ಕುಸುಮರಜದಿಂದೆ ಸೊಗಯಿಪ
ವಸಂತವನರಾಜಿಯಂತೆ ಚಂದ್ರೋದಯಮಿ
ನ್ನೆಸೆದಪುದೆನೆ ನಸುವೆಳಗಿಂ
ಮಸಗಿದುದಿನಿಸಿಂದ್ರದಿಗ್ವಧೂಮುಖಬಿಂಬಂ    ೧೩೫

ವ|| ತದನಂತರಂ

ಇಳೆಯಂ ನೋಡಲ್ಕೆ ರಸಾ
ತಳದಿಂ ಪೊಱಮಡುವ ನಾಗರಾಜನ ಪೆಡೆಯೊಳ್
ಪೊಳೆವರುಣಕಿರಣಮಣಿಮಂ
ಡಳದಂದದಿನೆಸೆದುದಿಂದುಮಂಡಳಮಾಗಳ್             ೧೩೬

ಪುರುಡಿಂ ಕಾಯ್ದೊದೆಯಲ್ಕೆ ರೋಹಿಣಿಯ ಪಾದಾಲಕ್ತಕಂ ಮೆಯ್ಯೊಳಾ
ವರಿಸಿತ್ತೊ ವಿಕಟಾಬ್ದಿವಿದ್ರುಮಮಯೂಖಂ ತಳ್ತುದೋ ಪೂರ್ವಭೂ
ಧರಸಿಂಹಂ ಪೊಯೆ ನೊಂದುದೋ ಹರಿಣನೆಂಬಂತಾಗಳತ್ಯಂತ ಸುಂ
ದರಮಾಗಿರ್ದುದು ಕಣ್ಗೆ ರಕ್ತರುಚಿಯಂ ಬಿಂಬಂ ಸುಧಾಸೂತಿಯಾ           ೧೩೭

ವ|| ಅಂತಭಿನವೋದಯ ರಾಗರಂಜಿತನಪ್ಪ ರಜನಿಕರನಂ ನೋಡಲೊಡಮತ್ಯುಜ್ವಲ ಮದನಾನಲ ಜ್ವಾಲಾಕಲಾಪೆಯಾಗಿಯುಮಂಧಕಾರ ಹೃದಯೆಯೆನೆನ್ನಳಿಂತೆಂದೆಂ

ಇತ್ತ ವಸಂತನಿತ್ತ ಮಲಯಾನಲನಿತ್ತ ಮಧುವ್ರತಾಳಿ ಮ
ತ್ತಿತ್ತ ಮದೋತ್ಕ ಕೋಕಿಲಕದಂಬಕವೆಯ್ದೆ ವಿಜೃಂಭಿಸಿತ್ತು ತಾ
ನಿತ್ತಲಡರ್ದು ಚಂದ್ರಹತಕಂ ತಲೆದೋಱದನೋವೊ ಕೆಟ್ಟೆನೀ
ಚಿತ್ತಜತಾಪವಗ್ಗಲಿಸಿದಪ್ಪುದು ಮದ್ಧ ದಯಾಂತರಾಳದೊಳ್        ೧೩೮

ಉದಯಿಸಲಿಂದು ಚಂದ್ರಹತಕಂ ವಿಷಮಜ್ವರಿತಂಗೆ ಮತ್ತೆ ಕೆಂ
ಡದ ಮೞೆ ಕೊಂಡುದಗ್ಗಲಿಸಿದೈಕಿಲವಂಗೆ ಹಿಮಪ್ರಪಾತಮಾ
ದುದು ಪಿರಿದಪ್ಪ ನಂಜು ಪುಗುಳುರ್ಬಿದವಂಗಸಿತಾಹಿದಂಶಮಾ
ದುದು ದಿಟವೆಂದು ತಲ್ಲಣದಿನಾಗಳೆ ಬೋಂಕನೆ ಮೂರ್ಛೆವೋಪುದುಂ      ೧೩೯

ಸ್ವಚ್ಛವಾದ ಮಿರುಗುವ ನಕ್ಷತ್ರಪುಂಜವು ಕಂಗೊಳಿಸಿತು. ೧೩೫. ಹೂವುಗಳ ಪರಾಗದಿಂದ ಸುಂದರವಾಗಿ ಕಾಣುವ ಅರಣ್ಯಪಂಕ್ತಿಯಂತೆ ಪೂರ್ವದಿಕ್ಕೆಂಬ ರಮಣಿಯ ಮುಖವು ಉದಯಿಸಲಿರುವ ಚಂದ್ರನ ನಸುಬೆಳಕಿನಿಂದ ರಂಜಿಸಿತು. ವ|| ಬಳಿಕ, ೧೩೬. ಆಗತಾನೆ ಹುಟ್ಟಿದ ಚಂದ್ರಮಂಡಲವು ಭೂಮಿಯನ್ನು ನೋಡಬೇಕೆಂಬ ಕುತೂಹಲದಿಂದ ಪಾತಾಳಲೋಕದಿಂದ ಮೇಲಕ್ಕೆ ಬಂದ ಆದಿಶೇಷನ ಹೆಡೆಯಲ್ಲಿ ಹೊಳೆಯುವ ಕೆಂಪುಕಾಂತಿಯಿಂದ ಕೂಡಿಕೊಂಡಿರುವ ರತ್ನಗಳ ವರ್ತುಲದಂತೆ ಶೋಭಿಸಿತು. ೧೩೭. ಪ್ರಣಯಕಲಹದಲ್ಲಿ ಅಸೂಯೆಯಿಂದ ಕೋಪಿಸಿಕೊಂಡು ರೋಹಿಣಿಯು ಒದೆಯಲಾಗಿ ಅವಳ ಕಾಲಿನ ಅರಗಿನ ರಸವು ಶರೀರದಲ್ಲೆಲ್ಲಾ ಲೇಪಿಸಿಕೊಂಡಿರುವಂತೆಯೂ, ಅಗಾಧವಾದ ಸಮುದ್ರದ ಹವಳಗಳ ಕಾಂತಿಯು ಹರಡಿಕೊಂಡಿರುವಂತೆಯೂ, ಪೂರ್ವಪರ್ವತವೆಂಬ ಸಿಂಹವು ಹೊಡೆಯಲಾಗಿ ಚಂದ್ರಮಂಡಳದಲ್ಲಿದ್ದ ಜಿಂಕೆಯ ಶರೀರದಿಂದ ಹೊರಹೊಮ್ಮಿದ ರಕ್ತದಿಂದ ನೆನೆದಿದೆಯೋ ಎಂಬಂತೆ ಚಂದ್ರಬಿಂಬವು ಕೆಂಪುಕಾಂತಿಯಿಂದ ಕಣ್ಣಿಗೆ ಸುಂದರವಾಗಿ ಕಂಡಿತು. ವ|| ಹೀಗೆ ಹೊಸದಾದ ಉದಯರಾಗದಿಂದ ಕೆಂಪಾದ ಚಂದ್ರನನ್ನು ನೋಡಿದ ಕೂಡಲೆ ಅತಿಯಾಗಿ ಉರಿಯುತ್ತಿರುವ ಕಾಮಾಗ್ನಿ ಜ್ವಾಲೆಯ ಸಮೂಹದಿಂದ ಕೂಡಿದವಳಾಗಿದ್ದರೂ ಅಂಧಕಾರಮಯವಾದ ಹೃದಯವುಳ್ಳವಳಾಗಿ ನನ್ನಲ್ಲೇ ಹೀಗೆ ಆಲೋಚಿಸಿದೆನು. ಟಿ. ಬೆಂಕಿ ಉರಿಯುವ ಸ್ಥಳವು ಅಂಧಕಾರವಾದುದು ಹೇಗೆ? ಎಂಬ ವಿರೋಧವು ಅಂಧಕಾರವೆಂಬ ಪದಕ್ಕೆ ಏನೂ ತೋಚದ ಎಂಬ ಅರ್ಥ ಹೇಳುವುದರಿಂದ ಪರಿಹಾರವಾಗುತ್ತದೆ. ೧೩೮. ಈ ಕಡೆ ವಸಂತಋತು, ಈ ಕಡೆ ಮಲಯಮಾರುತ, ಈ ಕಡೆ ದುಂಬಿಗಳ ಗುಂಪು, ಈ ಕಡೆ ಮದವೇರಿ

ಮೈಮರೆತ ಕೋಕಿಲೆಗಳ ಗುಂಪು, ಇವೆಲ್ಲವೂ ಬಹಳವಾಗಿ ಮೆರೆಯುತ್ತಿವೆ. ಸಾಲದುದಕ್ಕೆ ಈ ನೀಚ ಚಂದ್ರನು ಮೇಲಕ್ಕೇರಿ ತಲೆದೋರಿದ್ದಾನೆ. ಅಯ್ಯೋ ಕೆಟ್ಟೆ. ಈ ವಿರಹಸಂತಾಪವು ನನ್ನ ಮನಸ್ಸಿನೊಳಗೆ ಹೆಚ್ಚುತ್ತಿದೆ. ೧೩೯. ಈಗ ನೀಚನಾದ ಚಂದ್ರನು ಹುಟ್ಟಲಾಗಿ ಮೊದಲೆ ವಿಷಮಜ್ವರಪೀಡಿತನಾದವನ ಮೇಲೆ ಕೆಂಡದ ಮಳೆ ಬೇರೆ ಸುರಿದಂತೆಯೂ, ಹೆಚ್ಚಾದ ಶೀತವುಳ್ಳವನ

ವ|| ಆಗಳತಿಸಂಭ್ರಮಂಬೆರಸು ತರಳಿಕೆ ತಂದ ಚಂದನದ ಚರ್ಚೆಗಳಿಂ ಮೆತ್ತಮನೇಕ ಶಿಶಿರೋಪಚಾರಂಗಳಿಂದುಪಚರಿಸಲದಱನೆಂತಾನುಂ ಮೂರ್ಛೆಯಿಂದೆಚ್ಚೆತ್ತು

ಅೞಲಗ್ಗಳಿಸಲ್ ಕಣ್ಣೀರ್
ಗೞಗೞಸಿ ಕಪೋಲಯುಗಳದಿಂ ಪೆರ್ಮೊಲೆಗಾ
ಗಿೞತರ್ಪಿನಮೆನ್ನಂ ಪಿಡಿ
ದೞುತಿರ್ದಳನಿನಿಸು ನೋಡಿದೆಂ ತರಳಿಕೆಯಂ           ೧೪೦

ವ|| ಅಂತು ನೋೞ್ಪುದುಂ ಚಂದನಪಂಕಾರ್ದ್ರಂಗಳಪ್ಪ ಕರಕಮಲಂಗಳಂ ಮುಗಿದು

ಇನಿತಂ ಪ್ರಾರ್ಥಿಪೆನಕ್ಕ ನಿನ್ನನುೞ ನೀಂ ಲಜ್ಜಾಭರಾವೇಶಮಂ
ನಿನಗೀ ತಂದೆಯ ತಾಯೊಳಪ್ಪ ಭಯಮೇಕೇೞ್ ಪೋಪಮಾನಾ ನಿ
ನ್ನೆನಿತಂ ನೋಡುತಮಿರ್ಪೆ ನೀನಕರುಣಂ ಮೇಣ್ ಪೋಗು ನೀನೆಂದು ಪೇೞ್
ಮನದಿಂ ಮುನ್ನಮೆ ಪೋಗಿ ನಿನ್ನಿನಿಯನಂ ತಂದಪ್ಪೆನಬ್ಜಾನನೇ             ೧೪೧

ವ|| ಎಂದು ತರಳಿಕೆ ನುಡಿಯೆ

ಇದನೇನೆಂದಪ್ಪೆ ನಾಣೇಂ ಗುರುಗಳುಮೆನಗಿನ್ನೇಕೆ ಪೇೞ್ ಮೃತ್ಯುವೋಲ್ ಮೂ
ಡಿದನಲ್ತೇ ಚಂದ್ರನುಂ ತಾನಿರದೆ ಕರುಣದಿಂದೊಯ್ವೊಡೇಳ್ ಪೋಪಮೀ ದೇ
ಹದೊಳಿಂದೀ ಪ್ರಾಣಮುಳ್ಳನ್ನೆಗಮೆ ತಡೆಯದಾತ್ಮೇಶನಂ ಕಾಣ್ಬೆನೋ ಪು
ಣ್ಯದಿನೆಂದಾಂ ಚೇ,ಟೆಗೆಟ್ಟಂದವಳನೆ ಪಿಡಿದಲ್ಲಿಂದಮೆಂತಾನುಮೆೞ್ದಂ       ೧೪೨

ವ|| ಅಂತೇೞಲೊಡನೆ

ಬಿದಿ ಮತ್ತೇನನಿದಂ ತೋ
ಱದಪನೊ ಪಾತಕಿಗೆನುತ್ತೆ ಭಯಮಂ ಚಿತ್ತ
ಕ್ಕೊದವಿಸಿ ಬಲಗಣ್ ಕೆತ್ತಲ್
ಮೊದಲಿಕ್ಕಿತು ದುರ್ನಿಮಿತ್ತಸೂಚಕಮಾರ್ಗಳ್           ೧೪೩

ಅದನೇವೇೞೆ ನನಂತರಂ ತ್ರಿಭವನಪ್ರಾಸಾದರಮ್ಯಪ್ರಣಾ
ಳದವೋಲ್ ಕಣ್ಗೆಸೆವಿಂದುಮಂಡಲದಿನೇಂ ಗಂಗಾಪ್ರವಾಹಂಗಳು
ಣ್ಮಿದುವೋ ಚಂದನವಾರಿಪೂರಮಿೞದತ್ತೋ ಕ್ಷೀರವಾರಾಶಿ ಪೊ
ಣ್ಮಿದುದೋ ಪೇೞೆನೆ ಲೋಕದೊಳ್ ಕವಿದು ಪರ್ವಿತ್ತಂದು ಚಂದಾತಪಂ    ೧೪೪

ಮೇಲೆ ಮಂಜು ಸುರಿದಂತೆಯೂ, ದೊಡ್ಡದಾದ ವಿಷದ ಗುಳ್ಳೆಯೆದ್ದವನಿಗೆ ಹಾವು ಕಚ್ಚಿದಂತೆಯೂ ನಿಜವಾಗಿ ಆದಂತಾಯಿತು ಎಂದು ತಲ್ಲಣಿಸುತ್ತ ನಾನು (ಮಹಾಶ್ವೇತೆ) ಮೂರ್ಛೆ ಹೋಗಲಾಗಿ, ವ|| ಆಗ ಬಹಳ ಚುರುಕಿನಿಂದ ಹೋಗಿ ತರಳಿಕೆ ತಂದ ಶ್ರೀಗಂಧಲೇಪನಗಳಿಂದಲೂ ಮತ್ತು ಅನೇಕ ಶೈತ್ಯೋಪಚಾರಗಳಿಂದಲೂ ಚಿಕಿತ್ಸೆ ನಡೆಯಲು ಅದರಿಂದ ಹೇಗೋ ಮೂರ್ಛೆಯಿಂದ ಎಚ್ಚೆತ್ತು ೧೪೦. ಮನಸ್ಸಿನ ವಿಷಾದವು ಹೆಚ್ಚಲಾಗಿ, ಕಣ್ಣೀರು ಗಳಗಳನೆ ಕೆನ್ನೆಗಳ ಮೇಲಿಂದ ಕುಚಗಳ ಮೇಲೆ ಇಳಿಯುತ್ತಿರಲಾಗಿ ನನ್ನನ್ನು ಹಿಡಿದುಕೊಂಡು ಅಳುತ್ತಿರುವ ತರಳಿಕೆಯನ್ನು ನೋಡಿದೆನು. ವ|| ಹಾಗೆ ನೋಡಲಾಗಿ ನನ್ನ ಶರೀರಕ್ಕೆ ಶ್ರೀಗಂಧವನ್ನು ಲೇಪನ ಮಾಡಿದ್ದರಿಂದ ಇನ್ನೂ ಒದ್ದೆಯಾಗಿರುವ ಕೈಗಳನ್ನು ಮುಗಿದು ೧೪೧. “ಅಕ್ಕ! ನಿನ್ನನ್ನು ಇಷ್ಟು ಮಾತ್ರ ಬೇಡಿಕೊಳ್ಳುತ್ತೇನೆ. ನೀನು ಅತ್ಯಕ ನಾಚಿಕೆಯನ್ನು ಬಿಟ್ಟುಬಿಡು. ನಿನಗೆ ಈ ತಂದೆ ತಾಯಿಗಳ ಭಯವಿನ್ನೇಕೆ? ಏಳು ಹೋಗೋಣ, ನಾನು ನೋಡಲಾರೆ ಇನ್ನೆಷ್ಟು ಹೊತ್ತು ಅವನ ಮೇಲೆ ಕನಿಕರವಿಲ್ಲದೆ ಹೀಗೆ ಸುಮ್ಮನೆ ನೋಡುತ್ತಿರುತ್ತೀಯೆ? ಎಲೈ ಕಮಲಮುಖಿ, ಅಥವಾ ನೀನು ಹೋಗಿ ಬಾ ಎಂದು ನನಗೆ ಹೇಳು. ನಾನು ಮನಸ್ಸಿಗಿಂತಲೂ ಮೊದಲೆ ಹೋಗಿ ನಿನ್ನ ನಲ್ಲನನ್ನು ಕರೆತರುತ್ತೇನೆ. ವ|| ಎಂದು ತರಳಿಕೆಯು ಹೇಳಲಾಗಿ ೧೪೨. ಇದೇನು ಹೇಳುತ್ತೀಯೆ? ನಾಚಿಕೆಯೇತಕ್ಕೆ? ಇನ್ನು ಹಿರಿಯರನ್ನು ಕಟ್ಟಿಕೊಂಡೇನು? ಹೇಳು. ಮೃತ್ಯುವಿನಂತೆ ಈ ಚಂದ್ರನೂ ಉದಯಿಸಿಬಿಟ್ಟಿದ್ದಾನೆ. ನೀನು ವಿಳಂಬಮಾಡದೆ ಕರುಣೆಯಿಂದ ನನ್ನನ್ನು ಕರೆದುಕೊಂಡು ಹೋಗುವುದಾದರೆ ಏಳು ಹೋಗೋಣ. ಇಂದು ನನ್ನ ದೇಹದಲ್ಲಿ ಪ್ರಾಣವಿರುವುದರೊಳಗಾಗಿ ಪುಣ್ಯದಿಂದ ಪ್ರಾಣಕಾಂತನನ್ನು ನೋಡಲಾಗುತ್ತದೆಯೊ ಇಲ್ಲವೊ ಕಾಣೆನಲ್ಲ! ಎಂದು ಚಲನಶಕ್ತಿಗುಂದಿ ಅವಳನ್ನೇ ಹಿಡಿದುಕೊಂಡು ಅಲ್ಲಿಂದ ಹೇಗೋ ಎದ್ದೆನು. ವ|| ಹಾಗೆ ಏಳಲಾಗಿ ಕೂಡಲೆ ೧೪೩. ಆಗ ನನ್ನ ಬಲಗಣ್ಣು ಹಾರಲು ಮೊದಲಿಕ್ಕಿತು. ಅದು ಅಪಶಕುನವಾದುದರಿಂದ ವಿಯು ಈ ಪಾಪಿಷ್ಠಳಿಗೆ ಮತ್ತಾವ ಅನಿಷ್ಠವನ್ನುಂಟುಮಾಡುತ್ತಾನೋ ಎಂಬ ಭಯವು ನನ್ನ ಮನಸ್ಸಿನಲ್ಲುಂಟಾಯಿತು. ೧೪೪. ಬಳಿಕ ಮೂರುಲೋಕವೆಂಬ ಉಪ್ಪರಿಗೆಮನೆಯ

ವ|| ಅಂತು ಪರ್ವಿದ ಬೆಳ್ದಿಂಗಳೊಳಖಿಳಜನಮೆಲ್ಲಂ ಶ್ವೇತದ್ವೀಪದೊಳಿರ್ದಂತಿರಲಾ ರಾತ್ರಿಯೊಳ್ ಮದನವಿಹ್ವಲತೆಯಿಂ ಮೂರ್ಛೆವೋದೆನ್ನನೆಚ್ಚಱಸಲೆಂದು ನೊಸಲೊಳಿಕ್ಕಿದ ಮಂದವಪ್ಪ ಚಂದನದಣ್ಪಿನಿಂ ಪತ್ತಿ ಪಗಿಲ್ತು ಬೆಳ್ಕರಿಸಿದಳಕನಿಕರಮುಂ ಮುನ್ನಮೆ ಕೊರಳೊಳಿಕ್ಕಿರ್ದಕ್ಷಾವಳಿಯುಂ ಕಿವಿಯೊಳಿಕ್ಕಿರ್ದ ಪಾರಿಜಾತಕುಸುಮಮಂಜರಿಯುಂ ಪದ್ಮರಾಗಮಣಿಕಿರಣದಂತಿರ್ದ ರಕ್ತಾಂಶಮುಮೆನ್ನೊಳಳವಡೆ ಗೃಹೀತ ವಿವಿಧ ಕುಸುಮ ತಾಂಬೂಲರಾಶಿಯುಮಪ್ಪ ತರಳಿಕೆವೆರಸು ಮದೀಯ ಪರಿಚಿತ ಪರಿಜನಮುಮಱಯದಂತು ಕರುಮಾಡದಿಂದವನಿತಳಕ್ಕವತರಿಸಿ

ಶ್ರವಣನತ ಪಾರಿಜಾತ
ಸ್ತವಕೋದ್ಗತ ಪರಿಮಳಕ್ಕೆ ನಂದನಭೃಂಗೀ
ನಿವಹಂ ಕವಿದೆನ್ನ ಮುಸುಂ
ಕುವಿನಂ ಪೊಱಮಟ್ಟೆನಾಗಳತಿಸಂಭ್ರಮದಿಂ     ೧೪೫

ವ|| ಅಂತು ತರಳಿಕೆವೆರಸು ಪ್ರಮದವನಪಕ್ಷದ್ವಾರದಿಂ ಪೊಱಮಟ್ಟು ಪೋಗುತ್ತುಂ ಪರಿಜನವಿರಹಿತೆಯೆನೆ ನ್ನೊಳಿಂತೆಂದೆಂ

ಸರಭಸವಾಗಳೇಱಸಿದ ಬಿಲ್ವೆರಸಂಗಜನೆನ್ನ ಪಕ್ಕದೊಳ್
ಬರುತಿರೆ ಲಜ್ಜೆ ಪಿಂದೆ ನಿಲೆ ಮುಂದೆ ಮದಿಂದ್ರಿಯವರ್ಗಮಾವಗಂ
ಪರಿಯೆ ನಿಶಾಕರಂ ನಿಜಕರೋತ್ಕರದಿಂ ಪಿಡಿದೊಯ್ಯೆ ಬೇಱ ಪೇೞ್
ಪರಿಜನಮೇವುದಿಂ ಮಱಸಿ ಪೋಪೆನಗಿಂತುಟೆ ದಲ್ ಪರಿಗ್ರಹಂ             ೧೪೬

ವ|| ಎಂದೆನ್ನೊಳ್ ಚಿಂತಿಸುತ್ತಂ ತರಳಿಕೆಯನಿಂತೆಂದೆಂ

ಎಂತೀಗಳೆನ್ನನೊಯ್ದಪ
ನಂತೋಪದೆ ಕರಕಚಗ್ರಹಂಗೆಯ್ದು ನಿಶಾ
ಕಾಂತಂ ತಡೆಯದೆ ನಮಗಿದಿ
ರೇಂ ತರ್ಕುಮೆ ಜೀವಿತೇಶನಂ ತರಳಾಕ್ಷೀ     ೧೪೭

ವ|| ಎಂಬುದುಂ ತರಳಿಕೆ ಮುಗುಳ್ನಗೆನಗುತ್ತುಮೆನ್ನನಿಂತೆಂದಳ್

ಮೇಲಿರುವ ನೀರು ಹೋರಕ್ಕೆ ಬರಲು ಮಾಡಿರುವ ರಮಣೀಯವಾದ ಗೋಳಾಕಾರದ ಕಂಡಿಯಂತೆ ಶೋಭಿಸುವ ಚಂದ್ರಮಂಡಲದಿಂದ ಗಂಗಾಫ್ರವಾಹಗಳು ಹೊರಹೊಮ್ಮುತ್ತಿವೆಯೋ ಎಂಬಂತೆಯೂ, ಗಂಧೋದಕದ ಪ್ರವಾಹವು ಇಳಿದುಬರುತ್ತಿದೆಯೋ ಎಂಬಂತೆಯೂ ಕ್ಷೀರಸಮುದ್ರವು ಉಕ್ಕುತ್ತಿದೆಯೋ ಎಂಬಂತೆಯೂ ಬೆಳದಿಂಗಳು ಲೋಕದಲ್ಲೆಲ್ಲಾ ಕವಿದು ಹರಡಿತ್ತು. ಅದನ್ನು ಏನು ಹೇಳಲಿ?

ವ|| ಹಾಗೆ ಹರಡಿರುವ ಬೆಳದಿಂಗಳಿನಲ್ಲಿ ಜನರೆಲ್ಲರೂ ಶ್ವೇತದ್ವೀಪದಲ್ಲಿರುವಂತೆ ಕಾಣುತ್ತಿರಲು ಆ ರಾತ್ರಿಯಲ್ಲಿ ವಿರಹವೇದನೆಯ ಕಳವಳದಿಂದ ಮೂರ್ಛೆ ಹೋಗಿದ್ದ ನನ್ನನ್ನು ಎಚ್ಚರಿಸುವುದಕ್ಕಾಗಿ ಹಣೆಗೆ ಬಳಿದಿದ್ದ ದಟ್ಟವಾದ ಬಿಳಿಗಂಧದ ಲೇಪನದಲ್ಲಿ ಸೇರಿ ಅಂಟಿಕೊಂಡು ಬಿಳುಪಾದ ಮುಂಗುರುಳೂ, ಮೊದಲೆ ಕೊರಳಲ್ಲಿ ಹಾಕಿಕೊಂಡಿದ್ದ ಜಪಸರವೂ, ಕಿವಿಯ ಮೇಲೆ ಏರಿಸಿದ್ದ ಪಾರಿಜಾತಕುಸುಮದ ಗೊಂಚಲೂ, ಪದ್ಮರಾಗಮಣಿಯ ಕಿರಣಗಳಂತಿದ್ದ ಕೆಂಪು ಮೇಲುಹೊದಿಕೆಯೂ ನನ್ನಲ್ಲಿ ಅಳವಟ್ಟಿರಲು ನಾನಾ ಬಗೆಯ ಹೂವು ತಾಂಬೂಲಗಳನ್ನು ತೆಗೆದುಕೊಂಡು ಹೊರಟಿರುವ ತರಳಿಕೆಯೊಂದಿಗೆ ಕೂಡಿಕೊಂಡು ನನ್ನ ಪರಿಜನರಾರೂ ಅರಿಯದಂತೆ ಮಹಡಿಯಿಂದ ಭೂಮಿಗೆ ಇಳಿದು ೧೪೫. ನನ್ನ ಕಿವಿಯಲ್ಲಿರುವ ಪಾರಿಜಾತಕುಸುಮದ ಗೊಂಚಲಿನಿಂದ ಹೊರಡುತ್ತಿರುವ ಪರಿಮಳಕ್ಕೆ ಉದ್ಯಾನವನದಲ್ಲಿರುವ ದುಂಬಿಗಳ ಸಮೂಹವು ಆವರಿಸಿ ಮುತ್ತುತ್ತಿರಲಾಗಿ ನಾನು ಬಹಳ ಸಡಗರದಿಂದ ಹೊರಟೆನು. ವ|| ಹಾಗೆ ತರಳಿಕೆಯಿಂದ ಕೂಡಿಕೊಂಡು ಉದ್ಯಾನವನದ ಪಕ್ಕದ ಬಾಗಿಲಿನಿಂದ ಮತ್ತಾವ ಊಳಿಗದವರನ್ನೂ ಕರೆದುಕೊಳ್ಳದೆ ಹೊರಟುಹೋಗುತ್ತಾ ನನ್ನಲ್ಲೇ ಹೀಗೆ ಆಲೋಚಿಸಿದೆನು. ೧೪೬. ಬಹಳ ವೇಗವಾಗಿ ಹೆದೆಯೇರಿಸಿದ ಬಿಲ್ಲಿನಿಂದ ಕೂಡಿಕೊಂಡಿರುವ ಮನ್ಮಥನು ನನ್ನ ಪಕ್ಕದಲ್ಲೇ ಬರುತ್ತಿದ್ದಾನೆ. ನಾಚಿಕೆಯು ನನ್ನ ಹಿಂದೆ ನಿಂತಿದೆ, ಮುಂದೆ ನನ್ನ ಇಂದ್ರಿಯಗಳು ಒಂದೇ ಸಮನೆ ಹೋಗುತ್ತಿವೆ. ಚಂದ್ರನು ತನ್ನ ಕಿರಣಗಳೆಂಬ ಕೈಗಳಿಂದ ಹಿಡಿದು ನಡೆಸಿಕೊಂಡು ಹೋಗುತ್ತಿದ್ದಾನೆ. ಇವರೆಲ್ಲ ನನ್ನ ಪರಿವಾರದವರಂತೆ ಇರುವಾಗ ನನಗೆ ಇನ್ನು ಬೇರೆ ಪರಿಜನರು ಏಕೆ? ಯಾರಿಗೂ ಕಾಣದಂತೆ ಇನಿಯನನ್ನು ಅರಸಿಕೊಂಡು ಹೋಗುವ ನನಗೆ ಇಂತಹುದೇ ಪರಿವಾರ. ವ|| ಎಂದು ನನ್ನಲ್ಲೇ ಆಲೋಚಿಸುತ್ತಾ ತರಳಿಕೆಯನ್ನು ಕುರಿತು ಹೀಗೆ ಹೇಳಿದೆನು. ೧೪೭. “ಎಲೈ ಚಂಚಲಾಕ್ಷಿ, ಈ ಚಂದ್ರನು ಹೇಗೆ ಈಗ ನನ್ನನ್ನು ಎಳೆದುಕೊಂಡು ಹೋಗುತ್ತಿದ್ದಾನೊ ಹಾಗೆಯೆ ನನ್ನ ಪ್ರಾಣಕಾಂತನನ್ನೂ ದಾಕ್ಷಿಣ್ಯವಿಲ್ಲದೆ ಕೈಯನ್ನೂ ಕೂದಲನ್ನೂ ಹಿಡಿದುಕೊಂಡು ತಡಮಾಡದೆ ಕರೆದುಕೊಂಡು ಬಂದು ನಮ್ಮ ಮುಂದೆ ನಿಲ್ಲಿಸುತ್ತಾನೆಯೆ?” ವ|| ಎಂದು ಹೇಳಲು

ಎಲೆ ಮುಗ್ದೆ ಚಂದ್ರಮಂ ಕಾ
ದಲನಂ ತಂದಪನೆ ತಾನೆ ಮುನ್ನಿನ್ನಂ ಕಾ
ಣಲೊಡಂ ಮನ್ಮಥಶರವಿ
ಹ್ವಲಿತನವೋಲ್ ನೋಡ ನೆಗೞುತಿರ್ದಪನಲ್ತೇ           ೧೪೮

ವ|| ಅದೆಂತೆಂದೊಡೆ

ಪ್ರತಿಬಿಂಬವ್ಯಾಜದಿಂ ನಿನ್ನಯ ಕದಪುಗಳಂ ಚುಂಬಿಸುತ್ತಂ ಕಲಾಪಂ
ಚಿತ್ತರತ್ನಾನೀಕಮಂ ಸೋಂಕುತಮೆಸೆವ ಕುಚಾಭೋಗದೊಳ್ ನಿಂದು ಮೇಲ್ವಾ
ಯುತಮುದ್ಯತ್ಕಾಂತಿ ಚಂಚನ್ನಖಗತತನುವೆಂತುಂ ಬಿಡಂ ಪತ್ತಿ ಕಾಲಂ
ಸತಿ ಬೀೞರ್ದಪ್ಪನಿಂತೀತನ ತೆಱನನಿದಂ ಕಾಣೆ ನೀನುತ್ಪಲಾಕ್ಷೀ                       ೧೪೯

ವ|| ಅದಲ್ಲದೆಯುಂ ವಿರಹವಿಹ್ವಲತೆಯಿಂ ಚಂದನಾನುಲಿಪ್ತನಾದಂತೆ ಬೆಳರ್ಪಿನಾವರಿಸಿಯುಂ ಮಾರ್ತೊಳಪ ನೆವದಿಂ ಪಳುಕಿನ ಪಾಸರೆಗಳೊಳ್ ಮೆಯ್ಯನೀಡಾಡಿಯಂ ನೆಯ್ದಿಲ್ಗೊಳಂಗಳೊಳೋಲಾಡಿಯುಮೊಸರ್ವ ಚಂದ್ರಕಾಂತಶಿಲಾತಲಂಗಳೊಳ್ ಕರಂಗಳಿನೆಳವಿಯುಂ ವಿಘಟಿತ ಚಕ್ರವಾಕಂಗಳಪ್ಪ ಕಮಲವನಂಗಳೊಳ್ ಪಾಯ್ದುಮಿಂತು ಪಲತೆಱದೆ ಕೋಟಲೆ ಗೊಳುತಿರ್ದಪನಿಂತಿವು ಮೊದಲಾಗಿ ತತ್ಕಾಲೋಚಿತವಚನಂಗಳಂ ನುಡಿಯುತ್ತಮಿರಲಾಕೆವೆರಸಾ ಪ್ರದೇಶಮನೆಯ್ದಿವರ್ಪಾಗಳ್

ಮೊದಲೊಳೆ ಕೆತ್ತಿದತ್ತು ಬಲಗಣ್ಣೆನಗೇನನೊಡರ್ಚಲಿರ್ದುದೋ
ಬಿದಿಯೆನುತುಂ ಭಯಂಬೆರಸು ಮುನ್ನಮೆ ಶಂಕಿಸುತಿರ್ದೆನೋವೋ ಮ
ತ್ತಿದು ಪೆಱತೇನೆನುತ್ತಮೆರ್ದೆ ಪವ್ವನೆ ಪಾಱಲದೊಂದು ಕೇಳಲಾ
ದುದು ಪುರುಷಪ್ರಲಾಪರುದಿತಸ್ವನಮಾ ಗಹನಾಂತರಾಳದೊಳ್            ೧೫೦

ವ|| ಅದಂತೆಂದೊಡೆ

ಉರಿದೆಂ ಬೆಂದನಿದೇನನಿಂತು ನೆಗೞ್ದೆ  ನಿಸ್ತ್ರಿಂಶ ಪುಷ್ಪಾಸ್ತ್ರ ನಿ
ಷ್ಠುರ ಪೇೞ್ ಪೊಲ್ಲದನೇನನಾಚರಿಸಿದಳ್ ನಿನ್ನೊಳ್ ಮಹಾಶ್ವೇತೆ ಭೀ
ಕರ ದೋಷಾಕರ ಕೂಡಿತೇ ಬಗೆದುದುಂ ಚಂಡಾಳ ತಂಗಾಳಿ ಪೇೞ್
ಪಿರಿದೊಂದುತ್ಸವಮಾಯ್ತೆ ಕೇಡನಱದೈ ಹಾ ಶ್ವೇತಕೇತುವ್ರತೀ     ೧೫೧

ತರಳಿಕೆಯು ಮುಗುಳ್ನಗೆಯನ್ನು ತೋರಿಸುತ್ತಾ ಹೀಗೆಂದಳು. ೧೪೮. “ಅಯ್ಯೊ! ದಡ್ಡೆ, ಚಂದ್ರನು ನಿನ್ನ ಇನಿಯನನ್ನು ಕರೆತರುತ್ತಾನೆಯೆ? ತಾನೆ ಮೊದಲು ನಿನ್ನನ್ನು ಕಂಡಕೂಡಲೆ ಕಾಮನ ಬಾಣಗಳಿಂದ ಕಳವಳಗೊಂಡವನಂತೆ ಆಡುತ್ತಿದ್ದಾನೆ, ನೋಡು! ವ|| ಅದು ಹೇಗೆಂದರೆ. ೧೪೯. ಪ್ರತಿಬಿಂಬದ ನೆಪದಿಂದ ನಿನ್ನ ಕೆನ್ನಗಳಿಗೆ ಮುತ್ತು ಕೊಡುತ್ತಾನೆ. ಸೊಂಟದ ಡಾಬಿನ ರತ್ನಪಂಕ್ತಿಯನ್ನು ಮುಟ್ಟುತ್ತಾನೆ. ಸುಂದರವಾದ ತೋರ ಮೊಲೆಗಳನ್ನು ಮೇಲೇರಿ ಬಂದು ಹಿಡಿಯುತ್ತಾನೆ. ಕಾಂತಿಯನ್ನು ಬೀರುತ್ತಿರುವ ತಳತಳಿಸುವ ಕಾಲುಗುರುಗಳಲ್ಲಿ ಪ್ರತಿಫಲಿಸಿರುವ ದೇಹವುಳ್ಳವನಾದುದರಿಂದ ನಿನ್ನ ಕಾಲುಗಳಿಗೆ ಬಿದ್ದು ಅವುಗಳನ್ನು ಬಿಡದೆ ಹಿಡಿದುಕೊಂಡಿದ್ದಾನೆ ಎಂಬಂತೆ ಕಾಣುತ್ತಿದ್ದಾನೆ. ಎಲೈ ನೈದಿಲೆಯಂತೆ ಕಣ್ಣುಳ್ಳವಳೆ, ಇವನ ಬಗೆ ನಿನಗಿನ್ನೂ ಗೊತ್ತಿಲ್ಲ! ವ|| ಅದಲ್ಲದೆ ವಿರಹಪೀಡೆಯಿಂದಾಗಿ ಶ್ರೀಗಂಧದಿಂದ ಲೇಪನ ಮಾಡಿಕೊಂಡಿರುವವನಂತೆ ಬಿಳುಪಿನಿಂದ ಕೂಡಿಕೊಂಡಿದ್ದಾನೆ. ಪ್ರತಿಬಿಂಬಿಸುವ ನೆಪದಿಂದ ಸಟಿಕಶಿಲಾತಲದಲ್ಲಿ ಮಲಗುತ್ತಾನೆ. ಮತ್ತು ನೈದಿಲೆಗೊಳಗಳಲ್ಲಿ ಮುಳುಗುತ್ತಾನೆ. ನೀರು ಜಿನುಗುತ್ತಿರುವ ಚಂದ್ರಕಾಂತದ ಹಾಸುಗಲ್ಲಿನ ಮೇಲೆ ಕೈಯಾಡಿಸುತ್ತಾನೆ. ಚಕ್ರವಾಕಪಕ್ಷಿಗಳನ್ನು ಬೇರ್ಪಡಿಸಿರುವ ತಾವರೆಬಳ್ಳಿಗಳ ಪೊದುರುಗಳನ್ನು ಇಷ್ಟವಿಲ್ಲದಿರುವುದರಿಂದ ದಾಟಿ ಹೋಗುತ್ತಾನೆ. ಹೀಗೆ ಹಲವು ಬಗೆಯ ಕೋಟಿಲೆಗಳನ್ನು ಅನುಭವಿಸುತ್ತಿದ್ದಾನೆ”. ಇವೇ ಮೊದಲಾದ ತತ್ಕಾಲೋಚಿತವಾದ ಮಾತುಗಳನ್ನಾಡುತ್ತ ಅವಳ ಜೊತೆಯಲ್ಲಿ ಆ ಸ್ಥಳಕ್ಕೆ ಬರುತ್ತಿರಲಾಗಿ, ಟಿ, ಕಾಮಜ್ವರಪೀಡಿತರಾದವರು ಮಾಡಿಕೊಳ್ಳುವ ಶೈತ್ಯೋಪಚಾರವು ಇಲ್ಲಿ ಚಂದ್ರನು ಮಾಡಿಕೊಳ್ಳುತ್ತಿರುವನೆಂದು ವರ್ಣಿತವಾಗಿದೇ. ೧೫೦. ನಾನು ಮೊದಲು ಮನೆಯನ್ನು ಬಿಟ್ಟು ಹೊರಟಾಗಲೆ ನನ್ನ ಬಲಗಣ್ಣು ಹಾರಿತು ಇದರಿಂದ ವಿ ನನಗೆ ಏನನ್ನು ಉಂಟುಮಾಡುತ್ತಾನೋ ಎಂದು ಮನಸ್ಸು ಮೊದಲೆ ಭಯದಿಂದ ಅಳುಕುತ್ತಲೆ ಇತ್ತು. ಅಷ್ಟರಲ್ಲಿ ಕಾಡಿನ ಮಧ್ಯದಲ್ಲಿ ಗಂಡಸು ಅಳುವ ಧ್ವನಿ ಕಿವಿಗೆ ಬಿತ್ತು. ಅಯ್ಯೋ ಗ್ರಹಚಾರವೆ, ಇದೇನು ಮತ್ತೆ ಬಂತಪ್ಪ! ಎಂದು ನನ್ನ ಎದೆ ತಟ್ಟನೆ ಹಾರಿದಂತೆ ಆಯಿತು. ವ|| ಅದೇನೆಂದರೆ ೧೫೧. ಅಯ್ಯೊ, ಉರಿದುಹೋದೆ! ಬೆಂದುಹೋದೆ! ಎಲ್ಲೋ ಘಾತುಕ, ಮನ್ಮಥ, ನೀನೇನು ಮಾಡಿಬಿಟ್ಟೆ? ಎಲೈ ಕ್ರೂರನೆ, ಪಾಪ ಆ ಮಹಾಶ್ವೇತೆ ನಿನಗೇನು ಅನ್ಯಾಯ ಮಾಡಿದ್ದಳು? ಭಯಂಕರನಾದ

ಶರಣಾರೊ ತಪಮೆ ಭುವನಾಂ
ತರದೊಳ್ ಕೈಕೊಳ್ವರಾರೊ ಧರ್ಮಮೆ ನಿನ್ನಂ
ಸುರಲೋಕಮೆ ಪಾೞiದೈ
ಸರಸ್ವತೀದೇವಿ ರಂಡೆಯಾದೌ ಸತ್ಯಂ         ೧೫೨

ಪರಿಚಯಮಿಲ್ಲ ಕಂಡಱಯೆಯೋ ಸಖ ತೊಟ್ಟೆನಲಿಂತು ಬಿಟ್ಟು ಪೋ
ಪರೆ ಕಠಿನಾತ್ಮನಾದೆ ನೆರವಾರೆನಗಿರ್ದಪರೆತ್ತವೋಪೆನೊ
ರ್ಬರೂಮೆನಗಾಸೆಯಿಲ್ಲ ದೆಸೆ ಪಾೞ್ಮಸಗಿರ್ಪುದಂಧನಾದೆನಾರ್
ಶರಣೆನಗೆನ್ನ ಬಾೞ್ಕೆಯೆ ನಿರರ್ಥಕಮೆಂದೆನುತಂ ಪಲುಂಬುತಂ    ೧೫೩

ಉಸಿರದೆ ನೀನಿರಲ್ ನುಡಿವೆನಾರೊಡನಾಟಮನಾಡುತಿರ್ಪೆ ನೀ
ಪುಸಿಮುಳಿಸೇಕೆ ಪೇೞ್ ಕೆಳೆಯ ನಿನ್ನಯ ಕೂರ್ಮೆಯದೆತ್ತವೋಯ್ತು ನೋ
ಯಿಸದಿನಿಸೆೞ್ದ್ದು ನೋಡಿ ನುಡಿಯೆಂದೆನಿತುಂ ತೆಱದಿಂ ಕಪಿಂಜಲಂ
ದೆಸೆದೆಸೆಗಂದು ಬಾಯ್ವಿಡುತಮಿರ್ದುದನಾಲಿಸಿದೆಂ ಮಹೀಪತೀ            ೧೫೪

ಅದನಾಂ ಕೇಳ್ದೆರ್ದೆಗೆಟ್ಟು ಮೆಯ್ಮಱುಗಿ ಸತ್ತಂತಾಗಿ ಕಣ್ಣೀರೂ ಪೂ
ರದಗುರ್ವಿಂ ದೆಸೆಗಾಣದಂದೆಡಪುತಂ ತಾಗುತ್ತಮೋರಂತೆ ಮೇ
ಲುದಳ್ ಗುಲ್ಮಲತಾಳಿಗಳ್ ತೊಡರಲೊರ್ವಂ ನೂಂಕಿಕೊಂಡೊಯ್ವ ಮಾ
ರ್ಗದೆ ಪೋದೆಂ ಬಳಿಕಾತನಿರ್ದೆಡೆಗೆ ಹಾಹಾಕ್ರಂದನಂಗೆಯ್ವುತಂ            ೧೫೫

ವ|| ಅಂತು ಯಥಾಶಕ್ತಿತ್ವರಿತಗತಿಯಿಂ ಪೋದೆನನ್ನೆಗಂ

ಕೊಳದ ತಡಿಯಲ್ಲಿ ಸೀರ್ಪನಿ
ಗಳ ತುಱುಗಲನುಗುೞ್ವ ಚಂದ್ರಕಾಂತದ ಶಿಲೆಯೊಳ್
ಪೊಳೆವೆಳದಳಿರ್ಗಳ ಬಳಗದ
ಕುಳಿರ್ವಲರ್ದಲರೆಸಳ ಪಸೆಯ ಮೇಲೊಱಗಿರ್ದಂ       ೧೫೬

ಪೊಳೆವಿಂದುಗಳ್ಕಿ ಬೆಂಗುಡೆ
ಮೊಳೆದುವು ಬೆನ್ನಿಂದಮೆರ್ದೆಗೆ ಕದಿರ್ದುಱುಗಲೆನಲ್
ತೊಳಗಿದುವು ಮದನಶಿಖಿ ವಿ
ಹ್ವಳಹೃದಯನ್ಯಸ್ತಹಸ್ತನಖದೀತಿಗಳ್            ೧೫೭

ಚಂದ್ರನೆ, ನಿನ್ನ ಇಷ್ಟಾರ್ಥ ನೆರವೇರಿತೆ? ಎಲೋ ಚಂಡಾಲ! ತಾಂಗಾಳಿ! ನಿನಗೆ ಈಗ ಬಹಳ ಆನಂದವಾಯಿತೋ, ಹೇಳು, ಅಯ್ಯೋ ಶ್ವೇತಕೇತುಮಹರ್ಷಿಯೆ! ಇಂಥ ವ್ಯಸನವನ್ನು ನೀನು ಕಾಣುವಂತಾಯಿತೆ? ೧೫೨. ತಪಸ್ಸೆ! ಇನ್ನು ಈ ಜಗತ್ತಿನಲ್ಲಿ ನಿನಗೆ ರಕ್ಷಕರಾರು? ಧರ್ಮವೆ, ಇನ್ನು ನಿನ್ನನ್ನು ಕೈ ಹಿಡಿಯುವವರು ಯಾರು? ದೇವಲೋಕವೆ! ಹಾಳಾಗಿ ಹೋದೆಯಲ್ಲ! ಸರಸ್ವತಿ! ಇನ್ನು ನೀನು ನಿಜವಾಗಿಯೂ ವಿಧವೆಯಾದೆ! ೧೫೩. ಗೆಳೆಯ, ನಾನು ಅಪರಿಚಿತನೆ? ನೀನು ನನ್ನನ್ನು ನೋಡಿಯೇ ಇಲ್ಲವೆ? ಹೀಗೆ ತಟ್ಟನೆ ನನ್ನನ್ನು ಬಿಟ್ಟು ಹೋಗಬಹುದೆ? ಬಹಳ ಕಠಿನ ಮನಸ್ಸಿನವನಾಗಿ ಬಿಟ್ಟೆಯಲ್ಲ? ನನಗಿನ್ನಾರು ಸಹಾಯಕರಿದ್ದಾರೆ? ನಾನು ಇನ್ನು ಎಲ್ಲಿಗೆ ಹೋಗಲಿ? ಯಾರ ಮೇಲೂ ನನಗೆ ಆಸಕ್ತಿಯಿಲ್ಲ. ನನಗೆ ದಿಕ್ಕೆಲ್ಲ ಶೂನ್ಯವಾಗಿ ಕಾಣುತ್ತಿದೆ. ಕಣ್ಣೇ ಕಾಣುವುದಿಲ್ಲ. ನನಗಿನ್ನಾರು ದಿಕ್ಕು. ನನ್ನ ಜೀವನವೇ ಹಾಳಾಯಿತು –  ಎಂದು ಹಲುಬುತ್ತಾ ೧೫೪. “ಗೆಳೆಯಾ, ನೀನು ಮಾತನಾಡದಿದ್ದರೆ ನಾನು ಇನ್ನು ಯಾರ ಸಂಗಡ ಮಾತನಾಡಲಿ? ನೀನು ಯಾರೊಡನೆ ಆಡುತ್ತಿರುವೆ? ನನ್ನ ಮೇಲೆ ಈ ಹುಸಿ ಮುನಿಸೇತಕ್ಕೆ? ಹೇಳು. ಪುಂಡರೀಕ! ನಿನ್ನ ಸ್ನೇಹ ಎಲ್ಲಿಹೋಯಿತು? ನನ್ನನ್ನು ನೋಯಿಸದೆ ಸ್ವಲ್ಪ ಎದ್ದು ನೋಡಿ ಮಾತಾಡು” ಎಲೈ ರಾಜನೆ, ಹೀಗೆ ಕಪಿಂಜಲನು ದಿಕ್ಕು ದಿಕ್ಕಿಗೆ ಬಾಯಿ ಬಿಡುತ್ತಿರುವುದನ್ನು ನಾನು ಕೇಳಿದೆನು. ೧೫೫. ಅದನ್ನು ನಾನು ಕೇಳಿ ಧೈರ್ಯಗೆಟ್ಟು ವ್ಯಸನಪಟ್ಟು ಅಲ್ಲೆ ಪ್ರಾಣಹೋದವಳಂತೆ ಆದೆನು. ಕಣ್ಣೀರಿನ ಪ್ರವಾಹವು ಅತ್ಯಕವಾಗಿ ಹರಿಯತೊಡಗಿದ್ದರಿಂದ ಕಣ್ಣು ಕಾಣದೆ ದಾರಿ ಗೊತ್ತಾಗುತ್ತಿರಲಿಲ್ಲ. ಹಾಗೆ ಎಡವುತ್ತ ದಾಟುತ್ತ ಒಂದೇ ಸಮನೆ ಮೇಲುದವು ಪೊದರು ಬಳ್ಳಿಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿರಲು ಅಯ್ಯೋ! ಅಯ್ಯೋ! ಎಂದು ಅರಚುತ್ತಾ, ಯಾರೋ ಒಬ್ಬರು ನೂಕುತ್ತಾ ಎಳೆದುಕೊಂಡು ಹೋಗುತ್ತಿರುವ ರೀತಿಯಿಂದ ಅವನಿದ್ದ ಸ್ಥಳಕ್ಕೆ ಹೋದೆನು. ವ|| ಹಾಗೆ ನನ್ನ ಶಕ್ತಿ ಮೀರಿದ ವೇಗದಿಂದ ಅಲ್ಲಿಗೆ ಹೋಗುವಷ್ಟರಲ್ಲಿ, ೧೫೬. ಕೊಳದ ದಡದಲ್ಲಿ ನೀರಿನ ತುಂತುರುಗಳನ್ನು ಸ್ರವಿಸುತ್ತಿರುವ ಚಂದ್ರಕಾಂತಶಿಲೆಯಲ್ಲಿ ಶೋಭಿಸುತ್ತಿರುವ ಚಿಗುರುಗಳ ಗುಂಪಿನಿಂದ ಕೂಡಿದ ತಂಪಾದ ಅರಳಿದ ಹೂವಿನ ದಳಗಳ ಹಾಸಿಗೆಯ ಮೇಲೆ ನನ್ನ ಇನಿಯನು ಮಲಗಿದ್ದನು ೧೫೭. ಅವನು ಕಾಮಾಗ್ನಿಯಿಂದ ಬೆಂದ ಎದೆಯ ಮೇಲೆ ತನ್ನ ಕೈಯನ್ನು ಇರಿಸಿಕೊಂಡಿದ್ದನು. ಅದರ ಉಗುರುಗಳ