[ಕಪಿಲವಸ್ತುವಿಗೆ ಬಹುದೂರದಲ್ಲಿ. ಕತ್ತಲು, ಚನ್ನ ಸಿದ್ಧಾರ್ಥ ಕುದುರೆ ಏರಿ ಬರುತ್ತಾರೆ.]

ಚನ್ನ — ಸಿದ್ಧಾರ್ಥ! ಸಿದ್ಧಾರ್ಥ! ಸಾಕಾಯ್ತು ನನಗೆ!
ತಲೆ ತಿರುಗುತಿದೆ. ಎದೆ ಹಾರುತಿದೆ, ನಿಲ್ಲು.

ಸಿದ್ಧಾರ್ಥ (ನಿಂತು) ಚನ್ನಜ್ಜ, ಚನ್ನಜ್ಜ, ಏನಾಯ್ತು, ಏನಾಯ್ತು?

ಚನ್ನ — ನನ್ನೊಡೆಯ, ಸ್ವಲ್ಪ ವಿಶ್ರಮಿಸಿ ಹೊರಡೋಣ!
ನೀನು ತರುಣನು, ಒಡೆಯ, ನಾನು ನೆರತವನಪ್ಪಾ!

ಸಿದ್ಧಾರ್ಥ (ಹತ್ತಿರ ಬಂದು) ಕುದುರೆಯಿಂದಿಳಿ ಕೆಳಗೆ, ಚನ್ನಜ್ಜ!

ಚನ್ನ (ಇಳಿಯುತ್ತ) ಸಿದ್ಧಾರ್ಥ,
ಏನೋಟವಪ್ಪಾ ಏನೋಟ! ದೇಹವೇ
ನುಗ್ಗುನುರಿಯಾಗುತಿದೆ.

ಸಿದ್ಧಾರ್ಥ (ತಾನೂ ಇಳಿದು) ಕುಳಿತುಕೊ, ಚನ್ನಜ್ಜ;
ಗಾಳಿಬೀಸುವೆನು. (ಗಾಳಿ ಬೀಸುತ್ತಾನೆ.)

ಚನ್ನ — ಅಪ್ಪಪ್ಪ! ಅಬ್ಬಬ್ಬಾ!

ಸಿದ್ಧಾರ್ಥ — ದೂರವೆನಿತಾಯ್ತೀಗ, ಚನ್ನಜ್ಜ, ಪಟ್ಟಣವ
ಬಿಟ್ಟು?

ಚನ್ನ — ಹದಿನಾರು ಯೋಜನಗಳಾದುವೈ,
ಗೌತಮಾ!

ಸಿದ್ಧಾರ್ಥ — ಈಗ ನಾವೆಲ್ಲಿಹೆವು?

ಚನ್ನ — ಕೋಲಿ ದೇಶವ ದಾಟಿ ಬಂದಿಹೆವು.

ಸಿದ್ಧಾರ್ಥ — ಉದಯವೆಮ್ಮನು ಅನುಮಾ ತರಂಗಿಣಿಯ
ತೀರದಲ್ಲೆದುರುಗೊಳಬೇಕಜ್ಜಾ. ಹೊರಡೋಣ.

ಚನ್ನ — ಗಳಿಗೆಯೊಂದಿಲ್ಲಿದ್ದು ಹೊರಡೋಣ.

ಸಿದ್ಧಾರ್ಥ — ನಿನ್ನಾಸೆ!

ಚನ್ನ — ಮಲಗಿಕೊಳ್ಳುವೆನಯ್ಯ, ಸಿದ್ಧಾರ್ಥ.

ಸಿದ್ಧಾರ್ಥ — ಮಲಗಿಕೋ,
ಚನ್ನಜ್ಜ. (ಚನ್ನನು ಮಲಗಿ ನಿದ್ರಿಸುತ್ತಾನೆ.)
ಮಲಗು, ಮುದುಕಾ. ಮಲಗು.
ನೀನಿನ್ನು ನನ್ನೊಡನೆ ಬರಲಾರೆ. ಹೋಗು,
ಕಪಿಲವಸ್ತುವಿಗೆಲ್ಲ ಸಿದ್ಧಾರ್ಥನೀ ಕತೆಯ
ಹೇಳು. ಶಾಕ್ಯಜನರಿಗೆ ಸೈಪನೊರ, ಹೋಗು!
ನಾನಿನ್ನು ಲೋಕದ ಮಹಾಂಬುಧಿಗೆ! ನೀ ಬೀಳ-
ಲಾರೆ ಎನ್ನೊಡನೆ. ನೀನೆನ್ನನಗಲವುದು
ಬಹು ಕಷ್ಟ. ತಂದೆಯಂತೊಲಿದಿರುವೆ ಎನ್ನ
ಸರ್ವದಾ ಭಕ್ತಿಯಿಂ ಸೇವಿಸಿದೆ, ಚನ್ನ. (ಕೊಡುತ್ತಾ)
ತೆಗೆದುಕೊ ಈ ನನ್ನ ಒಡವೆಗಳ. ತೆಗೆದುಕೋ
ನಿನಗಾಗಿ ತಂದ ಈ ರನ್ನಗಳ; ತೆಗೆದುಕೋ
ವಸನಗಳ; ತೆಗೆದುಕೋ ಈ ಎನ್ನ ಹೃದಯವನು.
ನೀನೇಳುವಲ್ಲಿಪರಿಯಂತ ನಾನಡಿಗಿ,
ಮೇಲೆ ದಾರಿಯ ಹಿಡಿವೆ. ಎಲ್ಲಕೂ ಮಿಗಿಲಾಗಿ
ನಿನ್ನನೊಲಿದಿದ್ದೆ, ಚನ್ನಜ್ಜಾ. ಸೂತಿಕಾಗೃಹದಿಂದ
ನಾನಿನಿತು ಶೋಕದಿಂ ಪೊರಮಟ್ಟು ಬರಲಿಲ್ಲ.
ಎಂದಾದರೊಂದು ದಿನ ಬಂದು ಕಾಣುವೆ ನಿನ್ನ;
ಹೋಗಿ ಬರುವೆನು, ಚನ್ನ; ನಿನಗೆ ಬಂಗಳಮಕ್ಕೆ!
(ಕುದುರೆಯೊಡನೆ ಹೊರಡುತ್ತಾನೆ.)

ಚನ್ನ (ತುಸುಹೊತ್ತಿನಮೇಲೆ ಎದ್ದು)
ಸಿದ್ಧಾರ್ಥ, ಹೊತ್ತಾಯ್ತು, ಹೊರಡೋಣ, ಏಳು;
ನಿನಗು ನಿದ್ದೆಯೆ, ಒಡೆಯ? ಸಿದ್ಧಾರ್ಥ, ಸಿದ್ಧಾರ್ಥ!
(ಹುಡುಕಿ)
ಸಿದ್ಧಾರ್ಥ, ಎಲ್ಲಿರುವೆ? ನನ್ನೊಡೆಯ, ಎಲ್ಲಿರುವೆ?
ಅರೆದಾರಿಯಲ್ಲೆನ್ನ ಕೊರಳ ಕೊಯ್ಯುವೆಯೇನು?
ಮಲಗಿದವನನ್ನಿಂತು ಬಿಟ್ಟೋಡುವುದೆ ನೀನು?
‘ನಾನಿನ್ನ ಬಿಡಲಾರೆ’ ಎಂದು ನುಡಿ ಏನಾಯ್ತು?
ಏನು ಮಾಡಲಿ ನಾನು? ಎತ್ತ ಹೋಗಲಿ ಇನ್ನು?
ಕಪಿಲವಸ್ತುವಿಗೆಂತು ತೆರಳಿ ಮೊಗದೋರಲಿ?
ಶುದ್ಧೋದನನಿಗೆಂತು ಮೋರೆ ತೋರಿಸಲಿನ್ನು?
ಹಾ ವಿಧಿಯೆ, ಕೊರಳ ಕೊಯ್ದೆಯ ಎನ್ನ? (ಕೆಳಗೆ ನೋಡಿ)
ಸಿದ್ಧಾರ್ಥ,
ಸಾಯುವವಗೇತಕೀ ಒಡವೆಗಳು? ಎನ್ನೊಲವಿಗಿವು
ಹೊಣೆಯೆ? ತೊಲಗು ತೊಲಗಲೆ ಸಿರಿಯೆ!
(ಆಭರಣಗಳನ್ನು ಒದೆಯುತ್ತಾನೆ.) ತಪ್ಪಾಯ್ತು
ಮನ್ನಿಸೆನ್ನನು, ಒಡೆಯ. ನೀನಿತ್ತ ವಸ್ತುಗಳ
ಒದೆಯುವನು ಮೂಢ. (ಅವುಗಳನ್ನು ತೆಗೆದುಕೊಂಡು)
ಎಲೆ ರನ್ನದೊಡವೆಗಳೆ,
ಬೆಲೆಗಾಗಿ ನಿಮ್ಮ ನಾನೆಂದಿಗೂ ಮುಟ್ಟೆ;
ನನ್ನೊಡೆಯನೊಲವಿಂದ ಕೊಟ್ಟ ವರಗಳು ನೀವು!
ನೀವವನ ಸುಸ್ಮೃತಿಯ ಕಿಂಕರರು, ಬನ್ನಿ!
ಬಾ, ರಾಹುತ, ಬೇಗ ಕಪಿಲವಸ್ತುವ ಸೇರಿ,
ಸುದ್ದಿಯನು ಸಾರಿ, ಧನ್ಯರಾಗುವ ಬಾ.
(ಹಿಂತಿರುಗಿ ದಿಟ್ಟಿಸಿ ನೋಡಿ)
ಕಂಥಕನೆ, ನೀನೆ ಧನ್ಯನು, ನಿನ್ನದೇ ಪುಣ್ಯ!
ನಿನ್ನ ಜನ್ಮವನಿಂದು ಕರುಬುವನು ಚನ್ನ!

(ತೆರಳುತ್ತಾರೆ.)

ಪರದೆ