ಅಪರಿಮಿತೋಕ್ತಿಯೊಳೇಂ ಸ
ತ್ವಪರೀತನೆ ಮದನದಾವದಹನಂ ತಳ್ತಿ
ರ್ದಪುದಿಲ್ಲ ನಿನ್ನನದಱಂ
ದುಪದೇಶಂಗೆಯ್ಯುತಿರ್ದಪುದಿದು ಸುಖಮಲ್ತೇ            ೧೧೫

ಆವಂಗಿಂದ್ರಿಯವರ್ಗಮುಂಟು ಮನಮುಂಟಾವಂ ದಿಟಂ ಕಾಣ್ಬನಿ
ನ್ನಾವಂ ಕೇಳ್ವನದಂತೆ ಕೇಳ್ದ ನುಡಿಯಂ ಕೈಕೊಳ್ವನಂತಲ್ಲದಿ
ನ್ನಾವಂ ಪೊಲ್ಲದಿದೊಳ್ಳಿತೆಂದಱವನಾತಂ ಕೇಳ್ದಪಂ ನಿನ್ನ ಸ
ದಾವಂಬೆತ್ತುಪದೇಶಮಂ ಕೆಳೆಯ ಪೇೞೆನ್ನಂದಿಗಂ ಕೇಳ್ವನೇ      ೧೧೬

ಪೆಱತೇನಾನಿರ್ಪವಸ್ಥಾಂತರದೊಳೆನಗೆ ನಿನ್ನನ್ನರಾರ್ ಬಂಧುಗಳ್ ನೀಂ
ಪೊಱಗಾಗೀ ಮಾರ್ಗದಿಂದಂ ನಿಯಮಿಸುವರಾರೆನ್ನನೇಗೆಯ್ವೆನಾನಿ
ನ್ನಱಯೆಂ ನೋಡೆನ್ನನಾಂ ಸಂವರಿಸಲಣಮುಮಾರ್ತಪ್ಪೆನಿಲ್ಲೀಗಳಿಂತೀ
ತೆಱನಂ ಕಂಡಿರ್ದು ನೀನೀಯೆಡೆಗಿದುಚಿತವೆಂಬಂತುಟಂ ನೀನೆ ಬಲ್ಲೆ      ೧೭೭

ವ|| ಅದೆಂತೆಂದೊಡೆ ಕಲ್ಪಾಂತೋದಿತ ದ್ವಾದಶ ದಿನಕರಕಿರಣಾತಪರ್ತಿವ್ರಮಪ್ಪ ಮದನಸಂತಾಪಕ್ಕುಪಶ ಮನೋಪಾಯಮನಾಂ ಪ್ರಾಣಂಬೆರಸೆನಿತು ಬೇಗಮಿರ್ಪನನ್ನೆವರಮ ಪೇಕ್ಷಿಸದಪ್ಪೆನಲ್ಲದೆಯುಂ

ಅಡುವಂತಾದಪುದೀಗಳೆನ್ನವಯವಂಗಳ್ ಕೂಡೆ ಕಣ್ಣಾಲಿಗಳ್
ಸುಡುವಂತಾದಪುದೇವೆನೆಯ್ದೆ ಹೃದಯಂ ಬೇವಂತುಟಾದಪ್ಪುದೀ
ವೊಡಲೋರಂತುರಿವಂದವಾದಪುದಿದಂ ನೀಂ ಮಾಣಿಸಲ್ಕಾರ್ಪೆಯ
ಪ್ಪೊಡೆ ದಲ್ ಮಾಣಿಪುದೆಂಬಿದಂ ನುಡಿದು ಮಾತಂ ಮಾಣ್ದನಬ್ಜಾನನೇ    ೧೧೮

ವ|| ಅಂತುಸಿರದಿರೆ ಮತ್ತಮಾನಾತನಂ ಸಂಬೋಸಲೆಂದು

ಎನಿತು ಪುರಾಣೋಕ್ತಿಗಳಿಂ
ದೆನಿತಾಗಮವಿಷಯವಚನದಿಂದೆನಿತು ನಿದ
ರ್ಶನದಿನನುನಯದೆ ಪೇೞ್ದೆನ
ದನಿತುಂ ಕಿವಿವೊಕ್ಕುದಿಲ್ಲ ತನ್ಮುನಿವರನಾ     ೧೧೯

ನನ್ನ ಮಾತನ್ನು ತಡೆದು ಒತ್ತಾದ ಕಣ್ಣುರೆಪ್ಪೆಗಳಿಂದ ಇಳಿದುಬರುತ್ತಿರುವ ದಪ್ಪ ದಪ್ಪ ಕಣ್ಣೀರಿನ ಹನಿಗಳನ್ನು ತೊಡೆದುಕೊಳ್ಳುತ್ತಾ ಹೀಗೆ ಹೇಳಿದನು. ೧೧೫. “ನೆಮ್ಮದಿಯಿಂದ ಕೂಡಿಕೊಂಡಿರುವ ಗೆಳೆಯ, ಹೆಚ್ಚು ಮಾತುಗಳಿಂದ ಏನು ಪ್ರಯೋಜನ?” ನಿನ್ನನ್ನು ಮನ್ಮಥನೆಂಬ ಕಾಡುಕಿಚ್ಚು ಆವರಿಸಿಲ್ಲ. ಅದರಿಂದ ನನಗೆ ಸುಖವಾಗಿ ಉಪದೇಶ ಮಾಡುತ್ತಿರುವೆ? ೧೧೬. ಮಿತ್ರ, ಯಾರಿಗೆ ಇಂದ್ರಿಯಗಳು ಇವೆಯೊ, ಯಾರಿಗೆ ಮನಸ್ಸು ಇದೆಯೊ, ಯಾರು ನಿಜವಾಗಿಯೂ ನೋಡುತ್ತಾರೊ, ಯಾರು ಕೇಳುತ್ತಾರೊ, ಹಾಗೆಯೆ ಕೇಳಿದ ಮಾತನ್ನು ಅರ್ಥಮಾಡಿಕೊಳ್ಳುತ್ತಾರೊ, ಅದಲ್ಲದೆ ಯಾರು ಇದು ಒಳ್ಳೆಯದು ಇದು ಕೆಟ್ಟದ್ದು ಎಂಬುದನ್ನು ತಿಳಿದುಕೊಳ್ಳುತ್ತಾರೊ, ಅವರು ನಿನ್ನ ಸದ್ಭಾವನೆಯಿಂದ ಕೂಡಿದ ಉಪದೇಶವನ್ನು ಕೇಳುತ್ತಾರೆ. ನನ್ನಂತಹವನು ಕೇಳುತ್ತಾನೊ? ಹೇಳಯ್ಯ! ೧೧೭. ಬೇರೆ ಹೇಳುವುದು ಏನಯ್ಯ? ಈಗ ನಾನು ಇರುವ ಈ ಅವಸ್ಥೆಯಲ್ಲಿ ನನಗೆ ನಿನ್ನಂತಹ ಬಂಧುಗಳು ಯಾರಿದ್ದಾರೆ? ನಿನ್ನನ್ನು ಬಿಟ್ಟು ಈ ದಾರಿಯಲ್ಲಿ ಹೋಗುವುದನ್ನು ತಪ್ಪಿಸಿ ನನ್ನನ್ನು ತಹಬಂದಿಗೆ ತರುವವರು ಯಾರಿದ್ದಾರೆ? ನಾನೇನು ಮಾಡಲಿ? ನನಗೇನೂ ತೋಚುವುದಿಲ್ಲ. ನೋಡು, ನನ್ನನ್ನು ನಾನೇ ಸಮಾಧಾನಪಡಿಸಿಕೊಳ್ಳಲು ಖಂಡಿತ ಸಮರ್ಥನಲ್ಲ. ಈ ಎಲ್ಲ ಬಗೆಯನ್ನೂ ನೀನು ತಿಳಿದುಕೊಂಡಿದ್ದೀಯೆ. ಈ ಸಂದರ್ಭಕ್ಕೆ ಇದು ಸರಿಯೆಂಬುದೆಲ್ಲವನ್ನೂ ನೀನೇ ತಿಳಿದಿದ್ದೀಯೆ. ವ|| ಅದು ಹೇಗೆಂದರೆ, ಪ್ರಳಯ ಕಾಲದಲ್ಲಿ ಹುಟ್ಟುವ ಹನ್ನೆರಡು ಸೂರ್ಯಮಂಡಲಗಳ ಕಿರಣಗಳಿಂದ ಉಂಟಾಗುವ ಬಿಸಿಲಿನಂತೆ ತೀಕ್ಷ ವಾದ ಈ ನನ್ನ ಕಾಮಜ್ವರಕ್ಕೆ ನಿವಾರಣೋಪಾಯವನ್ನು ನಾನು ಬದುಕಿರುವಷ್ಟರಲ್ಲೆ ಬೇಗನೆ ನೀನು ಮಾಡಬೇಕೆಂದು ಅಪೇಕ್ಷಿಸುತ್ತೇನೆ. ಅಲ್ಲದೆ ೧೧೮. ಈಗ ನನ್ನ ದೇಹದ ಅಂಗಾಂಗಗಳೆಲ್ಲ ಬೇಯಿಸಿದಂತೆ ಆಗುತ್ತಿದೆ. ನನ್ನ ಕಣ್ಣುಗುಡ್ಡೆಗಳು ಸುಟ್ಟುಹೋಗುವಂತೆ ಆಗುತ್ತಿದೆ. ಏನು ಮಾಡಲಿ? ಹೃದಯವು ಬೆಂದು ಹೋಗುತ್ತಿರುವಂತಿದೆ. ಈ ಶರೀರವು ಒಂದೇಸಮನೆ ಉರಿದುಹೋಗುವಂತಿದೆ. ಇದನ್ನು ನೀನು ನಿಜವಾಗಿಯೂ ತಪ್ಪಿಸಲು ಶಕ್ತನಾಗಿದ್ದರೆ, ತಪ್ಪಿಸು” ಎಂದು ಹೇಳಿ. ಎಲೈ ತಾವರೆಮೊಗದವಳೆ, ಎಂದವನೇ ಮಾತನ್ನು ನಿಲ್ಲಿಸಿದನು. ವ|| ಹೀಗೆ ಮಾತನಾಡದಿರಲಾಗಿ ಮತ್ತೆ ನಾನು ಅವನಿಗೆ ಬುದ್ಧಿವಾದ ಹೇಳಬೇಕೆಂದು ೧೧೯. ಅವನಿಗೆ ಒಳ್ಳೆಯ ಮಾತಿನಿಂದಲೇ ಅನೇಕ ಪುರಾಣವಚನಗಳನ್ನೂ ಅನೇಕ

ವ|| ಅಂತು ಮೆಯ್ಯಱಯದಿರ್ದನಂ ಕಂಡು ಭಯಂಗೊಂಡುಪದೇಶಕ್ಕೆಡೆಯಿಲ್ಲದೆ ಪ್ರಾಣರಕ್ಷಣೋಪಾಯಮಾನಾದೊಡಂ ಮಾೞ್ಪೆನೆಂದಲ್ಲಿಂದಮೆೞ್ದಚ್ಚೋದಸರೋವರಮಂ ಪೊಕ್ಕು ಸರಸಮೃಣಾಳನಾಳಂಗಳುಮಂ ಜಲಲವಲಾಂಭಿತಂಗಳಪ್ಪ ನಳಿನೀದಳಂಗಳುಮಂ ಪರಾಗಪರಿಮಳಮನೋಹರಂಗಳಪ್ಪ ಕುಮುದ ಕುವಲಯಂಗಳುಮಂ ತಂದಾ ಲತಾಮಂದಿರದೊಳಗಣ ಚಂದ್ರಕಾಂತಶಿಲಾತಲಂಗಳೊಳ್ ಪಲವುಮನಲ್ಪತಲ್ಪಂಗಳುಮಂ ಮಾೞ್ಪುದುಮಾತನಲ್ಲಿಗೆ ಮೆಯ್ಯನೀಡಾಡಿ ಕೆಲದೊಳಿರ್ದ ಚಂದನಪಲ್ಲವದೆಳದಳಿರ್ಗಳಂ ಕರತಳದಿಂ ಪಿೞದು ನಿಸರ್ಗ ಪರಿಮಳಮಂ ತಳೆದ ಹೈಮದಂತೆ ಕುಳಿರ್ಕೋಡುವ ತದ್ರಸದಿಂ ಲಲಾಟಂ ಮೊದಲಾಗಿ ಚರಣ ತಳಂಬರಂ ಅಂಗಚರ್ಚೆಯನೆಡೆವಿಡದೊಡರ್ಚಿಯುಂ ಅಭ್ಯರ್ಣಪಾದಪಸುಟಿತ ವಲ್ಕಲಂಗಳೊಳಂ ಕಟ್ಟಿದ ಕರ್ಪೂರರಜದ ಪೊಟ್ಟಣಂಗಳೊಳಂ ಸ್ವೇದಪ್ರತೀಕಾರಮನನವರತಂ ಮಾಡಿಯುಂ ತಿಳಿನೀರ ತುಂತುರ್ವನಿಗಳಿಂ ಪೊರೆದೆಳವಾೞ ಯ ಸುೞಯ ಬಿಜ್ಜಣಿಗೆಗಳಿನಡಿಗಡಿಗೆ ಬೀಸಿಯುಂ ಮತ್ತಮನೇಕ ಶಿಶಿರೋಪಚಾರಂಗಳಂ ಮಾಡಿಯುಮವೆಲ್ಲಮುಂ ಪುಂಡರೀಕಂಗುದ್ದೀಪನಪಿಂಡದಂತೆ ಕೇವಲಂ ಸಂತಾಪಮಂ ಮಾೞ್ಪುದುಮೆನ್ನೊಳಿಂತೆಂದೆಂ

ಜನಕಂ ಗಂಧರ್ವರಾಜಂ ತನಗೆನಿಸಿದ ವಿಖ್ಯಾತಿಯಂ ತಾಳ್ದಿ ಕಾಂತಾ
ಜನರತ್ನಂ ತಾನೆನಲ್ ಸಂದತಿಚತುರೆ ಮಹಾಶ್ವೇತೆ ತಾನೇತ್ತದೆಂದುಂ
ವನವಾಸೈಕಾಗ್ರಚಿತ್ತಂ ಮೃಗಶಿಶುವಿನವೋಲ್ ಮುಗ್ಧನಪ್ಪೀತನೆತ್ತೆಂ
ಬಿನಿತಂ ತಾಂ ನೋಡದೇಂ ಮಾಡಿದನೊ ವಿರಹಸಂತಾಪಮಂ ಪುಷ್ಪಚಾಪಂ       ೧೨೦

ವ|| ಅಂತು ದುರ್ಯಶಪದಮುಂ ದುಷ್ಕರಮುಂ ದುಸ್ಸಾಧ್ಯಮುಂ ದುರ್ಘಟಮು ಮೆನಿಪೆಡೆಯೊಳೆರ್ದೆಗೊಟ್ಟದೊಂದ ವeಯಿಂದೆಸಗಿಪಂ ವಿಷಮಾಸ್ತ್ರನದು ಕಾರಣದಿಂ

ಆವುದು ಮಾೞ್ಪುದೋ ಶರಣಮಾವುದೊ ಪೋಪೆಡೆಯಾವುದಿಲ್ಲಿಗಿ
ನ್ನಾವುದೊ ಕೌಶಲಂ ನೆರವದಾವುದುಪಾಯಮದಾವುದೋವೊ ತಾ
ನಾವುದೊ ಬುದ್ಧಿ ಮತ್ಸಖನ ಜೀವಮನಾಂ ಪಿಡಿವಂದಮಾವುದಿ
ನ್ನೇವೆನೆನುತ್ತಮಿಂತಿರೆ ವಿಕಲ್ಪಸಿದೆಂ ಪಲವುಂ ಪ್ರಕಾರಮಂ       ೧೨೧

ಶಾಸ್ತ್ರವಚನಗಳನ್ನೂ ಉದಾಹರಿಸಿ ಉಪದೇಶ ಮಾಡಿದೆ. ಅದೊಂದೂ ಅವನ ಕಿವಿಗೆ ಬೀಳಲೇ ಇಲ್ಲ. ವ|| ಹೀಗೆ ದೇಹದ ಮೇಲೆ ಪ್ರeಯೇ ಇಲ್ಲದಿರುವ ಅವನನ್ನು ನೋಡಿ ನನಗೆ ಭಯವುಂಟಾಯಿತು. ಉಪದೇಶಕ್ಕೆ ಅವಕಾಶವೇ ಇರಲಿಲ್ಲ. ಅದರಿಂದ ಅವನ ಪ್ರಾಣರಕ್ಷಣೆಗಾದರೂ ತಕ್ಕ ಪ್ರಯತ್ನವನ್ನು ಮಾಡಬೇಕೆಂದು ಅಲ್ಲಿಂದ ಎದ್ದು ಅಚ್ಛೋದಸರೋವರಕ್ಕೆ ಹೋಗಿ ಅಲ್ಲಿಂದ ತಂಪಾದ ತಾವರೆದಂಟುಗಳನ್ನೂ ನೀರು ಹನಿಗಳಿಂದ ಕೂಡಿದ ತಾವರೆ ಎಲೆಗಳನ್ನೂ ಪರಾಗದಿಂದ ಸುವಾಸನೆಯನ್ನು ಪಡೆದು ಸೊಗಸಾದ ಬಿಳಿತಾವರೆಯ ಮತ್ತು ಕನ್ನೈದಿಲೆಯ ಹೂವುಗಳನ್ನೂ ತಂದೆನು. ಆ ಬಳ್ಳಿ ಮನೆಯ ಒಳಗಿರುವ ಚಂದ್ರಕಾಂತಶಿಲೆಯ ಮೇಲೆ ಅವುಗಳನ್ನು ಹರಡಿ ಉತ್ತಮವಾದ ಹಾಸಿಗೆಯನ್ನು ಏರ್ಪಡಿಸಿದೆನು. ಅವನು ಅಲ್ಲಿ ಮಲಗಿಕೊಂಡನು. ಬಳಿಕ ನಾನು ಪಕ್ಕದಲ್ಲಿ ಇದ್ದ ಗಂಧದ ಮರದ ಎಳೆಚಿಗುರುಗಳನ್ನು ಕೈಯಿಂದ ಹಿಂಡಿ, ಸ್ವಭಾವವಾಗಿಯೇ ಪರಿಮಳದಿಂದ ಕೂಡಿಕೊಂಡಿರುವ ಮತ್ತು ಮಂಜಿನಂತೆ ತಂಪನ್ನುಂಟುಮಾಡುವ ಆ ರಸದಿಂದ ಹಣೆಯಿಂದ ಹಿಡಿದು ಕಾಲಿನವರೆಗೂ ಲೇಪನವನ್ನು ಒಂದೇ ಸಮನೆ ಮಾಡಿದೆನು. ಹತ್ತಿರದಲ್ಲೇ ಇದ್ದ ಒಂದು ಮರದ ತೊಗಟೆಯನ್ನು ಸುಲಿದು ತಂದು ಅದರಲ್ಲಿ ಕರ್ಪೂರದ ಪುಡಿಗಳನ್ನು ಸೇರಿಸಿ ಕಟ್ಟಿ ಉಂಡೆಮಾಡಿಕೊಂಡು ಮೈಮೇಲೆ ಒಂದೇ ಸಮನೆ ಒತ್ತುತ್ತಾ (ಉಪ್ಪು ಮೊದಲಾದ ಶಾಖವನ್ನು ಕೊಡುವಂತೆ) ಬರುತ್ತಿದ್ದ ಬೆವರನ್ನು ತಪ್ಪಿಸುತ್ತಿದ್ದೆನು. ತಿಳಿನೀರಿನ ತುಂತುರು ಹನಿಗಳಿಂದ ಕೂಡಿಕೊಂಡಿರುವ ಎಳೆಯ ಬಾಳೆಯ ಸುಳಿಯನ್ನು ಬೀಸಣಿಗೆಯನ್ನಾಗಿ ಮಾಡಿಕೊಂಡು ಮತ್ತೆ ಮತ್ತೆ ಬೀಸುತ್ತಿದ್ದೆನು. ಹೀಗೆ ಇನ್ನೂ ಅನೇಕ ಬಗೆಯ ತಂಪುಮಾಡುವ ಚಿಕಿತ್ಸೆಗಳನ್ನು ಮಾಡಿದರೂ ಅವೆಲ್ಲವೂ ಪುಂಡರೀಕನಿಗೆ ಶಾಖವನ್ನುಂಟುಮಾಡುವ ಗುಳಿಗೆಯಂತೆ ಕೇವಲ ತಾಪವನ್ನೇ ಉಂಟುಮಾಡುತ್ತಿದ್ದುವು. ಅದನ್ನು ನೋಡಿ ನಾನು ಮನಸ್ಸಿನಲ್ಲೇ ಅಂದುಕೊಂಡೆನು.

೧೨೦. “ತನಗೆ ತಂದೆ ಗಂಧರ್ವರಾಜ” ಎಂಬ ಪ್ರಖ್ಯಾತಿಗೆ ಪಾತ್ರಳಾದ ಮಹಿಳಾರತ್ನವೆನಿಸಿ ಕೊಂಡಿರುವ ಹಾಗೂ ಚತುರೆಯಾದ ಆ ಮಹಾಶ್ವೇತೆ ಎಲ್ಲಿ? ಯಾವಾಗಲೂ ಅರಣ್ಯವಾಸದಲ್ಲೆ ನಿರತನಾದ ಜಿಂಕೆಮರಿಯಂತೆ ಮೊದ್ದುತನದಿಂದ ಕೂಡಿರುವ ಈ ಪುಂಡರೀಕನೆಲ್ಲಿ! ಇದನ್ನು ನೋಡಿದರೆ ಮನ್ಮಥನು ಇವನಿಗೆ ವಿರಹಸಂತಾಪವನ್ನು ಏತಕ್ಕೆ ಉಂಟುಮಾಡಿಬಿಟ್ಟನೋ? ವ|| ಹಾಗೆ ಅಪಕೀರ್ತಿಯನ್ನುಂಟುಮಾಡುವ, ಕಷ್ಪಕರವಾದ ಸಾಸಲಸಾಧ್ಯವಾದ ನಿರ್ವಹಿಸಲಾಗದಿರುವ ವಿಷಯದಲ್ಲೂ ತೊಡಗಿ, ಮನ್ಮಥನು ಕನಿಕರವಿಲ್ಲದೆ ನಿರ್ಲಕ್ಷ ದಿಂದಲೇ ಮಾಡಿಬಿಡುತ್ತಾನೆ. ಆ ಕಾರಣದಿಂದ, ೧೨೧. ಏನು ಮಾಡುವುದು? ಕಾಪಾಡುವವರು ಯಾರು? ಹೋಗುವ ಸ್ಥಳ ತಾನೆ ಯಾವುದು? ಈ ವಿಷಯದಲ್ಲಿ ಯಾವ ಜಾಣತನವನ್ನು ಮಾಡಬಹುದು? ಯಾವ ಸಹಾಯವಿದೆ? ಯಾವ

ವ|| ಅಂತು ಚಿಂತಿಸುತ್ತಮಿರ್ದುಮೆನ್ನೊಳಿಂತೆಂದೆಂ

ದೆಸೆಗೆಟ್ಟೇನಾನುಮಂ ಚಿಂತಿಸುತಿರೆ ಫಲಮೇಂ ಪೊಲ್ಲದಿನ್ನೊಳ್ಳಿತೆಂಬು
ದ್ದೆಸಮಂ ಮಾಣ್ದೀಗಳೆಲ್ಲಂದದೊಳಮೆನಗೆ ಮಾತೇಂ ಸುಹೃತ್ಪ್ರಾಣಮಂ ರ
ಕ್ಷಿಸವೇೞ್ಕುಂ ರಕ್ಷಿಸುವ ತೆಱನುಮೆಂತೆಂದೊಡಂ ನಿಶ್ಚಯಂ ಭಾ
ವಿಸಿ ನೋೞ್ಪಂದಾಕೆಯಂ ತರ್ಪುದನುೞಯೆ ಬೞಕ್ಕಿಲ್ಲ ಬೇಂದುಪಾಯಂ   ೧೨೨

ಅಱಯಂ ಕೇಣದಿನೇನುಮಂ ಮುನಿಕುಮಾರಂ ಪೆಂಡಿರಿಂತೆಂದು ಬಾ
ಯ್ದೆಯಲ್ ನಾಣ್ಚುವನೊಂದು ಮಾತನವಳತ್ತಲ್ ಸಾರ್ದು ಮಾತಾಡಲ
ೞ್ಕಱುವಿತ್ತಲ್ ವಿಷಮೇಷು ಕೊಂದಪನಿದಂ ಕಂಡಿರ್ದು ಮತ್ತೀಗಳಾಂ
ಪೆಱತೇಂ ಭಾವಿಪೆನೆನ್ನ ಮಿತ್ರನಸುವಂ ಕಾಯಲ್ಕೆವೇೞ್ಕುಂ ದೃಢಂ          ೧೨೩

ವ|| ಅದಱಂದಿನ್ನಾಕೆಯಲ್ಲಿಗೆಂತಾದೊಡಂ ಪೋಗೀತನವಸ್ಥಾಂತರಮಂ ಪೇೞಲ್ವೇಡಿದಪ್ಪುದೆಂದು ಮತ್ತಂ.

ಎನಗಂ ಕೃತ್ಯಮಿದಲ್ಲದಿರ್ದೊಡಮವಶ್ಯಂ ಪೋಪೆನೆಂತಾನುಮೆ
ನ್ನನಿವಂ ಕುತ್ಸಿತವೃತ್ತಿ ಕಷ್ಟಮಿದು ಬೇಡೆಂದೆಂಗುಮೋ ಲಬ್ಧಚೇ
ತನನೆಂದಾತನ ಪಕ್ಕದಿಂದುಸಿರದಿರ್ದಾನಾಗಳೇನಾನುಮೊಂ
ದು ನೆವಂ ಮಾಡಿ ಮಹೋತ್ಕಟತ್ವದೆ ದಿಟಂ ಬಂದೆಂ ಚಕೋರೇಕ್ಷಣೇ      ೧೨೪

ಇದು ಮನ್ಮಿತ್ರನವಸ್ಥೆ ತದ್ವಿರಹಸಂತಾಪಾನುರಾಗಕ್ಕೆ ತ
ಕ್ಕುದನಾಂ ಬಂದೆಡೆಗಂ ಮೃಗಾಕ್ಷಿ ನಿನಗಂ ಪೋಲ್ವಂತುಟಂ ನೀನೆ ಬ
ಲ್ಲೆ ದಲಿಂದಿಂತಿದಕೇನನೆಂದಪಳೊ ಕೇಳ್ವೆಂ ಮಾತನೆಂದೇನುಮೆ
ನ್ನದೆ ಮದ್ವಕ್ತ್ರಮನಾ ಕಪಿಂಜಳಕನಾಗಳ್ ನೋಡುತಿರ್ದಂ ನೃಪಾ          ೧೨೫

ಅದನಾಂ ಕೇಳ್ದು ಸುಖಾಮೃತಾರ್ಣವದೊಳೞ್ದಂತಾನುಮಂತೆಯ್ದೆ ಕೂ
ಟದೊಳಾದೊಂದನುರಾಗಮಂ ಪಡೆದೆನೆಂಬಂತಾನುಮಂತೆಯ್ದೆ ಸ
ಮ್ಮದಸಂದೋಹಮನಾನೆ ಪೆತ್ತೆನಿದನೆಂಬಂತಾನುಮಂತಯ್ದೆ ದೋ
ಹದಮೆಲ್ಲಂ ನೆಬಂದು ಕೂಡಿತು ಗಡೆಂಬಂತಾನುಮಾದೆಂ ನೃಪಾ            ೧೨೬

ಉಪಾಯವಿದೆ? ಯಾವ ಯುಕ್ತಿಯನ್ನು ಮಾಡಬಹುದು? ನನ್ನ ಸ್ನೇಹಿತನ ಪ್ರಾಣವನ್ನು ಉಳಿಸುವ ರೀತಿ ಹೇಗೆ? ಇನ್ನೇನು ಮಾಡಲಿ! ಎಂಬುದಾಗಿ ನಾನಾಬಗೆಯಾಗಿ ಯೋಚಿಸಿದೆನು. ವ|| ಹಾಗೆ ಆಲೋಚಿಸುತ್ತಾ ಇದ್ದು ನನ್ನಲ್ಲೇ ನಾನು ಮತ್ತೆ ಹೀಗೆ ಯೋಚಿಸಿದೆನು. ೧೨೨. ಹೀಗೆ ನಾನು ದಿಕ್ಕೆಟ್ಟು ಏನೇನನ್ನೋ ಯೋಚಿಸುತ್ತಾ ಕುಳಿತಿದ್ದರೆ ಫಲವೇನು? ಇದು ಒಳ್ಳೆಯದು, ಇದು ಕೆಟ್ಟದ್ದು ಎಂಬ ಭಾವನೆಯನ್ನು ಬಿಟ್ಟು ಯಾವ ರೀತಿಯಿಂದಲಾದರೂ ನನ್ನ ಸ್ನೇಹಿತನ ಪ್ರಾಣವನ್ನು ಉಳಿಸಲೇಬೇಕು. ಹೆಚ್ಚು ಮಾತೇಕೆ? ಬೇಗನೆ ನಾನು ಅವನ ಪ್ರಾಣಗಳನ್ನು ಉಳಿಸುವ ಬಗೆ ಹೇಗೆ? ಎಂದು ಯೋಚಿಸಿ ನೋಡಿದರೆ, ಅವಳನ್ನು ಇಲ್ಲಿಗೆ ಕರೆದುಕೊಂಡು ಬರುವುದನ್ನು ಬಿಟ್ಟರೆ ಮತ್ತೆ ಬೇರೆ ಉಪಾಯವೇ ಇಲ್ಲ. ೧೨೩. ಈ ಋಷಿಕುಮಾರನು ಇದು ತಪಸ್ಸಿಗೆ ವಿರುದ್ಧವಾದುದೆಂಬ ಒಂದು ಆಲೋಚನೆಯಿಂದ ಏನು ಮಾಡಲೂ ಅರಿಯದವನಾಗಿದ್ದಾನೆ. ಅಲ್ಲದೆ “ಹೆಣ್ಣು” ಎಂಬ ಶಬ್ದವನ್ನು ಬಾಯಿಂದ ಹೇಳುವುದಕ್ಕೂ ನಾಚುತ್ತಾನೆ. ತಾನಾಗಿಯೇ ಅವಳ ಹತ್ತಿರ ಹೋಗಿ ಒಂದು ಮಾತನ್ನು ಹೇಳುವುದಕ್ಕೂ ಭಯ ಬೇರೆ. ಈ ಕಡೆ ಮನ್ಮಥನು ಇವನನ್ನು ಕೊಲ್ಲುತ್ತಿದ್ದಾನೆ. ಇದನ್ನೆಲ್ಲಾ ನಾನು ಕಣ್ಣಾರೆ ನೋಡಿಕೊಂಡಿದ್ದು, ಬೇರೆ ಏನು ತಾನೇ ಆಲೋಚನೆ ಮಾಡಲಿ? ಒಟ್ಟಿನಲ್ಲಿ ನನ್ನ ಗೆಳೆಯನ ಜೀವವನ್ನು ಖಂಡಿತವಾಗಿಯೂ ಉಳಿಸಲೇಬೇಕು. ವ|| ಅದರಿಂದ ಇನ್ನು ಅವಳ ಹತ್ತಿರಕ್ಕೆ ಹೇಗಾದರೂ ಹೋಗಿ ಇವನ ಅವಸ್ಥೆಯನ್ನು ಹೇಳಲೇಬೇಕು ಎಂದು ತೀರ್ಮಾನಿಸಿ ಮತ್ತೆ, ೧೨೪. “ಎಲೈ ಚಕೋರಪಕ್ಷಿಯ ಕಣ್ಣಿನಂತೆ ಕಣ್ಣುಳ್ಳವಳೆ, ನನಗೂ ಇದು ಮಾಡಲು ಯೋಗ್ಯವಾದ ಕಾರ್ಯವಲ್ಲ. ಹಾಗಿದ್ದರೂ ಹೋಗಲೇಬೇಕಾದ್ದರಿಂದ ಹೋಗಿಬರುತ್ತೇನೆ. ಇವನಿಗೇನಾದರೂ ಮೈಮೇಲೆ ಅರಿವುಂಟಾಗಿ ಗೊತ್ತಾದರೆ, ಇದು ಹೇಯವಾದ ಕೆಲಸ ಮತ್ತು ಕಷ್ಟಸಾಧ್ಯವಾದುದು. ಅದರಿಂದ ಹೋಗಬೇಡ ಎಂದು ಹೇಳಿಬಿಡಬಹುದು ಎಂದು ಚಿಂತಿಸಿ, ಅವನಿಗೆ ಏನನ್ನೂ ಹೇಳದೆ, ಏನೋ ನೆವಮಾಡಿಕೊಂಡು ಬಹಳ ತ್ವರೆಯಿಂದ ಬಂದೆ, ೧೨೫. ಎಲೈ ಹರಿಣಾಕ್ಷಿ, ಇದು ನನ್ನ ಸ್ನೇಹಿತನ ಸ್ಥಿತಿ. ಈಗ ಇಷ್ಟು ವಿರಹವೇದನೆಗೆ ಕಾರಣವಾದ ನಿನ್ನ ಮೇಲಿನ ಪ್ರೀತಿಗೆ ಯಾವುದು ಉಚಿತವೋ ಮತ್ತು ನಾನು ಇಷ್ಟುದೂರ ಬಂದಿರುವುದಕ್ಕೂ ನಿನಗೂ ಯಾವುದು ಯೋಗ್ಯವೋ ಅದನ್ನು ಮಾಡುವುದು ನಿನಗೆ ಸೇರಿದೆ. ಇದು ಸತ್ಯ” ಎಂದು ಹೇಳಿ, ಎಲೈ ರಾಜನೆ, ಇದಕ್ಕೆ ಇವಳು ಏನು ಹೇಳುತ್ತಾಳೋ ಕೇಳೋಣ ಎಂದು ನನ್ನ ಮುಖವನ್ನೇ ಮೌನವಾಗಿ ನೋಡುತ್ತಿದ್ದನು. ೧೨೬. ಎಲೈ ರಾಜನೆ, ಅದನ್ನು

ವ|| ಅಂತತೀಂದ್ರಿಯಸೌಖ್ಯಪರಮಕೋಟಿಯನೆಯ್ದಿ ನಾಣೆಱಕದಿಂದಿನಿತುಬೇಗಂ ತಲೆಯಂ ಬಾಗಿರಲೆಮೆಯಂ ಕಪೋಲತಲಮುಮಂ ಮುಟ್ಟದೊಂದಱ ಪಿಂದೊಂದಡಸಿ ಗುಡುಗುಡನೆ ಸುರಿವಾನಂದಜಲಬಿಂದುಗಳೆನ್ನ ನಿರತಿಶಯಹರ್ಷಮಂ ಪ್ರಕಟಿಸುತ್ತಿರಲೆನ್ನೊಳಿಂತೆಂದೆಂ

ಎನಗೆಂತಂತಿರೆ ದೈವದಿಂ ಪ್ರಿಯನೊಳಂ ಸಂತಾಪಮಂ ಮಾಡಿ ತ
ನ್ನನುಕೂಲತ್ವಮನೊಂದು ಮೆಯ್ಯೊಳೆನಗೀಗಳ್ ತೋಱದಂ ನೆಟ್ಟನಾ
ತನೆ ಮುಂ ತಾನಿನಿತೊಂದವಸ್ಥೆಗೊಳಗಾಗಲ್ ಕಾಮನಂ ಬಿಟ್ಟು ಮ
ತ್ತೆನಗಾರ್ ಬಂಧುಗಳಾರ್ ಸಹಾಯಕರುಪಕಾರಂಗೆಯ್ವರಾರಿರ್ದಪರ್     ೧೨೭

ಕನಸಿನೊಳಮೀ ಕಪಿಂಜಲ
ಮುನಿವದನದೊಳನೃತಭಾಷೆ ಪೊಱಮಡದದಱಂ
ದೆನಗಾವುದಿಲ್ಲಿಗುತ್ತರ
ಮೆನುತುಂ ಬಗೆವುತ್ತಮಿರ್ದೆನಿರ್ಪನ್ನೆವರಂ      ೧೨೮

ವ|| ಆಗಳೊರ್ವಳತಿಸಂಭ್ರಮಂಬೆರಸು ದೌವಾರಿಕೆ ಬಂದು ಪೊಡಮಟ್ಟು ರಾಜಪುತ್ರಿ ನೀನಸ್ವಸ್ಥಶರೀರಿಣಿಯಾಗಿರ್ದುದಂ ಪರಿಜನದಿಂ ಕೇಳ್ದು ಮಹಾದೇವಿಯರ್ ನಿನ್ನಲ್ಲಿಗೆ ಬಿಜಯಂ ಗೆಯ್ದಪರೆಂಬುದಂ ಕಪಿಂಜಲಂ ಕೇಳ್ದು ನೆರವಿ ಕವಿತರ್ಪುದೆಂದಂಜಿ ಬೇಗಮೆೞ್ದು

ತಡೆದಿರಬಾರದು ನೇಸೞ್
ಪಡುತಂದುದು ಪೊೞ್ತು ಪೋಯ್ತು ಪೋದಪೆನೆಂತಾ
ದೊಡಮೆನ್ನ ಕೆಳಯನಸುವಂ
ಪಿಡಿವುದು ಸೆಱಗೊಡ್ಡಿ ಬೇಡಿದೆಂ ಮೃಗನಯನೇ          ೧೨೯

ವ|| ಎಂದು ನುಡಿದು ಮಱುಮಾತುಗುಡಲವಸರಮಿಲ್ಲದಿರೆ ಮದೀಯಾಂಬಿಕೆಯ ಮುಂದೆ ಪರಿತರ್ಪ ದೌವಾರಿಕೆಯರಿಂ ಸಹವಾಸಿಗಳಿಂ ಚಾಮರದಡಪದ ಕನ್ನಡಿಯ ಪರಿಚಾರಿಕೆಯರಿಂ ಕೂಡೆ ಸಂದಣಿಸಿದ ಬಾಗಿಲೊಳೆಂತಾನುಂ ನುಸುಳ್ದು ಪೋದನನ್ನೆಗಮಿತ್ತಲ್

ದೀನಾಸ್ಯೆ ಜನನಿ ಬಂದೆನಿ
ತಾನುಂ ಪೊೞರ್ದು ಮನೆಗೆ ಪೋದಳ್ ಗಡ ತಾ
ನೇನೆಂದಳದೇಗೆಯ್ದಳ
ದೇನಾಯ್ತೆಂದಱಯೆನಾಗಳೆರ್ದೆಗೆಟ್ಟವಳೆಂ     ೧೩೦

ನಾನು ಕೇಳಿ ಸುಖವೆಂಬ ಅಮೃತ ಸಮುದ್ರದಲ್ಲಿ ಮುಳುಗಿದವಳಂತೆಯೂ, ಪರಸ್ಪರ ಸಮಾಗಮದಿಂದ ಒದಗಿ ಮಿಗಿಲಾದ ಪ್ರಣಯವನ್ನು ಪಡೆದವಳಂತೆಯೂ, ಅತಿಶಯವಾದ ಆನಂದಸಮೂಹವನ್ನು ಅನುಭವಿಸುತ್ತಿರುವವಳಂತೆಯೂ, ಎಲ್ಲ ಮನೋರಥಗಳೂ ಒಟ್ಟಿಗೆ ಕೈಗೂಡಿದವಳಂತೆಯೂ ಆದೆನು. ವ|| ಹೀಗೆ ಇಂದ್ರಿಯಗಳಿಂದ ಅನುಭವಿಸಲಾರದಷ್ಟು ಸುಖದ ಪರಾಕಾಷ್ಠೆಯನ್ನು ಪಡೆದು, ಲಜ್ಜೆಯಿಂದ ಕೂಡಿದ ಪ್ರೀತಿಯಿಂದ ಸ್ವಲ್ಪಕಾಲ ತಲೆಯನ್ನು ಬಗ್ಗಿಸಿಕೊಂಡಿರಲಾಗಿ ರೆಪ್ಪೆಯನ್ನೂ ಕೆನ್ನೆಯನ್ನೂ ಮುಟ್ಟದೆ, ಒಂದರ ಹಿಂದೆ ಒಂದು ದಟ್ಟವಾಗಿ ಗಳಗಳನೆ ಸುರಿಯುತ್ತಿರುವ ಆನಂದಬಾಷ್ಟದ ಹನಿಗಳು ನನ್ನ ನಿರತಿಶಯವಾದ ಹರ್ಷವನ್ನು ಪ್ರಕಟಪಡಿಸುತ್ತಿರಲಾಗಿ ನನ್ನಲ್ಲಿ ಹೀಗೆ ಆಲೋಚಿಸಿದೆನು. ೧೨೭. ಅದೃಷ್ಟವಿಶೇಷದಿಂದ ಮನ್ಮಥನು ನನಗೆ ಮಾಡಿದಂತೆಯೆ ನನ್ನ ಇನಿಯನಿಗೂ ವಿರಹ ಸಂತಾಪವನ್ನುಂಟುಮಾಡಿ ಒಂದು ಬಗೆಯಿಂದ ನನಗೆ ಸಹಾಯಕತ್ವವನ್ನೇ ಈಗ ತೋರ್ಪಡಿಸಿದ್ದಾನೆ. ನನಗಿಂತ ಮೊದಲು ಅವನೇ ಇಷ್ಟೊಂದು ವಿರಹವ್ಯಥೆಗೆ ಒಳಗಾಗುವಂತೆ ಮಾಡಿರಬೇಕಾದರೆ, ಆ ಕಾಮನನ್ನು ಬಿಟ್ಟು ನನಗೆ ಬೇರೆ ಬಂಧುಗಳು ಯಾರು? ಸಹಾಯಕರು ಯಾರು? ಉಪಕಾರ ಮಾಡುವವರು ತಾನೆ ಯಾರಿದ್ದಾರೆ? ೧೨೮. ಈ ಕಪಿಂಜಲಮುನಿಯ ಬಾಯಿಂದ ಸುಳ್ಳುಮಾತೆಂಬುದು ಕನಸಿನಲ್ಲೂ ಹೊರಡುವುದಿಲ್ಲ. ಅದರಿಂದ ಈಗ ಇವನಿಗೆ ಏನು ಉತ್ತರವನ್ನು ಕೊಡಲಿ ಎಂದು ಆಲೋಚಿಸುತ್ತ ಇರುವಷ್ಟರಲ್ಲಿ, ವ|| ಆಗ ಬಾಗಿಲು ಕಾಯುವವಳೊಬ್ಬಳು ಬಹಳ ಸಡಗರದಿಂದ ಬಂದು ನಮಸ್ಕರಿಸಿ, “ದೊರೆಯ ಮಗಳೆ, ನಿನ್ನ ದೇಹಾರೋಗ್ಯವು ಚೆನ್ನಾಗಿಲ್ಲವೆಂಬುದನ್ನು ಪರಿಜನರಿಂದ ಕೇಳಿ ಮಹಾರಾಣಿಯವರು ನಿನ್ನಲ್ಲಿಗೆ ದಯಮಾಡಿಸುತ್ತಿದ್ದಾರೆ” ಎಂದು ಹೇಳಿದಳು, ಕಪಿಂಜಲನು ಇದನ್ನು ಕೇಳಿಗುಂಪು ಮುತ್ತಿಕೊಳ್ಳುವುದೆಂದು ಹೆದರಿ ಬೇಗನೆ ಎದ್ದು, ೧೨೯. “ಎಲೈ ಮೃಗನಯನೆ, ನಾನು ಇನ್ನು ತಡಮಾಡಬಾರದು. ಸೂರ್ಯನಾಗಲೇ ಮುಳುಗುವುದರಲ್ಲಿದ್ದಾನೆ. ಬಹಳ ಹೊತ್ತಾಯಿತು. ಹೋಗಿಬರುತ್ತೇನೆ. ಹೇಗಾದರೂ ಮಾಡಿ ನನ್ನ ಗೆಳೆಯನ ಜೀವವನ್ನು ಉಳಿಸಮ್ಮ. ನಿನ್ನನ್ನು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ವ|| ಎಂದು ಹೇಳಿ ನನಗೆ ಪ್ರತ್ಯುತ್ತರವನ್ನು ಕೊಡಲು ಅವಕಾಶವನ್ನೇ ಕೊಡದೆ ನನ್ನ ತಾಯಿಯ ಮುಂದೆ ಬರುತ್ತಿರುವ, ಬಾಗಿಲುಕಾಯುವ ಹೆಂಗಸರಿಂದಲೂ, ಪರಿಜನರಿಂದಲೂ, ಚಾಮರದ, ಸಂಚಿನ, ಕನ್ನಡಿಯ ಊಳಿಗ ಮಾಡುವ ಹೆಂಗಸರಿಂದಲೂ ತುಂಬಿಹೋಗಿದ್ದ ಬಾಗಿಲಿನಿಂದ ಹೇಗೋ ನುಣುಚಿಕೊಂಡು ಹೊರಟುಹೋದನು. ಅಷ್ಟರಲ್ಲಿ ಈ ಕಡೆ, ೧೩೦. ನನ್ನ ಅನಾರೋಗ್ಯದ ಚಿಂತೆಯಿಂದ ಬಾಡಿದ ಮುಖವುಳ್ಳ ನನ್ನ ತಾಯಿಯು ಬಂದು ಎಷ್ಟೋ ಹೊತ್ತು

ವ|| ಅನ್ನೆಗಮಿತ್ತಲಂಭೋನೀಜೀವಿತೇಶ್ವರನಸ್ತಂಗತನಪ್ಪುದುಂ ಪಾತಾಳಪಂಕಕಲುಷಿತ ಮಹಾಪ್ರಳಯಜಲಗಳ್ ಮೇರೆದಪ್ಪಿ ಕವಿದು ಭುವನಂಗಳೆಲ್ಲಮನೊಳಕೆಯ್ಯಲುಕ್ಕಿ ದುವೆಂಬಂತಿಡಿದಡರೆಗೊಂಡು ಕೞ್ತಲೆ ಕವಿಯೆ ಕಿಂಕರ್ತವ್ಯತಾಮೂಢೆಯೆನಾಗಿ ತರಳಿಕೆಯನಿಂತೆಂದೆಂ

ಮನಮುಮಖಿಳೇಂದ್ರಿಯಂಗಳು
ಮಿನಿಸಪ್ಪೊಡಮೆನ್ನವಲ್ಲಮೇಗೆಯ್ವೆನೊ ಪೇ
ೞೆನಗೀಗಳಾ ಕಪಿಂಜಲ
ಮುನಿ ನಿನ್ನಯ ಮುಂದೆ ನುಡಿದು ಪೋದುದನಱಯಾ     ೧೩೧

ವ|| ಎಂದು ತಾನಿತರಕನ್ಯಕೆಯಂತೆ ನಾಣ್ಗೆಟ್ಟು ಸೈರಣೆಯಂ ಬಿಟ್ಟು ವಿನಯಮನೊಕ್ಕು ಜನಾಪವಾದಮಂ ಮಿಕ್ಕು ನಿಜಾಚಾರಮಂ ಮದು ಶೀಲಮಂ ತೊದು ಕುಲಕ್ರಮಮಂ ಪಾಲಿಸದೆ ರಾಗಾಂಧೆಯೆನಾಗಿ

ಗುರುಜನಮೀಯದೆಯುಂ ಮು
ನ್ನೆರೆವಾತನನೆಯ್ದಿಯೈದೆಯಪ್ಪೊಡೆ ದೋಷಂ
ಪರಿಭಾವಿಸಲೆನಗಿನ್ನದ
ಪರಿಹಾರ್ಯಮೆನಿಪ್ಪುದೊಂದು ಮರಣಂ ಶರಣಂ         ೧೩೨

ಮನೆಗೆ ಬರಲ್ ಕಪಿಂಜಲಮಹಾಮುನಿಗಂ ಮಱುಮಾತನಿತ್ತೆನಿ
ಲ್ಲೆನಗದಱಂದಮಿಂ ಪ್ರಣಯಭಂಗಮದಾವುದೊ ಕೆಟ್ಟೆನತ್ತಲೋ
ಪನುಮಿದನಿಂತೆ ಕೇಳ್ದೊಡೆ ನಿರಾಶೆಯೊಳಕ್ಕಟ ಸಾಗಮಂತಱಂ
ಮುನಿವಧದೋಷಮಾವ ತೆಱದಿಂ ಕಳೆಗುಂ ಕಮಲಾಯತೇಕ್ಷಣ             ೧೩೩

ವ|| ಎಂದು ನುಡಿಯುತ್ತಮಿರ್ಪನ್ನೆಗಂ

ಮುಳಿದು ತಿಮಿರೇಭಕುಂಭ
ಸ್ಥಳಮಂ ಶಶಿಸಿಂಹಮೊತ್ತಿ ಸೀಳಲ್ ಮುಕ್ತಾ
ವಳಿ ಮೇಗೆ ನೆಗೆದುವೆನೆ ಕ
ಣಳಿಸಿದುವತಿವಿಮಲತರಳತಾರಾನೀಕಂ       ೧೩೪

ಕುಳಿತಿದ್ದು, ತನ್ನ ಮನೆಗೆ ಹೊರಟುಹೋದಳು. ಅವಳು ಏನು ಹೇಳಿದಳು? ಏನು ಮಾಡಿದಳು? ಏನು ನಡೆಯಿತು? ಎಂಬುದು ಆಗ ಶೂನ್ಯಹೃದಯಳಾಗಿದ್ದ ನನಗೆ ಗೊತ್ತಾಗಲೇ ಇಲ್ಲ. ವ|| ಅಷ್ಟರಲ್ಲಿ ಈ ಕಡೆ ತಾವರೆಗಳಿಗೆ ಪ್ರಾಣಪ್ರಿಯನಾದ ಸೂರ್ಯನು ಮುಳುಗಲಾಗಿ ಪಾತಾಳಲೋಕದ ಕೆಸರಿನಿಂದ ಕದಡಿಹೋದ, ಮಹಾ ಪ್ರಳಯಕಾಲದ ಸಮುದ್ರಗಳು ಎಲ್ಲೆ ಮೀರಿ ಆವರಿಸಿ, ಪ್ರಪಂಚವನ್ನೆಲ್ಲಾ ಆಕ್ರಮಿಸಿಕೊಳ್ಳಲು ಉಕ್ಕಿಬರುತ್ತಿವೆ ಎಂಬಂತೆವ್ಯಾಪಿಸಿ ಮೇಲೇರಿ ಕತ್ತಲೆಯು ಕವಿಯಲಾಗಿ ನಾನು ಏನು ಮಾಡಬೇಕೆಂದು ದಿಕ್ಕುತೋಚದವಳಾಗಿ ತರಳಿಕೆಯನ್ನು ಕುರಿತು ಹೀಗೆ ಹೇಳಿದೆನು. ೧೩೧. “ನನ್ನ ಮನಸ್ಸೂ ಎಲ್ಲಾ ಇಂದ್ರಿಯಗಳೂ ಈಗ ಸ್ವಲ್ಪವೂ ನನ್ನ ಸ್ವಾನದಲ್ಲಿಲ್ಲ. ನಾನೀಗ ಏನು ಮಾಡಲಿ ನೀನೇ ಹೇಳು. ಕಪಿಂಜಲಮುನಿಯು ನಿನ್ನ ಎದುರಿನಲ್ಲೇ ಹೇಳಿಹೋಗಿರುವುದು ನಿನಗೆ ಗೊತ್ತೇ ಇದೆಯಲ್ಲ.” ವ|| ಹೀಗೆ ನಾನು ನಾಡಾಡಿ ಹುಡುಗಿಯಂತೆ ನಾಚಿಕೆಯನ್ನು ಬಿಟ್ಟು, ವಿನಯವನ್ನು ದೂರಮಾಡಿ, ಜನಾಪವಾದವನ್ನು ದೂರೀಕರಿಸಿ, ನಮ್ಮ ಸಂಪ್ರದಾಯವನ್ನು ಮರೆತು, ಶೀಲವನ್ನು ಬಿಟ್ಟು, ಕುಲಪದ್ಧತಿಯನ್ನು ಪರಿಪಾಲಿಸದೆ, ಅನುರಾಗದಿಂದ ಕುರುಡಿಯಂತಾಗಿ, ೧೩೨. ಹಿರಿಯರು ಕನ್ಯಾದಾನ ಮಾಡುವುದಕ್ಕೆ ಮೊದಲೇ ಪ್ರಿಯಕರನನ್ನು ಸೇರಿ, ಮದುವೆ ಮಾಡಿಕೊಂಡರೆ ಅಧರ್ಮವುಂಟಾಗುತ್ತದೆ. ನನಗಂತೂ ಗುರುಹಿರಿಯರನ್ನು ಮೀರುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಆದುದರಿಂದ ಇನ್ನು ನನಗೆ ಮರಣವೇ ಗತಿ. ೧೩೩. ಕಪಿಂಜಲಮಹರ್ಷಿಯು ತಾನಾಗಿಯೇ ಮನೆಗೆ ಬಂದರೆ ಅವನಿಗೆ ನಾನು ಪ್ರತ್ಯುತ್ತರವನ್ನೇ ಕೊಡಲಿಲ್ಲ. ಅದಕ್ಕಿಂತಲೂ ಬೇರೆ ಪ್ರೀತಿಭಂಗವಿದೆಯೇ? ಆ ಕಡೆ ನನ್ನ ಇನಿಯನು ಈ ರೀತಿ ನಾನು ಮಾಡಿದ್ದನ್ನು ಹೀಗೆಯೆ ಕೇಳಿದರೆ, ನಿರಾಶೆಯಿಂದ ಪ್ರಾಣಬಿಡುತ್ತಾನೆ. “ಎಲೈ ಕಮಲದಂತೆ ವಿಶಾಲವಾದ ಕಣ್ಣುಳ್ಳವಳೆ, ಇದರಿಂದ ಉಂಟಾದ ಮುನಿಹತ್ಯಾದೋಷವನ್ನು ಹೇಗೆ ನಾನು ಪರಿಹರಿಸಿಕೊಳ್ಳಲಿ? ಅಂತೂ ನಾನು ಕೆಟ್ಟೆ”. ವ|| ಎಂದು ಮಾತನಾಡುತ್ತಿರಲಾಗಿ, ೧೩೪. ಕತ್ತಲೆಯೆಂಬ ಆನೆಯ ಕುಂಭಸ್ಥಳವನ್ನು ಚಂದ್ರನೆಂಬ ಸಿಂಹವು ಅಮುಕಿ ಸೀಳಲಾಗಿ ಅಲ್ಲಿದ್ದ ಮುತ್ತುಗಳು ಮೇಲಕ್ಕೆ ಸಿಡಿಯುತ್ತಿವೆಯೇ ಎಂಬಂತೆ ಬಹಳ