(ರಾತ್ರಿ, ತಾಯಿ ಒಬ್ಬಳೇ ವೈದ್ಯಶಾಲೆಯಲ್ಲಿ ಕೂತಿದ್ದಾಳೆ. ಜಿಂಕೆಮರಿ ನೇತ್ರಾವತಿಯ ಹೆಣ ಒಂದು ಕಡೆ ಬಿದ್ದಿದೆ. ನಿದ್ರೆ ಬಾರದ ಸಂಜೀವಶಿವ ಅಲ್ಲಿಗೆ ಬರುತ್ತಾನೆ.)

ಸಂಜೀವಶಿವ : ಇಷ್ಟು ರಾತ್ರಿಯಲ್ಲಿ ಯಾರೂ ಎಚ್ಚರಿಲ್ಲ. ನೀನೂ
ಮಲಗಿರಬೇಕು ಅಂದುಕೊಂಡೆ ತಾಯೀ.

ತಾಯಿ : ಮಲಗುವಂಥ ನಿರುಮ್ಮಳ ಸ್ಥಿತಿ ನನಗಿಲ್ಲ ಮಗು.
ನನ್ನ ನೆಮ್ಮದಿ ಹಾಳಾಗಿದೆ.
ನಿನಗೂ ನಿದ್ದೆ ಬರಲಿಲ್ಲವೆ?

ಸಂಜೀವಶಿವ : ಮುದ್ದುಮರಿ ನೇತ್ರಾವತಿ ಹೆಣವಾಗಿ ಬಿದ್ದ ಪರಿಯ
ಹ್ಯಾಗೆ ಮರೆಯಲಿ ತಾಯಿ?
ನುಣ್ಣಾದ ಮೈತುಂಬ ಚಿನ್ನದ ಚುಕ್ಕೆ
ಆಕಾಶ ಗುರಿಯಾಗಿತ್ತು ಹರಿಣಾಕ್ಷಿಯ ತೆರೆದ ನೋಟಕ್ಕೆ.
ಹೊಟ್ಟೆಗೆ ಹೊಕ್ಕ ಬಾಣಕ್ಕೆ
ಹೊಕ್ಕಳು ಸಿಡಿದು ನೆತ್ತರಾಡಿ ನೆಲ ಒದ್ದೆಯಾಗಿತ್ತು.
ಬೇಟೆಗಾರನ ಕ್ರೌರ್ಯ ಅಕ್ಷಮ್ಯ ತಾಯಿ!

ತಾಯಿ : ನನಗೂ ಖೇದವಾಯಿತು ಮಗನೆ.

ಸಂಜೀವಶಿವ : ರಾಜಕುಮಾರಿಯ ಗವಿ ಪ್ರವೇಶ ನಿಷೇಧಿಸಿದ್ದಕ್ಕೂ
ನೇತ್ರಾವತಿಯ ಸಾವಿಗೂ ಸಂಬಂಧವುಂಟೆ ತಾಯಿ?

ತಾಯಿ : ಇದ್ದರೆ ಸಾವವರಿಗೆ ಜೀವಕೊಡುವ
ಇಲ್ಲವೆ ಜೀವರ ಜೀವ ತೆಗೆವ ಪ್ರಬುದ್ಧ ವೈದ್ಯ
ನಿನಗೆ ಗೊತ್ತಪ್ಪ.

ಸಂಜೀವಶಿವ : ನಿನ್ನ ಮಾರ್ಗದರ್ಶನ ಪಡೆಯದೆ
ರಾಜಕುಮಾರಿಗೆ ಮದ್ದು ಕೊಟ್ಟುದ್ದಕ್ಕೆ ಕೋಪವೆ ತಾಯಿ?

ತಾಯಿ : ಹಿಂದೆ ಸಣ್ಣವನಿದ್ದಾಗ
ಹೇಳಿದ ಹಿತನುಡಿಗಳ ಪಾಲಿಸುತ್ತಿದ್ದೆ.
ಇಗ ದೊಡ್ಡವನಾಗಿದ್ದೀಯಪ್ಪ, ತಾಯಿಯ ಕೀಳೆನಿಸಿ
ಅವಳ ಕಟ್ಟಳೆಗಳ ಕಡೆಗಣಿಸಿ ಸಂಭ್ರಮಿಸಬಲ್ಲೆ,
ಯಶಸ್ಸಿನ ಅಹಂಕಾರಗಳನ್ನು ಮೈತುಂಬ ಸುತ್ತಿಕೊಂಡ
ನಿನಗೆ ಮುದಿ ತಾಯಿಯ ಅಗತ್ಯವೇನಿದೆ?

ಸಂಜೀವಶಿವ : ನೋವಾಗುತ್ತದೆ ಎದೆಗೆ ನಿನ್ನಮಾತಿನಿಂದ,
ಮಾತಿನ ವ್ಯಂಗ್ಯದಿಂದ.
ನಿನ್ನ ಬಿಟ್ಟು ಮತ್ತಿನ್ನು ಹಿತವರುಂಟೆ ನನಗೆ?
ಸೆಳೆಯಲ್ಪಟ್ಟವಳಂತೆ ಗವಿಯೊಳಕ್ಕೆ ಓಡುತ್ತಿದ್ದ ರಾಜಕುಮಾರಿಯನ್ನ
ನಿಲ್ಲಿಸಲು ಅಡ್ಡಗಟ್ಟಿ ಕೈ ಚಾಚಿದಾಗ
ನಾಡೀ ಸಮೇತ ಅವಳ ಕೈ ಸಿಕ್ಕಿತು ತಾಯಿ.
ಕ್ಷಣಾರ್ಧದಲ್ಲಿ ಕವಿಗೆ ಕಾವ್ಯ ಹೊಳೆವಂತೆ
ಅವಳ ಇಡೀ ರೋಗದ ಗುಟ್ಟು ಹೊಳೆಯಿತು.
ಆ ಸಂದರ್ಭದಲ್ಲಿ
ಒಂದು ಬಗೆಯ ಉಲ್ಲಾಸ ಮತ್ತು ಅಹಂಕಾರ
ನನ್ನಲ್ಲಿ ಮೂಡಿದ್ದು ನಿಜ ತಾಯಿ,
ಆ ನಾಡಿ
ಬೇಸಿಗೆಯಲ್ಲಿ ತಾಸೆ ಬಾರಿಸಿದಂತೆ ಹೊಡೆಯುತ್ತಿತ್ತು.
ನಿನ್ನ ಆಶೀರ್ವಾದ ದೊಡ್ಡದು.
ಬಹಳ ದಿನಗಳಿಂದ ಚಿಕಿತ್ಸಾ ವಿಧಾನವೊಂದರ ಪ್ರಯೋಗಕ್ಕಾಗಿ
ಹಾತೋರೆಯುತ್ತಿದ್ದೆ.
ರೋಗಿಯನ್ನು ಪ್ರಸನ್ನಗೊಳಿಸಿ ತನ್ನದೇಹದ ಮೇಲೆ
ತಾನೇ ನಿಯಂತ್ರಣ ಸಾಧಿಸುವ ಹಾಗೆ ಮಾಡುವುದೇ
ಆ ವಿಧಾನ.
ಅದರಲ್ಲಾಕೆ ಎಷ್ಟು ಯಶಸ್ವಿಯಾದಳೆಂದರೆ
ನಾನು ನಾಡಿ ನೋಡುತ್ತಿರುವಂತೆಯೇ ಅವಳ ಜ್ವರ
ಹತೋಟಿಗೆ ಬಂದವು ತಾಯಿ!

ತಾಯಿ : ಸತ್ಯದಲ್ಲಿ ಸುಳ್ಳು ಬೆರೆಸಿ ಮಾತಾಡುತ್ತೀ ಮಗನೇ.
ಮರವೆಯ ಮಾತಾಡುತ್ತೀ,
ಮುದುಕಿ ಬಂದು ನನ್ನ ನೆನಪು ಕೊಡಲಿಲ್ಲವೇ?
ಜವಾಬು ಕೊಡು.

ಸಂಜೀವಶಿವ : ಹಾಗೆಲ್ಲ ಕೋಪ ಮಾಡಿಕೋಬೇಡ ತಾಯೀ,
ನೀನು ಕೋಪಗೊಂಡಾಗೆಲ್ಲ ನಾನು ಚಿಕ್ಕ ಬಾಲಕನಾಗಿ
ಆಜ್ಞಾಧಾರಕನಾಗಿರಬೇಕಂತ ಅನಿಸುತ್ತದೆ.
ನಿನ್ನನ್ನು ಆನಂದಗೊಳಿಸುವುದಕ್ಕೆ
ಏನೆಲ್ಲ ಆಟಗಳನ್ನ ಆಡೋಣವೆನಿಸುತ್ತದೆ.
ದಯವಿಟ್ಟು ಇವತ್ತಿನಿಂದ ನೀನು ಶೆಟಿವಿ ತಾಯಾಗೇ ಇರು.
ಒಮ್ಮೆ ದೊಡ್ಡವನಾದ ಮೇಲೆ ಮತ್ತೆ ಚಿಕ್ಕವನಾಗಲು ನನಗಿಷ್ಟವಿಲ್ಲ.

ತಾಯಿ : ನನ್ನ ಪ್ರಶ್ನೆಗಿದು ಉತ್ತರವಲ್ಲ ಮಗನೇ.
ಸುತ್ತಿಕೊಂಡ ಸುಳ್ಳುಗಳ ಬಿಚ್ಚಿ, ನಿಜದಲ್ಲಿ ನಿಂತುಕೊಂಡು
ಅದೇನಿದೆಯೋ ಒಪ್ಪಿಕೊ:
ರೋಗಿ ಬದುಕೋದು ತಾಯ ಮಾರ್ಗದರ್ಶನದಿಂದಲೋ
ನಿನ್ನ ಮದ್ದಿನಿಂದಲೋ? -ಎಂಬುದನ್ನ
ಒರೆಗೆ ಹಚ್ಚುವ ತವಕ ನಿನ್ನಲ್ಲಿರಲಿಲ್ಲವೆ?
ತಾಯಿಯ ನೆಪದ ಮಾರ್ಗದರ್ಶನಕ್ಕಿಂತ,
ನಿನ್ ಮದ್ದೇ ಮೇಲೆಂಬ ಒಳ ಅಹಂಕಾರ ನಿನ್ನಲ್ಲಿರಲಿಲ್ಲವೆ?

ಸಂಜೀವಶಿವ : ನನ್ನ ಹೃದಯದ ರಹಸ್ಯಗಳೆಲ್ಲ ನಿನಗಾಗಲೇ
ತಿಳಿದಿವೆ ತಾಯಿ, ನಿನ್ನಿಂದ ಮರೆಮಾಚುವುದೇನಿದೆ?
ಎರಡು ತಲೆಗಳ ಗಂಡಭೇರಡುಂಡನಾಗಿದ್ದೇನೆ; ಕ್ಷಮಿಸು ತಾಯಿ.
ಎರಡೂ ಮುಖಗಳನ್ನ ಮ್ಯಾಲೆತ್ತಿ
ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನೋಡುತ್ತ ನಿನ್ನನ್ನು
ಸಮಾಧಾನ ಪಡಿಸಲು ಇಲ್ಲವೆ ಗೆಲ್ಲಲು
ಹೊಂಚು ಹಾಕುತ್ತಿದ್ದೇನೆ.
ಒಂದು ಮುಖ ನಿನ್ನನ್ನು ವೈರಿ ಅನ್ನುತ್ತದೆ.
ಒಂದನ್ನ ಕಡಿದುಹಾಕಿ ಇನ್ನೊಂದನ್ನ ಇಟ್ಟುಕೊಳ್ಳಬೇಕೆಂಬುದು
ನಿನ್ನಾಸೆ. ನನ್ನ ದುರ್ದೈವವೆಂದರೆ
ಯಾವುದನ್ನ ಕಡಿದು ಹಾಕಿದರೂ ಇನ್ನೊಂದು ನಂಜೇರುತ್ತದೆ.
ಏನು ಮಾಡಲಿ ಹೇಳು ತಾಯಿ.

ತಾಯಿ : ತಾಯಿ ಮತ್ತು ವೈರಿಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕಾದವನು
ನೀನು ಮಗನೆ, ನಾನಲ್ಲ.
ನಿನ್ನ ಮದ್ದಿನ ಬಗ್ಗೆ ಒಂದು ವಿಷಯ ಹೇಳಬೇಕೆಂದಿದ್ದೆ;
ಜೀವರಿಗೆ ಮದ್ದು ನೆರವಾಗುತ್ತದೆ ನಿಜ.
ಆದರೆ ಅಂತಿಮ ತೀರ್ಮಾನ ಮದ್ದಿನದಲ್ಲ ಮಗನೇ.
ಮಾನವ ಅಹಂಕಾರದ ಮೇಲೆ ಸವಾರಿ ಮಾಡುತ್ತಿರುವುದರಿಂದ
ನಿನಗೆ ನಿಜ ಕಾಣಿಸುತ್ತಿಲ್ಲ.

ಸಂಜೀವಶಿವ : ಇಷ್ಟು ಆಳವಾಗಿ ನಾನು ಖಂಡಿತ ಯೋಚಿಸಲಿಲ್ಲ ತಾಯಿ.
ಅಕಾಲದಲ್ಲಿ ಒಬ್ಬರ ಜೀವ ಹೋಗಬಾರದೆಂಬುದೇ
ನನ್ನಕಾಳಜಿ, ಅದೇ ಪ್ರೇರಣೆಯಾಗಿ ನಿನ್ನ ಅಪ್ಪಣೆಯಿಲ್ಲದೆ
ರಾಜಕುಮಾರಿಗೆ ಮದ್ದು ಕೊಟ್ಟೆ.

ತಾಯಿ : ಒಬ್ಬರ ಕಾಲ ಅಕಾಲಗಳನ್ನು ನಿರ್ಧರಿಸುವಾತ ನೀನು ಯಾರು?
ನಿನ್ನ ಮದ್ದಿನಿಂದ ಅವಳ ದೈವ ನಿರ್ಣಯ ಮಾಡಬಲ್ಲೆಯಾ?

ಸಂಜೀವಶಿವ : ಹಾಗಾದರೆ ನನ್ನ ಮದ್ದಿಗೆ,
ಮಾನವ ಪ್ರಯತ್ನಗಳಿಗೆ ಬೆಲೆಯೇ ಇಲ್ಲವೆ ತಾಯಿ?

ತಾಯಿ : ಸತ್ಯ ತುಂಬ ಆಳದಲ್ಲಿರುವಂಥಾದ್ದು.
ಅಲ್ಲಿಯತನಕ ಮುಳುಗೇಳವಷ್ಟು ತಾಕತ್ತು
ನಿನ್ನ ತಿಳುವಳಿಕೆಗಿಲ್ಲ ಮಗನೇ.
ದುಃಖಕ್ಕಾಗಿ ದುಃಕಿಸುವುದು ದುರ್ಬಲ ಮನಸ್ಸಿನ ಲಕ್ಷಣ.
ಹಸಿರು ಹಸಿರಿನಂತೆ ಯಾಕಿದೆ?
ಮುದಕರು ಮುದುಕರಂತೆ ಯಾಕಿದ್ದಾರೆ?
ಮರಣ ಮರಣದಂತೆ, ಜನನ ಜನನದಂತೆ ಯಾಕಿದೆ
ಎಂದು ತರ್ಕ ಮಾಡಿದರೆ ಏನು ಫಲ ಸಿಕ್ಕೀತು?
ಜನ ದನ ಸಾಯವುದಿಲ್ಲವೆ?
ನಿನ್ನ ತಂದೆ ತಾಯಿ ಸಾಯಲಿಲ್ಲವೆ?
ರಾಜಕುಮಾರಿಯ ಸಾವಿನಲ್ಲಿ ವಿಶೇಷವೇನಿದೆ?
ಸಾವು ಜಗತ್ತಿನ ಸಾಮಾನ್ಯ ನಿಯಮ.
ಮನುಷ್ಯನೇ ಸಾಯುವುದುಂಟಂತೆ, ಇನ್ನು ಪ್ರೀತಿಯದೇನು?
ದೇಹ ಬೆಳೆದಂತೆ ಅದೂ ಹುಟ್ಟಿ ಸಾಯುತ್ತದೆ.
ಪಡ್ಡೆ ಹುಡುಗಿಯ ಹುಡುಗಾಟಿಕೆ ಮಾತಿಗೆ ಒಪ್ಪಿಕೊಂಡರೆ
ನಿನ್ನ ನೀನು ಕಡಿಮೆ  ಬೆಲೆಗೆ ಮಾರಿಕೊಂಡಂತೆ.

ಸಂಜೀವಶಿವ : ನಮ್ಮಿಬ್ಬರ ಘರ್ಷಣೆಯಲ್ಲಿ ರಾಜಕುಮಾರಿ ಸಾಯಬಾರದು.
ಇದೊಂದು ಬಾರಿ ನನ್ನ ಮದ್ದಿಗೆ ಮನ್ನಣೆ ಕೊಡು ತಾಯಿ.
ರಾಜಕುಮಾರಿ ಏನು ಮಾಡಿದ್ದರೂ ಆ ತಪ್ಪಿನ ಫಲ
ನನಗೆ ವರ್ಗಾವಣೆಯಾಗಲಿ.

ತಾಯಿ : ಅಗಾಧವಾದ ಶಕ್ತಿ ಕೊಟ್ಟಿದ್ದಾಲೆ ಅವಳು. ಮೊದಲಾದರೆ
ಒಂದು ಸಣ್ಣ ರೋಗದ ಜೊತೆ ಜಗಳವಾಡಲೂ ನಿನಗೆ
ನಿನ್ನ ತಾಯಿಯ ಸಹಾಯ ಬೇಕಿತ್ತು. ಈಗ ಅವಳನ್ನು
ನೋಡಿದ ಮೇಲೆ ನನ್ನ ಜೊತೆಗೇ ಜಗಳವಾಡುವ
ಶಕ್ತಿ ಬಂದಿದೆ!
ನಿನ್ನ ರೋಗಿ ರಾಜ್ಯದ ರಾಜಕುಮಾರಿ!
ನಿನಗವಳು ಬಂಗಾರ ಬಳ್ಳಿ, ವೈಭವದ ಪಲ್ಲಕ್ಕಿಯಲ್ಲಿ ಕೂರಿಸಿ
ಸಾವಿರ ಬಿರುದಾವಳಿ ಹೊಗಳಿಸಿ,
ಬಿಳಿಕುದುರೆ ಬಿಳಿಸತ್ತಿಗೆಯ ಬಹುಮಾನ ಕೊಡಬಲ್ಲಳು.
ನಾನೇನು ಕೊಡಬಲ್ಲೆ ನಿನಗೆ?
ಆದರೆ ನಿನಗವಳು ಆಯುಷ್ಯ ಭವಿಷ್ಯವ ಕೊಡಲಾರಳು ಮಗನೆ.

ಸಂಜೀವಶಿವ : ನನಗೇನು ಕಮ್ಮಿಯಾಗಿದೆ ತಾಯಿ?
ಗಾಳಿ ಇದೆ, ಬೆಳಕಿದೆ, ಮಳೆ ಇದೆ, ಹಸಿರಿದೆ.
ಇನ್ನೂ ಬೇಕಿದ್ದರೆ ಬೇಡಿದ್ದನ್ನು ಕೊಡುವ ತಾಯಿ ನೀನಿದ್ದೀ.

ತಾಯಿ : ನನ್ನ ಅಹಂಕಾರ ತೃಪ್ತಿಗೆಂದು ಶ್ರೋತೃಸುಖ ನುಡಿಯುತ್ತಿರುವಿ
ನನಗೆ ಅಹಂಕಾರಗಳಿಲ್ಲ ಮಗನೇ,
ನಿನ್ನ ಕವಿತ್ವವನ್ನು ವ್ಯರ್ಥ ವೆಚ್ಚ ಮಾಡಬೇಡ.
ನನ್ನ ಅಪ್ಪಣೆ ಇಲ್ಲದೆ ರಾಜಕುಮಾರಿಗೆ ಮದ್ದು ಕೊಟ್ಟು
ದೈವ ಸಂಕಲ್ಪಕ್ಕೆ ಸವಾಲು ಹಾಕಿರುವೆ;
ಮೊದಲದನ್ನ ಹಿಂತೆಗೆದುಕೊ.

ಸಂಜೀವಶಿವ : ರಾಜಕುಮಾರಿಯ ಜೀವ ನಿನ್ನ ಕೈಲಿದೆ.
ನನ್ನ ಭವಿಷ್ಯ ಅವಳ ಕೈಲಿದೆ! ವಿಚಿತ್ರವಲ್ಲವೆ?
ಅವಳ ಕಣ್ಣ ಬೆಳಕನ್ನ ನಂದಿಸಬೇಡ ತಾಯೀ.

ತಾಯಿ : ನಿನ್ನ ತುಟಿಗಳ ಮೂಲಕ
ಅವಳೇ ಮಾತಾಡುತ್ತಿರುವಂತಿದೆ.
ಇವೆಲ್ಲ ಪ್ರೇಮದಿಂದ ಸುರುವಾಗಿ ಹಾಸಿಗೆಯಲ್ಲಿ ಮುಗಿವ
ಕಥೆಗಳು ಮಗನೆ. ಕಾಮವೆಂಬುದು ಬೆಂಕಿ, ಬೆಳಕಲ್ಲ,
ಸುಡುತ್ತದೆ, ಬೆಳಕು ಕೊಡೋದಿಲ್ಲ.

ಸಂಜೀವಶಿವ : ನಾನಿನ್ನೂ ನನ್ನ ಕಥೆಯನ್ನೇ ಸುರು ಮಾಡಿಲ್ಲ.
ಆಗಲೇ ವಿಮರ್ಶೆ ಸುರು ಮಾಡಿಬಿಟ್ಟೆಯಲ್ಲ ತಾಯೀ!

ತಾಯಿ : ಪರಸ್ಪರ ವಂಚನೆ ಮಾಡಿಕೊಳ್ಳೋದು ಬೇಡ.
ನೋಡು ಮಗೂ,
ನಿನ್ನನ್ನ ಈತನಕ ರಕ್ಷಣೆ ಮಾಡಿದ ತಾಯಿ,
ಇವತ್ತು ನೀನು ನೋಡಿದ ಆ ಹುಡುಗಿಗಿಂತ
ಕಡಿಮೆಯೆಂದು ಒಮ್ಮೆ ಹೇಳಿಬಿಡು, ತೀರ್ಮಾನವಾಗಿ ಬಿಡಲಿ,
ಚೌಕಾಶಿ ಬೇಡ.

ಸಂಜೀವಶಿವ : ಏನು ಮಾತು ತಾಯಿ! ತಾಯಿ ವಿನಾ ಮಗನುಂಟೆ?
ಇಷ್ಟು ವರ್ಷಗಳ ತರುವಾಯ ಪ್ರಥಮ ಬಾರಿಗೆ
ತಾಯಿಯನ್ನು ನೋಡುತ್ತಿದ್ದೇನೆಂದು ಅನಿಸುತ್ತದೆ!

ತಾಯಿ : ಅಂದರೆ ಇಷ್ಟು ವರ್ಷ ತಬ್ಬಲಿಯಾಗಿದ್ದೆಯಾ ಮೂರ್ಖಾ?

ಸಂಜೀವಶಿವ : (ಉಕ್ಕಿಬಂದ ದುಃಖದಿಂದ) ನನಗೊಬ್ಬ ತಾಯಿ ಇದ್ದಳು, ಪ್ರೀತಿಸುತ್ತಿದ್ದಳು
ಅಕ್ಕರೆ ಮಾಡುತ್ತಿದ್ದಳು. ಗಿಡ ಮರ ಹಕ್ಕಿಗಳ ಕೊರಳಿನಿಂದ
ಜೋಗುಳ ಹಾಡುತ್ತಿದ್ದಳು.
ಆಕಾಶದಲ್ಲಿ ಬಣ್ಣಗಳ ಎರಚಿ ಚಿತ್ರ ಬಿಡಿಸುತ್ತಿದ್ದಳು.
ಈಗ ಅವಳೆಲ್ಲಿದ್ದಾಳೆ?

ತಾಯಿ : ನಿನ್ನ ತಾಯಿ ಕರುಳಿಲ್ಲದ ಕೊರಡು ಅಂತ ತಿಳಿಯೋದಕ್ಕೆ
ಇಷ್ಟೊಂದು ಶ್ರಮ ಪಡಬೇಕಾಯಿತೇ ನೀನು?
ಕೇಳಿದ್ದರೆ ನಾನೇ ಹೇಳುತ್ತಿದ್ದೆ.
ಅಷ್ಟೂ ಹೇಳದವಳು ತಾಯಿ ಹ್ಯಾಗಾದಾಳು?
ಕರುಳಿಲ್ಲದ ಬರೀ ಮೂಳೆ ಕಣಪ್ಪ ನಾನು!

ಸಂಜೀವಶಿವ : ನನ್ನ ಸಂತೋಷಗಳೆಲ್ಲ ಖಾಲಿ ಆದವು ತಾಯಿ.

ತಾಯಿ : ಅವಿನ್ನೂ ನಿನ್ನ ಮುಷ್ಟಿಯಲ್ಲೇ ಇವೆ. ಮುಷ್ಟಿ ಬಿಚ್ಚಿ
ನೀನವನ್ನು ನೋಡಬೇಕಷ್ಟೆ. ಹೊಸ ಯೌವನ ಇದೆ.
ಲೋಕದಲ್ಲಿ ಸಾವಿರಾರು ಚೆಲುವೆಯರಿದ್ದಾರೆ.
ಮೊದಲು ಹೋಗು.
ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಬಾ.

ಸಂಜೀವಶಿವ : ಅಂದರೆ?

ತಾಯಿ : ನಾಡಿದ್ದು ಅಮವಾಸ್ಯೆಯ ಅಸ್ತಮಾನ ಆಗೋದರೊಳಗೆ
ರಾಜಕುಮಾರಿಯ ಕತ್ತಿನಲ್ಲಿ ನೀನು ಕಟ್ಟಿರುವ
ಮದ್ದಿನ ಬಳ್ಳಿಯನ್ನು ಕಿತ್ತುಕೊಂಡು ಬಾ.

ಸಂಜೀವಶಿವ : ತಪ್ಪಿದರೆ?

ತಾಯಿ : (ಕೋಪದಿಂದ) ಧಡ್ಡತನದ ಬಗ್ಗೆ ಛಲ ಹಿಡಿದವರುಂಟೆ? ತಪ್ಪಿದರೆ
ಅವಳು ಏಕ ಕಾಲಕ್ಕೆ ಇಬ್ಬರನ್ನು ಮದುವೆಯಾಗುತ್ತಾಳೆ;
ಒಂದು ನಿನ್ನನ್ನು, ಇನ್ನೊಂದು ನಿನ್ನ ಜೊತೆ ಸಾವನ್ನು.
ಮದುವೆ ಮಂಗಲ ಮತ್ತು ಅವಳ ಸಾವಿನ
ನಯನ ಮನೋಹರ ದೃಶ್ಯವನ್ನ
ನೀನು ನೋಡದಿರಲಿ ಎಂಬುದಷ್ಟೇ ನನ್ನ ಆಸೆ.
ಗಿರಿಮಲ್ಲಿಗೆ-

ಗಿರಿಮಲ್ಲಿಗೆ : ತಾಯಿ.

ತಾಯಿ : ಸತ್ತ ನೇತ್ರಾವತಿಯ ಹೊರಕ್ಕೆಸೆದು ಬರಬಾರದೆ? (ತಾಯಿ ಒಳಕ್ಕೆ ಹೋಗುವಳು. ಸಂಜೀವಶಿವ ತಬ್ಬಿಬ್ಬಾಗಿ ನಿಂತಿದ್ದಾಗ ಜಿಂಕೆಯ ಶವವನ್ನು ಗಿರಿಮಲ್ಲಿಗೆ ಹೊರಕ್ಕೆಸೆಯಲು ಎಳೆದುಕೊಂಡು ಹೊರಡುವಳು.)