(ಬಂಡೆ. ಅದರಡಿಯ ಗವಿ. ಮೂಲಿಕೆ ಮತ್ತು ಪುಟ್ಟಜಿಂಕೆಯ ಮರಿಯೊಂದಿಗೆ ಸಂಜೀವಶಿವನ ಪ್ರವೇಶ. ಅವನು ಬಂಡೆಯನ್ನು ಆಶ್ಚರ್ಯದಿಂದ ನೋಡುತ್ತಿರುವಂತೆ ಮಾರ ಬರುವನು.)
ಮಾರ : ಸ್ವಾಮೀ ಶರಣು.
ಸಂಜೀವಶಿವ : ಶರಣು, ನೀನೊಮ್ಮೆ ನನ್ನ ವೈದ್ಯಶಾಲೆಗೆ ಬಂದಿದ್ದೆಯಲ್ಲವೆ?
ಮಾರ : ಹೌದು ಸ್ವಾಮೀ, ನಾನು ಮಾರ. ನಿಮ್ಮನ್ನು ನೋಡಿಯೇ ಬಂದೆ.
ಸಂಜೀವಶಿವ : ಅದೇ ಅಂದುಕೊಂಡೆ. ಹೆಂಗಿದ್ದೀ ಮಾರ?
ಮಾರ : ಹಿಂಗಿದ್ದೀನಿ ಸ್ವಾಮಿ!
ಸಂಜೀವಶಿವ : ಬೆಟ್ಟದಮಾಯೀಬಂಡೆ ಅಂತಾರಲ್ಲ, ಇದೇ ಏನು ಮಾರ?
ಮಾರ : ಹೌದು ಸ್ವಾಮೀ.
ಸಂಜೀವಶಿವ : ಭಯಂಕರ ಬಂಡೆ ಇದು! ಈ ಬಂಡೆ, ಇದರಡಿಯ ಗವಿ!
ದೂರದಿಂದ ಈ ಪ್ರದೇಶವನ್ನ ನುಂಗೋದಕ್ಕೆ ಬಾಯ್ದೆರೆದ
ದೊಡ್ಡ ಕಾಡುಪ್ರಾಣಿಯ ಹಾಗೆ ತೋರುತ್ತದೆ, ಮಾರಾಯಾ!
ಒಳಗಡೆ ಏನಿದೆ ಮಾರ?
ಮಾರ : ಅದನ್ನು ಮಾತ್ರ ಕೇಳಬೇಡಿ ಸ್ವಾಮಿ!
ಗವಿಯಲ್ಲಿ ಏನಿದೆಯೆಂದು ಯಾರಿಗೂ ತಿಳಿಯದು,
ಅದೊಂದು ಭಯಾನಕವಾದ ಕಪ್ಪುಕುಳಿ. ಒಳಗೆ ಹೊಕ್ಕವರಿಲ್ಲ.
ಹೊಕ್ಕವರು ಹೊರಗೆ ಬಂದದ್ದಿಲ್ಲ. ಜನ ದನ ಇರಲಿ,
ಅದರೊಳಗೆ ಹೊಕ್ಕ ಬೆಳಕು ಮತ್ತು ದನಿ ಕೂಡ
ಹೊರಕ್ಕೆ ಬರೋದಿಲ್ಲ. ಆದರೆ ಎಲ್ಲ ಪದಾರ್ಥ ಮತ್ತು ಪ್ರಾಣಿಗಳನ್ನು
ಕೊಳೆಹಾಕಿ ಸೂಸುವ ಒಂದು ದುರ್ನಾತ
ಅದರ ತುಂಬ ಇಡಗಿದ್ದು, ಅದರ ಸಮೀಪ ಸುಳಿದರೂ ಸಾಕು
ಮೂಗಿಗೆ ನೋವು ಮಾಡುವಷ್ಟು ಕಟುವಾಗಿ ಹೊಡೆಯುತ್ತದೆ.
ಅಮಾವಾಸ್ಯೆ ದಿನ ರಾತ್ರಿ ಗವಿಯ ಆರ್ಭಟ ಹೇಳತೀರದು!
ಆಕಾಶ ಕದಡಿ ಮರಗಳನ್ನು ಬೇರು ಸಮೇತ ಕಿತ್ತುರುಳಿಸುವ
ಭಯಂಕರ ಬಿರುಗಾಳಿ ಬೀಸುತ್ತದೆ! ಬೀಸಿತೇ-
ಇರುವೆ ಮೊದಲು ಆನೆ ಕಡೆಯಾಗಿ ಎಲ್ಲ ಜೀವರಾಶಿ
ಅಲ್ಲೋಲ ಕಲ್ಲೋಲ ಗೊಂಡು, ಗವಿಯ ಬಾಯ ಕುಳಿಯೊಳಕ್ಕೆ
ನುಗ್ಗುತ್ತಿರುವಂತೆ ಅನಿಸುತ್ತದೆ.
ಗೋರಿಗಳು ಬಾಯ್ದೆರೆದು ನೂರಾರು ಹಸಿ ಹೆಣಗಳು ಎದ್ದು
ಬೊಬ್ಬೆಹಾಕುತ್ತ ನೇರ ಗವಿಯೊಲಕ್ಕೇ ಓಡುತ್ತವೆ!
ಒಂದು ಬಾರಿಯಂತೂ ಜೀಬರ ಮಳೆ ಅಂದುಕೊಂಡು
ನೋಡಿದರೆ ಮೈತುಂಬ ನೆತ್ತರಿನ ತುಂತುರು ಸಿಡಿದಿದ್ದವು!
ಸಂಜೀವಶಿವ : ಇದೆಲ್ಲ ನಿನ್ನ ಅನುಭವವ? ಅಥವಾ ಕೇಳಿಸಿಕೊಂಡದ್ದ?
ಮಾರ : ಕಣ್ಣಾರೆ ಕಂಡದ್ದನ್ನ ಹೇಳಿದೆ ಸ್ವಾಮಿ.
ಸಂಜೀವಶಿವ : ಹಿಂದೆ ಎಂದಾದರೂ ತಾಯಿಯ ದರ್ಶನವಾಗಿತ್ತ ನಿನಗೆ?
ಮಾರ : ಹೌದು. ನಾನಾಗ ಇನ್ನೂ ಚಿಕ್ಕವನು.
ಗೋರಿ ಅಗಿಯೋದು ನನ್ನ ಕುಲಕಸಬು. ಆದರೆ ನನ್ನ ಹೆತ್ತಬ್ಬೆಗೆ
ಗೋರಿ ಅಗಿಯೋ ಕೆಲಸ ಅಂದರೆ ಭಯ. ಗೋರಸ್ಥಾನದ
ಕಡೆಗೆ ಬಿಡುತ್ತಿರಲಿಲ್ಲ ನನ್ನನ್ನ. ಕುಲಕಸುಬು ಅಂದಮೇಲೆ
ಯಾರಾದರೂ ಸತ್ತಾಗ ಸುಮ್ಮನಿರಲಾಗುತ್ತದೆಯೆ? ಅಬ್ಬೆಯ
ಕಣ್ಣು ತಪ್ಪಿಸಿ ಅಗಿಯುತ್ತಿದ್ದೆ. ಹೀಗೆ ಮದುವೆಯಾದೆ.
ಮಗಳಾದಳು. ಹೆಂಡತಿ ಸತ್ತಳಾದ್ದರಿಂದ ಮನೆ ಕಡೆ ಧ್ಯಾನ
ಕಡಮೆಯಾಯ್ತು.
ಒಂದು ದಿನ ಸಂಜೆ ಇಲ್ಲೇ ಗೋರೀಮೇಲೆ ದಣಿದು
ಒರಗಿದ್ದೆ. ಯಾವಾಗ ನಿದ್ದೆ ಹತ್ತಿತ್ತೊ! ಅಬ್ಬೆ ಬಂದು
’ಮಾರಾ’ ಅಂದಳು. ಎಚ್ಚರಾಗಿ ನೋಡಿದರೆ ಆಗಲೇ ನಡುರಾತ್ರಿ
ಆಗಿಬಿಟ್ಟಿದೆ! ಮನೆಮಾರು ಮರೆತು ಹಿಂಗೆ ಮಾಡಿದರೆ
ಹೆಂಗೊ ಅಂದು ಸಿಟ್ಟು ಮಾಡಿದಳು. “ನಿದ್ದೆ ಹತ್ತಿದ್ದು ಗೊತ್ತೇ
ಆಗಲಿಲ್ಲ” ಅಂತ ಗೊಣಗುತ್ತ ಜೊತೆ ಹೋದೆ. ಅಬ್ಬೆ ಬಳಿಕ
ಅನ್ನಕ್ಕೆ ಬಾಡು ಬಡಿಸಿದಳು ನೋಡು ಅತ್ತಿತ್ತ ನೋಡದೆ
ಗಬಗಬ ಹೊಟ್ಟೆತುಂಬ ತಿಂದೆ. ಆಮೇಲೆ ನೋಡುತ್ತೇನೆ:
ಇಡೀ ಶಿವಾಪುರದ ಜನ ಹೆದರಿ ಗಡಗಡ ನಡುಗುವ
ಬೆಟ್ಟದ ಗವಿಯ ಒಳಗಡೆಯೇ ಇದ್ದೇನೆ! ಹೆದರಿಸುವಂಥಾದ್ದೇನೂ
ಅಲ್ಲಿರಲಿಲ್ಲ. “ಅಬ್ಬೆ ಅದ್ಯಾಕೆ ಊರವರು ಇಷ್ಟು ಹೆದರುತ್ತಾರೆ
ಈ ಗವಿಗೆ?” ಅಂದೆ. ಅಬ್ಬೆ ಮುಗುಳುನಕ್ಕಳಷ್ಟೆ.
“ಮಗಳು ಹೆಂಗಿದಾಳ್ಪ?” ಅಂದಳು.
“ಚೆನ್ನಾಗಿದ್ದಾಳಬ್ಬೆ” ಅಂದೆ.
“ನಾಳೆ ಕರಕೊಂಬಾ” ಅಂದಳು.
“ಆಯ್ತಮ್ಮ” ಅಂದೆ, ಬಂದೆ.
ಗವಿಯಿಂದ ಹೊರಗೆ ಬಂದಕೂಡಲೇ ನೆನಪಾಯಿತು ನೋಡು;
ನನ್ನ ಹೆತ್ತಬ್ಬೆ ಸತ್ತು ವರ್ಷಗಳಾದುವು ಅಂತ!
ಗುಡಿಸಲಿಗೆ ಓಡಿ ಬಂದು ಎಲ್ಲ ಜ್ಞಾಪಿಸಿಕೊಂಡೆ.
ಅಬ್ಬೆ ಸೀರೆ ಒಳಗೆ ಖಾಲಿಯಿದ್ದಳು! ಯಾರಿರಬಹುದು ಅಂದೆ!
ಅವಳು ನನ್ನ ಹೆತ್ತಬ್ಬೆ ಅಲ್ಲವೇ ಅಲ್ಲ!
ಗಾಬರಿಯಾಗಿ ಮೈ ಜಲಜಲ ಬೆವರಿ
ನಿಂತ ನೆಲ ಒದ್ದೆಯಾಯ್ತು!
ಬೆಳಿಗ್ಗೆದ್ದು ಮಗಳನ್ನು ಎಬ್ಬಿಸಿದೆ.
ಅವಳಾಗಲೇ ತಾಯೀ ಪಾದ ಸೇರಿದ್ದಳಪ್ಪ!
ಅಂದಿನಿಂದ ಕನಸಿನಲ್ಲ ಬಂದಾಕೆ ಯಾರು ಅಂತ
ಅನುಮಾನವಿದ್ದೇ ಇತ್ತು.
ನಿನ್ನೆ ನಿನ್ನ ವೈದ್ಯಶಾಲೆಯಲ್ಲಿ ಪ್ರತ್ಯಕ್ಷಳಾದಳಲ್ಲ,
ಆಹಾ ಇವಳೇ ಶೆಟಿವಿತಾಯಿ,
ಆ ದಿನ ಬಂದವಳು ಅಂತ ಖಾತ್ರಿಯಾಯ್ತು.
ಸಂಜೀವಶಿವ : ಈಗ ನೆನಪಾಯಿತು, ನಿನ್ನನ್ನ ಕೇಳಬೇಕಂತ ಇದ್ದೆ
ಮಾರ, ಆ ದಿನ ನೀನು ತಾಯಿಯ ಅಪ್ಪಣೆ ಆಯ್ತು,
ನಾರೋ ಬೇರೋ ಕುದಿಸಿ ಕುಡೀತೀನಿ ಬಿಡಪ್ಪ
ಅಂದು ಮದ್ದು ತಗೊಳ್ಳದೇ ಹೋದೆ. ಏನಿದರ ಅರ್ಥ?
ತಾಯ ಕೃಪೆ ಆದಮೇಲೆ ನನ್ನ ಮದ್ದಿನ
ಅಗತ್ಯ ಇಲ್ಲ ಅಂತಲಾ?
ಮಾರ : ಸ್ವಾಮೀ, ನೀವು ಮಹಾವೈದ್ಯರು. ಆ ಮಹಾತಾಯಿ
ವೈದ್ಯರ ಪರಮದೇವತೆ. ಆ ತಾಯಿಯ ಕೃಪೆ
ಅಗತ್ಯವಿದ್ದುದರಿಂದಲೇ ಅಲ್ಲವೆ ನೀವು ತಾಯ ಅಗಮನಕ್ಕಾಗಿ
ಕಾದದ್ದು? ಇದರಲ್ಲಿ ನಿಮ್ಮ ವೃತ್ತಿ ಮೇಲ್ಮೆಯನ್ನ
ಕಡಿಮೆ ಮಾಡಿದಂತಾಗಲಿಲ್ಲ! ಅಲ್ಲವೆ?
ಅಲ್ಲದೆ ಆ ದಿನ ತಾಯಿ ಆ ಮಗುವಿನ ಎಡಗಡೆ ನಿಂತು ಕೃಪೆ ಮಾಡಲಿಲ್ಲವಾಗಿ
ನನಗೆ ಬೇಸರವಾದದ್ದು ನಿಜ.
ಸಂಜೀವಶಿವ : ಅಂದರೆ ತಾಯಿಯ ಕೃಪೆಯಾಗಿ ನಾನು ಉಚಿತವಲ್ಲದ ಮದ್ದು
ಕೊಟ್ಟರೂ ರೋಗ ವಾಸಿಯಾಗುತ್ತದೆ ಎಂದ ಹಾಗಾಯಿತಲ್ಲವೆ?
ಮಾರ : ಆದರೆ ಅಂಥ ಮದ್ದನ್ನು ನೀವು ಕೊಡಲಾರಿರಿ.
ಸಂಜೀವಶಿವ : ಯಾಕೆ?
ಮಾರ : ಯಾಕೆಂದರೆ ನೀವು ಮಹಾತಾಯಿಯ ಮಗ.
ಅಗೋ, ಅರಮನೆಯ ಕಹಳೆಯ ದನಿ ಕೇಳಿಸಿದಂತಾಯಿತು.
ಬರುತ್ತೇನೆ ಸ್ವಾಮೀ.
(ಹೋಗುವನು. “ಸೋ ಎನ್ನಿ ಶುಭವೆನ್ನಿ! ಮಂಗಳ ಶುಭವೆನ್ನಿ ಅವ್ವಾ ಬಂಗಾರಿ! ರಾಜಕುಮಾರಿ! ಸಿಂಗಾರ ಸಿರಿಗೆ ಶುಭವೆನ್ನಿ||” ಎಂಬ ಹಾಡು ಕೇಳಿಸಿ ಸಂಜೀವಶಿವ ಆ ಕಡೆ ನೋಡುವನು. ಗವಿಯ ಕಡೆಯಿಂದ ಒಬ್ಬಳು ಮುದುಕಿ ಬರುವಳು.)
ಸಂಜೀವಶಿವ : ಅರೆ! ಗವಿಯ ಒಳಗಡೆಯಿಂದಲೇ ಮುದುಕಿ ಬರುತ್ತಿದ್ದಾಳೆ!
ಏ ಅಜ್ಜಿ ಗವಿಯ ಒಳಗಡೆಯಿಂದ ಬಂದೆಯಾ!
ಮುದುಕಿ : ಹೌದು. ಕಾಣಲಿಲ್ಲವೇ?
ಸಂಜೀವಶಿವ : ಈ ಗವಿಯೊಳಕ್ಕೆ ಹೋದವರು ಹೊಕ್ಕೆ ಬರೋದಿಲ್ಲ ಅಂತಾರೆ!
ಮುದುಕಿ : ಹೌದು.
ಸಂಜೀವಶಿವ : ಮತ್ತೆ ನೀನು ಬಂದೆಯಲ್ಲ!
ಮುದುಕಿ : ನಾ ಬಿಡು ಮುದುಕಿ. ನನ್ನನ್ನು ಸಾವು ಕೂಡ ಮುಟ್ಟೋದಿಲ್ಲ. ಆದರೆ
ನಿನ್ನಂಥವರು ಒಳಗೆ ಹೋಗಬಾರದಪ್ಪ.
ಸಂಜೀವಶಿವ : ಒಳಗಡೆ ಏನಿದೆ ಅಜ್ಜಿ?
ಮುದುಕಿ : ಅದನ್ನ ಕಂಡವರ್ಯಾರೂ ಇಲ್ಲವಪ್ಪ. ಹೀಗಿರಬಹುದು ಅಂತ
ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಾರೆ. ಅದೊಂದು
ಒಡೆಯಲಾಗದ ಒಗಟು ಅಂತಾರೆ.
ಎಲ್ಲ ಬೆಳಕಿನ ಎಲ್ಲ ಕತ್ತಲೆಯ ಗುರಿ ಅಂತಾರೆ.
ನನಗದೆಲ್ಲ ಗೊತ್ತಾಗದಪ್ಪ. ನೀನು ಶಿವಾಪುರ ಹಟ್ಟಿಯ
ಶೆಟಿವಿ ತಾಯಿಯ ಮಗ ಅಲ್ಲವೆ?
ಸಂಜೀವಶಿವ : ಹೌದು.
ಮುದುಕಿ : ನೀನ್ಯಾಕೆ ಈ ಕಡೆ ಬಂದಿದ್ದೆ?
ಸಂಜೀವಶಿವ : ಗಿಡಮೂಲಿಕೆ ಹುಡುಕಿಕೊಂಡು ಬಂದಿದ್ದೆ, ನೀನ್ಯಾಕೆ ಒಳಗಡೆ ಹೋಗಿದ್ದೆ?
ಮುದುಕಿ : ನೀನೇನು ಕಳೆದುಕೊಳ್ತೀಯೋ ಅದನ್ನು ಹುಡುಕೋದಕ್ಕೆ.
ಸಂಜೀವಶಿವ : ನಾನಿನ್ನೂ ಏನನ್ನೂ ಕಳೆದುಕೊಂಡಿಲ್ಲವಲ್ಲ?
ಮುದುಕಿ : ಅದು ನಿಧಾನ ಗೊತ್ತಾಗೋದು. ನಿನಗೆ ತಿಳಿದಾಗ ಹುಡುಕಿದರೆ
ಸಿಕ್ಕದೇ ಇರೋದನ್ನು ಈಗಲೇ ಹುಡುಕುತ್ತಾ ಇದ್ದೆ.
ಅಗೋ ಮದುವಣಗಿತ್ತಿ ಬಂದಳು.
ನೀನು ನಿನ್ನ ಆಟಮಾತ್ರ ಆಡಪ್ಪ. ಅವಳ ಆಟವನ್ನೂ ನೀನೇ ಆಡಬೇಡ.
(ಹೋಗುವಳು. ಅವಳ ಮಾತು ಅರ್ಥವಾಗದೆ ದಿಗಿಲಿನಲ್ಲಿರುವಾಗ ರಾಜಕುಮಾರಿ ಅವಸರದಿಂದ, ಸೆಳೆಯಲ್ಪಟ್ಟವಳಂತೆ ಗವಿಗುರಿಯಾಗಿ ಹೋಗುತ್ತಿರುವಳು. ಸಂಜೀವಶಿವ ಓಡಿಹೋಗಿ)
ಸಂಜೀವಶಿವ : ಏ ಏ ಹುಡುಗಿ, ನಿಲ್ಲು ಆ ಕಡೆ ಹೋಗಬೇಡ. ನಿಲ್ಲು ಅಂದೆ.
(ಅವಳು ಅವನ ಮಾತಿಗೆ ಗಮನ ಕೊಡದೆ ಮತ್ತೂ ಆ ಕಡೆಗೇ ಹೋಗುತ್ತಿರುವಳು. ಈಗ ಸಂಜೀವಶಿವ ಅಡ್ಡಗಟ್ಟುವನು.)
ಏನಾಗಿದೆ ನಿನಗೆ? ಆ ಕಡೆ ಹೋಗಬೇಡ ಅಂದರೆ ಕೇಳಿಸೋದಿಲ್ಲವೆ?
ರಾಜಕುಮಾರಿ : ಯಾಕೆ ಹೋಗಬಾರದು?
ಸಂಜೀವಶಿವ : ಅದು ಅಪಾಯದ ಜಾಗ. ಒಳಕ್ಕೆ ಹೋದವರ್ಯಾರೂ
ಹೊರಕ್ಕೆ ಬರೋದಿಲ್ಲಾಂತ ಈಗಷ್ಟೆ ಗೊತ್ತಾಯ್ತು. ನೀನು
ಒಳಕ್ಕೆಹೋಗೋದಕ್ಕೇ ಅವಸರ ಮಾಡ್ತೀಯಲ್ಲ!
ರಾಜಕುಮಾರಿ : ನಾನೂ ಒಳಕ್ಕೆ ಹೋಗ್ತಿರೋದು ಹೊರಕ್ಕೆ ಬರಬಾರದೂಂತ್ಲೇ.
ಸಂಜೀವಶಿವ : ಅಂದರೆ?
ರಾಜಕುಮಾರಿ : ಸಾಯೋದಕ್ಕೆ, ಅಂದರೆ ಪ್ರಾಣ ಕಳೆದುಕೊಳ್ಳೋದಕ್ಕೆ!
ಸಂಜೀವಶಿವ : ಅಂಥಾದ್ದೇನಾಗಿದೆ ನಿನಗೆ?
ರಾಜಕುಮಾರಿ : ಇನ್ನೇನಾಗಬೇಕು ಮಹಾಶಯಾ? ಕಣ್ಣಿಗೆ ಕಾಣಿಸೋದಿಲ್ಲವೆ?
ಮುಖ ಬಿಳಿಚಿದೆ. ತುಟಿ ಒಣಗಿವೆ. ಕಣ್ಣಲ್ಲಿ ಬೆಳಕಿಲ್ಲ.
ಮೂಳೆ ತುಂಬಿದ ಚೀಲದ ಹಾಗೆ ಕಾಣಿಸ್ತಿದ್ದೇನೆ, ಸಾಲದ?
ನೂರಾ ಎಂಟು ರೋಗಗಳಿವೆ ಸ್ವಾಮೀ, ಹದಿನೈದು ದಿನಗಳಿಂದ
ಬಂದ ಜ್ವರ ಇಳಿದಿಲ್ಲ. ಅದಕ್ಕೇ ಜೀವ ಬೇಸರವಾಗಿ
ಸಾಯೋದಕ್ಕೆ ಹೊರಟಿದ್ದೀನಿ.
ನಾನು ಸತ್ತರೆ ನಿನ್ನದೇನೂ ತಕರಾರಿಲ್ಲ ತಾನೆ?
(ಮತ್ತೆ ಹೊರಡುವಳು. ಸಂಜೀವಶಿವ ತಡೆಯಲು ಕೈಯೊಡ್ಡಿ ಸಿಕ್ಕ ಮುಂಗೈ ಹಿಡಿದೆಳೆಯುವನು. ಕೈಗೆ ತಕ್ಷಣ ಅವಳ ನಾಡಿ ಸಿಗುವುದು. ಪರೀಕ್ಷೆ ಮಾಡತೊಡಗುವನು. ಅವಳೂ ಸಹಕರಿಸುವಳು. ಮಾತು ಮುಂದುವರಿದಂತೆ, ರೋಗ ಪತ್ತೆ ಮಾಡುತ್ತಿರುವನಾದ್ದರಿಂದ ಅವಳ ಮಾತಿನ ಕಡೆಗೆ ಲಕ್ಷ್ಯ ಕಡಿಮೆ.)
ಸಂಜೀವಶಿವ : ವೈದ್ಯರ್ಯಾರೂ ಸಿಕ್ಕಲಿಲ್ಲವೆ?
ರಾಜಕುಮಾರಿ : ಅವನ್ಯಾರೋ ಸಂಜೀವಶಿವ ವೈದ್ಯನಂತೆ. ಎಷ್ಟು ಬಾರಿ
ಹೇಳಿ ಕಳಿಸಿದರೂ ಬರಲಿಲ್ಲ. ಬದುಕೋದು ನನ್ನ ಹಣೆಯಲ್ಲಿಲ್ಲ.
ದೊಡ್ಡ ವೈದ್ಯನೆಂಬ ಜಂಬ ಅವನಿಗೆ.
ಉಳಿದ ವೈದ್ಯರಿಗೆ ನನ್ನ ರೋಗ ಪತ್ತೆ ಮಾಡುವುದಾಗಲಿಲ್ಲ.
ಸಂಜೀವಶಿವ : ನೀನು ಈ ಕಡೆ ಬಂದಿರೋದು ಮನೆಯವರಿಗೆ ಗೊತ್ತಾ?
ರಾಜಕುಮಾರಿ : ಗೊತ್ತಾದರೆ ಯಾರಾದರೂ ಸಾಯೋದಕ್ಕೆ ಬಿಡ್ತಾರಾ?
ಅಮ್ಮ ಇದ್ದಿದ್ದರೆ ಆ ಮಾತು ಬೇರೆ. ಅಪ್ಪ, ಸೇವಕರು
ಅತ್ತೂ ಕರೆದೂ… ನನಗದೆಲ್ಲಾ ಬೇಕಿರಲಿಲ್ಲ.
ಸಾಯಬೇಕೆಂತ ನಿಶ್ಚಯ ಮಾಡಿದೆ, ಬಂದೆ.
ಸಂಜೀವಶಿವ : ಭಲೆ ಭಲೆ.
ರಾಜಕುಮಾರಿ : ನನಗ್ಗೊತ್ತಿತ್ತು ನೀನು ಮೆಚ್ಚಿಕೊಳ್ತಿ ಅಂತ,
ಆದರೆ ನೀನು ಮೆಚ್ಚಲಿ ಅಂತ ನಾನು ಸಾಯ್ತಿಲ್ಲ.
ಸಂಜೀವಶಿವ : ಮತ್ತೆ ಯಾಕೆ ಸಾಯ್ತೀಯಾ?
ರಾಜಕುಮಾರಿ : ಅಯ್ಯೋ ಎಷ್ಟು ಸಲ ಹೇಳೋದು? ಮೈತುಂಬ ನೋವು,
ಸಂಕಟ, ವೈದ್ಯರ ಮದ್ದು ನಾಟಲಿಲ್ಲ, ಅದಕ್ಕೇ.
ಜೀವನದಲ್ಲಿ ಜುಗುಪ್ಸೆ ಆದವರು ಬದುಕ್ತಾರಾ?
ಸಂಜೀವಶಿವ : ನಾನು ನಿನಗೆ ಸಹಾಯ ಮಾಡಬಹುದ?
ರಾಜಕುಮಾರಿ : ನನಗೆ ಯಾರ ಸಹಾಯವೂ ಬೇಕಿಲ್ಲ. ನಾನು ಕ್ಷತ್ರಿಯ
ರಾಜಕುಮಾರಿ. ನಾನೊಬ್ಬಳೇ ಸಾಯಬಲ್ಲೆ.
ಸಂಜೀವಶಿವ : ರಾಜಕುಮಾರಿ ನೀನೇನಾ?
ರಾಜಕುಮಾರಿ : ಹೌದು. ಈಗಲಾದರೂ ಸಾಯಲಿಕ್ಕೆ ಬಿಡ್ತೀಯಾ ಮಹಾಶಯಾ?
ಸಂಜೀವಶಿವ : ಒಬ್ಬಳೇ ಸಾಯೋದಕ್ಕೆ ಭಯವಾಗೋದಿಲ್ಲವೆ?
(ತಕ್ಷಣ ದೃಶ್ಯದ ಆರಂಬದಲ್ಲಿ ಕಂಡ ಮುದುಕಿ ಕಾಣಿಸಿಕೊಳ್ಳುತ್ತಾಳೆ.)
ಮುದುಕಿ : ಭಯ ಯಾಕೆ? ಅಗೋ ಎದುರಿಗಿದೆಯಲ್ಲ, ಆ ಗವಿಯಲ್ಲಿ
ಹೊಕ್ಕರಾಯ್ತು, ನಿನ್ನ ನೋವು, ಸಂಕಟ, ಭಯ ಒಂದೂ
ಇರೋದಿಲ್ಲ. ಎಲ್ಲದರಿಂದ ಮುಕ್ತಿ ಪಡೀತೀಯ.
ರಾಜಕುಮಾರಿ : ಅಲ್ಲೀತನಕ ನಡೀಲಿಕ್ಕಾಗೋದಿಲ್ಲವಲ್ಲಮ್ಮ, ನೋಡು;
ಚಪ್ಪಲಿ ಹರಿದು ಮುಳ್ಳು ಚುಚ್ಚಿ ರಕ್ತ ಹ್ಯಾಗೆ
ಸುರೀತಿದೆ ಕಾಲಿನಿಂದ!
ಮೈಯೊಳಗಿನ ರಕ್ತವೆಲ್ಲಾ ಸೋರಿ, ಮೈ ಖಾಲಿಯಾಗಿ
ಒಣಗಿ ಸತ್ತರೂ ಸರಿಯೆ, ನಾನು ಹೆದರೋದಿಲ್ಲ.
ಮುದುಕಿ : ಇದಪ್ಪ ಕ್ಷತ್ರಿಯ ಛಲ ಅಂದರೆ!
ರಾಜಕುಮಾರಿ : ಯಾಕಯ್ಯ ಹಾಗೆ ಕೈ ಹಿಸುಕುತ್ತಿ?
ಸಂಜೀವಶಿವ : ನಾಲಗೆ ತಗೀ ನೋಡೋಣ.
ರಾಜಕುಮಾರಿ : (ಬಾಯಿ ತೆಗೆದು ನಾಲಗೆ ತೋರಿಸುತ್ತ) ಆs…. ವೈದ್ಯನ ನೀನು?
ಸಂಜೀವಶಿವ : ಹೌದು, ಕಣ್ಣಗಲ ಮಾಡು.
ರಾಜಕುಮಾರಿ : ಇಕಾ, ಆಯ್ತ? ನಿನ್ನಂಥಾ ಸಾವಿರ ವೈದ್ಯರನ್ನ ಬಲ್ಲೆನಯ್ಯಾ
ನಾನು. ಗವಿಯತನಕ ನಡೀಲಿಕ್ಕಾಗೋದಿಲ್ಲ, ಇಲ್ಲೇ
ಸಾಯುವಂಥಾ ಮದ್ದೇನಾದರೂ ಇದ್ದರೆ ಕೊಡು.
ಸಂಜೀವಶಿವ : ನೇಣು ಹಾಕಿದರಾದೀತ?
ರಾಜಕುಮಾರಿ : ಯಾವುದೋ ಬೇಗನೇ ಕೊಡು ಮಹಾಶಯಾ.
(ಸಂಜೀವ ತನ್ನ ಹಡಪದಿಂದ ಮದ್ದಿನ ಬಳ್ಳಿ ತೆಗೆದು ಅವಳ ಕತ್ತಿಗೆ ಕಟ್ಟುವ ಸಮಯದಲ್ಲಿ ಮುದುಕಿ ಬಂದು ರಾಜಕುಮಾರಿಯ ಎಡಗಡೆ ನಿಲ್ಲುವಳು.)
ಮುದುಕಿ : ರಾಜಕುಮಾರೀ, ಅದನ್ನ ಕತ್ತಿಗೆ ಕಟ್ಟಿಕೋಬೇಡ, ಬೇಡ.
ಸಂಜೀವಶಿವ : (ಕಟ್ಟಿ) ರಾಜಕುಮಾರೀ ಈ ಬಳ್ಳಿಯೇ ನೇನು ಅಂತ ತಿಳಿದುಕೊಂಡು
ಕತ್ತಿಗೆ ಕಟ್ಟಿದ್ದೀನಿ. ಇದು ರಾಜಕುಮಾರನ ಹಾಗೆ
ಕತ್ತನ್ನ ತಬ್ಬಿಕೊಳ್ತದೆ. ಪ್ರೀತಿ ಮಾಡುವಾಗಿನಂತೆ ಕ್ಷಣಕ್ಷಣಕ್ಕೆ
ಜೋರಾಗಿ ಬಿಗೀತದೆ. ಉಸಿರುಗಟ್ಟೋತನಕ ಬಿಡೋದಿಲ್ಲ; ಆಯ್ತೆ?
ಮುದುಕಿ : ಲೇ ಸಂಜೀವಶಿವ, ನಿನ್ನ ತಾಯಿ ಕೋಪದಲ್ಲಿ ಕುದಿಯುತ್ತಿದ್ದಾಳೆ.
ಬೇಗ ಮನೆಗೆ ಬರಬೇಕಂತೆ.
ಸಂಜೀವಶಿವ : ಆಯ್ತಮ್ಮ ಬರ್ತೀನಿ.
ರಾಜಕುಮಾರಿ : (ಆನಂದದಿಂದ) ನೀನು ವೈದ್ಯ ಸಂಜೀವಶಿವನ?
ಸಂಜೀವಶಿವ : ಹೌದು.
ರಾಜಕುಮಾರಿ : ಮೊದಲೇ ಯಾಕೆ ಹೇಳಲಿಲ್ಲ?
ಸಂಜೀವಶಿವ : ನೀನು ಕೇಳಲಿಲ್ಲ.
ಮುದುಕಿ : ಲೋ ಮಗ, ಹ್ಯಾಗೆ ಹೇಳಲೋ ನಿನಗೆ? ಇದಕ್ಕಾಗಿ ನೀನು ದಂಡ
ತೆರಬೇಕಾಗುತ್ತದೆ. ನೆನಪಿರಲಿ.
ರಾಜಕುಮಾರಿ : (ಸಂತೋಷಾತಿಶಯದಿಂದ) ನನ್ನ್ನನು ಬದುಕಿಸೋವಷ್ಟು ನಿನ್ನ ಆಯುರ್ವೇದ
ಬೆಳೆದಿದೆಯ ವೈದ್ಯ ಮಹಾಶಯಾ?
ಸಂಜೀವಶಿವ : ಅಷ್ಟಂತೂ ಬೆಳೆದಿದೆ.
ರಾಜಕುಮಾರಿ : ನಾನು ನಿಜವಾಗಿಯೂ ಬದುಕುತ್ತೀನ ವೈದ್ಯಮಹಾಶಯಾ?
ಸಂಜೀವಶಿವ : ಹೌದು ನನ್ನ ಮಾತು ಕೇಳಿದರೆ,
ರಾಜಕುಮಾರಿ : ನಾನು ಬದುಕ್ತೀನಿ ಅಂತ ಯಾಕನಿಸ್ತು ನಿನಗೆ?
ಸಂಜೀವಶಿವ : ಯಾಕೆಂದರೆ ನಾನು ವೈದ್ಯ.
ರಾಜಕುಮಾರಿ : ನಾನು ಬದುಕೋದಿಲ್ಲ ಅಂತ ನನಗೆ ಯಾಕನ್ನಿಸ್ತು?
ಸಂಜೀವಶಿವ : ಯಾಕೆಂದರೆ ನೀನು ಧಡ್ಡ ರೋಗಿ.
ರಾಜಕುಮಾರಿ : (ರೇಗಿ) ಇನ್ನೊಂದು ಸಲ ಧಡ್ಡಿ ಅಂದರೆ ಏನು ಮಾಡ್ತೀನಿ ಗೊತ್ತ?
ಸಂಜೀವಶಿವ : ಇನ್ನೊಂದು ಸಲ ನೀನು ಧಡ್ಡಿ.
ರಾಜಕುಮಾರಿ : ನಿನ್ನನ್ನ ಕಂಡರೆ ಸಂತೋಷವಾಗುತ್ತೆ.
ಸಂಜೀವಶಿವ : ವೈದ್ಯನನ್ನ ಕಂಡರೆ ಯಮನನ್ನು ಕಂಡ ಹಾಗಾಡ್ತಾರೆ ಜನ!
ರಾಜಕುಮಾರಿ : ಬೇರೆ ವೈದ್ಯರನ್ನ ಕಂಡರೆ ನನಗೂ ಅಷ್ಟೆ.
ಸಂಜೀವಶಿವ : ಈಗ ಈ ಬೇರನ್ನ ಜಗಿದು ನುಂಗು. ಈ ಎಲೆಯನ್ನ
ಅಂಗೈಯಲ್ಲಿ ತಿಕ್ಕಿಕೊಂಡು ಕೆನ್ನೆ, ಕತ್ತು ಮತ್ತು
ಎರಡೂ ಕೈಗಳಿಗೆ ಸವರಿಕೊಳ್ತೀಯಾ?
ರಾಜಕುಮಾರಿ : ಓಹೊ.
(ಹಾಗೆ ಮಾಡುವಳು)
ಸಂಜೀವಶಿವ : ನೀನು ಕ್ಷಮಿಸೋದಾದರೆ ಒಂದು ಅಧಿಕ ಪ್ರಸಂಗತನದ ಮಾತು ಹೇಳಲೇ
ರಾಜಕುಮಾರಿ?
ರಾಜಕುಮಾರಿ : ಹೇಳು. ನಿನ್ನಮಾತು ಕೇಳಿದರೂ ಆನಂದವಾಗುತ್ತದೆ.
ಸಂಜೀವಶಿವ : ನೀನು ತುಂಬಾ ಚೆಲುವೆ. ನಿನ್ನಂಥ ಚೆಲುವೆಯನ್ನ ನಾನು ಈವರೆಗೆ ಕಂಡಿಲ್ಲ.
ಮುದುಕಿ : ಸಂಜೀವ ಇಕಾ ನಾನು ಹೊರಟೆ. ಇನ್ನು ನೀನುಂಟು ನಿನ್ನ ದುರ್ದೈವವುಂಟು.
(ಹೋಗುವಳು.)
ರಾಜಕುಮಾರಿ : ಈ ರೋಗ ಏನಲ್ಲಾ ಬದಲಾವಣೆ ಮಾಡಿದೆ ಕಾಣಬಾರದೆ
ವೈದ್ಯ ಮಹಾಶಯಾ? ಹೊಳೆಯುತ್ತಿದ್ದ ಕೆನ್ನೆಗಳ ಮ್ಯಾಲೆ
ಸುಕ್ಕು ಮೂಡಿ ಕಣ್ಣೀರ ಕಾಲುವೆಗಳಾಗಿವೆ. ಹುಬ್ಬುಗಳು
ಅಕಾಲ ಮುಪ್ಪಡರಿ ಮುದಿಕೋತಿಯ ರೂಪ ಕೊಟ್ಟಿವೆ.
ಆದರೂ ನನ್ನನ್ನ ಸುಂದರಿ ಅಂತೀಯಲ್ಲಾ, ಚೇಷ್ಟೆಗಾಗಿ
ಅಲ್ಲ ತಾನೆ? ನೀನು ಪಕ್ಕದಲ್ಲಿದ್ದರೆ ಗುಣವಾಗುತ್ತೆ
ಅನಿಸುತ್ತದೆ. ಆದರೆ ನೀನು ಹೊರಟು ಹೋದರೆ ಅಂತ ಭಯ.
ಸಂಜೀವಶಿವ : ಗುಣವಾಗೋತನಕ ನಾನುನಿನ್ನನ್ನ ಬಿಟ್ಟು ಹೋಗೋದಿಲ್ಲ.
(ಆಕೆಯ ಬೆವರು ಒರೆಸುತ್ತ) ಇಗೊ ನಿನ್ನ ಮುಖ ತಿಳಿಯಾಗಿ ಕಳೆದೋರುತ್ತಿದೆ;
ಜ್ವರ ಬಿಟ್ಟಿತೇ ನೋಡಿಕೊ.
ರಾಜಕುಮಾರಿ : (ನೋಡಿಕೊಂಡು ಆನಂದದಿಂದ) ಹೌದು! ನಿಜವಾಗ್ಲೂ ನನಗೆ
ಜ್ವರ ಇಲ್ಲ ಈವಾಗ! ನೀವು ನಿಜವಾಗಿ ಮನುಷ್ಯರೇನ್ರಿ?
ಸಂಜೀವಶಿವ : ಯಾಕೆ, ರಾಕ್ಷಸನ ಹಾಗಿದ್ದೀನ?
ರಾಜಕುಮಾರಿ : ಅಲ್ಲ, ನೀವು ಯಾವುದಾದರೂ ದೇವರೇ ಆಗಿರಬಹುದ ಅಂತ!
ಸಂಜೀವಶಿವ : ದೇವರಲ್ಲ ಮನುಷ್ಯನೇ. ಆದ್ದರಿಂದ ನನ್ನನ್ನು ಏಕವಚನದಲ್ಲೇ
ಮಾತಾಡಿಸು. ಮನುಷ್ಯನಾದ್ದರಿಂದಲೇ ಅಮ್ಮ ಹೇಳಿದ್ದು; ಅನುಭವಿಸ್ತೀಯಾ
ಅಂತ.
ರಾಜಕುಮಾರಿ : ಅನುಭವಿಸಿದರೇನಾಗ್ತದೆ?
ಸಂಜೀವಶಿವ : ಲೋಕದ ಗಂಡು ಹೆಣ್ಣಿಗೆ ಆಗೋದೆಲ್ಲ ಆಗ್ತದೆ.
ಸುಖ-ದುಃಖ ನಾಚಿಕೆ ಬೇಸರ ಪಶ್ಚಾತ್ತಾಪ…ಎಲ್ಲಾ.
ರಾಜಕುಮಾರಿ : ಅದೆಲ್ಲಾ ಆದರೆ ಎಷ್ಟು ಚೆನ್ನಾಗಿರ್ತದೆ ಅಲ್ಲವಾ! ನೋಡು:
ಕಣ್ಣು ಮುಚ್ಚಿ ತೆರೆಯೋದರೊಳಗೆ ಈ ಜಗತ್ತು
ಎಷ್ಟು ಸುಂದರವಾಗಿದೆ! ನನಗೆಷ್ಟು ಸಂತೋಷವಾಗಿದೆಯೆಂದರೆ
ಕುಣಿಯೋಣ ಅನ್ನಿಸ್ತಿದೆ!…….
(ಕುಣಿಯತೊಡಗುವಳು. ರಾಜ, ಮಂತ್ರಿ, ಮದನತಿಲಕ, ಮಾರ ಮತ್ತು ಸೈನಿಕರು ಬರುವರು)
ಸೈನಿಕ : ಮಹಾಪ್ರಭು, ಅಗೋ ರಾಜಕುಮಾರಿ ಇಲ್ಲಿದ್ದಾರೆ! ಇವನೇ ಅವರನ್ನು
ಅಪಹರಿಸಿಕೊಂಡು ಬಂದವನು. ಬಂಧಿಸಿರಿ ಅವನನ್ನು.
ಮಾರ : ಪ್ರಭು ಇವನೇ ವೈದ್ಯ ಸಂಜೀವಶಿವ.
(ರಾಜಕುಮಾರಿ ಓಡಿಹೋಗಿ ರಕ್ಷಿಸುವಂತೆ ಸಂಜೀವಶಿವನನ್ನು ಹಿಂದೆ ಹಾಕಿ
ನಿಲ್ಲುವಳು.)
ರಾಜಕುಮಾರಿ : ಅಪ್ಪಾ ಇವನೇ ಸಂಜೀವಶಿವ ವೈದ್ಯ! ನನಗಾಗಲೇ
ಮದ್ದುಕೊಟ್ಟ! ಇಗೋ ನನ್ನ ಜ್ವರ ಇಳಿದಿದೆ!
ರಾಜ : (ಮಗಳ ಜ್ವರ ಪರೀಕ್ಷಿಸಿ) ನಂಬಲಾಗುತ್ತಿಲ್ಲ! ಆದರೆ ಪವಾಡ
ನಡೆದು ಹೋಗಿದೆ! ಎರಡು ವಾರಗಳಿಂದ ಇಳಿಯದ ಜ್ವರ
ಇಳಿದು ರಾಜಕುಮಾರಿ ಪುನಾರ್ಜತಳಾಗಿದ್ದಾಳೆ!
ಧನ್ಯನಾದೆ ವೈದ್ಯ ಮಹಾಶಯಾ! ನಿನ್ನ
ಬಳಿಗೆ ಎಷ್ಟು ಸಲ ಹೇಳಿ ಕಳಿಸಿದರೂ ಬಾರದವನು, ಈಗ
ನೀನಾಗಿ ರಾಜಕುಮಾರಿಗೆ ಸಿಕ್ಕು, ಅವಳಿಗೆ ಮದ್ದು ಕೊಟ್ಟದ್ದು
ನನ್ನ ವಂಶದ ಭಾಗ್ಯ ವಿಶೇಷ. ನಿನ್ನ
ಕೀರ್ತಿಯನ್ನು ಕಿವಿಯಾರೆ ಕೇಳಿದ್ದೆವು. ಈಗ ಕಣ್ಣಾರೆ
ಕಾಣುವಂತಾಯ್ತು.
ಸಂಜೀವಶಿವ : ನನ್ನ ಕರ್ತವ್ಯ ನಾನು ಮಾಡಿದ್ದೇನೆ ಪ್ರಭು. ನಾಳೆ ನಾನೇ
ಬಂದು ರಾಜಕುಮಾರಿಯನ್ನ ನೋಡುತ್ತೇನೆ.
ರಾಜ : ಆಯ್ತು ಮಹಾಶಯ ರಾಜಕುಮಾರಿಯ ಜೊತೆಗೆ ನಮಗೆಲ್ಲ ಆಯುರಾ
ರೋಗ್ಯ ಭಾಗ್ಯ ಕೊಟ್ಟಿದ್ದೀಯಪ್ಪ, ನಿನ್ನ ಉಪಕಾರವನ್ನು ಎಂದಿಗೂ
ಮರೆಯಲಾರೆವು.
ರಾಜಕುಮಾರಿ : ವೈದ್ಯ ಮಹಾಶಯ, ಆ ಮುದುಕಿ ಅರಮನೆಗೆ ಬಂದರೇನು ಮಾಡಲಿ?
ಸಂಜೀವಶಿವ : ಏನೂ ಮಾಡಬೇಡ, ಈ ಬೇರು ಅಗಿಯುತ್ತ ಆಟ ಆಡಿಕೊಂಡಿರು.
(ಕೊಡುವನು. ಎಲ್ಲರೂ ಹೊರಡುವರು)
Leave A Comment