(ಶಿವದೇವಾಲಯ ಶಿವನ ಹೊಗಳಿಕೆಯನ್ನು ಹೇಳುತ್ತ ಸಂಜೀವಶಿವನ ಪ್ರವೇಶ)

ಸಂಜೀವಶಿವ : ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿ ಮಾಂ|
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷ ಮಾಂ||
ದೇವಸಿಂಧುತರಂಗಶೀಕರಸಿಕ್ತಶುಭ್ರ ಜಟಾಧರಂ
ಭಾಲಲೋಚನಜಾತಪಾವಕದಗ್ಧಮನ್ಮಥವಿಗ್ರಹಂ
ಅಂಧಕಾಂತಕಮಾಶ್ರಿತಾಮರ ಪಾದಪಂ ಶಮನಾಂತಕಂ
ಚಂದ್ರಶೇಖರಮಾಶ್ರಯೋ ಮಮ ಕಿ ಕರಿಷ್ಯತಿ ವೈ ಯಮಃ||

ಮೃತ್ಯುಭೀತ ಮೃಕಂಡುಸೂನುಕೃತಸ್ತವಂ ಶಿವಸನ್ನಿಧೌ
ಭಕ್ತವತ್ಸಲಮರ್ಚಿತಂ ನಿಧಿಮಕ್ಷಮಂ ಹರಿದಂಬರಂ
ಪೂರ್ಣಮಾಯುರರೋಗಿತಾಮಖಿಲಾರ್ಥ ಸಂಪದಮಾದರಂ
ಚಂದ್ರಶೇಕರಮಾಶ್ರಯೋ ಮಮ ಕಿಂ ಕರಿಷ್ಯತಿ ವೈ ಯಮಃ||

(ಅಷ್ಟರಲ್ಲಿ ಶಿವನೇ ನೃತ್ಯ ಮಾಡುತ್ತ ಪ್ರತ್ಯಕ್ಷನಾಗಿ ಆಶೀರ್ವಾದಿಸುವ ಭಂಗಿಯಲ್ಲಿ ನಿಂತು)

ಶಿವ : ಎಲಾ ಭಕ್ತಾಗ್ರಣಿಯೇ
ಭಕ್ತರು ಶಿವ ಅಂದರೆ ಸಾಕು ಭೋ ಅಂತ ಶಿಲೆಯಿಂದ ಬರಬೇಕು ನಾನು.
ಇಗೋ ನಿನ್ನ ನಿರ್ಮಲ ಭಕ್ತಿಗೆ ಮೆಚ್ಚಿ ಬಂದಿದ್ದೇನೆ. ಹೇಳು ಮಗನೇ
ನಿನಗೇನು ಬೇಕು?

(ಶಿವನು ಮಾತಾಡಿದ್ದಕ್ಕೆ ಸಂಜೀವಶಿವ ಬೆರಗಾಗಿ ನಿಲ್ಲುವನು)

ಎಲೈ ಭಕ್ತ ಶಿರೋಮಣಿಯೇ. ನೀನು ಹೊಗಳುವ ಮುಂಚೆಯೇ ನಾನು ಮಾತಾಡಿದ್ದಕ್ಕೆ ಭಯವೆ?
ಅಥವಾ ನಾನು ಶಿವ ಹೌದೋ ಅಲ್ಲವೋ ಅಂತ ಅನುಮಾನವೆ?

ಸಂಜೀವಶಿವ : (ಗೊಂದಲದಲ್ಲಿ) ಹಾಗೇನಿಲ್ಲ.

ಶಿವ : ಭಕ್ತಿಗೆ ನಾನೆಷ್ಟು ಸುಲಭವಾಗಿ ಒಲಿಯುತ್ತೇನೆಂದು
ಗೊತ್ತೇ ಇರಬೇಕಲ್ಲ? ದಾಸರ ಹರಿಕಥೆ ಕೇಳಿಲ್ಲವೆ?
ಮಲಗಿ ನೆನೆದರೆ ಭಕ್ತ, ಕುಂತಾಲಿಸುವನು ಶಿವನು!
ಕುಂತು ನೆನೆದರೆ ಭಕ್ತ ನಿಂತಾಲಿಸುವನು ಶಿವನು!
ನಿಂತು ನೆನೆದರೆ ಭಕ್ತ ಕುಣಿದಾಡಿ ಕೇಳುವನು ಶಿವನು! ನೀನು ನಿಂತು ಹೊಗಳಿದಿಯಾದ್ದರಿಂದ ನಾನು ಕುಣಿಯುತ್ತ ಬರಬೇಕಾಯಿತು.

ಸಂಜೀವಶಿವ : (ನಂಬಿ) ಧನ್ಯನಾದೆ ತಂದೆ!

ಶಿವ : ನಿಜವಾಗಿಯೂ?

ಸಂಜೀವಶಿವ : ನಿಜವಾಗಿ!

ಶಿವ : ನೀನು ನನ್ನ ಕೈಲಾಸವಾಸಿಯಾದ ಭಕ್ತ ಶಿರೋಮಣಿ ಕೀರ್ತಿಶಿವನ ಮಗನಲ್ಲವೆ?

ಸಂಜೀವಶಿವ : ಹೌದು. ಕೀರ್ತಿಶಿವನ ಮಗ, ಶೆಟಿವಿ ತಾಯಿಯ ಸಾಕು ಮಗನಾದ ಸಂಜೀವಶಿವ ನಾನು.

ಶಿವ : ಭೇಶ್ ಭೇಶ್. ಭಕ್ತರ ದೊಡ್ಡ ಪರಂಪರೆಯೇ ನಿನ್ನ ಹಿನ್ನೆಲೆಗಿದೆ
ಎಂದಂತಾಯ್ತು. ಹಾಗಿದ್ದರೆ ಬೇಗ ಅವರಸರ ಮಾಡಿ ವರ ಕೇಳು.
ನಿನಗೆ ವರ ಕೊಟ್ಟಲ್ಲದೆ ನನಗೆ ತೃಪ್ತಿ ಇಲ್ಲ. ಸಾಮಾನ್ಯವಾಗಿ ಕೇಳುವವರ
ಮನಸ್ಸನ್ನರಿದು ಕೇಳುವ ಮೊದಲೇ ವರ ಕೊಡೋದು ನನ್ನ ಚಾಳಿ.
ಈ ದಿನ ನಿನ್ನಮನಸ್ಸಿನಲ್ಲೇನಿದೆಯೆಂಬುದೇ ತಿಳಿಯುತ್ತಿಲ್ಲವಾದ್ದರಿಂದ
ಹೀಗೆ ಬಾಯಿಬಿಟ್ಟು ಕೇಳಬೇಕಾಯ್ತು.

ಸಂಜೀವಶಿವ : ಮಕ್ಕಳ ಗೋಳು ತಂದೆಗಲ್ಲದೆ ಇನ್ಯಾರಿಗೆ ತಿಳಿದೀತು ತಂದೆ?

ಶಿವ : ಅಲ್ಲವೇ? ಅಲ್ಲವೇ? ನಿನ್ನ ನೋಡಿದೊಡನೆ ನಿನ್ನ ಹಿಂದಿನ ಮುಂದಿನ
ಮತ್ತು ಇಂದಿನ ಎಲ್ಲಾ ಜನ್ಮಂಗಳ ದುಃಖಂಗಳು ಗೊತ್ತಾದುವಯ್ಯಾ!
ಆದರೀಗ ತುರ್ತಾಗಿ ಯಾವ ದುಃಖ ನಿವಾರಣೆ ಮಾಡಬೇಕು ಅಂತ
ತಿಳಿದರೆ…..

ಸಂಜೀವಶಿವ : ನನಗೆ ಮತಿಭ್ರಮಣೆಯಾಗುತ್ತಿದೆ ಸ್ವಾಮೀ.
ದೇವರದೇವ! ಮಹಾದೇವ, ಇಷ್ಟು ಸುಲಭವಾಗಿ…..

ಶಿವ  : ಬಡಕೊಂಡೆ ಪೂಜಾರಿಗೆ, ಸುಲಭವಾದಷ್ಟೂ ನಮ್ಮ ಬೆಲೆ ಕಮ್ಮಿಯಾಗುತ್ತದಯ್ಯ.
ಬಂದ ಭಕ್ತರು ಒಂದೆರಡು ಗಂಟೆ ಹಾಡಿ ಹೊಗಳಿ ಕಂಠಶೋಷಣೆ
ಮಾಡಿಕೊಂಡು ಧ್ವನಿ ನಿಂತ ಮೇಲೆ, ಒತ್ತಾಯದಿಂದ ಒಲಿದವರಂತೆ
ಅಭಿನಯಿಸಿ ವರ ಕೊಡೋಣ ಅಂತ. ನನ್ನ ಮಾತು ಕೇಳಲೇ ಇಲ್ಲ
ಆತ. ಈಗ
ನೋಡಿದರೆ ನನ್ನ ಪರಮಭಕ್ತನಿಗೇ ನನ್ನ ಬಗ್ಗೆ ಅನುಮಾನ ಮೂಡಿದೆ!
ನೋಡಯ್ಯಾ-ನಿನಗೆ ಕೊಡಬೇಕಾದ ವರವನ್ನ ನೀನು ಹುಟ್ಟುವ
ಮುಂಚೆಯೇ ಉರು ಹೊಡೆದಿದ್ದೆ. ಹಾಳಾದ್ದು ಮರೆವಾಗಿ ಹೋಯ್ತು,
ಸಮಯ ಹಾಳು ಮಾಡೋಡು ಬೇಡ
ಅಂತ ನೇರವಾಗಿ ವ್ಯವಹಾರಕ್ಕಿಳಿದೆ, ಅಷ್ಟೆ.
ನನ್ನ ಬಗ್ಗೆ ಅನುಮಾನ ಬಂದಿದ್ದರೆ ಇಕಾ ನೋಡು; ಜಡೆಯಲ್ಲಿ ನಿಜವಾದ
ಚಂದ್ರ ಮತ್ತು ನೀರಿದೆ. ಹಣೆಯಲ್ಲಿ ಕಣ್ಣಿದೆ. ಖಾತ್ರಿ ಆಗದಿದ್ದರೆ
ಮುಟ್ಟಿ ನೋಡು ಅಥವಾ ತಾಂಡವ ನೃತ್ಯ ಮಾಡಿ ತೋರಿಸಲ?
ಪಕ್ಕ ವಾದ್ಯದವರು ಬನ್ನಿರಯ್ಯಾ….
(ಶಿವ ನೆಲವನ್ನು ನೋಡಿ)
ಈ ನೆಲ ಇದೆಯಲ್ಲ, ಅಂಕುಡೊಂಕು, ತಾಂಡವ ನೃತ್ಯಕ್ಕಲ್ಲ ಇದು.
ಅಲ್ಲದೆ ಇತ್ತೀಚೆಗೆ ಪಕ್ಕವಾದ್ಯ ಕಲಿಯುತ್ತಾರಲ್ಲ, ಅವರಿಗೆ ತಾಳ ಜ್ಞಾನ
ಸಾಲದು….

ಸಂಜೀವಶಿವ : ಅಲ್ಲದೆ ನಿಮಗೂ ಅಭ್ಯಾಸ ಸಾಲದು.

ಶಿವ : ಎಲಾ ಇವನ! ಯಾವೋನಯ್ಯಾ ನೀನು?

ಸಂಜೀವಶಿವ : ನಿನ್ನ ಮಗ ಸಂಜೀವಶಿವ ತಾಯಿ! ಬರೀ ಒಬ್ಬ ಮದನತಿಲಕ ನಟ
ಅಂತಿದ್ದೆ. ಈಗ ನನ್ನ ತಾಯಿಯೂ ನಟಿಯಾಗಿ ಅಭಿನಯಿಸತೊಡಗಿದ್ದಾಳೆ.
ಆದರೆ ನೀನೊಬ್ಬ ಕೆಟ್ಟ ನಟಿ ತಾಯಿ.

ತಾಯಿ : (ಸ್ವಂತ ವೇಷಭೂಷಣದಲ್ಲಿ) ನಾನ್ಯಾರೆಂದು ತಿಳಿಯಲಿಕ್ಕೆ ಇಷ್ಟು ಹೊತ್ತು
ಬೇಕಾಯ್ತ ನಿನಗೆ? ಆರಂಭದಿಂದಲೇ ಕೆಟ್ಟದಾಗಿ ಅಭಿನಯಿಸಿದರೂ
ನಿನಗೆ ಗುರುತಾಗಲಿಲ್ಲವಲ್ಲ.
ನೀನೊಬ್ಬ ಕೆಟ್ಟ ಪ್ರೇಕ್ಷಕ ಅಂತ ಮೊದಲು ಒಪ್ಪಿಕೊ.
ದೇವರಂತೆ ಅಭಿನಯಿಸುವುದು ಇಷ್ಟು ಸುಲಭ ಅಂತ
ಗೊತ್ತಿರಲಿಲ್ಲ. ಅವನ ಹಾಗೇ ಕೂತು ನಿಂತು
ಅವನ ಶೈಲಿಯಲ್ಲೇ ಆಶೀರ್ವದಿಸುವುದು ಬಹಳ ಸರಳ ಮಾರಾಯಾ.
ಒಮ್ಮೆ ತಿಳಿದರೆ ದೇವರ ಮಾದರಿಗಳನ್ನ
ಲಾಭದಾಯಕವಾಗಿ ತಯಾರಿಸಬಹುದು.
ನಿನ್ನ ದೇವರೂ ಬಲೆ ಘಾಟಿ ಮಾರಾಯಾ, ಋತುಮಾನದ
ಹದಗಳಿಗೆ ಹಲಬಣ್ಣ ತಳೆದವನು.
ಎತ್ತರದ ಬೆಟ್ಟದಲಿ ಚಿತ್ತಾರದ ಗುಡಿ ಕಟ್ಟಿ
ಕ್ಷಿತಿಜದಾಚೆಗೆ ಮಿಂಚ ಹೊಳೆಸಿದವನು.
ಮಿಂಚಿನಲಿ ಕಣ್ಣಾಲಿ ಕೀಲಿಸಿ ನಿಂತರೆ ಮಾನವ
ಆ ಮಿಂಚು ತಾನೆಂದು ಸಡಗರಿಸುವವನು.
ಅರಿವು ಮರೆವಿನ ಆಟದಲ್ಲಿ, ಮಾನವ ಮರೆತರೂ
ದೇವರಿಗೆ ಗೊತ್ತು, ಆ ಮಿಂಚಿಗೆ ವಿದ್ಯುತ್ ಸರಬರಾಜಾದದ್ದು
ಮಾನವನಿಂದ ಎಂದು.
ಒಬ್ಬಿಬ್ಬರೇ ಈ ದೇವರೂ?
ಥರಾವರಿ ಛತ್ತೀಸ್ಕೋಟಿ ಮತ್ತು ಚಿಲ್ಲರೆ.
ಶಿಲಾದೇವರು ಕಲಾದೇವರು, ಮಣ್ಣದೇವರು ಮರದ ದೇವರು
ಚಿಕ್ಕಣ್ಣ ದೇವರು ಮುಕ್ಕಣ್ಣ ದೇವರು, ಮೈತುಂಬ ಕಣ್ಣಿನವರು
ನಕ್ಕವರು ಅತ್ತವರು, ಬೆರಗಿನವರು
ಕೈಮುಖ ಎಂಟೆಂಟಾಗಿ ಗುಣಿಸಿಕೊಂಡವರು
ಭಯಗಳ ಹೇರಿ ಅಭಯಂಗಳ ನೀಡುವವರು,
ಮಾನವ ಕಲ್ಪನೆಯ ದುಂದಿಗೆ ಸಾಕ್ಷಿಯಾದವರು.
ಒಬ್ಬೊಬ್ಬ ದೇವರಿಗೆ ಅವನವಳ ಸಂಸಾರ ವೇಷಭೂಷಣ
ಹಾಡು ಕುಡಿತ ಕುಣಿತ-ಛೇ ಈ ಕೊಳಕು ದೇವರುಗಳಿಂದ
ಜಗತ್ತನ್ನ ಚರಂಡಿ ಮಾಡಿದ್ದೀರಲ್ರಯ್ಯಾ! ಅಭಿನಯ ಸಾಕು.
ನನಗೆ ನೋಡಪ್ಪ-ಪ್ರಾರ್ಥನೆ ಬೇಡ, ಅಷ್ಟೋತ್ತರ
ಶತ ಸಹಸ್ರ ನಾಮಾವಳಿ ಬೇಡ. ಸಧ್ಯ ಹೃದ್ಯವಾದ
ಗದ್ಯದಲ್ಲಿ ಮಾತಾಡಿದರೆ ಸಾಕು.
ನಾನು ಯಾರೂಂತ ಗೊತ್ತಾಯಿತಲ್ಲ?
ದೇವರ ವೈರಿ, ನಿನ್ನ ಸಾಕು ತಾಯಿ,
ಸ್ಥಳೀಯ ಹೆಸರು ಶೆಟಿವಿ ಮಾಯಿ.
ನೀ ಯಾರು ಹೇಳು.

ಸಂಜೀವಶಿವ : ಹಿಂದೊಮ್ಮೆ ತಾಯಿಯ ವಾತ್ಸಲ್ಯಕ್ಕೆ ವಾರಸುದಾರನಾಗಿ
ಈಗ ತಾಯಿ ಕೈಬಿಟ್ಟು ತಬ್ಬಲಿಯಾಗಿ, ಮುರಿದ ಮಹಿಮನಾಗಿ,
ಹಳ್ಳಕ್ಕೆ ಬಿದ್ದ ಸಂಜೀವಶಿವ ನಾನು.

ತಾಯಿ : ಅದು ನಿನಗೆ ನೀನೇ ಹಟದಿಂದ ಕೊಟ್ಟುಕೊಂಡ ಶಿಕ್ಷೆ,
ತಾಯಿ ಕೊಟ್ಟುದಲ್ಲ.

ಸಂಜೀವಶಿವ : ನನ್ನದೊಂದು ಭಗ್ನ ಕನಸು ಹೇಳಲೇ ತಾಯಿ?

ತಾಯಿ : ಹೇಳು.

ಸಂಜೀವಶಿವ : ಕಾಡಿನಲ್ಲಿ ತೊರೆಯ ಬಳಿಯೊಂದು ಹಸಿರು ಮರ. ಅದರ ಕೆಳಗೊಂದು
ಗುಡಿಸಲು. ಅಂಗಳದಲ್ಲಿ ಒಂದೆರಡು ಹೂವಿನ ಕಂಟಿ. ಅಲ್ಲಿ ನಾನಿದ್ದೇನೆ,
ರೋಗಿಗಳೊಂದಿಗೆ,
ಒಳಗೆ ರಾಜಕುಮಾರಿ ಮದ್ದರೆಯುತ್ತಿದ್ದಾಳೆ. ನನ್ನ ಗುಡಿಸಲ ಹಾಗೇ
ನನ್ನ ಅಹಂಕಾರವೂ ಚಿಕ್ಕದೇ. ನನ್ನ ಮದ್ದಿನಿಂದ
ಗುಣ ಹೊಂದಿದ ರೋಗಿಗಳು
“ಅಬ್ಬ ಎಂಥ ಒಳ್ಳೆ ವೈದ್ಯ!” ಅಂತಾರೆ. ಅಷ್ಟಕ್ಕೇ ನನ್ನೆದೆ ಉಬ್ಬಿ
ದೇವರನ್ನು ಕಂಡ ಸಾರ್ಥಕತೆಯನ್ನು ಅನುಭವಿಸುತ್ತದೆ.
ಆದರೆ ತಾಯೀ,
ಉಬ್ಬಿದೆದೆಯಲ್ಲಿ ಈಗೇನೂ ಉಳಿದಿಲ್ಲ. ಯಾಕೆಂದರೆ ಒಳಗೆ
ಮದ್ದರೆವ ರಾಜಕುಮಾರಿಯಿಲ್ಲ. ಆದ್ದರಿಂದ ಮದ್ದಿಲ್ಲ.
ಆದ್ದರಿಂದ ರೋಗಿಗಳಿಲ್ಲ. ನನಗೆ ದೇವರೂ ಕಾಣೋದಿಲ್ಲ.
ಈಗ ಬದುಕೋದಕ್ಕೇ ಭಯವಾಗುತ್ತದೆ ತಾಯಿ!

ತಾಯಿ : ಭಯಪಡಬೇಕಾದ್ದು ನ್ಯಾಯವೇ. ಯಾಕೆಂದರೆ ನಿನಗೆ
ಭಯಂಕರವಾದ ಎರಡು ರೋಗಗಳಿವೆ.

ಸಂಜೀವಶಿವ : ನನಗೆ ರೋಗ? ಯಾವವು ತಾಯಿ?

ತಾಯಿ : ರಾಜಕುಮಾರಿ ಮತ್ತು ದೇವರು.

ಸಂಜೀವಶಿವ : ಕೇವಲ ರಾಜಕುಮಾರಿಯ ಜೀವ ಒಂದನ್ನ ಮಾತ್ರ ಉಳಿಸಿಕೊಡು
ಎಂಬ ನನ್ನ ನಿವೇದನೆಯನ್ನು ಹೀಗೆ ತಿರಸ್ಕರಿಸುತ್ತೀಯಲ್ಲಾ ತಾಯಿ.

ತಾಯಿ : ತಿರಸ್ಕರಿಸಲಿಲ್ಲ, ನಿರಾಕರಿಸಿದೆ. ಉತ್ಪ್ರೇಕ್ಷೆ ಮಾಡಬೇಡ.

ಸಂಜೀವಶಿವ : ನನ್ನ ಕಂಡರೆ ಎಷ್ಟೂ ಪ್ರೀತಿಯಿಲ್ಲ ನಿನ್ನಲ್ಲಿ.

ತಾಯಿ : ಹೌದು ನಿನ್ನ ದೌರ್ಬಲ್ಯಗಳನ್ನ ಪ್ರೀತಿಸಲಾರೆ ನಾನು, ನೀನು ಮಗನಾದರೂ.

ಸಂಜೀವಶಿವ : ಹುಚ್ಚು ಹಿಡಿಸುವಂತೆ ತರ್ಕಗಳ ಹಾದಿ ತಪ್ಪಿಸುತ್ತೀ ತಾಯಿ.

ತಾಯಿ : ಸಾವವರಿಗೆ ಜೀವ ಕೊಡುವೆನೆಂಬ ಜಂಬಗಳ ತೇಗುತ್ತಿರುವೆ,
ಅದಕ್ಕೇ ನಿನ್ನ ಕಾರಣ ಶಕ್ತಿ ಕುಗ್ಗಿದೆ, ಮಗನೇ.

ಸಂಜೀವಶಿವ : ನಿನಗೆ ಕರುಳಿಲ್ಲ ಗೊತ್ತು.
ಆದರೂ ನಿನ್ನಲ್ಲಿಯ ಯಾವುದೋ ವಿಶೇಷಕ್ಕೆ
ಮಾರುಹೋಗಿದ್ದೇನೆ. ಅದೇನೆಂದು ನಾನರಿಯೆ.
ಬಹುಶಃ ನೀನೊಂದು ಭಯಾನಕವಾದ,
ಆದಿ ಅಂತ್ಯಗಳಿರದ ಏಕಾಂತ!
ಗಾಳಿ ಆಲುಗದ ಬೆಳಕು ನಾಟದ
ನಿಶ್ಯೂನ್ಯ ಬಯಲು ನೀನು!

ತಾಯಿ : ಇದು ನೀನು ಮಾಡಿದ, ನಿನ್ನ ಸಾಮರ್ಥ್ಯ ಮತ್ತು ಶಬ್ದಗಳಿಗೆ ನಿಲುಕಿದ
ನನ್ನ ವರ್ಣನೆ ಮಗನೆ, ನನ್ನ ನಿಜವಲ್ಲ.
ಇಷ್ಟಾಗಿ ವರ್ಣನೆ ಮಾಡೆಂದು ನಿನ್ನನ್ನ ನಾನು ಕೇಳಲೂ ಇಲ್ಲ.
ಜೀವನದ ಬಗ್ಗೆ ನಾವಿಬ್ಬರೂ ಹಸಿದವರು:
ಹೆಚ್ಚು ಹೆಚ್ಚು ಜೀವರನ್ನು ಬದುಕಿಸಿ
ನೀನು ಸಂತೋಷಪಡುತ್ತಿ.
ಹೆಚ್ಚು ಹೆಚ್ಚು ಜೀವರನ್ನು ಮುಕ್ಕಿ ನಾನು ಆನಂದಪಡುತ್ತೇನೆ.
ನಿನ್ನ ಹಸಿವುಸುಲಭವಾದದ್ದರಿಂದ ನನಗೆ ಅರ್ಥವಾಯಿತು. ನನ್ನ ಹಸಿವು
ಉಗ್ರ ಮಗನೆ! ಈ ಪುಟ್ಟ ಬಾಂಧಿನಂಥ ಕ್ಷಿತಿಜದೊಳಗಿನ
ಲೋಕದವನು ನೀನಾದ್ದರಿಂದ ನಿನ್ನ ಹಸಿವು ಅರ್ಥವಾಗುತ್ತಿರಬಹುದು.
ನನ್ನದು ಕ್ಷಿತಿಜಗಳೇ ಇಲ್ಲದ ಲೋಕ ಮಗನೆ. ಆದ್ದರಿಂದಲೇ
ನನ್ನ ಹಸಿವು ಕೇವಲ ಕ್ರೂರವಾಗಿ ಮಾತ್ರ ನಿನಗೆ ಕಂಡೀತು.

ಸಂಜೀವಶಿವ : ನನ್ನ ಕಣ್ಣಿಗೆ
ನೀನು ಕಾಣಿಸುತ್ತಿರುವುದೇ ಆಶ್ಚರ‍್ಯವಲ್ಲವೇ ತಾಯಿ?

ತಾಯಿ : ಹೌದು. ನಿನ್ನ ಕಣ್ಣಿಂದು ನನ್ನ ನಾನು ನೋಡಿಕೊಳ್ಳುತ್ತಿದ್ದೇನೆ,
ಅದಕ್ಕೇ ನಿನಗೆ ಕಾಣಿಸುತ್ತಿದ್ದೇನೆ ಮಗನೆ. ಈಗ
ನನಗೆ ಪ್ರಶ್ನೆಗೆ ಉತ್ತರ ಕೊಡು.
ಸಂಜು ಹೂಡಿದ್ದೀರಂತೆ ನನ್ನ ವಿರುದ್ದ, ನೀನು ಮತ್ತು ಮದನ ತಿಲಕ,
ಅದೇನೆಂದು ಕೇಳಬಹುದೆ?

ಸಂಜೀವಶಿವ : ಅಗತ್ಯವಾಗಿ. ತಾಯ ಕೃಪೆ ಇಲ್ಲದೆ ನನ್ನ ವೈದ್ಯವೃತ್ತಿಗೆ
ಅರ್ಥವಿದೆಯೆ, ಇಲ್ಲವ ಅಂತ ಚಿಂತನೆ ಮಾಡುತ್ತಿದ್ದೆವು.

ತಾಯಿ : ವೈದ್ಯವೃತ್ತಿಗೆ ತಾಯಿಯಿಂದ ಬೇಕಾದಷ್ಟು ಪ್ರಯೋಜನಗಳಂತೂ ಇವೆ.

ಸಂಜೀವಶಿವ : ಹಾಗೇ ತಾಯಿಗೂ ವೈದ್ಯವೃತ್ತಿಯಿಂದ ಬೇಕಾದಷ್ಟು ಸಹಾಯವಿದೆ.
ಉದಾಹರಣೆಗೆ: ತಾಯಿ ತಗೋಬೇಕಾದ ಜೀವಗಳನ್ನ ವೈದ್ಯರೇ
ಕೊಂದುಹಾಕಿಬಿಡುತ್ತಾರೆ.

ತಾಯಿ : ಆದರೆ ತಾಯಿ ಮಾತ್ರ ಎಂದೂ ಕೈಯಾರೆ ಕೊಲ್ಲುವುದಿಲ್ಲ.
ಎನ್ನುವುದು ಗೊತ್ತಿರಲೇ ಬೇಕಲ್ಲ ನಿನಗೆ?

ಸಂಜೀವಶಿವ : ಭೀತಿ ಮಾತ್ರ ತಾಯಿಯದೇ ಅಲ್ಲವೆ?

ತಾಯಿ : ಭೀತಿಯಂಥ ಭಾವ, ಅನುಭಾವ ಇನ್ಯಾವುದಿದೆ ಮಗನೆ?
ನನ್ನ ಭೀತಿಯಲ್ಲಿ
ಚರಾಚರವೆಲ್ಲ ಹ್ಯಾಗೆ ಸೃಜನಶೀಲವಾಗುತ್ತದೆ ನೋಡು:
ನಿನ್ನ ತತ್ವಜ್ಞಾನ ಸಿದ್ಧಾಂತ
ಧರ್ಮ ವೇದಾಂತ
ಹುಟ್ಟಿದ್ದು ನನ್ನ ಭೀತಿಗೆ
ಏನಿಲ್ಲದಲ್ಲಿ ಏನೆಲ್ಲ ಹುಟ್ಟಿಸುತ್ತದೆ ಭೀತಿ!
ಕೊಂಬು ಕೋರರೆಹಲ್ಲಿನ ಕಥೆ
ಅನುಗ್ರಹಿಸುವ ಅಮರಾವತಿಯ ಕಥೆ,
ಮರುಗುವ ಧರೆಯ ವ್ಯಥೆ,
ಹುಟ್ಟಿಸಿದೆ ನೋಡು ಸಾವಿನ ಭಯ
ಎಷ್ಟೊಂದು ಚರಿತ್ರೆಯ!

ಸಂಜೀವಶಿವ : ಆದರೂ ಇದೆ ಇಲ್ಲೊಂದು ಎಲ್ಲಎಲ್ಲವ ಮೀರಿ
ಅಲ್ಲಮವಾದದ್ದು,
ಕಾಡಿನಲ್ಲಿ ಹರಿವ ನೀರಿನ ರುಚಿ ಮತ್ತು ಸ್ವಾತಂತ್ರ್ಯವುಳ್ಳದ್ದು.
ಹಕ್ಕಿಗಳ ಹೃದಯಕ್ಕೆ ಹಾಡು, ಮಕ್ಕಳ ಕಣ್ಣಿಗೆ ಕನಸು
ತುಂಬುವಂಥಾದ್ದು.
ಭಯಕೆ ಅಭಯವ ನೀಡಿ ನಿನ್ನನೆದುರಿಸುವ ಶಕ್ತಿ
ಕೊಡುವಂಥಾದ್ದು
ಶಿವಲಿಂಗವೆಂಬುದು!

ತಾಯಿ : ಶಿವಲಿಂಗದ ವಾರ್ತೆಯೆಂಬುದು
ವಚನ ರಚನೆ ಮಗನೆ. ಹೋಗಲಿ,
ಏನಂತ ಹೊಗಳುವಿರಿ ಶಿವನ?
ಕಣ್ಣಲ್ಲಿ ಕಿಡಿಯನ್ನಿಟ್ಟುಕೊಂಡವನೆಂದೆ?
ನಿಶಾಚರ ಸ್ಮಶಾನವಾಸಿ. ಹೆಣಗಳ ತಿಂಬವನೆಂದೆ?
ರಾತ್ರಿಯಂಥ ಜಡೆಯಲ್ಲಿ ಚಂದ್ರನ ಮಡಗಿಕೊಂಡವನೆಂದೆ?
ಕೊಲುವ ದೇವರೆಂದೆ?
ಹಸಿರು ಧರ್ಮದ ಪಾರ್ವತಿಯ ಪತಿಯೆಂದೆ?
ಕುಣಿವ ದೇವರೆಂದೆ?
ಹಸಿರು ಧರ್ಮದ ಪಾರ್ವತಿಯ ಪತಿಯೆಂದೆ?
ಕುಣಿವ ದೇವರೆಂದೆ?
ಎಲವೆಲವೋ ಮಗನೇ,
ಆರುಮೂರೊಂಬತ್ತು ಪೆಟ್ಟಿನ ಬೆಸತಾಳಿನಲ್ಲಿ ಕುಣಿದರೆ ನಾನು
ಜಂಗಿನ ಗಲಿರು ನಿಶ್ಯಬ್ದವಾಗಿ
ನೆಲ ಕಚ್ಚಿ ಬಿದ್ದಿರುತಾನೆ ಶಿವ! ತೋರಿಸಲೆ?
ಅಗೊ ನಿನ್ನ ಮಿತ್ರನ ನಾಡಾಡಿ ನಾಟಕ ನಡೆಯುತ್ತಿದೆ ನೋಡು:
ಮಾರ್ಕಂಡೇಯ ಶಿವಲಿಂಗದ ತಬ್ಬಿ ಕಾಪಾಡೆಂದು ಹಾಡಿ
ದೊಡ್ಡ ಸಂಭಾಷಣೆ ಹೇಳುತ್ತಿದ್ದಾನೆ. ಕೇಳು:
(ತಾಯಿ ಈಗ ಅರಮನೆಯಲ್ಲಿ ಇದೇ ಕಾಲದಲ್ಲಿ ನಡೆಯುತ್ತಿರುವ ಮದನ ತಿಲಕನ “ಮಾರ್ಕಂಡೇಯ ವಿಜಯ” ನಾಟಕದ ದೃಶ್ಯ ತೋರಿಸುತ್ತಾಳೆ. ಶಿವಲಿಂಗವ ತಬ್ಬಿರುವ ಮಾರ್ಕಂಡೇಯ. ಅವನ ಕುತ್ತಿಗೆ ಪಾಶ ಹಾಕಿ ಎಳೆಯುತ್ತಿರುವ ಯಮ.)

ಮಾರ್ಕಂಡೇಯ : ಜಗನ್ನಿಯಾಮಕನಾದ ಪರಶಿವ ಪರಮಾತ್ಮನೇ, ನಿನ್ನ ಭಕ್ತ ಶಿರೋಮಣಿಯಾದ
ಈ ಮಾರ್ಕಂಡೇಯನ ದುಃಖಸಾಗರವನ್ನು ವರ್ಣನೆ ಮಾಡುವುದು
ಸಾವಿರ ನಾಲಿಗೆಯ ಆದಿಶೇಷನಿಗೂ ಅಸಾಧ್ಯವೇ ಸೈ. ನಿನ್ನನ್ನು ದೃಢವಾಗಿ
ನಂಬಿ ಮಾಡಿದ ಶಿವಭಕ್ತಿ ಶಿವಾಚಾರಗಳು ಇಂತೀಪರಿ ನೀರಲ್ಲಿ ಹುಣಸೇ
ಹಣ್ಣು ತೊಳೆದಂತೆ ವ್ಯರ್ಥವಾಗಿ ಖರ್ಚಾಗಿ ಹೋದುದನ್ನು ನೋಡಿದರೆ
ಇನ್ನು ಮೇಲೆ ಯಾರೂ ನಿನಗೆ ಕಾಸಿನ ದೀಪ ಹಚ್ಚೋದಿಲ್ಲ, ಕರವೆತ್ತಿ
ಕೈಮುಗಿಯೋದಿಲ್ಲ ಎಂಬುದು ನಿನ್ನ ಗಮನಕ್ಕೆ ಬಂದಿದೆಯೆ ತಂದೆ?
ಅಯ್ಯೋ ಪರಶಿವ ಪರಮಾತ್ಮನೇ ಕಠೋರನಾದ ಕಾಲನು ನನ್ನ
ಆಯುಷ್ಯ ತೀರಿತೆಂದು ತನ್ನಯಮಪಾಶವನ್ನು ಕತ್ತಿಗೆ ಬಿಗಿದು ಎಳೆಯುತ್ತಿದ್ದಾನೆ.

ಶಿವನೇ ಶಂಭೋ ಮಹಾದೇವಾ ಈ ಕಾಲನಿಂದ ನನ್ನನ್ನು ಪಾರುಮಾಡಿ
ಭಕ್ತ ರಕ್ಷಕ, ಶಿಷ್ಟಪಾಲಕ ಎಂಬ ನಿನ್ನ ಬಿರುದನ್ನು ಉಳಿಸಿಕೊಳ್ಳಲಾರೆಯಾ?
ಶಿವ ಶಿವ ಅಯ್ಯೋ ಮಹಾದೇವಾ?

ತಾಯಿ : ಇಗೊ ನಿನ್ನ ಶಿವನ ವೇಷಧಾರಿ ಶಿವಲಿಂಗವ ಸೀಳಿ
ತ್ರಿಶೂಲವ ಝಳಪಿಸುತ್ತ ಪ್ರತ್ಯಕ್ಷನಾದ ನೋಡು: ಭಲೆ ಶಿವನೆ!
ಈಗವನು ನನ್ನ ಭಂಟನನ್ನು ಕೊಲ್ಲಬೇಕಲ್ಲವೆ? ತಗೊ
(ಕುಂತಲ್ಲಿಂದಲೇ ಏಟು ಹಾಕುವಳು. ಶಿವನ ಪಾತ್ರಧಾರಿ ಸಾಯುವನು.)
ಅರೆ ಕಾಪಾಡಬೇಕಾದ ಶಿವನೇ ಸತ್ತುಬಿದ್ದನೆ!
ತನ್ನವೇಷ ಧರಿಸಿದ ನಟನನ್ನಾದರೂ ನಿನ್ನ ಶಿವ ಕಾಪಾಡಬೇಕಿತ್ತಲವೆ?

ಸಂಜೀವಶಿವ : ಶಿವ ಜಾದೂಗಾರನಲ್ಲ ತಾಯಿ.

ತಾಯಿ : ಮೂರ್ಖ ಇದು ಜಾದೂಗಾರಿಕೆಯಲ್ಲ. ನಡೆದ ನಿಜ, ಹೋಗಿ ನೋಡು.

ಸಂಜೀವಶಿವ : ಮದನತಿಲಕ ಸತ್ತನೆ?

ತಾಯಿ : ಹೀಗೇ ನಿನ್ನ ಮೂವತ್ತು ಮೂರು ಕೋಟಿ ದೇವತೆಗಳನ್ನು ಒಂದೆರಡು
ತುತ್ತಿಗೇ ಕಬಳಿಸಿದವಳು ನಾನು.

ಸಂಜೀವಶಿವ : ಇಷ್ಟೊಂದು ಶಕ್ತಿವಂತಳು, ರಾಜಕುಮಾರಿಯನ್ನು ಕಬಳಿಸುವುದು ಕಷ್ಟವೆ?

ತಾಯಿ : ಅದನ್ನು ನೀನು ಹೇಳಬೇಕು. ನಿನಗೆ ನನ್ನ ಚೆಲ್ಲಾಟಗಳ ಒಂದು ಚಿಲ್ಲರೆ
ಮಾದರಿ ತೋರಿಸೋಣವೆಂದು ಹೀಗೆ ಮಾಡಿದೆನಷ್ಟೆ.

ಸಂಜೀವಶಿವ : (ದುಃಖದಿಂದ) ಅಯ್ಯೋ ಮದನತಿಲಕ, ನನ್ನ ತಾಯಿ ತನ್ನ ಕ್ರೂರ
ಆನಂದಗಳನ್ನು ಕಾರಿಕೊಂಡ ಫಲವಾಗಿ ನೀನು ಸಾಯಬೇಕಾಯಿತೆ!
ತಾಯಿ, ನೀನು ಯಾರೆಂದು ಹೇಳಲೆ:
ಹಸಿ ಹಸೀ ಜೀವಗಳಿಗಾಗಿ ಸದಾ ಬಾಯ್ದೆರೆದ ನರಕ ನೀನು!

ತಾಯಿ : ಸಾಲದು ಸಾಲದು ಮಗಾ, ನೀನು ಕೋಟಿ ಕಲ್ಪನೆಗಳಲ್ಲಿ
ಕೋಟಿ ಸಲ ವರ್ಣನೆ ಮಾಡಿದರೂ ನನ್ನ ಬಗ್ಗೆ ಹೇಳಬೇಕಾದ್ದು
ಇನ್ನೂ ಉಳಿಯುತ್ತದೆ. ಅದೇ ನನ್ನ ಗಮ್ಮತ್ತು.
ಮಗನಾಗಿ ನಿನಗೆ ನಾನು ಎಲ್ಲರಿಗಿಂತ ಹೆಚ್ಚು ಅರ್ಥವಾಗಿದ್ದರೂ
ನನ್ನ ಬಗ್ಗೆ ಈತನಕ ಜ್ಞಾನಿಗಳೆಂಬುವರು ಹೇಳಿದ್ದಕ್ಕಿಂತ ಹೆಚ್ಚಿಗೇನೂ
ಹೇಳಲಿಲ್ಲ ನೀನು. ನೋಡಿದೆಯಾ ನಿನ್ನ ಶಿವ
ಹ್ಯಾಗೆ ಬಿದ್ದಿದ್ದಾನೆ? ನಿನ್ನನ್ನು ದಾರಿಗೆ ತರಲು
ಇದು ಬೇಕಾದಷ್ಟಾಯಿತು. ಇದು ತೀವ್ರತರ ದುಃಖ ಕೊಡದಿದ್ದಲ್ಲಿ
ನಿನ್ನ ಆತ್ಮೀಯರ್ಯಾರಿದ್ದಾರೆ ಹೇಳು. ಅವರಿಗೇ ಚಿತ್ರಹಿಂಸೆ ಕೊಡೋಣ.

ಸಂಜೀವಶಿವ : ನನ್ನ ಅತ್ಯಂತ ಆತ್ಮೀಯಳೆಂದರೆ ನನ್ನ ತಾಯಿ.

ತಾಯಿ : ನಿಜ ಹೇಳಿದೆ ಮಗನೆ. ಇದನ್ನೆಲ್ಲ ನಾನೂ ಅನುಭವಿಸುತ್ತಿದ್ದೇನೆ. ನಿನಗಾಗಿ!
ನನ್ನನ್ನ ಅರ್ಥ ಮಾಡಿಕೊಳ್ಳೋದಕ್ಕೆ ನಿನಗಿದು ಮಾರ್ಗದರ್ಶಿಯಾಗಬೇಕು.
ನೆನಪಿದೆಯಲ್ಲ? ನಾಳೆ ಅಸ್ತಮಾನದ ಒಳಗೆ ರಾಜಕುಮಾರಿಯ ಕತ್ತಿನಲ್ಲಿಯ
ಮದ್ದಿನ ಬಳ್ಳಿಯ ಕಿತ್ತುಹಾಕು ಅವಳನ್ನು ನನಗೆ ಒಪ್ಪಿಸಬೇಕು. ನಾಳೆಯೇ
ಅವಳ ಮದುವೆ ಮತ್ತು ಕೊನೆಯ ಗಳಿಗೆ; ಮುಹೂರ್ತ ನಿಶ್ಚಯಿಸಿಯಾಗಿದೆ;
ನಾನು ಕಾಯುತ್ತೇನೆ.

ಸಂಜೀವಶಿವ : ಕ್ಷಮಿಸು, ಅದಾಗುವುದಿಲ್ಲ ತಾಯಿ.

ತಾಯಿ : ಅಂದರೆ ನೀನೇನು ಮಾತಾಡುತ್ತಿದ್ದೀ-ಗೊತ್ತ ನಿನಗೆ?

ಸಂಜೀವಶಿವ : ಸರಿಯಾಗಿ ಗೊತ್ತು. ಇನ್ನೊಮ್ಮೆ ಹೇಳುತ್ತೇನೆ ಕೇಳು ತಾಯಿ:
ನಾನೊಮ್ಮೆ ರೋಗಿಯ ನಾಡಿ ಹಿಡಿದು ವೈದ್ಯ ಮಾಡಿದ ಮೇಲೆ
ರೋಗಿ ಉಳಿಯಲೇಬೇಕೆಂಬುದು ನೀನೇ ನನಗೆ ಕೊಟ್ಟ ವರ.
ಅದನ್ನು ಉಳಿಸಿಕೊಳ್ಳೋದೂ ಬಿಡೋದೂ ನಿನಗೆ ಬಿಟ್ಟದ್ದು.
(ಹೊರಡುವನು)

* * *