[ಕುದುರೆ ಲಾಯದ ಬಳಿ. ಚೆನ್ನನು ಬರುತ್ತಾನೆ.]

ಚನ್ನ — ನಾನರಿಯೆ, ನಾನರಿಯೆ, ಇಂದು ಕಡೆಗೇನಾಗುವುದೊ
ಎಂದು. ಅವನಿಂದು ಬರಿಯ ಹುಚ್ಚನಂತಿಹನು.
ಅವನ ಆಣತಿಯನೆಸಗಬೇಕೋ
ಬೇಡವೋ ನಾನರಿಯೆ. ಒಡೆಯನೀ ಪರಿ ಹುಚ್ಚ
ನಾದೊಡೆ ವಿಧೇಯನಾಗಿರಬೇಕೆ? ಅವಿಧೇಯತೆಯೆ
ಅವನ ಭಾಗಕ್ಕೆ ಶುಭವಾಗಬಹುದು;
ಶುಭವಾಗಬಹುದು! ಇರಲಿ, ರಾಲನ ಕರವೆ!
(ಬಾಗಿಲ ಬಳಿ ಹೋಗಿ) ರಾಲ! ಏ ರಾಲ! ಏ ರಾಲ! ಏ ರಾಲಾ!
ಕಾಸ್ತಾರರಿವರೂ ಕುದುರೆಗಳೆ! (ಬಾಗಿಲು ತಟ್ಟಿ)
ಏ ರಾಲಾ!
ಏನು ಚಳಿಯಪ್ಪಾ! ಮೈಯೆಲ್ಲಾ ಕೊರೆಯುತಿದೆ.

ರಾಲ (ಬಂದು) ಯಾರದು? ಈ ರಾತ್ರಿ ಕರೆವವರು?

ಚಿನ್ನ — ನಾನು!
ಏನು ನಿದ್ದೆಯೊ ನಿನಗೆ! ಊರೆಲ್ಲ ಬೆಂದರೂ
ನೀಮಟ್ಟಿಗೇಳೆ!

ರಾಲ — ನಾವೇನು ಮೀನುಗಳೆ,
ಕಣ್ಮುಚ್ಚದಾವಾಗಲೂ ನಿಮ್ಮ ಕಾಯುತ್ತ
ಕುಳಿತಿರುವುದಕ್ಕೆ?

ಚಿನ್ನ — ಮಾತಿರಲಿ, ಬಾ ಇಲ್ಲಿ,
ನಿನ್ನಿಂದ ಈಗೊಂದು ಬಹು ದೊಡ್ಡ ಕಾರ್ಯಸಾ-
ಧನೆಯಾಗಬೇಕು.

ರಾಲ (ದೊಡ್ಡದಾಗಿ ಕಣ್ಣು ತೆರೆದು) ಏನಪ್ಪಾ!

ಚನ್ನ — ಮಾಡುವೆಯೊ
ಹೇಳು!

ರಾಲ — ಕುದುರೆಗಳು, ಲಾಯಾಗಳು, ಜೀನುಗಳು,
ಕಡಿವಾಣಗಳನಿನಿತನೊತ್ತಟ್ಟಿಗಿಟ್ಟು
ಉಳಿದಾವ ಕೆಲಸವನ್ನಾದರೂ ಹೇಳು.

ಚನ್ನ — ದೊಡ್ಡ ಗುಟ್ಟಿದು ನೋಡು. ರಟ್ಟು ಮಾಡಿದರೆ
ತಲೆಹೋಗುವಂತಹಹುದು.

ರಾಲ (ದಿಗಿಲು ಬಿದ್ದು) ಹಾಗಾದರದು ಬೇಡ!

ಚನ್ನ — ಒಪ್ಪಿ, ಬೇಡ ಎನ್ನುವಿಯಾ ಈಗ? ಬಾ ಇಲ್ಲಿ! (ಕೈಬೀಸುತ್ತಾನೆ.)
ಸಿದ್ಧಾರ್ಥನಿಂದು ಬಹು ದೂರ ಹೊರಟಿಹನು.

ರಾಲ — ಎಲ್ಲಿಗೆ? ಏತಕ್ಕೆ? ಈ ರಾತ್ರಿ! ಅಬ್ಬಬ್ಬ!

ಚನ್ನ — ಸುಮ್ಮನಿರು, ತೆಪ್ಪಗಿರು! ಎಲ್ಲಿಗೆಂಬುದನರಿಯೆ.
ಇಂದಾತನೇಕೋ ವಿಚಿತ್ರನಾಗಿಹನು.

ರಾಲ — ಅದಕ್ಕೆ ನಾನೇನು ಮಾಡುವುದು?

ಚನ್ನ — ಅರಮನೆಯ
ಪಶ್ಚಿಮ ದ್ವಾರಾಭಿಮುಖವಾದ ಬೀದಿಯೊಳು
ನೀನಡಗಿ, ಸಿದ್ಧಾರ್ಥನಲ್ಲಿಗೈತಂದೊಡನೆ
ಅಬ್ಬರಿಸು!

ರಾಲ — ಬಲು ಒಳ್ಳೆಯುಪದೇಶ, ಚನ್ನಯ್ಯ!
ನನ್ನ ಬೆನ್ನಿನ ತೊಗಲಿಗೆಲ್ಲಿ ಹೋಗಲಿ ನಾನು
ಆಮೇಲೆ

ಚನ್ನ — ಹೆದರದಿರು; ನೀನು ಬೊಬ್ಬೆಯಿಡು.
ಬಹುಮಾನ ದೊರಕುವುದು ನಿನಗೆ.

ರಾಲ (ಬೆರಗಾಗಿ) ನೋಡಲ್ಲಿ!

ಚನ್ನ — ಅವನೆ ಬರುತಿಹನು. ಅರುಗಾಗು, ರಾಲ!
(ಚನ್ನ ರಾಲರು ಅರುಗಾಗುತ್ತಾರೆ. ಸಿದ್ಧರ್ಥನು ಬರುತ್ತಾನೆ. ಕೈಲಿ ದೀಪ)

ಸಿದ್ಧಾರ್ಥ — ಒಂದೆ ಸಲ, ಒಂದೆಯೊಂದು ಸಲ! ಹೋಗಿ
ಕಣ್ಣಿನಾಸೆಯ ತಣಿಸಿ ದಣಿಸಿ ಬರುವೆ.
ಹೋಗಬೇಕೇಕೆ? ಕಳ್ಳ ಮನವೇ, ನಿನ್ನ
ತಿರುಳ ನಾ ಕಂಡಿಹೆನು. ಆದರೇನೀ ಎದೆಯು,
ಶಾಂತವಾಗದು, ಸುಮ್ಮನಿರದಲ್ಲ! ಎಲೆ ಎದೆಯೆ,
ಆಡದಾಟಗಳೆನಿತು ನಿನ್ನುದರದೊಳಗಿಹವು?
ಬೆಳಕ ಕಾಣದೆ ಇರುವ ನುಡಿಗಳೆನಿತಡಗಿಹವು?
ಎನಿತು ಪಿಸುಮಾತುಗಳು ಮಲಗಿಹವು ನಿನ್ನಲ್ಲಿ?
ಒಂದೆ ಸಲ, ಒಂದೆಯೊಂದು ಸಲ? ಹೋಗಿ
ಕಣ್ಣಿನಾಸೆಯ ತಣಿಸಿ ದಣಿಸಿ ಬರುವೆ.
ಮತ್ತೆಂದು ಬಯಸದಿಹ ಕಡೆಯ ಮುತ್ತನು ಕೊಟ್ಟು
ಬರುವೆ. ಒಂದೆ ಸಲ! ಒಂದೆ ಸಲ! ಒಂದೆ ಸಲ!
(ತೆರಳುತ್ತಾನೆ. ಚನ್ನ ರಾಲರು ಹೊರಗೆ ಬರುತ್ತಾರೆ.)

ರಾಲ — ದೊರೆಯ ಮಕ್ಕಳೆ ಇವರು?

ಚನ್ನ — ಹೌದೊ, ಎಲೆ ಮೂಢ.

ರಾಲ — ಇದೇತಕಿಂತಿಹರು?

ಚನ್ನ — ಬಹುದೂರ ಹೋಗುವರು.

ರಾಲ — ಲಾಯದಾಣೆಗೂ, ಚನ್ನ, ಹಣವಂತರಿಗೆ ಹುಚ್ಚು.

ಚನ್ನ — ಇರಲಿ, ನೀ ಓಡು: ನಾ ಹೇಳಿದುದ ಮಾತ್ರ
ಬಿಡದೆ ಮಾಡು.

ರಾಲ — ಹೋಗುವೆನು. ದೇವರೇ! (ತೆರಳುತ್ತಾನೆ.)

ಚನ್ನ — ಉನ್ಮತ್ತನಂತಿಹನು. “ಒಂದೆ ಸಲ!” “ಒಂದೆ ಸಲ!”
ಅದರರ್ಥವೇನೋ ನಾನರಿಯೆ; ನಾನರಿಯೆ.
ನನ್ನ ಕೆಲಸವ ನಾನು ಮಾಡುವೆನು. ಪರಮೇಶ,
ನನ್ನೊಡೆಯನಿಂದು ಹೋಗದ ತೆರದಿ ಮಾಡು.
ಪುಣ್ಯಾತ್ಮನಾತನನು ಕೃಪೆಯಿಂದ ಕಾಪಾಡು!

(ಹೊರಡುತ್ತಾನೆ.)

ಪರದೆ