[ಹಿಮಗಿರಿಯ ಮೇಲೆ ಯಕ್ಷ ಕಿನ್ನರರಿಬ್ಬರು ಕಾಣಿಸಿಕೊಂಡು ಬ್ರಹ್ಮಾಂಡವನ್ನು ಸಂಬೋಧಿಸಿ ಡಂಗುರ ಸಾರುತ್ತಾರೆ.]

ಕಿನ್ನರ — ಇದು ಮಹಾರಾತ್ರಿ; ಸಿದ್ಧಾರ್ಥ ಬುದ್ಧನಾ
ಗುವ ರಾತ್ರಿ; ಸಗ್ಗದೊಲವಿಳೆಗಿಳಿವ ರಾತ್ರಿ!

ಯಕ್ಷ — ಜೀವಜ್ಯೋತಿಯದೊಂದು ಧರೆಯ ಮೇಲೈತಂದು
ಬುದ್ಧರೂಪದಿ ನಿಂದು ಮೈದೋರುವುದು ಇಂದು!

ಕಿನ್ನರ — ವೈರಾಗ್ಯ ಮಾರನಂ ಸೋಲಿಸುವುದಿಂದು!

ಯಕ್ಷ — ಸತ್ಯ ಮಿಥ್ಯೆಯನೊದೆವುದಿಂದು!

ಕಿನ್ನರ — ಭೂರಮೆಯು
ಸ್ವರ್ಗರಮೆಯನ್ನಪ್ಪುವಾ ರಾತ್ರಿ. ಮಂಗಳದ
ಸೊದೆ ಸುರಿವ ರಾತ್ರಿ. ಇದು ಚಿರಸ್ಮರಣೀಯ
ವಾಗಿರುವ ರಾತ್ರಿ.

ಯಕ್ಷ — ನಲಿಯಿರೈ ಅದರಿಂದ
ಉಡುಗಳಿರ! ನಲಿಯೆಲೈ ಹಿಮಕರನೆ! ವಿಶ್ವವೇ
ಸಂತಸದಿ ಹಿಗ್ಗು. ಪೂವಲಿಯ ಚೆಲ್ಲಿರೈ
ದೇವತೆಗಳಿರ ನೀವು. ಜೀವಜಂತುಗಳೆ
ಇಂದು ನಿಮಗಾಗೆದೆಯ ಕೆನ್ನೀರ ಸುರಿವ
ಪುಣ್ಯಾತ್ಮನುದಿಸುವನು!

ಕಿನ್ನರ — ಎಲೆ ತುಹಿನಗಿರಿರಾಜ,
ಶಿರದಿ ನಾಕದ ಭಾರವನು ಹೊತ್ತು ನೀನಿಂತು
ಧ್ಯಾನದೊಳಗಿದ್ದುದದು, ಬರಿದಾಗಲಿಲ್ಲ!
ನೋಡಲ್ಲಿ! ಬದ್ಧನಾಗುವನಿಂದು, ಈ ರಾತ್ರಿ,
ಚಾಗಕೆಳಸುತ್ತಿಹನು!
[ಗಂಧರ್ವನೊಬ್ಬನು ಪ್ರವೇಶಿಸುತ್ತಾನೆ]

ಗಂಧರ್ವ (ಸ್ವಗತ) ಯಾರೊ ಮಾತಾಡಿದುದನಾಲಿಸಿದೆನಲ್ಲವೆ?
ಮೇಣ್ ಬರಿಯ ಭ್ರಾಂತಿಯೋ? (ಸುತ್ತ ನೋಡಿ ವರ್ಷದಿಂದ)
ಈ ಗಿರಿಯ ಮೇಲಿರುವು
ದೇನತುಳ ಶಾಂತಿ! ಹಿಮಗಿರಿಯ ಗಾಢದಿಂ
ದಪ್ಪಿ, ಮುದ್ದಿಟ್ಟು, ಮಲಗಿರುವ ಕೌಮುದಿಯು,
ತಾಯೆದೆಯ ಪೀಯೂಷ ಪಾನದಿಂದಾನಂದ
ಹೊಂದಿ, ಅರೆಯರಳಿರುವ ಕಣ್ಣಿವೆಯ ಪಿಳಿಪಿಳಿನೆ
ಬಿಟ್ಟೆದೆಯನಾಲಿಂಗಿಸೊರಗಿರುವ ಶಿಶುವಂತೆ
ರಮಣೀಯವಾಗಿಹುದು! ಶಿವನ ಪಾದವ ಪೂಜೆ
ಮಾಡಲೆಂದೆಳೆಸಿ, ಪರಮೇಶ ತಮ್ಮೆಡೆಗೆ
ಬಾರದಿರೆ, ತಾವೆ ಕೈಲಾಸಕಡುರುತಿಹ
ಬಿಳಿಯ ಬಣ್ಣದ ಮಹಾ ಕಮಲಗಳ ತೆರದಿ,
ಮಂಚುಗಡ್ಡೆಯ ಹೊತ್ತ ಧವಳಗಿರಿ ಶೃಂಗಗಳು
ಮೆರೆದು ಮನಮೋಹಿಸುತ ಮೌನೋಪದೇಶವಂ
ಮಾಡುವಂತೆಸೆದಿಹವು. ಈ ರಾತ್ರಿ, ಈ ಮಹಾ
ಹಿಮಗಿರಿಯ ಶೃಂಗದೊಳು ಯಾರಾದರೇನನ್
ಎಸಗುವರು? ಕಜ್ಜವೇನಿರಬಹುದು? ಹೌದು,
ನಾನಾ ತುಷಾರಾಸನದೊಳರಗಿದಾಗಳ್‌
ಮಂಗಳ ನಿನಾದವೆಂಬಂತೆ, ದೂರದಿಂ
ದಿಂಪಾಗಿ ನಲಿನಲಿದು, ಗಾಳಿಯಲೆಗಳಲಲೆದು
ಧ್ಯಾನದಿಂದೆನ್ನನ್ ಎಚ್ಚರಿಸಲಿಲ್ಲವೆ?

ಯಕ್ಷ (ಕಾಣಿಸಿಕೊಂಡು)
ಗಂಧರ್ವ, ಸಂತಸದ ಸುದ್ದಿಯೊಂದನು ನೀನು
ಕೇಳಿದೆಯ?

ಗಂಧರ್ವ (ಹಿಂತುರಗಿ ವಿನಯದಿಂದ) ಇಲ್ಲೇನ ಮಾಡುವಿರಿ? ನೀರವದ
ಕಟ್ಟಿರುಳೊಳಿಲ್ಲಿ? ಅಂಬರನಿವಾಸಿಗಳೆ!

ಕಿನ್ನರ — ಎಲೆ ಗೆಳೆಯ, ಮಂಗಳದ ವಾರ್ತೆಯನು ಜಗಕೆಲ್ಲ
ಸಾರುತಿಹೆವು.

ಗಂಧರ್ವ — ಸಂತಸದ ಸಂದೇಶವೇನು?

ಯಕ್ಷ —  ಶಾಕ್ಯರರಸರ ಪುತ್ರ ಸಿದ್ಧಾರ್ಥನೀ ರಾತ್ರಿ
ಬುದ್ಧನಾಗುವನೆಂಬುದೇ ಶುಭದ ವಾರ್ತೆ!

ಗಂಧರ್ವ — ಹಾಗಾದರಿಂದು ಭಾರತಾಂಬೆಯೆ ಧನ್ಯೆ!

ಕಿನ್ನರ — ಅಲ್ಲವೇ, ಗಂಧರ್ವ!

ಯಕ್ಷ —  ಯಜ್ಞಯಾಗಾದಿಗಳ
ಹಿಂಸೆಯಲಿ ಬೆಂದು, ಕೃತ್ರಿಮದ ವೈದಿಕರ
ದೌಷ್ಟ್ಯದೊಳು ನೊಂದು, ಒಣವೇದ ಪಂಡಿತರ
ವಾದದೊಳು ಮುಳುಮುಳುಗಿ ಗೊಳಿಡುವ ಭಾರತೀಯ
ಪುಣ್ಯಗಗನದ ಪೂರ್ವದೊಳು, ನೋಡು, ಹರ್ಷದರು-
ಣೋದಯವು ಶೋಭಿಸುವುದೆಂತು!

ಕಿನ್ನರ — ನೋಡದೋ,
ಗಂಧರ್ವ, ಭಾರತಾಂಬೆಯು ತನ್ನ ಪರಮ
ಪುಣ್ಯೋದಯಕೆ ಹಿಗ್ಗಿ ಬಿಡುಗಡೆಯ ನಿಟ್ಟುಸಿರ್
ಬಿಟ್ಟು ನಲಿದಿಹಳು.

ಯಕ್ಷ —  ನೋಡಲ್ಲಿ! ಮುಂದೆ ಬಹ
ಬುದ್ಧನಿಗೆ ಕಾಣಿಕೆಯ ತಂದೊಪ್ಪಿಸಲು ಧರ್ಮ
ದೇವತೆಯು ಬಿಳಿಯ ಸೀರೆಯನುಟ್ಟು, ಅರೆಯರಳಿ
ದಂತಿರುವ ಕಣ್ಬೆಳಕ ಬೀರಿ ಸಡಗರದಿಂದ
ಬರುತಿಹಳು.

ಗಂಧರ್ವ — ನೋಡಿರಲೆ ಬಾಂದಳದ ಬಂಧುಗಳೆ,
ಪುಣ್ಯದೇವಿಗೆ ಒದಗಿದೀ ಭಾಗ್ಯವನು ಕರುಬಿ
ಪಾಪ ಮಾರಿಯು ತನ್ನ ಗೂತರಾವಳಿಯನ್‌
ಅಟ್ಟುತಿಹಳಲ್ಲಿ ಗೌತಮನ ಮೊಹಿಸಲು!

ಕಿನ್ನರ — ಗೌತಮಗೆ ಬಂದೊದಗಬಹುದಾದ ಕಷ್ಟಗಳನ್‌
ಎಲ್ಲ ಪರಿಹರಿಸಲೆಂದೇ ನಾವು ಹೊರಟಿಹೆವು.

ಯಕ್ಷ — ಹಾಗಾದರಿನ್ನೇಕೆ ತಡ? ಹೊರಡೋಣ
ಬನ್ನಿ.

ಗಂಧರ್ವ (ಕಿನ್ನರನ ಕಡೆ ದಿಟ್ಟಿಸಿ ನೋಡಿ)
ಕಿನ್ನರಾ, ನಿನ್ನ ಕರತಳದೊಳ್‌
ಆರಾಜಿಸುವುದೇನು? ಶಶಿತಾರೆಗಳೆಗೆಲ್ಲ
ಬೆಳಕ ದಯಪಾಲಿಸುತ ರಂಜಿಸುವುದೇನು?

ಯಕ್ಷ — ಅಧಿಕಾರ ಮುಕುಟವದು!

ಕಿನ್ನರ — ಅರಿಯೆಯಾ, ಗಂಧರ್ವ?
ಅವತಾರಪುರಷರೀ ಧರೆಯಲ್ಲಿ ಜನ್ಮಿಸಲು
ಜಗದೊಡೆಯನವರಿಗೀ ಅಧಿಕಾರ ಮಕುಟವನು
ಕಳುಹುವನು!

ಯಕ್ಷ — ಜಗಕವರು ತತ್ತ್ವಬೋಧೆಯ ಮಾಡೆ
ಆಣತಿಯನೀಯುವನು! ಅಧಿಕಾರ ಮಕುಟವಿದು
ಸಾಮಾನ್ಯವಾದುದೆಂದರಿಯದಿರು. ಬಹು ಸಂಖ್ಯೆ
ಅವತಾರಗಳ ಶಿರವ ಸಿಂಗರಿಸಿ ಬಂದಿಹ
ಕಿರೀಟವಿದು. ಪಾವನಕೆ ಪಾವನವ, ಮಂಗಳಕೆ
ಮಂಗಳವನೀವ ತಲೆದೋಡವು ಇದು. ಈ ರಾತ್ರಿ
ಗೌತಮನ ಬುದ್ಧನನ್ನಾಗಿ ಮಾಡುವ ಪುಣ್ಯ
ಮೌಳಿಯಿದು. ಬನ್ನಿ, ಬುದ್ಧನಿಗೆ ನೆರವಾಗಿ
ಧನ್ಯರಾಗುವ ಬನ್ನಿ!

(ತೆರಳುತ್ತಾರೆ.)

ಪರದೆ