[ಅರಮನೆಯ ಹೊರಗಡೆ ಸಿದ್ಧಾರ್ಥನ ಪ್ರವೇಶ.]

ಸಿದ್ಧಾರ್ಥ — ಹನಿಯಿಂದ ಸಾಗರಕೆ ಹಾರೆಲೈ ಧೀರಾತ್ಮ!
ಛವಿಯಿಂದ ರವಿಯೊಳೊಂದಾಗಲೈ ವೀರಾತ್ಮ!
ಅಣುವಿಂದ ವಿಭುವಾಗು; ಜೀವನಿಂ ದೇವನೊಳ
ಗಾಗು! ನಟ್ಟಿರುಳೆ, ಕಟ್ಟಿರುಳೆ, ಕರೆದುಕೋ
ಎನ್ನ, ಕಪಿಲವಸ್ತುವೆ, ಮಲಗು, ಮಲಗು!
ಚರಮ ವಂದನೆ ನಿನಗೆ. ಅರಮನೆಯೆ, ಮಾಯೆಯಾ
ಸೆರೆಮನೆಯೆ, ಎದೆಯಿಂದ ದೂರ ಸರಿ. ಮಸಣವಾಗು,
ಎಲೆ ಎದೆಯೆ. ಹಳೆಯ ಸಂಸ್ಕಾರಗಳನೆಲ್ಲ
ಭಸ್ಮಮಾಡುವೆನಲ್ಲಿ; ಶಿವನ ಕುಣಿಸುವೆನಲ್ಲಿ!
ಠಳಠಳನೆ ಪುಡಿಯಾಗಿ, ಮೋಹಬಂಧನಗಳಿರ! (ಬೆಚ್ಚಿ)
ಆದರೇನಿದು ಸದ್ದು! ಯಾರೊ ಬರುವಂತಿಹುದು?
(ಮಾರನು ಬರುತ್ತಾನೆ.)
ನೀನಾರು, ಮಧುರ ರೂಪವೆ?

ಮಾರ — ನಾನು ಮಾರ,
ಸಿದ್ಧಾರ್ಥ. ಮೋಹಿನಿಯ ಹಿರಿಯ ಮಗ. ನಟ್ಟಿರುಳೊಳ್‌
ಆವೆಡೆಗೆ ಪೊರಮಡುವೆ?

ಸಿದ್ಧಾರ್ಥ — ಬಿತ್ತರದ ಲೋಕಕ್ಕೆ,
ಮಾರ.

ಮಾರ — ಕಪಿಲವಸ್ತುವಿನಗಲ ಸಾಲದೇ
ನಿನಗೆ?

ಸಿದ್ಧಾರ್ಥ — ಸಾಲದೆಲೆ ಮೋಹಿನಿಯ ಮಗನೆ!

ಮಾರ — ಹಾಗಾದರೀ ಧರೆಯ ನಿನಗೀವೆ, ಹಿಂತಿರುಗು,
ಸಿದ್ಧಾರ್ಥ; ಹಿಂತಿರುಗು. ಸರ್ವಸಾಮ್ರಾಜ್ಯಕೆ
ಅಧಿಕಾರಿಯಾಗೆ ಪಟ್ಟಕಟ್ಟುವೆ ನಿನಗೆ.

ಸಿದ್ಧಾರ್ಥ — ಪೊರಮಡುವುದೀ ಭೋಗ ಸಾಮ್ರಾಜ್ಯಕಲ್ಲ,
ಮಾರ, ಮುಕ್ತಿ ಸಾಮ್ರಾಜ್ಯಕ್ಕೆ. ಬ್ರಹ್ಮಾಂಡ
ದಲ್ಲಿರುವ ಪರಮತಮ ಪದವಿಗಾಗೆಳಸುತಿಹೆ.
ಸರ್ವಸೃಷ್ಟಿಯ ಹರ್ಷಕಾಗೆಳಸುತಿರುವೆ.
ಸರ್ವಜೀವರ ಶಾಂತಿಗಾಗೆಳಸುತಿರುವೆ.
ನನ್ನ ಮುಕ್ತಿಯನೊಂದ ನಾನೆಂದು ಬಯಸೆ.
ಎಳೆಯೊಳಣುವೊಂದು ಬಂಧನದ ಬಲೆಯೊಳಗೆ
ಸಿಕ್ಕಿ ಗೋಳಿಡುವಲ್ಲಿ ಪರಿಯಂತ ಮುಕ್ತಿಯಂ
ಬಯಸೆ ನಾ; ಹರ್ಷವಂ ಬಯಸೆ ನಾ; ಶಾಂತಿಯಂ
ಬಯಸೆ ನಾ. ಬರಿದೆ ಮೋಹಿವುದೇಕೆ, ಮಾರ?
ತೊಲಗತ್ತ ತೊಲಗು!

ಮಾರ — ಸಿದ್ಧಾರ್ಥ, ಸ್ವಪ್ನಸ್ಥನ್‌
ಆಗಿರುವೆ. ಜಾಗ್ರತನ ಮಾತಲ್ಲವೀ ನುಡಿ.
ಬಣಗು ವೇದಾಂತವಿದು. ಜಡರ ಸಿದ್ಧಾಂತವಿದು.
ಮುಕ್ತಿಯೆಂಬುವುದೆಲ್ಲಿ? ಬಡ ಶಾಂತಿಯೆಲ್ಲಿ?
ಮರುಳನಂತಾಡುತಿಹೆ. ಅರಮನೆಯ ಸಿರಿಯ
ತೊರೆದರಸಲುಳಿದ ಸಿರಿ ದೊರಕುವುದೆ? ಹುಸಿಮಾತು.
ಇಹಸುಖವನರಿತಿಹೆವು, ಪರಸುಖವದೆಂತಿಹುದೊ?
ಕರದೊಳಿಹ ರನ್ನವದು ಮಿಗಿಲು ಶರಧಿಯ ಸಿರಿಗೆ!
ಪರಸುಖವ ಪಡೆಯಲೆಂದಿಹಸುಖವ ಬಿಡುವೆಯಾ?
ಜೋಕೆ!

ಸಿದ್ಧಾರ್ಥ — ತೊಲಗತ್ತ! ತೊಲಗತ್ತ, ಮಾರ!
ಯುಕ್ತಿವಚನಗಳಿಂದ ಮರುಳನಾಗುವೆನೆಂದು
ಬಗೆದಿಂತು ಬೋಧಿಪೆಯ? ಯುಕ್ತಿಗಳನೋದಿಹೆನು.
ತರ್ಕ ತಾಂ ಬುದ್ಧಿಯಂ ಮೀರಲರಿಯದು, ಮಾರ!
ಬುದ್ಧಿಯಾಚೆಯ ವೇಲೆ ಸಿದ್ಧಿಯೂರೆಂದು ತಿಳಿ.

ಮಾರ — ಪ್ರಿಯವಲ್ಲದಿರಬಹುದು ಹಿತವಚನದೌಷಧಿ,
ಸಿದ್ಧಾರ್ಥ. ಆದರೂ ಎಚ್ಚರಿಕೆ! ಎಚ್ಚರಿಕೆ!
ಸ್ವಪ್ನನಿಧಿಯನ್ನರಸಿ ಮರುಳಾಗಬೇಡ!
ಎಚ್ಚರಿಕೆ, ಸಿದ್ಧಾರ್ಥ. ನಿನ್ನ ಹಿತಚಿಂತಕನು
ನಾನು.

ಸಿದ್ಧಾರ್ಥ — ಸ್ವಪ್ನನಿಧಿ ದೊರಕದಿರೆ, ಎಲೆ ಮಾರ,
ಸ್ವಪ್ನನಿಧಿಯನ್ವೇಷಣೆಯೆ ಇಂಪು, ಸುಖಕರ,
ಶಾಂತಿಕರ!

ಮಾರ — ಹೆತ್ತ ತಾಯ್ತಂದೆಗಳಿಗೆಲ್ಲ
ಮೋಸಮಾಡುವೆಯೇನು, ಸಿದ್ಧಾರ್ಥ? ಸೋಮಾರಿ
ನೀನು. ಕರ್ಮಕ್ಕೆ ಭಯಪಟ್ಟು, ಕರ್ತವ್ಯ
ವೆಸಗದಲೆ ಸ್ವಾನಂದಕೆಳಸುತಿಹ ನೀನೆ
ಹೇಡಿ!

ಸಿದ್ಧಾರ್ಥ — ಬೈಯದಿರು, ಮಾರು, ಬೈಯದಿರು.
ಕಡಲಾಗಿ ಹಿಂತಿರುಗಲೆಂದೇ ಹನಿಯಾಗಿ
ಹೊರಟಿಹೆನು. ಹನಿಯೊಂದು ಎನಿತು ಕೊಳಕೊಡ್ಡಂ
ತೊಳೆಯಬಲ್ಲುದು ಮಾರ?

ಮಾರ — ಕಲ್ಲಿನೆದೆ ನಿನ್ನದೈ.
ಸಿದ್ದಾರ್ಥ! ಸತಿಯ ಗೋಳಿಗೆ ನೂಂಕಿ, ಕಂಬನಿಯ
ಕರೆಯದೆಯೆ ಓಡುತಿಹೆ, ತಸ್ಕರನ ತೆರದಿ!

ಸಿದ್ಧಾರ್ಥ — ಜಗಕ್ಕಾಗಿ ಕಣ್ಣೀರ ಸುರಿಸುವೆನು, ಮಾರ,
ಅದಕಾಗಿ ಸತಿಗಾಗಿ ಕಂಬನಿಯ ಕರೆಯೆ.
ಮುಂದೆದೆಯ ಬೆಣ್ಣೆಯನು ಮಾಡೆ, ಇಂದದನು
ಕಲ್ಲಾಗಿ ಮಾಡಿರುವೆ, ಓ ಮೋಹಿನಿಯ ಮಗನೆ,
ತೊಲಗತ್ತ! ತೊಲಗತ್ತ! (ತೆರಳುತ್ತಾಳೆ)

ಮಾರ — ಬಿಡುವೆನೆಂದರಿತಿಹೆಯಾ?
ಎಲೆ ರಾಜಪುತ್ರ, ತುದಿಯವರೆಗೂ ನಿನ್ನನ್‌
ಅಟ್ಟುವೆನು. ನಿನ್ನಿರವು ಕೆಡುಕೆಮ್ಮ ವಂಶಕ್ಕೆ.
ಕಾಯುವೆನು, ಕಾಯುವೆನು ಎಂದಾದರೊಂದು ದಿನ
ನೀನೆನ್ನ ಬಲೆಗೆ ಬೀಳುವವರೆಗೆ, ಸಿದ್ಧಾರ್ಥ.
ಮಾರನೊಡ್ಡುವ ಬಲೆಗೆ ಬೀಳದವರಪರೂಪ.
ಒಮ್ಮೆ ತಪ್ಪಿದರೂ ಮಹಾತ್ಮರೇ ಹೌದು.
ಅದರಿಂದ ನೀನೂ ಮಹಾತ್ಮನೇ, ಗೌತಮಾ!
ಧರ್ಮಮೋಕ್ಷವೆ ನೀನು; ನಾನು ಕಾಮಾರ್ಥ!

(ಹೊರಡುತ್ತಾನೆ.)

ಪರದೆ ನ| �&��uX%� ಕೆಲಸವ ನಾನು ಮಾಡುವೆನು. ಪರಮೇಶ,
ನನ್ನೊಡೆಯನಿಂದು ಹೋಗದ ತೆರದಿ ಮಾಡು.
ಪುಣ್ಯಾತ್ಮನಾತನನು ಕೃಪೆಯಿಂದ ಕಾಪಾಡು!

 

(ಹೊರಡುತ್ತಾನೆ.)

ಪರದೆ