(ಅರಮನೆ. ಒಂದು ಕಡೆ ಅಸ್ವಸ್ಥ ರಾಜಕುಮಾರಿ. ಇನ್ನೊಂದು ಕಡೆ ರಾಜ, ಮಂತ್ರಿ ಚಿಂತೆಯಲ್ಲಿ. ಅಷ್ಟರಲ್ಲಿ ಸೇಡುಮಾರಿ ಬರುವಳು.)

ಸೇಡುಮಾರಿ : ಏನಿದು ಆಶ್ಚರ‍್ಯ!
ಹೊರಗೆ ಬೆಂಕಿ ಹಾಕಿಲ್ಲ. ಛಟ್ಟ ಕಟ್ಟಿಲ್ಲ! ಒಳಗಡೆ
ಯಾರೂ ಅಳುತ್ತಿಲ್ಲ! ರಾಜಕುಮಾರಿ ಇನ್ನೂ ಸತ್ತಿಲ್ಲವೆ?
ಆಗಲೇ ಇಲ್ಲಿ ಅಳುವ ಜನಸಂದಣಿ ಸೇರಿರಬಹುದು,
ಅಳುಬುರುಕ ಕವಿಗಳು ರಚಿಸಿದ ಚರಮಗೀತೆಗಳನ್ನು ಕಲಾವಿದ
ಹೆಂಗಸರು ಹಾಡುತ್ತಿರಬೇಕು ಅಂದುಕೊಂಡೆ. ಇಲ್ಲಿ ನೋಡಿದರೆ
ಏನೂ ಆಗಿಲ್ಲವೆ! ಕೇಳಿ ತಿಳಿಯೋಣವೆಂದರೆ ಆಸುಪಾಸು
ಭೂತಪಿಶಾಚಿಗಳೂ ಕಾಣುತ್ತಿಲ್ಲ! ಅಗೋ ಪುಷ್ಪಗಂಧಿ ಬಂದಳು, ಅವಳನ್ನೇ ಕೇಳುವಾ.
(ರಾಜಕುಮಾರಿಯ ಸೇವಕಿ ಪುಷ್ಪಗಂಧಿ ಬರುವಳು)
ಹೆಂಗಿದ್ದೀಯೇ ತಂಗಿ? ಹಂಗ್ಯಾಕ ನೋಡ್ತೀಯವ್ವಾ?
ನನ್ನ ಗುರುತು ಸಿಗಲಿಲ್ಲವೇ? ನಿನ್ನೆ ನಾ ನೀನು ಇಲ್ಲೇ ಭೇಟಿಯಾಗಲಿಲ್ಲವೆ?

ಪುಷ್ಪಗಂಧಿ : ನಾನು ನಿನ್ನನ್ನ ಎಲ್ಲಿಯೂ ಎಂದೂ ನೋಡಿಲ್ಲವಲ್ಲ!

ಸೇಡುಮಾರಿ : ಸತ್ತಳಲ್ಲ ಮಹಾರಾಣಿ, ಅವಳ ಗೆಳತಿ.
ರಾಜಕುಮಾರಿ ಇವತ್ತು ಸಾಯಬೇಕಿತ್ತಲ್ಲವೆ?

ಪುಷ್ಪಗಂಧಿ : ರಾಜಕುಮಾರಿಯ ಸಾವನ್ನ ಬಯಸುವ ಒಬ್ಬಳಾದರೂ ಸಿಕ್ಕೆಯಲ್ಲ! ನಿನಗೆ ನಮಸ್ಕಾರ. ತಾಯೀ ನೀನ್ಯಾರೋ ನಾನರಿಯೆ. ನಾವು ಏನನ್ನು ಕದ್ದು ನುಡಿಯೋದಕ್ಕೂ ಹೆದರುತ್ತೇವೋ ಅದನ್ನ ಎತ್ತರದ ದನಿಯಲ್ಲಿ ಸಾರಿ ಸಾರಿ ಹೇಳಿದೆಯಲ್ಲ, ನಿನ್ನ ಧೈರ್ಯ ಮೆಚ್ಚಬೇಕಾದ್ದೆ. ಆದರೆ ಅದರಿಂದ ನಿನಗೇನಾದರೂ ಆಗಬೇಕಾದ್ದಿದೆಯೇ ತಾಯಿ?

ಸೇಡುಮಾರಿ : ಇದೊಳ್ಳೇದಾಯ್ತೆ! ಸಾಯ್ತಾಳೆ ಅಂತ ಸಹಾನುಭೂತಿ ಹೇಳೋದಕ್ಕೆ ಬಂದರೆ ನನ್ನನ್ನೇ ಆಡಿಕೊಳ್ತಿಯಲ್ಲೆ!

ಪುಷ್ಪಗಂಧಿ : ನಿಜ. ಒಮ್ಮೆ ಸಾವು ಬಂದು ಜೀವವನ್ನ ಕೊಚ್ಚಿಕೊಂಡಾದರೂ ಹೋದರೆ ಸರಿ. ಬರೋದು ಖಾತ್ರಿಯಾದ ಸಾವನ್ನ ಕಾಯೋದಿದೆಯಲ್ಲ ಅದರಂಥ ನರಕ ಇನ್ನೊಂದಿಲ್ಲ. ರಾಜಕುಮಾರಿಗೆ ನಾವ್ಯಾರೂ ಅವಳ ಸಾವಿನ ಸುದ್ದಿ ಹೇಳಿಲ್ಲ. ಆದರೆ ಆಕೆ ನಮ್ಮಮಾತುಗಳನ್ನ ಕದ್ದಾಲಿಸಿ ವಿಷಯ ತಿಳಿದುಕೊಂಡಿದ್ದಾಳೆ. ವಿಷಯ ಗೊತ್ತಿದ್ದೂ ಗೊತ್ತಿಲ್ಲದಂತೆ ಅವಳು ಅಭಿನಯಿಸುವುದನ್ನ ನೋಡಿ ಕರುಳು ಹಿಂಡಿ ಬರುತ್ತದೆ

ಸೇಡುಮಾರಿ :
ಅಕಾ ಅಕಾ, ಗೆಜ್ಜೆ ಸಪ್ಪಳ ಕೇಳಿಸ್ತ?
ಬಂದಳು ನೋಡು ಮದುವಣಗಿತ್ತಿ!
ಹೊಸಸೀರೆ ಉಟ್ಕೊಂಡು,
ಗೀರುಗಂಧ, ಕುಂಕುಮ ಹಚ್ಚಿಕೊಂಡು…..

ಪುಷ್ಪಗಂಧಿ : ಇದ್ಯಾವುದೋ ಅನಿಷ್ಟ ಮುಂಡೇದು!
ಇಲ್ಲಿಂದ ಹೊರಬೀಳ್ತೀಯಾ? ಇಲ್ಲಾ ದಬ್ಬಬೇಕ? ಯಾರಪ್ಪಾ ಅಲ್ಲಿ?

ಸೇಡುಮಾರಿ : ಮದುವೆಗೆ ಜನ ಬ್ಯಾಡವೇನೆ?
ಆಮಂತ್ರಣ ಇಲ್ಲದೆ ಬಂದಿದೀನಿ. ನನ್ನನ್ನೇ ಹೋಗು ಅಂತೀಯಲ್ಲವೆ? (ಸೇವಕ ಬರುವನು.)

ಪುಷ್ಪಗಂಧಿ : ಕತ್ತಿಗೆ ಕೈಕೊಟ್ಟು ಹೊರಗಟ್ಟು ಇವಳನ್ನ!
(ಸೇವಕ ಹಾಗೆ ಮಾಡಲು ಹೊರಟಾಗ ಸೇಡುಮಾರಿ ಓಡುವಳು. ಸೇಡುಮಾರಿ ವರ್ಣನೆ ಮಾಡಿದ ಹಾಗೆ ಶೃಂಗಾರವಾಗಿ ರಾಜಕುಮಾರಿ ಬರುವಳು. ಮುಖ ಒಣಗಿ ಹೋದ ರೋಗಿಯವಳು.)

ಪುಷ್ಟಗಂಧಿ : ಜ್ವರಬಿಟ್ಟಿತೆ ರಾಜಕುಮಾರಿ?

ರಾಜಕುಮಾರಿ : ಅದು ಸಾಯೋತನಕ ಬಿಡೋದಿಲ್ಲವೆ!

ಪುಷ್ಪಗಂಧಿ : ಹೊಸ ಸೀರೆ……

ರಾಜಕುಮಾರಿ : ರಾತ್ರಿ ಭಯಾನಕ ಕನಸುಕಂಡೆ ಪುಷ್ಪಗಂಧಿ! ಹಳೇಸೀರೆ ಉಟ್ಕೊಂಡು ಮದುವೆಗಾಗಿ ಶೃಂಗಾರವಾಗಿದ್ದೆ! ಅರಮನೆ, ಗುರುಮನೆ-ಇಡೀ ಊರನ್ನ ತಳಿರು ತೋರಣಗಳಿಂದ ಅಲಂಕರಿಸಿದ್ದರು. ಹಿರಿಯರು ಕಿರಿಯರು ಅಪ್ಪ ಮತ್ತು ನೀನು ಕೂಡ ಹಳೇ ಬಟ್ಟೆಯಲ್ಲಿದ್ದಿರಿ. ವರ ಯಾರು ಅಂತ ನೋಡಿದರೆ, ಅವನೊಬ್ಬ ಚಿಂದಿ ಬಟ್ಟೆಯಲ್ಲಿದ್ದ ಭಿಕಾರಿ ಕಣೆ! ಅದಕ್ಕೇ ಕನಸಿನ ಸೇಡಿಗಾಗಿ ಹೊಸ ಸೀರೆ ಉಟ್ಟೆ.

ಪುಷ್ಟಗಂಧಿ : (ಸಂತೋಷದಿಂದ) ರಾಜಕುಮಾರಿ ಇದು ಶುಭದ ಕನಸು!

ರಾಜಕುಮಾರಿ : ಎಲ್ಲರೂ ಯಾಕೆ ಸುಳ್ಳು ಹೇಳುತ್ತೀರಿ? ಏನಾಗಿದೆ ನಿಮಗೆ?
ಸಾಯೋ ದಿನವಾದರೂ ಸತ್ಯ ಹೇಳಬಾರದೆ?
ಈ ದಿನ ನನ್ನ ಮದುವೆ ಮತ್ತು ಸಾವಿದೆಯೆಂದು ಜೋತಿಷಿಗಳು ಹೇಳಿದ್ದು ನಿಜ ತಾನೆ? ದಯವಿಟ್ಟು ಸುಳ್ಳು ಹೇಳಬೇಡ, ನನ್ನಾಣೆ.

ಪುಷ್ಟಗಂಧಿ : ನಿಜ.

ರಾಜಕುಮಾರಿ : ಹಾಗಿದ್ದರೆ ಕೊನೇದಿನ ನಾನು ನನ್ನ ತಾಯಿಯ ಚಿತ್ರದ ಮುಂದೆ ಕೂತು ಒಬ್ಬಳೇ ಪ್ರಾರ್ಥನೆ ಮಾಡೋದಕ್ಕೆ ಅವಕಾಶ ಮಾಡಿಕೊಡ್ತೀಯಾ, ಅಮ್ಮಾ?

ಪುಷ್ಪಗಂಧಿ : ಆದರೆ ಮಹಾರಾಜರು…

ರಾಜಕುಮಾರಿ : ಗೊತ್ತು ಮಾರಾಯಳೇ, ನನ್ನ ಬಿಟ್ಟು ಕದಲಕೂಡದು ಅಂತ ಮಹಾರಾಜರ ಅಪ್ಪಣೆಯಾಗಿದೆ. ಸರಿ ತಾನೆ? ಕೋಣೆಯ ಹೊರಗಿರು, ನಾನು ಕರೆಯೋತನಕ ಕಾಣಿಸಿಕೊಳ್ಳಬೇಡ.

(ಪುಷ್ಪಗಂದಿ ಮರೆಯಾಗುವಳು. ಮತ್ತೊಂದುಕಡೆ ರಾಜಕುಮಾರಿ ಮರೆಯಾಗುವಳು. ಈಗ ರಂಗದ ಇನ್ನೊಂದು ಬದಿಯಲ್ಲಿ ಚಿಂತೆ ಮಾಡುವ ರಾಜ ಮತ್ತು ಮಂತ್ರಿ)

ರಾಜ : ವೈದ್ಯ ಸಂಜೀವಶಿವ ಬರಲೇ ಇಲ್ಲವೆ ಮಂತ್ರಿಗಳೆ?

ಮಂತ್ರಿ : ರಾಜವೈದ್ಯರೆಲ್ಲ ಇಲ್ಲೇ ಇದ್ದು ಪ್ರತಿಕ್ಷಣವೂ ರಾಜಕುಮಾರಿಯನ್ನು ಕಾಯುತ್ತಿದ್ದಾರೆ ಪ್ರಭು.
ರಾಜಕುಮಾರಿಯ ಅನಿಷ್ಟ ನಿವಾರಣೆ ಮತ್ತು ಆಯುಷ್ಯ ವೃದ್ಧಿಗಾಗಿ
ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ
ನಿತ್ಯವೂ ಮೂರೂ ಹೊತ್ತು ಪೂಜೆ ಪುನಸ್ಕಾರ ನಡೆಯುತ್ತಿವೆ.
ಋಷಿ ಮುನಿಗಳು ತಂತಮ್ಮ ಆಶ್ರಮಗಳಲ್ಲಿ
ಮೃತ್ಯುಂಜಯ ಜಪ ಹೋಮ ಹವನಾದಿಗಳ ಮಾಡುತ್ತಿದ್ದಾರೆ.
ರಾಜಕುಮಾರಿಗಾಗಿ ಪ್ರಾರ್ಥಿಸುವ ಯಾರಿಗೇ ಯಾವುದೇ ಕೊರತೆ
ಕಾಣಿಸದಂತೆ ನೋಡಿಕೊಳ್ಳುತ್ತಿದ್ದೇವೆ ಪ್ರಭು.

ರಾಜ : ನಾನು ಕೇಳಿದ್ದು ವೈದ್ಯ ಸಂಜೀವಶಿವನ ಬಗ್ಗೆ.

ಮಂತ್ರಿ : ತಾವು ಕ್ಷಮಿಸುವುದಾದರೆ ಹೇಳುತ್ತೇನೆ:
ಅವನನ್ನು ಒತ್ತಾಯದಿಂದ ಹೊತ್ತು ತರಬೇಕೆಂದು ಹೋದವರೂ ಬರಿಗೈಯಲ್ಲಿ ವಾಪಸಾದರು ಪ್ರಭು.

ರಾಜ :  ನಾವೇ ಅಲ್ಲಿಗೆ ಹೋಗಿ ಬರೋಣ.

ಮಂತ್ರಿ : ನಾಲ್ಕು ಬಾರಿ ಜನಗಳನ್ನ ಅಟ್ಟಿದ್ದೆ ಪ್ರಭು. ಹೋದಾಗ ಅವನಿಲ್ಲ.
ಹುಡುಕಿದರೆ ಸಿಕ್ಕೋದಿಲ್ಲ.
ಎಲ್ಲಿಗೆ ಹೋಗಿದ್ದಾನೆಂದರೆ ಕಾಡಿಗೆ ಎನ್ನುತ್ತಾರೆ.
ಹೋಗಿ ಬಂದವರು ಯಾವುದೋ ಮಾಯೆಗೊಳಗಾದವರಂತೆ
ಭೀತರಾಗಿ ನಮ್ಮ ಕಣ್ಣು ತಪ್ಪಿಸಿ ಅಲೆದಾಡುತ್ತಾರೆ.
ಎದುರು ಸಿಕ್ಕರೆ ಹುಚ್ಚರಂತೆ ಕೈ ಮತ್ತು ಕಣ್ಣು ಸನ್ನೆಗಳಲ್ಲಿ
ನಮಗೆ ತಿಳಿಯದೆ ಭಾಷೆ ಆಡುತ್ತಾರೆ.
ಇದ್ದುದರಲ್ಲಿ ಅವನೊಂದಿಗೆ ಮಾತಾಡಿ ಬಂದವನು
ನಮ್ಮ ವಿದೂಷಕ ಒಬ್ಬನೇ.
ತಮ್ಮ ದರ್ಶನಕ್ಕೆ ಕಾದಿದ್ದಾನೆ. ಕರೆಸಲೇ ಪ್ರಭು?

ರಾಜ : ಬೇಗ ಕರೆಸು.
(ಮಂತ್ರಿ ಸೇವಕನಿಗೆ ಸನ್ನೆ ಮಾಡುವನು, ವಿದೂಷಕ ಬರುವನು.)

ಮಂತ್ರಿ : ಹೇಳು ವಿದೂಷಕ, ವೈದ್ಯ ಸಂಜೀವಶಿವನಲ್ಲಿ ರಾಜಕುಮಾರಿಯ ಪ್ರಸ್ತಾಪ ಮಾಡಿದಾಗ ಏನು ಹೇಳಿದ?

ಮದನ ತಿಲಕ : ಅದೊಂದು ವಿಚಿತ್ರವಾದ ಅನುಭವ ಪ್ರಭು.
ಅವನ ತಾಯಿ ಸಾಕ್ಷಾತ್ ಶೆಟಿವೀದೇವಿ! ಸಾವಿನ ಅಧಿದೇವತೆ!

ರಾಜ : ಹೌದೆ?

ಮದನ ತಿಲಕ : ಇದರಲ್ಲಿ ಯಾವುದೇ ಸಂದೇಹವಿಲ್ಲ ಪ್ರಭು.
ಎಲ್ಲ ವಿಷಯ ತಿಳಿದುಕೊಂಡೇ ಬಂದೆ.
ತಾಯಿ ಇಲ್ಲದೆ ಅವನ ವೈದ್ಯವಿಲ್ಲ.
ನನ್ನ ಮತ್ತು ಮಾರನ ವಿಷಯದಲ್ಲಿ
ತಾಯಿ ಆಶೀರ್ವದಿಸಿದಳೆಂದು
ಮಾರ ಹೇಳಿದ. ಆದ್ದರಿಂದ ಮದ್ದರೆದು ಕೊಟ್ಟ.
ಬರುವಾಗ ತಮ್ಮ ನಿರೂಪ ಮತ್ತು ರಾಜಕುಮಾರಿಯ ರೋಗದ
ಬಗ್ಗೆ ಹೇಳಿದೆ. ಆಶ್ಚರ‍್ಯವೆಂದರೆ ಇದ್ಯಾವುದೂ ಆತನಿಗೆ
ಗೊತ್ತೇ ಇರಲಿಲ್ಲ.
ಮೊದಲೇ ಯಾಕೆ ಹೇಳಲಿಲ್ಲವೆಂದು ಸಿಟ್ಟು ಮಾಡಿದ.
ಜಾತಿವಂತ ವೈದ್ಯನ ಹಾಗೆ ತಕ್ಷಣವೇ ನನ್ನೊಂದಿಗೆ
ಹೊರಟು ಬರಲು ಸಿದ್ಧನಾದ.
ಅಷ್ಟರಲ್ಲಿ ಅವನ ತಾಯಿ ಕೂಗುತ್ತಿದ್ದಾಳೆಂದು ಊಳಿಗದಾಳು
ಬಂದು ತಿಳಿಸಿದಳು. ಬಂದೆ ಎಂದು ಹೇಳಿ ಒಳಕ್ಕೆ ಹೋದವನು
ಆಮೇಲೇ ಅದೇ ಆಳಿನಿಂದ
ಬರಲಾಗುವುದಿಲ್ಲ ಎಂದು ಹೇಳಿ ಕಳಿಸಿದ.
ಅವನ ತಾಯಿ ಎಲ್ಲಿದ್ದಳು? ಹೇಗಿದ್ದಳು?
ನನಗೆ ಗೋಚರಿಸಲಿಲ್ಲ ಪ್ರಭು. ಒಳಕ್ಕೆ ಹಣಕಿದರೆ ಕಗ್ಗತ್ತಲು.
ಯಾರೂ ಇರುವಂಥ ಸ್ಥಳ ಅದಾಗಿರಲಿಲ್ಲ.
ಆದರೆ ಬರುವಾಗ ಭಾರೀ ಗಾತ್ರದ ಭಯಾನಕ ಗರಡು ಪಕ್ಷಿಯೊಂದು
ಹಾರಿಬಂದು ತಮ್ಮ ಅರಮನೆಯ ಮೇಲೆ ಕೂತಿತು!
ಅದು ಬೇರೆ ಪಕ್ಷಿಗಳಂತಿರಲಿಲ್ಲ.
ನಾವ್ಯಾರೂ ಅಂಥ ಹಕ್ಕಯನ್ನ ಕಂಡೇ ಇಲ್ಲ ಪ್ರಭು.
ಅದರ ರೆಕ್ಕೆಗಳೇನು! ಕತ್ತು ಕೊಕ್ಕುಗಳೇನು! ಹೊಳೆವ ಕಣ್ಣುಗಳೇನು!
ಹಾರಿ ಬರುವಾಗ ಅದರ ರೆಕ್ಕೆ
ಎರಡೂ ಕ್ಷಿತಿಜಗಳಿಗೆ ತಾಗಿದ್ದ ಕಂಡೆ ಪ್ರಭು.
ಅಲ್ಲಿಂದ ಕಾಲುಕಿತ್ತೋಡಿ ಬಂದೆ. ತಾವು ಕ್ಷಮಿಸುವುದಾದರೆ
ಒಂದು ಮಾತ್ರ ಹೇಳುತ್ತೇನೆ ಪ್ರಭು….

ರಾಜ : ಹೇಳು.

ಮದನ ತಿಲಕ : ವೈದ್ಯನಿಗೆ ತಮ್ಮ ನಿರೂಪವನ್ನ ತಲುಪಿಸದಿದ್ದವಳು,
ಆತ ಇಲ್ಲಿಗೆ ಬಾರದ ಹಾಗೆ ತಡೆದವಳು ಆತನ ತಾಯಿ.
ಅಷ್ಟರಮಟ್ಟಿಗೆ ಅವನಾಸೆ ಬಿಡುವುದೊಳ್ಳೆಯದೆಂದು
ನನ್ನ ಅಭಿಮತ, ಆದರೂ ತಾವು ಹೇಳಿದರೆ…..

ರಾಜ : ಕೊನೆಯ ಪ್ರಯತ್ನ ಮಾಡಿಬಿಡೋಣ ಬನ್ನಿ.

ಪುಷ್ಪಗಂಧಿ : (ಓಡುತ್ತ ಬಂದು) ಪ್ರಭೂ ರಾಜಕುಮಾರಿ ಎಲ್ಲೂ ಕಾಣುತ್ತಿಲ್ಲ.
ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ….

ರಾಜ : ಯಾರಲ್ಲಿ? ರಾಜಕುಮಾರಿಯನ್ನು ಹುಡುಕಿ, ಬೇಗ.

(ಎಲ್ಲರೂ ಅವಸರದಲ್ಲಿ ರಾಜಕುಮಾರಿಯನ್ನು ಹುಡುಕಲು ಹೋಗುವರು.)