(ಸಂಜೀವಶಿವನ ವೈದ್ಯಶಾಲೆ, ಜಿಂಕೆ ನೇತ್ರಾವತಿ ಎಲ್ಲೆಂದರಲ್ಲಿ ಅಡ್ಡಾಡುತ್ತಿದೆ. ಮದನತಿಲಕ ಎದೆ ಹಿಡಿದುಕೊಂಡು ನರಳುತ್ತ ಒಂದು ಕಡೆ ಗೋಡೆಗೊರಗಿದ್ದಾನೆ. ಇನ್ನೊಂದು ಕಡೆ ಹುಡುಗನೊಬ್ಬನನ್ನು ತೊಡೆ ಮೇಲೆ ಚೆಲ್ಲಿಕೊಂಡು ಚಿಂತೆಯಲ್ಲಿ ಒಬ್ಬ ಹೆಣ್ಣು ಮಗಳು ಕೂತಿದ್ದಾಲೆ. ಮುದಿಮಾರ ಹೊಟ್ಟೆ ಹಿಡಿದುಕೊಂಡು ಮಧ್ಯೆ ಕೂತಿದ್ದಾನೆ. ಮದನತಿಲಕನನ್ನು ನೋಡುತ್ತಿದ್ದಂತೆ ಗುರುತು ಸಿಕ್ಕು ತನ್ನ ನೋವನ್ನು ಮರೆತು ಅವನ ಬಳಿ ಬರುತ್ತಾನೆ.)

ಮಾರ : (ನಗುತ್ತ) ನೀನು ಅರಮನೆ ಹಾಸ್ಯಗಾರ ನಕಲಿ ಶ್ಯಾಮ ಅಲ್ಲವ?

ಮದನ ತಿಲಕ : ಹೌದು. ಎದೆ ನೋವಿನಿಂದ ಸಾಯ್ತಾ ಇದ್ದೀನಿ. ನನ್ನ ನೋಡಿ ನಗುತ್ತೀಯಲ್ಲ ಮಾರಾಯಾ!

ಮಾರ : ನನಗೂ ಹೊಟ್ಟೆನೋವು ಹಾಸ್ಯಗಾರಪ್ಪ, ಆದರೂ ನಿನ್ನ ನೋಡಿ ನಗೆ ಬಂತು. ಆ ದಿನ ನೀನು ಶಿವರಾತ್ರಿ ಶಿವನ ವೇಷ ಕಟ್ಟಿ ಕುಣಿದೆ ನೋಡು; ನಾವೆಲ್ಲ ಶಿವನ ಬಿಟ್ಟು ನಿನ್ನ ಪಾದಾನೇ ಹಿಡೀಲಿಲ್ಲವೇ? ಸಾಮಾನ್ಯನ ನೀನು? ಅದು ನೆನಪಾದಾಗಲೆಲ್ಲಾ ನಗೆ ಬರುತ್ತದೆ!

ಮದನ ತಿಲಕ : ಅದಾಗಿ ಆಗಲೇ ಹತ್ತಾರು ವರ್ಷ ಆಯಿತಲ್ಲ ಮಾರಾಯಾ, ಆಗಿ ನಿಂದಲೂ ಹೀಗೇ ನಗುತ್ತಿದ್ದೀಯಾ?

ಮಾರ : ಓಹೋ! ಅದೆಲ್ಲ ನಿನ್ನೆ ನಡೆದಹಾಗಿದೆ; ಮರೆಯೋದಕ್ಕಾಗುತ್ತದ? ಶಿವನನ್ನೇ ನೋಡಿ ನಗೋಭಂ ನೀನು! ನಿನಗೂ ಎದೆನೋವೆಂದರೆ ನಂಬಬೌದ ಶಿವ? ಈಗೇನು ರೋಗಿಯ ವೇಷ ಕಟ್ಟಿದ್ದೀಯೊ? ಇಲ್ಲಾ ರೋಗ ಬಂದಿದೆಯೊ?

ಮದನ ತಿಲಕ : ಎದೆನೋವು ಮಾರಾಯಾ, ಎದೆನೋವು! ಎದೆ ಅಂಬೋದು ಡೊಳ್ಳಿನ ಹಾಗೆ ಬಡ್ಕೋತಿದೆ. ಏನು ಹೇಳಲಪ್ಪ ನಿನಗೆ!

ಮಾರ : ಅಗೋ ವೈದ್ಯ ಬಂದ, ಅವನ ಮುಂದಾದರೂ ನಿಜ ಹೇಳಪ್ಪ.

(ಸಂಜೀವಶಿವ ಬರುವನು)

ಮದನ ತಿಲಕ : ಸ್ವಾಮೀ ವೈದ್ಯ ಮಹಾಶಯಾ, ಎದೆಯೊಳಗೆ ಸಾವು ಬೊಬ್ಬೆ ಹೊಡೀತಿದೆ. ಒಂದು ಕ್ಷಣ ತಡ ಮಾಡಿದರೂ ಆಮೇಲೆ ನೀನೇ ಪಶ್ಚಾತ್ತಾಪ ಪಡ್ತೀಯ. ಬೇಗ ಬಾಪ್ಪಾ….

ಹೆಂಗಸು : ಇರೋ ಒಬ್ಬ ಮಗನನ್ನಾದರೂ ಬದುಕಿಸಿಕೊಡು ನನ್ನಪ್ಪಾ,….

ಸಂಜೀವಶಿವ : (ಹುಡುಗನ ಬಳಿಗೆ ಹೋಗುತ್ತ) ಯಾವಾಗಿನಿಂದ ಹೀಗೆ ಸೆಟೆದು ಕೊಂಡಿದ್ದಾನೆ?

ಹೆಂಗಸು : ಎರಡು ತಾಸಾಯಿತು. ಜೀವ ಇನ್ನೂ ಕುಟುಕುಟು ಅಂತಿದೆ. ನೀನೊಮ್ಮೆ ನಾಡಿ ಹಿಡಿದು ನೋಡಿದರೆ ಸಾಕು, ಬದುಕುತ್ತಾನೆ ಅಂತಾರೆ. ಬೇಗ ನಾಡಿ ಹಿಡಿ ನನ್ನಪ್ಪಾ.

ಮಾರ : ಬಿಸಿಲಲ್ಲಿ ಅಲೆದಾಡಿದನ?

ಹೆಂಗಸು : ಬೆಟ್ಟದ ಮಾಯೀ ಗವಿಯ ಕಡೆ ಹೋಗಿದ್ದವನು ಮನೆಗೆ ಬಂದದ್ದೇ ಮಲಗಿಬಿಟ್ಟ ನನ್ನಪ್ಪ.

ಮಾರ : ಅಲ್ಲಗ್ಯಾಕವ್ವ ಬಿಟ್ಟಿದ್ದೆ? ಗವಿಯೊಳಕ್ಕೆ ಹೊಕ್ಕವರು ಹೊರಗೆ ಬರೋದಿಲ್ಲಾ ಅಂತ ಗೊತ್ತಿಲ್ಲವ ನಿನಗೆ? ಅಗೊ ಬಂತು ಬಂತು!

(ಒಮ್ಮೆಲೇ ಮಾರ ದೇವರನ್ನು ಕಂಡ ಹಾಗೆ ಭಯ ಭಕ್ತಿಯಿಂದ ಕಣ್ಣಗಲಿಸಿ ಎದುರು ನೋಡುತ್ತ)

ಅಗೋ ಬಂತು
ದಂಡಿ ಮಾರಮ್ಮನ ಸವಾರಿ ಬಂತು!
ಹಲ್ಲು ಕಿರಿವ ತಲೆಬುರಡೆ ಅಸ್ಥಿಪಂಜರ ವೇಷವಾಗಿ
ಬಿಜು ಮಾಡಿದಳು ತಾಯಿ ಉಘೆ ಉಘೇ!

(ಶೆಟಿವಿ ತಾಯಿ ಬರುವಳು. ಮಾರನಿಗೆ ತಾಯಿ ಕಾಣಿಸಿದ್ದು ಸಂಜೀವನಿಗೆ ಆಶ್ಚರ್ಯವಾಗಿದೆ. ಮಾರಾ ತಾಯಿಯನ್ನು ನೋಡಿ ಗಾಬರಿಗೊಳ್ಳುವನು. ತಾಯಿ ಸಂಜೀವಶಿವ ಮತ್ತು ಮಾರ ಇಬ್ಬರ ಹೊರತು ಬೇರೆಯವರಿಗೆ ಕಾಣಿಸುವುದಿಲ್ಲ. ಆದರೆ ಇವರಿಬ್ಬರ ಮುಖದಲ್ಲಾದ ಬದಲಾವಣೆಯನ್ನು ಮದನತಿಲಕ ಗಮನಿಸುವನು. ಶೆಟಿವಿತಾಯಿ ನಗುತ್ತ ಮಾರನಿದ್ದಲ್ಲಿಗೆ ಬಂದು ಅವನ ಬಲಕ್ಕೆ ನಿಲ್ಲುವಳು. ಸಂಜೀವ ಶಿವ ಓಡಿ ಬಂದು ಮಾರನ ನಾಡಿ ಮಿಡಿತ ನೋಡತೊಡಗುವನು. ತಾಯಿ ಅಲ್ಲಿ ನಿಂತಿರುವ ತನಕ ನೋಡಿಮದ್ದು ಕೊಡುವಾ, ವಾಸಿಯಾಗುತ್ತದೆಎಂದು ಹೇಳುವನು. ಆಮೇಲೆ ತಾಯಿ ಮದನ ತಿಲಕನಲ್ಲಿಗೆ ಹೋಗಿ ಅವನ ಬಲಕ್ಕೆ ನಿಲ್ಲುವಳು. ಸಂಜೀವ ಶಿವ ಅಲ್ಲಿಗೆ ಹೋಗಿ ಮದನತಿಲಕನ ನಾಡಿ ನೋಡಿ ಮದ್ದು ಕೊಡುವಾ ಸರಿ ಹೋಗುತ್ತದೆ“-ಎನ್ನುವನು. ಈಗ ಸಂಜೀವಶಿವ ತಾಯಿಗೆ ಹುಡುಗನನ್ನು ತೋರಿಸುವನು. ತಾಯಿ ಹುಡುಗ ಬಿದ್ದಲ್ಲಿಗೆ ಹೋಗಿ ಅವನ ಎಡಗಡೆ ನಿಲ್ಲುವಳು. ಸಂಜೀವಶಿವ ಖಿನ್ನನಾಗುವನು.)

ಸಂಜೀವಶಿವ : ಕಾಲ ಮೀರಿದೆ ತಾಯಿ.

ಮಾರ : ನನ್ನಂಥ ಮುದುಕರು  ಬದುಕಿದರೆ ಚಂದವೆ? ಈ ಕಂದ ಬದುಕಬೇಕು ನನ್ನಪ್ಪ! (ತಾಯಿ ಮಾಯವಾಗುವಳು) ಶಿವ ಶಿವಾ!

ಹೆಂಗಸು : ಇವನೊಬ್ಬನೇ ನನಗಿರೋ ಆಧಾರ ನನ್ನಪ್ಪಾ.

ಮಾರ : ನಮ್ಮಂಥ ಮುದಿಗೊಡ್ಡುಗಳಿಗೆ ಆದ ಹಾಗೆ ನಿನ್ನೆ ಮಗನಿಗೆ ತಾಯ ಕೃಪೆ ಒದಗಲಿಲ್ಲಮ್ಮ! ಹೊರಡು ಇನ್ನೇನೂ ಮಾಡಲಾಗುವುದಿಲ್ಲ.

ಮದನತಿಲಕ : ಹೌದಯ್ಯ ಇದನ್ನು ಹೇಳಬೇಕಾದವನು ವೈದ್ಯನಲ್ಲವೆ?

ಮಾರ : ಅವನಾದರೂ ಏನು ಹೇಳಿಯಾನು ಹಾಸ್ಯಗಾರಪ್ಪ? ಮಗುವನ್ನು ಬದುಕಿಸಬಲ್ಲನ? ನೀನೇ ಹೇಳು.

ಹೆಂಗಸು : ನನ್ನಪ್ಪಾ….

ಸಂಜೀವಶಿವ : ಆಗಲೇ ಹೇಳಿದೆನಲ್ಲಮ್ಮ ನಾನೇನೂ ಮಾಡಲಾರೆ. ತಗೊಂಡ್ಹೋಗು.

ಮಾರ : ನೀನು ಅಳೋವಷ್ಟು ಅತ್ತು ಎದೆ ಹಗುರು ಮಾಡಿಕೊ. ಅಷ್ಟರಲ್ಲಿ ನಾನೂ ಗೋರಿ ತೋಡಿರ‍್ತೀನಿ. (ಕಣ್ಣೀರು ಸುರಿಸುತ್ತ) ಮಕ್ಕಳಿಗಾಗಿ ಗೋರಿ ತೋಡು ವಂಥ ಹೀನ ಕೆಲಸ ಇನ್ನೊಂದಿಲ್ಲ. ನಡಿಯಮ್ಮ ಹೋಗೋಣ. ತಾಯಿ ಆ ಕಂದನ್ನ ಕಾಪಾಡಿದ್ದರೆ ಚೆನ್ನಾಗಿತ್ತಪ್ಪ (ಹೊರಡುವನು)

ಸಂಜೀವಶಿವ : (ಮಾರನಿಗೆ) ಮದ್ದು ತಗೊಂಡು ಹೋಗು.

ಮಾರ : ಮಗುವಿನ ಹೆಣಕ್ಕೆ ತಡವಾಗಬಾರದು. ತಾಯಿಯ ಅಪ್ಪಣೆ ಆಯ್ತಲ್ಲ, ನಾರೋ ಬೇರೋ ಕುದಿಸಿ ಕುಡೀತೀನಿ ಬಿಡಪ್ಪ.

(ಹೋಗುವನು. ಜೊತೆಗೆ ಹೆಂಗಸೂ ರೋದಿಸುತ್ತಾ ಮಗುವನ್ನು ಎತ್ತಿಕೊಂಡು ಹೋಗುವಳು. ಸಂಜೀವಶಿವ ಅವಮಾನದಿಂದ ಖಿನ್ನನಾಗಿದ್ದಾನೆ. ಮದನ ತಿಲಕ ಇದನ್ನು ಗಮನಿಸಿದ್ದಾನೆ.)

ಮದನ ತಿಲಕ : ಶಿವನಾಣೆ ಮಾರಾಯಾ, ನೀನು ನಾಡಿ ಹಿಡಿದದ್ದೇ ನನಗೆ ಗೊತ್ತಾಗಿ ಬಿಟ್ಟಿತು. ರೋಗ ವಾಸಿಯಾಯ್ತೆಂದು. ಇಕಾ ನೋಡು: ಹೃದಯ ಈಗ ಎಷ್ಟು ಹಗುರಾಗಿದೆಯೆಂದರೆ ನೀನು ಸಮ್ಮತಿಸಿದರೆ ಒಂದ ಪದ ಹಾಡೋಣ ಅಂತ ಇದ್ದೀನಿ.

ಸಂಜೀವಶಿವ : ದಯಮಾಡಿ ಬೇಡ ಅಜ್ಜ. ಮದ್ದರೆದು ಕೊಡೋತನಕ ಸುಮ್ಮನಿರು.

ಮದನ ತಿಲಕ : ನಾನು ಸುಳ್ಳು ಹೇಳಲಿಲ್ಲ. ವೈದ್ಯ ಮಹಾಶಯ. ನಿಜವಾಗಿ ನೀನು ಅವಕಾಶ ಕೊಡೋದಾದರೆ ನಾಲ್ಕು ಹೆಜ್ಜೆ  ಕುಣಿದಾಡುವಷ್ಟು ಉಲ್ಲಾಸವಾಗಿದೆ ನನಗೆ. ಕುಣಿದಾಡಲ?

ಸಂಜೀವಶಿವ : (ಮದ್ದರೆಯುತ್ತ) ಎಲಾ ಮುದುಕ, ಏನಾಗಿದೆ ನಿನಗೆ?

ಮದನ ತಿಲಕ : ಹೇಳಿದೆನಲ್ಲಪ್ಪ, ಬದುಕಿದೆ ಅಂತ.

ಸಂಜೀವಶಿವ : ಭಲೇ ಮುದುಕ ನೀನು!

ಮದನ ತಿಲಕ : ಅದ್ಯಾಕಪ್ಪ ಮುದುಕ ಮುದುಕ ಅಂತೀ ನನಗೆ? ಅಷ್ಟೊಂದು ವಯಸ್ಸಾದವನ ಹಾಗಿದ್ದೀನ ನಾನು? ಏನೋ ಎದೆನೋವಿತ್ತು, ಸ್ವಲ್ಪ ಸೋತಿದ್ದೆ. ಈಗ ನೋಡು:

ಸಂಜೀವಶಿವ : ಎಷ್ಟು ವಯಸ್ಸು ನಿನಗೆ?

ಮದನ ತಿಲಕ : ವಯಸ್ಸು ಅಂದೆಯಾ ತಮ್ಮಾ? ಈ ದೇಹಕ್ಕೆ ಎಪ್ಪತ್ತೋ ಎಂಬತ್ತೋ ಆಗಿರಬಹುದು. ತನ್ನ ಭಾರ ತಾನೇ ಹೊತ್ತು ಅಡ್ಡಾಡ್ತದೆ. ದಿನಾ ಬೆಳಿಗ್ಗೆದ್ದರೆ ಹುಡುಗಿಯರ ಕನಸಿನಿಂದ ಭಾರವಾಗಿರ‍್ತದೆ. ಮೊನ್ನೆ ಮೊನ್ನೆ ಒಂದು ಹುಡುಗೀನ್ನೋಡಿ ಬಂದೆ. ಅವಳ ಬಗ್ಗೆ ಒಂದು ಪದ ಹಾಡಲಾ?

ಸಂಜೀವಶಿವ : ಎಲಾ ಇವನ! ಮದ್ದರೆದು ಕೊಡ್ತೀನಿರಪ್ಪ.

ಮದನ ತಿಲಕ : (ಮೆಲ್ಲಗೆ ಕಿವಿಯಲ್ಲಿ) ಹಾಗೆಯೇ ನನಗೆ ಯೌವನ ಎಡಪ್ರಾಯ ವೃದ್ಧಿಯಾಗುವ ಮದ್ದೇನಾದರೂ ಇದ್ದರೆ ಕೊಡಪ್ಪ; ಹೊಸ ಹುಡಿಗೀನ್ನ ಕಟ್ಟಿಕೊಂಡಿದ್ದೇನೆ.

ಸಂಜೀವಶಿವ : ಹಾಗೋ? ಅದನ್ನೂ ಕೊಡ್ತೀನಿರು.

ಮದನ ತಿಲಕ : ಹಾಗಿದ್ದರೆ, ಅಲ್ಲೀತನಕ ನೀನು ಕ್ಷಮಿಸೋದಾದರೆ-ಚಾಡಿ ಹೇಳಿ ಅಭ್ಯಾಸವಿದೆ ನನಗೆ, ಹೇಳಿದರೆ ನಿಂದೇನೂ ತಕರಾರಿಲ್ಲ ತಾನೆ?

ಸಂಜೀವಶಿವ : ನೀನು ಕ್ಷಮಿಸೋದಾದರೆ ಚಾಡಿ ಕೇಳಿ ಅಭ್ಯಾಸವಿಲ್ಲ ನನಗೆ. ಹೇಲಬೇಡ ಅಂದರೆ ನಿಂದೇನೂ ತಕರಾರಿಲ್ಲ ತಾನೆ?

ಮದನ ತಿಲಕ : ಛೇ! ಚಾಡಿ ಹೇಳಕೇಳುವ ಅಭ್ಯಾಸ ನಿನಗಿರಲೇಬೇಕು, ನನ್ನ ಹಾಗೆ. ಇಲ್ಲದಿದ್ದರೆ ನನ್ನ ಪ್ರಪಂಚ ಜ್ಞಾನವೇ ಹುಸಿ ಅಂದೇನು.

ಸಂಜೀವಶಿವ : ನಿನಗೇನೋ ಸರಿ.ನನಗೂ ಆ ಅಭ್ಯಾಸ ಇದೆ ಅಂತ ನಿನಗ್ಯಾಕನಿಸ್ತು?

ಮದನ ತಿಲಕ : ನಿನಗೂ ನನ್ನ ಹಾಗೆ ಕಿವಿ ಬಾಯಿ ದೊಡ್ಡವಾಗಿರೋದರಿಂದ.

ಸಂಜೀವಶಿವ : ಆಯ್ತು, ಏನೀವಾಗ?

ಮದನ ತಿಲಕ : ಯಾರ ಬಗ್ಗೆ ಸುರು ಮಾಡೋಣ?

ಸಂಜೀವಶಿವ : ಛೇ ಹೇಳಲಿಲ್ಲವೆ ನನಗೆ ಅಭ್ಯಾಸ ಇಲ್ಲ ಅಂತ.

ಮದನ ತಿಲಕ : ಆದರೆ ನಿಜ ಹೇಳ್ತೀನಣ್ಣಾ ಇದೊಂದು ಬಾರಿ ಚಾಡಿ ಕೇಳು. ಆಮೇಲೆ ನಿನಗೇ ಗೊತ್ತಾಗುತ್ತದೆ, ಅದು ನಿನ್ನ ಹುಟ್ಟುಗುಣ ಅಂತ. ಚಾಡಿಹೇಳ ಕೇಳೋರಿಬ್ಬರು ಒಂದು ಕಡೆ ಸೇರಿದರೆ ಎಷ್ಟೊಂದು ಸೃಜನಶೀಲರಾಗ ಬಹುದು ಗೊತ್ತೇನು?

ಸಂಜೀವಶಿವ : ನನಗೆ ನಿನ್ನ ಉಪದೇಶ ಬೇಕಿಲ್ಲ.

ಮದನ ತಿಲಕ : ನಾನೂ ಕೊಡೋದಿಲ್ಲಪ್ಪ; ಕೇಳಿಸಿಕೊಂಡರೆ ತಪ್ಪಿಲ್ಲ, ಅಷ್ಟೆ. ಬೇಕೆಂದರೆ ಕೇಳಿಸಿಕೊ, ಬ್ಯಾಡವಾದರೆ ಕಿವಿ ಮುಚ್ಚಿಕೊ-ಅಂದರೆ ನಾನು ಹೇಳಿದ ಚಾಡಿ ಮಾತು ನನಗೇ ವಾಪಸಾಗ್ತದೆ.

ಸಂಜೀವಶಿವ : ನೀನು ಚಾಡಿ ಹೇಳಲೇ ಬೇಕ?

ಮದನ ತಿಲಕ : ಹೇಳಿದೆನಲ್ಲಪ್ಪ, ಅದೊಂದು ಕೆಟ್ಟ ಚಾಳಿ ಇದೆ ಅಂತ. ಯಾರ ಬಗ್ಗೆ ಸುರು ಮಾಡೋಣ?

ಸಂಜೀವಶಿವ : ಆಯ್ತು, ಹಾಗಾದರೆ ದೇವರ ಬಗ್ಗೆ ಚಾಡಿ ಹೇಳು, ಕೇಳುವಾ.

ಮದನ ತಿಲಕ : ಒಳ್ಳೆ ಗಿರಾಕೀನ್ನೇ ಹಿಡಿದುಕೊಟ್ಟೆ ಬಿಡು. ನಮ್ಮ ನಾಡಿ ನೋಡೋವಾಗ ನೀನು ಮತ್ತು ಮಾರ ಯಾವುದೋ ಅದೃಶ್ಯ ದೇವತೆಯ ಜೊತೆ ಕಣ್ಣಲ್ಲೇ ಮಾತಾಡಿದ ಹಾಗಿತ್ತಲ್ಲ, ಯಾರದು?

ಸಂಜೀವಶಿವ : ಈ ಬಗ್ಗೆ ಮಾರನನ್ನೇ ಕೇಳಬೇಕು ನೀನು.

ಮದನ ತಿಲಕ : ಎಷ್ಟು ಮುಗ್ಧನಿದ್ದೀಯೋ ತಮ್ಮಾ; ನಿನ್ನ ಕಂಡರೆ ನನಗೆ ಹೊಟ್ಟೆ ತುಂಬ ಸಂತೋಷವಾಗುತ್ತಪ್ಪ. ನನಗೆ ನಿನ್ನ ತಂದೆ ಕೀರ್ತಿಶಿವನ ಪರಿಚಯ ಕೂಡ ಇತ್ತು.

ಸಂಜೀವಶಿವ : ಹೌದ? ನೀನ್ಯಾರು?

ಮದನ ತಿಲಕ : ಅರಮನೆಯ ವಿದೂಷಕ. ನಿನ್ನ ತಂದೆಯ ಮಿತ್ರ ನಾನು. ಇಬ್ಬರೂ ಜೊತೆಯಲ್ಲೇ ನಾಟಕವಾಡುತ್ತಿದ್ದಿವಿ. ಅವನು ಯಾವಾಗಲೂ ನಾಯಕ ವೇಷ ಕಟ್ಟುತ್ತಿದ್ದನಾದ್ದರಿಂದ ಸುಲಭವಾಗಿ ಸಾವಿಗೆ ಸಿಕ್ಕುಬಿದ್ದ. ನಾನು ದಿನಾ ಹೆಸರು ಬದಲಿಸಿ ಯಾವ್ಯಾವುದೋ ವೇಷ ಕಟ್ಟುವೆನಾದ್ದರಿಂದ ಸಾವಿಗಿನ್ನೂ ನನ್ನ ಗುರುತೇ ಸಿಕ್ಕಿಲ್ಲ. ಈಗೇನಾದರೂ ನಿನ್ನತಂದೆ ಜೀವಂತ ವಾಗಿದ್ದಿದ್ದರೆ ನನ್ನ ಹಾಗೇ ಇರ‍್ತಿದ್ದ ಅಥವಾ ಇನ್ನೂ ಚೆನ್ನಾಗಿರ‍್ತಿದ್ದ. ಯಾಕೆಂದರೆ ಅವನು ಕೊನೇತನಕ ಪ್ರೀತಿಸಿದ್ದು ನಿನ್ನ ತಾಯಿಯನ್ನು ಮಾತ್ರ. ನಾನು ಈತನಕ ವೇಷಕ್ಕೊಬ್ಬಳಂತೆ ಹೆಂಗಸನ್ನ ಕಟ್ಟಿಕೊಂಡದ್ದರಿಂದ ಹೀಗಿದ್ದೀನಿ. ಮದುವೆಯಾದ ಮಡದಿಯರೇ ನನಗೆ ಎಂಟು ಜನ. ಎಂಟೂ ಜನ ಸತ್ತು ಹೋದರು. ಒಂದಷ್ಟು ದಿನ ದುರ್ದೈವದ ಜೊತೆಗಿದ್ದೆ. ಈ ಎದೆ ನೋವಿನಿಂದಾಗಿ ಆಸಕ್ತಿ ಮೊಂಡಾಗಿ ತಂಗಳು ಹಾಸಿಗೆಯಲ್ಲಿ ಬಿದ್ದುಕೊಂಡು ಒದ್ದಾಡುವುದಕ್ಕಿಂತ ಎದ್ದು ಇನ್ನೊಂದು ಹೆಣ್ಣನ್ನಾದರೂ ನೋಡುವುದು ವಾಸಿಯೆಂದು ಎದ್ದೆ. ಸಿಕ್ಕೇ ಬಿಟ್ಟಳು ಒಬ್ಬ ಹುಡುಗಿ! ರೋಗ ವಾಸಿಯಾದ ಮೇಲೆ ಇರಲಿ ಅಂತ ಇನ್ನೂ ಮಡಗಿದ್ದೀನಿ. ಹೆಸರು ಮದರಂಗಿ. ನೀನು ದೊಡ್ಡ ಮನಸ್ಸು ಮಾಡಿ, ನಿನ್ನ ತಂದೆಯ ದೋಸ್ತಿ ಅಂತ ತಿಳಿದು ಯೌವನ ಜಾಸ್ತಿಯಾಗುವ ಮದ್ದು ಕೊಟ್ಟರೆ….

ಸಂಜೀವಶಿವ : ಕೊಡ್ತೀನಜ್ಜ. ನನ್ನ ತಂದೆ ತಾಯಿಗಳ ಬಗ್ಗೆ ಗೊತ್ತಿದೆಯಂದೆಯಲ್ಲ, ಮೊದಲು ಅದನ್ನ ಹೇಳು.

ಮದನ ತಿಲಕ : ನೀ ಕೊಡುವ ಎಡಪ್ರಾಯದ ಮದ್ದು ನನ್ನ ಮೇಲೆ ಪರಿಣಾಮ ಬೀರಿದ್ದು ಖಾತ್ರಿಯಾದರೆ ಎಲ್ಲವನ್ನೂ ವಿವರವಾಗಿ ಹೇಳ್ತೇನೆ, ಆಯ್ತ?

ಸಂಜೀವಶಿವ : ಬೆರಿಕಿ ಮುದುಕ ನೀನು. ಹೋಗಲಿ ನಿನ್ನ ಬಗ್ಗೆ ಆದರೂ ಇನ್ನಷ್ಟು ತಿಳಿಸು.

ಮದನ ತಿಲಕ : ನೀನು ಮಾತಿಗೊಮ್ಮೆ ಮುದುಕ ಅನ್ನೋದನ್ನ ಬಿಟ್ಟರೆ ಹೇಳ್ತೀನಿ. ನನ್ನಹುಡುಗಿ ಮದರಂಗಿ. ನನ್ನದು ಮದರಂಗಿ ಧರ್ಮ, ಮದರಂಗಿ ದೇಶ, ಮದರಂಗಿ ಕಾಲ. ಅವಳಿಗಾಗಿ ನಾನೊಂದು ವ್ಯಾಕರಣ ಬರೆದಿದ್ದು ಅದು ಆಸ್ಥಾನ ವೈಯಾಕರಣರ ಅಸೂಯೆಗೆ ಕಾರಣವಾಗಿದೆ. ಉದಾ ಹರಣೆಗೆ ವಿಭಕ್ತಿಪ್ರತ್ಯಯ ಪ್ರಕರಣ ಹೀಗಿದೆ: ನನ್ನ ಹುಡುಗಿಯ ಹೆಸರು ಮದರಂಗಿ-ಪ್ರಥಮಾ ವಿಭಕ್ತಿ. ನಾನು ಪ್ರೀತಿಸೋದು ಮದರಂಗಿಯನ್ನು-ದ್ವಿತೀಯಾ. ನಾನು ಬದುಕಿರೋದು ಮದರಂಗಿಯಿಂದ ತೃತೀಯಾ. ನನ್ನಪ್ರೀತಿ ಮದರಂಗಿಗೇ ಮೀಸಲು-ಚತುರ್ಥಿ. ನಾನೀಗ ಅಗಲಿರೋದು ಮದರಂಗಿಯಿಂದ-ಪಂದಮಿ. ನಾನು ಮದರಂಗಿಯ ಭಕ್ತ ಷಷ್ಠಿ. ನ್ನನ ಚಿತ್ತವೃತ್ತಿಯಿರೋದು ಮದರಂಗಿಯಲ್ಲಿ-ಸಪ್ತಮಿ. ಎಲೌ ಮದರಂಗಿಯೇ ನನ್ನನ್ನು ಕಾಪಾಡು-ಸಂಬೋಧನೆ. ಹ್ಯಾಗಿದೆ?

ಸಂಜೀವಶಿವ : ಭಲೆ! ಕಾಮ ತನ್ನ ಬಾಣಗಳನ್ನೆಲ್ಲ ನಿನ್ನ ಮೇಲೇ ಬಿಟ್ಟ ಹಾಗಾಡ್ತೀಯಲ್ಲ ಮುದುಕಾ.

ಮದನ ತಿಲಕ : ಮತ್ತೆ ಮುದುಕಾ ಅಂತೀಯಲ್ಲ ಮಾರಾಯಾ. ಮದರಂಗೀನೇ ನನಗೆ ಹುಡುಗಾ ಅಂತಾಳೆ.

ಸಂಜೀವಶಿವ : ಆ ಹೆಂಗಸು ನಿನ್ನನ್ನ ಏನಂತಾಳೆ?

ಮದನ ತಿಲಕ : ಹೆಂಗಸು ಅನ್ನಬ್ಯಾಡಯ್ಯಾ,-ಅಪ್ಸರೆ ಅಪ್ಸರೆ ಅವಳು. ಅವಳನ್ನ ನೋಡಿದ ಮೇಲೆ ನನ್ನ ಎಂಟೂ ಜನ ಹೆಂಡಂದಿರನ್ನ ಎಷ್ಟು ಕೀಳಾಗಿ, ಎಷ್ಟು ತಿರಸ್ಕಾರವಾಗಿ, ಎಷ್ಟು ಅಸಹ್ಯಕರವಾಗಿ ಕಾಣ್ತೀನಿ ಅಂದರೆ; ಅಯ್ಯೋ ಅಂಥಾ ಮುದಿಗೂಬೆಗಳ ಜೊತೆಗೆ ಇದ್ದೆನಲ್ಲಾ ಅಂತ ನನ್ನ ಮುಖದ ಮ್ಯಾಲೆ ನಾನೇ ಉಗಿದುಕೊಳ್ತೀನಿ ನೆನಪಾದಾಗಲೆಲ್ಲಾ, ಗೊತ್ತ?

ಸಂಜೀವಶಿವ : (ನಗುತ್ತ) ಹೆಂಡಂದಿರ ವಿಷಯವಾಗಿ ಇಷ್ಟೊಂದು ಕೀಳು ಭಾವನೆ…..

ಮದನ ತಿಲಕ : ವೈದ್ಯಮಹಾಶಯಾ, ಹೆಂಡಂದಿರ ವಿಷಯ ಇನ್ನೂ ಬ್ರಹ್ಮಚಾರಿಯಾಗಿರುವ ನಿನಗೇನು ಗೊತ್ತು? ಅವರ ಕಪಟ, ಅವರ ನಾಟಕ, ಅವರ ಮೋಸ, ಅವರ ಗೊಣಗಾಟ-ಒಂದೇ ಮಾತಿನಲ್ಲಿ ಅವರ ಬಗ್ಗೆ ಹೇಳಲಾ ಹುಡುಗ? ಒಟ್ಟಿನಲ್ಲಿ ಅವರ ದುಷ್ಟತನ, ಅವರ ನೀಚತನ, ಅವರ ಸ್ವಾರ್ಥ, ಅವರ ನಿರ್ದಯತನ, ಅವರ ಚಂಚಲತನ, ಅವರ ಸುಳ್ಳುತನ, ಅವರ ಕಣ್ಣೀರ‍್ತನ, ಅವರ ಸೊಗಲಾಡಿತನ, ಅವರ ವಾಚಾಳಿತನ, ಅವರ….

ಸಂಜೀವಶಿವ : ಇಷ್ಟೆಲ್ಲಾ ಮದರಂಗೀನೇ ಹೇಳಿಕೊಟ್ಟಳಾ ನಿನಗೆ?

ಮದನ ತಿಲಕ : ಛೇ ಛೇ ಅವಳ ವಿಷಯ ನಿನಗೆ ಗೊತ್ತಿಲ್ಲ ಮಗು. ಹೇಳಲೇನಯ್ಯ? ನಡೆದಾಡುವ ಒಂದು ಎಳೆ ಬಳ್ಳಿಯ ಕಲ್ಪಿಸಿಕೊಳ್ಳಯ್ಯ, ನಳನಳಿಸಿ ಬಳಲುತ್ತ ಸುಳಿದಾಡುವ ಕೋಮಲವಾದ ಒಂದು ಬಳ್ಳಿ! ಆ ಬಳ್ಳಿಯ ಮ್ಯಾಲೆ ಅರಳಿದೆಯಲ್ಲಯ್ಯ ಒಂದು ಕೆಂಪು ಕಮಲ! ಏನಯ್ಯಾ ಆ ಕೆಂಪು ಕಮಲದಲ್ಲಿ ಇನ್ನೆರಡು ನೀಲಿ ಕಮಲಗಳು ಅರಳಿವೆಯಲ್ಲಯ್ಯಾ!

ಸಂಜೀವಶಿವ : ಸ್ವಾಮೀ, ಒಂದನೇ ಸುಳ್ಳು, ಬಳ್ಳಿ ನಡೆದಾಡೋದಿಲ್ಲ. ಎರಡನೇದ್ದು ಅಂಥ ಬಳ್ಳೀಗೆ ಕಮಲ ಬಿಡೋದಿಲ್ಲ. ಬಿಟ್ಟರೂ ಅಂಥ ಕಮಲದಲ್ಲಿ ಇನ್ನೆರಡು ನೀಲಿ ಕಮಲ! ಛೇ ಛೇ….

ಮದನ ತಿಲಕ : ಕಲ್ಪಿಸಿಕೊಳ್ಳಯ್ಯಾ ಅಂದರೆ…..

ಸಂಜೀವಶಿವ : ನೀನು ಹೇಳಿದಂಥಾ ಹೆಂಗಸನ್ನ ಕಲ್ಪಿಸಿಕೊಂಡರೇ ಭಯವಾಗುತ್ತಲ್ಲ ಸ್ವಾಮೀ.

ಮದನ ತಿಲಕ : ಛೇ ವೈದ್ಯರು ಇಷ್ಟೊಂದು ಅರಸಿಕರೆ! ಹಾಗಲ್ಲ ಹುಡುಗಾ, ಸುಳಿದಾಡುವ ಬಳ್ಳಿ ಅಂದರೆ ಮದರಂಗಿಯ ದೇಹ ಬಳ್ಳಿ ಹಾಗಿದೆ ಅಂತ ಅರ್ಥ. ಕೆಂಪು ಕಮಲ ಅಂದರೆ ಅವಳಮುಖ ಅರಳಿದ ಕೆಂಪು ಕಮಲದ ಹಾಗಿದೆ ಅಂತ. ಅದರಲ್ಲೆರಡು ನೀಲಿ ಕಮಲ ಅಂದರೆ ಎರಡು ಕಣ್ಣು ಅಂತ ಅರ್ಥ. ಗೊತ್ತಾಯ್ತಾ ಮಾರಾಯಾ?

ಸಂಜೀವಶಿವ : ಆದರೂ ಭಯ ತಪ್ಪೋದಿಲ್ಲ ಸ್ವಾಮೀ. ಇಕಾ ನಿನ್ನ ಮದ್ದು ತಯಾರಾಯ್ತು. ದಿನಕ್ಕೆ ಮೂರು ಬಾರಿ ಒಂಬತ್ತು ದಿನ ಸೇವಿಸಿ ಆಮೇಲೆ ಮದರಂಗಿಯ ಬಳಿಗೆ ಹೋಗು.

ಮದನ ತಿಲಕ : ಅಂದರೆ ಯೌವನದ ಮದ್ದು….?

ಸಂಜೀವಶಿವ : ಅದರಲ್ಲೇ ಇದೆ. ಈಗಲಾದರೂ ನನ್ನ ತಂದೆ ಬಗ್ಗೆ ಹೇಳ್ತೀಯಾ?

ಮದನ ತಿಲಕ : ಆದರೆ ನನ್ನೊಂದು ಪ್ರಶ್ನೆಗೆ ನೀನು ಉತ್ತರ ಕೊಡಲೇ ಇಲ್ಲವಲ್ಲ?

ಸಂಜೀವಶಿವ : ಯಾವುದದು?

ಮದನ ತಿಲಕ : ನೀನೊಮ್ಮೆ ಮದ್ದು ಕೊಟ್ಟರಾಯ್ತು. ಗುಣವಾಗಲೇಬೇಕು-ಅಂತ ನಂಬಿಕೆ ಅಲ್ಲವೆ? ಆ ಮುದುಕ ಮಾರ ತಾಯ ಕೃಪೆ ಆಯ್ತು ಅಂತ ನಿನ್ನ ಮದ್ದನ್ನ ಬಿಟ್ಟೇ ಹೋದನಲ್ಲ, ಯಾಕೆ?

ಸಂಜೀವಶಿವ : (ಅವಮಾನಿತನಾಗಿ) ಈ ಪ್ರಶ್ನೆಗೆ ನೀನು ಮಾರನಿಂದಲೇ ಉತ್ತರ ಪಡೆಯಬೇಕು.

ಮದನ ತಿಲಕ : ಹೀಗಂತೀಯಾ? ಹಾಗಾದರೆ ಈ ಪ್ರಶ್ನೆಗಾದರೂ ಉತ್ತರ ಕೊಡು; ಅರಮನೆಯಿಂದ ನಾಲ್ಕು ಬಾರಿ ಹೇಳಿಕೆ ಬಂದರೂ ನೀನು ಬರಲಿಲ್ಲವಲ್ಲ, ಯಾಕೆ?

ಸಂಜೀವಶಿವ : ಅರಮನೆಯಿಂದ ನನಗೆ ಈತನಕ ಯಾವುದೇ ಹೇಳಿಕೆ ಬರಲಿಲ್ಲ. ನೀನು ಆಸ್ಥಾನ ವಿದೂಷಕನಾದ್ದರಿಂದ ನಿನಗೆ ಹೇಳಿಕೆ ಕಳಿಸಿರಬಹುದು. ಹಾಗಾದಲ್ಲಿ ಅಲ್ಲಿಗೆ ಹೋಗಬೇಕಾದವನು ನೀನು, ನಾನಲ್ಲ.

ಮದನ ತಿಲಕ : ಹಾಗಿದ್ದರೆ ಚಿಕ್ಕದೊಂದು ವಿನಂತಿಯಿದೆ, ಹೇಳಲೇ ಸ್ವಾಮಿ?

ಸಂಜೀವಶಿವ : ಹೇಳು.

ಮದನ ತಿಲಕ : ರಾಜಕುಮಾರಿ ನಾವರಿಯದ ರೋಗವೊಂದರಿಂದ ಸಾಯುತ್ತಿದ್ದಾಳೆ. ನೀನು ಬಂದು ಮದ್ದುಕೊಟ್ಟರೆ ಬದುಕುತ್ತಾಳೆ ಅಂತ ಇಡೀ ರಾಜ್ಯ ನಂಬಿದೆ. ದೊಡ್ಡಮನಸ್ಸು ಮಾಡಿ ಬರುತ್ತೀಯಾ ವೈದ್ಯ ಮಹಾಶಯಾ?

ಸಂಜೀವಶಿವ : ಹೌದೆ? ನನಗೆ ಮೊದಲೇ ಯಾಕೆ ಹೇಳಲಿಲ್ಲ? ಇಕೋ ಬಂದೆ.

(ತನ್ನ ವೈದ್ಯಕೀಯ ಹಡಪ ತಗೊಂಡು ಹೊರಡುವಷ್ಟರಲ್ಲಿ ಗಿರಿಮಲ್ಲಿಗೆಯ ಪ್ರವೇಶ)

ಗಿರಿಮಲ್ಲಿಗೆ : ಮಗಾ ಸಂಜೀವಾ, ನಿನ್ನಮ್ಮ ಕರೆಯುತ್ತಿದ್ದಾಳೆ.

ಸಂಜೀವಶಿವ : (ಮದನತಿಲಕನಿಗೆ) ಇರು ಇಷ್ಟರಲ್ಲೇ ಬರುತ್ತೇನೆ.

(ಗಿರಿಮಲ್ಲಿಗೆ ಮತ್ತು ಸಂಜೀವ ಒಳಕ್ಕೆ ಹೋಗುವರು. ತುಸು ಹೊತ್ತಾದ ಬಳಿಕ ಗಿರಿಮಲ್ಲಿಗೆ ಹೊರಬರುವಳು)

ಗಿರಿಮಲ್ಲಿಗೆ : ವೈದ್ಯ ಬರಲಾಗುವುದಿಲ್ಲ ಅಂತ ಹೇಳಿದ್ದಾನಪ್ಪ. ನೀನಿನ್ನು ಹೋಗಬಹುದು.

(ಮದನತಿಲಕ ಹೊರಡುವನು)