ಪದೆದಾಂ ಬರುತ್ತಮಿರೆ ಮ
ತ್ಪದಶಬ್ದಮನಾಲಿಸುತ್ತಮಿರ್ದನೊ ತನ್ನೊಳ್
ಮದನಪರಿತಾಪಮಂ ಕೋ
ಪದೆ ಮೞಸೆ ಕಿಱದುಸುಖದೆ ಮದೊಱಗಿದನೋ         ೧೫೮

ಎನ್ನಿಂ ಪ್ರಿಯತರಮಪರಜ
ನಂ ನಿನಗಾದತ್ತು ಮತ್ತಮಿರ್ಪೆನೆ ಪೇೞಾ
ನಿನ್ನೆಂದು ಮುನಿದ ತೆಱದಿಂ
ಮುನ್ನಮೆ ಪೋದತ್ತು ಪುಂಡರೀಕನ ಜೀವಂ    ೧೫೯

ತನಗೆ ಮದನವ್ಯಥಾಯಾ
ಸನಬಂಧನವಸುಗಳೆಂದಿವಂ ತನ್ನಿಂ ತಾಂ
ತನುವಿಂದೆ ಬಿಟ್ಟು ನಿಶ್ಚೇ
ತನಸೌಖ್ಯಮನನುಭವಿಪ್ಪ ತೆಱದಿಂದಿರ್ದಂ    ೧೬೦

ವ|| ಅದಲ್ಲದೆಯುಂ

ಕಾಣುತ್ತೆ ಮದಾಗಮನ
ಪ್ರೀಣತ್ತ್ರಾಣಮನೆ ಮಚ್ಚುಗೊಟ್ಟವೊಲಿರ್ದಂ
ಜಾಣಂ ಪ್ರಾಣಪ್ರಿಯರ್ಗಾ
ಪ್ರಾಣಮನೊಲಿದೀವುದೆಂಬುದೊಂದಚ್ಚರಿಯೇ            ೧೬೧

ವ|| ಮತ್ತಮನಂಗರಚಿತ ಚಂದನಲಲಾಟಕಾತ್ರಿಪುಂಡ್ರನುಂ ಸರಸಬಿಸಸೂತ್ರ ಯಜ್ಞೋಪವೀತನುಂ ಅಂಸಾವಸಕ್ತಬಾಲಕದಳೀ ದಳೋತ್ತರೀಯನುಂ ಏಕಾವಳೀವಿಶಾಲಾಕ್ಷಮಾಲನುಂ ಅವಿರಳಕರ್ಪೂರಪರಾಗ ಭಸ್ಮಪಾಂಡುರನುಂ ಆಬದ್ಧ ಮೃಣಾಳರಕ್ಷಾಪ್ರತಿಸರನುಮಾಗಿ ಮನೋಭವವ್ರತವೇಷಮಂ ಕೈಗೊಂಡು ಮತ್ಸಮಾಗಮಮಂತ್ರಮಂ ಸಾಪಂತಿರ್ದನಂತುಮಲ್ಲದೆಯುಂ

ಸುರಿದುವು ಬಾಷ್ಪಮೆಯ್ದೆ ಪೆಱಗಿಂ ಸುರಿದಪ್ಪುದು ನೆತ್ತರೆಂಬಿನಂ
ಪರೆದಿರೆ ಕೆಂಪು ಕಂತುಶರಭೇದದ ವೇದನೆಗಳ್ಕಿದಂತೆ ಕ
ಣ್ಣರೆಮುಗುಳಿರ್ದುವಾಂ ಬೞಸಲಲ್ ನಡೆನೋಡಲಿಕಾರ್ತೆನಿಲ್ಲ ನಿ
ಷ್ಠುರೆ ತೊಲಗೆಂದಲಂನೊಳಕೊಂಡೞಲಿಂ ಮುಳಿದೀಕ್ಷಿಪಂದದಿಂ             ೧೬೨

ಕಾಂತಿಗಳು ಪ್ರಕಾಶಿಸುತ್ತಿರುವ ಚಂದ್ರನಿಗೆ ಹೆದರಿ ಬೆನ್ನು ತಿರುಗಿಸಲಾಗಿ, ಬೆನ್ನಿಂದ ತೂರಿ ಎದೆಗೆ ನಾಟಿ ಹೊರಕ್ಕೆ ಬಂದಿರುವ ಚಂದ್ರಕಿರಣಗಳ ಗುಂಪೋ ಎಂಬಂತೆ ಕಾಣುತ್ತಿದ್ದುವು. ೧೫೮. ನಾನು ಪ್ರೀತಿಸಿ ಬರುತ್ತಿರಲಾಗಿ ನನ್ನ ಕಾಲಿನ ಸಪ್ಪಳವನ್ನು ಕೇಳುತ್ತಿರುವನೋ ಎಂಬಂತೆಯೂ, ಮನ್ಮಥನ ಮೇಲೆ ಉಂಟಾದ ಕೋಪದಿಂದ ಸಂತಾಪವು ಸ್ವಲ್ಪ ಕಡಮೆಯಾಗಲಾಗಿ ತಾತ್ಕಾಲಿಕವಾಗಿ ಉಂಟಾದ ಪರವಶತೆಯಿಂದ ಸುಖವಾಗಿ ಮಲಗಿದ್ದಾನೋ ಎಂಬಂತೆಯೂ ಇದ್ದನು. ೧೫೯. “ನೀನು ಬೇರೊಬ್ಬರನ್ನು ನನಗಿಂತಲೂ ಹೆಚ್ಚಾಗಿ ಪ್ರೀತಿಸಿರುವೆ. ಆದ್ದರಿಂದ ನಾನಿನ್ನು ಇಲ್ಲಿ ಇರುತ್ತೇನೆಯೇ ಹೇಳು” ಎಂದು ಕೋಪ ಮಾಡಿಕೊಂಡು ಹೊರಟುಹೋದಂತೆ ಪುಂಡರೀಕನ ಪ್ರಾಣ ಶರೀರವನ್ನು ಬಿಟ್ಟು ಹೊರಟುಹೋಗಿತ್ತು. ೧೬೦ ಈ ಪ್ರಾಣಗಳು ಇದ್ದರೆ ನನಗೆ ಕಾಮಬಾಧೆಯಿಂದ ಆಯಾಸವನ್ನು ಉಂಟುಮಾಡುತ್ತವೆ. ಆದ್ದರಿಂದ ಈ ಬಂಧನವಿರಬಾರದು ಎಂದು ಭಾವಿಸಿ ಅವುಗಳನ್ನು ದೇಹದಿಂದ ಹೊರದೂಡಿ ತಾನು ನಿಶ್ಚಲಸಮಾಸೌಖ್ಯವನ್ನು ಅನುಭವಿಸುತ್ತಿರುವನೋ ಎಂಬಂತೆ ಕಾಣುತ್ತಿದ್ದನು. ವ|| ಅದಲ್ಲದೆ ೧೬೧. ನನ್ನನ್ನು ನೋಡುತ್ತಲೆ, ನಾನು ಬಂದದ್ದರಿಂದ ತನಗೆ ಬಹಳ ಪ್ರೀತಿಪಾತ್ರವಾದ ಪ್ರಾಣವನ್ನೇ ನನಗೆ ಒಲುಮೆಯ ಕೊಡುಗೆಯಾಗಿ ಕೊಟ್ಟವನಂತಿದ್ದನು. ಜಾಣನಾದವನು ತನ್ನ ಪ್ರಾಣಪ್ರಿಯರಿಗೆ ಪ್ರಾಣವನ್ನೆ ಪ್ರೀತಿದಾನವಾಗಿ ಕೊಡುವುದು ಆಶ್ಚರ್ಯವೇನೂ ಅಲ್ಲ. ವ|| ಮತ್ತು ಕಾಮಜ್ವರೋಪಶಮನಕ್ಕಾಗಿ ಹಣೆಯಲ್ಲಿ ಹಾಕಿಕೊಂಡಿರುವ ಶ್ರೀಗಂಧಲೇಪವೆಂಬ ವಿಭೂತಿಯ ಮೂರುಗೆರೆಯುಳ್ಳವನೂ, ಒದ್ದೆಯಾದ ತಾವರೆದಂಟಿನ ದಾರವೆಂಬ ಜನಿವಾರವುಳ್ಳವನೂ, ಹೆಗಲ ಮೇಲೆ ಹಾಕಿಕೊಂಡಿರುವ ಎಳೆಯ ಬಾಳೆಯೆಲೆಯೆಂಬ ಹೊದೆಯುವ ಪಂಚೆಯುಳ್ಳವನೂ, ನಾನು ಕೊಟ್ಟಿದ್ದ ಮುತ್ತಿನ ಸರವೆಂಬ ನೀಳವಾದ ಜಪಸರವುಳ್ಳವನೂ, ದಟ್ಟವಾದ ಕರ್ಪೂರ ಧೂಳಿಯೆಂಬ ಭಸ್ಮದಿಂದ ಬಿಳುಪಾದ ದೇಹವುಳ್ಳವನೂ, ತಂಪುಮಾಡಿಕೊಳ್ಳುವುದಕ್ಕಾಗಿ ಕೈಗೆ ಕಟ್ಟಿಕೊಂಡಿರುವ ತಾವರೆದಂಟೆಂಬ ರಕ್ಷಾಕಂಕಣವುಳ್ಳವನೂ ಆಗಿ ಕಾಮವ್ರತವನ್ನು ತಾಳಿರುವವನ ವೇಷವನ್ನು ಕೈಗೊಂಡು ನನ್ನ ಸಮಾಗಮವನ್ನು ಪಡೆಯುವುದಕ್ಕಾಗಿ ಮಂತ್ರವನ್ನು ಸಾಸುವವನಂತೆ ಇದ್ದನು. ಅಲ್ಲದೆ, ೧೬೨. ಒಂದೇ ಸಮನೆ ಕಣ್ಣೀರು ಸುರಿದ ಮೇಲೆ ಅದರ ಹಿಂದೆ ಇನ್ನೂ ರಕ್ತವು ಸುರಿಯುತ್ತಿದೆಯೋ ಎಂಬಂತೆ

ನಸುದೆ ದಿರೆ ಬಾಯ್ದೆ ಬಂ
ದಸುವಂ ಕೊಳಲೆಂದು ಪೊಕ್ಕ ರಜನಿಕರಾಂಶು
ಪ್ರಸರಂ ಪೊಱಮಟ್ಟಪುದೆನೆ
ದೆಸೆಯಂ ಧವಳಿಸಿದುವೆಸೆವ ದಂತದ್ಯುತಿಗಳ್           ೧೬೩

ಬಳಸಿ ನಿಜಕಿರಣಪಾಶದೆ
ಮುೞುಗಿಸಿ ಲೋಕಾಂತರಕ್ಕೆ ಚಂದ್ರಂ ಪಿಡಿದೇ
ನೆೞೆದಪನೊ ಪೇೞಮೆನೆ ಕ
ಣ್ಗೊಳಿಸಿದುದು ಮೃಣಾಳನಾಳವಲಯಂ ಕೊರಲೊಳ್ ೧೬೪

ಪ್ರಾಣಸಮೆ ಹೃದಯದಿಂ ಮ
ತ್ಪ್ರಾಣದೊಳೊಡಗೂಡಿ ಪೋಗಲಾಗೆಂದೆನ್ನಂ
ಮಾಣಿಪವೋಲ್ ಕಯ್ ಸುಮನೋ
ಬಾಣಾಗ್ನಿಸ್ಪುರಿತಹೃದಯದೊಳ್ ಸೊಗಯಿಸುಗುಂ      ೧೬೫

ಒಸರ್ದಪುದಿದಲ್ತೆ ಚಂದನ
ರಸಮೆನೆ ಮಿಂಚುಗುರ ಮಿಸುಪ ನುಣ್ಬೆಳಗೆನಸುಂ
ಪಸರಿಸೆ ಮರಲ್ದ ಕರಮೊಂ
ದೆಸೆದುದು ಚಂದ್ರಾತಪಕ್ಕೆ ಮಯೊಡ್ಡಿದವೋಲ್          ೧೬೬

ಅಸು ಪೋದುದೀಗಳೆಂತೆ
ನ್ನಸಹಾಯನನುೞದೆನುತ್ತೆ ತನ್ಮಾರ್ಗಮನೀ
ಕ್ಷಿಸುವಂತೆ ನಿಮಿರ್ದ ಕೊರಲಿಂ
ದೆಸೆದುದು ಶಶಿಕಾಂತಮಣಿಕಮಂಡಲು ಕೆಲದೊಳ್     ೧೬೭

ಫೞಲನೆ ಬರ್ಪೆನ್ನಂ ಕಂ
ಡೞಲಿರ್ಮಡಿಯಾಗೆ ಪತ್ತಿ ಕೆಳೆಯನ ಕೊರಲಂ
ಪೞವಿಸಿ ಕಪಿಂಜಳಂ ಬಾ
ಯೞದಬ್ರಹ್ಮಣ್ಯಮೆಂದು ಬಿಡೆ ಪುಯ್ಯಲ್ಚಲ್    ೧೬೮

ಕಣ್ಣಿನಲ್ಲಿ ಕೆಂಪು ಆವರಿಸಿತ್ತು, ಮನ್ಮಥನ ಬಾಣದ ಏಟಿನ ನೋವಿಗೆ ಹೆದರಿದಂತೆ ಕಣ್ಣು ಅರ್ಧ ಮುಚ್ಚಿದ್ದುವು. ಇದರಿಂದ ನಾನು ಹತ್ತಿರಕ್ಕೆ ಹೋಗಲು “ಎಲೌ ಕ್ರೂರಳೆ, (ನಾನು ನಿನಗಾಗಿ ಸಂಕಟಪಡುತ್ತಿದ್ದರೂ) ಒಂದು ಸಲ ಬಂದು ನೋಡಿಕೊಂಡು ಹೋಗುವುದಕ್ಕೂ ನಿನಗೆ ಆಗಲಿಲ್ಲ. ಈಗ ಬರಬೇಡ ಹೋಗು!’ ಎಂದು ಪ್ರಣಯಪೂರ್ವಕವಾದ ದುಖದಿಂದ ಕೋಪಿಸಿಕೊಂಡು ನನ್ನನ್ನು ನೋಡುತ್ತಿರುವಂತೆ ಕಾಣುತ್ತಿದ್ದನು. ೧೬೩. ಅವನ ತುಟಿಗಳು ಸ್ವಲ್ಪ ತೆರೆದಿರಲಾಗಿ ಅವನ ಪ್ರಾಣವನ್ನು ತೆಗೆದುಕೊಂಡು ಹೋಗಬೇಕೆಂದು ಬಂದು ಒಳಹೊಕ್ಕ ಚಂದ್ರಕಿರಣಜಾಲವು ಹೊರಕ್ಕೆ ಬರುತ್ತಿದೆಯೋ ಎಂಬಂತೆ ಶೋಭಿಸುವ ಹಲ್ಲಿನ ಕಾಂತಿಗಳು ದಿಕ್ಕುಗಳನ್ನು ಬೆಳ್ಳಗೆ ಮಾಡುತ್ತಿದ್ದುವು. ೧೬೪. ಅವನ ಕೊರಳಿನಲ್ಲಿದ್ದ ವಲಯಾಕಾರವಾದ ತಾವರೆದಂಟನ್ನು ನೋಡಿದರೆ ಚಂದ್ರನು ತನ್ನ ಕಿರಣವೆಂಬ ಹಗ್ಗದಿಂದ ಕತ್ತಿಗೆ ಉರುಲು ಹಾಕಿ ಪರಲೋಕಕ್ಕೆ ಹಿಡಿದು ಎಳೆದುಕೊಂಡು ಹೋಗುತ್ತಿರುವನೋ ಎಂಬಂತೆ ಕಾಣುತ್ತಿತ್ತು. ೧೬೫. ಮನ್ಮಥನ ಬಾಣಾಗ್ನಿಯು ವ್ಯಾಪಿಸಿಕೊಂಡಿರುವ ಎದೆಯ ಮೇಲೆ ಅವನು ತನ್ನ ಕೈಯನ್ನು ಇಟ್ಟುಕೊಂಡಿದ್ದನು. ಅದು ‘ಪ್ರಾಣಕ್ಕೆ ಸಮಾನಳಾದ ಪ್ರಿಯೆ, ನನ್ನ ಹೃದಯದಲ್ಲಿ ನೆಲೆಸಿರುವ ನೀನು ಈ ಪ್ರಾಣದ ಜೊತೆಯಲ್ಲಿ ಹೋಗಿಬಿಡಬೇಡ. ಇಲ್ಲೇ ಇರು!’ ಎಂದು ನನ್ನನ್ನು ತಡೆಯುವಂತೆ ಸೊಗಸಾಗಿ ಕಾಣುತ್ತಿತ್ತು. ೧೬೬. ಅವನು ಮತ್ತೊಂದು ಕೈಯನ್ನು ಮಗುಚಿಟ್ಟುಕೊಂಡಿದ್ದನು. ಜಿನುಗುತ್ತಿದೆಯೊ ಎಂಬಂತೆ ಮಿಂಚುತ್ತಿರುವ ಅದರ ಉಗುರುಗಳ ಹೊಳೆಯುವ ನುಣುಪಾದ ಕಾಂತಿಯು ಸುತ್ತಲೂ ಹರಡಿತ್ತು. ಅದು ಬೆಳದಿಂಗಳಿಗೆ ಮರೆಯೊಡ್ಡಿದಂತೆ ಶೋಭಿಸುತ್ತಿತ್ತು. ೧೬೭. ಅವನ ಪಕ್ಕದಲ್ಲಿ ನೀಳವಾದ ಕಂಠವುಳ್ಳ ಚಂದ್ರಕಾಂತಶಿಲೆಯ ಕಮಂಡಲು ಇದ್ದಿತು. ಅದು ನನ್ನ ಜೊತೆಗಾರನಾಗಿದ್ದ ಇವನನ್ನು ಬಿಟ್ಟು ಪ್ರಾಣವು ಈಗ ಹೇಗೆ ಹೋಗುತ್ತದೆ? ಎಂಬುದಾಗಿ ಅದು ಹೋಗುವ ದಾರಿಯನ್ನು ಕತ್ತೆತ್ತಿ ನೋಡುತ್ತಿರುವಂತೆ ಕಾಣುತ್ತಿತ್ತು. ೧೬೮. ತಟ್ಟನೆಬಂದ ನನ್ನನ್ನು ನೋಡಿ ದುಖವು ಇಮ್ಮಡಿಯಾಗಲು, ಗೆಳೆಯನ ಕೊರಳನ್ನು ತಬ್ಬಿಕೊಂಡು ಪ್ರಲಾಪಿಸುತ್ತಾ ಕಪಿಂಜಲನು ಅಯ್ಯೊ! ಅನ್ಯಾಯ! ಎಂದು ಬಹಳವಾಗಿ ಗೋಳಾಡಲು, (ಅಬ್ರಹ್ಮಣ್ಯಂ = ಈ

ವ|| ಆಗಳ್ ತತ್‌ಕ್ಷಣ ವಿಗತಜೀವಿತನಾಗಿರ್ದ ನಿಷ್ಪಾಪನೆನಿಪ ಮಹಾನುಭಾವನಂ ಮಹಾಹತಕಿಯೆನಿಪ ಮಂದಭಾಗ್ಯೆಯೆಂ ಭೋಂಕನೆ ಕಂಡು ಮೂರ್ಛೆವೋಗಿ ಬಿೞ್ದು ಪಾತಾಳ ತಲವಿವರಮಂ ಪೊಕ್ಕಂತೆ ಮಹಾಂಧಕಾರಂ ಕವಿಯೆ

ಏನಾದೆನೆಲ್ಲಿ ಬೀೞ್ದೆನ
ದೇನಂ ಬಾಯೞದು ಪೞವಿಸುತ್ತಿರ್ದೆನೊ ಪೇ
ೞೇನನೊಡರ್ಚಿದೆನೆತ್ತಣಿ
ನಾನಾರ್ಗೆಂದೇನುಮಱಯೆನಂತಾಕ್ಷಣದೊಳ್            ೧೬೯

ಪಲವು ಭವಂಗಳೊಳ್ ನೆರಪಿದೆನ್ನಯ ಪಾಪಮೊ ಮೇರೆಗೆಟ್ಟ ಕೋ
ಟಲೆಗಳನುಣ್ಬೆನೆಂಬೞಲ ಸೈರಣೆಯೋ ಕಡುಪಿಂ ತಗುಳ್ದು ನ
ಟ್ಟಲೆವಸಮಾಸ್ತ್ರವಕ್ರತೆಯೊ ದೈವಿಕಮೋ ನಿನಗೇನನೆಂಬೆನ
ಗ್ಗಲಿಸಿಯೆ ನಿಂದುದೆಂತುಮಸು ಪೋಗದೆ ಕಲ್ಲೆರ್ದೆಯೆಂ ಮಹೀಪತೀ        ೧೭೦

ಇನಿಸಂ ಮೂರ್ಛೆಯಿನೆೞ್ಚ
ತ್ತನಂತರಂ ದೀರ್ಘಶೋಕವುಂ ಬಿಡೆಸುಡೆ ಕಿ
ಚ್ಚಿನ ಕಿಡಿಯಂದದೆ ನೆಲದೊಳ
ಗಿನಿಸುಂ ಮಿಡುಮಿಡನೆ ಮಿಡುಕುವೆನ್ನಂ ಕಂಡೆಂ         ೧೭೧

ವ|| ಅಂತೆನ್ನ ಸಾವಿಲ್ಲದುದುಮಾತನ ಸಾವುಮದವೞಲನೊದವಿಸೆ ಬಾಯೞದು ಮೆಯ್ಯಱಯದವಳೆಂ

ಪರಿಹರಿಸಿ ಪೋಗಲಕ್ಕುಮೆ
ಕರುಣಿಸದೊರ್ವಳನನಾಥೆಯಂ ಭಕ್ತೆಯನಾ
ತುರೆಯಂ ದುಖತೆಯಂ ಸ್ಮರ
ಪರಿಭೂತೆಯನನನ್ಯಗತಿಕೆಯಂ ಬಾಲಕಿಯಂ             ೧೭೨

ತರಳಿಕೆ ಸಕ್ಕಿಯಲ್ತೆ ಬೆಸಗೊಳ್ ಯುಗಕೋಟಿವೊಲಾದುದಾಗಳಾ
ವಿರಹದೆ ಬೆಂದಿವಳ್ಗೆ ಪೆಗಲೆಂಬುದನೀ ಮುಳಿಸೇಕೆ ನಿನ್ನ ತೊ
ಳ್ತಿರೊಳಿನಿತೇಕೆ ಭಕ್ತಜನವತ್ಸಲ ನಿರ್ದಯನಾದೆ ನಾಥ ನೀಂ
ಕರುಣದಿನೊರ್ಮೆ ಕಣ್ದೆದು ತೀರ್ಚು ಮದೀಯ ಮನೋರಥಂಗಳಂ          ೧೭೩

ಶಬ್ದವನ್ನು ವಿಪತ್ಕಾಲದಲ್ಲಿ ಬಳಸುತ್ತಾರೆ. ಇವನು ಕೊಲ್ಲಲ್ಪಡತಕ್ಕವನಲ್ಲ ಎಂದು ಅರ್ಥ). ವ|| ಆಗ ಆಗತಾನೆ ಪ್ರಾಣಹೋಗಿದ್ದ, ಪಾಪರಹಿತನಾದ ಆ ಮಹಾನುಭಾವನನ್ನು ಮಹಾಘಾತಕಿಯಾದ ದುರದೃಷ್ಟವಂತಳಾದ ನಾನು ತಟ್ಟನೆ ಕಡು ಮೂರ್ಛಿತಳಾಗಿ ಬಿದ್ದುಬಿಟ್ಟೆನು. ಆಗ ನನಗೆ ಪಾತಾಳದ ಗುಹೆಯನ್ನು ಹೊಕ್ಕಂತೆ ಕಗ್ಗತ್ತಲೆ ಕವಿಯಿತು. ೧೬೯. ನಾನು ಏನಾದೆ? ಎಲ್ಲಿ ಬಿದ್ದೆ? ಬಾಯಿ ಸೋಲುವಂತೆ ಏನೇನು ಪ್ರಲಾಪಿಸಿದೆ? ಏನೇನು ಮಾಡಿದೆ? ನಾನು ಎಲ್ಲಿಂದ ಬಂದೆ? ಯಾರ ಮಗಳು? ಎಂಬುದಾವುದರ ಅರಿವೂ ನನಗೆ ಉಳಿಯಲಿಲ್ಲ. ೧೭೦. ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿದ ಪಾಪದಿಂದಲೋ, ಈ ನನ್ನ ಶರೀರಕ್ಕೆ ಎಲ್ಲೇಮೀರಿದ ಕಷ್ಟಗಳನ್ನು ಅನುಭವಿಸುವಷ್ಟು ಸಹನೆಯಿದ್ದುದರಿಂದಲೋ, ಜನರಿಗೆ ಗಂಟುಬಿದ್ದು ಒಂದೇಸಮನೆ ವಿಪರೀತವಾಗಿ ಕ್ರೂರತನದಿಂದ ಹಿಂಸಿಸುವ ಮನ್ಮಥನ ವಕ್ರಸ್ವಭಾವದಿಂದಲೊ, ನನ್ನ ದುರ್ದೈವದಿಂದಲೋ, ನಾನು ಏನು ಹೇಳಲಿ! ಎಲೈ ರಾಜನೆ, ಆಗ ನನ್ನ ಪ್ರಾಣವು ಹೋಗದೆ ಶರೀರದಲ್ಲೆ ಸ್ಥಿರವಾಗಿ ನಿಂತುಬಿಟ್ಟಿತು, ನಾನೊಬ್ಬಳು ಕಲ್ಲೆದೆಯವಳು. ೧೭೧ ಬಹಳ ಹೊತ್ತು ಮೂರ್ಛೆಗೊಂಡಿದ್ದು ಎಚ್ಚೆತ್ತು, ಬಳಿಕ ಈ ದೀರ್ಘಶೋಕವು ವಿಶೇಷವಾಗಿ ದಹಿಸುತ್ತಿರಲು ಬೆಂಕಿಯ ಕೆಂಡಂತಿರುವ ನೆಲದಲ್ಲಿ ಬಿದ್ದು ಬಹಳವಾಗಿ ಮಿಲಮಿಲನೆ ಒದ್ದಾಡುತ್ತಿರುವ ನನ್ನನ್ನು ನಾನೇ ನೋಡಿದೆನು. ವ|| ಹಾಗೆ ನಾನು ಸಾಯದಿರುವುದೂ ಅವನು ಸತ್ತುಹೋಗಿರುವುದೂ ದುಖವನ್ನುಂಟು ಮಾಡಲು ರೋದಿಸುತ್ತಾ ಶರೀರದ ಮೇಲೆ ಪ್ರeಯಿಲ್ಲದವಳಾಗಿ, ೧೭೨. “ಅಯ್ಯೋ! ನನ್ನ ಮೇಲೆ ದಯೆಯಿಡದೆ ಅನಾಥಳೂ, ನಿನ್ನಲ್ಲೆ ನೆಟ್ಟ ಮನಸ್ಸುಳ್ಳವಳೂ, ನಿನ್ನನ್ನೇ ಹಂಬಲಿಸಿ ತವಕಪಡುತ್ತಿರುವವಳೂ, ದುಖಾಕ್ರಾಂತಳೂ, ಮನ್ಮಥನಿಂದ ಪೀಡಿಸಲ್ಪಟ್ಟವಳೂ, ಬೇರೆ ಯಾವ ದಿಕ್ಕೂ ಇಲ್ಲದವಳೂ, ಬಾಲಕಿಯೂ ಅದ ನನ್ನನ್ನು ಒಬ್ಬಂಟಿಗಳನ್ನಾಗಿ ಮಾಡಿ ಬಿಟ್ಟು ಹೋಗಬಹುದೆ? ೧೭೩. ನಾಥ! ಈ ತರಳಿಕೆಯೇ ಸಾಕ್ಷಿಯಾಗಿದ್ದಾಳೆ. ಅವಳನ್ನು ಕೇಳು. ನಿನ್ನ ವಿರಹದಿಂದ ಬೆಂದುಹೋದ ನನಗೆ ಕಳೆದ ಇಂದಿನ ಹಗಲು ಕೋಟಿ ಯುಗಗಳಂತೆ ಆಗಿಬಿಟ್ಟಿತು. ನಿನ್ನ ಚರಣದಾಸಿಯಾದ ನನ್ನ ಮೇಲೆ ಇಷ್ಟೊಂದು ಕೋಪವೇಕೆ? ಭಕ್ತಜನವತ್ಸಲನೆ, ನಿರ್ದಯನಾಗಿಬಿಟ್ಟೆಯಲ್ಲ!

ಕರುಣಿಸು ದೈವಮೆ ಪಾಲಿಸು
ಹರಾದ್ರಿ ರಕ್ಷಿಸೆಲೆ ರಾತ್ರಿ ಶರಣಾಗು ಸರೋ
ವರಮೆ ವನದೇವಿಯರಿರಾ
ನೆರೆದೆಲ್ಲರುಮೆನಗೆ ಪುರುಷಭಿಕ್ಷಮನಿಕ್ಕಿಂ       ೧೭೪

ಆವ ತೆಱದಿಂದಮಾರುಂ
ಕಾವರುಮಂ ಕಂಡೆನಿಲ್ಲ ನಾಂ ಬರ್ಪಿನಮೆ
ಕ್ಕಾವಳಿ ನೀನುಂ ವಲ್ಲಭ
ಜೀವಮನೇನಿನಿಸು ಪಿಡಿಯಲಾರ್ತೆಯುಮಿಲ್ಲಂ           ೧೭೫

ವ|| ಎಂದು ಮಾಣದ ಮತ್ತಮೀತನನೆತ್ತಮೇೞ್ಕುಮೆಂದು ಕಪಿಂಜಲಮಹಾಮುನಿಯಡಿಯೊಳಡಿಗಡಿಗೆ ಪೊರಳ್ದು ಮದವೞಲೊದವೆ ತರಳಿಕೆಯನಪ್ಪಿ ಪಲತೆಱದೆ ಪೞವಿಸಿ ಪಲುಂಬಿ ಪಂಬಲಿಸಿಯುಂ ಆ ಮನೋಹರನ ಮಂದೈಸಿ ನಿಂದ ಚಂದನದಣ್ಪಿನಿಂ ಪಗಿಲ್ತು ಪತ್ತಿ ಬೆಳ್ಕರಿಸಿ ರಂಜಿಸುವ ಕೆಂಜೆಡೆಯ ಮೊದಲಿಂ ಬೆಡಂಗುವಡೆದು ಮಿಱುಪ ಪನೊಸಲೊಳಂ ಕವಿವ ಜಡೆಯ ತೊಂಗಲಿಂ ಸಂಗಳಿಸಿ ಬೆಡಂಗನೊಳಗೊಂಡ ಗಂಡಮಂಡಲಂಗಳೊಳಂ ಕೋಮಲಮೃಣಾಳೋತ್ತಂಸಿತಂಗಳಪ್ಪಂಸದೇಶಂಗಳೊಳಂ ಮಲಯಜರಸಲುಳಿತ ನಳಿನೀದಳಾವಕುಂಠಿತಮಾದ ಮೆಲ್ಲೆರ್ದೆಯೊಳಮೋರೊರ್ಮೆ ಕಳವಳಿಸಿ ಕರತಳದಿನೆಳವಿಯುಂ ಪುಂಡರೀಕನ ಪಕ್ಕದಿಂ ತೆರಳದೆಯುಂ ನಿಷ್ಠರುಣಿಯಾದೆಯೆಂದೋರೊರ್ಮೆ ಸಂಭ್ರಮದಿನುಪಾಲಂಭನಂ ಮಾಡಿಯುಂ ಕೊರಲಂ ತೞ್ಕೈಸಿಯುಂ ಬಿಡದಳ ವಿಲ್ಲದೆಡೆಯುಡುಗ ದೞ್ತುಮೆಂದುಮನುಪದಿಷ್ಟಂಗಳುಮದೃಷ್ಟಪೂರ್ವಂಗಳುಮತಿಕೃಪಣಂಗಳುಮಪ್ಪ ಚಾಟುಸಹಸ್ರಂ ಗಳೊದವೆ ಕಣ್ಣೀರ ಪೂರದಿಂ ತೇಂಕಾಡುತ್ತಮಶ್ರುಪ್ರವಾಹಜನ್ಮಭೂಮಿಯುಂ ಪ್ರಲಾಪಶಿಖರ ಸಹಸ್ರಂಭೂತೆಯುಂ ದುಸ್ಸಹದುಖಪ್ರಸೂತೆಯುಮಾದೆನೆಂದಾ ತ್ಮೀಯವೃತ್ತಾಂತ ಮನಾತಂಗೆ ನಿವೇದಿಸುತ್ತಮಿರ್ಪುದುಂ

ಪಿಂತಾದ ದುಸ್ಸಹಾವ
ಸ್ಥಾರತರ ಸಂತತಿಯನಾಗಳನುಭವಿಸುತಮಿ
ರ್ಪಂತಿರ್ದಳ ಚೈತನ್ಯಮ
ನಂತಾಗಳೆ ಹರಿಯಿಸಿತ್ತು ಮೂರ್ಛಾವೇಗಂ    ೧೭೬

ವ|| ಅಂತು ಮೂರ್ಛೆವೋಗಿ ಬೀೞ್ವುದುಂ

ನೀನು ಕರುಣವಿಟ್ಟು ಒಂದು ಸಲ ಕಣ್ಣುಬಿಟ್ಟು ನನ್ನ ಇಷ್ಟಾರ್ಥವನ್ನು ನೆರವೇರಿಸು. ೧೭೪. ವಿಯೇ, ನನ್ನ ಮೇಲೆ ದಯವಿಡು. ಕೈಲಾಸಪರ್ವತವೆ, ನನ್ನನ್ನು ಕಾಪಾಡು. ಎಲೈ ರಾತ್ರಿಯೆ, ನನಗೆ ರಕ್ಷಕಳಾಗು, ಎಲೈ ಅಚ್ಛೋದ ಸರೋವರವೇ, ಎಲೈ ವನದೇವತೆಯರಿರಾ, ನೀವೆಲ್ಲರೂ ಕೂಡಿ ನನ್ನ ಗಂಡನನ್ನು ನನಗೆ ದಾನಮಾಡಿ (ಇನಿಯನನ್ನು ಬದುಕಿಸಿಕೊಡಿ). ೧೭೫. ನಾನು ಬರುವವರೆಗೆ ಯಾವ ರೀತಿಯಿಂದಲೂ ಯಾರೂ ಅವನನ್ನು ಬದುಕಿಸಲಿಲ್ಲ. ಏಕಾವಳಿಯೇ, ನೀನಾದರೂ ನಾನು ಬರುವವರೆಗೆ ಇನಿಯನ ಪ್ರಾಣವನ್ನು ಸ್ವಲ್ಪ ಕಾಲ ಹಿಡಿದು ನಿಲ್ಲಿಸಲಾರದೆ ಹೋದೆಯಲ್ಲ!” ವ|| ಎಂದು ಬಿಡದೆ ಮತ್ತೂ ಇವನನ್ನು ಬದುಕಿಸಿ ಎಂದು ಕಪಿಂಜಲಮಹರ್ಷಿಗಳ ಕಾಲುಗಳ ಮೇಲೆ ಮತ್ತೆ ಮತ್ತೆ ಹೊರಳಾಡುತ್ತಲೂ, ದುಖವುಂಟಾಗಲು ತರಳಿಕೆಯನ್ನು ತಬ್ಬಿಕೊಂಡು ಹಲವು ಬಗೆಯಾಗಿ ಅತ್ತು ಹಲುಬಿ ಹಂಬಲಿಸಿ, ದಟ್ಟವಾಗಿ ಬೆಳೆದಿರುವ ಹಾಗೂ ಗಂಧದ ಲೇಪನದಿಂದ ಗಾಢವಾಗಿ ಅಂಟಿಕೊಂಡು ಶುಭ್ರವಾಗಿ ಕೆಂಜೆಡೆಯ ಬುಡದಿಂದ ಬೆಡಗನ್ನು ಹೊಂದಿ ಶೋಭಿಸುವ ಚಂದ್ರನಂದದ ಹಣೆಯ ಮೇಲೂ, ಆವರಿಸಿಕೊಂಡಿರುವ ಜಡೆಗಳ ಗುಂಪಿನಿಂದ ಕೂಡಿಕೊಂಡು ಸೊಗಸಾಗಿರುವ ಕೆನ್ನೆಗಳ ಮೇಲೂ, ಶೈತ್ಯೋಪಚಾರಕ್ಕಾಗಿ ಇಟ್ಟಿರುವ ಮೃದುವಾದ ತಾವರೆಯ ದಂಟಿನಿಂದ ಕೂಡಿಕೊಂಡಿರುವ ತೋಳುಗಳ ಮೇಲೂ, ಗಂಧದ ದ್ರವದಿಂದ ಮಿಶ್ರಿತವಾದ ಮತ್ತು ತಾವರೆಯ ಎಲೆಗಳನ್ನು ಹೊದಿಸಿರುವ ಮೃದುವಾದ ಎದೆಯ ಮೇಲೂ, ಒಮ್ಮೊಮ್ಮೆ ಕಳವಳದಿಂದ ಕೈಯಾಡಿಸುತ್ತಾ ಆ ಪುಂಡರೀಕನ ಪಕ್ಕದಿಂದ ಸರಿಯದೆಯೂ, ಒಮ್ಮೊಮ್ಮೆ ಕನಿಕರವೇ ಇಲ್ಲದವನಾಗಿ ಬಿಟ್ಟೆಯಲ್ಲಾ! ಎಂದು ಸಂಭ್ರಮದಿಂದ ತೆಗಳುತ್ತಾ ಕೊರಳನ್ನು ತಬ್ಬಿಕೊಳ್ಳುತ್ತಲೂ, ಬಿಡದೆ ಶಕ್ತಿಗುಂದಿ ಅವಿಚ್ಛಿನ್ನವಾಗಿ ಅಳುತ್ತಲೂ ಯಾವಾಗಲೂ ಯಾರೂ ಹೇಳಿಕೊಡದಿರುವ, ಹಿಂದೆಂದೂ ಕಂಡರಿಯದ ಬಹಳದೈನ್ಯದಿಂದ ಕೂಡಿದ ಸಾವಿರಾರು ಪ್ರಿಯವಚನಗಳು ಬಾಯಿಂದ ಹೊರಡುತ್ತಿರಲಾಗಿ ಕಣ್ಣೀರಿನ ಪ್ರವಾಹದಲ್ಲಿ ತೇಲಾಡುತ್ತಲೂ, ಕಣ್ಣೀರಿನ ಪ್ರವಾಹಕ್ಕೆ ಜನ್ಮಭೂಮಿಯಾಗಿಯೂ ಪ್ರಲಾಪಗಳ ಸಾವಿರಾರು ಶಿಖರಗಳಿಗೆಉತ್ಪತ್ತಿಸ್ಥಾನಗಳಾಗಿಯೂ, ಸಹಿಸಲಸಾಧ್ಯವಾದ ದುಖಗಳನ್ನು ಸೃಷ್ಟಿಮಾಡುವವಳಾಗಿಯೂ ಆದೆನು”. ಎಂದು ತನ್ನ ವೃತ್ತಾಂತವನ್ನು ಅವನಿಗೆ ಹೇಳುತ್ತಿರಲಾಗಿ ೧೭೬. ಹಿಂದೆ ಅನುಭವಿಸಿದ ಸಹಿಸಲಸಾಧ್ಯವಾಗಿದ್ದ ಆ ದುರವಸ್ಥ್ಥೆಯ ಪರಂಪರೆಯನ್ನು ಈಗಲೂ ಅನುಭವಿಸುತ್ತಿರುವಳೋ ಎಂಬಂತೆ ಅವಳ ಚೈತನ್ಯವನ್ನು ಮಿಗಿಲಾದ ಮೂರ್ಛೆಯು ಹಾರಿಸಿಬಿಟ್ಟಿತು. (ಅವಳು ಮೂರ್ಛೆಯಿಂದ ಎಚ್ಚರತಪ್ಪಿದಳು). ವ|| ಹಾಗೆ ಮೂರ್ಛೆ ಹೋಗಿ ಬೀಳಲಾಗಿ

ಒದವಿದ ತಲ್ಲಣಂಬೆರಸು ಚೆಚ್ಚರದಿಂ ಪಿಡಿದೆತ್ತಿ ಶಂಕೆಯಿಂ
ಸುದತಿಯ ಪಾಂಗಿದೇನೆನುತಮಾಕೆಯ ಕಣ್ಮಲರಿಂದಮುಣ್ಮಿ ಮಾ
ಣದೆ ಸುರಿಯುತ್ತಮಿರ್ಪ ಜಲಧಾರೆಗಳಿಂದಮೆ ನಾಂದದೊಂದು ಮೇ
ಲುದಱ ಸೆಱಂಗಿನಿಂ ನಯದೆ ಬೀಸಿದನಾ ಮನುಜೇಂದ್ರಚಂದ್ರಮಂ         ೧೭೭

ವ|| ಅಂತು ಬೀಸಿ ಮೂರ್ಛೆಯಿಂದೆಚ್ಚಱಸಿ

ಇನಿವಿರಿದೊಂದವಸ್ಥೆಯುಮನೆಯ್ದಿಸಿದೆಂ ಬೆಸಗೊಂಡ ಪಾಪಕ
ರ್ಮನೆನದಱಂದಮೀ ಕಥೆಯೆ ಮಾಣ್ಗಿದು ಕೇಳಲಸಹ್ಯಮೆಂಬುದೇಂ
ಮನಕತಿದುಸ್ಸಹಂಗಳೆನಿಸಿರ್ದ ಸುಹೃಜ್ಜನದುಖಸಂಕುಲಂ
ನೆನೆದೊಡಮಂತೆ ಕೇಳ್ದೊಡೆ ನವವ್ಯಥೆಯಂ ನೆಮಾಡದಿರ್ಕುಮೇ            ೧೭೮

ವ|| ಅದಲ್ಲದೆಯುಂ ಮತ್ತಮಾ ಕಾಂತೆಗಿಂತೆಂದಂ

ಎಂತಾನುಂ ನಿಲೆ ಪಿಡಿದಸು
ಸಂತತಿಯಂ ಸ್ಮರಣಶೋಕಶಿಖಿಗಿಂಧನವ
ಪ್ಪಂತೆಸಗಲಾಗದಿವನೆಂ
ದಿಂತುಸಿರ್ದಂ ಕರುಣದಿಂದಮುಗೆ ಕಣ್ಬನಿಗಳ್            ೧೭೯

ವ|| ಎನುತ್ತಂ ನುಡಿಯೆ ನುಡುಸುಯ್ದುಂ ಗುಡುಗುಡುನೆ ಸುರಿವ ಕಣ್ಬನಿಗಳಂ ಮಿಡಿವುತ್ತಂ ಮತ್ತಮಿಂತೆಂದಳ್

ಇದನೇನೆಂದಪ್ಪೆ ಲಜ್ಜಾಕರಮನರಸ ಪೋದಾ ಮಹಾರಾತ್ರಿಯೊಳ್ ಪೋ
ಗದ ಮತ್ಪ್ರಾಣಂಗಳಿಂ ಪೋದಪುವೆ ಕೊಲುತಮಿರ್ಪಂತಕಂ ನೋಡಲುಂ ಪೇ
ಸಿದನೆನ್ನಂ ಕಷ್ಟೆಯಂ ಕಲ್ಲೆರ್ದೆಯವಳುಮನೆಂದಂದು ಪೇೞ್ ಸಾವುಮೆಲ್ಲಿ
ರ್ಪುದು ಮತ್ತಂ ನಿಸ್ತ್ರಪಾಗ್ರೇಸರೆಯೊಡನುಡಿವಲ್ಲಿಂದಮೇಂ ಕಷ್ಟಮುಂಟೇ             ೧೮೦

ಆ ವಜ್ರಪಾತದಿಂ ಮೇ
ಲೇವೇೞ್ದಪೆನಱದು ಪೇೞಲುಂ ಕೇಳಲುಮಿ
ನ್ನಾವಂಗಮೆನಲ್ಕಾಶ್ಚ
ರ್ಯಾವಹಮೊಂದಾದುದಾಗಳದನುಸಿರ್ದಪ್ಪೆಂ          ೧೮೧

೧೭೭. ರಾಜಕುಮಾರನಾದ ಚಂದ್ರಾಪೀಡನು ಇದನ್ನು ನೋಡಿ ತಲ್ಲಣಗೊಂಡು ಬೇಗನೆ ಅವಳನ್ನು ಹಿಡಿದು ಎತ್ತಿ ಶಂಕೆಯಿಂದ ಇವಳ ಸ್ಥಿತಿ ಇದೇನು? ಎಂದು ಚಿಂತಿಸುತ್ತಾ ಕಣ್ಣುಗಳಿಂದ ಒಂದೇ ಸಮನೆ ಉಕ್ಕಿ ಸುರಿಯುತ್ತಿರುವ ಜಲಧಾರೆಗಳಿಂದಲೇ ಒದ್ದೆಯಾದ ಅವಳ ಮೇಲುಹೊದಿಕೆಯ ಸೆರಗಿನಿಂದ ಮೆಲ್ಲಗೆ ಗಾಳಿಹಾಕಿದನು. ವ|| ಹಾಗೆ ಬೀಸಿ ಮೂಛೆಯಿಂದ ಎಚ್ಚರಿಸಿ, ೧೭೮. “ಅಮ್ಮ, ಪಾಪಿಯಾದ ನಾನು ನಿಮ್ಮನ್ನು ಪ್ರಶ್ನೆಮಾಡಿ ನಿಮಗೆ ಇಷ್ಟು ದೊಡ್ಡದಾದ ದುಖಾವಸ್ಥೆಯನ್ನುಂಟುಮಾಡಿ ಬಿಟ್ಟೆ ಅದರಿಂದ ಈ ಕಥೆ ಸಾಕು. ನಿಲ್ಲಿಸಿಬಿಡಿ, ನನಗೂ ಕೇಳಲು ಬಹಳ ಕಷ್ಟವಾಗಿದೆ. ನೆನಸಿಕೊಂಡ ಮಾತ್ರದಿಂದಲೋ ಮನಸ್ಸಿಗೆ ಸಹಿಸಲಸಾಧ್ಯವೆನಿಸಿರುವ ಆಪ್ತೇಷ್ಟರ ದುಖಸಮುದಾಯವು ಕಿವಿಯಾರೆ ಕೇಳಿದರೆ ಹೊಸದಾದ ವ್ಯಥೆಯನ್ನು ಹೆಚ್ಚಾಗಿ ಉಂಟು ಮಾಡದಿರುತ್ತದೆಯೆ?” ವ|| ಅದಲ್ಲದೆ ಮತ್ತೆ ಅವಳನ್ನು ಕುರಿತು ಹೀಗೆ ಹೇಳಿದನು: ೧೭೯. “ಹೇಗೊ ಬಹಳ ಪ್ರಯಾಸದಿಂದ ಇದುವರೆಗೂ ಬಿಗಿಹಿಡಿದುಕೊಂಡಿರುವ ಪ್ರಾಣಗಳನ್ನು ಈಗ ಹಿಂದಿನ ನೆನಪೆಂಬ ಬೆಂಕಿಗೆ ಸೌದೆಯಾಗುವಂತೆ ಮಾಡಬೇಡಿ” ಎಂದು ಕೇಳಿಕೊಂಡನು. ಆಗ ಅವನು ದುಖದಿಂದ ಕಂಬನಿಗರೆಯುತ್ತಿದ್ದನು. ವ|| ಹೀಗೆ ಚಂದ್ರಾಪೀಡನು ಹೇಳಲಾಗಿ ನಿಟ್ಟುಸಿರು ಬಿಟ್ಟು ದಡದಡನೆ ಸುರಿಯುತ್ತಿರುವ ಕಣ್ಣೀರುಗಳನ್ನು ಮಿಡಿಯುತ್ತಾ ಮತ್ತೆ ಹೀಗೆ ಹೇಳಿದಳು. ೧೮೦. “ಮಹಾರಾಜ, ನೀನು ಇದೇನು ನಾಚಿಕೆಯಾಗುವ ಮಾತನ್ನು ಹೇಳುತ್ತಿರುವೆ? ಕಳೆದುಹೋದ ಆ ಕರಾಳರಾತ್ರಿಯಲ್ಲೇ ಹೋಗದಿರುವ ನನ್ನ ಪ್ರಾಣಗಳು ಈಗ ಹೋಗಿಬಿಡುತ್ತವೆಯೇ? ಎಲ್ಲರನ್ನೂ ಕೊಲ್ಲುವ ಯಮನು ಕಷ್ಟಸ್ಥಿತಿಯಲ್ಲಿರುವ ಹಾಗೂ ಕಲ್ಲೆದೆಯವಳಾದ ನನ್ನನ್ನು ಕಣ್ಣೆತ್ತಿ ನೋಡುವುದಕ್ಕೂ ಹೇಸಿಗೆಪಡುತ್ತಾನೆ. ಹೀಗಿರಲು ನೀನೇ ಹೇಳು, ನನಗೆ ಸಾವು ಹೇಗೆ ಬರುತ್ತದೆ? ಮತ್ತು ನಾಚಿಕೆಗೆಟ್ಟವರಲ್ಲಿ ಮೊದಲಿಗಳಾದ ನನ್ನ ಸಂಗಡ ಮಾತನಾಡುವುದಕ್ಕಿಂತ ಬೇರೆ ಕಷ್ಟವಿದೆಯೆ? ಏನು ಹೇಳಲಿ! ೧೮೧. ಆ ಸಿಡಿಲಿನ ಹೊಡೆತದಂತೆ ದಾರುಣವಾದ ಪುಂಡರೀಕನ ಮರಣಾನಂತರದಲ್ಲಿ ಯಾರಿಗೂ

ವ|| ಅದಲ್ಲದೆಯುಂ

ಒದವಿದ ಕೋಟಲೆಗಳ ಬಾ
ೞ್ಮೊದಲೆನಿಸಿದ ಬಾರ್ತೆಗೆಟ್ಟ ಕೃತಮಱಯದ ಮಾ
ಯದ ನನ್ನೀವೊಡಲಂ ನಿಲಿ
ಸಿದುದರ್ಕೇನಾನುಮೊಂದು ನೆವಮುಸಿರ್ದಪ್ಪೆಂ         ೧೮೨

ವ|| ಅದೆಂತೆಂದೊಡಂತೀಯವಸ್ಥಾಂತರದೊಳೆಡೆವಿಡದೞುತ್ತಿರ್ದಡಪದವಳ ಮೊಗಮಂ ನೋಡಿ

ತರಳಿಕೆ ಮಾಣದಿನ್ನೆನಸನೞ್ತಪೆ ಸಂಗಡಿಸಿಂಧನಂಗಳಂ
ವಿರಚಿಸು ಬೇಗಮಿಂ ಚಿತಿಯನೇಂ ತಡವೀಕ್ಷಣಮೆನ್ನ ಜೀವಿತೇ
ಶ್ವರನೊಡವೋಗಮೇೞ್ಕುಮೆನಗೆಂಬುದುಮೊರ್ಮೆಯೆ ಚಂದ್ರಮಂಡಲಾಂ
ತರದೊಳದೊರ್ವನಂದು ಪೊಱಮಟ್ಟಿೞತಂದನಮರ್ತ್ಯಮಾರ್ಗದಿಂ        ೧೮೩

ವ|| ಅದೆಂತೆಂದೊಡೆ ತರತರಹಾರಾಲಂಕೃತನುಂ ವಿಶಾಲವೃಕ್ತಸ್ಥಲನುಂ ಕೇಯೂರಕೋಟ ಲಗ್ನಪವನತರಳತರ ಧವಳೋತ್ತರೀಯಾಂಶುಕನುಂ ಕಾಮಿನೀಕುಚಕುಂಕುಮಪತ್ರಲತಾಲಾಂಛಿತ ಸಂದೇಶನುಮುಭಯಕರ್ಣಾಂದೋಳಿ ತಮಕರಕುಂಡಲಮಣಿಪ್ರಭಾರಕ್ತಗಂಡಮಂಡಲನುಂ ಅಳಿಕುಲನೀಲಕುಟಿಲಕುಂತಳವಿಕಟಮೌಳಿಯುಂ ಉತಲ್ಲಕುಮು ದಕೃತಕರ್ಣಪೂರನುಂ ದುಕೂಲ ಪಲ್ಲವಕಲ್ಪಿತೋಷ್ಣೀಷನುಂ ಕುಮುದ ಧವಳದೇಹನುಂ ಮಹಾಪ್ರಮಾಣಪುರುಷನುಂ ಮಹಾಪುರುಷ ಲಕ್ಷಣೋಪೇತನುಂ ದಿವ್ಯಾಕಾರನುಮೆನಿಸಿದ ಮಹಾನುಭಾವಂ

ಧವಳಾಂಗಪ್ರಭೆ ದೆಸೆಯಂ
ಧವಳಿಸೆ ತನಿಗಂಪನಾಳ್ದು ಕಡುದಣ್ಪೆನಸುಂ
ಕವಿತರೆ ನೀಡಿದನಾಗಳ್
ದಿವಿಜೇಭಕರಾನುಕಾರಿ ನಿಜಕರಯುಗಮಂ    ೧೮೪

ವ|| ಅಂತತಿಶೀತಲಸ್ಪರ್ಶಂಗಳಪ್ಪ ಮೃಣಾಲಕೋಮಲಂಗಳೆನಿಪ ಕರಾಂಗುಳಿಗಳಿನೆನ್ನ ಮುಂದುಪರತನಾದ ಪುಂಡರೀಕನನೆತ್ತಿಕೊಂಡು

ಹೇಳಲೂ ಕೇಳಲೂ ಅಶಕ್ಯವೆನಿಸುವಂತಹ ಆಶ್ಚರ್ಯಕರವಾದ ಘಟನೆಯೊಂದು ನಡೆಯಿತು. ಅದನ್ನು ಈಗ ಹೇಳುತ್ತೇನೆ. ವ|| ಅದಲ್ಲದೆ ೧೮೨. ಮೇಲೆ ಮೇಲೆ ಒದಗುವ ಕಷ್ಟಗಳಿಗೆ ಮೂಲಭೂತವಾದ, ಅಪ್ರಯೋಜಕವಾದ, ಉಪಕಾರಸ್ಮರಣೆಯಿಲ್ಲದ, ಅಯೋಗ್ಯವಾದ ಈ ನನ್ನ ಶರೀರವನ್ನು ಉಳಿಸಿಕೊಂಡಿರುವುದಕ್ಕೆ ಒಂದು ಕಾರಣವಿದೆ. ಅದನ್ನು ಹೇಳುತ್ತೇನೆ. ವ|| ಅದೇನೆಂದರೆ ಈ ದುರವಸ್ಥೆಯಲ್ಲಿ ಒಂದೇ ಸಮನೆ ಅಳುತ್ತಿದ್ದ ಸಂಚಿಯವಳ ಮುಖವನ್ನು ನೋಡಿ ೧೮೩. “ತರಳಿಕೆ, ಬಿಡದೆ ಇನ್ನೆಷ್ಟು ಅಳುತ್ತೀಯೆ? ಸೌದೆಗಳನ್ನು ಒಟ್ಟುಗೂಡಿಸು. ಬೇಗ ಚಿತೆಯನ್ನು ಮಾಡು. ತಡವೇತಕ್ಕೆ? ಈ ಕ್ಷಣವೆ ನನ್ನ ಪ್ರಾಣೇಶ್ವರನ ಜೊತೆಯಲ್ಲಿ ನಾನು ಹೋಗಲೇಬೇಕು!” ಎಂದು ಹೇಳುತ್ತಿರಲಾಗಿ ಒಡನೆಯೆ ಚಂದ್ರಮಂಡಲದ ಮಧ್ಯದಿಂದ ಹೊರಟು ಆಕಾಶಮಾರ್ಗದಿಂದ ಒಬ್ಬ ಪುರುಷನು ಇಳಿದು ಬಂದನು. ವ|| ಅದು ಹೇಗೆಂದರೆ, ಬಹಳ ಮಟ್ಟಿಗೆ ಒಲೆದಾಡುತ್ತಿರುವ ಹಾರದಿಂದ ಅಲಂಕೃತನಾಗಿಯೂ, ಅಗಲವಾದ ಎದೆಯುಳ್ಳವನಾಗಿಯೂ, ತೋಳುಬಂದಿಗಳ ತುದಿಯಲ್ಲಿ ಸಿಕ್ಕಿಕೊಂಡಿರುವ ಗಾಳಿಯಿಂದ ಅಲ್ಲಾಡುತ್ತಿರುವ ಬಿಳಿಪಂಚೆಯನ್ನು ಹೊದ್ದುಕೊಂಡಿರುವವನಾಗಿಯೂ, ಆಲಿಂಗಿಸಿಕೊಳ್ಳುವುದರಿಂದ ಕಾಮನಿಯರ ಸ್ತನಗಳಲ್ಲಿ ಚಿತ್ರಿಸಿರುವ ಕುಂಕುಮದ ಪತ್ರಲತೆಯಿಂದ (ಚಿತ್ರ ರಚನೆ) ಗುರುತುಮಾಡಲ್ಪಟ್ಟ ಭುಜಪ್ರದೇಶವುಳ್ಳವನಾಗಿಯೂ, ಕಿವಿಗಳೆರಡರಲ್ಲೂ ತೂಗಾಡುತ್ತಿರುವ ಕಡುಕುಗಳ ರತ್ನದ ಪ್ರಭೆಯಿಂದ ಕೆಂಪಾದ ಕೆನ್ನೆಗಳುಳ್ಳವನಾಗಿಯೂ, ದುಂಬಿಗಳ ಗುಂಪಿನಂತೆ ಕಪ್ಪಾದ ಹಾಗೂ ವಕ್ರವಾದ ಕೇಶಪಾಶದಿಂದ ಸುಂದರವಾದ ತಲೆಯುಳ್ಳವನಾಗಿಯೂ, ಅರಳಿರುವ ಬಿಳಿದಾವರೆಯನ್ನು ಕಿವಿಯಲ್ಲಿ ಮುಡಿದುಕೊಂಡಿರುವವನಾಗಿಯೂ, ನವುರಾದ ರೇಷ್ಮೆವಸ್ತ್ರದಿಂದ ಮಾಡಲ್ಪಟ್ಟ ರುಮಾಲನ್ನು ಧರಿಸಿರುವವನಾಗಿಯೂ, ಬಿಳಿಯ ತಾವರೆಯಂತೆ ಶುಭ್ರವಾದ ಶರೀರವುಳ್ಳವನಾಗಿಯೂ, ಎತ್ತರವಾದ ಆಕಾರವುಳ್ಳವನಾಗಿಯೂ ಮಹಾಪುರುಷಲಕ್ಷಣಗಳಿಂದ ಕೂಡಿಕೊಂಡಿರುವವನಾಗಿಯೂ ಇರುವ ದಿವ್ಯಾಕಾರದ ಮಹಾನುಭಾವನೊಬ್ಬನು, ೧೮೪. ಶುಭ್ರವಾದ ದೇಹಕಾಂತಿಯು ದಿಕುಗಳನ್ನೆಲ್ಲ ಬೆಳಗುತ್ತಿರಲಾಗಿ, ಹೆಚ್ಚಾದ ಸುವಾಸನೆಯಿಂದ ಕೂಡಿಕೊಂಡಿರುವ ತಂಪು ಬಹಳವಾಗಿ ವ್ಯಾಪಿಸುತ್ತಿರಲಾಗಿ, ಐರಾವತದ ಸೊಂಡಿಲನ್ನು ಹೋಲುತ್ತಿರುವ ತನ್ನ ಎರಡು ತೋಳುಗಳನ್ನೂ ಮುಂದಕೆ ಚಾಚಿದನು. ವ|| ಹಾಗೆ ಬಹಳ ತಣ್ಣಗಿರುವ ಮತ್ತು ತಾವರೆದಂಟಿನಂತೆ ಮೃದುವಾದ ಕೈಬೆರಳುಗಳಿಂದ ಮೃತನಾದ ಪುಂಡರೀಕನನ್ನು ನನ್ನ ಎದುರಿನಲ್ಲೇ