ವ|| ಅದೆಂತೆಂದೊಡೆ

ತ್ರಿದಿವದೊಳಚ್ಚರಸಿಯರಿ
ರ್ಪುದು ವಿದಿತಂ ನಿಮಗಮಂತವರ ವಂಶಂಗಳ್
ಪದಿನಾಲ್ಕನೆ ಪೆಸಱಂ ನೆಗ
ೞ್ದ್ದುದಯಿಸಿದುವು ಬೇಬೇ ನೃಪಕುಲತಿಲಕಾ    ೧

ವ|| ಅದೆಂತೆನೆ

ಧರೆಯಿಂ ಕಡಲಿಂ ಶಶಿಯಿಂ ದೆಲರಿಂ
ಹರಿಯಿಂದಮರ್ದಿಂದೆ ಮೃತ್ಯುವಿಂದಬ್ಜಜನಿಂ
ಸ್ಮರನಿಂ ಜಲದಿಂ ವೇದೋ
ತ್ಕರದಿಂ ವಿದ್ಯುನ್ನಿಕಾಯದಿಂ ಹುತವಹನಿಂ     ೨

ವ|| ಅದಲ್ಲದೆಯುಂ ದಕ್ಷಪ್ರಜಾಪತಿಗೆ ಪುಟ್ಟಿದ ಮುನಿಯುಮರಿಷ್ಟೆಯುಮೆಂಬೀರ್ವರ್ ಕನ್ನೆಯರಿಂ ಗಂಧರ್ವಕುಲಮುದಯಿಸಿದುದಲ್ಲಿ ಚಿತ್ರಸೇನಾದಿಗಳಪ್ಪ ಪದಿನೈವರಿಂ ಪಿರಿಯನೆನಿಸಿ

ಚಿತ್ರರಥನೆಂಬನೊರ್ವಂ
ಪುತ್ರಂ ಗಂಧರ್ವರಾಜನಮರೇಂದ್ರಂಗಂ
ಮಿತ್ರನೆನೆ ಪೆಂಪುವಡೆದು ಜ
ಗತ್ರಯವಿಖ್ಯಾತಕೀರ್ತಿ ಮುನಿಗುದಯಿಸಿದಂ   ೩

ವ|| ಅಂತಾ ಚಿತ್ರರಥನಿಂ ಚೈತ್ರರಥಮೆಂಬ ಬನಮಚ್ಛೋದವೆಂಬ ಸರೋವರಮುಮಾದುದಲ್ಲದೆಯುಂ ತುಂಬುರಪ್ರಭೃತಿಗಳಪ್ಪಱುವರಿಂ ಪಿರಿಯನೆನಿಸಿ

ಪುರುಷಾರ್ಥನಿ ಪುರಂದರ
ಪರಮಪ್ರಿಯಮಿತ್ರನೊರ್ವನುದಯಿಸಿದಂ ಸುಂ
ದರರೂಪನರಿಷ್ಟೆಗೆ ಚಿ
ತ್ರರಥಾನನ ಪುಂಡರೀಕಹಂಸಂ ಹಂಸಂ         ೪

ವ|| ಅದಲ್ಲದೆಯುಮಲ್ಲಿಗನತಿದೂರದೊಳ್ ಹೇಮಕೂಟಮೆಂಬ ನಗೇಂದ್ರಂ ಕಿಂಪುರುಷಾವಾಸಸ್ಥಾನಮಾಗಿರ್ಪುದಲ್ಲಿ

ವ|| ಅದು ಹೇಗೆಂದರೆ. ೧. ಎಲೈ ರಾಜವಂಶಕ್ಕೆ ತಿಲಕಪ್ರಾಯನಾದ ರಾಜಕುಮಾರನೆ, ಸ್ವರ್ಗಲೋಕದಲ್ಲಿ ಅಪ್ಸರಸರೆಂಬ ಹೆಂಗಸರಿರುವುದು ನಿಮಗೂ ತಿಳಿದ ವಿಷಯವೇ ಆಗಿದೆ. ಅವರಲ್ಲಿ ಹದಿನಾಲ್ಕು ಬುಡಕಟ್ಟುಗಳಿವೆ. ಅವು ಬೇರೆ ಬೇರೆ ಮೂಲಗಳಿಂದ ಹುಟ್ಟಿ ಆಯಾಯಾ ಹೆಸರಿನಿಂದ ಪ್ರಸಿದ್ಧವಾಗಿವೆ. ವ|| ಅದು ಹೇಗೆಂದರೆ ೨. ಭೂಮಿಯಿಂದ, ಸಮುದ್ರದಿಂದ ಚಂದ್ರನಿಂದ್ವ, ವಾಯುವಿನಿಂದ, ಸೂರ್ಯನಿಂದ, ಅಮೃತದಿಂದ, ಮೃತ್ಯುವಿನಿಂದ, ಬ್ರಹ್ಮನಿಂದ, ಮನ್ಮಥನಿಂದ, ನೀರಿನಿಂದ, ವೇದಗಳಿಂದ, ಮಿಂಚಿನಿಂದ, ಅಗ್ನಿಯಿಂದ, ವ|| ಅದಲ್ಲದೆ ದಕ್ಷ ಬ್ರಹ್ಮನಿಂದ ಹುಟ್ಟಿದ ಮುನಿ, ಅರಿಷ್ಟೆ ಎಂಬ ಇಬ್ಬರು ಹೆಣ್ಣುಮಕ್ಕಳಿಂದ ಗಂಧರ್ವರ ವಂಶವು ಉದಯಿಸಿತು. ಅಲ್ಲಿ ಚಿತ್ರಸೇನನೇ ಮೊದಲಾದ ಹದಿನೈದು ಜನರಿಗೆ ಹಿರಿಯವನೆನಿಸಿಕೊಂಡ, ೩. ಚಿತ್ರರಥನೆಂಬವನು ಮುನಿಯೆಂಬವಳಲ್ಲಿ ಮಗನಾಗಿ ಹುಟ್ಟಿದನು. ಅವನು ಗಂಧರ್ವರಿಗೆ ರಾಜನಾದನು. ಅಲ್ಲದೆ ದೇವೇಂದ್ರನಿಗೂ ಗೆಳೆಯನೆನಿಸಿದ ಹಿರಿಮೆಯನ್ನು ಪಡೆದಿದ್ದನು. ಅವನ ಕೀರ್ತಿಯು ಮೂರುಲೋಕಗಳಲ್ಲೂ ಹರಡಿತ್ತು. ವ|| ಆ ಚಿತ್ರರಥನಿಂದ ಚೈತ್ರರಥವೆಂಬ ಉದ್ಯಾನವನವೂ ಅಚ್ಛೋದವೆಂಬ ದೊಡ್ಡಸರೋವರವೂ ನಿರ್ಮಿಸಲ್ಪಟ್ಟಿತು. ಅದಲ್ಲದೆ ತುಂಬುರು ಮೊದಲಾದ ಆರು ಜನರಿಗಿಂತಲೂ ದೊಡ್ಡವನಾಗಿ,

೪. ಅರಿಷ್ಟೆಯೆಂಬುವಳಿಗೆ ಪುರುಷಾರ್ಥಗಳಿಗೆ ಆಶ್ರಯಸ್ಥಾನನಾದ, ದೇವೇಂದ್ರನಿಗೆ ಆಪ್ತಮಿತ್ರನೆನಿಸಿರುವ ಮತ್ತು ಚಿತ್ರರಥನ ಮುಖವೆಂಬ ಬಿಳಿದಾವರೆಗೆ ಸೂರ್ಯನಂತಿರುವ ಹಂಸನೆಂಬ ಮಗನೊಬ್ಬನು ಹುಟ್ಟಿದನು. (ಟಿ|| ಧರ್ಮ, ಅರ್ಥ, ಕಾಮ, ಮೋಕ್ಷಗಳು ಪುರುಷಾರ್ಥ). ವ|| ಅದಲ್ಲದೆ ಅಲ್ಲಿಗೆ ಸ್ವಲ್ಪ ದೂರದಲ್ಲಿ ಕಿಂಪುರುಷರಿಗೆ ವಾಸಸ್ಥನವಾದ ಹೇಮಕೂಟವೆಂಬ ಪರ್ವತವಿದೆ. ಅಲ್ಲಿ

ಆತ್ತಯಶರ್ ಗಂಧರ್ವಕು
ಲೋತ್ತಮರಾ ತಮ್ಮುತಿರ್ವರುಂ ನಿಖಿಲಗುಣೋ
ದಾತ್ತರೆನಲ್ ರಾಜ್ಯಂಗೆ
ಯ್ಯುತ್ತಂ ಸುಖಸಂಕಥಾವಿನೋದದಿನಿರ್ಪರ್              ೫

ವ|| ಮತ್ತಮಾ ಸೋಮಮಯೂಖಸಂಭವೆಯರಪ್ಪಚ್ಚರಸಿಯರೊಳಗೆ

ಅಮೃತಕರ ಭಾಸುರೋದ್ಯ
ತ್ಕಮನೀಯಕಲಾಕಲಾಪಲಾವಣ್ಯಝರೀ
ಸಮುದಿತೆಯೆನಲ್ಕೆ ಪುಟ್ಟಿದ
ಳಮೃತಾಂಶುನಿಭಾಸ್ಯೆ ಗೌರಿಯೆಂಬಳ್ ಪೆಸರಿಂ         ೬

ಇಂಗಡಲಿಂಗಮರನದೀ
ಸಂಗಂ ಸಂಘಟಿಪ ತೆಱದೆ ಗಂಧರ್ವಕುಲೋ
ತ್ತುಂಗನೆನಲ್ ನೆಗೞi ಹಂ
ಸಂಗಾದುದು ಗೌರಿಯೊಳ್ ವಿವಾಹೋತ್ಸಾಹಂ          ೭

ಸಮವಂಶದೆ ಸಮರೂಪದೆ
ಸಮವಿಭವದೆ ಸಮವಯೋವಿಲಾಸದೆ ಸಮಸ
ತ್ವಮನದೆ ಸಮಾನುರಾಗದೆ
ಸಮಸಂದತ್ತವರ್ಗೆ ಸಮವಯೋಯೋಗಸುಖಂ        ೮

ನಿನಗೇಂ ಪೇೞ್ದಪೆನಾಂ ಮಹಾತ್ಮರೆನಿಸಿರ್ದಾ ತಂದೆಗಂ ತಾಯ್ಗಮೋ
ರ್ವನೆ ನಿರ್ಭಾಗ್ಯನಿವಾಸೆಯೆಂ ನಿಖಿಲಪಾಪಾಕಾರೆಯೆಂ ದುಖಭಾ
ಜನೆಯೆಂ ಪುಟ್ಟಿದೆನೆನ್ನನೀಕ್ಷಿಸಲೊಡಂ ತಾತಂ ಮಹಾಶ್ವೇತೆಯೆಂ
ದನುರಾಗಂಬೆರಸಿಟ್ಟನೆನ್ನ ಪೆಸರಂ ಗಂಧರ್ವಚಕ್ರೇಶ್ವರಂ           ೯

ವ|| ಅಂತು ನಿಜಜನನೀಜನಕರ್ ಪಲಕಾಲಮನಪತ್ಯರಪ್ಪುದಱಂ ಪುತ್ರನಿಂದಗ್ಗಳಮಪ್ಪ ಪರಮಪ್ರೀತಿಯಿಂ ನಡಪುತ್ತಮಿರೆ ಕೆಲವು ದಿವಸದೊಳವಿದಿತ ಸ್ನೇಹಶೋಕಾಯಾಸಮಪ್ಪ ಶೈಶವಂ ಪತ್ತುವಿಡುವುದುಂ

ಎಸೆದ ವಸಂತಮಾಸದೆ ವಸಂತನುಮಾಂತ ಕುಜಾತಪಲ್ಲವ
ಪ್ರಸರದಿನಾ ವಸಂತಸಮಯಂ ಕುಸುಮಾವಳಿಯಿಂದೆ ಪಲ್ಲವಂ
ಮಿಸುಪಳಿಮಾಲೆಯಿಂ ಕುಸುಮಮಂಜರಿ ರಂಜಿಸುವಂತಿರಲ್ವಿಜೃಂ
ಭಿಸಿದುದು ಯವ್ವನೋದಯವಿಲಾಸಾನುಕ್ರಮದಿಂ ಮದಂಗದೊಳ್         ೧೦

೫. ಕೀರ್ತಿವಂತರಾದ, ಗಂಧರ್ವರ ವಂಶದಲ್ಲಿ ಶ್ರೇಷ್ಠರಾಗಿರುವ, ಸರ್ವಗುಣ ಸಂಪ್ಭನ್ನರಾದ ಆ ಚಿತ್ರರಥ, ಹಂಸ ಎಂಬುವರು ರಾಜ್ಯಭಾರ ಮಾಡುತ್ತಾ ಇಬ್ಬರೂ ಪರಸ್ಪರ ಸುಖಸಲ್ಲಾಪಗೈಯುತ್ತ ಸಂತೋಷವಾಗಿದ್ದರು. ವ|| ಚಂದ್ರಕಿರಣಗಳಿಂದ ಹುಟ್ಟಿದ ಅಪ್ಸರಸ್ತ್ರೀಯರಲ್ಲಿ ೬. ಚಂದ್ರನಂತೆ ಮುಖವುಳ್ಳ ಗೌರಿಯೆಂಬುವಳು ಹುಟ್ಟಿದಳು. ಅವಳು ಚಂದ್ರನ ಪ್ರಕಾಶಮಾನವಾದ ಮತ್ತು ಮಹಾಸುಂದರವಾದ ಕಳೆಗಳ ಸೌಂದರ್ಯದ ಪ್ರವಾಹದಿಂದ ಹುಟ್ಟಿರುವಳೋ ಎಂಬಂತೆ ಶೋಭಿಸುತ್ತಿದ್ದಳು. ೭. ಕ್ಷೀರಸಮುದ್ರಕ್ಕೆ ದೇವಗಂಗಾನದಿಯ ಸಹವಾಸವು ಉಂಟಾದಂತೆ ಗಂಧರ್ವಕುಲಶ್ರೇಷ್ಠನೆಂದು ಪ್ರಸಿದ್ಧಿಪಡೆದಿರುವ ಹಂಸನಿಗೆ ಗೌರಿಯೊಂದಿಗೆ ವಿವಾಹಮಹೋತ್ಸವವು ಜರುಗಿತು. ೮. ಸರಿಸಮಾನವಾದ ಕುಲದಿಂದಲೂ, ರೂಪದಿಂದಲೂ, ಸಂಪತ್ತಿನಿಂದಲೂ, ವಯಸ್ಸಿನ ಬೆಡಗಿನಿಂದಲೂ, ಏಕಭಾವವನ್ನು ಹೊಂದಿರುವ ಮನಸ್ಸಿನಿಂದಲೂ, ಸಮಾನವಾದ ಪ್ರೀತಿಯಿಂದ ಶೋಭಿಸುವ ತರುಣ ದಂಪತಿಗಳು ನವತಾರುಣ್ಯದಲ್ಲಿ ಒದಗಿಬಂದ ದಾಂಪತ್ಯಸುಖವನ್ನು ಅನುಭವಿಸುತ್ತಿದ್ದರು. ೯. ರಾಜಕುಮಾರ, ನಾನು ಏನು ಹೇಳಲಿ? ಆ ಮಹಾತ್ಮರಾದ ತಾಯಿತಂದೆಗಳಿಗೆ ದುರದೃಷ್ಟವಂತಳಾದ, ಶರೀರವನ್ನು ತಾಳಿದ ಪಾಪಸಮೂಹದಂತಿರುವ, ದುಖಪಾತ್ರಳಾದ ನಾನು ಮಗಳಾಗಿ ಹುಟ್ಟಿದೆನು. ಗಂಧರ್ವರಾಜನಾದ ನನ್ನ ತಂದೆಯು ನನ್ನನ್ನು ನೋಡಿ ಬಹಳ ಪ್ರೀತಿಯಿಂದ ಮಹಾಶ್ವೇತೆಯೆಂದು ಹೆಸರಿಟ್ಟನು. ವ|| ನನ್ನ ತಾಯಿತಂದೆಗಳಿಗೆ ಬಹಳ ಕಾಲ ಮಕ್ಕಳಿರಲ್ಲಿಲ್ಲ. ಆದ್ದರಿಂದ ಮಗನಿಗಿಂತಲೂ ಮಿಗಿಲಾಗಿ ಪರಮಪ್ರೀತಿಯಿಂದ ನನ್ನನ್ನು ಸಲಹುತ್ತಿದ್ದರು. ಕೆಲವು ದಿವಸಗಳಲ್ಲಿ ಪ್ರೀತಿ, ದುಖ, ಶ್ರಮ, ಇವೊಂದರ, ಅರಿವೂ ಇಲ್ಲದ ಬಾಲ್ಯವು ಕಳೆಯಲಾಗಿ ೧೦. ವಸಂತಋತವು ಕಳಕಳಿಸುವ

ವ|| ತದನಂತರಂ

ಸ್ಮರರಾಗಾಂಧತ್ವದಿಂದಂ ಪಗಲೊಳಮಸತೀಕೇಳಿ ವೊಣ್ಮಲ್ ವಿಯೋಗಾ
ತುರ ಜೀವಾಹಾರದಿಂದಂ ರತಿಪತಿ ತಣಿಯಲ್ ಪುಷ್ಪಚಾಪಾಸ್ತ್ರ ಟಂಕಾ
ರರವೋದ್ಭಿನ್ನ ಪ್ರಪಾಂಥಪ್ರಕರಹೃದಯರಕ್ತಾಂಬುಗಳ್ ಕೂಡೆ ಮಾರ್ಗಾಂ
ತರದೊಳ್ ಸೂಸುತ್ತಿರಲ್ ಬಂದುದು ಶಿಶಿರನೃಪೋದ್ಯತೃತಾಂತಂ ವಸಂತಂ       ೧೧

ವ|| ಅಂತು ಬಂದ ವಸಂತದೋಳುಳ್ಳಲರ್ದ ನವನಳಿನ ಕುಮುದ ಕುವಲಯ ಕಲ್ಹಾರಂಗಳಿಂ ಕಂಗೊಳಿಪಚ್ಛೋದಸರಸಿಗೆ ಜನನಿವೆರಸು ಮಜ್ಜನಕ್ಕೆಂದು ನಡೆತಂದು ನೋೞ್ಪಲ್ಲಿ ಶಿಖರಿ ರಾಜನಂದಿನಿ ಪೂಜಿಸಲೆಂದು ತಟಶಿಲಾತಲದೊಳ್ ಬರೆದ ಮೃಡನ ಪಡಿವರಿಜಂ ಕಂಡು ಕುಂಬಿಟ್ಟಾ ಸರಸ್ತೀರದೇಶದಲ್ಲಿ

ಇದು ಮದಭೃಂಗಕೀರ್ಣಕುಸುಮೋತ್ಕರರಮ್ಯಲತಾವಿತಾನಮಿಂ
ತಿದು ಪಿಕತುಂಡಖಂಡಿತಗಳದ್ರಸಕೋಶ ರಸಾಲಸಾಲಮಿಂ
ತಿದು ಶಿಖನಾದ ಭೀತಫಣಿವರ್ಜಿತ ಚಂದನಭೂಜರಾಜಿಯೆಂ
ದೊದವಿದ ರಾಗದಿಂದವನಭೀಕ್ಷಿಸುತ್ತಾಂ ಚರಿಸುತ್ತಮಿರ್ಪಿನಂ    ೧೨

ಇಳಿಕೈದುೞದಲರ್ಗಳ ಪರಿ
ಮಳಮಂ ಘ್ರಾಣೈಕತರ್ಪಣಂ ಮಿಳದಳಿಸಂ
ಕುಳಮೇನೆಸಗಿತ್ತೊ ವನಾ
ನಿಳನೀತಂ ಕುಸುಮಗಂಧಮೋರೊಂದೆಡೆಯಿಂ         ೧೩

ವ|| ಅಂತು ಬಂದ ಮಾನುಷಕುಲೋಚಿತಮುಮನಾಘ್ರಾತಪೂರ್ವಮುಮೆನಿಪ ಕುಸುಮಗಂಧಮನಾಘ್ರಾಣಿಸುತಮಿ ದೆತ್ತಣದೆಂದು ಕೌತುಕಂಮಿಗಲದಱ ಬೞವಿಡಿದು

ಅರಸಂಚೆಗಳೊಡವರೆ ನೇ
ವುರದಿಂಚರಕೊಲ್ದು ಪೋಗಲಾಂ ಕಿಱದೆಡೆಯಂ
ಸರಸಿಗೆ ಮೀಯಲ್ಕೆಂದೈ
ತರುತಿರ್ದಂ ಮುಂದೆ ಮುನಿಕುಮಾರಕನೋರ್ವಂ      ೧೪

ಚೈತ್ರಮಾಸದಿಂದ ಶೋಭಿಸುವಂತೆಯೂ, ಚೈತ್ರಮಾಸವು ಮರದ ಚಿಗುರುಗಳಿಂದ ಶೋಭಿಸುವಂತೆಯೂ, ಚಿಗುರು ಹೂಗಳಿಂದ ಶೋಭಿಸುವಂತೆಯೂ, ಹೂವಿನ ಗೊಂಚಲು ಪ್ರಕಾಶಿಸುವ ದುಂಬಿಸಾಲುಗಳಿಂದ ಶೋಭಿಸುವಂತೆಯೂ ನನ್ನ ಶರೀರದಲ್ಲಿ ಹರೆಯದ ಬೆಡಗು ಕ್ರಮಕ್ರಮವಾಗಿ ಹೆಚ್ಚಿ ಶೋಭಿಸತೊಡಗಿತು. ವ|| ಆಮೇಲೆ ೧೧. ಕಾಮಪರವಶತೆಯಿಂದ ಉಂಟಾದ ಅವಿವೇಕದಿಂದ ಹಗಲಿನಲ್ಲೂ ವ್ಯಭಿಚಾರಿಣಿಯರ ಚೆಲ್ಲಾಟವು ಹೆಚ್ಚುತ್ತಿರಲು, ವಿರಹಪೀಡಿತರಾದ ಜನರನ್ನು ಕಬಳಿಸಿ (ಕೊಂದು) ಮನ್ಮಥನು ತೃಪ್ತಿಹೊಂದುತ್ತಿರಲು, ಕಾಮಬಾಣಗಳ ಟಂಕಾರದಿಂದ ಸೀಳಿಹೋದ ಪ್ರಯಾಣಿಕರ ಎದೆಯ ರಕ್ತವು ದಾರಿಯಲ್ಲೆಲ್ಲಾ ಚೆಲ್ಲಾಡುತ್ತಿರಲು ಶಿಶಿರಋತುವೆಂಬ ರಾಜನಿಗೆ ಮೃತ್ಯುವಿನಂತಿರುವ ಮಸಂತ ಋತುವು ಬಂದಿತು. ವ|| ಹಾಗೆ ಬಂದ ವಸಂತಋತುವಿನಲ್ಲಿ ಚೆನ್ನಾಗಿ ಅರಳಿರುವ ಹೊಸದಾದ ನಳಿನ, ಕುಮುದ, ಕುವಲಯ, ಕಲ್ಹಾರವೆಂಬ ನೀರುಹೂವುಗಳಿಂದ ಶೋಭಿಸುವ ಅಚ್ಛೋದಸರೋವರಕ್ಕೆ ತಾಯಿಯ ಜೊತೆಯಲ್ಲಿ ಸ್ನಾನ ಮಾಡಲು ಬಂದು ನೋಡುತ್ತಿರಲಾಗಿ, ಪಾರ್ವತಿದೇವಿಯು ಪೂಜೆಗಾಗಿ ದಡದಲ್ಲಿರುವ ಹಾಸರೆಯ ಮೇಲೆ ಬರೆದಿರುವ ಪರಮೇಶ್ವರನ ಪ್ರತಿಕೃತಿಯನ್ನು ನೋಡಿ ನಮಸ್ಕರಿಸಿ ಆ ಸರೋವರದ ತೀರಪ್ರದೇಶದಲ್ಲಿ. (ಟಿ) ಕುಮುದ = ಬಿಳಿಕಮಲ. ಕುವಲಯ = ನೀಲಕಮಲ, ಕಲ್ಹಾರ= ಕೆಂಪುಕಮಲ) ೧೨. ಇದು ಮದವೇರಿದ ದುಂಬಿಗಳಿಂದ ವ್ಯಾಪ್ತವಾದ ಹೂವುಗಳಿಂದ ಸುಂದರವಾದ ಬಳ್ಳಿಗಳ ಪೊದರು. ಇಂದು ಕೋಕಿಲೆಗಳ ಕೊಕ್ಕುಗಳಿಂದ ಸೀಳಲ್ಪಟು ರಸವು ಸೋರುತ್ತಿರುವ ಮೊಗ್ಗುಗಳಿಂದ ಕೂಡಿರುವ ಸಿಹಿಮಾವಿನ ಮರದ ಗುಂಪು. ಇದು ನವಿಲುಗಳ ಧ್ವನಿಯನ್ನು ಕೇಳಿ ಹೆದರಿರುವ ಹಾವುಗಳಿಂದ ಬಿಡಲ್ಪಟ್ಟಿರುವ ಗಂಧದ ಮರದ ಹಿಂಡಿಲು ಎಂದು ಬಹಳ ಆಸಕ್ತಿಯಿಂದ ಅವುಗಳನ್ನೆಲ್ಲಾ ನೋಡುತ್ತಾ ಸಂಚರಿಸುತ್ತಿರಲಾಗಿ, ೧೩. ಅಲ್ಲಿ ಒಂದು ಕಡೆಯಿಂದ ಮೂಗಿಗೆ ಪರಮಾನಂದವನ್ನುಂಟು ಮಾಡುವ, ದುಂಬಿಗಳ ಗುಂಪಿನಿಂದ ಕೂಡಿಕೊಂಡಿರುವ ಕಾಡಿನ ಗಾಳಿಯಿಂದ ತರಲ್ಪಟ್ಟ ಹೂವಿನ ದಿವ್ಯ ಪರಿಮಳವು ಬೇರೆ ಹೂವುಗಳ ವಾಸನೆಯನ್ನೆಲ್ಲಾ ಮುಚ್ಚಿ ಹರಡುತ್ತಾ ಬರುತ್ತಿತ್ತು. ವ|| ಹಾಗೆ ಬರುತ್ತಿರುವ ದೇವಲೋಕೋಚಿತವಾದ, ಹಿಂದೆಂದೂ ವಾಸನೆ ನೋಡದಿರುವ ಆ ಹೂವಿನ ಕಂಪನ್ನು ಆಘ್ರಾಣಿಸುತ್ತ ಇದು ಎಲ್ಲಿಂದ ಬಂತು? ಎಂದು ಆಶ್ಚರ್ಯವು ಹೆಚ್ಚುತ್ತಿರಲು ಅದರ ದಾರಿಯನ್ನೇ ಹಿಡಿದು, ೧೪. ಕಾಲ್ಗಡಗದ ಇಂಪಾದ ಧ್ವನಿಗೆ ರಾಜಹಂಸಗಳು ಜೊತೆಯಲ್ಲಿ ಬರುತ್ತಿರಲು, ನಾನು ಮುಂದೆ

ಗಿರಿಶನಯನಾನಲಾರ್ಚಿಯಿ
ನುರಿದಂ ಸ್ಮರನೆಂದು ದಂದುಗಂ ಮಿಗೆ ತಪಮಂ
ಚರಿಯಿಪ್ಪ ವಸಂತನವೊಲ್
ಕರಮೆಸೆದಂ ರಮ್ಯಗಾತ್ರನಾ ಮುನಿಪುತ್ರಂ     ೧೫

ವ|| ಮತ್ತಂ

ಪರಿಪೂರ್ಣಬಿಂಬದೊಂದೈ
ಸಿರಿಯಂ ಪಡೆಯಲ್ಕೆ ಬಯಸಿ ಪಿರಿದುಂ ವ್ರತಮಂ
ಧರಿಸಿದ ಗಿರಿಶಶಿರಶ್ಯೇ
ಖರೇಂದುವೆನೆ ಮೆದನಾ ಮುನೀಂದ್ರಕುಮಾರಂ         ೧೬

ವ|| ಅಂತುಮಲ್ಲದೆಯುಂ

ಜ್ವಲದನಲಶಿಖಾಂತರದೊಳ್
ಪೊಳೆವ ತಟಿಲ್ಲತೆಯೊಳುಷ್ಣಕರಮಂಡಳದೊಳ್
ಪೊಳೆದಪನೆನೆ ದೇಹದ್ಯುತಿ
ಬಳಸಿರೆ ನೆಯಱ ಯಲಾದುದಿಲ್ಲಾ ಮುನಿಯಂ            ೧೭

ಸೊಡರಂ ಪರ್ಚಿಸಿದಂತಿರೆ
ಬೆಡಂಗುವಡೆದೆಸೆವ ಮುನಿಯ ದೇಹದ್ಯುತಿಯಿಂ
ಕಡುಗವಿಲಮಾಗಿ ಕಾಂಚನ
ದಡವಿಯನನುಕರಿಸಿ ತದ್ವನಂ ಸೊಗಯಿಸುಗುಂ         ೧೮

ಎಸೆವಂತಿರೆ ಗೋರೋಚನ
ರಸದಿಂದಂ ತೊಯ್ದ ನೇತ್ರಸೂತ್ರದ ತೆಱದಿಂ
ಮಿಸುಗುವ ಕೆಂಜೆಡೆಗಳ್ ರಂ
ಜಿಸುತಿರ್ದುವು ಭಾವಿಸಲ್ಕೆ ತನ್ಮುನಿವರನಾ        ೧೯

ಮೊದಲೊಳ್ವಾಗ್ದೇವಿಯನೊಲಿ
ಸಿದ ತಿಲಕಂ ತಾನಿದೆನಿಪ ತಿಲಕಂ ನವಭ
ಸ್ಮದಿನೆಸೆಯಲದು ಪುೞಲ್ಗ
ಟ್ಟಿದ ಗಂಗೆಯ ಪೊನಲನಿನಿಸನನುಕರಿಸಿರ್ದಂ            ೨೦

ಹೋಗುತ್ತಿದ್ದೆನು. ಅಲ್ಲಿ ಸ್ವಲ್ಪ ದೂರದಲ್ಲಿ ಒಬ್ಬ ಮುನಿಕುಮಾರನು ಸ್ನಾನಮಾಡುವುದಕ್ಕಾಗಿ ಸರೋವರಕ್ಕೆ ಬರುತ್ತಿದ್ದನು. ೧೫. ಪರಮೇಶ್ವರನ ಹಣೆಗಣ್ಣಿನ ಕಿಚ್ಚಿನಿಂದ ಮನ್ಮಥನು ಸುಟ್ಟು ಹೋಗಲಾಗಿ ಒದಗಿದ ಮಿಗಿಲಾದ ದುಖದಿಂದ ಬದುಕಿಸುವುದಕ್ಕಾಗಿ ತಪಸ್ಸುಮಾಡುತ್ತಿರುವ ಮನ್ಮಥನ ಗೆಳೆಯನಾದ ವಸಂತನಂತೆ ಸುಂದರಾಕಾರನಾದ ಮುನಿಕುಮಾರನು ಬಹಳ ಚೆನ್ನಾಗಿ ಶೋಭಿಸುತ್ತಿದ್ದನು. ವ|| ಮತ್ತೆ ೧೬. ಸಂಪೂರ್ಣ ಬಿಂಬದ ಭಾಗ್ಯವನ್ನು ಪಡೆಯಬೇಕೆಂಬ ಒಂದು ಆಸೆಯಿಂದ ದೊಡ್ಡ ಮುನಿವ್ರತವನ್ನು ತಾಳಿರುವ ಪರಮೇಶ್ವರನ ತಲೆಯ ಮೇಲಿನ ಚಂದ್ರನೋ ಎಂಬಂತೆ ಆ ಋಷಿಪುತ್ರನು ಶೋಭಿಸಿದನು. ವ|| ಅದಲ್ಲದೆ, ೧೭. ಶರೀರದ ಕಾಂತಿಯು ಅವನನ್ನು ಸುತ್ತಲೂ ಆವರಿಸಿಕೊಂಡಿದ್ದಿತು. ಅದರಿಂದ ಉರಿಯುತ್ತಿರುವ ಬೆಂಕಿಯ ಜ್ವಾಲೆಯ ಮಧ್ಯದಲ್ಲಿರುವವನಂತೆಯೂ, ಪ್ರಕಾಶಿಸುತ್ತಿರುವ ಬಳ್ಳಿಮಿಂಚುಗಳ ಒಳಗಿರುವವನಂತೆಯೂ ಕಾಣುತ್ತಿದ್ದನು. ಅದರಿಂದ ಅವನ ಸ್ವರೂಪವನ್ನು ಚೆನ್ನಾಗಿ ತಿಳಿದುಕೊಳ್ಳಲಾಗುತ್ತಿರಲಿಲ್ಲ. ೧೮. ದೀಪವನ್ನು ಹಚ್ಚಿಟ್ಟಂತೆ ಸೊಬಗನ್ನು ಪಡೆದು ಶೋಭಿಸುವ ಆ ಋಷಿಯ ಶರೀರದ ಕಾಂತಿಯಿಂದ. ಹೆಚ್ಚಾದ ಪಿಂಗಳವರ್ಣವನ್ನು (ಹಳದಿಮಿಶ್ರಕೆಂಪು) ಹೊಂದಿರುವ ಆ ಕಾಡು ಚಿನ್ನದ ಕಾಡಿನಂತೆ ಸೊಗಸಾಗಿತ್ತು. ೧೯. ಆ ಮುನಿಕುಮಾರನ ಪ್ರಕಾಶಮಾನವಾದ ಕೆಂಜೆಡೆಗಳನ್ನು ನೋಡಿದರೆ ಗೋರೋಚನರಸದಿಂದ ತೋಯಿಸಿದ ಹತ್ತಿಯ ಮಂಗಳ ಸೂತ್ರದಂತೆ ರಂಜಿಸುತ್ತಿದ್ದುವು. ೨೦. ಮೊದಲು ವಿದ್ಯಾದೇವಿಯನ್ನು ಒಲಿಸಿಕೊಳ್ಳುವ ಶುಭಸಮಯದಲ್ಲಿ ಧರಿಸಿರುವ (ಗಂಧದ) ತಿಲಕವೋ ಎಂಬಂತಿರುವ ಹೊಸದಾದ ವಿಭೂತಿಯ ತಿಲಕವು ಹಣೆಯಲ್ಲಿ ಶೋಭಿಸುತ್ತಿರಲು, ಅವನು ಮರಳುಸಾಲುಗಳಿಂದ ಕೂಡಿಕೊಂಡಿರುವ ಗಂಗಾನದಿಯ ಪ್ರವಾಹವನ್ನು ತಕ್ಕಮಟ್ಟಿಗೆ

 

ವನಹರಿಣಕುಲಂ ನಿಜಲೋ