(ಮದನತಿಲಕನ ಮನೆ, ಮದನತಿಲಕ ಮತ್ತು ಮಂಜರಿ.)

ಮಂಜರಿ : ನಿಜ ಹೇಳು, ನಿನ್ನ ಕನಸಿನಲ್ಲಿ ಯಾವಳೊಂದಿಗಿದ್ದೆ?

ಮದನತಿಲಕ : ಯಾರೂ ಇಲ್ಲವಲ್ಲ, ಇದ್ದಿದ್ದರೆ ನಿನ್ನ ಜೊತೆಗಿರಬೇಕು.

ಮಂಜರಿ : ನಿಜ ಬೊಗಳು; ನಿನ್ನ ಕನವರಿಕೆಯನ್ನೆಲ್ಲ ಕೇಳಿದ್ದೇನೆ.

ಮದನತಿಲಕ : ನನ್ನ ಮಾತು ಕೇಳು ಮಾರಾಯಳೇ. ಇಂದಿನ ನಾಟಕದ ತಯಾರಿ ಮಾಡಬೇಕು. ಮಾರ್ಕಂಡೇಯನ ಮಾತುಗಳನ್ನ ನೀನು ಉರುಹೊಡೆಯಬೇಕು. ದೀರ್ಘ ಆಲಾಪದ ನಂತರ ಒಂದು ಗಳಿಗೆ ಪದ ಇದೆ.

ಮಂಜರಿ : ನನ್ನ ಮಾತಿಗೆ ಮೊದಲು ಜವಾಬು ಕೊಡು. ನೀನು ಆ ಮುದಿ ಹೆಂಗಸು ಮದರಂಗಿ  ಜೊತೆ ಇರ‍್ಲಿಲ್ಲವ?

ಮದನತಿಲಕ : ಮದರಂಗಿ ಯಾರು?

ಮಂಜರಿ : ತೋಟದಲ್ಲಿ ಯಾರೂ ಇರೋದಿಲ್ಲಾಂತ ಅಲ್ಲಿಗೇ ಬರಹೇಳುತ್ತಿದ್ದೆ; ನಿನ್ನ ಕನವರಿಕೆಯಲ್ಲಿ.

ಮದನತಿಲಕ : ಇದು ನಿನ್ನ ಕನಸು ಮಾರಾಯಳೆ.

ಮಂಜರಿ : ನಿನ್ನ ಕನಸು ನಾನು ಹೇಳ್ತಿರೋದು. ನನ್ನ ಕನಸಾಗಿದ್ದರೆ ನಿನ್ನನ್ನ ಅಲ್ಲೇ ಒದೀತಿದ್ದೆ.

ಮದನತಿಲಕ : ಹೋಗಲಿ ಒಂದು ಸಲವಾದರೂ ನಿನ್ನ ಕನಸಿನಲ್ಲಿ ನನಗೆ ಪ್ರವೇಶ ಕೊಡು. ನಾನೆಂಥವನು ಅಂತ ನಿನಗೇ ಗೊತ್ತಾಗಿ ಬಿಡುತ್ತದೆ.

ಮಂಜರಿ : ನನಗೆ ನಿದ್ದೆ ಬಂದರಲ್ಲವೆ? ನೀನು ಯಾರ್ಯಾರನ್ನ ಕನಸಿಗೆ ಕರೆತಂದು ತಬ್ಬಿಕೊಂಡಿರ‍್ತೀಯೋ ಅಂತ ಕಾವಲುಕಾಯೋದೇ ನನ್ನ ಕೆಲಸ ಆಗಿದೆ. ಒಂದು ದಿನ ನಿನಗೇ ಗೊತ್ತಿಲ್ಲದ ಹಾಗೆ ನಿನ್ನ ಕನಸಿಗೆ ನುಗ್ಗಿ, ನೀನು ಯಾರೊಂದಿಗಿದ್ದೆ ಅಂತ ಪತ್ತೆ ಹಚ್ಚಿ, ಕಚ ಕಚ ಅವಳ ಕಿವಿ ಮತ್ತು ನಿನ್ನ ಮೂಗು ಕಚ್ಚದಿದ್ದರೆ ನನ್ನ ಹೆಸರು ಮಂಜರಿಯೇ ಅಲ್ಲ. ನೀನೊಬ್ಬ ಚಪಲಚಿತ್ತದ ಸ್ತ್ರೀಲಂಪಟ! ದೇವತ ಭೀತಿ ಇಲ್ಲದ ಠಕ್ಕ!

ಮದನತಿಲಕ : ನೀನು ಮುಟ್ಟಿದರೆ ಮುನಿಯಮ್ಮ, ಜಗಳಗಂಟಿ, ವಿಷಕಂಠಿ.

ಮಂಜರಿ : ಥೂ ನಾನಿನ್ನ ಜೊತೆ ಇರಲಾರೆ. ಇಗೋ ನಾನು ಹೊರಟೆ ತೌರಿಗೆ……

(ಹೊರಡುವಳು. ಸಂಜೀವಶಿವ ಬಂದುದನ್ನು ನೋಡಿ ಮನೆಯೊಳಕ್ಕೆ ಹೋಗುವಳು.)

ಮದನತಿಲಕ : ನೀನ್ಯಾವಾಗ ಬಂದೆ ವೈದ್ಯ ಮಹಾಶಯಾ?

ಸಂಜೀವಶಿವ : ಯಾವಾಗಲೋ ಬಂದು ನೀನಾಡೋ ಆಟ ನೋಡುತ್ತಿದ್ದೆ. ಈಕೆ…..

ಮದನತಿಲಕ : ನನ್ನ ಎಡಭಾಗ, ಅಂದರೆ ಅರ್ಧಾಂಗಿ.

ಸಂಜೀವಶಿವ : ಓಹೋ ಮದರಂಗಿ!

ಮದನತಿಲಕ : ಮದರಂಗಿ? ಯಾರವಳು?

ಸಂಜೀವಶಿವ : ಆ ದಿನ ಮದರಂಗಿಯ ಹೆಸರು ಹೇಳಿ ನನ್ನ ಬಳಿ ಮದ್ದು ತಗೊಂಡೆಯಲ್ಲವೆ?

ಮದನತಿಲಕ : ಮೆಲ್ಲಗೆ ಮಾತಾಡು. ನೀನು ಆ ಹಳೇ ಹೆಂಗಸಿನ ವಿಷಯ ಹೇಳಿದೆ ಅಲ್ಲವೆ? ಅದು ಹಳೇ ಕಥೆ ಮಾರಾಯಾ. ಆಗ ನನಗೂ ಪ್ರಾಯವಿರಲಿಲ್ಲ. ಮದರಂಗಿಯಂಥ ಮುದುಕಿಯ ಪ್ರೀತಿಯೇ ಅನುಗ್ರಹವಾಗಿತ್ತು. ಆಮೇಲೆ ನೀನು ದಯಮಾಡಿ ಕೊಟ್ಟ ಯೌವನದ ಮದ್ದು ತಗೊಂಡೆ ನೋಡು; ಹೋತಿನ ಪ್ರಾಯ ಬಂದು ಬಿಟ್ಟಿತಯ್ಯಾ ನನಗೆ! ನಿನ್ನ ಅದ್ಭುತ ಮದ್ದು ತಗೊಂಡ ಮೇಲೂ ಮುದುಕಿಯನ್ನ ಕಟ್ಟಿಕೊಂಡರೆ ನಿನ್ನಮದ್ದಿಗೇ ಅವಮಾನ ಅಂತ ಇವಳನ್ನ ಕಟ್ಟಿಕೊಂಡೆ.

ಸಂಜೀವಶಿವ : ಇವಳೆಲ್ಲಿ ಸಿಕ್ಕಳು?

ಮದನತಿಲಕ : ಮೊನ್ನೆ ಯಕ್ಷಗಾನ ಇತ್ತಲ್ಲ; ವಸ್ತ್ರಾಪಹರಣದ ಪ್ರಸಂಗ, ದುಶ್ಯಾಸನನ ವೇಷ ಕಟ್ಟಿದ್ದೆ. ನಾನು ರಭಸದಿಂದ ಸೀರೆ ಸೆಳೆಯುತ್ತಿದ್ದರೆ ಕೃಷ್ಣಾ ಕಾಪಾಡೆಂದು ದ್ರೌಪದಿ ಪದ ಒದರುತ್ತಿದ್ದರೆ, ಜನರೆಲ್ಲಾ ನನ್ನ ನೋಡಿ ಕೋಪದಲ್ಲಿ ಹಲ್ಲು ಕಡಿಯುತ್ತಿದ್ದರೆ ಇವಳೊಬ್ಬಳೇ ನನ್ನಕಡೆ ನೋಡಿ ಆನಂದದಿಂದ ನಗುತ್ತಿದ್ದಳಯ್ಯ! ಸಿಗಬಲ್ಲಳೇ ಎಂದು ನೋಡಿದರೆ-ಅವಳೇ ಕಣ್ಣು ಹೊಡೆದು ಸಿಕ್ಕೇಬಿಟ್ಟಳಯ್ಯಾ! ಇಂಥ ರಸಭರಿತ ಕಿತ್ತಳೆಹಣ್ಣು ಸಿಕ್ಕಮೇಲೆ ಮದರಂಗಿಯಂಥ ಸಿಪ್ಪೆ ಒಣಗಿ ರಸವಾರಿದ ಚಳ್ಳೆಹಣ್ಣು ಹ್ಯಾಗಯ್ಯಾ ತಿನ್ನೋದು?

ಸಂಜೀವಶಿವ : ಇವಳೊಂದಿಗೂ ಜಗಳಾಡ್ತ ಇದ್ದೆಯಲ್ಲ ಮಾರಾಯಾ?

ಮದನತಿಲಕ : ಅದು ಇನ್ನೊಂದು ಕಥೆ. ಮದರಂಗಿ ಸದಾ ಒಟಗುಡುತ್ತದಲ್ಲಾ ಅಂತ ಇದನ್ನ ಕಟ್ಟಿಕೊಂಡರೆ ಇದಿನ್ನೂ ವಾಚಾಳಿ,-ಇಲ್ಲಾ ನನಗೆ ಛೀಮಾರಿ ಹಾಕುತ್ತಾಳೆ, ಇಲ್ಲಾ ಶಾಪ ಹಾಕುತ್ತಾಳೆ, ಇಲ್ಲಾ ಬೈಯುತ್ತಾಳೆ, ಇಲ್ಲಾ ಒಟಗುಡುತ್ತಾಳೆ, ಇಲ್ಲಾ ಚಾಡಿ ಹೇಳುತ್ತಾಳೆ, ಅದೂ ಇಲ್ಲಾಂದರೆ ನನ್ನ ಕನವರಿಕೆಗಳನ್ನೆಲ್ಲ ಕದ್ದು ಕೇಳಿ ಬೆಕ್ಕಿನ ಹಾಗೆ ಜಗಳವಾಡುತ್ತಾ ರಾತ್ರಿ ಅನುಭವಿಸಿದ ದಾಂಪತ್ಯ ಸುಖವನ್ನೆಲ್ಲಾ ಹೀಗೆ ಹಗಲು ಹೊತ್ತು ವಾಂತಿ ಮಾಡಿಸುತ್ತಾಲೆ. ನನ್ನ ವಿಷಯ ಬಿಡು: ನೀನೇನು ಬಂದೆ ಈ ಕಡೆಗೆ? ಅದನ್ನ ಹೇಳು.

ಸಂಜೀವಶಿವ : ನಿನ್ನಿಂದ ತುರ್ತಾಗಿ ನನ್ನ ತಾಯಿಯ ಬಗ್ಗೆ ಒಂದು ಸತ್ಯ ತಿಳಿಯೋಣ ಅಂತ ಬಂದೆ.

ಮದನತಿಲಕ : ದಿನ ಬೆಳಗಾದರೆ ನೋಡುವ ತಾಯಿಯ ಸತ್ಯ ಮಗನಿಗೇ ಗೊತ್ತಿಲ್ಲವೆಂದರೆ ನಂಬುವ ಮಾತೆ? ವಿದೂಷಕನನ್ನೇ ನಗಿಸಲು ಸುರು ಮಾಡಿದಿಯಲ್ಲ ಸ್ವಾಮೀ.

ಸಂಜೀವಶಿವ : ಗಂಭೀರವಾಗಿ ಕೇಳುತ್ತಿದ್ದೇನೆ, ದಯಮಾಡಿ ಉತ್ತರ ಕೊಡು. ನೀನು ನಿನ್ನ ವೇಷಗಾರಿಕೆಯಿಂದ ಸಾವಿಗೇ ಚಳ್ಳೆಹಣ್ಣು ತಿನ್ನಿಸಿದೆಯಂತೆ ಹೌದೆ?

ಮದನತಿಲಕ : ಸಾವಿನ ಭಯದಲ್ಲಿ ಸಾವಿಗೆ ಗುರುತು ಸಿಗದಿರಲೆಂದು ನಾನು ದಿನಕ್ಕೊಂದು ವೇಷ ಮತ್ತು ಹೆಸರುಗಳನ್ನು ಬದಲು ಮಾಡುತ್ತೇನೆನ್ನುವುದು ನಿಜ. ನನ್ನ ಅಭಿನಯದಿಂದ ಮನುಷ್ಯರು ಮೋಸ ಹೋಗುತ್ತಾರೆಂಬುದೂ ನಿಜ. ಆದರಿವು ಮೂಢನಂಬಿಕೆಗಳೆಂದು ಎಲ್ಲರಿಗಿಂತ ಚೆನ್ನಾಗಿ ನನಗೇ ಗೊತ್ತು. ಯಾಕೆಂದರೆ ಅವು ನಿಜವಾದಲ್ಲಿ ಜಗತ್ತಿನಲ್ಲಿ ಯಾರೂ ಸಾಯುತ್ತಿರಲಿಲ್ಲ. ಎಲ್ಲರೂ ದಿನಕ್ಕೊಂದು ಹೆಸರು ವೇಷ ಬದಲಿಸಿಕೊಂಡು ಚಿರಂಜೀವಿಗಳಾಗುತ್ತಿದ್ದರು. ಆದರೆ ನಾನೊಂದು ಪ್ರಶ್ನೆ ಕೇಳುತ್ತೇನೆ. ನೀನದಕ್ಕೆ ಪ್ರಾಮಾಣಿಕವಾಗಿ ಉತ್ತರ ಕೊಟ್ಟರೆ ಅದೇ ನಿನಗೆ ದಾರಿದೀಪವಾಗಬಹುದು.

ಸಂಜೀವಶಿವ : ಕೇಳು.

ಮದನತಿಲಕ : ನಿನ್ನ ತಾಯಿ ಸಾವಿನ ಅಧಿದೇವತೆ ಶೆಟಿವಿ ತಾಯಿ ಇಲ್ಲದೆ ನಿನ್ನ ವೈದ್ಯವಿಲ್ಲವಂತೆ, ಹೌದೆ?

ಸಂಜೀವಶಿವ : ಹೌದು. ಆಕೆ ಅದೃಶ್ಯಳಾಗಿ ರೋಗಿಯ ಎಡಕ್ಕೆ ಅಥವಾ ಬಲಕ್ಕೆ ಪ್ರತ್ಯಕ್ಷಳಾಗುತ್ತಾಳೆ. ಬಲಕ್ಕಾದರೆ ವೈದ್ಯ ಮಾಡುತ್ತೇನೆ, ಎಡಕ್ಕಾದರೆ ಮಾಡಕೂಡದು. ಹಾಗೆಂದು ತಾಯಿ ನನಗೆ ವರ ಕೊಟ್ಟಿದ್ದಾಳೆ. ನನ್ನ ಯಶಸ್ಸಿನ ಗುಟ್ಟು ಇದೇ. ಈಗ ಮುಂದಿನ ನಿಜ ಕೇಳು: ಕಾಡಿನಲ್ಲಿ ನಾನು ರಾಜಕುಮಾರಿಯ ನಾಡಿ ನೋಡುವಾಗ ನನ್ನ ತಾಯಿ ಎಡಕ್ಕೆ ಪ್ರತ್ಯಕ್ಷಳಾಗಿ ರೋಗಿಯನ್ನು ಒಪ್ಪದಂತೆ ಸೂಚಿಸಿದ್ದಳು. ಆದರೂ ನಾನು ಮದ್ದು ಕೊಟ್ಟೆ. ಈಗವಳಿಗೆ ಕೋಪ ಬಂದಿದೆ. ನಾಳೆ ಅಸ್ತಮಾನ ಆಗುವುದರೊಳಗೆ ರಾಜಕುಮಾರಿಯ ಕತ್ತಿನಲ್ಲಿ ಕಟ್ಟಿರುವ ಮದ್ದಿನ ಬಳ್ಳಿಯನ್ನು ಬಿಚ್ಚಿಕೊಂಡು ಬಾ ಎಂದು ಕಳಿಸಿದ್ದಾಳೆ. ರಾಜಕುಮಾರಿ ಉಳಿಯಬೇಕು. ಈಗ ಉಪಾಯ ಹೇಳಬಲ್ಲೆಯಾ?

ಮದನತಿಲಕ : ನಿನ್ನ ಬಗೆಗೆ ನನ್ನ ಗೌರವ ಇಮ್ಮಡಿಯಾದುದನ್ನು ಹೇಳಲೇಬೇಕು. ಆದರೆ ನಿನ್ನ ತಾಯಿ ಹುನ್ನಾರಿನವಳು. ಎಲ್ಲಿ ಯಾವಾಗ ಹ್ಯಾಗೆ ಎದುರು ಬಂದಾಳೆಂದು ತಿಳಿಯದೆ ಅವಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಮಾರಾಯಾ. ಈ ತನಕ ಕೋಟಿ ಕೋಟಿ ಜೀವರಾಶಿಗಳ ಕೊಲೆ ಮಾಡಿದ್ದಾಳೆ. ಒಂದರ ಅಪಾದನೆಯಾದರೂ ಅವಳ ಮೇಲಿದೆಯೆ? ಮಾಯೀ ಬೆಟ್ಟದ ಗವಿಯಲ್ಲಿ ನಿನ್ನ ತಾಯಿ ತನ್ನ ಚಟುವಟಿಕೆಗಳಿಗೆ ನೆರವಾಗುವ ಅಂಧಮ್ ತಮಸ್ಸನ್ನು ಗುಟ್ಟಾಗಿ ಇಟ್ಟಿದ್ದಾಳೆಂದು ಹೇಳುತ್ತಾರೆ. ಆದರೆ….

ಸಂಜೀವಶಿವ : ಆದರೆ ಅದಕ್ಕಿಂತ ಹೆಚ್ಚಿಗೆ ಭ್ರಮಾತ್ಮಕವಾದ ಬೆಳಕಿನ ತಮಸ್ಸಿನಲ್ಲಿ ನಮ್ಮನ್ನಿಟ್ಟಿದ್ದಾಳೆ. ತಾಯಿಯ ಸಮೀಪದಲ್ಲಿದ್ದಾಗ ದುರ್ವಾಸನೆಯಿಂದ ನನ್ನ ಮೂಗು ಮತ್ತು ಉಸಿರು ಕಟ್ಟುತ್ತಿದ್ದವು. ಅದೆಲ್ಲ ನನ್ನ ಮದ್ದಿನದು ಮತ್ತು ಮನುಷ್ಯರ ರೋಗದ್ದೆಂದು ತಪ್ಪು ತಿಳಿದಿದ್ದೆ. ಅಲ್ಲ ಅದೆಲ್ಲ ಸಾವಿನ ವಾಸನೆಯೆಂದು ಈಗ ನಿಜ ತಿಳಿಯುತ್ತಿದೆ. ಮನುಷ್ಯ ತನಗಿರುವ ಒಂದೇ ಬದುಕನ್ನ ಎಷ್ಟೇ ದುಃಖಮಯ, -ಎಷ್ಟೇ ಅರ್ಥವಿಲ್ಲದ್ದು ಅಂತ ಅಂದು ಕೊಂಡರೂ ಈ ಪರಿ ಕೊಳಚೆ ಮಾಡಿಕೊಳ್ಳಲಾರ.

ಮದನತಿಲಕ : ನೋಡು ವೈದ್ಯ ಮಹಾಶಯಾ, ಬದುಕು ದುಃಖಮಯ ಅಂತ ಯಾರಿಗೆ ಗೊತ್ತಿಲ್ಲ? ಹಾಗಂತ ನಾವ್ಯಾರೂ ತಲೆಮೇಲೆ ಕೈಹೊತ್ತು ಕೂತಿಲ್ಲವಲ್ಲ. ನಮನಮಗೆ ಕಂಡ ಅರ್ಥಗಳನ್ನು ಪಡೆಯುತ್ತಲೇ ಇರುತ್ತೇವೆ. ಇಷ್ಟೆಲ್ಲ ನಾಟಕವಾಡಲು ನನಗೆ ಪ್ರೇರಣೆ ಕೊಡುವ ಶಕ್ತಿಯಾದರೂ ಯಾವುದು? ಖಂಡಿತ ಅರ್ಥವಿದೆಯೆಂಬ ನಂಬಿಕೆ; ಅಲ್ಲವೆ?

ಸಂಜೀವಶಿವ : ಈ ಪ್ರಪಂಚದಲ್ಲಿ ಅರ್ಥ ಇರೋದು ಮನುಷ್ಯನೊಬ್ಬನಿಗೇ, ಅದು ಸಿಕ್ಕೋದೂ ಅವನೊಬ್ಬನಿಗೇ.ಅದನ್ನೇ ಉಪಯೋಗಿಸಿಕೊಂಡು ತಾಯಿ ನಮ್ಮನ್ನಾಳುತ್ತಿದ್ದಾಳೆ. ನನಗೆ ಬೇಕಾದ್ದು ಅರ್ಥವಲ್ಲ ಸ್ವಾತಂತ್ರ್ಯ, ತಾಯಿಯಿಂದ ಸ್ವಾತಂತ್ರ್ಯ. ಈ ಬದುಕು ಬದುಕೋದಕ್ಕೆ ಯೋಗ್ಯವಾಗುವುದೇ ಸ್ವಾತಂತ್ರ್ಯದಿಂದ, ರಾಜಕುಮಾರಿಯ ಪ್ರೀತಿ ನನಗೆ ಸ್ವಾತಂತ್ರ್ಯದ ಮೊದಲ ಪಾಠ ಕಲಿಸಿಯಾಗಿದೆ. ನಾನೀಗ ಸ್ವತಂತ್ರವಾಗಿ ವೈದ್ಯವೃತ್ತಿಕೈಕೊಳ್ಳಬೇಕೆಂದಿದ್ದೇನೆ. ತಾಯಿ ರೋಗಿಯ ಎಡ ಬಲದಲ್ಲಿ ಪ್ರತ್ಯಕ್ಷಳಾಗಲಿ, ಬಿಡಲಿ, ನಾನು ನನ್ನ ಬಳಿ ಬರುವ ಎಲ್ಲ ರೋಗಿಗಳಿಗೂ ಮದ್ದು ಕೊಡುತ್ತೇನೆ. ಇದೆಲ್ಲ ಆಮೇಲೆ. ಈಗ ತುರ್ತಾಗಿ ರಾಜಕುಮಾರಿ ಉಳಿಯಬೇಕಾದ ಉಪಾಯ ಹೇಳಬಲ್ಲೆಯಾ?

ಮದನತಿಲಕ : ನಿನಗೆ ದೇವರಲ್ಲಿ ನಂಬಿಕೆ ಇದೆಯ?

ಸಂಜೀವಶಿವ : ಇದೆ.

ಮದನತಿಲಕ : ಹಾಗಿದ್ದರೆ ಕೇಳು: ರಾಜಕುಮಾರಿಯ ಜೀವ ಅಪಾಯದಲ್ಲಿರುವ ವಿಚಾರ ಮಹಾರಾಜರಿಗೆ ಗೊತ್ತಿಲ್ಲ. ಅಷ್ಟೇ ಅಲ್ಲ- ಅಪಾಯದಿಂದ ಪಾರಾದಳೆಂದೇ ಇಂದಿನ ನಾಟಕ ಏರ್ಪಡಿಸಿದ್ದಾರೆ. ಅವರಿಗೆ ಈ ವಿಚಾರ ಹೇಳಿ ಪ್ರಯೋಜನವೂ ಇಲ್ಲ. ಅವರು ರಾಜಕುಮಾರಿಯೊಂದಿಗೆ ನಾಟಕ ನೋಡುತ್ತಿರಲಿ-ಕಾಡಿನಲ್ಲಿರುವ ಚಂದ್ರಶೇಖರ ದೇವಾಲಯ ಜಾಗೃತ ಸ್ಥಳವೆಂದು ಖ್ಯಾತಿಯಿದೆ. ಅಲ್ಲಿಯ ಶಿವಲಿಂಗದಿಂದ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾಗಿ ಅನೇಕರಿಗೆ ದರ್ಶನ ಕೊಟ್ಟದ್ದಿದೆ. ಮಾರ್ಕಂಡೇಯ ಮುನಿಗೆ ಶಿವದರ್ಶನವಾಗಿ ಆಯುಷ್ಯವೃದ್ಧಿಯಾದದ್ದೂ ಇಲ್ಲಿಯೇ ಎಂದು ಹೇಳುತ್ತಾರೆ. ಮಾತ್ರವಲ್ಲ, ಹೀಗೆ ಶಿವದರ್ಶನ ಪಡೆದವರಲ್ಲಿ ನಿನ್ನ ತಂದೆಯೂ ಒಬ್ಬನಾಗಿದ್ದ. ನೀನ್ಯಾಕೆ ಅಲ್ಲಿಗೆ ಹೋಗಿ ಪ್ರಯತ್ನಿಸಬಾರದು? ಹ್ಯಾಗೂ ನಾಳೆ ಅಸ್ತಮಾನದವರೆಗೂ ಸಮಯವಿದೆ.

ಸಂಜೀವಶಿವ : ಹೌದು. ಹಾಗೇ ಮಾಡುವಾ. (ಹೊರಡುವನು)

* * *