(ಶಿವನ ವೇಷದಲ್ಲಿ ಮಂಜರಿ ಸತ್ತು ಬಿದ್ದಿದ್ದಾಳೆ. ಮಾರ್ಕಂಡೇಯನ ವೇಷದ ಮದನತಿಲಕ ಅಳುತ್ತಿದ್ದಾನೆ.)

ಮದನತಿಲಕ : ಮಂಜರೀ ನನ್ನ ಮಂಜರಿ, ಉಳಿದಿರೋ ಒಬ್ಬಳೇ ಹೆಂಡತಿ ನೀನೂ ಹೋದ ಮೇಲೆ
ಬದುಕೋದಕ್ಕೆ ನನಗೇನೂ ಉಳಿದಿಲ್ಲವಲ್ಲೆ!
ನಿನ್ನ ಹೆಸರೇ ನನ್ನ ಬಾಯಿಗೆ ಎಷ್ಟೊಂದು ರುಚಿಯಾಗಿತ್ತು.
ಕೇಳೋದಕ್ಕೆ ಕಿವಿಗೆ ಹಿತಕರವಾಗಿತ್ತು.
ಕೇಳೋದಕ್ಕೆ ಕಿವಿಗೆ ಹಿತಕರವಾಗಿತ್ತು.
ಇನ್ನು ಯಾರನ್ನ ಆ ರೀತಿ ಕರೆಯಲೆ?
ಆಹಾ ಮಂಜರೀ… ಎಂಥಾ ಭಾಗ್ಯವತಿಯೇ ನೀನು!
ಹುಟ್ಟು ಕಲಾವಿದೆ,
ನಾಟಕ ಆಡ ಆಡುತ್ತಲೇ ವೀರಮರಣ ಪಡೆದೆಯಲ್ಲೆ!
ಹರಹರಾ ಅಂತ ನಿನ್ನ ವೇಷ ಕಟ್ಟಿದವಳನ್ನೇ
ಹರಕೊಂಡು ತಿಂದಿಯಲ್ಲೋ ಶಿವನೇ!
(ಸಹಾನುಭೂತಿ ಸೂಚಿಸಲು ಮದರಂಗಿ ಬಂದು ದೂರ ನಿಲ್ಲುತ್ತಾಲೆ. ಮದನ ತಿಲಕ ಅವಳನ್ನು ನೋಡಿ ಅಳುತ್ತ ಮಾತಾಡುತ್ತಾನೆ.)
ಬಾಮ್ಮಾ ಮದರಂಗಿ, ಸಮಾಧಾನ ಹೇಳಲಿಕ್ಕೆ ಬಂದಿದ್ದೀಯಲ್ಲವೆ?
ನನ್ನನ್ನ ಕಟ್ಟಿಕೊಂಡದ್ದರಿಂದ ಮುತ್ತೈದೆ ಸಾವುಕಂಡಳು ಪುಣ್ಯವಂತಿ!
ಯಾರಿಗುಂಟು ಯಾರಿಗಿಲ್ಲ!
ಹತ್ತಿರ ಬಾಮ್ಮಾ ನೋಡು, ಹ್ಯಾಗೆ ಮಲಗಿದ್ದಾಳೆ ಮಾರಾಯ್ತಿ?
ನೀನಾದರೂ ಈ ಹತಭಾಗ್ಯನ ಹತ್ತಿರ ಬಂದು
ಸಹಾನೂಭೂತಿ ತೋರಿಸಬಾರದೆ? ದುಃಖತಪ್ತವಾದ
ಕಣ್ಣೀರೊರೆಸಿ ನನ್ನ ಮುಖವನ್ನ ನಿನ್ನ ಹೃದಯಸ್ಥಲದಲ್ಲಿಟ್ಟುಕೊಂಡು
ಸಮಾಧಾನ ಹೇಳಿದರೆ ಬೇಡ ಅನ್ನುತ್ತೇನೆಯೇ?
(ಮದರಂಗಿ ಬಂದು ಕೂರುವಳು. ಮಂಜರಿಯ ಭೂತ ಅಂದರೆ ಹೆಣ ಮದರಂಗಿಯನ್ನು ನೋಡಿ ಎದ್ದು ಕೂತು ಮತ್ಸರದಿಂದ ಉರಿದುರಿದು ಸಂಕಟಪಡುತ್ತದೆ. ಭೂತರೂಪದಲ್ಲಿರುವುದರಿಂದ ಇಬ್ಬರಿಗೂ ಅವಳು ಕಾಣಿಸುವುದಿಲ್ಲ. ಸಂಜೀವಶಿವ ಬರುವವರೆಗಿನ ಇವರ ಸಂಭಾಷಣೆ ಶೋಕದ ಧಾಟಿಯಲ್ಲೇ ನಡೆಯುತ್ತದೆ. ಭೂತ ಸಕಾಲಿಕ ಪ್ರತಕ್ರಿಯೆ ವ್ಯಕ್ತಪಡಿಸುತ್ತಲೇ ಇರುತ್ತದೆ.)

ಮದರಂಗಿ : ಅಯ್ಯೋ ಪಾಪ, ಎಂಥಾ ಪುಣ್ಯಾತ್ಗಿತ್ತಿ. ಹೆಂಗ ಸತ್ತಳಲ್ಲ, ದುರ್ದೈವ….

ಮದನತಿಲಕ : ಎಂಥಾ ದುರ್ದೈವ ಅಂತೀಯಮ್ಮ! ಇವಳು ಸತ್ತ ದಿನ ಒಬ್ಬ ಮಂತ್ರಿ
ಸಾಯಲಿಲ್ಲ, ಒಬ್ಬ ಕವಿ ಸಾಯಲಿಲ್ಲ, ಒಬ್ಬ ರಾಜ ಸಾಯಲಿಲ್ಲ…
ಇದಕ್ಕಿಂತ ದುರ್ದೈವ ಬೇಕೆ? ದಿನಾಲು ಕನಸು ಮನಸಿನಲ್ಲಿ ಮದರಂಗಿಯನ್ನೇ
ಕನವರಿಸುತ್ತೀಯಲ್ಲಾ ಅಂತ ಅಸೂಯೆಯಿಂದ ಸತ್ತಳು ಕಣಮ್ಮ.

ಮದರಂಗಿ : ಸುಳ್ಳು.

ಮದನತಿಲಕ : ಹೆಣದ ಮುಂದೆ ಸುಳ್ಳು ಹೇಳ್ತಾರೇನೇ ಯಾರಾದರೂ?

ಮದರಂಗಿ : ಹಾಂಗಿದ್ದರೆ ನನ್ನ ಬಿಟ್ಟು ಅವಳನ್ಯಾಕೆ ಕಟ್ಟಿಕೊಂಡೆ?

ಮದನತಿಲಕ : ನನ್ನನ್ನ ಕಟ್ಟಿಕೊಂಡ ಒಂಭತ್ತನೆಯವಳು ಹೀಗೆ ಸಾಯಬೇಕೆಂತ ಗ್ರಹಚಾರ
ಗ್ರಂಥದಲ್ಲಿತ್ತು ಕಣೇ! ಅದಕ್ಕೇ ಮೊದಲು ಪೀಡೆ ತೊಲಗಲಿ ಅಂತ
ಅವಳನ್ನ ಕಟ್ಟಿಕೊಮಡೆ. ಇಲ್ಲದಿದ್ದಲ್ಲಿ ನೀನೇ ಹೀಗೆ ಸಾಯಬೇಕಾಗಿತ್ತು
ಗೊತ್ತ? (ಈಗ ಭೂತದ ಪ್ರತಿಕ್ರಿಯೆ ತೀವ್ರವಾಗುತ್ತದೆ)

ಮಂಜರಿಯಹೆಣ : ಎಲ ಎಲಾ ಅಯೋಗ್ಯ ನನಮಗನೆ!

ಮದನತಿಲಕ : ನೀನಿನ್ನೂ ನನ್ನ ಮಾತನ್ನ ನಂಬುತ್ತಿಲ್ಲ ಅಲ್ಲವೆ? ಅಯ್ಯೋ
ಶಿವಶಿವಾ ಹೀಗೆ ವಿಶ್ವಾಸಹೀನನಾಗಿ ಬದುಕೋದಕ್ಕಿಂತ
ಸಾಯೋದೇ ಮೇಲಲ್ಲವೆ? ಮಂಜರಿಯ ಬದಲು
ನನಗಾದರೂ ಸಾವನ್ನು ತರಬಾರದಿತ್ತೇ?….

ಮದರಂಗಿ : ನೀನೇನೋ ಸಾಯಬೇಕೆಂತೀ. ಆದರೆ ಸಾವಿನ ತಾಯಿ ಪರವಾನಿಗಿ
ಕೊಡಬೇಕಲ್ಲ ಮುದುಕಾ.

ಮದನತಿಲಕ : ಮೊನ್ನೆ ಕನಸಿನಲ್ಲಿ ಅವಳೂ ಬಂದಿದ್ದಳಮ್ಮ
“ಕೊಂದು ಬಿಡು ತಾಯೀ” ಅಂದೆ
“ಇನ್ನೊಂದು ಹುಡುಗಿಯನ್ನ ಆಳಿ ಬಾ ಮಗನೇ”
ಅಂದಳಲ್ಲಮ್ಮ.

ಮದರಂಗಿ : ಹುಡುಗಿ ಸಿಕ್ಕಬೇಕಲ್ಲೋ ಮುದುಕಾ ನಿನಗೆ.

ಮದನತಿಲಕ : ದೊಡ್ಡ ಮನಸ್ಸು ಮಾಡಿ ನೀ ಸಿಕ್ಕರೂ ಸಾಕಮ್ಮ ನನಗೆ.

ಮದರಂಗಿ : ಮುದುಕಾ ನಾ ಹುಡುಗಿ ಅಲ್ಲ, ನೀ ಹುಡುಗ ಅಲ್ಲ.

ಮದನತಿಲಕ : ನೀನೇ ದೊಡ್ಡಮನಸ್ಸು ಮಾಡಿ ಬಂದರೆ ನಾನು ಹುಡಗನೋ
ಮುದುಕನೋ ಅಂತ ನಿನಗೇ ತಿಳಿಯುತ್ತದೆ. ಇಬ್ಬರೂ ಪ್ರೀತಿಸುತ್ತ
ಇದ್ದರೆ ನನಗೆ ನೀನೇ ನಗೆಮಾರಿ ಪೋರಿ. ನಿನಗೆ ನಾನೇ ಜವಾರಿ ಹೋರಿ!

ಮದರಂಗಿ : ಅವ್ ಶಿವನೇ! ಏನ್ ಚಂದ ಮಾತಾಡತೈತಿದು! (ಸಂಜೀವಶಿವ ಬರುವನು)

ಸಂಜೀವಶಿವ : (ಆಶ್ಚರ್ಯದಿಂದ) ಅಯ್ಯಾ ನೀನಿನ್ನೂ ಜೀವಂತವಾಗಿದ್ದೀಯಾ?

ಮದನತಿಲಕ : ಯಾಕೆ ನಾನು ಸಾಯಬೇಕಿತ್ತ?

ಸಂಜೀವಶಿವ : ನಿನ್ನ ರಾತ್ರಿ ನೀನು ಶಿವನ ವೇಷ ಕಟ್ಟಿರಲಿಲ್ಲವ?

ಮದನತಿಲಕ : ಕಟ್ಟಿದ್ದೆ. (ಮಂಜರಿಯ ಹೆಣ ಎದ್ದು ಬಂದು “ಸುಳ್ಳು ಹೇಳ್ತೀಯಾ ಕಳ್ಳ ನನ ಮಗನೇ”
ಎಂದು ಮದನತಿಲಕನ ಕೆನ್ನೆಗೆ ತಿವಿಯುತ್ತದೆ.)

ಮದನತಿಲಕ : ಇಲ್ಲಿಲ್ಲ. ನಾನಲ್ಲ ಶಿವನ ವೇಷ ಕಟ್ಟಿದ್ದು, ಮಂಜರಿ.
(ಈಗ ಮಂಜರಿಯ ಭೂತ ಹೋಗಿ ಮತ್ತೆ ಹೆಣವಾಗುವುದು.)

ಸಂಜೀವಶಿವ : ಕೊನೇ ಕ್ಷಣದಲ್ಲಿ ಬದಲಿಸಿದೆಯಾ?

ಮದನತಿಲಕ : ಹೌದು.

ಸಂಜೀವಶಿವ : ಯಾಕೆ?

ಮದನತಿಲಕ : ಮಂಜರಿ ಹಟ ಹಿಡಿದಳು ಸ್ವಾಮಿ. ಶಿವನ ವೇಷ ಕಟ್ಟಿದರೇ ನಾನು
ಬದುಕೋದು, ಇಲ್ಲದಿದ್ದರೆ ಕೆರೆಯೋ ಬಾವಿಯೋ ಬೀಳ್ತೀನಿ ಅಂತ
ಹೆದರಿಸಿದಳು ಮಾರಾಯಾ.
(ಮಂಜರಿಯ ಹೆಣ ಇವನು ಸೃಷ್ಟಿಸುತ್ತಿರುವ ಸುಳ್ಳು ಕೇಳಿ ಬೆರಗಾಗಿ “ಅಬ್ಬಾ”
ಎಂದು ಬಾಯಿ ಮುಚ್ಚಿಕೊಳ್ಳುವುದು.)
“ಲೇ ಮಂಜರಿ ನಿನಗೆ ಶಿವನ ಸಂಭಾಷಣೆ ಮತ್ತು ಹಾಡು ಬರೋದಿಲ್ಲ.
ಹಟ ಹಿಡೀಬೇಡವೇ” ಅಂದೆ. ಏನೆಂದರೂ ಕೇಳಲಿಲ್ಲ.
ಕೊನೆಗೆ ವೇಷ ಬದಲಿಸಿ ಮಂಜರಿಗೆ ಶಿವನ ವೇಷ ಕಟ್ಟಿ ನಾನು
ಮಾರ್ಕಂಡೇಯನಾದೆ. ಮುಂದೆ ಶಿವ ಸತ್ತುಬಿದ್ದಾಗ “ಓಹೋ!” ಅಂದೆ.
ಇಷ್ಟೆ ಸ್ವಾಮಿ ನಡೆದದ್ದು.

ಮಂಜರಿಯ ಹೆಣ : (ಎದ್ದು ಬಂದು) ಎಲಾ ಕಳ್ಳ! ನೋಡಿದಿರಾ ಸಮಯಕ್ಕೆ ಸರಿಯಾಗಿ ಹ್ಯಾಗೆ ಗಾಳ ಹಾಕಿ ತಗೀತಾನೆ ಸುಳ್ಳುಗಳನ್ನ! ಲೋ ಅಡ್ಡ ಹುಟ್ಟಿದವನೆ ಸುಳ್ಳು ಬೊಗಳ್ತೀಯಾ? ಇಷ್ಟೆ ಸ್ವಾಮಿ ನಡೆದದ್ದು; ಇವನು ಶಿವ ನಾನು ಮಾರ್ಕಂಡೇಯನಾಗಿ ಇನ್ನೇನು ಆಟ ಸುರುವಾಗಬೇಕು; ಅಷ್ಟರಲ್ಲಿ ಯಾವಳೋ ಒಬ್ಬ ಸೇಡುಮಾರಿ ಬಂದಳು. ಅವಳ ಮುಖ ಕತ್ತಲೆಗಿಂತ ಕಪ್ಪಗಿತ್ತು, ಕುಡುಗೋಲಿನಂಥ ಕೋರೆ ಹಲ್ಲಿತ್ತು. ಕೊಂಬೂ ಇದ್ದಂಗಿತ್ತು. ನೆತ್ತರುಗಣ್ಣು ಕಿಸಿದು ಕೆಂಚು ಮೀಸೆ ಕೆದರಿ, ಮೃಗದ ನೆಗೆತ ನೆಗೆಯುತ್ತ ಬಂದಳು. “ಶಿವ ನೀನೇ ಏನಯ್ಯಾ?” ಅಂದಳು. ಅಷ್ಟಕ್ಕೇ ಈ ಶಿವನ ಒಳಚಡ್ಡಿ ಒದ್ದೆಯಾಯ್ತು ನೋಡಿ. ಇವನು ಹೆದರುತ್ತ “ದೇವೀ ನೀನ್ಯಾರು, ಎಲ್ಲಿಯವಳು ತಿಳಿಯಲಿಲ್ಲ” ಅಂದ. ಅದಕ್ಕವಳು “ಯಾಕೆ ಹಳೇ ದೋಸ್ತಿ ಮರೆತೆಯೇನಯ್ಯಾ? ಇವತ್ತು ಇಬ್ಬರೂ ಮಾಯೀಬೆಟ್ಟಕ್ಕೆ ಹೋಗೋದಲ್ಲವ? ನಿನ್ನವ್ವ ಕರೀತಿದಾಳೆ ಕಣೋ” ಅಂತಂದು ಗುಡ್ಡದಷ್ಟು ದೊಡ್ಡ ನಗೆ ನಕ್ಕು ಮಾಯವಾದಳು ನೋಡಿ. ಇವನು ಗಡಗಡ ನಡುಗುತ್ತ ನನ್ನ ಕೈಕಾಲುಕಟ್ಟಿಕೊಂಡು “ಅವಳ್ಯಾವಳೋ ಹಳೇ ಮಾರಿ ಕಣೇ ಆಟ ಕೆಡಿಸಿ ಬಿಡ್ತಾಳೆ. ವೇಷ ಬದಲಿಸೋಣ” ಅಂತ ಅಂಗಲಾಚಿದ. ನನಗೆ ಶಿವನ ಹಾಡು, ಮಾತು ಬರೋದಿಲ್ಲವೆಂದರೂ ಕೇಳಲಿಲ್ಲ. ನಾನೇ ಎಲ್ಲಾ ನೋಡಿಕೊಳ್ತೀನಿ ಅಂತ ಹೇಳಿ ಮಾತಾಡಲಿಕ್ಕೆ ನನಗೆ ಅವಕಾಶ ಕೊಡದೆ ಸಮಯವಾಯಿತೆಂದು ಅವಸರ ಮಾಡಿ ವೇಷಗಳನ್ನ ಅದಲಿಬದಲಿ ಮಾಡಿಯೇಬಿಟ್ಟ. ನಾನೂ ಒಪ್ಪಿಕೊಂಡು ಶಿವನ ವೇಷ ಕಟ್ಟಿದೆ. ನಾನು ಮಾಡಿದ ತಪ್ಪು ಆಮೇಲೆ ತಿಳಿಯಿತು. ಒಂದು ಧಡೂತಿ ರಾಕ್ಷಸಿ ದೂರದಲ್ಲಿ ಕುಂತಿತ್ತು. “ಸಾಯ್ ಶಿವನೇ” ಅಂತಂದು ಕೋಲು ಬೀಸಿ ನನ್ನ ಕಡೆ ಬಿಸಾಕಿದ್ದೇ, ಅದು ತಾಗಿ ಸತ್ತೇ ಬಿದ್ದೆ! (ಮದನತಿಲಕನನ್ನು ಒದೆಯುತ್ತ) ನನ್ನ ಕರ್ಮ; ಈ ಅಯೋಗ್ಯನಿಗಾಗಿ ನಾನು ಸಾಯಬೇಕಾಯ್ತು. ಸುಮ್ಮನೇ ಮಾರ್ಕಂಡೇಯನ ವೇಷದಲ್ಲಿ ಇದ್ದಿದ್ದರೆ ಜೀವಂತವಾಗಿದ್ದು ಈ ಮದರಂಗಿಯನ್ನು ಒಂದು ಕೈ ನೋಡಬಹುದಿತ್ತೆ!

ಸಂಜೀವಶಿವ : ಅಂದರೆ ನೀನು ಕಟ್ಟಬೇಕಾಗಿದ್ದ ವೇಷ ಅವಳು ಕಟ್ಟಿ ನಿನಗೆ ಬರಬೇಕಾದ ಸಾವನ್ನ ತಾನು ತಗೊಂಡ್ಲು ಅಂತಲ?

ಮಂಜರಿಯಹೆಣ : ಹಾಗೆ ಹೇಳಿ ಈ ಅಯೋಗ್ಯನಿಗೆ.

ಮದನತಿಲಕ : ಹಾಗಲ್ಲ ಅವಳ ಸಾವು ಹೀಗಾಗಬೇಕೆಂದು ಗ್ರಹಚಾರ ಗ್ರಂಥದಲ್ಲಿತ್ತಪ್ಪ.

ಮಂಜರಿಯ ಹೆಣ : ಮತ್ತೆ ಸುಳ್ಳು(ಒದೆಯುವಳು)

ಸಂಜೀವಶಿವ : ಈಕೆ ಯಾರು?

ಮದನತಿಲಕ : ಮದರಂಗಿ. ಸಹಾನುಭೂತಿ ಸೂಚಿಸಲಿಕ್ಕೆ ಬಂದಿದ್ದಾಲೆ. ಪಾಪ.
ಅಂದರೆ ಮಂಜರಿ ಸತ್ತುದರಿಂದ ನನಗೆ ದುಃಖ ಆಗಿಲ್ಲ ಅಂತ
ತಿಳಿಯಬೇಡ. ನೀನು ಬರುವ ಮುನ್ನ
ಬಿದ್ದು ಬಿದ್ದು ಅತ್ತೆ. ಬಿಕ್ಕಳಿಸಿ ಅತ್ತೆ
ದಿಂಡುರುಳಿ ಅತ್ತೆ. ಹಾಡಿಕೊಂಡತ್ತೆ.
ಅಲ್ಲವೇನೆ ಮದರಂಗಿ?

ಮಂಜರಿಯಹೆಣ : ಮತ್ತೆ ಸುಳ್ಳು.

ಮದನತಿಲಕ : ಯಾಕಯ್ಯ ಒದೀತಿ? ಮಾತಿನಲ್ಲಿ ನಂಬಿಕೆ ಬರಲಿಲ್ಲವ?

ಸಂಜೀವಶಿವ : ನಾನು ಒದೀಲಿಲ್ಲ ಕಣ್ಣಪ್ಪ, ನಿನ್ನ ಗ್ರಹಚಾರ ಒದೆಯುತ್ತಿದೆ!
(ಹೋಗುವನು)