ಕುಂಡಪುರುವು ಲಿಚ್ಛವಿ ಗಣರಾಜ್ಯದ ವೈಶಾಲಿ ಎಂಬ ರಾಜಧಾನಿಯ ಉಪನಗರ. ಊರ ಹೊರಗೆ ಒಂದು ಕಡೆ ವಿಶಾಲವಾದ ಆಲದ ಮರಗಳ ತೋಪು. ತೋಪಿನ ನಟ್ಟ ನಡುವೆ ದೊಡ್ಡ ವಟವೃಕ್ಷ. ಅದರ ಶಾಖೆಗಳ ತುಂಬ ಹುಡುಗರು ಹತ್ತಿ ಕುಳಿತಿದ್ದಾರೆ. ಆಟದಲ್ಲಿ ಅವರು ಪ್ರಪಂಚವನ್ನೇ ಮರೆತಿದ್ದಾರೆ. ಕೆಳಗೆ ನಿಂತ ಒಬ್ಬ ಹುಡುಗ ತಲೆಯೆತ್ತಿ ನೋಡಿದ. ಒಮ್ಮೆಲೇ “ಹಾವು, ಹಾವು, ಹೆಬ್ಬಾವು!” ಎಂದು ಕೂಗುತ್ತಾ ಕೈಯಲ್ಲಿನ ಕಡ್ಡಿಯನ್ನು ಎಸೆದು ಓಡತೊಡಗಿದ.

ಮರದ ಮೇಲಿನ ಮಕ್ಕಳೆಲ್ಲ ಗಾಬರಿಗೊಂಡರು. ಕತ್ತೆತ್ತಿ ನೋಡಿದರು. ಮಧ್ಯದ ಕಾಂಡಕ್ಕೆ ನೇರವಾಗಿ ಬೆಳೆದ ಕೊಂಬೆಯ ಮೆಲುಗಡೆಯಿಂದ ಹಾವು ಕೆಳಕ್ಕೆ ಹರಿದು ಬರುತ್ತಿದೆ! ಕೂಡಲೆ ಹುಡುಗರೆಲ್ಲ ದುಡುದುಡು ಧುಮುಕಿ ಊರಿನ ಕಡೆ ಓಡತೊಡಗಿದರು.

ವೀರ ರಾಜಕುಮಾರ

ಮರದಿಂದ ದೂರ ಹೋಗಿ ನಿಂತ ಕೆಲವು ಹುಡುಗರು ಹಾವು ಅಟ್ಟಿಸಿಕೊಂಡು ಬರುತ್ತಿದೆಯೇನೊ ಎಂದು ಒಂದು ಸಲ ಹಿಂತಿರುಗಿ ನೋಡಿದರು. ಭಯಂಕರ ಆಕಾರದ ಸರ್ಪ ದೂರಕ್ಕೂ ಕಾಣುತ್ತಿತ್ತು. ಹಾವಿನ ಹತ್ತಿರವೇ ಇನ್ನೊಂದು ವಸ್ತುವಿದ್ದಂತೆ ಇದೆಯಲ್ಲಾ! ಏನದು? ಕಣ್ಣರಳಿಸಿ ನೋಡಿದರು. ಒಬ್ಬ ಹುಡುಗ ಹೆದರದೆ ಅಲ್ಲೇ ಕುಳಿತಿದ್ದಾನೆ! ಅಬ್ಬ ಅವನ ಧೈರ್ಯವೆ! ಯಾರವನು? ಸ್ವಲ್ಪ ಧೈರ್ಯ ತಂದುಕೊಂಡು ಕೆಲವು ಹುಡುಗರು ಕೈಯಲ್ಲಿ ಕಲ್ಲು, ಕೋಲು ಹಿಡಿದು ಹತ್ತು ಹೆಜ್ಜೆ ಮುಂದೆ ಬಂದರು. ಎಲಾ! ಮರದ ಮೇಲಿರುವವನು ಮತ್ತಾರೂ ಅಲ್ಲ, ರಾಜಕುಮಾರ ವರ್ಧಮಾನ!

ಒಡನೆ ಕೆಲವರು ಓಡಿದರು. ಅರಮನೆಗೆ ಸುದ್ದ ಮುಟ್ಟಿಸಿದರು. ಮಹಾರಾಜ, ಮಹಾರಾಣಿ, ಅಂಗರಕ್ಷಕರು ಎಲ್ಲ ಧಾವಿಸಿದರು.

ಆಲದ ಮರದ ಮೇಲೆ ಅಳುಕದೆ ಎಲೆ ಮಿಡುಕದೆ ಬಾಲವೀರ ರಾಜಕುಮಾರ ಘಟಸರ್ಪದ ಚಲನ ವಲನವನ್ನೇ ನೋಡುತ್ತಿದ್ದ. ಆ ಹೆಬ್ಬಾವು ಹೆದರಿಸತೊಡಗಿತ್ತು. ಅದಕ್ಕೂ ಅಚ್ಚರಿ. ಬುಸ್‌ಎಂದು ಬುಸುಗುಟ್ಟಿತು. ಕೋಪದಿಂದ ಎಳೆ ನಾಲಗೆ ಸೀಳುಗಳನ್ನು ಚಾಚಿತು. ಕಣ್ಣಲ್ಲಿ ಹೆದರಿಸಿತು. ಶಬ್ದ ಮಾಡಿತು. ಮೇಲೆ ಬೀಳುವಂತೆ ನಿಂತಿತು. ಬಾಲ ಬಡಿಯಿತು. ಅಪ್ಪಳಿಸುವಂತೆ ಹತ್ತಿರ ಬೀಸಿತು. ಉಹು ಉಹು. ಅದರ ಆಟಗಳೊಂದೂ ಫಲಿಸಲಿಲ್ಲ. ಆ ದೀರ ಪರ್ವತದಂತೆ ಸ್ಥಿರವಾಗಿ ಕುಳಿತಿದ್ದ. ಹೌಹಾರದೆ ಕುತೂಹಲ, ಆಸಕ್ತಿಯಿಂದ ಕುಳಿತ ಹುಡುಗನನ್ನು ನೋಡಿ ಹಾವು ಸೋಲನ್ನು ಒಪ್ಪಿಕೊಂಡಿತು. ತಲೆ ಬಾಗಿ ಶರಣಾಯಿತು. ಆ ವೀರಕುಮಾರ ಏಣಿಯನ್ನು ಮೆಟ್ಟಿ ಉಪ್ಪರಿಗೆಯಿಂದ ಇಳಿಯುವಂತೆ ಹಾವನ್ನು ಮೆಟ್ಟಿ ಮರದಿಂದ ಇಳಿದ.

ವೀರಬಾಲಕನ ಸ್ಥೈರ್ಯ, ಪರಾಕ್ರಮ ಕಂಡು ಸುತ್ತ ಸೇರಿದ ಸಮೂಹವೆಲ್ಲ ಬೆರಗಾಯಿತು. ತಂದೆತಾಯಿಗಳಿಗೆ ಹೋದ ಪ್ರಾಣ ಬಂದಂತಾಯಿತು. ಅವರ ಪಾಲಿಗೆ ಮಗ ಮತ್ತೆ ಹುಟ್ಟಿಬಂದಂತೆ ಅನ್ನಿಸಿತು. ಬಾಲಕನನ್ನು ಬರಸೆಳೆದು ಅಪ್ಪಿ ಮುದ್ದಾಡಿದರು. ಅಂದಿನಿಂದ ಹುಡುಗನಿಗೆ ಮಹಾವೀರನೆಂದು ಹೆಸರಾಯಿತು.

ಲಿಚ್ಛವಿಯ ಚೇಟಕ

ಈಗಿನ ಬಿಹಾರ ಪ್ರಾಂತ್ಯದಲ್ಲಿ ಚಂಪಾರಣ್ಯ, ಮುಜಫರಪುರ, ದರಭಂಗಾ, ಛಪರಾ ಎಂಬ ಜಿಲ್ಲೆಗಳಿವೆ. ಈ ಜಿಲ್ಲೆಗಳಿಗೆ ಸೇರಿದ ಭಾಗಕ್ಕೆ ಎರಡೂವರೆ ಸಾವಿರ ವರ್ಷಗಳ ಹಿಂದೆ ವಜ್ಜಿಯೋ ದೇಶವೆಂಬ ಹೆಸರಿತ್ತು. ಹಾಗೆಂದರೆ ಲಿಚ್ಛವಿಯರ ನಾಡು ಎಂದರ್ಥ. ಇದೇ ಬಾಗವನ್ನು ವಿದೇಹ ದೇಶವೆಂದೂ ಕರೆಯುತ್ತಿದ್ದರು. ರಾಜಧಾನಿ ವೈಶಾಲಿ ಬಹು ಪ್ರಸಿದ್ಧಿ ಪಡೆದಿತ್ತು. ಈಗಲೂ ಬಸಾಢ ಎಂಬ ಹೆಸರಿನಿಂದ ಆ ನಗರದ ಅವಶೇಷ ಉಳಿದುಕೊಂಡು ಬಂದಿದೆ. ವೈಶಾಲಿ ನಗರದ ಮಧ್ಯದಲ್ಲಿ ಗಂಡಕೀ ಎಂಬ ನದಿ ಹರಿಯುತ್ತದೆ. ಆ ನದಿಯ ಎರಡು ತೀರಗಳಲ್ಲೂ ಎರಡು ಉಪನಗರಗಳು. ಅವುಗಳಲ್ಲಿ ಒಂದು ಕ್ಷತ್ರಿಯಕುಂಡ ಗ್ರಾಮ. ಇನ್ನೊಂದು ಬ್ರಾಹ್ಮಣಕುಂಡ ಗ್ರಾಮ. ಕ್ಷತ್ರಿಯಕುಂಡ ಗ್ರಾಮಕ್ಕೆ ಕುಂಡಪುರವೆಂಬುದೇ ರೂಢಿಯ ಹೆಸರು.

ಲಿಚ್ಛವಿಯರ ನಾಡಿನಲ್ಲಿ ಗಣಸತ್ತಾತ್ಮಕ ರಾಜ್ಯ ಪದ್ಧತಿಯಿತ್ತು. ಎಲ್ಲ ಗಣದ ಸದಸ್ಯರಿಂದ ಆಯ್ಕೆಯಾದ ಆ ಒಟ್ಟು ಗಣದ ಪ್ರತಿನಿಧಿಗೆ ಗಣರಾಜ್ಯ ಎಂಬ ಹೆಸರು. ರಾಜನೂ ಇರುತ್ತಿದ್ದ. ಆದರೆ ದೊರೆ ರಾಜ್ಯವಾಳುವಲ್ಲಿ ಈ ಗಣರಾಜರ ಸಲಹೆ ಸಮ್ಮತಿ ಪಡೆಯುತ್ತಿದ್ದ. ವೈಶಾಲಿಯ ಲಿಚ್ಛವಿಯರಲ್ಲಿ ಒಗ್ಗಟ್ಟಿತ್ತು. ದೊಡ್ಡ ಕೆಲಸಗಳನ್ನು ಕಲೆತು ನಿರ್ಧರಿಸುತ್ತಿದ್ದರು. ಲಿಚ್ಛವಿಯರಲ್ಲಿದ್ದ ಈ ಅನ್ಯೋನ್ಯತೆಯಿಂದ ಅವರಿಗೆ ಹಗೆಗಳು ಹೆದರುತ್ತಿದ್ದರು. ಒಂದು ಸಲ ನಡೆದ ಘಟನೆ ನೆನಪಿಡಬೇಕಾದುದು.

ಅಜಾತಶತ್ರು ಮಗಧ ದೇಶದ ಮಹಾರಾಜ. ಅವನು ಲಿಚ್ಛವಿಯರ ಮೆಲೆ ದಂಡೆತ್ತಿ ಹೋಗಬೇಕೆಂದು ಯೋಚಿಸಿ ಬುದ್ಧನ ಬಳಿ ಪ್ರಸ್ತಾಪಿಸಿದ. ಬುದ್ಧ ಅಜಾಶತ್ರುವಿಗೆ ಹೀಗೆ ಬುದ್ಧಿ ಹೇಳಿದ: “ಎಲ್ಲಿಯವರೆಗೆ ಲಿಚ್ಛವಿಯರು ಅವರವರಲ್ಲಿ ಸಭೆ ಸೇರಿ ವಿಚಾರ ವಿನಿಯಮಯ ಮಾಡುವರೊ, ಎಲ್ಲರೂ ಕೂಡಿ ಒಂದು ನಿರ್ಣಯಕ್ಕೆ ಬರುವರೊ, ಒಬ್ಬರೂ ಆ ನಿಯಮ ಮೀರಿ ನಡೆಯವುದಿಲಲ್ವೊ, ಹಿರಿಯರ ಮಾತುಗಳನ್ನು ಗೌರವಿಸುವರೊ, ಹೆಂಗಸರನ್ನು ಅನಾದರಿಸುವುದಿಲ್ಲವೊ, ಜಿನ ದೇವಾಲಯಗಳಿಗೆ ಹೋಗುವರೊ, ಪೂಜಿಸುವರೊ, ಅರ್ಹಂತ ಸಾಧು ಸಂತರನ್ನು ಸನ್ಮಾನಿಸುವರೊ-ಅಲ್ಲಿಯವರೆಗೆ ಯಾರೂ ಅವರ ಕೂದಲನ್ನೂ ಕೊಂಕಿಸಲಾರರು.” ಈ ಮಾತುಗಳ ಅರ್ಥ ದೊಡ್ಡದು. ಅಜಾತಶತ್ರು ಸುಮ್ಮನಾದ.

ವೈಶಾಲಿಯ ವಿಖ್ಯಾತ ದೊರೆ ಚೇಟಕ, ಕಾಶಿ, ಕೋಶಲಗಳ ಒಂಬತ್ತು ಲಿಚ್ಛವಿಯ ಹಾಗೂ ಮಲ್ಲರಾಜನ ದೊರೆ. ಅವನಿಗೆ ಏಳು ಮಂದಿ ಹೆಣ್ಣುಮಕ್ಕಳು.

ಚೇಟಕ ನರೆಹೊರೆಯ ರಾಜ್ಯಗಳಲ್ಲಿ ಸ್ನೇಹ ಬೆಳೆಸಲು ಉದ್ದೇಶಪಟ್ಟ. ತನ್ನ ಪುತ್ರಿಯರನ್ನು ಪ್ರಮುಖರಿಗೆ ಮದುವೆ ಮಾಡಿದ. ಸುಜ್ಯೇಷ್ಠಾ (ಚಂದನಾ) ಎಂಬುವಳು ಮಾತ್ರ ಮದುವೆಯಾಗಲಿಲ್ಲ. ಅವಳು ಜೈನದೀಕ್ಷೆ ತೆಗೆದುಕೊಂಡಳು.

ಚೇಟಕನ ಹಿರಿಯ ಮಗಳು ತ್ರಿಶಲಾ (ತ್ರಿಶಲಾದೇವಿ ಚೇಟಕರಾಜನ ತಂಗಿ ಎಂಬುದಾಗಿ ಜೈನ ಶ್ವೇತಾಂಬರ ಪಂಥದ ನಿರೂಪಣೆ). ಅವಳು ಪ್ರಿಯವಾದುದನ್ನೇ ಮಾಡುತ್ತಿದ್ದಳು. ಅದರಿಂದ ತ್ರಿಶಲೆಗೆ ಪ್ರಿಯಕಾರಿಣಿ ಎಂದು ಹೆಸರಾಯಿತು. ಚೇಟಕನಿಗೆ ಅಚ್ಚುಮೆಚ್ಚಿನ ಗಣರಾಜ ಸಿದ್ಧಾರ್ಥ. ಅವನು ಕುಂಡಪುರದ ಗಣರಾಜ. ಕುಂಡಪುರ ವ್ಯಾಪಾರಕ್ಕೆ ಬಹಳ ಪ್ರಸಿದ್ಧಿ ಪಡೆದಿತ್ತು. ಸಿದ್ಧಾರ್ಥನೂ ಜೈನಧರ್ಮೀಯ. ಅಲ್ಲದೆ ಆತ ಲಿಚ್ಛವಿಯರಲ್ಲಿ ಒಂದು ಪಂಗಡವಾಗಿದ್ದ ಜ್ಞಾತೃಗಳಿಗೆ ಸೇರಿದವನು. ಅವರು ಕ್ಷತ್ರಿಯರು. ಸತ್ಯ, ಅಹಿಂಸೆಗಳಿಗೆ ಹೆಸರುವಾಸಿಯಾಗಿದ್ದರು. ಮಾಂಸ ತಿನ್ನುತ್ತಿರಲಿಲ್ಲ, ಮದ್ಯ ಕುಡಿಯುತ್ತಿರಲಿಲ್ಲ. ಆದುದರಿಂದ ಚೇಟಕ ತನ್ನ ಮೊದಲನೆಯ ಮಗಳಾದ ಪ್ರಿಯಕಾರಿಣಿಯನ್ನು ಸಿದ್ಧಾರ್ಥನಿಗೆ ಕೊಟ್ಟ ಮದುವೆ ಮಾಡಿದನು.

ಜೈನಧರ್ಮ

ಭಾರತ ದೇಶದಲ್ಲಿ ಹುಟ್ಟಿ ಬೆಳೆದ ಹಲವು ಧರ್ಮಗಳು ಮಾನವ ಕಲ್ಯಾಣಕ್ಕೆ ದಾರಿ ತೋರಿಸಿವೆ. ಅವುಗಳಲ್ಲಿ ಜೈನಧರ್ಮವೂ (ಶ್ರಮಣಧರ್ಮ) ಒಂದು. ಪ್ರಾಚೀನವಾದ ಜೈನಧರ್ಮದಲ್ಲಿ ೬೩ ಜನ ಮಹಾಪುರುಷರು ಆಗಿ ಹೋಗಿದ್ದಾರೆ. ಅವರನ್ನು ತ್ರಿಷಷ್ಠಿ ಶಲಾಕಾ ಮಹಾಪುರುಷರೆಂದೂ ಕರೆಯುವರು. ಅವರುಗಳು: ೨೪ ಜನ ತೀರ್ಥಂಕರರು, ೧೨ ಜನ ಚಕ್ರವರ್ತಿಗಳು, ೯ ಜನ ನಾರಾಯಣರು, ೯ ಜನ  ನಾರಾಯಣರು, ೯ ಜನ ಬಲದೇವರು, ೯ ಜನ ಪ್ರತಿ ನಾರಾಯಣರು. ತೀರ್ಥಕಂಕರರಿಗೆ ಜಿನ, ಅರ್ಹಂತ ಎಂಬ ಹಲವು ಹೆಸರುಗಳಿವೆ. ಇವರಲ್ಲಿ ಪ್ರಥಮ ತೀರ್ಥಂಕರರು ವೃಷಭನಾಥ. ಆತನನ್ನು ಪುರುದೇವ, ಋಷಭದೇವ ಎಂದೂ ಕರೆಯುವರು.

ವೃಷಭನಾಥ ತೀರ್ಥಂಕರರ ಪರಂಪರೆಯಲ್ಲಿ ಬಂದ ೨೩ನೆಯ ಅರ್ಹಂತ ಪಾರ್ಶ್ವನಾಥನು ಬೋಧಿಸಿದ ಜೈನಧರ್ಮದ ಅನುಸಾರವಾಗಿ ನಡೆದುಕೊಳ್ಳುತ್ತಿದ್ದ ಲಕ್ಷಾಂತರ ಜನರಿದ್ದರು. ಲಿಚ್ಛವಿಯರಲ್ಲಿ ಅವರೇ ಹೆಚ್ಚಾಗಿದ್ದರು. ಪಾರ್ಶ್ವನಾಥ ಆಗಿಹೋದ ಕೇವಲ ೨೦೦ ವರ್ಷಗಳಲ್ಲೇ ಚೇಟಕ ಹುಟ್ಟಿದ. ಚೇಟಕನಿಗೂ ಸಿದ್ಧಾರ್ಥನಿಗೂ ೨೫ ವರ್ಷಗಳ ಅಂತರ. ಅಂದರೆ ಪಾರ್ಶ್ವನಾಥನ ನಿರ್ವಾಣಾನಂತರದ ೨೨೫ ವರ್ಷಗಳಿಗೆ ಸಿದ್ಧಾರ್ಥನ ಜನನ. ಸಿದ್ಧಾರ್ಥ ಪ್ರಿಯಕಾರಿಣಿಯರೂ ಚೇಟಕನಂತೆ ಪಾರ್ಶ್ವನಾಥ ಬೋದಿಸಿದ ಜೈನಧರ್ಮದ ಗಾಢವಾದ ಪ್ರಭಾವಕ್ಕೆ ಒಳಗಾಗಿದ್ದರು. ಶುಭ ಚಿಂತನೆ, ಶುಭ ಆಚರಣೆಯಲ್ಲಿ ಅವರು ನಿರತರು. ದೇಹ-ಮಾತು-ಮನಸ್ಸುಗಳಲ್ಲಿ ಅಹಿಂಸೆಯನ್ನು ಪಾಲಿಸುತ್ತಿದ್ದರು.

ವರ್ಧಮಾನನ ಜನನ

ಪ್ರಿಯಕಾರಿಣಿ ಗರ್ಭಿಣಿಯಾದಳು.

ಗ್ರೀಷ್ಮ ಋತುವಿನ ಆಗಮನವಾಯಿತು. ಗ್ರೀಷ್ಮದ ಮೊದಲ ತಿಂಗಳು ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ದಿನ. ಸೋಮವಾರ (ಕ್ರಿ.ಪೂ. ೫೯೯). ಬೆಳಿಗ್ಗೆಯಿಂದ ಕುಂಡಪುರದಲ್ಲಿ ಕಾತರದ ನಿರೀಕ್ಷೆ. ಅರಮನೆಯಲ್ಲಿ ಸಂಭ್ರಮ. ಪ್ರಸೂತಿಕಾ ಗೃಹದ ಬಳಿ ಚುರುಕು ಗತಿ. ಗಂಡು ಮಗುವಿನ ಜನನವಾಯಿತು. ಗಣರಾಜನಿಗೆ ಮಿಂಚಿನ ವೇಗದಲ್ಲಿ ಸುದ್ದ ಹೋಯಿತು. ರಾಜಕುಮಾರ ಹುಟ್ಟಿದ! ತನ್ನ ಕೊರಳಿಂದ ಬಹು ಬೆಲೆಬಾಳುವ ಮುತ್ತಿನ ಹಾರವನ್ನೇ ರಾಜ ಸುದ್ದಿ ತಂದವನಿಗೆ ತೆಗೆದುಕೊಟ್ಟ.

ಸಿದ್ಧಾರ್ಥ ಬರುತ್ತಲೇ ದಾದಿಯರೆಲ್ಲ ದೂರ ಸರಿದರು. ಮಂಚದ ಪಕ್ಕಕ್ಕೆ ಹೊಂದಿಕೊಂಡ ಸಾಲಂಕೃತ ತೊಟ್ಟಿಲು. ಅದರೊಳಗೆ ಜೀವಂತ ಮಾಣಿಕ್ಯ. ತಮ್ಮಿಬ್ಬರ ಚೈತನ್ಯ ಹಂಚಿಕೊಂಡ ಬೆಳಕು. ವಂಶದ ಉದ್ಧಾರ ಮಾಡುವ ಕುಡಿ.

ಸಿದ್ಧಾರ್ಥ ಪ್ರಿಯಕಾರಿಣಿಯನ್ನು ಕಣ್ತುಂಬ ನೋಡಿದ. ಬಾಯ್ತುಂಬ ಮಾತಾಡಿಸಿದ. ಪ್ರಿಯಕಾರಿಣಿಗೆ ಹೆರಿಗೆ ನೋವೆಲ್ಲ ಮಾಯವಾಗಿತ್ತು.

ಮಗು ಹುಟ್ಟಿ ಹನ್ನೊಂದನೆಯ ದಿನ. ಮಗುವಿಗೆ ನಾಮಕರಣದ ಏರ್ಪಾಟು. ಮುತ್ತೈದೆಯರು ತೊಟ್ಟಿಲು ತೂಗಿದರು. ಕುಂಡಪುರಕ್ಕೆ ಹಬ್ಬದ ಹೊದಿಕೆ. ಎಲ್ಲೆಲ್ಲೂ ಹರ್ಷ. ಬೀದಿಗಳೆಲ್ಲ ಬಹು ಚೊಕ್ಕಟ ಮನೆಗಳ ಮುಂದೆ ಗುಡಿಸಿ ಸಾರಿಸಿ ರಂಗವಲ್ಲಿ ಬಿಡಿಸಿದ್ದಾರೆ. ಎಲ್ಲಿ ತೋಡಿದರಲ್ಲಿ ತಳಿರು ತೋರಣ. ರಾತ್ರಿಯಲ್ಲಿ ಮನೆ ಮನೆಯಲ್ಲೂ ದೀಪಗಳ ಸಾಲು.

ಜನತೆಗೆಲ್ಲ ಉದಾರ ಕೊಡಿಗೆ ಬಂದಿತ್ತು. ಕುಂಡಲೀಪುರದ ಪ್ರತಿಯೊಬ್ಬ ಪ್ರಜೆಗೂ ಒಂದು ಗದ್ಯಾಣ (ಚಿನ್ನದ ನಾಣ್ಯ). ಬಡ ಬಗ್ಗರಿಗೆ ಅನ್ನ ಸಂತರ್ಪಣೆ. ಸೆರೆಮನೆಯ ಸೆರೆಯಾಳುಗಳಿಗೆಲ್ಲ ಬಿಡುಗಡೆ. ಅವರಿಗೆಲ್ಲ ಅನ್ನ ಬಟ್ಟೆಗಳ ದಾನ. ಪ್ರತಿಯೊಬ್ಬರ ಬಾಯಲ್ಲೂ ಸಿದ್ಧಾರ್ಥಪುತ್ರನ ಶ್ರೇಯಸ್ಸಿಗೆ ಹಾರೈಕೆ ಕೇಳಿಬರುತ್ತಿತ್ತು. ತಂದೆತಾಯಿ, ಬಂಧುಬಳಗ, ಊರಿನ ಸಮಸ್ತ ಜನರು, ಎಲ್ಲರಿಗೂ ಅಭಿಮಾನ ವರ್ಧಿಸಿತ್ತು. ಆದ್ದರಿಂದ ಮಗುವಿಗೆ ಜನತೆ ಮೆಚ್ಚಿಕೊಟ್ಟ ಹೆಸರು ವರ್ಧಮಾನ. ತಂದೆತಾಯಿ ಇಟ್ಟ ಹೆಸರು “ವೀರ”.

ಆನೆ ಏನು ಮಾಡೀತು?

ವರ್ಧಮಾನ ದಿನದಿಂದ ದಿನಕ್ಕೆ ದಷ್ಟಪುಷ್ಟನಾಗಿ ಬೆಳೆಯತೊಡಗಿದ. ಅಂಬೆಗಾಲಿಟ್ಟ. ಇನಿದಾದ ಮಾಡತುಗಳನ್ನಾಡಿದ, ನೋಡಿದವರೆಗೆಲ್ಲ ಈ ಮಗುವನ್ನು ಎತ್ತಿ ಮುದ್ದಾಡಬೇಕೆನಿಸುತ್ತಿತ್ತು. ಅಷ್ಟು ಚೆಲುವನಾಗಿದ್ದ. ಅವನ ಚೆಲುವನ್ನು ಮೀರಿಸಿತ್ತು ಚುರುಕುತನ. ಬುದ್ಧಿ ಶಕ್ತಿಗೆ ಸಮನಾಗಿ ದೇಹಶಕ್ತಿಯೂ ಬೆಳೆಯುತ್ತಿತ್ತು. ಐದನೆಯ ವಯಸ್ಸಿಗೆ ವರ್ಧಮಾನನ ಚೌಲಕರ್ಮ (ಚುಟ್ಟು ತೆಗೆಯಿಸುವುದು), ಅಕ್ಷರಾಭ್ಯಾಸ ನಡೆದುವು. ವರ್ಧಮಾನನಿಗೆ ಹೆದರಿಕೆ ಇರಲಿಲ್ಲ. ಯಾವ ವೇಳೆಯಲ್ಲಿ ಎಲ್ಲಿಗೆ ಹೇಳಿದರೂ ಧೈರ್ಯವಾಗಿ ಹೋಗಿ ಬರುತ್ತಿದ್ದ. ಒಂದು ಸಲ ಅವನು ತನ್ನ ಗೆಳೆಯರೊಡನೆ ಆಟದ ಮೈದಾನದಲ್ಲಿ ಇದ್ದಾನೆ. ಅಲ್ಲಿಗೆ ಒಂದು ಮದಿಸಿದಾನೆ ಓಡಿಬರತೊಡಗಿತು. ಮದಿಸಿದ ಆನೆಯ ಕಾಲಿನ ತುಳಿತಕ್ಕೆ ಎದುರಾದುದೆಲ್ಲ ಅಪ್ಪಚ್ಚಿಯಾಗುತ್ತಿತ್ತು. ಸೊಂಡಿಲಿಂದ ಸಿಕ್ಕಿದವರನ್ನೆಲ್ಲ ಅಪ್ಪಳಿಸುತ್ತಿತ್ತು. ದೂರದಿಂದ ಇದನ್ನು ಕಂಡು ಒಡನಾಡಿಗಲೆಲ್ಲ ಗಡಗಡ ನಡುಗಿದರು. ಕೂಡಲೆ ಓಡಿದರು. ವರ್ಧಮಾನ ಎದೆಗೆಡದೆ ಸೆಟೆದು ನಿಂತ. ಈ ಸಣ್ಣ ಪೋರನನ್ನು ಆನೆ ಕಿರುಗಣ್ಣಿನಿಂದ ನೋಡಿತು. ಸೊಂಡಿಲು ಬೀಸಿತು. ಹುಡುಗ ಚುರುಕುಗತಿಯಿಂದ ತಪ್ಪಿಸಿಕೊಂಡ. ಆನೆ ಇನ್ನೊಮ್ಮೆ ಸೊಂಡಿಲನ್ನು ಮೇಲೆತ್ತಿತು. ಅಷ್ಟರಲ್ಲಿ ವರ್ಧಮಾನ ಮುಂದಾಗಿ ನುಗ್ಗಿದ. ಅದರ ಸೊಂಡಿಲು ಹಿಡಿದ. ಮೊಳಕಾಲ ಮೆಲೆ ತನ್ನ ಪಾದ ಊರಿದ. ತಕ್ಷಣ ಅದರ ನೆತ್ತಿಗೆ ಹತ್ತಿದ. ಕುತ್ತಿಗೆ ಹತ್ತಿರ ಸರದು ಕುಳಿತ. ಅದರ ಕಪೋಲ ತಟ್ಟಿದ. ಆನೆಯನ್ನು ಹತೋಟಿಗೆ ತಂದ. ಅದೇ ಆನೆಯನ್ನು ನಡೆಸಿಕೊಂಡು ಅರಮನೆಗೆ ಹೊರಟ. ಎಂಥ ವಿಪತ್ತಿನಲ್ಲೂ ಅವನದು ಸೋಲದ ಸ್ಥೈಯ್. ಆನೆಯ ಪ್ರಸಂಗದಲ್ಲಿಯೂ, ಹಾವಿನ ಘಟನೆಯಲ್ಲೂ ಅವನು ಹೆದರದ ಕಲಿಯಾಗಿ ವರ್ತಿಸಿದ. ಆದರಿಂದ ಅವನಿಗೆ ಮಹಾವೀರ ಎಂಬ ಹೆಸರು ರೂಢಿಯಾಯಿತು.

‘ಮದುವೆಯಾಗು’

ಮಹಾವೀರ  ಕ್ಷತ್ರಿಯರ ಒಡನಾಟದಲ್ಲಿ ಬೆಳೆದ. ಕ್ಷತ್ರಿಯೋಚಿತ ಅಸ್ತ್ರಶಸ್ತ್ರ ವಿದ್ಯೆಗಳ ಅಭ್ಯಾಸ ಪಡೆದ. ಕುದುರೆ ಸವಾರಿಯಲ್ಲಿ ಪಳಗಿದ. ಕುಸ್ತಿಯಲ್ಲಿ ಅವನು ಎತ್ತಿದ ಕೈ. ಈಜುವುದರಲ್ಲಿ ಎಲ್ಲರಿಗೂ ಮುಂದು. ವಿಶೇಷ ಸಂಗೀತಜ್ಞಾನ ಪಡೆದ. ವಿವಿಧ ಕಲೆಗಳ ಪರಿಚಯವಾಯಿತು. ಹೀಗೆ ಅವನ ದೇಹಶಕ್ತಿ, ಬುದ್ಧಿಶಕ್ತಿ ಸಮವಾಗಿ ಬೆಳೆದುವು. ಇವೆರಡು ಶಕ್ತಿಗಳ ಬೆಳವಣಿಗೆ ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತಿ‌ತ್ತು. ಆದರೆ ಜನರ ಹೊರಗಣ್ಣಿಗೆ ಕಾಣದಂತೆ ಮತ್ತೊಂದು ಶಕ್ತಿಯೂ ಪುಟಿಯುತ್ತಿತ್ತು. ಆ ಮೂರನೆಯ ಶಕ್ತಿಯೇ ಆತ್ಮಶಕ್ತಿ. ಅದರ ಪ್ರಕಾಶಕ್ಕೆ ತಕ್ಕ ಕಾಲ ಬರಬೇಕಿತ್ತು.

ವರ್ಧಮಾನ ಮದಿಸಿದ ಆನೆಯನ್ನು ಹತೋಟಿಗೆ ತಂದ.

ಮಹಾವೀರನನ್ನು ನೋಡಿ ಸಿದ್ಧಾರ್ಥ-ಪ್ರಿಯ ಕಾರಿಣಿಯರಿಗೆ ಮಹದಾನಂದ. ಮಗ ವಂಶಕ್ಕೆ ಕೀರ್ತಿ ತರುವಂತೆ ಬೆಳೆದಿದ್ದ. ಸಕಲಗುಣಸಂಪನ್ನನಾಗಿದ್ದ. ಗುರುಕುಲದ ವಿದ್ಯಾಭ್ಯಾಸ ಪೂರ್ತಿ ಕಲಿತು ಬಂದಿದ್ದ. ಅನುಭವದಿಂದ ಅನೇಕ ವಿಚಾರಗಳನ್ನು ಗ್ರಹಿಸಿದ್ದ.

ಸಿದ್ದಾರ್ಥ ದಂಪತಿಗಳು ಯೋಚಿಸಿದರು: ತಮ್ಮ ಆಡಳಿತದ ಸೂತ್ರವನ್ನು ವಹಿಸಿಕೊಳ್ಳಬಲ್ಲ ಸಾಮರ್ಥ್ಯ, ಸಿದ್ಧತೆ ಮಹಾವೀರನಿಗೆ ಇತ್ತು. ವಿವಾಹಕ್ಕೆ ಮಹಾವೀರ ಪ್ರಾಪ್ತ ವಯಸ್ಕನಾಗಿದ್ದಾನೆ. ಇನ್ನೇಕೆ ತಡ? ತಾವಿನ್ನು ಅವನಿಗೆ ಪಟ್ಟಕಟ್ಟಿ ಸನ್ಯಾಸಕ್ಕೆ ತೆರಳಬಹುದು. ಜಿನದೀಕ್ಷೆ ಪಡೆದು ಧ್ಯಾನನಿರತರಾಗಬಹುದು.

ಸಿದ್ದಾರ್ಥ-ಪ್ರಿಯಕಾರಿಣಿಯರ ಈ ಇಂಗಿತವನ್ನು ಹರಿತಗೊಳಿಸಿದ ಸಂಗತಿಗಳೂ ನಡೆದವು. ನಾನಾ ರಾಜರು, ಶ್ರೀಮಂತರು, ಸಂಗತಿಗಳೂ ನಡೆದವು. ನಾನಾ ರಾಜರು, ಶ್ರೀಮಂತರು, ಸಾಮಂತರು ಮಹಾವೀರ ತಮ್ಮ ಮಗಳನ್ನೇ ಮದುವೆಯಾಗಬೇಕೆಂದು ಹಂಬಲಿಸಿದರು. ಅನೇಕ ಕನ್ಯೆಯರ ತೈಲಚಿತ್ರ ಪಟಗಳು ಮಹಾವೀರನ ಆಯ್ಕೆಗಾಗಿ ರಾಶಿಯಾಗಿ ಸೇರಿದುವು.

ಮಹಾವೀರನಿಗೆ ತಾಯಿ ಒಂದು ದಿನ ಈ ವಿಚಾರ ತಿಳಿಸಿದಳು. ಚಿತ್ರಪಟಗಳನ್ನು ಮುಂದಿಟ್ಟಳು. ತಂದೆಯೂ ಬಂದರು. “ನಿನಗೆ ಇಷ್ಟವಾದುದನ್ನು ಆಯ್ಕೆ ಮಾಡು ಮಗೂ” ಎಂದು ಸೂಚಿಸಿದರು. ತಾಯಿತಂದೆಯರ ಬಲಾತ್ಕಾರಕ್ಕೆ ಕೂಡಲೆ ವಿರೋಧಿಸಲು ಇಷ್ಟವಾಗಲಿಲ್ಲ. ಮಹಾವೀರನ ಮನಸ್ಸು ಬೇರೆ ಏನನ್ನೋ ಯೋಚಿಸುತ್ತಿತ್ತು. ಕೈಗಳು ಮಾತ್ರ ಪಟಗಳನ್ನು ಮುಟ್ಟಿದ ಶಾಸ್ತ್ರ ಮಾಡುತ್ತಿದ್ದವು. ಎಲ್ಲ ಪಟಗಳನ್ನೂ ನೋಡಿದವನಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದಿರಿಸಿದ.

ಮಹಾವೀರನಿಗೆ ತಂದೆತಾಯಿ ಪಾಲಿಸುತ್ತಿದ್ದ ಪಾರ್ಶ್ವನಾಥನ ಬೋಧನೆ ಹಿಡಿಸಿತ್ತು. ತಾನು ಹೊರ ಜಗತ್ತಿಗೆ ತುಂಬ ಅಂಟಿಕೊಂಡವನಂತೆ ಕಾಣುತ್ತಿದ್ದ. ಅಂತರ್ಯದಲ್ಲಿ ಧರ್ಮಪ್ರೇಮ, ವೈರಾಗ್ಯಭಾವ ಬೆಳೆಸಿಕೊಂಡಿದ್ದ. ಮಹಾವೀರ ಕ್ಷತ್ರಿಯರ ಮಧ್ಯೆ ಬೆಳೆದಿದ್ದ, ನಿಜ. ದೈಹಿಕವಾಗಿ ಕ್ಷತ್ರಿಯಗುಣಗಳೂ ಅವನಲ್ಲಿ ವಿಕಾಸವಾಗಿದ್ದುವು. ಒಳಗೊಳಗೇ ಅವನೂ ಯುದ್ಧಕ್ಕೆ ಅಣಿಯಾಗುತ್ತಿದ್ದ. ಅವನ ಯುದ್ಧದ ಬಗೆ ಬೇರೆ. ಕ್ರೋಧ, ಮಾಯ, ಮೋಹ, ಲೋಭ ಮೊದಲಾದ ಶತ್ರುಗಳೊಡನೆ ಯುದ್ಧ ಮಾಡಲು ಮಹಾವೀರ ಸಿದ್ಧನಾದ. ಅವುಗಳನ್ನು ಸೋಲಿಸಿ ಶರಣಾಗಿಸಿ ಗೆದ್ದ ಗೆಲುವೇ ದೊಡ್ಡ ವಿಜಯ ಎಂದು ತಿಳಿದ. ಆಡಳಿತ ವಿಚಾರದಲ್ಲೂ ಅವನ ಒಲವು ಬೇರೆಯಾಗಿತ್ತು. ನೈತಿಕ, ಧಾರ್ಮಿಕ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಟ್ಟಿದ್ದ. ಭೋಗದ ವಿಲಾಸದ ಬದುಕು ಅವನಿಗೆ ರುಚಿಸಲಿಲ್ಲ. ಅದೆಲ್ಲ ನಶ್ವರವೆನಿಸಿತು. ಶಾಶ್ವತವಾದುದನ್ನು ಪಡೆಯಲು ಹಂಬಲಿಸುತ್ತಿದ್ದ.

ಆಗ ನಾಡಿನ ಸಂಸ್ಕೃತಿಯ ಇತಿಹಾಸದಲ್ಲಿ, ಬಹು ಅಂಧಕಾರ ಪೂರ್ಣ ಕಾಲ. ದೇವರು ದಿಂಡರು ನೂರಾರು. ಅವುಗಳ ಎದುರು ಮೂಕ ಪಶುಬಲಿ. ನೆತ್ತರ ಹೊಳೆ. ಮನುಷ್ಯ ರಾಕ್ಷಸೀ ದುರ್ಭಾವನೆಗಳಿಂದ ನಡೆದು ಕೊಳ್ಳುತ್ತಿದ್ದ. ಜೊತೆಗೆ ಅಸ್ಪೃಶ್ಯತೆಯ ತಾಂಡವ. ಮನುಷ್ಯರೇ ಅಸ್ಪಶ್ಯರನ್ನು ಅತ್ಯಾಚಾರದ ಗಾಣದಲ್ಲಿ ಹಿಂಡುತ್ತಿದ್ದರು. ಗಂಡಸರಿಗೆ ಇರುವ ಹಕ್ಕುಗಳು ಹೆಂಗಸರಿಗೆ ಇರಲಿಲ್ಲ. ಹಿಂಸೆಯದೇ ಏಕಛತ್ರಾಧಿಪತ್ಯ. ಇವೆಲ್ಲ ಮಹಾವೀರನ ಮನಸ್ಸನ್ನು ಕಲಕಿಬಿಟ್ಟಿದ್ದುವು.

ಆದರೆ ಸಿದ್ಧಾರ್ಥ-ಪ್ರಿಯಕಾರಿಣಿಯರು ಮಹಾವೀರನನ್ನು ಸಂಸಾರಿಯಾಗುವಂತೆ ಮತ್ತೆ ಮತ್ತೆ ನಿತ್ಯ ಒತ್ತಾಯಿಸತೊಡಗಿದರು.

ಮಹಾವೀರ ಉಪಾಯ ಯೋಚಿಸಿದ. “ಈ ವರ್ಷ ಮದುವೆ ಬೇಡ” ಎಂದು ಮುಂದೂಡಿದ. ಆಗಲಿ ಎಂದು ಅವರೂ ಒಪ್ಪಿದರು. ವರ್ಷಗಳು ಉರುಳಿದವು. ಆಗ ಅವರಿಗೆ ಅನುಮಾನ ಹೆಚ್ಚಿತು. ಪ್ರಿಯಕಾರಿಣಿ ಕಂಗಾಲಾದಳು. ಕೂಡಲೆ ಸರಿಕಂಡ ಸಂಬಂಧಕ್ಕೆ ಹಾತೊರೆದಳು. ಕೌಂಡಿನ್ಯ ಗೋತ್ರದ ಚಲುವೆ ಹುಡುಗಿ ಯಶೋಧೆಯನ್ನು ಕರೆಸಿಕೊಂಡಳು. ಯಶೋಧೆ ರೂಪವತಿ, ಗುಣವತಿ, ಕಲಾವತಿ. ಆ ಕನ್ಯೆಯನ್ನು ಸೊಸೆಮಾಡಿಕೊಂಡು ಮನೆ ತುಂಬಿಸಿಕೊಳ್ಳಲು ನಿರ್ಧರಿಸಿದಳು.

ಆದರೆ ತಂದೆ ಸಿದ್ಧಾರ್ಥ ಮಗನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳತೊಡಗಿದ್ದ. ಮಗ ಮದುವೆ ಬೇಡವೆಂದಾಗಲೇ ಅನುಮಾನ ಹುಟ್ಟಿತು. ಅವನಿಗೆ ಮಗನ ದಾರಿ ತಿಳಿಯಿತು. ಅವನು ಮುಟ್ಟಬೇಕೆಂದಿರುವ ಗುರಿ ತಂದೆಗೂ ಸರಿ ಕಂಡಿತು. ಮಡದಿ ಪ್ರಿಯಕಾರಿಣಿಗೆ ಈ ವಿಚಾರ ತಿಳಿಸಿದ. ಹೆತ್ತ ಕರುಳಬಳ್ಳಿ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. “ನೋಡಿ ಪ್ರಭೂ, ಮಹಾವೀರನಿಗೆ ಈಗ ಮೂವತ್ತು ವರ್ಷ. ನನಗೂ ತಡೆದು ಸಾಕಾಯಿತು. ನೋಡಿದವರು ಏನೆಂದಾರು?”

“ಅವನು ಬ್ರಹ್ಮಚಾರಿಯಾಗೇ ಇರಲು ನಿರ್ಧಾರ ಮಾಡಿದ್ದಾನೆ!”

“ಮಹಾವೀರ ಈ ಸಂಸಾರವನ್ನೇ ತೊರೆದು ಸನ್ಯಾಸಿಯಾಗಿ ಹೋಗಲು ನಿರ್ಧರಿಸಿದ್ದಾನೆ”.

“ದೇವರೇ, ಇನ್ನೇನು ಗತಿ!” ಎಂದವಳೇ ಪ್ರಿಯಕಾರಿಣಿ ಮೂರ್ಛೆ ಹೋದಳು. ತಂದೆ ಮಕ್ಕಳು ಶೈತ್ಯೋಪಚಾರ ಮಾಡಿದರು. ಪ್ರಿಯಕಾರಿಣಿ ಚೇತರಿಸಿಕೊಳ್ಳತೊಡಗಿದಳು. ಅವಳ ಹೃದಯಕ್ಕೆ ಆಘಾತವಾಗಿತ್ತು. ಆ ಸಮಯಕ್ಕೆ ಸರಿಯಾಗಿ ಸಂಜಯ-ವಿಜಯ ಎಂಬ ಹೆಸರಿನ ಚಾರಣ ಮುನಿಗಳು ಕಾಣಿಸಿಕೊಂಡರು. ಅವರಿಗೆ ಆಗಮಾರ್ಥದಲ್ಲಿ (ಆಗಮ=ಜೈನ ಶಾಸ್ತ್ರಗ್ರಂಥ) ಒಂದೆಡೆ ಸಂಶಯ ತೋರಿತ್ತು. ಮಹಾವೀರನ ಬಳಿಗೆ ಬರುತ್ತಿದ್ದಂತೆ ಆ ಸಂಶಯ ನಿವಾರಿತವಾಯಿತು. ಅದರಿಂದ ಚಾರಣರು ಮಹಾವೀರನಿಗೆ ‘ಸನ್ಮತಿ’ ಎಂಬ ಹೆಸರಿಟ್ಟರು.

ತೀರ್ಥಂಕರ ಮಹಾವೀರ ಧರ್ಮಬೋಧನೆ ಮಾಡಿದ.

ಪ್ರಿಯಕಾರಿಣಿ ಮುನಿಗಳಲ್ಲಿ ಪ್ರಾರ್ಥಿಸಿದಳು. “ನೀವಾದರೂ ಮಹಾವೀರನಿಗೆ ಬುದ್ಧಿ ಹೇಳಿ. ಎಲ್ಲರಂತೆ ಮದುವೆಯಾಗಿ ಮನೆಯಲ್ಲೇ ಇರುವಂತೆ ಹೇಳಿ” ಎಂದು ಬೇಡಿಕೊಂಡಳು. ಅವರು ಉತ್ತರಿಸಿದರು: “ತಾಯೀ, ಎಂಥ ಮಾತು ಹೇಳುತ್ತಿದ್ದೀರಿ! ಈ ಮಗ ಹಲವು ಜನ್ಮದ ಸುಕೃತದ ಫಲ. ತ್ರಿಲೋಕ ಗುರುವಾಗಲು ಹೊರಟು ನಿಂತವನನ್ನು ತಡೆಯಬಾರದು ಅಬ್ಬೆ”.

“ನಾನೀಗ ಏನು ಮಾಡಬೇಕೆನ್ನುತ್ತೀರಿ ಪೂಜ್ಯರೆ?”

“ಮಹಾವೀರನ್ನು ಹರಸಿರಿ. ತಪಸ್ಸಿಗೆ ಕಳಿಸಿರಿ”.

“ತಪಸ್ಸಿನ ಕಷ್ಟವನ್ನು ನನ್ನ ಮಗು ಸಹಿಸಲಾರದು ಸ್ವಾಮಿನ್‌”.

“ಆತನದು ಉಕ್ಕಿನ ಮೈಕಟ್ಟು. ಅವನು ಹೆಸರೇ ಮಹಾವೀರ. ಅಲ್ಲದೆ ತಪಸ್ಸಿಗೆ ಬೇಕಾಗಿರುವುದು ದೇಹ ಶಕ್ತಿಯಲ್ಲ, ಆತ್ಮಶಕ್ತಿ. ಶುಭಕೋರಿ ಕಳಿಸಿಕೊಡಿ ತಾಯೀ”.

ಮಹಾವೀರ ತಾಯಿಗೆ ನಮಸ್ಕರಿಸಿದ. ಸಮುದ್ರ ಘೋಷದಂತೆ ನುಡಿದ: “ಅಮ್ಮಾ, ನೀನು ಎಲ್ಲಾ ಬಲ್ಲವಳು. ಹಿರಿಯವಳು. ಹೆತ್ತಬ್ಬೆ. ಈ ಜಗತ್ತು ಮಾಯೆ. ಇಲ್ಲಿನ ವಸ್ತು, ವ್ಯಕ್ತಿಗಳು ನೀರಗುಳ್ಳೆಗಳಂತೆ ನಶ್ವರ. ಎಲ್ಲೆಲ್ಲೂ ದುಃಖ, ನೋವು, ರೋಗರುಜಿನ ತುಂಬಿವೆ. ಸಂಸಾರದಲ್ಲಿ ಸುಖವೆಲ್ಲಿದೆ? ನಾನು ಶಾಶ್ವತ ಸುಖ ಕಂಡುಕೊಳ್ಳಲು ಹೊರಟಿದ್ದೇನೆ. ನೀವು ಆಶೀರ್ವದಿಸಿ”.

ಕ್ರಿಸ್ತಪೂರ್ವ ೫೬೯ನೆಯ ಇಸವಿ. ಮಾರ್ಗಶಿರ ಮಾಸ. ಬಹುಳ ಹತ್ತನೆಯ ದಿನ. ಸಂಸಾರದ ಸರಪಳಿಗಳನ್ನು ಕಳಚಿ ಮಹಾವೀರ ತಪಸ್ಸಿಗೆ ಅಭಿಮುಖನಾಗಿ ನಿಂತ. ಐಶ್ವರ್ಯ, ಅರಮನೆ, ಬಂಧು ಬಳಗ ಎಲ್ಲ ತ್ಯಜಿಸಿದ. ತನ್ನ ಹಿರಿಯ ಹಂಬಲದ ಮುಂದೆ ಇವೆಲ್ಲ ತೃಣವೆನಿಸಿತು.

ಅಂದು ಕುಂಡಪುರದ ಜನರೆಲ್ಲ ಸೇರಿದ್ದಾರೆ. ಮಹಾವೀರ ಹುಟ್ಟಿ ಬೆಳೆದ ಅರಮನೆ. ಅಡ್ಡಾಡಿದ ರಾಜ ಬೀದಿಗಳು. ಆಡಿನಲಿದ ಉದ್ಯಾನವನಗಳು. ತನ್ನನ್ನು ಮೆಚ್ಚಿಕೊಂಡಾಡಿ ಹೂಮಳೆಗರೆದ ನಾಗರಿಕರು. ಅದೊ, ಸರ್ಪವನ್ನು ತುಳಿದು ಮೆಟ್ಟಿದ ಆಲದ ತೋಪು. ಇದೊ, ಮದ್ದಾನೆಯ ಮದವಡಗಿಸಿದ ರಾಜಮೈದಾನ. ಮಹಾವೀರ ಒಮ್ಮೆ ಸುತ್ತ ನೋಡಿದ. ಸಿಂಹಾವಲೋಕನ ಮಾಡಿದ. ಕಣ್ಣಾಡಿಸುತ್ತಿರುವಾಗ ಕೀಲಿ ನಿಂತಿತು. ಅದು ತಂದೆ ತಾಯಿಗಳ ಆಡಿ. ತಾನು ನಿತ್ಯ ಕಂಡು ಪೂಜಿಸಿದ ಪವಿತ್ರ ಚರಣ. ಮತ್ತೊಮ್ಮೆ ಬಾಗಿದ. ತಾಯಿಯ ಕಂಬನಿ ಮಹಾವೀರನ ತಲೆಯ ಮೇಲೆ ಬಿದ್ದಿತು. ಆತ್ಮಾರ್ಥಕ್ಕಾಗಿ ಪೃಥ್ವಿಯನ್ನು ತ್ಯಜಿಸಬಹುದಂತೆ. ಕಣ್ಣೀರ ಹನಿ ತಪೋ ಸಾಮ್ರಾಜ್ಯದ ಅಭಿಷೇಕಕ್ಕೆ ನಾದಿ ಎಂದು ಅಂದುಕೊಂಡ.

ಮಹಾವೀರ ಎಲ್ಲರಿಗೂ ಕೈ ಮುಗಿದ. ಚಂದ್ರ ಪ್ರಭವೆಂಬ ಪಲ್ಲಕ್ಕಿ ಹತ್ತಿದ. ಸಹಸ್ರ ಸಹಸ್ರ ಸಂಖ್ಯೆಯ ಕೊರಳುಗಳು ಜಯಜಯನಾದ ಮಾಡಿದುವು. ನಾಮುಂದು ತಾಮುಂದು ಎಂದು ಕುಂಡಪುರದವರು ಒಬ್ಬರಾದ ನಂತರ ಒಬ್ಬರು ಪಲ್ಲಕ್ಕಿಗೆ ಭುಜಕೊಟ್ಟು ಧನ್ಯಭಾವ ತಾಳಿದರು. ಜಯಗಂಟೆ ಬಾರಿಸಿದರು. ಪಂಚವಾದ್ಯಗಳು ಮೊಳಗಿದುವು. ಶಂಖಗಳನ್ನು ಊದಿದರು. ಆನೆ, ಕುದುರೆ, ರಥ, ಪದಾತಿ ಮುಂದೆ ನಡೆದಿತ್ತು. ಮಹಾವೀರನಿಗೆ ರಾಜಮರ್ಯಾದಿತ ಬೀಳ್ಕೊಡುಗೆ.

ಯತಿಯಾದ

ಕುಂಡಗ್ರಾಮದ ಪಕ್ಕದಲ್ಲಿ ಜ್ಞಾತ್ರಿಕವನ “ಷನ್ದವನ” ಇತ್ತು. ಅಲ್ಲಿ ಮಧ್ಯೆ ನಲಿಯುವ ಚಿಗುರಿನ ಅಶೋಕ ವೃಕ್ಷ. ಪಲ್ಲಕ್ಕಿ ಇಳಿಸಿದರು. ಮಹಾವೀರ ಕೆಳಗಿಳಿದ. ಪೂರ್ವಾಭಿಮುಖವಾಗಿ ನಿಂತ. ಅಲ್ಲಿನ ಅಮೃತಶಿಲೆಯ ಮೇಲೆ ಕುಳಿತ. ಮೈಮೇಲಿನ ಹೂವಿನ ಹಾರ ತೆಗೆದ. ಆಭರಣ ಕಳಚಿದ. ನವಿರು ನವಿರಾದ ಬೆಲೆಬಾಳುವ ಬಟ್ಟೆಗಳನ್ನು ಬಿಚ್ಚಿದ. ಅವನ್ನೆಲ್ಲ ಅಲ್ಲೆ ಗುಡ್ಡೆ ಮಾಡಿದ. ಶರೀರದ ಮೇಲೆ ಮೋಹವಿಲ್ಲ. ಇನ್ನು ಈ ಪರಿಗ್ರಹವೆಲ್ಲ ಬೇಡ. ತಲೆಯ ತುಂಬ ಕೂದಲು! ತನ್ನ ಸ್ವಂತ ಕೈಯಿಂದ ಮಹಾವೀರ ತಲೆಗೂದಲನ್ನು ಐದು ಬಾರಿ ಲೋಚು (ಲುಂಚನ = ಜೈನಯತಿ ಕೂದಲನ್ನು ಕಿತ್ತು ಹಾಕುವ ಕ್ರಿಯೆ) ಮಾಡಿಕೊಂಡ. ಜನ ತೆರಳಿದರು. ಸಿದ್ಧಾರ್ಥ ಪ್ರಿಯಕಾರಿಣಿಯರೂ ಅರಮನೆಗೆ ಮರಳಿದರು. ಮಗನಿಲ್ಲದೆ ತಾಯಿಗೆ ಅರಮನೆ ಸೆರೆಮನೆ ಎನಿಸಿತು. ಯಶೋದೆಯನ್ನು ಅವಳ ತವರುಮನೆಗೆ ಕಳಿಸಿಕೊಟ್ಟಳು. (ಶ್ವೇತಾಂಬರ ಪಂಥದವರ ಹೇಳಿಕೆಯಂತೆ ಯಶೋದೆಯೊಡನೆ ಮಹಾವೀರನಿಗೆ ಮದುವೆಯಾಗಿತ್ತು ಮತ್ತು ಇವರಿಗೆ ಒಬ್ಬ ಮಗಳೂ ಇದ್ದಳು. ದಿಗಂಬರ ಪಂಥದವರು ಇದನ್ನು ಮಾನ್ಯ ಮಾಡುವುದಿಲ್ಲ).

ಚಂದ್ರ ಉತ್ತರ ಫಾಲ್ಗುಣದಲ್ಲಿದ್ದ. ಆಗ ಎರಡೂವರೆ ದಿನ ಮಹಾವೀರ ಉಪವಾಸ ಮಾಡಿದ. ಒಂದು ತೊಟ್ಟು ನೀರನ್ನೂ ಕುಡಿಯಲಿಲ್ಲ. ಲೋಕಾಂತ ತಪ್ಪಿತ್ತು. ಏಕಾಂತ ದೊರೆತ್ತಿತ್ತು. ಹನ್ನೆರಡು ವರ್ಷಕಾಲ, ಕ್ರಿ.ಪೂ.೫೬೯ ರಿಂದ ೫೫೭, ಮಹಾವೀರ ಯತಿ ಜೀವನ ನಡೆಸಿದ. ಬೇರೆ ಯಾರೂ ಗುರುಗಳಿರಲಿಲ್ಲ. ತನಗೆ ತಾನೇ ಗುರುವಾಗಿದ್ದ. ಹಿಂದಿನ ತೀರ್ಥಂಕರ ಪಾರ್ಶ್ವನಾಥನ ತತ್ವದ ಹೆದ್ದಾರಿಯಿತ್ತು. ಅತಿ ಕಷ್ಟದ ಯತಿ ಜೀವನ ನಡೆಸಿದ. ಶರೀರದ ಕಡೆ ಗಮನವಿರಲಿಲ್ಲ. ದೇಹಪೋಷಣೆ ಮರೆತ. ಆತ್ಮನನ್ನೇ ಕುರಿತು ಯೋಚಿಸಿದ. ದಿಗಂಬರನಾದ. ಒಂದು ಕಡೆ ಹೆಚ್ಚು ಕಾಲ ನಿಲ್ಲಲಿಲ್ಲ. ತನ್ನ ಬಳಿ ಏನನ್ನೂ ಇಟ್ಟುಕೊಳ್ಳಲಿಲ್ಲ.

ಬರಿಯ ಮೈ. ಅರಿವೆ ಇರಲಿಲ್ಲ. ಕ್ರಿಮಿಕೀಟಗಳು ಕಚ್ಚಿದುವು. ಸೊಳ್ಳೆ ಚುಚ್ಚಿತು. ಇರುವೆ ಕಚ್ಚಿತು. ನೊಣಾದಿಗಳು ಹರಿದಾಡಿದುವು. ಮಹಾವೀರನಿಗೆ ಅದರ ಪರಿವೆಯೇ ಇರಲಿಲ್ಲ. ಕ್ರಿಮಿಕೀಟಗಳಿಗೂ ಸಸ್ಯಗಳಿಗೂ ನೋವು ಮಾಡಲಿಲ್ಲ. ಅವಕ್ಕೂ ನಮ್ಮಂತೆ ಜೀವವಿದೆ. ಜೀವಹಿಂಸೆ ತಪ್ಪು. ಅವನ ನಗ್ನ ರೂಪ ನೋಡಿ ಕೆಲವು ಜನ ನಕ್ಕರು. ಕೆಲವರು ಕುಚೋದ್ಯ ಮಾಡಿದರು. ಪೋಲಿಗಳು ಕೂಗು ಹಾಕುತ್ತಿದ್ದರು. ಕಿಳ್ಳೆಕೇತಗಳು ಶಿಳ್ಳೆ ಹಾಕುತ್ತಿದ್ದರು. ಅಜ್ಞಾನಿಗಳು ಹೊಡೆದರು. ದುರಾತ್ಮರು ಕಲ್ಲು ಬೀರಿದರು. ಮಹಾವೀರ ಪ್ರತಿಭಟಿಸಲಿಲ್ಲ. ಎಲ್ಲರನ್ನೂ ಕ್ಷಮಿಸಿದ. ಅವನದು ಅಪಾರ ತಾಳ್ಮೆ. ನೋವಾಯಿತೆಂದು ದೂರಲಿಲ್ಲ. ತಿರುಗಿ ಬೀಳಲಿಲ್ಲ. ನಿಂದಿಸಲಿಲ್ಲ. ಶಪಿಸಲಿಲ್ಲ. ಪ್ರತಿಮಾತೇ ಆಡಲಿಲ್ಲ.

ದಿನಗಳು ವಾರಗಳು ಉರುಳಿದುವು. ತಿಂಗಳುಗಟ್ಟಲೆ ಮೌನವ್ರತ ಪಾಲಿಸುತ್ತಿದ್ದ. ಆತ್ಮದ ಯೋಚನೆಯಲ್ಲಿ ಮುಳುಗುತ್ತಿದ್ದ. ಜನರ ಜೊತೆ ಬೆರೆಯುತ್ತಿರಲಿಲ್ಲ. ಕೆಲವರು ನಿಂದಿಸಿದರು. ಮತ್ತೆ ಕೆಲವರು ವಂದಿಸಿದರು. ಮಹಾವೀರ ಇಬ್ಬರನ್ನೂ ಸಮಾನವಾಗಿ ಕಂಡ, ನಿಂದಿಸಿದವರಿಗೆ ಆಗ್ರಹಿಸಲಿಲ್ಲ. ವಂದಿಸಿದವರಿಗೆ ಅನುಗ್ರಹಿಸಲಿಲ್ಲ. ಅವನ ಮನಸ್ಸು ಯಾವುದೇ ಕಾರಣದಿಂದ ಪಲ್ಲಟವಾಗಲಿಲ್ಲ. ಅನೇಕರು ಮಾತಾಡಿಸಿದರು. ಪ್ರಶ್ನೆ ಕೇಳಿದರು. ಮಹಾವೀರ ದೀರ್ಘಮೌನ ಮುರಿಯಲಿಲ್ಲ.

ಕಠೋರ ತಪಸ್ಸು

ಮಹಾವೀರನಿಗೆ ಶ್ರೇಷ್ಠಜ್ಞಾನ ಸಾಧಿಸುವ ಹಠ. ಕರ್ಮಗಳನ್ನು ನಿರ್ಮೂಲಿಸುವ ಛಲ. ಅದಕ್ಕಾಗಿ ಕಠೋರ ತಪಸ್ಸು. ತಡೆಯಿಲ್ಲದ ಧ್ಯಾನ. ಮುರಿಯದ ಅಖಂಡ ಬ್ರಹ್ಮಚರ್ಯ. ದೀಕ್ಷಾಜೀವನ ಕತ್ತಿಯ ಮೊನೆಯ ಮೇಲಿನ ನಡಿಗೆ. ಹಗಲು ರಾತ್ರಿ ಸಾಧನೆ. ಬಹುವಾದ ಅಲೆತ. ಸಂಚಾರ ಹಗಲಲ್ಲಿ. ರಾತ್ರಿಯಲ್ಲಿ ಪಯಣಿಸುತ್ತಿರಲಿಲ್ಲ. ರಾತ್ರಿ ನಿದ್ದೆಗೆ ಇಂತಹುದೇ ಜಾಗ ಎಂಬುದಿಲ್ಲ. ಗಂಧದ ವಾಸನೆ, ಗೊಬ್ಬರದ ವಾಸನೆ, ಎರಡೂ ಒಂದೆ. ಸಂತೆ, ಸತ್ರ, ಗುಡಿಸಲು, ಮರದ ನೆರಳು, ಹಳ್ಳಿ, ಪಟ್ಟಣ, ತೋಟ, ಹೊಲ, ಸ್ಮಶಾನ- ಎಲ್ಲಿ ರಾತ್ರಿಯಾದರೆ ಅಲ್ಲಿ. ಆತನೇನು ಸುಖನಿದ್ರೆ ಮಾಡಬೇಕೆ? ಏಳೆಂಟು ಗಂಟೆ ಮಲಗಿ ಗೊರಕೆ ಹೊಡೆಯಬೇಕೆ? ದಿನಕ್ಕೆ ನಾಲ್ಕೈದು ಗಂಟೆ ನಿದ್ರೆ. ಕೆಲವು ದಿನ ಒಂದೆರಡು ಗಂಟೆ ಮಾತ್ರ. ಚಳಿಗಾಲದಲ್ಲೂ ಹೊದಿಕೆ ಹೊದೆಯಲಿಲ್ಲ. ಚಳಿಗಾಳಿಗಳಲ್ಲೂ ಮರದ ನೆರಳಿನಲ್ಲಿ ನಿಂತು ಧ್ಯಾನಿಸಿದ. ಬೇಸಗೆಯಲ್ಲೂ ಅಷ್ಟೆ. ಉರಿಬಿಸಿಲಲ್ಲಿ ಬರಿಮೈ ಕರಿದು ಕಪ್ಪಾಯಿತು. ಎಣ್ಣೆ ಇಲ್ಲ. ಸೀಗೆಪುಡಿ ಇಲ್ಲ. ಕಲ್ಲಿಂದ ಕೈಯಿಂದ ಉಜ್ಜುತ್ತಿರಲಿಲ್ಲ. ಮೈ ಕಡಿದರೆ ಕೆರೆದುಕೊಳ್ಳುತ್ತಿರಲಿಲ್ಲ. ಸ್ನಾನ ಮಾಡುತ್ತಿರಲಿಲ್ಲ. ಗಾಯಗಳಾದರೆ ಔಷಧ ಮಾಡುತ್ತಿರಲಿಲ್ಲ.

ಆಹಾರ ವಿಧಿ

ಮಹಾವೀರನ ಆಹಾರವಿಧಿ ಕ್ಲುಪ್ತ. ಪರಿಮಿತ ಆಹಾರ. ಆತನ ಬಳಿ ಪಾತ್ರೆ ಪಡಗ ಏನೂ ಇರಲಿಲ್ಲ. ಬರಿಮೈ, ಬರಿಗೈ ಹಾಗಾದರೆ ಊಟ ಮಾಡುವುದು? ಕೈಯೇ ಪಾತ್ರೆ! ಮಹಾವೀರನ ಊಟದಲ್ಲಿ ನಿಯಮ ಹಾಕಿಕೊಂಡಿದ್ದ. ತನ್ನಿಂದ ಬೇರೆಯವರಿಗೆ ತೊಂದರೆ ಆಗಬಾರದು. ತನಗಾಗಿ ಕಷ್ಟ ತೆಗೆದುಕೊಂಡು ಸಿದ್ಧ ಮಾಡಿದ ಅಡಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಇಂದ್ರಿಯಗಳನ್ನು ಪುಷ್ಠಿ ಮಾಡುವ ಆಹಾರ ನಿಷಿದ್ಧ. ಭೂರಿ ಭೋಜನಕ್ಕೆ ಆಸೆ ಪಡಲಿಲ್ಲ. ದಿನಕ್ಕೊಮ್ಮೆ ಆಹಾರ. ಮತ್ತೆ ಮರುದಿನ ಆ ವೇಳೆ ಬರುವ ತನಕ ನೀರೂ ಇಲ್ಲ. ಭಿಕ್ಷೆಗೆ ಹೊರಟರೂ ನಿಯಮ. ನಡೆಯುವಾಗ ಹತ್ತು ಅಡಿ ನಿಗಾ ಇಟ್ಟು ನೋಡುವನು. ಇರುವೆ ಗೊದ್ದ ತುಳಿತಕ್ಕೆ ಸಿಕ್ಕಬಾರದು. ಹಸಿದ ಕಾಗೆ ಕಂಡರೆ ಅಂದು ಆಹಾರವಿಲ್ಲ. ಬಾಯಾರಿಕೆಯಿಂದ ನರಳುವ ಪ್ರಾಣಿ ಕಣ್ಣಿಗೆ ಬಿದ್ದರೆ ಉಪವಾಸ. ಬೆಕ್ಕು, ನಾಯಿ, ಎದುರಿಗೆ ಸಿಕ್ಕಿದರೆ ಹಿಂತಿರುಗಬೇಕು. ಇಷ್ಟು ಉಗ್ರ ನಿಯಮಗಳಿಂದ ಕೆಲವೊಮ್ಮೆ ಹನ್ನೆರಡು ದಿನಗಳ ಉಪವಾಸ. ಆರೇಳು ದಿನಗಳ ಉಪವಾಸವಂತೂ ಲೆಕ್ಕವಿಲ್ಲದಷ್ಟು. ತಿಂಗಳು ಉಪವಾಸವೂ ವಾಡಿಕೆ ಆಗಿಬಿಟ್ಟಿತು. ಆಹಾರಕ್ಕೆ ಪ್ರೀತಿಯಿಂದ ಕರೆದ ಮನೆಗಷ್ಟೇ ಹೋಗುವುದು. ಗುಡಿಸಲೂ ಮಹಲೂ ಒಂದೇ. ಶಾಖಾಹಾರಿಗಳಾದರೆ ಸಾಕು. ಕಡೆಗೆ ಅಂದು ಶಾಖಾಹಾರ ಮಾಡಿದ್ದರೆ ಆಯಿತು. ಶುಚಿ ಮುಖ್ಯ. ರುಚಿ ಮುಖ್ಯವಲ್ಲ. ಮಿತಾಹಾರ, ಊಟ ಮಾಡುವುದಾದರೂ ಹೇಗೆ? ಸುಖಾಸೀನನಾಗಿಯೇ ಮಣೆ ಇಲ್ಲವೆ ಚಾಪೆಯ ಮೇಲೆ ಕುಳಿತೆ? ಚಿನ್ನ ಬೆಳ್ಳಿ ತಟ್ಟೆಯೊಳಗೆ? ಅವೆಲ್ಲ ಇಲ್ಲಿ ಸಲ್ಲ. ಮಹಾವೀರನದು ಹುಟ್ಟಿನೊಡನೆ ಬಂದ ಪಾತ್ರೆ – ಕೈಯೇ. ನಿಂತೇ ಆಹಾರ ತೆಗೆದುಕೊಳ್ಳುವುದು. ಆಹಾರ ಕೊಡುವವರು ಸಂತೋಷದಿಂದ ನೀಡಬೇಕು. ಅವರ ಮನೆಯಲ್ಲಿ ಏನಿದ್ದರೆ ಅದು ಆಗಬಹುದು. ಇಂತಹುದೇ ಇಷ್ಟೇ ಎಂಬ ಅಪೇಕ್ಷೆಯಿಲ್ಲ. ಆಹಾರ ಕೊಡುವವರು ಮೊದಲು ಮನೆಬಾಗಿಲಲ್ಲಿ ನಿಂತು ಮಹಾವೀರನನ್ನು ಭಕ್ತಿಯಿಂದ ಭಿಕ್ಷೆ ಸ್ವೀಕರಿಸಲು ಬೇಡುವರು. ಆತ ನಿಂತರೆ ಒಪ್ಪಿಗೆಯ ಸೂಚನೆ. ಮೊದಲು ಮನೆ ಬಾಗಿಲಲ್ಲೇ ಕಾಲು ತೊಳೆಯುವರು. ಒಳಗೆ ಬಂದು ನಿಂತ ಮೇಲೆ ಕೈಗೆ ನೀರು ಹಾಕುವರು. ಕೈ ತೊಳೆಯುವುದಾದ ಮೇಲೆ ನಿಂತೇ ಎಡ ಅಂಗೈಯಲ್ಲಿ ಬಲ ಅಂಗೈ ಇಡುವುದು. ಬಲ ಅಂಗೈಯೇ ಬಟ್ಟಲು. ತಟ್ಟೆ, ಚಮಚ. ಇದನ್ನು ಪಾಣಿತಲಭೂಜನ ಎನ್ನುವರು. ಅಂದರೆ ಅಂಗೈ ಊಟ. ಆಹಾರ ಕೊಡುವವರು ಒಂದೊಂದೇ ತುತ್ತು ಮಾಡಿ ಅರೆಬೊಗಸೆಯಲ್ಲಿರಿಸುವರು. ಮಹಾವೀರ ಕ್ರಿಮಿಗಳೊ ಕೂದಲೊ ಇದ್ದೀತೆಂದು ಬೆರಳುಗಳಿಂದ ನೋಡುವನು. ಹಾಗೇನಾದರೂ ಇದ್ದರೆ ಅದನ್ನು ತೆಗೆದು ತಿನ್ನುವುದೇ ಅಥವಾ ಆ ತುತ್ತು ಬಿಟ್ಟು ಬೇರೆ ತುತ್ತು ತೆಗೆದುಕೊಳ್ಳುವುದೆ? ಎಂದಿಗೂ ಇಲ್ಲ. ಕೀಟವೊ ಕೂದಲೊ ಇದ್ದರೆ ಅಲ್ಲಿಗೇ ಊಟ ಮುಕ್ತಾಯ. ಕೈ ತೊಳೆದು ಮೌನವಾಗಿ ಹಿಂತಿರುಗಿ ಹೋಗಿ ಬಿಡುವುದು, ಆ ದಿನ ಪೂರ್ತಿ ಉಪವಾಸ, ಮತ್ತೆ ಮರುದಿನ ಭಿಕ್ಷೆ.

ದೀಕ್ಷಾನಂತರ ಮೊದಲ ಆರು ತಿಂಗಳು ಆಹಾರವಿರಲಿಲ್ಲ. ದೀರ್ಘ ಉಪವಾಸ. ಆಮೇಲೇ ಭಿಕ್ಷೆಗೆ ಹೊರಟಿದ್ದು. ಪ್ರಥಮ ಭಿಕ್ಷೆ ಕೊಟ್ಟವನು ಕುಲಪುರದ ಕುಲಾಧಿಪ. ಮಹಾವೀರ ಒಟ್ಟು ೧೨ ವರ್ಷ ೫ ತಿಂಗಳು ೧೫ ದಿವಸಗಳು ತಪಸ್ಸು ಆಚರಿಸಿದ. ಈ ಅವಧಿಯಲ್ಲಿ ಕೇವಲ ೩೪೯ ಬಾರಿ ಆಹಾರ ತೆಗೆದುಕೊಂಡಿದ್ದ. ಮಹಾವೀರ ಎಲ್ಲೂ ಹೆಚ್ಚು ಕಾಲ ನಿಲ್ಲುತ್ತಿರಲಿಲ್ಲ. ಸ್ಥಳದಿಂದ ಸ್ಥಳಕ್ಕೆ ಪಾದರಸದಂತೆ ಚಲಿಸುತ್ತಿದ್ದ. ಹಳ್ಳಿಯಲ್ಲಿ ಇರುತ್ತಿದ್ದುದ್ದು ಒಂದೇ ದಿನ. ಪಟ್ಟಣದಲ್ಲಿ ನಾಲ್ಕು ದಿನ. ಅಡವಿಯಲ್ಲಿ ಹತ್ತು ದಿನ. ಮಳೆಗಾಲದಲ್ಲಿ ಮಾತ್ರ ಒಂದು ಕಡೆ ಬಿಡಾರ. ಇದಕ್ಕೆ ಚಾತುರ್ಮಾಸಯೋಗ ಎಂದು ಹೆಸರು. ತನ್ನ ಮೊತ್ತ ಮೊದಲ ಚಾತುರ್ಮಾಸವನ್ನು ಮಹಾವೀರ ಆಸ್ಥಿ ಗ್ರಾಮದಲ್ಲಿ ಕಳೆದ. ಇದು ಈಗಿನ ಬಂಗಾಳದ ಬರ್ದವಾನ ಎಂಬ ಊರು. ಮಹಾವೀರನಿಗೆ ಕೋಪವಿಲ್ಲ. ತಾಪವಿಲ್ಲ, ಅಹಂಕಾರವಿಲ್ಲ. ಲೋಭ ಮೊದಲೇ ಇಲ್ಲ. ಸದಾ ಶಾಂತ. ಬಾನಿನಂತೆ ಯಾವ ಅವಲಂಭನೆ, ಆಶ್ರಯ ಇಲ್ಲ. ಕಡಲಿನಂತೆ ಗಂಭೀರ. ಚಂದ್ರನಂತೆ ಸೌಮ್ಯ. ಎಲ್ಲ ತೊರೆದವನಿಗೆ ಹೆದರಿಕೆ ಎಲ್ಲಿಯದು? ಆಸ್ಥಿ ಗ್ರಾಮದ ಹೊರದಾರಿಯಲ್ಲಿ ಶೂಲ್ಫಾನಿ ಮಂದಿರ. ಅದರ ಹತ್ತಿರ ರಾತ್ರಿಯಾದರೆ ಯಾರೂ ಸುಳಿಯುತ್ತಿರಲಿಲ್ಲ. ಹಗಲಲ್ಲೂ ಒಬ್ಬೊಬ್ಬರೇ ಅಲ್ಲಿಗೆ ಬರಲು ಹೆದರುತ್ತಿದ್ದರು. ಅದಕ್ಕೆ ಕಾರಣ ಆ ಮಂದಿರದಲ್ಲಿದ್ದ ಕೆಟ್ಟ ಶಕ್ತಿ. ಮಹಾವೀರ ಆ ಮಂದಿರದಲ್ಲೇ ಇಳಿದುಕೊಂಡ. ದುಷ್ಟದೇವತೆ ಬಹಳ ಹಿಂಸೆ ಕೊಟ್ಟಿತು. ಆತ ಆಧೀರನಾಗಲಿಲ್ಲ. ಇದೇ ರೀತಿ ಸಿದ್ಧಗ್ರಾಮ, ವೈಶಾಲಿ, ವಣಿಜಗ್ರಾಮ, ಶ್ರಾವತ್ಸಿ ಮುಂತಾದ ಕಡೆಗಳಲ್ಲಿ ಚಾತುರ್ಮಾಸ ಕಳೆದ.

ಈ ತರಹೆಯ ತಪಸ್ಸಿನ ದಾರಿ ಇಕ್ಕಟ್ಟಿನದು. ಕಂಟಕಗಳು ಬಹಳ. ಉತ್ತರ ಭಾರತದಲ್ಲಿ ಹಲವರು ಸನ್ಯಾಸಿಗಳು ಹಾವಳಿ ಮಾಡುತ್ತಿದ್ದರು. ಇವರ ಗುಂಪು ಮಹಾವೀರನಿಗೂ ತೊಂದರೆ ಕೊಟ್ಟಿತು. ಅವರು ತಂದೊಡ್ಡಿದ್ದ ಅಡ್ಡಿಗಳನ್ನು ಮಹಾವೀರ ಸಂಯಮದಿಂದ ಗೆದ್ದ. ಅಲ್ಲಿಗೇ ಮುಗಿಯಲ್ಲಿ ಮಹಾವೀರನ ಪರೀಕ್ಷೆ. ಆತ ಇನ್ನೆರಡು ಅಗ್ನಿಪರೀಕ್ಷೆಗಳಲ್ಲಿ ಉತ್ತೀರ್ಣನಾಗಬೇಕಿತ್ತು. ಶ್ರಾವತ್ಸಿಯಲ್ಲಿ ಹನ್ನೊಂದನೆಯ ಚಾತುರ್ಮಾಸಕ್ಕೆ ನಿಂತ. ಅಲ್ಲಿ ಕೆಟ್ಟ ವಿದ್ಯೆಗಳನ್ನು ಕಲಿತ ಸಂಘಮಾಖನೆಂಬುವನು ಕಾಡಿಸಿದ. ತಿಂಗಳುಗಟ್ಟಲೆ ಮಹಾವೀರ ಬೆನ್ನುಹತ್ತಿದ ಬೇತಾಳವಾದ. ಚಿತ್ರಹಿಂಸೆ ಕೊಟ್ಟ. ಮಹಾವೀರ ಶಿಷ್ಯನಂತೆ ರೂಪ ಧರಿಸಿದ. ಮನೆಗಳಲ್ಲಿ ಕಳ್ಳತನ ಮಾಡಿದ, ಬೇಕಂತಲೇ ಸಿಕ್ಕಿಬಿದ್ದು “ಮಹಾವೀರನೇ ಹೇಳಿಕಳಿಸಿದ” ಎಂದು ಸುಳ್ಳು ಹೇಳಿದ. ಜನ ಮಹಾವೀರನನ್ನು ಕಳ್ಳ ಗುರುವೆಂದು ಹಳಿದರು. ಶಿಕ್ಷಿಸಿದರು. ಸಂಘಮಾಖ ಅಲ್ಲಿಗೂ ಬಿಡಲಿಲ್ಲ. ಮಹಾವೀರ ಭಿಕ್ಷೆಗೆ ಹೊರಟಾಗ ಹಸಿದ ಕಾಗೆಗಳಂತೆ ಕೂಗಿದ. ಆಹಾರ ಸ್ವೀಕರಿಸುವಾಗ ಅಡ್ಡಿಗಳನ್ನು ಮಾಡಿದ. ಇನ್ನೊಂದು ದಿವಸ ಭಿಕ್ಷೆಗೆ ಹೊರಟಾಗ ತಿರುಪೆಯವನಂತೆ ನರಳಿ ಆಹಾರ ತಪ್ಪಿಸಿದ. ಮತ್ತೊಂದು ದಿನ ಇನ್ನೇನು, ತುತ್ತು ಬಾಯಲ್ಲಿಡಬೇಕು, ಆಗ ಬೆಕ್ಕಿನಂತೆ ಅಡಿಗೆ ಮನೆಯಿಂದ ಕೂಗಿದ. ಹೀಗೆ ವಿಘ್ನಪರಂಪರೆಯಲ್ಲಿ ಮಹಾವೀರ ಬೆಂದ. ಪುಟಕ್ಕೆ ಹಾಕಿ ಕಾಸಿದ ಶುಭ್ರ ಚಿನ್ನದಂತೆ ಆದ. ಸಂಘಮಾಖ ಪೂರ್ತಿ ಸೋತ. ಮುಖವಿಲ್ಲದೆ ಓಡಿಹೋದ.

ಮಹಾವೀರ ಉಜ್ಜಯನಿಗೆ ಬಂದ. ಊರ ಹೊರಗೆ ಅತಿಮುಕ್ತವೆಂಬ ಭಯಾನಕ ಸ್ಮಶಾನ. ಅಲ್ಲಿ ನಿಲ್ಲಲ್ಲು ಯಾರಿಗೂ ರ್ಧೈ ಸಾಲದು. ಮಹಾವೀರ ಅಲ್ಲಿಗೆ ಬಂದಾಗ ಸಂಜೆಯಾಯಿತು. ಆ ರಾತ್ರಿ ಅಲ್ಲಿಯೇ ಕಳೆಯಬೇಕಾಯಿತು. ಮಹಾವೀರ ಧ್ಯಾನಕ್ಕೆ ನಿಂತ. ಪೂರ್ತಿ ರಾತ್ರಿಯಾಯಿತು. ಒಡನೆ ಬಾನಿನಲ್ಲಿ ಗುಡುಗಾಯಿತು. ಮಿಂಚು ಹೊಳೆಯಿತು. ಸಿಡಿಲು ಅರ್ಭಟಿಸಿತು. ಕಾಡುಮೃಗಗಳು ಮುತ್ತಿಗೆ ಹಾಕಿದವು. ಸಿಂಹ ಗರ್ಜಿಸಿತು. ಹುಲಿ ಅಬ್ಬರಿಸಿತು. ಚಿರತೆ ಎದೆ ಬಿರಿಯುವಂತೆ ಕೂಗಿತು. ಚೇಳುಗಳು ಪಿತಗುಟ್ಟಿದುವು. ಹಾವುಗಳು ಹೆಡೆ ಬಿಚ್ಚಿ ಹರಿದಾಡಿದವು. ಮಹಾವೀರ ಮಹಾಮೌನ ಬಿಡಲಿಲ್ಲ. ಹೆದರಿಸುವ ಮುಖವಾಡಗಳು ಬಂದುವು. ಭೂತಪ್ರೇತಾದಿಗಳಿಗೆ ಸೊಪ್ಪು ಹಾಕಲಿಲ್ಲ. ಬೆಳಕು ಹರಿಯಿತು. ಮಹಾವೀರ ಭಯಂಕರ ರಾತ್ರಿಯನ್ನು ಸೌಮ್ಯವಾಗಿ ಕಳೆದಿದ್ದ.

ಮಹಾವೀರ ಹನ್ನೆರಡನೆಯ ಚಾತುರ್ಮಾಷವನ್ನು ಕೌಶಾಂಬಿಯಲ್ಲಿ ಕಳೆದ. ಇಲ್ಲಿ ಅಭಿಗ್ರಹ ಎಂಬ ಘೋರ ಉಪವಾಸ ಮಾಡಿದ. ಪಾರಣೆಯ ದಿನ ಭಿಕ್ಷೆಗೆ ಹೊರಟ. “ಓ ಮುನಿಶ್ರೇಷ್ಠನೇ, ನಿಲ್ಲು” ಎಂಬ ಕರೆ ಕೇಳಿಬಂತು. ಅದು ಹೆಣ್ಣಿನ ಮೊರೆ. ಧ್ವನಿ ಬಂದ ಕಡೆ ನೋಡಿದ. ಅವಳು ಚಂದನೇ, ಚೇಟಕ ರಾಜನ ಮಗಳು. ಆಜನ್ಮ ಬ್ರಹ್ಮಚರ್ಯೆ ಪಾಲಿಸಿದವಳು. ಜೈ ಧರ್ಮದಲ್ಲಿ ನಿಷ್ಠೆ. ಚಿಂದಿಬಟ್ಟೆ ತೊಟ್ಟ ನೊಂದ ಜೀವ. ಭಕ್ತಿಗೆ ಬಡತನ ಇಲ್ಲ. ಅವಳಲ್ಲಿ ಹಾಲುತುಪ್ಪ ಇರಲಿಲ್ಲ. ಹಣ್ಣು ಇರಲಿಲ್ಲ. ಚಂದನೆ ದಪ್ಪಕ್ಕಿ ಅನ್ನ ನೀಡಿದಳು. ಮಹಾವೀರ ಸಂತಸದಿಂದ ಸ್ವೀಕರಿಸಿದ. ಚಂದನೆ ಆನಂದ ತುಂದಿಲಳಾದಳು.

ತೀರ್ಥಂಕರನಾದ

ಮಹಾವೀರ ಮುಂದೆ ಹೊರಟ. ಜೃಂಭಿಕ ಗ್ರಾಮ ತಲುಪಿದ. ಋಜುಕೂಲ ನದಿ ಹರಿಯುತ್ತಿತ್ತು. ಉತ್ತರಕ್ಕೆ ದಡದಲ್ಲಿ ಸಮಾಗಮನೆಂಬ ಶ್ರಾವಕನ ಹೊಲ. ಅದರಲ್ಲೊಂದು ಶಾಲವೃಕ್ಷ. ಅದರ ಕೆಳಗೆ ಮಹಾವೀರ ಕುಳಿತ. ಪೂರ್ಣಧ್ಯಾನ ನಿರತನಾದ. ಗ್ರೀಷ್ಮ ಋತು. ಎರಡನೆಯ ತಿಂಗಳು. ನಾಲ್ಕನೆಯ ಪಕ್ಷ. ಸುವ್ರತವೆಂಬ ದಿನ. ವಿಜಯ ಮುಹೂರ್ತ. ಕ್ರಿ.ಪೂ.೫೫೭ನೆಯ ಇಸವಿ. ವೈಶಾಖ ಶುದ್ಧ ದಶಮಿ. ಮಧ್ಯಾಹ್ನ ಮರೆಯಾಗುತ್ತಿತ್ತು. ಉತ್ತರ ಫಲ್ಗುಣಿ ನಕ್ಷತ್ರಯೋಗ. ನೆರಳು ಪೂರ್ವಕ್ಕಿತ್ತು. ಮಹಾವೀರ ಹಿಮ್ಮಡಿ ಜೋಡಿಸಿ ಪರ್ಯಂಕಾಸನದಲ್ಲಿದ್ದ. ಆಗ ಶ್ರೇಷ್ಠ ಜ್ಞಾನ ಲಭಿಸಿತು. ಇದೇ ಕೇವಲ ಜ್ಞಾನ ಪ್ರಾಪ್ತಿ ಎಲ್ಲವನ್ನೂ ತಿಳಿಯುವ ದಿವ್ಯಜ್ಞಾನ. ಮಹಾವೀರ ತೀರ್ಥಂಕರನಾದ. ಆಗ ಮಹಾವೀರನಿಗೆ ೪೧ ವರ್ಷ ೯ ತಿಂಗಳು ೫ ದಿವಸ. ತೀರ್ಥಂಕರನಿರುವ ಸ್ಥಳದಿಂದ ನಾಲ್ಕೂ ಕಡೆ ನಾನ್ನೂರು ಮೈಲಿ ದುರ್ಭಿಕ್ಷವಿಲ್ಲ. ಪ್ರಾಣಿಗಳಿಗೆ ಬಾಧೆಯಾಗದಂತೆ ನಡೆಯುತ್ತಾನೆ. ಮುಖ ಒಂದೇ. ನೋಡುವವರಿಗೆ ನಾಲ್ಕೂ ಕಡೆ ನಾಲ್ಕು ಮುಖವಿದ್ದಂತೆ ಕಾಣುತ್ತೆ. ಎಲ್ಲ ವಿದ್ಯೆಗಳನ್ನೂ ಬಲ್ಲ. ಆತನ ಶರೀರದ ನೆರಳು ಬೀಳುವುದಿಲ್ಲ. ಕಣ್ಣಿನ ರೆಪ್ಪೆ ಚಲಿಸದು. ಉಗುರು, ಕೂದಲು ಬೆಳೆಯುವುದಿಲ್ಲ.

ಮಹಾವೀರ ಪೂರ್ಣಧ್ಯಾನ ನಿರತನಾದ.

ತೋರಿಸಿದ ದಾರಿ

 

ಮಹಾವೀರ ತೀರ್ಥಂಕರನಾದ ಮೇಲೆ ಧರ್ಮಬೋಧೆ ಮಾಡಿದ. ಶಿಷ್ಯ ಸಂಪತ್ತನ್ನು ಕಟ್ಟಿದ. ಮಹಾವೀರನ ಮುಖ್ಯ ತತ್ವಗಳು ಪಂಚವ್ರತಗಳು. ಗೃಹಸ್ಥರಿಗೆ ಸಣ್ಣ ಪ್ರಮಾಣದಲ್ಲಿವೆ. ಅದರಿಂದ ಸಂಸಾರಿಗಳಿಗೆ ಅಣುವ್ರತಗಳು. ಸನ್ಯಾಸಿಗೆ ದೊಡ್ಡ ಪ್ರಮಾಣದಲ್ಲಿವೆ, ಮಹಾವ್ರತಗಳು. ಮಹಾವೀರ ಹೇಳಿದ ಪಂಚವ್ರತಗಳು: ಅಹಿಂಸೆ, ಆಸ್ತೇಯ, ಅಸತ್ಯತ್ಯಾಗ, ಅಪರಿಗ್ರಹ, ಬ್ರಹ್ಮಚರ್ಯ. ಅಹಿಂಸೆಯೆಂದರೆ ಹಿಂಸೆ ಮಾಡದಿರುವುದು. ಯಾವ ಜೀವವರ್ಗಕ್ಕೂ ಹಿಂಸಿಸಕೂಡದು. ಮನಸ್ಸಿನಲ್ಲೂ ಹಿಂಸೆ ಚಿಂತಿಸಬಾರದು. ಪಶು ಪಕ್ಷಿಗಳನ್ನು ಪ್ರೀತಿಯಿಂದ ಕಾಣಬೇಕು. ನಾವು ಜೀವಿಸಬೇಕು, ಇತರರಿಗೂ ಜೀವಿಸಲು ಅವಕಾಶ ಕೊಡಬೇಕು. ಅಸತ್ಯತ್ಯಾಗವೆಂದರೆ ಸುಳ್ಳಾಡದಿರುವುದು. ಕೋಪ, ದ್ವೇಷ ಬಿಡುವುದು. ನಡೆನುಡಿಗಳಲ್ಲಿ ಹೊಂದಾಣಿಕೆ ಇರುವುದು. ಸತ್ಯವನ್ನೇ ಪಾಲಿಸುವುದು. ಆಸ್ತೇಯವೆಂದರೆ ಕದಿಯದಿರುವುದು. ಪರರ ಆಸ್ತಿಗೆ ಆಶಿಸಬಾರದು. ಇನ್ನೊಬ್ಬರ ಮನೆಯಲ್ಲಿರಲು ಅವರ ಅಪ್ಪಣೆ ಪಡೆಯಬೇಕು. ಅಪರಿಗ್ರಹವೆಂದರೆ ಎಷ್ಟು ಅಗತ್ಯವೋ ಅಷ್ಟನ್ನೇ ಇಟ್ಟುಕೊಳ್ಳುವುದು. ವಸ್ತ್ರ, ಆಸ್ತಿ, ಆಭರಣ, ಹಣ, ಎಲ್ಲ ಅಷ್ಟೆ. ಹೆಚ್ಚು ಇದ್ದರೆ, ಇಲ್ಲದವರಿಗೆ ದಾನ ಮಾಡಬೇಕು. ಆಹಾರವಿಲ್ಲದವರಿಗೆ ಕೊಡಬೇಕು. ಔಷಧಿ ಬೇಕಾದವರಿಗೆ ಕೊಡಿಸಬೇಕು. ಅಭಯ ಬೇಡಿದವರಿಗೆ ನೀಡಬೇಕು. ಶಾಸ್ತ್ರ ದಾನ ಮಾಡಬೇಕು. ಬ್ರಹ್ಮಚರ್ಯವೆಂದರೆ ಮದುವೆ- ಯಾಗದಿರುವುದು ಎಂದಷ್ಟೇ ಅಲ್ಲ. ವಿವಾಹಿತರೂ ಸುಖದಲ್ಲಿ ಮಿತಿ ಹೊಂದಿರಬೇಕು. ಗಂಡಹೆಂಡಿರು ಇತರರನ್ನು ತಂದೆತಾಯಿಯರಂತೆ ಕಾಣಬೇಕು.

ಮಹಾವೀರ ಸಮಾಜವನ್ನು ನಾಲ್ಕು ಗುಂಪುಗಳಲ್ಲಿ ಅಳವಡಿಸಿದ: ಸನ್ಯಾಸಿ, ಸನ್ಯಾಸಿನಿ, ಗೃಹಸ್ಥ, ಗೃಹಿಣಿ. ಇದನ್ನು ಚಾತುರ್ವರ್ಣ ಸಂಘ ಎನ್ನುತ್ತಾರೆ. ಮಹಾವೀರ ಮೋಕ್ಷ ಮಾರ್ಗವನ್ನು ಮಾನವರಿಗೆಲ್ಲಾ ತೋರಿಸಿಕೊಟ್ಟ. ಸಮ್ಯಗ್‌ದರ್ಶನ, ಸಮ್ಯಗ್‌ಜ್ಞಾನ, ಸಮ್ಯಗ್‌ಚಾರಿತ್ರ್ಯ ಮುಕ್ತಿಗೆ ಕೊಂಡೊಯ್ಯುತ್ತವೆಂದು ತಿಳಿಸಿದ. ಇವು ರತ್ನತ್ರಯಗಳು. ತೀರ್ಥಂಕರರು ಬೋಧಿಸಿದ ತತ್ವಗಳಲ್ಲಿ ಮನಸ್ಸಿಗೆ ಪ್ರೀತಿ ಹುಟ್ಟುವುದು ಸಮ್ಯಗ್‌ದರ್ಶನ, ಮತ್ತೆ ಆ ತತ್ವಾರ್ಥಗಳನ್ನು ಪ್ರೀತಿಪಟ್ಟು ತಿಳಿದುಕೊಳ್ಳುವುದು ಸಮ್ಯಗ್‌ಜ್ಞಾನ. ಆ ಬೋಧೆಯಂತೆ ಸತ್ವ ಕೆಡದ ಹಾಗೆ ನಡೆಯುವುದು ಸಮ್ಯಗ್‌ಚಾರಿತ್ರ್ಯ.

ಮಹಾವೀರನ ಜೀವನ ಏಕಮುಖಿಯಲ್ಲ. ಅದು ಸರ್ವತೋಮುಖವಾದುದು. ಆತ ಸಮಸ್ತ ಜೀವರನ್ನೂ ಪ್ರೀತಿಸಿದ. ಮಾನವಕೋಟಿಯೆಲ್ಲ ಸಮಾನವೆಂದು ತಿಳಿದ. “ಮನುಷ್ಯ ಜಾತಿಯೆಲ್ಲ ಒಂದೆ” ಎಂದು ಸಾರಿದ. ಜಾತಿ ಮತ ಪಂಥ ಕೋಮುಗಳೆಂಬುದನ್ನು ಖಂಡಿಸಿದ. ಹುಟ್ಟಿನಿಂದ ಯಾರೂ ವ್ಯತ್ಯಾಸ ಪಡೆಯರು. ಜನ್ಮದಿಂದ ಜಾತಿ ತಾರತಮ್ಯವಿಲ್ಲ. ತಾರತಮ್ಯ ನಿರ್ಧಾರ ಕರ್ಮದಿಂದ.

ಮಹಾವೀರ ಮೊದಲು ಆಚರಿಸಿದ. ಆಮೇಲೆ ಅದನ್ನು ಭೋಧಿಸಿದ. ಸದ್ದಾಲನೆಂಬ ಕುಂಬಾರನ ಮನೆಯಲ್ಲಿ ಅತಿಥಿಯಾಗಿ ನಿಂತ. ಅವನನ್ನು ಪರಿವರ್ತನೆ ಮಾಡಿದ. ಹರಿಕೇಶಿ ಎಂಬ ಚಂಡಾಲನಿಗೆ ಜೈನಭಿಕ್ಷು ಸಂಘದಲ್ಲಿ ಅಧಿಕಾರ ಕೊಟ್ಟ. ಎಲ್ಲ ಭಾಷೆಗಳೂ ಸಮಾನ ಎಂದು ತೋರಿಸಿಕೊಟ್ಟ. “ಸರ್ವಭಾಷಾಮಯಿ ಸರಸ್ವತಿ” ಎಂದು ಸಾರಿದ. ತನ್ನ ತತ್ವ ಪ್ರತಿಪಾದನೆಗೆ ಆತ ಜನತೆಯ ಭಾಷೆಯನ್ನೆ ಆರಿಸಿಕೊಂಡ. ಮಹಾವೀರನ ಉಪದೇಶ ಸರ್ವೋದಯ ತೀರ್ಥವಾಗಿತ್ತು.

ಪ್ರಭಾವ ಹರಡಿತು

ಮಹಾವೀರನ ಮೊದಲ ಮಹಾವಿಜಯ ಇಂದ್ರಭೂತಿಯೆಂಬ ಮಹಾ ವಿದ್ವಾಂಸನನ್ನು ಶಿಷ್ಯನನ್ನಾಗಿ ಪಡೆದದ್ದು. ಯಜ್ಞ ಯಾಗಾದಿಗಳ ಆಚರಣೆಯಲ್ಲಿ ಆತ ಆಸಕ್ತ. ಆತ ಪಾವಾಪುರದಲ್ಲಿ ವಿಶಾಲ ಯಜ್ಞ ಏರ್ಪಾಡು ಮಾಡಿದ್ದ. ಯಜ್ಞಗಳು ಬೇಡ ಎಂದು ಬೋಧಿಸಿದ ಮಹಾವೀರನ್ನು ಖಂಡಿಸುತ್ತಿದ್ದ. ಮಹಾವೀರನ ಶಿಷ್ಯನೊಬ್ಬ ಹೋಗಿ ಇಂದ್ರಭೂತಿಗೆ ಪ್ರಶ್ನೆಗಳನ್ನು ಹಾಕಿದ. ಅವು ಜೈನ ಧರ್ಮಪರವಾದ ಪ್ರಶ್ನೆಗಳು. ಅವನಿಗೆ ಉತ್ತರಿಸುವುದು ಕಷ್ಟವಾಯಿತು.  “ನಿನಗೆ ಯಾರು ಇವನ್ನು ಹೇಳಿಕೊಟ್ಟವರು? ಎಂದು ಕೇಳಿದ. “ಮಹಾವೀರ” ಎಂಬ ಉತ್ತರ ಬಂತು. “ಅವನು ಎಲ್ಲಿದ್ದಾನೆ?” “ಇಂದು ನಿಮ್ಮ ಊರಿಗೇ ಬಂದಿದ್ದಾನೆ”. “ಸರಿ ನಡೆ, ನಾನೇ ಅವನನ್ನು ಕಂಡು ವಾದ ಮಾಡುತ್ತೇನೆ”. ಇಂದ್ರಭೂತಿ ಹೊರಟ.

ಮಹಾವೀರನ ಧರ್ಮಬೋಧೆಯ ಮಂಟಪಕ್ಕೆ ಸಮವಸರಣ ಎಂದು ಹೆಸರು. ಮಹಾವೀರನ ಧರ್ಮಧ್ವನಿಗೆ ದಿವ್ಯಧ್ವನಿ ಎಂದು ಕರೆಯುತ್ತಾರೆ. ಆ ದಿವ್ಯಧ್ವನಿ ಸರ್ವಭಾಷಾಮಯಿ. ಕೇಳುವವರಿಗೆ ಅವರವರ ಭಾಷೆಯಲ್ಲಿ ಅರ್ಥವಾಗುತ್ತಿತ್ತು. ಸಮವಸರಣ ಮಂಟಪದ ಮುಂದೆ ಮಾನಸ್ತಂಭವಿತ್ತು. ಇಂದ್ರಭೂತಿ ಮಾನಸ್ತಂಭ ನೋಡಿದ. ಒಡನೆ ಅವನ ಗರ್ವ, ಅಭಿಮಾನ ಎಲ್ಲ ಭಂಗವಾಯಿತು. ಸಂದಹೇಗಳು ಪರಿಹಾರವಾದುವು. ಮಹಾವೀರನ ದರ್ಶನ ಮಾಡಿದ. ಬಹುಕಾಲ ಚರ್ಚೆ ನಡೆಯಿತು. ಮಹಾವೀರನ ಘನತೆ ಒಪ್ಪಿಗೆಯಾಯಿತು. ಇಂದ್ರಭೂತಿ ಯಜ್ಞವಾದ ಬಿಟ್ಟುಕೊಟ್ಟ. ಜೈನದೀಕ್ಷೆ ಸ್ವೀಕರಿಸಿದ. “ಜೈನದೀಕ್ಷಿತ” ಆದ, ಇಂದ್ರಭೂತಿ ತನ್ನ ೪, ೪೦೦ ಜನ ಶಿಷ್ಯ ಸಮುದಾಯದೊಡನೆ ಮತ ಪರಿವರ್ತನೆ ಮಾಡಿಕೊಂಡ. ಮುಂದೆ ಮಹಾವೀರನ ಸಂಪೂರ್ಣ ಶಿಷ್ಯಶ್ರೇಷ್ಠನಾದ ತೀರ್ಥಂಕರನ ಪ್ರತಿಪಾದನೆಗಳನ್ನು ಸಮರ್ಥವಾಗಿ ವಿವರಿಸಬಲ್ಲಾತನಾದ.

ಅಲ್ಲಿಂದ ಮುಂದೆ ಮಹಾವೀರನ ಅಹಿಂಸೆಯ ವಿಜಯಧ್ವಜ ಭಾರತದ ಉದ್ದಗಲಕ್ಕೂ ಅವಿಚ್ಛಿನ್ನವಾಗಿ ಪಟಪಟಿಸಿತು. ಬುದ್ಧದೇವ ಕೂಡ ಮಹಾವೀರನ ಸಮಕಾಲೀನ ಹಿರಿಯ ವಿಭೂತಿಚೇತನ. ಅಖಂಡ ಭರತವರ್ಷಕ್ಕೆ ಮಹಾವೀರ ಅಹಿಂಸೆಯ ವಜ್ರಕವಚ ತೊಡಿಸಿದ. ಸ್ತ್ರೀ ವರ್ಗಕ್ಕೆ ಗೌರವದೊಡನೆ ಸಮಾನತೆ ಕೊಟ್ಟ. ಸ್ತ್ರೀಗೆ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಸಮಾನ ಅಧಿಕಾರವುಂಟೆಂದು ಸಾರಿದ. ಅದರಂತೆ ಭಿಕ್ಷುಣಿಯರ ಸಂಘ ಏರ್ಪಾಟಾಯಿತು. ಅದಕ್ಕೆ ಚಂದನಬಾಲೆ ಆಧಿನೇತ್ರೆ, ಆಕೆ ೩೬ ಸಾವಿರ ಆರ್ಯಿಕೆಯರ (ಜೈನ ಸನ್ಯಾಸಿನಿಯರ) ಸಂಘಕ್ಕೆ ದಕ್ಷ ಮೇಲ್ವಿಚಾರಣೆ ಮಾಡುತ್ತಿದ್ದಳು. ಮಹಾವೀರನ ಸಂಘ ದೊಡ್ಡದು. ಭಿಕ್ಷುಕರು ೧೪ ಸಾವಿರ ಇದ್ದರು. ಶ್ರಾವಕರು ಒಂದು ಲಕ್ಷ ಐವತ್ತು ಸಾವಿರ ಇದ್ದರು. ಶ್ರಾವಿಕೆಯರು ಮೂರು ಲಕ್ಷಕ್ಕೂ ಹೆಚ್ಚು.

ಹಿಮಾಚಲವೇ ಆದ

ಮಹಾವೀರ ಒಟ್ಟು ೩೨ ವರ್ಷ ಧರ್ಮವಿಹಾರ ಮಾಡಿದ. ಆತ ತನ್ನ ೭೨ನೆಯ ವಯಸ್ಸಿನಲ್ಲಿ ನಿರ್ವಾಣ ಹೊಂದಿದ. ಮುಕ್ತಿಗೆ ಸಂದುದು ಪಾವಾಪುರಿಯಲ್ಲಿ. ಅದು ಕ್ರಿ.ಪೂ. ೫೭೨ನೆಯ ಇಸವಿ ಕಾರ್ತೀಕ ಬಹುಳ ಅಮಾವಾಸ್ಯೆ ಸೋಮವಾರ ಬೆಳಗ್ಗೆ. ಆಗ ಅವನಿಗೆ ೭೧ ವರ್ಷ ೩ ತಿಂಗಳು ೨೫ ದಿವಸ ತುಂಬಿತ್ತು. ಆ ದಿನವೇ ದೀಪಾವಳಿ ಹಬ್ಬ. ಜೈನರು ದೀಪಾವಳಿಯನ್ನು ಮಹಾವೀರ ಮುಕ್ತನಾದ ದಿನವೆಂದು ವಿಜೃಂಭಣೆಯಿಂದ ಆಚರಿಸುತ್ತಾರೆ.

ಅಲ್ಲಿಗೆ ಒಂದು ಮಹಾಧರ್ಮವನ್ನು ಬೆಳಗಿದ ಚಾರಿತ್ರಿಕ ಮಹಾಪುರುಷನ ಬದುಕು ಮುಗಿಯಿತು, ನಿಜ. ಆದರೆ ಆತನ ಆದರ್ಶ, ಸದಾಚಾರ ಸಂಹಿತೆ ಚಿರಂತನವಾಗಿ ಮುಂದುವರೆಯಿತು. ಧಾರ್ಮಿಕ ಪುರುಷರು ಅಮರರು. ರಾಜ ಮಹಾರಾಜರನ್ನು ಮರೆಯಬಹುದು. ರಾಜ ತನ್ನ ರಾಜ್ಯದ ಹಿತವನ್ನು ಮಾತ್ರ ನೋಡುತ್ತಾನೆ. ಧಾರ್ಮಿಕ ಮಹಾಚೇತನ ಇಡೀ ಮಾನವ ಕುಟುಂಬದ ಕಲ್ಯಾಣಕ್ಕೆ ದಾರಿ ತೋರುತ್ತದೆ. ಮಹಾವೀರ ಮಾನವಕೋಟಿಯ ಒಳಿತನ್ನು ಬಯಸಿದ. ಲೇಸಿಗಾಗಿ ಗಂಧದಂತೆ ತನ್ನನ್ನೇ ತೇದ.

ಮಹಾವೀರನ ಆದರ್ಶ ಬದುಕು ತೆರೆದ ಪುಸ್ತಕ. ಯಾರು ಬೇಕಾದರೂ ತನ್ನ ದಾರಿಯಲ್ಲಿ ನಡೆದು ತಾನು ಮುಟ್ಟಿದ ಗುರಿ ಮುಟ್ಟಬಹುದೆಂದ, ತಾನು ಏರಿದ ಎತ್ತರಕ್ಕೆ ಏರಬಹುದೆಂದ. ಮೆಟ್ಟಿಲು ಕಟ್ಟಿಕೊಟ್ಟ. ಏಣಿ ಹಾಕಿಕೊಟ್ಟ. ಮುಕ್ತಿಯ ಮಂದಿರದ ಬಾಗಿಲು ಎಲ್ಲ ಮುಕ್ತಜೀವರಿಗೂ ಮುಕ್ತದ್ವಾರವಾಗಿ ತೆರೆದಿಟ್ಟ. ಪ್ರಲೋಭಗಳಿಗೆ ಬಲಿಯಾಗಲಿಲ್ಲ. ಆಪತ್ತುಗಳಿಗೆ ಅಂಜಲಿಲ್ಲ. ಜಗ್ಗದೆ ಕುಗ್ಗದೆ ಹಿಮಾಚಲವಾಗಿ ನಿಂತ. ಕಡೆಗೆ ಹಿಮಾಚಲವೇ ಆದ.