ಚುತನ ಬೆರೆಸಬೇಕು.

ರಾಜಕುಮಾರಿ : ಸರಿ ಮುಂದೆ ಹೇಳು.

ಸಂಜೀವಶಿವ : ಮನುಷ್ಯ ತೀರ್ಮಾನ ತೆಗೆದುಕೊಳ್ಳಲೇಬೇಕಾದ ಗಳಿಗೆಗಳು
ಬಂದೇ ಬರುತ್ತಾವೆಂದು ನನಗೆ ಗೊತ್ತಿತ್ತು. ಆದರೆ ತಾಯಿಯನ್ನು
ವಿರೋಧಿಸುವ ತೀರ್ಮಾನ ತಕ್ಕೊಳ್ಳಬೇಕಾಗಬಹುದೆಂದು
ಅಂದುಕೊಂಡಿರಲಿಲ್ಲ.
ನಿನ್ನನ್ನು ಮದುವೆಯಾಗಬೇಕಾದರೆ ನನಗೆ ನನ್ನ ಸ್ವಾತಂತ್ರ್ಯ
ದಕ್ಕಬೇಕು. ಸ್ವಾತಂತ್ರ್ಯದ ಬೆಲೆ ಮತ್ತು ಅನಿವಾರ್ಯತೆಗಳನ್ನ
ತಿಳಿಸಿಕೊಟ್ಟದ್ದಕ್ಕಾಗಿ ನಿನಗೆ ಕೃತಜ್ಞನಾಗಿದ್ದೇನೆ ರಾಜಕುಮಾರಿ.
ತನ್ನ ಸ್ವಾತಂತ್ರ್ಯವನ್ನು ಗುರುತಿಸಿಕೊಳ್ಳದೆ ಮನುಷ್ಯ
ತನ್ನ ಸುತ್ತ ಭಯಂಕರ ನರಕ ಸೃಷ್ಟಿ ಮಾಡಿಕೊಂಡಿದ್ದಾನೆಂದು
ಅನಿಸುತ್ತದೆ. ಸ್ವಾತಂತ್ರ್ಯ ವೆಂದರೆ ಮನುಷ್ಯ ಮನುಷ್ಯನಾಗೋದೆ.
ಅದಾಗದ ಹಾಗೆ ತಾಯಿ ನಮ್ಮ ಸುತ್ತ ಸಾವಿನ ಬಲೆ
ಹೆಣೆದಿದ್ದಾಳೆ. ರಾಜಕುಮಾರೀ, ನನ್ನ ದಾರಿ ನನಗೀಗ
ನಿಚ್ಚಳವಾಗಿ ಕಾಣುತ್ತಿದೆ: ಕೇಳು:
ನಾನು ಗಂಡ, ನೀನು ಹೆಂಡತಿ. ನಾವಿರೋದು ನಮ್ಮ ಗುಡಿಸಲಲ್ಲಿ.
ನೀನು ರಾಜಕುಮಾರಿ ಆಗಿರಬಹುದು. ನಾನು ರಾಜನಾಗಲು
ಸಿದ್ಧನಿಲ್ಲ. ನೀನಿದನ್ನು ಒಪ್ಪಿಕೋಬೇಕು.

ರಾಜಕುಮಾರಿ : ಆಯ್ತು: ನಾನೇ ಅರಮನೆ ಬಿಟ್ಟು ಬಂದು ನಿಮ್ಮ ಗುಡಿಸಲಲ್ಲಿ
ಇರ್ತೀನಾಯ್ತ? ವೈದ್ಯನ ಹೆಂಡತಿ ಅಂದಮೇಲೆ
ಮದ್ದು ತಾನೇ ಅರೆಯಬೇಕಾದ್ದು? ಖಂಡಿತ ಅರೆಯುತ್ತೇನೆ.
ಯಾವತ್ತೂ ಮದ್ದು ಅರೆಯುತ್ತಿದ್ದರೆ
ಸಾವಿನ ಭಯವೇ ಇರುವುದಿಲ್ಲ, ಅಲ್ಲವೆ?
ಅದಕ್ಕೇ ನೀನು ನನಗೆ ಯಾವತ್ತೂ ಮದ್ದರೆಯೋ ಕೆಲಸ
ಕೊಡಬೇಕು.

ಸಂಜೀವಶಿವ : (ನಗುತ್ತ) ಈ ಸಣಕಲು ದೇಹದಿಂದ ಮದ್ದರೆಯೋ ಕೆಲಸವೆ?

ರಾಜಕುಮಾರಿ : ಇನ್ನು ಮೇಲೆ ದಪ್ಪ ಆಗೋದಕ್ಕೆ ಪ್ರಯತ್ನ ಮಾಡುತ್ತೇನೆ.

ಸಂಜೀವಶಿವ : ಗುಡಿಸಲಲ್ಲಿರಲಿಕ್ಕೆ ಒಪ್ಪಿಕೊಂಡರೆ ಸಾಕು, ಉಳಿದ ಕೆಲಸ
ನಾನೇ ಮಾಡುತ್ತೇನೆ.

ರಾಜಕುಮಾರಿ : ಉಳಿದ ಕೆಲಸ ಅಂದರೆ?
ರಾಜಕುಮಾರಿಯಾದ್ದರಿಂದ ನನಗೆ ಅಡಿಗೆ ಮಾಡೋದಕ್ಕೆ
ಬರೋದಿಲ್ಲ ಅಂತಲ ನಿನ್ನ ಅಭಿಪ್ರಾಯ?

ಸಂಜೀವಶಿವ : ಹಾಗೇನಿಲ್ಲ.

ರಾಜಕುಮಾರಿ : ನನಗೂ ಅಡಿಗೆ ಮಾಡುವುದಕ್ಕೆ ಬರುತ್ತದೆ, ಮಹಾಶಯಾ.
ಸೊಪ್ಪಿನ ಸಾರು,
ಅನ್ನ ಬೇಯಿಸೋದು ಹ್ಯಾಗಂತ ನನಗೆಲ್ಲಾ ಗೊತ್ತು.
ಪುಷ್ಪಗಂಧಿ ಅಡಿಗೆ ಮಾಡೋದನ್ನ ಕದ್ದು ನೋಡಿ
ಕಲ್ತಿದೀನಿ.

ಮುದುಕಿ : (ಪ್ರವೇಶಿಸಿ) ಮಗು, ಅಗತ್ಯವಾಗಿ ನಿನ್ನತಾಯಿ ನಿನ್ನನ್ನ
ನೋಡಬೇಕಂತೆ.

(ರಾಜಕುಮಾರಿ ಭಯದಲ್ಲಿ ಸಂಜೀವಶಿವನನ್ನು ತಬ್ಬಿಕೊಳ್ಳುವಳು.)

ಸಂಜೀವಶಿವ : ರಾಜಕುಮಾರಿ, ಇಗೋ ಈ ಬಳ್ಳಿಯೇ ತಾಳಿಯೆಂದೆ ಅಲ್ಲವೆ?
ಇದಕ್ಕೆ ನನ್ನ ಒಪ್ಪಿಗೆ ಇದೆ. ಇನ್ನು ಮೇಲೆ ಬದುಕಿದ್ದರೆ
ಇಬ್ಬರಿಗೂ ಒಂದೇ ಗುಡಿಸಲು. ಬದುಕಿಲ್ಲವಾದರೆ
ಇಬ್ಬರಿಗೂ ಒಂದೇ ಚಿತೆ. ಒಪ್ಪಿಗೆ ಇದೆಯೆ?

ರಾಜಕುಮಾರಿ : ಶಿವನ ಸಾಕ್ಷಿಯಾಗಿ ಒಪ್ಪಿದೆ.
(ದೂರದ ಶಿವ ದೇವಸ್ಥಾನದಲ್ಲಿ ಗಂಟೆ ಬಾರಿಸುತ್ತದೆ. ಇಬ್ಬರೂ ಸಂತೋಷ
ಪಡುತ್ತಾರೆ. ಮುದುಕಿ ಹಣೆ ಹಣೆ ಬಡಿದುಕೊಳ್ಳುತ್ತಾಳೆ)

ಸಂಜೀವ : ರಾಜಕುಮಾರೀ ಪ್ರೇಮದ ಕಾಣಿಕೆ ಕೊಡುವಷ್ಟು ದೊಡ್ಡವನಲ್ಲ ನಾನು.
ಇದು ನಿನ್ನ ವಿನಮ್ರ ಕಾಣಿಕೆ. ದಯಮಾಡಿ ಸ್ವೀಕರಿಸಬೇಕು.
(ಎಂದು ಅಲ್ಲಿಯೇ ಇದ್ದ ಸಂಪಿಗೆ ಹೂವನ್ನು ಕೊಡಹೋಗುವನು. ರಾಜಕುಮಾರಿ
ಅದನ್ನು ಕೈಯಿಂದ ತಕ್ಕೊಳ್ಳದೆ ಮುಡಿಗಿಡಸಲೆಂದು ತಿರುಗುವಳು.
ಸಂಜೀವ ಜವಾಬ್ದಾರಿಯ ಭಾರದಿಂದ ನಡುಗುತ್ತ ಸಂಪಿಗೆಯನ್ನು ಅವಳ
ಮುಡಿಗಿಡುವನು. ರಾಜಕುಮಾರಿ ರೋಮಾಂಚಿತಗೊಂಡು ಮೈಮರೆಯುವಳು.
ಸಂಜೀವಶಿವ “ಮತ್ತೆ ಬರುತ್ತೇನೆ” ಎಂದು ಹೇಳಿ ಹೋಗುವನು.
ರಾಜಕುಮಾರಿ ಮತ್ತೆ ಮತ್ತೆ ಮುಡಿಯ ಮುಟ್ಟಿ ನೋಡಿಕೊಂಡು ತನ್ನಲ್ಲಾದ
ಹೊಸ ಬದಲಾವಣೆಯನ್ನು ಸಂಭ್ರಮಿಸುತ್ತಿದ್ದಾಳೆ. ಕನ್ನಡಿಯ ಮುಂದೆ ನಿಂತು
ನೋಡಿಕೊಳ್ಳುತ್ತ ಆನಂದ ಪಡುತ್ತಿರುವಾಗ ಕೋಪದಲ್ಲಿ ಬಂದ ಮುದುಕಿ
ಆಳಿದ ಮಹಾರಾಣಿಯ ವರ್ಣಚಿತ್ರದ ಹಿಂದೆ ನಿಂತುಕೊಳ್ಳುವಳು.)

ರಾಜಕುಮಾರಿ : (ಮುಡಿಯನ್ನು ಮುಟ್ಟಿಕೊಳ್ಳುತ್ತ) ಸಂಪಿಗೆ,
ಸಂಪಿಗೆ ಈಗಷ್ಟೆ ನಿನ್ನನ್ನ  ನನ್ನ ಮುಡಿಗಿಟ್ಟನಲ್ಲ,
ಅವನ ಹೆಸರು ಹೇಳೇ.

ಮುದುಕಿ : ಸಂಜೀವಶಿವ

ರಾಜಕುಮಾರಿ : ಅವಯ್ಯಾ! ಶಿವನಿಗೂ ಇಷ್ಟೊಂದು ಚಂದ ಹೆಸರಿಲ್ಲವಲ್ಲೆ!
ಈ ಹೆಸರು ಕೇಳಿದರೇ ರೋಮಾಂಚನವಾಗುತ್ತದಲ್ಲೇ ಸಂಪಿಗೆ!
ನಿನ್ನಿಂದ ಪರಿಮಳ ಸೂಸುವ ಹಾಗೆ,
ಈ ಹೆಸರಿನಿಂದಲೂ ಸೂಸುತ್ತಿದೆಯಲ್ಲೆ!
ಆದರೆ ಇದು ನಿನ್ನ ಪರಿಮಳಕ್ಕಿಂತ ಹೆಚ್ಚು ಆಹ್ಲಾದಕರ.
ನನ್ನ ಗಂಡ ನಿನ್ನನ್ನು ಮುಡಿಗೇರಿಸಿದಾಗ
ಸಳ್ಳಂತ ಮೈಯಲ್ಲಿ ಮಿಂದು ಹರಿದಾಡಿ,
ರೋಮಾಂಚನಗೊಂಡು ಗರಿಗೆದರಿದ ನವಿಲಿನಂತಾದೆನೆ ಗೆಳತಿ!

ಮುದುಕಿ : ನವಿಲಾದ ಭ್ರಾಂತಿಯಲ್ಲಿರುವುದರಿಂದ ನಿನಗೆ
ಈಲೋಕ ಕಾಣಿಸುತ್ತಿಲ್ಲ ಮಗಳೆ. ಮೈ ತುಂಬ ಕಣ್ಣಿನ
ನಿನ್ನ ಒಂದೊಂದೇ ಕಣ್ಣು ತೆರೆಯುತ್ತೇನೆ:
ನೀ ನಿಂತ ನೆಲ ನೋಡು: ಕಾಣಿಸುತ್ತಿದೆಯೆ?

ರಾಜಕುಮಾರಿ : ಕಾಣುತ್ತಿದೆ.

ಮುದುಕಿ : ಹಾಗಾದರೆ ಹೇಳು: ನೀನ್ಯಾಕೆ ಆ ಬಡ ವೈದ್ಯನನ್ನ ಇಷ್ಟಪಟ್ಟೆ ಮಗಳೆ?

ರಾಜಕುಮಾರಿ : ಯಾಕೆಂದರೆ ನಿಜ ಹೇಳ್ತಾನೆ ಅದಕ್ಕೆ.

ಮುದುಕಿ : ಅಂದರೆ?

ರಾಜಕುಮಾರಿ : ನನ್ನ ಸುತ್ತ ಇದ್ದವರೆಲ್ಲಾ ಸುಳ್ಳು ಹೇಳ್ತಾರೆ. ನನಗೆ ನನ್ನ
ಅಧ್ಯಾಪಕರು ಹೇಳಿದ್ದು ಒಂದೂ ತಿಳಿಯುವುದಿಲ್ಲ.
ನನಗೆ ತಿಳಿಯುತ್ತಿಲ್ಲ ಅಂದರೆ ಅಬ್ಬ ಏನು
ಚುರುಕು ಬುದ್ಧಿ ಅಂತ ಮಹಾರಾಜರ ಮುಂದೆ
ಸುಳ್ಳು ಹೇಳ್ತಾರೆ. ಇವನೊಬ್ಬನೇ ನಾನು ಧಡ್ಡಿ ಅಂತ
ನಿಜ ಹೇಳಿದ್ದು.

ಮುದುಕಿ : ನಿಜ ಹೇಳಿದ್ದಕ್ಕೆ ಮೆಚ್ಚಿ ಬಹುಮಾನ ಕೊಡಬೇಕು.
ಪ್ರಾಣವನ್ನೇ ಅವನ ಕೈಗಿಡೋದ?

ರಾಜಕುಮಾರಿ : ಹೌದು, ಹಾಗೆ ಇಟ್ಟಿದ್ದಕ್ಕೇ ಅಲ್ಲವೆ ಅವನು ನನ್ನನ್ನ
ಕಾಪಾಡಿದ್ದು? ರಾಜವೈದ್ಯರೆಲ್ಲಾ ಕೈ ಚೆಲ್ಲಿದಾಗ
ಅವನೇ ಮುಂದೆ ಬಂದು ಮದ್ದು ಕೊಟ್ಟು ರೋಗ
ವಾಸಿ ಮಾಡಿದ.

ಮುದುಕಿ : ಮದುವೆ ಆದರೆ ಅವನೊಂದಿಗೆ ಇರಲಿಕ್ಕಾಗುತ್ತೇನಮ್ಮ ನಿನಗೆ?
ನೀನು ರಾಜಕುಮಾರಿ, ಅವನೋ ಅಳಲೇಕಾಯಿ ವೈದ್ಯ.

ರಾಜಕುಮಾರಿ : ನನಗೆ ಅರಮನೆ, ರಾಜ್ಯ ಯಾವುದೂ ಬೇಡ.
ಮದುವೆ ಆಗಿ ಆಶ್ರಮ ಕಟ್ಟಿಕೊಂಡು ಇಬ್ಬರೂ
ಕಾಡಿನಲ್ಲಿದ್ದು ಬಿಡ್ತೀವಿ. ನಾನು ಮದ್ದರೆದು ಕೊಡ್ತೀನಿ.
ಅವನು ನನ್ನಂಥ ರೋಗಿಗಳ ಸೇವೆ ಮಾಡ್ತಾನೆ.
ನನ್ನಕೈಸೋತರೆ ಆತ ಬಂದು ಸಹಾಯ ಮಾಡ್ತಾನೆ.
ನನ್ನ ಮುಖದ ಬೆವರು ಅವನೇ ಒರೆಸ್ತಾನೆ. ಈಗಲೂ
ಅವನೇ ಒರೆಸೋದು. ನಾಡಿ ನೋಡೋದಕ್ಕೆ ಅಂತ
ಅವನು ಕೈ ಹಿಡಿದಾಗ ನನ್ನ ಮೈ ಝುಮ್ಮಂತದೆ!
ನನಗ್ಗೊತ್ತು ಅವನಿಗೂ ಹಾಗೇ ಆಗ್ತದೆ.

ಮುದುಕಿ : ಹ್ಯಾಗೆ ಗೊತ್ತಾಯ್ತು?

ರಾಜಕುಮಾರಿ : ನನ್ನ ಜೊತೆ ಇದ್ದಾಗ ಉಸಿರು ಕಮ್ಮಿ ಬಂದ ಹಾಗೆ ಮಾತಾಡ್ತಾನೆ!

ಮುದುಕಿ : ತುಂಬಾ ಜಾಣೆಯಮ್ಮ ನೀನು!

ರಾಜಕುಮಾರಿ : ಹೌದ? ವೈದ್ಯನಿಗೆ ಈ ಮಾತು ಹೇಳಮ್ಮ
ನಾನು ಧಡ್ಡಿ ಅಂದ್ಕೊಂಡಿದಾನೆ.

ಮುದುಕಿ : ಮೂರ್ಖ ಅವನು. ಒಂದೊಂದು ಸಣ್ಣ ವಿಷಯ ತಿಳಿಯೋದಕ್ಕೂ
ಒಂದೊಂದು ಇಡೀ ದಿನ ತಗೊಳ್ತಾನೆ.
ಅವನ ತಾಯಿಯ ವಿಷಯ ಗೊತ್ತ ನಿನಗೆ?]

ರಾಜಕುಮಾರಿ : ಗೊತ್ತು, ಎಳೇಮಕ್ಕಳ ಕತ್ತು ಹಿಸುಕಿ ಕೊಂದು ತಿನ್ನುತ್ತಾಳಂತೆ.
ನನಗೆ ನಿನ್ನವಿಷಯ ಗೊತ್ತಿಲ್ಲ. ಅಷ್ಟೆ.

ಮುದುಕಿ : ಗುರುತಾಗಲಿಲ್ಲವೆ ಮಗಳೆ? ನಾನು ನಿನ್ನ ತಾಯಿ.

ರಾಜಕುಮಾರಿ : ನನ್ನ ಅಷ್ಟೂ ಕಣ್ಣು ತೆರೆದು ಉಪಕಾರ ಮಾಡಿದ್ದಕ್ಕೆ
ನಿನಗೆ ನೂರು ನಮಸ್ಕಾರ ತಾಯಿ.
ನನಗೀಗ ಎಲ್ಲವೂ ನಿಚ್ಚಳವಾಗಿಕಾಣುತ್ತಿದೆ. ಹೇಳಲೆ?
ನನ್ನ ತಾಯಿ ಸತ್ತು ಹತ್ತು ವರ್ಷಗಳಾದವು.
ಈಗ ನನ್ನ ತಾಯಿಯ ಹೆಸರು, ಇನ್ನೊಮ್ಮೆ ವೈದ್ಯನ ತಾಯಿಯ
ಹೆಸರು ಹೇಳಿಕೊಂಡು ಬರುವ ನೀನ್ಯಾರೋ ನಾನರಿಯೆ.
ಬಹುಶಃ ವೈದ್ಯನ ತಾಯಿ ಅಥವಾ ಆಕೆಯ
ಗೆಳತಿಯಾಗಿದ್ದರೆ ಒಂದು ಮಾತು ಹೇಳುತ್ತೇನೆ ಕೇಳು:
ಈಗಷ್ಟೇ ಮುಡಿಗೆ ಹೂ ಮುಡಿಸಿ ಹೋದನಲ್ಲ ವೈದ್ಯ,
ಅವನು ಗಂಡನಾಗಿ ಸಿಕ್ಕ ತಕ್ಷಣವೆ ಒಂದು
ಪವಾಡ ನಡೆಯಿತು ತಾಯಿ:
ತೊಟ್ಟಿಲ ಕೂಸು ಮಡದಿಯಾಗಿ,
ಮೂಗಿಗೆ ಬಾಯಿ ಬಂದು,
ಆಗಬಾರದ್ದಾಗಿ ನಡೆಯಬಾರದ್ದು ನಡೆದು ಹೋಯಿತು.
ಸೂರ್ಯಕಿರಣ ಮಣ್ಣ ಸೇರಿ ಥರಾವರಿ ಸಸ್ಯ ಪ್ರಪಂಚವ
ಹುಟ್ಟಿಸುವಂತೆ, ನೋಟ ಮಾತ್ರದಿಂದ
ನೂರಾರು ಭಾವನೆಗಳನ್ನ ನನ್ನಲ್ಲಿ ಅರಳಿಸಬಲ್ಲಾತ,
ನೋವಿನಲ್ಲಿದ್ದವರನ್ನ ಸಾವಿನ ಬಾಯಿಂದ
ಬಿಡಿಸಿ ತರಬಲ್ಲಾತ,
ಯಾಕೆಂದು ಗೊತ್ತಿಲ್ಲದೆ ಅರಳಿದ ನನ್ನ ಬದುಕಿಗೆ
ಅರ್ಥವಂತಿಕೆ ಕೊಡಬಲ್ಲಾತ
ಗಂಡನಾಗಿ ಸಿಕ್ಕಮೇಲೆ ನಾನೀಗ ಯಾರಿಗೂ ಹೆದರುವುದಿಲ್ಲವ್ವ.
ನಿನಗೂ ನಿನ್ನ ತಾಯಿಗೆ ಕೂಡ!
ನೀನು ಹೀಗೆ ಅಪ್ಪಣೆಯಿಲ್ಲದೆ,
ಎಲ್ಲೆಂದರೆಲ್ಲಿ ನಾನಿದ್ದಲ್ಲಿ,
ತಾಯಿಯ ಹೆಸರು ಹೇಳಿಕೊಂಡು ನುಗ್ಗುವುದು
ನನಗೆ ಸರಿಬರುವುದಿಲ್ಲ.
ನನ್ನ ಕಣ್ಣು ಸರಿಯಾಗಿ ತೆರೆದವು ಅಂತ ಖಾತ್ರಿಯಾಯಿತಲ್ಲ?
ಈಗ ಹೊರಡು. ಪುಷ್ಪಗಂಧಿ,

ಪುಷ್ಪಗಂಧಿ : (ಪ್ರವೇಶಿಸಿ) ರಾಜಕುಮಾರೀ,

ರಾಜಕುಮಾರಿ : ಈಕೆಗೆ ಬಾಗಿಲು ತೋರಿಸು.
(ಮುದುಕಿಯ ವೇಷದ ತಾಯಿ ಆಶ್ಚರ‍್ಯದಿಂದ ಸುಮ್ಮನೆ ಹೋಗುವಳು.)

* * *